ಸೂಫಿ ಕಥೆ ಹೇಳುವ ಹಕ್ಕಿಗಳು ಮತ್ತು ರೂಮಿ, ಅತ್ತಾರರ ರೂಪಕಗಳು

ಒಮ್ಮೆ ಪ್ರವಾದಿ ಇಬ್ರಾಹಿಂ (ಅ)ರು ಅಲ್ಲಾಹನ ಆಜ್ಞೆಯಂತೆ ನಾಲ್ಕು ಪಕ್ಷಿಗಳನ್ನು ದ್ಸಬಹ್ ಮಾಡಿ ಅವುಗಳ ಮಾಂಸಗಳನ್ನು ಪರಸ್ಪರ ಬೆರೆಸಿ ಸಣ್ಣ ಭಾಗವೊಂದನ್ನು ಪ್ರತ್ಯೇಕಿಸಿ ಅನತಿ ದೂರದಲ್ಲಿರುವ ಬೆಟ್ಟವೊಂದರ ಮೇಲಿರಿಸುತ್ತಾರೆ. ತುಸು ಹೊತ್ತಾದ ಬಳಿಕ, ಆ ಪೇರಿಸಿಟ್ಟ ಮಾಂಸದೆಡೆಗೆ ನೋಟವಿಟ್ಟು ಪಕ್ಷಿಗಳನ್ನು ಹಿಂದಕ್ಕೆ ಬರುವಂತೆ ಕರೆಯಲಾಗುತ್ತದೆ. ಆ ಕೂಡಲೇ ಪಕ್ಷಿಗಳು ಬೆರಗುಗೊಳಿಸುವಂತೆ ಮರುಹುಟ್ಟುಪಡೆದು ಇಬ್ರಾಹಿಮ್ (ಅ)ರ ಬಳಿಗೆ ಹಾರಿಕೊಂಡು ಬರುತ್ತದೆ. ಪ್ರಸ್ತುತ ಘಟನೆಯ ಉಲ್ಲೇಖವು ಖು‌ರ್‌ಆನಿನ ಎರಡನೇ ಅಧ್ಯಾಯ ‘ಅಲ್ ಬಕರಃ’ ದಲ್ಲಿ ಕಾಣಬಹುದು.
ಮತ್ತೊಂದೆಡೆ ಪ್ರವಾದಿ ಸುಲೈಮಾನ್(ಅ)ರು ಪಕ್ಷಿಗಳ ಮಾತನ್ನು ಬಲ್ಲವರಾಗಿದ್ದಾರೆಂದೂ ‘ಹುದ್‌ಹುದ್'(Hoopoe) ಹಕ್ಕಿಯೊಂದಿಗಿನ ಅವರ ಸಂಭಾಷಣೆ ಮತ್ತು ಆ ಘಟನೆಯ ವಿವರಗಳನ್ನೂ ನೋಡಬಹುದು.

ಮನುಷ್ಯನು ಪರಿಸರದ ಕೂಸಾಗಿರುವ ಕಾರಣಕ್ಕಾಗಿಯೇ ಖು‌ರ್‌ಆನಿನುದ್ದಕ್ಕೂ ಗಿಡ-ಮರ, ಬೆಟ್ಟ-ಗುಡ್ಡ, ತೊರೆ-ಝರಿ, ಆಕಾಶ- ಭೂಮಿ, ಸೂರ್ಯ-ಚಂದ್ರ, ಕತ್ತಲು-ಬೆಳಕು ಹಾಗೂ ಮನುಷ್ಯನ ಬದುಕು ಸದಾ ತಳುಕುಹಾಕಿಕೊಂಡಿರುವ ಪ್ರಕೃತಿಯ ಉಲ್ಲೇಖ ಧಾರಾಳವಾಗಿ ಕಾಣಸಿಗುತ್ತದೆ. ಅಂತೆಯೇ ಸೂಫಿ ದೃಷ್ಟಾಂತಗಳ ಬೋಧನೆಗಳಲ್ಲಿಯೂ ಹಕ್ಕಿಗಳನ್ನು ಉದಾಹರಣೆಯಾಗಿ, ಉಪಮೆಗಳಾಗಿ ಬಳಸಿಕೊಳ್ಳುವ ಪರಿಪಾಠವೂ ಇದೆ. ಭೌತಿಕ ಜೀವನದ ಸೀಮಿತ ಕಾಲಾವಧಿಯನ್ನು ಪಂಜರದಲ್ಲಿ ಸವೆಸುವ ಪಕ್ಷಿಗಳಂತೆಯೇ ಐಹಿಕ ಬದುಕನ್ನು ಸೆರೆಮನೆಯಂತೆ ಕಾಣುವ ಸೂಫಿಗಳಿಗೂ ‘ವೈರಾಗ್ಯ’ ಎಂಬ ನಂಟಿರುವುದು ಇದಕ್ಕೊಂದು ಕಾರಣವಾಗಿರಲೂಬಹುದು. ಸಾಧಾರಣವಾಗಿ ಸೂಫಿಗಳು ಸಾವನ್ನು ಪಂಜರದಿಂದ ಬಿಡುಗಡೆಗೊಂಡು ಸ್ವಾತಂತ್ರ್ಯ ಪಡೆಯುವ ಹಕ್ಕಿಗಳಿಗೆ ಹೋಲಿಸುವುದುಂಟು. ಅವರು ಆ ಸ್ವಾತಂತ್ರ್ಯವನ್ನು “ಮದುವೆಯ ರಾತ್ರಿ” ಎಂದು ಸಂಭೋದಿಸುತ್ತಾರೆ. ವಾಸ್ತವದಲ್ಲಿ ಮರಣದ ಬಳಿಕವೇ ಆತ್ಮಗಳು ನಿಜವಾದ ಸಂತೃಪ್ತಿಯನ್ನು ಅನುಭವಿಸುತ್ತವೆ ಎಂಬುವುದೇ ಈ ಪ್ರಯೋಗದ ಹಿಂದಿನ ತಾತ್ಪರ್ಯ.

