ಇದು ಚರಿತ್ರೆಯ ಹೊರೆಯನ್ನು ಹೊತ್ತುಕೊಂಡಿರುವ ಸಣ್ಣ ಪಟ್ಟಣವೆಂದು ಕಾಯಲ್‌ಪಟ್ಟಣಂ ಕಡೆಗೆ ಪಯಣ ಬೆಳೆಸುವ ಮೊದಲೇ ಸ್ನೇಹಿತರು ನನಗೆ ಎಚ್ಚರಿಕೆ ನೀಡಿದ್ದರು. ಆ ಪಟ್ಟಣದ ಕುರಿತು ನಾನು ಅದಾಗಲೇ ಓದಿಕೊಂಡಿದ್ದ ಮೊನೊಗ್ರಾಫ್ ಅದನ್ನೆ ಒತ್ತಿಹೇಳಿತ್ತು. ನನ್ನ ಪಯಣದ ಆರಂಭದಲ್ಲಿ ಗಮನಾರ್ಹವಾಗಿ ವಿನ್ಯಾಸಗೊಳಿಸಿದ ಪಟ್ಟಣದ ಕಿರಿದಾದ ಬೀದಿಗಳಲ್ಲಿ ಆಟೊ ನನ್ನನ್ನು ಕರೆದೊಯ್ಯುತ್ತಿದ್ದಾಗ ನನ್ನ ಡ್ರೈವರ್ ನನಗೆ ಮಹತ್ವದ ರಸ್ತೆ ಅಥವಾ ಸ್ಮಾರಕವನ್ನು ತೋರಿಸಲು ಮರೆತುಬಿಡುತ್ತಾನೋ ಎಂದು ಚಿಂತೆಯಾಗುತ್ತಿತ್ತು. ಆದರೆ ಆತ ಅದನ್ನು ಮಾಡಿರಲಿಲ್ಲ. ಎಂತಹ ಐತಿಹಾಸಿಕ ನಗರವಾದರೂ ಎಲ್ಲವನ್ನೂ ಎರಡು ದಿನಗಳಲ್ಲಿ ನೋಡಿ ಬಿಡಬಹುದು ಎಂದು ಭಾವಿಸಿದ್ದೆ. ಸ್ವಚ್ಛವಾಗಿರುವ ಪಟ್ಟಣದ ಬೀದಿಗಳನ್ನು ಅಕ್ಷರಶಃ ಒಂದೆರಡು ಗಂಟೆಗಳಲ್ಲಿ ನಡೆದು ಕ್ರಮಿಸಬಹುದು. ಪಟ್ಟಣದ ಇತಿಹಾಸವನ್ನು ಅವಲೋಕಿಸುವಾಗ ಎತ್ತರದ, ದಪ್ಪ ಮತ್ತು ದಟ್ಟವಾದ ಕಟ್ಟಡಗಳು ಮತ್ತು ಸ್ಮಾರಕಗಳನ್ನು ನನ್ನ ಮನಸ್ಸಿನಲ್ಲಿ ನಿರ್ಮಿಸಿಕೊಂಡಿದ್ದೆ. ಇಲ್ಲಿಯೂ ನನಗೆ ನಿರಾಶೆಯೇ ಕಾದಿತ್ತು. ಅತಿಯಾದ ಅಂದಾಜುಗಳು ಯಾವಾಗಲೂ ನಿರಾಸೆಯನ್ನೆ ಉಂಟುಮಾಡುತ್ತದೆ.
ನಾನಂದುಕೊಂಡದ್ದು ತಪ್ಪೆಂದು ತಿಳಿದುಕೊಳ್ಳಲು ಹೆಚ್ಚು ಸಮಯ ಹಿಡಿಯಲಿಲ್ಲ. ಆ ನಗರದ ವಾಣಿಜ್ಯೋದ್ಯಮಿ, ಇತಿಹಾಸಕಾರ, ವ್ಯಾಪಾರಿ, ಕಾರ್ಯಕರ್ತ, ಕಲಾವಿದರ ಅಂತೆಯೇ ಊರಿನ ಜನರ ಮಾತುಗಳನ್ನು ಹೆಚ್ಚು ಆಲಿಸಿದ ಹಾಗೆ ಆರಂಭಿಕ ಅನಿಸಿಕೆಗಳು ಎಷ್ಟು ಭಯಾನಕವಾಗಬಹುದೆನ್ನುವ ಅರಿವು ನನಗಾಯಿತು. ಆ ಚಿಕ್ಕ ಪಟ್ಟಣ ಈಗ ಸುಂದರವಾಗಿ ಪೇರಿಸಿಡಲಾದ ಗುಪ್ತ ನಿಧಿಯಂತೆ ನಳನಳಿಸತೊಡಗಿತು. ಆ ನಗರ ಪರಂಪರೆಯಿಂದ ಆವರಿಸಿಕೊಂಡು ವ್ಯಾಪಾರ, ರಕ್ಷಣೆ, ಧಾರ್ಮಿಕ ಪಾಂಡಿತ್ಯ ಮತ್ತು ಸಾಹಿತ್ಯಕ ಸಾಧನೆಗಳ ಶ್ರೀಮಂತ ಇತಿಹಾಸಗಳನ್ನು ಅಭಿವ್ಯಕ್ತಿಗೊಳಿಸುತ್ತಿರುವುದು ಮನವರಿಕೆಯಾಯಿತು. ಐದು ದಿನಗಳ ನಂತರ ಪಟ್ಟಣದಿಂದ ಮರಳುವ ವೇಳೆ ನನಗೆ ಹಿಂಜರಿಕೆ ಉಂಟಾಗಿತ್ತು. ನಗರದ ಮೂಲೆ- ಮೂಲೆಗಳಿಂದ ಮೂಡಿಬರುವ ಕುತೂಹಲಕಾರಿ ಕಥೆಗಳೊಂದಿಗೆ ಹೆಚ್ಚು ಕಾಲ ಅಲ್ಲಿ ಉಳಿದು ಆಳಕ್ಕಿಳಿಯಲು ಮನಸ್ಸು ಉತ್ಸುಕಗೊಳ್ಳುತ್ತಿತ್ತು. ಆದರೂ ನಾನು ಮತ್ತೆ ಹಿಂದಿರುಗಲಿದ್ದೇನೆ ಎನ್ನುವ ಪ್ರತಿಜ್ಞೆ ಕೈಗೊಂಡೆ.
ಕಣ್ಣುಕುಕ್ಕುವ ಈ ಮೋಡಿಯ ಲಹರಿಯಲ್ಲಿ ಮೈಮರೆತದ್ದು ನಾನೊಬ್ಬನೇ ಅಲ್ಲ. ಈ ಪಟ್ಟಣಕ್ಕೆ ಭೇಟಿ ನೀಡುವ ಪ್ರವಾಸಿಗರಿಂದ ಈ ಪಟ್ಟಣ ಪಡೆದಿರುವ ಪ್ರಶಂಸೆಗೆ ಕೊರತೆಯಿಲ್ಲ. ಕಾಯಲ್ ಪಟ್ಟಣ ಅಸಂಖ್ಯಾತ ಪ್ರಯಾಣಿಕರು, ವ್ಯಾಪಾರಿಗಳು, ಸೂಫಿಗಳು, ವಿದ್ವಾಂಸರು, ಸುಲ್ತಾನರು, ಗುಲಾಮರು, ಆಕ್ರಮಣಕಾರರು, ಬಂಡುಕೋರರನ್ನು ಕಂಡಿದೆ. ಮುಸ್ಲಿಮ್ ಶ್ರೀಮಂತ ಸಂಪ್ರದಾಯಗಳು, ಸೂಫಿ ಪರಂಪರೆ ಮತ್ತು ಶತಶತಮಾನಗಳ ಹಿನ್ನೆಲೆಯಿರುವ ಅರಬ್ ದೇಶಗಳ ಜೊತೆಗಿನ ಸಂಪರ್ಕಗಳಿಗೆ ಹೆಸರುವಾಸಿಯಾಗಿದೆ. ಈ ಪ್ರದೇಶದ ಇಸ್ಲಾಮಿಕ್ ಆಧ್ಯಾತ್ಮಿಕತೆ ಮತ್ತು ಸಂಸ್ಕೃತಿಗೆ ಕಾಯಲ್ಪಟ್ಟಣದ ಕೊಡುಗೆ ಅಪಾರ ಮತ್ತು ಅಮೂಲ್ಯವಾಗಿದೆ. ಹಲವಾರು ಧಾರ್ಮಿಕ ವಿದ್ವಾಂಸರಿಗೆ, ಮಹಾನ್ ಆಧ್ಯಾತ್ಮಿಕ ಗುರುಗಳಿಗೆ ಹುಟ್ಟು ನೀಡಿರುವ ಈ ಪಟ್ಟಣ ಹಲವಾರು ಶತಮಾನಗಳಿಂದ ಸ್ಥಳೀಯ ಮತ್ತು ಅಂತರಾಷ್ಟ್ರೀಯ ವ್ಯಾಪಾರಿಗಳಿಗೆ ಉತ್ತಮ ಮಾರುಕಟ್ಟೆಯನ್ನು ಒದಗಿಸಿದೆ.
