ಹೌಸ್ ಆಫ್ ವಿಸ್ಡಮ್ ಮತ್ತು ಆಧುನಿಕ ಗಣಿತ ವಿಜ್ಞಾನ

ಹೌಸ್ ಆಫ್ ವಿಸ್ಡಮ್ ಇತ್ತೆಂದು ನಂಬಲು ಕೆಲವರಿಗೆ ಈಗ ಯಾಕೋ ಒಂಥರಾ ಹಿಂಜರಿಕೆ. ನಮ್ಮನ್ನು ನಂಬುವಂತೆ ಮಾಡಲಾಗಿದೆಯೇ ಎಂಬ ಸಂದೇಹ. 13ನೇ ಶತಮಾನದಲ್ಲಿ ನಾಶವಾದ ಈ ಪ್ರಾಚೀನ ಗ್ರಂಥಾಲಯದ ಯಾವುದೇ ಕುರುಹುಗಳು ಉಳಿದಿಲ್ಲ, ಆದ್ದರಿಂದ ಅದು ಎಲ್ಲಿದೆ ಅಥವಾ ಅದು ಹೇಗಿತ್ತು ಎಂದು ನಮಗೆ ಖಚಿತವಾಗಿ ಹೇಳಲಾಗುವುದಿಲ್ಲ.

‌ಆದರೆ ಈ ಪ್ರತಿಷ್ಠಿತ ಅಕಾಡೆಮಿ ವಾಸ್ತವವಾಗಿ ಇಸ್ಲಾಮಿಕ್ ಸುವರ್ಣ ಯುಗದಲ್ಲಿ ಬಗ್ದಾದಿನ ಪ್ರಮುಖ ಬೌದ್ಧಿಕ ಶಕ್ತಿ ಕೇಂದ್ರವಾಗಿತ್ತು, ಮತ್ತು ಸಾಮಾನ್ಯ ಶೂನ್ಯದಿಂದ ಹಿಡಿದು ಈಗಿನ ಆಧುನಿಕ ಅರಬಿಕ್ ಅಂಕಿಗಳ ವರೆಗಿನ ಪರಿಕಲ್ಪನೆಗಳ ಜನ್ಮಸ್ಥಾನವವೂ ಆಗಿತ್ತು.

‌8 ನೇ ಶತಮಾನದ ಖಲೀಫಾ ಹಾರೂನ್ ಅಲ್-ರಶೀದ್ ಅವರ ಖಾಸಗಿ ಸಂಗ್ರಹವಾಗಿ ಸ್ಥಾಪನೆಯಾದ ನಂತರ ಸುಮಾರು 30 ವರ್ಷಗಳ ನಂತರ ಸಾರ್ವಜನಿಕ ಅಕಾಡೆಮಿಯಾಗಿ ಪರಿವರ್ತನೆಗೊಂಡ ಹೌಸ್ ಆಫ್ ವಿಸ್ಡಮ್ ಪ್ರಪಂಚದಾದ್ಯಂತದ ವಿಜ್ಞಾನಿಗಳನ್ನು ಬಾಗ್ದಾದ್ ಕಡೆಗೆ ಸೆಳೆದಿರುವ ಹಾಗೆ ತೋರುತ್ತದೆ. ಬಗ್ದಾದಿನ ಬೌದ್ಧಿಕ ಕುತೂಹಲ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಈ ಸೆಳೆತಕ್ಕೆ ಕಾರಣವಾದವು(ಮುಸ್ಲಿಂ, ಯಹೂದಿ ಮತ್ತು ಕ್ರಿಶ್ಚಿಯನ್ ವಿದ್ವಾಂಸರಿಗೆ ಅಲ್ಲಿ ಅಧ್ಯಯನ ಮಾಡಲು ಅವಕಾಶವಿತ್ತು).


‌ಗಣಿತ, ಖಗೋಳವಿಜ್ಞಾನ, ವೈದ್ಯಕೀಯ, ರಸಾಯನಶಾಸ್ತ್ರ, ಭೂವಿಜ್ಞಾನ, ತತ್ವಶಾಸ್ತ್ರ, ಸಾಹಿತ್ಯ ಮತ್ತು ಕಲೆಗಳು – ಜೊತೆಗೆ ರಸವಿದ್ಯೆ ಮತ್ತು ಜ್ಯೋತಿಷ್ಯದಂತಹ ಕೆಲವು ನಂಬಲು ಬಾರದ ಶಿಸ್ತುಗಳು ಸೇರಿದಂತೆ ಮಾನವಿಕ ಮತ್ತು ನೈಸರ್ಗಿಕ ವಿಜ್ಞಾನಗಳ ಅಧ್ಯಯನದ ಅಪ್ರತಿಮ ಕೇಂದ್ರವಾಗಿ ಹೌಸ್ ಆಫ್ ವಿಸ್ಡಮ್ ಕಾಲಕ್ರಮೇಣ ಮಾರ್ಪಟ್ಟಿತು. ಗಾತ್ರದಲ್ಲಿ ಇದು ಇಂದಿನ ಲಂಡನ್ ನಲ್ಲಿರುವ ಬ್ರಿಟಿಷ್ ಲೈಬ್ರರಿ ಅಥವಾ ಪ್ಯಾರಿಸಿನ ಬಿಬ್ಲಿಯೋಥಿಕ್ ನ್ಯಾಷನಲ್ ನ ಗಾತ್ರಕ್ಕೆ ಸರಿಸಾಟಿಯಾಗಬಲ್ಲದು!.‌
1258 ರಲ್ಲಿ ಮಂಗೋಲಿಯನ್ನರು ಬಗ್ದಾದಿಗೆ ಮುತ್ತಿಗೆ ಹಾಕಿದಾಗ ಹೌಸ್ ಆಫ್ ವಿಸ್ಡಮ್ ಧ್ವಂಸಗೊಳಿಸಲಾಯಿತು(ದಂತಕಥೆಯ ಪ್ರಕಾರ, ಅನೇಕ ಹಸ್ತಪ್ರತಿಗಳನ್ನು ಟೈಗ್ರಿಸ್ ನದಿಗೆ ಎಸೆದುದರಿಂದ, ಅದರ ನೀರು ಶಾಯಿಯ ಕಪ್ಪು ಬಣ್ಣಕ್ಕೆ ತಿರುಗಿತು ಎನ್ನಲಾಗುತ್ತದೆ), ಆದರೆ ಅಲ್ಲಿ ಮಾಡಿದ ಆವಿಷ್ಕಾರಗಳು ಪ್ರಬಲವಾದ, ಅಮೂರ್ತ ಗಣಿತ ಭಾಷೆಯನ್ನು ಪರಿಚಯಿಸಿದವು. ನಂತರ ಅದನ್ನು ಇಸ್ಲಾಮಿಕ್ ಸಾಮ್ರಾಜ್ಯ, ಯುರೋಪ್ ಮತ್ತು ಅಂತಿಮವಾಗಿ ಇಡೀ ಪ್ರಪಂಚವೇ ಅಳವಡಿಸಿಕೊಂಡವು .

