ಶರೀಅಃದ ಬಹುತ್ವದ ನೆಲೆಗಳು ಮತ್ತು ವಸಾಹುಶಾಹಿಗಳ ಕೋಡಿಫಿಕೇಶನ್

“ಅಬ್ಬಾಸೀ ಸಾಮ್ರಾಜ್ಯದ ಖಲೀಫಾ  ಅಬೂ ಜಅಫರುಲ್ ಮನ್ಸೂರ್ ರವರೊಂದಿಗೆ ಮಂತ್ರಿ ಇಬ್ನ್ ಅಲ್ ಮುಖಫ್ಫಅ ರವರು ಆಡಳಿತದಲ್ಲಿನ ಪಾರದರ್ಶಕತೆಯನ್ನು ಖಚಿತಪಡಿಸಲಿಕ್ಕಾಗಿ ಒಂದು ಸಲಹೆ ಕೊಡುತ್ತಾರೆ. ತಮ್ಮ ಆಡಳಿತದ ಅಡಿಯಲ್ಲಿ ನಡೆಯುವ ಶರೀಅತ್ ವ್ಯವಹಾರಗಳನ್ನು ಏಕರೂಪಗೊಳಿಸಿ ಒಂದು ನಾಗರಿಕ ಕಾನೂನು ಸಂಹಿತೆ ರೂಪೀಕರಿಸಬೇಕು ಎಂದಾಗಿತ್ತು ಮಂತ್ರಿಯ ಸಲಹೆ. ಆಡಳಿತ ಸುಧಾರಣೆಯನ್ನು ಬಯಸಿದ ಖಲೀಫಾ ಈ ಸಲಹೆಯನ್ನು ಗಂಭೀರವಾಗಿ ತೆಗೆದು ಕೊಳ್ಳುತ್ತಾರೆ. ಆ ಕಾಲದಲ್ಲಿ ಕಾನೂನು ವಿಚಾರಗಳನ್ನು  ನಿಖರವಾದ ರೀತಿಯಲ್ಲಿ ಕಲೆ ಹಾಕಲಾದ ಗ್ರಂಥ ಎಂಬ ನೆಲೆಯಲ್ಲಿ ಪ್ರಸಿದ್ಧವಾದ ‘ ಮುವತ್ತ ‘ ಗ್ರಂಥವನ್ನು ಅಧಿಕೃತ ಕಾನೂನು ಗ್ರಂಥವಾಗಿ ನಿರ್ಣಯಿಸಿ ರಾಜಾದೇಶ ಹೊರಡಿಸಲು ಖಲೀಫಾ ಚಿಂತನೆ ನಡೆಸುತ್ತಾರೆ. ಹಜ್ ವೇಳೆಯಲ್ಲಿ ಆ ಗ್ರಂಥದ ಕರ್ತೃ ಆಗಿರುವ ಇಮಾಮ್ ಮಾಲಿಕ್ ರನ್ನು ಭೇಟಿ ಮಾಡಿದ ಖಲೀಫಾ ಅವರ ಸಮಕ್ಷಮ ಸದ್ರಿ ಅಪೇಕ್ಷೆಯನ್ನು ಮುಂದಿಡುತ್ತಾರೆ. “ತಾವು ಬರೆದ ಈ ಗ್ರಂಥದ ನಕಲುಗಳನ್ನು ಎಲ್ಲಾ ನಗರ ಗಳಿಗೆ ಕಳುಹಿಸಿ ಕೊಟ್ಟು ಇನ್ನು ಮುಂದೆ ಈ ಪಠ್ಯವನ್ನು   ಆಧರಿಸಿ ಮಾತ್ರವೆ ಕಾನೂನು ನಿರ್ಣಯ ಕೈಗೊಳ್ಳಬೇಕು ಎಂಬ ಆದೇಶ ಕೊಡಲು ನಾನು ಬಯಸಿದ್ದೇನೆ. ತಾವು ಮದೀನಾದವರು. ಮದೀನಾದ ಜ್ಞಾನ ಅಧಿಕೃತ’. ಆದರೆ ಖಲೀಫಾರ ಈ ಅಪೇಕ್ಷೆಯನ್ನು ತಿರಸ್ಕರಿಸಿದ ಇಮಾಮರು ಈ ರೀತಿ ಪ್ರತಿಕ್ರಿಯಿಸುತ್ತಾರೆ: ”

ಅಮೀರುಲ್ ಮುಅಮಿನೀನ್, ನೀವು ಇದನ್ನು ಜಾರಿ ಮಾಡಬಾರದು. ಪ್ರತಿಯೊಂದು ಊರಿನವರಿಗೆ ವಿಭಿನ್ನ ಅಭಿಪ್ರಾಯಗಳು ದೊರಕಿವೆ. ಬೇರೆ ಬೇರೆ ಹದೀಸುಗಳನ್ನು ಅವರು ಕೇಳಿರುತ್ತಾರೆ. ಪೈಗಂಬರರ ಮತ್ತವರ ಸಂಗಡಿಗರ, ಅವರ ನಂತರದ ತಲೆಮಾರಿನ ವಿದ್ವಾಂಸರ ನಡುವೆ ಚಾಲ್ತಿಯಲ್ಲಿದ್ದ ವಿವಿಧ ರೀತಿಯ ಕಾನೂನು ಅಭಿಪ್ರಾಯಗಳ ಪೈಕಿ ತಮಗೆ ತಲುಪಿದ ಒಂದರಂತೆ ಅವರು ಜೀವಿಸುತ್ತಿದ್ದಾರೆ. ಅವರ ಅಭಿಪ್ರಾಯಗಳನ್ನು ರದ್ದು ಮಾಡುವುದು ತರವಲ್ಲ. ಜನರು ಅವರ ಅಭಿಪ್ರಾಯಗಳ ಪ್ರಕಾರ ಕಾರ್ಯವೆಸಗಲಿ. ಪ್ರತಿಯೊಂದು ಪ್ರದೇಶದವರು ಅವರಿಗೆ ಲಭಿಸಿದ ಕಾನೂನುಗಳನ್ನು ಸ್ವೀಕರಿಸಲಿ. ಅವರನ್ನು ಅವರ ಜಾಡಿಗೆ ಬಿಡುವುದು ಒಳ್ಳೆಯದು.”

