ಇದು ನಾವೆಲ್ಲ ಒಂದಲ್ಲ ಒಂದು ಸಲ ಕೇಳಿರುವ ಕಥೆಯೇ. ಅಥವ ಯಾವುದೋ ಗಳಿಗೆಯಲ್ಲಿ ಈ ಬಗೆಯ ಪಾತ್ರಗಳು ನಮ್ಮ ಬದುಕಿನಲ್ಲಿಯೇ ಮುಖಾಮುಖಿಯಾಗಿರಬಹುದು. ಆದರೆ, ಮಹಾನ್ ಲೇಖಕನೊಬ್ಬ ಕಾಗದದ ಮೇಲೆ ಅಕ್ಕರಗಳಲ್ಲಿ ಕೆತ್ತಿದ್ದೆ ಅದೊಂದು ಸಾರ್ವಕಾಲಿಕ ರೂಪಕವಾಗಿ ನಿಂತು ಬಿಡುತ್ತದೆ. ಅದೂ ಬರೆದವರು ಚಾರ್ಲ್ಸ್ ಡಿಕನ್ಸ್ ಎಂದಮೇಲೆ ಕೇಳಬೇಕೆ? ಈ ಹೋತದ ಗಡ್ಡದ ಆಸಾಮಿ, ‘ಆಲಿವರ್ ಟ್ವಿಸ್ಟ್’, ‘ಗ್ರೇಟ್ ಎಕ್ಸ್ಪೆಕ್ಟೇಶನ್ಸ್’, ‘ಹಾರ್ಡ್ ಟೈಮ್ಸ್’, ‘ಎ ಟೇಲ್ ಆಫ್ ಟು ಸಿಟೀಸ್’, ‘ಡೇವಿಡ್ ಕಾಪರ್ಫೀಲ್ಡ್’ – ಹೀಗೆ ಸೋಸಿ ಭಟ್ಟಿ ಇಳಿಸಿದ ಜೊನ್ನ ಜೇನನ್ನು ಲೋಕದ ಸಾಹಿತ್ಯ ಪ್ರಿಯರು ಸವಿಯುತ್ತಲೇ ಇದ್ದಾರೆ. ಈ ಮೊದಲೇ ಅಸ್ಪಷ್ಟವಾಗಿ ಅರಿತಿದ್ದ ಕಥೆಗಳು ಆತ ಕೈಗೆತ್ತಿಕೊಂಡು ಕೆತ್ತಿದ್ದೇ ಹೊಸ ಹೊಳಪು, ಹೊಸ ಅರ್ಥ, ಹೊಸ ಜೀವ ಪಡೆದವು.
‘ಅವರ್ ಮ್ಯೂಚುಅಲ್ ಫ್ರೆಂಡ್’ ಕೃತಿಯ ‘ರೈಡರ್ಹುಡ್’ ಪಾತ್ರವೂ ಅಷ್ಟೇ. ಈತನೊಬ್ಬ ಶುದ್ಧ ಸಿಡುಕ, ಮೈಗಳ್ಳ, ಜಗಳಗಂಟ, ದುಷ್ಟ, ಇವನ ಸಹವಾಸ ಸಾಕು ಎನ್ನಿಸುವಷ್ಟು ವಿಷಪೂರಿತ ವ್ಯಕ್ತಿತ್ವದವನು. ಆತ ನೌಕಾ ಪಯಣದಲ್ಲಿ ಇದ್ದಕ್ಕಿದ್ದಂತೆ ಥೇಮ್ಸ್ ನದಿಯೊಳಗೆ ಜಾರಿ ಬಿದ್ದಿದ್ದಾನೆ. ಯಾರೋ ಕರುಣಾಳುಗಳು ನೋಡಿ ಧಾವಂತದಲ್ಲಿ ಆತನನ್ನು ರಕ್ಷಿಸಿ ಕರೆ ತರುತ್ತಾರೆ. ಇನ್ನಾರೋ ವೈದ್ಯರನ್ನು