ಇಬ್ನು ಖಲ್ದೂನರ ಕೈರೋ ಬದುಕು


ಪ್ರಸಿದ್ಧ ಇತಿಹಾಸಕಾರ, ಸಮಾಜ ಶಾಸ್ತ್ರಜ್ಞ, ಕರ್ಮಶಾಸ್ತ್ರ ವಿದ್ವಾಂಸರಾದ ಇಬ್ನು ಖಲ್ದೂನ್ ತನ್ನ ಕೊನೆಯ ಇಪ್ಪತೆಂಟು ವರ್ಷಗಳನ್ನು ಕೈರೋದಲ್ಲಿ ಕಳೆದರು. ಟುನೇಶ್ಯದಲ್ಲಿ ಜನಿಸಿ ನಂತರ ಮೊರೊಕ್ಕೊ, ಸ್ಪೇನ್, ಟುನೇಶ್ಯ ಮೊದಲಾದ ಕಡೆಗಳಲ್ಲಿ ಜ್ಞಾನ, ಅಧ್ಯಯನ, ಸಂಶೋಧನೆ, ಗ್ರಂಥ ರಚನೆಯೊಂದಿಗೆ ಬದುಕು ಸವೆಸಿದ ಇಬ್ನು ಖಲ್ದೂನ್ ಯಾವ ಕಾರಣಕ್ಕಾಗಿ ಕೈರೋ(ಈಜಿಪ್ಟ್) ಗೆ ತಲುಪಿದರು, ಅಲ್ಲಿ ಏನೆಲ್ಲ ವೈಜ್ಞಾನಿಕ ಸೇವೆಗಳನ್ನು ಮಾಡಿದರು ಎನ್ನುವುದನ್ನು ವಾಲ್ಟರ್ ಜೆ ಫಿಸ್ಕಲ್ ರಚಿಸಿದ Ibn Khaldun in Egypt: His Public Functions and His Historical Research (1382-1406): A Study in Islamic Historiography ಎಂಬ ಗ್ರಂಥವು ಪರಿಚಯಿಸುತ್ತದೆ.

ಮಮ್ಲೂಕ್ ಆಡಳಿತವು ಕೈರೋ ಕೇಂದ್ರವಾಗಿಸಿ ಈಜಿಪ್ಟ್ ಆಳುತ್ತಿದ್ದ ಸಂದರ್ಭದಲ್ಲಿ ಇಬ್ನು ಖಲ್ದೂನ್ 1382ರಲ್ಲಿ ಅಲಗ್ಸಾಂಡ್ರಿಯಾ ಬಂದರು ಮೂಲಕ ಕೈರೋ ತಲುಪಿದರು. ನಂತರ ಮಮ್ಲೂಕ್ ಸುಲ್ತಾನರ ಅಧೀನದಲ್ಲಿ ಚೀಫ್ ಖಾಝಿಯಾಗಿಯೂ ಆಡಳಿತ ನಿರ್ದೇಶಕರಾಗಿಯೂ ರಾಜನೀತಿ ತಜ್ಞರಾಗಿಯೂ ಸೇವೆ ಸಲ್ಲಿಸಿದರು. ಕೃತಿಯ ಮೊದಲ ನೂರು ಪುಟಗಳಲ್ಲಿ ಆ ಕಾಲದ ಸಾಮಾಜಿಕ ಬದುಕಿನ ಸೂಕ್ಷ್ಮ ವಿವರಗಳನ್ನು ನೀಡಲಾಗಿದೆ. ಒಬ್ಬ ಇತಿಹಾಸಕಾರ, ಬರಹಗಾರ ಎಂಬ ನೆಲೆಯಲ್ಲಿ ಕೈರೋದಲ್ಲಿ ಇಬ್ನು ಖಲ್ದೂನರು ನೀಡಿದ ದಾರ್ಶನಿಕ ಕೊಡುಗೆಗಳನ್ನು ಎರಡನೇ ಭಾಗದಲ್ಲಿ ಉಲ್ಲೇಖಿಸಲಾಗಿದೆ. ಇಬ್ನು ಖಲ್ದೂನರ ಗ್ರಂಥಗಳಾದ ತಾರೀಖ್ ಇಬ್ನು ಖಲ್ದೂನ್, ಮುಖದ್ದಿಮ, ತಅ್ ರೀಫ್ ಮೊದಲಾದ ಗ್ರಂಥಗಳು ಈ ಕೃತಿಯ ಪ್ರಮುಖ ಆಕರಗಳಾಗಿವೆ. ವಿವಿಧ ಭಾಷೆಗಳಿಗೆ ಭಾಷಾಂತರಗೊಂಡ ಹಳೆಯ ಮತ್ತು ಆಧುನಿಕ ಇಬ್ನು ಖಲ್ದೂನರ ಜೀವನ ಚರಿತ್ರೆಗಳನ್ನು ಕೃತಿಯಲ್ಲಿ ಆಕರಗಳಾಗಿ ಬಳಸಿಕೊಳ್ಳಲಾಗಿದೆ.

