ಪ್ರತಿಯೊಂದು ಪುಸ್ತಕವು ತನ್ನದೇ ಆದ ಐತಿಹಾಸಿಕ ಮತ್ತು ಪ್ರಾದೇಶಿಕ ಹಿನ್ನೆಲೆಯನ್ನು ಹೊಂದಿರುತ್ತದೆ. ಸಾಲು- ಸಾಲು ಪುಸ್ತಕಗಳನ್ನು ಜೋಡಿಸಿ ಓದುವುದಕ್ಕಿಂತ ಆ ಸಾಲುಗಳ ನಡುವೆ ಉತ್ತಮ ಪುಸ್ತಕದ ಆಯ್ಕೆ ಮಾಡಿ ಓದುವುದು ಸೂಕ್ತ. ಅದು ತನ್ನದೇ ಆದ ಗತಕಾಲದ ಒಳನೋಟಗಳನ್ನು ಮಾತ್ರವಲ್ಲದೆ, ಭವಿಷ್ಯದಲ್ಲಿ ಎದುರುಗೊಳ್ಳುವ ಪ್ರಪಂಚದ ಒಳನೋಟಗಳನ್ನು ನಮಗೆ ಬಹಿರಂಗಪಡಿಸುತ್ತದೆ. ಮಧ್ಯಯುಗದಲ್ಲಿ ಪರ್ಷಿಯನ್ ಭಾಷೆಯಿಂದ ಸಾಧ್ಯವಾದ ಖಂಡಾಂತರ ಸಾಹಿತ್ಯ ಕ್ರಾಂತಿಗೆ ‘ಜಾಮಿಉ ತಮ್ಸೀಲ್’ ( ಕಥೆಗಳ ಸಂಗ್ರಹ) ಎಂಬ ಪುಸ್ತಕ ಒಂದು ವಿಶಿಷ್ಟ ಉದಾಹರಣೆ. ಈ ಪುಸ್ತಕವನ್ನು ಹದಿನೇಳನೆಯ ಶತಮಾನದಲ್ಲಿ ಪರ್ಷಿಯನ್ ಭಾಷೆಯಲ್ಲಿ ಬರೆಯಲಾಗಿದೆ. ಆದರೆ ಕೃತಿಯ ರಚನೆ ಪರ್ಷಿಯನ್ ಭಾಷೆಯ ಹುಟ್ಟೂರಾದ ಇರಾನಿನಲ್ಲಿ ಆಗಿರಲಿಲ್ಲ. ಬದಲಿಗೆ, ದಕ್ಷಿಣ ಏಷ್ಯಾದಲ್ಲಾಗಿತ್ತು. ನಿಖರ ಮಾಹಿತಿಯ ಪ್ರಕಾರ, ಪುಸ್ತಕದ ಐತಿಹಾಸಿಕ ಪಯಣವು ಪ್ರಾರಂಭಗೊಳ್ಳುವುದು ಡೆಕ್ಕನ್ ಪ್ರಸ್ಥಭೂಮಿಯ ಅತ್ಯಂತ ಪ್ರಮುಖ ನಗರ ಹೈದರಾಬಾದಿನಿಂದ. ಜಾಮಿಉ ತಮ್ಸೀಲ್ ಲೇಖಕ ಮುಹಮ್ಮದ್ ಅಲಿ ಹ್ಯಾಬ್ಲೆರುಡಿ ಇರಾನಿನ ಕ್ಯಾಸ್ಪಿಯನ್ ಕರಾವಳಿಯಲ್ಲಿರುವ ಹ್ಯಾಬಲ್‌ರೂಡ್ ಎಂಬ ಸಣ್ಣ ಪಟ್ಟಣದಲ್ಲಿ ಜನಿಸಿದರು. ಜಾಮಿಉ ತಮ್ಸೀಲಿನ ಲೇಖಕರು ಪರ್ಶಿಯನ್ ಮೂಲದವರಾದರೂ ಪುಸ್ತಕದ ಇತಿಹಾಸ ರಾಷ್ಟ್ರದ ಗಡಿಗಳನ್ನು ಮೀರಿ ಪರ್ಷಿಯನ್ ಸಾಹಿತ್ಯದ ಕಳೆದುಹೋಗಿರುವ ಭೌಗೋಳಿಕ ವ್ಯಾಪ್ತಿಯನ್ನು ಬಹಿರಂಗಪಡಿಸುತ್ತದೆ.
