ಯಾತ್ರೆ ಅಥವಾ ಸಂಚಾರ ಎಂಬರ್ಥವನ್ನು ಸೂಚಿಸುವ ‘ಸಫರ್’ ಎಂಬ ಪದವನ್ನು ಸೂಫಿ ಸಾಹಿತ್ಯಗಳಲ್ಲಿ ಧಾರಾಳವಾಗಿ ಕಾಣಬಹುದು.’ಯಾತ್ರೆ’ ಎಂಬುವುದನ್ನು ಸಾಮಾನ್ಯವಾಗಿ ಒಂದು ನಿರ್ದಿಷ್ಟ ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಪಲ್ಲಟಗೊಳ್ಳುವುದನ್ನು ಸೂಚಿಸಲಾಗಿ ಬಳಸಲಾದರೆ, ಸೂಫಿ ಪಂಥದಲ್ಲಿ ಪ್ರಸ್ತುತ ಪದವನ್ನು ವ್ಯಕ್ತಿಯಲ್ಲುಂಟಾದ ತಕ್ಷಣದ ಬದಲಾವಣೆ, ಬದುಕಿನ ಕ್ಷಣಿಕತೆ ಮತ್ತು ವಿಯೋಗ ಎಂಬ ನೆಲೆಗಟ್ಟಿನಲ್ಲಿ ರೂಪಕಗಳಾಗಿಯೂ ಬಳಸುವುದುಂಟು. ಈ ವಿಶಾಲಾರ್ಥದ ಸಾಂಕೇತಿಕ ಪದಪ್ರಯೋಗವು ಸೂಫಿಗಳಿಗೆ ಆತ್ಮಜ್ಞಾನದ ಹಾದಿಯಲ್ಲಿನ ವಿವಿಧ ಹಂತಗಳನ್ನು ಸೂಚಿಸಲು ಸಹಾಯವನ್ನು ಮಾಡಿತು.
ಅರೆಬಿಕ್ ನಿಘಂಟಿನಲ್ಲಿನ ಈ ಪದವು ಶುಚಿಗೊಳಿಸುವುದು, ಬೆಳಗಿಸುವುದು, ಗಾಳಿಯು ಮೋಡವನ್ನು ಚದುರಿಸುವುದು, ಹೊಸತನ್ನು ಅರಿತುಕೊಳ್ಳುವುದು ಮತ್ತು ಮುಖವಾಡ ಕಳಚುವುದು ಮುಂತಾದ ಅನೇಕ ಅರ್ಥವನ್ನು ನೀಡುತ್ತದೆ. ಈ ರೀತಿಯಲ್ಲಿ ‘ಸಫರ್’ ಪದವು ಕೇವಲ ಪ್ರಯಾಣದ ತಾತ್ಪರ್ಯದಾಚೆಗೆ ವ್ಯಕ್ತಿತ್ವ ಮತ್ತು ಗುಪ್ತ ಸತ್ಯದ ಸ್ವಭಾವವನ್ನು ಅನಾವರಣಗೊಳಿಸುತ್ತದೆ. ಆಧುನಿಕ ಕಾಲದಲ್ಲಿ ಯಾತ್ರೆಯು ಒದಗಿಬರುವ ಹೊಸ ಅನುಭವದ ಆವಿಷ್ಕಾರವಾಗಿ ಕಂಡರೂ, ಪೂರ್ವಕಾಲದಲ್ಲಿ ಅದೊಂದು ಅಭದ್ರತೆ, ಲೂಟಿ, ಮತ್ತು ಪ್ರಯಾಸಗಳ ಅನುಭವವನ್ನು ಕೊಡಮಾಡಬಲ್ಲ ಸಾಹಸಮಯ ಕಾರ್ಯವಾಗಿತ್ತು ಎಂಬುವುದನ್ನು ನಾವಿಲ್ಲಿ ನೆನಪಿಸಿಕೊಳ್ಳಬೇಕು.
ಖುರ್‌ಆನಿನಲ್ಲಿ ಯಾತ್ರೆಯ ಉಲ್ಲೇಖ
ಕುರಾನಿನಲ್ಲಿ ಯಾತ್ರೆಗಳನ್ನು ಭಿನ್ನ ಆಯಾಮದಲ್ಲಿ ಉಲ್ಲೇಖಿಸಿದ್ದನ್ನು ಕಾಣಬಹದು.
ದೇವರ ಆಜ್ಞೆಗಳನ್ನು ತಿರಸ್ಕರಿಸಿದರ ಪರಿಣಾಮ, ಪಾಪವೆಸಗಿದವರ ಅಂತ್ಯ, ಪುನರುಜ್ಜೀವನದ ಸಾಧ್ಯತೆ ಮತ್ತು ಸೃಷ್ಟಿಕರ್ತನ ಶ್ರೇಷ್ಠತೆಯನ್ನು ಅರಿಯಲು ನೀವು ಯಾತ್ರೆಗಳನ್ನು ಮಾಡಿರಿ ಎಂದು ಕುರ್‌ಆನ್ ಸೂಚಿಸುತ್ತದೆ. ಕುರಾನಿನ ಅನೇಕ ವಾಕ್ಯಗಳು ಮಾನವನ ಹೃದಯಗಳನ್ನು ಬೆಳಗಿಸಲು ಯಾತ್ರೆಗಳನ್ನು ಕೈಗೊಳ್ಳುವಂತೆ ಪ್ರೋತ್ಸಾಹಿಸುತ್ತದೆ. ಸಂಚಾರಗಳನ್ನು ಜೀವನೋಪಾಯದ ಮಾರ್ಗವಾಗಿ ಮತ್ತು ತಮ್ಮ ದೈವಿಕ ವಿಶ್ವಾಸವನ್ನು ಉಳಿಸಿಕೊಳ್ಳಲು ನಡೆಸುವ ದೀರ್ಘ ಪ್ರಯಾಣ ಅಥವಾ ವಲಸೆಗಳಾಗಿಯೂ ಕುರಾನ್ ಮುಂದಿಡುತ್ತದೆ. ಇದಲ್ಲದೆ, ತೀರ್ಥಯಾತ್ರೆಗೆ ಸಂಬಂಧಿಸಿದಂತೆ ನಡೆಸಲಾಗುವ ಹಜ್ ಯಾತ್ರೆಗಳು ಇಸ್ಲಾಮಿನಲ್ಲಿ ಪ್ರಯಾಣದ ಮತ್ತೊಂದು ಪ್ರಮುಖ ಸಂದರ್ಭವನ್ನು ಸೂಚಿಸುತ್ತದೆ. ಸೂಫಿಗಳು ಪ್ರಯಾಣದ ವಿವಿಧ ಆಯಾಮಗಳನ್ನು ಈ ರೀತಿಯ ವಿಶಾಲಾರ್ಥದಲ್ಲಿ ಉಪಯೋಗಿಸುತ್ತಿದ್ದರು.