ಸೂಫಿಗಳಲ್ಲಿ “ಸಾವಿಗೆ ಮುನ್ನ ಸಾವು” ಎಂಬ ಪರಿಕಲ್ಪನೆಯನ್ನು ಕಾಣಬಹುದು ಅಥವಾ ಇದರರ್ಥ ಅಸೂಯೆ, ಬೂಟಾಟಿಕೆ ಮತ್ತು ಪ್ರಾಪಂಚಿಕ ಪ್ರೇಮದಂತಹ ಐಹಿಕವಾದ ಗೊಡವೆಗಳಿಂದ ಕಳಚಿಕೊಳ್ಳುವುದು. ಅಂದರೆ ಸಹಜಾನಂದದಿಂದ ಶಾಶ್ವತವಾಗಿ ಮುಕ್ತಿಪಡೆಯುವುದು ಎಂಬರ್ಥ. ಈ ಜಗತ್ತಿನಲ್ಲಿ ಮರಣಿಸಿದ ಆತ್ಮಗಳಿಗೆ ಮಾತ್ರ ಇಲ್ಲಿಯೇ ದೈವೀಪ್ರೇಮದ ಸುಖವನ್ನು ಅನುಭವಿಸಲು ಸಾಧ್ಯವಾಗಬಲ್ಲದು ಎನ್ನುತ್ತಾರೆ ಸೂಫಿ ಸಂತರು. ಮೌಲಾನಾ ಜಲಾಲುದ್ದೀನ್ ರೂಮಿಯವರು ತನ್ನ ಪ್ರಸಿದ್ಧ ಗ್ರಂಥ “ಮಸ್ನವಿ”ಯಲ್ಲಿ “ಗಿಳಿ ಮತ್ತು ವ್ಯಾಪಾರಿ” ಎಂಬ ತಲೆಬರಹದ ಕಥೆಯಲ್ಲಿ ಇದೇ ಆಶಯವನ್ನು ಪ್ರತಿಪಾದಿಸುತ್ತಾರೆ. ಆ ಕಥೆಯು ಹೀಗಿದೆ;
ಪರ್ಷಿಯನ್ ದೇಶದ ವ್ಯಾಪಾರಿಯೊಬ್ಬ ಭಾರತ ದೇಶದ ಗಿಳಿಮರಿಯೊಂದನ್ನು ಸಾಕಿದ್ದ. ಆ ಗಿಳಿಯು ಸದಾ ತನ್ನ ಬಳಿಯೇ ಇರಬೇಕೆಂಬ ವ್ಯಾಮೋಹದಿಂದ ಅದನ್ನು ಚಂದದ ಪಂಜರವೊಂದಲ್ಲಿ ಕೂಡಿಹಾಕಿದ್ದ. ಒಂದು ದಿನ ಆತನಿಗೆ ವ್ಯಾಪಾರದ ನಿಮಿತ್ತ ಭಾರತ ದೇಶಕ್ಕೆ ಪ್ರವಾಸ ಬೆಳೆಸಬೇಕಾಗಿ ಬಂತು. ತನ್ನ ಮನೆಯವರೊಂದಿಗೆ ದೂರದ ಭಾರತದ ದೇಶದಿಂದ ಏನಾದರೂ ಉಡುಗೊರೆ ಬೇಕೇ ಎಂದು ಕೇಳಿದ. ತಕ್ಷಣವೇ ತನ್ನ ಗಿಳಿಮರಿಯ ನೆನಪಾಗಿ “ನಿನಗೇನಾದರೂ ಬೇಕೇ? ನಾನು ನಿನ್ನ ತಾಯ್ನಾಡಿಗೆ ಹೊರಡುತ್ತಿದ್ದೇನೆ”ಎಂದ. ಪಂಜರದ ಬದುಕಿನಿಂದ ಅದಾಗಲೇ ಬೇಸತ್ತು ಹೋಗಿದ್ದ ಗಿಳಿಯು ತನ್ನ ಒಡೆಯನಲ್ಲಿ ಒಂದು ಮನವಿಯನ್ನು ಮುಂದಿಟ್ಟಿತ್ತು. “ಒಡೆಯಾ, ನೀವು ನನ್ನ ತವರಿಗೆ ಹೋಗುತ್ತಿದ್ದೀರಿ. ಅಲ್ಲಿ ನನ್ನವರು ಧಾರಾಳವಾಗಿ ಸ್ವಚ್ಛಂದ ವಾತಾವರಣದಲ್ಲಿ ವಿಹರಿಸುತ್ತಿರುವರು. ನೀವು ಖಂಡಿತಾ ಅವರನ್ನು ಭೇಟಿಯಾಗಬೇಕು ಮತ್ತು ಅವರಲ್ಲಿ ನನ್ನದೊಂದು ಸಲಾಮನ್ನು ಹೇಳಬೇಕು. ನಿಮ್ಮ ಸ್ನೇಹಿತನೊಬ್ಬ ಪಂಜರದಲ್ಲಿರುವಾಗ ಅದು ಹೇಗೆ ನಿಮಗೆ ಆರಾಮವಾಗಿರಲು ಸಾಧ್ಯ ಎಂಬ ಪ್ರಶ್ನೆ ನನಗಾಗಿ ಅವರಲ್ಲಿ ಕೇಳಬೇಕು. ನನ್ನ ಸ್ಥಿತಿಯೇನೆಂಬುವುದನ್ನು ಅವರಿಗೆ ತಲುಪಿಸಬೇಕು” ಎಂದಿತು ಗಿಳಿಮರಿ.
ವ್ಯಾಪಾರಿಯು ತನ್ನ ವಹಿವಾಟುಗಳೆಲ್ಲ ಮುಗಿದ ಬಳಿಕ ಗಿಳಿಯ ಕೋರಿಕೆಯಂತೆ ಅರಣ್ಯವೊಂದನ್ನು ಪ್ರವೇಶಿಸಿ ತನ್ನ ಗಿಳಿಮರಿಯ ಸಮಾಚಾರವನ್ನು ಅಲ್ಲಿರುವ ಹಕ್ಕಿಗಳೊಂದಿಗೆ ಹಂಚಿಕೊಂಡನು. ವಿಷಯ ಕೇಳುತ್ತಿದ್ದಂತೆ ಮರದ ಮೇಲಿದ್ದ ಹಕ್ಕಿಯೊಂದು ತೊಪ್ಪನೆ ಕುಸಿದುಬಿತ್ತು. ಪಂಜರದಲ್ಲಿರುವ ಗಿಳಿಮರಿಯ ಸಂಬಂಧಿ ಹಕ್ಕಿ ಇದಾಗಿರಬಹುದೇ? ಆ ಕಾರಣದಿಂದಲೇ ಈ ಹಕ್ಕಿಯು ಆಘಾತಗೊಂಡು ತನ್ನ ಪ್ರಾಣ ಕಳೆದುಕೊಂಡಿತೇ? ಹೀಗೆಂದು ಊಹಿಸಿಕೊಂಡ ವ್ಯಾಪಾರಿಯು ಸುಮ್ಮನಾದ. ಆ ಹಕ್ಕಿಯ ಸಾವು ಅವನನ್ನು ಕಾಡದಿರಲಿಲ್ಲ. ಅವನಲ್ಲಿ ಒಂದು ತೆರನಾದ ಶೂನ್ಯ ಭಾವನೆ ಆವರಿಸಿತು. ಆತ ಭಾರವಾದ ಎದೆಯೊಂದಿಗೆ ತನ್ನೂರಿಗೆ ಹಿಂದಿರುಗಿದ. ಸ್ವದೇಶಕ್ಕೆ ಮರಳಿದ ನಂತರ ಪಂಜರದ ಗಿಳಿಯು “ನನ್ನ ತಾಯ್ನಾಡಿನ ಶುಭವಾರ್ತೆಯೇನು? ನನ್ನ ಸಂಬಂಧಿಕರು ಏನೆಂದರು?” ಎಂಬಿತ್ಯಾದಿ ಪ್ರಶ್ನೆಗಳನ್ನು ಒಡೆಯನಲ್ಲಿ ಕೇಳಿತು.
ವ್ಯಾಪಾರಿ ತನ್ನ ಗಿಳಿಯಲ್ಲಿ ಮರದ ಮೇಲಿನಿಂದ ಬಿದ್ದು ಸತ್ತುಹೋದ ಹಕ್ಕಿಯ ಸಮಾಚಾರವನ್ನು ಅಲ್ಪ ಹಿಂಜರಿಕೆಯಿಂದಲೇ ತಿಳಿಸಿದ. ಇದನ್ನು ಕೇಳುತ್ತಲೇ ಆ ಗಿಳಿಮರಿಯೂ ಪಂಜರದಲ್ಲಿ ಪಟ್ಟನೆ ಕುಸಿದು ಬಿತ್ತು. ತನ್ನ ಸಂಬಂಧಿಯ ಅಕಾಲಿಕ ಮರಣವಾರ್ತೆಯನ್ನು ಕೇಳಿ ಈ ಗಿಳಿಯೂ ಸತ್ತುಹೋಯಿತೇ? ಎಂದು ವ್ಯಾಪಾರಿಯು ಖೇದಗೊಂಡ. ಗಿಳಿಯನ್ನು ತನ್ನ ಬೊಗಸೆಯಲ್ಲಿ ಎತ್ತಿಕೊಂಡವನು ಮೆತ್ತಗೆ ಪಂಜರದಿಂದ ಹೊರತೆಗೆದು ಮೇಜಿನ ಮೇಲಿರಿಸಿದ. ಹೊರಗಿಡುತ್ತಿದ್ದಂತೆ ಗಿಳಿಮರಿಯು ಥಟ್ಟನೆ ತನ್ನ ಪುಟಾಣಿ ರೆಕ್ಕೆಗಳನ್ನು ಹೊಡೆದುಕೊಂಡು ಕಿಟಕಿಯಿಂದ ಹೊರಕ್ಕೆ ಹಾರಿ ಮರದ ರೆಂಬೆಯೊಂದರಲ್ಲಿ ಕುಳಿತುಕೊಂಡಿತು.

