ಕನಸಿನಲ್ಲಿ ನಡೆದ ವಿಧಿ

ಕನಸುಗಳಿಗೆ ನಮ್ಮ ಜೀವನದ ಬಗ್ಗೆ ಮುನ್ಸೂಚನೆ ನೀಡುವ ಮತ್ತು ಅಜ್ಞಾತ ಹಾಗೂ ಅಂತರ್ಗತವಾಗಿರುವುದನ್ನೂ ಬಹಿರಂಗಪಡಿಸುವ ಸಾಮರ್ಥ್ಯ ಇದೆ. ಅವು ಭವಿಷ್ಯವನ್ನು ನೋಡುವ ನಮ್ಮ ಮನಸ್ಸಿನ ನಿಗೂಢ ಶಕ್ತಿಯನ್ನು ಪ್ರತಿನಿಧಿಸುತ್ತವೆ. ನಾವು ಕನಸಿನಲ್ಲಿ ಕಂಡ ಘಟನೆಗಳು ನೀಡುವ ಸೂಚನೆಗಳು ನಮ್ಮ ಜೀವನದಲ್ಲಿ ಬೀರುವ ಪರಿಣಾಮಗಳಿಂದಾಗಿ ಕನಸುಗಳು ಭವಿಷ್ಯದ ಕೈಪಿಡಿಯಂತೆ ಕೆಲಸ ಮಾಡುತ್ತವೆ, ಭವಿಷ್ಯದ ಘಟನೆಗಳ ಸಂಕೇತವನ್ನು ಮೊದಲೇ ನೀಡುವ ವೇದಿಕೆಯಂತೆ ವರ್ತಿಸುತ್ತವೆ ಎಂದು ಹೇಳುತ್ತೇವೆ.

ಎರಡೂ ಲೋಕಗಳನ್ನು ಸಂಯೋಜಿಸಿದರೆ, ಕನಸಿನ ಲೋಕವು ಎಚ್ಚರದ ಲೋಕಕ್ಕಿಂತ ಮೊದಲು ಇರುತ್ತದೆ ಎಂಬ ಸಾಮಾನ್ಯ ಪ್ರಮೇಯ ಸ್ವಪ್ನ ವ್ಯಾಖ್ಯಾನ ಶಾಸ್ತ್ರದಲ್ಲಿದೆ. ಆದರೆ, ಇದಕ್ಕೆ ವ್ಯತಿರಿಕ್ತವಾಗಿ, ಕನಸುಗಳು ನಿಜಜೀವನವನ್ನು ಮೀರುವ ಮತ್ತು ಕಾಲಗಣನೆಯನ್ನು ತಲೆಕೆಳಗಾಗಿಸುವ ಉದಾಹರಣೆಯೊಂದು 12ನೇ ಶತಮಾನದ ಸೂಫಿವರ್ಯರಾದ ಅಬ್ದುಲ್‌ ಖಾದಿರ್ ಜೀಲಾನಿಯವರ ‘ಬಹ್ಜತುಲ್ ಅಸ್ರಾರ್’ನಲ್ಲಿ ಉಲ್ಲೇಖಗೊಂಡಿದೆ.

ಒಮ್ಮೆ,  ಅಬೂ ಮುಜಾಫರ್ ಎಂಬ ವ್ಯಾಪಾರಿಯು ತನ್ನ ವರ್ತಕ ಸಂಘದೊಂದಿಗೆ ಸಿರಿಯಾಕ್ಕೆ ಭೇಟಿ ನೀಡಲು ಯೋಜಿಸಿದ್ದರು.  ಪ್ರಯಾಣದ ಎಲ್ಲಾ ಸಿದ್ಧತೆಗಳು ಪೂರ್ಣಗೊಂಡ ಬಳಿಕ, ಅವರು ತಮ್ಮ ಸ್ನೇಹಿತ ಶೇಖ್ ಹಮ್ಮಾದ್ ರವರನ್ನು ಭೇಟಿಯಾಗಿ ತಮ್ಮ ಯೋಜನೆಗಳನ್ನು ತಿಳಿಸಿ,  ಸುರಕ್ಷಿತವಾಗಿ ಹಿಂದಿರುಗಲು ಶೇಖ್‌ರೊಂದಿಗೆ ಪ್ರಾರ್ಥಿಸುವಂತೆ ಕೋರಿದರು. ಇತರ ಸಂದರ್ಶಕರು ಶೇಖ್ ಹಮ್ಮಾದ್‌‌ರ ಬಳಿ ಇದ್ದಿದ್ದರಿಂದ ಅವರು ಹೊರಡುವವರೆಗೆ ಕಾಯಲು ಅಬು ಮುಜಾಫರ್ ಗೆ ಸೂಚಿಸುತ್ತಾರೆ. ಎಲ್ಲರೂ ಹೋದ ಬಳಿಕ ಕೇವಲ ಇಬ್ಬರು ಮಾತ್ರ ಇದ್ದಾಗ ಶೇಖ್ ಹಮ್ಮಾದ್‌ರವರು ಪ್ರಯಾಣವನ್ನು ಮುಂದೂಡಲು ಅಬೂ ಮುಜಾಫರ್‌ಗರ ಸಲಹೆಯನ್ನು ನೀಡುತ್ತಾರೆ.

“ಆದರೆ, ಸರಕುಗಳಿಗೆ ಬಂಡವಾಳ ಹೂಡಿಯಾಗಿದೆ, ಈ ಪ್ರಯಾಣಕ್ಕಾಗಿ ಸಕಲ ಸಜ್ಜು ನಡೆದಿದೆ. ಅಲ್ಲದೆ, ಈ ಯಾತ್ರೆಯು ಹಲವು ಶ್ರೀಮಂತ ವರ್ತಕರನ್ನು ಪರಿಚಯಿಸಲಿದೆ. ಹಾಗಾಗಿ, ದಿನ ಬಿಟ್ಟು ಒಂದು ಘಳಿಗೆಯನ್ನೂ ತಡ ಮಾಡುವಂತಿಲ್ಲ.” ಎಂದು ವರ್ತಕರಾದ ಅಬೂ ಮುಜಾಫರ್ ತಮ್ಮ ಆತಂಕವನ್ನು ಭಿನ್ನವಿಸುತ್ತಾರೆ.

ಪ್ರಯಾಣವನ್ನು ರದ್ದುಗೊಳಿಸಲೇಬೇಕು ಎಂದು ಹೇಳಿದ ಶೇಖ್ ಹಮ್ಮಾದ್ ಅವರು, ಈ ಯಾತ್ರೆಯಿಂದ ಅಬೂ ಮುಜಾಫರ್‌ ಎದುರಿಸಬಹುದಾದ ಘೋರ ಪರಿಣಾಮವನ್ನು ಎಚ್ಚರಿಸುತ್ತಾರೆ. ಪ್ರಯಾಣದ ಸಮಯದಲ್ಲಿ ಡಕಾಯಿತರಿಂದ ದರೋಡೆಗೊಳಗಾಗಿ ಅಬೂ ಮುಜಾಫರ್ ಕೊಲ್ಲಲ್ಪಡುತ್ತಾರೆ ಎಂದು ಹೇಳುತ್ತಾರೆ. ಅದು ತಮ್ಮ ರಹಸ್ಯ ಶಕ್ತಿಗಳ ಮೂಲಕ ಶೇಖ್ ಹಮ್ಮಾದ್ ಅವರಿಗೆ ಬಹಿರಂಗವಾದ ಭವಿಷ್ಯವಾಗಿತ್ತು.

ವ್ಯಾಪಾರಿ ಅಬು ಮುಜಾಫರ್ ಅವರು ಅಲ್ಲಿಂದ ಗೊಂದಲದ ಮನಸ್ಸಿನಿಂದ ಹಿಂದಿರುಗುತ್ತಿದ್ದಾಗ, ದಾರಿಯಲ್ಲಿ ಅಬ್ದುಲ್ ಖಾದಿರ್ ಜೀಲಾನಿಯವರು ಎದುರಾಗುತ್ತಾರೆ. ವರ್ತಕನ ಮುಖದ ಮೇಲಿನ ಆತಂಕವನ್ನು ಕಂಡು ಜೀಲಾನಿ ಅದಕ್ಕೆ ಕಾರಣವನ್ನು ಕೇಳುತ್ತಾರೆ.  ಶೇಖ್ ಹಮ್ಮಾದ್ ಅವರ ಭವಿಷ್ಯವಾಣಿಯ ಬಗ್ಗೆ ಅಬೂ ಮುಜಾಫರ್ ಅವರು ಜೀಲಾನಿ ಗುರುವಿಗೆ ತಿಳಿಸುತ್ತಾರೆ‌. ಜೊತೆಗೆ  ತನ್ನ ಯಾತ್ರೆಗೆ ಇರುವ ನಿಷೇಧವನ್ನೂ ವಿವರಿಸುತ್ತಾರೆ. ಇದನ್ನೆಲ್ಲಾ ಕೇಳಿದ ಜೀಲಾನಿ, ಏನನ್ನೂ ಚಿಂತಿಸದೆ, ನಿರಾಳ ಮನಸ್ಸಿನಿಂದ ಪ್ರಯಾಣಕ್ಕೆ ಹೊರಡಲು ಹೇಳಿ, ಅವರಿಗೆ ಯಾವುದೇ ತೊಂದರೆಯಾಗುವುದಿಲ್ಲ ಎಂಬ ಭರವಸೆಯನ್ನು ಸಹ ನೀಡುತ್ತಾರೆ.