ಪಾಂಡ್ಯನ್ ಸಾಮ್ರಾಜ್ಯದ ಪ್ರಮುಖ ಪಟ್ಟಣವಾಗಿತ್ತು ಕಾಯಲ್. ನಂತರ ಮಅಬರ್ ಸುಲ್ತಾನರು ತುಲನಾತ್ಮಕವಾಗಿ ಕಡಿಮೆ ಕಾಲಾವಧಿಗೆ ಇಲ್ಲಿ ಆಳ್ವಿಕೆ ನಡೆಸಿದ್ದರು. ಐತಿಹಾಸಿಕ ಕಾಯಲ್ ಪಟ್ಟಣ ದೂರದ ದೇಶಗಳಿಂದ ಹಡಗುಗಳನ್ನು ಆಕರ್ಷಿಸುತ್ತಿದ್ದ ಬಂದರು ಕೂಡಾ ಹೌದು. ವಿಶ್ವ ವ್ಯಾಪಾರಿಗಳಾದ ಮಾರ್ಕೊ ಪೊಲೊ, ವಾಸಾಫ್, ರಶೀದುದ್ದೀನ್, ಬಾರ್ಬೋಸಾ, ಅಬ್ದುಲ್ ರಝ್ಝಾಕ್ ಮತ್ತು ನಿಕೊಲೊ ಡಿ ಕಾಂಟಿ ಕೋರಮಂಡಲ್ ಕರಾವಳಿಯ ಈ ತಮಿಳ್- ಇಸ್ಲಾಮಿಕ್ ಪಟ್ಟಣಕ್ಕೆ ಬಂದಿಳಿದಿದ್ದಾರೆ ಮತ್ತು ಅದರ ಕುರಿತು ವಿವರವಾಗಿ ವಿವಿಧ ಸಮಯಗಳಲ್ಲಿ ಬರೆದಿದ್ದಾರೆ. ಟಾಲೆಮಿ ಮತ್ತು ಇಬ್ನ್ ಬತೂತ ಕೂಡ ಈ ಪ್ರದೇಶಕ್ಕೆ ಭೇಟಿ ನೀಡಿದ್ದು ಪಟ್ಟಣ ಮತ್ತು ಅದರ ಆರ್ಥಿಕ ವೈಭವವನ್ನು ಶ್ಲಾಘಿಸಿದ್ದಾರೆ.
ಕಾಯಲ್ ಜತೆಗೆ ಕೋರಮಂಡಲ್ ಕರಾವಳಿಯು ಕೊರ್ಕೈ, ಕೀಳಕ್ಕರೈ ಮತ್ತು ನಾಗಪಟ್ಟಣಂ ನಂತಹ ಇತರ ಪ್ರತಿಷ್ಠಿತ ಬಂದರುಗಳನ್ನು ಕೂಡಾ ಹೊಂದಿತ್ತು. ಕಾಯಲ್ ಇತಿಹಾಸವು ಇವುಗಳ ಇತಿಹಾಸದೊಂದಿಗೆ ಬೇರ್ಪಡಿಸಲಾಗದಂತೆ ಹೆಣೆದುಕೊಂಡಿದೆ. ಅಲ್ಲದೆ, ಕೋರಮಂಡಲ್ ಕರಾವಳಿಯ ಇತರ ಬಂದರು ಪಟ್ಟಣಗಳಿಗೆ ವ್ಯಾಪಾರ ಮತ್ತು ಇತರ ಕಾರಣಗಳಿಗಾಗಿ ವಲಸೆ ಹೋದ ಮುಸ್ಲಿಮರು ಕಾಯಲ್ ಮೂಲದವರಾಗಿದ್ದರು.
ಅರಬ್ಬರೊಂದಿಗೆ ಪಟ್ಟಣಕ್ಕಿದ್ದ ವಾಣಿಜ್ಯ ಸಂಪರ್ಕವು ಇಸ್ಲಾಮ್ ಆಗಮನಕ್ಕೂ ಮುಂಚಿನ ಹಲವಾರು ಶತಮಾನಗಳ ಹಿಂದಿನದು. ಅಲ್ಲಿನ ಸ್ಥಳೀಯರನ್ನು ನೋಡಿದಾಗ ಅವರ ಮೈಬಣ್ಣ, ದೈಹಿಕ ಲಕ್ಷಣ ಮತ್ತು ಸಂಸ್ಕೃತಿಯಲ್ಲಿ ಅರಬ್ ವಂಶಾವಳಿಯ ವೈಶಿಷ್ಟ್ಯಗಳು ಸ್ಪಷ್ಟವಾಗಿ ಕಂಡುಬರುತ್ತವೆ. ಬಹುತೇಕ ಮುಸ್ಲಿಮರು ವಾಸಿಸುವ ಪಟ್ಟಣದ ಕುಟುಂಬಗಳಾಗಿರುವ ಮರಕ್ಕಾಯರ್, ಲಬ್ಬೈ, ನೈನಾರ್ ಮತ್ತು ಮಕ್ದೂಮ್‌ಗಳಿಗೆ ಅರೇಬಿಯಾದ ದೂರದ ಪಟ್ಟಣಗಳಿಗೆ ವಿವಿಧ ಮಾರ್ಗಗಳ ಮೂಲಕ ತಲುಪುವ ವಂಶಾವಳಿ ಇದೆ. ಅದಾಗ್ಯೂ, ಅವರ ನಡುವಿನ ವ್ಯತ್ಯಾಸಗಳು ಹೊರಗಿನವರಿಗೆ ಅಷ್ಟು ಬೇಗ ಹೊಳೆಯುವುದಿಲ್ಲ. ‘ದಿ ಕನ್ಸೈಸ್ ಹಿಸ್ಟರಿ ಆಫ್ ಕಾಯಲ್ಪಟ್ನಂ’ ಎಂಬ ಹೆಸರಿನಲ್ಲಿ ಪಟ್ಟಣದ ಇತಿಹಾಸವನ್ನು ದಾಖಲಿಸಿರುವ ಪ್ರಸಿದ್ಧ ಸ್ಥಳೀಯ ಇತಿಹಾಸಕಾರ ದಿವಂಗತ ಡಾ. ಆರ್.ಎಸ್. ಅಬ್ದುಲ್ ಲತೀಫ್ ಅವರ ಪ್ರಕಾರ ಪಟ್ಟಣದಲ್ಲಿ ಅರೇಬಿಯಾ ಮೂಲದ ಮೂರು ಕಾಲನಿಗಳು ಬಂದಿವೆ. ಹಿಜಾಝ್ ನಿಂದ CE 630ರಲ್ಲಿ ಬಂದ ಕಾಲನಿ ಮೊದಲನೆಯದ್ದು. ಎರಡನೆಯ ಮತ್ತು ಮೂರನೆಯ ವಸಾಹತುಗಳು ಕ್ರಮವಾಗಿ CE 842 ಮತ್ತು CE 1284ರಲ್ಲಿ ಈಜಿಪ್ಟ್‌ನಿಂದ ಬಂದಿವೆ.
