‘ಕ್ಯಾಲೆಂಡರ್ ಬಾವಾ’ – ತೋಪ್ಪಿಲ್ ಮುಹಮ್ಮದ್ ಮೀರಾನ್ ಸಣ್ಣಕತೆ

[ತೋಪ್ಪಿಲ್ ಮುಹಮ್ಮದ್ ಮೀರಾನ್(1944–2019)

ಆರು ಕಾದಂಬರಿಗಳನ್ನು ಹಲವು ಸಣ್ಣಕತೆಗಳನ್ನೂ ಬರೆದಿದ್ದಾರೆ. 1997 ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ತನ್ನ ‘ಸೈವು ನರಕ್ಕಾಲಿ’ ಕೃತಿಗಾಗಿ ಪಡೆದಿದ್ದಾರೆ. ‘ತಮಿಳುನಾಡು ಕಲೈ ಇಳಕ್ಕಿಯ ಪೆರುಮಂತ್ರಮ್ ಅವಾರ್ಡ್’ ಹಾಗೂ ‘ಇಳಕ್ಕಿಯ ಚಿಂತನೈ ಅವಾರ್ಡ್’ ಸೇರಿದಂತೆ ಇತರ ಅನೇಕ ಪ್ರಶಸ್ತಿಗಳನ್ನೂ ಅವರು ಗಳಿಸಿದ್ದಾರೆ. ಮಲಯಾಳಂ ಭಾಷೆಯ ಹೆಸರಾಂತ ಸಾಹಿತಿ ವೈಕಮ್ ಮುಹಮ್ಮದ್ ಬಶೀರ್ ಅವರ ಬಯಾಗ್ರಫಿಯನ್ನು ತಮಿಳು ಭಾಷೆಗೆ ಭಾಷಾಂತರಿಸಿದ್ದಾರೆ. ತಮ್ಮ ಬರವಣಿಗೆಗಳಲ್ಲಿ ಮನುಷ್ಯ ಮನುಷ್ಯನ ಜೊತೆಗೆ ಏನು ಮಾಡುತ್ತಿರುವನು ಮತ್ತು ಮಾನವನು ಪ್ರಕೃತಿಯ ಜೊತೆಗೆ ಯಾವ ರೀತಿ ವರ್ತಿಸುತ್ತಿದ್ದಾನೆ ಎಂಬುದರ ಬಗ್ಗೆ ವಿಷಾದದಿಂದ ದಾಖಲಿಸಿದ್ದಾರೆ. ಸೃಷ್ಟಿಗಳಲ್ಲೇ ಅತ್ಯಂತ ಶ್ರೇಷ್ಟನಾಗಿರುವ ಮಾನವನು ಧರ್ಮ, ಜಾತಿ ಹಾಗೂ ಲಿಂಗ ತಾರತಮ್ಯ ಭಾವನೆಯಿಂದ ಮಾಡುವ ಕೃತ್ಯಗಳನ್ನು ನೋಡಿ ಅವರು ನೊಂದುಕೊಂಡಿದ್ದಾರೆ. ಅವರು ನೈಜ ಮಾನವರ ಬಗ್ಗೆ ಬರೆದಿದ್ದಾರೆ. ಅವರ ಬರಹಗಳು ಅಪಾರ ಸಹಾನುಭೂತಿ, ಉತ್ಕಟ ಮಾನವೀಯತೆ ಹಾಗೂ ದೃಢವಾದ ಭರವಸೆಯನ್ನು ಹೊಂದಿವೆ.]

