ಪ್ರಣಯ ನಿರೂಪಣೆಯ ಪೌರಸ್ತ ಮತ್ತು ಪಾಶ್ಚಾತ್ಯ ಮಾದರಿಗಳು

ನಮ್ಮ ಸಾಮಾಜಿಕ ಸಂಬಂಧಗಳು ಮತ್ತು ಅವುಗಳನ್ನು ವ್ಯಾಖ್ಯಾನಿಸುವ ದೃಷ್ಟಿಕೋನವು ಆಧುನೀಕರಣ ಮತ್ತು ಡಿಜಿಟಲೀಕರಣಗಳಿಂದಾಗಿ ಬಹಳ ಬದಲಾವಣೆಗಳೇ ಆಗಿವೆ. ಇದು ನಮ್ಮ ಭಾವನೆಗಳನ್ನು ವ್ಯಕ್ತಪಡಿಸುವುದರ ಮೇಲೂ ಪರಿಣಾಮ ಬೀರಿದೆ. ಅಂತಹ ಭಾವನೆಗಳನ್ನು ನಿಯಂತ್ರಿಸುವುದೇ ಪ್ರೀತಿ. ಆದಾಗ್ಯೂ, ಆಯಾ ಕಾಲದ ನಂಬಿಕೆಗಳು ಮತ್ತು ಸಾಮಾಜಿಕ ಸ್ಥಿತಿಗತಿಗಳನ್ನು ಅವಲಂಬಿಸಿ ಪ್ರೀತಿಯ ಅರ್ಥಗಳು ಮತ್ತು ಅದನ್ನು ಹೇಗೆ ವ್ಯಕ್ತಪಡಿಸಬಹುದು ಎಂಬುವುದರಲ್ಲಿ ವ್ಯತ್ಯಾಸಗಳುಂಟಾಗಬಹುದು. ‘ರೋಮಿಯೋ ಆಂಡ್ ಜೂಲಿಯೆಟ್’ ಮತ್ತು ‘ಲೈಲಾ ಮಜ್ನೂನ್’ ಎಂಬೆರಡು ಕೃತಿಗಳು ವಿಶ್ವ ಸಾಹಿತ್ಯದಲ್ಲೇ ಇತಿಹಾಸ ಪ್ರಣಯ ಕಥೆಗಳಾಗಿವೆ. ಇವು ಪರಸ್ಪರ ವೈರುಧ್ಯ ಆಗುವುದರೊಂದಿಗೆಯೇ ಅವುಗಳ ನಡುವಿನ ಸಾಮ್ಯತೆಯನ್ನೂ ನಾವು ನೋಡಬಹುದು. ಪೂರ್ವ ಮತ್ತು ಪಶ್ಚಿಮಗಳಲ್ಲಿನ ಪ್ರಣಯ ಕಥೆಯನ್ನು ಹೇಳುವ ಈ ಎರಡು ಕೃತಿಗಳು ಒಂದೇ ಮೂಲದಿಂದ ಹುಟ್ಟಿ ವಿವಿಧ ದಿಕ್ಕುಗಳಲ್ಲಿ ಹರಿಯುವ ಎರಡು ನದಿಗಳಷ್ಟೇ ವಿಸ್ತಾರವಾಗಿವೆ. ಅವು ವಿಭಿನ್ನ ಸಂಸ್ಕೃತಿ ಮತ್ತು ಭೌಗೋಳಿಕ ಗುಣಲಕ್ಷಣಗಳಿರುವ ಎರಡು ಪ್ರದೇಶಗಳಿಗೆ ಹರಿಯುತ್ತವೆ. ಹೀಗಿದ್ದರೂ ಇವೆರಡರ ನಡುವಿರುವ ಸಾಮ್ಯತೆಗಳು ಸಾಕಷ್ಟು ಗಮನಾರ್ಹವಾಗಿವೆ.

