ಅಗ್ನಿದಿವ್ಯದ ಕವಿ ಬಶೀರ್ ಬದ್ರ್ !

ಅದು 1987ನೇ ಇಸವಿಯ ಏಪ್ರಿಲ್ ತಿಂಗಳು
ದೆಹಲಿಯಲ್ಲಿ ನಡೆಯುತ್ತಿದ್ದ ಮುಶಾಇರವೊಂದರಲ್ಲಿ ಕವಿ‌ಯೊಬ್ಬ ಸೌಹಾರ್ದತೆ ಮತ್ತೆ ಸಹೋದರತ್ವದ ಕುರಿತಾದ ಸುಂದರವಾದ ಹಾಗೂ ಎಂದಿನಂತೆಯೇ ಮೊನಚು ಮತ್ತು ತಿಳಿ ಹಾಸ್ಯದಿಂದ ಕೂಡಿದಂತಹ ಗಝಲಿನ ರದೀಫ್‌ಗಳನ್ನು ಒತ್ತಿ ಒತ್ತಿ ಹೇಳುತ್ತಾ, ಪ್ರೇಕ್ಷಕರನ್ನು ರಂಜಿಸುತ್ತಿದ್ದ.

ಅದೇ ಹೊತ್ತಿನಲ್ಲಿ ಕವಿಯ ಹುಟ್ಟೂರಾದ ಮೀರತಿನಲ್ಲಿ ಕೋಮು ಗಲಭೆಯೊಂದು ದಿಢೀರನೆ ಸ್ಫೋಟಗೊಂಡಿತ್ತು. ಹಿಂದೂ ಮುಸ್ಲಿಮರಿಬ್ಬರು ಸೇರಿ ಹಲವಾರು ಮನೆಗಳನ್ನು ಸುಟ್ಟುಹಾಕಿದ್ದರು. ಅದರಲ್ಲಿ ಒಂದು ಮನೆ ಆ ಕವಿಯದಾಗಿತ್ತು. ಕೇವಲ ಕವಿಮನೆ ಮಾತ್ರವಲ್ಲ ಆ ಕವಿಯ ಗ್ರಂಥಾಲಯ, ಹಲವಾರು ಕವನ ಸಂಕಲನಗಳ ಹಸ್ತಪ್ರತಿಗಳು ಸುಟ್ಟುಕರಕಲಾಗಿದ್ದವು. ಮನೆಮಂದಿಯೆಲ್ಲ ಕೂದಲೆಳೆಯಲ್ಲಿ ಬದುಕುಳಿದಿದ್ದರು. ಆ ಕವಿ ಆತ ಬೇರಾರೂ ಅಲ್ಲ, ಗಝಲ್ ಸಾಮ್ರಾಟ ಬಷೀರ್ ಬದ್ರ್.

ಮರುದಿನ ಬೆಳಗಿನ ರೈಲಿಗೆ ಮೀರತಿಗೆ ಬಂದಿಳಿದ ಕವಿ ತಾನು ಗೆಳೆಯರೊಂದಿಗೆ ನಕ್ಕುನಲಿದಿದ್ದ ಗಲ್ಲಿಗಳಲ್ಲಿ ದ್ವೇಷದ ಹೆಬ್ಬಾವುಗಳು ಬುಸುಗುಟ್ಟುವುದನ್ನು ನೋಡಿದ. ತನ್ನವರೆನಿಸಿಕೊಂಡವರೇ ಬೆವರುಸುರಿಸಿ ಕಟ್ಟಿದ ತನ್ನ ಮನೆಗೆ, ರಕ್ತ ಹರಿಸಿ ಬರೆದಿದ್ದ ತನ್ನ ಕವಿತೆಗಳಿಗೆ, ಜೀವಮಾನದಲ್ಲಿ‌ ಕಾಪಿಟ್ಟ ಪುಸ್ತಕಗಳಿಗೆ ಬೆಂಕಿಯಿಟ್ಟದ್ದನ್ನು ನೋಡಿ ಕಣ್ಣೀರು ಹರಿಸಿದ.