‘ಆನ ಪಾರೈ’ ಅಥವಾ ಆನೆಕಲ್ಲು ಎಂಬ ಬೃಹದಾಕಾರದ ಬಂಡೆಗಲ್ಲೊಂದು ಪಟ್ಟಣದ ದಕ್ಷಿಣ ದಿಕ್ಕಿನಲ್ಲಿದೆ. ಮುಸ್ಲಿಮರ ಪವಿತ್ರ ರಂಜಾನ್ ಉಪವಾಸದ ಆರಂಭದ ಬಾಲಚಂದ್ರನನ್ನು ಮತ್ತು ಕೊನೆಯ ದಿನದ ‘ಪೆರುನ್ನಾಳ್’ (ಈದ್) ನ ಚಂದ್ರನನ್ನೂ ನೋಡಬೇಕೆಂದರೆ ನೀವು ಈ ಆನೆಪಾರೈಯನ್ನು ಹತ್ತಬೇಕು. ಮೋಡವಿಲ್ಲದ ರಾತ್ರಿಯಲ್ಲಿ ಬಾಲಚಂದ್ರನು ಬಾಗಿರುವ ದಾರದಂತೆ ಆಕಾಶಕ್ಕೆ ಅಂಟಿಕೊಂಡಿರುತ್ತಾನೆ. ರಂಜಾನ್ ಆರಂಭದ ‘ನೋಂಬು’ (ಉಪವಾಸ) ಶುರುವಾಗಿದ್ದನ್ನು ಖಚಿತಪಡಿಸಲು ಜನರು ‘ಚಂದ್ರ ದರ್ಶನವಾಯಿತೆ’ ಎಂದು ಕೇಳುತ್ತ ಲಗುಬಗೆಯಿಂದ ಅತ್ತಿಂದಿತ್ತ ಓಡಾಡುತ್ತಿರುತ್ತಾರೆ.

ರಂಜಾನಿನ ಚಂದ್ರದರ್ಶನಕ್ಕೆ ಹಾಗೂ ಪೆರುನ್ನಾಳ್ ನ ಹಬ್ಬದ ಸಂಭ್ರಮದಂದು ನಾವೂ ಬಂಡೆಗಲ್ಲನ್ನು ಹತ್ತುತ್ತಿದ್ದೆವು. ನಾವೂ ನಿಂತುಕೊಂಡು ಬಾಲಚಂದಿರನನ್ನು ನೋಡಲು ತವಕಿಸುತ್ತಿದ್ದೆವು. ಚಂದ್ರನ ಮೊದಲ ನೋಟವನ್ನು ಸೆರೆಹಿಡಿಯಲು ನಮ್ಮ ಕಣ್ಣುಗಳು ಬಲೆ ಬೀಸುತ್ತಿದ್ದವು. ಆದರೆ, ಅದು ಗೋಚರಿಸಿದ ಕೆಲವೇ ಕೆಲವು ಕ್ಷಣಗಳೊಳಗೆ ಮಾಯವಾಗುತ್ತಿತ್ತು. ಶುಭ್ರ ನೀಲಾಕಾಶಕ್ಕೆ ಎಲ್ಲಾದರೂ ಕೊಂಚ ಮೋಡ ಆವರಿಸಿಬಿಟ್ಟಿತೆಂದರೆ ನಾವೆಲ್ಲ ಸಿಟ್ಟಿನಿಂದ ಹುಚ್ಚೆದ್ದು ಬಿಡುತ್ತಿದ್ದೆವು. ನಾವು ಅದಕ್ಕೆ ಮನಸಾರೆ ಹಿಡಿಶಾಪ ಹಾಕುತ್ತಿದ್ದೆವು. ಹಠದಿಂದ ಅಲ್ಲೇ ನಿಂತು ಮೋಡ ಮರೆಯಾಗುವವರೆಗೂ ಕಾಯುತ್ತಿದ್ದೆವು. ಮೋಡ ಮರೆಯಾದರೆ ಮಾತ್ರ ನಾವು ಪೆರುನ್ನಾಳ್ ಆಚರಿಸಬಹುದಿತ್ತು ಎಂಬುದು ನಮ್ಮ ಲೆಕ್ಕಾಚಾರವಾಗಿತ್ತು. ಹಾಗಿದ್ದರೆ ಮಾತ್ರ ನಾವು ಹೊಸ ಬಟ್ಟೆಗಳನ್ನು ಧರಿಸಿ ಕಿವಿಯೊಳಗೆ ಅತ್ತರಿನ (ಸುಗಂಧ ದ್ರವ್ಯ) ಪುಟ್ಟ ಹತ್ತಿಯುಂಡೆಗಳನ್ನು ತುರುಕಿ ನಮ್ಮ ಸಂಬಂಧಿಕರ ಮನೆಗಳಿಗೆ ಹೋಗಿ ರಂಜಾನ್ ಉಡುಗೊರೆಗಳನ್ನು ಕೇಳಬಹುದಿತ್ತು. ಬಿಳಿ ಬಣ್ಣದ ಪುಟ್ಟ ಚಂದ್ರನನ್ನು ಕ್ಷಣಮಾತ್ರಕ್ಕೆ ಕಂಡಕೂಡಲೇ ಆನಪಾರೈ ನಿಂದ ಜಿಗಿಯುತ್ತ ಇಳಿಯುತ್ತಲೇ ಜೋರಾಗಿ ಕಿರಿಚುತ್ತಿದ್ದೆವು.
‘ಏನ್ರೋ ನಿಜವಾಗ್ಲೂ ಚಂದ್ರನನ್ನು ನೋಡಿದಿರೇನು?’ ಎಂದು ನಮ್ಮ ಸಂಭ್ರಮದಲ್ಲಿ ಜೊತೆಯಾಗುತ್ತ ನಾವು ಮಕ್ಕಳು ಹೇಳುವುದು ನಿಜವೋ ಸುಳ್ಳೋ ಎಂದು ಒಬ್ಬರು ಪರಾಂಬರಿಸುತ್ತಿದ್ದರು. ಅವರೇ ‘ಕ್ಯಾಲೆಂಡರ್ ಬಾವಾ’. ಅವರು ಎಂದಿಗೂ ಸುಳ್ಳನ್ನು ಹೇಳಿರಲಿಲ್ಲ. ಕಂಡದ್ದನ್ನು ಕಂಡಹಾಗೆ ಯಾವುದೇ ಉತ್ಪ್ರೇಕ್ಷೆಯಿಲ್ಲದೆ ಹೇಳುತ್ತಿದ್ದ ಪ್ರಾಮಾಣಿಕ ವ್ಯಕ್ತಿ ಅವರು. ಅವರೇನಾದರೂ ಒಂದನ್ನು ಹೇಳಿದರೆ, ಅದನ್ನು ಸಾಬೀತುಪಡಿಸಲು ಮತ್ತೆ ಸಾಕ್ಷಿಯ ಅಗತ್ಯ ಬೀಳುತ್ತಿರಲಿಲ್ಲ.