ಈ ಎರಡು ಕಥೆಗಳ ಮೂಲಕ ಲೇಖಕರು ಮಾನವ ಸತ್ಯದ ನೀತಿಯನ್ನು ಹಂಚಿಕೊಳ್ಳುತ್ತಾರೆ. ಈ ಕಥೆಗಳ ನಡುವಿನ ಸಾಮ್ಯತೆ ಅಥವಾ ಪರಸ್ಪರ ಸಂಬಂಧಗಳನ್ನು ಶೋಧಿಸುವಲ್ಲಿ ಇದು ಸಂಶೋಧಕರ ಮೇಲೆ ಬಹಳಷ್ಟು ಪರಿಣಾಮ ಬೀರಿದೆ. ಸಾಹಿತ್ಯ ಇತಿಹಾಸಕಾರ ಅಗಾ ಸರ್ರೆ ಲೆವೆಂಡ್ (Agah Sirri Levend) ‘ಲೈಲಾ ಮತ್ತು ಮಜ್ನೂನ್’ ಎಂಬ ತನ್ನ ಸಂಶೋಧನೆಯಲ್ಲಿ, ಈ ಪೂರ್ವ ಪ್ರಣಯ ಕಥೆಗಳು ಕ್ರುಸೇಡ್ ಸಮಯದಲ್ಲಿ ಪಾಶ್ಚಾತ್ಯ ಸಾಹಿತ್ಯವನ್ನು ಪ್ರವೇಶಿಸಿದವು ಎಂದು ಹೇಳುತ್ತಾನೆ.

ಜಗತ್ಪ್ರಸಿದ್ಧ ಸಾಹಿತ್ಯ ಕೃತಿಗಳಾದ ಅಕಾಸ್ಸಿನ್ ಮತ್ತು ನಿಕೋಲೆಟ್ (Aucassin and Nicolette), ಫ್ರೆಂಚ್ ಸಾಹಿತ್ಯ ಕೃತಿ ಟ್ರಿಸ್ಟಾನ್ ಮತ್ತು ಐಸಲ್ಟ್ (Tristan and Iseult) ಮತ್ತು ಹಂಗೇರಿಯನ್ ಸಾಹಿತ್ಯ ಕೃತಿ ಫ್ಲೋರಿಸ್ ಮತ್ತು ಬ್ಲಾಂಚೆಫ್ಲೋರ್ (Floris and Blancheflour) ಗಳಿಗೆ ಲೈಲಾಳ ಮತ್ತು ಮಜ್ನೂನ್ ನ ಕಥೆಯನ್ನೇ ಆಕರವಾಗಿ ಸ್ವೀಕರಿಸಲಾಗಿದೆ ಎಂದು ಲೆವೆಂಡ್ ವಾದಿಸುತ್ತಾನೆ. ಅಂತೆಯೇ, ಇಂಗ್ಲಿಷ್ ಸಾಹಿತ್ಯದಲ್ಲಿರುವ ರೋಮಿಯೋ ಮತ್ತು ಜೂಲಿಯೆಟ್ ಕೂಡ ಇದೇ ಗಣಕ್ಕೆ ಸೇರುತ್ತದೆ.