ಸೂಫಿ ಮಹಾತ್ಮರ ಸಂಚಾರಗಳು
ಪರ್ಷಿಯನ್ ಸೂಫಿ ವಿದ್ವಾಂಸ ಮತ್ತು ಲೇಖಕ ಅಬೂ ಬಕರ್ ಅಲ್-ಕಾಲಾಬಾದಿ ಯಾತ್ರೆಗಳನ್ನು ಆಧ್ಯಾತ್ಮಿಕತೆಯ ಹತ್ತು ಸ್ತಂಭಗಳಲ್ಲಿ ಒಂದು ಎಂದು ಪರಿಗಣಿಸುತ್ತಾರೆ. ಸೂಫಿಗಳು ಸಾಮಾನ್ಯವಾಗಿ ಎರಡು ಅಂಶಗಳನ್ನು ಸಂಯೋಜಿಸುವ ಮೂಲಕ ಪ್ರಯಾಣದ ಪರಿಕಲ್ಪನೆಯನ್ನು ಮುಂದಿಡುತ್ತಾರೆ.
೧. ಯಾತ್ರೆಯ ಉದ್ದೇಶ, ೨. ಯಾತ್ರೆಯ ಪ್ರಯೋಜನಗಳು. ತೀರ್ಥಯಾತ್ರೆಗಳನ್ನು ಮಾಡುವುದು, ಆತ್ಮೀಯರನ್ನು ಭೇಟಿಯಾಗುವುದು, ಆಧ್ಯಾತ್ಮಿಕ ಗುರುವನ್ನು ಸೇರುವುದು ಮುಂತಾದ ಲಕ್ಷ್ಯಕ್ಕಾಗಿ ಯಾತ್ರೆಗಳನ್ನು ಕೈಗೊಳ್ಳಬೇಕೆಂದು ಇವರು ಹೇಳುತ್ತಾರೆ. ಸೂಫಿಗಳು ಆ ಕಾಲದಿಂದಲೂ ಜ್ಞಾನ ಸಂಪಾದನೆ ಮತ್ತು ಶ್ರೇಷ್ಠ ಗುರುವನ್ನು ಅರಸಿಕೊಂಡು ಪ್ರಪಂಚದ ಉದ್ದಗಲಕ್ಕೂ ಸಂಚಾರವನ್ನು ಬೆಳೆಸಿದವರಾಗಿದ್ದರು.
ಸೂಫಿಗಳಿಗೆ, ಪ್ರಯಾಣದ ಉದ್ದೇಶದ ಹೊರತಾಗಿ, ಸ್ವತಃ ಯಾತ್ರೆಯ ಅನುಭವವೂ ಸಹ ಮುಖ್ಯವಾಗಿದೆ. ಒಬ್ಬ ಯಾತ್ರಿಕನು ದಾರಿಹೋಕನಂತೆ ಕಾಲ್ನಡಿಗೆಯಲ್ಲಿ ಅಲೆದಾಡದ ಹೊರತು ಯಾತ್ರೆಯ ಉದ್ದೇಶಗಳನ್ನು ತಲುಪಲೋ, ಪ್ರಯಾಣದ ಗಂಧವನ್ನು ಸವಿಯಲೋ ಸಾಧ್ಯವಿಲ್ಲ ಎಂದು ಸೂಫಿ ಮಹಾತ್ಮರು ಅಭಿಪ್ರಾಯಿಸುತ್ತಾರೆ. ಸೂಫಿ ಆಧ್ಯಾತ್ಮಿಕ ಮತ್ತು ನೈತಿಕ ಮೌಲ್ಯಗಳನ್ನು ಒಲಿಸಿಕೊಳ್ಳುವಲ್ಲಿ ಯಾತ್ರೆಯ ಪ್ರಾಧಾನ್ಯತೆಯನ್ನು ಅಬು ತಾಲಿಬ್ ಅಲ್ – ಮಕ್ಕಿ ಆತ್ಮ ಶುದ್ಧೀಕರಣದ ತಕ್ಕಡಿಯಲ್ಲಿಟ್ಟು ಚರ್ಚಿಸುತ್ತಾರೆ. ‘ಸಫರ್’ ಎಂಬ ಪದದ ವಿಶಾಲಾರ್ಥದಲ್ಲಿ ಒಳಗೊಳ್ಳುವ ಹೊಸತನ್ನು ಅರಿತುಕೊಳ್ಳು, ತನ್ನೊಳಗಿನ ಪರಿಮಳವನ್ನು ಆಘ್ರಾಣಿಸು, ಆತ್ಯಂತಿಕ ಗುರಿಯನ್ನು ಕಂಡುಕೊಳ್ಳು ಎಂಬಿತ್ಯಾದಿ ಉದ್ದೇಶ ಲಕ್ಷ್ಯವನ್ನು ತಲುಪುವುದೇ ಬಹುಮುಖ್ಯವೆಂದು ಅಬು ತಾಲಿಬ್ ಪ್ರತಿಪಾದಿಸಿದರು. ಸಮರ್ಪಣೆ (ತವಕ್ಕುಲ್) ಸಂತೃಪ್ತಿ (ರಿಳಾ)ವಿಧೇಯತೆ (ತಸ್ಮೀಮ್)ಯಂತಹಾ ಆತ್ಮದ ಪ್ರಶಾಂತವೂ ಉದಾತ್ತವೂ ಆದ ಗುಣಲಕ್ಷಣಗಳೊಂದಿಗೆ ಯಾತ್ರೆ ಹೊರಟ ವ್ಯಕ್ತಿಯಲ್ಲಿ ತಕ್ಷಣಕ್ಕೆ ಉಂಟಾಗುವ ಸಂಕಟ ಮತ್ತು ಗೃಹವಿರಹವು ನಡೆಸುವ ಮುಖಾಮುಖಿ ಯಾತ್ರಿಕನ ನಿಜವಾದ ಆಧ್ಯಾತ್ಮಿಕ ಮಟ್ಟವನ್ನು ಸ್ಪಷ್ಟಗೊಳಿಸುತ್ತದೆ. ಆ ಮೂಲಕ ಮನಸ್ಸು ದೃಢಗೊಳಿಸುವ ಕಾಯಕದಲ್ಲಿ ಉಂಟಾದ ಲೋಪದೋಷಗಳನ್ನು ತಿದ್ದುಪಡಿಗೆ ಒಳಪಡಿಸಿ ಇನ್ನಷ್ಟು ಪಕ್ವಗೊಳ್ಳಲು ಮತ್ತು ಸೂಫಿ ಮಾರ್ಗದಲ್ಲಿ ಪಳಗಲು ಯಾತ್ರೆಗಳು ಮಾರ್ಗದರ್ಶಿಯಾಗಿ ಕಾರ್ಯನಿರ್ವಹಿಸುತ್ತದೆ.
