ಕೀರ್ತನ ಸಾಹಿತ್ಯಗಳ ಅದ್ಭುತ ಕಾರ್ಯಗಳು

ಯಾವಾಗ ಮೌಲಿದ್ ಓದಲು ಆರಂಭಿಸಿದೆನೋ ಗೊತ್ತಿಲ್ಲ. ಒಂದರ್ಥದಲ್ಲಿ, ಯಾವುದೇ ವಿಶ್ವಾಸಿಯ ಮೌಲಿದ್ ಪಾರಾಯಣಕ್ಕೆ ಆದಿ ಅಥವಾ ಅಂತ್ಯ ಇದೆ ಎಂದು ಹೇಳಲು ಆಗುವುದಿಲ್ಲ. ಅಷ್ಟರ ಮಟ್ಟಿಗೆ ಮೌಲಿದ್ ವಿಶ್ವಾಸಿಯನ್ನು ಹಚ್ಚಿಕೊಂಡಿದೆ. ಪ್ರತಿ ವಿಶ್ವಾಸಿಯ ಸೃಷ್ಟಿಯೇ ನಡೆದಿರುವುದು ಮೌಲಿದಿನ ಮೂಲಕ. ಸೃಷ್ಟಿಯ ನಂತರ ಅದು ಬರುವ ಸಂಗತಿಯಲ್ಲ; ಅದಕ್ಕಿಂತ ಮೊದಲೆ ಅದು ಸಂಭವಿಸಿರುತ್ತದೆ. ಅದು ಬಂದ ನಂತರ ಹೋಗುವ ಸಂಗತಿಯೂ ಅಲ್ಲ. ವಿಶ್ವಾಸ ಹಾಗೂ ವಿಶ್ವಾಸಿ ಅಸ್ತಿತ್ವಕ್ಕೆ ಬರುವುದೇ ಮೌಲಿದಿನ ಮೂಲಕ. ಅವುಗಳನ್ನು ಬೇರ್ಪಡಿಸುವುದು ಅಸಾಧ್ಯ. ‘ಅಲ್ಲಾಹು ಮತ್ತು ಅವನ ಫೆರಿಶ್ತೆಗಳು ಪೈಗಂಬರರ ಗುಣಗಾನ ಮಾಡುತ್ತಾರೆ. ನೀವೂ ಮಾಡಿರಿ’ ಎನ್ನುವ ದೇವಾಜ್ಞೆಯಲ್ಲಿ ಪ್ರಪಂಚದ ಪೂರ್ಣತೆ ಹೇಗೆ ಮತ್ತು ಯಾವಾಗ ಆಗುತ್ತದೆ ಎನ್ನುವ ಸೂಚನೆ ಕೂಡಾ ಇದೆ. ಈ ಪ್ರಪಂಚವೇ ಪುಣ್ಯ ಪೈಗಂಬರರ ಪ್ರಕಾಶದಿಂದ ಪ್ರಾರಂಭವಾಗಿ ಕೊನೆಗೆ ಅಲ್ಲಿಗೇ ಮರಳುತ್ತದೆ. ಹಾಗಾಗಿ, ಪ್ರಯತ್ನಪೂರ್ವಕವಾಗಿ ಮೌಲಿದನ್ನು ವರ್ಜಿಸಲಾಗದು. ವಿಶ್ವಾಸಿಗೆ ಇರವು ಉಂಟಾಗುವುದೇ ಮೌಲಿದಿನ ಮೂಲಕ. ಅದು ಅವನ ಸಾರದೊಂದಿಗೆ ಸಂಬಂಧಪಟ್ಟಿದೆ. ಮೌಲಿದ್ ವಿಚಾರದಲ್ಲಿ ಉಪೇಕ್ಷೆ ತೋರಿಸಲು ಸಾಧ್ಯವಾಗದ ಹಾಗೆ ವಿಶ್ವಾಸಿಯನ್ನು ಸೃಷ್ಟಿಸಲಾಗಿದೆ. ಲೋಕಾನುಗ್ರಹಿ ಎನ್ನುವುದಕ್ಕಿಂದ ದೊಡ್ಡ ಮೌಲಿದ್ ಏನಿದೆ ಹೇಳಿ? ಆ ಅನುಗ್ರಹ ವಿಶ್ವಾಸಿಯನ್ನು ತೊರೆಯಲು ತೀರ್ಮಾನಿಸಿದರೆ ಅಲ್ಲಿ ವಿಶ್ವಾಸಿಯೇ ಉಳಿಯುವುದಿಲ್ಲ. ಸಂತೋಷದಲ್ಲೂ ಸಂತಾಪದಲ್ಲೂ ಒಬ್ಬ ವಿಶ್ವಾಸಿ ಹುಡುಕುವುದು ಆ ಪೈಗಂಬರರ ಗುಣಗಾನಗಳನ್ನು. ಆ ಗುಣಗಾನಗಳು ವಿಶ್ವಾಸಿಯ ಸ್ಥಿತಿಗಳಲ್ಲಿ ಕಾರ್ಯಪ್ರವೃತ್ತವಾಗುತ್ತವೆ. ಅದರೊಂದಿಗೆ ಸಂತೋಷ ಹಾಗೂ ಸಂತಾಪಗಳಿಗೆ ಬೇರೆ ಆಯಾಮ ದೊರಕುತ್ತದೆ.

