ವಿಶ್ವವಿದ್ಯಾಲಯ ಎಂದರೇನು? ಒಂದು ಹುಡುಕಾಟ (ಭಾಗ-1)

“ವಿಶ್ವವಿದ್ಯಾಲಯ ಎಂದರೇನು?” ಇದೊಂದು ದೊಡ್ಡ ಪ್ರಶ್ನೆ.

ಈ ಪ್ರಶ್ನೆಯೊಂದಿಗೆ ಅನುಸಂಧಾನ ನಡೆಸಲು ಸಹೋದ್ಯೋಗಿಗಳು ನನ್ನನ್ನು ಕೇಳಿದರೆ ನನಗೆ ಗಾಬರಿ ಆಗುತ್ತದೆ. ಇದನ್ನು ಇತ್ಯರ್ಥಪಡಿಸಲು ಸಾಧ್ಯವೇ ಎಂದು ಯೋಚಿಸಿ ಭಯ ಆವರಿಸುತ್ತದೆ. ಅದಾಗ್ಯೂ, ನನ್ನ ಜೀವನದುದ್ದಕ್ಕೂ ನಾನು ಯೋಚಿಸುತ್ತಾ ಬಂದಿರುವ ಈ ವಿಷಯದ ಬಗ್ಗೆ ಮಾತನಾಡುವುದು ನನಗಂತೂ ರೋಮಾಂಚನಕಾರಿ ಅನುಭವ ನೀಡುತ್ತದೆ. ಇದು ಭಯಂಕರ ಪ್ರಶ್ನೆಯಾಗಿದ್ದು, ಸಮರ್ಪಕವಾದ ಉತ್ತರ ನೀಡುವುದು ದೊಡ್ಡ ಸವಾಲೇ ಸರಿ. ಈ ಪ್ರಶ್ನೆಗೆ ಅಂತಿಮ ಉತ್ತರ ನೀಡಲು ನನ್ನಿಂದ ಸಾಧ್ಯವಿಲ್ಲ. ಆದರೆ ವಿಶ್ವವಿದ್ಯಾನಿಲಯ ಎಂದರೇನು ಎಂಬುದರ ಕುರಿತು ನಮಗೆ ಒಟ್ಟಾಗಿ ಯೋಚಿಸಲು ಸಾಧ್ಯವಿದೆ. ನನ್ನ ಆಲೋಚನೆಗಳನ್ನು ಮತ್ತು ಅನುಭವಗಳನ್ನು ಮೊದಲು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ. ವಿಶ್ವವಿದ್ಯಾಲಯ ಎಂದರೇನು ಮತ್ತು ಹೇಗಿರಬೇಕು ಎಂಬ ನನ್ನ ಭವಿಷ್ಯದ ದೃಷ್ಟಿಕೋನವನ್ನು ಸಹ ನಿಮ್ಮ ಮುಂದಿಡುತ್ತೇನೆ.

ಜಾಗತಿಕ ಸಂಶೋಧನಾ ವಿಶ್ವವಿದ್ಯಾಲಯ

ಪ್ರಪಂಚದ ವಿವಿಧ ಮೂಲೆಗಳಿಂದ ಆಗಮಿಸಿ ವಿವಿಧ ಆಸಕ್ತಿಕರ ವಿಷಯಗಳಲ್ಲಿ ಸ್ನಾತಕೋತ್ತರ ಮತ್ತು ಡಾಕ್ಟರೇಟ್ ಪದವಿ ವ್ಯಾಸಂಗ ನಡೆಸುತ್ತಿರುವ ಇಬ್ನ್ ಖಲ್ದೂನ್ ವಿಶ್ವವಿದ್ಯಾನಿಲಯದ (IHU) ವಿದ್ಯಾರ್ಥಿಗಳು ಮತ್ತು ನನ್ನ ನೆಚ್ಚಿನ ಸಹೋದ್ಯೋಗಿಗಳು ತುಂಬಿರುವ ಈ ಸಭೆಯಲ್ಲಿ ಮಾತನಾಡಲು ಬಹಳ ಸಂತೋಷ ಎನಿಸ್ತಿದೆ. ಅನೇಕ ವರ್ಷಗಳ ಪ್ರಯತ್ನದಿಂದ ಗಳಿಸಿದ ಅಮೂಲ್ಯವಾದ ಜ್ಞಾನ ಮತ್ತು ಅನುಭವಗಳನ್ನು ಇಬ್ನ್ ಖಲ್ದುನ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು ನಿಮಗೆ ಧಾರೆಯೆರೆಯುತ್ತಿದ್ದಾರೆ. ಮಾನವ ಜನಾಂಗ ಎದುರಿಸುತ್ತಿರುವ ಸವಾಲುಗಳನ್ನು ಸಮರ್ಪಕವಾಗಿ ನಿಭಾಯಿಸಬಲ್ಲ ಹೊಸ ಆಲೋಚನೆಗಳನ್ನು ಉತ್ಪಾದಿಸಲಿಕ್ಕಾಗಿ ಪ್ರಪಂಚದ ವಿವಿಧ ಕಡೆಯ ಗುಣಮಟ್ಟದ ಪ್ರಾಧ್ಯಾಪಕರನ್ನು ಇಲ್ಲಿ ಒಟ್ಟುಗೂಡಿಸಿದ್ದೇವೆ. ಈ ಮೇರು ಮನಸ್ಸಗಳು ಸರಿಯಾದ ಪೋಷಕತೆಯೊಂದಿಗೆ ಇನ್ನಷ್ಟು ಪುಷ್ಟಿ ಪಡೆಯಲು ಅನುವು ಮಾಡಿಕೊಡುವ ಉತ್ತಮ ವಾಸಸ್ಥಳವನ್ನೇ ಇಲ್ಲಿ ಸಂಯೋಜಿಸಿದ್ದೇವೆ. ಕಾನೂನು, ಮಾನವಿಕ ಹಾಗೂ ಸಮಾಜ ವಿಜ್ಞಾನ ಮತ್ತು ಇಸ್ಲಾಮಿಕ್ ಅಧ್ಯಯನಗಳಲ್ಲಿ ಪರಿಣತವಾದ ವಿಭಾಗಗಳಿರುವ ಟರ್ಕಿಯ ಮೊಟ್ಟಮೊದಲ ಸಂಶೋಧನಾ ವಿಶ್ವವಿದ್ಯಾಲಯವಾದ ಇಬ್ನ್ ಖಲ್ದೂನ್ ವಿಶ್ವವಿದ್ಯಾಲಯದ ಭಾಗವಾಗುವ ಮೂಲಕ “ಅಲಯನ್ಸ್ ಆಫ್ ಸಿವಿಲೈಸೇಶನ್ಸ್ ಇನ್ಸ್ಟಿಟ್ಯೂಟ್” (ಎಸಿಐ) ಸಹ ಒಂದು ಉತ್ತಮ ಸಂಸ್ಥೆಯಾಗಿ ಬೆಳೆಯುತ್ತದೆ ಎನ್ನುವ ಖಾತ್ರಿ ನನಗಿದೆ.

ಔಪಚಾರಿಕ ಶಿಕ್ಷಣದ ಜತೆಜತೆಗೆ ಸಂಶೋಧನೆಯನ್ನು ಕೂಡಾ ಪ್ರೋತ್ಸಾಹಿಸಿವುದು ನಮ್ಮ ಸಂಸ್ಥೆಯ ಉದ್ದೇಶ. ನಮ್ಮ ಸಂಸ್ಥೆಯಲ್ಲಿರುವ ಪದವಿಪೂರ್ವ ವಿದ್ಯಾರ್ಥಿಗಳ ಸಂಖ್ಯೆ ಕೇವಲ 25 ಶೇಖಡಾ ಮಾತ್ರ. ಅದೇ ವೇಳೆ 75 ಶೇಖಡಾ ವಿದ್ಯಾರ್ಥಿಗಳು ಸ್ನಾತಕೋತ್ತರ ಹಾಗೂ ಪಿಹೆಚ್‌ಡಿ ಮಾಡುತ್ತಿರುವವರು. ಕನಿಷ್ಠ 35 ಶೇಖಡಾ ವಿದ್ಯಾರ್ಥಿಗಳು ಪ್ರಪಂಚದ ವಿವಿಧ ಭಾಗಗಳಿಂದ ಬಂದಿರುವ ಟರ್ಕಿಶ್ ಅಲ್ಲದ ಅಂತರ್ರಾಷ್ಟ್ರೀಯ ವಿದ್ಯಾರ್ಥಿಗಳು.

ಇದೆಲ್ಲಾ ನಡೆಯುವುದುಂಟೇ? ನಿಮಗೇನು ಹುಚ್ಚು ಹಿಡಿದಿದೆಯಾ? ನಿಮಗಿದು ನಡೆಯುವುದೆಂಬ ಖಾತ್ರಿ ಇದೆಯಾ? ಪ್ರಪಂಚದ ವಿವಿಧ ಭಾಗಗಳಿಂದ ವಿದ್ಯಾರ್ಥಿಗಳನ್ನು ಕರೆತಂದು ವಿವಿಯ 35 ಶೇಖಡಾ ಭಾಗವನ್ನು ತುಂಬುವುದಾದರೂ ಹೇಗೆ? ನನ್ನ ಸಹೋದ್ಯೋಗಿಗಳು ನನ್ನನ್ನು ಛೇಡಿಸುತ್ತಿದ್ದ ಪ್ರಶ್ನೆಗಳಿವು. ಅಲಯನ್ಸ್ ಆಫ್ ಸಿವಿಲೈಸೇಶನ್ ಇನ್ಸ್ಟಿಟ್ಯೂಟ್‌ನ ಸಾಧನೆ ಇವೆಲ್ಲಾ ಸಾಧ್ಯ ಎಂಬುವುದಕ್ಕೆ ಸಾಕ್ಷಿ. ಸಾರ್ವತ್ರಿಕವಾದ ದಿಗ್ದರ್ಶನದೊಂದಿಗೆ ಈ ಯೋಜನೆಯ ಆರಂಭದಿಂದಲೂ ನನಗೆ ಸಹಾಯ ಮಾಡುತ್ತಿರುವ ನನ್ನ ಸಹೋದ್ಯೋಗಿಗಳ ಮೇಲೆ ನನಗೆ ಪೂರ್ಣ ನಂಬಿಕೆ ಇದೆ. ತಮ್ಮ ಕೆಲಸದಲ್ಲಿ ಉತ್ಸಾಹದ ಜತೆಗೆ ಅಪಾರ ತಜ್ಞತೆ ಇರುವ ಯುವ ಸಹೋದ್ಯೋಗಿಗಳು ಕೂಡಾ ನನ್ನ ಜತೆಗಿದ್ದಾರೆ.

ಕೆಲವರು ನನ್ನಲ್ಲಿ ಕೇಳುತ್ತಾರೆ: “ಪ್ರಪಂಚದ ವಿವಿಧ ಭಾಗಗಳಿಂದ ವಿದ್ಯಾರ್ಥಿಗಳನ್ನು ಕರೆತರಲು ನೀವು ಯಾವ ರೀತಿಯ ಪಿಆರ್ ಕೆಲಸ ಮಾಡುತ್ತಿದ್ದೀರಿ?” “ಏನೂ ಇಲ್ಲ”, ಎನ್ನುವುದೇ ನನ್ನ ಉತ್ತರ. ನಮ್ಮಲ್ಲಿನ ಹುದ್ದೆಗಳೇ ಸ್ವಯಂ ಪ್ರಚಾರ ಕಾರ್ಯ ನಿರ್ವಹಿಸುತ್ತಿವೆ. ಅಲಯನ್ಸ್ ಆಫ್ ಸಿವಿಲೈಸೇಶನ್ ಇನ್ಸ್ಟಿಟ್ಯೂಟ್‌ನಲ್ಲಿರುವ ನಮ್ಮ ವಿದ್ಯಾರ್ಥಿಗಳು ಅವರು ಪಡೆಯುತ್ತಿರುವ ಶಿಕ್ಷಣದಿಂದ ಸಂತೃಪ್ತರಾಗಿದ್ದಾರೆ. ಆದ್ದರಿಂದ ಅವರೇ ನಮ್ಮ ರಾಯಭಾರಿಗಳು. ಎದುರಿಗೆ ಸಿಕ್ಕ ಯಾರಿಗಾದರೂ ಹಣ ಪಾವತಿಸಿಕೊಂಡು ನಿಮ್ಮ ಪ್ರಯತ್ನಗಳನ್ನು ಜಗಜ್ಜಾಹೀರಾಗಿಸಲು ಸಾಧ್ಯವಿಲ್ಲ. ನಮ್ಮ ಅಲಯನ್ಸ್ ಆಫ್ ಸಿವಿಲೈಸೇಶನ್ಸ್ (ACI) ನಲ್ಲಿ ಹಾಗೂ ಈಗ IHU ನಲ್ಲೂ ಅಮೆರಿಕನ್, ರಷ್ಯನ್, ಫ್ರೆಂಚ್, ಅರಬ್, ಡಚ್ ಮತ್ತು ಜಪಾನೀಸ್ ಸಹಿತ ಬೇರೆ ಬೇರೆ ದೇಶಗಳ ರಾಯಭಾರಿಗಳು ಇಂದು ನಮ್ಮ ಸಂಸ್ಥೆಯಲ್ಲಿದ್ದಾರೆ. ಇದಕ್ಕಿಂತ ಪ್ರಬಲವಾದ ಜಾಹೀರಾತು ಬೇರೆ ಯಾವುದಿದೆ ಹೇಳಿ? ಅಲಯನ್ಸ್ ಆಫ್ ಸಿವಿಲೈಸೇಶನ್ ಇನ್ಸ್ಟಿಟ್ಯೂಟಲ್ಲಿ ನಾವು ಏನು ಮಾಡುತ್ತಿದ್ದೇವೋ ಅದರ ವಿಸ್ತೃತ ಆವೃತ್ತಿಯಾಗಿದೆ ಇಬ್ನ್ ಖಲ್ದೂನ್ ವಿಶ್ವವಿದ್ಯಾಲಯ. ಆದ್ದರಿಂದ ACI ಯಲ್ಲಿನ ಸಣ್ಣ ಪ್ರಯೋಗವನ್ನು ಜಾಗತಿಕವಾಗಿ ವಿಸ್ತರಿಸಲು ನಮಗೆ ಇದೊಂದು ಉತ್ತಮ ಅವಕಾಶ.

