ನಾಗರಿಕತೆಯೆಂದರೇನು?

(ಇಬ್ನ್ ಖಲ್ದೂನ್ ವಿಶ್ವವಿದ್ಯಾಲಯ ಪ್ರಸ್ತುತಪಡಿಸಿದ ನಾಗರಿಕತೆಗಳ ಮೈತ್ರಿ ಅಧ್ಯಯನಾತ್ಮಕ ಭಾಷಣ ಮಾಲಿಕೆಯ ಬರಹ ರೂಪ)

ಈ ಸಂಸ್ಥೆಗೆ ಏಳು ವರ್ಷ ತುಂಬಿದೆ. ಕಾಲ ವೇಗವಾಗಿ ಮುನ್ನುಗ್ಗುತ್ತಿದೆ. ಇಂದಿಲ್ಲಿ ‘ನಾಗರಿಕತೆಯ ಅಧ್ಯಯನ’ವೆಂಬ ಹೊಸ ಪರಿಕಲ್ಪನೆಯೊಂದಕ್ಕೆ ಚಾಲನೆ ನೀಡಲಾಗುತ್ತದೆ. ತುರ್ಕಿಯ ಮಟ್ಟಿಗೆ ಈ ಪರಿಕಲ್ಪನೆ ಹೊಸತು. ತುರ್ಕಿಯ ಹೊರಕ್ಕೆ, ಇಸ್ಲಾಮಿಕ್ ನಾಗರಿಕತೆ, ಆಫ್ರಿಕನ್ ನಾಗರಿಕತೆ ಮತ್ತು ಯಾದವ ದೇಶಗಳ ನಾಗರಿಕತೆ (Near eastern) ಎಂಬಿತ್ಯಾದಿ ಅಧ್ಯಯನಗಳಿವೆ. ಆದರೆ ನಾಗರಿಕತೆ ಎಂಬ ವಿಷಯ ಬಹಳ ವಿರಳ. ಸಾಮಾನ್ಯವಾಗಿ, ನಿರ್ದಿಷ್ಟ ವಿಷಯವೊಂದರ ಕುರಿತು ಅಧ್ಯಯನ ನಡೆಸಲಾಗುತ್ತದೆ. ಆದರೆ, ವಿಸ್ತೃತ ಅರ್ಥ ಇರುವ ‘ನಾಗರಿಕತೆ’ ನಮ್ಮ ಇಂದಿನ ಚರ್ಚಾವಿಷಯವಾಗಿದೆ.

ಇದನ್ನು ಚರ್ಚೆಗೊಳಪಡಿಸುವಾಗ ನಮ್ಮೊಳಗೆ ಮೂಡಿಬರುವ ಪ್ರಶ್ನೆಗಳು ಹಲವು. ನಾಗರಿಕತೆಯೆಂದರೇನು? ನಾವು ಏನನ್ನು ಕುರಿತು ಅಧ್ಯಯನ ಮಾಡುತ್ತಿರುವೆವು? ನಾವು ಮನದಟ್ಟುಮಾಡಿಕೊಳ್ಳಲು ಪ್ರಯತ್ನಿಸುತ್ತಿರುವುದಾದರೂ ಏನನ್ನು? ಇವೆಲ್ಲದರ ಕುರಿತು ನಾನಿಲ್ಲಿ ಮಾತನಾಡಲು ಬಯಸುವೆನು. ಇದೊಂದು ಬಹಳ ಸಂಕೀರ್ಣ ಪ್ರಶ್ನೆ. ಹಲವಾರು ತತ್ವಜ್ಞಾನಿಗಳು, ಚಿಂತಕರು ಈ ದಿಸೆಯಲ್ಲಿ ಅನುಸಂಧಾನ ನಡೆಸಿರುವರು. ಇಂದು ಮೊದಲ ಸೆಮಿಸ್ಟರಿನ ಮೊದಲ ಉಪನ್ಯಾಸದಲ್ಲಿ ಇವೆಲ್ಲಾ ಪ್ರಶ್ನೆಗಳನ್ನು ಮುಖಾಮುಖಿಯಾಗಲು ಬಯಸುವೆನು.
ನಾಗರಿಕತೆಯೆಂದರೇನು? ಇದನ್ನು ಕೇವಲ ಒಂದೇ ವಾಕ್ಯದಲ್ಲಿ ಉತ್ತರಿಸಲಾಗದು. ಇದಕ್ಕೆ ವಿಭಿನ್ನ ಉತ್ತರಗಳಿವೆ. ನಾವು ಅವುಗಳನ್ನೊಮ್ಮೆ ಪರಿಶೀಲಿಸೋಣ. ಕೆಲ ಚಿಂತಕರು ನಾಗರಿಕತೆಯನ್ನು ಪಿರಮಿಡುಗಳಿಗೆ ಹೋಲಿಸುವರು. ಕೆಲವರಿಗೆ ನಾಗರಿಕತೆಯು ವಿಜ್ಞಾನವಾಗಿದ್ದರೆ, ಇನ್ನು ಕೆಲವರಿಗೆ ತಂತ್ರಜ್ಞಾನವಾಗಿದೆ. ನಾಗರಿಕತೆಯೆಂದರೆ ಸಮಾಜ ಅಥವಾ ಸಾಮಾಜಿಕ ವ್ಯವಸ್ಥೆಯೆಂದು ಅಭಿಪ್ರಾಯಪಟ್ಟವರೂ ಇದ್ದಾರೆ. ಇದೊಂದು ಬಹುಚರ್ಚಿತ ಪರಿಕಲ್ಪನೆಯಾದುದರಿಂದ ಭಿನ್ನ ದೃಷ್ಟಿಕೋನಗಳಿಗೆ ನಾವಿಲ್ಲಿ ಇದಿರಾಗುತ್ತೇವೆ. ಅಂದಮಾತ್ರಕ್ಕೆ ನೀವು ಗೊಂದಲಕ್ಕೊಳಗಾಗಬೇಕಿಲ್ಲ. ಈ ವಿದ್ಯಮಾನ ಸಮಾಜವಿಜ್ಞಾನದ ಎಲ್ಲಾ ಪರಿಕಲ್ಪನೆಗಳಿಗೂ ಅನ್ವಯ. ‘ಸಮಾಜ ಎಂದರೇನು?’ ‘ಮಾನವ ಯಾರು?’ ಮತ್ತು ‘ಸಂಸ್ಕೃತಿ ಎಂದರೇನು ?’ ಎಂಬ ಪ್ರಶ್ನೆಗಳನ್ನು ನಿಮ್ಮ ಮುಂದಿಟ್ಟರೆ ಬಹುರೂಪಿ ಅರ್ಥಗಳನ್ನು ಮತ್ತು ಅವು ಪರಸ್ಪರ ಸಂವಾದದಲ್ಲಿ ತೊಡಗಿರುವುದನ್ನು ಕಾಣುವಿರಿ. ‘ನಾಗರಿಕತೆ’ ಕೂಡಾ ಈ ಪ್ರಕ್ರಿಯೆಯಿಂದ ಹೊರತಾಗಿಲ್ಲ. ಈ ಸಂವಾದಾತ್ಮಕತೆಯು ಬಹಳ ಉತ್ತಮ ಬೆಳವಣಿಗೆ. ನಿಮ್ಮ ಚಿಂತನೆಗಳನ್ನು ಪೊರೆಯುವ, ತಾರ್ಕಿಕತೆಯನ್ನು ಬಡಿದೆಬ್ಬಿಸುವ ತಾಕತ್ತು ಈ ಸಂವಾದಗಳಿಗಿವೆ. ವಿಭಿನ್ನ ಅಭಿಪ್ರಾಯಗಳನ್ನು ಓದಿ ತಿಳಿದು, ಚಿಂತನ ಮಂಥನಕ್ಕೊಳಪಡಿಸಿದರೆ ನಿಮ್ಮದೇ ಸ್ವಂತದ ಅಭಿಪ್ರಾಯವು ರೂಪುಗೊಳ್ಳುತ್ತದೆ. ಸಮಾಜವಿಜ್ಞಾನವು ಪ್ರಗತಿ ಕಾಣುವ ಪರಿಯಿದು.

‘ನಾಗರಿಕತೆ’ ಎಂಬ ಪರಿಕಲ್ಪನೆಗೆ ವಿವಿಧ ನಾಗರಿಕತೆಗಳು ಬೇರೆ ಬೇರೆಯ ವ್ಯಾಖ್ಯಾನಗಳನ್ನು ನೀಡಿವೆ. ಚೀನಾ ನಾಗರಿಕತೆ, ಹಿಂದೂ ನಾಗರಿಕತೆ ಮತ್ತು ಪಾಶ್ಚಿಮಾತ್ಯ ನಾಗರಿಕತೆಗಳು ವಿಭಿನ್ನ ಅರ್ಥಗಳನ್ನು ಕಲ್ಪಿಸಿಕೊಟ್ಟಿವೆ. ಅದರಂತೆ ನಾಗರಿಕತೆಗೆ ಇಸ್ಲಾಮ್ ನೀಡಿರುವ ಅರ್ಥಕ್ಕೂ ವ್ಯತ್ಯಾಸವಿದೆ. ‘ನಾಗರಿಕತೆ’ಯು ರೂಪಾಂತರಗೊಳ್ಳುವುದಕ್ಕನುಗುಣವಾಗಿ ಬೇರೆಬೇರೆ ಕಾಲಘಟ್ಟಗಳಲ್ಲಿ ವಿಭಿನ್ನ ಅರ್ಥಗಳನ್ನು ಪಡೆದುಕೊಳ್ಳುತ್ತಾ ಬಂದಿದೆ. ಮಧ್ಯಕಾಲದಿಂದ ಆಧುನಿಕ ಕಾಲಕ್ಕೆ ‘ನಾಗರಿಕತೆ’ಯ ಅರ್ಥದಲ್ಲುಂಟಾದ ಪಲ್ಲಟವು ಇದಕ್ಕಿರುವ ಉತ್ತಮ ಉದಾಹರಣೆ. ನಾವೀಗ ಆಧುನಿಕೋತ್ತರ ಕಾಲದಲ್ಲಿದ್ದೇವೆ. ಆಯಾ ಕಾಲದ ಸಂಸ್ಕೃತಿಯಲ್ಲಿ ಉಂಟಾಗುವ ರೂಪಾಂತರವು ‘ನಾಗರಿಕತೆ’ಯ ಅರ್ಥಾಂತರಕ್ಕೂ ಕಾರಣವಾಗುತ್ತದೆ. ಪಾಶ್ಚಿಮಾತ್ಯ ನಾಗರಿಕತೆಯಲ್ಲಿ ‘ನಾಗರಿಕತೆ’ಗೆ ನಿರ್ದಿಷ್ಟ ಅಥವಾ ಖಚಿತ ಅರ್ಥವೊಂದನ್ನು ಹೇಳುವುದು ಸಾಧ್ಯವಿಲ್ಲ. ಇಸ್ಲಾಮಿನಲ್ಲೂ ನಾಗರಿಕತೆಯು ಚರಿತ್ರೆಯುದ್ದಕ್ಕೂ ಬದಲಾಗುತ್ತಾ ಬಂದಿದೆ.

ಇಸ್ಲಾಮ್ ನಾಗರಿಕತೆ: ಪಾಶ್ಚಿಮಾತ್ಯ ಅಥವಾ ಪೌರ್ವಾತ್ಯ ನಾಗರಿಕತೆಯೇ?