ಬಡೇ ಶೌಕ್ ಸೇ ಮೇರಾ ಘರ್ ಜಲಾ
ಕೋಯೀ ಆಂಚ್ ತುಜ್ ಪೇ ನಾ ಆಯೇಗೀ..

ಸಂತೋಷದಿಂದ ನನ್ನ ಮನೆಯನ್ನು ಸುಟ್ಟುಹಾಕು
ನಿನಗೆ ಯಾವ ಕಳಂಕವೂ ತಟ್ಟದಿರಲೀ ಎಂದು ಉದ್ಗರಿಸಿದ.

ಸುಟ್ಟು ಕರಕಲಾದ ಮನೆಯ ಗೋಡೆಯ ಕೆಳಗೆ ಕುಳಿತು ಪುಸ್ತಕಗಳ ಬೀದಿಯನ್ನು ನೋಡುತ್ತಾ ಕವಿ ಯೋಚಿಸುತ್ತಿದ್ದ,
ಸುಟ್ಟು ಹೋದ ಮನೆಗಳನ್ನು ಮತ್ತೆ ಕಟ್ಟಬಹುದು, ದ್ವಂಸಗೊಂಡ ಊರು ಮತ್ತೆ ಸರಿಯಾಗಬಹುದು, ಮುರಿದ ಸೇತುವೆ ರಿಪೇರಿಯಾಗಬಹುದು ಆದರೆ… ಒಡೆದು ಹೋದ‌ ಮನಸ್ಸುಗಳು! ಹತ್ತಿ ಉರಿಯುವ ಬೆಂಕಿಯನ್ನು ನೀರಿನಿಂದ‌ ನಂದಿಸಬಹುದು ಆದರೆ ಎದೆಯಲ್ಲಿ ಧಗಧಗಿಸುತ್ತಿರುವ ಕೋಮು ದಳ್ಳುರಿಯನ್ನು ನಂದಿಸುವ ನೀರನ್ನು ಎಲ್ಲಿಂದ ತರಲಿ?? ಈ ಪಾರಿವಾಳಗಳ ಗೂಡಿನಲ್ಲಿ ವಿಷ ಸರ್ಪಗಳನ್ನು ಇಟ್ಟವರಾರು? ಕವಿ ದುಃಖದಿಂದ ಬಡಬಡಿಸಿದ

ಲೋಗ್ ಟೂಟ್ ಜಾತೇ ಹೈಂ
ಏಕ್ ಘರ್ ಬನಾನೆ ಮೆ
ತುಮ್ ತರಸ್ ನಹೀ ಕಾತೆ
ಬಸ್ತಿಯ ಜಲಾನೆ ಮೆ…

ಸೋತುಹೋಗುವರು ಒಂದು
ಮನೆ ಕಟ್ಟುವಷ್ಟರಲ್ಲೇ ಜನರು
ದಣಿಯಲಿಲ್ಲವಲ್ಲೋ ನೀನು
ಇಡೀ ಊರನ್ನೇ ಸುಟ್ಟರೂ !

ಪಾರಿವಾಳಗಳ ಅಸಹಾಯಕತೆಯಿದು
ಇದನ್ನೂ ಹೇಳಲಾರವು
ಯಾರು ಇರಿಸುತ್ತಿರುವರು ಸರ್ಪಗಳನ್ನು
ತಮ್ಮ ಗೂಡಿನಲ್ಲಿ !

ಸದ್ದು ಮಾಡುವ ಕಲ್ಲುಗಳನ್ನು
ಎದೆಯೆಂದು ತಿಳಿಯುವರು ಜನರು
ಜನುಮವೇ ಕಳೆದು ಹೋಗುವುದು
ಎದೆಯನ್ನು ಹೃದಯವನ್ನಾಗಿಸುವುದರಲ್ಲಿ !