‌ಸರ್ರೆ ವಿಶ್ವವಿದ್ಯಾಲಯದ ಭೌತಶಾಸ್ತ್ರದ ಪ್ರಾಧ್ಯಾಪಕ ಜಿಮ್ ಅಲ್-ಖಲೀಲಿ ಹೇಳುತ್ತಾರೆ: “ನಮಗೆ ಹೌಸ್ ಆಫ್ ವಿಸ್ಡಮ್ ಅನ್ನು ಎಲ್ಲಿ ಅಥವಾ ಯಾವಾಗ ನಿರ್ಮಿಸಲಾಯಿತು ಎಂಬುದರ ನಿಖರವಾದ ವಿವರಗಳಲ್ಲ ಮುಖ್ಯ, ಬದಲಾಗಿ ವೈಜ್ಞಾನಿಕ ವಿಚಾರಗಳ ಇತಿಹಾಸ ಮತ್ತು ಅದರ ಪರಿಣಾಮವಾಗಿ ಅವು ಹೇಗೆ ಅಭಿವೃದ್ಧಿ ಹೊಂದಿದೆ ಎಂಬುದು ಹೆಚ್ಚು ಕುತೂಹಲಕಾರಿಯಾಗಿದೆ”.

ಫಿಬೊನಾಚಿ


‌ಹೌಸ್ ಆಫ್ ವಿಸ್ಡಮಿನ ಗಣಿತದ ಪರಂಪರೆಯನ್ನು ಪರಾಂಬರಿಸಲು ಭವಿಷ್ಯದ ಕಡೆಗೆ ಕಾಲದ ಮೂಲಕ ಹಿಂಪ್ರಯಾಣವನ್ನು ಮಾಡಬೇಕಿದೆ. ಇಟಾಲಿಯನ್ ನವೋದಯವು ಪರಾಕಾಷ್ಠೆಯಲ್ಲಿದ್ದ ನೂರಾರು ವರ್ಷಗಳವರೆಗೆ, ಒಂದು ಹೆಸರು ಯುರೋಪಿನಲ್ಲಿ ಗಣಿತಕ್ಕೆ ಸಮಾನಾರ್ಥಕವಾಗಿ ಬಳಸಲಾಗುತ್ತಿತ್ತು; ಅದುವೇ ಲಿಯೊನಾರ್ಡೊ ಡಾ ಪಿಸಾ, ಮರಣೋತ್ತರವಾಗಿ ಅವರು ಫಿಬೊನಾಚಿ ಎಂದು ಜನಜನಿತರಾಗಿದ್ದಾರೆ. 1170 ರಲ್ಲಿ ಪಿಸಾದಲ್ಲಿ ಜನಿಸಿದ ಈ ಇಟಾಲಿಯನ್ ಗಣಿತಜ್ಞ ಬುಗಿಯಾದಲ್ಲಿ ತನ್ನ ಪ್ರಾಥಮಿಕ ಶಿಕ್ಷಣವನ್ನು ಪಡೆದರು , ಇದು ಆಫ್ರಿಕಾದ ಬಾರ್ಬರಿ ಕರಾವಳಿಯಲ್ಲಿ (ಉತ್ತರ ಆಫ್ರಿಕಾ) ಇರುವ ವ್ಯಾಪಾರ ಸಂಕೀರ್ಣ. ಇವರು ತನ್ನ 20ನೇ ಪ್ರಾಯದಲ್ಲಿ ಮಧ್ಯ ಪ್ರಾಚ್ಯಕ್ಕೆ ಪ್ರಯಾಣ ಬೆಳೆಸಿದರು, ಅಲ್ಲಿ ದೊರೆತ ಭಾರತದಿಂದ ಪರ್ಷಿಯಾದ ಮೂಲಕ ಪಶ್ಚಿಮಕ್ಕೆ ಬಂದ ವಿಚಾರಗಳಿಂದ ಆಕರ್ಷಿತರಾದರು. ಅವರು ಇಟಲಿಗೆ ಹಿಂದಿರುಗಿದಾಗ, ಫಿಬೊನಾಚಿ ಹಿಂದೂ-ಅರೇಬಿಕ್ ಸಂಖ್ಯಾ ವ್ಯವಸ್ಥೆಯನ್ನು ವಿವರಿಸಿದ ಮೊದಲ ಪಾಶ್ಚಾತ್ಯ ಕೃತಿಗಳಲ್ಲಿ ಒಂದಾದ ಲೈಬರ್ ಅಬ್ಬಾಚಿಯನ್ನು (liber abbaci) ಪ್ರಕಟಿಸಿದರು.

