ಮೌನದ ಅನಂತ ಧ್ವನಿಗಳು

‘ದೇವರ ಮೌನ’ ಎಂಬ ಪ್ರಯೋಗದೊಂದಿಗೆ ಮುಸ್ಲಿಮ್ ವಿದ್ವಾಂಸ ಪರಂಪರೆ ಹೇಗೆ ಅನುಸಂಧಾನ ನಡೆಸಿದೆ ಎಂದು ನಾನು ಆಗಾಗ್ಗೆ ಚಿಂತಾಮಗ್ನನಾಗುತ್ತೇನೆ. “ಕನಿಷ್ಠ ಒಂದು ಬಾರಿಯಾದರೂ ಅದನ್ನು ಆಲಿಸಲು ಪ್ರಯತ್ನಿಸು” ಎಂದವರು ಉತ್ತರಿಸಬಹುದು. ಇಲ್ಲದಿದ್ದರೆ “ಅವರಿಗೆ ಹೃದಯಗಳಿವೆ, ಆದರೆ ಅವರು ಗ್ರಹಿಸುವುದಿಲ್ಲ; ಅವರಿಗೆ ಕಣ್ಣುಗಳಿವೆ, ಆದರೆ ಅವರು ಕಂಡರಿಯುವುದಿಲ್ಲ ; ಅವರಿಗೆ ಕಿವಿಗಳಿವೆ, ಅದರ ಮೂಲಕ ಅವರು ಕೇಳಿ ಅರ್ಥೈಸಿಕೊಳ್ಳುವುದಿಲ್ಲ. (ಖುರ್‌ಆನ್ 7:179) ಎಂಬ ದೇವವಚನವನ್ನು ಹೇಳಿಕೊಡಬಹುದು.
ಮೌನ (ಅರೇಬಿಕ್ ನಲ್ಲಿ ಸ್ವಮ್ತ್) ಎಂಬ ಪದವು ಮಾತಿನ (ಕಲಾಮ್) ವಿರುದ್ಧಪದ. ಮುಸ್ಲಿಮ್ ದೇವತಾಶಾಸ್ತ್ರಜ್ಞರು ಮತ್ತು ದಾರ್ಶನಿಕರು ದೈವಿಕ ನುಡಿಯನ್ನು (ಕಲಾಮ್) ದೈವಿಕ ವಾಸ್ತವತೆಯ ಅತ್ಯಗತ್ಯ ಗುಣಲಕ್ಷಣವಾಗಿ ನೋಡುತ್ತಾರೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ಯಾರು ಕೇಳಿದರೂ, ಕೇಳದಿದ್ದರೂ ದೇವನು ನಿರಂತರವಾಗಿ ಮತ್ತು ಶಾಶ್ವತವಾಗಿ ಮಾತನಾಡುತ್ತಿದ್ದಾನೆ. ದೇವರು ಎಂಬ ಅಸ್ತಿತ್ವದ ಮೂಲಭೂತ ಗುಣಲಕ್ಷಣಗಳಲ್ಲಿ ಜೀವಂತವಾಗಿರುವವನಾಗಬೇಕು, ತಿಳುವಳಿಕೆಯುಳ್ಳವನಾಗಬೇಕು, ಶಕ್ತಿವಂತನಾಗಬೇಕು, ದೃಷ್ಟಿ ಮತ್ತು ಶ್ರವಣ ಶಕ್ತಿ ಹೊಂದಿರಬೇಕು ಎಂಬಂತೆಯೇ ಮಾತು ಕೂಡಾ ಒಂದು. ಸಂಕ್ಷಿಪ್ತವಾಗಿ, ಇಸ್ಲಾಮಿಕ್ ಸಂಪ್ರದಾಯದ ಪ್ರಕಾರ, ದೇವರ ಮೌನದ ಬಗ್ಗೆ ಮಾತನಾಡುವುದು ಎಂದರೆ, ಅವನ ಮರಣ ಅಥವಾ ಅವನ ಮೂರ್ಖತನ ಅಥವಾ ಅವನ ಶಕ್ತಿಹೀನತೆಯ ಬಗ್ಗೆ ಮಾತನಾಡುವುದಕ್ಕೆ ಸಂವಾದಿ. ಆಧುನಿಕ ಅಕಾಡೆಮಿಕ್ ಜಗತ್ತಿನಲ್ಲಿ ಇಂತಹ ಚರ್ಚೆಗಳಿಗೆ ಪ್ರಸ್ತುತತೆ ಇರಬಹುದಾದರೂ ಮುಸ್ಲಿಮ್ ಬೌದ್ಧಿಕ ವಲಯದಲ್ಲಿ ಅವು ಅಸಂಬದ್ಧ ಎನಿಸಿಕೊಳ್ಳುತ್ತದೆ.

