ಮುಸ್ಲಿಂ ವಿದ್ವಾಂಸರ ವ್ಯಾಪಾರ ಮತ್ತು ಜ್ಞಾನದ ಪ್ರಸಾರ

ಇಮಾಮ್ ದಹಬಿಯ ಪುಸ್ತಕವಾದ, ‘ಸಿಯರು ಅ’ಲಾಮಿನ್ನುಬಲಾ’ದಲ್ಲಿ ಜೀವನ ಸಾಗಿಸಲು ಬೇಕಾಗಿ ವ್ಯಾಪಾರದಲ್ಲಿ ತೊಡಗಿದ ವಿದ್ವಾಂಸರ ಆಸಕ್ತಿದಾಯಕ ಜೀವನ ಕಥೆಗಳನ್ನು ಕಾಣಬಹುದು. ಜೀವನ ಮುಂದಕ್ಕೆ ಹೋಗುವಷ್ಟು ಮಾತ್ರವಾಗಿರುವ ಸಣ್ಣಮಟ್ಟಿನ ವ್ಯಾಪಾರಗಳಾಗಿರಲಿಲ್ಲ ಅವು. ಬದಲಾಗಿ, ಅವುಗಳಲ್ಲಿ ಹಲವು ವ್ಯಾಪಾರಗಳು ಕೂಡ ದೊಡ್ಡ ಮಟ್ಟದ ಲಾಭ ತರುವಂಥದ್ದಾಗಿತ್ತು. ಅವರಲ್ಲಿ ಕೆಲವರು ಸಮಕಾಲೀನ ವ್ಯಾಪಾರಿಗಳಲ್ಲಿ ಅತ್ಯಂತ ಶ್ರೀಮಂತರಾಗಿದ್ದರು. ಇಮಾಂ ಸಅದ್ ಅಸ್ಸಂಆನಿ ಮರ್ವಝಿ ಅವರ ‘ಅಲ್-ಅನ್ಸಾಬ್’ ಪುಸ್ತಕವು ವ್ಯಾಪಾರ ವಹಿವಾಟಿಗೆ ಹೆಸರುವಾಸಿಯಾದ ವಿದ್ವಾಂಸರ ವಿವರಣೆಯನ್ನು ಒಳಗೊಂಡಿದೆ.
ಸಅದೀ ಹರ್ವಿಯ ‘ಫಿಖ್ಹ್ ಮತ್ತು ಹದೀಸ್ ವಿದ್ವಾಂಸರಲ್ಲಿನ ಕಾರ್ಮಿಕರು’ (ಅಸ್ಸುನ್ನಾಉ ಮಿನಲ್ ಫುಖಹಾಇ ವಲ್ ಮುಹದ್ದಿಸೀನ್), ಅಬ್ದುಲ್ ಬಾಸಿತ್ ಬಿನ್ ಯೂಸುಫ್ ಅಲ್ ಗರೀಬಿಯ 400 ವೃತ್ತಿಗಳು ಹಾಗೂ 1,500 ಕ್ಕೂ ಹೆಚ್ಚು ವಿದ್ವಾಂಸರನ್ನು ಪರಿಚಯಿಸುವ ‘ವಿದ್ವಾಂಸರಿಗೆ ಸಂಬಂಧಿಸಿದ ಕೆಲಸ ಹಾಗೂ ವೃತ್ತಿಗಳು’ ಎಂಬ ಗ್ರಂಥವನ್ನು ಇವುಗಳ ಪೈಕಿ ವಿಶೇಷವಾಗಿ ಉಲ್ಲೇಖಿಸಬೇಕಿದೆ.
ಮುಸ್ಲಿಂ ಜೀವನದಲ್ಲಿನ ವಿಜ್ಞಾನ ಮತ್ತು ವ್ಯಾಪಾರದ ನಡುವಿನ ಸಂಬಂಧವು ಜೀವನಶೈಲಿ ಮತ್ತು ಇಸ್ಲಾಮಿಕ್ ಬೋಧನೆಗಳ ನಡುವಿನ ಆಳವಾದ ಸಂಪರ್ಕವನ್ನು ಸೂಚಿಸುತ್ತದೆ.
ಭೌದ್ಧಿಕ ಪ್ರಯಾಣ ಮತ್ತು ಪ್ರಬೋಧನಾ ಯಾತ್ರೆಯ ಮೂಲಕ ರೂಪುಗೊಂಡ ಅಪಾರ ವ್ಯಾಪಾರ ಅವಕಾಶಗಳ ಪರಿಣಾಮವಾಗಿ ಎಲ್ಲಾ ಪ್ರಬೋಧನಾ ಯಾತ್ರೆಯ ಗುಂಪುಗಳಲ್ಲಿ ಸರಕುಗಳ ಜೊತೆಗೆ ವ್ಯಾಪಾರಿಗಳು, ವಿದ್ವಾಂಸರು, ವಿದ್ಯಾರ್ಥಿಗಳು ಮತ್ತು ಪುಸ್ತಕಗಳು ಸ್ಥಾನಹಿಡಿದಿದ್ದವು.
ಈ ಸಂಬಂಧದ ತತ್ವಶಾಸ್ತ್ರವನ್ನು ಆಳವಾಗಿ ಅರ್ಥಮಾಡಿಕೊಳ್ಳಲು ಆತ್ಮ ಮತ್ತು ಭೌತಿಕ ಪ್ರಪಂಚದ ನಡುವೆ ಇಸ್ಲಾಂ ಧರ್ಮವು ಸಾಧ್ಯವಾಗಿಸಿರುವ ಬಲವಾದ ಸಂಪರ್ಕವನ್ನು ನಾವು ಗುರುತಿಸಬೇಕಾಗಿದೆ. ಬೌದ್ಧಿಕ ಆಂದೋಲನವನ್ನು ಪೋಷಿಸುವ ರೀತಿಯಲ್ಲಿ ಸಂಪತ್ತಿನ ಸಮೃದ್ಧಿಯು ವಿದ್ವಾಂಸರ ಸ್ವತಂತ್ರ ದೃಷ್ಟಿಕೋನಗಳ ಭಾಗವಾಗಿತ್ತು.

ಸಿಯರು ಅ’ಲಾಮಿನ್ನುಬಲಾ

ಆದ್ದರಿಂದಲೇ ‘ಆಂದಲೂಸಿಯನ್ನರಲ್ಲಿ* ಅರೇಬಿಕ್ ಮತ್ತು ಇಸ್ಲಾಮಿಕ್ ನಾಗರಿಕತೆ’ ಎಂಬ ಅಧ್ಯಯನದಲ್ಲಿ ಸಂಶೋಧಕ ಒಲೀಕಿಯಾ ರೆಮಿ ಅವರು ನೀಡಿದ ಅಂಕಿ ಅಂಶಗಳು ನಮ್ಮನ್ನು ಆಶ್ಚರ್ಯಚಕಿತರನ್ನಾಗಿಸುತ್ತದೆ. 14,000 ಕ್ಕೂ ಹೆಚ್ಚು ವಿದ್ವಾಂಸರ ಜೀವನಚರಿತ್ರೆಯನ್ನು ನಿರೂಪಿಸುವ ಅಧ್ಯಯನದಲ್ಲಿ 4,200 ಕ್ಕೂ ಹೆಚ್ಚು ವಿದ್ವಾಂಸರ ಉದ್ಯೋಗಗಳನ್ನು ಒತ್ತು ಕೊಟ್ಟು ಪರಾಮರ್ಶೆ ಮಾಡಲಾಗಿದೆ.
ಈ ಪೈಕಿ 22% ನೇಕಾರರು, 13% ಅಡುಗೆಯವರು, 4% ವಜ್ರ ವ್ಯಾಪಾರಿಗಳು, 4% ಸುಗಂಧ ದ್ರವ್ಯ ವ್ಯಾಪಾರಿಗಳು, 4% ಚರ್ಮದ ವ್ಯಾಪಾರಿಗಳು, 4% ಪುಸ್ತಕ ಮಾರಾಟಗಾರರು, 3% ಗಣಿಗಾರರು, 2% ಮರ ಕಡಿಯುವವರು, 9% ಇತರ ವ್ಯಾಪಾರಿಗಳು ಮತ್ತು 9% ಇತರ ಕಾರ್ಮಿಕರು. ಈ ಬೆರಗುಗೊಳಿಸುವ ಅಂಕಿ ಅಂಶಗಳ ವಿವರಣೆಯಾಗಿ ವಿವಿಧ ಕಾಲದ ಮತ್ತು ದೇಶಗಳ ಪ್ರಖ್ಯಾತ ವಿದ್ವಾಂಸರ ಆರ್ಥಿಕ ಅಂಕಿಅಂಶಗಳನ್ನು ಇಲ್ಲಿ ನೀಡಲಾಗಿದೆ.