‘ಓಹ್, ನಿಜವಾಗ್ಲೂ ನಾನು ಕಂಡೆ’ ಹೀಗೆಂದು ಬಾವಾ ಹೇಳಿದರೆ ‘ನೋಡಿದ್ದೀರ?’ ಊರಿನ ಮುಖ್ಯಸ್ಥ ಖಚಿತಪಡಿಸಿಕೊಳ್ಳಲೆಂಬಂತೆ ಕೇಳುತ್ತಿದ್ದರು. ಅದಕ್ಕೆ ಪ್ರತ್ಯುತ್ತರವಾಗಿ ‘ನಾನು ಕಣ್ಣಾರೆ ಕಂಡೆ’ ಎಂದು ಬಾವಾ ನುಡಿಯುತ್ತಿದ್ದರು. ಪ್ರತಿ ವರ್ಷವೂ ಅದೇ ಪ್ರಶ್ನೆ ಅದೇ ಉತ್ತರ ಮುಂದುವರಿಯುತ್ತಿತ್ತು.

ನಗಾರಿ ಬಾರಿಸಿ ಡಂಗುರ ಸಾರಿದ ತಕ್ಷಣ ಮಸೀದಿಯ ಧ್ವನಿವರ್ಧಕದಲ್ಲಿ ಪೆರುನ್ನಾಳಿನ ಅಧಿಕೃತ ಘೋಷಣೆಯನ್ನು ಹೊರಡಿಸಲಾಗುತ್ತಿತ್ತು. ನಮ್ಮ ಹಳ್ಳಿಯಲ್ಲಿ ನಾವು ಕ್ಯಾಲೆಂಡರ್ ನೋಡುತ್ತಿರಲಿಲ್ಲ. ‘ಬಾವಾ’ ನಮ್ಮ ಪಾಲಿನ ಕ್ಯಾಲೆಂಡರಾಗಿದ್ದರು. ಹಳ್ಳಿಯ ಮುಖ್ಯಸ್ಥರೇ ಖುದ್ದು ಬಾವಾರಿಗೆ ಹೊಸ ಬಟ್ಟೆಗಳನ್ನು ಹಬ್ಬಕ್ಕೆಂದು ಕೊಡುತ್ತಿದ್ದರು. ಬಾವಾರಿಗೆ ಹೆಂಡತಿ ಮಕ್ಕಳು ಯಾರೂ ಇರಲಿಲ್ಲ. ಅದೊಂದು
ಧೋತಿ ಮತ್ತು ಟವೆಲ್ ಸೆಟ್. ಜೊತೆಗೆ ಮಸೀದಿಯನ್ನು ಸ್ವಚ್ಛವಾಗಿಡುವ ಸೇವೆಯನ್ನು ಸ್ವಯಂಸ್ಪೂರ್ತಿಯಿಂದ ಮಾಡಲು ಶುರುಮಾಡಿದಂದಿನಿಂದ ಊರವರಿಂದ ದೈನಂದಿನ ಎರಡು ಹೊತ್ತು ಊಟವನ್ನು ಅವರು ಪುಕ್ಕಟೆಯಾಗಿ ಪಡೆಯುತ್ತಿದ್ದರು. ಬೂದುಬಣ್ಣದ ಮಾಸಲು ಗಡ್ಡ, ಕೆಂಪನೆಯ ದುಂಡಗಿನ ಟೋಪಿ, ಸೊಂಟಕ್ಕೆ ಸುತ್ತಿದ ಕಣಕಾಲುಗಳ ತನಕ ಇಳಿಯಬಿಟ್ಟ ಧೋತಿ ಮತ್ತು ಮೊಣಕಾಲುಗಳವರೆಗೆ ಇಳಿಯಬಿಟ್ಟ ತುಂಬಾ ಸಡಿಲವಾದ ಅಂಗಿ – ಇವಿಷ್ಟು ಬಾವಾ ಅವರ ಕುರಿತ ಸಣ್ಣ ವ್ಯಕ್ತಿಚಿತ್ರ.

