ಇಸ್ತಾಂಬುಲಿನ ಜಗಮಗಿಸುವ ಅನುಭವಗಳಲ್ಲಿ ಲೀನವಾಗಿ ಮಲಬಾರಿನ ಜ್ಞಾನ ಗರಿಮೆಯನ್ನು ನೆನಪಿಸೋಣ. ಮಲಬಾರ್ ಎಂಬ ಅನುಗ್ರಹೀತ ಪ್ರದೇಶದ ವರ್ಣರಂಜಿತ ಚಿತ್ರವು ತುರ್ಕಿಯಲ್ಲಿನ ಜ್ಞಾನಾಸಕ್ತರ ಕಣ್ಣಲ್ಲಿ ಯಾವ ರೀತಿ ಮೂಡಿ ಬಂದಿದೆ ಎನ್ನುವುದನ್ನು ವಿವರಿಸುವ ಶ್ರಮ ಇಲ್ಲಿದೆ.
‘ವೆಲ್ ಕಮ್ ಟು ದಿ ಮೀಟಿಂಗ್ ಪಾಯಿಂಟ್ ಆಫ್ ದಿ ವರ್ಲ್ಡ್’ (ವಿಶ್ವ ಸಂಗಮ ಬಿಂದುವಿಗೆ ಸ್ವಾಗತ) ಇದು ಇಸ್ತಾಂಬುಲಿನ ವಿಮಾನ ನಿಲ್ದಾಣಗಳಲ್ಲಿ ಮತ್ತು ಇತರೆ ಕಡೆಗಳಲ್ಲಿ ನಮ್ಮನ್ನು ಸ್ವಾಗತಿಸುವ ಜಾಹೀರಾತು ವಾಕ್ಯಗಳಲ್ಲೊಂದು. ಮೊದಲ ಬಾರಿ ಇದನ್ನು ಕೇಳಿದಾಗ ಹಲವು ಆಲೋಚನೆಗಳು ಮನಸ್ಸಿನಲ್ಲಿ ಹಾದು ಹೋಗಿತ್ತು. ಜಗತ್ತಿನ ಎಲ್ಲ ದಿಕ್ಕುಗಳ ಜನರು ಬಂದು ಸೇರುವ ಮಹಾ ನಗರ. ಈ ನಗರಕ್ಕೆ ಅಪರಿಚಿತ ಎನಿಸಿರುವ ದೇಶದ ಒಂದು ಮೂಲೆಯಲ್ಲಿರುವ ತೀರ ಪ್ರದೇಶದಿಂದ ಬಂದ ನನ್ನನ್ನು ಯಾರು ಗುರುತಿಸಿಯಾರು ಎನ್ನುವ ಗೊಂದಲದ ಭಾವ ಮೂಡಿತ್ತು. ಅಲ್ಲಿ ತಲುಪಿದ ಹೊಸತರಲ್ಲಿ ಈ ಅಪರಿಚಿತತೆ ನನ್ನನ್ನು ಬಹುವಾಗಿ ಕಾಡಿತು. ಸಂಪೂರ್ಣವಾಗಿ ಭಿನ್ನವಾದ ಭಾಷೆ, ಸಂಸ್ಕೃತಿ, ಆಚರಣೆ, ಚಿಹ್ನೆ, ಶಿಷ್ಟಾಚಾರಗಳು; ಎಲ್ಲವೂ ಭಿನ್ನ ಭಿನ್ನ. ಭಾರತದ ಹಲವಾರು ಬೃಹತ್ ನಗರಗಳಲ್ಲಿ ಹಲವು ಅಗತ್ಯಗಳಿಗಾಗಿ ಹೃಸ್ವ ಮತ್ತು ದೀರ್ಘ ಕಾಲಾವಧಿ ತಂಗಿದ್ದರೂ ದೇಶದ ಹೊರಗೆ ಇದೇ ಮೊದಲು. ಆದ್ದರಿಂದ, ಈ ಅಪರಿಚಿತತೆಯನ್ನು ಅದರ ಪೂರ್ಣ ಭೀಕರತೆಯೊಂದಿಗೆ ಅನುಭವಿಸಬೇಕಾಯಿತು.