ಕರೆ ತರಲು ಸೂಚಿಸುತ್ತಾರೆ. ರೈಡರ್ಹುಡ್ನ ಮಗಳಿಗೆ ಸುದ್ದಿ ಕಳಿಸುತ್ತಾರೆ. ಸಾವಿನ ಮನೆಯ ಬಾಗಿಲು ತಟ್ಟುತ್ತಿರುವ ಆತನನ್ನು ಹೇಗಾದರೂ ಮಾಡಿ ಬದುಕಿಸಲು ಎಲ್ಲರೂ ಪಣತೊಟ್ಟು ಕಾರ್ಯೋನ್ಮುಖರಾಗುತ್ತಾರೆ. ತಮ್ಮ ಸಂಕಟ, ಮರಣದ ಕ್ಷಣವನ್ನು ಎದುರಿಸುವಾಗ ಭರವಸೆಯೇ ಬೆಳಕು! ಆ ಕರಾಳ ಕ್ಷಣವನ್ನು ದಾಟಿ ಮನುಷ್ಯ ಮರಳಿ ಅಂತಃಸತ್ವ ಪಡೆದರೆ ಮತ್ತೆ ಹೊಸ ಬದುಕು.
ಮರಳಿ ಜೀವಚೈತನ್ಯವನ್ನು ಪಡೆಯುವವರು ಸಂಪೂರ್ಣ ಬದಲಾಗಿ, ಉನ್ನತ ನೈತಿಕ ಬದುಕನ್ನು ನಡೆಸುವರು ಎನ್ನುವುದು ಸಾಮಾನ್ಯ ನಂಬಿಕೆ. ‘ಮನುಷ್ಯ ಮೊದಲಿನ ಹಾಗಿಲ್ಲ, ಬದಲಾಗಿದ್ದಾನೆ’, ಎನ್ನುವಾಗ ಸಾವಿನಂತಹ ತಲ್ಲಣ- ಕಾಳಕತ್ತಲೆಯನ್ನು ಹಾದು ಬಂದಿದ್ದಾನೆ ಎಂದು ಊಹಿಸಬಹುದು. ಸಂಶಯ ಪಿಶಾಚಿ, ಪೀಡಕ, ವಾಕರಿಕೆ ಬರಿಸುವಷ್ಟು ದುರುಳನಾದ ರೈಡರ್ನೆಂದರೆ ಅಲ್ಲಿರುವ ಯಾರಿಗೂ ಕರುಣೆ ಏನೂ ಇಲ್ಲ. ಆದರೆ, ಆತನಿಗೂ ಜೀವಿಸುವ ಹಕ್ಕಿದೆ. ಆತನೊಳಗಿನ ಆತ್ಮಕ್ಕೂ ಹೊಳಪಿದೆ ಎಂಬ ನಂಬಿಕೆ ಇರುವುದರಿಂದ ರೈಡರ್ಹುಡ್ಗೂ ಅಂಥ ಮರುಚೈತನ್ಯ ಒದಗಿ ಬರಲಿ ಎಂದು ಎಲ್ಲರೂ ಮನಸ್ಸು- ದೇಹದೊಂದಿಗೆ ತೊಡಗಿಕೊಂಡಿದ್ದಾರೆ. ಪ್ರಜ್ಞೆ ಕಳೆದುಕೊಂಡು ಶವದಂತೆ ಬಿದ್ದ ಆತನ ಮೇಲೆ, ‘ಅಮೃತವಾಹಿನಿಯೊಂದು ಹರಿಯುತಿದೆ ಮಾನವನ ಎದೆಯಿಂದಲೆದೆಗೆ ಸತತ’ ಎಂಬಂತೆ ಮಾನವ ಕರುಣೆಯನ್ನೇ ಹರಿಸುತ್ತಿದ್ದಾರೆ.