‌1202 ರಲ್ಲಿ ಲೈಬರ್ ಅಬ್ಬಾಚಿ ಮೊದಲ ಬಾರಿಗೆ ಕಾಣಿಸಿಕೊಂಡಾಗ, ಹಿಂದೂ-ಅರೇಬಿಕ್ ಅಂಕಿಗಳು ಕೆಲವೇ ಕೆಲವು ಬುದ್ಧಿಜೀವಿಗಳಿಗೆ ತಿಳಿದಿತ್ತು; ಯುರೋಪಿಯನ್ ವ್ಯಾಪಾರಿಗಳು ಮತ್ತು ವಿದ್ವಾಂಸರು ಇನ್ನೂ ರೋಮನ್ ಅಂಕಿಗಳಿಗೆ ಅಂಟಿಕೊಂಡಿದ್ದರು, ಇದರಿಂದ ಗುಣಾಕಾರ ಮತ್ತು ಭಾಗಕಾರ ಅತ್ಯಂತ ತೊಡಕಿನ ವಿಷಯ ವಾಗಿತ್ತು (LVII ನಿಂದ MXCI ಯನ್ನು ಗುಣಿಸಲು ಪ್ರಯತ್ನಿಸಿ!). ಫಿಬೊನಾಚಿಯ ಪುಸ್ತಕವು ಅಂಕಗಣಿತದ ಕಾರ್ಯಾಚರಣೆಗಳಲ್ಲಿ ಅಂಕಿಗಳ ಬಳಕೆಯನ್ನು ಪ್ರದರ್ಶಿಸಿತು – ಲಾಭಾಂಶ, ಹಣ ಬದಲಾವಣೆ, ತೂಕ ಪರಿವರ್ತನೆ, ವಿನಿಮಯ ಮತ್ತು ಬಡ್ಡಿ ಯಂತಹ ಪ್ರಾಯೋಗಿಕ ಸಮಸ್ಯೆಗಳಿಗೆ ಅನ್ವಯಿಸಬಹುದಾದ ತಂತ್ರಗಳನ್ನು ಇದು ಒಳಗೊಂಡಿತ್ತು.

‌”ಲೆಕ್ಕಾಚಾರದ ಕಲೆ, ಅದರ ಸೂಕ್ಷ್ಮತೆಗಳು ಮತ್ತು ಜಾಣ್ಮೆಗಳನ್ನು ತಿಳಿದುಕೊಳ್ಳಲು ಬಯಸುವವರು ಕೈ ಬೆರಳುಗಳೊಂದಿಗೆ ಲೆಕ್ಕ ಮಾಡಲು ತಿಳಿದಿರಬೇಕು” ಎಂದು ಫಿಬೊನಾಚಿ ತನ್ನ ವಿಶ್ವಕೋಶದ ಮೊದಲ ಅಧ್ಯಾಯದಲ್ಲಿ ಬರೆದಿದ್ದಾರೆ. ಮಕ್ಕಳು ಈಗ ಶಾಲೆಯಲ್ಲಿ ಕಲಿಯುವ ಅಂಕೆಗಳನ್ನು ಉಲ್ಲೇಖಿಸುತ್ತಾ “ಈ ಒಂಬತ್ತು ಅಂಕಿಗಳು ಮತ್ತು ಝೆಫಿರ್ ಎಂದು ಕರೆಯಲ್ಪಡುವ 0 ಚಿಹ್ನೆಯೊಂದಿಗೆ, ಯಾವುದೇ ಸಂಖ್ಯೆಯನ್ನಾಗಲಿ ಬರೆಯಬೇಕಿದೆ” ಎಂದು ಹೇಳುತ್ತಾರೆ. ಇದರಿಂದಾಗಿ ಗಣಿತವು ಎಲ್ಲರಿಗೂ ಬಳಸಬಹುದಾದ ರೂಪದಲ್ಲಿ ಲಭ್ಯವಾಗತೊಡಗಿತು.