ಇಸ್ಲಾಮಿನ ಅಭಿಜಾತ ಕಾಲದಲ್ಲಿ ‘ನಾಗರಿಕತೆ’ಗಿದ್ದ ಅರ್ಥ ಸಂಕಲ್ಪಕ್ಕೂ ಇಂದಿನ ವ್ಯಾಖ್ಯೆಗೂ ವ್ಯತ್ಯಾಸವಿದೆ. ಇಂದು ನಾವು ಆಧುನೀಕರಣ ಮತ್ತು ಪಾಶ್ಚ್ಯಾತೀಕರಣದ ಪ್ರಭಾವಕ್ಕೊಳಗಾಗಿರುವೆವು. ನಮ್ಮನ್ನು ನಾವು ಕಂಡುಕೊಳ್ಳುವ ದೃಷ್ಟಿಕೋನದಲ್ಲುಂಟಾಗಿರುವ ಪಲ್ಲಟವನ್ನೊಮ್ಮೆ ಇಲ್ಲಿ ವಿವರಿಸುತ್ತೇನೆ. ನಿಮ್ಮಲ್ಲೊಂದು ಪ್ರಶ್ನೆಯನ್ನು ಕೇಳುತ್ತೇನೆ. ಇಸ್ಲಾಮ್ ನಾಗರಿಕತೆ ಪಾಶ್ಚಿಮಾತ್ಯವೇ, ಪೌರ್ವಾತ್ಯವೇ? ಇಂದು ಮುಸ್ಲಿಮರು ತಮ್ಮನ್ನು ಪೌರ್ವಾತ್ಯ ನಾಗರಿಕತೆಯವರೆಂದು ಗುರುತಿಸಿಕೊಳ್ಳುತ್ತಿದ್ದಾರೆ. ಹೀಗೆ ತಾವು ಪೌರ್ವಾತ್ಯರೆಂದು ಸ್ವತಃ ಮುಸ್ಲಿಮರು ಗುರುತಿಸಿಕೊಳ್ಳಲು ಪ್ರಾರಂಭಿಸಿರುವುದಾದರೂ ಎಂದಿನಿಂದ? 19ನೇ ಶತಮಾನದಲ್ಲಿ. ಆ ಮೊದಲು ಈ ವಿದ್ಯಮಾನವಿರಲಿಲ್ಲ. ಸುಲ್ತಾನ್ ಮುಹಮ್ಮದ್ ಫಾತಿಹ್ ತನ್ನನ್ನು ರೋಮಿನ ಚಕ್ರವರ್ತಿಯೆಂದೂ, ‘ಸೀಸರ್’ ಎಂದೂ ಕರೆದುಕೊಳ್ಳುತ್ತಿದ್ದರು. ನಮ್ಮನ್ನು ನಾವು ಮನಗಾಣುವ ದೃಷ್ಟಿಕೋನದ ಬದಲಾವಣೆ ಇಲ್ಲಿ ದಿಟವಾಗುತ್ತಿದೆ. ನಿರ್ದಿಷ್ಟವಾದ ಭೌಗೋಳಿಕತೆಗೆ ತಮ್ಮನ್ನು ಥಳಕು ಹಾಕಿಕೊಳ್ಳುವ ಚಾಳಿ ಇಸ್ಲಾಮಿನ ಕ್ಲಾಸಿಕಲ್ ಕಾಲಘಟ್ಟದ ಮುಸ್ಲಿಮರಿಗಿರಲಿಲ್ಲ. ಮುಸ್ಲಿಮ್ ಎಂಬ ಗುರುತಿತ್ತೇ ವಿನಾ ಪಾಶ್ಚಿಮಾತ್ಯ ಅಥವಾ ಪೌರ್ವಾತ್ಯನೆಂದು ಗುರುತಿಸಿಕೊಳ್ಳುತ್ತಿರಲಿಲ್ಲ. ಆದರೆ 19ನೇ ಶತಮಾನವು ಕೆಲವೊಂದು ಬದಲಾವಣೆಗಳನ್ನು ತಂದೊಡ್ಡಿತು. ಇಸ್ಲಾಮನ್ನು ಭೌಗೋಳಿಕವಾಗಿ ವಿಭಜಿಸುವುದಾದರೆ, ಅದು ಪಾಶ್ಚಿಮಾತ್ಯವೆಂದು ಪರಿಗಣಿಸಬೇಕೆಂದಾಗಿದೆ ನನ್ನ ಅನಿಸಿಕೆ. ಏಕೆ ? ಧಾರ್ಮಿಕ ಗ್ರಂಥಗಳ ಆಧಾರದಲ್ಲಿ ಧರ್ಮಗಳನ್ನು ಎರಡಾಗಿ ವಿಭಜಿಸಲಾಗುತ್ತದೆ. ಪಾಶ್ಚಿಮಾತ್ಯ ಮತ್ತು ಪೌರ್ವಾತ್ಯ ಧರ್ಮಗಳು. ಈ ನೆಲೆಗಟ್ಟಿನಲ್ಲಿ ಇಸ್ಲಾಮ್, ಕ್ರೈಸ್ತ ಮತ್ತು ಯಹೂದಿ ಧರ್ಮಗಳು ಪಾಶ್ಚಿಮಾತ್ಯ ಧರ್ಮಗಳ ಪಟ್ಟಿಗೆ ಸೇರುತ್ತದೆ. ಪೌರ್ವಾತ್ಯವೆಂದು ಗುರುತಿಸಲಾಗುವ ಧರ್ಮಗಳು: ಬುದ್ಧ, ಹಿಂದೂ, ಶಿಂಟೋಯಿಸಂ ಮತ್ತು ಕನ್ಫ್ಯೂಶನಿಸಂ. ಪಠ್ಯ ಪುಸ್ತಕ ಮತ್ತು ಇನ್ನಿತರ ಗ್ರಂಥಗಳ ಮೂಲಕವೂ ಈ ವಿಂಗಡಣೆ ಪ್ರಚಲಿತದಲ್ಲಿದೆ. ನಾನು ಹೇಳಲು ಬಯಸುವುದೇನೆಂದರೆ, ಪಾಶ್ಚಿಮಾತ್ಯವಾಗಿದ್ದ ಇಸ್ಲಾಮ್ ಪೌರ್ವಾತ್ಯವೆಂದು ಗುರುತಿಸಿಕೊಳ್ಳಲು ಪ್ರಾರಂಭಿಸಿರುವುದಾದರೂ ಎಂದಿನಿಂದ? ಇದೊಂದು ವಿರೋಧಾಭಾಸವಲ್ಲವೇ? ನಾಗರಿಕತೆಯ ಪರಿಕಲ್ಪನೆಯ ಅರ್ಥವೂ ಕಾಲ ಹಾಗೂ ದೇಶಗಳಿಗನುಗುಣವಾಗಿ ಬದಲುತ್ತಿರುತ್ತವೆ. ಮುಸ್ಲಿಮರು ‘ದಾರುಲ್ ಇಸ್ಲಾಮ್’ ಮತ್ತು ‘ದಾರುಲ್ ಹರಬ್’ ಎಂಬ ಪರಿಕಲ್ಪನೆಗಳ ಬದಲಾಗಿ ‘ಪಶ್ಚಿಮ’ ಮತ್ತು ‘ಪೂರ್ವ’ ಪರಿಕಲ್ಪನೆಗಳ ಬಳಕೆ ಮತ್ತು ತಮ್ಮನ್ನು ಪೌರ್ವಾತ್ಯವೆಂದು ಗುರುತಿಸಿಕೊಳ್ಳಲು ಪ್ರಾರಂಭಿಸಿರುವುದರ ಬಗ್ಗೆ ನನ್ನ ಮಿತ್ರನೂ ವಿದ್ಯಾರ್ಥಿಯೂ ಆಗಿರುವ ವಹೀದುದ್ದೀನ್ ಹೋಜಾ ಅಧ್ಯಯನ ಮಾಡುತ್ತಿರುವನು. ನಾಗರಿಕತೆಯನ್ನು ಗ್ರಹಿಸುವಲ್ಲಿ ನಮ್ಮಲ್ಲುಂಟಾಗಿರುವ ಪಲ್ಲಟವಿದು. ‘ನಾಗರಿಕತೆ’ಯು ಸದಾ ಬದಲುತ್ತಿರುವ ಪರಿಕಲ್ಪನೆ. ನಾಗರಿಕತೆ ಮತ್ತು ಇಸ್ಲಾಮಿಕ್ ನಾಗರಿಕತೆ ಇವೆರಡನ್ನೂ ಗ್ರಹಿಸುವಾಗ ನಮ್ಮಲ್ಲಿ ಪ್ರಭಾವ ಬೀರುವ ಅಂಶಗಳು ಬಹಳಷ್ಟಿವೆ. ಈ ಪ್ರಭಾವಗಳು ಪಾಶ್ಚಿಮಾತ್ಯರ ಗ್ರಹಿಕೆಯನ್ನೂ ಆವರಿಸಿಕೊಳ್ಳುತ್ತದೆ. ಪಲ್ಲಟಗಳು ಮತ್ತು ಸಂಘರ್ಷಗಳು ಇಲ್ಲಿ ಸಹಜ. ವಿವಿಧ ತಾತ್ವಿಕ ಚಿಂತನೆಗಳು ಮತ್ತು ಕಾಲಕ್ಕೆ ಒಗ್ಗಿಕೊಂಡು ಈ ಪರಿಕಲ್ಪನೆಯು ಅರ್ಥ ಪರಿವರ್ತನೆಯ ಪ್ರಕ್ರಿಯೆಗೆ ಒಳಗಾಗುತ್ತಲೇ ಇರುತ್ತದೆ.

ಫ್ಯಾಶಿಸ್ಟ್ ಸಿದ್ಧಾಂತಗಳ ಭ್ರಮೆ

‘ಮೂಲ’ ಅಥವಾ ‘ಶುದ್ಧ’ ನಾಗರಿಕತೆ ಎಂಬ ಸಂಕಲ್ಪ ಇದೆಯೋ ಇಲ್ಲವೋ ಎಂಬುವುದು ನಾಗರಿಕತೆಯ ಅಧ್ಯಯನದ ಬಹುಮುಖ್ಯ ಚರ್ಚಾ ವಿಷಯ. ಮಾನವ ಚರಿತ್ರೆಯ ಪ್ರಾರಂಭದಿಂದ ಇಂದಿನವರೆಗೂ ‘ಶುದ್ಧ ನಾಗರಿಕತೆ’ ಎಂಬುವುದಿದೆ ಎಂದು ಕೆಲ ಚಿಂತಕರು ಅಭಿಪ್ರಾಯಿಸುತ್ತಾ ಬಂದಿದ್ದಾರೆ. ಆಧುನಿಕ ಕಾಲದಲ್ಲಿ ‘ಶುದ್ಧ ನಾಗರಿಕತೆ’ಯ ವಕ್ತಾರರು ಯುರೋಪ್ ಮತ್ತು ಅಮೇರಿಕಾವನ್ನೊಳಗೊಂಡ ಪಾಶ್ಚಿಮಾತ್ಯ ನಾಗರಿಕತೆಯಾಗಿದ್ದು, ಉಳಿದೆಲ್ಲಾ ನಾಗರಿಕತೆ, ಸಂಸ್ಕೃತಿ, ಧರ್ಮ ಮತ್ತು ದೇಶ- ರಾಷ್ಟ್ರಗಳು ಪಾಶ್ಚಿಮಾತ್ಯರನ್ನು ಅನುಕರಿಸಬೇಕೆಂಬ ನಿಲುವು ಪ್ರಚಲಿತದಲ್ಲಿದೆ. ಈ ನಿಲುವು ಮಾರ್ಕ್ಸ್ ಸಹಿತವಿರುವ ಹಲವಾರು ಚಿಂತಕರದ್ದು. ಪಾಶ್ಚಿಮಾತ್ಯೇತರ ನಾಗರಿಕತೆಗಳೆಲ್ಲವೂ ತಮ್ಮ ಭವಿಷ್ಯವು ಪಾಶ್ಚಿಮಾತ್ಯ ನಾಗರಿಕತೆಯಂತೆ ಆಗಬೇಕೆಂದು ಬಯಸುತ್ತಿರುವವರು ಎಂದು ನಾಗರಿಕತೆಯ ಕುರಿತು ಈ ಏಕ ಮಾತ್ರ ತಿಳಿವಳಿಕೆಯುಳ್ಳ, ವಿಧಿವಾದಿ (deterministic) ಮಾರ್ಕ್ಸ್‌ ಹೇಳುತ್ತಾನೆ. ಮಾರ್ಕ್ಸ್‌ನ ಪ್ರಕಾರ, ಚರಿತ್ರೆಯೆಂಬುವುದು ಪ್ರಾರಂಭದಿಂದ ಕೊನೆಯವರೆಗೆ ಏಕಮುಖ ಪ್ರಕ್ರಿಯೆಯಾಗಿದ್ದು, ಇಲ್ಲಿ ಪ್ರತಿಯೊಂದು ಸಮೂಹವೂ ಕೂಡಾ ವಿಕಾಸಕ್ಕೊಳಪಡಬೇಕಾಗುತ್ತದೆ. ಸದ್ಯಕ್ಕೆ ವಿಕಾಸ ಹೊಂದಿರುವ ನಾಗರಿಕತೆಯ ಪ್ರತಿರೂಪ ಪಾಶ್ಚಿಮಾತ್ಯ ನಾಗರಿಕತೆಯಾಗಿದೆ. ಆಫ್ರಿಕನ್ನರು, ಮುಸ್ಲಿಮರು, ಭಾರತೀಯರು ಮತ್ತು ಚೀನಾದವರು ಸಹಿತ ಎಲ್ಲಾ ಸಮೂಹಗಳು ಪಾಶ್ಚಿಮಾತ್ಯ ನಾಗರಿಕತೆಯಲ್ಲಿ ತಮ್ಮ ಭವಿಷ್ಯವನ್ನು ಕಂಡುಕೊಳ್ಳಬೇಕು.‌