ಏನೇ ಇರಲಿ, ಕೆಲವು ತಿಂಗಳ ಕಾಲದ ಇಸ್ತಾಂಬುಲ್ ವಾಸದಲ್ಲಿನ ಆಲೋಚನೆಗಳ ಮೊತ್ತವು ಹೆಚ್ಚು ದುಃಖಗಳು ಮತ್ತು ಅಲ್ಪ ಆನಂದಗಳು ಮಾತ್ರ. ಅವುಗಳು ವರ್ತಮಾನದ ಅಥವಾ ಭವಿಷ್ಯದ ಕುರಿತಾಗಿರಲಿಲ್ಲ. ಬದಲಾಗಿ ನಮ್ಮ ಭೂತಕಾಲದ ಹಾಗೂ ಪರಂಪರೆಯ ಕುರಿತಾಗಿತ್ತು. ಸಂಪೂರ್ಣ ವ್ಯಕ್ತಿಗತವಾಗಿರುವ, ಅಲ್ಲಲ್ಲಿ ಚೆಲ್ಲಿರುವ ಅನುಭವಗಳ ಪುಟ್ಟ ವಿವರಣೆ ಇಲ್ಲಿದೆ.
ಯೂನಿವರ್ಸಿಟಿಗಳಲ್ಲಿ, ಪಟ್ಟಣದಲ್ಲಿ, ಮಸೀದಿಗಳಲ್ಲಿ ಭೇಟಿಯಾಗುವ ಹಲವಾರು ಜನರು ನಾನು ಭಾರತದಿಂದ ಎಂದು ತಿಳಿಯುವಾಗ ಶಾರುಖ್ ಖಾನ್, ಬಾಲಿವುಡ್, ಗೋ-ಪೂಜೆ, ಸಾಮೂಹಿಕ ಹತ್ಯೆ ಮುಂತಾದವುಗಳ ಕುರಿತು ಪ್ರಶ್ನಿಸುತ್ತಿದ್ದರು. ಕೆಲವರು ಒಂದು ಹೆಜ್ಜೆ ಮುಂದೆ ಹೋಗಿ ಅವರ ಹಿಂದಿ ಭಾಷೆಯ ಪ್ರಾವೀಣ್ಯತೆಯನ್ನು ನಮ್ಮ ಮುಂದೆ ಪ್ರದರ್ಶಿಸಲು ಬರುತ್ತಾರೆ. ನಾನು ಭಾರತದ ದಕ್ಷಿಣ ಭಾಗದವನಾಗಿದ್ದು ಈ ರೀತಿಯ ಯಾವುದೂ ಅಲ್ಲಿಲ್ಲವೆಂದು ಹೇಳಿ ಅರ್ಥೈಸಿ ಕೊಡಲು ತುಂಬಾ ಸಮಯ ಹಿಡಿಯುತ್ತದೆ. ಕ್ರಮೇಣ ದಕ್ಷಿಣ ಭಾರತದಿಂದ, ಕೇರಳದಿಂದ, ಮಲಬಾರಿನಿಂದ ಎಂದೆಲ್ಲಾ ಹೇಳಿ ಪರಿಚಯಪಡಿಸಲು ಆರಭಿಸಿದೆ. ಅಚ್ಚರಿ ಏನೆಂದರೆ, ಇಸ್ಲಾಮಿಕ್ ಇತಿಹಾಸ ಸಣ್ಣ ಮಟ್ಟಿಗೆ ತಿಳಿದಿರುವ ಎಲ್ಲರಿಗೂ ಭಾರತ, ಕೇರಳ ಗೊತ್ತಾಗದಿದ್ದರೂ ಮಲಬಾರ್ ಗೊತ್ತಾಗುತ್ತಿತ್ತು. ಒಂದು ವೈಜ್ಞಾನಿಕ ಕೇಂದ್ರದ ಮತ್ತು ಪುಣ್ಯ ಭೂಮಿಯ ಕುರಿತು ಕೇಳುವ ಕುತೂಹಲದೊಂದಿಗೆ ಅವರೆಲ್ಲ ನನ್ನ ಮಾತುಗಳಿಗೆ ಕಿವಿಯಾಗುತ್ತಾರೆ.