(ಸಿಯರು ಅಅಲಾ ಮಿನ್ನುಬಲಾಅ, ಶಂಸುದ್ದೀನ್ ದ್ಸಹಬಿ)

ಇಸ್ಲಾಮಿಕ್ ಶರೀಅಃ ಹಾಗೂ ನಾಗರಿಕ ಸಮೂಹ:

ಇಸ್ಲಾಮಿನ ಶರೀಅಃ ಕಾನೂನು ವ್ಯವಸ್ಥೆಯನ್ನು ಏಕತಾನಗೊಳಿಸಲಿಕ್ಕಾಗಿನ ಆಡಳಿತ ವರ್ಗದ ಹಿತಾಸಕ್ತಿಯನ್ನು ತಡೆಯಬೇಕು. ಪ್ರತಿಯೊಂದು ಸಂದರ್ಭದಲ್ಲಿಯೂ ಕರ್ಮಶಾಸ್ತ್ರೀಯ ಸಮಸ್ಯೆಗಳಿಗೆ ಆಯಾ ಕಾಲದ ವಿದ್ವಾಂಸರು ಪರಿಹಾರಗಳನ್ನು  ನಿರ್ಣಯ ಮಾಡಿದರೆ ಸಾಕು. ಇದು ಇಸ್ಲಾಮಿ ಕಾನೂನು ವ್ಯವಸ್ಥೆಯ ವಿಶೇಷತೆ ಯಾಗಿದ್ದು, ಮುವತ್ತ ಗ್ರಂಥವನ್ನು ಏಕೈಕ ಕಾನೂನು ಗ್ರಂಥವಾಗಿ ಘೋಷಣೆ ಮಾಡಿದರೆ ಶರೀಅಃದ ಈ ವಿಶೇಷತೆಗೆ ಕಂಟಕ ಬರುತ್ತದೆ. ಖಲೀಫಾರವರ ಆದೇಶ ವನ್ನು ನಿರಾಕರಿಸಿದ ಇಮಾಮರ ನಡವಳಿಕೆಯ ಮರ್ಮ ಇದಾಗಿತ್ತು. ಈ ಸಂಭವಾನಂತರ ಹತ್ತೊಂಬತ್ತು ಶತಮಾನದ ವರೆಗೂ ‘ಇಸ್ಲಾಮಿಕ್‌ ಶರೀಅಃʼ ಎಂಬ ಹಸರಿನಲ್ಲಿ ಏಕೀಕೃತ ಕಾನೂನು ಪುಸ್ತಕ ಅಥವಾ ದಂಡಸಂಹಿತೆಯನ್ನು ಸ್ಥಾಪಿಸಲು ಯಾವೊಬ್ಬ ವಿದ್ವಾಂಸನೂ ಮುಂದೆ ಬಂದಿರಲಿಲ್ಲ. ಬದಲಾಗಿ ಶರೀಅಃ ಹಾದು ಬಂದದ್ದು ವಿವಿಧ ಗ್ರಂಥಗಳ ಮೂಲಕ. ಆಯಾ ಕಾಲದ ವಿದ್ವಾಂಸರು ಅದನ್ನು ಸಾಂದರ್ಭಿಕವಾಗಿ ವ್ಯಾಖ್ಯಾನಿಸುತ್ತಾ ಬಂದಿದ್ದರು. ಅಂತಲೇ ಷರಿಯಾ ಬಹಳ ಪ್ರಾಯೋಗಿಕತೆಯನ್ನು ಹೊಂದಿತ್ತು. ಶರೀಅಃ ನಾಗರಿಕ ಸಮಾಜದ ಸೇವೆ ಮಾಡುತ್ತಿದ್ದದ್ದು  ಈ ರೀತಿಯಲ್ಲಿ. 

ಶರೀಅಃದ ಈ ಉಜ್ವಲವಾದ ವೈವಿಧ್ಯತೆ ಹತ್ತೊಂಬತ್ತನೆಯ ಶತಮಾನದ ವಸಾಹತುಶಾಹಿಯ ಅಧಿಕಾರದ ಹಿತಾಸಕ್ತಿಗೆ ಸರಿ ಹೊಂದುತ್ತಿರಲಿಲ್ಲ. ವಸಾಹತುಶಾಹಿ ಆಡಳಿತ ರಚನೆಯ ಶೈಲಿಗೆ ಪೂರಕವಾಗಿ ಶರೀಅಃದ ವೈವಿಧ್ಯತೆ ಕೂಡಿ ಬರುತ್ತಿರಲಿಲ್ಲ ವಿಶೇಷತಃ ತಮ್ಮ ಕೇಂದ್ರೀಕೃತ ಅಧಿಕಾರದ ಅಡಿಯಲ್ಲಿ ಶರೀಅಃವನ್ನು ಹುದುಗಿಸಲು ಅವರಿಗೆ ಸಾಧ್ಯವಾಗುತ್ತಿರಲಿಲ್ಲ. ಜೋಸೆಫ್‌ ಶಾಟ್‌, ಇಗ್ನಾಝ್‌ ಗೋಲ್ಡ್‌ಝಿಯರ್ ಮತ್ತು ಸ್ನೂಕ್‌ ಹಿರ್ಸ್ಟೂನ್‌ ಮುಸ್ಲಿಂ ರಾಜ್ಯಗಳ ವೈಸ್ರಾಯಿಗಳೊಂದಿಗೆ ಸೇರಿ ಇಸ್ಲಾಮಿನ ಶರೀಅಃ ಕರಾರುವಕ್ಕಾಗಿಲ್ಲ ಎಂದು ಹೇಳಿದ್ದು ಶರೀಅತ್ತಿನ ಈ ವಿಶೇಷತೆಯನ್ನು ಮನಗಂಡಿದ್ದರಿಂದ. ಇದೇ ಕಾರಣದಿಂದ ಶರೀಅಃದ ಸುಧಾರಣೆಗಾಗಿ ಅವರು ಕರೆ ಕೊಟ್ಟಿದ್ದರು. ಇತಿಹಾಸದಲ್ಲೆಲ್ಲೂ ಶರೀಅಃ ಆಡಳಿತದ ಅಣತಿಯಂತೆ‌ ನಿಂತದ್ದನ್ನು ಇಲ್ಲವೇ ಅಧಿಕಾರದ ಹಿತಾಸಕ್ತಿಗಳಿಗೆ ಮಣೆ ಹಾಕಿದ್ದನ್ನು ಕಾಣಲು ಸಾಧ್ಯವಿಲ್ಲ.  ಇದು ಶರೀಅಃ ಸುಪ್ರಧಾನವಾದ ವಿಶೇಷತೆ. ಶರೀಅಃ ಕಾನೂನುಗಳನ್ನು ರೂಪಿಸಿದ್ದು ಸ್ವತಂತ್ರವಾಗಿ ಕಾರ್ಯಾಚರಿಸುತ್ತಿದ್ದ ವಿದ್ವಾಂಸರ ಒಕ್ಕೂಟಗಳಾಗಿದ್ದವು. ಆದರೆ ಯುರೋಪಿನ ಸ್ಥಿತಿ ಇದಕ್ಕೆ ತದ್ವಿರುದ್ಧವಾಗಿತ್ತು. ಅಲ್ಲಿ ಕಾನೂನುಗಳು ಅಧಿಕಾರ ಪ್ರಯೋಗದ ಅಸ್ತ್ರಗಳಾಗಿದ್ದವು. ಆದುದರಿಂದಲೇ ಶಾಸನ ನಿರ್ಮಾಣ ಪ್ರಕ್ರಿಯೆಗಳು ಅಲ್ಲಿನ ಆಡಳಿತ ವ್ಯವಸ್ಥೆಯ ಪ್ರಕಾರ ಅಧಿಕಾರ ರಚನೆಯ ಭಾಗವಾಗಿ ಮಾತ್ರ ನಡೆಯುತ್ತಿತ್ತು.