ಆಶ್ಚರ್ಯಗೊಂಡ ವ್ಯಾಪಾರಿಯು ಗಿಳಿಯನ್ನೇ ನೋಡುತ್ತ ನಿಂತಿರುವಾಗ ಮರದ ಕೊಂಬೆಯೊಂದರ ಮೇಲೆ ಕುಳಿತ ಗಿಳಿಯು “ಓ ನನ್ನ ಒಡೆಯನೇ, ನಾನು ಪಂಜರದಲ್ಲಿದ್ದೇನೆ ಎಂಬ ಸಂದೇಶದಲ್ಲಿ ನನ್ನ ಬಿಡುಗಡೆಗೆ ದಾರಿ ಯಾವುದಾದರೂ ಇದೆಯೇ ಎನ್ನುವ ಪ್ರಶ್ನೆಯೂ ಅಡಕವಾಗಿತ್ತು. ಅದನ್ನು ಕೇಳಿದ ನನ್ನ ತವರಿನ ಹಕ್ಕಿಯು ಉಪಾಯವೊಂದನ್ನು ನಿನ್ನ ಮೂಲಕವೇ ಕಳುಹಿಸಿಕೊಟ್ಟಿತು! ಜೊತೆಗೆ, ನೀನು ವಯ್ಯಾರದ ಮಾತನ್ನು ನಿಲ್ಲಿಸಿಬಿಡು. ನಿನ್ನ ಶಬ್ಧವನ್ನು ಕರ್ಕಶಗೊಳಿಸಿಬಿಡು. ಮುದ್ದಾದ ಮಾತುಗಳೇ ನಿನ್ನ ಹಿತ ಶತ್ರುಗಳು. ಅವುಗಳನ್ನು ತ್ಯಜಿಸಿ ಬಂಧನ ಮುಕ್ತಿಯನ್ನು ಪಡೆಯಬೇಕು ಎಂಬುದೇ ಆ ನನ್ನ ಸಂಗಾತಿ ನಿನ್ನ ಮೂಲಕ ರವಾನಿಸಿದ ಉಪಾಯ.
ಇಷ್ಟು ದಿನ ಬಂಧನದಲ್ಲಿ ಇಟ್ಟಿದ್ದರೂ ಈ ನಿಗೂಢವಾದ ಉಪಾಯವನ್ನು ಹೊತ್ತು ತಂದ ಒಡೆಯನೇ ನಿನಗೆ ಅನಂತ ಧನ್ಯವಾದಗಳು”. ಆ ಬಳಿಕ ಗಿಳಿಯು ತನ್ನೊಡೆಯನಲ್ಲಿ ಹೀಗೆಂದು ಹೇಳುತ್ತದೆ; “ಒಡೆಯಾ, ನಶ್ವರ ಬದುಕಿನ ಕ್ಷಣಿಕ ಆನಂದವನ್ನು ತ್ಯಜಿಸಿಬಿಡು. ಐಹಿಕ ಬದುಕಿನ ಸೆರೆಮನೆಯಿಂದ ಪಲಾಯನಗೈದು ಸ್ವತಂತ್ರಗೊಳ್ಳು. ಇಲಾಹೀ ಪ್ರೇಮದಿಂದ ಮಾತ್ರವೇ ಮನವು ತನ್ನ ಅಭೀಷ್ಠೆಯನ್ನು ತಲುಪಲು ಸಾಧ್ಯ.”