ಪರಮಾತ್ಮನ ಮಾತು ಅವನ ಅಸ್ತಿತ್ವದ ಅನಿವಾರ್ಯ ಉತ್ಪನ್ನ ಆಗಿರುವುದರಿಂದಲೇ ಅದು ಕಾಲಾತೀತವಾದ ಶಾಶ್ವತತೆಯನ್ನು ಪಡೆದುಕೊಳ್ಳುತ್ತದೆ. ಅವನ ಶಾಶ್ವತ ಆಜ್ಞೆಯಾದ ‘ಆಗು’ (ಕುನ್) ಎಂಬ ಕ್ರಿಯೋತ್ತೇಜಕ ಪದದ ಫಲಿತಾಂಶವಾಗಿದೆ ಬೀಯಿಂಗ್ (ಕೌನ್ ಅರ್ಥಾತ್ ಇರವು) ಅಥವಾ ವಿಶ್ವ (ಆಲಂ). ಒಂದು ವಸ್ತುವು ಉಗಮವಾದರೆ, ಅದು ಖಂಡಿತವಾಗಿಯೂ ಅಂತ್ಯವನ್ನು ಹೊಂದುತ್ತದೆ. ನೈಜ ಅಸ್ತಿತ್ವವಾದ ದೇವನನ್ನು ಹೊರತುಪಡಿಸಿದರೆ ಬೇರೆ ಯಾವುದಕ್ಕೂ ನಿಜವಾದ ಅಸ್ತಿತ್ವ (ವುಜೂದ್) ಇಲ್ಲ. ಇಮಾಮ್ ಗಝಾಲಿ (ರ.) ಹೇಳುತ್ತಾರೆ: “ವಾಸ್ತವದಲ್ಲಿ ದೇವರನ್ನು ಹೊರತುಪಡಿಸಿ ಬೇರೇನೂ ಅಸ್ತಿತ್ವದಲ್ಲಿಲ್ಲ”. ಖುರ್ ಆನಿನ ಭಾಷೆಯಲ್ಲಿ, “ಅಲ್ಲಾಹನ ಮುಖವಲ್ಲದ ಎಲ್ಲವೂ ನಾಶವಾಗುತ್ತವೆ” (ಖುರ್‌ಆನ್ 18:88) ‘ಅರಬ್ಬರು ಹಾಡಿರುವ ಅತೀ ಸತ್ಯವಾದ ಗೆರೆ’ ಎಂದು ಪೈಗಂಬರರು ಬಣ್ಣಿಸಿದ ಕವಿ ಲಬೀದ್ ಅವರ ಕವಿತೆ ಈ ವಿಷಯವನ್ನು ಚೆನ್ನಾಗಿ ತಿಳಿಸಿಕೊಡುತ್ತದೆ.

“ದೇವರಲ್ಲದ ಎಲ್ಲವೂ ಅವಾಸ್ತವವಲ್ಲವೇ..
ಎಲ್ಲಾ ಸಂತೋಷಗಳು ಕ್ಷಣಿಕ ಕ್ಷಣಗಳಲ್ಲವೇ?”

ಖುರ್ ಆನ್ ಹಕ್ (ವಾಸ್ತವ)ಗೆ ವಿರುದ್ಧಪದವಾಗಿ ಬಾತಿಲ್ (ಅವಾಸ್ತವತೆ) ಅನ್ನು ಬಳಸುತ್ತದೆ. (ಬಾತಿಲ್ ಎಂದರೆ ತಪ್ಪು, ಅಸತ್ಯ, ಶೂನ್ಯ). ಆದ್ದರಿಂದ, ದೇವರಲ್ಲದ ಎಲ್ಲವೂ ಸ್ವತಃ ಬಾತಿಲ್ (ಅವಾಸ್ತವ). ಖುರ್ ಆನಿನಲ್ಲಿ ಉಲ್ಲೇಖಿಸಲಾದ ‘ಅಲ್- ಹಕ್’ ಎಂಬ ದೇವನಾಮ ಸತ್ಯ, ವಾಸ್ತವ ಮತ್ತು ವಾಸ್ತವಿಕತೆ ಎಂಬ ಅರ್ಥವನ್ನು ಸ್ಫುರಿಸುತ್ತದೆ. ತತ್ವಜ್ಞಾನಿ ಇಬ್ನ್ ಸೀನಾ ಕಿತಾಬು ಶಿಫಾದಲ್ಲಿ ಬರೆಯುತ್ತಾರೆ: ‘ಹಕ್’ ಪದವು ವಸ್ತುಗಳ ಸ್ವರೂಪದ ಬಗ್ಗೆ ಮಾತನಾಡುವಾಗ ‘ವಾಸ್ತವ’ ಎಂಬರ್ಥವನ್ನೂ ಹೇಳಿಕೆಗಳ ಬಗ್ಗೆ ಮಾತನಾಡುವಾಗ ‘ಸರಿ’ ಎಂಬರ್ಥವನ್ನೂ ಕೊಡುತ್ತದೆ. ಮೊದಲ ಅರ್ಥಕ್ಕೆ ಸಂಬಂಧಿಸಿದಂತೆ, ಅವರು ಬರೆಯುತ್ತಾರೆ: “ತಾನು ತಾನಾಗಲು ಅಸ್ತಿತ್ವ ಅನಿವಾರ್ಯವಾಗಿರುವ ವಸ್ತು ಮಾತ್ರ ನಿತ್ಯ ವಾಸ್ತವವಾಗಿದ್ದು ಆ ಅನಿವಾರ್ಯ ಅಸ್ತಿತ್ವದ ಹೊರತಾದ ಬೇರೆಲ್ಲವೂ ಮೂಲಭೂತವಾಗಿ ಅವಾಸ್ತವ ಎನಿಸಿಕೊಳ್ಳುತ್ತದೆ.” ಹಕ್ ಎಂಬ ದೇವನಾಮವನ್ನು ವಿವರಿಸುತ್ತಾ ಇಮಾಮ್ ಗಝಾಲಿ (ರ.) ಇದನ್ನು ಮತ್ತಷ್ಟು ವಿವರಿಸಿದ್ದಾರೆ. ದೇವನು ನೀಡಿರುವ ಅಸ್ತಿತ್ವದಿಂದ ವಾಸ್ತವತೆಯನ್ನು ಪಡೆದಿರುವ ವಸ್ತುಗಳ ಇರವು (being)ಸಾಲರೂಪದ್ದೇ ವಿನಃ ನಿಜವಾದದ್ದಲ್ಲ ಎಂದು ಅವರು ಸ್ಪಷ್ಟಪಡಿಸಿರುವುದು ನೋಡಿ:

“ವಿವರಣೆಗೆ ತೆರೆದುಕೊಳ್ಳುವ ಯಾವುದೇ ಸಂಗತಿಗಳು ಮೂರು ರೂಪದಲ್ಲಿ ಇರುತ್ತವೆ. ಸಂಪೂರ್ಣ ವಾಸ್ತವ ಆಗಿರುವುದು, ಸಂಪೂರ್ಣ ಅವಾಸ್ತವ ಆಗಿರುವುದು ಮತ್ತು ಒಂದು ಆಯಾಮದಲ್ಲಿ ಮಾತ್ರ ವಾಸ್ತವ ಹಾಗೂ ಮತ್ತೊಂದು ಆಯಾಮದಲ್ಲಿ ಅವಾಸ್ತವ ಆಗಿರುವುದು. ಒಂದು ವಸ್ತುವಿಗೆ ಅದರ ಮೂಲಭೂತ ಸ್ವಭಾವದಲ್ಲೇ (ಅದು ಆದಾಗಲು) ಇರವು ಅನಿವಾರ್ಯವಾಗಿದ್ದರೆ ಅದು ಸಂಪೂರ್ಣವಾದ ಸತ್ಯವಾಗಿದ್ದು ಇರವಿನ ಅಭಾವ ಅನಿವಾರ್ಯವಾಗಿದ್ದರೆ ಅದು ಸಂಪೂರ್ಣ ಅವಾಸ್ತವ ಆಗಿರುತ್ತದೆ. ಇವೆರಡಕ್ಕಿಂದ ಭಿನ್ನವಾಗಿ ಮೂಲಭೂತ ಸ್ವಭಾವದಲ್ಲಿ ಸಂಭಾವ್ಯತೆ ಇದ್ದರೆ ಮಾತ್ರ ಸಾಕಾದರೆ ಅದು ಒಂದು ಆಯಾಮದಲ್ಲಿ ವಾಸ್ತವ ಹಾಗೂ ಮತ್ತೊಂದು ಆಯಾಮದಲ್ಲಿ ಅವಾಸ್ತವ ಎನಿಸಿಕೊಳ್ಳುತ್ತದೆ. ಇದರಿಂದ ಸಂಪೂರ್ಣ ವಾಸ್ತವಿಕತೆಯನ್ನು ಹೊಂದಿರುವಂತಹ ವಸ್ತುಗಳು ಮಾತ್ರ ಮೂಲಭೂತವಾಗಿ ನಿಜವಾದ ಅಸ್ತಿತ್ವವನ್ನು ಹೊಂದಿದೆ ಎಂದೂ ಇತರೆಲ್ಲಾ ವಸ್ತುಗಳು ತಮ್ಮ ವಾಸ್ತವಿಕತೆಯನ್ನು ಪಡೆಯುವುದು ಈ ಅಸ್ತಿತ್ವದಿಂದಲೇ ಎಂದೂ ತಿಳಿಯಬಹುದು.”

(ಅಲ್ ಮಖಾಸಿದುಲ್ ಅಸ್ನಾ)

ಮಾತನಾಡುವುದು ಎಂದರೆ ಅರಿವು ವ್ಯಕ್ತಪಡಿಸುವುದು ಎಂದರ್ಥ. ದೇವರ ಮಾತು ಎಲ್ಲದರ ಬಗೆಗಿನ ಆತನ ಶಾಶ್ವತ ಜ್ಞಾನದ ಅಭಿವ್ಯಕ್ತಿಯಾಗಿದೆ. ದೇವರ ಮಾತು ನಿಜ, ಸತ್ಯ ಮತ್ತು ಅಧಿಕೃತ. ಇತರರ ಎಲ್ಲಾ ಮಾತುಗಳು ಮೌಲಿಕ ದೃಷ್ಟಿಯಲ್ಲಿ ಅವಾಸ್ತವ, ಅಸತ್ಯ ಮತ್ತು ಅವಲಂಬನೆಗೆ ಅರ್ಹವಲ್ಲ. ಇತರ ವಸ್ತುಗಳ ಮಾತುಗಳು ನೈಜ ವಾಸ್ತವದ ಬಳಿ ದೊರಕುವಷ್ಟೇ ಇರಬಲ್ಲದು.

ಖುರ್ ಆನ್ ಸಾಮಾನ್ಯವಾಗಿ ದೈವಿಕ ನುಡಿಯನ್ನು ಆಜ್ಞೆ (ಅಲ್ ಅಮ್ರ್) ಎಂದು ಉಲ್ಲೇಖಿಸುತ್ತದೆ. ಮೇಲೆ ಹೇಳಲಾದ ದೇವರ ಮೌನದ ಬಗ್ಗೆ ಮಾತನಾಡುವವರು ‘ಧಾರ್ಮಿಕ ಆಜ್ಞೆ’ (ಅಲ್ ಅಮ್ರ್ ಅದ್ದೀನಿಯ್ಯ್) ಯಾ ನಿರ್ದೇಶಾತ್ಮಕ ಆದೇಶ (ಅಲ್ ಅಮ್ರ್ ಅತ್ತಕ್ಲೀಫಿಯ್ಯ್) ಎಂದು ದೇವಶಾಸ್ತ್ರಜ್ಞರು ಕರೆದಿರುವ ದೇವನುಡಿಯನ್ನು ಮನಸ್ಸಲ್ಲಿ ಉದ್ದೇಶಿಸಿರುವ ಹಾಗಿದೆ. ದೇವರು ನಿರ್ದೇಶನಾತ್ಮಕ ಆಜ್ಞೆಯನ್ನು ಹೊರಡಿಸುವುದು ಎಂದರೆ ತನ್ನ ಸೂಚನೆಗಳನ್ನು ನುಡಿಯ ರೂಪದಲ್ಲಿ ತನ್ನ ಮಾನವ ದಾಸರಿಗೆ ತಲುಪಿಸುವುದು ಎಂದರ್ಥ. ಪ್ರವಾದಿಗಳ ಸಂದೇಶಗಳಲ್ಲಿ ಇದನ್ನು ಸಾಮಾನ್ಯವಾಗಿ ಕಾಣಬಹುದು. ಕರ್ಮ ಶಾಸ್ತ್ರ ವಿದ್ವಾಂಸರಿಗೆ ಸಿಗುತ್ತಿರುವ ಎಷ್ಟೇ ಸಣ್ಣ ಅಧಿಕಾರ ಇರಲಿ ಅದು ಈ ದೇವಾಜ್ಞೆಯನ್ನು ಆಧರಿಸಿದೆ.

ಸೃಜನಾತ್ಮಕ ಆಜ್ಞೆ (ಅಲ್ ಅಮ್ರ್ ಅಲ್ಖಲ್ಕಿಯ್ಯ್) ಅಲ್ಲಾಹನ ಎರಡನೆಯ ತರದ ಆಜ್ಞೆ. ಇದನ್ನು ಅಲ್ ಅಮ್ರ್ ಅತ್ತಕ್ವೀನಿಯ್ಯ್ ಅಥವಾ ಇರವನ್ನು (ಕೌನ್ ಅಥವಾ being) ನೀಡುವ ಆಜ್ಞೆ ಎಂದೂ ಕರೆಯಲಾಗುತ್ತದೆ. ಖುರ್ ಆನಿನಲ್ಲಿರುವ “ಅವನು ಒಂದು ವಸ್ತು ಉಂಟಾಗಬೇಕೆಂದು ಬಯಸಿದರೆ, ಅದು ಆಗಲಿ ಎಂದು ಹೇಳುವನು ಮತ್ತು ಅದು ಉಂಟಾಗಿ ಬಿಡುತ್ತದೆ” ಎಂಬ ವಾಕ್ಯ ಇದಕ್ಕೊಂದು ಉದಾಹರಣೆ. ದಾರ್ಶನಿಕರು, ದೇವತಾಶಾಸ್ತ್ರಜ್ಞರು ಮತ್ತು ಸೂಫಿ ಗುರುಗಳು ಇಂತಹ ಮಾತುಗಳ ಬಗ್ಗೆ ವಿಸ್ತೃತವಾಗಿ ಚರ್ಚೆ ಮಾಡಿದ್ದಾರೆ. ಅವರ ಎಲ್ಲಾ ವಿವರಣೆಗಳು ಅನಿವಾರ್ಯವಾದ ಇರವಿನ ಮೂಲಭೂತ ಸಾರ ಮತ್ತು ವಿಶೇಷಣಗಳ ಮೇಲೆ ಕೇಂದ್ರೀಕೃತವಾಗಿವೆ. ಅಖಿಲ ವಿಶ್ವ ಇಡಿಯಾಗಿ ದೇವರ ಮಾತುಗಳಾಗಿವೆ ಎಂದವರು ಹೇಳುತ್ತಾರೆ. ಇದಕ್ಕೆ ಬೆಂಬಲವಾಗಿ ಅವರು ಖುರ್‌ಆನ್ ಸೂಕ್ತಗಳನ್ನು ಉಲ್ಲೇಖಿಸುತ್ತಾರೆ. ಉದಾಹರಣೆಗೆ, ಖುರ್ ಆನ್ ತನ್ನ ಸೂಕ್ತಗಳನ್ನು ಮತ್ತು ಪ್ರಾಪಂಚಿಕ ಸೃಷ್ಟಿಗಳನ್ನು ಉಲ್ಲೇಖಿಸಲು ಆಯತ್ (ಚಿಹ್ನೆ) ಎನ್ನುವ ಒಂದೇ ಪದವನ್ನು ಬಳಸಿದೆ. ವಿಶ್ವದಲ್ಲಿರುವ ವಸ್ತುಗಳನ್ನು ಭಗವಂತನಿಗೆ ಅಪೇಕ್ಷಿಸಿ ನೋಡಿದರೆ ಅವುಗಳು ಹಾಗೂ ಅವುಗಳ ದೇವರ ಮಾತುಗಳು ಸಮಾನ ನೆಲೆಯನ್ನು ಹೊಂದಿದೆ ಎಂದು ಇದರಿಂದ ತಿಳಿಯಬಹುದು. ದೇವಗ್ರಂಥದಲ್ಲಿರುವ ಆಯತ್ ಗಳು (ಸೂಕ್ತಗಳು) ಅವನ ಪದಗಳಾಗಿರುವಂತೆ ಅವನು ಸೃಷ್ಟಿಸಿದ ವಸ್ತುಗಳು ಕೂಡಾ ಅವನ ಪದಗಳೆ. ಸೂಕ್ತಗಳಿಗೆ ಅರ್ಥವಿರುವ ಹಾಗೆ ಸೃಷ್ಟಿಸಲ್ಪಟ್ಟ ವಸ್ತುಗಳಿಗೆ ಮರ್ಮವೂ ಇದೆ.