ಇಸ್ತಾಂಬುಲಿನ ಹೃದಯ ಭಾಗವಾದ ಫಾತಿಹಿನಲ್ಲಿ ಫತ್ಹುಲ್ ಮುಈನ್ ದರ್ಸ್ ನಡೆಯುತ್ತದೆ ಎಂದರಿತಾಗ ಒಮ್ಮೆ ಅಲ್ಲಿಗೆ ತೆರಳಿದೆ. ಭಾನುವಾರದ ಫಜರ್ ನಮಾಝ್ ಮುಗಿದ ತಕ್ಷಣ ತರಗತಿ ಆರಂಭವಾಗುತ್ತಿತ್ತು. ಯೂನಿವರ್ಸಿಟಿಯಿಂದ ಬೆಳಿಗ್ಗೆ ಎದ್ದು ತೆರಳುವುದು ಕಷ್ಟಸಾಧ್ಯ. ಆದ್ದರಿಂದ ಮುಂಚಿನ ದಿನವೇ ಅಲ್ಲಿಗೆ ಸಮೀಪ ವಾಸ್ತವ್ಯವಿದ್ದ ಸ್ನೇಹಿತನ ಫ್ಲಾಟಿಗೆ ಹೋಗಿ ತಂಗಿದೆ. ಸ್ನೇಹಿತ ಮುಹಮ್ಮದ್ ಹುದವಿ ಕೂಡಾ ಜೊತೆಗಿದ್ದರು. ಇಆನತು ತ್ತಾಲಿಬೀನ್ ಎಂಬ ವ್ಯಾಖ್ಯಾನ ಗ್ರಂಥದ ಜೊತೆಗೆ ಪ್ರತಿಯೊಂದು ಪದವನ್ನು ಕೂಡಾ ವಿವರಿಸುತ್ತಾ ಸಾಗುತ್ತಿದ್ದ ಮನೋಹರವಾದ ತರಗತಿ. ಶತಮಾನಗಳ ಹಿಂದೆ ನಮ್ಮ ಮಲಬಾರಿನಲ್ಲಿ ವಿರಚಿತಗೊಂಡು ಪ್ರಪಂಚದತ್ಯಾಂತ ಗುರುತಿಸಲ್ಪಟ್ಟಿರುವ ಕೃತಿ ಫತ್ಹುಲ್ ಮುಈನ್. ಸೆಕ್ಯುಲರೀಕರಣ ಮತ್ತು ಆಧುನೀಕರಣವೆಲ್ಲಾ ಗರಿಷ್ಠಮಟ್ಟದ ಪರಿಣಾಮ ಬೀರಿರುವ ಇಸ್ತಾಂಬುಲಿನ ಜನನಿಬಿಡ ರಸ್ತೆಗಳ ನಡುವಿನ ಒಂದು ಮಸೀದಿಯಲ್ಲಿ ನಮ್ಮ ಫತ್ಹುಲ್ ಮುಈನ್ ದರ್ಸ್ ನಡೆಯುತ್ತಿರುವುದು ನೋಡಿದಾಗ ಅದ್ಭುತ ಎನಿಸಿತು.
ಆ ತರಗತಿಯಲ್ಲಿ ವಿದ್ಯಾರ್ಥಿಗಳಾಗಿ ಪಾಕಿಸ್ತಾನಿಗಳು, ಅರಬಿಗಳು ಮತ್ತು ತುರ್ಕಿಗಳೆಲ್ಲಾ ಇದ್ದರು. ತರಗತಿಯ ಬಳಿಕ ಶೈಖರೊಂದಿಗೆ ಅಲ್ಪಕಾಲ ಮಾತನಾಡಿದೆ. ಮಲಬಾರಿನಿಂದ ಎಂದರಿತಾಗ ‘ನಹ್ನು ತಲಾಮೀಝಿಕುಮ್’ “ನಾವೆಲ್ಲರೂ ನಿಮ್ಮ ವಿದ್ಯಾರ್ಥಿಗಳು” ಎಂದು ನಮ್ಮೂರಿನೊಂದಿಗಿರುವ ಗೌರವ ಭಾವವನ್ನು ಪ್ರಕಟಿಸಿದರು. ಭಾರತ ಮತ್ತು ಮಲಬಾರಿನ ಕುರಿತಾಗಿ ಅನೇಕ ವಿಚಾರಗಳನ್ನು ಕೇಳಿ ತಿಳಿದುಕೊಂಡರು.