ಗುರಿಯನ್ನು ಸಾಧಿಸುವ ಸಲುವಾಗಿ ಯಾತ್ರಿಕನೊಬ್ಬನು ನಡೆಸುವ ಸಂಚಾರವು ಆತ್ಮಸಂಸ್ಕರಣೆ ಮತ್ತು ಸ್ವಯಂ-ಜಾಗೃತಿಗೆ ಬಾಗಿಲುಗಳನ್ನು ತೆರೆದಿಡುತ್ತದೆ. ಈ ನಿಟ್ಟಿನಲ್ಲಿ ಯಾತ್ರೆಗಳನ್ನು ಕೈಗೊಂಡ ಪ್ರವಾದಿಗಳ ಯಾತ್ರಾ ವಿವರಣೆಯನ್ನು ಮತ್ತು ಆ ಮೂಲಕ ಅವರು ಸಾಧಿಸಿದ ಬದುಕಿನ ಶಿಸ್ತು ಮತ್ತು ಅದರ ಪರಿಣಾಮಗಳ ಕುರಿತು ಮುಸ್ತಾಂಬ್ಲಿ ಬುಖಾರಿ ದೀರ್ಘವಾಗಿ ಬರೆಯುತ್ತಾರೆ. ಮೊದಲ ಪ್ರವಾದಿಗಳಾದ ಆದಂ ನಬಿ (ಅ.ಸ)ಮರಿಂದ ಆರಂಭಗೊಂಡು ಕೊನೆಯ ಪ್ರವಾದಿವರ್ಯರಾದ ಮುಹಮ್ಮದ್ ಮುಸ್ತಫಾ( ಸ.ಅ)ಮರವರೆಗಿನ ಪ್ರವಾದಿಗಳ ಯಾತ್ರೆಗಳ ಬಗ್ಗೆ ಇಲ್ಲಿ ಉಲ್ಲೇಖಿಸುತ್ತಾರೆ. ಅದೇ ರೀತಿ, ಸೂಫಿ ವಿದ್ವಾಂಸರಾದ ಇಮಾಮ್ ಖುಶೈರಿ ಅವರು ದೇಹಿಚ್ಛೆಗಳಿಂದ ಮುಕ್ತಿ ( ನಫ್ಸ್ ಅಲ್ – ಅಮ್ಮಾರ) ಹೊಂದಲು ಮತ್ತು ದುಷ್ಕೃತ್ಯಗಳಿಂದ ಸ್ವಚ್ಛಗೊಳ್ಳಲು ಯಾತ್ರೆಗಳು ಅತ್ಯಂತ ಸಹಕಾರಿಯೆಂದು ನಂಬಿದರು. ಬದುಕಿಗೆ ಅಳವಡಿಸಿಕೊಳ್ಳಬೇಕಾದ ನೀತಿಪಾಠಗಳನ್ನು ಗ್ರಹಿಸುವ ಶಕ್ತಿಯನ್ನು ಯಾತ್ರೆಗಳು ನೀಡುತ್ತದೆ. ದೇವರ ಆಜ್ಞೆಗಳನ್ನು ಧಿಕ್ಕರಿಸಿದ ಜನರು ಅನುಭವಿಸುವ ಸಂಕಷ್ಟಗಳನ್ನು ಮತ್ತು ವಿಧೇಯರಾಗಿರುವ ಜನರು ಆ ಸಂಕಷ್ಟಗಳೊಂದಿಗೂ ನಗುತ್ತಾ ಬದುಕುತ್ತಿರುವ ಹಿಂದಿನ ಸೂತ್ರವನ್ನು ತಮ್ಮ ತಮ್ಮ ಆತ್ಮಗಳಿಗೆ ಬೋಧಿಸಲು ಯಾತ್ರಿಕರಿಗೆ ಸಾಧ್ಯವಾಗುತ್ತದೆ. ತೀರ್ಥಯಾತ್ರೆ ಹಾಗೂ ಹಿಜ್ರಾ ಯಾತ್ರೆಗಳಂತಹಾ ಧಾರ್ಮಿಕ ಪರಿಕಲ್ಪನೆಯ ಸಂಚಾರಗಳು ಯಾತ್ರಿಕರಿಗೆ ದೇವರೊಂದಿಗೆ ಹೊಸ ಆತ್ಮಬಂಧವನ್ನು ಸ್ಥಾಪಿಸುವಲ್ಲಿ ಹೆಚ್ಚು ಸಹಕಾರಿಯಾಗುತ್ತದೆ ಎಂಬುವುದೆಲ್ಲವೂ ಸೂಫಿ ಪಂಥದ ಬೋಧನೆಗಳಲ್ಲಿ ಪ್ರಮುಖವಾದದ್ದಾಗಿದೆ.
ಸೂಫಿ ಪರಂಪರೆಗಳಲ್ಲಿ ಯಾತ್ರೆಯಲ್ಲಿ ಪಾಲಿಸಬೇಕಾದ ಶಿಷ್ಟಾಚಾರಗಳನ್ನು ಹೆಚ್ಚು ಪ್ರಾಧಾನ್ಯತೆಯಿಂದ ಕಾಣಲಾಗುತ್ತದೆ. ಸೂಫಿ ಚಿಂತನೆಗಳ ಬಗೆಗೆ ರಚಿಸಲ್ಪಟ್ಟ ಆರಂಭಿಕ ಕೃತಿಗಳಲ್ಲಿ ಈ ಕುರಿತ ಹೆಚ್ಚಿನ ವಿವರಗಳು ಕಾಣಬಹುದು. ಸೃಷ್ಟಿಕರ್ತನ ಸಂತೃಪ್ತಿಗಾಗಿ ಯಾತ್ರೆ ಕೈಗೊಳ್ಳುವುದು, ಶುಚಿತ್ವವನ್ನು ಕಾಪಾಡುವುದು, ಪ್ರವಾದಿಗಳ ಬದುಕನ್ನು ಅನುಸರಿಸುವುದು, ಆ ಊರಿನ ಜನರನ್ನು ಗೌರವಿಸುವುದು, ಸಹ ಯಾತ್ರಿಕನೊಂದಿಗೆ ಉತ್ತಮ ಬಾಂಧವ್ಯ ಸ್ಥಾಪಿಸುವುದು, ಜೊತೆಗೆ ಇರುವವರಿಗೆ ಯಾತ್ರೆಯಲ್ಲಿ ಸಹಾಯ ಅಸ್ತವನ್ನು ಚಾಚುವುದು, ಇತರರನ್ನು ನಿಂದಿಸದಿರುವುದು ಇವು ಆ ಶಿಷ್ಟಾಚಾರದ ಪಟ್ಟಿಯಲ್ಲಿ ಪ್ರಮುಖವಾದದ್ದಾಗಿದೆ.