ಚಿಂತನೆ ಮತ್ತು ಆದರ್ಶಗಳ ವಿಶ್ವವಿದ್ಯಾಲಯ

ವಾಸ್ತವದಲ್ಲಿ ಸಂಶೋಧನಾತ್ಮಕ ವಿವಿಗಳೆ ನಿಜವಾದ ಅರ್ಥದ ವಿವಿಗಳು. ಏಕೆಂದರೆ ಕಾಲೇಜು ಮತ್ತು ವಿಶ್ವವಿದ್ಯಾನಿಲಯದ ನಡುವೆ ವ್ಯತ್ಯಾಸವಿದೆ. ಕಾಲೇಜು ಪದವಿಪೂರ್ವ ಹಂತದ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತದೆ. ಆದರೆ ವಿಶ್ವವಿದ್ಯಾಲಯಗಳು ಸಂಶೋಧನೆ ಹಾಗೂ ಹೊಸ ಅರಿವಿನ ಉತ್ಪಾದನೆಯ ಕಾರ್ಯುದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತದೆ. ವಿಶ್ವವಿದ್ಯಾನಿಲಯ ಎಂದರೆ ಇದು. ಆಲೋಚನೆ ಎಂದರೇನು? ಅದು ಹೇಗೆ? ಹೊಸ ಹಾಗೂ ಸಾರ್ವತ್ರಿಕ ವಿಚಾರಗಳಿಗೆ ರೂಪು ಕೊಡುವುದು ಹೇಗೆ? ಮುಂತಾದ ಸಂಗತಿಗಳನ್ನು ಇಲ್ಲಿ ಜನರು ಅನುಭವದ ಮೂಲಕ ಕಲಿಯುತ್ತಾರೆ. ಆಲೋಚನಾ ಸಾಮರ್ಥ್ಯ ಮಾನವರನ್ನು ಇತರ ಜೀವಿಗಳಿಂದ ಪ್ರತ್ಯೇಕಿಸುತ್ತದೆ. ನಮಗೆಲ್ಲರಿಗೂ ವ್ಯವಸ್ಥಿತವಾಗಿ ಚಿಂತಿಸುವ ಸಾಮರ್ಥ್ಯ ಇದೆ. ನಿಜಕ್ಕೂ ಇದೊಂದು ದೊಡ್ಡ ಆಸ್ತಿಯೇ ಸರಿ. ಆದರೆ, ಈ ಆಸ್ತಿಯನ್ನು ಸಮರ್ಪಕವಾಗಿ ಬಳಸುವುದು ಹೇಗೆಂಬುದನ್ನು ನಾವು ಕಲಿಯಬೇಕಿದೆ. ದುರದೃಷ್ಟವಶಾತ್ ಯೋಚಿಸುವುದು ಬಹಳ ಸುಲಭ ಎಂದು ನಾವು ಭಾವಿಸುತ್ತೇವೆ. ಆದರೆ ಸಂತುಲಿತವಾದ ವ್ಯವಸ್ಥಿತ ಚಿಂತನೆಗೆ ಶಿಕ್ಷಣ ಅಥವಾ ಚಿಂತನೆಯ ಬಗೆಗಿನ ಚಿಂತನೆಯ ಅಗತ್ಯವಿದೆ. ಈ ನಿರ್ಣಾಯಕ ಪ್ರಕ್ರಿಯೆ ನಡೆಯುವ ಸಂಸ್ಥೆಗಳೆ ವಿಶ್ವವಿದ್ಯಾಲಯಗಳು.

“ಐಡಿಯಾ ಎಂದರೇನು?” ಈ ಪ್ರಶ್ನೆಯನ್ನು ನನ್ನ ವಿದ್ಯಾರ್ಥಿಗಳತ್ತ ನಾನು ಸಾಧಾರಣವಾಗಿ ಎಸೆಯುತ್ತಿರುತ್ತೇನೆ. ಅವರೇನೋ ಇದರ ಉತ್ತರ ಸರಳ ಹಾಗೂ ಎಲ್ಲರಿಗೂ ತಿಳಿದಿದೆ ಎಂಬಂತೆ ಪ್ರತಿಕ್ರಯಿಸುತ್ತಾರೆ. ಆದರೆ ಉತ್ತರಿಸಲು ಪ್ರಯತ್ನಿಸುವಾಗ ಇದು ಅಷ್ಟು ಸರಳ ಅಲ್ಲ ಎನ್ನುವುದು ಗೊತ್ತಾಗುತ್ತದೆ. ಒಂದು ಉತ್ತಮ ಐಡಿಯಾವೊಂದನ್ನು ರೂಪಿಸಿ ತನ್ನಿ ಎಂದು ಅಸೈನ್ ಮೆಂಟ್ ಕೊಟ್ಟರೆ ಇದು ಅಷ್ಟು ಸರಳವಾಗಿಲ್ಲ ಎಂದು ಅವರಿಗೆ ಅರ್ಥವಾಗುತ್ತದೆ. ಬಹುತೇಕ ವಿದ್ಯಾರ್ಥಿಗಳು ಕೂಡಾ ಇಲ್ಲಿ ವಿಫಲರಾದದ್ದು ನೋಡಿದ್ದೇನೆ. ಪಕ್ವವಾದ ಹೊಸ ಐಡಿಯಾವನ್ನು ಅಭಿವೃದ್ಧಿಪಡಿಸಲ ಸಾಧ್ಯ ಆಗಬೇಕಾದರೆ ಮೊದಲು ಐಡಿಯಾ ಎಂದರೇನು? ಅದನ್ನು ಅಭಿವೃದ್ಧಿಪಡಿಸುವುದು ಹೇಗೆಂದು ಅರ್ಥೈಸಬೇಕಾಗುತ್ತದೆ.