ಕೆಲವೇ ಕೆಲವು ರಾಷ್ಟ್ರಗಳು ಒಟ್ಟು ಸೇರಿರುವ ಸಣ್ಣ ಭೂಪ್ರದೇಶವೊಂದರ ನಾಗರಿಕತೆಯೊಂದಕ್ಕೆ ಬೊಟ್ಟು ಮಾಡಿ,‌ ‘ಎಲ್ಲರೂ ಆ ನಾಗರಿಕತೆಯನ್ನು ಅನುಕರಿಸಬೇಕೆಂದೂ, ನಿಮ್ಮ ಭವಿಷ್ಯ ರೂಪಿಸಲು ಆ ಮೂಲಕ ಮಾತ್ರವೇ ಸಾಧ್ಯವೆಂದೂ’ ಹೇಳಲಾಗುತ್ತಿದೆ. ಜಗತ್ತನ್ನು ಏಕರೂಪಗೊಳಿಸುವ ಮತ್ತು ಉಳಿದೆಲ್ಲಾ ವೈವಿಧ್ಯಮಯ ನಾಗರಿಕತೆಗಳನ್ನು ತೊಡೆದು ಹಾಕುವ ಪಾಶ್ಚ್ಯಾತೀಕರಣಕ್ಕಿರುವ (Westernization) ಈ ಶ್ರಮವು ಕಳೆದ ಮೂರು ಶತಮಾನಗಳಿಂದ ಎಗ್ಗಿಲ್ಲದೆ ನಡೆಯುತ್ತಿದೆ. ನಾನು ನಿಮ್ಮಲ್ಲಿ ಹೇಳುವುದೇನೆಂದರೆ, ಜಗತ್ತಿನಲ್ಲಿ ಪ್ರಾರಂಭದಿಂದಲೂ ವಿವಿಧ ನಾಗರಿಕತೆಗಳಿದ್ದವು. ಅವುಗಳ ವೈವಿಧ್ಯತೆಯನ್ನು ಅಳಿಸುವ ಪ್ರಯತ್ನಗಳೂ ನಡೆದಿದ್ದವು. ಆದರೆ ಅವೆಲ್ಲವೂ ವಿಫಲವಾಗಿವೆ. ಚರಿತ್ರೆಯು ಮರುಕಳಿಸುವುದಾದರೆ, ಪಾಶ್ಚ್ಯಾತೀಕರಣದ ಶ್ರಮವೂ ಪರಾಭವಗೊಳ್ಳುತ್ತದೆ. ಜಗತ್ತಿನಲ್ಲಿ ಎಂದಿಗೂ ಧರ್ಮಗಳು ಮತ್ತು ಸಂಸ್ಕೃತಿಗಳು ವೈವಿಧ್ಯವಾಗಿದ್ದವು. ಅದು ಮುಂದುವರಿಯುತ್ತದೆ ಕೂಡಾ. ನಾಗರಿಕತೆಗಳಲ್ಲಿನ ವಿವಿಧತೆಯನ್ನು ಅಳಿಸುವುದು ಸಾಧ್ಯವೇ? ಎಂಬ ಪ್ರಶ್ನೆಯೊಂದು ಇಲ್ಲಿ ಹುಟ್ಟುತ್ತದೆ. ವಿಭಿನ್ನ ನಾಗರಿಕತೆಗಳನ್ನು ಪತನಗೊಳಿಸಿ, ಏಕಶಿಲಾತ್ಮಕ ಜಗತ್ತೊಂದನ್ನು ಕಟ್ಟಲು ಸಾಧ್ಯವೆಂದಾಗಿದೆ ತೀವ್ರಗಾಮಿಗಳ (Extremists) ಅಭಿಮತ. ಇದು ಫ್ಯಾಶಿಸ್ಟರು ಹಾಗೂ ತೀವ್ರಗಾಮಿಗಳ ಕೇವಲ ಭ್ರಮೆ. ಜಗದ ವೈವಿಧ್ಯತೆಯನ್ನು ತೊಡೆದು ಹಾಕಿ ಏಕರೂಪತೆಯನ್ನು ಜಾರಿಗೆ ತರುವುದು ಇವರ ಗುರಿ. ವೈವಿಧ್ಯತೆಯೆಂಬುವುದು ದೈವದತ್ತವಾದುದು. ಆದ್ದರಿಂದಲೇ ಅದನ್ನು ನಿರಾಕರಿಸುವ ಬದಲು, ಅದನ್ನು ಸ್ವೀಕರಿಸಿ ಬದುಕು ಕಟ್ಟುವ ಗುರಿ ನಮ್ಮದಾಗಬೇಕು. ಇದೂ ಕೂಡಾ ನಾಗರಿಕತೆ ಅಧ್ಯಯನದ ಮಹತ್ವದ ಚರ್ಚೆಗಳಲ್ಲೊಂದು. ‘ನಾಗರಿಕತೆ ಅಧ್ಯಯನ’ದ ಭಾಗವಾಗಿರುವ ಈ ಸಂಸ್ಥೆಯು, ನಾಗರಿಕತೆಗಳ ವೈವಿಧ್ಯತೆಗಳನ್ನು ಮಾನ್ಯಮಾಡುತ್ತಾ ನಾಗರಿಕತೆಗಳ ನಡುವಿನ ಮೈತ್ರಿಯನ್ನು ಬಯಸಬೇಕಿದೆ.

ಸಮಾಜವೊಂದರ ಸಂಸ್ಕೃತಿ ಬದಲಾವಣೆ ಸಾಧ್ಯವೇ?