ಆರಂಭಿಕ ಅನುಭವಗಳು

ವಾಸ್ತವವಾಗಿ ವಿದ್ವಾಂಸರು ಮತ್ತು ವ್ಯಾಪಾರಿಗಳ ನಡುವಿನ ಸಂಬಂಧವು ಹೆಚ್ಚು ಚರ್ಚೆಗೆ ಎಡೆಮಾಡಕೊಡದಿದ್ದರೂ ವ್ಯಾಪಾರಿಗಳು ಅನಾದಿ ಕಾಲದಿಂದಲೂ ಮುಸ್ಲಿಂ ವಿದ್ವಾಂಸರ ಮನಸ್ಸಿನಲ್ಲಿ ಒಂದು ಸ್ಥಾನವನ್ನು ಕಂಡುಕೊಳ್ಳಲು ಸಾಧ್ಯವಾಗಿತ್ತು. ವ್ಯಾಪಾರದಲ್ಲಿ ಮಕ್ಕಾದ ಪ್ರಮುಖರಾದ ಖುರೈಷರಿಗೆ ಮೇಲುಗೈ ಇದ್ದುದರಿಂದ ಇಸ್ಲಾಮಿಕ್ ಸಮುದಾಯವು ಅದರ ಆರಂಭಿಕ ಹಂತಗಳಲ್ಲಿ ಅರೇಬಿಯಾದ ಇತರ ಎಲ್ಲಾ ಬುಡಕಟ್ಟು ಜನಾಂಗಗಳನ್ನು ಮೀರಿಸುವ ರೀತಿಯಲ್ಲಿ ಉಳಿದುಕೊಂಡಿತ್ತು.
ಕುರ್ ಆನ್ ಸ್ವತಃ ಸ್ಪಷ್ಟಪಡಿಸಿದಂತೆ, ಚಳಿಗಾಲದಲ್ಲಿ ಯಮನಿಗೆ ಮತ್ತು ಬೇಸಿಗೆಯಲ್ಲಿ ಗ್ರೇಟರ್ ಸಿರಿಯಾಗೆ (ಶಾಮ್ ) ಅವರು ನಡೆಸುತ್ತಿದ್ದ ವ್ಯಾಪಾರ ಪ್ರಯಾಣಗಳು ಎಲ್ಲರಿಗೂ ತಿಳಿದಿವೆ. ಆದ್ದರಿಂದ, ಪ್ರವಾದಿ (ಸ) ಅವರು ದಿವ್ಯಭೋದನೆ ಬಹಿರಂಗಪಡಿಸುವ ಮೊದಲೇ ಖದೀಜಾ ಬೀವಿಯ ಬಳಿ ವ್ಯಾಪಾರ ವಹಿವಾಟು ಮಾಡಿದ್ದನ್ನು ಕಾಣಬಹುದು.
ಖುರೈಶಿ ವ್ಯಾಪಾರಿಗಳಲ್ಲಿ ಪ್ರಮುಖರಾದ ಖದೀಜಾ ಬೀವಿಯು ಕೂಲಿಗಾಗಿ ನೇಮಕ ಮಾಡಿದವರಲ್ಲಿ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ ರವರಿಗೆ ಹೆಚ್ಚು ಹಣ ಪಾವತಿಸಿದ್ದಾಗಿ ‘ರೌದುಲ್ ಉನುಫೀ’ ಯಲ್ಲಿ ಅಬುಲ್ ಖಾಸಿಂ ಸುಹೈಲಿ ಎಂಬವರು ವ್ಯಕ್ತಪಡಿಸಿದ್ದನ್ನು ಕಾಣಬಹುದು. ಖದೀಜಾ ಬೀವಿಯೊಂದಿಗಲ್ಲದೆ, ಪ್ರವಾದಿಯವರು ಇತರರೊಂದಿಗೆ ವ್ಯಾಪಾರ ಸಂಬಂಧವನ್ನು ಹೊಂದಿದ್ದರು. ಅನೇಕ ಸಹಚರರು (ಪ್ರವಾದಿಯ ಅನುಯಾಯಿಗಳು) ಇಸ್ಲಾಂಗೆ ಮತಾಂತರಗೊಳ್ಳುವ ಮೊದಲು ಮತ್ತು ನಂತರ ಅದೇ ಮಾರ್ಗವನ್ನು ಅನುಸರಿಸಿದ್ದಾರೆ ಎಂದು ಇತಿಹಾಸ ಹೇಳುತ್ತದೆ. ಇಸ್ಲಾಂ ಧರ್ಮ ದುಡಿಮೆ ಮತ್ತು ಉದ್ಯೋಗವನ್ನು ತುಂಬಾ ಪ್ರೋತ್ಸಾಹಿಸಿದೆ ಎಂಬುದಕ್ಕೆ ಸಾಕ್ಷಿಯಾಗಿ ಸಹಚರರಲ್ಲಿ ಹೆಚ್ಚಿನ ಸಂಖ್ಯೆಯ ವ್ಯಾಪಾರಿಗಳನ್ನು ಕಾಣಬಹುದು.
ಮೊದಲ ಖಲೀಫ ಅಬೂಬಕರ್ ಸಿದ್ದೀಕ್ (ರ) ಮತ್ತು ಮೂರನೆಯ ಖಲೀಫ ಉಸ್ಮಾನ್(ರ) ಮಕ್ಕಾದಲ್ಲಿ ಪ್ರಮುಖ ವ್ಯಾಪಾರಿಗಳಾಗಿದ್ದರು. ಮಕ್ಕಾದಿಂದ ಮದೀನಾಕ್ಕೆ ವಲಸೆ ಬಂದ ಅಬ್ದುರ್ರಹ್ಮಾನ್ ಇಬ್ನ್ ಔಫ್ ನಂತರ ವ್ಯಾಪಾರವನ್ನು ಜೀವನೋಪಾಯದ ಮಾರ್ಗವಾಗಿ ಅಳವಡಿಸಿಕೊಂಡರು ಮತ್ತು ಇಸ್ಲಾಮಿಕ್ ಇತಿಹಾಸದಲ್ಲಿ ಅತ್ಯಂತ ಶ್ರೀಮಂತ ಪ್ರವಾದಿ ಸಹಚರರ ನಡುವೆ ಉನ್ನತ ಸ್ಥಾನ ಪಡೆದುದಾಗಿ ಕಾಣಬಹುದು.
ಇಮಾಮ್ ದಹಬೀ ಅವರು ‘ಸಿಯರ್’ ನಲ್ಲಿ ಸಂಪತ್ತಿನ ಬಗ್ಗೆ ಏನು ಹೇಳುತ್ತಾರೆಂದು ನೋಡಿ: ‘ಪ್ರವಾದಿ ಅವರ ಕಾಲದಲ್ಲಿ ಅವರು ತನ್ನ ಸಂಪತ್ತಿನ ಅರ್ಧದಷ್ಟು ಅಂದರೆ, ನಾಲ್ಕು ಸಾವಿರ ದಿರ್ಹಮ್ಗಳನ್ನು ದಾನ ಮಾಡಿದರು. ನಂತರ ಅವರು ನಲವತ್ತು ಸಾವಿರ ದೀನಾರ್ ಗಳು, ಐನೂರು ಕುದುರೆಗಳು ಮತ್ತು ಐನೂರು ಒಂಟೆಗಳನ್ನು ದಾನವಾಗಿ ನೀಡಿದರು. ಅವರ ಹೆಚ್ಚಿನ ಉಳಿತಾಯವು ವ್ಯಾಪಾರದಿಂದ ಬಂದಿದೆ’. ಸಅದ್ ಅಲ್-ಖರ್ಲ್ ಎಂಬ ಸಹಚರನ ಅನುಭವವನ್ನು ‘ತಹ್ದೀಬುಲ್ ಅಸ್ಮಾಇ ವಲ್ಲುಗಾತ್’ ನಲ್ಲಿ ನಿರೂಪಿಸಲಾಗಿದೆ. ಯಾವ ವ್ಯಾಪಾರ ಮಾಡಿದರೂ ನಷ್ಟ ಅನುಭವಿಸುತ್ತಿದ್ದ ಅವರು ಖರ್ಲ್ (ಟ್ಯಾನಿಂಗ್ಗೆ ಬಳಸುವ ಒಂದು ರೀತಿಯ ಸಸ್ಯ) ದ ವ್ಯಾಪಾರ ಮಾಡಲಾರಂಭಿಸಿದಾಗ ಲಾಭ ಗಳಿಸಲು ಪ್ರಾರಂಭಿಸಿದರು. ಹಾಗಾಗಿ ಅದನ್ನು ಅವರ ಹೆಸರಿಗೆ ಸೇರಿಸಲಾಯಿತು.