ಜ್ಞಾನದ ಈ ತಳಹದಿಗಳನ್ನು ಪರಿಶೀಲಿಸುವಾಗ ವಿಶ್ವವಿದ್ಯಾಲಯ ಕೇವಲ ಅಧ್ಯಯನದ ಸ್ಥಳ ಮಾತ್ರವಲ್ಲ, ಅದು ಮಾನವನನ್ನು ಪರಿಪೂರ್ಣಗೊಳಿಸುವ ಪ್ರಕ್ರಿಯೆ ಕೂಡಾ ಆಗಿರುತ್ತದೆ ಎನ್ನುವ ವಿಚಾರವನ್ನು ಮನಗಾಣಲು ಸಾಧ್ಯವಿದೆ.

ಆದರ್ಶ ಮಾನವನನ್ನು ಉತ್ಪಾದಿಸುವ ವಿಧಾನ

ಪ್ರತಿ ನಾಗರಿಕತೆ ತನ್ನದೇ ಆದ ಆದರ್ಶ ವ್ಯಕ್ತಿಯ ಪರಿಕಲ್ಪನೆಯನ್ನು ಹೊಂದಿರುತ್ತದೆ. ಅದು ಸಹಜವಾಗಿಯೇ ಇತರ ನಾಗರಿಕತೆಗಳ ಆದರ್ಶ ವ್ಯಕ್ತಿಯ ಕಲ್ಪನೆಗಿಂತ ಭಿನ್ನವಾಗಿರುತ್ತದೆ. ಇಸ್ಲಾಮಿಕ್ ನಾಗರಿಕತೆಯು” ಅಲ್-ಇನ್ಸಾನುಲ್ ಕಾಮಿಲ್” ಎಂಬ ಕಲ್ಪನೆಯನ್ನು ಹೊಂದಿದೆ. ಚೀನೀ ನಾಗರಿಕತೆಯು ಮತ್ತೊಂದು ಕಲ್ಪನೆಯನ್ನು ಹೊಂದಿದೆ, ಹಿಂದೂ ನಾಗರಿಕತೆ ಇನ್ನೊಂದನ್ನು ಹೊಂದಿದೆ, ಇತ್ಯಾದಿ. ಅದರ ಪ್ರಕಾರ, ನಾಗರಿಕತೆಗಳು ತಮ್ಮ ಆದರ್ಶ ಮಾನವರನ್ನು ಉತ್ಪಾದಿಸುವ ಸಲುವಾಗಿ ವಿಶ್ವವಿದ್ಯಾಲಯಗಳನ್ನು ಒಳಗೊಂಡಂತೆ ನಿರ್ದಿಷ್ಟ ಶಿಕ್ಷಣ ಸಂಸ್ಥೆಗಳನ್ನು ನಿರ್ಮಿಸುತ್ತವೆ. ಆದ್ದರಿಂದ, ಆದರ್ಶ ವಿಶ್ವವಿದ್ಯಾನಿಲಯದ ಪ್ರಶ್ನೆಯೊಂದಿಗೆ ಅನುಸಂಧಾನ ನಡೆಸುವಾಗ ಆದರ್ಶ ಮಾನವ ಕಲ್ಪನೆಯ ಸ್ವರೂಪವನ್ನು ನಿಕಷಕ್ಕೊಡ್ಡಬೇಕಾಗುತ್ತದೆ. ಇಲ್ಲಿ ಪ್ರತಿ ನಾಗರಿಕತೆ, ಧರ್ಮ ಅಥವಾ ಸಮುದಾಯಗಳು ಕೂಡಾ ವಿಭಿನ್ನ ಉತ್ತರಗಳನ್ನು ಕೊಡುತ್ತವೆ. ಆದರ್ಶ ವ್ಯಕ್ತಿಯ ಈ ಪರಿಕಲ್ಪನೆ ಕಾಲಾನಂತರದಲ್ಲಿ ಬದಲಾಗಲೂಬಹುದು. ಪಾಶ್ಚಾತ್ಯ ನಾಗರಿಕತೆಯ ಇತಿಹಾಸವು ಇದನ್ನು ಪ್ರತಿಬಿಂಬಿಸುತ್ತದೆ. ಪ್ರಾಚೀನ ಗ್ರೀಕ್ ನಾಗರಿಕತೆಯಲ್ಲಿನ ಆದರ್ಶ ಮಾನವನ ಕಲ್ಪನೆ ಕ್ರಿಶ್ಚಿಯನ್ ಮೇಧಾವಿತ್ವದ ಮಧ್ಯಕಾಲದ ಕಲ್ಪನೆಗೆ ಸಮನಾಗಿರಲಿಲ್ಲ. ಆಧುನೀಕರಣ ಹಾಗೂ ಸೆಕ್ಯುಲರೀಕರಣದ ಅವಧಿಯಲ್ಲಿ ಅದು ಮತ್ತೆ ಬದಲಾಯಿತು. ಈಗ ಪಶ್ಚಿಮವು ಮತ್ತೊಂದು ಬದಲಾವಣೆಯ ಹಾದಿಯಲ್ಲಿ ಆಧುನಿಕೋತ್ತರ ಯುಗವನ್ನು ಪ್ರವೇಶಿಸಿದೆ. ಆದರೆ, ಇಸ್ಲಾಮಿಕ್ ನಾಗರಿಕತೆಯ ಆದರ್ಶ ಮಾನವ ಅಥವಾ ಅಲ್ ಇನ್ಸಾನುಲ್ ಕಾಮಿಲ್ ಎನ್ನುವ ಪರಿಕಲ್ಪನೆಗೆ ಮೂಲಭೂತವಾದ ಯಾವುದೇ ಬದಲಾವಣೆಗಳು ಉಂಟಾಗಿಲ್ಲ. ಪಾಶ್ಚಿಮಾತ್ಯ ವಸಾಹತುಶಾಹಿಯ ಆಗಮನದ ಅವಧಿಯವರೆಗೆ ಇದು ಸರಾಗವಾಗಿ ಮುಂದುವರಿದಿತ್ತು. ಆದರೆ, ವಸಾಹತುಶಾಹಿ ಎಲ್ಲವನ್ನೂ ಗೋಜಲು ಗೋಜಲಾಗಿಸಿದೆ. ಈ ಗೊಂದಲ ಈಗಲೂ ಮುಂದುವರಿಯುತ್ತಿದ್ದು ಸದ್ರಿ ಗ್ರಹಿಕೆ ಇರಬೇಕಾದುದು ನಮ್ಮ ಸಂಶೋಧನೆಗೆ ಸಂಬಂಧಪಟ್ಟಂತೆ ಬಹಳ ಮುಖ್ಯ. ನನ್ನ ಅಭಿಪ್ರಾಯದಲ್ಲಿ, ವಿಶ್ವವಿದ್ಯಾನಿಲಯದ “ಇಸ್ಲಾಮಿಕ್” ಚಹರೆ ನಿಖರವಾಗಿ ಈ ವಿಚಾರಕ್ಕೆ ಸಂಬಂಧಿಸಿದೆ.