ಲೈಲಾ ಮತ್ತು ಮಜ್ನೂನ್ ಕಥೆಯನ್ನು ಆಧರಿಸಿದ ಅಜೆರ್ಬೈಜಾನಿ ಜಾನಪದ ಕಲೆ

ಅರಬ್ಬರು ಹೇಳುತ್ತಿದ್ದ ಅನಾಮಧೇಯ ಜಾನಪದ ಕಥೆಯೇ ‘ಲೈಲಾ ಮತ್ತು ಮಜ್ನೂನ್’. ಈ ಕಥೆಯ ಅತ್ಯಂತ ಹಳೆಯ ಮತ್ತು ಸಮಗ್ರ ಆವೃತ್ತಿಯನ್ನು ಅಜರ್ಬೈಜಾನಿ ಕವಿ ನಿಝಾಮಿ ಪರ್ಷಿಯನ್ ಭಾಷೆಯಲ್ಲಿ ಮುಕ್ತ ಮತ್ತು ಲಯಬದ್ಧವಾಗಿ ಮಸ್ನವಿ ರೂಪದಲ್ಲಿ ಬರೆದಿದ್ದಾನೆ. ಮಸ್ನವಿಯು ಪೌರಾತ್ಯ ಜನರಿಗೆ ಪ್ರೀತಿಯ ಬಗ್ಗೆ ಅವರ ಆಲೋಚನೆ ಮತ್ತು ಭಾವನೆಗಳನ್ನು ವ್ಯಾಖ್ಯಾನಿಸಲು ಬೇಕಾಗುತ್ತಿದ್ದ
ಒಂದು ಸಾಹಿತ್ಯ ಮಾರ್ಗವಾಗಿತ್ತು. ಆ ಕಾಲದ ಪೌರಾತ್ಯ ಕವಿಗಳ ಕೃತಿಗಳಲ್ಲಿ ವಿಷಯ ಮತ್ತು ಸನ್ನಿವೇಶಗಳನ್ನು ಭಿನ್ನ ಭಿನ್ನವಾಗಿರಿಸಲಾಯಿತು. ಅವರು ಪ್ರೀತಿಯ ಬಗ್ಗೆ ಅಸಂಖ್ಯಾತ ಕವಿತೆಗಳನ್ನು ಬರೆದರು. ಅವರು ಕಥೆಯ ಸಾರವನ್ನು ಯಶಸ್ವಿಯಾಗಿ ತಮ್ಮದೇ ಆದ ಹೊಸ ರೂಪ ಕೊಡಲು ಹಾಗೂ ಪ್ರಕಟಿಸಲು ಪರಸ್ಪರ ಸ್ಪರ್ಧಿಸುತ್ತಿದ್ದರು. ಅನೇಕ ಲೈಲಾ ಮಜ್ನೂನ್ ಕಥೆಗಳನ್ನು ಪೌರಾತ್ಯ ಕವಿಗಳು ವಿಶೇಷವಾಗಿ ಅರಬ್, ಪರ್ಷಿಯನ್ ಮತ್ತು ಟರ್ಕಿಶ್ ಕವಿಗಳು ಬರೆದಿದ್ದಾರೆ.

ಅಜರ್ಬೈಜಾನಿ-ಟರ್ಕಿಶ್ ಕವಿಯಾಗಿದ್ದ ಫುಸುಲಿ ಬರೆದ ಕಥೆಯು ಈ ಕಥೆಗಳಲ್ಲಿ ಅತ್ಯಂತ ಪ್ರಸಿದ್ಧಿ ಪಡೆದಿದೆ . ನಿಝಾಮಿ ಗಂಜಾವಿಯ ಕಥೆಯನ್ನು ಕವಿ ಫುಸುಲಿಯು ಆಕರವಾಗಿ ಬಳಸುತ್ತಿದ್ದರೂ, ಅವನು ಅದನ್ನು ತನ್ನದೇ ಶೈಲಿಯಲ್ಲಿ ವ್ಯಾಖ್ಯಾನಿಸುತ್ತಾನೆ. ಅದಕ್ಕಾಗಿಯೇ ಟರ್ಕಿಯ ಸಾಹಿತ್ಯದಲ್ಲಿ ಲೈಲಾ ಮತ್ತು ಮಜ್ನೂನ್ ರನ್ನು ಉಲ್ಲೇಖಿಸುವಾಗ ಫುಸುಲಿಯನ್ನು ಪರಿಚಯಿಸಲಾಗುತ್ತದೆ. ವಿಲಿಯಂ ಷೇಕ್ಸ್ ಪಿಯರ್ ‘ರೋಮಿಯೋ ಮತ್ತು ಜೂಲಿಯೆಟ್‌’ಗೆ ಮೊದಲು ಬರೆದ ಇತರ ಕೃತಿಗಳೂ ಇದರಲ್ಲಿ ಸೇರಿವೆ. ಈ ನಾಟಕವು 1562 ರಲ್ಲಿ ಪ್ರಕಟಿಸಲಾದ ಆರ್ಥರ್ ಬ್ರೂಕ್ ಬರೆದ ದಿ ಟ್ರಾಜಿಕ್ ಸ್ಟೋರಿ ಆಫ್ ರೋಮಿಯಸ್ ಆಂಡ್ ಜೂಲಿಯೆಟ್ ಎಂಬ ಕವನವನ್ನು ಆಧರಿಸಿದೆ.

ಇಟಲಿಯ ನವೋದಯದ ಕಾಲಘಟ್ಟದಲ್ಲಿ ಎರಡು ಶ್ರೀಮಂತ ಕುಟುಂಬಗಳ ಯುವ ಪ್ರೇಮಿಗಳ ದುರಂತ ಕಥೆಯನ್ನು ಹೆಚ್ಚು ಹೇಳಲಾಗುತ್ತಿತ್ತು. ಈ ಕಥೆಯನ್ನಾಧರಿಸಿ ಇಟಲಿಯಲ್ಲಿ 15 ಮತ್ತು 16 ನೇ ಶತಮಾನಗಳ ಸಮಯದಲ್ಲಿ ಅನೇಕ ಕವನಗಳು, ಕಥೆಗಳು ಮತ್ತು ನಾಟಕಗಳನ್ನು ಬರೆಯಲಾಯಿತು. ಅವುಗಳಲ್ಲಿ ಕೆಲವು ಇಂಗ್ಲೀಷಿಗೂ ಅನುವಾದಿಸಲ್ಪಟ್ಟವು.