ಸಾಧ್ಯವೆಂಬ ಗ್ರಹಿಕೆಯಿಂದ ನಮ್ಮ ದೇಶ (ತುರ್ಕಿ) ತುಸು ಹೆಚ್ಚೇ ಪೀಡೆಗೊಳಗಾಗಿದೆ. ಇದು ಕೇವಲ ಬೌದ್ಧಿಕ ಅಥವಾ ಅಮೂರ್ತವಾದ ಕಲ್ಪನೆಯೇನಲ್ಲ. ಇದನ್ನು ಜಾರಿಗೊಳಿಸಲಾಗಿತ್ತು. ತುರ್ಕಿಯ ಜನತೆಯನ್ನು ಇಸ್ಲಾಮಿಕ್ ಸಂಸ್ಕೃತಿಯಿಂದ ಬೇರ್ಪಡಿಸಿ ಪಾಶ್ಚ್ಯಾತೀಕರಣಗೊಳಿಸುವ ಬಲವಂತದ ಶ್ರಮಗಳು ಇಲ್ಲಿ ನಡೆದಿದ್ದವು. ‘ಸಮೂಹವೊಂದರ ಸಂಸ್ಕೃತಿ ಬದಲಾವಣೆ ಸಾಧ್ಯವೇ?’ ಎಂಬ ಸಹಜ ಪ್ರಶ್ನೆಯೊಂದು ಇಲ್ಲಿ ಉದ್ಭವಿಸುತ್ತದೆ. ಇಸ್ಲಾಮಿಕ್ ಸಂಸ್ಕೃತಿಯನ್ನು ನೆಚ್ಚಿಕೊಂಡಿರುವ ಸಮಾಜವನ್ನು ಪಾಶ್ಚಾತ್ಯ ಸಂಸ್ಕೃತಿಗೆ ಒಗ್ಗಿಕೊಳ್ಳುವಂತೆ ಮಾಡುವುದು ಸಾಧ್ಯವೇ? ಈ ಪ್ರಕ್ರಿಯೆ ಪ್ರಾಯೋಗಿಕವೇ? ನಮ್ಮ ನಾಯಕರು ಇದು ಸಾಧ್ಯವೆಂದು ಮಾತ್ರವಲ್ಲ, ಅನಿವಾರ್ಯವೆಂದುಕೊಂಡರು. ಜಗತ್ತಿನಲ್ಲಿ ಕೇವಲ ಒಂದೇ ನಾಗರಿಕತೆ ಇರಬೇಕೆಂದೂ, ನಾವೆಲ್ಲರೂ ಅದನ್ನು ಕೂಡಿಕೊಳ್ಳಬೇಕೆಂದಾಗಿತ್ತು ಅವರ ನಿಲುವು. ‘ನಾವು ಪಾಶ್ಚ್ಯಾತೀಕರಣದ ಪ್ರಕ್ರಿಯೆಗೊಳಪಡದಿದ್ದಲ್ಲಿ ಹಿಂದುಳಿಯುವೆವು. ಆ ಪ್ರಕ್ರಿಯೆಗೊಳಪಟ್ಟ ನಾವೀಗ ಜಗತ್ತಿನ ಪ್ರತಿಷ್ಟಿತ ದೇಶಗಳ ಪಟ್ಟಿಯಲ್ಲಿರುವೆವು. ನಾವು ಇಸ್ಲಾಮಿಕ್ ಸಂಸ್ಕೃತಿಯನ್ನು ತ್ಯಜಿಸಿ ಪಾಶ್ಚಾತ್ಯರನ್ನು ಸೇರಿಕೊಳ್ಳಬೇಕು. ಒಂದು ದಿನ ಜಗತ್ತಿನಲ್ಲಿರುವ ನಾಗರಿಕತೆಗಳೆಲ್ಲವೂ ಪಾಶ್ಚಿಮಾತ್ಯ ಸಂಸ್ಕೃತಿಯನ್ನು ಅಪ್ಪಿಕೊಳ್ಳುತ್ತವೆ. ನಾವು ಆ ಪೈಕಿ ಮೊದಲಿಗರಾಗಬೇಕು.’ ಎಂದಾಗಿತ್ತು ನಮ್ಮ ನಾಯಕರ ಗುರಿ.
ತುರ್ಕಿಯನ್ನು ಪಾಶ್ಚ್ಯಾತೀಕರಣಗೊಳಿಸಲು ರಾಜಕೀಯ ಮತ್ತು ಸೈನಿಕ ನಡೆಗಳನ್ನು ಸ್ವೀಕರಿಸಲಾಗಿತ್ತು. ಎಲ್ಲವೂ ವಿಫಲವಾದವು. ನಿಮಗೆ ಸಹಮತವಿಲ್ಲದೇ ಇರಬಹುದು. ನನ್ನ ಪ್ರಕಾರ ಪಾಶ್ಚ್ಯಾತೀಕರಣಕ್ಕಿರುವ ಈವರೆಗಿನ ಎಲ್ಲಾ ಯತ್ನಗಳೂ ವಿಫಲಗೊಂಡಿವೆ. ಜಗತ್ತಿನಲ್ಲೆಲ್ಲೂ ಪಾಶ್ಚ್ಯಾತೀಕರಣದ ಶ್ರಮ ಯಶ ಕಾಣಲಿಲ್ಲ. ಸುಮಾರು ಎರಡು ಅಥವಾ ಮೂರು ಶತಮಾನಗಳ ಪ್ರಯತ್ನಗಳ ಬಳಿಕವೂ ಸಂಪೂರ್ಣವಾಗಿ ಪಾಶ್ಚ್ಯಾತೀಕರಣಗೊಂಡ ಒಂದೇ ಒಂದು ಪೌರ್ವಾತ್ಯ ದೇಶವನ್ನು ನಿಮಗೆ ಕಾಣಲು ಸಾಧ್ಯವಿಲ್ಲ. ಆಫ್ರಿಕಾ, ಲ್ಯಾಟಿನ್ ಅಮೇರಿಕಾ, ಭಾರತ ಮತ್ತು ಪಾಕಿಸ್ತಾನ ಹೀಗೆ ಪಾಶ್ಚಿಮಾತ್ಯರ ವಸಾಹಾತಾಗಿದ್ದ ರಾಷ್ಟ್ರಗಳನ್ನೊಮ್ಮೆ ನೋಡಿ, ಇವ್ಯಾವುವೂ ಕೂಡಾ ಪೂರ್ಣವಾಗಿ ಪಾಶ್ಚ್ಯಾತೀಕರಣಗೊಳ್ಳಲಿಲ್ಲ. ಈ ರಾಷ್ಟ್ರಗಳಲ್ಲಿ ಪಾಶ್ಚ್ಯಾತೀಕರಣದ ಪ್ರಕ್ರಿಯೆ ಅವ್ಯಾಹತವಾಗಿ ನಡೆದಿದ್ದವೂ ಕೂಡಾ. ಈ ವಾಸ್ತವಿಕತೆಯು ಪಾಶ್ಚ್ಯಾತೀಕರಣವೆಂಬ ಪ್ರಕ್ರಿಯೆಯ ಪ್ರಾಮಾಣಿಕತೆಯ ಬಗೆಗೆ ನನ್ನಲ್ಲಿ ಸಂದೇಹವನ್ನುಂಟುಮಾಡಿದೆ. ಪಾಶ್ಚಿಮಾತ್ಯ ಸಂಸ್ಕೃತಿಯನ್ನು ‘ಭವಿಷ್ಯದ ಕನಸು’ ಎಂದು ಬಿಂಬಿಸಲಾಗುತ್ತಿತ್ತು. ಪಾಶ್ಚ್ಯಾತೀಕರಣದ ಪ್ರಕ್ರಿಯೆಗೆ ಒಳಗಾಗಿರುವ ರಾಷ್ಟ್ರಗಳೆಲ್ಲವೂ ಪಾಶ್ಚಿಮಾತ್ಯರನ್ನು ಅವಲಂಬಿಸುವ ರಾಷ್ಟ್ರಗಳಾಗಿ ಉಳಿದವೇ ಹೊರತು ಅವರಿಗೆ ಸಮಾನರಾಗಿ ಬೆಳೆಯಲೇ ಇಲ್ಲ. ಹಾಗೆ ಬೆಳೆಯಲು ಅವಕಾಶವನ್ನೊದಗಿಸಿದ್ದಲ್ಲಿ ಇವೆಲ್ಲಾ ದೇಶಗಳು ಫ್ರಾನ್ಸ್, ಬ್ರಿಟನ್ ಮತ್ತು ಜರ್ಮನ್ನರನ್ನು ಸರಿದೂಗಿಸುತ್ತಿರಲಿಲ್ಲವೇ? ಅಷ್ಟಕ್ಕೂ ಆಫ್ರಿಕನ್ ದೇಶಗಳು ಅವರಿಗೆ ಸಮಾನವಾಗುವ ಅಗತ್ಯವಾದರೂ ಏನು? ಹಾಗಾದಲ್ಲಿ ಆ ದೇಶಗಳಲ್ಲಿನ ನೈಸರ್ಗಿಕ ಸಂಪನ್ಮೂಲಗಳ ಪ್ರಯೋಜನ ಪಡೆಯುವುದಾದರೂ ಅವರಿಂದ ಸಾಧ್ಯವಾಗುತ್ತಿತ್ತೇ? ತುರ್ಕಿಯಲ್ಲಿ ನಡೆಸಿದಂತೆ, ವಸಾಹತಾಗಿದ್ದ ದೇಶಗಳನ್ನು ಆಧುನೀಕರಣಗೊಳಿಸುವ ಮತ್ತು ಪಾಶ್ಚ್ಯಾತೀಕರಣಗೊಳಿಸುವ ಬಗ್ಗೆ ಆಡಿಕೊಳ್ಳುತ್ತಿದ್ದರೇ ವಿನಾ ಪಾಶ್ಚಿಮಾತ್ಯರನ್ನು ಸರಿದೂಗಿಸುವ ಮಟ್ಟಿಗೆ ಒಂದು ದೇಶವನ್ನು ಕೂಡಾ ಬದಲಾಯಿಸಲು ಅವರಿಗೆ ಸಾಧ್ಯವಾಗಲಿಲ್ಲ.
ನಾಗರಿಕತೆಯ ಅಧ್ಯಯನವೆಂಬುವುದು ಕೇವಲ ಬೌದ್ಧಿಕ ಚರ್ಚೆಯಲ್ಲ; ಅದರಾಚೆಗೆ ನೀತಿ ನಿರ್ಮಾಣದಲ್ಲಿ ಇವುಗಳಿಗಿರುವ ಸ್ವಾಧೀನ, ಪರಿಣಾಮಗಳು ದೊಡ್ಡ ಮಟ್ಟದ್ದು. ಈ ಅಧ್ಯಯನಗಳು ಹಲವು ಸಮೂಹಗಳ, ರಾಷ್ಟ್ರಗಳ ಹಣೆಬರಹವನ್ನು ಬದಲಿಸಬಲ್ಲುದು. ಅಂತಾರಾಷ್ಟ್ರೀಯ ಸಂಬಂಧಗಳಲ್ಲಿ ‘ನಾಗರಿಕತೆಗಳ ಘರ್ಷಣೆ’ (Clash of Civilization) ಎಂಬ ಪರಿಕಲ್ಪನೆಯು ಬೀರಿರುವ ಪ್ರಭಾವ ಈ ಅಧ್ಯಯನಗಳ ಸ್ವಾಧೀನಕ್ಕಿರುವ ಇತ್ತೀಚಿನ ಉದಾಹರಣೆ. ಅಂತಾರಾಷ್ಟ್ರೀಯ ಸಂಬಂಧಗಳಲ್ಲದೆ, ವೈಯುಕ್ತಿಕ ಸಂಬಂಧಗಳಲ್ಲೂ ಈ ಪರಿಕಲ್ಪನೆಗಳ ಪರಿಣಾಮವು ದಿಟವಾಗಿದೆ. ಆದ್ದರಿಂದಲೇ ಇವೆಲ್ಲಾ ಅಧ್ಯಯನಗಳನ್ನು ಕೇವಲ ಬೌದ್ಧಿಕ ಕಸರತ್ತು ಎಂದು ಅಲ್ಲಗಳೆಯುವಂತಿಲ್ಲ. ನಾನು ಆಗಲೇ ತಿಳಿಸಿದಂತೆ, ಅಂತಾರಾಷ್ಟ್ರೀಯ ಮಟ್ಟದ ನೀತಿ ನಿರ್ಮಾಣ ಮತ್ತು ಇನ್ನಿತರ ಸಂಬಂಧಗಳಲ್ಲಿ ಇವುಗಳ ಪ್ರಯೋಜನ ಮತ್ತು ಸ್ವಾಧೀನ ಸಣ್ಣದೇನಲ್ಲ. ‘ನಾಗರಿಕತೆಯ ಅಧ್ಯಯನ’ ಇಂದು ನಾವು ಅತಿ ಹೆಚ್ಚಾಗಿ ಅಧ್ಯಯಕ್ಕೊಳಪಡಿಸಲೇಬೇಕಾದ ವಿಷಯ. ಯಾಕೆ? ನಾಗರಿಕತೆಗೆಳೆಡೆಯಲ್ಲಿನ ಸಂಬಂಧಗಳು ಹಿಂದೆಂದಿಗಿಂತಲೂ ಇಂದು ಪ್ರಾಮುಖ್ಯತೆಯನ್ನು ಪಡೆಯುತ್ತಿದೆ. ಜಗತ್ತು ಒಂದು ಗ್ರಾಮವಾಗಿ ಪರಿವರ್ತನೆಗೊಂಡಿರುವುದೇ ಮುಖ್ಯ ಕಾರಣ. ಹಿಂದೆ, ಭೌಗೋಳಿಕವಾಗಿ ಸಮೀಪದಲ್ಲಿದ್ದ ರಾಷ್ಟ್ರಗಳು ಕೊಡು ಕೊಳೆಯಲ್ಲೇರ್ಪಡುತ್ತಿದ್ದವು. ಚೀನಾದ ನಾಗರಿಕತೆ ಭಾರತ ಅಥವಾ ಜಪಾನಿನ ನಾಗರಿಕತೆಯೊಂದಿಗೆ ವ್ಯವಹರಿಸುತ್ತಿತ್ತು. ಇಂದಿನ ಪರಿಸ್ಥಿತಿ ಹಾಗಿಲ್ಲ. ಚೀನಾದ ನಾಗರಿಕತೆ ಜಗತ್ತಿನೆಲ್ಲಾ ನಾಗರಿಕತೆಗಳೊಂದಿಗೆ ಸಂವಹಿಸುತ್ತಿದೆ. ಅಂತಾರಾಷ್ಟ್ರೀಯ ಸಂಬಂಧಗಳಲ್ಲಿ ಇಂದು ದೊಡ್ಡದಾದ ಬದಲಾವಣೆ ನಮಗಿಲ್ಲಿ ದರ್ಶಿಸಬಹುದು. ಅಂತೆಯೇ, ಪಾಶ್ಚಿಮಾತ್ಯ ನಾಗರಿಕತೆಯು ಆಫ್ರಿಕನ್ ಮತ್ತು ಏಷ್ಯಾ ಮೈನರಿನ ರಾಷ್ಟ್ರಗಳೊಂದಿಗೆ ಸಂವಹನ ನಡೆಸುತ್ತಿದ್ದವು. ಇಂದು ಯುರೋಪ್ ಜಗತ್ತಿನಲ್ಲಿರುವ ಎಲ್ಲಾ ನಾಗರಿಕತೆಗಳನ್ನು ಪ್ರಭಾವಿಸುವ ಮತ್ತು ಅವರ ಪ್ರಭಾವಕ್ಕೊಳಗಾಗುವ ಸನ್ನಿವೇಶವಿದೆ. ನಾಗರಿಕತೆಗಳ ಸಂಬಂಧದಲ್ಲುಂಟಾಗಿರುವ ಬಲುದೊಡ್ಡ ಬದಲಾವಣೆಯಿದು. ಇವೆಲ್ಲಾ ಕಾರಣಗಳಿಗಾಗಿ ನಾಗರಿಕತೆ ಅಧ್ಯಯನವಿಂದು ಬಹಳ ಮುಖ್ಯವೆನಿಸುತ್ತದೆ.

