ಅರ್ವಿ : ಅರಬ್ -ತಮಿಳರ ಅಳಿದು ಹೋದ ಭಾಷೆ

2008 ಇಸವಿಯ ಬೇಸಿಗೆ ಕಾಲದ ಸಂಜೆ ಹೊತ್ತು, ದಕ್ಷಿಣ ಭಾರತದ ವೆಲ್ಲೂರಿನ ಅರಬಿ ಕಾಲೇಜಿನ ವಿದ್ಯಾರ್ಥಿ,26ರ ಹರೆಯದ ಮೊಹಮ್ಮದ್ ಸುಲ್ತಾನ್ ಬಾಖವಿ ಗಮನಾರ್ಹವಾದ ಸಂಗತಿಯೊಂದನ್ನು ಕಂಡುಹಿಡಿದನು. ಪೂರ್ವಜರಾದ ಆಧ್ಯಾತ್ಮಿಕ ಗುರುಗಳು ಅಂತ್ಯ ವಿಶ್ರಮ ಪಡೆಯುತ್ತಿರುವ ವೆಲ್ಲೂರಿನ ಲಬಾಬೀನ್ ಖಬರ್ಸ್ಥಾನ್ ಮಸೀದಿಯಲ್ಲಿ ನಮಾಜ್ ಮುಗಿಸಿದ ಬಳಿಕ ಆತ, ಒಬ್ಬ ವ್ಯಕ್ತಿ ಮಸೀದಿಯ ಅಂಗಳ ಗುಡಿಸುವುದನ್ನು ಕಂಡನು. ಕಸಗುಡಿಸುವಾತ ಕಸವನ್ನು ಸುಡುವ ಸಲುವಾಗಿ ಮಸೀದಿಯ ಪ್ರವೇಶ ದ್ವಾರದ ಪಕ್ಕದಲ್ಲಿರುವ ಬಾವಿಯ ಬಳಿ ಕಸವನ್ನು ಕೂಡಿಹಾಕಿದ್ದ. ಕಸದ ರಾಶಿಯಲ್ಲಿ ಎಲೆಗಳು, ಕಲ್ಲು ಮಣ್ಣುಗಳು ಮತ್ತು ಕಾಗದದ ತುಣುಕುಗಳೂ ಇದ್ದವು. ನಮಾಜ್ ಮುಗಿಸಿ ಇನ್ನೇನು ಹೊರಡಬೇಕೆನ್ನುವಷ್ಟರಲ್ಲಿ ಜೋರಾಗಿ ಬೀಸಿದ ಗಾಳಿಗೆ ಪುಸ್ತಕದ ಹಾಳೆಯೊಂದು ಬಾಖವಿಯ ಮುಖದ ಮೇಲೆ ಬಿತ್ತು. ಆ ಪುಟವನ್ನು ತೆಗೆದು ನೋಡಿದ ಬಾಖವಿಗೆ ಅಚ್ಚರಿ ಕಾದಿತ್ತು. ಅಪರೂಪದ ಪುರಾತನ ಹಸ್ತ ಪ್ರತಿಗಳ ಸಂಗ್ರಹಕ್ಕಾಗಿ ಮಸೀದಿಗಳಲ್ಲಿರುವ ಬತ್ತಿಹೋದ ಬಾವಿಗಳನ್ನು ಬಳಸಲಾಗುತ್ತದೆಯೆಂದೂ, ಅವುಗಳ ಪುಟಗಳು ಮಸೀದಿ ಅಂಗಳಗಳಲ್ಲಿ ಬಿದ್ದಿರುತ್ತವೆಯೆಂದೂ ಬಾಖವಿ ತಿಳಿದಿದ್ದನು. ಅಂತೆಯೇ ಈ ಹಾಳೆಯು ಅವುಗಳಲ್ಲಿ ಒಂದಾಗಿರಬಹುದೇ ಎಂದು ಬಾಖವಿ ಆಶ್ಚರ್ಯಪಟ್ಟನು. ಬೆಂಕಿಗಾಹುತಿಯಾಗುತ್ತಿದ್ದ ಕಸದ ರಾಶಿಯನ್ನು ದಿಟ್ಟಿಸಿ ನೋಡಿದಾಗ ಪುಸ್ತಕವೊಂದನ್ನು ಕಂಡು ಕೈಗೆತ್ತಿಕೊಂಡನು. ಅದು ಅಳಿದು ಹೋದ ಅರ್ವಿ ಭಾಷೆಯಲ್ಲಿ ಬರೆದ ಪುಸ್ತಕ ಎಂಬುದನ್ನು ಆತ ಗುರುತಿಸಿದ. ಸದ್ಯ ದಕ್ಷಿಣ ಭಾರತದ ಕೇರಳದಲ್ಲಿರುವ ಜಾಮಿಯಾ ಅನ್ವರಿಯ್ಯಾ ಅರಬಿ ಕಾಲೇಜಿನಲ್ಲಿ ಪ್ರಾಧ್ಯಾಪಕನಾಗಿರುವ ಬಾಖವಿ 4ನೇ ಹರೆಯದಿಂದಲೇ ಅರ್ವಿ ಭಾಷೆ ಕಲಿತವನು. ಇಂದು ಅರಬಿ ಭಾಷೆ ಬಲ್ಲ ಮುಸ್ಲಿಮರೆಡೆಯಲ್ಲಿಯೇ ಅರ್ವಿ ಭಾಷೆಯ ಪರಿಚಯವಿರುವವರು ಬಹಳ ವಿರಳವೆನ್ನಬಹುದು.