ಒಂದು ನಾಟಕ ರೂಪದಲ್ಲಿ ಪ್ರಸ್ತುತಪಡಿಸಲಾದ ರೋಮಿಯೋ ಆಂಡ್ ಜೂಲಿಯೆಟ್‌ ಎಂಬ ಕಥೆ ಪ್ರೇಕ್ಷಕರ ಕಲ್ಪನೆಯನ್ನು ಸೆರೆಹಿಡಿಯುವುದರೊಂದಿಗೆ ಆ ಕಾಲದ ಭಾವನಾತ್ಮಕ ಸತ್ಯಗಳು ಮತ್ತು ಪಾಶ್ಚಾತ್ಯ ಹಿತಾಸಕ್ತಿಗಳನ್ನು ಬಹಿರಂಗಪಡಿಸಲು ಸಹಾಯ ಮಾಡುತ್ತದೆ. ಷೇಕ್ಸ್‌ಪಿಯರ್‌ನ ಪ್ರಮುಖ ಕೃತಿಗಳು ದುರಂತಗಳನ್ನು ಕೇಂದ್ರೀಕರಿಸಿರುವಂತದ್ದಾಗಿದೆ. ಅದರಲ್ಲಿ ಅವನು ಐಯಾಂಬಿಕ್ ಪೆಂಟಾಮೀಟರ್‌ (Iambic pentameter) ನಂತಹ ಪ್ರಬಲವಾದ ಕಾವ್ಯಾತ್ಮಕ ಶೈಲಿಗಳನ್ನು ಕಥೆ ಹೇಳುವುದಕ್ಕೆ ಬಳಸುತ್ತಾನೆ.

ತಮ್ಮ ಪರಾಕ್ರಮವನ್ನು ಸಾಬೀತುಪಡಿಸಿದ ಪೂರ್ವಿಕ ಕಲಾವಿದರ ಪ್ರೇರಣೆಯಿಂದ ಶೇಕ್ಸ್‌ಪಿಯರ್ ಹೆಚ್ಚು ಹಿಂಸಾತ್ಮಕ ನಾಟಕಗಳನ್ನು ಬರೆಯುವ ನೈಪುಣ್ಯತೆಯನ್ನು ಪಡೆದುಕೊಳ್ಳುತ್ತಾನೆ. ರಕ್ತಸಿಕ್ತ ದೃಶ್ಯಗಳನ್ನು ಒಳಗೊಂಡ “ಟೈಟಸ್ ಆಂಡ್ರೋನಿಕಸ್” ನ ಹೆಜ್ಜೆಗಳನ್ನು ಅನುಸರಿಸಿ ಅನಿರೀಕ್ಷಿತ ಯಶಸ್ಸನ್ನು ಪಡೆದ ರೋಮಿಯೋ ಮತ್ತು ಜೂಲಿಯೆಟ್‌ಗೆ ಜನ್ಮ ನೀಡುತ್ತಾನೆ.

ಕಥೆಯ ಹಿನ್ನೆಲೆ

ಪರ್ಷಿಯನ್ ಕವಿಯ ಲೈಲಾ ಮತ್ತು ಮಜ್ನೂನ್ ನಿರೂಪಣಾ ಕವಿತೆಯ ಕಿರುಚಿತ್ರ.