ಸ್ಥಳೀಯರ ಮಾತುಗಳು ಹಾಗೂ ಕೊಸ್ಮರೈ ದರ್ಗಾ ಬಳಿ ಕರಾವಳಿ ಪ್ರದೇಶದಲ್ಲಿ ಕೆಲವು ವರ್ಷಗಳ ಹಿಂದೆ ಕಂಡುಬಂದ ಕಲ್ಲಿನ ಶಾಸನದ ಪ್ರಕಾರ ಹಿಜರಿ ಶಕೆ 9/ ಕ್ರಿಸ್ತ ಶಕೆ 630ರಲ್ಲಿ ಇಸ್ಲಾಮ್ ಕಾಯಲ್ಪಟ್ಟಣಂ ತಲುಪಿತು. ಐವರು ಸ್ವಹಾಬಿಗಳು (ಪೈಗಂಬರರ ಅನುಯಾಯಿಗಳು) ಕಾಯಲ್ ಕಡಲತೀರದಲ್ಲಿ ಮಸ್ಜಿದ್ ‘ಅಲ್- ಇಮಾನ್’ ಅಥವಾ ‘ಕಡಲ್ಕರೈ’ ಪಲ್ಲಿ ಎನ್ನಲಾಗುವ ಮಸೀದಿಯನ್ನು ನಿರ್ಮಿಸಿದ್ದಾರೆ ಎಂದು ನಂಬಲಾಗಿದ್ದು ಇದು ಈಗ ಅಸ್ತಿತ್ವದಲ್ಲಿಲ್ಲ. ಶಾಸನದಲ್ಲಿನ ಸ್ವಹಾಬಿಗಳ ಹೆಸರುಗಳ ಪಟ್ಟಿಯಲ್ಲಿ ಖಾಲಿದ್ ಇಬ್ನ್ ಸಯೀದ್ ಇಬ್ನ್ ಅಲ್ ಆಸ್, ತಾಬಿದ್ ಇಬ್ನ್ ಕೈಸ್ ಇಬ್ನ್ ಸುಮಾಸ್, ಅಬ್ದುಲ್ಲಾ ಇಬ್ನ್ ಸಅದ್ ಇಬ್ನ್ ಅಬು ಸಾರಾ, ಅಬ್ದುಲ್ಲಾ ಇಬ್ನ್ ಅಬ್ದುಲ್ಲಾ ಇಬ್ನ್ ಉಬೈ ಮತ್ತು ಅಬ್ದುಲ್ಲಾ ಇಬ್ನ್ ಅಬ್ದುಲ್ ಅಝೀಝ್ ಇಬ್ನ್ ಉಮರ್ ಎಂಬ ಹೆಸರುಗಳಿವೆ. ಪಟ್ಟಣದ ಹೆಸರಾಂತ ಇತಿಹಾಸಕಾರರಾದ ಪ್ರೊ. ಅಬುಲ್ ಬರಕಾತ್‌ರವರು ಈ ವಿಷಯದ ಬಗ್ಗೆ ವಿಸ್ತೃತ ಸಂಶೋಧನೆ ನಡೆಸಿದ್ದು ಪಟ್ಟಣಕ್ಕೆ ಮೊದಲ ಬಾರಿ ಅರಬ್ ಆಗಮನವಾದದ್ದು ಹಿಜರಿ 9ರಲ್ಲಿ ಎಂದು ಸಾಬೀತುಪಡಿಸಿದ್ದಾರೆ. ಸ್ವಹಾಬಿಗಳ ಆಗಮನವಾದದ್ದು ಹಿಜರಿ 12ನೆಯ ವರ್ಷದಲ್ಲಿ ಎನ್ನುವ ಅಭಿಮತ ವ್ಯಕ್ತಪಡಿಸಿದ ಡಾ. ಲತೀಫ್ ಕಡೆಗೆ ಬರಕಾತ್ ಅಭಿಪ್ರಾಯವನ್ನೇ ಅನುಮೋದಿಸಿದ್ದಾರೆ.
ಮಧ್ಯಕಾಲೀನ ಯುಗದಲ್ಲಿ ಪರ್ಶಿಯನ್- ಅರೇಬಿಕ್, ಚೈನೀಸ್, ಇಂಡಿಯನ್, ಆಗ್ನೇಯ ಏಷ್ಯನ್ ಮತ್ತು ಯುರೋಪಿಯನ್ ನಂತಹ ವಿಭಿನ್ನ ನಾಗರಿಕತೆಗಳು ಈ ಬಂದರಿನೊಂದಿಗೆ ಪರಸ್ಪರ ಪ್ರಯೋಜನಕಾರಿ ಸಂಬಂಧವನ್ನು ಹೊಂದಿದ್ದವು. ಕೆಲವೊಮ್ಮೆ ಉದ್ವಿಗ್ನಕಾರಿ ಸ್ಪರ್ಧೆಗಳು ಕೂಡಾ ನಡೆದಿವೆ. ಮೃದು ರೇಷ್ಮೆ, ಕುದುರೆ ಮತ್ತು ಮುತ್ತು ಈ ಪಟ್ಟಣದ ಆಮದು ಅಥವಾ ರಫ್ತಿನಲ್ಲಿ ಹೆಚ್ಚು ಬೇಡಿಕೆಯಿದ್ದ ಸರಕುಗಳು. ಈ ಸರಕುಗಳು ಪ್ರಕ್ಷುಬ್ಧ ಪ್ರಯಾಣಗಳನ್ನು ಸಾಧ್ಯವಾಗಿಸಿವೆ.
ಈ ಭೂಭಾಗದ ಪಶ್ಚಿಮ ಕರಾವಳಿಗೆ ಮಲಬಾರ್ ಎನ್ನುವಂತೆ ಪೂರ್ವ ಕರಾವಳಿಯನ್ನು ಮಬಾರ್ ಎಂದು ಕರೆಯಲಾಗುತ್ತಿತ್ತು. “ಕೊರ್ಕೈ ಬಂದರು ಅತ್ಯಂತ ಹಳೆಯದು. ಕಾಯಲ್ ಅದರ ಪಕ್ಕದಲ್ಲಿಯೇ ಅಭಿವೃದ್ಧಿ ಹೊಂದಿತು. ಕಾಯಲ್ ಚೀನಾ, ಯೆಮನ್ ಅಥವಾ ಇತರ ಅರೇಬಿಯನ್ ಬಂದರುಗಳಿಂದ ಬರುವ ಹಡಗುಗಳು ಹಾದುಹೋಗುವ ಸಹಜ ಬಂದರು ಎನಿಸಿತ್ತು. ಕಾಯಲ್ಪಟ್ಟಣಂನಲ್ಲಿ ಲೋಡಿಂಗ್ ಅಥವಾ ಅನ್ಲೋಡಿಂಗ್ ಇಲ್ಲದಿದ್ದರೆ ಹಡಗುಗಳು ಶ್ರೀಲಂಕಾ ಸುತ್ತು ಹಾಕಿ ಹೋಗುತ್ತಿದ್ದವು. ಅರೇಬಿಕ್‌ನಲ್ಲಿ ಮಅಬರ್ ಎಂಬ ಪದಕ್ಕೆ ‘ಹಾದು ಹೋಗುವ ಸ್ಥಳ’ ಎನ್ನುವ ಅರ್ಥ ಇದೆ ಎಂದು ಸ್ಥಳೀಯ ಯುವ ಇತಿಹಾಸಕಾರ ಮತ್ತು ಸಂಶೋಧಕ ಮುಹಮ್ಮದ್ ಸುಲ್ತಾನ್ ಬಾಖವಿ ಹೇಳುತ್ತಾರೆ.