‘ಕಣ್ರೆಪ್ಪೆ ಅಲುಗಿದವೆ, ಕ್ಷೀಣ ಉಸಿರಾದರೂ ಕೇಳುತಿದೆಯೆ? ಎಂದು ವೈದ್ಯ ನೋಡುತ್ತಿದ್ದಾನೆ. ಆತನನ್ನು ಮತ್ತೆ ಬದುಕಿಸಲು ಇನ್ನಿಲ್ಲದ ಪ್ರಯತ್ನ ಪಡುತ್ತಿದ್ದಾನೆ. ಆದರೂ, ಇಲ್ಲ, ಅಯ್ಯೋ! ಜೀವದ ಸುಳಿವೇ ಇಲ್ಲ. ಅರೆ! ಅಗೋ! ಒಂದು ಮಿಂಚು ಕಂಡಿತು. ಆತ ಮರಳಿ ಈ ಲೋಕಕ್ಕೆ ಬರಲು ಶಿವ ಸಾಹಸ ಪಡುತ್ತಿದ್ದಾನೆ. ಅಷ್ಟರಲ್ಲಿಯೇ ಧಾವಂತದಲ್ಲಿ ರೈಡರ್ಹುಡ್ನ ಮಗಳೂ ಬಂದಿಳಿದಳು. ಕಣ್ಣೀರು ಒರೆಸಿಕೊಳ್ಳುತ್ತ ಹೆಂಗಸಿಗೆ ಸಹಜವಾದ ಸಹಾಯಹಸ್ತ ಚಾಚುತ್ತಿದ್ದಾಳೆ. ಅಪ್ಪನೊಂದಿಗಿನ ಆಕೆಯ ಸಂಬಂಧ ಹಾರ್ದಿಕವಾಗಿಯೇನೂ ಇಲ್ಲ. ಸಹಾನುಭೂತಿ, ಕರುಣೆಗಳ ಅಪೇಕ್ಷೆಯಲ್ಲಿ ನಿಷ್ಪ್ರಯೋಜಕ ವಸ್ತುವಿನಂತೆ ಬಿದ್ದ ತಂದೆಯನ್ನು ನೋಡುವುದು ಆಕೆಗೆ ಹಿತಕರವಾಗಿಯೇ ಕಾಣುತ್ತಿದೆ. ಈ ಜೀವನ್ಮರಣದ ಹೋರಾಟ ಅಪ್ಪನಲ್ಲಿ ಹೊಸ ಕಸುವು ತುಂಬಿ ಆತನ ಆತ್ಮ ಪರಿಶುದ್ಧವಾಗಲಿ ಎಂದು ಆಶಿಸುತ್ತಾಳೆ.

ವೈದ್ಯರ ಪ್ರಯತ್ನ, ಅಲ್ಲಿ ನೆರೆದವರ ನಿರಪೇಕ್ಷಿತ ಕಾರುಣ್ಯ, ಹಾರೈಕೆಗಳು ಕೈಗೂಡಿದವೋ ಎಂಬಂತೆ ರೈಡರ್ಹುಡ್ ಮರಣದ ಕಲ್ಲು ಹಾಸಿಗೆಯಿಂದ ತುಸುತುಸುವೇ ಕದಲುತ್ತ, ಜೀವ ಪಡೆಯುತ್ತ ಬದುಕಿನ ಸುಗಂಧದತ್ತ ಮರಳ ತೊಡಗುತ್ತಾನೆ. ಓಹ್! ಬಡಪಾಯಿ! ಬದುಕಿಕೊಂಡ! ಎಂದು ವೈದ್ಯ ಘೋಷಿಸುತ್ತಾನೆ!