ವಾಇಲ್‌ ಹಲ್ಲಾಖ್

ಅದೇವೇಳೆ, ಶರೀಅಃ ನಾಗರಿಕ ಸಮುದಾಯದಲ್ಲಿ ವಿಲೀನವಾಗಿತ್ತು. ನಾಗರಿಕ ಜೀವನದ ಪ್ರತಿಯೊಂದು ಮಜಲುಗಳಲ್ಲಿ ಕೂಡಾ ಅದು ಗಾಢ ಪ್ರಭಾವ ಬೀರುತ್ತಿತ್ತು. ಆದುದರಿಂದಲೇ, ನಾಗರಿಕ ಸಮಾಜದೊಂದಿಗೆ ವಿವಿಧ ರೂಪದಲ್ಲಿ ಸಂಬಂಧ ಹೊಂದಿದ್ದ ಶರೀಅಃ ಆಡಳಿತ ವರ್ಗಕ್ಕಿಂತ ಹೆಚ್ಚಾಗಿ ಜನಸಾಮಾನ್ಯರಿಗೆ ಹೆಚ್ಚು ನಿಕಟವಾಗಿತ್ತು. ಕೊಲಂಬಿಯ ಯುನಿವರ್ಸಿಟಿ ಉಪನ್ಯಾಸಕ ವಾಇಲ್‌ ಹಲ್ಲಾಖ್‌ ಇದನ್ನು ಬಹಳ ಮನೋಜ್ಞವಾಗಿ ವಿವರಿಸಿದ್ದಾರೆ:

“ಸಮಸ್ಯೆಗಳನ್ನು ಇತ್ಯರ್ಥಪಡಿಸುವ ಸಲುವಾಗಿ ಮಾತ್ರ ಚಾಲ್ತಿಯಲ್ಲಿದ್ದ ವ್ಯವಸ್ಥೆಯಾಗಿರಲಿಲ್ಲ ಷರಿಯಾ.‌ ಸಮಾಜದ ಸಾಂಸ್ಕೃತಿಕ, ಆರ್ಥಿಕ, ಧಾರ್ಮಿಕ, ಅನುಭಾವಿಕ ಆಯಾಮಗಳಲ್ಲೆಲ್ಲಾ ಅದರ ದಟ್ಟ ಪ್ರಭಾವವಿತ್ತು. ಆಧುನಿಕ ಕಾನೂನು ವ್ಯವಸ್ಥೆಗಿಂತ ಷರಿಯಾ ವಿಭಿನ್ನ ಎನಿಸಿಕೊಳ್ಳುವುದೇ ಇಲ್ಲಿ. ಯಾವ ಸಮಾಜದ ಸೇವೆಯನ್ನು ಮಾಡಲು ಉದ್ದೇಶಿಸಲಾಗಿದೆಯೋ ಆ ಸಮುದಾಯದಲ್ಲೆ ಷರಿಯಾ ರೂಪು ಪಡೆದು‌ ವಿಕಾಸ ಹೊಂದಿತ್ತು. ಎಂತಲೇ, ಸಾಮಾನ್ಯ ಪ್ರಜೆಗಳು ಕಾನೂನುಗಳ ಬಗ್ಗೆ ಪ್ರಜ್ಞಾವಂತರಾಗುತ್ತಿದ್ದರು. ಅವರ ನಿತ್ಯ ಬದುಕಿನ ಹರಿವಿನಲ್ಲಿ ಷರಿಯಾ ಸದಾ ಮಿಳಿತವಾಗಿರುತ್ತಿತ್ತು. ಫುಖಹಾ/ ಮುಫ್ತಿಗಳು ಷರಿಯಾದ ಜ್ಞಾನವನ್ನು ಜನಸಾಮಾನ್ಯರಿಗೆ ನಿರಂತರವಾಗಿ ನೀಡುತ್ತಾ ಬರುತ್ತಿದ್ದರು.”

(ವಾಟ್‌ ಈಸ್‌ ಶರೀಅ? ವಾಇಲ್‌ ಹಲ್ಲಾಖ್)  ‌

ವಸಾಹತೀಕರಣ ಕಾಲದ ಸಂಹಿತೆಗಳು ಮತ್ತು ಮುಕ್ತ ಕಾನೂನು ವ್ಯವಸ್ಥೆ:

ಫ್ರಾನ್ಝ್‌ ಕಾಫ್ಕ ಬರೆದ Before the law ಎಂಬ ಕಿರುಗತೆಯಲ್ಲಿ ಕಾನೂನು ವ್ಯವಸ್ಥೆಯನ್ನು ಜನಸಾಮಾನ್ಯರ ಕೈಗೆಟುಕದ ಅವರಿಂದ ಮಾರುದ್ದ ದೂರ ನಿಲ್ಲುವ ಒಂದು ಸಂಗತಿಯಾಗಿ ಕಥಿಸಲಾಗಿದೆ. ತನ್ನನ್ನು ಯಾವ ತಪ್ಪಿಗೋಸ್ಕರ ಶಿಕ್ಷೆಗೆ ವಿಧೇಯಗೊಳಿಸಲಾಗುತ್ತಿದೆ ಎಂದು ತಿಳಿಯದ ʼದಿ ಟ್ರಯಲ್‌ʼ ನ ಮುಖ್ಯ ಕಥಾಪಾತ್ರ ಮತ್ತು ಕಾನೂನು ಏನೆಂದು ಅರಿಯಲು ಕಾನೂನಿನ ಹೆಬ್ಬಾಗಿಲಿನ ಎದುರು ಮರಣದ ವರೆಗೂ ಕಾಯಬೇಕಾಗಿ ಬಂದ ʼಬಿಫೋರ್‌ ದ ಲಾʼ ದ ಕಥಾಪಾತ್ರ ನಮ್ಮ ಮುಂದಿಡುತ್ತಿರುವುದು ಸಮಾನವಾದ ತಲ್ಲಣವನ್ನೇ. ಈ ಸಮಸ್ಯೆ ತಲೆದೋರುವುದು ಆಧುನಿಕ ಕಾನೂನು ವ್ಯವಸ್ಥೆಗೆ ಜನತೆಗಿರುವ ಅಂತರದ ಕಾರಣದಿಂದ. ಸಮಾಜದೊಂದಿಗೆ ನಿರಂತರ ಬೆಸುಗೆಯಲ್ಲಿರುವ ಷರಿಯಾ ವ್ಯವಸ್ಥೆಯಲ್ಲಿ ಕಾಫ್ಕ ವಿವರಿಸಿದ ಸಾಮಾಜಿಕವಾದ ಅಂತರದ ಪ್ರಶ್ನೆ ಉದ್ಭವಿಸುವುದೇ ಇಲ್ಲ.

ಜನರನ್ನು ಆಳಲು ಮತ್ತು ಅವರ ಮೇಲೆ ನಿಯಂತ್ರಣ ಹೇರಲು ಬಳಸಲಾಗುವ ಅಸ್ತ್ರವಾಗಿ ಷರಿಯಾ ಎಂದೂ ಬಳಸಲ್ಪಟ್ಟಿರಲಿಲ್ಲ.  ಅದನ್ನು ಕಾಣಲಾಗುತ್ತಿದ್ದದ್ದು ಜನರು ಮತ್ತು ಕಾನೂನು ವ್ಯವಸ್ಥೆಯ ನಡುವಿನ ಸಾಮಾಜಿಕ, ವೈಯಕ್ತಿಕ ಸೇತುವೆಯೆಂಬ ನೆಲೆಯಲ್ಲಿ ಆಗಿತ್ತು.  ʼಸಾಮಾಜಿಕ ಅಂಗೀಕಾರವೆ ಕಾನೂನಿಗೆ ಅಧಿಕೃತತೆಯನ್ನು ನೀಡುತ್ತದೆʼ ಎಚ್‌ ಎಲ್‌ ಎ ಹಾರ್ಟ್‌ ರವರ ಕಾನೂನು ಪ್ರತ್ಯಕ್ಷವಾದಕ್ಕೆ ಪೂರಕವಾಗಿದೆ ಷರಿಯಾದ ರೀತಿರಿವಾಜುಗಳು. 