ಕಾಯಲ್ಪಟ್ಟಣದ ವಿಶ್ವಪೌರತ್ವದ ಬೇರುಗಳು ಪ್ರಾಚೀನ ಯುಗದಲ್ಲಿ ಹಿಜಾಝ್, ಈಜಿಪ್ಟ್ ಮತ್ತು ಗ್ರೀಸ್ ಕಡೆಗೆ ಚಾಚಿದ್ದು ಮಧ್ಯಯುಗದಲ್ಲಿ ಅದು ತನ್ನ ಶಾಖೆಗಳನ್ನು ಚೀನಾ, ಇಂಡೋನೇಷ್ಯಾ, ಶ್ರೀಲಂಕಾ, ಜಲಸಂಧಿ ವಸಾಹತುಗಳು, ಯುರೋಪ್ ಮತ್ತು ಅದರಾಚೆಗೂ ವಿಸ್ತರಿಸಿತು. ಕಾಯಲ್‌ಪಟ್ಟಣಂ ಬೀಚ್‌ಗೆ ತಲುಪುವ ಸೀ ಕಸ್ಟಂ ರಸ್ತೆಗೆ ಹಿಂದೆ ‘ಪಂಡಕ್ಸಲೈ’ ಅಥವಾ ‘ಗೋದಾಮಿನ ರಸ್ತೆ’ ಎಂದು ಕರೆಯಲಾಗುತ್ತಿತ್ತೆನ್ನುವ ಹಿರಿಯರ ಮಾತುಗಳು ಪಟ್ಟಣದ ವೈಭವಯುತ ಇತಿಹಾಸದ ಬೇಸರವುಕ್ಕಿಸುವ ನೆನಪುಗಳು. ಈಗ ಅಲ್ಲಿ ಒಂದೇ ಒಂದು ಗೋದಾಮನ್ನು ಗುರುತಿಸಲು ಸಾಧ್ಯವಿಲ್ಲ. ಪರಿಮಾರ್ ಮತ್ತು ಕೋಮನ್ ಬೀದಿಗಳು ಉಳಿದಿರುವ ಹಳೆಯ ಬೀದಿಗಳು.
ಮದೀನಾ, ಇರಾಕ್, ಯೆಮೆನ್ ಮತ್ತು ಈಜಿಪ್ಟ್‌ನಿಂದ ವಿದ್ವಾಂಸರು ಮತ್ತು ಸಂತರು ಕಾಯಲ್‌ಪಟ್ಟಣಂ ತಲುಪಿ ಪಟ್ಟಣಕ್ಕೆ ಶಾಶ್ವತವಾದ ಆಧ್ಯಾತ್ಮಿಕ ಹೊಳಹು ನೀಡಿದರು. ಈಗ ಅಲ್ಲಿ ಸುಮಾರು 30 ಮಸೀದಿಗಳಿವೆ ಮತ್ತು ಮಹಾನ್ ಸೂಫಿಗಳ ಹಲವಾರು ಪ್ರಸಿದ್ಧ ದರ್ಗಾಗಳಿವೆ. ಪಟ್ಟಣದಲ್ಲಿ ಕುರ್ಆನ್ ಕಂಠಪಾಠದಿಂದ ಮೊದಲಾಗಿ ಇಸ್ಲಾಮಿಕ್ ದೇವತಾಶಾಸ್ತ್ರ ಮತ್ತು ನ್ಯಾಯಶಾಸ್ತ್ರದವರೆಗೆ ಕಲಿಸುವ ವ್ಯವಸ್ಥೆಗಳಿವೆ. ಇಸ್ಲಾಮಿಕ್ ಜ್ಞಾನ ಪರಂಪರೆ ಹಾಗೂ ಆಧ್ಯಾತ್ಮಿಕತೆಗೆ ಕಾಯಲ್ ನೀಡಿರುವ ಕೊಡುಗೆ ಅನನ್ಯ ಮತ್ತು ಅಮೂಲ್ಯ. ಪಟ್ಟಣದ ಬಹುಸಂಖ್ಯಾತ ಮುಸ್ಲಿಮರು ಶಾಫಿ ಸುನ್ನಿ ಸಂಪ್ರದಾಯಗಳನ್ನು ಅನುಸರಿಸುತ್ತಿದ್ದು ವಿಭಿನ್ನ ತ್ವರೀಕತ್ ಗಳ ಮೂಲಕ ಸೂಫಿಸಂ ಕೂಡಾ ಪಾಲಿಸುತ್ತಿದ್ದಾರೆ. ಈ ಪೈಕಿ ಖಾದಿರಿಯಾ ತ್ವರೀಕತ್ ಐತಿಹಾಸಿಕವಾಗಿ ಮೇಲುಗೈ ಸಾಧಿಸಿದೆ. ಜತೆಗೆ ಸಲಫಿ ಚಳವಳಿಗೂ ಪಟ್ಟಣದಲ್ಲಿ ಪ್ರಭಾವವಿದೆ.
ಕಾಯಲ್‌ಪಟ್ಟಿಣಂ ಸಂತರ ಪಟ್ಟಣ ಎನಿಸಿದೆ. ಪಟ್ಟಣದಲ್ಲಿ ಅಂತ್ಯ ವಿಶ್ರಮದಲ್ಲಿರುವ ಅಸಂಖ್ಯಾತ ಸೂಫಿಗಳ ಸಂಪೂರ್ಣ ಪಟ್ಟಿ ಮಾಡಿ ಮುಗಿಸುವುದು ಕಷ್ಟಸಾಧ್ಯ. ಅವರೆಲ್ಲರ ಕಂತುರಿಗಳನ್ನು (ಮರಣ ವಾರ್ಷಿಕೋತ್ಸವದ ಆಚರಣೆಗಳು) ತಪ್ಪದೆ ನಡೆಸಲಾಗುತ್ತದೆ. ಕೆಲವು ಪ್ರಮುಖ ಸಂತರ ಹೆಸರುಗಳು ಇಂತಿವೆ. ಪ್ರವಚನಗಳ ಮೂಲಕ ಸಾಮೂಹಿಕ ಮತಾಂತರ ನಡೆಸುತ್ತಿದ್ದ ಮುತ್ತು ಮಕ್ದೂಮ್ ಶಹೀದ್. ಮದೀನಾದಿಂದ ಬಂದ ‘ಖಲೀಫಾ ವಲಿಯುಲ್ಲಾ’. ಸ್ಥಳೀಯ ಸಂಪ್ರದಾಯದ ಪ್ರಕಾರ ಇವರು ಮರಳನ್ನು ಸಮುದ್ರಕ್ಕೆ ಎಸೆದು ಪೋರ್ಚುಗೀಸ್ ನೌಕಾಪಡೆ ಬಂದರಿಗೆ ಪ್ರವೇಶಿಸದಂತೆ ಅದ್ಭುತವಾಗಿ ತಡೆದು ನಿಲ್ಲಿಸಿದ್ದರು. ಮದೀನಾದಿಂದ ಬಂದ ಫಳ್ಲುಲ್ಲಾಹಿಲ್ ಮದನಿ, ಥೈಕಾ ಸಾಹಿಬ್ ಅಪ್ಪಾ , ಪ್ರಸಿದ್ಧ ಸೂಫಿ ಗ್ರಂಥ ಅಲ್ಲಫಲ್ ಅಲಿಫ್ ಬರೆದ ಉಮರ್ ವಲಿ, ಕೊಸ್ಮರೈ ಸಂತರು, ಖಲೀಫಾ ಅಪ್ಪಾ ವಲಿಯುಲ್ಲಾ, ಯೂಸುಫ್ ಅಪ್ಪಾ, ಸಾಲಾರ್ ಮರಯ್ಕಾರ್ ವಲಿಯುಲ್ಲಾ, ಪೆರಿಯ ಮುತ್ತು ವಾಪ್ಪ ವಾಲಿ, ಸ್ವರ್ಗತು ಪೊನ್ನು (ಸ್ವರ್ಗದ ಮಹಿಳೆ) ಎಂದು ಕರೆಯಲ್ಪಡುವ ಆಯಿಷಾ ವಲಿ. ಈ ಪಟ್ಟಿ ಇನ್ನೂ ಮುಂದುವರಿಯುತ್ತದೆ.