ಇಬ್ನು ಖಲ್ದೂನರ ಪೂರ್ವಜರು ಯಮನಿನ ಹಳರಮೌತಿನಿಂದ ಮುಸ್ಲಿಮ್ ಸ್ಪೇನಿಗೆ ಎಂಟನೇ ಶತಮಾನದಲ್ಲಿ ವಾಸ್ತವ್ಯ ಬದಲಿಸಿದವರಾಗಿದ್ದರು. ಈ ಕುಟುಂಬ ವೈಜ್ಞಾನಿಕ ಸಂಶೋಧನೆಗಳಲ್ಲಿ ಅದ್ವಿತೀಯ ಸೇವೆ ಸಲ್ಲಿಸಿದೆ. ಹದಿಮೂರನೇ ಶತಮಾನದ ಮೊದಲಭಾಗದಲ್ಲಿ ಬನೂ ಖಲ್ದೂನ್ ಎಂಬ ಇಬ್ನು ಖಲ್ದೂನರ ತಂದೆ ಆಫ್ರಿಕಾದ ಟುನೇಶ್ಯಕ್ಕೆ ವಾಸ್ತವ್ಯ ಬದಲಿಸಿದ್ದರು. ಅಲ್ಲಿ ಇಬ್ನು ಖಲ್ದೂನರ ಜನನವಾಯಿತು. ನಂತರ ಇವರು ಟುನೇಶ್ಯ, ಸ್ಪೇನಿನಲ್ಲಿ ವೈಜ್ಞಾನಿಕ ಸಂಶೋಧನೆಗಳನ್ನು ಕೈಗೊಂಡರು. ಅದರ ಮುಂದುವರಿದ ಭಾಗವಾಗಿ ಮುಖದ್ದಿಮ ರಚನೆಯಾಯಿತು. ಇಬ್ನ್ ಖಲ್ದೂನರಿಗೆ ಹೇರಳ ಶತ್ರುಗಳಿದ್ದರು. ಅವರ ವರ್ಚಸ್ಸಿಗೆ ಮಸಿ ಬಳಿಯಲು ರಾಜರುಗಳ ಬಳಿ ಅವರ ಕುರಿತು ಇಲ್ಲ ಸಲ್ಲದ ಆರೋಪಗಳನ್ನು ಹೊರಿಸಲಾಗುತ್ತಿತ್ತು. ವಿರೋಧಿಗಳ ಹೆಚ್ಚಳವು ಅವರನ್ನು ಈಜಿಪ್ಟಿಗೆ ತೆರಳುವಂತೆ ಮಾಡಿತು.