ಜೀವಮಾನದ‌ ಸಂಪಾದನೆಯ ಜೊತೆಗೆ ಹಲವಾರು ಅಪ್ರಕಟಿತ ಕವನ ಸಂಕಲನದ ಹಸ್ತಪ್ರತಿಗಳನ್ನೂ ಕಳೆದುಕೊಂಡಿದ್ದ ಬಷೀರ್ ಬದ್ರ್ ತೀವ್ರ ಆಘಾತ‌ ಮತ್ತು ಖಿನ್ನತೆಗೆ ಒಳಗಾಗಿದ್ದರು. ಸ್ವಲ್ಪ ಕಾಲದವರೆಗೆ ಅವರ ಕುಟುಂಬ ಚಲನಚಿತ್ರ ಮತ್ತು ಸಂಗೀತ ನಿರ್ದೇಶಕ ವಿಶಾಲ್ ಭಾರಧ್ವಾಜ್ ಮನೆಯಲ್ಲಿ ಆಶ್ರಯಪಡೆಯಿತು. ಬಷೀರ್ ಬದ್ರ್ ಕವಿಯ ಅಪ್ಪಟ ಅಭಿಮಾನಿಯಾಗಿದ್ದ ವಿಶಾಲ್ ಭಾರಧ್ವಾಜ್ ಗೆ ಬಷೀರ್ ವೈಯ್ಯಕ್ತಿಕವಾಗಿ ಭೇಟಿಯಾಗುತ್ತಿದ್ದಾಗ ವಾಚಿಸುತ್ತಿದ್ದ ಅಸಂಖ್ಯಾತ ಗಝಲ್ ಗಳ ಮತ್ಲಾಗಳು , ತಖಲ್ಲುಸ್ ಗಳು ನೆನೆಪಿದ್ದವು. ಆ‌ ನೆನಪೇ ಬಷೀರ್ ಬದ್ರ್ ಶೇಕಡಾ ಅರುವತ್ತರಷ್ಟು ಗಝಲ್ ಗಳನ್ನು ಮತ್ತೆ ಕಟ್ಟಲು ಸಾಧ್ಯವಾಯಿತು. ಮಾನಸಿಕವಾಗಿ ನೊಂದುಹೋಗಿದ್ದ ಕವಿ ಮೀರತ್‌ನಿಂದ ಭೋಪಾಲ್‌ಗೆ ತಮ್ಮ ನೆಲೆಯನ್ನು ಬದಲಾಯಿಸಿದರು.‌

ಭಾರತದ ರಾಜಕೀಯ ನಾಯಕರು (ಪ್ರಧಾನಿ ನರೇಂದ್ರ ಮೋದಿ, ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಅಖಿಲೇಶ್ ಯಾದವ್ ಮುಂತಾದವರು) ಸಂಸತ್ತಿನಲ್ಲಿ ಮತ್ತು ಸಾರ್ವಜನಿಕ ರ‍್ಯಾಲಿಗಳಲ್ಲಿ ಪರಸ್ಪರರ ವಿರುದ್ಧ ವಾಗ್ದಾಳಿ ನಡೆಸಲು ಬಷೀರ್ ಬದ್ರ್ ಕವಿತೆಗಳನ್ನು ಬಳಸಿಕೊಂಡರು.‌ 2016 ರಲ್ಲಿ ರಾಹುಲ್ ಗಾಂಧಿ ಅವರು ನೋಟು ಅಮಾನ್ಯೀಕರಣದ (Demonetisation) ವಿರುದ್ಧ ಇದೇ “ಲೋಗ್ ಟೂಟ್ ಜಾತೇ ಹೈ…” ಗಝಲಿನ ಸಾಲುಗಳನ್ನು ಬಳಸಿದ್ದರು.

ಬಶೀರ್ ಬದ್ರ್ ಅವರು ಸಾಂಪ್ರದಾಯಿಕ ಉರ್ದು ಗಝಲ್‌ಗಳಿಗೆ ಆಧುನಿಕ ಸ್ಪರ್ಶ ನೀಡಿದ ಕೀರ್ತಿಗೆ ಪಾತ್ರರಾಗಿದ್ದಾರೆ. ಸಾಮಾನ್ಯ ಜನರಿಗೂ ಅರ್ಥವಾಗುವಂತಹ ಸರಳವಾದ ಆದರೆ ಆಳವಾದ ಉರ್ದು ಮತ್ತು ಹಿಂದಿ ಮಿಶ್ರಿತ ಭಾಷೆಯನ್ನು ಅವರು ಬಳಸುತ್ತಿದ್ದರು. ಅವರ ಸಾಹಿತ್ಯ ಸೇವೆಯನ್ನು ಪರಿಗಣಿಸಿ ಭಾರತ ಸರ್ಕಾರ ಅವರಿಗೆ ‘ಪದ್ಮಶ್ರೀ’ ಪ್ರಶಸ್ತಿ ನೀಡಿ ಗೌರವಿಸಿದೆ. ಜೊತೆಗೆ ಅವರಿಗೆ ಪ್ರತಿಷ್ಠಿತ ‘ಸಾಹಿತ್ಯ ಅಕಾಡೆಮಿ ಪ್ರಶಸ್ತಿ’ ಕೂಡ ಲಭಿಸಿತ್ತು .