ಅಪ್ರಜ್ಞೆಯ ಸಾವಿನಿಂದ ಪ್ರಜ್ಞೆ ಮರಳಿ ಪಡೆವ ರೈಡರ್ಹುಡ್, ಕಣ್ತೆರೆದು ಸುತ್ತ ನೋಡುತ್ತಾನೆ. ಮತ್ತೆ ಕಣ್ಮುಚ್ಚಿ ಮಗಳ ಕೈಗಳಿಗೆ ಒರಗುತ್ತಾನೆ. ಆತನಿಗೆ ಸಂಪೂರ್ಣ ಎಚ್ಚರಾಗಿ ಸುಧಾರಿಸಿಕೊಳ್ಳಲೆಂದು ಬಯಸುತ್ತಾರೆ. ಮಗಳು ಮಂಚದ ಮೇಲೆ ಒರಗಿಸಲು ಆಸರೆಯಾಗುತ್ತಾಳೆ.
ನಿಜವಾದ ದುರಂತ ಆರಂಭವಾಗುವುದು ಇಲ್ಲಿಂದಲೇ. ಅಲ್ಲಿ ನೆರೆದಿದ್ದವರ ಮನಸ್ಸು ಮತ್ತು ಕಣ್ಣಿನಲ್ಲಿ ಮನೆ ಮಾಡಿದ್ದ ಭವ್ಯ ಭರವಸೆ ಭ್ರಮೆಯಂತೆ ಕರಗತೊಡಗುತ್ತದೆ. ವೈದ್ಯರು, ‘ಏನು ರೈಡ್ಹುಡ್ ಈಗ ಹೇಗಿದ್ದೀಯ?’ ಎಂದು ಕಾಳಜಿಪೂರ್ವಕವಾಗಿ ಕೇಳಿದಾಗ, ಗುಣಮುಖನಾಗತೊಡಗಿದ್ದ ರೈಡ್ಹುಡ್, ‘ಹೇಳಿಕೊಳ್ಳೋ ಅಂಥದ್ದೇನೂ ಇಲ್ಲ!’ ಎಂದು ಸಿಡುಕುತ್ತಾನೆ.
ಅಂದರೆ, ಆತ ಮರಳಿ ಹಳೆಯ ತನ್ನ ದುಷ್ಟ ಸ್ವಭಾವದ ಬದುಕಿಗೆ ಮರಳಿದ್ದಾನೆ!
ಎಲ್ಲವನ್ನೂ ನೆನಪಿಸಿಕೊಂಡವನಂತೆ, ‘ನನ್ನ ತುಪ್ಪಳದ ಟೋಪಿ ಎಲ್ಲಿ?’ ಎಂದು ಕೇಳುತ್ತಾನೆ.
’ನದಿಯಲ್ಲಿ ಮುಳುಗಿ ಹೋಯಿತು!’ ಯಾರೋ ಉತ್ತರಿಸುತ್ತಾರೆ.
‘ಅದನ್ನು ಉಳಿಸಿಕೊಳ್ಳೋ ಅಂತಹ ಯಾವ ಪ್ರಾಮಾಣಿಕನೂ ಅಲ್ಲಿರಲಿಲ್ಲ ಅಂತಾಯ್ತು!” ಎಂದು ಕುಹಕ ನುಡಿಯುತ್ತಾನೆ. ನಡುಗುವ ಕಾಲು- ಅಸ್ಥಿರ ದೇಹ ಮಗಳ ಮೇಲೆ ವಾಲಿದೆ.
ಸಾವಿನ ರಿಂಗಣದಿಂದ ಪಾರಾಗಿ ಬಂದ ಉಮೇದಿನಲ್ಲಿ ಎನ್ನುವಂತೆ,
‘ಗಟ್ಟಿಯಾಗಿ ಹಿಡಿದುಕೊಳ್ಳೋದು ಕಷ್ಟ ನಿನಗೆ!’ ಎಂದು ಮಗಳ ಮೇಲೆ ಹರಿ ಹಾಯುತ್ತಾನೆ!
