ಹಕ್ಕಿಯ ದೂರು

ನೆನಪಾಗುತಿವೆ ಇಂದು
ಕಳೆದುಹೋದ ಆ ದಿನವು
ಹಕ್ಕಿಗಳ ಚಿಲಿಪಿಲಿಯಲ್ಲಿ
ವಸಂತನ ಆಗಮನವು

ಅತ್ತಿತ್ತ ಹಾರಿ ನಲಿದಾಡುತಿದ್ದ
ಬೇಕೆಂದ ಕಡೆಗೆ ಹಾರಾಡುತಿದ್ದ
ಸಂತಸದ ಗುಡಿಯಲಿದ್ದ
ಆ ನನ್ನ ಸ್ವಾತಂತ್ರ್ಯವೆಲ್ಲಿ

ಆ ಕ್ಷಣಗಳ ನೆನಪಿನಲ್ಲಿ
ಎದೆಯೊಡೆಯುತಿಹುದಿಲ್ಲಿ
ಇಬ್ಬನಿಯ ಕಣ್ಣೀರಿನಲ್ಲಿ
ನಗುತಿದ್ದ ಆ ಮೊಗ್ಗೆಗಳೆಲ್ಲಿ

ಯಾವ ಸೌಂದರ್ಯದ ಖನಿಯೋ
ಅದಾವ ಮೋಹಿನಿಯ ಇರವೋ
ಆ ಮೈಮಾಟದಲ್ಲಿ ತುಂಬಿ
ಮುದಗೊಳ್ಳುತಿತ್ತು ಗುಡಿಯು

ಬಂಧನದೊಳಗಿರುವೆ
ಆ ಮಧುರಧ್ವನಿಗಳ ಸದ್ದುಗಳಿಲ್ಲ
ಅಯ್ಯೋ ಆ ಸ್ವಾತಂತ್ರ್ಯವೆಂಬುದೊಂದು
ನನ್ನ ಕೈಯೊಳಗಿರಬೇಕಾಗಿತ್ತು

ಮನೆಸೇರಲು ಚಡಪಡಿಸುತಿರುವೆ
ಹಣೆಬರಹವ ಹಳಿಯುತಿರುವೆ
ಇಲ್ಲಿ ಬಂಧಿಯಾಗಿ ಬಿದ್ದಿರುವೆ
ಒಡನಾಡಿಗಳೆನ್ನ ಕಾಡಿನಲ್ಲಿಹರು!

ವಸಂತನ ಆಗಮನವೇನೋ
ಈ ಮೊಗ್ಗುಗಳು ನಕ್ಕು ನಲಿಯುತಿವೆ ಅಲ್ಲಿ
ಎನ್ನ ವಿಧಿಯ ಹಳಿಯುತಿರುವೆ
ಈ ಕೈದಿನ ಕಗ್ಗತ್ತಲೆಯಲ್ಲಿ

ಈ ಬಂಧನದ ಬಿನ್ನಹವ
ಯಾರ ಬಳಿಗೊಯ್ಯಲಿ ದೊರೆಯೇ
ಬರದಿರಲಿ ನನ್ನ ಸಾವು
ಈ ಬಂಧನದ ನೋವಿನಾ ಬಳಿಯೇ

ದುಸ್ಥಿತಿಗೆ ಇಳಿದಿರುವೆ ನಾನು
ಆ ತೋಟದಿಂದ ಕಳೆದು,
ನೋವುಣ್ಣುತಿದೆ ಎದೆಯು
ಎದೆಯ ನುಂಗುತಿದೆ ನೋವು

ಹಾಡೆಂದು ತಿಳಿದು
ನಗಬೇಡಿ ನೀವು
ದುಃಖತಪ್ತ ಮನದ
ಒಡಲಾಳದ ಕೂಗು

ಮುಕ್ತಗೊಳಿಸೆನ್ನ ಒಮ್ಮೆ
ಓ ಕೈದುಗಾರನೆ ನೀನು
ಮುಕ್ತಿಗೊಳಿಸೀ ಮೂಕ ಕೈದಿಯ
ಧನ್ಯನಾಗುವೆ ನೀನು

ಉರ್ದು ಮೂಲ : ಅಲ್ಲಾಮ ಇಕ್ಬಾಲ್
ಅನುವಾದ : ಪುನೀತ್ ಅಪ್ಪು

1 Comment

Leave a Reply

*