ಒಬ್ಬಾತ ಮಂಖೂಸ್ ಮೌಲಿದ್ ಓದುವುದು ಯಾಕಾಗಿ? ಮಂಖೂಸ್ ಮೌಲಿದ್ ಅಸ್ತಿತ್ವಕ್ಕೆ ಬಂದಿರುವುದೇ, ಅದರ ಕರ್ತೃ, ಪಾರಾಯಣಕಾರರ, ಭಾಗವಹಿಸುವವರ ಮತ್ತದರ ಆಯೋಜಕರ ಜೀವನ ಹಾಗೂ ಜೀವನದ ಹಿನ್ನೆಲೆಯಲ್ಲಿರುವ ಚಿಂತನೆಗಳನ್ನು ಪರಿವರ್ತಿಸಲು. ಈ ಗುಣಗಾನಗಳು ಮಾನವನ ಜೀವನದಲ್ಲಿ ಘನ ಕೆಲಸಗಳನ್ನು ನಿರ್ವಹಿಸುತ್ತಿವೆ ಎಂದರ್ಥ. ಅಜ್ಜಿ ಮರಣ ಹೊಂದಿದಾಗ ಮಂಖೂಸ್ ಮೌಲಿದ್ ಓದಿದ್ದು ನನಗೆ ಬಹಳ ನೆನಪಿದೆ. ಮರಣ ನಡೆದಿರುವ ಮನೆಗಳಲ್ಲಿ ಮಂಖೂಸ್ ಮೌಲಿದ್ ಓದುವುದು ಇಲ್ಲಿ ವ್ಯಾಪಕವಾಗಿ ಆಚರಣೆಯಲ್ಲಿದೆ. ಅಜ್ಜಿಯ ಮರಣದ ನಂತರ 40 ದಿವಸಗಳಾದ್ಯಂತ ವಿವಿಧ ರೀತಿಯಲ್ಲಿ ನಮ್ಮ ಮನೆಯಲ್ಲಿ ಮೌಲಿದ್ ನಡೆದಿತ್ತು. ಮಕ್ಕಳಿಗೆಲ್ಲ ಮಂಖೂಸ್ ಮೌಲಿದ್ ಕಂಠಪಾಠವಾಗಿತ್ತು. ಅಜ್ಜಿಯ ಮರಣ ನಂತರದ ಜೀವನದಲ್ಲಿ ಆ ಮಂಖೂಸ್ ಮೌಲಿದ್ ಯಾವ ಕಾರ್ಯ ನಿರ್ವಹಿಸಿರಬಹುದು? ಅದರಲ್ಲಿ ಭಾಗವಹಿಸಿದವರ ಬದುಕಿನಲ್ಲಿ ಅದು ಯಾವ ಕೆಲಸ ಮಾಡಿರಬಹುದು?