ತಹ್ದೀಬುಲ್ ಅಸ್ಮಾಇ ವಲ್ಲುಗಾತ್

ಪ್ರವಾದಿಯ ಮರಣದ ನಂತರವೂ ಈ ಸಂಪ್ರದಾಯ ಮುಂದುವರೆದಿದೆ.
ಇಬ್ನುಲ್ ಜೌಝಿ ತಮ್ಮ ‘ಸೈದುಲ್ ಖಾತ್ವಿರ್’ ಗ್ರಂಥದಲ್ಲಿ, ತಾಬಿಉಗಳ ನಾಯಕರಾದ ಸಈದುಬ್ನುಲ್ ಮುಸಯ್ಯಬ್ ದೊಡ್ಡಮಟ್ಟಿನ ಸಂಪತ್ತು ಬಾಕಿ ಉಳಿಸಿ ನಿಧನರಾದರು ಎಂದು ಉಲ್ಲೇಖಿಸಿದ್ದಾರೆ.
ಇನ್ನೊಬ್ಬ ಪ್ರಖ್ಯಾತ ವಿದ್ವಾಂಸ ಇಮಾಮ್ ಸುಫ್ಯಾನುಸ್ಸೌರಿ (ರ) ಒಬ್ಬ ವ್ಯಾಪಾರಿಯಾಗಿದ್ದರು. ಅವರ ಶಿಷ್ಯರೊಬ್ಬರು ಅವರ ಕೆಲಸವನ್ನು ದ್ವೇಷಿಸಿದಾಗ, “ಈ ದೀನಾರಿನ ತುಣುಕುಗಳನ್ನು ನಾವು ಹೊಂದಿಲ್ಲದಿದ್ದರೆ, ರಾಜರು ನಮ್ಮನ್ನು ಅಗತ್ಯ ಮುಗಿದಮೇಲೆ ಎಸೆಯುವ ಟವೆಲ್ ಆಗಿ ನೋಡುತ್ತಿದ್ದರು” ಎಂದು ಉತ್ತರಿಸಿದರು ಎಂಬುದಾಗಿ ಅಬೂ ನಈಮುಲ್ ಇಸ್ಫಹಾನಿ ತಮ್ಮ ಗ್ರಂಥವಾದ ‘ಹುಲ್ಯತುಲ್ ಔಲಿಯಾ’ ಎಂಬ ಗ್ರಂಥದಲ್ಲಿ ಉಲ್ಲೇಖಿಸಿದ್ದಾರೆ.
ಇಮಾಮ್ ದಹಬೀ ತನ್ನ ‘ಸಿಯರ್’ನಲ್ಲಿ ಇಮಾಮ್ ಅಬ್ದುಲ್ಲಾಹಿಬ್ನುಲ್ ಮುಬಾರಕ್ ಕೂಡ ಒಬ್ಬ ವ್ಯಾಪಾರಿ ಎಂದು ಬರೆಯುತ್ತಾರೆ. “ಲೈತ್ ಇಬ್ನ್ ಸಅದ್ ಇಂದಿನ ಪ್ರಮುಖ ವ್ಯಾಪಾರಿ ವಿದ್ವಾಂಸರಲ್ಲಿ ಒಬ್ಬರು. ಮಿಸ್ರ್ ಪ್ರಾಂತ್ಯಗಳಲ್ಲಿ ಖಾಝಿಗಳು ಮತ್ತು ಮುತವಲ್ಲಿಗಳ ನಾಯಕರಾಗಿರುವ ಅವರ ವಾರ್ಷಿಕ ಆದಾಯವು ಎರಡು ಮಿಲಿಯನ್ ದಿನಾರ್ ಆಗಿತ್ತು!”.

ಜೀವನೋಪಾಯಕ್ಕಾಗಿ ವ್ಯಾಪಾರದತ್ತ ಮುಖಮಾಡಿದ ವಿದ್ವಾಂಸರು

ಕಾಲಾನಂತರ ಇಸ್ಲಾಮಿಕ್ ಪ್ರಪಂಚವು ಅಭಿವೃದ್ಧಿ ಹೊಂದುತ್ತಿದ್ದಂತೆ , ಸಶಸ್ತ್ರ ಪಡೆಗಳಲ್ಲಿ ವಿದ್ವಾಂಸರ ಪ್ರಾತಿನಿಧ್ಯವು ಕ್ಷೀಣಿಸುತ್ತಿದ್ದಂತೆ ಗನೀಮತ್ (ಯುದ್ಧಗಳಲ್ಲಿ ಗೆದ್ದಾಗ ದೊರಕುವ) ಸಂಪತ್ತು ಕೊನೆಯಾಗುತ್ತಾ ಬಂತು. ಅದೂ ಅಲ್ಲದೆ ವಿದ್ವಾಂಸ ಮತ್ತು ದೊರೆಗಳ ನಡುವಿನ ಸಂಬಂಧವು ಅಷ್ಟೇನೂ ಅನುಕೂಲಕರವಾಗದೇ ಇದ್ದುದರಿಂದ ವಿದ್ವಾಂಸರು ಜೀವನೋಪಾಯಕ್ಕಾಗಿ ವ್ಯಾಪಾರದಲ್ಲಿ ತೊಡಗಿದರು.
ಆದ್ದರಿಂದ, ವ್ಯಾಪಾರದಿಂದ ಜೀವನ ಸಾಗಿಸಿದ ಮತ್ತು ಅವರ ವೃತ್ತಿಯಿಂದ ಪ್ರಸಿದ್ಧರಾದ ಅನೇಕ ವಿದ್ವಾಂಸರನ್ನು ಇತಿಹಾಸದುದ್ದಕ್ಕೂ ನಾವು ಕಾಣಬಹುದು. ಈ ಮೂಲಕ ಅನೇಕ ವಿದ್ವಾಂಸರು, ರಾಜರು ಮತ್ತು ಅರಮನೆಗಳಿಂದ ದೂರವಿದ್ದು ಪುಸ್ತಕ ಬರವಣಿಗೆ, ಪುಸ್ತಕ ಸಂಗ್ರಹಣೆ ಮತ್ತು ವಿದ್ವತ್ಪೂರ್ಣ ಪ್ರಯಾಣಕ್ಕಾಗಿ ಹಣವನ್ನು ಸಂಗ್ರಹಿಸಲು ಸಾಧ್ಯವಾಯಿತು.
ಇತಿಹಾಸಕಾರರು ಇದನ್ನು ಎಲ್ಲಾ ಐತಿಹಾಸಿಕ ಗ್ರಂಥಗಳಲ್ಲಿ ಇದು ವಿದ್ವಾಂಸರ ದೊಡ್ಡ ಗುಣಲಕ್ಷಣವೆಂದು ಪರಾಮರ್ಶಿಸಿದ್ದಾರೆ. ಇಮಾಮ್ ಇಬ್ನುಲ್ ಜೌಝಿ ಈ ವಿಷಯವನ್ನು ದೂರದೃಷ್ಟಿಯಿಂದ ಸಮೀಪಿಸಿ ಒಂದು ಮೇಲ್ಪಂಕ್ತಿ ಹಾಕಿಕೊಟ್ಟ ವಿದ್ವಾಂಸ ರಾಗಿದ್ದರು.
ರಾಜರು ಮತ್ತು ಶ್ರೀಮಂತರ ಅಧೀನದಿಂದ ಮುಕ್ತವಾಗಿ ಸ್ವ-ಆದಾಯದ ಆಶಯವನ್ನು ಬಹುಮುಖ್ಯವಾಗಿ ಪರಿಚಯಿಸಿದರು. ಅವರು ಸ್ವೈದುಲ್ ಖಾತ್ವಿರ್ನಲ್ಲಿ ಹೀಗೆ ಹೇಳುತ್ತಾರೆ: ‘ಜನರನ್ನು ಅವಲಂಬಿಸದೆ ಸ್ವತಃ ಹಣ ಸಂಪಾದಿಸುವುದಕ್ಕಿಂತ ದೊಡ್ಡದಾದ ವಿಷಯ ಜಗತ್ತಿನಲ್ಲಿನ ವಿದ್ವಾಂಸರಿಗೆ ಬೇರೇನೂ ಇಲ್ಲ.
ಯಾಕೆಂದರೆ ಜ್ಞಾನದ ಜೊತೆಗೆ ಸಂಪತ್ತು ಇದ್ದರೆ ಒಬ್ಬನು ಪರಿಪೂರ್ಣನಾಗುತ್ತಾನೆ. ಹೆಚ್ಚಿನ ವಿದ್ವಾಂಸರು ಜ್ಞಾನದ ಹಿತದೃಷ್ಟಿಯಿಂದ ಬದುಕುವಾಗ ತಮ್ಮ ಜೀವನೋಪಾಯದ ಬಗ್ಗೆ ಗಮನ ಹರಿಸದ ಕಾರಣ, ನಂತರ ಅನೇಕ ಮಾರ್ಗಗಳನ್ನು ಅಳವಡಿಸಿಕೊಳ್ಳಬೇಕಾಗಿ ಬಂದಿದೆ’. ಅವರು ಮುಂದುವರಿಸುತ್ತಾರೆ: ‘ಜ್ಞಾನಿಗಳು ಸಂಪತ್ತನ್ನು ಸಂಗ್ರಹಿಸುವುದರತ್ತ ಗಮನ ಹರಿಸಬೇಕು’.
ಏಕೆಂದರೆ ದೀನ್ ಮತ್ತು ಜಗತ್ತನ್ನು ಒಟ್ಟಿಗೆ ಸೇರಿಸುವ ಮಾರ್ಗವಾಗಿದೆ ಸಂಪತ್ತು. ದೀನ್ ಮತ್ತು ಝುಹ್ದ್ (ತ್ಯಜಿಸುವಿಕೆ) ವಿಚಾರವಾಗಿ ಬೂಟಾಟಿಕೆ ಹೆಚ್ಚಾಗಿ ಬರುವುದು ಬಡತನದ ನಿಮಿತ್ತ. ಅನೇಕ ಶ್ರೀಮಂತರು ವಿದ್ವಾಂಸರನ್ನು ಶೋಷಿಸುವುದನ್ನು ಕಾಣಬಹುದು. ಝಕಾತಿನ ಭಾಗದಿಂದ ಏನನ್ನಾದರೂ ನೀಡಿ ವಿದ್ವಾಂಸರನ್ನು ಕ್ಷುಲ್ಲಕರನ್ನಾಗಿ ಮಾಡೋದನ್ನು ಕಾಣಬಹುದು.
ಅಂತಹ ವ್ಯಕ್ತಿಗೆ ಯಾವುದೇ ಕಾಯಿಲೆ ಅಥವಾ ಇನ್ನಿತರ ಕಾರ್ಯ ಇದ್ದು ಅವನನ್ನು ವಿದ್ವಾಂಸರು ಪರಿಗಣಿಸದಿದ್ದರೆ ಯಾ ಭೇಟಿ ನೀಡದೇ ಇದ್ದರೆ ಸದ್ರಿ ಶ್ರೀಮಂತರು ವಿದ್ವಾಂಸರ ಆಕ್ಷೇಪ ಸೂಚಕವಾಗಿ ಹೆಸರು ಎಣಿಸುತ್ತಿದ್ದರು. ವಾಸ್ತವವಾಗಿ, ಇದು ವಿದ್ವಾಂಸರ ತಕರಾರು ಎಂದೇ ಹೇಳಬೇಕು.
ಇಮಾಮ್ ಅಹ್ಮದ್ ಇಬ್ನ್ ಹಂಬಲ್ (ರ) ಹದಿಯ/ಉಡುಗೊರೆ ಸ್ವೀಕರಿಸದಿದ್ದಾಗ, ಅವರ ಆತ್ಮಸಂಘರ್ಷ ಕಡಿಮೆಯಾಯಿತು ಮತ್ತು ಅವರ ಖ್ಯಾತಿ ಹೆಚ್ಚಾಯಿತು.