ಅದ್ರಾಬು, ಸುಲ್ತಾನ್, ಹಮೀದು ಮತ್ತು ಉಳಿದ ನಾವೆಲ್ಲರೂ ಚಂದ್ರನನ್ನು ನೋಡುವ ಸಲುವಾಗಿ ಆನೆಕಲ್ಲನ್ನು ಹತ್ತಿದೆವು. ಎಂದಿನಂತೆ, ಕ್ಯಾಲೆಂಡರ್ ಬಾವಾ ಅವರೂ ಸಾಕ್ಷಿಯಾಗಿ ನಮ್ಮ ಜೊತೆ ಸೇರಿಕೊಂಡರು. ಮದುವೆಯಾಗಿ ತಿರುವನಂತಪುರಂ ಗೆ ಹೋಗಿರುವ ನನ್ನ ಅಕ್ಕ ಅಲ್ಲಿ ನಾಳೆ ಪೆರುನ್ನಾಳ್ ಎಂದು ಉಮ್ಮ(ತಾಯಿ) ಗೆ ಹೇಳಿದಳು. ಅವಳ ಮಾತು ಕೇಳಿ ಉಮ್ಮ ಒಟ್ಟಪ್ಪಮ್, ಪಾಲಡೈ ಹಾಗೂ ಕಿಣ್ಣತ್ತಪ್ಪಮ್ ನಂತಹ ರುಚಿರುಚಿಯಾದ ತಿಂಡಿಗಳನ್ನು ಮಾಡಲು ಅಕ್ಕಿಯನ್ನು ನೀರಿನಲ್ಲಿ ನೆನೆಯಲು ಹಾಕಿದರು. ಕೈಮಣಿ ಸುಂದರಮ್ ನ ಉಡುಗೊರೆಯೆಂದರೆ ಎರಡು ಹುಂಜಗಳು. ಅವುಗಳನ್ನು ಹಗ್ಗಗಳಿಂದ ಬೇಲಿಗೆ ಕಟ್ಟಲಾಗಿತ್ತು. ಅವು ನೆಲಕ್ಕೆ ಕುಕ್ಕಿ ಕಾಳುಗಳನ್ನು ಹೆಕ್ಕುತ್ತಿದ್ದವು. ಅವು ನಾಳೆ ಅಡುಗೆಕೋಣೆಯ ಒಂದು ಪಾತ್ರೆಯಲ್ಲಿ ಘಮಘಮದ ಸಾರಿನೊಳಗಿರುವುದನ್ನು ನಾನು ಈಗಲೇ ಊಹಿಸಬಲ್ಲೆ. ಇದೆಲ್ಲದರ ಜೊತೆಗೆ ತುಪ್ಪ ಹಾಕಿದ ಅನ್ನ ಮತ್ತಿತರ ರುಚಿಯಾದ ತಿಂಡಿಗಳೂ ಇರಬಹುದು.
ಅಲ್ಲಾಹ್! ನಾಳೆ ಪೆರುನ್ನಾಳ್ ಹಬ್ಬವಾಗಲಿ. ಹಬ್ಬಕ್ಕೆ ಸಿಗುವ ಉಡುಗೊರೆಗಳಲ್ಲಿ ಒಂದು ರೂಪಾಯಿಯನ್ನು ನಾನು ನಿನಗೆ ಹರಕೆ ಹೊರುತ್ತೇನೆ.