ವಸ್ತು ಮತ್ತು ರೂಪಗಳಿಂದ ನಿರ್ಮಿತವಾದ ಈ ಲೋಕದಲ್ಲಿ ಇವೆರಡಕ್ಕೂ ಅತೀತವಾದ ಯಾವ ಶಕ್ತಿಯು ಮನುಷ್ಯನನ್ನು ಕೈಹಿಡಿದು ನಡೆಸುತ್ತದೆ? ಅದನ್ನು ‘ಅಂತಃಸತ್ವ’ ಅಥವ ‘ಸರ್ವವ್ಯಾಪಿ ಅಂತಃಕರಣ’ ಎಂದು ಕರೆಯಬಹುದೆ? ಎಂದು ಫ್ರೆಂಚ್ ತತ್ತ್ವಜ್ಞಾನಿ ಜಿಲ್ ದೆಲೂಶ್ ಕೇಳಿಕೊಳ್ಳುತ್ತಾರೆ. ಈ ಪರಿಕಲ್ಪನೆಯನ್ನು ‘ಪರಿಶುದ್ಧ ಬದುಕು’ ಎಂದು ಹೆಸರಿಸಬಹುದೆ? ಎಂಬುದು ಕೂಡ ಅವರ ಪ್ರಶ್ನೆಯೇ.
ಹಾಗಿದ್ದರೆ, ಅಂತಃಸತ್ವ ಅಥವ ಸರ್ವವ್ಯಾಪಿ ಅಂತಃಕರಣವನ್ನು ನಿರೂಪಿಸುವುದು ಹೇಗೆ? ಎಂಬ ಪ್ರಶ್ನೆಗೆ ದೆಲೂಶ್ ಚಾರ್ಲ್ಸ್ ಡಿಕನ್ಸ್ ರ ಒಂದಕ್ಕಿಂತ ಹೆಚ್ಚು ಅಂಶಗಳಲ್ಲಿ ಅದೇ ‘ಗೌರವಾನ್ವಿತ ಗೆಳೆಯ’ ಕಥೆಯನ್ನು ಉಲ್ಲೇಖಿಸುತ್ತಾರೆ. ಇಲ್ಲಿನ ಮಹಾ ದುರುಳ ವ್ಯಕ್ತಿ ರೈಡರ್ಹುಡ್ನನ್ನು ಬದುಕುಳಿಸಲು ಎಲ್ಲರೂ ತಮ್ಮ ತಮ್ಮ ನೆಲೆಯಲ್ಲಿ ಪ್ರಯತ್ನಿಸುತ್ತಿರುವುದು ಏನನ್ನು ಸೂಚಿಸುತ್ತದೆ? ಪ್ರಸಂಗದಲ್ಲಿ, ಒಂದು ಹಂತದಲ್ಲಿ ದುಷ್ಟತನವೇ ಮೈವೆತ್ತ ರೈಡರ್ಹುಡ್ ಕೂಡ ಜನ ತನ್ನನ್ನು ಬದುಕಿಸಲು ಪ್ರಯತ್ನಿಸುತ್ತಿರುವುದನ್ನು ಅದು ಹೇಗೋ ಗ್ರಹಿಸಿ ಒಳಗೇ ಆರ್ದ್ರವಾಗತೊಡಗುತ್ತಾನೆ. ಸಾವು- ಬದುಕಿನ ಸೆಣೆಸಾಟದಲ್ಲಿ ಆತನ ಸ್ವಭಾವಸಿದ್ಧವಾದ ಕ್ರೌರ್ಯ ಕರಗಿ ಅಂತಃಕರಣ ಪುಟಿಯತೊಡಗುತ್ತದೆ. ನಿಜ ಹೇಳಬೇಕೆಂದರೆ, ಈ ಅದಮ್ಯ ಜೀವಸೆಲೆಯೇ ಆತನನ್ನು ಮತ್ತೆ ಬದುಕಿಸುವುದು.