ನಲ್ವತ್ತು ದಿನಗಳ ಯಾತ್ರೆಯ ಬಳಿಕ ಇಬ್ನು ಖಲ್ದೂನ್ ಅಲೆಗ್ಸಾಂಡ್ರಿಯಾಗೆ ತಲುಪಿದ ಸುದ್ದಿ ಅಲ್ಲಿನ ಮಮ್ಲೂಕ್ ಸುಲ್ತಾನ್ ಝಾಹಿದ್ ಅಬೂ ಝೈದ್ ಬರ್ ಖುರ್ಖ್ ರನ್ನು ತಲುಪಿತು. ಅವರು ಇಬ್ನು ಖಲ್ದೂನರನ್ನು ಆಮಂತ್ರಿಸಿದರು. ಕೈರೋ ಕುರಿತು ತಿಳಿದುಕೊಂಡು ಬಂದ ಖಲ್ದೂನ್ ಅಲ್ಲಿನ ಕುರಿತು ಹೀಗೆ ಬರೆದರು: “ಸಂಪತ್ತು ಸಮೃದ್ಧಿ ಮೇಳೈಸಿರುವ ಈಜಿಪ್ಟಿಗೆ ತಲುಪುವುದು ಮೊರೊಕ್ಕಾದ ಹಲವು ಬಡಪಾಯಿ ಜನರ ಬಯಕೆಯಾಗಿದೆ. ನಾವು ಊಹಿಸುವ ಯಾವುದೇ ನಗರಕ್ಕಿಂತಲೂ ನಾಗರಿಕತೆಯಿಂದ ಸಂಪನ್ನವಾಗಿದೆ ಈಜಿಪ್ಟ್. ಕೈರೋಗಿಂತ ಉತ್ತಮ ಸಂಸ್ಕೃತಿ ಹೊಂದಿರುವ ನಗರ ಬೇರೊಂದಿಲ್ಲ. ಈ ನಗರವನ್ನು ಜಗತ್ತಿನ ತಾಯಿ ಎನ್ನಬಹುದು. ಇದು ಇಸ್ಲಾಮಿನ ಮಹಾ ಕೇಂದ್ರ. ಕೈರೋ ವಿಜ್ಞಾನ, ಕರಕುಶಲ ನಿರ್ಮಾಣದ ಹೃದಯದಂತಿದೆ. ಕೈರೋ ಕಾಣದವರು ಇಸ್ಲಾಮಿನ ಖ್ಯಾತಿಯನ್ನು ಬಹುಶಃ ತಿಳಿದಿರಲಿಕಿಲ್ಲ.”

ಕೈರೋಗೆ ಆಗಮಿಸಿದ ಬಳಿಕ ಮರಣದವರೆಗೂ ತನ್ನ ವಾಸಸ್ಥಾನವಾಗಿ ಅವರು ಆ ಮಹಾನಗರವನ್ನು ಆಯ್ಕೆಮಾಡಿದರು. 1387 ಸೆಪ್ಟೆಂಬರಿನಲ್ಲಿ ಹಜ್ಜಿಗಾಗಿ ಮಕ್ಕಾಗೆ, ಈಜಿಪ್ಟಿಯನ್ ಆಡಳಿತಗಾರರ ಆಸಕ್ತಿಯ ಮೇರೆಗೆ ಸಿರಿಯಾಕ್ಕೆ ರಾಜತಾಂತ್ರಿಕ ಅಗತ್ಯಕ್ಕೆ ಕೆಲವು ತಿಂಗಳುಗಳ ಕಾಲ ತೆರಳಿದ್ದನ್ನು ಹೊರತು ಪಡಿಸಿದರೆ ಅವರು ಕೈರೋ ಬಿಟ್ಟು ಹೋಗಲೇ ಇಲ್ಲ. ಟುನೇಶ್ಯದ ಆ ಕಾಲದ ಸುಲ್ತಾನರ ಬಹುದೊಡ್ಡ ಆಸೆ ಇಬ್ನು ಖಲ್ದೂನರನ್ನು ತನ್ನತ್ತ ಕರೆತರುವುದಾಗಿತ್ತು. ಹಲವು ಬಾರಿ ಅವರು ವಿನಂತಿಸಿದರೂ ಖಲ್ದೂನ್ ಪೂರಕವಾಗಿ ಪ್ರತಿಕ್ರಿಯಿಸಲಿಲ್ಲ. ಖಲ್ದೂನರ ಕುಟುಂಬ ಆಗಲೂ ಟುನೇಶ್ಯದಲ್ಲಿತ್ತು. ಅವರನ್ನು ಖಲ್ದೂನ್ ಕೈರೋಗೆ ಕರೆತರಲು ನಿರಂತರ ಶ್ರಮಿಸಿದರೂ ಖಲ್ದೂನರನ್ನು ಟುನೇಶ್ಯಾಕ್ಕೆ ಮರಳಿ ಕರೆ ತರಬೇಕೆಂದು ಬಯಸುತ್ತಿದ್ದ ಸುಲ್ತಾನನು ಅನುಮತಿ ನೀಡಲಿಲ್ಲ. ಕೊನೆಗೆ ಈಜಿಪ್ಟಿಯನ್ ಆಡಳಿತಾಧಿಕಾರಿ ಬರ್ ಖುರ್ಖ್ ಪತ್ರ ಬರೆದಾಗ ಸುಲ್ತಾನರು ಅನುಮತಿಸಿದರು. ಆದರೆ ಪತ್ನಿ ಮತ್ತು ಐದು ಮಕ್ಕಳು ಸಹಿತ ಹಲವು ಮಂದಿಯಿದ್ದ ಅಲೆಗ್ಸಾಂಡ್ರಿಯಾ ಗುರಿಯಾಗಿಸಿ ಬಂದ ಹಡಗು ಕಡಲು ಪ್ರಕ್ಷುಬ್ಧದಿಂದ ಮುಳುಗಿ ಖಲ್ದೂನ್ ಕುಟುಂಬ ಪೂರ್ಣವಾಗಿ ಇಲ್ಲವಾಯಿತು. ಈ ಮಹಾ ದುರ್ಘಟನೆ ಖಲ್ದೂರನ್ನು ಬಹುವಾಗಿ ಕಾಡಿತು. ಈ ನೋವು ಜೀವನ ಪರ್ಯಂತ ಖಲ್ದೂನರನ್ನು ಬಿಟ್ಟಿರಲಿಲ್ಲ.

