ಫಾತಿಮಾ ಅಲ್-ಫಿಹ್ರಿಯಾ: ವೈಜ್ಞಾನಿಕ ಲೋಕದ ಮೊರಾಕೋ ಮಹಿಳೆ

ಫಾತಿಮಾ ಬಿಂತ್ ಮುಹಮ್ಮದ್ ಅಲ್-ಫಿಹ್ರಿಯಾ 800 ರ ದಶಕದ ಆರಂಭದಲ್ಲಿ ಟುನೀಶಿಯಾದಲ್ಲಿ ಜನಿಸಿದಳು. ಅವಳು ಫಾತಿಮಾ ಅಲ್-ಫಿಹ್ರಿ ಎಂಬ ಹೆಸರಿನಲ್ಲಿ ಜಗಜ್ಜಾಹೀರಾಗಿದ್ದಾಳೆ. ಕ್ರಿ.ಶ 859 ರಲ್ಲಿ ತನ್ನ ಸ್ವಂತ ಖರ್ಚಿನಲ್ಲಿ ಅಲ್ ಖರಾವಿಯೀನ್ ಮಸೀದಿ, ಗ್ರಂಥಾಲಯ ಮತ್ತು ವಿಶ್ವವಿದ್ಯಾಲಯವನ್ನು ಫೆಸ್ ನಗರದಲ್ಲಿ ಸ್ಥಾಪಿಸಿದ ಕೀರ್ತಿಗೆ ಅಲ್-ಫಿಹ್ರಿ ಪಾತ್ರಳಾಗಿದ್ದಾಳೆ. ಅವಳ ಹುಟ್ಟೂರಾದ ಅಲ್ ಖೈರವಾನನ್ನೇ ಈ ಅದ್ಭುತ ವಿಶ್ವವಿದ್ಯಾಲಯಕ್ಕೆ ನಾಮಕರಣ ಮಾಡಲಾಗಿದೆ.
ಇತಿಹಾಸದಲ್ಲಿ, ವಿಶೇಷವಾಗಿ ಒಂಬತ್ತನೇ ಶತಮಾನದ ಸಾಮಾಜಿಕ ಜೀವನ ಶೈಲಿ ಮತ್ತು ಅಂದು ಮಹಿಳೆಯರಿಗಿದ್ದ ಸ್ಥಾನಮಾನವನ್ನು ಸ್ವಾಧೀನಪಡಿಸಿದ ಹಾಗೂ ಪದವಿ ಪ್ರದಾನ ಮಾಡಿ ಪ್ರಸಿದ್ಧಿ ಪಡೆದ ವಿಶ್ವದ ಮೊದಲ ವಿಶ್ವವಿದ್ಯಾಲಯಗಳಲ್ಲೊಂದು ‘ಅಲ್-ಖರಾವಿಯೀನ್’.

ಧರ್ಮ ಅಥವಾ ವಯಸ್ಸಿನ ಪರಿಮಿತಿಯಿಲ್ಲದೆ ಈ ವಿಶ್ವವಿದ್ಯಾನಿಲಯವು ಎಲ್ಲರಿಗೂ ಮುಕ್ತ ಪ್ರವೇಶವನ್ನು ಅನುಮತಿಸುತ್ತದೆ ಎಂಬ ಅಂಶವು ಉತ್ತರ ಆಫ್ರಿಕಾದ ಮುಸ್ಲಿಂ ಮಹಿಳಾ ಶಿಕ್ಷಣ ವ್ಯವಸ್ಥೆಯಲ್ಲಿ ಹೊಂದಿದ್ದ ನವೀನ ದೃಷ್ಟಿಕೋನಗಳು ಮತ್ತು ಅಸಾಧಾರಣ ಬದ್ಧತೆಗೆ ಸಾಕ್ಷಿಯಾಗಿದೆ. ಅತ್ಯಂತ ಹಳೆಯದಾದ ಮತ್ತು ಯಶಸ್ಸಿನೊಂದಿಗೆ ಈಗಲೂ ಕಾರ್ಯಾಚರಿಸುತ್ತಿರುವ ಸಂಸ್ಥೆ ಎಂಬ ಗರಿಮೆ ಈ ವಿಶ್ವವಿದ್ಯಾಲಯಕ್ಕಿದೆ. ಪ್ರಪಂಚದಾದ್ಯಂತ ಹೆಸರು ಗಳಿಸಿದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಾದ ಬೊಲೋಗ್ನ ಯುನಿವರ್ಸಿಟಿ (1088), ಆಕ್ಸ್ ಫರ್ಡ್ ಯುನಿವರ್ಸಿಟಿ (1096), ಸಲಮಾನ್ಕ ಯುನಿವರ್ಸಿಟಿ (1243), ಹಾರ್ವರ್ಡ್ ಯುನಿವರ್ಸಿಟಿ (1636) ಮುಂತಾದ ವಿವಿಗಳ ಸ್ಥಾಪನೆಗೆ ಈ ವಿಶ್ವವಿದ್ಯಾಲಯವು ಪ್ರಚೋದನೆಯಾಯಿತು. ಇಂದು ಉನ್ನತ ಶಿಕ್ಷಣದಲ್ಲಿ ಇರುವ ನಿಯಮಗಳು ಮತ್ತು ಆಚರಣೆಗಳು ಅಲ್ ಖರಾವಿಯೀನ್ ವಿಶ್ವವಿದ್ಯಾಲಯವು ಈ ಹಿಂದೆ ನಿರ್ವಹಿಸಿರುವ ಕೆಲವು ಆಚರಣೆಗಳೊಂದಿಗೆ ಹೆಣೆದುಕೊಂಡಿದೆ. ಇದಕ್ಕಿಂತ ಹೆಚ್ಚಾಗಿ, ಅಲ್-ಖರವಿಯೀನ್ ವಿಶ್ವವಿದ್ಯಾಲಯವು ಈಗ ವಿಶ್ವವಿದ್ಯಾಲಯಗಳ ಪದವಿ ಸಮಾರಂಭಗಳಲ್ಲಿ ಧರಿಸುವ ಸಮವಸ್ತ್ರ ಮತ್ತು ಸಮಾರಂಭಗಳ ಪಿತಾಮಹ ಎಂದೇ ಕರೆಯಿಸಿಕೊಂಡಿದೆ.

