ಪ್ರಜಾಸತ್ತೇ..

ಬಿಸಿಲ ಬೇಗೆಗೆ ನಲುಗಿ
ಸೋತ ಹಗರೆಯ ಮಗು
ನೆಲಕ್ಕೊದ್ದಾಗ
ಮರಳುಗಾಡಿನಲ್ಲಿ
ಉಕ್ಕಿದ ಸಿಹಿನೀರ ಬುಗ್ಗೆ
ಚಿನ್ನದ ಹೆದ್ದಾರಿಗಳಲ್ಲಿ
ಉಕ್ಕುವುದಿಲ್ಲ

ಜೀತದಾಳುಗಳೊಡನೆ
ಮೋಸೆಸನು
ಬಂಧ ವಿಮುಕ್ತಿಯತ್ತ ನಡೆದಾಗ
ಸಾಗರವೇ ಬಿರಿದು ದಾರಿ ತೋರಿದ ಗಳಿಗೆ
ಇನ್ನೊಮ್ಮೆ ಬರುವುದಿಲ್ಲ

ವಿಶ್ವಾಸಿಗರೇ ಕೇಳಿ
‘ಸಿರಿವಂತನಿಗೆ ಸ್ವರ್ಗದ ದಾರಿ
ಒಂಟೆಯನ್ನು ಸೂಜಿಯ ಕಣ್ಣೊಳಗೆ
ತುರುಕಿದಷ್ಟೇ ಸುಲಭ’
ಆದರೂ ಬಡವರ ಕಡೆಗೆ
ರೈಲುಗಳು ಧಾವಿಸುವುದಿಲ್ಲ
ವಂದೇ ಭಾರತ – ಹಳಿಯಲ್ಲಿ
ಸಂಚರಿಸುವುದಿಲ್ಲ
ಗಾಳಿಯಲ್ಲಿ ಮುಕ್ತವಾಗಿ ಹಾರುತ್ತದೆ

ಪ್ರಜಾಸತ್ತೆಯ ಅವಗಢಗಳ ಮೇಲೆ
ಪವಾಡಗಳು ಘಟಿಸುವುದಿಲ್ಲ

ಫೆರೋವನ ಶಪಿಸುತ್ತಾ
ಸಾಗುತ್ತಿದೆ ಗುಲಾಮರ ದಂಡು
ಅವರ ನಿಟ್ಟುಸಿರಿಗೆ
ಬಿರುಗಾಳಿ ಏಳುವುದಿಲ್ಲ
ನೆಟಿಕೆ ಮುರಿದಾಗಲೆಲ್ಲಾ
ಸೌಧಗಳು ನೆಲಕ್ಕುರುಳುವುದಿಲ್ಲ

ಹಾದಿಯಲಿಯೇ ಮದುವೆ
ಬೀದಿಯಲ್ಲಿಯೇ ಪ್ರಸ್ಥ
ಬಯಕೆಗಳ ಹಂಗಿಲ್ಲದೆ
ಬಾಣಂತನದ ಬಲವಿಲ್ಲದೆ
ದಾರಿಯಲ್ಲಿಯೇ ಹೊತ್ತು
ದಾರಿಯಲ್ಲಿಯೇ ಹೆತ್ತು
ಹೊಕ್ಕಳಬಳ್ಳಿಯನ್ನು
ಕಲ್ಲಿಂದ ಕಡಿದು
ಮುಂದೆ ಸಾಗುವ ತಾಯಿ
ಹಾಲು ಬತ್ತಿದೆದೆಯ ಬಗೆಯುತ್ತಾ
ಕಿರುಚುವಳು
ಓ ಪ್ರಜಾಸತ್ತೇ.. ನೀನೆಲ್ಲಿ ಸತ್ತೆ..

ನೋಹನ ದೋಣಿಯತ್ತ
ಮಗುವನ್ನೆತ್ತಿ ಎಸೆದು
ಮನುಜ ಕುಲ ಉಳಿಸಲು
ಹೆಣಗುತ್ತಿರುವ ತಾಯಿ
ಕೂಗುವಳು..
ಓ ಪ್ರಜಾಸತ್ತೇ.. ನೀನೆಲ್ಲಿ ಸತ್ತೇ..

ಅನಂತದೆಡೆಗೆ
ಸಾಗುತಿಹ ಸರಹಪಾದರು
ಸಹಸ್ರಪದಿಗಳಾಗುವರು
ಒಡೆದ ಕಾಲುಗಳ
ನಡುವೆ ತೊಟ್ಟಿಕ್ಕುವ
ರಕ್ತವರ್ಣದ ಹೆದ್ದಾರಿಗಳ ಮೇಲೆ
ನಿಡುಸುಯ್ಯುವ ನಿಟ್ಟುಸಿರಿನ
ಸುರಿವ ಬೆವರಿನ ಉಗ್ರಗಂಧದ
ಸುಳಿಗಾಳಿಯೆಬ್ಬಿಸಿ
ಮನುಜ ವೇದನೆಯ
ಹಿಮ್ಮೇಳದೊಂದಿಗೆ
ಪ್ರೇತಾತ್ಮದಂತೆ
ರುದ್ರನರ್ತನಗೈಯ್ಯುವುದು
ಪ್ರಜಾಸತ್ತೇ!

— ಪುನೀತ್ ಅಪ್ಪು

Leave a Reply

*