ವಿಶ್ವವಿದ್ಯಾನಿಲಯ ಇಸ್ಲಾಮಿಕ್ ನಾಗರಿಕತೆಯ ಅಲ್ ಇನ್ಸಾನುಲ್ ಕಾಮಿಲ್ ಅಥವಾ ಆದರ್ಶಪ್ರಾಯವಾದ ಮಾನವನನ್ನು ಉತ್ಪಾದಿಸುವ ಗುರಿಯನ್ನು ಹೊಂದಿದ್ದರೆ ಅದು ಇಸ್ಲಾಮಿಕ್ ಯುನಿವರ್ಸಿಟಿಯಾಗಿದೆ. ಮುಸ್ಲಿಮರ ಹಾಗೆ ಯೋಚಿಸುವುದು ಹೇಗೆ? ಇಸ್ಲಾಮಿಕ್ ಜ್ಞಾನ ಸಂಪ್ರದಾಯದ ಶಿಸ್ತಿನಲ್ಲಿ ವಿಚಾರಗಳನ್ನು ಉತ್ಪಾದಿಸುವುದು ಹೇಗೆ? ಎಂದು ಒಂದು ವಿಶ್ವವಿದ್ಯಾನಿಲಯ ಕಲಿಸುತ್ತಿದ್ದರೆ ಅದು ಇಸ್ಲಾಮಿಕ್ ವಿಶ್ವವಿದ್ಯಾನಿಲಯವಾಗಿದೆ. ಅದೇ ರೀತಿ, ವಿಶ್ವವಿದ್ಯಾನಿಲಯ ಚೀನೀ ನಾಗರಿಕತೆಯ ಆದರ್ಶ ಮಾನವನನ್ನು ಉತ್ಪಾದಿಸುವ ಗುರಿಯನ್ನು ಹೊಂದಿದ್ದರೆ, ಅದು ಚೀನೀ ವಿಶ್ವವಿದ್ಯಾಲಯವಾಗಿದೆ. ರಷ್ಯಾದ ವಿಶ್ವವಿದ್ಯಾನಿಲಯ ಅಥವಾ ಅಮೇರಿಕನ್ ವಿಶ್ವವಿದ್ಯಾಲಯಕ್ಕೆ ಸಂಬಂಧಪಟ್ಟಂತೆಯೂ ಇದು ನಿಜ. ಶಿಕ್ಷಣದ ಅಂತಿಮ ಉತ್ಪನ್ನ ಹೇಗಿರಬೇಕು ಎನ್ನುವುದರ ಬಗೆಗಿನ ಬಹಳ ಸ್ಪಷ್ಟವಾದ ದೃಷ್ಟಿಕೋನ ಅಮೆರಿಕ ಮತ್ತು ಫ್ರಾನ್ಸ್ ದೇಶಗಳಲ್ಲಿವೆ. ದುರದೃಷ್ಟವಶಾತ್, ಟರ್ಕಿ ಸಹಿತ ಇರುವ ಮುಸ್ಲಿಂ ಜಗತ್ತಿನಲ್ಲಿ ಈ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ. ನಮ್ಮ ಶಿಕ್ಷಣ ವ್ಯವಸ್ಥೆ ರೂಪಿಸಬೇಕಾದ ಆದರ್ಶ ವ್ಯಕ್ತಿ ಯಾರು? ಬೊಗಾಸಿಕಿ ವಿಶ್ವವಿದ್ಯಾನಿಲಯದ ಆದರ್ಶ ವ್ಯಕ್ತಿಗೂ ಗಲಾಟಸಾರ ವಿಶ್ವವಿದ್ಯಾನಿಲಯ ಅಥವಾ ಇಸ್ತಾಂಬುಲ್ ವಿಶ್ವವಿದ್ಯಾನಿಲಯದ ಆದರ್ಶ ವ್ಯಕ್ತಿಗೂ ವ್ಯತ್ಯಾಸ ಇದೆ. ಕೆಲವು ಟರ್ಕಿಶ್ ವಿಶ್ವವಿದ್ಯಾನಿಲಯಗಳು ಮನುಷ್ಯನ ಬಗೆಗಿನ ಫ್ರೆಂಚ್ ಆದರ್ಶವನ್ನು ಅಳವಡಿಸಿಕೊಂಡರೆ, ಇತರರು ಅಮೇರಿಕನ್ ಆದರ್ಶವನ್ನು ಅಳವಡಿಸಿಕೊಂಡಿದ್ದಾರೆ. ಆದರೆ ಕೆಲವು ವಿಶ್ವವಿದ್ಯಾನಿಲಯಗಳು ಆದರ್ಶ ಮಾನವವನನ್ನು ರೂಪಿಸಲು ಹೇಗೆ ಶಿಕ್ಷಣ ನೀಡಬೇಕೆಂಬುದರ ಬಗ್ಗೆ ಸ್ಪಷ್ಟವಾದ ಕಲ್ಪನೆಯನ್ನೇ ಹೊಂದಿಲ್ಲ. ತಮ್ಮ ಗುರಿ ವಿದ್ಯಾರ್ಥಿಗಳಿಗೆ ಪದವಿ ಯಾ ಡಿಪ್ಲೋಮ ನೀಡುವುದಕ್ಕೆ ಮಾತ್ರ ಸೀಮಿತ ಎಂದು ಅವರು ಭಾವಿಸಿದಂತಿದೆ.

