ಈಜಿಪ್ಟಿನ ರಂಝಾನ್ ಡೈರಿ

ಜಗತ್ಪ್ರಸಿದ್ಧ ಈಜಿಪ್ಟ್ ಬರಹಗಾರ, ಸಾಹಿತ್ಯ ನೋಬೆಲ್ ಪ್ರಶಸ್ತಿ ಪಡೆದ ನಜೀಬ್ ಮಹ್ಫೂಝ್ ಕೈರೋ ನಗರದ ರಂಝಾನ್ ತಿಂಗಳ ಬಗ್ಗೆ ಈ ರೀತಿ ಬರೆಯುತ್ತಾರೆ:
“ರಂಝಾನಿನ ಹಗಲು ಹೊತ್ತು ಶಾಂತ ವಾತಾವರಣನ್ನು ಈಜಿಪ್ಟಿನಲ್ಲಿ ನನಗೆ ಕಾಣಲು ಸಾಧ್ಯವಾಯಿತು. ಚಹಾ ಅಂಗಡಿಗಳು,‌‌ ದಿನವೂ ಜನ ನಿಬಿಡವಾಗಿರುತ್ತಿದ್ದ ಪ್ರದೇಶಗಳು ನಿರ್ಜನವಾಗಿತ್ತು. ರಂಝಾನ್ ತಿಂಗಳ ಆಚರಣೆ ಈ ರೀತಿಯ ವಾತಾವರಣವನ್ನು ಕಾಣಬಹುದು. ಆದರೆ ರಾತ್ರಿಯ ವಾತಾವರಣ ಬೇರೆಯೇ. ಬೆಳಗ್ಗಿನ ತನಕ ಜನರು ನಿದ್ದೆ ಬಿಟ್ಟಿರುವರು. ಬೀದಿಬದಿ ಪಾನಿಸ್ ಬೆಳಕನ್ನು ಕೈಯಲ್ಲಿರಿಸಿದ ಮಕ್ಕಳನ್ನು ಕಾಣಬಹುದು. ಎಲ್ಲಾ ಕಡೆಯಲ್ಲೂ ಆ ಬೆಳಕು ಕಾಣಬಹುದು. ರಾತ್ರಿ ಏನೋ ಸಂಭ್ರಮದ ಹಾಗೆ ಪರಿಸರ ಬದಲಾಗಿರುತ್ತೆ. ಹಬ್ಬ ಬಂದರೆ ಮಕ್ಕಳು, ವಯಸ್ಕರು ಎಲ್ಲರೂ ಸೇರಿ ವಿಜೃಂಭಣೆಯಿಂದ ಆಚರಿಸುವರು. ಪ್ರತಿ ವರ್ಷದ ರಂಝಾನ್ ತಿಂಗಳನ್ನು ನಾವು ಕಾತುರದಿಂದ ಕಾಯ್ತಾ ಇರುತ್ತೇವೆ.”

ಈಜಿಪ್ಟ್ ಜೀವನದ ಮಾಧುರ್ಯ ಎಲ್ಲೆಲ್ಲೂ ಕೇಳಿಬರುವ ಕುರ್ಆನಿನ ಧ್ವನಿ. ಫೆಬ್ರವರಿ 20 ರಂದು ಈಜಿಪ್ಟ್ ನೆಲಕ್ಕೆ ಬಂದಿಳಿದ ಅಂದಿದಿನಿಂದ ಕುರ್ಆನ್ ಪಾರಾಯಣದ ಲಯಬದ್ಧ ಶಬ್ದಗಳನ್ನು ಅನುಭವಿಸುತ್ತಿದ್ದೇವೆ. ಬಸ್ ಅಥವಾ ಖಾಸಗಿ ವಾಹನದಲ್ಲಿ ಪ್ರಯಾಣಿಸುವಾಗ, ಅವರು ಕುರ್ಆನ್ ಒಂದು ನಿಮಿತ್ತದಂತೆ ಅತ್ಯುತ್ತಮ ಶ್ರೇಷ್ಠ ಖಾರಿಉಗಳ ಅತ್ಯಂತ ಸುಂದರವಾದ ಪಠಣ ಶೈಲಿಯನ್ನು ಹಾಕುತ್ತಾರೆ. ಆ ಸ್ವರಕ್ಕೆ ನಾವು ಉಡುಗೆ ಮತ್ತು ನಡವಳಿಕೆಯಲ್ಲಿ ಅತ್ಯಂತ ಆಧುನಿಕರೆಂದು ಪರಿಗಣಿಸುವ ಜನರು ಕೈಯಲ್ಲಿರುವ ಮೊಬೈಲ್ ಫೋನ್‌ಗಳಿಂದ ಕೇಳುತ್ತಾರೆ. ಅವರ ತುಟಿಗಳು ಕುರಾನ್ ಧ್ವನಿಯೊಂದಿಗೆ ಚಲಿಸುತ್ತವೆ. ವಿಶ್ವಾಸಿಗಳಿಗೆ ಸಂತೋಷದ ಸುದ್ದಿ ಹೇಳಿದಾಗ ಅವರ ಮುಖದಲ್ಲಿ ಮುಗುಳ್ನಗು ಬೀರುತ್ತದೆ. ಜೀವನದ ಅರ್ಥ ಸೂಸುವ ಸೂಕ್ತಗಳು ಬರುವಾಗ ಆಲೋಚನೆಗಳು ದಟ್ಟವಾಗುತ್ತದೆ. ಸೂರತ್ ಯೂಸುಫ್‌ನ ಸೂಕ್ತಗಳು ಈಜಿಪ್ಟಿನವರಿಗೆ ಅತ್ಯಂತ ಪ್ರಿಯವಾದುದು. ಯೂಸುಫ್ ಸೂರತ್ ಪ್ಲೇ ಆದರೆ ಅವರ ಮುಖಗಳು ಹೆಮ್ಮೆಯಿಂದ ಅರಳುತ್ತವೆ.

