ಹಳದಿ ಬಣ್ಣವುಳ್ಳ ಸೌತ್ ಆಫ್ರಿಕಾದ ಗ್ರಂಥಗಳು

ಡಚ್ಚರು ವರ್ಣಭೇದ ನೀತಿಯ ಅಂಗವಾಗಿ ‘ಕರಿಯರು’ ಎಂದು ಮುದ್ರೆಯೊತ್ತಿ ಹದಿನೇಳು, ಹದಿನೆಂಟನೇ ಶತಮಾನದಲ್ಲಿ ಮುಸ್ಲಿಮರನ್ನು ಆಗ್ನೇಯ ಏಷ್ಯಾ ಹಾಗೂ ಆಫ್ರಿಕಾದ ವಿವಿಧ ಭಾಗಗಳಿಂದ ಗುಲಾಮರಾಗಿಯೂ ರಾಜಕೀಯ ಖೈದಿಗಳಾಗಿಯೂ ಕೇಪ್‌‌ ಪಟ್ಟಣಕ್ಕೆ ಕರೆತಂದರು. ‘ಕೇಪ್ ಮಲಾಯ್’ ಮುಸ್ಲಿಮರು ಸಾಂಪ್ರದಾಯಿಕ ಸೊತ್ತಾಗಿ ಧಾರ್ಮಿಕ ಗ್ರಂಥಗಳಿಗೆ ಕಣ್ಣಾಡಿಸುವುದು ವಾಡಿಕೆ. ಹತ್ತೊಂಬತ್ತನೆ ಶತಮಾನದ ಪೂರ್ವಾರ್ಧದಲ್ಲಿ ಭಾರತದಿಂದಲೂ ಬೆರಳೆಣಿಕೆಯಷ್ಟು ಮುಸ್ಲಿಂ ವ್ಯಾಪಾರಿಗಳು ಕೇಪ್‌ಗೆ ಹೋಗಿದ್ದರು. 2014 ರ ಜನಗಣತಿ ಪ್ರಕಾರ ಅವರ ಜನಸಂಖ್ಯೆಯು ಪಶ್ಚಿಮ ಕೇಪ್‌ನ ಒಟ್ಟು ಜನಸಂಖ್ಯೆಯ ಕೇವಲ 7.5%ರಷ್ಟು ಮಾತ್ರ. 1838 ರಲ್ಲಿ ಗುಲಾಮಗಿರಿ ಅಧಿಕೃತವಾಗಿ ಕೊನೆಗೊಂಡರೂ ಜನರನ್ನು ಜನಾಂಗಿಯವಾಗಿ ಬೇರ್ಪಡಿಸುವ 1948 ರ ವರ್ಣಭೇದ ನೀತಿಯು ಬಂದ ಮೇಲೆ ಬಿಳಿಯರ ಅಧೀನದಲ್ಲಿ ಕೇಪ್ ಮುಸ್ಲಿಮರು ಜೀವಿಸಬೇಕು ಎಂಬ ನಿಯಮವೊಂದಿತ್ತು. ಧರ್ಮವು ಆ ಜನರನ್ನು ಪರಸ್ಪರ ಕೊಂಡಿಯಾಗಿ ಬೆಸೆಯಿತು ಅನ್ನಬಹುದು. ಫ್ಯಾಮಿಲಿ ಮೀಟ್‌ಗಳಲ್ಲಿಯೂ ಇತರ ಕೂಟಗಳಲ್ಲಿಯೂ ಧಾರ್ಮಿಕ ಅಧ್ಯಾಪಕರೋ ಕುಟುಂಬದ ಹಿರಿಯ ಸದಸ್ಯರೋ ಗ್ರಂಥಗಳ ಕೆಲ ಭಾಗಗಳನ್ನು ಬರೆದು, ಆ ಭಾಗವನ್ನು ಓದಿ ಕೇಳಿಸುತ್ತಿದ್ದರು. ಅವರು ಮಂಡಿಸುತ್ತಿರುವ ವಿಷಯ ಖುರ್‌ಆನಿನ ಅಧ್ಯಾಯಗಳು ಹಾಗೂ ಸುವಿಶೇಷ ವಾರ್ತೆಗಳಾಗಿತ್ತು.