ಪುಣ್ಯ ಪೈಗಂಬರರ ಗುಣಗಾನಗಳು ನಮಗೆ ಪರಿಚಿತವಾದ ಆಧುನಿಕ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಮೂಡಿಬಂದಿದೆ. ಮಂಖೂಸ್ ಮೌಲಿದ್ ಸಹಿತ ಇತರ ಪ್ರವಾದಿಗಳ ಗುಣಗಾನ ಮಾಡುವ ಗದ್ಯ ಪದ್ಯಗಳು ಅಂತಹ ಸಾಹಿತ್ಯ ಪರಂಪರೆಯ ಭಾಗವೂ ಹೌದು. ಆದರೆ ಅವು ಕೇವಲ ಸಾಹಿತ್ಯವಲ್ಲ. ಬಹುತೇಕ ವೇಳೆ ಅವು ಸಾಹಿತ್ಯ ಎಂದೆನಿಸಿಕೊಳ್ಳುವುದೇ ಇಲ್ಲ. ಈ ನೆಲೆಗಟ್ಟಿನಲ್ಲಿ ವಿಶ್ಲೇಷಿಸಿದರೆ, ಜನನದ ಮುನ್ನ, ಜನನ ಹಾಗೂ ಮರಣದ ಮಧ್ಯೆ ಮತ್ತು ಮರಣಾನಂತರದ ಮುಸ್ಲಿಮರ ಸಾಮಾಜಿಕ ಬದುಕಿನಲ್ಲಿ ಬರಹ ಹಾಗೂ ಓದು ಹೇಗೆ ಕಾರ್ಯ ನಿರ್ವಹಿಸುತ್ತದೆ ಎನ್ನುವುದರ ಬಗೆಗಿನ ಕೆಲವು ತಾತ್ವಿಕ ಚಿಂತನೆಗಳನ್ನೂ ಮಂಖೂಸ್‌ ಮೌಲಿದ್‌ ಮುಂದಿಡುತ್ತದೆ. ಇಲ್ಲಿ ‘ಸಾಹಿತ್ಯ’ ಕೆಲಸ ಮಾಡುತ್ತಿರುವುದು ಓದು ಬರಹ ಗೊತ್ತಿಲ್ಲದ ಅಜ್ಜಿಯ ಮರಣಾನಂತರದ ಬದುಕಿನಲ್ಲಿ. ಮರಣದ ಮನೆಗಳಲ್ಲಿರುವ ಹಾಗೆ ಜನನವನ್ನು ನಿರೀಕ್ಷಿಸಲಾಗುವ ಮನೆಗಳಲ್ಲೂ ಈ ‘ಸಾಹಿತ್ಯ ಪಾರಾಯಣʼವನ್ನು ಕೇಳಬಹುದು. ಇನ್ನಷ್ಟೇ ಜನಿಸಬೇಕಿರುವ ಆ ಮಕ್ಕಳ ಬದುಕಿನಲ್ಲಿ ‘ಸಾಹಿತ್ಯʼ ನಿರ್ವಹಿಸಬೇಕಿರುವ ಕೆಲಸವಾದರೂ ಏನು? ಮುಸ್ಲಿಮರ ಸಾಮಾಜಿಕ ಜೀವನದಲ್ಲಿ ಓದು ಬರಹ ವಹಿಸಿಕೊಂಡಿರುವ ಇಂತಹ ಜವಾಬ್ದಾರಿಗಳನ್ನು ಮುಂದಿರಿಸಿಕೊಂಡಾಗ ಸಾಹಿತ್ಯವನ್ನು ಹೇಗೆ ವ್ಯಾಖ್ಯಾನಿಸಬಹುದು?


ಸಾಮಾಜಿಕ ಜೀವನದಿಂದ ಈ ಗುಣಗಾನದ ಸಾಹಿತ್ಯಗಳನ್ನು ತೊರೆದು ಹಾಕಿದರೆ ಮಾತ್ರ ವಿಶ್ವಾಸ ಸರಿಯಾಗುವುದೆಂದು ವಾದಿಸುವವರೂ ಮುಸ್ಲಿಮರ ನಡುವೆ ಇದ್ದಾರೆ. ಓದು ಬರಹಗಳಿಗೆ ಅವರ ಜೀವನದಲ್ಲಿ ಏನು ಕೆಲಸವಿದೆ? ಸಾಹಿತ್ಯದ ಬಗೆಗಿನ ಅವರ ಸಾಮಾಜಿಕ ಭಾವವೇನು? ಒಬ್ಬನ ಜೀವನದಲ್ಲಿ ಸಾಹಿತ್ಯ ಯಾವಾಗ ಕಾರ್ಯಾರಂಭ ಮಾಡುತ್ತದೆ? ಎಷ್ಟರವರೆಗೆ ಕೆಲಸ ಮುಂದುವರಿಸುತ್ತದೆ? ಅಷ್ಟೇ ಅಲ್ಲ, ಈ ಧೋರಣೆಯ ಪ್ರಕಾರ ವ್ಯಕ್ತಿಯ ಜೀವನದಲ್ಲಿ ಸಾಹಿತ್ಯಕ್ಕೆ ಏನಾದರೂ ಕೆಲಸ ಮಾಡಲು ಸಾಧ್ಯವೇ? ಇನ್ನಷ್ಟೇ ಹುಟ್ಟಬೇಕಿರುವ ಶಿಶುವಿನ ಬದುಕಿನಲ್ಲಿ ಹಾಗೂ ಮರಣಿಸಿದವರ ಬದುಕಿನಲ್ಲಿ ಸಾಹಿತ್ಯ ಇಲ್ಲಿ ಯಾವ ಕಾರ್ಯವನ್ನೂ ಮಾಡದು. ಅಥವಾ ಕಾರ್ಯಸಾಧ್ಯವಾಗದು. ಓದು ಬರಹ ಮುಸ್ಲಿಮರ ಸಾಮಾಜಿಕ ಜೀವನದಲ್ಲಿನ ತನ್ನ ಜವಾಬ್ದಾರಿಯನ್ನು ಕೈಬಿಡುವುದನ್ನು ಅಥವಾ ಅವು ದುರ್ಬಲವಾಗುವುದನ್ನು ನಮಗಿಲ್ಲಿ ಕಾಣಬಹುದು. ಈ ನಿಟ್ಟಿನಲ್ಲಿ ಆಲೋಚಿಸಿದರೆ ಸಾಹಿತ್ಯ ಎಂದರೇನು? ಮರಣವೂ ಸೇರಿದ ಮುಸ್ಲಿಮರ ಸಾಮಾಜಿಕ ಜೀವನದಲ್ಲಿ ಓದು ಬರಹಗಳನ್ನು ಜೀವಂತ ಹಾಗೂ ದೀರ್ಘಾಯುಷಿಗೊಳಿಸುವ ಘಟಕವೇನು? ಇದಕ್ಕಿಂತಲೂ ಮುಖ್ಯವಾಗಿ ಸಾಹಿತ್ಯ ಎಂದರೇನು? ಎನ್ನುವ ಮೂಲಭೂತ ಚಿಂತನೆಗಳ ಕಡೆಗೆ ಈ ಪ್ರಶ್ನೆಗಳು ನಮ್ಮನ್ನು ಕೊಂಡೊಯ್ಯುತ್ತವೆ. ಓದು ಬರಹ ತಿಳಿಯದವರು (ಉಮ್ಮಿಯ್ಯ್)‌ ಎನ್ನುವುದು ಪೈಗಂಬರರ ಪ್ರಮುಖವಾದ ಒಂದು ವಿಶೇಷಣ.‌ ಖುರ್‌ಆನ್‌ ಎನ್ನುವ ಅಲ್ಲಾಹನ ಮಾತುಗಳು ಪೈಗಂಬರರ ಅತ್ಯಂತ ವಿಸ್ಮಯಕರ ಕೆಲಸ (ಮುಅ್‌ಜಿಝತ್). ಪುಣ್ಯ ಪೈಗಂಬರರ ವಿಶೇಷತೆಯನ್ನು ಸಾಬೀತು ಮಾಡಲು ಅಲ್ಲಾಹನು ಸಾಹಿತ್ಯವನ್ನು ಬಳಸಿದ್ದು ಯಾಕೆ ಎನ್ನುವ ಬಗ್ಗೆ ಇಸ್ಲಾಮಿಕ್‌ ಇತಿಹಾಸದಲ್ಲಿ ಸಾಕಷ್ಟು ಚಿಂತನೆಗಳಿವೆ. ಅಲ್ಲಾಹನು ತನ್ನ ಪ್ರವಾದಿಗಳನ್ನು ಆಯಾ ಕಾಲದ ಹಾಗೂ ಸಮಾಜದ ಪ್ರಮುಖ ವಿಶೇಷತೆಯ ಜತೆಗೆ ಕಳುಹಿಸಿದ್ದಾನೆ ಎನ್ನುವುದು ಅಂತಹದ್ದೊಂದು ಉತ್ತರ. ತನ್ನ ಕೊನೆಯ ಪ್ರವಾದಿಯನ್ನು ಅಲ್ಲಾಹು ಜನರ ಮುಂದಿರಿಸಿದ್ದು ಅರೇಬಿಕ್‌ ಕಾವ್ಯ ಅದರ ಉತ್ತುಂಗದಲ್ಲಿ ವಿರಾಜಮಾನವಾಗಿದ್ದ ಕಾಲದಲ್ಲಿ. ಹಾಗಾಗಿ, ಸಾಹಿತ್ಯಿಕ ರೂಪದಲ್ಲಿರುವ ಅತೀ ದೊಡ್ಡ ಅದ್ಭುತದೊಂದಿಗೆ ಉಮ್ಮಿಯ್ಯ್ ಆದ ಪೈಗಂಬರರು ರಂಗಪ್ರವೇಶ ಮಾಡಿದರು. ಅಂದರೆ, ಓದು ಬರಹ ಹಾಗೂ ಸಾಹಿತ್ಯದ ಜತೆಗಿನ ವಿಶ್ವಾಸಿಗಳ ನಿಲುವು ಹಾಗೂ ಒಡನಾಟ ಈ ಧರ್ಮದ ಸ್ವಭಾವವನ್ನು ನಿರ್ಣಯಿಸುವ ಮೂಲಭೂತ ಘಟಕ ಎಂದರ್ಥ. ಸಾಹಿತ್ಯ ಎನ್ನುವುದು ತನ್ನ ಹಬೀಬರನ್ನು ಜನರ ಮುಂದಿಡಲು ಅಲ್ಲಾಹನು ಬಳಸಿದ ಮಾಧ್ಯಮ ಎನ್ನುವ ನೆಲೆಯಲ್ಲಿ ಈ ಒಡನಾಟ ಮುಸ್ಲಿಮ್ ಸಾಮಾಜಿಕ ಜೀವನದಲ್ಲಿ ಕೆಲಸ ಮಾಡುತ್ತದೆ. ಸಾಹಿತ್ಯವು ಆ ಹಬೀಬರನ್ನು ಹೇಗೆ ಮಂಡಿಸುತ್ತಿದೆ, ಆ ಸಾಹಿತ್ಯಗಳನ್ನು ವಿಶ್ವಾಸಿ ಹೇಗೆ ಸ್ವೀಕರಿಸುತ್ತಾನೆ ಹಾಗೂ ಅದು ತನ್ನ ಬದುಕಿನಲ್ಲಿ ಹೇಗೆ ಕೆಲಸ ಮಾಡುತ್ತಿದೆ ಎನ್ನುವ ಪ್ರಜ್ಞೆ ಒಂದು ವಿಶ್ವಾಸಿಗೆ ಸುಪ್ರಧಾನ ಎನಿಸಿಕೊಳ್ಳುತ್ತದೆ. ಆರನೆಯ ಶತಮಾನದಲ್ಲಿದ್ದುಕೊಂಡು ಉಮ್ಮಿಯ್ಯಾದ ಪೈಗಂಬರರು ನಮ್ಮ ಓದು ಬರಹಗಳಲ್ಲಿ ಎಂತೆಂತಹ ಅದ್ಭುತಗಳನ್ನು ನಿರ್ವಹಿಸುತ್ತಿದ್ದಾರೆ ನೋಡಿ!

ಲೇ: ಡಾ. ನುಐಮಾನ್
ಕನ್ನಡಕ್ಕೆ: ನಝೀರ್ ಅಬ್ಬಾಸ್


(ಡಾ. ನುಐಮಾನ್’ರವರು ಪ್ರಸ್ತುತ ಕಲ್ಲಿಕೋಟೆ ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ವಿಭಾಗದಲ್ಲಿ ಅಸಿಸ್ಟೆಂಟ್ ಪ್ರೊಫೆಸರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ಜರ್ಮನಿಯ ಫ್ರೈಬರ್ಗ್ ಯುನಿವರ್ಸಿಟಿಯಲ್ಲಿ ಸಂಶೋಧಕರಾಗಿದ್ದರು.ಮಲೇಷ್ಯಾದ ಕರ್ಟನ್ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿಯೂ ಸೇವೆಸಲ್ಲಿಸಿದ್ದರು.ಯುವ ಚಿಂತಕರು, ಸಂಶೋಧನೆಗಾಗಿ ಹಲವು ರಾಷ್ಟ್ರಗಳಿಗೆ ಭೇಟಿನೀಡಿದ ಅನುಭವವೂ ಇವರಿಗಿದೆ.)

Leave a Reply

*