ನವಯುಗದಲ್ಲಿ ನಾಗರಿಕತೆಗಳ ಸಂವಹನ

ಚೆಕ್ ಸೈನ್ಸ್ ಅಕಾಡೆಮಿಯಲ್ಲಿ ಉಪನ್ಯಾಸವೊಂದಕ್ಕೆ ನನ್ನನ್ನು ಆಹ್ವಾನಿಸಲಾಗಿತ್ತು. ಮಾತುಕತೆ ಮುಗಿದ ಬಳಿಕ ವ್ಯಕ್ತಿಯೊಬ್ಬರು ನನ್ನನ್ನು ಮಾತನಾಡಿಸಿದರು. ಅಕಾಡೆಮಿಶಿಯನ್ ಅಥವಾ ರಾಜಕಾರಣಿಯೇನೋ ಇರಬೇಕು. ‘ಯುರೋಪಿನ ಹೊರಕ್ಕೆ ನಡೆಯುತ್ತಿರುವ ಸಮಸ್ಯೆಗಳಿಂದ ಯುರೋಪನ್ನು ಕಾಪಾಡಬಹುದೇ?’ ಎಂದು ನನ್ನನ್ನು ಕೇಳಿದರು. ‘ಅವೆಲ್ಲಾ ಮುಂಚಿನ ಮಾತು, ಈಗದು ಸಾಧ್ಯವಿಲ್ಲ. ಯುರೋಪಿನಲ್ಲಿ ನಡೆಯುವುದು, ಹೊರ ಜಗತ್ತನ್ನೂ, ಹೊರ ಜಗತ್ತಿನ ಘಟನೆಗಳು ಯುರೋಪಿನ ಮೇಲೂ ಪ್ರಭಾವ ಬೀರಲಿದೆ.’ ಎಂದುತ್ತರಿಸಿದೆ. ಚಾರಿತ್ರಿಕವಾಗಿಯೂ, ಮಾನವಿಕವಾಗಿಯೂ ನಾವೀಗ ‘ಮುಕ್ತ ನಾಗರಿಕತೆ’ಯ ಕಾಲದಲ್ಲಿದ್ದೇವೆ. ಎಲ್ಲಾ ನಾಗರಿಕತೆಗಳೂ ಉಳಿದೆಲ್ಲಾ ನಾಗರಿಕತೆಗಳೊಂದಿಗೂ ಸಂವಹನದಲ್ಲೇರ್ಪಡಬಹುದಾದ ಕಾಲವಿದು. ದೂರದೂರನ್ನು ಬೇಗನೇ ತಲುಪಲು ಸಾರಿಗೆ ವ್ಯವಸ್ಥೆಗಳು ಮತ್ತು ಅತ್ಯಾಧುನಿಕ ತಂತ್ರಜ್ಞಾನಗಳಿವೆ. ಮೊದಲು ಇಬ್ನು ಬತೂತಾ, ಮಾರ್ಕೊ ಪೌಲೋ ಮತ್ತು ಔಲಿಯಾ ಚಲೇಬಿಯಂತಹ ಬೆರಳೆಣಿಕೆಯಷ್ಟೇ ಸಂಚಾರಿಗಳಿದ್ದರು. ಇಂದು ಹೆಚ್ಚಿನಾಂಶ ನಾವೆಲ್ಲರೂ ಸಂಚಾರಿಗಳೇ. ಸಂಚರಿಸದಿದ್ದರೂ ಇಂಟರ್ನೆಟ್, ಟೀವಿ, ಪುಸ್ತಕ ಮತ್ತು ಇನ್ನಿತರ ಸೌಲಭ್ಯಗಳ ಮೂಲಕ ಅಲ್ಲಿನ ದೃಶ್ಯಗಳನ್ನು ದರ್ಶಿಸುತ್ತೇವೆ. ಮಧ್ಯಕಾಲದಲ್ಲಿ ಅಭೂತಪೂರ್ವವೆಂದು ಪರಿಗಣಿಸಲಾದ ಸಂಗತಿಗಳು ಇಂದು ಸರ್ವೇ ಸಾಮಾನ್ಯವಾಗಿವೆ. ಉದಾಹರಣೆಗೆ, ನಮ್ಮೀ ಸಂಸ್ಥೆಯಲ್ಲಿಂದು ಸುಮಾರು 40ರಷ್ಟು ರಾಷ್ಟ್ರಗಳ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುವರು. ಹೊಸ ವಿದ್ಯಾರ್ಥಿಗಳ ದಾಖಲಾತಿಯ ಬಳಿಕ ಆ ಕುರಿತ ನಿಖರ ಮಾಹಿತಿ ನನಗಿಲ್ಲ. ಏನಿದ್ದರೂ ಎರಡು ಶತಮಾನಗಳ ಹಿಂದೆ ನಲ್ವತ್ತು ರಾಷ್ಟ್ರಗಳ ವಿದ್ಯಾರ್ಥಿಗಳು ಒಂದೇ ವಿದ್ಯಾಲಯದಲ್ಲಿ ಕಲಿಯುವುದು ದೂರದ ಮಾತಾಗಿತ್ತು. ಅದೀಗ ಸಾಮಾನ್ಯ ಸಂಗತಿ. ಅಷ್ಟೇಕೆ ಒಂದು ಶತಮಾನದ ಹಿಂದೆಯೂ ಇದು ಅಸಾಧ್ಯವಾಗಿತ್ತು. ಇಂದಿನ ಜನರು ವಿಶ್ವದ ಮುಕ್ಕುಮೂಲೆಗೂ ಸಂಚರಿಸತೊಡಗಿರುವರು. ಈಗೀಗ ನಿಮ್ಮ ನೆರೆಯವನ ದೇಶ ಯಾವುದೆಂದು ಹೇಳಲಾಗದ ಪರಿಸ್ಥಿತಿಯಿದೆ. ವ್ಯಾಪಾರಗಳು ದೇಶಗಳ ಗಡಿ ದಾಟಿವೆ. ದೂರಗಳು ಅಳಿದುಹೋಗಿವೆ. ವ್ಯಕ್ತಿಗಳ, ನಾಗರಿಕತೆಗಳ ಮತ್ತು ರಾಷ್ಟ್ರಗಳ ಸಂಬಂಧಕ್ಕೆ ದೂರ ಅಡ್ಡಿಯಲ್ಲ; ಸಮಯದ ತೊಡಕಿದೆಯಷ್ಟೆ. ಅಮೇರಿಕೆಯಲ್ಲಿರುವ ಸ್ನೇಹಿತನನ್ನು ಸಂಪರ್ಕಿಸಲು ಅಡ್ಡಿಯಾಗುತ್ತಿರುವುದು ಸಮಯ ಮಾತ್ರ. ನಾನು ಎಚ್ಚರದಲ್ಲಿರುವಾಗ ಆತ ಮಲಗಿರುತ್ತಾನೆ. ಒಂದೊಮ್ಮೆ ಅವನು ಎಚ್ಚರದಲ್ಲಿದ್ದರೆ, ನಾನು ನಿದ್ದೆಗೆ ಜಾರಿರುವೆ. ಈ ಹೊಸ ಯುಗದಲ್ಲಿ ಸಮಯದ ತೊಡಕಿದೆಯೇ ಹೊರತು ದೂರದ್ದಲ್ಲ. ‘ಮುಕ್ತ ನಾಗರಿಕತೆ’ಯ ಈ ಯುಗದಲ್ಲಿ ಅಂತಾರಾಷ್ಟ್ರೀಯ ಸಂಬಂಧಗಳು, ರಾಜಕೀಯ, ವ್ಯಾಪಾರ ಮತ್ತು ವಿದ್ಯಾಭ್ಯಾಸ ಕ್ಷೇತ್ರಗಳಲ್ಲಿ ಬಹಳಷ್ಟು ಬದಲಾವಣೆಗಳಾಗಿವೆ. ಧರ್ಮಗಳೂ ಇದರಿಂದ ಹೊರತಾಗಿಲ್ಲ. ಈ ಆಮೂಲಾಗ್ರ ಬದಲಾವಣೆಯ ಕುರಿತು ಜಾಗರೂಕರಾಗಿ, ಅದಕ್ಕನುಗುಣವಾಗಿ ನಾವು ಕಾರ್ಯಾಚರಿಸಬೇಕಾದ ಜರೂರತ್ತಿದೆ. ಹಾಗಿದ್ದಲ್ಲಿ ಮಾತ್ರ ಇಂದು ಉಳಿಗಾಲ. ಇದನ್ನು ನಾನು ಉದಾಹರಣೆ ಸಹಿತ ವಿವರಿಸುತ್ತೇನೆ. ನಮ್ಮ ಗಡಿಯಾಚೆಗೆ ಸಿರಿಯಾದಲ್ಲಿ ಬೆಟ್ಟದಷ್ಟು ಸಮಸ್ಯೆಗಳಿವೆ. ಅಲ್ಲಿನ ಸಂಘರ್ಷಗಳಿಗೆ ಬಲಿಪಶುಗಳಾಗುವವರು ಯಾರು? ಕೇವಲ ಸಿರಿಯನ್ನರೇ? ಅಲ್ಲ. ರಶ್ಯನ್ನರು, ಅಮೇರಿಕನ್ನರು, ಜರ್ಮನ್ನರು, ಚೀನಿಯರು ಮತ್ತು ಫ್ರೆಂಚರು ಹೀಗೆ ಬಹುತೇಕ ಎಲ್ಲಾ ರಾಷ್ಟ್ರಗಳ ಪ್ರಜೆಗಳು ಸಿರಿಯಾದಲ್ಲಿದ್ದಾರೆ. ಕೇವಲ ಪ್ರಾದೇಶಿಕ ಸಮಸ್ಯೆ ಎಂಬ ಕಲ್ಪನೆ ಈಗಿಲ್ಲ. ಈ ಸಮಸ್ಯೆಯನ್ನು ಬಗೆಹರಿಸಲು ಕೇವಲ ಸಿರಿಯನ್ನರ ಅಹವಾಲು ಪಡೆದರಾಯಿತೇ? ಸಾಲದು. ಅಲ್ಲಿ ನೆಲೆಸಿರುವ ಎಲ್ಲಾ ರಾಷ್ಟ್ರಗಳ ಪ್ರಜೆಗಳನ್ನೂ ಕೇಳಬೇಕಾಗುತ್ತದೆ. ‘ಮುಕ್ತ ನಾಗರಿಕತೆ’ಗಿರುವ ಒಂದೊಳ್ಳೆಯ ನಿದರ್ಶನವಿದು. ಪ್ರಾದೇಶಿಕತೆಗೆ ಒಗ್ಗಿಕೊಂಡು ಮಾತ್ರ ಚಿಂತಿಸುವುದು ಪ್ರಾಯೋಗಿಕವಲ್ಲ. ಜಾಗತಿಕ ಮಟ್ಟದ ಸಂಬಂಧಗಳು, ಆರ್ಥಿಕತೆ ಇವೆಲ್ಲವನ್ನೂ ಗಣನೆಗೆ ತೆಗೆದು ಆಲೋಚಿಸಿದ ಬಳಿಕ ಮಾತ್ರವೇ ಪ್ರಾದೇಶಿಕ ಸಮಸ್ಯೆಗಳಿಗೂ ಪರಿಹಾರ ಕಂಡುಕೊಳ್ಳಲು ಸಾಧ್ಯ. ಇವೆಲ್ಲಾ ಕಾರಣಗಳಿಂದ ನಾಗರಿಕತೆಯ ಅಧ್ಯಯನವಿಂದು ಬಹಳ ಮುಖ್ಯವಾಗುತ್ತದೆ. ‘ಏಕರೂಪ ನಾಗರಿಕರು’ ಅಥವಾ ‘ಏಕರೂಪ ಸಮೂಹ’ವೆಂಬ ಪರಿಕಲ್ಪನೆಗಿಂದು ಆಸ್ಪದವಿಲ್ಲ. ಎಲ್ಲಾ ಸಮೂಹವೂ ವಿಭಿನ್ನ ಸಂಸ್ಕೃತಿ ಮತ್ತು ನಾಗರಿಕತೆಗಳ ಜನರನ್ನೊಳಗೊಂಡಿವೆ. ಯುರೋಪಿನತ್ತ ಒಮ್ಮೆ ಕಣ್ಣು ಹಾಯಿಸಿ. ಹಿಂದೆ ಯುರೋಪ್ ಕ್ರಿಶ್ಚಿಯನ್ನರಿದ್ದಾಗಿತ್ತು; ಏಕರೂಪವಾಗಿ ತ್ತು. ಇಟಲಿಯಲ್ಲಿ ಇಟಲಿಯನ್ನರೂ, ಜರ್ಮನಿಯಲ್ಲಿ ಜರ್ಮನ್ನರೂ ಇದ್ದರು. ಈಗ ಮುಸ್ಲಿಮರು, ಬುದ್ಧರು, ಹಿಂದೂಗಳು ಮತ್ತು ಆಫ್ರಿಕನ್ನರು ಸಹಿತ ಯುರೋಪ್ ಎಲ್ಲರದ್ದಾಗಿದೆ. ಒಟ್ಟಿನಲ್ಲಿ ಸಂಕರ ಸಮೂಹಗಳು ರೂಪುಗೊಂಡಿವೆ. ವಿವಿಧ ನಾಗರಿಕತೆಗಳು ಒಟ್ಟುಗೂಡಿ ಹೊಸ ಸಂಕರ ಸಮೂಹವೊಂದರ ಸೃಷ್ಟಿಯಾಗಿದೆ. ಈ ಬದಲಾವಣೆಗೆ ತಕ್ಕಂತೆ ರಾಜನೀತಿಗಳು ರೂಪತಳೆದಿಲ್ಲ. ಹೊಸ ಸಮೂಹದಲ್ಲಿ ಹಳೆ ರಾಜನೀತಿಗಳೇ ಜಾರಿಯಲ್ಲಿವೆ. ಇದರಿಂದ ವಿಪರೀತ ಪರಿಣಾಮಗಳು ಉಂಟಾಗಿರುವುದೇ ಹೆಚ್ಚು. ರಾಷ್ಟ್ರ ಮತ್ತು ಸಮೂಹಗಳಲ್ಲಿ ಬದಲಾವಣೆಗಳಾಗಿವೆ. ಯುರೋಪಿನಲ್ಲಿ ಎರಡನೇ ಅತಿ ದೊಡ್ಡ ಧರ್ಮವಾಗಿ ಇಸ್ಲಾಮ್ ಮಾರ್ಪಟ್ಟಿದೆ. ಅಲ್ಲೀಗ ಕ್ರಿಶ್ಚಿಯನ್ನರು ಮಾತ್ರವಲ್ಲ, ಬುದ್ಧರು ಮತ್ತು ಹಿಂದೂಗಳೂ ಇದ್ದಾರೆ. ಕೇವಲ ಬಿಳಿಯರದ್ದಾಗಿದ್ದ ಯುರೋಪಿನಲ್ಲಿ ಆಫ್ರಿಕನ್ನರು ಮತ್ತು ಇತರ ವರ್ಗಗಳ ಜನರೂ ಕೂಡಾ ವಾಸಿಸುತ್ತಿರುವರು. ನಾಗರಿಕತೆಗಳ ಮತ್ತು ವ್ಯಕ್ತಿಗಳ ನಡುವೆಯಿರುವ ವೈವಿಧ್ಯತೆಗಳ ನಿರ್ವಹಣೆಯು ಆಧುನಿಕ ಜಗತ್ತಿನಲ್ಲಿ ಬಲುದೊಡ್ಡ ಸವಾಲಾಗಿ ಪರಿಣಮಿಸಿದೆ. ಇವೆಲ್ಲಾ ವೈವಿಧ್ಯತೆಗಳನ್ನು ವರದಾನವೆಂದುಕೊಳ್ಳದೆ, ಅಪಲಕ್ಷಣವೆಂದು ಬಗೆದು ಅಳಿಸಹೊರಟರೆ ಸಮಾಜ ಹದಗೆಡುತ್ತದೆ. ವೈವಿಧ್ಯತೆಗಳ ನಿರ್ವಹಣೆಗೆ ಪರಿಣಾಮಕಾರಿಯಾದ ಮಾರ್ಗವನ್ನು ಕಂಡುಕೊಳ್ಳದಿದ್ದಲ್ಲಿ ಇಲ್ಲಿನ ಬದುಕು ದುಸ್ತರವಾದೀತು.