ವರ್ಣಭೇದ ನೀತಿಯ ಅಂತ್ಯದ ತರುವಾಯ ಕೇಪ್ ಮುಸ್ಲಿಮರು ಇತಿಹಾಸ ಸವಿಯಲು, ಬರೆಯಲು ಮುಹೂರ್ತವಿಟ್ಟರು. ಈ ಕರಾಳ ದಿನಗಳ ಬಳಿಕ ಗ್ರಂಥಗಳ ಒಡನಾಟ ದಿನೇ ಹೆಚ್ಚುತ್ತಾ ಹೋದವು. “ನನ್ನೊಂದಿಗೆ ಅನೇಕ ಕಿತಾಬುಗಳು, ಮಣ್ಣಿನ ಪಾತ್ರೆಗಳಿವೆ..” ಎಂದು ಸಾಂಪ್ರದಾಯಿಕವಾಗಿ ಕಿತಾಬುಗಳನ್ನು ಸಂರಕ್ಷಿಸುವ ಅಬ್‌ದಿಯ್ಯ ನಮ್ಮೊಂದಿಗೆ ಹಂಚಿಕೊಂಡರು. ಕಳೆದ ಅಕ್ಟೋಬರ್ ತಿಂಗಳು ‘ಐತಿಹಾಸಿಕ ದಿನ’ವಾದ್ದರಿಂದ ಅಬ್‌ದಿಯ್ಯಾರ ಮನೆಯ ಸುತ್ತ-ಮುತ್ತಲೂ ಜನ ಸೇರಿದ್ದರು. “ನಾನು ಈ ಮನೆಯಲ್ಲಿ ಜನಿಸಿದೆ, ಇದೇ ಮನೆಯಲ್ಲಿ ಮರಣ ಹೊಂದುವೆನು, ಇನ್ಶಾ ಅಲ್ಲಾಹ್” ಕಿತಾಬುಗಳ ಕುರಿತು ಕೇಳುವ ಮೊದಲೇ ಅಬ್‌ದಿಯ್ಯಾ ಮುಂದುವರಿಸಿದರು! ವಾಸ್ತವದಲ್ಲಿ ಈ ಮನೆಯ ಐತಿಹ್ಯಗಳಿಗೆ ಅಬ್‌ದಿಯ್ಯಾಕ್ಕಿಂತಲೂ ಪ್ರಾಯವಿದೆ. ಕಿತಾಬುಗಳೊಂದಿಗೆ ನಿಕಟ ಸಂಪರ್ಕವೂ ಇದೆ. ಅವರ ತಂದೆ ಇಮಾಂ ಶೈಖ್ ಮುಹಮ್ಮದ್ ಖೈರ್ ಇಸ್ಹಾಖ್ ಖುರ್‌ಆನ್ ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ಮನೆಯ ಅಂಗಳದಲ್ಲಿ ಮದ್ರಸಾ ಪ್ರಾರಂಭಿಸಿದ್ದರು. ಅವರು ಹುಡುಗರಿಗೂ, ಅಬ್‌ದಿಯ್ಯಾರ ತಾಯಿ ಹುಡುಗಿಯರಿಗೂ ಕಲಿಸುತ್ತಿದ್ದರು. ನಂತರ ಅಬ್‌ದಿಯ್ಯಾರ ಪತಿ ಸುಲೈಮಾನ್ ಕೂಡಾ ಮದ್ರಸಾ ಅಧ್ಯಾಪಕರಾಗಿ ಸೇವೆ ಸಲ್ಲಿಸಿದರು. ಅಬ್‌ದಿಯ್ಯಾರ ಸಹೋದರಿಯರ ಪೈಕಿ ಮದ್ರಸಾದ ಅಧ್ಯಾಪಕಿಯಾಗಿ ಅವಳು ಮಾತ್ರ ಇದ್ದಳು.