ಇನ್ನು ಬದುಕು ಸಾಕು ಎನಿಸಿತ್ತೋ ಏನೋ ಒಂದು ದಿನ ಬಷೀರ್ ಸಾಬ್ ಹೀಗೆ ಬರೆದರು,

ವಿಲಕ್ಷಣ ಹಣತೆ ನಾನು
ಹಗಲಿರುಳೆನ್ನದೆ ಉರಿಯುತ್ತಲಿರುವೆ
ಆ ಗಾಳಿಗೆ ಆರಿಸಲು ಹೇಳಿ
ದಣಿದುಹೋಗಿರುವೆ ನಾನು !

ಧೂಳು ಮಾತ್ರವಲ್ಲ ಆದಿಮಕಾಲದ
ಹಳೆಯದಾರಿಯಾಗಿರುವೆ ನಾನು
ನಿನ್ನೆಯಷ್ಟೇ ಇಲ್ಲಿಂದ ಹಾದುಹೋಗಿದೆ
ಒಂದು ಕಾರವಾನು

ನಿದ್ದೆಗೆ ಜಾರಿದಾಗ ನಿಮ್ಮ ಕೈಗಳಿಂದ
ಮುಚ್ಚಿಬಿಡಿ ನನ್ನ ಕಣ್ಣುಗಳನ್ನು
ಓದುತ್ತಲೇ ನಿದ್ದೆಗೆ ಜಾರಿಬಿಡುವಂತಹಾ
ಒಂದು ಕಥೆಯಷ್ಟೆ ನಾನು !

ಕೋಮುದಳ್ಳುರಿಯಲ್ಲಿ ತನ್ನ ಬದುಕನ್ನೇ ಸುಟ್ಟುಕೊಂಡರೂ ಸದಾ ಸೌಹಾರ್ದ ಭಾರತದ ಕನಸನ್ನು ಬಡಬಡಿಸುತ್ತಿದ್ದ ಕವಿ ತಮ್ಮ ಬದುಕಿನ ಸಂದ್ಯಾಕಾಲದಲ್ಲಿ ಡಿಮೆಂಶಿಯಾ ಎಂಬ ಸ್ಮರಣರೋಗಕ್ಕೆ ತುತ್ತಾದರು ಮತ್ತು 2026 ಮೇ ತಿಂಗಳಿನ 28 ರ ಬಕ್ರೀದಿನ ಹಬ್ಬದ ಪವಿತ್ರ ಬಲಿದಾನದ ದಿನ ತಮ್ಮ 91 ನೇ ವಯಸ್ಸಿನಲ್ಲಿ ಭಾವಪ್ರಪಂಚಕ್ಕೆ ಕಾವ್ಯ ಬಲಿಯನ್ನು ನೀಡಿ ಹಸಿದಿರುವ ಸಹೃದಯರ ಹೃದಯೋದರಕ್ಕೆ ತಂಪನೆರೆದಿದ್ದ ಕವಿ ಶಾಶ್ವತ ನಿದ್ದೆಗೆ ಜಾರಿದರು.