ಪಶ್ಚಿಮಾವಲಂಬಿತ ಮುಸ್ಲಿಮ್ ಬೌದ್ಧಿಕತೆ

ನನ್ನ ಪ್ರೌಢಶಾಲಾ ಹಾಗೂ ವಿಶ್ವವಿದ್ಯಾನಿಲಯ ಕಲಿಕಾ ಸಮಯದಲ್ಲಿ ಟರ್ಕಿಯ ಶಿಕ್ಷಣ ಸಂಸ್ಥೆಗಳ ಸ್ಥಿತಿಯ ಬಗ್ಗೆ ಯಾವಾಗಲೂ ಆಳಚಿಂತನೆ ಮಾಡುತ್ತಿದ್ದೆ. ನಮ್ಮ ಶಿಕ್ಷಣ ಸಂಸ್ಥೆಗಳು ಉತ್ತಮ ಶಿಕ್ಷಣವನ್ನು ನೀಡುವಲ್ಲಿ ಯಾಕೆ ವಿಫಲವಾಗಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದೆ . ಶಿಕ್ಷಣದ ಸಮಾಜಶಾಸ್ತ್ರ( sociology of education) ಕುರಿತು ಟಾಮ್ ಬಾಟಮೋರ್ ಬರೆದ “ಸಮಾಜಶಾಸ್ತ್ರ: ಸಮಸ್ಯೆಗಳು ಮತ್ತು ಸಾಹಿತ್ಯಕ್ಕೆ ಮಾರ್ಗದರ್ಶಿ” ಪುಸ್ತಕ ನನ್ನ ಕಣ್ಣು ತೆರೆಸಿತು. ಪಾಶ್ಚಿಮಾತ್ಯವಲ್ಲದ ಜಗತ್ತಿನ ಶಿಕ್ಷಣ ಸಂಸ್ಥೆಗಳು ಶೈಕ್ಷಣಿಕ ಉದ್ದೇಶವನ್ನು ಹೊಂದಿಲ್ಲ. ಅವು ತಮ್ಮ ದೇಶಗಳ ಜನರನ್ನು ಆಧುನೀಕರಿಸುವ ಯಾ ಪಾಶ್ಚಿಮಾತ್ಯೀಕರಿಸುವ ಉದ್ದೇಶವನ್ನು ಮಾತ್ರ ಹೊಂದಿದೆ ಎಂದು ಅವರು ಬರೆದಿದ್ದಾರೆ. ಸಮಸ್ಯೆ ಇರುವುದು ನಮ್ಮ ಶಿಕ್ಷಣ ಸಂಸ್ಥೆಗಳಲ್ಲೇ ಎನ್ನುವುದನ್ನು ಇದರಿಂದ ಮನಗಂಡೆ. ಶೈಕ್ಷಣಿಕವಾಗಿ ಬೆಳೆಸುವ ಬದಲು ವಿದ್ಯಾರ್ಥಿ ಯುವಜನತೆಯನ್ನು ಆಧುನೀಕರಿಸಲು ಮತ್ತು ಪಾಶ್ಚಿಮಾತ್ಯೀಕರಿಸಲು ವಾಸ್ತವವಾಗಿ ನಮ್ಮ ಶಿಕ್ಷಣ ಸಂಸ್ಥೆಗಳು ರೂಪುಗೊಂಡಿವೆ. ಇವು ತಮ್ಮ ಉದ್ದೇಶವನ್ನು ನೆರವೇರಿಸಿದ್ದು ಶೈಕ್ಷಣಿಕ ವೈಫಲ್ಯದ ಹೊರತಾಗಿಯೂ ವಿದ್ಯಾರ್ಥಿತ್ವದ ಪರಿಕಲ್ಪನೆ, ಸಮಾಜ ಮತ್ತು ಅದರ ರೂಢಿಗಳನ್ನು ಬದಲಾಯಿಸುವಲ್ಲಿ ಯಶಸ್ವಿಯಾಗಿವೆ. ಉದಾ: “ಹುಡುಗಿಯೊಬ್ಬಳು ಅನಟೋಲಿಯಾದಿಂದ ನಾಲ್ಕು ವರ್ಷಗಳ ಕಾಲ ಇಸ್ತಾಂಬುಲ್ ನಲ್ಲಿ ಅಧ್ಯಯನ ಮಾಡಿ ಆಧುನಿಕ ಪಾಶ್ಚಾತ್ಯ ಮಹಿಳೆಯಾಗಿ ಹಿಂದಿರುಗುತ್ತಾಳೆ”.

ಕೆಲವು ಪ್ರೊಫೆಸರರ್ ಗಳ ಜತೆಗೆ ಘಾನಾಗೆ ಭೇಟಿ ನೀಡಿದಾಗ ಬಾಟಮೋರ್ ಅವರ ಆಲೋಚನೆಗಳು ಸರಿ ಎನಿಸುವ ಅನುಭವ ನನಗೆ ಉಂಟಾಯಿತು. ನಾವು ಘಾನಾದ ಅತ್ಯುತ್ತಮ ವಿಶ್ವವಿದ್ಯಾನಿಲಯಕ್ಕೆ ಭೇಟಿ ನೀಡಿದಾಗ ಅಲ್ಲಿನ ಉನ್ನತ ಅಧಿಕಾರಿಯೊಬ್ಬರು “ಬ್ರಿಟಿಷರು ಘಾನ ದೇಶವನ್ನು ಬಿಟ್ಟು ಹೋದ ಸಂದರ್ಭ ಘಾನಿಯನ್ನರು ಹೇಗೆ ಬ್ರಿಟಿಷರಿಂದ ವಿಶ್ವವಿದ್ಯಾನಿಲಯವನ್ನು ವಶಪಡಿಸಿಕೊಂಡರು ಎನ್ನುವುದರ ಬಗ್ಗೆ ಒಂದು ಪ್ರಬಂಧ ಮಂಡಿಸಿದ್ದರು. ಪ್ರಬಂಧವನ್ನು ಆಲಿಸಿದ ನಂತರ ನಾನು ಕೇಳಿದೆ, “ಸರ್, ನೀವು ಆ ವಿವಿಯನ್ನು ವಶಪಡಿಸಿಕೊಂಡ ನಂತರ ಶಿಕ್ಷಣದ ತತ್ವಶಾಸ್ತ್ರ, ವಿಧಾನ ಹಾಗೂ ವಿಶ್ವವಿದ್ಯಾಲಯದ ಪಠ್ಯಕ್ರಮದಲ್ಲಿ ಏನಾದರೂ ಬದಲಾವಣೆಗಳನ್ನು ಮಾಡಿದ್ದೀರಾ?” “ಇಲ್ಲ ಇಲ್ಲ ಇಲ್ಲ!” ಎಂದು ಹೆಮ್ಮೆಯಿಂದ ಆ ಅಧಿಕಾರಿ ಹೇಳಿದರು. “ನಾವು ಏನನ್ನೂ ಬದಲಾಯಿಸಲಿಲ್ಲ, ನಾವು ಅಂದಿನ ವ್ಯವಸ್ಥೆಯನ್ನೇ ಉಳಿಸಿಕೊಂಡಿದ್ದೇವೆ.”

ಬ್ರಿಟಿಷರ ಕೆಲಸವನ್ನು ಮುಂದುವರಿಸುವ ಪ್ರಯತ್ನವನ್ನಷ್ಟೇ ಇವರು ಮಾಡಿದ್ದು. ಈಗ ಬ್ರಿಟಿಷ್ ಸರ್ಕಾರಕ್ಕೆ ಪ್ರಾಧ್ಯಾಪಕರನ್ನು ಕಳುಹಿಸುವ ಅಥವಾ ಯಾವುದೇ ಸಂಬಳವನ್ನು ಪಾವತಿಸಬೇಕಾದ ಅಗತ್ಯ ಕೂಡಾ ಇಲ್ಲ. ಎಲ್ಲವನ್ನೂ ಘಾನಿಯನ್ನರೇ ಸ್ವಯಂಪ್ರೇರಿತರಾಗಿ ನಿರ್ವಹಿಸುತ್ತಾ ಇದ್ದಾರೆ.