ಸೂಫಿ ಪಂಥದಲ್ಲಿ ಯಾತ್ರೆಯೆಂಬ ರೂಪಕ
ಸೂಫಿ ಪರಂಪರೆಯಲ್ಲಿ ‘ಯಾತ್ರೆ’ ಎಂಬ ಪದವನ್ನು ಭಾಷಿಕವಾದ ವಿಭಿನ್ನ ಅಂಶಗಳೊಂದಿಗೆ ತುಲನೆಗೊಳಿಸಿ ವೈವಿಧ್ಯಮಯ ವಿಚಾರಗಳನ್ನು ಸೂಚಿಸಲು ರೂಪಕಗಳಾಗಿ ಬಳಕೆಮಾಡುವ ವಾಡಿಕೆಯಿದೆ. ಮರಣ ಅಥವಾ ಬದುಕಿನ ವಿವಿಧ ಹಂತಗಳನ್ನು ಸೂಚಿಸಲಾಗಿಯೂ ಸೂಫಿಗಳು ಇದನ್ನು ಬಳಸಿದರು. ಧಾರ್ಮಿಕ ಬೋಧನೆಗಳಲ್ಲಿ ಸಾಮಾನ್ಯವಾಗಿ ಒಬ್ಬ ವ್ಯಕ್ತಿಯ ವಿಯೋಗವನ್ನು ಒಂದು ಸುದೀರ್ಘವಾದ ಯಾತ್ರೆ ಎಂಬ ಅರ್ಥದಲ್ಲಿ ವ್ಯಾಖ್ಯಾನಿಸುವುದು ಈ ರೂಪಕಾತ್ಮಕವಾದ ಹೋಲಿಕೆಯೇ ಆಗಿದೆ. ಸೂಫಿಗಳ ಪ್ರಕಾರ ಸಾವು ಈ ಪ್ರಪಂಚದಿಂದ ಮತ್ತೊಂದು ಪ್ರಪಂಚದೆಡೆಗಿನ ಒಂದು ಯಾತ್ರೆಯಾಗಿದೆ. ನಿಖರವಾದ ಸಮಯ ಸಂದರ್ಭ ಅಜ್ಞಾತವಾಗಿರುವ ಈ ಯಾತ್ರೆಯೂ ದೀರ್ಘ ಮತ್ತು ಕ್ಷೇಶದಾಯಕವಾದ ಯಾತ್ರೆಯೆಂದೂ ಇದಕ್ಕಾಗಿ ಸದಾ ಸಿದ್ಧರಾಗುವ ಎಚ್ಚರಿಕೆಯೊಂದಿಗೆ ಅಗತ್ಯ ರೂಪುರೇಷೆಗಳನ್ನು ಹಾಕಿಕೊಂಡಿರಬೇಕೆಂದು ಸೂಫಿಗಳು ಬೋಧಿಸಿದರು. ಪ್ರಸ್ತುತ ಯಾತ್ರೆಗಳಿಗೆ ಸಿದ್ಧಗೊಳ್ಳುವವನು ತನ್ನಿಂದಾಗುವ ಒಳಿತನ್ನು ಸಂಪಾದಿಸುವುದು, ನೈತಿಕ ಚಟುವಟಿಕೆಗಳಲ್ಲಿ ಭಾಗಿಯಾಗುವುದು ಅಗತ್ಯವೆಂದು ಸೂಫಿಗಳು ಪ್ರತಿಪಾದಿಸಿದರು.
ಜೀವನದಲ್ಲಿ ಸಂಭವಿಸುವ ಬದಲಾವಣೆಗಳು ಮತ್ತು ವಿಕಸನಗಳನ್ನು ಒಳಗೊಳ್ಳುವಂತೆ ಯಾತ್ರೆಯ ಅರ್ಥವನ್ನು ವಿಸ್ತರಿಸುತ್ತಾ ಹೋಗಬೇಕಾಗುತ್ತದೆ. ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಂಚರಿಸುವ ಎಂಬ ಪ್ರಾಥಮಿಕ ಅರ್ಥದ ಈ ಯಾತ್ರೆಯು ನಿಜದಲ್ಲಿ ಒಬ್ಬ ವ್ಯಕ್ತಿಯ ಹುಟ್ಟಿನಿಂದ ಪ್ರಾರಂಭಗೊಂಡು ಸಾವಿನ ಮೂಲಕ ಕೊನೆಗೊಳ್ಳುವ ರಾತ್ರಿ ಹಗಲುಗಳೆಂಬ ಮಜಲುಗಳನ್ನು ಒಳಗೊಂಡಿರುವ ಪ್ರಯಾಣವಾಗಿದೆ. ರಾತ್ರಿ ಹಗಲುಗಳಿಂದ ಪೂರ್ಣಗೊಳ್ಳುವ ಈ ಯಾತ್ರೆಗೆ ಬೇಕಾದ ತಯಾರಿಯ ಮೂಲ ಸಮಯವಾಗಿದೆ. ತನ್ನ ಸಮಯವನ್ನು ಅಂತಿಮ ಯಾತ್ರೆಗಾಗಿ ಮೀಸಲಿಡುವ ವ್ಯಕ್ತಿಯು ಉದ್ಧೇಶಿತ ಗುರಿಯನ್ನು ತಲುಪುವುದರಲ್ಲಿ ಯಶಸ್ವಿಯಾಗುತ್ತಾನೆ. ಆದರೆ ಶಾರೀರಿಕ ಇಚ್ಛೆ ಮತ್ತು ಇಂದ್ರಿಯ ಇಚ್ಛೆಗಳು ಮನುಷ್ಯನನ್ನು ಮುಕ್ತಿಯ ಮಾರ್ಗದಿಂದ ತಡೆದು ನಿಲ್ಲಿಸುತ್ತದೆ. ಈ ಯಾತ್ರೆಯ ಮೂಲಧನವಾದ ಸಮಯವನ್ನು ಕೊಲ್ಲುತ್ತದೆ. ಆ ಮೂಲಕ ಅವನ ನಾಶಕ್ಕೆ ಇವುಗಳು ಕಾರಣವಾಗುತ್ತದೆ ಎನ್ನುವುದು ಸೂಫಿ ಪಥದ ಬೋಧನೆಗಳಾಗಿವೆ. ಪ್ರತಿಯೊಂದು ಯಾತ್ರೆಗಳಿಗೂ ಅಂತ್ಯವಿರುವಂತೆ ಈ ಬದುಕಿಗೂ ಅಂತ್ಯವಿದೆ, ಆ ಕಾರಣದಿಂದಲೇ ಅಂತ್ಯವಿರುವ ಈ ಬದುಕನ್ನು ಒಂದು ಪ್ರಯಾಣವಾಗಿ ಸೂಫಿಗಳು ಪರಿಗಣಿಸಿರುವುದು ಎಂಬುದನ್ನು ಇಲ್ಲಿ ಅರ್ಥೈಸಿಕೊಳ್ಳಬೇಕು. ಆದರೆ ಒಬ್ಬ ಯಾತ್ರಿಕನ ಶ್ರದ್ಧೆ ಅವನ ಸುತ್ತಲಿನ ಸೌಂದರ್ಯಕ್ಕೆ ಒಳಗಾಗಿ ಆ ಮೋಡಿಯಲ್ಲಿ ಮುಳುಗುವ ಬದಲು ಉದ್ದೇಶಿತ ಪರಲೋಕವೆಂಬ ಗಮ್ಯಸ್ಥಾನದ ಬಗ್ಗೆ ಇರಬೇಕು. ಈ ಕ್ಷಣಿಕ ಪ್ರಪಂಚದೊಂದಿಗಿನ ವ್ಯಾಮೋಹದಿಂದ ಕಳಚಿಕೊಂಡು ಆತ್ಯಂತಿಕ ಗುರಿಯನ್ನು ಕಂಡುಕೊಳ್ಳಲು ಯಾತ್ರಿಕನು ತಯಾರಿ ನಡೆಸಬೇಕಾಗುತ್ತದೆ ಎನ್ನುತ್ತಾರೆ ಸೂಫಿಗಳು.