ಕವಿ ಬಷೀರ್ ಬದ್ರ್ ಬಕ್ರೀದಿನ ಪವಿತ್ರ ಬಲಿದಾನದ ದಿನವೇ ಬದುಕಿನ‌ ಯಾತ್ರೆ ಮುಗಿಸಿದರು. ದೊರೆ ನಮ್ರೂದನು ಇಬ್ರಾಹಿಂರನ್ನು ಬೆಂಕಿಯಲ್ಲಿ ದೂಡಿ ಪರೀಕ್ಷಿಸಿದಂತೆ ಕವಿ ಬಷೀರ್ ಬರ್ದ್ ರನ್ನು ಕೂಡಾ ಭಾರತದ ಕೋಮು ದಳ್ಳುರಿಯು ಪರೀಕ್ಷಿಸಿತ್ತು. ಆದರೆ ಬಷೀರ್ ಬದ್ರ್ ಕೊನೆಯವರೆಗೂ ಕೋಮುವಾದದ ವಿರುದ್ಧ ಬರೆದರೇ ಹೊರತು ಕೋಮುವಾದಿಯಾಗಲಿಲ್ಲ. ಬದಲಿಗೆ ಕೋಮುದಳ್ಳುರಿಯಲ್ಲಿ ಉರಿದು‌ ಪುಟಗೊಂಡ ಅಗ್ನಿದಿವ್ಯದಂತೆ ಹೊರಹೊಮ್ಮಿದರು.

‘ಉಜಾಲೇ ಅಪನೀ ಯಾದೋಂ ಕೇ ಹಮಾರೇ ಸಾಥ್ ರಹನೇ ದೋ
ನ ಜಾನೇ ಕಿಸ್ ಗಲೀ ಮೇ ಜಿಂದಗೀ ಕೀ ಶಾಮ್ ಹೋ ಜಾಯೇ…’

ನನ್ನ ನೆನಪುಗಳ ಹಣತೆಯೊಂದು ನನ್ನ ಕೈಯ್ಯಲ್ಲಿ ಸದಾ ಇರಲಿ ಯಾವ ತಿರುವಿನಲ್ಲಿ ಬದುಕಿನ ಮುಸಂಜೆಯಾಗುವುದೋ ಯಾರು ಬಲ್ಲರು….. ತಮ್ಮ ನೆನಪುಗಳ ಹಣತೆಯೊಂದನ್ನು ಹಿಡಿದುಕೊಂಡು ಬಷೀರ್ ಸಾಬ್ ಹೊರಟೇಹೋದರು.‌

ಕವಿಗೆ ಸಾವಿಲ್ಲ ಆತನ ಕವಿತೆಗಳಲ್ಲಿ ಉಸಿರಾಡುತ್ತಾನೆ ಎಂಬುದು ಲೋಕೋಕ್ತಿಯಾಗಿರಬಹುದು ಆದರೆ ಕವಿಯ ಅಂತಿಮ ಯಾತ್ರೆಗೆ ಕೇವಲ ಇಪ್ಪತ್ತು ಜನರು ಮಾತ್ರ ಸೇರಿದ್ದರು ಎಂಬುದು ಕವಿತೆಗಳೇ ಶಾಶ್ವತ, ಎಲ್ಲಾ ಮನ್ನಣೆಗಳೂ ಕವಿತೆಗಳಿಗೆ ಮಾತ್ರ, ಕವಿಯು ನಿಮಿತ್ತ‌ ಮಾತ್ರ ಎಂಬ ಸುಡುವಾಸ್ತವವನ್ನು ಮತ್ತೆ ನೆನಪಿಸಿತು.


ನನಗೆ ಯಾವದೇ ಸಮಾಧಿಯ‌ ಅವಶ್ಯಕತೆಯಿಲ್ಲ, ಸಜ್ಜನರ ಹೃದಯವೇ ನನ್ನ ಸಮಾಧಿ ‘ ಎಂಬ ರೂಮಿಯ ವಾಕ್ಯದಂತೆ ಬಷೀರ್ ಬದ್ರರ ಗಝಲ್ಗಳು ಸಹೃದಯರ ಹೃದಯದಲ್ಲಿ ಶಾಶ್ವತವಾಗಿ ನೆಲೆಸಲಿವೆ.‌

-ಪುನೀತ್ ಅಪ್ಪು
(ಲೇಖನದಲ್ಲಿ ಉಲ್ಲೇಖಿಸಲಾದ ಎಲ್ಲಾ ಕವಿತೆಗಳ ಕನ್ನಡ ಅನುವಾದಗಳು ಲೇಖಕರದ್ದು)

Leave a Reply

*