ರಂಜಾನ್ ಸಮೀಪಿಸುತ್ತಿದ್ದಂತೆ ಈಜಿಪ್ಟಿನವರಿಗೆ ಕುರ್ಆನ್ ಮೇಲಿನ ಪ್ರೀತಿ ಹೆಚ್ಚಾದದ್ದು ಕಂಡುಬಂತು. ಬಸ್ ನಿಲ್ದಾಣದಲ್ಲಿ ನಾವು ವಾಹನಕ್ಕಾಗಿ ಕಾಯುತ್ತಿರುವಾಗ ಪಕ್ಕದಲ್ಲಿದ್ದ ಯುವಕ ತನ್ನ ಮೊಬೈಲ್ ತೆರೆದು ಕುರ್ಆನ್ ಪಾರಾಯಣ ಮಾಡುತ್ತಿದ್ದ. ಅಮೆರಿಕಾದ ವಿಶ್ವವಿದ್ಯಾನಿಲಯದಲ್ಲಿ ಕೋರ್ಸ್‌ಗೆ ಪಾವತಿಸಲು ಬ್ಯಾಂಕ್‌ಗೆ ಹೋಗಿ ಅದರ ರಸೀದಿಯನ್ನು ಪಡೆಯಲು ಹೊರಗಿನ ಸಂದರ್ಶಕರ ಸೀಟಲ್ಲಿ ಹದಿನೈದು ನಿಮಿಷ ಕಾಯಬೇಕಾಯಿತು. ಪಕ್ಕದಲ್ಲಿದ್ದ ಇಪ್ಪತ್ತರ ಹರೆಯದವಳಂತೆಯಿದ್ದ ಹುಡುಗಿ ಮೊಬೈಲ್ ತೆರೆದು ಕುರ್ಆನ್ ನಲ್ಲಿ ಮಗ್ನಳಾಗಿ ಉಳಿದೆಲ್ಲವನ್ನೂ ಮರೆತುಬಿಟ್ಟಿದ್ದಾಳೆ. ಖುರ್ಆನ್ ಈಜಿಪ್ಟಿನವರಿಗೆ ಎಲ್ಲಾ ದುಃಖಗಳಿಗೆ ಆಶ್ವಾಸವನ್ನು ತುಂಬುತ್ತದೆ.