ಸುಲ್ತಾನನ ಮನೆಯಲ್ಲಿ ಹಬ್ಬಕ್ಕಾಗಿ ಓರಟ್ಟಿ (ಚಪ್ಪಟೆ ರೊಟ್ಟಿ) ಗಳನ್ನು ಮಾಡಲು ಅಕ್ಕಿಹಿಟ್ಟನ್ನು ಬೆರೆಸುತ್ತಿದ್ದರು. ಹಮೀದನ ಅಪ್ಪ ಒಂದು ಮೇಕೆಯನ್ನು ತಂದು ಬೇಲಿಗೆ ಕಟ್ಟಿದ್ದರು.
ನಾವೆಲ್ಲರೂ ಆನೆಕಲ್ಲಿನ ಮೇಲೆ ಕ್ಯಾಲೆಂಡರ್ ಬಾವಾ ಜೊತೆಗಿದ್ದೆವು. ಆಕಾಶವು ಮೋಡಗಳಿಲ್ಲದೆ ಚೆನ್ನಾಗಿ ತೊಳೆದಿಟ್ಟಂತೆ ಶುಭ್ರವಾಗಿತ್ತು. ಕ್ಯಾಲೆಂಡರ್ ಬಾವಾ ಅವರ ಗಡ್ಡದ ಮೇಲಿನ, ತುಟಿಗಳ ಸ್ವಲ್ಪ ಕೆಳಗಿನ ಕೂದಲು ಬೀಡಿಯ ಕಲೆಗಳಿಂದ ಕಂದು ಬಣ್ಣಕ್ಕೆ ತಿರುಗಿತ್ತು. ಅವರು ಮೂಗಿನಿಂದ ಹೊಗೆ ಹೊರಹಾಕಿ ನಮ್ಮನ್ನು ಅಚ್ಚರಿಗೊಳಿಸುತ್ತಿದ್ದರು. ಕುಮಾರಿ ಮಕ್ಕಳ್ ಬೀಡಿಗಳು ಮತ್ತು ಎಲಿ-ಮಾರ್ಕ್ ಬೆಂಕಿಪೊಟ್ಟಣವನ್ನು ನಾವು ಅವರ ಅಂಗಿ ಜೇಬಿಗೆ ತುರುಕಿದರೆ ಮಾರ್ಗಶಿರ ಮಾಸದ ಚಳಿಯಲ್ಲಿ ನಡುಗುತ್ತಿದ್ದ ಕ್ಯಾಲೆಂಡರ್ ಬಾವಾರಿಗೆ ಹೇಳಲಾಗದಷ್ಟು ಖುಷಿ. ಅರಬ್ಬೀ ಸಮುದ್ರದತ್ತಣಿಂದ ಬೀಸಿ ಬರುವ ಸಂಜೆಯ ತಂಗಾಳಿ ತೇವಮಯವಾಗಿತ್ತು. ಸೂರ್ಯನು ಸಮುದ್ರದಲ್ಲಿ ಮುಳುಗಿದಾಗ, ನಮ್ಮ ಕಣ್ಣುಗಳು ಆಕಾಶದತ್ತ ನೆಟ್ಟವು.

‘ಯಾಕೆ ಈ ಬೀಡಿಗಳು?’

‘ಚಳಿ ಅಲ್ವಾ’

‘ಹೌದು, ತುಂಬಾ ಚಳಿ’

‘ಬಾವಾ, ನಮ್ಮ ಉಮ್ಮ ಅಕ್ಕಿಯನ್ನು ನೆನೆಯಲು ಹಾಕಿದ್ದಾರೆ’ ಬಾವಾ ಅದ್ರಾಬುವಿನ ಮಾತುಗಳಿಗೆ ಕಿವಿಗೊಡಲಿಲ್ಲ.