ಇಸ್ಲಾಮಿಕ್ ಸಾಹಿತ್ಯಗಳಲ್ಲಿ ಅರ್ಥ (ಮಅನಾ) ವನ್ನು ಎರಡು ರೀತಿಯಲ್ಲಿ ಬಳಸಲಾಗುತ್ತದೆ: ಪದಾರ್ಥ (word) ಮತ್ತು ರೂಪಾರ್ಥ (form). ಪದಗಳಿಗೆ ಅರ್ಥವಿರುವಂತೆಯೇ ಆಕಾರಗಳಿಗೂ ಅರ್ಥವಿದೆ. “ಅಲ್ಲಾಹನಾಗಿದ್ದಾನೆ ರೂಪವನ್ನು ನೀಡುವವನು”, “ಅವನು ನಿನಗೆ ರೂಪವನ್ನು ಕೊಟ್ಟನು ಮತ್ತು ನಿನ್ನ ರೂಪವನ್ನು ಸುಂದರಗೊಳಿಸಿದನು.” (ಖುರ್‌ ಆನ್ 49:64). ದಿವ್ಯ ಗ್ರಂಥದ ಪದಗಳನ್ನು ನುಡಿಯುವ ಮೂಲಕ ಮತ್ತು ಇರವಿನ (being) ಲೋಕಕ್ಕೆ ರೂಪ ಕೊಡುವ ರೂಪಗಳಿಗೆ ಧ್ವನಿ ನೀಡುವ ಮೂಲಕ ಅಲ್ಲಾಹನು ಅರ್ಥಗಳನ್ನು ಅಭಿವ್ಯಕ್ತಿಸುತ್ತಾನೆ. ಈ ಪದಗಳು ಮತ್ತು ರೂಪಗಳ ಅರ್ಥಗಳು ಅನಂತವಾಗಿವೆ ಎಂದು ಕೆಳಗಿನ ಸೂಕ್ತವನ್ನು ವ್ಯಾಖ್ಯಾನಿಸುತ್ತಾ ಖುರ್ ಆನ್ ವಿದ್ವಾಂಸರು ವಿವರಿಸಿದ್ದಾರೆ.
“ಭೂಮಿಯ ಮೇಲಿನ ಎಲ್ಲಾ ಮರಗಳು ಲೇಖನಿಗಳಾದರೆ ಮತ್ತು ಈ ಸಮುದ್ರ ಹಾಗೂ ಜತೆಗೆ ಏಳು ಬೇರೆ ಸಮುದ್ರಗಳನ್ನೂ ಸೇರಿಸಿ ಶಾಯಿಯಾಗಿ ಮಾಡಿದರೂ, ಅಲ್ಲಾಹನ ಮಾತುಗಳು ಬರೆದು ಮುಗಿಸಲಾಗದು. ಖಂಡಿತವಾಗಿಯೂ ಅಲ್ಲಾಹನು ಮಹಿಮಾನ್ವಿತನೂ ವಿವೇಕಿಯೂ ಆಗಿದ್ದಾನೆ‌.” (ಖುರ್ಆನ್ 31:27).

ಸಂಕ್ಷಿಪ್ತವಾಗಿ, ವಿಶ್ವದ ಅಸ್ತಿತ್ವಕ್ಕೆ ಮತ್ತು ಅದರಲ್ಲಿರುವ ಎಲ್ಲದಕ್ಕೂ ರೂಪು ಕೊಡುವ ದೇವರ ಮಾತಾಗಿದೆ ಸೃಜನಾತ್ಮಕ ಆಜ್ಞೆ (creative command) ಎಂದು ಅರ್ಥೈಸಬಹುದು. ಅದೇ ವೇಳೆ ಪ್ರವಾದಿಗಳು ಮತ್ತು ದೈವಿಕ ಗ್ರಂಥಗಳ ಮೂಲಕ ಮನುಷ್ಯನನ್ನು ಉದ್ದೇಶಿಸಿಕೊಂಡು ಹೊರಡಿಸಲಾದ ದೈವಿಕ ನುಡಿಗಳಾಗಿವೆ ನಿರ್ದೇಶನಾತ್ಮಕ ಆಜ್ಞೆ (prescriptive command)ಗಳು ಎಂದೂ ತಿಳಿಯಬಹುದು. ಎರಡನೆಯ ರೀತಿಯ ಆಜ್ಞೆಗಳನ್ನು ಮೀರಲು ಮನುಷ್ಯನಿಗೆ ಸಾಧ್ಯವಿದೆ. ಆದರೆ ಅಲ್ಲಾಹನ ‘ಸೃಜನಾತ್ಮಕ ಕ್ರಮ’ವನ್ನು ಮೀರಲು ಮನುಷ್ಯನಿಗೆ ಸಾಧ್ಯವಾಗದು. ಅದರ ವಿರುದ್ಧ ವರ್ತಿಸಲು ಅಥವಾ ಪ್ರತಿಕ್ರಿಯಿಸಲು ಸಹ ಸಾಧ್ಯವಿಲ್ಲ. ಏಕೆಂದರೆ ಆ ಆದೇಶವೇ ಅವರಿಗೆ ವರ್ತಿಸಲು, ಯೋಚಿಸಲು ಮತ್ತು ಕ್ರಿಯೆ ಎಸಗಲು ಅನುವಾಗುವ ಇರವನ್ನು (being) ನೀಡಿರುವುದು.