ಸ್ವೈದುಲ್ ಖಾತ್ವಿರ್

ವಿದ್ವಾಂಸರಿಗೆ ಕಾನೂನು ರಕ್ಷಣೆ

ಮತ್ತೊಂದು ವಿಧದಲ್ಲಿ ನೋಡುವುದಾದರೆ, ಜ್ಞಾನಾರ್ಜನೆಯಲ್ಲಿ ತೊಡಗಿರುವ ಪ್ರತಿಯೊಬ್ಬರೂ ಉದ್ಯೋಗ ಮಾಡಿ ಜೀವಿಸಲು ಸಾಧ್ಯವಾಗುವುದಿಲ್ಲ. ಕೆಲವೊಮ್ಮೆ, ಇಂತಹ ಉದ್ಯೋಗಗಳು ವಿದ್ವಾಂಸರಿಗೆ ಗ್ರಂಥರಚನೆ, ಶಾಶ್ವತ ಪಠಣ ಮತ್ತು ಜ್ಞಾನ ಸಂಪಾದನೆಗಾಗಿ ಪ್ರಯಾಣಿಸುವುದನ್ನು ತಡೆಯುತ್ತದೆ.
ಹೀಗಾಗಿ, ಜ್ಞಾನಕ್ಕಾಗಿ ತಮ್ಮನ್ನು ಅರ್ಪಿಸಿದ ವಿದ್ವಾಂಸರಿಗೆ ಸಾರ್ವಜನಿಕ ಖಜಾನೆಯಿಂದ ಒಂದು ಪಾಲನ್ನು ನೀಡಬೇಕು ಮತ್ತು ಇಸ್ಲಾಮಿಕ್ ರಾಜಪ್ರಭುತ್ವವು ಈ ಧ್ಯೇಯವನ್ನು ಪೂರೈಸದಿದ್ದರೆ, ಅದು ಸಾರ್ವಜನಿಕ ಬಾಧ್ಯತೆಯಾಗಿ ಪರಿಣಮಿಸುತ್ತದೆ (ಫರ್ಳ್ ಕಿಫಾಯ) ಎಂದು ಕರ್ಮಶಾಸ್ತ್ರ ವಿದ್ವಾಂಸರು ಅಭಿಪ್ರಾಯಪಡುತ್ತಾರೆ.
ಖತ್ವೀಬುಲ್ ಬಗ್ದಾದಿ ಅವರು ತಮ್ಮ ‘ಕಿತಾಬುಲ್ ಫಕೀಹಿ ವಲ್ ಮುತಫಕಿಹ್’ ಎಂಬ ಪುಸ್ತಕದಲ್ಲಿ “ವಿದ್ವಾಂಸರಿಗೆ ಆಡಳಿತಗಾರನು ನೀಡಬೇಕಾದ ಸಾರ್ವಜನಿಕ ಹಕ್ಕುಗಳು” ಎಂಬ ಅಧ್ಯಾಯದಲ್ಲಿ ಇದನ್ನು ವಿವರಿಸಿದ್ದಾರೆ.
ಅವರು ಉಲ್ಲೇಖಿಸಿದ ಲೇಖನದ ಪ್ರಕಾರ, ಹಿಮ್ಸ್ ರಾಜ್ಯಪಾಲರಿಗೆ ಬರೆದ ಪತ್ರದಲ್ಲಿ ಖಲೀಫಾ ‘ಉಮರ್ ಇಬ್ನ್ ಅಬ್ದುಲ್ ಅಝೀಝ್ (ರ)’ ಹೇಳುತ್ತಾರೆ: ‘ಧಾರ್ಮಿಕ ಅಧ್ಯಯನದಲ್ಲಿ ಬದ್ಧರಾಗಿ ಮಸೀದಿಯಲ್ಲಿರುವವರಿಗೆ ವಿಶೇಷ ಗಮನ ಕೊಡಿ ಮತ್ತು ಪ್ರತಿಯೊಬ್ಬರಿಗೂ ನೂರು ದೀನಾರ್ ಗಳನ್ನು ನೀಡಿʼ.
ಕೆಲವು ವಿದ್ವಾಂಸರು ಫತ್ವಾಗಳನ್ನು ನೀಡುವ ಮೂಲಕ, ದರ್ಗಾಗಳನ್ನು ನಡೆಸುವ ಮೂಲಕ ಮತ್ತು ಇಮಾಮತ್ ಮೂಲಕ ಸಮುದಾಯಕ್ಕೆ ಮಾಡಿದ ಸೇವೆಗಳಿಗೆ ಪ್ರತಿಯಾಗಿ ಸಾರ್ವಜನಿಕ ಖಜಾನೆಯಿಂದ ಇಂತಹ ಮೊತ್ತವನ್ನು ಪಡೆದರೆ, ಕೆಲವರು ಅದನ್ನು ಸ್ವೀಕರಿಸಲು ಸಿದ್ಧರಿರಲಿಲ್ಲ. ಸೈನಿಕರಿಗೆ ಹಾಗು ಎಲ್ಲಾ ರಾಷ್ಟ್ರಗಳ ಔದ್ಯೋಗಿಕ ಕ್ಷೇತ್ರದಲ್ಲಿರುವವರಿಗೆ ನೀಡುವ ಹಾಗೆ ವಿದ್ವಾಂಸರಿಗೂ ಉಪಜೀವನ ಮಾರ್ಗವೆಂಬ ಈ ಉಪಾಯವನ್ನು ‘ಉಮರ್ ಇಬ್ನ್ ಅಬ್ದುಲ್ ಅಝೀಝ್ (ರ)’ ಅವರು ಪ್ರಾರಂಭಿಸಿದರು.
ಕಾಲಾನಂತರದಲ್ಲಿ, ಐದನೇ ಶತಮಾನದ ಆರಂಭದ ವೇಳೆಗೆ ವಿದ್ವಾಂಸರು, ರಾಷ್ಟ್ರಗಳು, ರಾಜರು ಮತ್ತು ಶ್ರೀಮಂತರ ಉಡುಗೊರೆಗಳನ್ನು ಹೆಚ್ಚು ತೆಗೆದುಕೊಳ್ಳುವ ಪ್ರವೃತ್ತಿ ಬೆಳೆಯಿತು. ಫತ್ವಾ, ಖಳಾ ಮತ್ತು ಇತರ ಧಾರ್ಮಿಕ ಅಧಿಕೃತ ಸ್ಥಾನಗಳು ಅಸ್ತಿತ್ವಕ್ಕೆ ಬಂದವು ಮತ್ತು ಮದ್ ಹಬ್ ಕೇಂದ್ರೀಕರಿಸಿದ ಮದರಸಾಗಳನ್ನು ರಚಿಸಲಾಯಿತು, ಹಾಗು ಜುಮಾ ಮಸೀದಿಗಳಿಗೆ ಉತ್ತರಾಧಿಕಾರದ ಕಾನೂನಿನ ಮೂಲಕ ಅಧಿಕಾರ ಸ್ಥಾನಗಳನ್ನು ನೀಡಲಾದಾಗ ಈ ಪ್ರವೃತ್ತಿ ವಿಶೇಷವಾಗಿ ಪ್ರಚಲಿತದಲ್ಲಿತ್ತು.
ಆದರೆ ಅಧಿಕಾರ ಸ್ಥಾನಗಳಿಗೆ ಹತ್ತಿರ ಬರದ ಮತ್ತು ಸ್ಥಳೀಯ ಫತ್ವಾ ಗುಂಪುಗಳನ್ನು ರಚಿಸಿ ಅಧಿಕಾರಿಗಳ ಮುಂದೆ ತಲೆಬಾಗಲು ನಿರಾಕರಿಸಿದ ವಿದ್ವಾಂಸರು ಹಲವಾರು ಇದ್ದರು.