ಡಾ. ಯಾಸಿರ್ ಕುರೇಶಿಯವರು ಶೈಖ್ ಅಬ್ದುಲ್ ಹಕೀಂ ಮುರಾದರ ಯುಕೆಯಲ್ಲಿರುವ ಕೇಂಬ್ರಿಜ್ ಮುಸ್ಲಿಂ ಕಾಲೇಜಿನ ಪ್ರಾಧ್ಯಾಪಕರಲ್ಲೊಬ್ಬರು. ಶೈಖ್ ರಮಳಾನ್ ಅಲ್ ಬೂತ್ವಿಯವರ ಶಿಷ್ಯರಾದ ಇವರು ಲಂಡನ್ ಯೂನಿವರ್ಸಿಟಿ, ಕೆಂಬ್ರಿಜ್ ಯೂನಿವರ್ಸಿಟಿ ಮುಂತಾದೆಡೆ ವಿದ್ಯಾರ್ಜಿಸಿದ್ದಾರೆ. ಇಸ್ತಾಂಬುಲಿನಲ್ಲಿ ಅವರನ್ನು ಭೇಟಿಯಾಗುವ ಅವಕಾಶ ಸಿಕ್ಕಿತು. ಮಲಬಾರಿನವನು ಎಂದು ತಿಳಿದಾಗ ನಮ್ಮ ಊರಿನ ಕುರಿತು, ಇಲ್ಲಿನ ವಿದ್ವಾಂಸರ ಕುರಿತು ಹಾಗೂ ಅವರ ಗ್ರಂಥಗಳ ಬಗ್ಗೆಯೂ ಹೆಚ್ಚಿನ ಉತ್ಸುಕತೆಯಿಂದ ಮಾತನಾಡಿದರು. ಶೈಖ್ ಅಬೂಬಕ್ಕರ್ ಅಹ್ಮದ್ ಮತ್ತು ಶೈಖ್ ಅಬ್ದುಲ್ ಬಸ್ವೀರ್ ಸಖಾಫಿಯವರು ತಮ್ಮ ಗ್ರಂಥಗಳ ಮೂಲಕ ಅವರಿಗೆ ಸುಪರಿಚಿತರು. “ವಿಶೇಷವಾಗಿ ಇಲ್ಮುಲ್ ಮಂತ್ವಿಕ್ (ತರ್ಕ ಶಾಸ್ತ್ರ) ಮತ್ತು ಖವಾಇದುಲ್ ಫಿಕ್ಹಿನಲ್ಲಿ (ಕರ್ಮಶಾಸ್ತ್ರೀಯ ತತ್ವಗಳು) ಶೈಖ್ ಅಬ್ದುಲ್ ಬಸ್ವೀರರ ಗ್ರಂಥಗಳು ನನ್ನನ್ನು ಚಕಿತಗೊಳಿಸಿತ್ತು. ನನಗೆ ತುಂಬಾ ಸಹಾಯಕವಾದ ಗ್ರಂಥಗಳವು”,ಎಂದು ಅವರು ಉದ್ಗರಿಸಿದರು. ಇವರ ಅಧೀನದಲ್ಲಿ ಕೆಲಕಾಲ ಕಲಿಯಲು ಅವಕಾಶ ಸಿಕ್ಕಿತ್ತು ಎನ್ನುವ ಸಂತೋಷವನ್ನು ಅವರಲ್ಲಿ ಹಂಚಿಕೊಳ್ಳುವಾಗ ನನ್ನ ಕಣ್ಣಾಲಿಗಳು