‌ ಗಣಿತಜ್ಞನಾಗಿ ಫಿಬೊನಾಚಿಯ ಮಹಾನ್ ಪ್ರತಿಭೆ ಅವನ ಸೃಜನಶೀಲತೆ ಮಾತ್ರವಲ್ಲ, ಮುಸ್ಲಿಂ ವಿಜ್ಞಾನಿಗಳಿಗೆ ಶತಮಾನಗಳಿಂದ ತಿಳಿದಿರುವ ಲೆಕ್ಕಾಚಾರದ ಸೂತ್ರಗಳು,ಅವುಗಳ ದಶಮಾಂಶ ವ್ಯವಸ್ಥೆ, ಬೀಜಗಣಿತ ಮುಂತಾದವುಗಳ ಅನುಕೂಲತೆಗಳ ಬಗ್ಗೆ ಅವನಿಗಿದ್ದ ಆಳವಾದ ತಿಳುವಳಿಕೆ ಕೂಡಾ ಬಹಳ ಮೆಚ್ಚುವಂತದ್ದಾಗಿತ್ತು. ವಾಸ್ತವವಾಗಿ, ‘ಲೈಬರ್ ಅಬ್ಬಾಚಿ’ಯಲ್ಲಿ ಬಹುತೇಕ 9 ನೇ ಶತಮಾನದ ಗಣಿತಜ್ಞ ಅಲ್-ಖವಾರಿಜ್ಮಿಯ ಅಲ್ಗೊರಿಥಮನ್ನು ಅವಲಂಬಿಸಲಾಗಿದೆ . ಅವರ ಕ್ರಾಂತಿಕಾರಿ ಗ್ರಂಥವು ಮೊದಲ ಬಾರಿಗೆ ಚತುರ್ಭುಜದ ಸಮೀಕರಣಗಳನ್ನು ಪರಿಹರಿಸುವ ವ್ಯವಸ್ಥಿತ ಮಾರ್ಗವನ್ನು ಪ್ರಸ್ತುತಪಡಿಸಿತು. ಈ ಕ್ಷೇತ್ರದಲ್ಲಿ ಅವರು ನಡೆಸಿದ ಕಂಡುಹಿಡಿತಗಳ ಕಾರಣ, ಅಲ್-ಖವಾರಿಜ್ಮಿಯನ್ನು ಬೀಜಗಣಿತದ ಪಿತಾಮಹ ಎಂದು ಕರೆಯಲಾಗುತ್ತದೆ. ಅಲ್ ಜಿಬ್ರ ( ಬೀಜಗಣಿತ ) ವು ಅರೇಬಿಕ್ ಪದವಾದ ಅಲ್ ಜಬ್ರ್ ( ಮುರಿದ ಭಾಗಗಳನ್ನು ಪುನಃ ಸ್ಥಾಪಿಸುವುದು) ಎಂಬ ಪದದಿಂದ ಬಂದಿದೆ. ಮತ್ತು 821 ರಲ್ಲಿ ಅಲ್ ಖವಾರಿಜ್ಮಿಯನ್ನು ಖಗೋಳಶಾಸ್ತ್ರಜ್ಞನಾಗಿ ಮತ್ತು ಹೌಸ್ ಆಫ್ ವಿಸ್ಡಮಿನ ಮುಖ್ಯ ಗ್ರಂಥಪಾಲಕನಾಗಿ ನೇಮಿಸಲಾಗಿತ್ತು.

‌”ಅಲ್-ಖವಾರಿಜ್ಮಿಯ ಗ್ರಂಥವು ಮುಸ್ಲಿಂ ಜಗತ್ತಿಗೆ ದಶಮಾಂಶ ಸಂಖ್ಯೆಯ ವ್ಯವಸ್ಥೆಯನ್ನು ಪರಿಚಯಿಸಿತು ”ಎಂದು ಅಲ್-ಖಲೀಲಿ ವಿವರಿಸುತ್ತಾರೆ. “ಲಿಯೊನಾರ್ಡೊ ಡಾ ಪಿಸಾ ಅವರಂತಹ ಇತರರು ಇದನ್ನು ಯುರೋಪಿನಾದ್ಯಂತ ರವಾನಿಸಲು ಸಹಾಯ ಮಾಡಿದರು”.‌ಆಧುನಿಕ ಗಣಿತದ ಮೇಲೆ ಫಿಬೊನಾಚಿಯ ಪರಿವರ್ತಕ ಪ್ರಭಾವವು ಬಹುಮಟ್ಟಿಗೆ ಅಲ್-ಖವಾರಿಜ್ಮಿಗೆ ಸೇರಬೇಕು. ಸುಮಾರು ನಾಲ್ಕು ಶತಮಾನಗಳ ಅಂತರ ಇರುವ ಇಬ್ಬರು ಪುರುಷರ ಮಧ್ಯೆ ಪ್ರಾಚೀನ ಗ್ರಂಥಾಲಯ ಅನುಸಂಧಾನ ಮಾಡಿಸಿತು. ಮಧ್ಯಯುಗದ ಅತ್ಯಂತ ಪ್ರಸಿದ್ಧ ಗಣಿತಜ್ಞನೊಬ್ಬ ಇಸ್ಲಾಮಿಕ್ ಸುವರ್ಣ ಯುಗದ ಅಪ್ರತಿಮ ಸಂಸ್ಥೆಯಲ್ಲಿ ಕೂತು ಕ್ರಾಂತಿ ಸಾಧಿಸಿದ ಮುಂಚೂಣಿ ಚಿಂತಕನ ವಿಚಾರಗಳನ್ನು ಆಶ್ರಯಿಸಿದರು.

‌ಹೌಸ್ ಆಫ್ ವಿಸ್ಡಮ್ ಬಗ್ಗೆ ಅಲ್ಪಸ್ವಲ್ಪ ತಿಳಿದಿರುವ ಕಾರಣ, ಇತಿಹಾಸಕಾರರು ಸಾಂದರ್ಭಿಕವಾಗಿ ಅದರ ವ್ಯಾಪ್ತಿ ಮತ್ತು ಉದ್ದೇಶವನ್ನು ಉತ್ಪ್ರೇಕ್ಷಿಸಲು ಪ್ರಚೋದಿ ಸಲ್ಪಡುತ್ತಿದ್ದಾರೆ. ಇದು ನಮ್ಮಲ್ಲಿ ಉಳಿದಿರುವ ಅಲ್ಪ ಪ್ರಮಾಣದ ಐತಿಹಾಸಿಕ ದಾಖಲೆಗಳೊಂದಿಗೆ ಪೂರಕವಾಗದ ರೂಪದಲ್ಲಿ ಈ ಹೌಸ್ ಆಫ್ ವಿಸ್ಡಮನ್ನು ಮಿಥ್ ಆಗಿ ಪರಿವರ್ತಿಸುವ ಹಾಗಿದೆ. “ಹೌಸ್ ಆಫ್ ವಿಸ್ಡಮ್ ಅನೇಕರ ದೃಷ್ಟಿಯಲ್ಲಿ ಇರುವ ಭವ್ಯತೆಯನ್ನು ಹೊಂದಿಲ್ಲ ಎಂದು ಕೆಲವರು ವಾದಿಸುತ್ತಾರೆ” ಎಂದು ಅಲ್-ಖಲೀಲಿ ಹೇಳುತ್ತಾರೆ. “ಆದರೆ ಅಲ್-ಖವಾರಿಜ್ಮಿಯಂಥಾ ಪುರುಷರ ಗಣಿತ, ಖಗೋಳವಿಜ್ಞಾನ ಮತ್ತು ಭೂವಿಜ್ಞಾನದೊಂದಿಗಿನ ಒಡನಾಟವು, ಹೌಸ್ ಆಫ್ ವಿಸ್ಡಮ್ ನಿಜವಾದ ಅಕಾಡೆಮಿಗೆ ಹತ್ತಿರವಾದದ್ದೇ ಹೊರತು ಅನುವಾದಿತ ಪುಸ್ತಕಗಳ ಭಂಡಾರವಲ್ಲ ಎಂಬುದಕ್ಕೆ ನನಗೆ ಬಲವಾದ ಸಾಕ್ಷಿಯಾಗಿದೆ”.