ಇಮಾಮ್ ಇಬ್ನುಲ್ ಜೌಝಿ (ರ) ಪ್ರಕಾರ, ಸ್ವಾಭಿಮಾನ ರಕ್ಷಿಸಲು ಅಧಿಕಾರಿಗಳ ಔದಾರ್ಯವನ್ನು ಸ್ವೀಕರಿಸದೆ ವ್ಯಾಪಾರ ಮಾಡಿ ಜೀವನ ನಡೆಸಿದ ವಿದ್ವಾಂಸರು ಎಲ್ಲಾ ಕಾಲದಲ್ಲೂ ಇದ್ದರು.
ಪ್ರಯಾಣವನ್ನು ಒಂದೇ ವೇಳೆ ವ್ಯಾಪಾರ, ಜ್ಞಾನ ಮತ್ತು ಕೆಲಸಕ್ಕಾಗಿ ಬಳಸುತ್ತಿದ್ದ ಅವರಲ್ಲಿ ಕಮ್ಮಾರರು, ಬಡಗಿಗಳು, ನೇಕಾರರು, ಸುಗಂಧ ವ್ಯಾಪಾರಿಗಳು ಮತ್ತು ಮಾರಾಟಗಾರರು ಇದ್ದರು. ಇಮಾಂ ಸಂಆನಿಯವರು ‘ಅಲ್-ಅನ್ಸಾಬ್ ‘ ನಲ್ಲಿ ಇಂತಹ ಜನರನ್ನು ವಿವರವಾಗಿ ಪರಿಚಯಿಸುತ್ತಾರೆ.
ವ್ಯಾಪಾರಿ ವಿದ್ವಾಂಸರ ವಿಶಾಲ ಜಗತ್ತನ್ನು ಅರ್ಥಮಾಡಿಕೊಳ್ಳಲು, ಇಮಾಮ್ ದಹಬಿಯವರ ‘ಸಿಯರು ಅಅಲಾಮಿನುಬಲಾಇ’ನಲ್ಲಿ ಉಲ್ಲೇಖಿಸಲಾದ 150 ಕ್ಕಿಂತ ಹೆಚ್ಚು ಪ್ರಖ್ಯಾತ ವಿದ್ವಾಂಸರನ್ನು ಹುಡುಕಿದರೆ ಸಾಕು. ಪ್ರಸಿದ್ಧ ಹದೀಸ್ ವಿದ್ವಾಂಸ ಯೂಸುಫ್ ಇಬ್ನ್ ಸರೀಕ್ ರವರು ವ್ಯಾಪಾರಕ್ಕಾಗಿ ಮಿಸ್ರಿಗೆ ಹೋಗಿ ಅಲ್ಲಿ ನಿಧನರಾದರು ಮತ್ತು ಇಬ್ನ್ ಅಮ್ಮಾರುಲ್ ಮೌಸ್ವಿಲಿ ರವರು ವ್ಯಾಪಾರಕ್ಕಾಗಿ ಬಗ್ದಾದಿಗೆ ಹೋಗಿ ಅಲ್ಲಿ ಹದೀಸ್ ಕಲಿಸಿದರು ಎಂಬುದಾಗಿ ಅವರು ಉಲ್ಲೇಖಿಸಿದ್ದಾರೆ.
ಅಂದಲೂಸಿಯಾದಿಂದ ಚೀನಾಕ್ಕೆ ವಾಣಿಜ್ಯಾರ್ಥವಾಗಿ ಪ್ರಯಾಣಿಸಿದ ಜನರು ಈ ಗುಂಪಿನಲ್ಲಿದ್ದರು ಎಂದು ಅವರು ಹೇಳುತ್ತಾರೆ. ಅಪರೂಪದ ಜ್ಞಾನ ಮತ್ತು ಸಂಪತ್ತಿನಿಂದ ಆಶೀರ್ವದಿಸಲ್ಪಟ್ಟ ಮತ್ತೊಬ್ಬ ವಿದ್ವಾಂಸರಾಗಿದ್ದರು ದಅಲಾಜ್ ಇಬ್ನ್ ಅಹ್ಮದ್ ಸಿಜಿಸ್ತಾನಿ.
ಇಮಾಮ್ ದಹಬಿ ಹೇಳುತ್ತಾರೆ:”ಅವರು ಹದೀಸ್ ಮತ್ತು ಫಿಖ್ಹ್ ಕ್ಷೇತ್ರದಲ್ಲಿ ಪರಿಣತರಾಗಿದ್ದರು ಮತ್ತು ಎರಡು ಹರಮ್ಗಳಲ್ಲಿ, ಇರಾಕ್ ಮತ್ತು ಕುರಾಸಾನಿನಲ್ಲೂ ವ್ಯಾಪಾರ ಮಾಡಿದ್ದರು. ಇಮಾಮ್ ದಾರಕುತ್ನಿ ಈ ಮಹಾನರ ಬಗ್ಗೆ, ದಅಲಜ್ ಅವರಿಗಿಂತ ಹೆಚ್ಚು ದೃಢಜ್ಞಾನವುಳ್ಳ ಯಾರನ್ನೂ ನಮ್ಮ ಶೈಖ್ ಗಳ ಪೈಕಿ ನೋಡಿಲ್ಲ” ಎಂದು ಹೇಳಿದ್ದಾರೆ.
ಅವರ ನಿಧನದ ಸಮಯದಲ್ಲಿ ಅವರ ಉಳಿತಾಯವು ಮೂರು ಲಕ್ಷ ದೀನಾರುಗಳಾಗಿದ್ದವು.