ಖಾಲಿದ್‌ ಅಬುಲ್‌ ಫದಲ್‌ ರವರು ಇದನ್ನೇ ಈ ರೀತಿ ಹೇಳಿದ್ದಾರೆ;

“ಮಾನವೀಯ ಒಳಿತು, ನೀತಿ ಪಾಲನೆ, ಸರಿ ತಪ್ಪುಗಳ ವಿವೇಚನೆಗಳಿಗಾಗಿ ನೆಲೆಗೊಳ್ಳಬೇಕು ಕಾನೂನುಗಳು. ಇದಾಗಿದೆ ಇಸ್ಲಾಮಿಕ್‌ ಕಾನೂನಿನ ತಳಹದಿ. ಸ್ಟೇಟ್ ನಿರ್ಮಿಸುವ ಶಾಸನಗಳ ಪ್ರಕಾರ ಕಾನೂನು ಜಾರಿ ಮಾಡುವ ಆಧುನಿಕ ಸೆಕ್ಯುಲರ್‌ ವ್ವವಸ್ಥೆಗಿಂತ ಭಿನ್ನವಾಗಿ ಇಸ್ಲಾಮಿಕ್‌ ವ್ಯವಸ್ಥೆ ನಡೆಯುತ್ತಿದ್ದದ್ದು ಕಾನೂನು ಪಠ್ಯಗಳಿಗೆ ವಿದ್ವಾಂಸರು ನೀಡುವ (ಸ್ವತಂತ್ರ) ವ್ಯಾಖ್ಯಾನಗಳ ಪ್ರಕಾರವಾಗಿತ್ತು. ಹೀಗೆ ನೀಡಲಾಗುತ್ತಿದ್ದ ಬೇರೆ ಬೇರೆ ಕಾನೂನು ಅಭಿಪ್ರಾಯಗಳು ಎಲ್ಲವೂ ವಿಭಿನ್ನ ರೀತಿಯ ಗ್ರಹಿಕೆಗಳಾಗಿದ್ದು ಏಕಕಾಲದಲ್ಲಿ ಅವೆಲ್ಲವೂ ಸರಿ ಆಗಿರುತ್ತದೆ. ಆದುದರಿಂದಲೇ ಅವುಗಳಲ್ಲಿ ಯಾವ ಅಭಿಪ್ರಾಯನ್ನು ಬೇಕಾದರೆ ಸ್ವೀಕರಿಸಬಹುದು ಎಂದಾಗಿತ್ತು ಅವರ (ಧಾರ್ಮಿಕ ವಿದ್ವಾಂಸರ) ನಿಲುವು. 

 (The Great theft, Khalid Abou al Fadl)

ಪಾಶ್ಚಾತ್ಯ ಕಾನೂನು ವ್ಯವಸ್ಥೆ ಚಾಲ್ತಿಯಲ್ಲಿ ಇದ್ದದ್ದು ಕೋಡ್ ಗಳ ರೂಪದಲ್ಲಿ. ಡಚ್ ನ್ಯಾಷನಲ್ ಕೋಡ್, ಬ್ರಿಟಿಷ್ ಪೆನಲ್ ಕೋಡ್, ನಪೋಲಿಯನ್ ಸಂಹಿತೆ ಇವು ಅಲ್ಲಿನ ಕೆಲವು ಸುಪ್ರಧಾನ ಕಾನೂನು ಸಂಹಿತೆಗಳಾಗಿದ್ದವು. ಈ ಕಾನೂನುಗಳನ್ನು  ನಿಗದಿತ ಪುಸ್ತಕಗಳಲ್ಲಿ ನಿಖರವಾಗಿ ದಾಖಲಿಸಲಾಗಿದ್ದು ಅದನ್ನು ಜಾರಿ ಮಾಡಲು ನಿರ್ದಿಷ್ಟ ಕಟ್ಟಡಗಳನ್ನು ನ್ಯಾಯಾಲಯ ಗಳಾಗಿ ಗೊತ್ತುಪಡಿಸಲಾಗಿತ್ತು. ಆದುದರಿಂದಲೇ ಅದು ಸಮುದಾಯದ ಒಳಗಿಂದ ಗಜ ದೂರ ಅಂತರದಲ್ಲಿ ಇರುತ್ತಿತ್ತು. ಅದೇವೇಳೆ ಇಸ್ಲಾಮಿಕ್ ನಾಗರಿಕತೆಯಲ್ಲಿ ಶರೀಅಃ ಜಾರಿ ಮಾಡಲು, ಸಮಸ್ಯೆ ಗಳನ್ನು ಇತ್ಯರ್ಥ ಪಡಿಸಲು, ಫಿರ್ಯಾದಿ ಗಳನ್ನು ಸಮರ್ಪಿಸಲು ನಿಗದಿತ ಸ್ಥಳಗಳು ಇದ್ದದ್ದಾಗಿ ಚರಿತ್ರೆಯಲ್ಲಿ ದಾಖಲಾಗಿಲ್ಲ. ಅದು ಎಲ್ಲಿ ಬೇಕಾದರೂ ನಡೆಯುತ್ತಿತ್ತು. ವಿದ್ವಾಂಸರ ಮನೆಯಲ್ಲಿ, ಫಿರ್ಯಾದಿದಾರನ ವಸತಿಯಲ್ಲಿ, ರಾಜನ ಸಮ್ಮುಖದಲ್ಲಿ, ಮಸೀದಿಗಳಲ್ಲಿ, ಪೇಟೆ ಗಳಲ್ಲೆಲ್ಲಾ ಶರೀಅಃ ಚರ್ಚೆಗಳು ನಡಯುತ್ತಿದ್ದವು. ಶರೀಅಃ ಕಾನೂನುಗಳು ಇವಿಷ್ಟು ಎಂದು ನಿರ್ದಿಷ್ಟ ವಾಗಿ ಬೊಟ್ಟು ಮಾಡಿ ತೋರಿಸಲು ತಕ್ಕುದಾದ ರೀತಿಯಲ್ಲಿ ಅದು ನಿಯಮಿತ ವಾಗಿರಲಿಲ್ಲ. ಯಾಕೆಂದರೆ, ಶರೀಅಃದಲ್ಲಿ ಪ್ರಧಾನ ವಾದದ್ದು ಕೋಡ್ ಗಳಾಗಿರಲಿಲ್ಲ. ಕಾನೂನು ಸುರಕ್ಷೆ ಗಾಗಿ ಮೊರೆಯಿಡುತ್ತಿರುವ ದೂರುದಾರ ಮತ್ತು ಅವನ ಪಾತಳಿ ಕೂಡಾ ಅಷ್ಟೇ ಪ್ರಧಾನ ವಾಗಿತ್ತು. ಆದುದರಿಂದಲೇ ಶರೀಅಃ ವ್ಯವಸ್ಥೆ ಒಂದು ರೀತಿಯ ಮುಕ್ತ ಕಾನೂನು ವ್ಯವಸ್ಥೆ ಯಾಗಿತ್ತು ಎಂದು ನಮಗೆ ಮನದಟ್ಟಾಗುತ್ತದೆ. ಇದರತ್ತ ಬೊಟ್ಟು ಮಾಡುತ್ತಾ ಅಮೇರಿಕನ್ ನ್ಯಾಯಾಧೀಶ ರೊಬ್ಬರು ಈ ರೀತಿ ಕುಹಕವಾಡಿದ್ದಾರೆ. ” ಬೇಕಾಬಿಟ್ಟಿ ನ್ಯಾಯ ಹೇಳಲು ಮರದಡಿಯಲ್ಲಿ ಕೂತು ಕೈಯಲ್ಲಿರುವ ಪುಸ್ತಕ ವನ್ನು ವ್ಯಾಖ್ಯಾನಿಸಿ ಕಾನೂನು ವಿವೇಚನೆ ಮಾಡುವ ಮುಸ್ಲಿಂ ಖಾಝಿಯಲ್ಲ ನಾನು.”