ಆ ಸುಂದರ ಗತವು ಏಷ್ಯಾದ ವೈವಿಧ್ಯಮಯ ಪ್ರದೇಶಗಳನ್ನು ಒಂದುಗೂಡಿಸಿತು. ರಾಷ್ಟ್ರಗಳು ಎಂಬ ಪರಿಕಲ್ಪನೆ ಬೇರೂರಿರುವ ಈ ಯುಗದಲ್ಲಿ, ಗಡಿಗಳು ಮತ್ತು ಗೋಡೆಗಳಿಂದ ಬೇರ್ಪಟ್ಟ ವಿಭಿನ್ನ ನಾಗರಿಕತೆಗಳಾಗಿ ನಮ್ಮನ್ನು ನಾವು ಗ್ರಹಿಸುತಿದ್ದೇವೆ. ಆದರೆ ಜಾಮಿಉ ತಮ್ಸೀಲ್ ನಮಗೆ ಶತಮಾನಗಳಿಂದ ಅಸ್ತಿತ್ವದಲ್ಲಿದ್ದ ನಾಗರಿಕತೆಯನ್ನು ಪರಿಚಯಿಸಲು ಶ್ರಮಿಸುತ್ತದೆ. ಹೈದರಾಬಾದಿನಿಂದ ತುರ್ಕಿಯವರೆಗೆ ವಿಸ್ತರಿಸಿರುವ ಪರ್ಷಿಯನ್ ಭೂವ್ಯಾಪ್ತಿಯ ಗತಕಾಲದ ಹಿಂದಿನ ಮರೆಮಾಚಲ್ಪಟ್ಟ ನೆನಪುಗಳನ್ನು ಈ ಕೃತಿ ಕೆದಕಲು ಪ್ರಯತ್ನಿಸಿದೆ.
ದಕ್ಷಿಣ ಏಷ್ಯಾದ ರಾಜವಂಶಗಳು ತಮ್ಮ ಜನಾಂಗೀಯ ಮೂಲವನ್ನು ಲೆಕ್ಕಿಸದೆ ರಾಮಾಯಣ ಮತ್ತು ಮಹಾಭಾರತದಂತಹ ಪ್ರಮುಖ ಸಂಸ್ಕೃತ ಕೃತಿಗಳ ಪರ್ಷಿಯನ್ ಅನುವಾದ ಯೋಜನೆಗಳನ್ನು ಕೈಗೊಂಡವು. ಇಂಡೋ- ಪರ್ಷಿಯನ್ ಕವಿ ಅಮೀರ್ ಖುಸ್ರು (14 ನೇ ಶತಮಾನ) ದೆಹಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಾತ್ರವಲ್ಲದೆ ಜಾಗತಿಕ ಮಟ್ಟದಲ್ಲಿ ಖ್ಯಾತಿ ಹೊಂದಿದ್ದರು. ಇರಾನಿನಲ್ಲಿ ಇಕ್ಬಾಲ್- ಎ ಲಾಹೋರಿ ಎಂದು ಕರೆಯಲ್ಪಡುವ ಮುಹಮ್ಮದ್ ಇಕ್ಬಾಲ್ (1877-1938) ನಂತಹ ದಕ್ಷಿಣ ಏಷ್ಯಾದ ಕವಿಗಳನ್ನು ಇಂದಿಗೂ ವ್ಯಾಪಕವಾಗಿ ಓದಲಾಗುತ್ತಿದೆ.