ವ್ಯಾಪಾರಾರ್ಥ ಪ್ರವಾಸಗಳು

‘ಇಬ್ನ್ ಮಸರ್ರ ಅತ್ತುಜೀಬೀ ಅತ್ತುಲಯ್ತುಲಿ’ ಅಂದಲೂಸಿನ ಪ್ರಮುಖ ವ್ಯಾಪಾರಿ ವಿದ್ವಾಂಸರಲ್ಲಿ ಒಬ್ಬರು.
ಕೋರ್ಡೋವಾದಲ್ಲಿ ಸೆಣಬಿನ ವ್ಯಾಪಾರ ಮಾಡುತ್ತಿದ್ದ ಅವರು ಸ್ಥಳೀಯ ವಿದ್ವಾಂಸರಾಗಿದ್ದರು. ಪ್ರಮುಖ ಹದೀಸ್ ವಿದ್ವಾಂಸರಾದ ಇಬ್ನ್ ಜಮೀಉಲ್ ಘಸ್ಸಾವಿ ಅಸ್ಸೈದಾವಿ ಅವರು ವರ್ತಕ ಪ್ರಯಾಣಕ್ಕೆ ಹೆಸರುವಾಸಿಯಾಗಿದ್ದರು ಮತ್ತು ಹದೀಸ್ ಬಗ್ಗೆ ಸಿರಿಯಾದಲ್ಲಿ ಅತ್ಯಂತ ಜ್ಞಾನವುಳ್ಳ ಜನರಲ್ಲಿ ಒಬ್ಬರಾಗಿದ್ದರು.
ಪ್ರಯಾಣದ ಸಮಯದಲ್ಲಿ ಶಾಮ್, ಇರಾಕ್, ಪರ್ಷಿಯಾ, ಹಿಜಾಝ್ ಮತ್ತು ಮಿಸ್ರಿನ ಮೂವತ್ತಕ್ಕೂ ಹೆಚ್ಚು ಹದೀಸ್ ಕೇಂದ್ರಗಳಿಂದ ಅನೇಕ ಪ್ರಖ್ಯಾತ ವಿದ್ವಾಂಸರ ಶಿಷ್ಯತ್ವವನ್ನು ಅವರು ಪಡೆದಿದ್ದರು ಎಂದು ಇಮಾಂ ದಹಬಿ ಉಲ್ಲೇಖಿಸಿದ್ದಾರೆ.
‘ಅತ್ವ್ರಾಫ್ ಸಹೀಹೈನ್’ ಗ್ರಂಥದ ಕರ್ತೃ ಇಮಾಮ್ ಖಲಫ್ ಅಲ್-ವಾಸಿತಿ ಕೂಡ ಓರ್ವ ವರ್ತಕ ಪ್ರಯಾಣಿಕನಾಗಿದ್ದರು ಮತ್ತು ಪ್ರಸಿದ್ಧ ಹದೀಸ್ ಗ್ರಂಥ ‘ಮುಸ್ತದ್ರಕ್’ ನ ಲೇಖಕ ಹಕೀಮ್ ನೈಸಾಬೂರಿ ಕೂಡ ಅವರಿಂದ ಒಂದು ಹದೀಸನ್ನು ವರದಿ ಮಾಡಿದ್ದಾರೆ ಎಂದು ಇಮಾಮ್ ದಹಬಿ ದಾಖಲಿಸಿದ್ದಾರೆ. ಅಂದಲುಸಿನ ಹದೀಸ್ ವಿದ್ವಾಂಸ ಮತ್ತು ನ್ಯಾಯಶಾಸ್ತ್ರಜ್ಞ ಸಅದುಲ್ ಖೈರ್ ಅಲ್-ಅನ್ಸಾರಿ ವ್ಯಾಪಾರ ಮತ್ತು ಬೌದ್ಧಿಕ ಉದ್ದೇಶಗಳಿಗಾಗಿ ಅಂದಲುಸಿನಿಂದ ಚೀನಾಕ್ಕೆ ಪ್ರಯಾಣ ಬೆಳೆಸಿದವರಾದ ಕಾರಣ ಅವರ ಹೆಸರಿಗೆ ಸ್ಪೇನ್ ಮತ್ತು ಚೀನಾವನ್ನು ಸೇರಿಸಿ ಹೇಳುವುದನ್ನು ಕಾಣಬಹುದೆಂದು ಇಮಾಂ ದಹಬಿ ಹೇಳುತ್ತಾರೆ.
ಮತ್ತೊರ್ವ ಹದೀಸ್ ವಿದ್ವಾಂಸ ಅಬು ತಮಾಮ್ ಅಬ್ಬಾಸಿ ಅಲ್-ಬಗ್ದಾದಿ ವ್ಯಾಪಾರಾರ್ಥ ಭಾರತ ಮತ್ತು ಟರ್ಕಿಗೆ ಸಮುದ್ರ ಪ್ರಯಾಣ ನಡೆಸಿದ ವೇಳೆ ನೈಸಾಬೂರ್ ನಲ್ಲಿ ನಿಧನರಾದರು.

ತ್ಯಾಗ, ಏಕಾಂಗಿತನ

ಸ್ವಯಂ-ವ್ಯಾಪಾರದಲ್ಲಿ ಆಸಕ್ತಿ ಹೊಂದಿದ್ದ ವಿದ್ವಾಂಸರ ಜೊತೆಗೆ, ಕುಟುಂಬದ ವ್ಯಾಪಾರ ಸ್ವತ್ತುಗಳನ್ನು ಬಳಸಿಕೊಂಡು ಜ್ಞಾನವನ್ನು ಸಂಪಾದಿಸಲು ಮತ್ತು ಜ್ಞಾನವನ್ನು ಪ್ರಸಾರ ಮಾಡಲು ಗಮನಹರಿಸಿದ ಪ್ರಮುಖ ವ್ಯಾಪಾರಿಗಳ ಮಕ್ಕಳು ಅನೇಕರು ಇದ್ದರು.
ಖತೀಬುಲ್ ಬಗ್ದಾದಿ ‘ತಾರಿಖ್ ಬಗ್ದಾದ್’ ನಲ್ಲಿ ಅಂತಹ ಜನರ ಉದಾಹರಣೆಗಳನ್ನು ನೀಡಿದ್ದಾರೆ. ಅತಿ ಶ್ರೀಮಂತನಾದ ಇಬ್ನುಲ್ ಫರಜಿ ಎಂದೇ ಪ್ರಸಿದ್ಧರಾಗಿದ್ದ ಅಬು ಜಾಫರ್ ಅಸ್ಸೂಫಿ, ಪಿತ್ರಾರ್ಜಿತವಾಗಿ ಲಭಿಸಿದ ತಮ್ಮ ಸಂಪತ್ತನ್ನೆಲ್ಲ ಜ್ಞಾನಕ್ಕಾಗಿ ಖರ್ಚು ಮಾಡಿದರು ಮತ್ತು ಬಡವರಿಗೆ, ಪ್ರಯಾಣಿಕರಿಗೆ ಹಾಗು ಸೂಫಿಗಳಿಗೆ ಸಹಾಯ ಮಾಡಲು ವಿನಿಯೋಗಿಸಿದರು.
ಇಬ್ನುಲ್ ಫರಜಿಗೆ ಇಬ್ನುಲ್ ಮದೀನಿ ಯೊಂದಿಗೆ ಇದ್ದ ಒಡನಾಟದ ಪರಿಣಾಮವಾಗಿ, ಅವರು ಫಿಖ್ಹ್ ಮತ್ತು ಹದೀಸ್ ನಲ್ಲೂ ಪ್ರವೀಣರಾಗಿದ್ದರು. ‘ಸಿಯರ್’ ಹೇಳುವಂತೆ , ಅನೇಕ ಗ್ರಂಥಗಳ ಕರ್ತೃ ಮುಹಮ್ಮದ್ ಇಬ್ನ್ ಅಹ್ಮದ್ ಅಲ್ ಅಸ್ಬಹಾನಿ ‘ಅಸ್ಸಾಲ್’ (ಜೇನುಸಾಕಣೆದಾರ) ಎಂಬ ಹೆಸರಿನಲ್ಲಿ ಪ್ರಸಿದ್ಧರಾದರು. ಮಾತ್ರವಲ್ಲ ಅವರು ವ್ಯಾಪಾರಿ ತಂದೆಯಿಂದ ಅನೇಕ ತೋಟಗಳು, ಮನೆಗಳು ಮತ್ತು ಅಂಗಡಿಗಳನ್ನು ಪಿತ್ರಾರ್ಜಿತವಾಗಿ ಪಡೆದಿದ್ದರು. ಇನ್ನೋರ್ವ ಪ್ರಮುಖ ವ್ಯಾಪಾರಿ ಅಬುಲ್ ಅಲಾಉಲ್ ಹಮ್ದಾನಿ ತಮ್ಮ ಸಂಪತ್ತನ್ನೆಲ್ಲ ಜ್ಞಾನದ ಹಾದಿಯಲ್ಲಿ ಖರ್ಚು ಮಾಡಿದರು ಮತ್ತು ಕಾಲ್ನಡಿಗೆಯಲ್ಲೇ ಬಗ್ದಾದ್ ಮತ್ತು ಅಸ್ಬಹಾನ್ ಗೆ ತಮ್ಮ ಪುಸ್ತಕಗಳನ್ನು ಹೊತ್ತುಕೊಂಡು ನಡೆದ ವ್ಯಕ್ತಿಯಾಗಿದ್ದರು.
ಜ್ಞಾನದ ಹಾದಿಯಲ್ಲಿ ಸಂಪತ್ತನ್ನು ಖರ್ಚು ಮಾಡುವ ಮೂಲಕ ಕೊನೆಗೆ ಬಡತನಕ್ಕೆ ಸಿಲುಕಿದಾಗಲೂ ಅವರು ಅಧಿಕಾರಿಗಳ ಸಂಪತ್ತನ್ನು ಸ್ವೀಕರಿಸಲು ಸಿದ್ಧರಾಗಿರಲಿಲ್ಲ.