ಮಹ್ಮೂದ್ ಕೂರಿಯಾ

ಮಧ್ಯಕಾಲದಲ್ಲಿ ಯಾತ್ರೆ ಮತ್ತು ವ್ಯಾಪಾರಗಳು ಭಾಷೆಗಳ ಮಿಲನಕ್ಕೆ ಹೇತುವಾದವು. ಪ್ರಸ್ತುತ ಯಾತ್ರೆ ಮತ್ತು ವ್ಯಾಪಾರಗಳಿಂದಾಗಿ ಕ್ರಿ. ಶ. 8ನೇ ಶತಮಾನದಲ್ಲಿ ಅರ್ವಿ ಭಾಷೆಯು ಹುಟ್ಟಿಕೊಂಡಿತು. ಕ್ರಿಸ್ತಶಕ 12ನೇ ಶತಮಾನದಲ್ಲಿ ಮುಸ್ಲಿಂ ಅರಬ್ ವ್ಯಾಪಾರಿಗಳು ಅಧಿಕ ಸಂಖ್ಯೆಯಲ್ಲಿ ವ್ಯಾಪಾರ ನಿಮಿತ್ತ ತಮಿಳುನಾಡಿಗೆ ಭೇಟಿ ನೀಡಿದರು. ಇದರ ಪರಿಣಾಮವಾಗಿ ಅರ್ವಿ ಭಾಷೆಯು ಈ ವೇಳೆಗೆ ಹೆಚ್ಚು ಪ್ರಾಮುಖ್ಯತೆಯನ್ನು ಪಡೆಯಿತು. ವಿವಿಧ ತೆರನಾದ ವಸ್ತ್ರಗಳು, ಮಿರ್ರಿನಂತಹ ಜವಳಿ ಮತ್ತು ಸುಗಂಧದ ದ್ರವ್ಯಗಳೊಂದಿಗೆ ದಕ್ಷಿಣ ಭಾರತ ತಲುಪಿದ ಅರಬ್ ವ್ಯಾಪಾರಿಗಳು, ಭಾಷಾ ವೈವಿಧ್ಯತೆಯನ್ನು ಮರೆತು, ಧಾರ್ಮಿಕ ನಂಬಿಕೆಯಲ್ಲಿರುವ ಸಮಾನತೆಯನ್ನು ಪರಿಗಣಿಸಿ ಸ್ಥಳೀಯರಾದ ತಮಿಳರೊಂದಿಗೆ ಸಂಬಂಧ ಬೆಸೆಯಲು ಉತ್ಸುಕರಾಗಿದ್ದರು.ವ್ಯಾಪಾರಿಗಳ ಅರಬಿ ಮತ್ತು ಸ್ಥಳೀಯರ ತಮಿಳು ಭಾಷೆಗಳು ಬೆರೆತು ಅರಬು ತಮಿಳ್ ಅಥವಾ ಅರ್ವಿ ಭಾಷೆಯು ರೂಪುಗೊಂಡಿತು. ಅರಬಿಕ್ ವರ್ಣಮಾಲೆಯ ಅಕ್ಷರಗಳನ್ನು ಎರವಲು ಪಡೆದ ಅರ್ವಿ ಭಾಷೆಯ ಪದಗಳ ಅರ್ಥ ಸ್ಥಳೀಯ ತಮಿಳು ಭಾಷೆಯದ್ದೇ ಆಗಿದೆ. ” ಅರಬಿ ಲಿಪಿಯನ್ನು ಎರವಲು ಪಡೆದ ಹಲವಾರು ಭಾಷೆಗಳಲ್ಲಿ ಒಂದಾಗಿದೆ ಅರಬಿಕ್ ತಮಿಳು. ಅರಬಿಗಳು ಮತ್ತು ಪರ್ಷಿಯನ್ನರು, ಯುರೋಪಿನವರಿಗಿಂತಲೂ ಮುಂಚಿತವಾಗಿ ಹಿಂದೂ ಮಹಾ ಸಾಗರ ಮಾರ್ಗವಾಗಿ ಭಾರತೀಯರೊಂದಿಗೆ ವ್ಯಾಪಾರದಲ್ಲಿ ಸಂಪರ್ಕ ಬೆಳೆಸಿದ್ದರು. ಈ ಯಾತ್ರೆ ಮತ್ತು ವ್ಯಾಪಾರಗಳು ಇಂತಹ ಹಲವಾರು ಭಾಷೆಗಳ ಉಗಮಕ್ಕೆ ಕಾರಣವಾಯಿತು.” ಎಂದು ‘1750ರ ಪೂರ್ವದ ಹಿಂದೂ ಮಹಾಸಾಗರದ ಇತಿಹಾಸ ‘ ಎಂಬ ವಿಷಯದಲ್ಲಿ ಎಡಿನ್ಬರ್ಗ್ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿರುವ ಮಹ್ಮೂದ್ ಕೂರಿಯಾ ಅಭಿಪ್ರಾಯಪಡುತ್ತಾರೆ.

ತಮಿಳು ಭಾಷೆಯಲ್ಲಿ ಮಾತನಾಡುವ ಪಕ್ಕದ ಶ್ರೀಲಂಕಾಗೂ ಅರ್ವಿ ಭಾಷೆ ವ್ಯಾಪಿಸಿತು. 18ನೇ ಶತಮಾನದಲ್ಲಿ ವಸಾಹತುಶಾಹಿಗಳ ಆಗಮನ ಮತ್ತು ಅರ್ವಿ ಭಾಷೆ ಬಳಕೆದಾರರ ಸಂಖ್ಯೆಯಲ್ಲಿ ಗಣನೀಯವಾದ ಇಳಿಕೆಯುಂಟಾದ ಕಾರಣದಿಂದ ಅಳಿವಿನಂಚಿನಲ್ಲಿದ್ದ ಅರ್ವಿ ಭಾಷೆಯು, ಅಚ್ಚರಿಯ ಬೆಳವಣಿಗೆಯನ್ನು ಕಂಡು ಪುನರುಜ್ಜೀವನಗೊಂಡಿದೆ. ಈ ಬೆಳವಣಿಗೆಯಲ್ಲಿ ವಿಶ್ವವಿದ್ಯಾಲಯಗಳಲ್ಲಿ ಅರ್ವಿ ಭಾಷೆಯ ಅಧ್ಯಯನದಲ್ಲಿ ತೊಡಗಿರುವ ವಿದ್ಯಾರ್ಥಿಗಳ ಮತ್ತು ಕರಾವಳಿ ಪ್ರದೇಶದ ಮುಸ್ಲಿಂ ಮಹಿಳೆಯರ ಕೊಡುಗೆ ಅಪಾರವಾದುದು. ಇಲ್ಲಿನ ಮುಸ್ಲಿಂ ಮಹಿಳೆಯರು ಅರ್ವಿ ಭಾಷೆಯ ಹಾಡುಗಳನ್ನು ಹಾಡುವುದರಲ್ಲಿ ಹೆಮ್ಮೆಪಟ್ಟುಕೊಳ್ಳುವವರಾಗಿದ್ದಾರೆ.” ಬಹುತೇಕರಿಗೆ ಈ ಭಾಷೆಯ ಮಹತ್ವ ತಿಳಿದಿಲ್ಲ. ತನ್ನ ತಾಯ್ನಾಡಾದ ಕಾಯಲ್ಪಟ್ಟಣ ನಿವಾಸಿಗಳು ತಮ್ಮ ಬೇರುಗಳನ್ನು ಕೂಡಿಸುವ ಪವಿತ್ರ ಕೊಂಡಿಯಾಗಿ ಅರ್ವಿ ಭಾಷೆಯನ್ನು ಪರಿಗಣಿಸುತ್ತಾರೆ.” ಎಂದು ಬಾಖವಿ ತಿಳಿಸಿದನು.