‘ನನ್ನ ಉಮ್ಮ ಹಿಟ್ಟನ್ನು ರುಬ್ಬುತ್ತಿದ್ದಾರೆ’ ಸುಲ್ತಾನ ಹೇಳಿದ.

ಬಾವಾ ಅವರ ಕ್ಯಾಲೆಂಡರ್ ಕಣ್ಣುಗಳು ಮೋಡರಹಿತವಾದ ನೀಲಿ ಆಕಾಶದತ್ತ ನೋಡುತ್ತಿದ್ದವು.
‘ಬಾವಾ, ಚಂದ್ರ ಕಂಡನೇ?’ ಹುಡುಗರಲ್ಲೊಬ್ಬ ಕೇಳಿದನು.

ಪೆರುನ್ನಾಳಿಗಾಗಿ ವಿಶೇಷವಾಗಿ ಮಸೀದಿಯ ಮಿನಾರದ ಮೇಲೆ ಕಟ್ಟಿರುವ ಧ್ವನಿವರ್ಧಕದಿಂದ ಉಪವಾಸ ತೊರೆಯುವ ಹೊತ್ತಿನ ಪ್ರಾರ್ಥನೆಯ ಶಬ್ದಗಳು ಕೇಳಿಸಲಾರಂಭಿಸಿದವು. ಬಾವಾ ಒಂದು ಬೀಡಿಯನ್ನೆಳೆದು ಉಪವಾಸ ತೊರೆದರು.

‘ಅಲ್ನೋಡಿ, ಮೋಡ. ನೋಡಿ.. ನೋಡಿ.. ಒಂದು ನೂಲಿನ ಹಾಗೆ ಏನೋ ಕಾಣ್ತಿದೆಯಲ್ಲಾ..’

ಬಾವಾ ಮೌನವಾಗಿದ್ದರು. ಅವರು ಆಕಾಶಕ್ಕೆ ನೆಟ್ಟ ತನ್ನ ಕಣ್ಣನ್ನು ಕೀಳಲಿಲ್ಲ. ಅಲ್ಲೆಲ್ಲೂ ಮೋಡವಿದ್ದಂತೆ ಕಾಣಲಿಲ್ಲ. ನಾಳೆ ಪೆರುನ್ನಾಳ್ ಆಗುವ ಸಾಧ್ಯತೆ ಇಲ್ಲ ಎಂದು ಬಾವಾ ಮನದಲ್ಲೇ ಅಂದುಕೊಂಡಿರಬೇಕು.

‘ನಾವೆಲ್ಲ ನೋಡಿದೆವು, ಬಾವಾ. ನೀವು ನೋಡಿಲ್ಲವೆ?’

ಬಾವಾ ಮಾತಿಗಾಗಿ ತಡಕಾಡಿದರು.
ಬಹುಶಃ ವಯಸ್ಸಾದ ಕಾರಣದಿಂದ ನನ್ನ ದೃಷ್ಟಿ ಮಂಜಾಗಿರಬಹುದು. ಈ ಮಕ್ಕಳೆಲ್ಲ ಅವರಿಗೆ ಚಂದ್ರ ಕಂಡನೆಂದು ಹೇಳುತ್ತಿದ್ದಾರಲ್ಲ. ಇವರೆಲ್ಲ ಒಳ್ಳೆಯ ಹುಡುಗರು. ಈಗಿನ ಕಾಲದಲ್ಲಿ ನನ್ನ ಕಣ್ಣುಗಳು ಹೆಚ್ಚಿನ ವೇಳೆ ತೇವಗೊಂಡಿರುತ್ತವೆ; ಬಹುಶಃ ದೃಷ್ಟಿ ಕ್ಷೀಣಿಸಿರುವುದರ ಲಕ್ಷಣ ಇರಬಹುದು ಅದು. ನಾನು ಕಣ್ಣಾರೆ ಕಾಣದೆ ಚಂದ್ರದರ್ಶನವಾಯಿತೆಂದು ಹೇಗೆ ಹೇಳಲಿ? ಈ ಎಲ್ಲ ಮಕ್ಕಳೂ ಚಂದ್ರನನ್ನು ಕಂಡೆವೆಂದು ಹೇಳುವಾಗ ನಾನು ಅದನ್ನು ತಳ್ಳಿಹಾಕುವುದಾದರೂ ಹೇಗೆ? ಮುಖ್ಯಸ್ಥನಿಗೆ ನಾನು ಏನೆಂದು ಉತ್ತರ ಕೊಡಲಿ?