ಕ್ರಿ.ಶ 9 ನೇ ಶತಮಾನದಷ್ಟು ಹಳೆಯದಾದ ಕೂಫಿ ಲಿಪಿಯಲ್ಲಿ ಬರೆದ ಪವಿತ್ರ ಕುರ್‌ಆನ್‌ನ ಪ್ರತಿ ಮತ್ತು ವಿವಿಧ ವಿಷಯಗಳ ಕುರಿತಿರುವ ಸಾವಿರಾರು ಹಸ್ತಪ್ರತಿಗಳು. ವಿಶ್ವದ ಅತ್ಯಂತ ಹಳೆಯ ಗ್ರಂಥಾಲಯವಾದ ಅಲ್ ಖರಾವಿನ್ ನಲ್ಲಿ ಸಂರಕ್ಷಿಸಿಡಲಾಗಿದೆ. ಗ್ರಂಥಾಲಯವು ಹನ್ನೆರಡನೆಯ ಸುವಾರ್ತೆಯ ಅರೇಬಿಕ್ ನಕಲನ್ನು ಸಹ ಹೊಂದಿದೆ.

ಅಲ್-ಖರವಿಯೀನ್ ವಿಶ್ವವಿದ್ಯಾಲಯದ ಸ್ಥಾಪನೆಯ ಶತಮಾನಗಳಲ್ಲಿ ಶಿಕ್ಷಣವು ಪ್ರಪಂಚದ ಮೇಲೆ ಹೆಚ್ಚು ಪ್ರಭಾವ ಬೀರಿತ್ತು. ಅದೂ ಅಲ್ಲದೆ ಅಸಂಖ್ಯಾತ ವಿಶ್ವಪ್ರಸಿದ್ಧ ವ್ಯಕ್ತಿಗಳನ್ನು ರೂಪಿಸಿದೆ. ಅನೇಕ ಪ್ರಮುಖ ಮುಸ್ಲಿಂ ವಿದ್ವಾಂಸರಲ್ಲದೆ, ವಿಶ್ವವಿದ್ಯಾಲಯವು ಯಹೂದಿ-ಕ್ರಿಶ್ಚಿಯನ್ ವಿದ್ವಾಂಸರನ್ನು ಸಹ ಆಕರ್ಷಿಸಿತು.
ಅಂದಲೂಸಿಯಾ(ಸ್ಪೇನ್)ದ ರಾಜತಾಂತ್ರಿಕ ಮತ್ತು ಭೂಗೋಳಶಾಸ್ತ್ರಜ್ಞ ಹಸನ್ ಅಲ್-ವಸ್ಸನ್ (ಲಿಯೋ ಆಫ್ರಿಕಾನಸ್), ಯಹೂದಿ ತತ್ವಚಿಂತಕ ಮೋಸ್ಸಸ್ ಬೆನ್ ಮೈಮೂನ್ (ಮೈಮೋನಿಡೆಸ್), ಇಸ್ಲಾಮಿಕ್ ತತ್ವಚಿಂತಕ ಇಬ್ನು ರುಶ್ದ್ (ಅವಿರೋಸ್), ಇತಿಹಾಸ ತಜ್ಞ ಹಾಗೂ ಚಿಂತಕರಾದ ಇಬ್ನು ಖಲ್ದೂನ್, ಸೂಫಿ ಕವಿ ಹಾಗೂ ತತ್ವಚಿಂತಕ ಇಬ್ನು ಹಸ್ಮ್ ಮುಂತಾದ ಪ್ರಖ್ಯಾತ ವ್ಯಕ್ತಿಗಳು ಈ ವಿವಿಯಲ್ಲಿ ವಿದ್ಯಾರ್ಜಿಸಿದ್ದಾರೆ.
ವೈದ್ಯಕೀಯ ವಿದ್ವಾಂಸ ಇಬ್ನ್ ಬೇಜಾ, ವ್ಯಾಕರಣ ವಿದ್ವಾಂಸ ಇಬ್ನ್ ಬೆನ್ ಅಜ್ರ್, ಡಚ್ ಓರಿಯಂಟಲಿಸ್ಟ್ ಮತ್ತು ಗಣಿತಜ್ಞ ಜಾಕೋಬ್ ವ್ಯಾನ್ ಗೂಲ್, ಶ್ರೇಷ್ಠ ಸೂಫಿಗಳಲ್ಲಿ ಪ್ರಧಾನಿಗಳಾದ ಮುಹಮ್ಮದ್ ಅಲ್-ಜಝೂಲಿ, ಒರಿಲಾಕ್‌ನ ಗೆರ್ಬರ್ಟ್ (ಕ್ರಿ.