ಆ ವೇಳೆ ಪರ್ಷಿಯನ್ ದಕ್ಷಿಣ ಏಷ್ಯಾದಲ್ಲಿ ಮಾತ್ರ ಸೀಮಿತಗೊಳ್ಳದೆ ಮಧ್ಯ ಏಷ್ಯಾದಾದ್ಯಂತ ಮತ್ತು ಪಶ್ಚಿಮ ಏಷ್ಯಾದ ಕಾಕಸ್‌ಗಳಂತಹ ಭಾಗಗಳಲ್ಲಿ ಮುಖ್ಯವಾಹಿನಿಯ ಮಾಧ್ಯಮವಾಗಿತ್ತು. ಈ ರೀತಿಯಾಗಿ, ಪರ್ಷಿಯನ್ ಭಾಷೆಯ ಮೂಲಕ ವಿಭಿನ್ನ ಹಿನ್ನೆಲೆಯ ಜನರ ನಡುವೆ ಪರಸ್ಪರ ಸಂಬಂಧ ಏರ್ಪಡುತ್ತಿತ್ತು. ಪರ್ಷಿಯನ್ ಭಾಷೆಯು ಮುಸಲ್ಮಾನರು, ಹಿಂದೂಗಳು, ಸಿಖ್, ಕ್ರಿಶ್ಚಿಯನ್, ಝೋರಾಸ್ಟ್ರಿಯನ್ನರು ಮತ್ತು ಯಹೂದಿಗಳ ಸಂಕರ ಸಂಸ್ಕೃತಿಯ ಬೀಜಗಳನ್ನು ಬಿತ್ತಿತು. ಇದು ಅಭಿರುಚಿ ಮತ್ತು ನೈತಿಕ ನಡವಳಿಕೆಯ ಸಾಮಾನ್ಯ ಪ್ರಜ್ಞೆಯನ್ನು ಹೊಂದಿರುವ ವೈವಿಧ್ಯಮಯ ಜನರಲ್ಲಿ ‘ಕಾಸ್ಮೋಪಾಲಿಟನ್’ ಭಾವನೆಯನ್ನು ಹುಟ್ಟುಹಾಕಿತು. ವಿವಿಧ ಭಾಷೆಗಳು ಮತ್ತು ಸಮಾಜಗಳ ನಡುವೆ ಜ್ಞಾನವನ್ನು ಹಂಚಿಕೊಳ್ಳುವ ಮಾಧ್ಯಮವಾಗಿ ಪರ್ಷಿಯನ್ ಅಂದಿನ ದಿನಗಳಲ್ಲಿ ಪಾತ್ರ ವಹಿಸಿತು. ಅನೇಕ ಕೃತಿಗಳನ್ನು ಸಂಸ್ಕೃತ, ಅರೇಬಿಕ್, ಚಗತೈ, ಟರ್ಕಿಶ್, ತಮಿಳು ಮುಂತಾದವುಗಳಿಂದ ಪರ್ಷಿಯನ್ ಭಾಷೆಗೆ ಅನುವಾದಿಸಲಾಯಿತು. ಕ್ರಿ.ಶ. 1500ರಲ್ಲಿ ಮೊಘಲ್ ಚಕ್ರವರ್ತಿ ಅಕ್ಬರ್ ಪರ್ಷಿಯನ್ ಭಾಷೆಯನ್ನು ಸಾಮ್ರಾಜ್ಯದ ಅಧಿಕೃತ ಭಾಷೆಯಾಗಿ ಘೋಷಿಸಲು ಪರ್ಷಿಯನ್ ಭಾಷೆಯ ಕಾಸ್ಮೋಪಾಲಿಟನ್ ಸ್ವಭಾವವು ಕಾರಣ ಎಂಬುದನ್ನು ತಿಳಿಯಬೇಕು. ಮುಖ್ಯವಾಗಿ ಈ ಭಾಷೆಯು ಸೀಮಿತ ವರ್ಗಕ್ಕೆ ಮೀಸಲಾಗಿರಲಿಲ್ಲ. ಹೊರತಾಗಿ, ಎಲ್ಲರನ್ನೂ ಮತ್ತು ಪ್ರತೀ ಕ್ಷೇತ್ರವನ್ನು ಒಳಗೊಂಡಿತ್ತು.