ನಾನು ಟರ್ಕಿಯ ವಿಶ್ವವಿದ್ಯಾಲಯಗಳಿಗೆ ಮತ್ತು ಪಾಶ್ಚಿಮಾತ್ಯೇತರ ಪ್ರಪಂಚದ ವಿವಿಧ ದೇಶಗಳಿಗೆ ಭೇಟಿ ನೀಡುವಾಗ ಅಲ್ಲಿನ ವಿದ್ಯಾರ್ಥಿಗಳೊಂದಿಗೆ “ನೀವು ಅಧ್ಯಯನ ಮಾಡುವ ರಾಜಕೀಯ ವಿಜ್ಞಾನದ ಪುಸ್ತಕಗಳಲ್ಲಿ ಟರ್ಕಿಶ್, ಅರಬ್ ಅಥವಾ ಇತರ ಯಾವುದಾದರೂ ಮುಸ್ಲಿಂ ವ್ಯಕ್ತಿಗಳ ಯಾವುದಾದರೂ ಸಿದ್ಧಾಂತಗಳಿವೆಯೇ? ಎಂದು ಕೇಳುವುದಿದೆ. ಆಗೆಲ್ಲಾ “ಇಲ್ಲ” ಎನ್ನುವ ಉತ್ತರ ವಿದ್ಯಾರ್ಥಿಗಳಿಂದ ದೊರಕುತ್ತದೆ. ಮನೋವಿಜ್ಞಾನ, ಸಮಾಜವಿಜ್ಞಾನ, ಕಾನೂನು ಹಾಗೂ ಅರ್ಥಶಾಸ್ತ್ರ ಕ್ಷೇತ್ರದಲ್ಲೂ ಇದೇ ಅವಸ್ಥೆ ಇದೆ. ಪೌರಾತ್ಯ ದೇಶಗಳ ವಿಧ್ಯಾರ್ಥಿಗಳಿಗೆ ಪಾಶ್ಚಾತ್ಯ ಕಲ್ಪನೆಗಳನ್ನು ಮತ್ತು ಸಿದ್ಧಾಂತಗಳನ್ನು ಬೋಧಿಸುವ ಕೆಲಸವನ್ನಷ್ಟೇ ಇಲ್ಲಿನ ವಿಶ್ವವಿದ್ಯಾಲಯಗಳು ನಡೆಸುತ್ತಿರುವುದು. ಯಾವುದಾದರೊಬ್ಬ ಮುಸ್ಲಿಂ ಮಂಡಿಸಿದ ಮನೋವೈಜ್ಞಾನಿಕ ಸಿದ್ಧಾಂತವನ್ನು ಕಲಿಸುವ ಮನೋವೈಜ್ಞಾನಿಕ ವಿಭಾಗ ನನ್ನ ಅರಿವಿಗೆ ಬಂದಿಲ್ಲ.

ಕೆಲವು ದಿನಗಳ ಹಿಂದೆ ಶಿಕ್ಷಣದ ವಿಷಯದಲ್ಲಿ ಪಿಎಚ್ಡಿ ಮಾಡುತ್ತಿರುವ ಓರ್ವ ವಿದ್ಯಾರ್ಥಿನಿಯನ್ನು ಭೇಟಿಯಾದಾಗ ‘ಶಿಕ್ಷಣದ ವಿಷಯದಲ್ಲಿ ಪರಿಣತರಾದ ಯಾವುದಾದರೂ ವಿದ್ವಾಂಸರ ಪರಿಚಯವಿದೆಯೇ?’ ಎಂದು ವಿಚಾರಿಸಿದೆ. ಇಲ್ಲ ಎನ್ನುವ ಉತ್ತರ ಬಂತು. ಇಸ್ತಾಂಬುಲ್ ನಲ್ಲಿ ಪಿಎಚ್ಡಿ ಮಾಡುವ, ಹಿಜಾಬ್ ಧಾರಿ, ಧಾರ್ಮಿಕ ಮಹಿಳೆ! ಆದರೆ ಮುಸ್ಲಿಂ ಶೈಕ್ಷಣಿಕ ಸಿದ್ಧಾಂತಗಳ ಬಗ್ಗೆ ಯಾವುದೇ ಅರಿವಿಲ್ಲ!! ಟರ್ಕಿಶ್ ವಿದ್ವಾಂಸರ ಪರಿಚಯವಂತೂ ಅವರಿಗಿಲ್ಲ. ನಾನು ಕೇಳಿದೆ ‘ನಿಮಗೆ ಅಲ್-ಝರ್ನೂಜಿ ಪರಿಚಯವಿದೆಯಾ?’ ಯಾರವರು ಎಂದು ಆಕೆ ಮರುಪ್ರಶ್ನಿಸಿದಳು. ಮತ್ತೆ ಕೇಳಿದೆ: “ನಿಮಗೆ ಅಲ್-ಗಝ್ಝಾಲಿ ಗೊತ್ತಾ?” “ಹೌದು, ಹೌದು, ಅವರು ಬಹಳ ಪ್ರಸಿದ್ಧ ವಿದ್ವಾಂಸ. ಎಲ್ಲರಿಗೂ ಅವರ ಪರಿಚಯವಿದೆ. ಆದರೆ ಆಕೆ ಅಲ್-ಗಝ್ಝಾಲಿಯವರ ಯಾವುದೇ ಪುಸ್ತಕ ಓದಿರಲಿಲ್ಲ. ಆದರೆ ಪಶ್ಚಿಮದಿಂದ ಆಮದು ಮಾಡಿಕೊಂಡ ಎಲ್ಲಾ ಸಿದ್ಧಾಂತಗಳನ್ನು ಆಕೆ ಅಧ್ಯಯನ ಮಾಡಿದ್ದಳು. ಟರ್ಕಿಶ್ ಮುಸ್ಲಿಂ ಆಗಿದ್ದರೂ ಆಕೆ ಯಾವುದೇ ಮುಸ್ಲಿಂ ಅಥವಾ ಟರ್ಕಿಶ್ ವಿದ್ವಾಂಸರ ಶೈಕ್ಷಣಿಕ ಸಿದ್ಧಾಂತಗಳ ಅಧ್ಯಯನ ಮಾಡಿರಲಿಲ್ಲ. ಶಿಕ್ಷಣದ ಬಗ್ಗೆ ಯಾವುದೇ ಇಸ್ಲಾಮಿಕ್ ಅಥವಾ ಟರ್ಕಿಶ್ ಅಧ್ಯಯನ ಬಂದಿಲ್ಲ ಎನ್ನುವ ಪ್ರತಿಕ್ರಿಯೆ ಅವಳಿಂದ ವ್ಯಕ್ತವಾಗಿತ್ತು.