ವರ್ತಕ ಜೀಲಾನಿಯ ಸಲಹೆಯನ್ನು ಅನುಸರಿಸಿ, ಅವರು ಮೊದಲೇ ಯೋಜಿಸಿದಂತೆ ಸಿರಿಯಾಕ್ಕೆ ಹೊರಡುತ್ತಾರೆ.  ಪ್ರಯಾಣದ ಸಮಯದಲ್ಲಿ ವ್ಯಾಪಾರಿ ತನ್ನ ವ್ಯಾಪಾರಕ್ಕಾಗಿ ಉಪಯುಕ್ತ ಸಂಪರ್ಕಗಳನ್ನು ಮಾಡಿ, ತಮ್ಮ ಸರಕುಗಳ ಖರೀದಿದಾರರನ್ನು ಕಂಡುಕೊಂಡು ಉತ್ತಮ ಲಾಭವನ್ನು ಗಳಿಸುತ್ತಾರೆ. ಅಂತಿಮವಾಗಿ, ವರ್ತಕರ ಸಂಘವು ತನ್ನ ಹಿಂದಿರುಗುವ ಪ್ರಯಾಣವನ್ನು ಪ್ರಾರಂಭಿಸಿತ್ತು.  ಅದು ಅಲೆಪ್ಪೊವನ್ನು ತಲುಪುತ್ತಿದ್ದಂತೆ, ಅಬು ಮುಜಾಫರ್ ತನ್ನ ಚಿನ್ನದ ನಾಣ್ಯಗಳ ಚೀಲ ಇಟ್ಟ ಸ್ಥಳ ತಿಳಿಯದಂತಾಯಿತು. ಎಷ್ಟೇ ಹುಡುಕಿದರೂ ಪರ್ಸ್ ಸಿಗಲಿಲ್ಲ, ಮಾತ್ರವಲ್ಲ  ಸಿಡಿಮಿಡಿ  ಮನಸ್ಸಿನಿಂದಲೇ ನಿದ್ದೆ ಹೋಗುತ್ತಾರೆ.

ಆದರೆ, ತಮ್ಮ ವರ್ತಕ ಸಂಘವನ್ನು ದರೋಡೆಕೋರರು ದಾಳಿ ಮಾಡಿ ದೋಚುವ ಕನಸು ಅವರಿಗೆ ಬೀಳುತ್ತದೆ. ಕನಸಿನಲ್ಲಿ ಬಂದ ದರೋಡೆಕೋರರು ಕ್ಯಾರವಾನ್‌ ಬಳಿಯಿದ್ದ ಶಸ್ತ್ರಸಜ್ಜಿತ ಕಾವಲುಗಾರರನ್ನು ಬಂಧಿಸಿದ್ದರು‌.  ಅಬೂ ಮುಜಾಫರ್ ಮತ್ತು ಇತರ ಕೆಲವು ವ್ಯಾಪಾರಿಗಳು ವೀರಾವೇಶದಿಂದ ಹೋರಾಡಿದರಾದರೂ, ದರೋಡೆಕೋರರು ದೊಡ್ಡ ಸಂಖ್ಯೆಯಲ್ಲಿದ್ದರು.