ಅಂದಲುಸಿನ ಪ್ರಮುಖ ವ್ಯಾಪಾರ ಕುಟುಂಬದ ಹದೀಸ್ ವಿದ್ವಾಂಸರಾದ ಸಅದುಲ್ ಖೈರುಲ್ ಅನ್ಸಾರಿ ಅವರ ಪುತ್ರಿ ಫಾತಿಮಾ ವ್ಯಾಪಾರಿ ವಿದ್ವಾಂಸೆಯರ ಪೈಕಿ ಖ್ಯಾತನಾಮರು.
ಶಾಫಿ ನ್ಯಾಯಶಾಸ್ತ್ರದ ವಿದ್ವಾಂಸ ಶಿಹಾಬುದ್ದೀನ್ ಅಹ್ಮದ್ ಇಬ್ನ್ ಮುಹಮ್ಮದ್ ಅಲ್-ಅನ್ಸಾರಿ ಯವರು ಕೃಷಿ ಮತ್ತು ನಂತರದ ವ್ಯಾಪಾರದಿಂದ ಗಳಿಸಿದ ದೊಡ್ಡ ಮೊತ್ತದ ಹಣವನ್ನು ಅಲ್-ಅಝ್ಹರ್ ಗೆ ವಕ್ಫ್ ಮಾಡಿದರು. ವ್ಯಾಪಾರಿಗಳು ಮತ್ತು ನಿರ್ಗತಿಕರ ನಡುವೆ ಮಧ್ಯವರ್ತಿಯಾಗಿ ಜೀವಿಸಿದ್ದ ವಿದ್ವಾಂಸರ ಗುಂಪಿನಲ್ಲಿ ಹಜ್ಜಾಜ್ ಬಿನ್ ಮಿನ್ಹಾಲ್ ಅಲ್-ಬಸ್ವರಿಯನ್ನು ಇಮಾಂ ದಹಬಿ ಉಲ್ಲೇಖಿಸಿದ್ದಾರೆ.
ವ್ಯಾಪಾರದಿಂದ ಉಂಟಾಗಬಹುದಾದ ಸ್ವಾಭಾವಿಕ ನಷ್ಟಗಳಿಂದ ವಿದ್ವಾಂಸರೂ ಮುಕ್ತರಾಗಿರಲಿಲ್ಲ. ಮೊದಲೇ ಹೇಳಿದ ಅಬುಲ್ ಫರಜ್ ಬಿನ್ ಕುಲೈಬ್ ಅಲ್-ಹರ್ರಾನಿಯ ಸೇವಕ ಸುಮಾರು ಆರು ಸಾವಿರ ದೀನಾರುಗಳ ಸಂಪತ್ತಿನೊಂದಿಗೆ ಸಮುದ್ರದಲ್ಲಾದ ಅಪಘಾತದಲ್ಲಿ ತೀವ್ರ ಸಂಕಷ್ಟದಲ್ಲಿದ್ದರು ಮತ್ತು ಜೀವನವನ್ನು ಮುನ್ನಡೆಸಲು ಕಷ್ಟಪಡುತ್ತಿದ್ದರು.
ಅದೇ ರೀತಿ, ಕೆಲವು ಸಹಚರರು ಮತ್ತು ಇತರ ವಿದ್ವಾಂಸರು ತಮ್ಮ ಜೀವನದುದ್ದಕ್ಕೂ ವ್ಯಾಪಾರಕ್ಕಾಗಿ ಸಂಪತ್ತನ್ನು ಪಡೆದರೆ ಅಥವಾ ಯಾವುದೇ ನಷ್ಟವನ್ನು ಅನುಭವಿಸಿದರೆ ತಮ್ಮ ಉಳಿದ ಸಮಯವನ್ನು ಆರಾಧನೆ ಮತ್ತು ಜ್ಞಾನದಲ್ಲಿ ಉಳಿದ ಕಾಲ ಕಳೆಯುತ್ತಿದ್ದರು. ಅಬುದ್ದರ್ದಾ (ರ) ಒಂದು ಕಾಲದಲ್ಲಿ ಪ್ರಸಿದ್ಧ ವ್ಯಾಪಾರಿಯಾಗಿದ್ದರೂ, ಇಸ್ಲಾಂ ಧರ್ಮದ ಆಗಮನದೊಂದಿಗೆ, ವ್ಯಾಪಾರ ಮತ್ತು ಆರಾಧನೆಯನ್ನು ಏಕಕಾಲಕ್ಕೆ ನಡೆಸಲು ಸಾಧ್ಯವಾಗದಿದ್ದಾಗ, ವ್ಯಾಪಾರವನ್ನು ತ್ಯಜಿಸಿ ಆರಾಧನೆಯನ್ನು ಆರಿಸಿಕೊಂಡರು.
ಪ್ರಮುಖ ನ್ಯಾಯಶಾಸ್ತ್ರಜ್ಞ ಇಬ್ನ್ ಶಾದ ನೈಸಾಬೂರಿಯ ಬಗ್ಗೆ , ‘ತ್ವಬಕಾತುಲ್ ಫುಕಾಹಾಇ ಶ್ಶಾಫಿಇಯ್ಯ’ ದಲ್ಲಿ ಸದ್ರಿ ಇಮಾಮರು ವ್ಯವಹಾರವನ್ನು ತ್ಯಜಿಸಿ ಮಸೀದಿಯಲ್ಲಿ ವರ್ಷಗಳ ಕಾಲ ಕಳೆದಿದ್ದಾರೆ ಎಂದು ಉಲ್ಲೇಖಿಸಲಾಗಿದೆ.

ತಾರಿಖ್ ಬಗ್ದಾದ್

ಇಂತಹ ವ್ಯಾಪಾರದ ಫಲಶೃತಿ ಎಂಬಂತೆ , ಇಸ್ಲಾಮಿಕ್ ಪ್ರಪಂಚದ ಎಲ್ಲಾ ಭಾಗಗಳಿಗೆ ಜ್ಞಾನದ ಬೆಳಕನ್ನು ಹರಡುವ ವಿದ್ವಾಂಸರ ಧ್ಯೇಯದ ಸಾಕ್ಷಾತ್ಕಾರ ಮತ್ತು ವಿದ್ವಾಂಸರ ಸ್ವಯಂ ಪರ್ಯಾಪ್ತತೆ ಮತ್ತು ಅತಿಜೀವನ ಸಾಧ್ಯವಾಯಿತು.
ಸಾಮಾನ್ಯವಾಗಿ, ಎಲ್ಲಾ ವ್ಯಾಪಾರಿಗಳು, ವಿಶೇಷವಾಗಿ ಅವರಲ್ಲಿ ವಿದ್ವಾಂಸರು ಮತ್ತು ಪುಸ್ತಕ ಮಾರಾಟಗಾರರು ವಿವಿಧ ದೇಶಗಳಲ್ಲಿ ವಿದ್ವತ್ಪೂರ್ಣ ಪುಸ್ತಕಗಳ ವಿನಿಮಯದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಮೇಲೆ ತಿಳಿಸಿದ ಸಂಶೋಧಕ ಒಲಿಖಿಯಾ ರೆಮಿ ಅವರ ಅಧ್ಯಯನವು ಹಿಜ್ರಾ 414 ಮತ್ತು 432 ವರ್ಷದ ನಡುವೆ ಮುಸ್ಲಿಂ ಸ್ಪೇನ್ಗೆ ಬಂದ ವ್ಯಾಪಾರಿ ವಿದ್ವಾಂಸರ ಸ್ಪಷ್ಟ ದಾಖಲೆಯನ್ನು ದೃಢ ಪಡಿಸುತ್ತದೆ. ಅಂದಲೂಸಿನ ಇಬ್ನ್ ಬಷ್ಕುವಾಲ್ ಎಂಬ ವಿದ್ವಾಂಸರು ಅಂತಹ 22 ಜನರ ಹೆಸರನ್ನು ಉಲ್ಲೇಖಿಸಿದ್ದಾರೆ.
ಇಬ್ನ್ ಅಬಿ ಉಸೈಬಿಯಾ, ಪ್ರಸಿದ್ಧ ಅಂದುಲಸ್ ವೈದ್ಯ ಅಬುಲ್ ಅಲಾ ಬಿನ್ ಜುಹ್ರ್ ಅವರನ್ನು ಪರಿಚಯಿಸುತ್ತಾ ಅವರ ಕಾಲದಲ್ಲಾಗಿತ್ತು ಇಬ್ನ್ ಸೀನಾರ ‘ಅಲ್-ಕಾನೂನ್’ ಪಶ್ಚಿಮಕ್ಕೆ ಬಂದದ್ದು ಎಂದು ಹೇಳುತ್ತಾರೆ. ಇರಾಕ್ ನಿಂದ ಅಂದಲುಸ್ ಗೆ ಬಂದ ಒಬ್ಬ ಪ್ರಸಿದ್ಧ ವ್ಯಾಪಾರಿ ಈ ಪುಸ್ತಕದ ಪ್ರತಿಯನ್ನು ತಂದು ಅಬುಲ್ ಅಲಾಇನ್ ಗೆ ಉಡುಗೊರೆಯಾಗಿ ಕೊಟ್ಟಿದ್ದರು.

ಪರ್ಷಿಯಾ ಪ್ರದೇಶದಿಂದ ಮಧ್ಯ ಏಷ್ಯಾಕ್ಕೆ ಅಪರೂಪದ ಪುಸ್ತಕಗಳನ್ನು ತಲುಪಿಸಿದ್ದ ಅನೇಕ ವ್ಯಾಪಾರಿಗಳಿದ್ದರು. ‘ಉಯುನುಲ್ ಅನ್ಬಾ’ ಎಂಬ ಪುಸ್ತಕದಲ್ಲಿ ಹೀಗಿದೆ: ಹಿಜಿರಾ 632 ನೇ ವರ್ಷ, ವಿದೇಶಿ ವ್ಯಾಪಾರಿಯೊಬ್ಬರು ಇಬ್ನ್ ಅಬಿ ಸಾದಿಕ್ ನೈಸಾಬೂರಿ ಅವರು ಜಾಲಿನೂಸ್ ರವರ ‘ದಿ ಬೆನಿಫಿಟ್ಸ್ ಆಫ್ ದಿ ಆರ್ಗನ್ಸ್’ (ಮನಾಫಿಉಲ್ ಅಅಳಾ) ಗ್ರಂಥಕ್ಕೆ ಬರೆದ ವಿವರಣಾ ಗ್ರಂಥವನ್ನು ತೆಗೆದು ಕೊಂಡು ಡೆಮಸ್ಕಸ್ ಗೆ ಬಂದರು. ಅದು ಆ ಪುಸ್ತಕದ ಅಸಲು ಪ್ರತಿ ಎಂಬುದು ಲೇಖಕರ ಕೈಬರಹದಿಂದಲೇ ಸ್ಪಷ್ಟ ಆಗುತ್ತದೆ. ಅದು ಆ ಗ್ರಂಥದ ಪ್ರಥಮ ಸಿರಿಯನ್ ಪ್ರತಿ ಆಗಿತ್ತು. ಪ್ರಯಾಣಿಕರು ಮತ್ತು ವ್ಯಾಪಾರಿಗಳಾದ ವಿದ್ವಾಂಸರು ತಾವು ಪ್ರಯಾಣಿಸುವ ಅಥವಾ ವಾಸಿಸುವ ದೇಶಗಳನ್ನು ಹೆಚ್ಚಾಗಿ ತಮ್ಮ ಹೆಸರಿನೊಂದಿಗೆ ಉಲ್ಲೇಖಿಸುವ ಕಾರಣ ಅವರ ಸ್ವಂತ ದೇಶವು ಅಪ್ರಸ್ತುತವಾಗುತ್ತದೆ. ತನ್ನನ್ನು “ಸ್ವೀನೀ” (ಚೈನೀಸ್) ಎಂದು ಗುರುತಿಸಿಕೊಂಡ ಅಲ್-ಸಅದುಲ್ ಖೈರುಲ್ ಅಂದಲೂಸಿ ಮತ್ತು, ಇರಾನಿನ ಪಶ್ಚಿಮ ಪ್ರದೇಶವಾದ ತುಸ್ತರ್ ಎಂಬಲ್ಲಿ ವ್ಯಾಪಾರ ಮಾಡಿದ ಕಾರಣ ಮಿಸ್ರಿ ಆಗಿಯೂ “ತುಸ್ತರಿ” ಎಂದು ಹೆಸರುವಾಸಿಯಾದ ಅಹ್ಮದ್ ಬಿನ್ ಈಸ ಈ ಗುಂಪಿನಲ್ಲಿ ಸೇರಿದವರು ಎಂದು ಖತೀಬುಲ್ ಬಗ್ದಾದಿಯವರು ತಮ್ಮ’ತಾರೀಖು ಬಗ್ದಾದ್’ ನಲ್ಲಿ ಹೇಳುತ್ತಾರೆ. ಜ್ಞಾನ ಕ್ಷೇತ್ರಕ್ಕೆ ಸಂಬಂಧವಿಲ್ಲದಿದ್ದರೂ, ಜ್ಞಾನವನ್ನು ಮತ್ತು ಅದರ ಸೇವಕರ ರಕ್ಷಣೆಗೆ ಮುಂದೆ ಬಂದ ವ್ಯಾಪಾರಿಗಳನ್ನೂ ಕಾಣಬಹುದು. ಅದು ಆರಾಧನೆಯೆಂದು ತಿಳಿದು ಜ್ಞಾನಕ್ಕಾಗಿ ವಕ್ಫ್ ಸಹಿತ ಹಲವಾರು ಸೇವೆ ನಡೆಸಲು ಅವರು ಸಿದ್ಧರಾಗಿದ್ದರು. ಹೀಗೆ ಪ್ರಸಿದ್ಧನಾದ ಇದ್ರೀಸುಲ್ ಅದ್ಲ್ ಎಂಬ ವ್ಯಾಪಾರಿಯೊಬ್ಬರ ಕುರಿತು ಇಮಾಂ ತ್ವಬ್ರಿ ತಮ್ಮ ಗ್ರಂಥದಲ್ಲಿ ಪರಾಮರ್ಶಿಸಿದ್ದಾರೆ.

ಮೂಲ: ಮುಹಮ್ಮದ್ ಅಲ್ ಸಯ್ಯದ್
ಕನ್ನಡಕ್ಕೆ: ಎ.ಕೆ ರುಕ್ಸಾನ ಗಾಳಿಮುಖ

3 Comments

  1. ವಿಷಯದ ಆಯ್ಕೆ ನಿಜಕ್ಕೂ ಗ್ರೇಟ್. ಮುತ್ತಿನಂಥ ವಿಚಾರಗಳು. ತರ್ಜುಮೆ ಪೇಳವ. ಭಾಷಾ ಹಿಡಿತವಿರುವವರ ಮೇಲ್ನೋಟ/ಸಹಕಾರ ಬೇಕಿತ್ತು.

Leave a Reply

*