ಆಧುನಿಕತೆ ಮತ್ತು ಷರಿಯಾ: ಒಟ್ಟೋಮನ್ ಈಜಿಪ್ಟ್ ನಿಂದ ಆಂಗ್ಲೋ – ಮೊಹಮ್ಮದನ್ ಲಾ ತನಕ:

ಶರೀಅಃ ಕಾನೂನುಗಳನ್ನು  ಕೋಡ್ ಗಳಾಗಿ ಸಂಗ್ರಹ ಮಾಡುವ/ಕರೆ ಕೊಡುವ ಮೂಲಕ ಓರಿಯಂಟಲಿಸ್ಟ್ ಗಳು  ಮತ್ತು ಅವರ ವಸಾಹುಶಾಹಿ ಸರದಾರರು ಯುರೋಪಿಯನ್ ವ್ಯವಸ್ಥೆಗಳಿಂದ ಶರೀಅಃ ವ್ಯವಸ್ಥೆಯನ್ನು ಭಿನ್ನ ಗೊಳಿಸುವ ಮೇಲುದ್ಧರಿತ ವಿಶೇಷತೆ ಯನ್ನು ನುಚ್ಚು ನೂರು ಮಾಡುವ ಕೆಲಸ ಮಾಡಿದರು. ಹಲವು ಮುಸ್ಲಿಂ ರಾಷ್ಟ್ರ ಗಳಲ್ಲಿ ಚಾಲ್ತಿಯಲ್ಲಿದ್ದ ಶರೀಅಃ ವ್ಯವಸ್ಥೆ ಗಳನ್ನು ತಮ್ಮದೇ ಪಾಶ್ಚಾತ್ಯ ವ್ಯವಸ್ಥೆ ಯ ಮೂಗಿನ ನೇರಕ್ಕೆ ಪರಿವರ್ತಿಸಿ ಕೊಂಡರು. ಈ ರೀತಿಯಲ್ಲಿ ಶರೀಅಃ ಕಾನೂನಿನ ಕೋಡಿಫಿಕೇಶನ್ ಮೊದಲು ನಡೆದದ್ದು ಭಾರತದ ಬ್ರಿಟಿಷ್ ಶಾಹಿಯ ಆಧಿಪತ್ಯದಲ್ಲಿ. ಗವರ್ನರ್ ವಾರನ್ ಹೋಸ್ಟಿಂಗ್ ನ ಆದೇಶ ಪ್ರಕಾರ ಇಲ್ಲಿ ಒಂದು ಮಿಶ್ರ ಕಾನೂನು ವ್ಯವಸ್ಥೆಗೆ ಅಡಿಪಾಯ ಹಾಕಲಾಯಿತು. ಮುಸ್ಲಿಂ- ಹಿಂದೂ ಕಾನೂನುಗಳನ್ನು ಏಕೀಕೃತ ಕೋಡ್ ಗಳಾಗಿ ಮಾಡುವ ಕ್ರಮ ವನ್ನು ಬ್ರಿಟಿಷ್ ಕಂಪೆನಿ ಆರಂಭಿಸಿದ್ದು ಬ್ರಿಟಿಷ್ ಪೌರಾತ್ಯ ವಿದ್ವಾಂಸ ಸರ್ ವಿಲಿಯಂ ಜಾನ್ಸ್ ರ ಸಲಹೆಯ ಮೇರೆಗೆ. 

1791 ರಲ್ಲಿ ಚಾರ್ಲ್ಸ್ ಹ್ಯಾಮಿಲ್ಟನ್ ರವರು ಹನಫಿ ಮದ್ ಹಬಿನ ಮರ್ಗೀನಾನಿಯವರು ರಚಿಸಿದ ಕರ್ಮ ಶಾಸ್ತ್ರ ಗ್ರಂಥ ಹಿದಾಯ ವನ್ನು ಭಾಷಾಂತರ ಮಾಡಿದರು. 1792 ರಲ್ಲಿ ಪಿತ್ರಾರ್ಜಿತ ಆಸ್ತಿ ವಿಲೇವಾರಿ ಯನ್ನು ವಿವರಿಸುವ ಸಿರಾಜಿಯಾವನ್ನು ಕೂಡಾ ಅನುವಾದ ಮಾಡಲಾಯಿತು. 1865 ರಲ್ಲಿ ಫತಾವ ಆಲಂಗೀರಿಯ್ಯ ವನ್ನು ನೀಲ್ ಬೈಲಿ ಇಂಗ್ಲಿಷ್ ಗೆ ತಂದರು. ಈ ಮೂಲಕ 1860 ರಲ್ಲಿ “ಆಂಗ್ಲೋ ಮೂಹಮ್ಮದನ್ ಲಾ” ಜಾರಿಗೆ ಬಂತು. ಆದರೆ, ಆಂಗ್ಲೋ ಮೊಹಮ್ಮದನ್ ಲಾ ದಲ್ಲಿ ಮೊಹಮ್ಮದನ್ ಲಾ ಕ್ಕಿಂತ ಹೆಚ್ಚಾಗಿ ಇಂಗ್ಲಿಷ್ ಕಾನೂನು ಮೇಲುಗೈ ಸಾಧಿಸಿತ್ತು. ಆಮೇಲೆ, ಇದೇ ಕೋಡ್ 1937 ರಲ್ಲಿ “ಮುಸ್ಲಿಂ ಪರ್ಸನಲ್ ಲಾ ಅಪ್ಲಿಕೇಶನ್ ಆಕ್ಟ್” ಆಗಿ ವೈಯುಕ್ತಿಕ ಕಾನೂನು ಗಳಿಗೆ ಮಾತ್ರ ಅನ್ವಯ ಆಗುವಂತೆ ಜಾರಿಗೆ ಬಂತು. 