ಅರ್ವಿ ಭಾಷೆಯ ಹುಟ್ಟು ಮತ್ತು ಬೆಳವಣಿಗೆಗಳ ಬಗ್ಗೆ ಹೆಚ್ಚಾಗಿ ತಿಳಿಯಲು ದಕ್ಷಿಣ ಭಾರತದಲ್ಲಿ ಮುಸ್ಲಿಮರು ಅಧಿಕ ಸಂಖ್ಯೆಯಲ್ಲಿರುವ ಕರಾವಳಿ ಪ್ರದೇಶಗಳಿಗೆ ತೆರಳಬೇಕಾಗುತ್ತದೆ. ತಮಿಳುನಾಡಿನ ರಾಜಧಾನಿ ಚೆನ್ನೈಯಿಂದ ಸುಮಾರು 530 ಕಿ. ಮೀ ದೂರದ ಕೀಳಕ್ಕರೆ ಇಂತಹ ಗ್ರಾಮಗಳಲ್ಲೊಂದಾಗಿದೆ. ಬಂಗಾಳಕೊಲ್ಲಿಯ ದಡದಲ್ಲಿರುವ ಕೀಳಕೆರೆಯಲ್ಲಿ 38,000 ದಷ್ಟು ಜನರಿದ್ದಾರೆ. ಕ್ರಿ. ಶ 628ರಲ್ಲಿ ನಿರ್ಮಿಸಲಾದ ಪುರಾತನ ಜುಮಾಪಳ್ಳಿ ಮಸೀದಿಯೂ ಇಲ್ಲಿದೆ. ಈ ಮಸೀದಿಯನ್ನು ನಿರ್ಮಿಸಿದವರು ಯಮನ್ ಮೂಲದ ಅರಬ್ ವ್ಯಾಪಾರಿಗಳೆಂದು ಹೇಳಲಾಗುತ್ತದೆ. ಮಸೀದಿಯ ಹಸಿರು ಮಿನಾರಗಳ ಮತ್ತು ಅಲಂಕೃತ ಕಂಬಗಳ ಪಕ್ಕದಲ್ಲಿ ಇಬ್ಬರು ಸೂಫಿ ಸಂತರ ಗೋರಿಗಳೂ ಇವೆ. ಮಸೀದಿಯ ಕಂಬಗಳಲ್ಲಿ ಅರಬಿ ಹಾಗೂ ತಮಿಳು ಭಾಷೆಗಳಲ್ಲಿರುವ ಕೆತ್ತನೆಗಳನ್ನು ಕಾಣಬಹುದು. ಕೆಲ ಇತಿಹಾಸ ತಜ್ಞರ ಪ್ರಕಾರ, ನಾವಿಕರ ಮತ್ತು ಸ್ಥಳೀಯ ತಮಿಳರೆಡೆಯಲ್ಲಿನ ವೈವಾಹಿಕ ಸಂಬಂಧಗಳಿಂದಾಗಿ ಅರ್ವಿ ಭಾಷೆ 17 ನೇ ಶತಮಾನದ ಹೊತ್ತಿಗೆ ಉತ್ತುಂಗತೆಯನ್ನು ತಲುಪಿತು. ಈ ವೈವಾಹಿಕ ಸಂಬಂಧಗಳು ವ್ಯಾಪಾರ ವಹಿವಾಟುಗಳಿಗೆ ಸಹಕಾರಿಯಾದವು. ಕ್ಲಿಷ್ಟಕರವಾದ ತಮಿಳು ಭಾಷೆಯನ್ನು ತಮ್ಮ ಅರಬಿ ಭಾಷೆಯ ಲಿಪಿಯನ್ನುಪಯೋಗಿಸಿ ಸುಲಭವಾಗಿ ಕಲಿಯಲು ಅರಬಿಗಳಿಗೆ ಸಾಧ್ಯವಾಯಿತು.