ವಿಶ್ವಾಸಶಾಸ್ತ್ರದ ವಿದ್ವಾಂಸರು ದೇವರಿಗೆ ಎರಡು ರೀತಿಯ ಆಜ್ಞೆಗಳಿವೆ ಎನ್ನುವ ವರ್ಗೀಕರಣವನ್ನು ಯಾಕಾಗಿ ಮಾಡುತ್ತಾ ಇದ್ದಾರೆನ್ನುವ ಪ್ರಶ್ನೆ ಇಲ್ಲಿ ಬರಬಹುದು. ಖುರ್ ಆನ್ ಕೂಡಾ “ನಮ್ಮ ಆಜ್ಞೆಯು ಕಣ್ಣು ಮಿಟುಕಿಸುವಂತೆ ಒಂದೇ ಘೋಷಣೆಯಾಗಿದೆ.” (ಕುರಾನ್ 54:50) ಎಂದು ಹೇಳಿದೆ. ದೇವರಿಗೆ ಒಂದೇ ಒಂದು ಆಜ್ಞೆಯಿದೆ ಎಂದು ಈ ಶ್ಲೋಕ ಸೂಚಿಸುವುದಿಲ್ಲವೇ? ವಾಸ್ತವವಾಗಿ, ನಿರ್ದೇಶನಾತ್ಮಕ ಆಜ್ಞೆಯು ಸೃಜನಾತ್ಮಕ ಆಜ್ಞೆಯನ್ನು ಒಳಗೊಂಡಿದೆ ಮತ್ತು ಅನುಸರಿಸುತ್ತದೆ. ಎಲ್ಲಾ ಸೃಷ್ಟಿಗಳು ತಮ್ಮ ಇರವಿನೊಂದಿಗೆ ಸೃಜನಾತ್ಮಕ ಆಜ್ಞೆಗೆ ವಿಧೇಯರಾಗುವರು. ಆದರೆ ಮನುಷ್ಯ ತನ್ನ ಅಸ್ತಿತ್ವವನ್ನು ಪ್ರಶ್ನಿಸುವ ವಿಶಿಷ್ಟ ಸಾಮರ್ಥ್ಯವನ್ನು ಹೊಂದಿದ್ದಾನೆ. ಅವನಿಗೆ ಈ ಸಾಮರ್ಥ್ಯ ಬರಲು ಕಾರಣ ಅವನ ಸ್ವಪ್ರಜ್ಞೆಯೇ. ಈ ಸ್ವೋಪಜ್ಞತೆ ಅವರಿಗೆ ದೊರಕಿರುವುದು ಅನಂತವಾದ ಸ್ವಪ್ರಜ್ಞೆಯ ಕೆಲವು ವಿಶೇಷತೆಗಳು ಅವರ ಸೃಷ್ಟಿಯಲ್ಲಿ ಇರುವುದರಿಂದ. ದೇವನು ಕಡ್ಡಾಯವಾಗಿ ಹೊಂದಿರಬೇಕಾದ ಏಳು ಗುಣಲಕ್ಷಣಗಳು ಮನುಷ್ಯರಿಗೂ ಇದೆ ನೋಡಿ. ಜೀವ, ಜ್ಞಾನ, ಶಕ್ತಿ, ಇಚ್ಛೆ, ಮಾತು, ಶ್ರವಣ ಮತ್ತು ದೃಷ್ಟಿ. ಆದರೆ, ಇದಾವುದೂ ದೇವರಿಗೆ ಸಮಾನವಾಗಿರುವ ಪ್ರಮಾಣದಲ್ಲಿ ಮತ್ತು ಗುಣಮಟ್ಟದಲ್ಲಿಲ್ಲ. ಇಷ್ಟೇ ಅಲ್ಲದೆ, ದೇವರ ಇತರ 99 ಹೆಸರುಗಳಲ್ಲಿ (ಅಸ್ಮಾಉಲ್ ಹುಸ್ನಾ) ಒಳಗೊಂಡಿರುವ ಇತರ ವಿಶೇಷತೆಗಳನ್ನು ಅಭಿವ್ಯಕ್ತಿಗೊಳಿಸುವ ಸಾಮರ್ಥ್ಯ ಕೂಡಾ ಅವರಿಗಿದೆ.

ಮೇಲೆ ಹೇಳಲಾದ ಏಳು ಮೂಲಭೂತ ಗುಣಲಕ್ಷಣಗಳ ಪೈಕಿ ನೋಡುವಿಕೆ ಮತ್ತು ಶ್ರವಣದ ಬದಲಿಗೆ ಉದಾರತೆ ಮತ್ತು ನ್ಯಾಯವನ್ನು ಎಣಿಸಿದವರು ಇದ್ದಾರೆ. ಬಹುತೇಕ ದೇವತಾಶಾಸ್ತ್ರಜ್ಞರು ವಿಶ್ವದಾದ್ಯಂತ ಮಾರ್ದನಿಸುತ್ತಿರುವ ಪರಸ್ಪರ ಪೂರಕವಾದ ದೈವಿಕ ಗುಣವಿಶೇಷತೆಗಳ ಎರಡು ಗುಂಪುಗಳನ್ನು ಇವೆರಡು ಪ್ರತಿನಿಧಿಸುತ್ತವೆ ಎಂದಿದ್ದಾರೆ. ಈ ಎರಡು ದಿವ್ಯ ಗುಣಗಳು ಇತರ ದೈವಿಕ ಗುಣಗಳಾದ ಮೃದುತ್ವ ಮತ್ತು ಕಾಠಿಣ್ಯ, ಕರುಣೆ ಮತ್ತು ಕೋಪ ಹಾಗೂ ಸೌಂದರ್ಯ ಮತ್ತು ಗಾಂಭೀರ್ಯವನ್ನು ಹೋಲುತ್ತವೆ. ದೇವರು ಮನುಷ್ಯನನ್ನು ಸೃಷ್ಟಿಸಿದಾಗ ಪರಸ್ಪರ ವಿರುದ್ಧವಾಗಿರುವ ಈ ದ್ವಂದ್ವಗಳನ್ನು ಅವನಲ್ಲಿ ತುಂಬಿದನು. ಅಲ್ಲಾಹನ ಕರುಣಾಮಯಿ ಗುಣಗಳು ನಮ್ಮನ್ನು ಸ್ವರ್ಗಕ್ಕೆ ಕೊಂಡೊಯ್ಯುತ್ತವೆ. ಅದೇ ವೇಳೆ, ಅವನ ಕೋಪದ ವಿಶೇಷಣಗಳು ನಮ್ಮನ್ನು ನರಕಕ್ಕೆ ಕರೆದೊಯ್ಯುತ್ತವೆ. ಪೈಗಂಬರ್ ಮುಹಮ್ಮದ್ (ಸ.) ಹೇಳಿದರು: “ಅಲ್ಲಾಹನ ಕರುಣೆಯು ಅವನ ಕೋಪಕ್ಕಿಂತ ದೊಡ್ಡದಾಗಿದೆ.” ಮನುಷ್ಯನ ಒಳಗೆ ಮತ್ತು ಹೊರಗೆ ಕಂಡುಬರುವ ಈ ವಿಶೇಷಣಗಳು ಮಾನವನ ನೈತಿಕತೆಯನ್ನು ನಿರ್ಧರಿಸುವಲ್ಲಿ ಪ್ರಮುಖ ಪಾತ್ರವನ್ನು ಹೊಂದಿವೆ. ಜತೆಗೆ ದೇವರ ಸಾಮೀಪ್ಯ ಪಡೆಯಲಿಕ್ಕೂ ಇದು ದಾರಿ ಮಾಡುತ್ತಿದ್ದು ಅದುವೇ ಧರ್ಮದ ಅಂತಿಮ ಗುರಿ.