ಅಂತಿಮವಾಗಿ ಗಿಳಿ ತನ್ನ ಮಾಲಿಕನಿಗೆ ಕೆಲವೊಂದು ಹಿತೋಪದೇಶವನ್ನು ನೀಡುತ್ತದೆ; “ನಿನ್ನ ದಾರಿಯು ಪರಮಾತ್ಮನನ್ನು ಸೇರುವ ಕಡೆಗಿರಬೇಕು. ನಾನೀಗ ನಿನ್ನಿಂದ ಸ್ವತಂತ್ರಗೊಂಡತೆ ನೀನೂ ಸ್ವತಂತ್ರಗೊಂಡು ಮುಂದಕ್ಕೆ ನೈಜ ಜಗತ್ತಿಗೆ ನಿನ್ನನ್ನು ನೀನು ಅನಾವರಣಗೊಳಿಸಬೇಕು. ರೇಷ್ಮೆ ಹುಳದಂತೆ ನಿನ್ನ ಸುತ್ತ ನೀನೇ ಚೌಕಟ್ಟನ್ನು ಕಟ್ಟಿಕೊಂಡಿರುವೆ. ಆ ಚೌಕಟ್ಟನ್ನು ಒದೆದು ಬದಿಗೆ ಸರಿಸಿಬಿಡಬೇಕು‌. ಬಿಡುಗಡೆಗಿರುವ ಏಕೈಕ ಮಾರ್ಗ ಇವುಗಳನ್ನೆಲ್ಲ ತೊರೆದು ಹೃದಯ ಮಂದಿರದಲ್ಲಿ ಪರಮಾತ್ಮನನ್ನು ಪ್ರತಿಷ್ಠಾಪಿಸಿ ಪ್ರೇಮದಾಹಿಯಾಗುವುದು. ಇದನ್ನು ಅನುಸರಿಸಿದರೆ‌ ಮಾತ್ರ ಇಹದ ಕಬಂಧ ಬಾಹುಗಳಿಂದ ಕಳಚಿಕೊಂಡು ಪಾರಾಗಬಹುದು.”
ಇಷ್ಟು ಹೇಳಿದ ಬಳಿಕ ಬಂಧಮುಕ್ತನಾದ ಆನಂದದಿಂದ ಗಿಳಿಮರಿಯು ನೀಲಾಕಾಶದತ್ತ ಹಾರುತ್ತಾ ಹೋಯಿತು. ಆ ಹಾರಾಟದಲ್ಲಿದ್ದ ಉತ್ಸಾಹವನ್ನು ನೋಡುತ್ತಾ ವ್ಯಾಪಾರಿಯು ಚಕಿತಗೊಂಡು ನಿಂತುಬಿಟ್ಟನು. ಆತ, ತನ್ನ ಸಾಕುಗಿಣಿಯಲ್ಲಿ “ನಿನ್ನ ಉಪದೇಶಗಳು ನನ್ನನ್ನು ದೇವರ ಬಳಿಗೆ ಹಿಂದಿರುಗಿಸಿದವು” ಎಂದು ಕೃತಜ್ಞತೆ ಸಲ್ಲಿಸಿದನು. ನಂತರ ವ್ಯಾಪಾರಿ ತನ್ನಲ್ಲೇ ಈ ರೀತಿಯಾಗಿ ಹೇಳಿಕೊಂಡನು; ‘ನನ್ನ ಗಿಳಿಯೂ ಎಷ್ಟೊಂದು ಒಳ್ಳೆಯ ಸಲಹೆಗಾರನಾಗಿತ್ತು, ಅಮೂಲ್ಯವಾದ ಉಪದೇಶಗಳನ್ನೇ ನೀಡಿತು. ನಾನು ಮುಂದಕ್ಕೆ ಆ ಗಿಳಿಯ ಮಾರ್ಗವನ್ನೇ ಅನುಸರಿಸಬೇಕು.’ ವ್ಯಾಪಾರಿಯ ಆ ತೀರ್ಮಾನದಲ್ಲಿ ದೃಡಸಂಕಲ್ಪವಿತ್ತು.

ವಾಸ್ತವದಲ್ಲಿ ನಿಜವಾದ ಬದುಕಿನ ಗುರಿಯು ಆ ಗಿಳಿಯ ಬೋಧನೆಯಾಗಿತ್ತು. ಮೌಲಾನಾ ರೂಮಿ ಆ ಗಿಳಿಯ ಮಾತುಗಳಲ್ಲಿ ತನ್ನ ಚಿಂತನೆಯನ್ನು ಜಗತ್ತಿನ ಮುಂದಿಟ್ಟರು. ಸೂಫಿಗಳು ಲೌಕಿಕ ಪ್ರೇಮ(ಇಶ್ಕೇ ಮಜಾಝಿ)ವನ್ನು ಮಾನವರ ಕೈಗಳಲ್ಲಿ ಬಂಧಿಯಾಗುವ ಗಿಳಿಮರಿಗಳಿಗೆ ಸಮನಾದುದೆಂದು ಪ್ರತಿಪಾದಿಸುತ್ತಾರೆ.
ಮತ್ತೊಂದೆಡೆ ರೂಮಿ ಹೀಗೆ ಹೇಳುತ್ತಾರೆ; ‘ಓ ನರಮನುಷ್ಯರೇ, ಸರಪಳಿಗಳನ್ನು ಮುರಿಯಿರಿ. ಮುಕ್ತರಾಗಿರಿ. ನಿಮಗೆ ಎಷ್ಟು ದಿನಗಳವರೆಗೆ ಚಿನ್ನ ಮತ್ತು ಬೆಳ್ಳಿಯನ್ನು ವಶಪಡಿಸಿಕೊಳ್ಳಲು ಸಾಧ್ಯ?’

ಮನುಷ್ಯನು ಈ ಪ್ರಪಂಚದ ಸುಖಗಳಲ್ಲಿ ಸಿಕ್ಕಿಹಾಕಿಕೊಂಡ ಹಕ್ಕಿಯಂತೆ. ಅದರ ಎರಡು ಕಾಲುಗಳು ಘನವಾದ ತೈಲ ಅಥವಾ ಟಾರಿನಲ್ಲಿ ಸಿಲುಕಿಕೊಂಡಿವೆ. ಅದು ತನ್ನ ರೆಕ್ಕೆಗಳನ್ನು ಎಷ್ಟು ಬಡಿದರೂ ಅದರಿಂದ ಸ್ವಲ್ಪವೂ ಮಿಸುಕಾಡಲು ಸಾಧ್ಯವಿಲ್ಲ. ಟಾರು ಇನ್ನೂ ಬಿಸಿಯಾಗಿ ಕರಗಿದರೆ ಮಾತ್ರ ಪಕ್ಷಿ ಹಾರಬಲ್ಲದು, ಬದುಕಬಲ್ಲದು. ಅದೇ ರೀತಿಯಲ್ಲಿ, ‘ಇಲಾಹೀ ಪ್ರೇಮ’ ಮಾತ್ರ ಮನುಷ್ಯನನ್ನು ಲೌಕಿಕ ಚಿಂತನೆಯಿಂದ ಬಿಚ್ಚಿಸಿಕೊಳ್ಳಬಹುದು, ವಿಮುಕ್ತನಾಗಿಸಬಹುದೆಂದು ಮೌಲಾನಾರು ಹೇಳುತ್ತಾರೆ. ಪ್ರಸ್ತುತ ಆಶಯವನ್ನು
ಖ್ಯಾತ ಪರ್ಷಿಯನ್ ತತ್ವಜ್ಞಾನಿ ಇಬ್ನ್ ಸೀನ ಪಕ್ಷಿಗಳನ್ನು ರೂಪಕಗಳಾಗಿಟ್ಟುಕೊಂಡು ತನ್ನ ಗ್ರಂಥಗಳಲ್ಲಿಯೂ ಪ್ರತಿಪಾದಿಸಿದ್ದಾರೆ. ಪ್ರಾಣಿ ಪಕ್ಷಿಗಳನ್ನು ಸಂಕೇತವಾಗಿಟ್ಟುಕೊಂಡು ತಮ್ಮ ಭೋದನೆಗಳನ್ನು ಸಾಮಾನ್ಯ ಜನರಿಗೆ ಸರಳವಾಗಿ ತಲುಪಿಸುವುದು ಸೂಫಿಗಳ ಮೂಲ ಉದ್ದೇಶವಾಗಿತ್ತು.