ಶ. 999 ರಿಂದ 1003ರ ವರೆಗೆ ಪೋಪ್ ಹುದ್ದೆಯಲ್ಲಿದ್ದವರು ಹಾಗೂ ಇಂದಿನವರೆಗೂ ನಾವು ಉಪಯೋಗಿಸುತ್ತಿರುವ ಅರೆಬಿಕ್ ನ್ಯೂಮೆರಲ್ಸನ್ನು ಪರಿಚಯಿಸಿದ ವ್ಯಕ್ತಿ) ಮುಂತಾದವರು ಅಲ್ ಖರವಿಯ್ಯೀನ್ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡಿದ್ದಾರೆಂದು ನಂಬಲಾಗಿದೆ.

ಉಚಿತ ಶಿಕ್ಷಣ, ಪಠ್ಯಕ್ರಮದ ಗುಣಮಟ್ಟ ಮತ್ತು ವಿವಿಧ ತರಬೇತಿ ಕೋರ್ಸ್‌ಗಳು ಅಲ್ ಖರಾವಿಯ್ಯೀನ್ ವಿಶ್ವವಿದ್ಯಾಲಯವನ್ನು ಬುದ್ಧಿಜೀವಿಗಳ, ವಿದ್ವಾಂಸರ ಮತ್ತು ದಾರ್ಶನಿಕರ ತಾಣವನ್ನಾಗಿ ಮಾಡಿವೆ. ಅಲ್-ಖರವಿಯ್ಯೀನ್ ವಿಶ್ವವಿದ್ಯಾಲಯವು ಭಾಷೆ, ಸಾಹಿತ್ಯ, ತತ್ವಶಾಸ್ತ್ರ, ಖಗೋಳವಿಜ್ಞಾನ, ಔಷಧ, ಇಸ್ಲಾಮಿಕ್ ಕಾನೂನು ಮತ್ತು ಇಸ್ಲಾಮಿಕ್ ನ್ಯಾಯಶಾಸ್ತ್ರ ಕ್ಷೇತ್ರಗಳಲ್ಲಿ ವ್ಯಾಪಕವಾದ ವೈಜ್ಞಾನಿಕ ಮತ್ತು ತರ್ಕಬದ್ಧ ಚರ್ಚೆಗಳಿಗೆ ಕೊಡುಗೆ ನೀಡಿದೆ ಮತ್ತು ಪೋಷಿಸಿದೆ.
ಮುಖ್ಯವಾಗಿ ಮಾಲಿಕಿ ಚಿಂತನೆಯ ಕರ್ಮಶಾಸ್ತ್ರದಲ್ಲಿ ಪ್ರಮುಖ ಪಾತ್ರ ವಹಿಸಿದೆ.
ಐತಿಹಾಸಿಕವಾಗಿ ಮಹತ್ವದ ಚರ್ಚೆಗಳ ಜೊತೆಗೆ, ಅಲ್-ಖರವಿಯ್ಯೀನ್ ವಿಶ್ವವಿದ್ಯಾಲಯದ ವಿದ್ವಾಂಸರು ಅನೇಕ ರಾಜಕೀಯ ಚರ್ಚೆಗಳಲ್ಲಿ ಮುಂಚೂಣಿಯಲ್ಲಿದ್ದರು. ಮಧ್ಯಕಾಲೀನ ಯುರೋಪಿಯನ್ ಸಮಾಜಗಳ ಕರಾಳ ಯುಗದಲ್ಲಿ, ಧರ್ಮನಿಷ್ಠ ಮತ್ತು ದೂರದೃಷ್ಟಿಯ ಒಂಬತ್ತನೇ ಶತಮಾನದ ಮುಸ್ಲಿಂ ಮಹಿಳೆ ಬೌದ್ಧಿಕ ಪ್ರಗತಿ ಮತ್ತು ಜ್ಞಾನೋದಯಕ್ಕಾಗಿ ಅಪರೂಪದ ಜಾಗವನ್ನು ಸೃಷ್ಟಿ ಮಾಡಿದ್ದು ಆ ಕಾಲವನ್ನೇ ಸವಾಲು ಮಾಡುವ ಮೂಲಕವಾಗಿತ್ತು.