ಈಜಿಪ್ಟಿನ ಭೂಶಾಸ್ತ್ರಪರವಾದ ನೆಲೆಯು, ಭಾರೀ ಸಂಘರ್ಷದ ಈ ಆಧುನಿಕ ಕಾಲದಲ್ಲಿ ಬಹಳ ಮುಖ್ಯವಾದ ಭಾಗದಲ್ಲಾಗಿದೆ. ನಾಲ್ಕು ಭಾಗಗಳಲ್ಲಿಯೂ ಅಸಂತುಷ್ಟಿಯ ಸುದ್ದಿಗಳಾಗಿವೆ. ಪಶ್ಚಿಮಕ್ಕೆ ಲಿಬಿಯಾ, ಪೂರ್ವಕ್ಕೆ ಪ್ಯಾಲೆಸ್ತೀನ್ ಮತ್ತು ದಕ್ಷಿಣಕ್ಕೆ ಸುಡಾನ್. ಅನೇಕ ಆರ್ಥಿಕ ಸವಾಲುಗಳ ಹೊರತಾಗಿಯೂ, ಈಜಿಪ್ಟಿನವರು ಇನ್ನೂ ಅತ್ಯಂತ ಶಾಂತಿಯುತ ಜೀವನವನ್ನು ನಡೆಸುತ್ತಿದ್ದಾರೆ. ಪವಿತ್ರ ಕುರ್ಆನಿನ ಪ್ರಸಿದ್ಧ ಶ್ಲೋಕ, ‘ನಾನು ಇಲ್ಲಿಗೆ ಪ್ರಯಾಣಿಸಿದಾಗ, ನನ್ನ ಹೃದಯವು ಸಂತೋಷದಿಂದ ತುಂಬಿತ್ತು.’ ‘ಉದುಖುಲೂ ಮಿಸ್ರ ಇನ್ಶಾಅಲ್ಲಾಹು ಆಮಿನೀನ್’ – ನೀವು ಸುರಕ್ಷಿತವಾಗಿ ಈಜಿಪ್ಟಿಗೆ ಪ್ರವೇಶಿಸಿರಿ. ಆ ಸುರಕ್ಷತೆಯನ್ನು ಈ ನೆಲದ ಎಲ್ಲೆಡೆ ಅನುಭವಿಸಬಹುದು. ಅನೇಕ ಗೋಡೆಗಳ ಮೇಲೆ ಈ ಶ್ಲೋಕವನ್ನು ಕೆತ್ತಿರುವುದನ್ನು ನೋಡಿದೆ. ಬಂದವರಿಗೆಲ್ಲ ಇಂತಹ ಭದ್ರತೆ ಕೊಡಲು ಇಲ್ಲಿನ ಸರಕಾರವೂ ಗಮನ ಹರಿಸುತ್ತಿದೆ ಅಂತ ತೋಚಿತು.