” ತಮಿಳು ಭಾಷೆಯಲ್ಲಿ 247 ಅಕ್ಷರಗಳಿದ್ದವು. ಆದರೆ ಅರ್ವಿ ಭಾಷೆಯ ಅಕ್ಷರಗಳ ಸಂಖ್ಯೆ ಕೇವಲ 40 ಮಾತ್ರ. ಆದ್ದರಿಂದಲೇ ಕಡಲು ಮಾರ್ಗ ವ್ಯಾಪಾರಕ್ಕೆ ಬಂದ ಅರಬಿಗಳಿಗೆ ಇಲ್ಲಿ ಬದುಕು ಕಟ್ಟಿಕೊಳ್ಳುವುದು ಬಹಳ ಸುಲಭವಾಗಿತ್ತು. ಉತ್ತರ ಭಾರತಕ್ಕಿಂತ ಭಿನ್ನವಾಗಿ ಇಲ್ಲಿ ಸಹಿಷ್ಣುತೆಯ ವಾತಾವರಣವಿತ್ತು. ವ್ಯಾಪಾರಗಳು ಆರ್ಥಿಕ ಸಬಲೀಕರಣಕ್ಕೆ ಹೇತುವಾಗಬಹುದೆಂದು ಮನಗಂಡ ಇಲ್ಲಿನ ಜನರು ವ್ಯಾಪಾರಿಗಳನ್ನು ಯಾವುದೇ ಸಂಕೋಚವಿಲ್ಲದೆ ಬರಮಾಡಿಕೊಂಡರು. ಕೆಲವೊಂದು ಮಾಹಿತಿಗಳನ್ನು ಬ್ರಿಟಿಷರಿಂದ ರಹಸ್ಯವಾಗಿಡಲು ಅರ್ವಿ ಭಾಷೆಯನ್ನು ಬಳಸುತ್ತಿದ್ದರು ಎಂಬ ವರದಿಗಳಿವೆ.” ಎಂದು ಚೆನ್ನೈ ಕಾಲೇಜಿನಲ್ಲಿ ಅರ್ವಿ ಭಾಷಾ ಅಧ್ಯಾಪಕರಾದ ಕೆ. ಎಂ.ಎ ಅಹ್ಮದ್ ಝುಬೈರ್ ತಿಳಿಸಿದರು.


ಅರಬಿ ತಮಿಳಿಗೆ ಹೊರತಾಗಿ ನೆರೆ ರಾಜ್ಯ ಕೇರಳದಲ್ಲಿ ಮಲಯಾಳಂ ನೊಂದಿಗೆ ಅರಬಿ ಬೆರತು ಅರಬಿ ಮಲಯಾಳಂ ಅಥವಾ ಮಾಪ್ಪಿಳ ಮಲಯಾಳಂ ಎಂಬ ಉಪಭಾಷೆ ರೂಪುಗೊಂಡಿದೆ. ಭಾರತದ ಇನ್ನಿತರ ಪ್ರಾದೇಶಿಕ ಭಾಷೆಗಳಾದ ಗುಜರಾತಿ, ಬೆಂಗಾಳಿ, ಪಂಜಾಬಿ ಮತ್ತು ಸಿಂಧಿ ಭಾಷೆಗಳಲ್ಲೂ ಅರಬಿ ಲಿಪಿಯ ಈ ಸಮ್ಮಿಶ್ರ ಭಾಷೆಯು ಹುಟ್ಟಿಕೊಂಡಿದೆ. ಪ್ರತಿಯೊಂದು ಭಾಷೆಗಳಿಗೂ ತನ್ನದೇ ಆದ ವೈಶಿಷ್ಟತೆಗಳಿವೆ. ಆದರೆ ಉಳಿದ ಭಾಷೆಗಳಿಗಿಂತ ವಿಭಿನ್ನವಾಗಿ ಅರ್ವಿಯು ಅರಬರ ನಿರ್ಗಮನದ ಬಳಿಕವೂ ಪ್ರಗತಿ ಕಂಡಿತು. ವಿದೇಶಗಳಲ್ಲಿರುವ ತಮಿಳು ಭಾಷಿಕರ ಜನಸಂಖ್ಯೆ ಇದಕ್ಕೆ ಪ್ರಧಾನ ಕಾರಣವೆನ್ನುತ್ತಾರೆ ಝಬೈರ್. ಚರಿತ್ರೆ ದಾಖಲೆಗಳ ಪ್ರಕಾರ, ಅರ್ವಿಯು ಶ್ರೀಲಂಕಾ, ಸುಮಾತ್ರ, ಮಲೇಶಿಯಾ, ಸಿಂಗಾಪುರ ಮತ್ತು ಪೂರ್ವ ಹಾಗೂ ದಕ್ಷಿಣ ಆಫ್ರಿಕಾಗಳಿಗೂ ವ್ಯಾಪಿಸಿದೆ.