ಅಬ್‌ದಿಯ್ಯಾರ ಚಿಂತನೆಗಳು ಜನನಿಬಿಡವಾದ ಆ ಪೌರಾಣಿಕ ಕಾಲದ ನೆನಪುಗಳಿಗೆ ಹೊತ್ತೊಯ್ದವು. ಪ್ರಾತಃಕಾಲದ ತರಗತಿಗಳು ಶಿಶುವಿಹಾರದ ಬಗ್ಗೆ ಕನವರಿಸಿಸುತ್ತಿದ್ದವು. ಆ ಸಮಯದಲ್ಲಿ ಅರಬಿ ಅಕ್ಷರ ಹಾಗೂ ಕೆಲ ಮೂಲಪದವನ್ನು ಪರಿಚಯಿಸಲಾಗುತ್ತಿತ್ತು. ಮಧ್ಯಾಹ್ನದ ತರಗತಿ, ಪಾರಾಯಣಕ್ಕೆ ಸಂಬಂಧಿಸಿದ ನಿಯಮಾವಳಿಗಳ ಪಠಣಕ್ಕಾಗಿ ಶೆಡ್ಯೂಲ್ ಮಾಡಿದ್ದರು. ಸಂಧ್ಯಾ ವೇಳೆ ಯುವಕ ಯುವತಿಯರ ಆಳ- ಗಂಭೀರ ಚರ್ಚೆಗಳನ್ನು ಏರ್ಪಾಡು ಮಾಡಲಾಗುತ್ತಿತ್ತು. “ಒಟ್ಟಿಗೆ ಅಧ್ಯಯನ ನಡೆಸುವುದರಿಂದ ಗಹನವಾದ ವಿಷಯಗಳು ವೇದ್ಯವಾಗುತ್ತಿತ್ತು..” ಎಂಬುದು ಅವರ ಅನಿಸಿಕೆ. ಎಲ್ಲಾ ವಿದ್ಯಾರ್ಥಿಗಳ ಬಳಿ ಪಠ್ಯ ಬರೆದಿಟ್ಟು ಸಂರಕ್ಷಿಸಲು ಕಿತಾಬುಗಳಿದ್ದವು. ಪಠ್ಯ ಭಾಗಗಳನ್ನು ನಕಲಿಸಿ ಬರೆಯಲು ಉಪಯೋಗಿಸುವ ಪುಸ್ತಕಗಳಿಗೂ ‘ಕಿತಾಬ್’ ಎಂದು ವಿಶೇಷವಾಗಿ ಕರೆಯುತ್ತಿದ್ದರು. ಇಂದೂ ಕೂಡ ಅಬ್‌ದಿಯ್ಯಾ ಖುರ್‌ಆನ್ ಮನಮೋಹಕರವಾಗಿ ಪಠಿಸುತ್ತಾರೆ. ನಮ್ಮ ಒತ್ತಾಯದ ಮೇರೆಗೆ ಅಬ್‌ದಿಯ್ಯಾ ಕಿತಾಬುಗಳು ಸಂರಕ್ಷಿಸಿದ ಮನೆಯ ಒಳಭಾಗಕ್ಕೆ ಕರೆದೊಯ್ದರು. ಹಳೆ ಕಾಲದ ಮೂಲ ಬಣ್ಣ ಮರೆಯಾದ, ಅವರ ತಂದೆಯ ಎರಡು ಕೈಬರಹದ ಪ್ರತಿ ಜೋಡಿಸಿಟ್ಟಿದ್ದರು. ಧಾರ್ಮಿಕ ಅಧ್ಯಾಪಕರ ಅಕ್ಷರಗಳಲ್ಲಿ ಪಡಿಮೂಡಿದ ಆ ಕಿತಾಬುಗಳು ಕೇವಲ ನಕಲಿಸಿ ಬರೆದ ಪ್ರತಿಯಾಗಿ ನೋಡಲು ಸಾಧ್ಯವಾಗಲಿಲ್ಲ. ಅದರಲ್ಲೊಂದು ಕಿತಾಬ್ ‘ಜಾವಿ’ (ಅರೇಬಿಕ್ ಲಿಪಿ ಉಪಯೋಗಿಸುವ ಮೊದಲು ಆಗ್ನೇಯ ಏಷ್ಯ ಭಾಷೆ) ಭಾಷೆಯಲ್ಲಿ ವಿರಚಿತವಾಗಿದ್ದವು. ಎರಡನೇ ಕಿತಾಬ್ ಆಫ್ರಿಕನ್ ಅರೇಬಿಕ್ ಭಾಷೆಯಲ್ಲಿತ್ತು. ‘ವರ್ಷ-1871’ ಎಂದು ಲಗತ್ತಿಸಿದ/ಸೂಚನೆಯಿರುವ ಅಪೂರ್ವ ಸಂಗ್ರಹವಾದ ಈ ಕಿತಾಬ್‌ಗಳು ನೋಡುಗರನ್ನು ಆಕರ್ಷಿಸುವುದಂತೂ ಗ್ಯಾರಂಟಿ.