ಈ ಪ್ರಕ್ರಿಯೆಯ ಪರಿಣಾಮವನ್ನು ನಾನು “ಸುಸ್ಥಿರ ಬೌದ್ಧಿಕ ಅವಲಂಬನೆ” (sustainable intellectual dependency) ಎಂದು ಕರೆಯಲು ಬಯಸುತ್ತೇನೆ. ಪೌರಾತ್ಯ ಜಗತ್ತಿನ ವಿಶ್ವವಿದ್ಯಾನಿಲಯಗಳ ಉದ್ದೇಶ ಇದುವೆ. ಶ್ರೇಷ್ಠ ವಿಜ್ಞಾನಿಗಳಿಗೆ ಜನ್ಮ ನೀಡುವ ಬದಲು ತಮ್ಮ ದೇಶಗಳ ವಿಧ್ಯಾರ್ಥಿಗಳನ್ನು ಬೌದ್ಧಿಕವಾಗಿ ಮತ್ತು ಶೈಕ್ಷಣಿಕವಾಗಿ ಪಶ್ಚಿಮದ ಮೇಲೆ ಅವಲಂಬಿತರಾಗುವಂತೆ ಮಾಡುವುದು ಅವುಗಳ ಕೆಲಸ. ನಾವು ಬೌದ್ಧಿಕವಾಗಿ ಮಾತ್ರವಲ್ಲ ತಂತ್ರಜ್ಞಾನ ಕ್ಷೇತ್ರದಲ್ಲೂ ಅವಲಂಬಿತರಾಗಿದ್ದೇವೆ. ನಾವೇ ಉತ್ಪಾದಿಸುವ ಬದಲು ಪಶ್ಚಿಮದಿಂದ ತಂತ್ರಜ್ಞಾನಗಳನ್ನು ಆಮದು ಮಾಡಿಕೊಳ್ಳುತ್ತೇವೆ. ವಿಮಾನಗಳು, ದೂರವಾಣಿಗಳು, ಶಸ್ತ್ರಾಸ್ತ್ರಗಳು, ಸೌಂದರ್ಯವರ್ಧಕಗಳ ಸಹಿತ ಎಲ್ಲವೂ ಹೀಗೆ ಆಮದಾಗುತ್ತಿವೆ. ಹೊಸ ಆಲೋಚನೆಗಳನ್ನು ಉತ್ಪಾದಿಸಲು ನಮ್ಮಿಂದ ಸಾಧ್ಯವಿಲ್ಲವೆಂದು ಭಾವಿಸಿ ಪಾಶ್ಚಿಮಾತ್ಯ ಶಿಕ್ಷಣ ತಜ್ಞರ ಉತ್ತಮ ವಿದ್ಯಾರ್ಥಿಯಾಗಲು ಹಾಗೂ ನಮ್ಮ ದೇಶದಲ್ಲಿ ಪಾಶ್ಚಿಮಾತ್ಯ ವಿಚಾರಗಳನ್ನು ಅಳವಡಿಸಲು ನಾವು ಪ್ರಯತ್ನಿಸುತ್ತಿದ್ದೇವೆ. ಇದೇ ಶೈಲಿ ಎಷ್ಟರವೆರೆಗೆ ಮುಂದುವರಿಯುತ್ತದೋ ಅಷ್ಟರವರೆಗೆ ನಮ್ಮ ವಿವಿಗಳು ನಿಜವಾದ ವಿಶ್ವವಿದ್ಯಾಲಯಗಳಾಗಿ ಕಾರ್ಯನಿರ್ವಹಿಸುವಲ್ಲಿ ವಿಫಲವಾಗಲಿದೆ.

ಜಗತ್ತಿನ ಪ್ರಥಮ ವಿಶ್ವವಿದ್ಯಾನಿಲಯ ಮುಸ್ಲಿಮರದ್ದು

ಫಾತಿಮಾ ಅಲ್-ಫಿಹ್ರಿಯಾ ಎನ್ನುವ ಮೊರಾಕ್ಕೋ ಮುಸ್ಲಿಮ್ ಮಹಿಳೆ ಜಗತ್ತಿನ ಪ್ರಥಮ ವಿವಿಯಾಗಿರುವ ಅಲ್-ಕರವಿಯ್ಯೀನ್ ಯುನಿವರ್ಸಿಟಿಯನ್ನು 859 ರಲ್ಲಿ ಸ್ಥಾಪಿಸಿದರು. ಎರಡನೇ ವಿಶ್ವವಿದ್ಯಾನಿಲಯವಾದ ಅಲ್ -ಅಝ್ ಹರ್ 975 ರಲ್ಲಿ ಸ್ಥಾಪಿಸಲ್ಪಟ್ಟಿತು. 11 ನೇ ಶತಮಾನದಲ್ಲಿ ಜಾಮಿಅ ನಿಝಾಮಿಯಾ ಬಗ್ದಾದ್ ನಲ್ಲಿ ತಲೆಯೆತ್ತಿತು. ಪಾಶ್ಚಾತ್ಯ ರಾಷ್ಟ್ರಗಳು ವಿಶ್ವವಿದ್ಯಾನಿಲಯವನ್ನು ಒಂದು ಸಂಸ್ಥೆಯಾಗಿ ಬೆಳೆಸಲು ಪ್ರಾರಂಭಿಸಿದ್ದು ಮುಸ್ಲಿಂ ಪ್ರಪಂಚದಾದ್ಯಂತ ವಿಶ್ವವಿದ್ಯಾನಿಲಯಗಳು ಹೊರಹೊಮ್ಮಿದ ನಂತರ. ತದನಂತರ, ಶಿಕ್ಷಣದ ಈ ವ್ಯವಸ್ಥೆ ಭಿನ್ನವಾದ ಜಾಡು ಹಿಡಿಯತೊಡಗಿತು.

(ಮುಂದುವರಿಯುವುದು)

 ಡಾ. ರಜಬ್ ಸೆಂತುರ್ಕ್
ಕನ್ನಡಕ್ಕೆ : ತಂಶೀರ್ ಉಳ್ಳಾಲ

Dr. Recep Şentürk

Dr. Recep Senturk is a turkish sociologist, Islamic scholar and public intellectual of Turkey. He has played major role in founding several higher education institutions in the Muslim world and also authored several works in English and Turkish. His works have been translated into several languages. He currently serves as Dean of the College of Islamic Studies at Hamad Bin Khalifah University, Qatar and President of Usul Academy. He was the founding president of Ibn Haldun University (IHU) in Istanbul (2017-2021).

Leave a Reply

*