ಇಬ್ನು ಖಲ್ದೂನ್ ಈಜಿಪ್ಟಿಗೆ ಬರುವುದಕ್ಕಿಂತಲೂ ಮೊದಲು ಬರಹಗಾರ, ಇತಿಹಾಸಕಾರ ಎಂಬ ನೆಲೆಯಲ್ಲಿ ಅವರಿಗಿದ್ದ ಖ್ಯಾತಿಯು ಈಜಿಪ್ಟಿನ ವಿದ್ವಾಂಸರಿಗೆ ಮತ್ತು ಅಲ್ಲಿನ ಅಧ್ಯಯನಾಸಕ್ತರಾದ ಆಡಳಿತಾಧಿಕಾರಿಗಳಿಗೆ ತಿಳಿದಿತ್ತು. ಸುಲ್ತಾನ್ ಬರ್ ಖುರ್ಖ್ ಇವರ ಜೊತೆಗಿನ ಸ್ನೇಹ ಸಂಬಂಧವನ್ನು ಮಹತ್ವದ್ದಾಗಿ ಕಂಡನು. ಯಾವ ಸಂದರ್ಭದಲ್ಲೂ ಸುಲ್ತಾನರ ಬಳಿಗೆ ತೆರಳಲು ಖಲ್ದೂನರಿಗೆ ಅನುಮತಿಯಿತ್ತು. ತನ್ನ ಊರಿನ ವಾಸ್ತವ್ಯವನ್ನು ಬಿಟ್ಟಿದ್ದರೂ ಅಲ್ಲಿನ ವಿದ್ವಾಂಸರೊಂದಿಗೆ ಆಡಳಿತಾಧಿಕಾರಿಗಳೊಂದಿಗೆ ನಿರಂತರ ಪತ್ರ ವ್ಯವಹಾರದ ಮೂಲಕ ಸಂಬಂಧವನ್ನು ಉಳಿಸಿಕೊಂಡಿದ್ದರು. ಮಗ್ರಿಬೀ(ಪಶ್ಚಿಮದ) ದೇಶಗಳೊಂದಿಗೆ ಈಜಿಪ್ಟಿಗಿರುವ ಯಾವ ರೀತಿಯ ಸಂಪರ್ಕದ ಅಗತ್ಯವಿದ್ದರೂ ಆ ಪ್ರದೇಶಗಳ ರಾಯಭಾರಿಯಾಗಿ ಗುರುತಿಸಿಕೊಂಡರು. ಹಜ್ ಯಾತ್ರೆಯಲ್ಲಿಯೂ ಒಂದು ಮಗ್ರಿಬೀ ತಂಡದೊಂದಿಗೆ ಪ್ರಯಾಣಗೈದರು.

ಇದೇ ಸಂದರ್ಭ ಖಲ್ದೂನರು ಕೈರೋದ ವೈಜ್ಞಾನಿಕ ಕ್ಷೇತ್ರಗಳಲ್ಲಿ ಸಕ್ರಿಯರಾದರು. ಅಲ್ ಅಝ್ಹರಿನಲ್ಲಿ ಪ್ರಮುಖ ತರಗತಿಗಳನ್ನು ನಡೆಸಲು ಅವರನ್ನು ಆಹ್ವಾನಿಸಲಾಯಿತು. ಮಹಾ ಜ್ಞಾನಿಗಳಾದ ವಿದ್ವಾಂಸರುಗಳು ತದೇಕಚಿತ್ತದಿಂದ ಅವರ ತರಗತಿಯನ್ನು ಆಲಿಸುತ್ತಿದ್ದರು. ಸುಲ್ತಾನರ ಆಜ್ಞೆಯ ಮೇರೆಗೆ ಓಲ್ಡ್ ಕೈರೋದ ಖಾಮ್ಹಿಯ ಕಾಲೇಜಿನ ಮಾಲಿಕೀ ಕರ್ಮಶಾಸ್ತ್ರದ ಪ್ರೊಫೆಸರರಾಗಿ ನೇಮಕಗೊಂಡರು. ಇಸ್ಲಾಮಿಕ್ ಕರ್ಮಶಾಸ್ತ್ರದ ಅಧ್ಯಯನಗಳಿಗೆ ಪ್ರಾಮುಖ್ಯತೆ ನೀಡುವ ಈ ಕಾಲೇಜನ್ನು ಸುಲ್ತಾನ್ ಸ್ವಲಾಹುದ್ದೀನ್ ಅಯ್ಯೂಬ್ ನಿರ್ಮಿಸಿದ್ದರು. ತದ ನಂತರ ಖಲ್ದೂನ್ ಕೈರೋದ ಪ್ರಸಿದ್ಧವಾದ ಹಲವು ಸಂಸ್ಥೆಗಳಲ್ಲಿಯೂ ತರಗತಿ ನಡೆಸಿದರು. ವೈಜ್ಞಾನಿಕ ಕ್ಷೇತ್ರದಲ್ಲಿ ಪ್ರಸಿದ್ಧಿ ಪಡೆದಿದ್ದರಿಂದ ಖಲ್ದೂನರಿಗೆ ಬಹಳಷ್ಟು ಶತ್ರುಗಳಿದ್ದರು. ಹಲವು ಬಾರಿ ಸುಲ್ತಾನ್ ಬರ್ ಖುರ್ಖ್ ಅವರಲ್ಲಿ ಇವರ ಕುರಿತಾದ ತಪ್ಪು ಕಲ್ಪನೆಯನ್ನು ಹುಟ್ಟುಹಾಕಲು ಯತ್ನಿಸಲಾಗುತ್ತಿತ್ತು. ಖಲ್ದೂನ್ ಮತ್ತು ಬರ್ ಖುರ್ಖ್ ಅವರ ಗಾಢ ಸಂಬಂಧಕ್ಕೆ ಇದರಿಂದ ಏನೂ ಧಕ್ಕೆ ಅಗಲಿಲ್ಲ.

Al Azhar University, Cairo

1384ರಲ್ಲಿ ಕೈರೋದ ಚೀಫ್ ಖಾಝಿಯಾಗಿ ಇಬ್ನು ಖಲ್ದೂನರು ನೇಮಕಗೊಂಡರು. ಈಜಿಪ್ಟಿನಲ್ಲಿ ಚೀಫ್ ಖಾಝಿ ಹುದ್ದೆ ಶುರುವಾದ ನಂತರ ಈ ಹುದ್ದೆಗೆ ಶಾಫಿಈ ಮದ್ಹಬಿನ ವಿದ್ವಾಂಸರು ಮಾತ್ರವೇ ನೇಮಕಗೊಂಡಿದ್ದರು. ಆದರೆ ಇಬ್ನು ಖಲ್ದೂನ್ ಆಳ ಅಧ್ಯಯನ ಮತ್ತು ಜ್ಞಾನ ಹೊಂದಿದ್ದರಿಂದ ಸುಲ್ತಾನ್ ಈ ಹುದ್ದೆಗೆ ಅವರನ್ನು ನೇಮಿಸಿದರು. ಈ ಹುದ್ದೆಯ ಮಹತ್ವ ಅರಿತಿದ್ದ ಅವರು ಫತ್ವಾಗಳಲ್ಲಿ ಸೂಕ್ಷ್ಮತೆ ಮತ್ತು ಶರೀಅತಿನ ಪೂರ್ಣತೆಯನ್ನು ಪಾಲಿಸಿಕೊಳ್ಳುತ್ತಿದ್ದರು. ನಿಲುವಿನೊಂದಿಗೆ ಅವರಿಗಿದ್ದ ಬದ್ಧತೆ ಹಲವರನ್ನು ಅಸ್ವಸ್ಥಗೊಳಿಸಿತು. ಈ ಕಾರಣದಿಂದಲೇ ಈ ಹುದ್ದೆಯನ್ನು ತ್ಯಜಿಸಬೇಕಾಗಿ ಬಂತು. ನಂತರದ ಹತ್ತು ವರ್ಷಗಳು ಏಕಾಂತವಾಗಿ ಕಳೆದರು ಮತ್ತು ವೈಜ್ಞಾನಿಕ ಕೊಡುಗೆಗಳನ್ನು ನೀಡಲು ಹೆಚ್ಚಿನ ಗಮನವನ್ನು ನೀಡಿದರು.