ಮಾನವನು ಕೈಗೊಳ್ಳುವ ಯಾತ್ರೆಯ ಕ್ಷಣಿಕ ಸ್ವಭಾವದ ಹೊರತಾಗಿ ಯಾತ್ರೆಯೂ ಅವನಲ್ಲಿ ಉಂಟುಮಾಡುವ ಮಾನಸಿಕ, ಆಧ್ಯಾತ್ಮಿಕ, ನೈತಿಕ ಮತ್ತು ಜ್ಞಾನದ ಪರಿಸ್ಥಿತಿಗಳಲ್ಲಿ ಸಂಭವಿಸುವ ರೂಪಾಂತರಗಳನ್ನು ಸೂಚಿಸುವ ಉಪಮೆಗಳಾಗಿಯೂ ಯಾತ್ರೆಯು ಬಳಕೆಯಾಗಿದೆ. ಪ್ರಮುಖ ಸೂಫಿ ವಿದ್ವಾಂಸರಾದ ಶೇಖ್ ಅಲಿ ಹುಜ್ವೇರಿ, ಸೃಷ್ಟಿಕರ್ತನ ತೃಪ್ತಿಯನ್ನು ಗುರಿಯಾಗಿಸಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಪ್ರಯಾಣಿಸುವ ವ್ಯಕ್ತಿಯು ತನ್ನ ಆತ್ಮದ ಬಯಕೆಗಳಿಂದ ದೂರ ಉಳಿಯಬೇಕು ಎನ್ನುತ್ತಾರೆ. ಸೂಫಿ ಸಂತರಲ್ಲಿ ಪ್ರಮುಖರಾಗಿರುವ ಅಬೂ ಉಸ್ಮಾನ್ ಹೇಳುವ ಪ್ರಕಾರ, ನಿಜವಾದ ಆಧ್ಯಾತ್ಮಿಕ ಯಾತ್ರೆಯನ್ನು ನಡೆಸುವವನು ಇಂದ್ರಿಯ ಬಯಕೆಗಳಿಂದ ದೂರ ಸರಿದಿರುತ್ತಾನೆ. ಈ ವಿಚಾರಧಾರೆಯು ನೈತಿಕತೆ ಮತ್ತು ಸೂಫಿ ಪಂಥದ ತಿರುಳಿನೊಂದಿಗೆ ಬಲವಾಗಿ ಹೊಂದಿಕೊಂಡಿದೆ, ಇದು ವ್ಯಕ್ತಿಯ ನಡವಳಿಕೆ, ಆಧ್ಯಾತ್ಮಿಕ ಪರಿಸ್ಥಿತಿಗಳು ಮತ್ತು ನಂಬಿಕೆಗಳಲ್ಲಿನ ಬದಲಾವಣೆಗಳನ್ನು ಪ್ರತಿಬಿಂಬಿಸುತ್ತದೆ. ಯಾತ್ರೆಯ ರೂಪಕ ಅರ್ಥವು ಸೂಫಿ ಪರಿಕಲ್ಪನೆಯೊಂದಿಗೆ ಸಹಸಂಬಂಧವನ್ನು ಹೊಂದಿದೆ. ಇದು ಬದುಕಿನ ಘಟ್ಟಗಳನ್ನು ಹಂತ ಹಂತವಾಗಿ ಪೂರ್ಣಗೊಳಿಸುವ (ಇಸ್ತಿಕ್ಮಾಲ್) ಪಕ್ರಿಯೆಯನ್ನು ಸೂಚಿಸುತ್ತದೆ.
ಶೇಖ್ ಮುಸ್ತಾಮ್ಮಿ ಬುಖಾರಿ ಅವರು ಯಾತ್ರೆಯನ್ನು ಆಂತರಿಕ ಮತ್ತು ಬಾಹ್ಯ ಎಂದು ವರ್ಗಿಕರಿಸಿದ ಸೂಫಿಗಳಲ್ಲಿ ಮೊದಲಿಗರು. ಅದನ್ನು ಯಾತ್ರೆಯ ಅತೀಂದ್ರಿಯ ಸತ್ಯವೆಂದು ನಾವು ಅರ್ಥೈಸಿಕೊಳ್ಳುವ. ಆತ್ಮಶುದ್ಧಿಗಾಗಿ ಲೌಕಿಕ (ಬಾಹ್ಯ) ಪ್ರಪಂಚದಲ್ಲಿ ಯಾತ್ರೆಗೆಯ್ಯುವುದರ ಅನಿವಾರ್ಯತೆಯನ್ನು ಇಮಾಮ್ ಬುಖಾರಿ ಒತ್ತಿ ಹೇಳಿದರು. ಜೊತೆಗೆ ಆಂತರಿಕ ಪ್ರಯಾಣದ ಮಹತ್ವವನ್ನೂ ಅವರು ವಿವರಿಸಿದರು.ಅವರ ಪ್ರಕಾರ ಆಂತರಿಕ ಪ್ರಯಾಣವು ಸ್ವಯಂ-ಪ್ರತಿಫಲನ ಮತ್ತು ಧ್ಯಾನವಾಗಿದೆ.ಇಲ್ಲಿ ಪ್ರಯಾಣದ ಅವಧಿಯು ಪೂರ್ವ-ಎಟರ್ನಿಟಿನಿಂದ ಪೋಸ್ಟ್ ಎಟರ್ನಿಟಿಯವರೆಗೆ ಇರುತ್ತದೆ. ಯಾತ್ರಿಕನು ಬಾಹ್ಯ ಪ್ರಯಾಣದಲ್ಲಿ ವಿವಿಧ ಹಂತಗಳನ್ನು ದಾಟಿಹೋದರೆ, ಸೂಫಿಗಳು ತಮ್ಮದೇ ಆದ ಪ್ರಯತ್ನಗಳ ಮೂಲಕ ವಿವಿಧ ಹಂತಗಳನ್ನು ಜಯಿಸುತ್ತಾ ಸಾಗುತ್ತಾರೆ. ಬಾಹ್ಯ ಪ್ರಯಾಣವು ಸ್ಥಳ-ಸಮಯದ ನಿರ್ಬಂಧಗಳಿಂದ ಬಂಧಿಸಲ್ಪಟ್ಟರೆ, ಆಂತರಿಕ ಪ್ರಯಾಣದಲ್ಲಿ ಅಂತಹ ಗೋಜಲುಗಳಿಲ್ಲ. ಆದ್ದರಿಂದ ಸೂಫಿಗಳು ಕ್ಷಣಾರ್ಧದಲ್ಲಿ ಪ್ರಪಂಚದಾದ್ಯಂತ ಸಂಚರಿಸಬಹುದು. ಆಂತರಿಕವಾದ ರೂಪಾಂತರವು ಸಂಭವಿಸಿರುವುದರಿಂದಾಗಿ ಸೂಫಿಗಳು ಹೆಚ್ಚು ಯಾತ್ರೆಗಳನ್ನು ನಡೆಸುತ್ತಾರೆಂದು ಬುಖಾರಿ ಪ್ರತಿಪಾದಿಸಿದರು. ಅವರ ಪ್ರಕಾರ, ಸೂಫಿಯೇತರರ ಆಂತರಿಕ ಸ್ಥಿತಿಯು ಬಾಹ್ಯ ಸ್ಥಿತಿಯ ಮೇಲೆ ಅವಲಂಬಿತವಾಗಿದೆ. ಯಾವಾಗ ಅವರ ಬಾಹ್ಯವು ಶಾಂತವಾಗುತ್ತದೆಯೋ ಆಗ, ಅಂತರಂಗವೂ ಶಾಂತವಾಗುತ್ತದೆ. ಸೂಫಿಗಳಿಗೆ ಸಂಬಂಧಿಸಿದಂತೆ, ಅವರ ಆಂತರಿಕ ಸ್ಥಿತಿಯೇ ಮುಖ್ಯವೆನಿಸುತ್ತದೆ. ಬಾಹ್ಯವು ಆಂತರಿಕ ಪರಿಸ್ಥಿತಿಗಳ ಮೇಲೆ ಅವಲಂಬಿತವಾಗಿರುತ್ತದೆ.
ಇಮಾಮ್ ಖುಶೈರಿ ಎರಡು ರೀತಿಯ ಯಾತ್ರೆಗಳ ಬಗ್ಗೆಯೂ ಮಾತನಾಡುತ್ತಾರೆ. ಒಂದು ದೇಹದೊಂದಿಗಿನ ಪ್ರಯಾಣ, ಇದು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕಿರುವ ಚಲನೆಯನ್ನು ಸೂಚಿಸುತ್ತದೆ. ಎರಡನೆಯದು ಒಂದು ಸ್ಥಿತಿಯಿಂದ ಮತ್ತೊಂದು ಸ್ಥಿತಿಯ ವಿಕಸನವನ್ನು ಸೂಚಿಸುವ ಆತ್ಮದೊಂದಿಗಿನ ಪ್ರಯಾಣವಾಗಿದೆ. ಅವರ ಪ್ರಕಾರ ಹೃದಯದೊಂದಿಗೆ ಪಯಣಿಸುವ ಯಾತ್ರಿಕರು ವಿರಳವಾಗಿರುತ್ತಾರೆ. ಅವರು ಈ ಎರಡು ವಿಧಗಳನ್ನು ಲೌಕಿಕ ಮತ್ತು ಸ್ವರ್ಗೀಯ ಎಂದು ವರ್ಗೀಕರಿಸಿದ್ದಾರೆ. ಖುಶೈರಿಯ ಪ್ರಕಾರ ದೇವರನ್ನು ಸೇರುವುದೇ ಯಾತ್ರೆಯ ಬಹುಮುಖ್ಯ ಉದ್ಧೇಶವಾಗಿದೆ, ಈ ಉದ್ಧೇಶದ ಸಾಕ್ಷಾತ್ಕಾರ ಸ್ವಯಂ- ಸಂಸ್ಕರಣೆ ಅಥವಾ ಆಧ್ಯಾತ್ಮಿಕ ಚಿಂತನೆಗಳಿಂದ ಮಾತ್ರ ಸಾಧ್ಯ. ಪ್ರಶಸ್ತ ಇಹ್ಯಾ ಉಲೂಮುದ್ದೀನ್ ಎಂಬ ಕೃತಿಯಲ್ಲಿ ಅಬು ಹಾಮಿದ್ ಅಲ್ ಗಝ್ಝಾಲಿ ಯಾತ್ರೆಯನ್ನು ಅದರ ಸಾಂಕೇತಿಕ ಅರ್ಥಗಳಾಚೆ ಆಧ್ಯಾತ್ಮಿಕ ಸ್ಥಿತಿಗೆ ತಮ್ಮನ್ನು ತೆರೆದುಕೊಳ್ಳಲು ಲಭ್ಯವಾಗುವ ತಿರುವು ಎಂಬಂತೆ ಬಣ್ಣಿಸಿದರು. ಆರಂಭಿಕ ಸೂಫಿಗಳ ಅಭಿಪ್ರಾಯಗಳನ್ನು ಕ್ರೋಢೀಕರಿಸಿದ ಅವರು ಯಾತ್ರೆಗೆ ಹೊಸತೊಂದು ಭಾಷ್ಯವನ್ನು ಬರೆದರು. ಗಝ್ಝಾಲಿ ಇಮಾಮರ ಪ್ರಕಾರ “ಪ್ರಯಾಣವು ಮನುಷ್ಯನನ್ನು ಅವನು ಕೊಡವಿಕೊಳ್ಳಲು ಬಯಸುವುದರಿಂದ ಮುಕ್ತಗೊಳಿಸುವ ಮತ್ತು ಸಾಧಿಸ ಹೊರಟ ಗುರಿಯೊಂದರ ದಾರಿಗಳನ್ನು ತೆರೆದಿಡುವುದಾಗಿದೆ. “ಈ ವ್ಯಾಖ್ಯಾನವು ಭೌತಿಕ ಆಯಾಮಗಳಿಗೆ ಮಾತ್ರ ಸೀಮಿತವಾಗಿರದೆ ಆಂತರಿಕ ಮತ್ತು ಬಾಹ್ಯ ಪ್ರಯಾಣಗಳ ಅರ್ಥಗಳನ್ನೂ ಸ್ಪುರಿಸುತ್ತದೆ.
ಇಮಾಮ್ ಗಝ್ಝಾಲಿಯವರ ಪ್ರಕಾರ,ಗುರಿಯನ್ನು ಸಾಧಿಸುವ ಮಾರ್ಗವಾಗಿರುವ ಯಾತ್ರೆಗಳು ಮೌಲ್ಯವನ್ನು ಹೊಂದಿರುತ್ತದೆ. ಈ ವ್ಯಾಖ್ಯಾನದಲ್ಲಿ ಅವರು ಎರಡು ಗುರಿಗಳನ್ನು ಮುಂದಿಡುತ್ತಾರೆ. ವ್ಯಕ್ತಿಯ ಯೋಗಕ್ಷೇಮಕ್ಕೆ ಪೂರಕವಲ್ಲದ ಮತ್ತು ಆನಂದ, ಸಮೃದ್ಧಿಗೆ ಹೊಂದಿಕೆಯಾಗದ ನೋವಿನ ಮತ್ತು ಕಠಿಣ ಸ್ಥಿತಿಯಿಂದ ತನ್ನನ್ನು ತಾನು ಮುಕ್ತಗೊಳಿಸುವುದು ಒಂದು ಗುರಿಯಾದರೆ, ಅಪೇಕ್ಷಣೀಯವಾದುದನ್ನು ತಲುಪುವುದು ಮತ್ತೊಂದು ಗುರಿಯಾಗಿದೆ, ಅಂದರೆ ಆಹ್ಲಾದಕರವಾದ, ಹೊಂದಿಕೊಳ್ಳುವ, ವ್ಯಕ್ತಿಯ ಯೋಗಕ್ಷೇಮಕ್ಕೆ ಅನುಗುಣವಾಗಿರುವ ಮತ್ತು ನೆಮ್ಮದಿಯನ್ನು ತರುವ ಸ್ಥಿತಿಯನ್ನು ತಲುಪುವುದು. ಈ ವ್ಯಾಖ್ಯಾನವು ಕುರ್‌ಆನಿನಲ್ಲಿರುವ ವಲಸೆಯ ಪರಿಕಲ್ಪನೆಗೆ ಮಾತ್ರವಲ್ಲದೆ, ವಿಮೋಚನೆ ಮತ್ತು ಸ್ವಾತಂತ್ರ್ಯದ ಪರಿಕಲ್ಪನೆಗೂ ಸಂಬಂಧಿಸಿದೆ. ಏಕೆಂದರೆ ಈ ವಿಮೋಚನೆಯು ಅನಪೇಕ್ಷಿತ ಸನ್ನಿವೇಶಗಳಿಂದ ಅಪೇಕ್ಷಣೀಯವಾದುದ್ದಕ್ಕೆ ತಲುಪುವುದಾಗಿದೆ. ಇದು ಧರ್ಮದ ಮುಖ್ಯ ಪರಿಕಲ್ಪನೆಗಳಲ್ಲಿ ಒಂದಾಗಿದೆ. ಜ್ವಾನ್ ಹಿಕ್, ಧರ್ಮವು ಮನುಷ್ಯನಿಗೆ ಮೋಕ್ಷ ಮತ್ತು ವಿಮೋಚನೆಯಾಗಿದೆ ಎನ್ನುತ್ತಾನೆ. ಗಝ್ಝಾಲಿ ಇಮಾಮರರ ವ್ಯಾಖ್ಯಾನವನ್ನು ನಂತರದ ಶತಮಾನಗಳಲ್ಲಿ ಅನೇಕ ಸೂಫಿಗಳು ಬಳಸಿದ್ದಾರೆ. ಮುಹಮ್ಮದ್ ರಿಲಾ ಕುಂಶಾಹಿ ‘ಯಾತ್ರೆ’ಯನ್ನು ಒಬ್ಬರು ತಾಯ್ನಾಡಿನಿಂದ ನಿರ್ಗಮಿಸುವುದು ಅಥವಾ ವಿವಿಧ ಹಂತಗಳನ್ನು ಹಾದುಹೋಗುವ ಮೂಲಕ ಗುರಿಗಳ ಕಡೆಗೆ ಸಾಗುವುದು ಎಂದು ಹೇಳಿದರು. ಒಬ್ಬರು ತಮ್ಮ ಹುಟ್ಟೂರಿನಿಂದ ಗಮ್ಯಸ್ಥಾನವನ್ನು ಹರಸಿ ಹೊರಡುವ ಪ್ರಯಾಣವೆಂದು ಸಯ್ಯದ್ ಜಲಾಲುದ್ದೀನ್ ವ್ಯಾಖ್ಯಾನಿಸಿದರು.