ಡಚ್‌ನಿಂದ ದಕ್ಷಿಣ ಆಫ್ರಿಕಾದ 11 ಅಧಿಕೃತ ಭಾಷೆಗಳಲ್ಲಿ ಒಂದಾದ ‘ಆಫ್ರಿಕಾನ್ಸ್’ ರೂಪ ತಾಳಿದವು. 1814 ರಲ್ಲಿ ಡಚ್ಚರು ಕೇಪ್‌ಟೌನ್ (Cape Town) ಅನ್ನು ಬ್ರಿಟಿಷರಿಗೆ ಬಿಟ್ಟು ಕೊಡುವ ಮುಂಚೆ Dutch East India Company ಅಲ್ಲಿ ವಸಾಹತು ಆಳ್ವಿಕೆ ನಡೆಸುತ್ತಿದ್ದವು. ಇದಲ್ಲದೆ ಮಲಾಯ್, ಇಂಗ್ಲೀಷ್, ಪೋರ್ಚುಗೀಸ್ ಮತ್ತು ಸ್ಥಳೀಯ ಖೋಯಿ ಭಾಷೆಗಳೂ ಆಫ್ರಿಕನ್ಸ್‌ರನ್ನು ಸ್ವಾಧೀನಿಸಿತು. 1820 ರಲ್ಲಿ ಆಫ್ರಿಕನ್ಸ್‌ನಲ್ಲಿ ಬರಹ ಪ್ರಾರಂಭಿಸಿದರು ಎಂದು ಉಲ್ಲೇಖಿಸಲಾಗಿದೆ. ಕಿತಾಬಿನ ಪ್ರಧಾನ ಭಾಗಗಳನ್ನು ಬರೆದು ಸಂರಕ್ಷಿಸಿಡಲು ಅರೇಬಿಕ್ ಲಿಪಿ ಉಪಯೋಗಿಸಿ ಕಾರ್ಯ ಪ್ರವೃತ್ತರಾದರು. 1950 ರ ದಶಕದಲ್ಲಿ ಅರೆಬಿಕ್ ಲಿಪಿ ಬಳಸಿ ಬರೆಯಲ್ಪಟ್ಟ ಆಫ್ರಿಕನ್ ಮಾತುಗಳೊಂದಿಗೆ ಲಿಖಿತ ಪದಗಳನ್ನು ಕಂಡುಹಿಡಿದ ಡಚ್ ಭಾಷಾ ಶಾಸ್ತ್ರಜ್ಞ ಆಡ್ರಿಯನ್ಸ್ ವ್ಯಾನ್ ಸೆಲ್ಮಾಸನ್ ‘ಆಫ್ರಿಕನ್ ಅರೇಬಿಕ್’ ಎಂಬ ಪದ ಮೊದಲನೆಯದಾಗಿ ಪ್ರಯೋಗಿಸಿದರು. ಖ್ಯಾತ ವಿದ್ವಾಂಸ ಅಬೂಬಕರ್ ಎಫಂದೀರವರ ಆಫ್ರಿಕನ್ ಅರೇಬಿಕ್‌ ಭಾಷೆಯ ಅತ್ಯಂತ ಹಳೆಯ ಕೃತಿ ‘ಧಾರ್ಮಿಕ ವ್ಯಾಖ್ಯಾನ’ (Beyan al-Din) ಎಂದು ಪರಿಗಣಿಸಲಾಗಿದೆ. ಹಲವಾರು ಆಫ್ರಿಕನ್-ಅರೇಬಿಕ್ ಗ್ರಂಥಗಳಿದ್ದರೂ ಆಫ್ರಿಕನ್ ಅರೇಬಿಕ್‌ನ ಪರಿಣಾಮಕಾರಿ ಬಳಕೆಯು ಗ್ರಾಮಾಂತರದಲ್ಲಿ ವಿರಚಿತವಾದ ಕಿತಾಬ್‌ಗಳಲ್ಲಿ ಕಂಡುಬರುತ್ತದೆ ಎಂದು ಭಾಷಾಶಾಸ್ತ್ರಜ್ಞರ ನಿಲುವು. ಹೊರತಾಗಿ ಅಧಿಕೃತ ಭಾಷೆಯಾಗಿ ಸ್ಥಾನಮಾನ ನೀಡದ ಕಾರಣ 1925 ರವರೆಗೆ ಅಲ್ಲಿನ ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಕಲಿಸಲಾಗಲಿಲ್ಲ. ಕೆಲ ಅಪೂರ್ವ ಚರ್ಚೆಗಳ ಬಳಿಕ ಅಬ್‌ದಿಯ್ಯಾ ನಮಗೆ ಆಫ್ರಿಕನ್ ಅರೇಬಿಕ್ ಭಾಷೆಯ ಕಿತಾಬ್ ಓದಿ ಕೇಳಿಸುವೆ ಎಂದು ತಿಳಿಸಿ, ಕನ್ನಡಕ ಧರಿಸಿ ಓದಲು ಶುರುವಿಟ್ಟಾಗ ಭಾವನಾತ್ಮಕವಾಗಿ ಸೂಚಿಸಿದರು. “ಇಲ್ಲ, ನನಗದು ಸಾಧ್ಯವಿಲ್ಲ. ಓದಿ ಬಹಳ ಸಮಯವಾಯಿತು. ಎಲ್ಲವೂ ಕಳೆದುಹೋಗಿವೆ..!” ಇದೊಂದು ಧೃಢವಿಶ್ವಾಸವೆಂದು ನಾವು ಭಾವಿಸಿದೆವು. ತನ್ನ ಪತಿಯ ಸ್ಮರಣಾರ್ಥ ಅವರು ರಚಿಸಿದ ಒಂದು ಕವಿತೆ ಹೇಳಿಕೊಡುವ ಮೂಲಕ ನಮ್ಮ ದಾಹ ತೀರಿಸುವ ಸಲುವಾಗಿ ನೀರುಣಿಸಿ ಶ್ರಮಪಟ್ಟರು.

ಅಬ್‌ದಿಯ್ಯಾರ ಕುಟುಂಬ ಪರಂಪರೆ ಇಂಡೋನೇಷ್ಯಾದ ದ್ವೀಪ ಸಮೂಹದಲ್ಲಿರುವ ಸುಗಂಧ ದ್ರವ್ಯದ ‘ವ್ಯಾಪಾರ ಕೇಂದ್ರ’ ಟಿಡೋರ್‌ನ (Tidore) ಇಮಾಂ ಅಬ್ದುಲ್ಲಾಹ್ ಖಾದ್‌ರಿಯ್ಯ್‌ಗೆ ಮುಟ್ಟುತ್ತದೆ. ಬ್ರಿಟಿಷರಿಗೆ ಸಹಾಯ ಮಾಡಿದ ಎಂಬ ನೆಪವೊಡ್ಡಿ 1780 ರಲ್ಲಿ ಡಚ್ಚರು ಖೈದಿಯಾಗಿ ಕೇಪ್ ಟೌನ್‌ಗೆ ಕರೆದೊಯ್ದರು. ನೆಲ್ಸನ್ ಮಂಡೇಲಾ ಹದಿನೆಂಟು ವರ್ಷ ಜೈಲು ಶಿಕ್ಷೆ ಅನುಭವಿಸಿದ ರೋಬನ್ ದ್ವೀಪದ (Robben Island) ಜೈಲಿನಲ್ಲಿ ಅವರಿಗೆ ಹತ್ತು ವರ್ಷದ ಶಿಕ್ಷೆ ವಿಧಿಸಲಾಯಿತು. ಅಲ್ಲಿ ಖುರ್‌ಆನಿನ ಅನೇಕ ಕೈಬರಹದ ಪ್ರತಿ ಅವರು ಬರೆದರು. ಜೈಲಿನಿಂದ ಬಿಡುಗಡೆಯಾದ ಕೂಡಲೇ ಆಫ್ರಿಕಾದ ಮೊದಲ ಮಸೀದಿ ‘ಅವ್ವಲ್ ಮೋಸ್ಕ್’ಗೆ ಶಿಲಾನ್ಯಾಸ ನೆರವೇರಿಸಿದರು.