ಹತ್ತೊಂಬತ್ತನೆಯ ಶತಮಾನದ ಆಗಮನ ದೊಂದಿಗೆ ಯುರೋಪಿಯನ್ ಕಾನೂನು ವ್ಯವಸ್ಥೆ ಯ ಹಿಡಿತ ಮುಸ್ಲಿಂ ಜಗತ್ತಿನ ಆರ್ಥಿಕ ವಿನಿಮಯ ಮತ್ತು ದಂಡನಾ ಸಂಬಂಧಿ ಕಾನೂನು ಗಳಲ್ಲಿ ಆವರಿಸಿಯಾಗಿತ್ರು. ವಸಾಹತುಶಾಹಿಯ ಅಧಿಕಾರ ದರ್ಪ ಇದರ ಹಿಂದೆ ಕೆಲಸ ಮಾಡಿತ್ತು. ಹಾಗೇ ಮುಂದುವರಿದು ಶರೀಅಃ ಕಾನೂನು ಗಳನ್ನು ವೈಯುಕ್ತಿಕ ಮಜಲಿನಲ್ಲಿ ಮಾತ್ರ ಸೀಮಿತ ಗೊಳಿಸಲಾಯಿತು. ಈಜಿಪ್ಟ್ ನಲ್ಲಿ ಶರೀಅಃ ವನ್ನು ಕೋಡಿಫೈ ಮಾಡಲು 1880 ರಲ್ಲಿಯೇ ವಸಾಹುಶಾಹಿಗಳು ಆದೇಶ ಹೊರಡಿಸಿದ್ದರು. ಅದರನ್ವಯ ಕೆಲವು ಹನಫಿ ವಿದ್ವಾಂಸರು ಮತ್ತು ಅಲ್ಲಿನ ಅಧಿಕಾರಿಗಳು ಸೇರಿ ಹನಫಿ ಕಾನೂನು ಧಾರೆಯ ವೈಯುಕ್ತಿಕ ನಿಯಮಗಳನ್ನು ಕ್ರೋಡೀಕರಿಸಿ ಕೋಡ್ ಮಾಡಿದರು. ಮೊರೊಕ್ಕೊ ದಲ್ಲಿ ಆಡಳಿತ ನಡೆಸುತ್ತಿದ್ದ ಫ್ರೆಂಚ್ ವಸಾಹತುಶಾಹಿ 1930 ರಲ್ಲಿ ಶರೀಅಃ ಕೋಡ್ ನಿರ್ಮಾಣ ಮಾಡಿತ್ತು. 1873 ರಲ್ಲಿ ಶರೀಅಃ ಕಾನೂನುಗಳು ಮತ್ತು ಸ್ಥಳೀಯ ಆಚಾರಗಳನ್ನು ಸೇರಿಸಿ ರೂಪಿಸಿದ ಶರೀಅಃ ಸಂಹಿತೆ ಹೆಚ್ಚು ಹೋಲುತ್ತಿದ್ದದ್ದು ಡಚ್ ನ್ಯಾಷನಲ್ ಕೋಡ್ ನೊಂದಿಗಾಗಿತ್ತು. 

ವಸಾಹುಶಾಹಿ ಪ್ರಾಯೋಜಿತ ಕ್ರೋಢೀಕರಣ ಯೋಜನೆಗಳು ಶರೀಅಃ ವ್ಯವಸ್ಥೆಯ ರಕ್ತದಲ್ಲಿ ಹಾಸು ಹೊಕ್ಕಾಗಿದ್ದ ಬಹುತ್ವದ ನೆಲೆಗಳಿಗೆ ಅಗಾಧವಾದ ಪೆಟ್ಟು ಕೊಟ್ಟಿತು. ‘ವೈಯಕ್ತಿಕ ಶರೀಅಃ ಲಾ ಗಳು’ ಚಾಲ್ತಿಯಲ್ಲಿದ್ದ ಹಲವಾರು ಅಭಿಪ್ರಾಯ ಗಳ ಪೈಕಿ ಒಂದನ್ನು ಹೆಕ್ಕಿ ಕಾನೂನು ರೀತ್ಯಾ ಜಾರಿ ಮಾಡಿತು. ನಂತರ ಆ ಸಂಗ್ರಹವನ್ನು ಮಾತ್ರ ನೋಡಿ ಕಾನೂನು ತೀರ್ಪು ಕೊಡುವ ಪರಿಪಾಠ ಬೆಳೆಯಿತು. ಅನೇಕಾರು ಗ್ರಂಥಗಳನ್ನು ಪರಾಂಬರಿಸಿ ಸೂಕ್ಷ್ಮ ಅವಲೋಕನ ಮಾಡಿ ನಿರ್ವಹಿಸಲಾಗುತ್ತಿದ್ದ ಇಫ್ತಾ/ಖಳಾ* ಪ್ರಕ್ರಿಯೆಗಳು ಇದರೊಂದಿಗೆ ಒಂದೇ ಪುಸ್ತಕದಲ್ಲಿ ನೋಡಿ ತೀರ್ಮಾನಿಸಿ ಬಿಡುವಷ್ಟು ‘ ಸರಳ ‘ ವಾಯಿತು. ಶರೀಅಃ ನೇರವಾಗಿ ಸ್ಟೇಟಿನ ಕೈಕಳಗೆ  ಬರುವ ಸ್ಥಿತಿಯೂ ಸಂಜಾತ ವಾಯಿತು. ಈ ಪ್ರಕ್ರಿಯೆಗಳು ಶರೀಅಃದ ನೈಜತೆಯನ್ನು ನಿರಾಕರಿಸಿತು. ಅಷ್ಟೇ ಅಲ್ಲದೆ, ಧಾರ್ಮಿಕ, ಸಾಮಾಜಿಕ ಕಾನೂನಾತ್ಮಕ ಬಿಕ್ಕಟ್ಟು ಗಳನ್ನು ಹುಟ್ಟು ಹಾಕಿತು. ಶರೀಅಃ ಬಗ್ಗೆ ವ್ಯಾಪಕವಾದ ತಪ್ಪು ಧೋರಣೆ ಯನ್ನು ಹರಡಿತು. ಕ್ಯಾಲಿಫೋರ್ನಿಯಾ ವಿವಿಯ ಕಾನೂನು ವಿಭಾಗದ ಮುಖ್ಯಸ್ಥ ಮಾರ್ಕ್ ಫಾತಿ ಮಸೂದ್ ರವರ ಅಭಿಪ್ರಾಯ ದಂತೆ ಇಸ್ಲಾಮಿನ ಒಳಗಡೆ ಮೂಲಭೂತವಾದ ಬೆಳೆಯಲು ಮತ್ತು ಷರಿಯಾ ವ್ಯಾಪಕ ದುರುಪಯೋಗಕ್ಕೆ ಈಡಾಗಲು ಕಾರಣ ಈ ಪಾಶ್ಚಾತ್ಯ ಪ್ರಣೀತ ಶರೀಅಃ ವ್ಯವಸ್ಥೆಗಳೆ. ಸ್ಟೇಟಿನ ಆಧಿಪತ್ಯ ದ ಅಡಿಯಲ್ಲಿ ಶರೀಅಃವನ್ನು ತರುವ ಕೆಲಸಗಳನ್ನು ಇರಾನ್, ಸೌದಿ ಅರೇಬಿಯಾ, ಸೊಮಾಲಿಯಾ, ನೈಜೀರಿಯಾ ದಂತ ರಾಷ್ಟ್ರಗಳ ಮೂಲಭೂತ ವಾದಿಗಳು ಮಾಡುತ್ತಿದ್ದು ಇದು ವಸಾಹತುಶಾಹಿ ಹಿತಾಸಕ್ತಿಗಳ ಮತ್ತೊಂದು ಮುಖ ಮತ್ತು ಅದರ ಪರಿಣಾಮ ಕೂಡಾ ಹೌದು, ಮಸೂದ್ ಅಭಿಪ್ರಾಯಿಸುತ್ತಾರೆ. 