‘ಯಾತ್ರೆ’ಗೆ ಸಮಗ್ರವಾದ ವ್ಯಾಖ್ಯಾನವನ್ನು ನೀಡಿದ ಬಳಿಕ, ಗಝ್ಝಾಲಿ ಇಮಾಮರರು ಅದನ್ನು ಎರಡಾಗಿ ವಿಂಗಡಿಸುತ್ತಾರೆ. ಅವುಗಳಲ್ಲಿ ಒಂದು ವಾಸಸ್ಥಾನದಿಂದ ಗಮ್ಯದೆಡೆಗೆ ಹೊರಡುವ ಭೌತಿಕ ಪ್ರಯಾಣ ಮತ್ತು ಇನ್ನೊಂದು ಆಧ್ಯಾತ್ಮಿಕವಾದ ಆಂತರಿಕ ಹೃದಯದ ಪ್ರಯಾಣ. ಆತ್ಮವು ಅತ್ಯಂತ ಕೆಳಮಟ್ಟದ ಸ್ಥಿತಿಯಿಂದ ಅತ್ಯುನ್ನತ ಸ್ಥಿತಿಗೆ ಸಾಗುವ ಸಂಚಾರವಾಗಿದೆ. ಅವರ ಪ್ರಕಾರ, ಬಾಹ್ಯ ಸಂಚಾರಕ್ಕಿಂತಲೂ ಆಂತರಿಕವಾದ ಪ್ರಯಾಣ ಶ್ರೇಷ್ಠವಾದದ್ದಾಗಿದೆ. ಒಂದು ನಿರ್ದಿಷ್ಟ ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಭೌತಿಕ ಪ್ರಯಾಣವನ್ನು ಮಾಡುವವನು ಮತ್ತು ಹೃದಯದ ಮಾರ್ಗದ ಮೂಲಕ ಆಂತರಿಕವಾಗಿ ಪ್ರಯಾಣಿಸುವ ಇಬ್ಬರನ್ನೂ ಯಾತ್ರಿಕರಂತೆ ಇಮಾಮರು ಕಾಣುತ್ತಾರೆ. ಒಬ್ಬನು,ತೀರ್ಥಯಾತ್ರೆಯ(ಹಜ್ಜ್) ಬಳಿಕ ಮನೆಗೆ ಮರಳುವವನು ಮತ್ತು ಇನ್ನೋರ್ವನು ಬಳಿಕವೂ ಆ ಯಾತ್ರೆಯ ಫಲಶ್ರುತಿಯಂತೆ ಆಧ್ಯಾತ್ಮಿಕ ರಹಸ್ಯಗಳಿಗೆ ತೆರೆದುಕೊಳ್ಳುವವನಾಗಿದ್ದಾನೆ. ಯಾತ್ರೆಯು ಮನುಷ್ಯನಿಗೆ ಅಸಂಖ್ಯಾತ ಜನರೊಂದಿಗೆ ಸಂಪರ್ಕ ಸಾಧಿಸುವ ಸಾಮರ್ಥ್ಯ ಮತ್ತು ವಿವಿಧ ಪ್ರಪಂಚಗಳಿಗೆ ಪ್ರಯಾಣಿಸುವ ಅವಕಾಶವನ್ನು ನೀಡುತ್ತದೆ. ಈ ಪ್ರಯಾಣವು ಹೃದಯ ವೈಶಾಲ್ಯತೆಗೆ ಪುಷ್ಟಿ ನೀಡುತ್ತದೆ. ಯಾತ್ರೆಗಳಿಗೆ ಭಿನ್ನ ಅವಕಾಶಗಳಿರುವ ಮನುಷ್ಯನ ಬದುಕು ಈ ಕಾರಣಕ್ಕೆ ಅನನ್ಯವೂ ಗೌರವಯುತವೂ ಆಗಿರುತ್ತದೆ.
ಅಕ್ಬರಿಯನ್ ಯಾತ್ರೆಗಳು
ಶೈಕ್ ಇಬ್ನು ಅರಬಿ (ರ) ಯಾತ್ರೆಯನ್ನು ದೇವರೆಡೆಗೆ ಸೇರುವ ಏಕಾಗ್ರತೆಯಾಗಿದೆ ಎಂದು ಪ್ರಸ್ತಾಪಿಸಿದರು. ಮಾನವನು ಸರಿಯಾದ ವಾಸ್ತವತೆಯ ಕಡೆಗೆ (ಅಲ್ ಹಕ್ಕ್/ದೇವರು) ಚಲಿಸುತ್ತಿದ್ದಾನೆ ಮತ್ತು ನಿಜದಲ್ಲಿ ಮಾನವ ಅಸ್ಥಿತ್ವದ ಪ್ರತಿಯೊಂದು ಕ್ಷಣವೂ ದೇವನ ಮಾರ್ಗಕ್ಕೆ ಮರಳುವುದೇ ಆಗಿದೆ ಎಂದು ವಿವರಿಸಿದರು. ಅವರ ಪ್ರಕಾರ ದೇವರಿಂದ ಮತ್ತು ತನ್ನತನದಿಂದ ಕಳಚಿಕೊಳ್ಳಲು ಕೈಗೊಳ್ಳುವ ಯಾತ್ರೆಗಳ ಆತ್ಯಂತಿಕ ಗುರಿ ದೇವರನ್ನು ಸೇರುವುದೇ ಆಗಿದೆ.