ಅಬ್‌ದಿಯ್ಯಾರೊಂದಿಗಿನ ಸಂಭಾಷಣೆಯ ಬಳಿಕ ಅವರ ಅಕ್ಕ-ಪಕ್ಕದವರೊಂದಿಗೆ ನಾನು ಸಂವಾದಿಸಿದೆ. ಕಿತಾಬಿನ ಕುರಿತು ಕೇಳಿದಾಗಲೆಲ್ಲ ಅವರ ನೀಡಿದ ಮಾಹಿತಿಯಿಂದ ಗಂಭೀರವಾಗಿ ಪರಿಗಣಿಸಲಿಲ್ಲ ಎಂದು ವೇದ್ಯವಾಯಿತು. ಅದರಲ್ಲಿ ಒಂದು ಕುಟುಂಬ ಪ್ರಸಿದ್ಧ ಪಂಡಿತ ಅಶ್‌ಮಾತ್ ಡೇವಿಡ್‌ರ ಮನೆಗೆ ಕರೆದುಕೊಂಡು ಹೋದರು. ಅವರು ತನ್ನ ಜೀವನದ ಸಿಂಹಭಾಗ ಆಫ್ರಿಕನ್ ಅರೇಬಿಕ್ ಪಠಿಸಲು ಮೀಸಲಿಟ್ಟವರು. 1998 ರಲ್ಲಿ ತನ್ನ 59 ನೇ ವಯಸ್ಸಿನಲ್ಲಿ ನಿಧನರಾದಾಗ ಕಿತಾಬುಗಳ ನಿಗೂಢ ರಹಸ್ಯ ವರ್ಧಿಸಿದವು. ಅವರು ವಾಸಿಸುತ್ತಿದ್ದ ಮನೆ ಇಂದು ವಿದೇಶಿ ವಿದ್ಯಾರ್ಥಿಯರು ಬಾಡಿಗೆ ಪಡೆದಿದ್ದಾರೆ. ಅವರು ಯಾರು! ಅವರ ಕಿತಾಬುಗಳು ಎಲ್ಲಿವೆ..!? ಎಂದು ಯಾರಿಗೂ ಖಂಡಿತಾ ತಿಳಿದಿಲ್ಲ. ಕೆಲವರು ಅವರ ಸಹೋದರಿಯನ್ನೂ ಇನ್ನು ಕೆಲವರು ಎರಡನೇ ಪತ್ನಿಯನ್ನು ಸಂಪರ್ಕಿಸಲು ಸೂಚಿಸಿದರು. ದುರದೃಷ್ಟವಶಾತ್ ಎಲ್ಲವೂ ವಿಫಲವಾಯಿತು. ಅಬ್‌ದಿಯ್ಯಾರ ಪರಂಪರೆಯ ಉಳಿದ ಭಾಗಗಳಿರುವಂತೆ ಆಫ್ರಿಕನ್ ಅರೇಬಿಕ್ ಭಾಷೆಯ ಪರಿಜ್ಞಾನ ಹೊಂದಿರುವವರು ಭಾರೀ ವಿರಳ!

ಮೂಲ- ಆಲಿಯಾ ಯೂನಿಸ್
ಅನು- ಅಶ್ರಫ್ ನಾವೂರು

Leave a Reply

*