ಪರ್ಷಿಯನ್ ಭಾಷೆ ಪ್ರಸ್ತುತ ಇರಾನ್ ಆಡಳಿತದ ಅಧಿಕೃತ ಭಾಷೆ. ಅವರು ಗತಕಾಲದ ನೆನಪುಗಳನ್ನು ಉಳಿಸುವ ಮೂಲಕ ಆಧುನಿಕ ಸಂಸ್ಕೃತಿಯೊಂದಿಗೆ ಬೆಸೆದುಕೊಂಡಿದ್ದಾರೆ. ಅನೇಕರು ತಮ್ಮ ಮಾತೃಭಾಷೆಯ ಹೊರತಾಗಿ, ಪರ್ಷಿಯನ್ ಭಾಷೆಯನ್ನು ಸಾಮಾನ್ಯ ಸಾಂಸ್ಕೃತಿಕ ಭಾಷೆಯಾಗಿ ಇಂದಿಗೂ ಬಳಸುತ್ತಾರೆ. ಅಜೆರೀಸ್, ಕುರ್ಡ್ಸ್, ಟರ್ಕ್ಸ್, ಅಸಿರಿಯನ್ನರು ಮತ್ತು ಇತರ ಭಾಷೆಗಳನ್ನು ಉಪಯೋಗಿಸುವ ಜನರಿಗೆ ಪರ್ಷಿಯನ್ ತಮ್ಮ ಸಾಹಿತ್ಯದ ಭಾಗವಾಗಿದೆ. ಇದಲ್ಲದೆ, ಪರ್ಷಿಯನ್ ಭಾಷೆ ಅವರ ನಡುವೆ ಸಾಮಾನ್ಯ ಸಂವಹನದ ಮಾಧ್ಯಮವಾಗಿ ವಿಕಸನಗೊಂಡಿದೆ. ಈ ಕಾಸ್ಮೋಪಾಲಿಟನ್ ಪರ್ಷಿಯನ್ ಸಾಮ್ರಾಜ್ಯದಾದ್ಯಂತ ಬಹುಭಾಷೆಯ ಬಳಕೆ ಸಾಮಾನ್ಯವಾಗಿತ್ತು. ಅದು ಇಂದಿನಂತೆ ಭಾಷೆಗಳನ್ನು ಅಸ್ಮಿತೆಗೆ ಹೊಂದಿಸಿಕೊಂಡು ಅರ್ಥಮಾಡಿಕೊಳ್ಳುತ್ತಿರಲಿಲ್ಲ; ಹೊರತಾಗಿ, ವಿವಿಧ ಭಾಷೆಗಳು ವಿವಿಧ ರೀತಿಯ ಜ್ಞಾನಗಳಿಗಿರುವ ಪ್ರವೇಶದ ಮಾಧ್ಯಮಗಳಾಗಿ ಗುರುತಿಸಲ್ಪಟ್ಟಿದ್ದವು. ದಕ್ಷಿಣ ಏಷ್ಯಾದಲ್ಲಿ ಜನಪ್ರಿಯವಾಗಿದ್ದ ‘ಅರೇಬಿಕ್ ಎಂದರೆ ವಿಜ್ಞಾನ, ಪರ್ಷಿಯನ್ ಎಂದರೆ ಸಕ್ಕರೆ, ಹಿಂದಿ ಎಂದರೆ ಉಪ್ಪು, ಟರ್ಕಿಶ್ ಎಂದರೆ ಕಲೆ’ ಎಂಬ ಗಾದೆ ಈ ದೃಷ್ಟಿಕೋನವನ್ನು ದೃಢೀಕರಿಸುತ್ತದೆ. ಇದು ನಮ್ಮ ಬೌದ್ಧಿಕ ಕ್ಷೇತ್ರದ ವೈವಿಧ್ಯತೆಯನ್ನು ಸೂಚಿಸುತ್ತದೆ. ಅಂತಹಾ ವಿಶಾಲ ಸಾಂಸ್ಕೃತಿಕ ಕ್ಷೇತ್ರವು ಏಕರೂಪದ ಭಾಷೆಯನ್ನು ಹಂಚಿಕೊಂಡ ಕಾರಣ ಜನರು ದೂರದೂರಿಗೆ ಪ್ರಯಾಣ ಬೆಳೆಸಿದಾಗ ಸಾಮಾನ್ಯವಾಗಿ ಉಂಟಾಗುವ ಸಂವಹನ ತೊಡಕುಗಳು ಇಲ್ಲವಾಯಿತು. ದಕ್ಷಿಣ ಏಷ್ಯಾವು ಇರಾನಿನ ಕವಿಗಳು ಮತ್ತು ವಿದ್ವಾಂಸರನ್ನು ಆಕರ್ಷಿಸಿತ್ತು. ದಕ್ಷಿಣ ಏಷ್ಯಾದ ಶ್ರೀಮಂತ ರಾಜರು ಮತ್ತು ಪ್ರಬುದ್ಧ ರಾಜಕುಮಾರರು ಅವರ ಆಕರ್ಷಣೆಗೆ ಮುಖ್ಯ ಕಾರಣರಾಗಿದ್ದರು.
ಕ್ರಿ.ಶ. 1600ರ ವೇಳೆ ಮುಹಮ್ಮದಲಿ ಹ್ಯಾಬ್ಲೆರುಡಿ ಉತ್ತರ ಇರಾನಿನಿಂದ ಭಾರತಕ್ಕೆ ವಲಸೆ ಬಂದರು. ಅವರು ಹೈದರಾಬಾದಿನ ಕುತುಬ್‌ಶಾಹಿ ನ್ಯಾಯಾಲಯದಲ್ಲಿ ಅಧಿಕಾರಿಯಾಗಿ ನೇಮಕಗೊಂಡರು. ಕುತುಬ್ ಶಾಹಿ ಸುಲ್ತಾನರು ಪರ್ಷಿಯನ್ ಭಾಷೆ ಮಾತನಾಡುವ ವಿದ್ವಾಂಸರನ್ನು ತಮ್ಮ ಬಳಿ ಕರೆಸಿಕೊಂಡು ತಮ್ಮ ಆಡಳಿತ ವೈಭವವನ್ನು ವಿಶ್ಲೇಷಿಸುವ ಕೃತಿಗಳು ಮತ್ತು ಕವಿತೆಗಳನ್ನು ಬರೆಯಲು ನೇಮಿಸಿಕೊಂಡರು. ಆ ಪೈಕಿ ಪರ್ಷಿಯನ್, ಅರೇಬಿಕ್ ಮತ್ತು ಟರ್ಕಿಶ್ ಭಾಷೆಗಳಲ್ಲಿ ಹರಡಿರುವ ಪುರಾಣಗಳು ಮತ್ತು ಗಾದೆಗಳನ್ನು ಸಂಗ್ರಹಿಸಲು ಹ್ಯಾಬ್ಲೆರುಡಿಯನ್ನು ನಿಯೋಜಿಸಿದರು. ಅವರು ಹೈದರಾಬಾದಿನಲ್ಲಿ ಕೇಳಿದ ಅನೇಕ ಕಥೆಗಳನ್ನು ಸಂಗ್ರಹಿಸಿ ಪರ್ಷಿಯನ್ ಭಾಷೆಗೆ ಅನುವಾದಿಸಿದರು. ಈ ಎಲ್ಲಾ ಕಥೆಗಳನ್ನು ಕುತುಬ್ ಶಾಹಿಗಳನ್ನು ಉಲ್ಲೇಖಿಸಿ ಪ್ರಸ್ತುತಪಡಿಸುವ ಮೂಲಕ ಶತಮಾನಗಳ ಕಾಲ ಪರ್ಷಿಯನ್ ಜಗತ್ತಿನಲ್ಲಿ ಅವರ ಖ್ಯಾತಿಯನ್ನು ಹರಡಿಸಲಾಯಿತು. 1626 ರಿಂದ 1671ರವರೆಗೆ ಆಳಿದ ಅಬ್ದುಲ್ಲಾ ಕುತುಬ್ ಶಾಹಿಗಾಗಿ ಇದನ್ನು ರಚಿಸಿದ್ದೇನೆ ಎಂದು ಹ್ಯಾಬ್ಲೆರುಡಿ ತಮ್ಮ ಕೃತಿಯಲ್ಲಿ ಉಲ್ಲೇಖಿಸಿದ್ದಾರೆ. ಹೈದರಾಬಾದಿನಲ್ಲಿ ವಾಸಿಸುತ್ತಿದ್ದರೂ ಸುಮಾರು ಎರಡು ಸಾವಿರ ಮೈಲುಗಳಷ್ಟು ದೂರದಲ್ಲಿರುವ ಇಸ್ಫಹಾನಿನಲ್ಲಿ ನಡೆಯುತ್ತಿದ್ದ ಎಲ್ಲಾ ಹೊಸ ಬೆಳವಣಿಗೆಗಳ ಬಗ್ಗೆ ಅವರಿಗೆ ಸ್ಪಷ್ಟವಾದ ತಿಳುವಳಿಕೆ ಇತ್ತು. ಇದರಲ್ಲಿ ಪರ್ಷಿಯನ್ ಪ್ರಪಂಚವನ್ನು ಸಾಮ್ರಾಜ್ಯಶಾಹಿ ಮತ್ತು ಭೌಗೋಳಿಕ ಗಡಿಗಳಿಂದ ಹೇಗೆ ಜೋಡಿಸಲಾಗಿದೆ ಎಂಬುದನ್ನು ವಿವರಿಸುವ ಉದ್ದೇಶವಿತ್ತು. ಪರ್ಷಿಯನ್ ಕಾವ್ಯ, ಖುರ್‌ಆನ್ ಮತ್ತು ಹದೀಸಿನಲ್ಲಿರುವ ಘಟನೆಗಳ ಜೊತೆಗೆ ಈ ಪುಸ್ತಕವು ಕೆಲವೊಂದು ವಿಶೇಷ ಸಂದರ್ಭಗಳನ್ನು ಸೇರಿಸುವ ಮೂಲಕ ಸುಮಾರು ಎರಡು ಸಾವಿರದಷ್ಟು ಕಥೆಗಳನ್ನು ಒಳಗೊಂಡಿದೆ. ಆ ಪೈಕಿ ಮೂಕಪ್ರಾಣಿಗಳ ಸಂವಹನ ಹಾಗೂ ಆತ್ಮಗಳು, ಯಕ್ಷಯಕ್ಷಿಣಿಯರು ಮತ್ತು ದೇವತೆಗಳು ಪರಸ್ಪರ ಸಂವಹನ ನಡೆಸುವ ಮಾಂತ್ರಿಕ ಕತೆಗಳು ಒಳಗೊಂಡಿದೆ. ಹೆಚ್ಚಿನವು ಉತ್ತಮ ನೈತಿಕ ಕಥೆಗಳಾಗಿವೆ. ಉದಾಹರಣೆಗೆ, ಆನೆಯನ್ನು ಹೇಗೆ ಪಳಗಿಸುವುದು ಎಂದು ಲೆಕ್ಕಾಚಾರ ಮಾಡಲು ಪ್ರಯತ್ನಿಸುತ್ತಿರುವ ನೊಣಗಳ ಗುಂಪಿನ ಕಥೆಯನ್ನು ವಿವರಿಸಿದೆ. ಇನ್ನೊಂದು, ಓರ್ವ ಬ್ರಾಹ್ಮಣ ಮತ್ತು ಆತನ ಮುದ್ದಿನ ಮುಂಗುಸಿಯ ಕಥೆ. ಬ್ರಾಹ್ಮಣ ತನ್ನ ಮಗುವನ್ನು ರಕ್ಷಿಸಲು ಒಂದು ಮುಂಗುಸಿಯನ್ನು ಸಾಕಲು ಪ್ರಾರಂಭಿಸುತ್ತಾನೆ. ಮಗು ಕೊಲ್ಲಲ್ಪಟ್ಟಾಗ ಮುಂಗುಸಿಯೇ ಕಾರಣ ಎಂದು ಭಾವಿಸಿ ಅದನ್ನು ಸಾಯಿಸುತ್ತಾನೆ. ವಾಸ್ತವಾಂಶ ಮನವರಿಕೆಯಾದಾಗ ಕಾಲ ಮಿಂಚಿ ಹೋಗಿತ್ತು. ಕೋಪದ ಕೈಯಲ್ಲಿ ಬುದ್ಧಿ ಕೊಡಬೇಡಿ ಎಂಬ ನೀತಿಪಾಠವನ್ನು ಈ ಕಥೆ ಸಾರುತ್ತದೆ. ಜಾಮಿಉ ತಮ್ಸೀಲಿನ ಸಂಗ್ರಹಣೆಯ ಮೂಲಕ ಇಂತಹಾ ಕಥೆಗಳು ಭಾರತ ಮತ್ತು ಪರ್ಷಿಯನ್ ಜನರ ಮನೆಮಾತಾಯಿತು. ಹ್ಯಾಬ್ಲೆರುಡಿಯವರ ಈ ಕಥೆಗಳ ಸಂಗ್ರಹವು ಶತಮಾನಗಳ ಕಾಲ ವ್ಯಾಪಕವಾಗಿ ಓದಲ್ಪಟ್ಟ ಪರ್ಷಿಯನ್ ಕೃತಿಗಳ ಪೈಕಿ ಒಂದಾಗಿದೆ.
ಹತ್ತೊಂಬತ್ತನೆಯ ಶತಮಾನದ ಆರಂಭದಲ್ಲಿ ಪರ್ಷಿಯನ್ ಲಿಥೋಗ್ರಾಫ್ ಮುದ್ರಣದ ಲಭ್ಯತೆಯಿಂದ ಭಾರತದಲ್ಲಿ ಜಾಮಿಉ ತಮ್ಸೀಲಿನ ಸಾವಿರಾರು ಪ್ರತಿಗಳನ್ನು ಅಗ್ಗದ ಬೆಲೆಗೆ ಮುದ್ರಿಸಲು ಸಾಧ್ಯವಾಯಿತು. ಆ ಬೆಳವಣಿಗೆ ಹಿಂದೆಂದಿಗಿಂತಲೂ ವೇಗವಾಗಿ ಕೃತಿಯನ್ನು ಪ್ರಸಾರ ಮಾಡಲು ಕಾರಣವಾಯಿತು. ಇರಾನಿನಲ್ಲಿ ಇದರ ಮೊದಲ ಪ್ರತಿಗಳನ್ನು 1860ರ ವೇಳೆ ಮುದ್ರಿಸಲಾಯಿತು. ಇರಾನಿನ ಮುದ್ರಣಗಳು ಭಾರತೀಯ ಆವೃತ್ತಿಗಳಿಗಿಂತ ಭಿನ್ನವಾಗಿ, ಸಾಮಾನ್ಯವಾಗಿ ಮರದ ಕತ್ತರಿಸುವಿಕೆಯ ಚಿತ್ರಗಳನ್ನು ಒಳಗೊಂಡಿತ್ತು. ಮುಖ್ಯವಾಗಿ ಸಚಿತ್ರಕಾರ ಮಿರ್ಜಾ ಅಲಿ- ಖೋಲಿ ಖೋಯ್ ಅವರ ಚಿತ್ರಗಳಿಂದ ಪುಸ್ತಕವು ಗುರುತಿಸಲ್ಪಟ್ಟಿದೆ. ದಕ್ಷಿಣ ಏಷ್ಯಾದಲ್ಲಿನ ರಾಜಕೀಯ ಬೆಳವಣಿಗೆಗಳು ಪರ್ಷಿಯನ್ ಭಾಷೆಯ ಮೇಲೆ ಹೆಚ್ಚು ಪ್ರಭಾವ ಬೀರಿತು. ಬ್ರಿಟೀಷರ ವಸಾಹತು ಕಾಲದಲ್ಲಿ, ಪರ್ಷಿಯಾ ತನ್ನ ರಾಜಕೀಯ, ಸಾಂಸ್ಕೃತಿಕ ಮತ್ತು ಬೌದ್ಧಿಕ ಸ್ಥಾನಗಳನ್ನು ಕ್ರಮೇಣ ಕಳೆದುಕೊಂಡಿತು. ಆದಾಗ್ಯೂ, ಭಾರತೀಯರು ಪರ್ಷಿಯನ್ ಕಲಿಯುವುದನ್ನು ಮುಂದುವರೆಸಿದರು. ಆದರೆ, ಪರ್ಷಿಯನ್ನಿನ ವ್ಯಾಪಕ ಬಳಕೆ ಕ್ರಮೇಣ ಕ್ಷೀಣಿಸಿತು. ಇಂಡೋ- ಪರ್ಷಿಯನ್ ಕೃತಿಗಳ ವಿಶಾಲ ಗ್ರಂಥಾಲಯಗಳು ಓದುಗರಿಲ್ಲದೆ ಬಿಕೋ ಎನ್ನಲಾರಂಭಿಸಿತು. ಪರ್ಷಿಯನ್ ಭಾಷೆಯ ಅಂದಿನ ದುಸ್ಥಿತಿಯನ್ನು ಗುರುತಿಸುವ ಹಲವು ಗಾದೆಮಾತುಗಳು ಇಂದು ಉರ್ದು ಮತ್ತು ಪಂಜಾಬಿ ಭಾಷೆಯಲ್ಲಿ ಕಾಣಬಹುದು. ‘ಪರ್ಹೈನ್ ಫಾರ್ಸಿ, ಬೆಚೈನ್ ಡೆಯಿಲ್’ ಎಂಬುದು ಉರ್ದುವಿನಲ್ಲಿ ವ್ಯಾಪಕವಾಗಿರುವ ವ್ಯಂಗ್ಯ ಮಾತು. ಉನ್ನತ ಶಿಕ್ಷಣವನ್ನು ಹೊಂದಿರುವ ಆದರೆ ಅವರ ಅರ್ಹತೆಗಿಂತ ಕಡಿಮೆ ಕೆಲಸ ಮಾಡುವ ಪ್ರವೃತ್ತಿಯನ್ನು ಈ ಮಾತು ಸೂಚಿಸುತ್ತದೆ. ಇರಾನ್ ತೈಲವನ್ನು ರಫ್ತು ಮಾಡಲು ಪ್ರಾರಂಭಿಸಿದಾಗಿನಿಂದ ಈ ನುಡಿಗಟ್ಟು ವ್ಯಂಗ್ಯವಾಯಿತು. ಪರ್ಷಿಯನ್ ಭಾಷೆ ಇತರ ಹಲವು ದೇಶಗಳಲ್ಲಿ (ಅಫ್ಘಾನಿಸ್ತಾನ್, ತಜಿಕಿಸ್ತಾನ್, ಉಜ್ಬೇಕಿಸ್ತಾನ್ ಮತ್ತು ಅಜೆರ್ಬೈಜಾನ್) ಬಳಸಲ್ಪಡುತ್ತಿದ್ದರೂ, ಐತಿಹಾಸಿಕವಾಗಿ ಇರಾನಿನ ರಾಜಕೀಯ ಸಂಬಂಧದೊಂದಿಗೆ ವ್ಯಾಪಕವಾಗಿ ಪರಿಗಣಿಸಲಾಗಿದೆ.