ಶಅಬಾನ್ ತಿಂಗಳ ಎರಡನೇ ವಾರದಲ್ಲಾಗಿದೆ ನಾನು ಈಜಿಪ್ಟ್ ತಲುಪುವುದು. ಎರಡನೆಯ ದಿನ, ವೀಸಾ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಅಬ್ಬಾಸಿಯಾಗೆ ಹೋಗಬೇಕಾಗಿ ಬಂತು.
ಅದು ಪೂರ್ಣಗೊಳಿಸಿ, ನಾನು ಕೈರೋ ಡೌನ್‌ಟೌನ್‌ಗೆ ಇರುವ ರಸ್ತೆಯಲ್ಲಿ ನಡೆದೆ. ಪಾನಿಸ್ ದೀಪದ ಅಂಗಡಿಗಳ ಸಾಲು ಸಾಲುಗಳು ಕಾಣುತ್ತಿದ್ದವು. ಆ ಕ್ಷಣ ಹನ್ನೆರಡು ವರ್ಷಗಳ ಹಿಂದೆ ರಿಸಾಲ ವಾರಪತ್ರಿಕೆಯಲ್ಲಿ ಬರೆದ ರಮಝಾನ್ ಲೇಖನದ ಬಗ್ಗೆ ನೆನಪಿಸಿಕೊಂಡೆ. ಈಜಿಪ್ಟಿನ ಸಂಶೋಧಕ ನಿರ್ವಾಣ ಸಾದ್ ಅವರ ಕೈರೋದಲ್ಲಿ ರಂಜಾನ್ ಅನುಭವಗಳನ್ನು ಆಧಾರವಾಗಿಟ್ಟುಕೊಂಡು ಸಂಶೋಧನಾ ಪುಸ್ತಕವನ್ನು ಓದಿದ ಅನುಭವಗಳ ಆಧಾರಿತವಾಗಿತ್ತು ಆ ಲೇಖನ. ಅದರಲ್ಲಿ ಮುಖ್ಯವಾಗಿ ಉಲ್ಲೇಖಿಸಿದ್ದು; ಪಾನೀಸ್ ದೀಪಗಳನ್ನು ಹೊತ್ತಿಸಿ ಮನೆ ಬೀದಿ ಮಸೀದಿಗಳನ್ನು ಅಲಂಕಾರಗೊಳಿಸುವ ಈಜಿಪ್ತಿಯನ್ನರ ಕುರಿತಾಗಿತ್ತು. ಪಾನೀಸ್ ದೀಪಗಳ ವೈವಿಧ್ಯತೆಯನ್ನು ಕಂಡು ಆಶ್ಚರ್ಯಚಕಿತನಾದೆ. ಪ್ರತಿಯೊಂದು ಅಂಗಡಿಗಳು ಸಾವಿರ ಚದರ ಅಡಿ ಮತ್ತು ಅದಕ್ಕಿಂತಲೂ ಹೆಚ್ಚಿನವುಗಳನ್ನು ಕಾಣಬಹುದು. ಇವೆಲ್ಲವುಗಳಲ್ಲಿ ವಿವಿಧ ಬಣ್ಣ ಮತ್ತು ಆಕಾರದ ಸಣ್ಣ ಮತ್ತು ದೊಡ್ಡ ಪ್ಯಾನಿಸ್ ದೀಪಗಳನ್ನು ಮಾರಾಟಕ್ಕೆ ಇಡಲಾಗಿದೆ. ಈಜಿಪ್ಟಿನವರು ಬಹಳ ಕುತೂಹಲದೊಂದಿಗೆ ಅಂಗಡಿಗಳನ್ನು ಪ್ರವೇಶಿಸುತ್ತಾರೆ. ತುಂಬಾ ಹೊತ್ತು ಪಾನಿಸ್ ದೀಪಗಳ ಚಂದ ಮತ್ತು ಮಹಿಮೆಯನ್ನು ನೋಡುತ್ತಾರೆ. ಬಹಳ ಇಷ್ಟವಾದ ಒಂದು ಅಥವಾ ಎರಡು ದೀಪಗಳನ್ನು ಮನೆಯ ಮುಂದೆ ಅಥವಾ ಸ್ವಾಗತ ರೂಮಿನಲ್ಲಿ ಇಡಲು ಬೇಕಾಗಿ ಖರೀದಿಸುತ್ತಾರೆ. ಇಪ್ಪತ್ತೋ ಅಥವಾ ಮೂವತ್ತು ರೂಪಗಳಲ್ಲಿ ಸಣ್ಣ ಕಂದಮ್ಮಗಳ ಕೈಗಳಲ್ಲಿಯೂ ಹೊಂದಿಕೊಳ್ಳುವಂತಹ ಪಾನೀಸ್ ಗಳು ಇವೆ. ಹತ್ತು ಈಜಿಪ್ಟ್ ಪೌಂಡ್‌ಗಳಿಂದ (ಭಾರತೀಯ ರೂಪಾಯಿ ಹದಿನೆಂಟು) ಸಣ್ಣ ಮಕ್ಕಳಿಗಿರುವುದನ್ನು ಖರೀದಿಸಬಹುದು. ಈಜಿಪ್ಟಿನವರು ಎಲ್ಲಿಗೆ ಹೋಗಲಿ, ಕುಟುಂಬವು ಅವರೊಂದಿಗೆ ಇರುತ್ತದೆ. ವಿಶೇಷವಾಗಿ ಶಾಪಿಂಗ್‌ಗೆ ಹೋಗುವಾಗ ಅದನ್ನು ಕಾಣಬಹುದು. ಸಣ್ಣ ಮಕ್ಕಳಿಗಿರುವ ಪಾನಿಸ್ ಗಳ ಭಾಗದಲ್ಲಿಯೂ ತುಂಬಾ ಜನಜಂಗುಳಿಗಳಿರುತ್ತವೆ. ಮಕ್ಕಳ ಇಷ್ಟಾನುಸಾರ ಪೋಷಕರು ಒಂದೋ, ಎರಡೋ ಪಾನಿಸ್ ಗಳನ್ನು ಖರೀದಿಸಿ ಕೊಡುತ್ತಾರೆ. ಸಣ್ಣ ಬ್ಯಾಟರಿ ಚಾಲಿತ ಎಲ್.ಇಡಿ ದೀಪಗಳನ್ನು ಈ ಸಣ್ಣ ಪಾನೀಸ್ ಗಳು ಹೊಂದಿರುತ್ತವೆ. ಅವುಗಳು ಉರಿಯುವಾಗ ಕಂದಮ್ಮಗಳ ಮುಖ ಅರಳುವುದನ್ನು ಕಾಣಬಹುದು.