ಧಾರ್ಮಿಕ ಆಜ್ಞೆಯು ಮಾನವನಿಗೆ ಇರುವ ಇಚ್ಛಾಶಕ್ತಿಯನ್ನು ಉದ್ದೇಶಿಸಿದೆ. ತನ್ನ ಮುಂದಿರುವ ಆಯ್ಕೆಗಳ ಪೈಕಿ ಯಾವುದನ್ನು ಬೇಕಾದರೂ ಆಯ್ದುಕೊಳ್ಳುವ ಶಕ್ತಿ ಮನುಷ್ಯನಿಗೆ ಇದೆ. ಆದರೆ, ಆಯ್ಕೆ ಉತ್ತಮವಾಗಿರಬೇಕು. ನಿರ್ದೇಶನಾತ್ಮಕ ಆಜ್ಞೆಗಳ ಮುಖ್ಯ ಕೆಲಸ ಸರಿ ತಪ್ಪುಗಳನ್ನು ಬೇರ್ಪಡಿಸಲು ಬೇಕಾದ ಮಾನದಂಡವನ್ನು ನೀಡುವುದೇ ಆಗಿರುತ್ತದೆ. ಜತೆಗೆ ಸತ್ಯ ಮತ್ತು ಸೂಕ್ತವಾದುದನ್ನು ಮಿಥ್ಯೆ ಹಾಗೂ ಸಮರ್ಪಕವಲ್ಲದ್ದರಿಂದ ಬೇರ್ಪಡಿಸಲು ಕೂಡಾ ಸಹಾಯ ಮಾಡುತ್ತದೆ.

ಮೊದಲ ನೋಟದಲ್ಲಿ, ಜನರಿಗೆ ಸತ್ಯದೊಂದಿಗೆ ನೇರ ಸಂಪರ್ಕ ಇಲ್ಲದ್ದರಿಂದ ಹಾಗೂ ಉತ್ತಮ ಜೀವನ ಸವೆಸಲು ದೈವಿಕ ಮಾರ್ಗದರ್ಶನ ಅಗತ್ಯ ಇರುವ ಕಾರಣದಿಂದ ನಿರ್ದೇಶನಾತ್ಮಕ ಆಜ್ಞೆ ಅಸ್ತಿತ್ವದಲ್ಲಿದೆ ಎಂದು ತೋರಬಹುದು. ಅದೇ ವೇಳೆ, ಆಳವಾದ ದೃಷ್ಟಿಯಲ್ಲಿ ದೇವರು ಸರಿಯಾದ ಮಾತು, ಕ್ರಿಯೆ ಮತ್ತು ಉದ್ದೇಶದ ಬಗ್ಗೆ ಸೂಚನೆಗಳನ್ನು ನೀಡಿರುವುದರಿಂದ ಮನುಷ್ಯನಿಗೆ ಸತ್ಯ, ಸರಿ ಮತ್ತು ವಾಸ್ತವವನ್ನು ಆರಿಸುವ ಹೊಣೆಗಾರಿಕೆಯನ್ನು ಕೂಡಾ ವಹಿಸಿದ್ದಾನೆ ಎಂದು ತಿಳಿಯಬಹುದು. ಈ ಜವಾಬ್ದಾರಿಯ ಆಧಾರದ ಮೇಲೆ, ಅವರು ಅವಾಸ್ತವಿಕತೆಯನ್ನು ದೂರ ಮಾಡಿದ್ದಕ್ಕಾಗಿ ಮತ್ತು ಸತ್ಯದೊಂದಿಗೆ ಸೇರಿದ್ದಕ್ಕಾಗಿ ಸ್ವರ್ಗ ಯಾ ನರಕಕ್ಕೆ ಅರ್ಹರಾಗುತ್ತಾರೆ. ದೈವಿಕ ನ್ಯಾಯದ ಪ್ರಕಾರ ಒಬ್ಬ ವ್ಯಕ್ತಿಯು ತನ್ನ ಮಾತುಗಳು ಮತ್ತು ಕಾರ್ಯಗಳಿಗೆ ಸಂಪೂರ್ಣ ಜವಾಬ್ದಾರನಾಗಿದ್ದರೆ ಮಾತ್ರ ಪ್ರತಿಫಲ ಮತ್ತು ಶಿಕ್ಷೆ ನೀಡಬಹುದು. ಸೃಷ್ಟಿಗಳ ಪೈಕಿ ಮಾನವರಿಗೆ ಮಾತ್ರ ಜವಾಬ್ದಾರಿ ವಹಿಸಿಕೊಡಲಾಗಿರುದರಿಂದ ವಿವಿಧ ಮಟ್ಟಗಳು ಮತ್ತು ವಲಯಗಳಿರುವ ಸ್ವರ್ಗ ಮತ್ತು ನರಕಗಳ ಅಸ್ತಿತ್ವ ಮನುಷ್ಯರ ಅಸ್ತಿತ್ವದ ಮೇಲೆ ನೆಲೆಗೊಂಡಿದೆ. ಒಟ್ಟಾರೆ, ಮಾನವನಿಗೆ ಮುಕ್ತ ಆಯ್ಕೆಯು ಇಲ್ಲದಿದ್ದಲ್ಲಿ ಅರ್ಥಹೀನ ಎನಿಸುತ್ತಿದ್ದ ಮರಣೋತ್ತರ ಲೋಕಗಳ ಅಗಣಿತ ಸಾಧ್ಯತೆಗಳ ಇರವಿಗೆ ಕಾರಣವಾಗುವ ಮೂಲಕ ನಿರ್ದೇಶನಾತ್ಮಕ ಆಜ್ಞೆಗಳು ಸೃಜನಾತ್ಮಕ ಆಜ್ಞೆಗಳನ್ನು ಪೂರ್ಣಗೊಳಿಸುವ ಕೆಲಸವನ್ನು ಕೂಡಾ ಮಾಡುತ್ತದೆ ಎನ್ನಬಹುದು.