ಒದ್ದೆಯಾಗಿದ್ದವು. “ನಿಮ್ಮ ಊರಿನ ಆ ಉದ್ಧಾಮ ವಿದ್ವಾಂಸರೊಂದಿಗೆ ನನಗಾಗಿ ಪ್ರಾರ್ಥಿಸಲು ಕೋರುವುದು ಹಾಗೂ ನನ್ನ ಪೆನ್ ಮತ್ತು ನೋಟ್‌ಪ್ಯಾಡ್ ನೊಂದಿಗೆ ಅವರನ್ನು ಭೇಟಿಯಾಗಿ ಅವರಿಂದ ಜ್ಞಾನ ಗಳಿಸುವುದು ನನ್ನ ಬಹು ಕಾಲದ ಬಯಕೆಗಳಲ್ಲೊಂದು” ಅವರ ಪ್ರತಿಕ್ರಿಯೆ ಹೀಗಿತ್ತು. ಅವರು ತಮ್ಮ ತರಗತಿಯಲ್ಲೊಮ್ಮೆ ಪ್ರವಾದಿಗಳು ಪಾಪ ಸುರಕ್ಷಿತರು ಎಂಬ ನಮ್ಮ ವಿಶ್ವಾಸವನ್ನು ಇಮಾಮ್ ರಾಝಿಯವರ ಖುರ್‌ಆನ್ ವ್ಯಾಖ್ಯಾನವನ್ನು ಉಲ್ಲೇಖಿಸಿಕೊಂಡು ವಿವರಿಸುತ್ತಿದ್ದರು. ಮಾತಿನ ಮಧ್ಯೆ ನೀವು ಇಮಾಮ್ ರಾಝಿಯ ಕುರಿತು ಹೇಳುವುದನ್ನು ಕೇಳಿದಾಗ ನನಗೆ ಶೈಖ್ ಅಬೂಬಕ್ಕರ್‌ರವರ ಹದೀಸ್ ತರಗತಿ ನೆನಪಿಗೆ ಬಂತು ಎಂದು ಹೇಳಿದೆ. ಆ ಮಹಾನ್ ನಮಗೆ ಅವರ ಮದದುಗಳನ್ನು (ಆಧ್ಯಾತ್ಮಿಕ ಸಹಾಯಗಳು) ಕಳುಹಿಸಿ ಕೊಡುತ್ತಿರುವುದರಿಂದಲೇ ಇದೆಲ್ಲಾ ಹೇಳಲು ಸಾಧ್ಯವಾಗುತ್ತಿರುವುದು ಎಂದಾಗಿತ್ತು ಅವರ ಗೌರವಪೂರ್ವಕವಾದ ಉತ್ತರ!
ಪಶ್ಚಿಮ ತುರ್ಕಿಯಿಂದ ವರ್ಷಗಳ ಹಿಂದೆ ಇಸ್ತಾಂಬುಲಿಗೆ ಬಂದು ವಾಸ್ತವ್ಯ ಮಾಡಿರುವ ವ್ಯಕ್ತಿಯಾಗಿದ್ದರೆ ಹಸನ್ ಸೋನ್ಮಾಸ್. ಪ್ರಸಿದ್ಧ ಸೂಫಿಗಳು ಹಾಗೂ ಗ್ರಂಥಕರ್ತರಾಗಿರುವ ಶೈಖ್ ನೂಹ್ ಹಾಮೀಮ್ ಕೆಲ್ಲರ್ ಬಳಿ ವಿದ್ಯಾರ್ಜನೆ ಮಾಡಿರುವ ಇವರು ವಿದ್ವಾಂಸರೂ ಹೌದು. ಗ್ರಾಫಿಕ್ ಡಿಸೈನರ್ ವೃತ್ತಿಯಲ್ಲಿರುವ ಇವರು ವಿದ್ವಾಂಸರ ಮತ್ತು ವಿದ್ಯಾರ್ಥಿಗಳ ಸೇವೆಗೈಯುವುದರಲ್ಲಿ ಅತೀವ ಆಸಕ್ತರು. ಮಲಬಾರಿನ ಬಗ್ಗೆ ಹಾಗೂ ಮಾನ್ಸೂನ್ ಗಾಳಿಯ ದಿಕ್ಕಿನಲ್ಲಿ ಹಾಯಿ ದೋಣಿಯ ಮೂಲಕ ಇಸ್ಲಾಮ್, ತಸವ್ವುಫ್, ಫಿಕ್ಹ್ ಮುಂತಾದವುಗಳು ಸಮುದ್ರ ದಾಟಿ ಮಲಬಾರಿಗೆ ಬಂದಿರುವುದರ ಬಗ್ಗೆ ಅವರು ಕುತೂಹಲದಿಂದ ಮಾತನಾಡುತ್ತಾ ಇರುತ್ತಾರೆ. ಅನೇಕರಿಗೆ ಇದನ್ನು ಉತ್ಸಾಹದಿಂದ ವಿವರಿಸಿ ಕೊಡುತ್ತಾರೆ. ಒಮ್ಮೊಮ್ಮೆ ಮಲಬಾರ್ ಮತ್ತು ಅಲ್ಲಿನ ಸೂಫಿಗಳನ್ನು ಭೇಟಿಯಾಗಬೇಕೆಂಬ ಆಸೆಯನ್ನು ಕೂಡಾ ಹಂಚಿಕೊಳ್ಳುತ್ತಾರೆ.
ತುರ್ಕಿಯ ಪ್ರಸಿದ್ಧ ಸಮಾಜ ವಿಜ್ಞಾನಿ, ಲೇಖಕ, ಹಾಗೂ ಅಧ್ಯಾಪಕರಾಗಿದ್ದಾರೆ ಡಾ. ರಜಬ್ ಶೆನ್ ತುರ್ಕ್. “ಮಲಬಾರ್ ಜ್ಞಾನದ ಬೃಹತ್ ಪಟ್ಟಣವಾಗಿದ್ದು ಅಲ್ಲಾಹನ ಪ್ರೀತಿಗೆ ಪಾತ್ರರಾದ ಜನರು ಬದುಕುವ ಪ್ರದೇಶ” ಎಂದು ಒಮ್ಮೆ ತಮ್ಮ ತರಗತಿಯಲ್ಲಿ ಹೇಳಿದರು. ನಂತರ ನೆರೆದ ಜನಸ್ತೋಮದ ಮಧ್ಯೆ ನನ್ನ ಕಡೆಗೆ ಕೈ ಸನ್ನೆ ಮಾಡುತ್ತಾ ಈ ವಿದ್ಯಾರ್ಥಿ ಅಲ್ಲಿಂದ ಬಂದವನು ಎಂದು ಅವರು ಪರಿಚಯಪಡಿಸಿದಾಗ ನಿಜಕ್ಕೂ ನನಗೆ ನನ್ನನ್ನೇ ನೆನೆದು ದುಃಖವಾಗಿತ್ತು.