ರೈಡರ್ಹುಡ್ ನಿಜಕ್ಕೂ ಅಯೋಗ್ಯನೆಂದು ಅಲ್ಲಿ ನೆರೆದವರೆಲ್ಲ ಬಲ್ಲರು. ಅವರು ಬದುಕಲಿ ಎಂದು ಹಾರೈಸುತ್ತಿರುವುದು ಏಕಜೀವವೇ. ಆದರೆ ಆ ಭಾವಕ್ಕೆ ವಿಶ್ವವ್ಯಾಪಕತೆಯಿದೆ. ಈ ಭಾವವನ್ನು ಸಾಧಿಸಿದವರು ಮನುಷ್ಯನ ಕ್ಷುದ್ರಲೋಕ ಮೀರಿ ಪರಿಶುದ್ಧ ಅಂತಃಕರಣದ ಚೆಲುವನ್ನು ಸಾಧಿಸಬಲ್ಲ ಪರಿಣಿತರು! ಹೀಗೆ ಸಾಧಿಸುವ ಚೆಲುವಿನ ವಿಶಿಷ್ಟತೆಯೆಂದರೆ, ಅದು ವ್ಯಕ್ತಿಗತ ಪರಿಧಿಗಳನ್ನು ಮೀರಿ ಬದುಕಿನ ಶುದ್ಧಾಂತಕರಣವಾಗಿ ರೂಪಾಂತರಗೊಂಡಿದೆ. ಅದು ಎಷ್ಟೊಂದು ಸಮಚಿತ್ತತೆ ಸಾಧಿಸಿದೆಯೆಂದರೆ ಅಲ್ಲಿ ಒಳಿತು- ಕೆಡುಕುಗಳಿಗೆ ಸ್ಥಾನವೇ ಇಲ್ಲ! ಆದರೆ, ವೈಯಕ್ತಿಕ ಬದುಕೊಂದು ಸಾರ್ವತ್ರಿಕ ಸತ್ಯವಾದ ಸಾವನ್ನು ಮುಖಾಮುಖಿಯಾಗುವಾಗ ನಾವು ಅದನ್ನು ವ್ಯಕ್ತಿಗತ ನೆಲೆಯಲ್ಲಿ ನೋಡಬಾರದು. ಏಕೆಂದರೆ, ಶುದ್ಧಾಂತಕರಣದ ಬದುಕು ಹೊಲಸು- ಸೊಗಸುಗಳನ್ನು ಮೀರಿದುದಾಗಿದೆ.
ಇದು ಮನುಷ್ಯರಲ್ಲಿ ಅತ್ಯಂತ ಸಹಜವಾಗಿದೆ. ಹೀಗಾಗಿಯೇ, ಜೀವನ್ಮರಣದ ತೂಗುಯ್ಯಾಲೆಯಲ್ಲಿ ಜೀಕುತ್ತಿರುವ ವ್ಯಕ್ತಿ ಅತ್ಯಂತ ದುಷ್ಟನು, ಸಮಾಜ ಕಂಟಕನೂ, ಪರಪೀಡಕನೂ ಆಗಿದ್ದರೂ ಆತನ ಗುಣವಿಶೇಷಣಕ್ಕೆ ಮಹತ್ವ ನೀಡದೆ, ಆ ಜೀವ ಬದುಕಿ ಬರಲಿ ಎಂದು ಹಾರೈಸುತ್ತೇವೆ. ಎಷ್ಟೇ ಕೊಳೆತ ನಾಲಗೆಯಾದರೂ ಸತ್ತವರ ಕುರಿತು ಕೊಳಕು ಮಾತನಾಡದಿರುವುದಕ್ಕೆ ಕಾರಣವೂ ಇದೇ: ‘ಸರ್ವವ್ಯಾಪಿಯಾಗಿರುವ ಬದುಕಿನ ಶುದ್ಧಾಂತಃಕರಣ’.