ಬಾವಾ ಗೊಂದಲಕ್ಕೊಳಗಾದರು. ಇಷ್ಟರತನಕ ಅವರು ಸುಳ್ಳು ಹೇಳಿರಲಿಲ್ಲ. ಅವರ ಕಣ್ಣುಗಳು ಮಂಜಾಗಿರುವ ವಿಷಯವು ಊರಿನವರಿಗೇನಾದರೂ ತಿಳಿದರೆ ಊರವರೆಲ್ಲ ಸೇರಿ ಅವರನ್ನು ಒದ್ದು ಓಡಿಸುವರು. ‘ಕ್ಯಾಲೆಂಡರ್’ ಎಂಬ ಕಾರಣಕ್ಕಾಗಿ ಮಾತ್ರ ಅವರು ಊರವರ ಗೌರವಕ್ಕೆ ಪಾತ್ರರಾಗಿದ್ದರು. ಹುಡುಗರು ಹೇಳಿದಂತೆ ಆ ಮೋಡವು ಚಂದ್ರನನ್ನು ಮರೆಮಾಡಿರಬಹುದು. ಬಾವಾ ತನ್ನ ನೀರಿಳಿಯುತ್ತಿದ್ದ ಕಣ್ಣುಗಳನ್ನು ಒರೆಸಿಕೊಳ್ಳುತ್ತಿರುವಾಗಲೇ ಮೋಡ ಬಂದು ಅರ್ಧಚಂದ್ರವನ್ನು ಮರೆಮಾಚಿರಬಹುದು.

ಸಂದೇಹಗಳು ತನ್ನ ಮನಸ್ಸನ್ನು ಆವರಿಸಿದವು. ಹರಿತವಾದ ಚಾಕುಗಳನ್ನು ಕಂಡ ಎಳೆಮೇಕೆಗಳು ನಾಳೆ ತಮ್ಮ ಕತ್ತು ಕುಯ್ದು, ಚರ್ಮ ಸುಲಿದು, ಪ್ರಾಣ ಕಳೆದುಕೊಳ್ಳಲಿದ್ದೇವೆ ಎಂದು ತಿಳಿದು ಜೋರಾಗಿ ಅರಚಲಾರಂಭಿಸಿದವು. ಆ ಸದ್ದು ಪಟ್ಟಣದ ಪಶ್ಚಿಮ ಭಾಗದಲ್ಲಿ, ಆನೆಕಲ್ಲಿನ ತಪ್ಪಲಲ್ಲಿ ಕಂಪನವನ್ನು ಉಂಟುಮಾಡಿತು.

ಬಂಡೆಗಲ್ಲಿನ ಮೇಲೆ ನಿಂತುಕೊಂಡು ಪಟ್ಟಣದ ಸಂಭ್ರಮವನ್ನೆಲ್ಲ ನೋಡಬಹುದಿತ್ತು, ಜೊತೆಗೆ ಮಕ್ಕಳ ಸಡಗರವನ್ನೂ.
ನಾನು ಚಂದ್ರನನ್ನು ನೋಡಲಿಲ್ಲ ಎಂದು ಹೇಳಿದರೆ ಇಡೀ ಊರು ದುಃಖದಲ್ಲಿ ಮುಳುಗುತ್ತದೆ. ಈ ಸಂಭ್ರಮ, ಈ ಸಡಗರ ಎಲ್ಲ ಕೊನೆಯಾಗುತ್ತದೆ. ಪಟಾಕಿಗಳನ್ನು ಸಿಡಿಸಿ ಸಂತೋಷದಿಂದ ಓಡಾಡುತ್ತಿರುವ ಮಕ್ಕಳೆಲ್ಲ ಆ ಸುದ್ದಿ ಕೇಳಿದರೆ ಬಸಳೆಯ ಕಾಂಡಗಳಂತೆ ಮುದುಡಿ ಬೀಳುತ್ತಾರೆ. ಈ ಬಡಜನರು ಕಷ್ಟಪಟ್ಟು ನೆನೆಸಿಟ್ಟ ಅಕ್ಕಿ, ರುಬ್ಬಿರುವ ಹಿಟ್ಟುಗಳೆಲ್ಲ..