‌ಗ್ರಂಥಾಲಯದ ವಿದ್ವಾಂಸರು ಮತ್ತು ಭಾಷಾಂತರಕಾರರು ತಮ್ಮ ಕೆಲಸವನ್ನು ಓದುವ ಸಾರ್ವಜನಿಕರಿಗೆ ಲಭ್ಯವಾಗುವಂತೆ ನೋಡಿಕೊಳ್ಳಲು ಹೆಚ್ಚಿನ ಪ್ರಯತ್ನ ಪಡುತ್ತಿದ್ದರು. “ಹೌಸ್ ಆಫ್ ವಿಸ್ಡಮ್ ಮೂಲತಃ ತುಂಬಾ ಮಹತ್ವವುಳ್ಳದ್ದು. ಏಕೆಂದರೆ ಅದು ಅಲ್ಲಿನ ಅನುವಾದಗಳ ಮೂಲಕ ಅಂದರೆ ಗ್ರೀಕ್ ವಿಚಾರಗಳನ್ನು ಸ್ಥಳೀಯಭಾಷೆಗೆ ಭಾಷಾಂತರಿಸಿದ ಅರೇಬಿಕ್ ವಿದ್ವಾಂಸರ ಅನುವಾದಗಳಿಂದ ನಾವು ನಮ್ಮ ಗಣಿತದ ತಿಳುವಳಿಕೆಯ ತಳಪಾಯವನ್ನು ರೂಪಿಸಿದ್ದೇವೆ” ಎಂದು ಲಂಡನ್ ನಲ್ಲಿರುವ ಓಪನ್ ಯೂನಿವರ್ಸಿಟಿಯ ಗಣಿತ ಇತಿಹಾಸದ ಪ್ರಾಧ್ಯಾಪಕ ಜೂನ್ ಬ್ಯಾರೊ-ಗ್ರೀನ್ ಹೇಳುತ್ತಾರೆ. ಈ ಅರಮನೆ ಗ್ರಂಥಾಲಯವು ಹೇಗೆ ಹಿಂದಿನ ಕಾಲದಿಂದ ಬಂದ ಸಂಖ್ಯಾತ್ಮಕ ವಿಚಾರಗಳಿಗೆ ಒಂದು ಕಿಟಕಿಯಾಗಿತ್ತೋ ಅದೇ ರೀತಿ ವೈಜ್ಞಾನಿಕ ನವೀಕರಣಗಳ ಕೇಂದ್ರ ಕೂಡಾ ಆಗಿತ್ತು.

‌ನಮ್ಮ ದಶಮಾಂಶ ವ್ಯವಸ್ಥೆಯ, ನಾವು ಕಂಪ್ಯೂಟರ್‌ಗಳನ್ನು ಪ್ರೋಗ್ರಾಮ್ ಮಾಡುವ ಬೈನರಿ ಸಂಖ್ಯಾ ವ್ಯವಸ್ಥೆಯ, ರೋಮನ್ ಅಂಕಿಗಳ, ಪ್ರಾಚೀನ ಮೆಸೊಪೊಟೇಮಿಯನ್ನರು ಬಳಸಿದ ವ್ಯವಸ್ಥೆಗಳಿಗೆಲ್ಲಾ ಮುನ್ನ ಜನರು ಲೆಕ್ಕಾಚಾರಗಳನ್ನು ದಾಖಲಿಸಲು ಟ್ಯಾಲಿ ವ್ಯವಸ್ಥೆ ಉಪಯೋಗಿಸುತ್ತಿದ್ದರು. ಈ ವ್ಯವಸ್ಥೆಗಳು ನಮಗೆ ಅಚಿಂತ್ಯ ಮತ್ತು ಪ್ರಾಚೀನವಾಗಿ ಕಂಡರೂ , ವಿಭಿನ್ನ ಸಂಖ್ಯಾತ್ಮಕ ಪ್ರಾತಿನಿಧ್ಯಗಳು ನಮಗೆ ರಚನೆ, ಸಂಬಂಧಗಳು ಮತ್ತು ಅವುಗಳು ಹೊರಹೊಮ್ಮಿದ ಐತಿಹಾಸಿಕ ಮತ್ತು ಸಾಂಸ್ಕೃತಿಕ ಸಂದರ್ಭಗಳ ಬಗ್ಗೆ ಅಮೂಲ್ಯವಾದ ವಿಷಯಗಳನ್ನು ಕಲಿಸಿಕೊಡಬಲ್ಲುದು.