ಸಣ್ಣ ವಾದ್ಯಗಳನ್ನು ಕೂಡ ಮಕ್ಕಳಿಗಾಗಿ ಮಾಡಲಾಗಿದೆ. ಈ ಆಟಿಕೆ ಸಾಮಾನು ರಂಝಾನ್ ಸಿದ್ಧತೆಗೆ ಬಹುಮುಖ್ಯ ಪಾತ್ರವಾಗಲು ಒಂದು ಕಾರಣವಿದೆ. ಕೈರೋದ ಹಲವು ಪ್ರದೇಶಗಳಲ್ಲಿ ಸಹರಿಯ ಸಮಯವನ್ನು ತಿಳಿಸಿಕೊಡಲು, ಚರ್ಮದಿಂದ ತಯಾರಿಸಿದ, ದೊಡ್ಡ ದಫ್ ತರ ಇರುವ ವಸ್ತುಗಳಿಗೆ ಬಾರಿಸುತ್ತಾ, ಅರಬಿ ಹಾಡು ಹಾಡಿ,‌ ಯುವಕರು ಪ್ರತಿಯೊಂದು ಮಸೀದಿಗೆ ತೆರಳಿ ಜನರನ್ನು ಎಬ್ಬಿಸುವ ಪರಿಪಾಠವಿದೆ. ಶತಮಾನದಿಂದಲೂ ಇದು ಚಾಲ್ತಿಯಲ್ಲಿದೆ. ನಜೀಬ್ ಮಹ್ಫೂಝ್ ಹೇಳಿದ ಹಾಗೆ‌ ಕೈರೋ ನಗರದ ಜನರು ರಾತ್ರಿ ಹೊತ್ತು ನಿದ್ರಿಸುವುದು ಕಡಿಮೆ. ಆದರೂ‌ ಉಪವಾಸಕ್ಕೆ ಬೇಕಾಗಿ ಅವರನ್ನು ಎಬ್ಬಿಸುವ ಈ ವಸ್ತುಗಳ ಮೇಲೆ ಅವರಿಗೆ ಒಂಥರಾ ಇಷ್ಟ. ಈ ಆಚರಣೆಗೆ ಒಟ್ಟೋಮನ್ ಕಾಲದವರೆಗಿನ ಹಳೆತನವಿದೆ. ಅವತ್ತು ಸಮಯ ನಿಗದಿಪಡಿಸಿ‌, ಮಲಗಿ ಎದ್ದೇಳಲು ಉಪಕರಣಗಳು ವ್ಯಾಪಕವಾಗಿರಲಿಲ್ಲ. ಆದರೆ ಈಗ ಎಲ್ಲರಿಗೂ ಅಲಾರಾಂ ಇಡಲು ಉಪಕರಣಗಳು ಇದ್ದು ಕೂಡ ರಂಝಾನಿನ ಪರಂಪರಾಗತವಾಗಿ ಆಚರಿಸಿಕೊಂಡು ಬಂದಿರುವ ನೆನಪುಗಳನ್ನು ಮಿಸ್ರಿಗಳು‌ ಕೈಬಿಟ್ಟಿಲ್ಲ. ಅವರಿಗೆ ಸಣ್ಣ ಹಾಗೂ ದೊಡ್ಡ ಮಟ್ಟಿನ ಸಹಾಯವನ್ನು ಮಾಡುವ ಮೂಲಕ ಆ ದಿನವನ್ನು ಆರಂಭಿಸಲು ಹಲವರು ಶ್ರಮಿಸುತ್ತಾರೆ.