ಸಾಹಿತ್ಯ ಮತ್ತು ಮೌಖಿಕ ಸಂಪ್ರದಾಯದ ಶ್ರೀಮಂತಿಕೆಯ ಕಾರಣದಿಂದ ಅರಬಿಕ್ ತಮಿಳು ಮತ್ತು ಅರಬಿಕ್ ಮಲೆಯಾಳಂ ಬಹಳ ಜನಪ್ರಿಯವಾದವು. ಈತನಕ ಭಾರತ ಮತ್ತು ಶ್ರೀಲಂಕಾಗಳಿಂದ 2000 ದಷ್ಟು ಅರಬಿಕ್ ತಮಿಳು ಪುಸ್ತಕಗಳನ್ನು ಪತ್ತೆಹಚ್ಚಲಾಗಿದೆ. ಕೇರಳದ ಸಂಶೋಧಕರು ಅರಬಿ ಮಲಯಾಳಂ ಹಸ್ತಪ್ರತಿಗಳ ಸಂರಕ್ಷಣೆಯ ಪಣತೊಟ್ಟು ಈ ದಿಕ್ಕಿನಲ್ಲಿ ಕಾರ್ಯಾಚರಿಸುತ್ತಿದ್ದಾರೆ.
ಈ ಪುರಾತನ ಹಸ್ತ ಪ್ರತಿಗಳ ರಕ್ಷಣೆಗೂ ಮುಂಚಿತವಾಗಿ ಅವುಗಳನ್ನು ಹುಡುಕಬೇಕಾದ ಜರೂರತ್ತಿದೆ. ಇದು ಬಹಳ ಶ್ರಮದಾಯಕವಾದ ಕೆಲಸ. ಭಾರತ ಮತ್ತು ಏಷ್ಯಾದ ಇನ್ನಿತರ ದೇಶಗಳಿಂದ ಒಟ್ಟು 300 ಕ್ಕೂ ಅಧಿಕ ಅರ್ವಿ ಹಾಗೂ ಅರಬಿಕ್ ಮಲಯಾಳಂನ ಗ್ರಂಥಗಳು ಬಾಖವಿಯ ಸುಪರ್ದಿಯಲ್ಲಿದೆ. ” ಈ ಗ್ರಂಥಗಳು ನಾನು ಬತ್ತಿ ಹೋದ ಬಾವಿಗಳಿಂದ, ಗೋರಿಗಳ ಪಕ್ಕದಿಂದ ಮತ್ತು ಹಳೆಯ ಜನವಾಸವಿಲ್ಲದ ಮನೆಗಳ ಅಟ್ಟಗಳಿಂದಲೂ ಹುಡುಕಿ ಸಂಗ್ರಹಿಸಿದವುಗಳಾಗಿವೆ. ಇನ್ನು ಖಾಸಗಿ ಒಡೆತನದ ಕೆಲವು ದಾಖಲೆಗಳನ್ನು ಡಿಜಿಟಲೀಕರಿಸಿ ಮಾಪಿಳ ಹೆರಿಟೇಜ್ ಲೈಬ್ರರಿಯ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಲಾಗಿದೆ.” ಎಂದು ಬಾಖವಿ ತಿಳಿಸಿದನು. ವಸಾಹತುಶಾಹಿಗಳ ಆಡಳಿತಕಾಲದಲ್ಲಿ ಕೆಲವೊಂದು ಪ್ರತಿಗಳು ಲಂಡನಿನ ಬ್ರಿಟೀಷ್ ಲೈಬ್ರರಿಯನ್ನು ಸೇರಿಕೊಂಡಿವೆ. ಅರಬಿಕ್ ಮಲಯಾಳಂ ಪರಿಜ್ಞಾನವುಳ್ಳ ಮಹ್ಮೂದ್ ಕೂರಿಯಾ ಕಳೆದ 4 ವರ್ಷಗಳಿಂದ ಈ ಪುಸ್ತಕಗಳನ್ನು ಪಟ್ಟಿ ಮಾಡಲು ಬ್ರಿಟೀಷ್ ಲೈಬ್ರರಿಗೆ ಸಹಾಯ ಮಾಡುತ್ತಿದ್ದಾರೆ. ” ಇತಿಹಾಸ, ಧರ್ಮ, ವೈದ್ಯ ಮತ್ತು