ಡಕಾಯಿತರಲ್ಲಿ ಒಬ್ಬ ತನ್ನ ಕತ್ತಿಗೆ ಇರಿಯುತ್ತಿರುವಂತೆ ಭಯಭೀತಗೊಂಡ ಅಬೂ ಮುಜಾಫರ್ ದುಃಸ್ವಪ್ನದಿಂದ ಎಚ್ಚರಗೊಳ್ಳುತ್ತಾರೆ. ತಾವು ಜೀವಂತವಾಗಿ ಮತ್ತು ಸುರಕ್ಷಿತವಾಗಿದ್ದಂತೆ, ಚಿನ್ನದ ನಾಣ್ಯಗಳಿರುವ  ಪರ್ಸ್ ಎಲ್ಲಿಟ್ಟಿದ್ದೆ ಎಂಬುದು ಕೂಡಾ ಅವರ ನೆನಪಿಗೆ ಬರುತ್ತದೆ. ನಂತರ ಶೇಖ್ ಹಮ್ಮಾದ್ ಅವರು ವಿವರಿಸಿದ ಘಟನೆಯನ್ನು ನೆನಪಿಸಿ ಅಚ್ಚರಿಗೊಂಡ ಅಬೂ ಮುಜಾಫರ್, ಅದರ ಮಹತ್ವವನ್ನು ನೆನಪಿಸಿಕೊಳ್ಳುತ್ತಾರೆ.

ಅವರು ತಮ್ಮ ನಗರಕ್ಕೆ ಹಿಂದಿರುಗಿದಾಗ ಮೊದಲು ಶೇಖ್ ಹಮ್ಮಾದ್ ಅವರನ್ನು ಭೇಟಿಯಾಗಬೇಕೆ ಅಥವಾ ಅಬ್ದುಲ್ ಖಾದಿರ್ ಜೀಲಾನಿ ಅವರನ್ನು ಭೇಟಿಯಾಗಬೇಕೆ ಎಂಬ ಜಿಜ್ಞಾಸೆಗೆ ಬೀಳುತ್ತಾರೆ. ಹೆಚ್ಚಿಗೆ ಏನನ್ನೂ ಯೋಚಿಸದೆ ಅಬೂ ಮುಜಾಫರ್ ಬಜಾರ್‌ನಲ್ಲಿರುವ ಹಮ್ಮಾದ್ ಅವರ ಬಳಿಗೆ ಓಡಿ ಬರುತ್ತಾರೆ. ಆದರೆ, ಕನಿಷ್ಠ ಆಶ್ಚರ್ಯವನ್ನು ಕೂಡಾ ತೋರಿಸದ ಶೇಖ್ ಹಮ್ಮದ್ ಅವರು ಮುಜಾಫರ್ ರನ್ನು ಸ್ವಾಗತಿಸುತ್ತಾರೆ. 

ಭವಿಷ್ಯವಾಣಿಯ ಬಗ್ಗೆ ಮುಜಾಫರ್ ಅವರು ಕೇಳಿದಾಗ, ಅಬೂ ಮುಜಾಫರ್‌ಗೆ ಉದ್ದೇಶಿಸಿರುವುದನ್ನು ತಾನು ಕಂಡಿದ್ದೆ, ಹಾಗಾಗಿ ಅದು ಸಂಭವಿಸುತ್ತದೆ ಎಂದು ಹೇಳಿರುವುದಾಗಿ ಅವರು ತಿಳಿಸುತ್ತಾರೆ. ಆದರೆ ನಿಮಗೆ 70 ಬಾರಿ ಪ್ರಾರ್ಥಿಸುವ ಮೂಲಕ ಆ ದುರಂತವನ್ನು ಎಚ್ಚರದ ಪ್ರಪಂಚದಿಂದ ಕನಸುಗಳ ಜಗತ್ತಿಗೆ ಶೇಖ್ ಜೀಲಾನಿ ಅವರು ವರ್ಗಾಯಿಸಿ ಸುರಕ್ಷೆ ನೀಡಿದ್ದಾರೆ. ಹಾಗಾಗಿ, ಜೀಲಾನಿಯನ್ನು ಭೇಟಿ ಮಾಡಿ ಕೃತಜ್ಞತೆ ಸಲ್ಲಿಸಲು ವ್ಯಾಪಾರಿಗೆ ಶೇಖ್ ಹಮ್ಮಾದ್‌ ಅವರು ಸೂಚಿಸುತ್ತಾರೆ.