ಈಜಿಪ್ಟಿಯನ್ನರಿಗೆ ನಗರದ ಮಧ್ಯಭಾಗದಲ್ಲಿ ಪಿರಂಗಿ ಮುಖಾಂತರ ಆಕಾಶಕ್ಕೆ ಬೆಂಕಿ ಹಾರಿಸಿ, ಅದರ ಶಬ್ದ ಹಾಗು ಬೆಳಕನ್ನು ತೋರಿಸುತ್ತಾ ರೋಜಾ ಆಯಿತೆಂದು ತಿಳಿಸಿಕೊಡುವ ರೂಢಿಯಿದೆ. ಸರ್ಕಾರಿ ಉದ್ಯೋಗಿಗಳ ಮೇಲುಸ್ತುವಾರಿಯಲ್ಲಿ ಈ ಕಾರ್ಯಕ್ರಮ ನಡೆಸಲಾಗುತ್ತದೆ. ಅದನ್ನು ನೋಡಲು, ಫೋಟೋ ಶೂಟ್ ಮಾಡಲು, ಮಾಧ್ಯಮದಲ್ಲಿ ಪ್ರಚಾರ ಮಾಡಲು ಜನ‌ ಬಂದು ಸೇರುವುದಿದೆ. ಶತಮಾನಗಳಿಂದ ಚಾಲ್ತಿಯಲ್ಲಿರುವ ಈ ಕ್ರಮ ಮನಮೋಹಕವೆಂದೂ, ಅದನ್ನು ಆಚರಿಸುವುದು‌ ಸೌಂದರ್ಯದಾಯಕವೆಂದೂ‌ ಈಜಿಪ್ಟ್ ಜನರು ನಂಬುತ್ತಾರೆ. ಮುಸ್ಲಿಂ ಬ್ರದರ್ ಹುಡ್’ಗೆ ಸಮರ್ಥ ನಿಯಂತ್ರಣ ಸರ್ಕಾರದ ಭಾಗದಿಂದ ಇರುವುದರಿಂದ, ಈ ಊರನ್ನು ಇಷ್ಟಪಟ್ಟು ಕೆಲವು ದಿನಗಳು ಇಲ್ಲಿ ಕಲಿಯಲೂ, ವಾಸಿಸಲೂ ತಲುಸಿದ ನಮಗೆಲ್ಲರಿಗೂ ಸುಖ ನೀಡುತ್ತದೆ.

ರಂಝಾನ್ ತಿಂಗಳ ಮೊದಲ ದಿನ ಕೈರೋ ನಗರದ ಮಧ್ಯೆ ನಾನು ನಡೆಯುತ್ತಿದ್ದೆ. ಚರಿತ್ರೆ
ಯೊಂದಿಗಿನ‌ ಹೆಜ್ಜೆಯಾಗಿತ್ತದು. ಹಳೆಯ ಕಟ್ಟಡಗಳನ್ನೆಲ್ಲಾ ಹಾಗೆಯೇ ಇಡಲಾಗಿದೆ. ಪುಣ್ಯ ತಿಂಗಳನ್ನು ಸ್ವಾಗತಿಸಲು ಸಜ್ಜಾಗಿರುವ ಮಿಸ್ರಿಗಳು‌ ಎಲ್ಲೆಡೆ ಇದ್ದಾರೆ. ಎಲ್ಲಾ ಅಂಗಡಿಗಳ ಎದುರು ಭಾಗದಲ್ಲಿ ಪಾನಿಸ್ ಬೆಳಕನ್ನು ಉರಿಸಲಾಗಿದೆ. ಗಗನಚುಂಬಿ ಕಟ್ಟಡಗಳ ಬೀದಿಗಳಲ್ಲಿ, ಒಳ ದಾರಿಗಳಲ್ಲಿ ತಳಿರು ತೋರಣಗಳಿಂದ ಸಿಂಗರಿಸಲಾಗಿದೆ. ಮಕ್ಕಳು ಸಣ್ಣ ಪಟಾಕಿಗಳನ್ನು ಸಿಡಿಸುತ್ತಿದ್ದಾರೆ. ನಮ್ಮೂರಲ್ಲಿ ಕಾಣುವ ದೊಡ್ಡ ಮಟ್ಟಿಗೆ ಶಬ್ದ ಕೋಲಾಹಲ ಸೃಷ್ಟಿಸುವ ಪಟಾಕಿಗಳನ್ನು ಇಲ್ಲಿ ಕಾಣಲು ಅಸಾಧ್ಯ. ಬೀದಿ ಬದಿಯನ್ನು ಶುಚಿಯಾಗಿಸುವ ದೃಶ್ಯ ಕಂಡಾಗ ಮನಸ್ಸು ಶಾಂತವಾಯಿತು. ಹೆಜ್ಜೆ ಮುಗಿಯದಿರಲಿ ಅಂತ‌ ಭಾವಿಸಿಕೊಂಡೆ. ಕಿಲೋಮೀಟರ್ ಕ್ರಮಿಸಿದರೂ‌ ಇದೇ ದೃಶ್ಯ ಕಾಣಬಹುದು.