ಆಧುನಿಕ ಯುಗಾರಂಭ ಕಾಲದ ಒಟ್ಟೋಮನ್ ಈಜಿಪ್ಟ್ ಮತ್ತು ವಸಾಹತೋತ್ತರ ಈಜಿಪ್ಟ್ ನಲ್ಲಿ ಚಾಲ್ತಿಯಲ್ಲಿದ್ದ ಕಾನೂನು ವ್ಯವಸ್ಥೆಗಳ ನಡುವೆ ತೌಲನಿಕ ಅಧ್ಯಯನ ನಡೆಸಿದ ಆಮಿನ ಝಹ್ರಿ ಝಾಂಬೋಲ್ ವಸಾಹತುಶಾಹಿಗಳು ಕೋಡಿಫೈ ಮಾಡಿದ ಶರೀಅಃ ತಂದಿಟ್ಟ ಸಮಸ್ಯೆಗಳನ್ನು ಅನಾವರಣ ಮಾಡಿದ್ದಾರೆ.  ಒಟ್ಟೋಮನ್ ಈಜಿಪ್ಟ್ ನಲ್ಲಿ ಮಹಿಳೆಯರಿಗೆ ವಿವಾಹ ವಿಚ್ಚೇದನ ಪಡೆಯಲು ಇರುವ ದಾರಿಗಳು ಸುಲಭ ಸಾಧ್ಯವಾಗಿತ್ತು. ಶರೀಅಃದಲ್ಲಿ ಮನ್ನಣೆ ನೀಡಲಾಗಿರುವ ಹಲವಾರು ಅಭಿಪ್ರಾಯಗಳನ್ನು ಮಹಿಳೆಯರ ಒಳಿತನ್ನು ಬಯಸಿ ಜಾರಿ ಮಾಡಲು ಅಲ್ಲಿ ಕಾನೂನಾತ್ಮಕ ಅವಕಾಶ ಗಳಿದ್ದವು. ಅದರೆ ವಸಾಹತೋತ್ತರ ಈಜಿಪ್ಟ್ ನಲ್ಲಿ ವಿವಾಹ ವಿಚ್ಛೇದನ ಪಡೆಯಲು ಕ್ಲಿಷ್ಟಕರವಾದ  ಕಾನೂನು ಹಾದಿ ಹಿಡಿಯಬೇಕಾದ ರೀತಿಯಲ್ಲಿ ಸ್ಥಿತಿ ಬದಲಾವಣೆ ಉಂಟಾಗಿತ್ತು. ವಸಾಹತೋತ್ತರ ಕಾಲದಲ್ಲಿ ವಿಚ್ಛೇದನ ಪಡೆಯಲು ಪ್ರಬಲ ಪುರಾವೆಯನ್ನು ಹಾಜರು ಪಡಿಸ ಬೇಕಿತ್ತು ಯಾ ಸಾಕ್ಷಾತ್ ಪತಿಯೇ ಒಪ್ಪಬೇಕಿತ್ತು ಯಾ ಮಹಿಳೆ ಕಠಿಣವಾದ ದೌರ್ಜನ್ಯಗಳಿಗೆ ಈಡಾಗಿದ್ದಳೆಂದು ಸಾಬೀತು ಮಾಡಬೇಕಿತ್ತು. ಪ್ರಬಲ ಪುರಾವೆಗಳ ಅಭಾವದಲ್ಲಿ ವಿಚ್ಛೇದನ ದೊರಕುತ್ತಿರಲಿಲ್ಲ ಎಂದು ವಿವರಿಸುತ್ತಾರೆ ಝಾಂಬೋಲ್. ಲೈಂಗಿಕ ದೌರಜನ್ಯಗಳಿಗೆ ಈಡಾದ ಮಹಿಳೆಯರು ಒಟ್ಟೋಮನ್ ಈಜಿಪ್ಟ್ ನ ಶರೀಅಃ ವ್ಯವಸ್ಥೆಯಲ್ಲಿ ಪುನರ್ವಸತಿ ಪಡೆಯುತ್ತಿದ್ದರು ಹಾಗೂ ಅವರಿಗೆ ಪರಿಹಾರ ದೊರಕುತ್ತಿತ್ತು. ಅದರೆ, ವಸಾಹತೋತ್ತರ ವ್ಯವಸ್ಥೆಯಲ್ಲಿ ದೌರ್ಜನ್ಯ ಕ್ಕೀಡಾದ ಮಹಿಳೆಯೇ ಶಿಕ್ಷೆಗೆ ವಿಧೇಯ ವಾಗುವ ಇಲ್ಲವೇ ಕುಟುಂಬಿಕರಿಂದ ಹತ್ಯೆ ಗೀಡಾಗುವ ಸ್ಥಿತಿ ಉಂಟಾಗಿತ್ತು. ನ್ಯಾಯಾಲಯಗಳು ಕೂಡಾ ಅವರ ಸಹಾಯಕ್ಕಾಗಿ ಮುಂದೆ ಬರುತ್ತಿರಲಿಲ್ಲ ಎಂದು ಮತ್ತೊಂದು ಸಂಶೋಧಕ ಲಾಮಾ ಅಬೂ ಔದ ಹೇಳುತ್ತಾರೆ. ಅದೇ ರೀತಿ ಒಟ್ಟೋಮನ್ ಕಾಲದ ಈಜಿಪ್ಟ್ ನಲ್ಲಿ ಅಲ್ಪ ಸಂಖ್ಯಾತರ ಹಕ್ಕುಗಳು ಸಂರಕ್ಷಿತವಾಗಿತ್ತು ಆದರೆ ವಸಾಹತೋತ್ತರ ಈಜಿಪ್ತ್ ನಲ್ಲಿ ಅಲ್ಪಸಂಖ್ಯಾತರು ಶೋಷಣೆಗೆ ಈಡಾಗುತ್ತಿದ್ದರು ಎಂದು ‘ ರಿಲೇಜ್ಯಸ್ ಡಿಫರೆನ್ಸ್ ಇನ್ ದ ಸೆಕ್ಯುಲರ್ ಏಜ್’ ಎಂದ ಪುಸ್ತಕದಲ್ಲಿ ಸಬಾ ಮಹಮೂದ್ ವಿವರಿಸಿದ್ದಾ ರೆ.