ಕುರ್ಆನಿನಲ್ಲಿ ಪರಾಮರ್ಶಿಸಲಾದ ಯಾತ್ರೆಗಳ ಕುರಿತ ಸುಮಾರು ಹದಿನಾರು ಉಲ್ಲೇಖಗಳು, ಆಧ್ಯಾತ್ಮಿಕ ಯಾತ್ರೆಯ ನೆಲೆಗಟ್ಟಿನಲ್ಲಿ ಪಡೆದುಕೊಳ್ಳುವ ಸಾಕ್ಷಾತ್ಕಾರ ಮಾರ್ಗಗಳಾಗಿದೆ ಎಂದು ಇಬ್ನು ಅರಬಿ ಹೇಳುತ್ತಾರೆ. ಅವರು ಮುಖ್ಯವಾಗಿ ಯಾತ್ರೆಯನ್ನು
ವಾಸ್ತವದಿಂದ
ವಾಸ್ತವದ ಕಡೆಗೆ
ವಾಸ್ತವದ ಮೂಲಕ
ಎಂದು ಮೂರು ವಿಭಾಗಗಳಾಗಿ ವಿಂಗಡಿಸುತ್ತಾರೆ. ಎಲ್ಲಾ ಯಾತ್ರೆಗಳು ಮೂಲದಲ್ಲಿ ಸಮಸ್ಯೆಗಳಿಂದ ಕೂಡಿರುತ್ತದಾದರೂ ಆಧ್ಯಾತ್ಮಿಕ ಪ್ರಮಾಣಗಳಲ್ಲಿ ಎದುರಾಗುವ ಸಮಸ್ಯೆಗಳಿಂದ ಸೃಷ್ಟಿಕರ್ತನು ಯಾತ್ರಿಕನನ್ನು ರಕ್ಷಿಸುತ್ತಾನೆ ಎಂದು ಇವರು ಹೇಳಿದರು. ಕೇವಲ ತೀರ್ಥಯಾತ್ರೆಗಳಲ್ಲದೆ ವಾಸ್ತವದಿಂದ, ವಾಸ್ತವದ ಮೂಲಕ, ವಾಸ್ತವದ ಕಡೆಗೆ ತಲುಪುವ ಎಲ್ಲಾ ಪ್ರಯಾಣಗಳಲ್ಲಿಯೂ ಈ ರಕ್ಷಣೆ ಇರುತ್ತದೆಂದು ಇಬ್ನು ಅರಬಿ ಸೇರಿಸಿದರು.
ಸೂಫಿ ಪಂಥಗಳಲ್ಲಿ ತಮ್ಮ ಪ್ರೀತಿಪಾತ್ರರ (ದೇವರ)ಕಡೆಗೆ ನಡೆಸುವ ಸುದೀರ್ಘ ಪ್ರಯಾಣದಲ್ಲಿ, ಅವರು ಆತ್ಮದ ಸದ್ಗುಣಗಳು, ಚಾರಿತ್ಯ್ರ ಮತ್ತು ಪರಿಪೂರ್ಣತೆಯನ್ನು ಪಡೆದುಕೊಂಡು ಹಲವು ಹಂತಗಳನ್ನು ದಾಟಿ ತಿಳಿಗೊಳ್ಳುತ್ತಾ ಸಾಗುತ್ತಾರೆ. ಈ ನಿಟ್ಟಿನಲ್ಲಿರುವ ಇಬ್ನು ಅರಬಿಯ ಯಾತ್ರೆಯ ಕುರಿತಿರುವ ವ್ಯಾಖ್ಯಾನಗಳು ಮುಂದಕ್ಕೆ ವಿವಿಧ ಅಧ್ಯಯನಗಳಿಗೆ ಅವಕಾಶವನ್ನು ಮಾಡಿಕೊಟ್ಟಿತು. ಇವುಗಳ ಆಧಾರದಲ್ಲಿ ಯಾತ್ರೆಯನ್ನು ನಾಲ್ಕು ವಿಧಗಳಾಗಿ ವಿಂಗಡಿಸಲಾಯಿತು. ಈ ನಾಲ್ಕು ಯಾತ್ರೆಯ ಪರಿಕಲ್ಪನೆಯನ್ನು (,ಅಲ್ – ಅಸ್ಫರ್ ಅಲ್ – ಅರ್ಬ) ಅಫೀಫುದ್ದೀನ್ ಅಲ್ ತಿಲಿಮ್ಸಾನಿ ಅವರು ತಮ್ಮ ಗ್ರಂಥವಾದ ಮನಾಸಿಲ್ ಅಲ್ – ಸೌರೀನ್‌ನಲ್ಲಿ ಉಲ್ಲೇಖಿಸಿರುವುದು ಕಾಣಬಹುದು. ಅವು ಈ ಕೆಳಗಿನಂತಿವೆ; ದೇವರೆಡೆಗಿನ ಯಾತ್ರೆ, ದೇವರೊಂದಿಗಿನ ಯಾತ್ರೆ, ಸೃಷ್ಟಿಗಳ ಮೂಲಕ ದೇವರೆಡೆಗಿನ ಯಾತ್ರೆ, ವಾಸ್ತವದೆಡೆಗೆ ವಾಸ್ತವದ ಮೂಲಕವಿರುವ ಯಾತ್ರೆ. ಇಬ್ನು ಅರಬಿಯ ವ್ಯಾಖ್ಯಾನವನ್ನು ಆಧಾರವಾಗಿಟ್ಟುಕೊಂಡು ಅನೇಕ ವಿದ್ವಾಂಸರು ಆಧ್ಯಾತ್ಮಿಕ ಯಾತ್ರೆಗಳನ್ನು ವಿವರಿಸಿದರು. ದಾವೂದ್ ಅಲ್ – ಖೈಸರಿ ಆಧ್ಯಾತ್ಮಿಕ ಮತ್ತು ಅತೀಂದ್ರಿಯ ರೂಪಾಂತರಗಳನ್ನು ವಿವರಿಸಿ ಅವುಗಳನ್ನು ಈ ಕೆಳಗಿನಂತೆ ಸಂಕ್ಷಿಪ್ತಗೊಳಿಸಿದರು:
೧.ಸೃಷ್ಟಿಗಳ ಮೂಲಕ ವಾಸ್ತವಿಕತೆಯೆಡೆಗಿನ ಯಾತ್ರೆ.
೨.ವಾಸ್ತವದೊಂದಿಗೆ ವಾಸ್ತವಿಕತೆಯೆಡೆಗಿನ ಯಾತ್ರೆ.
೩.ವಾಸ್ತವದಿಂದ,ವಾಸ್ತವದ ಮೂಲಕ ಸೃಷ್ಟಿಗಳೆಡೆಗಿನ ಯಾತ್ರೆ.
೪.ವಾಸ್ತವಿಕತೆಯಿಂದ ಸೃಪ್ಟಿಗಳ ಕಡೆಗೆ ಯಾತ್ರೆ.
ಹೀಗೆ ಯಾತ್ರೆ, ಸಂಚಾರ, ಪ್ರಯಾಣ ಎಂಬುವುದನ್ನು ಭಿನ್ನ ಆಯಾಮಗಳಲ್ಲಿ ಸೂಫಿಗಳು ಕಂಡುಕೊಂಡರು. ಸೂಫಿ ಪಂಥಗಳು ಯಾತ್ರೆಯನ್ನು ಮೋಕ್ಷದ ಕೀಲಿಕೈಯಾಗಿ ಕಂಡು ಆ ಮೂಲಕ ಆಧ್ಯಾತ್ಮಿಕ ಉನ್ನತಿಯನ್ನು ಪಡೆದುಕೊಂಡರು.
ಮೂಲ ಲೇಖಕ: ಹಸನ್ ಆರಿಫ್
ಕನ್ನಡಕ್ಕೆ: ಝುಬೈರ್ ಅಹ್ಮದ್ ಪರಪ್ಪು