ವಿಶ್ವವಿದ್ಯಾಲಯದ ಇತಿಹಾಸದಲ್ಲೇ ಫಾತಿಮಾ ಅಲ್-ಫಿಹ್ರಿ ಮಾಡಿದ ಸೇವೆಗೆ ಇಡೀ ಜಗತ್ತೇ ಕೃತಜ್ಞತೆಯನ್ನು ಸಲ್ಲಿಸುತ್ತಿದೆ.

ಛಾಪು ಮೂಡಿಸಿದ ಖೈರವಾನಿ ಮಹಿಳೆ

ಖೈರವಾನ್ (ಇಂದಿನ ಟುನೀಶಿಯಾ, ಖೈರುನ್) ನ ಶ್ರೀಮಂತ ವ್ಯಾಪಾರಿ ಮುಹಮ್ಮದ್ ಅಲ್-ಫಿಹ್ರಿಯ ಇಬ್ಬರು ಮಕ್ಕಳಲ್ಲಿ ಫಾತಿಮಾ ಅಲ್-ಫಿಹ್ರಿ ಒಬ್ಬಳು. 7ನೇ ಶತಮಾನದಲ್ಲೇ ಪ್ರಸಿದ್ಧಿಯಾದ ಅದರ ವಾಸ್ತುಶಿಲ್ಪವು ಇಂದಿಗೂ ಅತ್ಯಾಕರ್ಷಣೀಯ ಆಗಿರುವುದರಿಂದಲೇ ಖೈರವಾನ್ ನಗರವು ಯುನೆಸ್ಕೋ ವಿಶ್ವ ಪರಂಪರೆಯ (World heritage) ತಾಣವಾಗಿದೆ.
670 ರಲ್ಲಿ ಉಮಾಯತ್ ರಾಜವಂಶವು ಸ್ಥಾಪಿಸಿದ ಖೈರಾವಾನ್ ನಗರವು ಇಸ್ಲಾಮಿಕ್ ಜ್ಞಾನ, ಸಾಂಸ್ಕೃತಿಕ ಶ್ರೀಮಂತಿಕೆ ಮತ್ತು ಪರಿಷ್ಕಾರದ ಉತ್ತುಂಗದಲ್ಲಿತ್ತು. ಆಧ್ಯಾತ್ಮಿಕತೆ ಮತ್ತು ಜ್ಞಾನದ ಈ ಇಹಲೋಕದ ಸ್ವರ್ಗವು ಅನೇಕ ವಿದ್ವಾಂಸರ ಗಮನ ಸೆಳೆಯಿತು. ವಾಯುವ್ಯ ಆಫ್ರಿಕಾದಲ್ಲಿ ಅಲ್ ಘರ್ಬ್ ಅನ್ನು ವಶಪಡಿಸಿಕೊಂಡ ಸಮಯದಲ್ಲಿ ನಗರವು ಮಿಲಿಟರಿ ಶಿಬಿರವಾಗಿ ಕಾರ್ಯ ನಿರ್ವಹಿಸಬೇಕಾಯಿತು.
ಅಗ್ಲಾಬಿಡ್ ರಾಜವಂಶವು 8 ಮತ್ತು 9 ನೇ ಶತಮಾನಗಳಲ್ಲಿ ಅಬ್ಬಾಸಿಡ್ ರಾಜವಂಶದಡಿಯಲ್ಲಿ ಖೈರಾವಾನ್ ಅನ್ನು ಆಳಿತು. ಅವರು ಸಿಸಿಲಿಯನ್ನು ವಶಪಡಿಸಿಕೊಂಡರು ಮತ್ತು ಆಫ್ರಿಕಾವನ್ನು ಯುದ್ಧಮುಕ್ತ ವಲಯವನ್ನಾಗಿ ಮಾಡಿದರು.
ಗ್ಲೋಬ್ ಅಗ್ಲಾಬಿಡ್ ಅರಮನೆಗಳು ಬಹಳ ಪ್ರಸಿದ್ಧವಾಗಿವೆ. ಅಲ್-ಫಿಹ್ರಿ ಕುಟುಂಬವು ಹುಟ್ಟಿ ಬೆಳೆದ ತಾಯ್ನಾಡನ್ನು ಬಿಟ್ಟು, ಶಿಕ್ಷಣದಲ್ಲಿ ಹಿಂದುಳಿದಿದ್ದ
ಫಾಸಿಲಿನ ಜ್ಞಾನ ಸ್ವರ್ಗವನ್ನು ನಿರ್ಮಿಸಲು ಪಯಣ ಹೊರಟಿತು.