ಹೊಸ ನಾಗರಿಕತೆಯಲ್ಲಿ ಇಬ್ನು ಖಲ್ದೂನ್

ಕಳೆದ ಕೆಲವು ವರ್ಷಗಳಿಂದೀಚೆಗೆ ಅಮೇರಿಕೆಯಲ್ಲಿ ಬಹಳಷ್ಟು ಕಪ್ಪು ವರ್ಗೀಯರನ್ನು ವಧಿಸಲಾಯಿತು. ಕಾರಣವೇನಾಗಿತ್ತು? ಬಿಳಿ ಮತ್ತು ಕಪ್ಪು ವರ್ಗದ ನಡುವಿನ ವೈವಿಧ್ಯತೆ ನಿರ್ವಹಣೆಯಲ್ಲಿನ ವೈಫಲ್ಯ. ಯುರೋಪಿನಲ್ಲೂ ಇದೇ ಅವಸ್ಥೆ. ಹೆಚ್ಚುತ್ತಿರುವ ಇಸ್ಲಾಮೋಫೋಬಿಯ, ಆಫ್ರಿಕಾ ಮತ್ತು ಮಧ್ಯಪ್ರಾಚ್ಯದ ವಲಸಿಗರೊಂದಿಗಿನ ಅಸಹಿಷ್ಣುತೆ ಇವೆಲ್ಲದರ ಮೂಲ ಕಾರಣವೂ ವೈವಿಧ್ಯತೆ ನಿರ್ವಹಣೆಯ ವೈಫಲ್ಯವೇ. ಇವರೆಲ್ಲರೂ ಇನ್ನೂ ಕೂಡಾ 19ನೇ ಶತಮಾನದಲ್ಲಿಯೇ ಸಿಲುಕಿರುವರು. ತಮ್ಮ ರಾಷ್ಟ್ರಗಳು ಏಕರೂಪಿ ರಾಷ್ಟ್ರಗಳಾಗಿಯೇ ಉಳಿಯಬೇಕೆಂದು ಚಿಂತಿಸುತ್ತಿರುವರು. ಈಗದು ಅಸಾಧ್ಯದ ಮಾತು. ಇತರ ಸಂಸ್ಕೃತಿಯ ಜನರು ನಮ್ಮ ರಾಷ್ಟ್ರಗಳಿಗೆ ವಲಸೆ ಬರುವರು ಮತ್ತು ಅವರು ಧರ್ಮ, ವರ್ಗ, ವರ್ಣಗಳಲ್ಲಿ ಭಿನ್ನರು ಎಂಬುವುದನ್ನು ನಾವು ಅರಗಿಸಿಕೊಳ್ಳಲೇಬೇಕು. ಅದರಂತೆ ವೈವಿಧ್ಯತೆಯನ್ನು ನಿಭಾಯಿಸಲು ಅರಿತುಕೊಳ್ಳಬೇಕು. ಏಕರೂಪ ನಾಗರಿಕತೆ ಎಂಬ ಗ್ರಹಿಕೆಯನ್ನು ತೊರೆದು, ವಿವಿಧತೆ ತುಂಬಿರುವ ನಾಗರಿಕತೆಯನ್ನು ಸ್ವೀಕರಿಸುವ ಮತ್ತು ಅದಕ್ಕೆ ತಕ್ಕ ಹೊಸ ರಾಜಕೀಯ, ಆರ್ಥಿಕ ಮತ್ತು ವಿದ್ಯಾಭ್ಯಾಸ ನೀತಿಗಳನ್ನು ಜಾರಿಗೊಳಿಸಿ ಹೊಸ ಜಾಗತಿಕ ಕ್ರಮವೊಂದನ್ನು ರೂಪಿಸಬೇಕಾದ ಅನಿವಾರ್ಯತೆ ಈಗ ನಮ್ಮ ಮುಂದಿದೆ. ಈ ಪ್ರಯತ್ನಕ್ಕೆ ಇಬ್ನು ಖಲ್ದೂನ್ ದಾರಿದೀಪವಾಗಬಲ್ಲರು ಎಂದು ನನಗನಿಸುತ್ತದೆ. ಹೇಗೆ? ಇಬ್ನು ಖಲ್ದೂನರ ಅಭಿಪ್ರಾಯದಂತೆ, ನಾಗರಿಕವಲ್ಲದ ಸಮಾಜಗಳಿಲ್ಲ. ಎಲ್ಲವೂ ನಾಗರಿಕವೇ. ‘ಮುಖದ್ದಿಮ’ದಲ್ಲಿ ಇಬ್ನು ಖಲ್ದೂನರ ಪ್ರಸ್ತಾಪ ಈ ರೀತಿಯಿದೆ: “ಇಜ್ತಿಮಾ ಉಲ್ ಬಶರಿ, ಮದನಿಯ್ಯತ್ ಮತ್ತು ಉಮ್ರನ್ ಇವು ಸಮಾನಾರ್ಥಕ ಪದಗಳು.” ನಮಗೆಲ್ಲರಿಗೂ ಚಿರಪರಿಚಿತವಾಗಿರುವ ಅರೇಬಿಕ್ ಸಂಕಲ್ಪವಾಗಿದೆ ಮದನಿಯ್ಯತ್. ಅರಬಿಗಳು ತೊರೆದಿರುವ ಈ ಪದವನ್ನು ತುರ್ಕಿಗಳು ಇಂದು ಹೆಚ್ಚಾಗಿ ಬಳಸುತ್ತಿರುವುದು ಸೋಜಿಗವೇ ಸರಿ. ಅಭಿಜಾತ ಅರಬಿಯಲ್ಲಿ ಮದನಿಯ್ಯತ್ ನಾಗರಿಕತೆಗೆ (Civilization) ಸಂವಾದಿಯಾಗಿತ್ತು. ಇಜ್ತಿಮಾ ಉಲ್ ಬಶರಿ ಮಾನವ ಸಮೂಹ ಎಂಬರ್ಥವನ್ನು ನೀಡುತ್ತದೆ. ಉಮ್ರನ್ ಕೂಡಾ ಇದೇ ಅರ್ಥವನ್ನು ಹೋಲುತ್ತದೆ. ಇಬ್ನು ಖಲ್ದೂನ್ ಹೇಳುವ ಪ್ರಕಾರ ‘ಮದನಿಯ್ಯತ್’ ಅನ್ನು ಹೆಚ್ಚಾಗಿ ಬಳಸಿದವರು ಫಾರಾಬಿ, ಇಬ್ನು ಸೀನಾ ಮತ್ತು ಇಬ್ನು ರುಶ್ದ್ ರಂತಹ ಹುಕಮಾ ಅಥವಾ ತತ್ವಜ್ಞಾನಿಗಳು. ಈ ಮದನಿಯ್ಯತಿನಿಂದಲೇ ಅಲ್ ಇನ್ಸಾನುಲ್ ಮದನಿಯ್ಯ್ ಬಿತ್ತಬಇ ಎಂಬ ಪರಿಕಲ್ಪನೆ ಸೃಷ್ಟಿಯಾಗಿರುವುದು. ಎಲ್ಲಾ ಮನುಷ್ಯರೂ ನೈಸರ್ಗಿಕವಾಗಿಯೇ ನಾಗರಿಕ ಜೀವಿ ಅಥವಾ ಸಮೂಹ ಜೀವಿ ಎಂದು ಇದರರ್ಥ. ಕೆಲವೊಮ್ಮೆ ರಾಜಕೀಯ ಪ್ರಾಣಿ ಎಂಬರ್ಥದಲ್ಲೂ ಬಳಸಲಾಗಿದೆ. ಮಾನವನನ್ನು ಕೇವಲ ರಾಜಕೀಯಕ್ಕೆ ಮಾತ್ರ ಸೀಮಿತಗೊಳಿಸುವುದು ಸರಿಕಾಣುತ್ತಿಲ್ಲ. ರಾಜಕೀಯವು ನಾಗರಿಕತೆ ಅಥವಾ ಮದನಿಯ್ಯತ್ತಿನ ಅಂಶಗಳಲ್ಲೊಂದು. ಮದನಿಯ್ಯ್ ಎಂದರೆ ಸಾಮೂಹಿಕವೆಂದರ್ಥ. ಮುಸ್ಲಿಮ್ ತತ್ವಜ್ಞಾನಿಗಳ ಪ್ರಕಾರ, ಮಾನವನು ನೈಸರ್ಗಿಕವಾಗಿಯೇ ನಾಗರಿಕ ಜೀವಿ. ಮಾನವನನ್ನು ನಾಗರಿಕಗೊಳಿಸುವ ಪ್ರಕ್ರಿಯೆಗೆ ಬಲವಂತಪಡಿಸುವ ಅಗತ್ಯವಿಲ್ಲ. ಫುಖಹಾ (ನ್ಯಾಯಶಾಸ್ತ್ರಜ್ಞರು) ಮತ್ತು ಮುತಕಲ್ಲಿಮುಗಳು (ದೇವತಾಶಾಸ್ತ್ರಜ್ಞರು) ಹೆಚ್ಚಾಗಿ ಬಳಸಿರುವುದು ಇಜ್ತಿಮಾ ಉಲ್ ಬಶರಿ ಎಂಬ ಪರಿಕಲ್ಪನೆಯನ್ನು. ಮಾನವ ಸಮೂಹಕ್ಕೆ ಪ್ರವಾದಿಗಳ ಅನಿವಾರ್ಯತೆಯನ್ನು ಸಾಬೀತುಪಡಿಸುವ ಚರ್ಚೆಗಳಲ್ಲಿ, ನಿಯಮಗಳು ಮತ್ತು ನೈತಿಕತೆಗಳ ವಿವರಣೆಯಲ್ಲಿ ಇಜ್ತಿಮಾ ಉಲ್ ಬಶರಿಯ ಬಳಕೆಯಿದೆ. ಉಮ್ರನ್ ಎಂಬ ಪರಿಕಲ್ಪನೆಯೂ ಇಲ್ಲಿ ಬಳಕೆಗೆ ಬರುತ್ತದೆ. ಇವೆಲ್ಲವೂ ಸಮಾನಾರ್ಥಕ ಪದಗಳು. ತುರ್ಕಿಯಲ್ಲಿ ಬಳಸಲಾಗುವ ‘ಮದನಿಯ್ಯ್’ ಫ್ರೆಂಚ್ ಅನುವಾದವೆಂದು ಕೆಲವರು ವಾದಿಸಿರುವರು. ಇದು ಆಧಾರರಹಿತವೆಂಬುದು ದಿಟ. ಆರು ಶತಮಾನಗಳ ಹಿಂದೆ ಇಬ್ನು ಖಲ್ದೂನ್ ಬಳಸಿರುವ ಪರಿಕಲ್ಪನೆಯಿದು. ಇಬ್ನು ಸೀನಾ ಮತ್ತು ಇಬ್ನು ರುಷ್ದ್ ರಂತಹ ತತ್ವಜ್ಞಾನಿಗಳು ಇದನ್ನು ಬಳಸಿರುವುದಾಗಿ ಇಬ್ನು ಖಲ್ದೂನರ ಉಲ್ಲೇಖವಿದೆ. ಮದನಿಯ್ಯತ್ ನಾಗರಿಕತೆ (Civilization) ಗೆ ಸಂವಾದಿಯಾಗಿ ಓಟೋಮನ್ನರು ಸೃಷ್ಟಿಸಿರುವುದಲ್ಲ. ಇದು ಪುರಾತನ ಪರಿಕಲ್ಪನೆ. ಪ್ರಾಯಶಃ ಮದನಿಯ್ಯತಿಗೆ ಸಂವಾದಿಯಾಗಿ 17ನೇ ಶತಮಾನದಲ್ಲಿ civilization ನ್ನು ಆವಿಷ್ಕರಿಸಲಾಗಿದೆ. ಒಟ್ಟಿನಲ್ಲಿ ಮದನಿಯ್ಯತ್ Civilization ಗಿಂತಲೂ ಹಿಂದೆಯೇ ಅಸ್ತಿತ್ವದಲ್ಲಿರುವ ಪರಿಕಲ್ಪನೆ. ಪದಗಳ ಬಗೆಗಿನ ಈ ಚರ್ಚೆಯನ್ನು ವ್ಯುತ್ಪತ್ತಿ ಶಾಸ್ತ್ರಜ್ಞರು ಮುಂದುವರಿಸಲಿ.