ಮತ್ತೋರ್ವ ಸೂಫಿ ಲೇಖಕ ಫರೀದುದ್ದೀನ್ ಅತ್ತಾರರು ಪಕ್ಷಿಗಳ ಸಂಭಾಷಣೆ ಹಾಗೂ ಸಾಹಸವನ್ನು ಪ್ರತಿಪಾದಿಸಿದ ತನ್ನ ಸುಪ್ರಸಿದ್ಧ ಫಾರಸಿ ಕೃತಿ ‘ಮಂತ್ವಿಖು ತ್ವೈಯ್‌ರ್'( منطق الطير )ನಲ್ಲಿ ಒಂದು ಕಥೆಯ ಮೂಲಕ ಸೂಫಿಸಂನ ಆರಂಭ, ಬೆಳವಣಿಗೆ ಮತ್ತು ಅಂತ್ಯವನ್ನು ಪ್ರತಿಬಿಂಬಿಸುವ ಪ್ರಯತ್ನವನ್ನು ಮಾಡುತ್ತಾರೆ. ಆ ನೀತಿಕಥೆ ಹೀಗಿದೆ;
ಒಮ್ಮೆ ಹಕ್ಕಿಗಳೆಲ್ಲವೂ ಒಂದೆಡೆ ಸಭೆ ಸೇರಿದವು. ಪ್ರತಿ ಊರಿಗೂ ಒಬ್ಬೊಬ್ಬ ರಾಜನಿದ್ದಾನೆ, ನಮ್ಮ ಪಕ್ಷಿ ಸಾಮ್ರಾಜ್ಯಕ್ಕೂ ಸಮರ್ಥ ನಾಯಕನೊಬ್ಬನ ಆವಶ್ಯಕತೆಯಿದೆಯೆಂಬ ಪ್ರಸ್ತಾಪವನ್ನು ಮುಂದಿಟ್ಟವು. ಎಲ್ಲಾ ಪಕ್ಷಿಗಳೂ ತಾವೇ ನಾಯಕರಾಗಲು ಯೋಗ್ಯರೆಂದು ಮನಸ್ಸಲ್ಲೇ ಚಿಂತಿಸುತ್ತಿದ್ದರೆ ಹುದ್‌ಹುದ್ ಪಕ್ಷಿಯೂ ಈಗಾಗಲೇ ನಮಗೊಬ್ಬ ಸೀಮುರ್ಘ್ (سيمورغ) ಎಂಬ ರಾಜನಿರುವುದಾಗಿ ಹೇಳಿತು. ಇದನ್ನು ಕೇಳಿದ ಪಕ್ಷಿ ಸಂಕುಲವು ಆ ರಾಜನನ್ನು ಹುಡುಕುವುದಾಗಿ ನಿರ್ಧರಿಸಿ ಹೊರಡಲು ಅಣಿಯಾದವು. ಎಲ್ಲಾ ಹಕ್ಕಿಗಳು ಹೊರಟವಾದರೂ ರಾಜನನ್ನು ತಲುಪುವ ದಾರಿಯು ತುಂಬಾ ಪ್ರಯಾಸಕರವಾಗಿತ್ತು. ಪ್ರಯಾಣವು ಕಷ್ಟಕರವೆನಿಸುತ್ತಿದ್ದಂತೆ ಕೆಲವು ಹಕ್ಕಿಗಳು ಉಪಾಯದಿಂದ ನುಣುಚಿಕೊಳ್ಳತೊಡಗಿದುವು. ಅವುಗಳಲ್ಲಿ ಮೊದಲು, ಅರಮನೆಯ ಸುಖದ ಸುಪ್ಪತ್ತಿಗೆಯಲ್ಲಿ ಇರುತ್ತಿದ್ದ ಗಿಳಿಮರಿಯು ಮೊಂಡು ನೆಪವೊಂದನ್ನು ಹೇಳಿ ಗುಂಪಿನಿಂದ ಮರಳಿತು. ಬಳಿಕ ಒಂದೊಂದೇ ಹಕ್ಕಿಗಳು ಹಿಂದಿರುಗತೊಡಗಿದವು. ತನ್ನ ಗರಿಗಳ ಸೌಂದರ್ಯ ಕ್ಷೀಣಿಸಬಹುದೆಂದು ಅಹಂ ನುಡಿದು ನವಿಲು, ಹೂವಿನ ಮೇಲೆ ವ್ಯಾಮೋಹ ಉಕ್ಕಿಕೊಂಡ ಬುಲ್‌ಬುಲ್ ಹಕ್ಕಿಯೂ ಯಾತ್ರೆ ಮೊಟಕುಗೊಳಿಸಿದವು. ಆದರೆ
ಹುದ್‌ಹುದ್ ಹಕ್ಕಿ ತನ್ನ ಸಹಯಾತ್ರಿಕರಿಗೆ ಸಮಾಧಾನ ಹೇಳುತ್ತಿತ್ತು. ದಾರಿಯುದ್ದಕ್ಕೂ ಗಾದೆಗಳನ್ನು ಹೇಳುತ್ತಾ, ಬೋಧನೆಗಳನ್ನು ನೀಡುತ್ತಾ ಉಳಿದ ಹಕ್ಕಿಗಳಲ್ಲಿ ಹುರುಪನ್ನು ತುಂಬಿಸುತ್ತಿತ್ತು. ಆ ಪಾಠಗಳೆಲ್ಲ ಮುಖ್ಯವಾಗಿ ಐಷಾರಾಮಿ ಜೀವನ ನಡೆಸುವ, ಸ್ನೇಹವನ್ನು ತಿರಸ್ಕರಿಸುವ, ದೇಹದ ಸೌಂದರ್ಯಕ್ಕೆ ಒತ್ತನ್ನು ನೀಡುವ ಮತ್ತು ಲೌಕಿಕ ಪ್ರೇಮದ ದಾಸರಾಗಿ ಸೃಷ್ಟಿಕರ್ತನಿಂದ ದೂರವಾಗುವವರ ಕುರಿತಾಗಿತ್ತು. ಹುದ್‌ಹುದ್ ಹಕ್ಕಿಯ ಆ ಸಾರವತ್ತಾದ ಉಪದೇಶಗಳನ್ನು ಆಲಿಸಿದ ಹಕ್ಕಿಗಳು ಮಾರ್ಗದರ್ಶಕನ ಜವಾಬ್ದಾರಿಯನ್ನು ವಹಿಸಿಕೊಳ್ಳುವಂತೆ ಹುದ್‌ಹುದ್‌ನಲ್ಲಿ ಕೋರಿಕೊಂಡವು. ಮೊದಲು ಒಲ್ಲೆನೆಂದು ಅಸಮ್ಮತಿಯನ್ನು ನೀಡಿದ ಹುದ್‌ಹುದ್‌‌, ಗೆಳೆಯರ
ಒತ್ತಾಯದ ಮೇರೆಗೆ ಅಂತಿಮವಾಗಿ ಒಪ್ಪಿಗೆಯನ್ನು ಸೂಚಿಸಿತು.
ನಾಯಕನಾದ ಬಳಿಕ ಹುದ್‌ಹುದ್ ತನ್ನ ಸಂಗಡಿಗರಿಗೆ
ಅನ್ವೇಷಣೆ(طلب), ಪ್ರೇಮ (عشق), ರಹಸ್ಯ ಜ್ಞಾನ (معرفة), ಸ್ವಾವಲಂಬನೆ (استغناء), ಏಕದೇವೋಪಾಸನೆ (توحيد), ಭೀತಿ(حيرة) ಮತ್ತು ಮೋಕ್ಷ(فقر والفناء) ಎಂಬ ಏಳು ಹಂತಗಳನ್ನು ಪರಿಚಯಿಸುತ್ತಾ ಸಾಗಿತು. ಒಂದೊಂದು ಹಂತಗಳನ್ನು ವಿವರಿಸುತ್ತಲೇ ಅವುಗಳನ್ನು ಕೇಳಿದ ಕೆಲವೊಂದು ಹಕ್ಕಿಗಳು ದೊಪ್ಪನೆ ಬಿದ್ದುಕೊಂಡವು, ಕೆಲವೊಂದು ಸತ್ತುಹೋದವು ಮತ್ತು ಕೆಲವು ಮೂರ್ಛೆಹೋದವು. ಅಂತಿಮವಾಗಿ ಕೇವಲ ಮೂವತ್ತು ಹಕ್ಕಿಗಳು ಮಾತ್ರ ಉಳಿದುಕೊಂಡವು.
ಹಾಗೆ ಉಳಿದಿರುವ ಹಕ್ಕಿಗಳು ರಾಜನ ಸನ್ನಿಧಿಗೆ ಪ್ರವೇಶಿಸಲೋಸುಗ ಅರಮನೆಯ ಅಂಗಳದೆಡೆಗೆ ಧಾವಿಸಿತು. ಆದರೆ ಅರಮನೆಯ ಕಾವಲುಗಾರ ಹಕ್ಕಿಗಳನ್ನು ಒಳ ಪ್ರವೇಶಿಸದಂತೆ ತಡೆದನು. ನಿರಾಶೆಗೊಂಡ ಹಕ್ಕಿಗಳು ಮತ್ತು ಅವುಗಳ ನಾಯಕ ಹುದ್‌ಹುದ್ ಸಮೀಪದ ಹೂಗಳ ಚಪ್ಪರದಂತಿರುವ ವಿಶಾಲವಾದ ಉದ್ಯಾನವೊಂದಕ್ಕೆ ನುಗ್ಗಿಬಿಟ್ಟವು. ಅಲ್ಲಿರುವ ಹೂವುಗಳನ್ನೆಲ್ಲಾ ಕಿತ್ತುಕೊಂಡು ಚೆಲ್ಲಾಡತೊಡಗಿದವು. ಅರೆ ಕ್ಷಣದಲ್ಲಿಯೇ ಉದ್ಯಾನವಿಡೀ ಶೂನ್ಯವಾಯಿತು. ತಕ್ಷಣವೇ ಹೂವುಗಳನ್ನು ಕೀಳುತ್ತಿದ್ದ ಹಕ್ಕಿಗಳಿಗೆ ತಮ್ಮ ರಾಜ ಸೀಮೂರ್ಘ್ (سيمورغ)ರನ್ನು ಭೇಟಿಯಾದಂತಹ ದಿವ್ಯಾನುಭವವಾಯಿತು.