‘ಲೈಲಾ ಮಜ್ನೂನ್’ ಮತ್ತು ‘ರೋಮಿಯೋ ಆಂಡ್ ಜೂಲಿಯೆಟ್’ ಪುರುಷ ಪಾತ್ರಗಳ ಜೀವನ ದೃಶ್ಯಗಳೊಂದಿಗೆ ಪ್ರಾರಂಭವಾಗುತ್ತದೆ. ಹುಟ್ಟಿದಾಗಿನಿಂದಲೇ ಮಜ್ನೂನ್‌ನ ಸ್ವಭಾವದ ಬಗ್ಗೆ ನಮಗೆ ಅರಿವಿರುತ್ತದೆ. ಅದೇ ರೀತಿ ರೋಮಿಯೋನನ್ನು ಜೀವನದ ಪ್ರಾರಂಭಿಕ ಹಂತದಲ್ಲೇ ಭೇಟಿಯಾದ ತಕ್ಷಣ ಅವನ ಮಾನಸಿಕ ಸ್ಥಿತಿ ಮತ್ತು ಅನುಭವಗಳನ್ನು ವಿವರಿಸಲಾಗುತ್ತದೆ. ಯಾವುದೇ ಪ್ರೇಮಕಥೆಯ ಪ್ರಮುಖ ತಿರುವು ಪ್ರೇಮಿಗಳು ಮೊದಲು ಭೇಟಿಯಾಗುವ ಕ್ಷಣವಾಗಿರುತ್ತದೆ. ಇಬ್ಬರೂ ಲೇಖಕರು ಈ ಮುಖಾಮುಖಿಯನ್ನು ಬಹಳ ಅದ್ಭುತವಾಗಿ ಪ್ರಸ್ತುತಪಡಿಸುತ್ತಾರೆ. ಪ್ರೇಮಿಗಳು ಪ್ರಥಮ ಸಮ್ಮಿಲನವಾಗುವುದಕ್ಕಿಂತ ಮುಂಚೆಯೇ ಫುಸುಲಿಯು ವಿವರಿಸಿರುವ ಸಾಮಾನ್ಯ ಪ್ರೇಮಿಗಳಲ್ಲ ಎಂಬ ಅಂಶವೇ ಓದುಗನಿಗೆ ಈ ಪ್ರೇಮಿಗಳನ್ನು ಪ್ರಶಂಸಿಸುವಂತೆ ಮಾಡುತ್ತದೆ. ತನ್ನ ತಂದೆಯ ಏಕೈಕ ಪುತ್ರನಾದ ಮಜ್ನೂನ್ ಲೈಲಾಳನ್ನು ತನ್ನ ವಿದ್ಯಾರ್ಥಿ ಜೀವನದ ಆರಂಭದಲ್ಲೇ ಭೇಟಿಯಾಗಿರುತ್ತಾನೆ. ರೋಮಿಯೋ ಮತ್ತು ಜೂಲಿಯೆಟ್ ಮೊದಲ ಬಾರಿಗೆ ಪಾರ್ಟಿಯೊಂದರಲ್ಲಿ ಭೇಟಿಯಾಗುತ್ತಾರೆ. ಅದೂ ಅಲ್ಲದೆ ಅವರಿಬ್ಬರೂ ಮೊದಲ ನೋಟದಲ್ಲೇ ಪ್ರೀತಿಗೂ ಶರಣಾಗುತ್ತಾರೆ.
ಈ ಎರಡು ಕಥೆಗಳನ್ನು ತುಲನಾತ್ಮಕವಾಗಿ ನೋಡುವುದಾದರೆ ಈ ಪ್ರೇಮಿಗಳು ಪ್ರೀತಿಯ ಶುದ್ಧ ಹಾಗೂ ಮುಗ್ಧ ಭಾವನೆಗಳನ್ನು ಮತ್ತು ಸಾಮಾಜಿಕ ಹಾಗೂ ಕೌಟುಂಬಿಕ ಅಡೆತಡೆಗಳನ್ನು ಮೆಟ್ಟಿನಿಲ್ಲುತ್ತಾರೆ ಎಂಬುವುದನ್ನು ಗಮನಿಸಬಹುದು. ಮಜ್ನೂನ್ ನೊಂದಿಗಿನ ಲೈಲಾಳ ಪ್ರೇಮ ಸಂಬಂಧ ಮತ್ತು ಅವರ ಭೇಟಿಯು ವಿವಿಧ ವದಂತಿಗಳಿಗೂ ಕಾರಣವಾಯಿತು. ವದಂತಿಗಳ ಹರಿವು ಅಂತಿಮವಾಗಿ ತಾಯಿಯ ಕಿವಿಗೆ ತಲುಪಿದಾಗ ಅವಳನ್ನು ಗುರುಕುಲದಿಂದ ಹಿಂತೆಗೆದುಕೊಳ್ಳಲಾಯಿತು. ಅಂತೆಯೇ, ರೋಮಿಯೋ ಮತ್ತು ಜೂಲಿಯೆಟ್ ಎರಡು ಸಂಘರ್ಷದ ಕುಟುಂಬಗಳಿಂದ ಬಂದವರಾಗಿದ್ದರಿಂದ ಅವರ ಪ್ರಣಯವನ್ನು ಎರಡೂ ಸಮುದಾಯಗಳು ಸ್ವೀಕರಿಸಲಿಲ್ಲ. ಆದ್ದರಿಂದ ಅವರು ಕುಟುಂಬದ ವಿರುದ್ಧ ಹೋರಾಡಲು ಸನ್ನದ್ಧರಾಗಬೇಕಾಗಿ ಬಂತು. ಲೈಲಾಳೊಂದಿಗೆ ಒಂದುಗೂಡಲಾಗದ ನರಕಾವಸ್ಥೆಯಿಂದ ಮಜ್ನೂನ್ ಪ್ರಜ್ಞಾಹೀನನಾಗುತ್ತಾನೆ. ಪ್ರೇಮಿಗಳು ಮತ್ತೆ ಒಂದಾಗಬಹುದೇ ಎಂದು ಆಲೋಚಿಸಲು ತಂದೆ ಲೈಲಾಳ ಕುಟುಂಬವನ್ನು ಸಂಪರ್ಕಿಸಿದರೂ ಪ್ರಜ್ಞೆ ಮರಳಿ ಬಂದರೆ ಮಾತ್ರ ಮಜ್ನೂನ್ ಮತ್ತೆ ಒಂದಾಗಬಹುದೆಂಬ ನೆಲೆಗೆ ಲೈಲಾಳ ತಂದೆ ಒಪ್ಪಿಗೆ ಸೂಚಿಸಿದನು. ಕೊನೆಗೆ, ಮಜ್ನೂನ್ ಈ ಸ್ಥಿತಿಯಿಂದ ಮರಳಿ ಬರಲು ಸಾಧ್ಯವಾಗದ ಕಾರಣ ಪ್ರೇಮಿಗಳು ಎಂದಿಗೂ ಒಂದುಗೂಡುವುದಿಲ್ಲ. ರೋಮಿಯೋ ಮತ್ತು ಜೂಲಿಯೆಟ್ ಚರ್ಚೊಂದರಲ್ಲಿ ರಹಸ್ಯವಾಗಿ ಭೇಟಿಯಾಗಿ ಮದುವೆಯಾಗುತ್ತಾರೆ. ಆದರೆ ಅವರು ಒಂದು ರಾತ್ರಿಯ ಮಟ್ಟಿಗೆ ಮಾತ್ರ ಸಹಬಾಳ್ವೆ ನಡೆಸಲು ಸಾಧ್ಯವಾಗುತ್ತದೆ. ಎರಡು ಕುಟುಂಬಗಳ ನಡುವಿನ ವೈರಾಗ್ಯವು ದ್ವೇಷವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಜೂಲಿಯೆಟ್‌ನ ಸೋದರಸಂಬಂಧಿ ಟೈಬಾಲ್ಟ್‌ (Tybalt)ನನ್ನು ಆಕಸ್ಮಿಕವಾಗಿ ಕೊಂದ ಆರೋಪದಲ್ಲಿ ರೋಮಿಯೋ ಅಪರಾಧಿಯೂ ಆಗಬೇಕಾಗಿ ಬರುತ್ತದೆ.

ಸಾವಿನೊಂದಿಗೆ ಒಂದುಗೂಡುವ ಪ್ರೀತಿ

ಈ ಕಥೆಗಳಲ್ಲಿನ ವಿಯೋಗ ಮತ್ತು ಗಡಿಪಾರು ತೀವ್ರವಾದ ಭಾವನೆ ಮತ್ತು ಕಥಾಪಾತ್ರಗಳ ಆವೇಶ ಭರಿತ ಪ್ರೀತಿಯನ್ನು ಸಂಕೇತಿಸುತ್ತದೆ. ಈ ತೀವ್ರತೆಯು ಬೇರ್ಪಡುವುದರೊಂದಿಗೆ ಕೊನೆಗೊಳ್ಳುವುದು ಅನಿವಾರ್ಯವಾಗಿರುತ್ತದೆ. ಲೈಲಾಳೊಂದಿಗೆ ಮತ್ತೆ ಎಂದಿಗೂ ಒಂದಾಗದಂತೆ
ಗಡಿಪಾರಾಗಿರುವ ಮಜ್ನೂನಿನ ಜೀವನವು ಪ್ರಣಯ ಹತಾಶೆಯಿಂದಾಗಿ ಮರುಭೂಮಿಯಲ್ಲಿ ಕೊನೆಗೊಳ್ಳುತ್ತದೆ. ಅವನ ಪ್ರೀತಿ ದಿನದಿಂದ ದಿನಕ್ಕೆ ನೂರ್ಮಡಿಗೊಳ್ಳತೊಡಗಿತು. ಸರ್ವದಲ್ಲೂ ಆಕೆಯನ್ನೇ ದರ್ಶಿಸುತ್ತಿದ್ದ. ತನ್ನೆದುರಿಗೆ ಬಂದ ಪ್ರಾಣಿಗಳು, ಪರ್ವತಗಳು ಮತ್ತು ಕಣಿವೆಗಳೊಂದಿಗೆ ಅವಳೊಂದಿಗಿದ್ದ ತನ್ನ ಪ್ರೀತಿಯನ್ನು ಗೊಣಗುತ್ತಾ ಅಲೆಮಾರಿಯಾಗಿ ನಡೆದಾಡುತ್ತಿದ್ದ.

ಅಂತೆಯೇ, ತನ್ನ ತಪ್ಪಿಗೆ ಶಿಕ್ಷೆಯಾಗಿ ರೋಮಿಯೋನನ್ನು ಗಡೀಪಾರು ಮಾಡಲಾಗುತ್ತದೆ ಮತ್ತು ಪ್ರೀತಿಯನ್ನು ತ್ಯಜಿಸಲು ಒತ್ತಡ ಹೇರಲಾಗುತ್ತದೆ. ಆದರೆ ಈ ಬಲಾತ್ಕಾರವು ಅವಳ ಮೇಲಿನ ಪ್ರೀತಿಯನ್ನು ಮತ್ತಷ್ಟು ಹೆಚ್ಚಿಸುತ್ತಿತ್ತು. ಆದಾಗ್ಯೂ, ಆತ ಜೂಲಿಯೆಟ್ ಳನ್ನು ತ್ಯಜಿಸಲು ನಿರ್ಬಂಧಿತನಾಗುತ್ತಾನೆ.

ಎರಡೂ ಕಥೆಗಳಲ್ಲೂ ಪ್ರೇಮಿಗಳು ತಮ್ಮ ಪ್ರೀತಿಪಾತ್ರರಿಂದ ಬೇರ್ಪಟ್ಟು ಅವರು ಅನ್ಯರಿಗೆ ಸೇರುವರು ಎಂಬ ಆಲೋಚನೆಯಿಂದ ವಿಚಲಿತರಾದಂತೆ ಎದುರಾಳಿ ಹೊರಹೊಮ್ಮುತ್ತಾನೆ. ಇಬ್ನ್ ಸಲಾಂ ಮತ್ತು ಪ್ಯಾರಿಸ್ ಕ್ರಮವಾಗಿ ಮಜ್ನುನ್ ಮತ್ತು ರೋಮಿಯೋರ ಪ್ರತಿಸ್ಪರ್ಧಿಗಳಾದರು. ಈ ಕಥೆಗಳಲ್ಲಿನ ಸ್ತ್ರೀ ಪಾತ್ರಗಳು ಪ್ರೀತಿಗೆ ನಿಷ್ಠರಾಗಿರುತ್ತವೆ. ಇತರರು ಅವರನ್ನು ಅನುಸರಿಸುತ್ತಿದ್ದಾಗಲೂ ಅವರು ಯಾವಾಗಲೂ ತಮ್ಮ ಪ್ರಿಯಕರರೊಂದಿಗೆ ಪ್ರಾಮಾಣಿಕವಾಗಿರುತ್ತಾರೆ. ಆದರೆ ಅಂತಿಮ ಫಲಿತಾಂಶವು ಕಥೆಗೆ ಸುಖಾಂತ್ಯವನ್ನು ಹೊಂದಿಲ್ಲ ಎಂಬುವುದಾಗಿದೆ. ಜೋಡಿಗಳಾಗಿ ಜೀವನದಲ್ಲಿ ಒಟ್ಟಿಗೆ ಇರಲು ಸಾಧ್ಯವಾಗದಿದ್ದೆಡೆ ಸಾವಿನಲ್ಲಾದರೂ ಒಟ್ಟಿಗೆ ಇರಬೇಕೆಂದು ಆಶಿಸುತ್ತಾರೆ.