ಫೂಕಾಲ್ಡಿಯನ್ ‘ ಕಾನೂನಿ’ನಾಚೆಗಿನ ಷರಿಯಾ ಸಾಧ್ಯತೆಗಳು: 

ಮಿಶೆಲ್ ಫೂಕೊರ ವೀಕ್ಷಣೆ ಯಂತೆ ‘ ಕಾನೂನುಗಳು ಅಧಿಕಾರದ ಅಸ್ತ್ರ ‘ ಗಳಾಗಿವೆ. ಕಾನೂನುಗಳು ಅದರ ಎಲ್ಲಾ ಸಂಸ್ಥೆ ಗಳನ್ನು  ಮತ್ತು ಪರಿಕರ ಗಳನ್ನು ಬಳಸಿಕೊಂಡು ಅಧಿಕಾರದ ಬಂಧಗಳನ್ನು ಸ್ಥಿರ ಪಡಿಸುತ್ತದೆ. ಕಾನೂನುಗಳು ಕೇವಲ ತತ್ವಗಳು ಯಾ ಸಲಹೆಗಳು ಮಾತ್ರವಲ್ಲ. ಬದಲಾಗಿ ಅದು ನಿರಂತರ ಬೆಳೆಯುತ್ತಿರುವ ಅಧಿಕಾರ ಪ್ರಯೋಗವಾಗಿದೆ ಎಂದು ವಾದ ಮಾಡುತ್ತಾರೆ ಫ್ರೆಂಚಿನ ಪ್ರಸಿದ್ಧ ತತ್ವಚಿಂತಕ ಫೂಕೋ. ಫೂಕೋ ವಾದಗಳ ಆಧಾರದಲ್ಲಿ ವಸಾಹುಶಾಹಿ ಗಳು ನಡೆಸಿದ ಶರೀಅಃ ಕೋಡಿ ಫಿಕೇಶನನ್ನು ವಿಶ್ಲೇಷಣೆ ಮಾಡುತ್ತಾ ಇಬ್ರಾಹಿಂ ಮೂಸಾ ಈ ರೀತಿ ಬರೆದಿದ್ದಾರೆ:

” ವಸಾಹತುಶಾಹಿ ತನ್ನ ಅಧಿಕಾರವನ್ನು ಜಾರಿ ಮಾಡುತ್ತಿದ್ದದ್ದು ಆರ್ಥಿಕ, ಸೈನಿಕ ಹಾಗೂ ರಾಜಕೀಯ ಶಕ್ತಿಯನ್ನು ಬಳಸಿ ಕೊಂಡು ಮಾತ್ರವಾಗಿರಲಿಲ್ಲ. ಅವರು ತಮ್ಮ ಕಾನೂನು ಜ್ಞಾನವನ್ನು ವಸಾಹತೀಕರಣಕ್ಕೆ ಬಲಿಯಾದ ಜನತೆಯ ಮೇಲೆ ಹೇರುತ್ತಿದ್ದರು. ಅದರ ದುಷ್ಪರಿಣಾಮ ವೆಂಬಂತೆ ಸ್ವಾತಂತ್ರ್ಯನಂತರವೂ ವಸಾಹತಿನ ಜನರು ವಸಾಹತುಶಾಹಿಯ ಕಾನೂನು ವ್ಯವಸ್ಥೆ ಯಲ್ಲೇ ಕಟ್ಟಿ ಹಾಕಲ್ಪಟ್ಟಿದ್ದಾರೆ.”

  • ” Colonialism and Islamic Law ” Ebrahim Moosa
Ebrahim Moosa

ಕೇಂದ್ರೀಕೃತವಾದ ಸ್ವಭಾವ ಇರುವ ಯುರೋಪಿಯನ್ ಕಾನೂನು ವುವಸ್ಥೆಗೆ ವಿಭಿನ್ನವಾಗಿ ಶರೀಅಃ ವ್ಯವಸ್ಥೆ . ಆದುದರಂದಲೇ, ಯೂರೋಪಿಯನ್ ಲೀಗಲ್ ಸಿದ್ಧಾಂತಗಳ ಆಧಾರದಲ್ಲಿ ಶರೀಅಃ ನಿಯಮಗಳನ್ನು ರೂಪಿಸುವುದು ಯಾ ಅರ್ಥೈಸುವುದು ಸಾಧ್ಯವಲ್ಲ. ಜಾಕ್ ದೆರಿದ ತನ್ನ ‘Forces of the law: Foundations of the authority’ ಎಂಬ ಗ್ರಂಥದಲ್ಲಿ ವಾಲ್ಟರ್ ಬೆಂಜಮಿನ್ ರನ್ನು ಉದ್ದರಿಸುತ್ತ ಹೇಳಿದ ಹಾಗೆ ‘ ಯುರೋಪಿಯನ್ ವ್ಯವಸ್ಥೆ ಯಲ್ಲಿ ಕಾನೂನುಗಳು ಲಾಗಾಯ್ತಿನಿಂದಲೂ  ಕಾನೂನು/ಸ್ಟೇಟ್ ನ ಅಸ್ತಿತ್ವಕ್ಕೆ ಬೇಕಾಗಿ ಮಾತ್ರ ಕಾರ್ಯ ವೆಸಗುತ್ತಿದೆ ‘. ತನ್ನ ಅಸ್ತಿತ್ವವೇ ಅದರ ಪ್ರಧಾನ ಉದ್ದೇಶ. ಆದುದರಿಂದಲೇ ಅದರ ದೌತ್ಯ ಸ್ಥಾಪಿತ ಅಧಿಕಾರವನ್ನು ಯಾವುದೇ ತೊಡಕುಗಳಿಲ್ಲದೆ ಕಾಪಿಡುವುದು. ಎಂತಲೇ ಆಧುನಿಕ ಕಾನೂನಿನ ತಳಹದಿ ಯಾವತ್ತೂ ಅಧಿಕಾರವೇ. ಅದರೆ ಇದಕ್ಕೆ ತದ್ವಿರುದ್ದವಾಗಿ ಷರಿಯಾದ ಉದ್ದೇಶ ಪ್ರಜೆಗಳ ಧಾರ್ಮಿಕ ಬೆಳವಣಿಗೆ ಮತ್ತು ಅವರ ಹಕ್ಕುಗಳ ಸಂರಕ್ಷಣೆ. ಅಧಿಕಾರ ವಿಕೇಂದ್ರಿಕರಣ ಎನ್ನುವುದು ಅದರ ಮೂಲಭೂತ ಸ್ವಭಾವ. ಷರಿಯಾ ಒಮ್ಮೆಯೂ ಆಧುನಿಕ ಕಾನೂನು ವ್ಯವಸ್ಥೆಯ ತರ ಬೆಳವಣಿಗೆ ನಿಂತ ಹರಿಯದ ನೀರಲ್ಲ. ಅದು ಹೊರಗಡೆ ಇರುವ ಸಮಾಜ ದೊಂದಿಗೆ ಸತತವಾದ ಕೊಡುಕೊಳೆಯಲ್ಲಿ ಭಾಗಿಯಾಗಿ ನಿರಂತರ ‘ ಆಗುವಿಕೆಗೆ (becoming)’ ಒಳಗಾಗುತ್ತಿರುತ್ತದೆ. ತನ್ನೊಂದಿಗೆ ತನ್ನ ಸಮಾಜವನ್ನು ನವೀಕರಿಸುತ್ತಾ ಸಾಗುತ್ತದೆ.

ಮಲಯಾಳ ಮೂಲ: ಮುಹಮ್ಮದ್‌ ಕೋಮತ್‌

ಕನ್ನಡಕ್ಕೆ: ನಝೀರ್‌ ಅಬ್ಬಾಸ್      

2 Comments

Leave a Reply

*