ವಾಸ್ತವದಲ್ಲಿ, ಫಾತಿಮಾ ಅಲ್-ಫಿಹ್ರಿ ಬಗ್ಗೆ ಅಷ್ಟೇನೂ ಮಾಹಿತಿ ಲಭ್ಯವಿಲ್ಲ. ಮುಸ್ಲಿಂ ರಾಜವಂಶಸ್ಥರಾದ ಇದ್ರೀಸಿನ ಆಸ್ಥಾನದಲ್ಲಿ ಫೆಸ್ ನ ಮೊದಲ ಪ್ರಜೆಗಳೆಡೆ ಖರಾವಿಯಾ (ಖೈರಾನ್‌ನ ವಂಶಸ್ಥರು) ಸಮುದಾಯಕ್ಕೆ ಸೇರಿದವರು. ಒಂಬತ್ತನೇ ಶತಮಾನದ ಆರಂಭದಲ್ಲಿ ಫಾತಿಮಾ ಮತ್ತು ಅವಳ ಕುಟುಂಬ ಖೈರವಾನ್‌ನಿಂದ ಫೆಸ್ ಗೆ ವಲಸೆ ಬಂದಿದ್ದರು.
ಆಗ ಫೆಸ್ ಪಟ್ಟಣವು ಧರ್ಮನಿಷ್ಠ ಮತ್ತು ಎಲ್ಲರಿಂದ ಗೌರವಕ್ಕೆ ಪಾತ್ರರಾಗಿದ್ದ ಇದ್ರಿಸ್ II ರ ಸಂಪೂರ್ಣ ಆಡಳಿತದಲ್ಲಿತ್ತು. ಆ ಸಮಯದಲ್ಲಿ ಫೆಸ್ ಇಡೀ ಪಶ್ಚಿಮದಲ್ಲೇ ಗಮನ ಸೆಳೆಯುವ ಕೇಂದ್ರವಾಗಿತ್ತು. ಸಂತೋಷ ಮತ್ತು ಸೌಭಾಗ್ಯದಿಂದ ತುಂಬಿದ ನಗರವಾಗಿತ್ತು. ವಿಶ್ವದ ಅತ್ಯಂತ ಅದ್ಭುತವಾದ ಮುಸ್ಲಿಂ ನಗರಗಳಲ್ಲಿ ಸ್ಥಾನ ಗಿಟ್ಟಿಸಿದ ಬಳಿಕ ಸಾಂಪ್ರದಾಯಿಕ ಮತ್ತು ಸಾರ್ವತ್ರಿಕ ಧರ್ಮನಿಷ್ಠೆ ಮತ್ತು ಸಾಂಸ್ಕೃತಿಕ ಶ್ರೀಮಂತಿಕೆಯ ಸಮೃದ್ಧ ಮಿಶ್ರಣಕ್ಕಾಗಿ ಫೆಸ್ ಪ್ರಶಂಸಿಸಲ್ಪಟ್ಟಿತು. ಫಾತಿಮಾ ಅವರ ಕುಟುಂಬವು ಫೆಸ್ ನದಿಯ ಎಡದಂಡೆಯಲ್ಲಿರುವ ಈ ಪಟ್ಟಣದಲ್ಲಿ ವಾಸಿಸುತ್ತಿತ್ತು. ಅಂತಿಮವಾಗಿ, ಫಾತಿಮಾ ಫೆಸ್‌ನಿಂದಲೇ ಮದುವೆಯಾದಳು.

