ಝಹರಾ, ಬೆಳಗಿನ ತಾರೆ(ವೀನಸ್ -ಶುಕ್ರ)

ಈ ಸೂರ್ಯ ಚಂದ್ರರ ಒಡನಾಟದ
ಸುಖವನ್ನು ಬಿಟ್ಟು ಬಿಡಲೇ
ಬೆಳಗಿನ ಸಂದೇಶವ ಸಾರುವ
ಈ ಸೇವೆಯನು ತ್ಯಜಿಸಿ ಬಿಡಲೇ

ಈ ನಕ್ಷತ್ರಗಳ ಲೋಕದಲ್ಲಿ
ಬದುಕುವುದು ನನಗೆ ಹೇಳಿದ್ದಲ್ಲ
ಈ ಶಿರವನೇರುವುದಕ್ಕಿಂತ
ಭುವಿಯ ಪಾದಕ್ಕಿಳಿಯುವುದೆ ಒಳಿತು

ಈ ಆಗಸವಿದೇನು? ಯಾರೊಬ್ಬರೂ
ಬದುಕಲಾರದ ನಾಡು
ಮುಂಜಾವಿನ ಬಿಳಿ ಬೆಳಕಿನಾ ದಾವಣಿಯೇ
ಶವ ವಸ್ತ್ರವಾಗುತಿದೆಯೆನಗೆ !

ಪ್ರತೀ ಮುಂಜಾನೆಯೂ ಹುಟ್ಟಿ –
ಸಾಯುವುದೇ ನನ್ನ ಹಣೆಬರಹ
ಮರಣವೆಂಬ ಮಧುಸುರಿಯುವವನಿಂದ
ಬೆಳಗಿನ ಮಧು ಕುಡಿಯುವ ಕರ್ಮ!

ಈ ಸೇವೆ ಈ ಪದವಿ ಈ ಔನ್ನತ್ಯವೇ
ಒತ್ತಟ್ಟಿಗಿರಲಿ
ಈ ಮಿನುಗುವ ಭ್ರಮೆಗಿಂತ
ಕತ್ತಲೆಯೇ ಅದೆಷ್ಟೋ ವಾಸಿ!

ವಿಧಿಲಿಖಿತವೊಂದು ಕೈಯಲ್ಲಿರುತ್ತಿದ್ದರೆ
ಈ ಗ್ರಹವಾಗಿ ತಿರುಗುತಿರಲಿಲ್ಲ
ಸಮುದ್ರದಾಳದಲ್ಲೊಂದು
ಮಿನುಗುವ ಮುತ್ತಾಗುತ್ತಿದ್ದೆ!

ಅಲ್ಲಿಯೂ ಅಲೆಗಳ ತುಯ್ದಾಟಕ್ಕೆ
ಮನಕೆ ಭಯವಾಗುತಿದ್ದರೆ
ಯಾವುದಾದರು ಸರವೊಂದಕ್ಕೆ
ಸೇರಿಕೊಂಡು ಪದಕವಾಗುತ್ತಿದ್ದೆ!

ಹಾ! ಆ ಸುಂದರಿಯೊಬ್ಬಳ ಕೊರಳಲ್ಲಿ
ಆಭರಣವಾಗಿ ಮಿನುಗುವುದೆಂದರೇನು
ಸೀಸರನ ರಾಣಿಯ ಮುಕುಟದಲಿ
ವಜ್ರದಂತೆ ಹೊಳೆಯುವುದೆಂದರೇನು!

ಸಣ್ಣ ಕಲ್ಲೊಂದರ ಅದೃಷ್ಟವೊಂದು
ತುಸು ಬದಲಾದರೆ ಸಾಕು
ಸುಲೈಮಾನರ ಉಂಗುರದ
ನತ್ತಾಗಲು ಅಷ್ಟೇ ಸಾಕು!