ಪ್ರಖ್ಯಾತ ವಾಸ್ತುಶಿಲ್ಪದ ಇತಿಹಾಸಕಾರ ಮೆಹರ್ದಾದ್ ಶೋಕೂಹಿ ಸಿರುಪ್ಪಳ್ಳಿ ಮತ್ತು ಮರಕ್ಯಾರ್ ಪಳ್ಳಿ ಬಳಿಯ ಗೋರಿಗಳಲ್ಲಿ ಕಂಡುಬರುವ ಉಪನಾಮಗಳನ್ನು ಅಲ್- ಖಾಹಿರಿ, ಅಲ್- ಇರಾಕಿ ಮತ್ತು ಅಲ್- ಬಕ್ಕರಿ ಎಂದು ಓದಿದ್ದಾರೆ. ಇದರಲ್ಲಿ ಅರಬ್ ವಂಶಾವಳಿಯ ಕಡೆಗೆ ಸ್ಪಷ್ಟ ಸೂಚನೆಯಿದೆ. ಆದರೆ, ನಂತರದ ಕಾಲದಲ್ಲಿ ಅನೇಕ ವಿದ್ವಾಂಸರು ಅಲ್ ಮಅಬರಿ ಎಂಬ ಉಪನಾಮವನ್ನು ಆರಿಸಿಕೊಂಡರು.
ಪೆರಿಯಾ ಖುತ್ಬಾ ಪಳ್ಳಿಯ ಸಮೀಪದಲ್ಲಿರುವ ರಾಜವೈಭವದ ಸಮಾಧಿಗಳು ಮಅಬರ್ ಸುಲ್ತಾನರದ್ದು ಎಂದು ಇತಿಹಾಸಕಾರ ಸುಲ್ತಾನ್ ಬಾಖವಿ ಹೇಳುತ್ತಾರೆ. ಮಧುರೈ ಸುಲ್ತಾನೇಟ್ ಎನ್ನುವ ಹೆಸರಲ್ಲಿಯೂ ಕರೆಯಲಾಗುವ ಸ್ವತಂತ್ರ ಮುಸ್ಲಿಮ್ ಸುಲ್ತಾನೇಟ್ ಕೋರಮಂಡಲ್ ಕರಾವಳಿಯಲ್ಲಿ 14ನೇ ಶತಮಾನದಲ್ಲಿ ಅಸ್ತಿತ್ವಕ್ಕೆ ಬಂತು. ವಿಜಯನಗರ ಸಾಮ್ರಾಜ್ಯದ ದಾಳಿಯಿಂದ ಪತನಗೊಳ್ಳುವವರೆಗೆ ಬಹತೇಕ ಅರ್ಧ ಶತಮಾನಗಳ ಕಾಲ ಇದು ಆಡಳಿತ ನಡೆಸಿತ್ತು.
ಆದರೆ ಕೆಲವು ಇತಿಹಾಸಕಾರರ ಮಧ್ಯೆ ಪುರಾತನ ಮತ್ತು ಮಧ್ಯಕಾಲೀನ ಯುಗಗಳ ಯಾತ್ರಾವಿವರಣೆಗಳಲ್ಲಿ ಕಂಡುಬರುವ ಕೈಲ್ ಅಥವಾ ಕ್ವಾಇಲ್ ಅಥವಾ ಕಯಾಲ್ ಎಂದು ಉಲ್ಲೇಖಿಸಲಾದ ನಗರವು ಕಾಯಲ್ಪಟ್ಟಣಂ ಅಲ್ಲ ಎನ್ನುವ ದುರದೃಷ್ಟಕರ ಚರ್ಚೆಯಿದೆ. ಇಂದಿನ ಕಾಯಲ್‌ಪಟ್ಟಣಂ ತುಲನಾತ್ಮಕವಾಗಿ ಹೊಸ ಪಟ್ಟಣವಾಗಿದ್ದು ಪ್ರಾಚೀನ ಕಯಾಲ್‌ನ ನಿಖರವಾದ ಸ್ಥಳ ಯಾವುದೆನ್ನುವ ಮಾಹಿತಿ ಕಳೆದುಹೋಗಿದೆ ಅಥವಾ ಅನಿಶ್ಚಿತ ಎನಿಸಿದೆ ಎನ್ನುವುದು ಅವರ ಅಭಿಮತ. ಪ್ರಸಿದ್ಧ ಇತಿಹಾಸಕಾರ ಡಾ. ರಾಜಾ ಮೊಹಮದ್‌ರವರು ಹಲವರ ಮೆಚ್ಚುಗೆ ಪಡೆದ ಅವರ ‘ಕೋರಮಂಡಲ್ ಮುಸ್ಲಿಮರ ಸಾಗರೇತಿಹಾಸ’ ಕೃತಿಯಲ್ಲಿ ಪೋರ್ಚುಗೀಸರು ಹಳೆಯ ಕಯಾಲನ್ನು ನಾಶಪಡಿಸಿದ್ದು ಪ್ರಸ್ತುತ ಇರುವ ಕಾಯಲ್‌ಪಟ್ಟಣಮನ್ನು ಹಳೆಯ ಕಯಾಲ್‌ಗೆ ಪ್ರತಿಸ್ಪರ್ಧೆ ನೀಡುವ ಬಂದರಾಗಿ ಅಭಿವೃದ್ಧಿಪಡಿಸಿದರು ಎಂದು ವಾದಿಸಿದ್ದಾರೆ. ಕಾಯಲ್ಪಟ್ಟಣದ ಇತಿಹಾಸಕಾರರು ಈ ಸಿದ್ಧಾಂತದ ಸತ್ಯಾಸತ್ಯತೆಯನ್ನು ತೀವ್ರವಾಗಿ ಪ್ರಶ್ನಿಸಿದ್ದಾರೆಂದು ಹೇಳಬೇಕಿಲ್ಲ ತಾನೇ.
ಈ ಚರ್ಚೆಯನ್ನು ಅರ್ಥಮಾಡಿಕೊಳ್ಳಲು ಭೌಗೋಳಿಕ ಸ್ಥಳಗಳ ಕುರಿತ ಸೂಕ್ಷ್ಮ ಅನ್ವೇಷಣೆ ಸಹಾಯ ಮಾಡಬಲ್ಲದು. ಕಾಯಲ್ ‘ಹಿನ್ನೀರಿ’ನ ತಮಿಳು ಅನುವಾದ. ಇಲ್ಲಿ ತಾಮ್ರಪರ್ಣಿ ನದಿ ಪುನ್ನಕಯಾಲ್‌ನಲ್ಲಿ ಬಂಗಾಳ ಕೊಲ್ಲಿಯನ್ನು ಸೇರುವ ನದೀಮುಖವನ್ನು ಇದು ಸೂಚಿಸುತ್ತದೆ ಎಂದು ಹೇಳಬಹುದು. ಪ್ರಸ್ತುತ ಪಟ್ಟಣದ ವಾಯುವ್ಯಕ್ಕೆ ಕೆಲವು ಕಿಲೋಮೀಟರ್‌ಗಳ ಅಂತರದಲ್ಲಿ ಪಳಯ ಕಾಯಲ್ ಇದೆ. ಈಜಿಪ್ಟಿನ ಅರಬ್ಬರು ಇಲ್ಲಿ ನೆಲೆಸಿ ಇದನ್ನು ಕಾಹಿರ ಫತನ್ ಎಂದು ಕರೆದಿದ್ದು ಅದುವೆ ನಂತರ ಕಾಯಲ್ಪಟ್ಟಣಂ ಆಗಿ ರೂಪುಗೊಂಡಿತು ಎನ್ನುತ್ತದೆ ಮತ್ತೊಂದು ಶಬ್ದ ವ್ಯುತ್ಪತ್ತಿಯ ಥಿಯರಿ. ಇನ್ನೂ ಕೆಲವು ಇತಿಹಾಸಕಾರರ ಪ್ರಕಾರ ಪ್ರಾಚೀನ ಕಾಲದಲ್ಲಿ ಆ ಪ್ರದೇಶವನ್ನು ಇಡಿಯಾಗಿ ಕಾಯಲ್ ಎಂದು ಕರೆಯಲಾಗುತ್ತಿತ್ತು.