ಅಲ್ ಕರಾವಿನ್: ಫೆಸ್ ನಗರದ ಹೃದಯ

ಇಂದು, ಫೆಸ್ ವಿಶ್ವದ ಅತ್ಯಂತ ಆಕರ್ಷಕ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ಫೆಸ್ ನ ಹಳೆಯ ಪಟ್ಟಣವಾದ ‘ಫೆಸ್ ಅಲ್ ಬಾಲಿ’ ಅತ್ಯಾಕರ್ಷಕವಾಗಿದೆ.
ಹಳೆಯ ಪಟ್ಟಣದಲ್ಲಿರುವ ಚಕ್ರವ್ಯೂಹವನ್ನು ಹೋಲುವ
ಕ್ರಿಸ್ ಕ್ರಾಸ್‌ನೊಂದಿಗೆ ಇರುವ ಅನೇಕ ಕಿರಿದಾದ ಬೀದಿಗಳು ಅದ್ಬುತವಾಗಿದೆ ಇದು. ವರ್ಣರಂಜಿತ ಮತ್ತು ಸುಂದರವಾಗಿ ವಿನ್ಯಾಸಗೊಳಿಸಲಾದ ಗೇಟ್‌ಗಳು ಮತ್ತು ಪ್ರಸಿದ್ಧ ‘ಬ್ಲೂ ಗೇಟ್’, ಬೀದಿಗಳ ಮೂಲಕ ಪ್ರಾಚೀನ ಸಾರಿಗೆ ಸಂಪರ್ಕ ಯೋಜನೆಗಳು ಮತ್ತು ಸ್ಥಳೀಯ ವಾಸ್ತುಶಿಲ್ಪದ ಜಾಣ್ಮೆ ಸೇರಿದಂತೆ 14 ಕೋಟೆಯ ಗೇಟ್‌ಗಳು ಎಲ್ಲರನ್ನೂ ಆಕರ್ಷಿಸುತ್ತವೆ. ಅಲ್ ಖರಾವಿಯ್ಯೀನ್ ಇನ್ನೂ ಫೆಸ್‌ನ ಹೃದಯ ಬಡಿತವಾಗಿದೆ.