ಸತ್ಯ ಮತ್ತು ತುಲನಾತ್ಮಕತೆ

ಎರಡೂ ಕಥೆಗಳು ಸಾಮಾನ್ಯ ಮತ್ತು ಸಮಾನಾಂತರ ಅಂಶಗಳನ್ನು ಹೊಂದಿದ್ದರೂ ಅವುಗಳ ನಡುವೆ ಸ್ಪಷ್ಟ ವ್ಯತ್ಯಾಸಗಳಿವೆ. ಫುಸುಲಿಯಂತಹ ಪೂರ್ವ ಕವಿಗಳು ಮಾನವ ಪ್ರೀತಿಯನ್ನು ದೈವಿಕ ಪ್ರೇಮವಾಗಿ ಪರಿವರ್ತಿಸಿದರೆ, ಷೇಕ್ಸ್‌ಪಿಯರ್ ಪಾಶ್ಚಾತ್ಯ ದೃಷ್ಟಿಕೋನದ ಮೂಲಕ ದುರಂತಮಯ ಪ್ರಣಯ ಕಥೆಯನ್ನು ಹೇಳುತ್ತಾನೆ. ಲೈಲಾ ಮತ್ತು ಮಜ್ನೂನ್ ಕಥೆಯಲ್ಲಿ ಅನೇಕ ಸೂಫಿ ದೃಷ್ಟಾಂತಗಳು ಮತ್ತು ಚಿಹ್ನೆಗಳನ್ನು ಕಾಣಬಹುದು. ಉದಾಹರಣೆಗೆ ಎದುರಾಳಿಯ ನಡವಳಿಕೆಯು ಓರ್ವ ವ್ಯಕ್ತಿಯನ್ನು ಸೃಷ್ಟಿಕರ್ತನ ಸಂಬಂಧದಿಂದ ಸಾಧ್ಯವಾದಷ್ಟು ದೂರವಿಡಲಾಗುವ ಅಡೆತಡೆಗಳನ್ನು ಪ್ರತಿನಿಧಿಸುತ್ತದೆ. ಒಂದೋ ಅದು ಪೈಶಾಚಿಕ ಕೃತ್ಯ ಅಥವಾ ದುರ್ನಡತೆಗಳನ್ನು ಮತ್ತು ತಪ್ಪುಗಳನ್ನು ಉತ್ತೇಜಿಸುವ ದುಷ್ಟ ಸ್ನೇಹಿತನೋ ಆಗಿರಬಹುದು. ಪ್ರೀತಿಯ ಮೂಲಕ ಲೈಲಾ ಮತ್ತು ಮಜ್ನೂನ್ ತಮ್ಮನ್ನು ತಾವೇ ತ್ಯಜಿಸಿ ಒಂದಾಗುತ್ತಾರೆ. ಎಲ್ಲ ವಿಷಯಗಳಲ್ಲೂ ಮಜ್ನೂನ್ ಲೈಲಾಳನ್ನು ನೋಡುತ್ತಾನೆ ಎಂಬುದರ ಅರ್ಥ ಸೌಂದರ್ಯದ ಮೂಲ ಅವನಲ್ಲಿದೆ ಮತ್ತು ಸುಂದರವಾದ ಎಲ್ಲವೂ ನೈಜ ಸೌಂದರ್ಯದ ಪ್ರತಿಬಿಂಬವಾಗಿದೆ ಎಂದು ಸೂಚಿಸುತ್ತದೆ. ಆ ವಾಸ್ತವವೇ ಇಲಾಹ್.

ಕನ್ನಡಕ್ಕೆ: ಎ.ಕೆ. ಫೈಸಲ್ ಗಾಳಿಮುಖ


Dr. ಅಲಿ ತುಫೆಕ್ಚಿ

Associate professor in Music- interpretation and works as a “Ney” lecturer at the ITU Turkish music state conservatory. He has a book titled Exploring Ney Techniques. History, poetry and music cultures of the regions of Andalusia-North Africa are the fields of his interest.

Leave a Reply

*