ಬೆಲ್ಜಿಯಂನ ಅಕಾಡಮಿಷ್ಯನ್ ಹಾಗೂ ಗ್ರಂಥಕಾರರಾಗಿದ್ದಾರೆ ಗ್ರೆಗೊರಿ ವ್ಯಾಂಡಮ್. ಶೈಖುಲ್ ಅಕ್ಬರ್ ಇಬ್ನು ಅರಬಿಯ ಕುರಿತ ಸಂಶೋಧನೆಯಲ್ಲಿ ತೊಡಗಿಸಿಕೊಂಡಿರುವ ಇವರು ಮಲಬಾರ್ ಮತ್ತು ಅಲ್ಲಿನ ವಿದ್ವಾಂಸ ಪರಂಪರೆಯ ಕುರಿತು ಚೆನ್ನಾಗಿ ತಿಳಿದುಕೊಂಡಿದ್ದಾರೆ. ಮಲಬಾರಿನ ಇಬ್ನು ಅರಬಿ ಎಂದು ಪ್ರಸಿದ್ದಿ ಪಡೆದಿರುವ ಶೈಖ್ ಅಬ್ದುರಹ್ಮಾನ್ ಅಲ್ ನಕ್ಷಬಂದಿ ತಾನೂರರ ಹಾಗೂ ಅವರ ಬರಹಗಳ ಕುರಿತು ಮಾತನಾಡಿದಾಗ ‘ಮಲಬಾರ್ ಮತ್ತೆ ಮತ್ತೆ ನನ್ನನ್ನು ಚಕಿತಗೊಳಿಸುತ್ತಿದೆ, ಈ ರೀತಿಯ ವಿದ್ವಾಂಸರನ್ನು, ಅವರ ಕೃತಿಗಳನ್ನು ಬೆಳಕಿಗೆ ತರಲು ನೀವು ಉತ್ಸುಕರಾಗಬೇಕೆಂದು’ ಅವರು ವಿನಂತಿಸಿದರು. ವಿವಿಧ ಯೂರೋಪಿಯನ್ ದೇಶಗಳಿಂದ, ಇಂಗ್ಲೆಂಡ್‌ನಿಂದ ಹಾಗೂ ಇತರ ಅರಬ್ ಜಗತ್ತಿನಿಂದ ಧಾರ್ಮಿಕ ವಿದ್ಯೆ ಕರಗತಮಾಡುವ ಏಕೈಕ ಗುರಿಯೊಂದಿಗೆ ಇಲ್ಲಿ ಬಂದು ವಾಸ್ತವ್ಯ ಹೂಡಿರುವ ಹಲವು ಸ್ನೇಹಿತರಿದ್ದಾರೆ. ಮಲಬಾರ್ ಶೈಲಿಯ ಶೈಕ್ಷಣಿಕ ವ್ಯವಸ್ಥೆಗಳು ತಮ್ಮ ಕಡೆ ಇಲ್ಲ ಎಂದು ಹೇಳಿಕೊಂಡು ಅವರೆಲ್ಲಾ ದುಃಖ ತೋಡಿಕೊಳ್ಳುತ್ತಾರೆ. ಮಲಬಾರಿನ ವಾತಾವರಣದಲ್ಲಿ ಬೆಳೆದಿರುವುದರಿಂದ ನಿಮಗೆ ಬಾಲ್ಯದಿಂದಲೇ ಜ್ಞಾನದ ಓರಗೆಯಲ್ಲಿ ಬದುಕಲು ಸಾಧ್ಯವಾಯಿತು. ಇದರ ಪ್ರಾಮುಖ್ಯತೆಯನ್ನು ತಿಳಿಯಲು ನಮಗೆ ಇಷ್ಟು ವಯಸ್ಸು ದಾಟಿ ಬರಬೇಕಾಯಿತು ಎಂದೆಲ್ಲಾ ಬಹಳ ಆಸೆಯಿಂದ ಮಾತಾಡುತ್ತಾರೆ ಆ ಗೆಳೆಯರು.