ಮಸೀದಿಗೆ‌ ಯಾವಾಗ ಬಂದಾಗಲೂ ಖುರ್ಆನ್ ಪಾರಾಯಣ,‌ ಝಿಕ್ರ್ ಮೂಲಕ ಸಮಯ ವ್ಯಯಿಸುವವರನ್ನು ಕಾಣಬಹುದು. ಗ್ರಾಹಕರು ಬರದ ಸಮಯಗಳಲ್ಲಿ ಅಂಗಡಿ ಮಾಲಿಕರು ಖುರ್ಆನ್ ಪಾರಾಯಣದಲ್ಲಿ ತೊಡಗಿಕೊಳ್ಳುವರು. ರಂಝಾನಿನ ಮೊದಲನೇ ದಿನ ಒಂದು ಅನುಭವ ಉಂಟಾಯಿತು. ನನಗೆ ಐದು ಕಿಲೋಮೀಟರ್ ದೂರಕ್ಕೆ ಬಸ್ ಮೂಲಕ ಹೋಗಬೇಕಿತ್ತು. ದಾರಿ ಮಧ್ಯೆ ಮಧ್ಯವಯಸ್ಕರಾದ ಒಬ್ಬರು ಬಸ್ ಹತ್ತಿದರು. ‘ಸ್ವಲ್ಲೂ ಅಲಾ ನಬಿಯ್ಯ್’ ಎಂದು ಆರಂಭಿಸಿ, ಸ್ವಲಾತಿನ‌ ಮಹತ್ವವನ್ನು ಹೇಳುವ ಸೂಕ್ತವನ್ನು, ಹದೀಸನ್ನು ಹೇಳಲು ಆರಂಭಿಸಿದರು. ನಾನು ಕಂಡಾಕ್ಷಣ ಭಿಕ್ಷುಕನೆಂದು ಭಾವಿಸಿಕೊಂಡೆ. ಆದರೆ ಯಾರಿಂದಲೂ ಹಣ ಸ್ವೀಕರಿಸುವುದಾಗಿ ಕಾಣಲಿಲ್ಲ. ಹತ್ತು ನಿಮಿಷಗಳ ಕಾಲ ಬಸ್ನಲ್ಲಿ ಹಿಂದೆ ಮುಂದೆ ಹೆಜ್ಜೆಯಿಟ್ಟು ಸ್ವಲಾತ್ ಹೇಳುವಂತೆ ಪ್ರೇರೇಪಿಸುತ್ತಾ ಬಸ್ ಇಳಿದು ಬೇರೆ ಬಸ್ ಏರುವುದನ್ನು ಕಂಡೆ. ರಂಝಾನ್ ತಿಂಗಳಲ್ಲಿ ಆ ವ್ಯಕ್ತಿ ಮಾಡುವ ವ್ಯತಿರಿಕ್ತವಾದ ಆ ಪುಣ್ಯಗೆಲಸವನ್ನು ನೆನಪಿಸುತ್ತಾ ಅದರಲ್ಲೇ ಮಗ್ನನಾದೆ.

ಇಫ್ತಾರ್ ವೇಳೆ ಅಂಗಡಿಗಳು ಜನನಿಬಿಡವಾಗುತ್ತೆ. ಚರಿತ್ರೆ ಪುಟಗಳಲ್ಲಿ ಸ್ಥಾನ ಗಿಟ್ಟಿಸಿಕೊಂಡ ಮಸೀದಿಗಳಲ್ಲಿ ದಿನವೂ ಇಫ್ತಾರ್ ಕೂಟ ಏರ್ಪಡಿಸಲಾಗಿರುತ್ತೆ.‌ ಅದಲ್ಲದೆ ರಸ್ತೆ ಬದಿಗಳಲ್ಲಿ ನಲ್ವತ್ತರಿಂದ ಐವತ್ತು ಜನರಿಗಾಗುವಷ್ಟು ಇಫ್ತಾರಿನ ಸೌಕರ್ಯಗಳು ಮಾಡಿಟ್ಟಿದ್ದು ಕಾಣಬಹುದು. ಮಗ್ರಿಬ್ ಅಝಾನ್ ಕರೆಯುವ ಅರ್ಧ ಘಂಟೆ ಮೊದಲೇ ಜನರು ಬಂದು ಇಫ್ತಾರಿಗಾಗಿ ಕಾಯುವ ಸುಂದರ ದೃಶ್ಯ ಸಾಮಾನ್ಯ. ಪುರುಷರಿಗೂ ಮಹಿಳೆಯರಿಗೂ ಪ್ರತ್ಯೇಕ ಸ್ಥಳವನ್ನು ಕಾಣಲು ಸಾಧ್ಯವಾಯಿತು. ಬಸ್ ಮೂಲಕ ಸಂಚರಿಸುವ ಜನರಿಗೆ ಖರ್ಜೂರ, ನೀರು, ಆಹಾರಗಳನ್ನು ಪ್ರತ್ಯೇಕ ಕವರ್ ಮೂಲಕ ನೀಡುತ್ತಾರೆ. ಹೀಗೆ ಈಜಿಪ್ಟಿನಲ್ಲಿ ಪರಸ್ಪರ ಸ್ನೇಹ ಕೊಂಡುಕೊಳ್ಳುವಿಕೆಯ, ಸ್ವದಖಾ ನೀಡಿ ಪುಣ್ಯ ಕಟ್ಟಿಕೊಳ್ಳುವ ದೃಶ್ಯಗಳು ಯಥೇಚ್ಛವಾಗಿ ನೋಡಬಹುದು.