ಪರ್ಷಿಯನ್ ಕೇವಲ ಇರಾನಿನ ಆಡಳಿತ ಮಾಧ್ಯಮವಲ್ಲ. ಹೊರತಾಗಿ, ದಕ್ಷಿಣ, ಮಧ್ಯ ಮತ್ತು ಪಶ್ಚಿಮ ಏಷ್ಯಾದ ವೈವಿಧ್ಯಮಯ ಜನರನ್ನು ಸಂಪರ್ಕಿಸುವ ಮಾಧ್ಯಮ. ನಾನು ಟೆಹ್ರಾನಿನ ಪುರಾತನ ವಸ್ತುಗಳನ್ನು ಮಾರುವ ಪುಟ್ಟ ಅಂಗಡಿಯೊಂದರಲ್ಲಿ ಜಾಮಿಉ ತಮ್ಸೀಲಿನ ಪ್ರತಿಯನ್ನು ಮೊದಲ ಬಾರಿಗೆ ಕಂಡಿದ್ದೆ. ಅಫೀಮಿನ ವಾಸನೆಯು ಅಂಗಡಿಯನ್ನು ವ್ಯಾಪಿಸಿತ್ತು ಮತ್ತು ಆ ಅಂಗಡಿ ರತ್ನಗಂಬಳಿಗಳು, ಕರಕುಶಲ ವಸ್ತುಗಳು ಮತ್ತು ಸುಂದರ ಲೋಹದ ಕೆತ್ತನೆಯ ಫಲಕಗಳಿಂದ ತುಂಬಿತ್ತು. ಇದರ ಮಧ್ಯೆ ಆ ವ್ಯಾಪಾರಿ ತನ್ನ ಅಜ್ಜ ರಬ್ಬಿಯ ಭಾವಚಿತ್ರದ ಅಡಿಯಲ್ಲಿ ಚರ್ಮದಿಂದ ಸುತ್ತಲ್ಪಟ್ಟ ಹಲವಾರು ಪುಸ್ತಕಗಳನ್ನು ಜೋಡಿಸಿಟ್ಟಿದ್ದನು. ಆ ಪೈಕಿ ಮುಸ್ಲಿಮರು ಮತ್ತು ಯಹೂದಿಗಳ ಕೆಲವು ಧಾರ್ಮಿಕ ಪುಸ್ತಕಗಳು, ಮಂತ್ರಗಳ ಪುಸ್ತಕಗಳು ಮತ್ತು ವಿವಿಧ ವಿಶ್ವ ದೃಷ್ಟಿಕೋನಗಳ ಬಗ್ಗೆ ಮಾತನಾಡುವ ಲಿಥೋಗ್ರಾಫ್ ಗಳು ಒಳಗೊಂಡಿತ್ತು. ಆ ರಾಶಿಯ ನಡುವೆ ಹೈದರಾಬಾದಿನ ಜಾಮಿಉ ತಮ್ಸೀಲ್ ಎಂಬ ಕೃತಿಯು ದೊರೆಯಿತು. ಹ್ಯಾಬ್ಲೆರುಡಿ ಕಾಲದ ಪರ್ಷಿಯನ್ ‘ಕಾಸ್ಮೋಪಾಲಿಟನಿಸಂ’ ಇಂದು ಬಳಕೆಯಲ್ಲಿಲ್ಲ. ಅವು ವಸಾಹತುಶಾಹಿ ಗಡಿಗಳು ಮತ್ತು ಆಧುನಿಕ ರಾಷ್ಟ್ರ- ರಾಜ್ಯ ಪರಿಕಲ್ಪನೆಗಳಿಂದ ನಶಿಸಲ್ಪಟ್ಟಿದೆ. ಆದರೆ ಟೆಹರಾನಿನ ಆ ಪುಟ್ಟ ಅಂಗಡಿಯ ಕಪಾಟಿನಲ್ಲಿ ಪೇರಿಸಿಟ್ಟ ಪುಸ್ತಕಗಳ ಮೂಲಕ ಆ ಸಾಂಸ್ಕೃತಿಕ ಪರಂಪರೆಯ ಗತಕಾಲದ ವೈಭವದೆಡೆಗೆ ಮತ್ತೆ ಬೆಳಕು ಚೆಲ್ಲುವಂತಾಯಿತು.
ಮೂಲ: ಅಲೆಕ್ಸ್ ಶಾಮ್ಸ್
ಅನುವಾದ: ಮುಹಮ್ಮದ್ ಯಾಸೀನ್ ಮಟ್ಟಂ