ಹಿರಿಯರ ಪ್ರಯತ್ನ ಮತ್ತು ಶ್ರಮದ ಫಲವಾಗಿ ಅಲ್ ಫಿಹ್ರಿ ಕುಟುಂಬವು ಸಂಪತ್ತಿನಿಂದ ಕಂಗೊಳಿಸುತ್ತಿತ್ತು. ನಂತರ ಫಾತಿಮಾಳ ತಂದೆ ಮುಹಮ್ಮದ್ ಬಿನ್ ಅಬ್ದುಲ್ಲಾ ವಿಶಾಲವಾಗಿ ಹರಡಿದ್ದ ವ್ಯಾಪಾರ ಸಾಮ್ರಾಜ್ಯದ ನಾಯಕತ್ವ ವಹಿಸಿಕೊಂಡರು. ಪತಿ, ತಂದೆ ಮತ್ತು ಸಹೋದರ ನಿಧನರಾದಾಗ, ಫಾತಿಮಾ ಮತ್ತು ಅವಳ ಏಕೈಕ ಸಹೋದರಿ ಮರಿಯಂ ಆರ್ಥಿಕವಾಗಿ ಬಲಿಷ್ಠರಾದರು. ಅವರು ತಮ್ಮ ಜೀವನದ ಕೊನೆಯ ದಿನಗಳಲ್ಲಿ ಪ್ರಸಿದ್ಧಿ ಪಡೆದರು.
ಉನ್ನತ ಶಿಕ್ಷಣ ಪಡೆಯುವುದರಲ್ಲಿ ಮತ್ತು ತಮ್ಮ ಅಪಾರ ಸಂಪತ್ತನ್ನು ಸಮಾಜದ ಸುಧಾರಣೆಗಾಗಿ ಖರ್ಚು ಮಾಡುವಲ್ಲಿ ಮರಿಯಂ ಮತ್ತು ಫಾತಿಮಾ ಸಹೋದರಿಯರ ಸ್ಪರ್ಧೆ ನಡೆಯುತ್ತಿತ್ತು. ಫೆಸ್ ನಲ್ಲಿದ್ದ ಮಸೀದಿಗಳು ಇಸ್ಲಾಮಿಕ್ ಸ್ಪೇನ್ ನಿಂದ ನಿರಾಶ್ರಿತರಿಗೆ ಮತ್ತು ಫೆಸ್ನಲ್ಲಿ ಹೆಚ್ಚುತ್ತಿರುವ ಮುಸ್ಲಿಂ ಜನಸಂಖ್ಯೆಗೆ ಸ್ಥಳಾವಕಾಶ ನೀಡುವಷ್ಟು ಹಿರಿದಾಗಿಲ್ಲ ಎಂದು ಮನಗಂಡಾಗ ಮರಿಯಂ ಸುಂದರವಾದ ಆಂದಲೂಸಿಯನ್ ಮಸೀದಿಯನ್ನು ಕ್ರಿ. ಶ. 859 ರಲ್ಲಿ ನಿರ್ಮಿಸಿದಳು.
ಮತ್ತೊಂದೆಡೆ, ಫಾತಿಮಾ ತನ್ನ ವ್ಯಕ್ತಿತ್ವದ ವರ್ಚಸ್ಸಿಗಾಗಿ ಅಲ್ ಖರವಿಯ್ಯೀನ್ ವಿಶ್ವವಿದ್ಯಾಲಯ ಮತ್ತು ಅದರ ಪಕ್ಕದ ಮಸೀದಿಯ ನಿರ್ಮಾಣದಲ್ಲಿ ತಲ್ಲೀನಳಾಗಿದ್ದಳು. ಇದನ್ನು ಇತಿಹಾಸಕಾರರು ಪದವಿ ನೀಡುವ ವಿಶ್ವದ ಮೊದಲ ಮತ್ತು ಇನ್ನೂ ಜೀವಂತವಾಗಿರುವ ವಿಶ್ವವಿದ್ಯಾಲಯವೆಂದು ಬಣ್ಣಿಸಿದ್ದಾರೆ.
ನಿರ್ಮಾಣ ಕ್ಷೇತ್ರದಲ್ಲಿ ಪರಿಣತಿ ಇಲ್ಲದಿದ್ದರೂ ಸಹ, ಅವರ ಸಮರ್ಪಣೆ ಮತ್ತು ಪ್ರಾಮಾಣಿಕತೆಯಿಂದಾಗಿ ನಿರ್ಮಾಣ ಕಾರ್ಯಗಳನ್ನು ನೇರವಾಗಿ ಮುನ್ನಡೆಸಲು ಮತ್ತು ನಿರ್ದೇಶಿಸಲು ಸಾಧ್ಯವಾಯಿತು ಎಂದು ಅಧಿಕೃತ ಇತಿಹಾಸ ಹೇಳುತ್ತದೆ. ಮಸೀದಿ ಮತ್ತು ವಿಶ್ವವಿದ್ಯಾನಿಲಯ ನಿರ್ಮಾಣದ ಆದಿಯಿಂದ ಹಿಡಿದು ಕೆಲಸ ಮುಗಿಯುವವರೆಗೂ ದಿನವಿಡೀ ಉಪವಾಸ ಮತ್ತು ಪ್ರಾರ್ಥನೆ ಮಾಡುವುದು ಅವರ ದಿನಚರಿಯಾಗಿತ್ತು.
ಅಂತಹ ಯಶಸ್ವಿ ನಿರ್ಮಾಣಕ್ಕೆ ಅಗತ್ಯವಾದ ದೃಢನಿಶ್ಚಯ, ತಾಳ್ಮೆ ಮತ್ತು ಸಮರ್ಪಣೆಯನ್ನು ಅವಳು ತೋರಿಸಿದಳು. ಉತ್ತರ ಆಫ್ರಿಕಾದ ಅತಿದೊಡ್ಡ ಮಸೀದಿಗಳಲ್ಲಿ ಒಂದಾದ ಅಲ್-ಖರವಿಯ್ಯೀನ್ ಮಸೀದಿ ಇಸ್ಲಾಮಿಕ್ ಜಗತ್ತಿನ ನವೀನ ಪಾಠ್ಯಗಳ ಉತ್ತುಂಗದಲ್ಲಿರುವ ವಿಶ್ವವಿದ್ಯಾಲಯಗಳಿಗೆ ನಾಂದಿ ಹಾಡಿತು.
ಪ್ರಪಂಚದಲ್ಲಿ ತಮ್ಮ ಛಾಪು ಮೂಡಿಸಿರುವ ಸಮಕಾಲೀನರಲ್ಲಿ ಪ್ರಸಿದ್ಧ ಮುಸ್ಲಿಂ ಚಿಂತಕ ಅಬುಲ್ ಅಬ್ಬಾಸ್, ಖಾಝಿ ಮುಹಮ್ಮದ್ ಅಲ್ ಫಾಸಿ, ಸೂಫಿ ವಿದ್ವಾಂಸರಾದ ಇಬ್ನು ಅರಬಿ, ಪ್ರಸಿದ್ಧ ಇತಿಹಾಸಕಾರ ಹಾಗೂ ಸಮಾಜಶಾಸ್ತ್ರದ ಪಿತಾಮಹರೆನಿಸಿರುವ ಇಬ್ನ್ ಖಲ್ದುನ್, ಪ್ರಸಿದ್ಧ ಭೂಗೋಳ ತಜ್ಞರಾದ ಮುಹಮ್ಮದ್ ಅಲ್-ಇದ್ರಿಸ್, ಜ್ಯೋತಿಷ್ಯ ಶಾಸ್ತ್ರಜ್ಞರಾದ ನೂರುದ್ದೀನ್ ಅಲ್ ಬಿಟ್ರೂಜಿ (Alpetragius) ಮುಂತಾದವರ ಕಾರ್ಯ ಸಾಧನೆಯಿಂದಲೂ ಅಲ್ ಖರಾವಿಯ್ಯೀನ್ ವಿವಿ ಪ್ರಸಿದ್ಧಿ ಪಡೆಯಿತು.