ಪರ್ಷಿಯನ್ ಭಾಷೆಯಲ್ಲಿ ಸೀಮೂರ್ಘ್ ಎಂದರೆ ಮೂವತ್ತು ಹಕ್ಕಿಗಳೆಂದು, ಫೀನಿಕ್ಸ್ ಹಕ್ಕಿಯೆಂದೂ ಅಭಿಪ್ರಾಯಗಳಿವೆ. ಈ ಹಕ್ಕಿಗಳು ಹಾದುಹೋಗುವ ಏಳು ಹಂತಗಳನ್ನು ಆಧ್ಯಾತ್ಮಿಕತೆಯೆಡೆಗೆ ಪ್ರವೇಶಿಸುವ ಪ್ರತಿಯೊಬ್ಬ ಅನ್ವೇಷಕರಿಗೂ ಅಗತ್ಯವೆನ್ನುವುದೇ ಮೇಲಿನ ಕಥೆಯ ಒಳಾರ್ಥ. ಆ ಏಳು ಹಂತಗಳನ್ನು ದಾಟುವುದು ಸುಲಭಸಾಧ್ಯವಲ್ಲವೆನ್ನುವ ಎಚ್ಚರಿಕೆಯನ್ನು ನೀಡುವ ಕಥೆಯು ಮಾನಸಿಕವಾಗಿ ನಾವೆಷ್ಟು ಬಲಿಷ್ಠರಾಗಿರಬೇಕೆಂಬುವುದನ್ನು ತಿಳಿಸಿಕೊಡುತ್ತದೆ.

ಪಕ್ಷಿಗಳನ್ನು ಸಂಕೇತವಾಗಿಟ್ಟುಕೊಂಡು ಫರೀದುದ್ದೀನ್ ಅತ್ತಾರ್ ರಚಿಸಿದ ‘ಮಂತ್ವಿಖು ತ್ವೈಯ್ರ್’ ಎಂಬ ಕೃತಿಯಿಂದ ಪ್ರೇರಿತರಾಗಿ ಹತ್ತು ಪಕ್ಷಿಗಳು( ده مورغ )ಎಂಬ ಕವನಗಳನ್ನು ರಚಿಸಿ ದರ್ವೇಶ್ ಶಂಸುದ್ದೀನ್ ದಿವಾನ್ ಅವರು ‘ಸುಲ್ತಾನ್ ಉಸ್ಮಾನ್ ಯಾವಿಸ್ ಸಲೀಮ್’ ಗೆ ಉಡುಗೊರೆಯಾಗಿ ನೀಡಿರುವುದಾಗಿ ಕಾಣಬಹುದು. ಆದರೆ ಇಲ್ಲಿರುವುದು ಹತ್ತು ಪಕ್ಷಿಗಳ ಉಲ್ಲೇಖ ಮಾತ್ರವಾಗಿದೆ. ಆ ಹತ್ತು ಪಕ್ಷಿಗಳನ್ನು ಹತ್ತು ರೀತಿಯ ಜನರೊಂದಿಗೆ ಕವಿಯು ತುಲನೆ ಮಾಡುತ್ತಾನೆ. ಅವುಗಳೆಂದರೆ, ಗೂಬೆಯಾಗಿ ಸೂಫಿ, ಕಾಗೆಯಾಗಿ ಕವಿ, ಗಿಳಿಯಾಗಿ ವಿದ್ವಾಂಸ, ದಾರ್ಶನಿಕನಾಗಿ ಹದ್ದು, ಉದಾತ್ತನಾಗಿ ಬುಲ್‌ಬುಲ್, ಜ್ಞಾನಿಯಾಗಿ ಹುದ್‌ಹುದ್‌, ವ್ಯಾಪಾರಿಯಾಗಿ ನವಿಲು, ರೈತನಾಗಿ ಗಿಡುಗ, ಆಸ್ತಿಕನಾಗಿ ಕೊಕ್ಕರೆ ಮತ್ತು ಜ್ಯೋತಿಷಿಯಾಗಿ ಗುಬ್ಬಚ್ಚಿ ಹಕ್ಕಿಯನ್ನು ಹೋಲಿಕೆ ಮಾಡುತ್ತಾನೆ. ಆ ಕವಿತೆಗಳುದ್ದಕ್ಕೂ ಈ ಹತ್ತು ಹಕ್ಕಿಗಳು ಮೊದಲು ತಮ್ಮನ್ನು ಪರಿಚಯಿಸಿಕೊಳ್ಳುವಂತೆ ಮತ್ತು ಆ ನಂತರ ತಮ್ಮ ಮೊದಲು ಮಾತನಾಡಿದ ಹಕ್ಕಿಗಳ ತಪ್ಪುಗಳನ್ನು ಬೊಟ್ಟುಮಾಡುವುದಾಗಿ ಕಟ್ಟಿಕೊಡಲಾಗಿದೆ. ತಾನು ಹೇಳಿದ್ದೇ ಸರಿ ಎಂದು ದೃಢವಾಗಿ ನಂಬಿಕೊಂಡು ಅದನ್ನು ಸಮರ್ಥಿಸಿಕೊಳ್ಳಲು ಹಾತೊರೆಯುವ ಹಕ್ಕಿಗಳ ಉಲ್ಲೇಖಗಳು ಮನುಷ್ಯನ ಅಹಮಿಕೆಗೆ ಹಿಡಿದ ಕೈಗನ್ನಡಿಯಂತೆ ಎಂಬುವುದನ್ನು ಇಲ್ಲಿ ಗ್ರಹಿಸಬಹುದಾಗಿದೆ.