ದೇವರು ವಾಸ್ತವ ಎಂದು ಹೇಳಿದರೆ ದೇವರು ಮಾತ್ರ ವಾಸ್ತವ ಹಾಗೂ ಬಾಕಿರುವುದೆಲ್ಲಾ ಅವಾಸ್ತವ ಎಂದರ್ಥ. ದೇವರು ಮಾತನಾಡುತ್ತಾನೆ ಎಂದು ಹೇಳಿದರೆ ದೇವರು ಮಾತ್ರ ಮಾತನಾಡುತ್ತಾನೆ ಮತ್ತು ಉಳಿದವರೆಲ್ಲಾ ಮೌನವಾಗಿದ್ದಾರೆ ಎಂದರ್ಥ. ನಿಜವಾದ ಇರವು ಎನಿಸಿರುವ ದೇವರಿಂದ ನಿಗದಿತ ವಾಸ್ತವಿಕತೆಯನ್ನು ವಸ್ತುಗಳು ಪಡೆದಿದೆ ಎನ್ನುವುದಾದರೆ ಅವುಗಳು ನಿಗದಿತ ಮಾತನ್ನು ಕೂಡಾ ನಿಜವಾದ ಮಾತುಗಾರನಿಂದ ಪಡೆದಿವೆ ಎಂದು ಮನಗಾಣಲು ಸಾಧ್ಯವಿದೆ. ಇಬ್ನ್ ಅರಬಿಯವರು ವಿವರಿಸಿದಂತೆ ದೇವರ ನುಡಿ ಆಗಿರುತ್ತದೆ ಎಲ್ಲವನ್ನೂ ಅಸ್ತಿತ್ವಕ್ಕೆ ತಂದಿರುವುದು. “ನಾವು ಅವನ ಮಾತಿನಿಂದಾಗಿ ಅಸ್ತಿತ್ವಕ್ಕೆ ಬಂದಿದ್ದೇವೆ. ʼಆಗುʼ ಎನ್ನುವ ಅವನ ಆಜ್ಞೆಯ ಪರಿಣಾಮದಿಂದ ನಾವು ಉಂಟಾದೆವು. ಅಸ್ತಿತ್ವದಲ್ಲಿರುವುದೆಲ್ಲವೂ ದೇವರ ಮಾತುಗಳೇ ಆಗಿರುವುದರಿಂದ “ವಿಶ್ವದಲ್ಲಿ ಮೌನವಿಲ್ಲ. ಮೌನ ಏನೂ ಇಲ್ಲದಿರುವುದಕ್ಕೆ ಸಮಾನ. ಆದುದರಿಂದಲೇ ಮಾತು ಶಾಶ್ವತ.”

ಸಂಕ್ಷಿಪ್ತವಾಗಿ ಹೇಳುವುದಾದರೆ, ದೇವರಲ್ಲದ ಎಲ್ಲವೂ ದೇವರ ಮಾತುಗಳ ಕಾರಣದಿಂದ ವಾಸ್ತವ ಎನಿಸಿಕೊಂಡಿವೆ. ಅದೇ ವೇಳೆ, ಅವುಗಳ ಮೂಲಭೂತ ಸ್ವಭಾವಗಳ ಪ್ರಕಾರ ಅವು ಅವಾಸ್ತವ ಮತ್ತು ಮೌನ ಆಗಿವೆ. ಎಲ್ಲಾ ಸೃಷ್ಟಿಗಳು ದೇವರ ನುಡಿಗಳೆ. ಅವರಾಡುವ ಮಾತುಗಳು ಅವರಾಡಿದ್ದಲ್ಲ, ಅವರ ಮೂಲಕ ಆಡಲಾದದ್ದು. ಆದುದರಿಂದಲೇ ಎಲ್ಲಾ ಮಾತುಗಳು ಮತ್ತು ರೂಪಗಳು ದೈವಿಕ ಆಜ್ಞೆಗಳ ಸಾಕ್ಷಾತ್ಕಾರಗಳಷ್ಟೇ.

ಕೃಪೆ: Renovatio
ಲೇ: ವಿಲ್ಯಂ ಚಿಟಿಕ್
ಕನ್ನಡಕ್ಕೆ : ಸ್ವಾದಿಖ್ ಬೆಳಾಲ್


William Chittick

Leave a Reply

*