ಸೂಕ್ಷ್ಮವಾಗಿ ಪರಿಶೀಲಿಸಿದರೆ ಈ ಅನವಶ್ಯಕ ಗೊಂದಲಕ್ಕೆ ನಾಂದಿ ಹಾಡಿದ್ದು ದಕ್ಷಿಣ ಭಾರತದ ಇತಿಹಾಸಕಾರ ಹಾಗೂ ಮದ್ರಾಸಿನ ಬಿಷಪ್ ಎನಿಸಿದ್ದ ರಾಬರ್ಟ್ ಕಾಡ್‌ವೆಲ್‌ರವರೆನ್ನುವುದನ್ನು ಸುಸ್ಪಷ್ಟವಾಗಿ ತಿಳಿಯಬಹುದು. 1890ರಲ್ಲಿ ಕಾಡ್‌ವೆಲ್‌ರವರು ಉತ್ಖನನ ಯೋಜನೆಯೊಂದನ್ನು ಹಮ್ಮಿಕೊಂಡಿದ್ದರು. ಕಾಯಲ್‌ಪಟ್ಟಣದ ಉತ್ತರಕ್ಕೆ ಐದು ಮೈಲುಗಳಷ್ಟು ದೂರದಲ್ಲಿರುವ ಒಂದು ಸ್ಥಳವನ್ನು ಅಲ್ಲಿರುವ ಕೋಟೆ ದೇವಾಲಯ, ಬಾವಿ ಮತ್ತು ಉಗ್ರಾಣಗಳ ಅವಶೇಷಗಳನ್ನು ತೋರಿಸಿ ಅದುವೆ ನಿಜವಾದ ಕಾಯಲ್ ಎಂದು ಗುರುತಿಸಿದರು.

ಆದರೆ ಪಟ್ಟಣದ ಅವಶೇಷಗಳ ನಡುವೆ ಯಾವುದೇ ಇಸ್ಲಾಮಿಕ್ ಅವಶೇಷಗಳು ಇದ್ದಿರುವುದಾಗಿ ಉಲ್ಲೇಖಿಸಿಲ್ಲ. ಪಟ್ಟಣದ ಅಸಂಖ್ಯಾತ ಸೂಫಿ ದರ್ಗಾಗಳನ್ನು ಮತ್ತು ಮಸೀದಿಗಳನ್ನು ಶಿಲಾಶಾಸನಗಳು ಮತ್ತು ಶಾಸನಗಳ ಜತೆಗೆ ಸೂಕ್ಷ್ಮವಾಗಿ ಪರಿಶೀಲಿಸಿದ ನಂತರ ಪ್ರೊ. ಮೆಹರ್ದಾದ್ ಶೋಕೂಹಿಯವರು ಕಾಡ್‌ವೆಲ್ ಅವರ ಸಿದ್ಧಾಂತವನ್ನು ತಮ್ಮ ಪ್ರಮುಖ ಕೃತಿಯಾದ ‘ಮುಸ್ಲಿಮ್ ಆರ್ಕಿಟೆಕ್ಚರ್ ಆಫ್ ಸೌತ್ ಇಂಡಿಯಾ’ ದಲ್ಲಿ ಅಲ್ಲಗಳೆದಿದ್ದಾರೆ. ಮುಸ್ಲಿಮ್ ವಸಾಹತುಗಳಿಗೆ ಹೆಸರುವಾಸಿಯಾದ ನಗರಕ್ಕೆ ಸಂಬಂಧಪಟ್ಟಂತೆ ಈ ನಿಲುವು ಅಸಾಧಾರಣ ಮತ್ತು ಅಸಾಧ್ಯವಾದದ್ದು ಎಂದು ಅವರು ದೃಢವಾಗಿ ಅಭಿಪ್ರಾಯಿಸುತ್ತಾರೆ. “ಸ್ವಲ್ಪ ಮೃದುವಾಗಿ ಹೇಳಿದರೆ, ಕಾಯಲ್‌ಪಟ್ಟಣಂ ಕುರಿತ ಕಾಡ್‌ವೆಲ್ ವರದಿಯ ಎಲ್ಲಾ ನಿಟ್ಟಿನಲ್ಲೂ ಸರಿಯಲ್ಲದ ಮಾಹಿತಿಗಳಿಂದ ಕೂಡಿದೆ ಎನ್ನಬಹುದು” ಎನ್ನುತ್ತಾರೆ ಮೆಹರ್ದಾದ್ ಶೊಕೂಹಿ. ಹಳೆಯ ನಕ್ಷೆಗಳಲ್ಲಿರುವ ಕ್ವೈಲ್ ಸ್ಥಳಕ್ಕೆ ಅನುಗುಣವಾಗಿ ಪ್ರಸ್ತುತ ಪಟ್ಟಣದ ಸ್ಥಳ ಇದ್ದು ಸ್ಥಳೀಯ ಶಾಸನದಲ್ಲಿ ಹಾಗೂ 13ನೇ ಶತಮಾನದಿಂದೀಚೆಗೆ ಬಂದರಿನ ಬಗೆಗೆ ಇತಿಹಾಸಕಾರರು ಹಾಗೂ ಪ್ರಯಾಣಿಕರು ನೀಡಿರುವ ವಿವಿಧ ವರದಿಗಳಲ್ಲಿ ದಾಖಲಾಗಿರುವ ಹೆಸರು ಉಳಿದಿದೆ. ಸ್ಥಳ ಬದಲಾವಣೆಯ ಯಾವುದೇ ಸೂಚನೆಯೂ ಇಲ್ಲ. ಈ ವಿಚಾರದ ಕಡೆಗೂ ಶೊಕೂಹಿ ಗಮನ ಸೆಳೆಯುತ್ತಾರೆ.