ರಾಜಕೀಯ, ಐತಿಹಾಸಿಕ, ಆರ್ಥಿಕ ಹಾಗೂ ಸಾಮಾಜಿಕ ಪ್ರಗತಿಯನ್ನು ದಾಖಲಿಸಿರುವ ಬೇರೆ ಪ್ರದೇಶಗಳಿಗಿಂತ ಧಾರ್ಮಿಕ ಶಿಕ್ಷಣ ಹಾಗೂ ಆಧ್ಯಾತ್ಮಿಕತೆ ತುಂಬಿರುವ ವಾತಾವರಣ ಮತ್ತು ಸ್ವಾತಂತ್ರ್ಯದ ಬದುಕು ನಮ್ಮ ಊರಲ್ಲಿದೆ ಎನ್ನುವ ವಿಚಾರವನ್ನು ಇಂತಹ ಸಂದರ್ಭಗಳು ಚೆನ್ನಾಗಿ ಮನದಟ್ಟು ಮಾಡಿ ಕೊಡುತ್ತವೆ. ಆರುನೂರು ವರ್ಷಗಳ ಕಾಲ ಯೂರೋಪ್, ಮಧ್ಯ ಏಷ್ಯಾ, ಆಫ್ರಿಕಾ ಮುಂತಾದ ಕಡೆ ಆಡಳಿತ ನಡೆಸಿದ ಉಸ್ಮಾನಿಯಾ ಸಾಮ್ರಾಜ್ಯದ ರಾಜಧಾನಿಯಲ್ಲಿದ್ದುಕೊಂಡು ಭೂಗೋಳದ ವಿವಿಧ ದಿಕ್ಕುಗಳಿಂದ ಬಂದು ತಲುಪಿದ ಜನರಲ್ಲಿ ಬೆರೆತುಕೊಂಡು ಈ ಲೇಖನ ಬರೆಯುತ್ತಾ ಇದ್ದೇನೆ! ನಮ್ಮ ಪರಂಪರೆ, ಸನ್ನಿವೇಶಗಳೆಲ್ಲವೂ ಅತೀ ಸುಂದರ ಹಾಗೂ ಅಮೂಲ್ಯವಾದದ್ದು ಎನ್ನುವ ವಿಚಾರ ಪೂರ್ಣವಾಗಿ ಮನವರಿಕೆಯಾಗಲು ಕೆಲವೊಮ್ಮೆ ಹೀಗೆ ಹೊರಗೆ ನಿಂತುಕೊಂಡು ವೀಕ್ಷಿಸುವವನು ಹೇಳಬೇಕಾಗುತ್ತದೆ. ಇವುಗಳನ್ನು ಕೇಳುವಾಗ ಈ ಪರಂಪರೆಯನ್ನು ಪ್ರತಿನಿಧಿಸಲು ನಾವು ಅರ್ಹರೇ ಎಂಬ ಪ್ರಶ್ನೆ ಒಳಗೆ ಮಂತ್ರಿಸುತ್ತಿರುತ್ತದೆ. ನಮಗೆ ಲಭಿಸಿದ ಮಹಾನುಗ್ರಹಗಳನ್ನು ಸದ್ಬಳಕೆ ಮಾಡಲು ಸಾಧ್ಯವಾಗುತ್ತಿಲ್ಲವಲ್ಲಾ ಎಂದು ದುಃಖವಾಗುತ್ತದೆ. ಅದೇ ವೇಳೆ, ಇದರ ಭಾಗವಾಗಿದ್ದೇವಲ್ಲಾ ಎಂದು ಚಿಂತಿಸುವಾಗ ಬಹಳ ಸಂತೋಷವೂ ಆಗುತ್ತದೆ. ಸಂಕ್ಷಿಪ್ತವಾಗಿ ಹೇಳುವುದಾದರೆ,ಇಸ್ತಾಂಬುಲ್ ನಂತಹ ಜಾಗತಿಕ ನಗರಗಳಲ್ಲಿ ಮಲಬಾರಿಯಾಗುವುದರ ಹಿನ್ನೆಲೆಯಲ್ಲಿ ಈ ದುಃಖ ಮತ್ತು ಆನಂದಗಳೇ ಆವರಿಸಿಕೊಂಡಿವೆ. ಜಗತ್ತಿನಲ್ಲಿರುವ ಇಂತದೇ ಬೇರೆ ನಗರಗಳಲ್ಲಿ ಬದುಕುತ್ತಿರುವ ಎಲ್ಲಾ ಮಲಬಾರಿಗಳಿಗೂ ಇದೇ ಅನುಭವ ಆಗುತ್ತಾ ಇರಬಹುದು. ಒಬ್ಬ ಮಲಬಾರಿ ಆಗುವುದರ ದುಃಖಗಳು ಮತ್ತು ಸಂತೋಷಗಳು ಅನುಭವಿಸದ ಅನಿವಾಸಿಗಳು ಇರಬಹುದೇ ಎನ್ನುವುದು ನಿಜಕ್ಕೂ ಸಂಶಯಾರ್ಹ!
ಮೂಲ: ಮುಹಮ್ಮದ್ ತ್ವಾಹಿರ್ ಪಯ್ಯನಡಂ
ಕನ್ನಡಕ್ಕೆ: ಅಮ್ಮಾರ್ ನೀರಕಟ್ಟೆ