ಅದರೂ ಈ ಜಗದಲ್ಲಿ ಯಾವುದೂ
ಒಡೆದು ಹೋದರೆ ಮುಗಿದೇ ಹೋಯಿತು
ಭಗ್ನವಾಗುವುದೇ ಈ ಮುತ್ತುಗಳ
ನಿಜವಾದ ಸಾವು!

ಸಾವನರಿಯದೆ ಬದುಕುವುದೇ
ನಿಜವಾದ ಬದುಕು
ಅದೊಂದು ಜೀವನವೇ ಅಲ್ಲಿ
ಬರೀ ಸಾವೇ ಒಂದು ಬದುಕು!

ಇದೊಂದು ಈ ಭುವಿಯ
ಅಂತಿಮ ಅಲಂಕಾರವಾಗಿದ್ದರೆ
ಅಲ್ಲಿ ಕೆಲವು ಕುಸುಮಗಳ ಮೇಲೆ
ನಾ ಇಬ್ಬನಿಯಾಗಿ ಸುರಿಯಬಾರದೇಕೆ!

ಶ್ರಮಿಕರ ಹಣೆಯಲ್ಲಿ
ಹೊಳೆಯುವ ಬೆವರ ಹನಿಯಾಗಲೇ
ದಲಿತ ದಮನಿತರ ನಿಟ್ಟುಸಿರಿನಲಿ
ಹೊರಹೊಮ್ಮುವ ಕಿಡಿಯಾಗಲೇ!

ಯಾರದೋ ಕಣ್ರೆಪ್ಪೆಗಳಲಿ
ಬಂಧಿಯಾಗುವ ಹನಿಯಾಗಲೇ
ಆ ನಾರಿಯ ಕಣ್ಣಿಂದ ಹನಿ ಹನಿಯಾಗಿ
ತೊಟ್ಟಿಕ್ಕಿ ಬಿಡಲೇ!

ಯುದ್ಧ ಸನ್ನದ್ಧನಾಗಿ ಹೊರಟಿರುವ
ಆಕೆಯ ಗಂಡನನ್ನು
ದೇಶಸೇವೆಯ ಕರ್ತವ್ಯದಲಿ
ಹೊರಡುತಿಹ ದೇಶಪ್ರೇಮಿಯನ್ನು

ಕಠಿಣತೆಯಲ್ಲೂ
ಕೆಚ್ಚೆದೆಯಿಂದ ಹೋರಾಡುವವನ
ತನ್ನ ಮೌನದಲ್ಲೇ
ಮಾತನ್ನು ನಾಚಿಸುವವನ!

ಅಗಲಿಕೆಯ ಕ್ಷಣದಲ್ಲಿ
ನೋವಿನಿಂದಲೆ ಬಾಡುತಿರುವ ಮುಖವನ್ನು
ವಿರಹದ ನೋವಿನಲೂ
ಆತನನು ಸೆಳೆಯುತಿಹ ಸೌಂದರ್ಯದಲ್ಲಿ

ಎಷ್ಟೇ ತಡೆದುಕೊಂಡರೂ ಆಕೆ
ನಾ ಹರಿದುಬಿಡುವೆ
ಆ ಪೌರ್ಣಮಿಯ ಕಂಗಳಿಂದ
ನಾನೊಮ್ಮೆ ಚಿಮ್ಮಿಬಿಡುವೆ!

ಭುವಿಯ ಮಣ್ಣಿನಲಿ ಕಲೆತು
ಬದುಕಿನ ಅನಂತತೆಯಲಿ ಒಂದಾಗುವೆ
ಹೋಗುತ್ತಾ ಈ ಪ್ರೇಮದ ಸಂದೇಶವನು
ಜಗದಗಲ ಸಾರಿಬಿಡುವೆ!!

ಉರ್ದು ಮೂಲ: ಅಲ್ಲಾಮಾ ಇಕ್ಬಾಲ್
ಅನುವಾದ: ಪುನೀತ್ ಅಪ್ಪು

Leave a Reply

*