ಆರಂಭದಲ್ಲಿ ವಿಶ್ವವಿದ್ಯಾನಿಲಯವು ಪವಿತ್ರ ಕುರಾನ್ ಮತ್ತು ಇಸ್ಲಾಮಿಕ್ ನ್ಯಾಯಶಾಸ್ತ್ರದ ಮೇಲೆ ಕೇಂದ್ರೀಕರಿಸಿತು. ತದನಂತರ ಗಣಿತ, ಅರೇಬಿಕ್ ಭಾಷಾಶಾಸ್ತ್ರ, ಔಷಧ, ಖಗೋಳವಿಜ್ಞಾನ, ರಸಾಯನಶಾಸ್ತ್ರ, ಇತಿಹಾಸ ಮತ್ತು ಭೂಗೋಳವೆಂದು ವಿವಿಧ ವಿಭಾಗಗಳಾಗಿ ವಿಸ್ತರಿಸಿತು.
ಯಾವುದೇ ಕೋರ್ಸ್‌ಗಳು ಮುಸ್ಲಿಮರಿಗೆ ಮಾತ್ರ ಸೀಮಿತವಾಗಿರಲಿಲ್ಲ. ಅದರ ಬಾಗಿಲುಗಳು ಯಹೂದಿ ಕ್ರಿಶ್ಚಿಯನ್, ಇನ್ನಿತರ ಧರ್ಮದ ವಿದ್ಯಾರ್ಥಿಗಳಿಗೂ ವಿಶಾಲವಾಗಿ ತೆರೆದಿತ್ತು.
ಈ ಸಂಸ್ಥೆಯ ಸಂಪೂರ್ಣ ವೆಚ್ಚವನ್ನು ಫಾತಿಮಾ ಭರಿಸುತ್ತಿದ್ದಂತೆ, ಸಂಪೂರ್ಣವಾಗಿ ಉಚಿತವಾಗಿದ್ದ ಅವರ ಶಿಕ್ಷಣವು ವಿದ್ಯಾರ್ಥಿಗಳನ್ನು ಆಕರ್ಷಿಸಿತು. ಪ್ರಸಿದ್ಧ ಲೇಖಕ ಮತ್ತು ಪ್ರವಾಸಿ ಲಿಯೋ ಆಫ್ರಿಕಾನಸ್, ಯಹೂದಿ ಪಾದ್ರಿ ಮತ್ತು ತತ್ವಜ್ಞಾನಿ ಮೈಮೋನೈಡ್ಸ್ ಮತ್ತು ಪೋಪ್ ಸಿಲ್ವೆಸ್ಟರ್ II ಎಲ್ಲರೂ ಅಲ್ ಕರವಿಯ್ಯೀನ್‌ನ ಪದವೀಧರರು.
ವಿಜ್ಞಾನ ಕ್ಷೇತ್ರದಲ್ಲಿ ಈಗಲೂ ಕಂಗೊಳಿಸುತ್ತಿರುವ ಅಲ್-ಕರಾವಿಯ್ಯೀನ್ ವಿಶ್ವವಿದ್ಯಾಲಯವು ಅದರ ಸಂಸ್ಥಾಪಕಿ ಅಲ್-ಫಿಹ್ರಿಯವರ ಔದಾರ್ಯ ಮತ್ತು ಪ್ರತಿಭೆಗೆ ಜೀವಂತ ಸಾಕ್ಷಿಯಾಗಿದೆ.

ಮಲಯಾಳಂ: ರಾನಿಯಾ ಹಾದಿಯಾ ಅಲ್ ಫಿಹಿರಿ
ಕನ್ನಡಕ್ಕೆ: ಎ.ಕೆ ಫೈಸಲ್ ಗಾಳಿಮುಖ

Leave a Reply

*