ಅಂದರೆ, ಸಂಕಟಕರ ಸಮಯದಲ್ಲಿ ಮನುಷ್ಯರ ವ್ಯಕ್ತಿತ್ವಕ್ಕಿಂತ ನಾವು ವಿಶಿಷ್ಟತೆಯನ್ನು ಹುಡುಕುತ್ತೇವೆ. ಉದಾಹರಣೆಗೆ, ಮಕ್ಕಳೆಲ್ಲ ಸಾಮಾನ್ಯವಾಗಿ ಒಂದೇ ವ್ಯಕ್ತಿತ್ವದರಂತೆ ಕಾಣುತ್ತಾರೆ. ಆದರೆ, ಪ್ರತಿ ಮಗುವಿನಲ್ಲಿಯೂ ತನ್ನದೇ ಆದ ಸ್ವಭಾವಸಿದ್ಧ ವಿಶಿಷ್ಟತೆಯಿರುತ್ತದೆ. ನಗುವುದು, ಕೂರುವುದು, ಗೋಣು ಹಾರಿಸುವುದು, ನಾಲಗೆ ಕಚ್ಚುವುದು, ಮಾತನಾಡುವಾಗ ತೊದಲುವುದು, ಕೆಲವು ಪದಗಳನ್ನು ವಿಶಿಷ್ಟವಾಗಿ ಉಚ್ಚರಿಸುವುದು ಇತ್ಯಾದಿ. ಇದು ಬದುಕಿನ ಅಂತಃಸತ್ವ ಅವರಿಗೆ ನೀಡುತ್ತಿರುವ ವರ, ಎನ್ನುತ್ತಾರೆ, ಜಿಲ್ ದೆಲೂಶ್.
ಇಂತಹ ಸಂಕೀರ್ಣ ಅಥವ ಸಹಜ- ಸರಳ ಕಾರಣಕ್ಕಾಗಿಯೇ ರೈಡರ್ಹುಡ್ ಮರಣಕಾಲದಲ್ಲಿದ್ದಾಗ ಎಲ್ಲರೂ ಆತನನ್ನು ಬದುಕಿಗೆ ಎಳೆ ತರಲು ಪ್ರಯತ್ನಿಸುತ್ತಾರೆ. ಮೃತ್ಯವಿನ ಹಗ್ಗದಿಂದ ಬಿಡಿಸಿಕೊಂಡು ಬಂದವರು ಬದುಕಿನ ಅರ್ಥ ತಿಳಿದು ಸಂಪೂರ್ಣವಾಗಿ ಬದಲಾಗಿ ಹೊಸ ಅರ್ಥದ ನೆಲೆಯನ್ನು ಹುಡುಕುತ್ತಾರೆ.
ಆದರೆ, ವಿಧಿಯ ವಿಕಟ ಅಟ್ಟಹಾಸ. ರೈಡರ್ಹುಡ್ ಆ ಮಾನವ ಸಂಕುಲಕೆ ಸೇರದಷ್ಟು ದುಷ್ಟ! ನಮ್ಮ ನಡುವೆಯೂ ಅಂಥವರು ಇರುತ್ತಾರೆ. ಅದಕ್ಕೆ ಹೇಳಿದ್ದು, ನೀವು ಈ ಮೊದಲೇ ಈ ಕಥೆಯನ್ನು ಕೇಳಿದ್ದೀರಿ, ಅಥವ ಇಂತಹ ಅನುಭವಕ್ಕೆ ಪಕ್ಕಾಗಿದ್ದೀರಿ, ಎಂದು!
-ಕೇಶವ ಮಳಗಿ
- Charles Dickens: Our Mutual Friend: The same respected friend in more aspects than one’
- Gilles Deleuze: Pure Immanence: Essays on life
- ಜಿಲ್ ದೆಲೂಶ್ (1925 – 1995) : ಫ್ರೆಂಚ್ ತತ್ತ್ವಜ್ಞಾನಿ, ಸಾಹಿತ್ಯ ವಿಮರ್ಶಕ, ಸಾಹಿತ್ಯ ಇತಿಹಾಸಕಾರ