ತರಾವೀಹ್ ಬಹಳ ಸಂತೋಷದಾಯಕ ಕರ್ಮ. ಮಸೀದಿಗಳಲ್ಲಿ ಕುರ್ಆನ್ ಸುಶ್ರಾವ್ಯವಾಗಿ ಪಾರಾಯಣ ಮಾಡುವ ಖಾರಿಉಗಳಿರುತ್ತಾರೆ. ಸಾಮಾನ್ಯವಾಗಿ ಸೂರಾಗಳು ಧೀರ್ಘವಾಗುತ್ತದೆ. ಆದರೆ ಈಜಿಪ್ಟಿನವರು ತಮ್ಮ ಆರಾಧನೆಯಲ್ಲಿ ಎಷ್ಟು ಮಗ್ನರಾಗಿದ್ದರು ಎಂದರೆ ಅವರು ಆ ಮಧುರವಾದ ಧ್ವನಿಯಲ್ಲಿ ಮಗ್ನರಾಗಿ ಎಷ್ಟು ಕೇಳಿದರೂ ಅದು ಕೊನೆಗೊಳ್ಳದಿರಲಿ ಎಂದು ಬಯಸುತ್ತಾರೆ. ಅಝ್ಹರ್ ಮಸೀದಿ ಮತ್ತು ಹಸನ್ ಮಸೀದಿಯಲ್ಲಿ ಎಲ್ಲಾ ನಮಾಜುಗಳಿಗೆ ಹೆಚ್ಚಿನ ಜನರು ಸೇರುತ್ತಾರೆ. ಮೊದಲ ತರಾವೀಹ್‌ಗೆ, ಈಜಿಪ್ಟ್‌ನ ಅಝ್ಹರ್ ನಲ್ಲಿ ಪ್ರಸಿದ್ಧ ಕುರ್ಆನ್ ಪಾರಾಯಣ ಮಾಡುವ ಶೇಖ್ ನಆನಾಯಿನ್ ಅವರ ಪಾರಾಯಣವಿತ್ತು.

ಈಜಿಪ್ಟಿನವರು ಆರೋಗ್ಯಕರ ಆಹಾರವನ್ನು ತಿನ್ನುವವರು. ರಂಜಾನಿನಲ್ಲೂ ಆ ಹವ್ಯಾಸಕ್ಕೆ ಬದಲಾವಣೆ ಇಲ್ಲ. ಐಶ್ ರೊಟ್ಟಿ ಮತ್ತು ಅಲಸಂಡೆ ಸಾರು ಮಾರಾಟ ಮಾಡುವ ಅಂಗಡಿಗಳು ತುಂಬಾ ಕಾರ್ಯನಿರತವಾಗಿವೆ. ಅವುಗಳನ್ನು ತಿಂದರೆ ಹೊಟ್ಟೆ ತುಂಬುತ್ತದೆ. ಸ್ವಲ್ಪವೂ ಭಾರ ಅನಿಸುವುದಿಲ್ಲ. ಕುನಾಫಾದಂತಹ ರಂಜಾನ್ ವಿಶೇಷ ಸಿಹಿತಿಂಡಿಗಳು ಬೀದಿಗಳಲ್ಲಿ ಹೇರಳವಾಗಿ ಲಭ್ಯವಿವೆ. ಈಜಿಪ್ಟ್‌ನಲ್ಲಿ ರಂಝಾನನ್ನು ಒಮ್ಮೆಯಾದರೂ ಅನುಭವಿಸಲೇಬೇಕು. ಹಾಗಾದರೆ ಕುರ್ಆನನ್ನು ಅನುಭವಿಸಲು ಕೂಡ ಸಾಧ್ಯವಾಗುತ್ತದೆ.

ಮೂಲ : ಎಂ. ಲುಖ್ಮಾನ್
ಅನುವಾದ : ಸಲೀಂ ಇರುವಂಬಳ್ಳ

Leave a Reply

*