ಮುಖ್ಯವಾಗಿ ರಾಬರ್ಟ್ ಕಾಡ್‌ವೆಲ್ ಒಮ್ಮೆಯೂ ಕಾಯಲ್ಪಟ್ಟಣಕ್ಕೆ ಭೇಟಿ ನೀಡಿಲ್ಲ ಹಾಗೂ ಪಟ್ಟಣದ ಹೊರಗೆ ತನ್ನ ಉತ್ಖನನವನ್ನು ಮಾಡಿಲ್ಲ ಎನ್ನುವುದು ಪರಿಶೀಲಿಸಲ್ಪಟ್ಟ ಸತ್ಯ. ಕ್ರಿಶ್ಚಿಯನ್ ಮಿಷನರಿಗಳು ಮತ್ತು ಪಟ್ಟಣದ ಮುಸ್ಲಿಮ್ ವಿದ್ವಾಂಸರ ನಡುವೆ ಅಂತರ್ಧರ್ಮೀಯ ಚರ್ಚೆಗಳು ನಡೆಯುತ್ತಿದ್ದರಿಂದ ಮತ್ತು ಕಾಡ್‌ವೆಲ್ ಸ್ವತಃ ಬಿಷಪ್ ಆಗಿದ್ದರಿಂದ ಪಟ್ಟಣವನ್ನು ಪ್ರವೇಶಿಸಲು ಮತ್ತು ಅವಶೇಷಗಳನ್ನು ಪರೀಕ್ಷಿಸಲು ಅನುಮತಿ ಸಿಕ್ಕಿರಲಿಲ್ಲ. “ಕಾಡ್‌ವೆಲ್ ಅವರು ಕಾಯಲ್ಪಟ್ಟಣವನ್ನು ಪರಿಶೀಲಿಸಿದ್ದರೆ ಮಸೀದಿಗಳ ಬದಿಯಲ್ಲಿರುವ ಸ್ಮಶಾನಗಳಲ್ಲಿನ ನುರಿತವಲ್ಲದ ಕಣ್ಣುಗಳಿಗೂ ಹೊಳೆಯುವ ಹಲವಾರು ಹಳೆಯ ಸಮಾಧಿ ಕಲ್ಲುಗಳನ್ನು ಅವರು ಮಿಸ್ ಮಾಡಿಕೊಳ್ಳುತ್ತಿರಲಿಲ್ಲ.” ಎಂದು ಶೋಕೂಹಿ ಚರ್ಚೆಯನ್ನು ಮುಕ್ತಾಯಗೊಳಿಸುತ್ತಾರೆ. ಡಾ.ಆರ್.ಎಸ್.ಅಬ್ದುಲ್ ಲತೀಫ್ ಅವರೂ ಈ ವಿಷಯದ ಬಗ್ಗೆ ತಮಿಳಿನಲ್ಲಿ ‘ಕಾಯಲ್ ತನ್ ಕಾಯಲ್ಪಟ್ಟಿಣಂ’ (ಕಾಯಲೇ ಕಾಯಲ್ಪಟ್ಟಿಣಂ) ಎಂಬ ಪುಸ್ತಕವನ್ನು ಬರೆದಿದ್ದಾರೆ. ಆದರೂ, ಕಾಡ್‌ವೆಲ್ ಸಿದ್ಧಾಂತವು ಅನೇಕ ಇತಿಹಾಸಕಾರರ ಮೇಲೆ ಪ್ರಭಾವ ಬೀರಿದ್ದು ಕೆಲವು ಅಧಿಕೃತ ಇತಿಹಾಸಶಾಸ್ತ್ರಗಳ ಸಮೇತ ಹಲವಾರು ದಾಖಲೆಗಳಲ್ಲಿ ಜಾಗ ಪಡೆದುಕೊಂಡಿದೆ”.
ಈ ಪ್ರದೇಶವು ಮುತ್ತು ಆಯುವಿಕೆಗೆ ಹೆಸರುವಾಸಿಯಾಗಿದ್ದರಿಂದ ಇಲ್ಲಿನ ಹೇರಳವಾದ ಸಂಪತ್ತು 16ನೇ ಶತಮಾನದ ಪೋರ್ಚುಗೀಸರ ಗಮನಸೆಳೆಯಿತು. ಆ ಹೊತ್ತಿಗೆ, ಅದಾಗಲೇ ಅವರು ಮಲಬಾರ್‌ಗೆ ಬಂದಿಳಿದಿದ್ದರು. ವ್ಯಾಪಾರ ಮತ್ತು ವ್ಯಾಪಾರಕ್ಕಾಗಿನ ಯುದ್ಧಕ್ಕೆ ಶುರುವಿಟ್ಟಿದ್ದರು. ಮನ್ನಾರ್ ಕೊಲ್ಲಿಯ ಎರಡೂ ತೀರಗಳಲ್ಲಿನ ಮುತ್ತು ವ್ಯಾಪಾರವನ್ನು ವಶಪಡಿಸಿಕೊಳ್ಳುವ ಉದ್ದೇಶದಿಂದ ಪೋರ್ಚುಗೀಸರು ತಮ್ಮ ಎಂದಿನ ಶೈಲಿಯಲ್ಲಿ ಕೋರಮಂಡಲ್ ಕರಾವಳಿ ಮತ್ತು ಸಿಲೋನ್ ಮೇಲೆ ಮೂರ್ಸ್ ವಿರುದ್ಧ ವಿಧ್ವಂಸಕ ದಾಳಿಗಳನ್ನು ಪ್ರಾರಂಭಿಸಿದರು. ಇದನ್ನು ತೀವ್ರವಾಗಿ ವಿರೋಧಿಸಿದ ಕಾಯಲ್ಪಟ್ಟಣದ ಜನರಿಗೆ ಕೊಸ್ಮರೈ ದರ್ಗಾದ ಬಳಿ ವಸಾಹತುಶಾಹಿ ವಿರೋಧಿ ಯುದ್ಧಗಳನ್ನು ನಡೆಸಬೇಕಾಯಿತು. ಅಸಂಖ್ಯಾತ ಜನರು ಹುತಾತ್ಮರಾದರು. ಅನೇಕ ಮಲಬಾರಿಗಳು ಕಾಯಲ್ ಹೋರಾಟಗಾರರ ಬೆಂಬಲಕ್ಕಾಗಿ ಬಂದಿದ್ದರೆಂದು ನಂಬಲಾಗಿದೆ. ನಿರ್ಮಾಣ ಕಾರ್ಯಗಳಿಗಾಗಿ ಭೂಮಿ ಅಗೆಯುವಾಗ ಪಕ್ಕದ ಪ್ರದೇಶದ ಹಲವಾರು ಜಾಗಗಳಲ್ಲಿ ಮಾನವ ಅಸ್ಥಿಪಂಜರಗಳು ಮತ್ತು ತಲೆಬುರುಡೆಗಳು ಪತ್ತೆಯಾಗಿದ್ದವು ಎಂದು ಸ್ಥಳೀಯರು ಸಾಕ್ಷಿ ನುಡಿಯುತ್ತಾರೆ. ಪೋರ್ಚುಗೀಸ್ ವಿರೋಧಿ ಯುದ್ಧಗಳಲ್ಲಿ ಬಳಸಲಾದ ಹಳೆಯ ಖಡ್ಗವನ್ನು ಎರಟ್ಟೈಕುಲಂ ಪಳ್ಳಿಯಲ್ಲಿ (ಮಸ್ಜಿದ್ ಮೀಕಾಯಿಲ್) ಸ್ಮಾರಕವಾಗಿ ಇರಿಸಲಾಗಿದೆ. ಬೇರೆ ಮಸೀದಿಗಳಲ್ಲೂ ಅಂತಹ ಸ್ಮಾರಕಗಳು ಇವೆ.