‌ಸ್ಥಾನದ ಮೌಲ್ಯ ಮತ್ತು ಅಮೂರ್ತತೆಯ ಕಲ್ಪನೆಯನ್ನು ಅವರು ಬೆಂಬಲಿಸಿದರು. ಇದು ಸಂಖ್ಯೆಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ನಮಗೆ ಸಹಾಯ ಮಾಡುತ್ತದೆ. “ವಿಭಿನ್ನ ಸಂಖ್ಯಾ ವ್ಯವಸ್ಥೆಗಳನ್ನು ಅರ್ಥಮಾಡಿಕೊಳ್ಳುವಲ್ಲಿ ನಿಜವಾದ ಮೌಲ್ಯವಿದೆ ಹಾಗೂ ಪಾಶ್ಚಾತ್ಯ ಮಾರ್ಗವು ಏಕೈಕ ಮಾರ್ಗವಲ್ಲ” ಎಂದು ಅವು ನಮಗೆ ತೋರಿಸಿಕೊಡುತ್ತವೆ”. ಎಂದು ಬ್ಯಾರೊ-ಗ್ರೀನ್ ಹೇಳುತ್ತಾರೆ.

‌ಒಬ್ಬ ಪ್ರಾಚೀನ ವ್ಯಾಪಾರಿ “ಎರಡು ಕುರಿ” ಗಳನ್ನು ಬರೆಯಲು ಬಯಸಿದಾಗ, ಅವನು ಎರಡು ಕುರಿಗಳ ಚಿತ್ರವನ್ನು ಜೇಡಿಮಣ್ಣಿನ ಹಲಗೆಯಲ್ಲಿ ಕೆತ್ತುತ್ತಾನೆ. ಅವನು “20 ಕುರಿಗಳು” ಎಂದು ಬರೆಯಲು ಬಯಸಿದರೆ ಅದು ನಡೆಯದು. ಚಿಹ್ನೆ -ಮೌಲ್ಯ ಸಂಕೇತವು ಒಂದು ವ್ಯವಸ್ಥೆಯಾಗಿದ್ದು, ಇದರಲ್ಲಿ ಒಂದು ಮೌಲ್ಯವನ್ನು ಗುರುತಿಸಲು ಸಂಖ್ಯಾ ಚಿಹ್ನೆಗಳನ್ನು ಒಟ್ಟಿಗೆ ಸೇರಿಸಲಾಗುತ್ತದೆ. ಈ ಸಂದರ್ಭದಲ್ಲಿ, ನಿಜವಾದ ಪ್ರಮಾಣವನ್ನು ಪ್ರತಿನಿಧಿಸಲು ಎರಡು ಕುರಿಗಳನ್ನು ಬಿಡಿಸಲಾಗಿದೆ.

‌ಚಿಹ್ನೆ-ಮೌಲ್ಯದ ಸಂಕೇತಗಳ ವ್ಯವಸ್ಥೆಯ ಉಳಿಕೆಯಾದ ರೋಮನ್ ಅಂಕಿಗಳು, ಸಂಖ್ಯೆಗಳನ್ನು ಪ್ರತಿನಿಧಿಸುವಲ್ಲಿ ಅಂಕೆಗಳ ಸ್ಥಾನವನ್ನು ಅವಲಂಬಿಸುವ ಅಲ್-ಖವಾರಿಜ್ಮಿ ವ್ಯವಸ್ಥೆಯನ್ನು ಪರಿಚಯಿಸಿದ ನಂತರವೂ ನೆಲೆ ನಿಂತಿತು. ಕೆತ್ತಲ್ಪಟ್ಟ ಅತ್ಯುನ್ನತ ಸ್ಮಾರಕಗಳಂತೆ, ರೋಮನ್ ಅಂಕಿಗಳು ಅವುಗಳಿಗೆ ಜನ್ಮ ನೀಡಿದ ಸಾಮ್ರಾಜ್ಯವನ್ನು ಮೀರಿ ಜೀವಿಸಿದವು. ಇದು ಕಾಕತಾಳೀಯವೋ, ಭಾವನಾತ್ಮಕವೊ ಅಥವಾ ಉದ್ದೇಶಪೂರ್ವಕವೋ ಎಂದು ಯಾರೂ ಖಚಿತವಾಗಿ ಹೇಳಲಾರರು.

‌ಈ ವರ್ಷ ಫಿಬೊನಾಚಿ ಹುಟ್ಟಿದ 850 ನೇ ವಾರ್ಷಿಕೋತ್ಸವ. ರೋಮನ್ ಅಂಕಿಗಳ ಪ್ರಯೋಗವನ್ನು ರದ್ದುಗೊಳಿಸಲು ಒತ್ತಾಯ ಮಾಡುವ ಕ್ಷಣಗಳೂ ಆಗಿರಬಹುದು. ಲಂಡನ್ ನ ಶಾಲಾ ತರಗತಿ ಕೋಣೆಗಳಲ್ಲಿ ಟೈಮ್ ಪೀಸ್ ಗಳನ್ನು ಬದಲಾಯಿಸಿ ಸುಲಭವಾಗಿ ಓದಬಲ್ಲ ಡಿಜಿಟಲ್ ಗಡಿಯಾರಗಳನ್ನು ಅಳವಡಿಸಲಾಗಿದೆ. ವಿದ್ಯಾರ್ಥಿಗಳಿಗೆ ಇನ್ನು ಮುಂದೆ ಅನಲಾಗ್ ಸಮಯವನ್ನು ಸರಿಯಾಗಿ ಹೇಳಲು ಬರದು. ವಿಶ್ವದ ಕೆಲವು ಪ್ರದೇಶಗಳಲ್ಲಿ, ಸರ್ಕಾರಗಳು ಅವುಗಳನ್ನು ರಸ್ತೆ ಚಿಹ್ನೆಗಳು ಮತ್ತು ಅಧಿಕೃತ ದಾಖಲೆಗಳಿಂದ ಕೈಬಿಟ್ಟರೆ, ಹಾಲಿವುಡ್ ರೋಮನ್ ಅಂಕಿಗಳನ್ನು ಶೀರ್ಷಿಕೆಗಳಲ್ಲಿ ಬಳಸುವುದು ನಿಲ್ಲಿಸಿದೆ. ಸೂಪರ್ಬೌಲ್ ತನ್ನ 50 ನೇ ಪಂದ್ಯದಲ್ಲಿ ಅಭಿಮಾನಿಗಳು ಗೊಂದಲಕ್ಕೂಳಗಾಗುತ್ತಾರೆ ಎಂದು ಆತಂಕ ಪಟ್ಟು ರೋಮನ್ ಅಂಕಿಗಳನ್ನು ಕೈ ಬಿಟ್ಟಿದೆ.

‌ಆದರೆ ರೋಮನ್ ಅಂಕಿಗಳಿಂದ ದೂರಸರಿಯುತ್ತಿರುವ ಜಾಗತಿಕ ಬದಲಾವಣೆಯು ಜೀವನದ ಇತರ ಮಜಲುಗಳಲ್ಲಿ ಹಾಸು ಹೊಕ್ಕಾಗುತ್ತಿರುವ ಗಣಿತ ನಿರಕ್ಷರತೆಯ ಕಡೆಗೆ ಬೊಟ್ಟು ಮಾಡುತ್ತದೆ. ಬಹುಶಃ ಹೆಚ್ಚು ಮುಖ್ಯವಾದುದು, ರೋಮನ್ ಅಂಕಿಗಳ ಇಲ್ಲವಾಗುವಿಕೆ ಗಣಿತದ ಬಗೆಗಿನ ಯಾವುದೇ ಚರ್ಚೆಯನ್ನು ನಿಯಂತ್ರಿಸುವ ರಾಜಕೀಯವನ್ನು ಬಹಿರಂಗಪಡಿಸುತ್ತದೆ.‌”ನಾವು ಯಾರ ಕಥೆಗಳನ್ನು ಹೇಳಬೇಕು , ಯಾರ ಸಂಸ್ಕೃತಿಯನ್ನು ನಾವು ಪ್ರತಿಷ್ಟಿತಗೊಳಿಸಬೇಕು ಮತ್ತು ಯಾವ ರೀತಿಯ ಜ್ಞಾನವನ್ನು ನಾವು ಔಪಚಾರಿಕ ಕಲಿಕೆಯಲ್ಲಿ ಅಳವಡಿಸಿ ಅಮರಗೊಳಿಸಬೇಕು ಎಂಬ ಪ್ರಶ್ನೆ ನಮ್ಮ ಪಾಶ್ಚಿಮಾತ್ಯ ವಸಾಹತುಶಾಹಿ ಪರಂಪರೆಯಿಂದ ಅನಿವಾರ್ಯವಾಗಿ ಪ್ರಭಾವಿತವಾಗಿರುತ್ತದೆ” ಎಂದು ಕೇಂಬ್ರಿಡ್ಜ್ ಗಣಿತಶಾಸ್ತ್ರದ ಸಂಪಾದಕ ಮತ್ತು ಡೆವಲಪರ್ ಲೂಸಿ ರೈಕ್ರಾಫ್ಟ್-ಸ್ಮಿತ್ ಹೇಳುತ್ತಾರೆ. ಮಾಜಿ ಗಣಿತ ಶಿಕ್ಷಕಿ , ರೈಕ್ರಾಫ್ಟ್-ಸ್ಮಿತ್ ಈಗ ಗಣಿತ ಶಿಕ್ಷಣ ಕ್ಷೇತ್ರದ ಪ್ರಮುಖ ಧ್ವನಿಯಾಗಿದ್ದಾರೆ ಮತ್ತು ಜಗತ್ತಿನಾದ್ಯಂತದ ಪಠ್ಯಕ್ರಮದಲ್ಲಿನ ವ್ಯತ್ಯಾಸಗಳನ್ನು ಅಧ್ಯಯನ ಮಾಡುತ್ತಿದ್ದಾರೆ. ವೇಲ್ಸ್, ಸ್ಕಾಟ್ಲೆಂಡ್ ಮತ್ತು ಐರ್ಲೆಂಡ್ ತಮ್ಮ ಶಿಕ್ಷಣ ವ್ಯವಸ್ಥೆಯ ಕಲಿಕಾ ಲಕ್ಷ್ಯಗಳ ಪೈಕಿ ರೋಮನ್ ಅಂಕಿಗಳ ಕಲಿಕೆಯನ್ನು ಒಳಗೊಳಿಸಿಲ್ಲ. ಅಮೇರಿಕಾ ಕೂಡಾ ಇದರ ಕಲಿಕೆ ಗುಣಮಟ್ಟತೆಯ ಅಗತ್ಯವಾಗಿ ಪರಿಗಣಿಸಿಲ್ಲ. ಆದರೆ ವಿದ್ಯಾರ್ಥಿಗಳು ನೂರರ ವರೆಗಿನ ರೋಮನ್ ಅಂಕಿಗಳನ್ನು ಓದಲು ಸಮರ್ಥರಾಗಿರಬೇಕು ಎಂದು ಇಂಗ್ಲೆಂಡ್ ಸ್ಪಷ್ಟವಾಗಿ ಹೇಳುತ್ತದೆ.