ಮೌಲಾನಾ ಜಲಾಲುದ್ದೀನ್ ರೂಮಿ ಪಕ್ಷಿಗಳ ಇಂಪಾದ ಶಬ್ದಗಳಿಗೆ ವಿಶಾಲ ಮತ್ತು ವಿಶೇಷವಾದ ಅರ್ಥವ್ಯಾಪ್ತಿಯನ್ನು ನೀಡಿ ಅತ್ಯಂತ ಸ್ವಾರಸ್ಯಕರವಾದ ವ್ಯಾಖ್ಯಾನವನ್ನು ನೀಡಿದ್ದಾರೆ. ಪರ್ಷಿಯನ್ ಭಾಷೆಯಲ್ಲಿ “ಎಲ್ಲಿದೆ ಎಲ್ಲಿದೆ” ಎಂಬ ಅರ್ಥಬರುವ ಚಂದ್ರಮುಕುಟ ಹಕ್ಕಿಯ “ಕುಕು.. ಕುಕು..” ಶಬ್ದವನ್ನು ಕೇಳಿದಾಗ ಅದು ತನ್ನ ಸ್ನೇಹಿತ ಎಲ್ಲಿಹನೆಂಬ ಹುಡುಕಾಟದಲ್ಲಿದೆಯೆಂದೂ
ಕೊಕ್ಕರೆಯ ‘ಲಕ ಲಕ'(لك لك )ಎಂಬ ಶಬ್ದವು ಅರೇಬಿಕ್ ಭಾಷೆಯಲ್ಲಿ ‘ನಿನಗೆ ನಿನಗೆ’ ಎಂಬರ್ಥವಿರುವುದರಿಂದ ಅದು ‘ಓ ಅಲ್ಲಾಹ್ ಇಲ್ಲಿರುವ ಸರ್ವವೂ ನಿನ್ನದಾಗಿದೆ. ನನ್ನದೆಲ್ಲವೂ ನಿನಗಾಗಿದೆ’ ಎಂಬ ಝಿಕ್ರ್ (ಸ್ಮರಣೆ)ಆಗಿದೆಯೆಂದೂ ಮೌಲಾನರು ವಿಶ್ಲೇಷಿಸುತ್ತಾರೆ.

ಕವಿ ಸಿನಾನ್ ಓಮಿಯವರ ಒಂದು ಕವಿತೆಯಲ್ಲಿ ಕೊಕ್ಕರೆ ಹಕ್ಕಿಯನ್ನು ಶೈಖ್ ಆಗಿಯೂ ಮಾರ್ಗದರ್ಶಿಯಾಗಿಯೂ ಚಿತ್ರಿಸಲಾಗಿದೆ. ಕೊಕ್ಕರೆ ಹಕ್ಕಿಯು ತನ್ನ ಶಂಕುವಿನಾಕಾರದ ಮೊನಚಾದ, ಕೊಕ್ಕಿನಿಂದ ಮಣ್ಣನ್ನು ಕುಕ್ಕಿ ಕುಕ್ಕಿ ಒಂದು ಅದ್ಭುತವಾದ ವಿನ್ಯಾಸದ ಗೂಡನ್ನು ಕಟ್ಟುತ್ತದೆ. ನಾವು ದೂರದಿಂದಲೇ ಅದರ ಬಾಹ್ಯ ಸೌಂದರ್ಯ ಕಂಡು ಆಸ್ವಾದಿಸಿ ಸುಮ್ಮನಿರುತ್ತೇವೆ. ಆದರೆ ಅದರ ಹಿಂದಿನ ಶ್ರಮವನ್ನು ಕಾಣುವಲ್ಲಿ ನಾವು ನೂರಕ್ಕೆ ನೂರು ಸೋತುಹೋಗುತ್ತೇವೆ. ವಾಸ್ತವದಲ್ಲಿ ಒಬ್ಬ ಸೂಫಿಯ ಕಥೆಯೂ ಇದಕ್ಕೆ ಭಿನ್ನವಾಗಿರುವುದಿಲ್ಲ. ಅವನು ಧರಿಸುವ ಉಡುಪು, ಆತನ ಮಾತುಗಳು, ಮುಂಡಾಸು ಹಾಗೂ ಬದುಕುವ ರೀತಿಯನ್ನು ಗಣನೆಗೆ ತೆಗೆದುಕೊಂಡು ಕುಹಕವಾಡುತ್ತೇವೆ. ನಿಜದಲ್ಲಿ ಒಳಾರ್ಥವಿರುವ ಆ ಹಿರಿಜೀವದ ಮಾತು, ನಡವಳಿಕೆಯ ಹೊಳಹುಗಳನ್ನು ಕಾಣಲಾಗದೆ ಹೋಗುತ್ತೇವೆ. ಕಣ್ಣಿನಿಂದ ಮಾತ್ರವೇ ಕಾಣಲಾಗುತ್ತದೆ ಎಂಬುದು ಶುದ್ಧ ಸುಳ್ಳು ಮತ್ತು ಒಳನೋಟವಿರಲು ಒಂದೊಳ್ಳೆ ಹೃದಯ ಬೇಕಾಗುತ್ತದೆಂದು ಮುಂದುವರಿದ ಸಾಲುಗಳಲ್ಲಿ ಕವಿ ಸಿನಾನ್ ಓಮಿಯವರು ತರ್ಕಿಸುತ್ತಾರೆ.