ಕನಸಿನ ಲೋಕದ ಮೇಲೆ ಎಚ್ಚರದಲ್ಲಿರುವಾಗಿನ ಜಗತ್ತು ಹೇಗೆ ತನ್ನ ಪ್ರಭಾವವನ್ನು ಬೀರುತ್ತದೆ ಮತ್ತು ಒಬ್ಬ ವ್ಯಕ್ತಿಯ ಕನಸಿನ ವ್ಯಾಪ್ತಿ ಇನ್ನೊಬ್ಬನ ಪ್ರಭಾವಕ್ಕೆ ಹೇಗೆ ತೆರೆದುಕೊಳ್ಳುತ್ತದೆ ಎಂಬ ಪ್ರಶ್ನೆಗಳು ಈ ದಂತಕತೆಯಲ್ಲಿನ ಜಿಜ್ಞಾಸೆ. ಕನಸಿನ ಜಗತ್ತು ಅಶುಭಕರ ವಿಧಿಯನ್ನು ಕೂಡಿ ಹಾಕಲು ಮತ್ತು ಅದನ್ನು ಪೂರ್ಣವಾಗಿ ಅನುಭವಿಸಲು ಸಾಧ್ಯವಾಗುವ ಸುರಕ್ಷಿತ ವಲಯ ಕೂಡಾ ಆಗಿದ್ದು ಬಹಳ ಆಸಕ್ತಿದಾಯಕವಾಗಿದೆ.

ಟಿಪ್ಪಣಿ:

  • 10-11 ಶತಮಾನದ ವಿದ್ವಾಂಸರಾಗಿರುವ ಶೇಖ್ ಅಬ್ದುಲ್ ಖಾದಿರ್ ಜೀಲಾನಿ ಅವರು ಜಾಗತಿಕವಾಗಿ ಜನಪ್ರೀತಿ ಪಡೆದ ಸೂಫಿವರ್ಯರೂ ಹೌದು. ಸ್ವರಚಿತ ಗ್ರಂಥಗಳಿಂದ ಅಕಾಡೆಮಿಕ್ ವಲಯದಲ್ಲೂ ಪರಿಣಾಮಕಾರಿ ಗುರುತು ಮೂಡಿಸಿರುವ ಶೇಖ್ ಜೀಲಾನಿಯವರ ಬಗ್ಗೆ ಹಲವಾರು ಸಾಹಿತ್ಯಗಳು ರೂಪುಗೊಂಡಿವೆ. ಅರಬ್ಬೀ ಮಲಯಾಳಂ ನಲ್ಲಿ ರಚನೆಯಾದ ‘ಮುಹಿಯುದ್ದೀನ್ ಮಾಲಾ’ ಶೇಖ್ ಜೀಲಾನಿಯವರ ಬಗ್ಗೆ ಬರೆದ ಕಾವ್ಯಕಥನವಾಗಿದ್ದು, ಈ ಗ್ರಂಥವು ಕರ್ನಾಟಕದ ಬ್ಯಾರಿ ಸಮುದಾಯದಲ್ಲೂ ಪವಿತ್ರ ಕೃತಿಯಂತೆ ಪರಿಗಣಿಸಲ್ಪಟ್ಟಿದೆ. ಕೇರಳದಲ್ಲಿ ಹಾಗೂ ಅರಬ್ಬಿ ಮಲಯಾಳಂ ಭಾಷೆಯಲ್ಲಿ ರಚನೆಯಾದ ಅತ್ಯಂತ ಹಳೆಯ ಕೃತಿ ಎಂಬ ಹೆಗ್ಗಳಿಕೆಯೂ ‘ಮುಹಿಯುದ್ದೀನ್ ಮಾಲಾ’ಗಿದೆ.
  • ಬಹ್ಜತುಲ್ ಅಸ್ರಾರ್ ಮತ್ತು ತಕ್ಮೀಲ್ ಶೈಖ್ ಜೀಲಾನಿಯವರ ಜೀವನ ಮತ್ತು ಆಧ್ಯಾತ್ಮಿಕ ಸಾಧನೆಗಳ ಬಗ್ಗೆ ಬಂದಿರುವ ಗ್ರಂಥ. “ಅವರ್ ಚೊನ್ನಾ‌ ಬೈತಿನ್ನುಂ ಬಹ್ಜಾ ಕಿತಾಬಿನ್ನುಂ ಅಂಙೇನಾ ತಕ್ಮೀಲಾ ತನ್ನಿನ್ನುಂ ಕಂಡೋವರ್…” ಮುಹ್ಯಿದ್ದೀನ್ ಮಾಲಾ

ಲೇ: ಮುಶರ್ರಫ್‌ ಅಲಿ ಫಾರೂಖಿ
ಕನ್ನಡಕ್ಕೆ: ಫೈಝ್‌ ವಿಟ್ಲ
ಕೃಪೆ: ಲೈವ್‌ ಮಿಂಟ್


ಮುಶರ್ರಫ್‌ ಅಲಿ ಫಾರೂಖಿ

Leave a Reply

*