‌ನಮ್ಮಲ್ಲಿ ಹಲವರಿಗೆ MMXX ಎಂಬ ಪದದಲ್ಲಿ ವಿಶೇಷವಾದದ್ದೇನೂ ಕಾಣುವುದಿಲ್ಲ. (MMXX ಅಂದರೆ 2020 ). ಫಿಬೊನಾಚಿಯ ಹೆಸರಿನಲ್ಲಿ ಪ್ರಸಿದ್ಧವಾದ ಮಾದರಿಯನ್ನು ನೋಡಿ ನಮಗೆ ಫಿಬೋನಾಚಿಗೆ ಮಂಕಾದ ಮನ್ನಣೆ ಕೊಡಬಹುದು. ಒಂದರಿಂದ ಆರಂಭಗೊಂಡು ನಂತರ ಹಿಂದಿನ ಎರಡು ಸಂಖ್ಯೆಗಳ ಮೊತ್ತ ಬರುವ ರೀತಿಯಲ್ಲಿ ಪುನರಾವರ್ತನೆಗೊಳ್ಳುವ ಸಂಖ್ಯಾ ಪ್ರಗತಿಯೇ ಫಿಬೋನಚಿಯ ಮಾದರಿ.

‌ಫಿಬೊನಾಚಿಯ ಮಾದರಿ ನಿಸ್ಸಂಶಯವಾಗಿಯೂ ಗಮನಾರ್ಹ. ಇದು ಚಿಪ್ಪಿಗಳು ಮತ್ತು ಸಸ್ಯದ ಬಳ್ಳಿಯ ಕುಡಿಗಳು, ಸೂರ್ಯಕಾಂತಿ ಹೂವಿನ ತಲೆಯ ಸುರುಳಿಗಳು, ಪೈನ್ ಕೋನ್ ಗಳು,ಪ್ರಾಣಿಗಳ ಕೊಂಬುಗಳು ಮತ್ತು ಮರದ ರೆಂಬೆಯ ಮೇಲೆ ಎಲೆಗಳ ಮತ್ತು ಮೊಗ್ಗುಗಳ ಜೋಡಣೆ, ಹಾಗೆಯೇ ಡಿಜಿಟಲ್ ಕ್ಷೇತ್ರದಲ್ಲಿ (ಕಂಪ್ಯೂಟರ್ ವಿಜ್ಞಾನ ಮತ್ತು ಸೀಕ್ವೆನ್ಸಿಂಗ್ ) ಬೆರಗುಗೊಳಿಸುವ ಆವರ್ತನೆಗಳನ್ನು ತೋರಿಸುತ್ತದೆ. ಅವರ ಮಾದರಿಗಳು ಜನಪ್ರಿಯ ಸಂಸ್ಕೃತಿಯಲ್ಲೂ ಸ್ಥಾನ ಪಡೆದಿದೆ. ಸಾಹಿತ್ಯ, ಚಲನಚಿತ್ರ ಮತ್ತು ದೃಶ್ಯ ಕಲೆಗಳಲ್ಲಿ,ಹಾಡಿನ ಸಾಹಿತ್ಯ ಅಥವಾ ಆರ್ಕೆಸ್ಟ್ರಾ ಸ್ಕೋರ್ಗಳಲ್ಲಿ,ಪಲ್ಲವಿಗಳಲ್ಲಿ, ಮತ್ತು ವಾಸ್ತುಶಿಲ್ಪದಲ್ಲಿಯೂ ತನ್ನ ಛಾಪು ಮೂಡಿಸಿದೆ.

‌ಆದರೆ ಲಿಯೊನಾರ್ಡೊ ಡಾ ಪಿಸಾ ಅವರ ಜ್ವಲಂತವಾದ ಗಣಿತದ ಕೊಡುಗೆಗಳು ಶಾಲೆಗಳಲ್ಲಿ ಅಪರೂಪಕ್ಕೆ ಮಾತ್ರ ಕಲಿಸಲಾಗುತ್ತಿದೆ. ಇದರ ಕಥೆಯು ಸುಮಾರು ಒಂದು ಸಾವಿರ ವರ್ಷಗಳ ಹಿಂದೆ ಅರಮನೆಯ ಗ್ರಂಥಾಲಯದಲ್ಲಿ ಪ್ರಾರಂಭವಾಗುತ್ತಿದ್ದು ಆ ಸಮಯದಲ್ಲಿ ಪಾಶ್ಚಾತ್ಯ ಕ್ರೈಸ್ತಪ್ರಪಂಚದ ಬಹುಪಾಲು ಬೌದ್ಧಿಕ ಕತ್ತಲಿನಲ್ಲಿ ಮುಳುಗಿತ್ತು. ಇದು ಗಣಿತಶಾಸ್ತ್ರದ ಬಗ್ಗೆ ನಮ್ಮ ಯುರೋಕೇಂದ್ರಿತ ದೃಷ್ಟಿಕೋನವನ್ನು ಕಳಚಿ , ಇಸ್ಲಾಮಿಕ್ ಪ್ರಪಂಚದ ವೈಜ್ಞಾನಿಕ ಸಾಧನೆಗಳ ಬಗ್ಗೆ ಬೆಳಕು ಚೆಲ್ಲುವ ಮತ್ತು ಬಹಳ ಹಿಂದಿನಿಂದಲೂ ಬಂದ ಸಂಖ್ಯಾತ್ಮಕ ಸಂಪತ್ತಿನ ನಿರಂತರ ಪ್ರಾಮುಖ್ಯತೆಗಾಗಿ ವಾದಿಸುವ ಕಥೆಯಾಗಿದೆ.

ಅಡ್ರಿಯೆನ್ ಬೆನ್ಹರ್ಡ್
ಕನ್ನಡಕ್ಕೆ: ಅಬ್ದುಲ್ ವಾಸಿಹ್ ಹನೀಫಿ

Leave a Reply

*