ಕಾಯಲ್ ಬಂದರು 14ನೇ ಶತಮಾನದಲ್ಲಿ ಅದರ ಉತ್ತುಂಗದಲ್ಲಿತ್ತು. ಪಾಂಡ್ಯ ರಾಜರು ಮತ್ತು ಮಅಬರ್ ಸುಲ್ತಾನರ ಅಶ್ವಸೈನ್ಯಕ್ಕಾಗಿ ಉತ್ತಮ ಗುಣಮಟ್ಟದ ಪರ್ಷಿಯನ್ ಕುದುರೆಗಳನ್ನು ದೊಡ್ಡ ಹಡಗುಗಳಲ್ಲಿ ತರುತ್ತಿದ್ದ ಅರಬ್ಬರು ಲಾಭದಾಯಕ ವ್ಯವಹಾರವನ್ನು ಕುದುರಿಸುತ್ತಿದ್ದರು. ಗುಲಾಮರು ಮತ್ತು ಕ್ರಿಮಿನಲ್ ಅಪರಾಧಿಗಳು ಪಟ್ಟಣದ ಅದೃಷ್ಟಕ್ಕೆ ಕಾರಣೀಭೂತರಾದ ಮುತ್ತು ಜಿಗಿತಗಾರರಾಗಿ ಕೆಲಸ ಮಾಡುತ್ತಿದ್ದರು. ಸ್ಥಳೀಯ ನಿರ್ಮಿತ ಮರಕ್ಕಯಾರ್ ಹಡಗುಗಳು ಮಲಬಾರ್, ಗುಜರಾತ್, ಬಂಗಾಳ ಮತ್ತು ದೂರದ ವಿದೇಶಿ ಬಂದರುಗಳಿಗೆ ಪ್ರಯಾಣ ಬೆಳೆಸುತ್ತಿದ್ದವು. ಈ ಮೂಲಕ ಕಾಯಲ್ ನಿಜವಾದ ಅಂತರಾಷ್ಟ್ರೀಯ ಬಂದರೆನಿಸಿಕೊಂಡು ಗಮನಾರ್ಹ ಶ್ರೀಮಂತಿಕೆ ಪಡೆಯಿತು. ಮತ್ತೊಂದೆಡೆ, ಅರೇಬಿಯಾ, ಸಿಲೋನ್ ಮತ್ತು ಇತರೆಡೆಗಳಿಂದ ಆಗಮಿಸಿದ ಸಂತರು ಪಟ್ಟಣದ ಆತ್ಮವನ್ನು ಶ್ರೀಮಂತಗೊಳಿಸಿದರು. ಪರಿಣಾಮವಾಗಿ ಅಲ್ಲಿನ ಧಾರ್ಮಿಕ ಜೀವನವು ಪ್ರಶಂಸನೀಯ ಗುಣಮಟ್ಟವನ್ನು ಪಡೆದಿತ್ತು. ಪೋರ್ಚುಗೀಸರು ತಮ್ಮ ವಸಾಹತುಶಾಹಿ ಆಕ್ರಮಣವನ್ನು ಆರಂಭಿಸುವವರೆಗೂ ಇದು ಮುಂದುವರಿಯಿತು. ಅವರು ಕೋರಮಂಡಲ್ ಕರಾವಳಿಯಲ್ಲಿನ ಆರಂಭಿಕ ಮುಸ್ಲಿಮ್ ಸೆಟಲ್‌ಮೆಂಟ್‌ಗಳ ಅವನತಿಯನ್ನು ಉದ್ಘಾಟಿಸಿದರು. ಕಾಯಲ್ ವೈಭವ ಕ್ರಮೇಣ ಮರೆಯಾಯಿತು.
ಗತಕಾಲದ ಅಮೂಲ್ಯ ಕುರುಹುಗಳು ಪಟ್ಟಣದಾದ್ಯಂತ ಹರಡಿವೆ. ಈ ವೈಭವವನ್ನು ಗುರುತಿಸುವವರು ಯಾರೂ ಸಿಗುತ್ತಿಲ್ಲ. ನಾನು ಹಿಂದಿರುಗುವ ಹಿಂದಿನ ಸಂಜೆ ನನ್ನನ್ನು ಪಟ್ಟಣದ ಹೊರವಲಯದಲ್ಲಿ ಸುತ್ತಾಡಲು ಕರೆದೊಯ್ದ ಸಲೈ ಬಶೀರ್ ಕೊಸ್ಮರೈ ದರ್ಗಾದ ಬಳಿ ಕೂತು ಈ ಪಟ್ಟಣದಲ್ಲಿ ಇತಿಹಾಸವನ್ನು ಎಷ್ಟು ಶೋಚನೀಯವಾಗಿ ಕಡೆಗಣಿಸಲಾಗುತ್ತಿದೆ ಎಂದು ವಿವರಿಸಿದರು. “ನಮ್ಮ ಪೂರ್ವಜರು ಪೋರ್ಚುಗೀಸರ ವಿರುದ್ಧ ಹೋರಾಡಿ ಅನೇಕ ಜೀವಗಳನ್ನು ಬಲಿಕೊಟ್ಟದ್ದು ಇಲ್ಲಿಯೇ. ಆದರೆ ಈ ಸ್ಥಳವು ಇಂದು ನಿರ್ಲಕ್ಷ್ಯಕ್ಕೆ ತುತ್ತಾಗಿದೆ. ಮೊದಲ ಮಸೀದಿಯೂ ಕಳೆದುಹೋಗಿದೆ. ನಮ್ಮ ಹಿಂದಿನ ಮತ್ತು ಇಸ್ಲಾಮಿಕ್ ಶ್ರೀಮಂತ ಸಂಸ್ಕೃತಿಯ ಬಗ್ಗೆ ತುಂಬಾ ಹೆಮ್ಮೆಪಡುತ್ತೇವೆ. ಆದರೆ, ಅದನ್ನು ಸಂರಕ್ಷಿಸಲು ಮತ್ತು ಮುಂಬರುವ ಪೀಳಿಗೆಗೆ ರವಾನಿಸಲು ಸಮುದಾಯ ಮಾಡುತ್ತಿರುವುದು ಸಣ್ಣ ಮಟ್ಟಿನ ಪ್ರಯತ್ನ ಮಾತ್ರ.” ಎಂದು ಸ್ಥಳೀಯ ಇತಿಹಾಸಾಸಕ್ತ ಬಶೀರ್ ಹೇಳುತ್ತಾರೆ. ಐತಿಹಾಸಿಕವಾದ ಪ್ರಮುಖ ಸ್ಥಳಗಳನ್ನು ಖರೀದಿಸುವ ಮತ್ತು ಸ್ಮಾರಕಗಳು ಮತ್ತು ವಸ್ತುಸಂಗ್ರಹಾಲಯಗಳನ್ನು ನಿರ್ಮಿಸುವ ಯೋಜನೆಗಳ ಬಗ್ಗೆ ಅವರು ಮಾತನಾಡುತ್ತಾರೆ. ಇದನ್ನು ಕಾರ್ಯಗತಗೊಳಿಸಲು ಬೇಕಾದ ಸಾಕಷ್ಟು ಸಂಪನ್ಮೂಲಗಳನ್ನು ಪಟ್ಟಣ ಹೊಂದಿದೆ. ಆದರೆ ಇದಕ್ಕೆ ನಾಯಕತ್ವ ನೀಡಲು ಯಾರಿದ್ದಾರೆ? ಅವು ಅರ್ಥಪೂರ್ಣವಾಗಿ ಸಾಕಾರಗೊಳ್ಳಬಹುದೇ? ಕಾಲವೇ ಉತ್ತರಿಸಬಲ್ಲದು. ಆದರೆ ಪಟ್ಟಣವು ತನ್ನ ಅದ್ಭುತ ಗತಕಾಲದ ಬಗ್ಗೆ ಕಾಳಜಿ ವಹಿಸಲು ಎಚ್ಚೆತ್ತುಕೊಳ್ಳದಿದ್ದರೆ ಸಮಾಧಿ ಕಲ್ಲು , ಶಿಲಾಶಾಸನ , ಆರ್ವಿ ಹಸ್ತಪ್ರತಿ, ಇಸ್ಲಾಮಿಕ್- ದ್ರಾವಿಡ ವಾಸ್ತುಶಿಲ್ಪ ಸಹಿತ ಇರುವ ವಿವಿಧ ರೂಪಗಳ ಅವಶೇಷಗಳು ಶಾಶ್ವತವಾಗಿ ಕಳೆದುಹೋಗಲಿವೆ.
ಲೇ: ಮೊಹಮ್ಮದ್ ನೌಶಾದ್
ಕನ್ನಡಕ್ಕೆ: ತಂಶೀರ್ ಮುಈನಿ ಉಳ್ಳಾಲ್

Muhammed Noushad is a writer, media educator, and (un)learning facilitator. He has taught journalism in Kerala for 14 years and conducts intensive creative writing workshops. For over a decade, he worked as an editor with Other Books, specializing in Malabar history, gender, mysticism, and caste. His role included liaising with authors, copy-editing, mentoring interns, and managing social media. His first Malayalam book, Sama-e-Bismil: The Inner Worlds of Qawwali (Book Plus, 2021), explores traditional qawwali in the Chishtiya Sufi tradition.