ತ್ವರೀಖತ್ ಶೈಖರಾಗಿರುವ ‘ಉಮರ್ ಫುವಾದ್ ಕಸ್ತಮೋನೊಲು’ ಒಮ್ಮೆ ರಾಜರಾಗಿರುವ ಪ್ರವಾದಿ ಸುಲೈಮಾನ್ (ಅ)ರಿಗೆ ಕಾವ್ಯಾತ್ಮಕ ಭಾಷೆಯಲ್ಲಿ ಒಂದು ಪತ್ರವನ್ನು ಬರೆಯುತ್ತಾರೆ.
ಗುಲಾಬಿ ಮತ್ತು ಅದರ ಸೌಂದರ್ಯದ ಬಗ್ಗೆ ಬುಲ್‌ಬುಲ್ ಹಕ್ಕಿಗಿರುವ ಮೋಹದ ಕುರಿತಾಗಿ ಅಸೂಯೆ ಪಟ್ಟುಕೊಂಡಿದ್ದ ಕಾಗೆ ಮತ್ತು ಅದರ ಸಹಚರರು ರೂಪಿಸಿದ ಒಂದು ಸುಳ್ಳಿನ ಕಂತೆಯ ವಿರುದ್ಧವಾಗಿತ್ತು ಆ ಪತ್ರದಲ್ಲಿ ಬರೆದಿರುವುದು. ಆರೋಪದ ವಿಚಾರಣೆಗಾಗಿ ಬುಲ್ಬುಲ್ ಹಕ್ಕಿಯನ್ನು ಸುಲೈಮಾನರ ಅರಮನೆಯಲ್ಲಿ‌ನ ನ್ಯಾಯಾಲಯಕ್ಕೆ ಕರೆತರಲಾಯಿತು. ನ್ಯಾಯಾಧೀಶನಾದ ಗಿಡುಗ ಹೇಳಿತು, “ನಾನು ಇದೇ ಮೊದಲು ಈ ರೀತಿಯ ಮೊಕದ್ದಮೆಯನ್ನು ಎದುರಿಸುತ್ತಿದ್ದೇನೆ. ಇದರ ತೀರ್ಪಿಗಾಗಿ ಗೂಬೆಯನ್ನು ಆಹ್ವಾನಿಸುತ್ತೇನೆ. ಗೂಬೆ ಮಾತ್ರ ಇದನ್ನು ಸಮರ್ಪಕವಾಗಿ ಪರಿಹರಿಸಬಲ್ಲದು. ಅಲ್ಲಾಹನ ಆರಾಧನೆಯಲ್ಲಿ ಮಗ್ನನಾಗಿದ್ದ ಗೂಬೆಯನ್ನು ಕರೆಸಲಾಗುತ್ತದೆ. ಎರಡೂ ಕಡೆಯ ವಾದಗಳನ್ನು ಕೇಳಿದ ನಂತರ ಗೂಬೆ ಬುಲ್ಬುಲ್ ಪರವಾಗಿ ತೀರ್ಪು ನೀಡಿತು. ಬಳಿಕ ಅಲ್ಲಿ ನೆರೆದಿರುವವರಲ್ಲಿ ಈ ರೀತಿ ಹೇಳಿತು; ‘ಕೇವಲ‌ ಬಾಹ್ಯವನ್ನು ಅರ್ಥಮಾಡಿಕೊಳ್ಳುವವರಿಗೆ ಮತ್ತು ಅಸೂಯೆ ಪಟ್ಟುಕೊಳ್ಳುವವರಿಗೆ ಪ್ರೀತಿಯ ಮೌಲ್ಯ ಅರ್ಥವಾಗಲಾರದು. ಅಂಥವರ ಮಾತುಗಳಿಗೆ ಜಗತ್ತು ಕಿವಿಕೊಡುವ ಗೋಜಿಗೂ ಹೋಗಬಾರದು.’ ಇದಾದ ಬಳಿಕ ಆರೋಪದಿಂದ ಮುಕ್ತವಾದ ಬುಲ್‌ಬುಲ್ ನಿರಾಳಗೊಂಡು ಪ್ರವಾದಿ ಸುಲೈಮಾನರಿಗೆ ಕೃತಜ್ಞತೆಯನ್ನು ಸಲ್ಲಿಸಿ ಹೂವುಗಳನ್ನು ಅರಸುತ್ತಾ ಹಾರಿ ಹೋಯಿತು.

ಸಂಕ್ಷಿಪ್ತವಾಗಿ ಹೇಳುವುದಾದರೆ, ಸೂಫಿ ಚಿಂತನೆ, ಇಲಾಹಿ ಪ್ರೇಮ, ಇಹದ ನಶ್ವರತೆಗಳನ್ನು ಪ್ರಸ್ತುತಪಡಿಸಲು ಸೂಫಿ ಸಂತರುಗಳು ಅನೇಕ ಕಥೆಗಳು ಮತ್ತು ದೃಷ್ಟಾಂತಗಳನ್ನು ತರುವುದುಂಟು. ಆ ಕಥೆಗಳ ಸುಲಭ ಗ್ರಹಿಕೆಗಾಗಿ ಜೊತೆಗೆ ಕೇಳುಗರ ಹೃದಯಕ್ಕೆ ಪೂರ್ತಿಯಾಗಿ ಇಳಿದುಬಿಡಬೇಕು ಎಂಬ ಕಾರಣಕ್ಕೆ ಹಕ್ಕಿಗಳ ರೂಪಕಗಳನ್ನು ನೀಡಲಾಗುತ್ತದೆ. ಈ ರೀತಿಯಲ್ಲಿ ಹಕ್ಕಿಗಳನ್ನು ಉಪಮೆಗಳಾಗಿ, ರೂಪಕಗಳಾಗಿ ಹೇಳಿದ ನೀತಿ ಕತೆಗಳು ಜನಮನಸ್ಸುಗಳನ್ನು ಸುಲಭವಾಗಿ ತಲುಪುವುದರೊಂದಿಗೆ ಅಚ್ಚಳಿಯದೆ ಉಳಿದುಬಿಡುತ್ತವೆ. ಹಕ್ಕಿಗಳನ್ನು ತಮ್ಮ ಕಥೆ ಕಾವ್ಯಗಳಿಗೆ ಸಮರ್ಪಕವಾಗಿ ಬಳಸಿಕೊಂಡ ಸೂಫಿಗಳು ತಮ್ಮ ಹೆಸರುಗಳನ್ನು ಅಜರಾಮರಗೊಳಿಸಿ ಹೊರಟುಹೋದರು. ಮನೆಯಂಗಳದಲ್ಲಿ ಮುಂಜಾನೆಗೆ ಚಿಲಿಪಿಲಿಗುಟ್ಟುವ ಹಕ್ಕಿಗಳ ಕಲರವ ಕೇಳಿದರೆ ಅವರ ಕಥೆಗಳು, ಆ ಕಥೆಗಳ ಮೂಲಕ ಸೂಫಿ ಮಹಾತ್ಮರು ದಾಟಿಸಿದ ಪಾಠಗಳು ನೆನಪಾಗುವುದರಲ್ಲಿ ಈ ರೂಪಕಗಳ ಪಾತ್ರ ಅನನ್ಯವಾದದ್ದು ಮತ್ತು ಆ ರೂಪಕಗಳು ಉಂಟುಮಾಡುವ ಪರಿಣಾಮಗಳು ಕೂಡ ಅಷ್ಟೇ ಅಪಾರವಾದದ್ದು.


ಮೂಲ :ನಜ್‌ದತ್ ತೌಸೂನ್

ಅನು: ಝುಬೈರ್ ಹಿಮಮಿ ಪರಪ್ಪು

3 Comments

Leave a Reply

*