ನಾಗರಿಕತೆಯ ಅಧ್ಯಯನವನ್ನು, ಹೊಸ ಜ್ಞಾನಶಿಸ್ತನ್ನಾಗಿ ರೂಪಿಸಿದ ಮೊಟ್ಟ ಮೊದಲಿಗನು ಫಾರಾಬಿ ಎನ್ನುವುದು ನನ್ನ ತಿಳಿವಳಿಕೆ. ಫಾರಾಬಿಗೆ ಇಲ್ಮುಲ್ ಮದನಿಯ್ಯ್ ಅಥವಾ ನಾಗರಿಕತೆಯ ಅಧ್ಯಯನವೆಂಬ ಕೃತಿಯೊಂದಿದೆ. ಫಾರಾಬಿಯೆಂದರೆ ಇಬ್ನು ಖಲ್ದೂನರಿಗೆ ಸರಿ ಹೊಂದುತ್ತಿರಲಿಲ್ಲ. ಹಾಗೆ ಹೇಳುವುದಕ್ಕಿಂತ ಎದುರಾಳಿಯಾಗಿ ಪರಿಗಣಿಸುತ್ತಿದ್ದರು ಎಂದು ಹೇಳುವುದು ಉತ್ತಮ ಎಂದೆನಿಸುತ್ತದೆ. ಎಲ್ಲಾ ಸಂದರ್ಭಗಳಲ್ಲೂ ಅವರು ವಿಮರ್ಶಿಸುತ್ತಿದ್ದರು. ಎದುರಾಳಿ ಎಂಬ ಬಳಕೆಯೂ ಅಷ್ಟೇನು ಸಮಂಜಸವಲ್ಲ. ‘Significant Other’ ಎಂಬ ಪದವನ್ನು ಇಲ್ಲಿ ಬಳಸಲು ಇಚ್ಚಿಸುವೆ. ಇಬ್ನು ಖಲ್ದೂನರು ಪ್ರತಿ ಬಾರಿಯೂ ಫಾರಾಬಿಯನ್ನು ಗಮನದಲ್ಲಿಟ್ಟು, ಅವರನ್ನು ಮೀರುವ ಪ್ರಯತ್ನವನ್ನು ನಡೆಸುತ್ತಿದ್ದರು. ‘Significant Other’ ಏನೆಂದು ಮನಃಶಾಸ್ತ್ರಜ್ಞರು ವಿವರಿಸುವುದು ಒಳಿತು. ಖಲ್ದೂನ್ ಹೇಳುತ್ತಾರೆ : ‘ನಾಗರಿಕತೆಯ ಕುರಿತು ಫಾರಾಬಿ ಚರ್ಚಿಸಿರುವುದು ಹೌದು. ಅದು ಹೇಗಿರಬೇಕೆಂದು ಪ್ರತಿಪಾದಿಸಲಾಗಿದೆಯೇ ವಿನಾ, ನಾಗರಿಕತೆ ಕಾರ್ಯಾಚರಿಸುವ (Behave) ಸ್ವರೂಪಗಳ ಬಗೆಗಿನ ಚರ್ಚೆಗಳಿಲ್ಲ. ಫಾರಾಬಿ ವ್ಯಕ್ತಿಗತ (Objective)ವಿಧಾನವನ್ನು ಪ್ರಯೋಗಿಸಿರುವರು. ಪ್ರಮಾಣಕ ವಿಧಾನ (Normative)ವನ್ನಲ್ಲ.’ ಇಬ್ನು ಖಲ್ದೂನರ ಫಾರಾಬಿ ವಿಮರ್ಶೆಯ ಉದಾಹರಣೆಯಿದು. ಫಾರಾಬಿ, ಇಸ್ಲಾಮಿಕ್ ನ್ಯಾಯಶಾಸ್ತ್ರಜ್ಞರು (ಫುಖಹಾ), ದೇವತಾಶಾಸ್ತ್ರಜ್ಞರು ಮತ್ತು ಇಬ್ನು ಖಲ್ದೂನ್ ಇವರೆಲ್ಲರ ಗ್ರಹಿಕೆಯು ನಾಗರಿಕತೆಯೆಂದರೆ ಸಮಾಜ ಎಂಬುವುದು. ಇದಕ್ಕೆ ಸಹಮತವಿರುವ ಪಾಶ್ಚಿಮಾತ್ಯ ಚಿಂತಕರೂ ಇದ್ದಾರೆ. ಇದೇ ವಿಧಾನವನ್ನು ನಾವೂ ಸ್ವೀಕರಿಸಿದ್ದೇವೆ. ಆದಾಗ್ಯೂ, ಇಲ್ಲಿನ ವಿದ್ಯಾರ್ಥಿಗಳಿಗೆ ಸ್ವಂತದ ಭಿನ್ನ ಅಭಿಪ್ರಾಯವಿರುವುದರಲ್ಲಿ ಯಾವುದೇ ತಕರಾರಿಲ್ಲ. ಇಬ್ನು ಖಲ್ದೂನ್ ನಾಗರಿಕತೆಗಳನ್ನು ಎರಡಾಗಿ ವಿಭಜಿಸುತ್ತಾರೆ. ಅಲೆಮಾರಿ ನಾಗರಿಕತೆ (Nomadic) ಮತ್ತು ಜಡ ನಾಗರಿಕತೆ (Sedentary). ಅಲೆಮಾರಿಗಳು ಒಂದೇ ಜಾಗದಲ್ಲಿ ವಾಸಿಸದೆ ಮರುಭೂಮಿ, ಕಾಡು ಮತ್ತು ಪರ್ವತ ತಪ್ಪಲು ಹೀಗೆ ಎಲ್ಲೆಂದರಲ್ಲಿ ಬದುಕುವವರು. ನಗರಗಳಲ್ಲಿ ಬದುಕುವವರು ಜಡ ನಾಗರಿಕತೆಯವರು. ಈ ವಿಂಗಡಣೆಯ ಮೂಲಕ ಅಲೆಮಾರಿಗಳು ಕೂಡಾ ನಾಗರಿಕರೆಂದು ಇಬ್ನು ಖಲ್ದೂನ್ ಸಾಬೀತುಪಡಿಸಲು ಯತ್ನಿಸುತ್ತಾರೆ. ಅಲೆಮಾರಿಗಳು ಅನಾಗರಿಕರೆನ್ನುವ ಸಾಮಾನ್ಯ ಧೋರಣೆಯಿದೆ. ಅಲೆಮಾರಿಗಳೂ ನಾಗರಿಕ ಸಮೂಹವೆಂದು ಖಲ್ದೂನರ ಅಭಿಮತ. ಅವರಿಗೆ ಸಾಮಾಜಿಕ ಸಂಘ, ಆರ್ಥಿಕ ಮತ್ತು ಧಾರ್ಮಿಕ ನೀತಿ ಹಾಗೂ ಇನ್ನಿತರ ಕಟ್ಟುಪಾಡುಗಳೆಲ್ಲವೂ ಇವೆ. ಇವೆಲ್ಲವನ್ನೂ ನಿಭಾಯಿಸುವ ಇವರು ಕೂಡಾ ನಾಗರಿಕ ಸಮೂಹವೇ. ಈ ಅಭಿಪ್ರಾಯ ಪ್ರಕಾರ ಎಲ್ಲಾ ಸಮುದಾಯಗಳೂ ನಾಗರಿಕತೆಯ ಪರಿಧಿಗೊಳಪಡುತ್ತವೆ. ಈ ಕಾರಣದಿಂದ ಮುಕ್ತ ನಾಗರಿಕತೆಯ ಈ ಕಾಲದಲ್ಲಿ ಇಬ್ನು ಖಲ್ದೂನರ ಅಭಿಪ್ರಾಯವೇ ಸೂಕ್ತವೆಂದೆನಿಸುತ್ತದೆ. ಇದಕ್ಕೆ ಬದಲಾಗಿ, ಕೆಲವು ಸಮೂಹಗಳು ನಾಗರಿಕವೂ ಉಳಿದವುಗಳು ಅನಾಗರಿಕವೆಂದು ಬಗೆದರೆ ಜಗತ್ತಿನಲ್ಲಿ ಸಮಸ್ಯೆಗಳು ಹೆಚ್ಚುತ್ತವೆ. ಈ ಮೂಲಕ ನಾಗರಿಕತೆಗಳ ನಡುವಿನ ಶ್ರೇಣೀಕರಣ ಮತ್ತು ಏಕರೂಪ ನಾಗರಿಕತೆ ಎಂಬ ಸಂಕಲ್ಪಗಳನ್ನು ಇಬ್ನ್ ಖಲ್ದೂನ್ ಅಲ್ಲಗಳೆಯುತ್ತಾರೆ. ಎಲ್ಲಾ ಸಮೂಹಗಳು ನಾಗರಿಕವೆಂದೂ, ಅವೆಲ್ಲವೂ ಪರಸ್ಪರ ಕೊಡುಕೊಳೆಯಲ್ಲಿ ಭಾಗಿಯಾಗುತ್ತವೆ ಎಂದು ಇಬ್ನು ಖಲ್ದೂನರ ನಿಲುವು. ಇಂದಿನ ಸನ್ನಿವೇಶದಲ್ಲಿ ಇಬ್ನು ಖಲ್ದೂನರ ನಿಲುವನ್ನು ಮುನ್ನೆಲೆಗೆ ತರಬೇಕಾದ ಅನಿವಾರ್ಯತೆಯಿದೆ. ಖಲ್ದೂನರು ನಾಗರಿಕತೆಯನ್ನು ಜೀವಿಗಳಿಗೆ ಹೋಲಿಸುತ್ತಾರೆ. ಅದರಂತೆ, ಎಲ್ಲಾ ನಾಗರಿಕತೆಗಳಿಗೂ ಹುಟ್ಟು, ಬೆಳವಣಿಗೆ ಮತ್ತು ಅಂತ್ಯವಿರುವುದಾಗಿ ಪ್ರತಿಪಾದಿಸುತ್ತಾರೆ. ಇದು ಬಹಳ ಕ್ರಿಯಾತ್ಮಕವೂ, ಸಕ್ರಿಯವೂ ಆಗಿರುವ ಗ್ರಹಿಕೆ. ನಾಗರಿಕತೆಗಳ ಆಂತರಿಕ ಚಲನಶೀಲತೆಗಳನ್ನು ಪರಿಗಣಿಸಿ, ಅವುಗಳನ್ನು ಸಾದರಪಡಿಸುವ ಅವಕಾಶವನ್ನು ಈ ಗ್ರಹಿಕೆಯು ಒದಗಿಸುತ್ತದೆ. ನಾಗರಿಕತೆಗಳ ಸಂಘರ್ಷಗಳ ಕುರಿತು ಖಲ್ದೂನರು ಚರ್ಚಿಸಿರುವರು. ಈ ಗ್ರಹಿಕೆಗಳ್ಯಾವುದೂ ಕೂಡಾ ವಿಧಿವಾದ (Deterministic)ವನ್ನು ಪ್ರೋತ್ಸಾಹಿಸುವುದಿಲ್ಲ. ಖಲ್ದೂನರು ನಾಗರಿಕತೆಗಳಿಗೆ ಕೆಲವೊಂದು ಪರಿಧಿಯನ್ನು ನಿಶ್ಚಯಿಸಿರುವರು. ಯಾವುದೇ ಹಸ್ತಕ್ಷೇಪಗಳಿಲ್ಲದಿದ್ದಲ್ಲಿ ನಾಗರಿಕತೆಗಳು ಪತನಗೊಳ್ಳುವುದು. ಖಲ್ದೂನರ ಪ್ರಕಾರ
ನಾಗರಿಕತೆಗೆ ಐದು ಹಂತಗಳಿವೆ. ಇದನ್ನು ಓಟೋಮನ್ನರು ಮುನ್ನೆಚ್ಚರಿಕೆಯಾಗಿ ಸ್ವೀಕರಿಸಿದರೇ ಹೊರತು ನಿಯಂತ್ರಣವಾಗಲ್ಲ. ಶ್ರೀಮಂತಿಕೆಯು ನಾಗರಿಕತೆಯೊಂದರ ಪತನಕ್ಕೆ ಹೇತುವಾಗುತ್ತದೆಯೆಂಬ ಖಲ್ದೂನರ ಮುನ್ನೆಚ್ಚರಿಕೆಯನ್ನು ಸ್ವೀಕರಿಸಿದ ಒಟೋಮನ್ನರು ಸೂಫಿಸಂ ಮೂಲಕ ಇದಕ್ಕೆ ಪ್ರತಿರೋಧ ಒಡ್ಡಿದರು. ಸೂಫಿಸಂ ಐಷಾರಾಮಿ ಬದುಕನ್ನು ನಿರಾಕರಿಸುತ್ತದೆ. ಪರಿಣಾಮವಾಗಿ ಓಟೋಮನ್ ನಾಗರಿಕತೆಯು ಸುಮಾರು ಏಳು ಶತಮಾನಗಳ ಕಾಲ ಬದುಕುಳಿಯಿತು. ಸುಲ್ತಾನ್ ಸುಲೈಮಾನರ ಆಡಳಿತಾವಧಿಯಲ್ಲಿ ಓಟೋಮನ್ನರು ಶ್ರೀಮಂತಿಕೆಯ ಉತ್ತುಂಗದಲ್ಲಿದ್ದರು. ಸುಲ್ತಾನ್ ಸುಲೈಮಾನ್ ಸ್ವತಃ ಸೂಫೀ ಬದುಕನ್ನು ನೆಚ್ಚಿಕೊಂಡಿದ್ದರು. 80 ವರ್ಷಗಳ ಕಾಲ ಬದುಕಿದ ಸುಲ್ತಾನ್ ಸುಲೈಮಾನ್, ತನ್ನ ನಲ್ವತ್ತು ವರ್ಷಗಳ ಅಧಿಕಾರಾವಧಿಯಲ್ಲಿ ಹತ್ತು ವರ್ಷಗಳ ಕಾಲ ಅರಮನೆಯಿಂದ ದೂರವೇ ಉಳಿದಿದ್ದರು. ಸರಿಸುಮಾರು ಮೂರರಲ್ಲೊಂದು ಭಾಗ ಅವರು ಅರಮನೆಯಲ್ಲಿರಲಿಲ್ಲ ಎಂದರ್ಥ. ಇವೆಲ್ಲವೂ ಸ್ವತಃ ತನ್ನನ್ನು ಮತ್ತು ನಾಗರಿಕತೆಯನ್ನು ದೌಲತ್ತಿನ ಅಡ್ಡಪರಿಣಾಮಗಳಿಂದ ಕಾಪಿಟ್ಟುಕೊಳ್ಳಲು ಅವರು ಕಂಡುಕೊಂಡ ಪರಿಹಾರ ಮಾರ್ಗಗಳಾಗಿದ್ದವು ಎಂದು ನನಗನಿಸುತ್ತದೆ. ಈ ಬಗೆಗಿನ ಗಹನವಾದ ಚರ್ಚೆಯನ್ನು ಮತ್ತೆ ಮುಂದುವರಿಸೋಣ.
ಇಂದು ತುರ್ಕಿಷ್ ಮತ್ತು ಇನ್ನಿತರ ಸಮುದಾಯಗಳು ಸಂಪತ್ತಿನ ದುಷ್ಪರಿಣಾಮಗಳಿಂದ ಬಸವಳಿದಿವೆ; ಅದರಲ್ಲೂ ಯುರೋಪ್ ಮತ್ತು ಅಮೇರಿಕಾದ ಜನತೆ. ತುರ್ಕಿಷ್ ಸಮುದಾಯದ ರಕ್ಷಣೆಗೆ ಇಬ್ನು ಖಲ್ದೂನರ ದೃಷ್ಟಿಕೋನಗಳು ಬಹಳಷ್ಟು ಉಪಕಾರಿಯಾಗಬಹುದೆಂದು ಅಂದುಕೊಳ್ಳುತ್ತೇನೆ. ತುರ್ಕಿಯ ರಾಷ್ಟ್ರೀಯ ಆದಾಯ ಏರುಗತಿಯಲ್ಲಿದೆ. ಖಲ್ದೂನರ ಎಚ್ಚರಿಕೆಯಂತೆ, ಸಂಪತ್ತು ತುರ್ಕಿಯನ್ನು ಬೌದ್ಧಿಕವಾಗಿ ಮತ್ತು ನೈತಿಕವಾಗಿ ದಿವಾಳಿಯಾಗಿಸಬಹುದು. ಯುರೋಪ್ ಮತ್ತು ಅಮೇರಿಕಗಳ ಅಧಃಪತನಕ್ಕೆ ನಾವು ಸಾಕ್ಷಿಯಾಗುತ್ತಿರುವೆವು ಕೂಡಾ. ಆಧುನಿಕ ಸಮುದಾಯದ ಬವಣೆಗಳನ್ನು ಬಗೆಹರಿಸಲು ಇಬ್ನು ಖಲ್ದೂನರ ಸಲಹೆಗಳನ್ನು ಸ್ವೀಕರಿಸುವುದು ಸೂಕ್ತ.