ಸಂಸ್ಕೃತಿ ಹೀಗೆ ಹತ್ತು ಹಲವಾರು ವಿಚಾರಗಳನ್ನು ಒಳಗೊಂಡ ಗ್ರಂಥಗಳನ್ನು ಕಂಡು ನಾನು ಚಕಿತನಾದೆನು. ಇವುಗಳ ಪೈಕಿ ಬಹುತೇಕ ಗ್ರಂಥಗಳು ಮಹಿಳೆಯರು ಬರೆದವುಗಳಾಗಿವೆ.” ಎಂದು ಕೂರಿಯಾ ತಿಳಿಸಿದರು. ” ಶಿಶು ಪಾಲನೆ, ಲೈಂಗಿಕತೆ, ಗೃಹ ವಿಚಾರಗಳು, ಆಹಾರ ಪದ್ಧತಿಗಳು ಮತ್ತು ಸಂಸ್ಕೃತಿ ವಿಚಾರಗಳನ್ನು ಚರ್ಚೆ ಮಾಡುವ ಈ ಗ್ರಂಥಗಳು ಇತರ ಮಹಿಳೆಯರಿಗಾಗಿ ಮಹಿಳೆಯರೇ ಬರೆದವುಗಳಾಗಿವೆ. ಈ ಗ್ರಂಥಗಳ ಅಂದಿನ ಸಮಾಜದಲ್ಲಿ ಸ್ತ್ರೀಯರಿಗಿದ್ದ ಸ್ಥಾನಮಾನ, ಗೌರವ ಮತ್ತು ಪ್ರಾಧಾನ್ಯತೆಯನ್ನು ಸೂಚಿಸುತ್ತದೆ.” ಎಂದು ದಕ್ಷಿಣ ಏಷ್ಯಾದ ಧರ್ಮಗಳ ಕುರಿತು ಗ್ಲಾಸ್ಗೋವಿಶ್ವವಿದ್ಯಾಲಯದಲ್ಲಿ ಆಧ್ಯಾಪನ ನಡೆಸುವ ಓಫಿರಾ ಗಾಮ್ಲೆಲ್ ಅಭಿಪ್ರಾಯಪಟ್ಟರು.


ಈ ಉಪಭಾಷೆಗಳು ದಿನನಿತ್ಯ ಬಳಕೆಯಲ್ಲಿ ಇಲ್ಲದಿದ್ದರೂ ಗ್ರಂಥಗಳು ಮತ್ತು ಸಂಗೀತಗಳು ಇವುಗಳನ್ನು ಇಂದಿಗೂ ಜೀವಂತವಾಗಿಟ್ಟಿವೆ. ತಮ್ಮ ಪೂರ್ವಜರ ಇತಿಹಾಸವನ್ನು ಮೆಲುಕು ಹಾಕುತ್ತಾ ಕಾಯಲ್ ಪಟ್ಟಣ ನಿವಾಸಿಗಳು ಅರ್ವಿ ಹಾಗೂ ಅರಬಿ ಮಲಯಾಳಂನಲ್ಲಿ ವಿರಚಿತವಾದ ಲಾವಣಿಗಳನ್ನು ಹಾಡುತ್ತಿದ್ದಾರೆ. ” ಊರಿನ ಮಹಿಳೆಯರು ಒಂದುಗೂಡಿ ಲಾವಣಿ ಹಾಡುವ ಸಂಪ್ರದಾಯ ಇಂದಿಗೂ ಜಾರಿಯಲ್ಲಿದೆ. ಅವುಗಳು ಮಹಿಳೆಯರ ಕ್ಲಬ್ ಗಳನ್ನು ಹೋಲುತ್ತವೆ.” ಎಂದು ಹೇಳುತ್ತಾ ನಸುನಕ್ಕಳು ಖಿಜ್ರ್ ಮಗ್ಫಿರಾ. ” ಪ್ರತಿಯೊಂದು ಮನೆಯಲ್ಲೂ ಅರ್ವಿ ಭಾಷೆಯನ್ನು ಚೆನ್ನಾಗಿ ಬಲ್ಲ ಒಬ್ಬನಾದರೂ ಇರುವನು. ಹಬ್ಬ ಹರಿದಿನಗಳಂದು, ವಿಶೇಷವಾಗಿ ಪ್ರವಾದಿ ಪೈಗಂಬರರ ಜನ್ಮ ದಿನಾಚರಣೆಯನ್ನು ಕೊಂಡಾಡುವ ರಬೀಉಲ್ ಅವ್ವಲ್ ತಿಂಗಳಲ್ಲಿ ಊರವರೆಲ್ಲರೂ ಒಟ್ಟು ಸೇರಿ ಅರ್ವಿ ಭಾಷೆಯ ಹಾಡುಗಳನ್ನು ಹಾಡುವ ವಾಡಿಕೆಯಿದೆ. ಹಾಡುವಾಗ ಅವರು ಭಾವಪರವಶರಾಗುವುದನ್ನು ನೋಡಿದರೆ ಈ ಭಾಷೆಯೊಂದಿಗಿನ ಅವರ ಸಂಬಂಧವನ್ನು ಮನದಟ್ಟು ಮಾಡಿಕೊಳ್ಳಬಹುದು.” ಎನ್ನುತ್ತಾಳೆ ಖಿಜ್ರ್. ಕಾಯಲ್ ಪಟ್ಟಣದ ಡಿಗ್ರಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ 18 ರ ಹರೆಯದ ಖಿಜ್ರ್ ಮಗ್ಫಿರಾ ಹಿರಿಯವರಿಂದ ಪ್ರೇರಿತಳಾಗಿ ಅರ್ವಿಭಾಷೆ ಕಲಿಕೆಗೆ ಶುರುಹಚ್ಚಿದ್ದಾಳೆ. ತಮಿಳು ಭಾಷೆ ಚೆನ್ನಾಗಿ ಬಲ್ಲ ಆಕೆ, ತನ್ನ ನಾಲ್ಕನೇ ವಯಸ್ಸಿನಲ್ಲಿಯೇ ಅರಬಿಯನ್ನು ಕಲಿಯಲು ಪ್ರಾರಂಭಿಸುವುದರಿಂದ ಅರ್ವಿ ಕಲಿಕೆಯು ಸುಲಭ ತುತ್ತಾಗಬಹುದು. ಕಾಯಲ್ ಪಟ್ಟಣದ ಕೆಲವು ಯುವಕರು ಮೊಬೈಲ್ ಗಳಲ್ಲಿ ಬಳಸಬಹುದಾದ ಅರ್ವಿ ಭಾಷೆಯ ಕೀಬೋರ್ಡ್ ತಯಾರಿಸುವ ಶ್ರಮದಲ್ಲಿ ತೊಡಗಿರುವರು.

” ಕಾಯಲ್ಪಟ್ಟಣದಲ್ಲಿ ಹೊಸ ತಲೆಮಾರಿನ ಮಕ್ಕಳನ್ನು ಅರ್ವಿಭಾಷೆಯ ಕಲಿಕೆಯನ್ನು ಪ್ರೋತ್ಸಾಹಿಸಲು ಹಣ ನೀಡುವವರಿದ್ದಾರೆ. ಇದು ಈ ಊರಿನ ಸಂಪ್ರದಾಯ.” ಎನ್ನುತ್ತಾರೆ ಮಗ್ಫಿರಾಳ ಸಂಬಂಧಿ ಖಿಜ್ರ್ ಫಾತಿಮಾ. ಇತ್ತೀಚೆಗೆ ಸುಂದರವಾದ ಕೈಬರಹವಿರುವ ಒಬ್ಬಾಕೆಗೆ ತಾನು 500 ರೂಪಾಯಿ ನೀಡಿದ್ದನ್ನು ಫಾತಿಮಾ ನೆನಪಿಸಿಕೊಂಡಳು. ಈ ಭಾಷೆಯ ಆಧ್ಯಾತ್ಮಿಕ ಮತ್ತು ಸಾಹಿತ್ಯ ಸೌಂದರ್ಯವನ್ನು ನಾವು ಮನಗಾಣಬೇಕಾಗಿದೆ ಎಂದು ಫಾತಿಮಾ ಅಭಿಪ್ರಾಯಪಟ್ಟಳು.

ಇಂಗ್ಲೀಷ್ ಮೂಲ : ಕಮಲಾ ತ್ಯಾಗರಾಜನ್
ಕನ್ನಡಕ್ಕೆ : ಆಶಿಕ್ ಅಲಿ ಕೈಕಂಬ

ಕೃಪೆ : ಬಿಬಿಸಿ

Leave a Reply

*