ಹೊಳೆಯುವ ಹರಿತವಾದ ಚಾಕುಗಳನ್ನು ನೋಡಿ ಸಾವಿನ ಭಯದಿಂದ ಅದಾಗಲೇ ನಡುಗುತ್ತಿದ್ದ ಆ ಮೇಕೆಮರಿಗಳ ಭೀತಿಯನ್ನು ಮುಂದೂಡುವುದು ಅತ್ಯಂತ ಕ್ರೌರ್ಯದ ಕೃತ್ಯವೇ ಸರಿ. ಈ ಪವಿತ್ರ ದಿನದಲ್ಲಿ ಅವುಗಳಿಗೆ ಸಹಾನುಭೂತಿ ತೋರಿಸಲು.. ಅವುಗಳ ಭಯ ಮತ್ತು ಸಂಕಟವನ್ನು ಒಂದು ದಿನ ಕಡಿಮೆ ಮಾಡಲು.. ‘ಚಂದ್ರ ಕಾಣಿಸಿಕೊಂಡನೆ?’ ಅದ್ರಾಬು ಕೂಗಿದನು. ಸುಲ್ತಾನ್ ಮತ್ತು ಹಮೀದು ಆತನಿಗೆ ದನಿಗೂಡಿಸಿದರು. ಕ್ಯಾಲೆಂಡರ್ ಬಾವಾ ಕೈಗಳನ್ನು ಹಿಂದಕ್ಕೆ ಕಟ್ಟಿ ಅವರ ಹಿಂದೆಯೇ ನಡೆದರು, ಗ್ರಾಮದ ಮುಖ್ಯಸ್ಥರು ಮಸೀದಿಯಲ್ಲಿ ಅವರಿಗಾಗಿ ಕಾಯುತ್ತಿದ್ದರು.

‘ಚಂದ್ರನನ್ನು ನೋಡಿದಿರಾ?’

‘ಹೌದು, ನಾನು ಕಣ್ಣಾರೆ ಕಂಡೆ’ ಎಂದು ಹೇಳಲೇ ಅಥವಾ ‘ನಾನು ನೋಡಲಿಲ್ಲ’ ಎಂದು ಹೇಳಲೆ?
ಆ ಕ್ಷಣದಲ್ಲಿ ಇದ್ದಕ್ಕಿದ್ದಂತೆ ಅವರ ಕಣ್ಣುಗಳು ತೇವಗೊಂಡವು.

‘ಏನು ಹೇಳುತ್ತೀರಿ ಬಾವಾ?’

‘ನನ್ನ ದೃಷ್ಟಿ ಚೆನ್ನಾಗಿಲ್ಲ’

ಆತ ಈಗ ಜನರಿಗೆ ಬೇಡವಾದ ಮೂಲೆಗುಂಪಾಗಿರುವ ಹಳೆಯದಾದ ಕ್ಯಾಲೆಂಡರ್.

ಊರಿನ ಮುಖ್ಯಸ್ಥರು ನಗಾರಿ ಬಾರಿಸಿ ಧ್ವನಿವರ್ಧಕದಲ್ಲಿ ತಕ್ಬೀರ್ (ಅಲ್ಲಾಹು ಅಕ್ಬರ್ ಎಂಬ ಘೋಷಣೆ) ಕೂಗಿ ಪೆರುನ್ನಾಳ್ ಅನ್ನು ಘೋಷಿಸಲು ಆದೇಶ ನೀಡಿದರು. ಮಕ್ಕಳ ಪಾಲಿಗೆ ಅದು ಹೊಸ ಕ್ಯಾಲೆಂಡರ್.

ಅಲ್ಲಾಹು ಅಕ್ಬರ್
ಅಲ್ಲಾಹು ಅಕ್ಬರ್
ಅಲ್ಲಾಹು ಅಕ್ಬರ್..

ಫ್ರಂಟ್‌ಲೈನ್ ಇಂಗ್ಲಿಷ್ ಮ್ಯಾಗಜೀನ್ ನಲ್ಲಿ ಪ್ರಕಟವಾದ ಈ ಕತೆಯನ್ನು ಕನ್ನಡಕ್ಕೆ ಅನುವಾದಿಸಿದವರು – ಡಾ. ಸಿ ಯಂ ಹನೀಫ್ ಬೆಳ್ಳಾರೆ

Leave a Reply

*