ನನ್ನ ಮಾತನ್ನು ಕೊನೆಗೊಳಿಸುತ್ತಿದ್ದೇನೆ. ನಾನು ಹೇಳುವುದಿಷ್ಟೆ: ನಾಗರಿಕತೆಯೆಂದರೇನು? ಎಂಬ ಪ್ರಶ್ನೆಗೆ ಭಿನ್ನ ಉತ್ತರಗಳಿವೆ. ಖಚಿತವಾದ ಉತ್ತರವೊಂದಿಲ್ಲ. ಖಲ್ದೂನರ ಗ್ರಹಿಕೆಯನ್ನು ಸ್ವೀಕರಿಸುವವನೆಂಬ ನಿಟ್ಟಿನಲ್ಲಿ ನಾಗರಿಕತೆಯೆಂದರೆ ಸಮುದಾಯ ಎಂದಾಗಿದೆ ನನ್ನ ಅಭಿಮತ.

ಇಂಗ್ಲಿಷ್ ಮೂಲ : ರಜಬ್ ಸೆನ್ತುರ್ಕ್
ಕನ್ನಡಕ್ಕೆ : ಆಶಿಕ್ ಅಲಿ ಕೈಕಂಬ


Dr. Recep Şentürk

Dr. Recep Şentürk is the Dean of the College of Islamic Studies at HBKU. He was the former Founding President of Ibn Haldun University in Istanbul (2017–2021). Dr. Şentürk holds a PhD from Columbia University’s Department of Sociology, and specializes in Civilization Studies, Sociology, and Islamic Studies with a focus on social networks, human rights, and modernization in the Muslim world.  He served as a researcher at the Center for Islamic Studies (İSAM) in Istanbul, and as Founding Director of the Alliance of Civilizations Institute. He is Head of the International Ibn Khaldun Society, and has a seat on the editorial boards of multiple academic journals. Among his books are, in English: Narrative Social Structure: Hadith Transmission Network 610-1505; and in Turkish: Open Civilization: Towards a Multi- Civilizational Society and World; Ibn Khaldun: Contemporary Readings; Malcolm X: Struggle for Human Rights; and Social Memory: Hadith Transmission Network 610-1505. Dr. Şentürk’s work has been translated to Arabic, Japanese, and Spanish.

Leave a Reply

*