1399ರಲ್ಲಿ ಸುಲ್ತಾನ್ ಬರ್ ಖುರ್ಖ್ ನಿಧನರಾದರು. ಅವರ ಮಗ ಬರಜ್ ಅಧಿಕಾರಕ್ಕೆ ಬಂದರು. ಈ ಸಂದರ್ಭದಲ್ಲೂ ಖಾಝಿಯಾಗಿ ಖಲ್ದೂನರನ್ನು ನೇಮಿಸಿದರು. ನೂತನವಾಗಿ ನೇಮಕಗೊಂಡಿದ್ದ ಸುಲ್ತಾನರು ಅಪ್ರಾಪ್ತರಾಗಿದ್ದರು. ಆಡಳಿತಾಧಿಕಾರಿ ಎಂಬ ನೆಲೆಯಲ್ಲಿ ಸುಲ್ತಾನರ ಸರಿಯಾದ ನಿಲುವುಗಳನ್ನು ಖಲ್ದೂನರು ಒಳಗೊಳ್ಳುತ್ತಿದ್ದರು.

ಕ್ರಿ.ಶ. 1406ರಲ್ಲಿ ಇಬ್ನ್ ಖಲ್ದೂನ್ ಇಹಲೋಕ ತ್ಯಜಿಸಿದರು. ಮರಣದ ಸಂದರ್ಭ ಅವರು ಕೈರೋದ ಚೀಫ್ ಖಾಝಿಯಾಗಿದ್ದರು. ಪ್ರಮುಖ ವೈಜ್ಞಾನಿಕ ಕೊಡುಗೆಗಳನ್ನು ನೀಡಿದ ಆ ಮಹಾನುಭಾವರಿಗೆ ತಕ್ಕ ಗೌರವವನ್ನು ಕೈರೋ ಆಡಳಿತ ಕೂಟ ಮತ್ತು ಅಲ್ಲಿನ ಪ್ರಜೆಗಳು ನೀಡಿದ್ದರು. ಸೂಫಿಗಳನ್ನು ಸಮಾಧಿಗೊಳಿಸುವ ಜಾಗದಲ್ಲಿ ಖಬರ್ ಸಿದ್ಧಪಡಿಸಿದ್ದರು. ಆದರೆ ಆ ಖಬರಿನ ನಿರ್ದಿಷ್ಟ ಸ್ಥಳ ಯಾವುದೆನ್ನುವುದನ್ನು ಆಧುನಿಕ ಕಾಲದಲ್ಲಿ ತಿಳಿಯಲು ಸಾಧ್ಯವಿಲ್ಲ. ಇಬ್ನು ಖಲ್ದೂನರ ಕೊನೆಯ ಕಾಲವನ್ನು ಸೂಕ್ಷ್ಮವಾಗಿ ಅಧ್ಯಯನ ನಡೆಸಲು ಮತ್ತು ಆಗಿನ ಮುಸ್ಲಿಮ್ ಅರಬ್ ಆಫ್ರಿಕನ್ ಜಗತ್ತಿನ ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿಗತಿಗಳನ್ನು ತಿಳಿಯಲು ಈ ಗ್ರಂಥ ಸಹಕಾರಿಯಾಗಲಿದೆ.

ಮೂಲ: ಎಂ. ಲುಖ್ಮಾನ್
ಕನ್ನಡಕ್ಕೆ: ಅಮ್ಮಾರ್ ನೀರಕಟ್ಟೆ

Leave a Reply

*