ಇಸ್ಲಾಮೀ ಕಲೆಯ ಅಮೂರ್ತ ಆಯಾಮಗಳು-2

ಭಾಗ – 2

ಸ್ನೇಹ, ಸೌಂದರ್ಯ, ಮತ್ತು ಇಸ್ಲಾಮಿಕ್‌ ಕಲೆ

ಖುರ್‌ ಆನಿನಲ್ಲಿ, ಒಟ್ಟಾರೆ ಇಸ್ಲಾಮಿಕ್‌ ಪರಂಪರೆಯಲ್ಲಿ ಮತ್ತು ನಮ್ಮ ನಿತ್ಯ ಬದುಕಿನಲ್ಲಿ ಕೂಡ ಸೌಂದರ್ಯ ಮತ್ತು ಸ್ನೇಹ ಪರಸ್ಪರ ತಳುಕು ಹಾಕಿಕೊಂಡಿರುವಂತದ್ದು. “ದೇವರು ಸೌಂದರ್ಯಪೂರ್ಣನು ಹಾಗೂ ಸೌಂದರ್ಯವನ್ನು ಮೆಚ್ಚುವಂತವನು” ಎಂದು ಹದೀಸ್‌ ಸಾರಿದ್ದರೆ, ಖುರ್‌ ಆನ್‌ ಆಗಾಗ್ಗೆ “ ದೇವರು ಸುಂದರಮಯ ಕಾರ್ಯಗಳನ್ನು ಮಾಡುವವರನ್ನು ಇಷ್ಟಪಡುತ್ತಾನೆ” ಎಂದು ಘೋಷಿಸಿದೆ. ಇಮಾಮ್‌ ಗಝ್ಝಾಲಿ ಮತ್ತು ಇಬ್ನುಸೀನರಂತ ಇಸ್ಲಾಮೀ ಚಿಂತಕರು “ಪ್ರೀತಿ” ಎಂಬ ಪರಿಕಲ್ಪನೆಯನ್ನು “ ಉತ್ತಮ ಹಾಗೂ ಸುಂದರವಾದ ಕಾರ್ಯಗಳೆಡೆಯಿರುವ ಒಂದು ಒಲವು” ಎಂದೇ ವಿಶ್ಲೇಷಿಸಿದ್ದಾರೆ.

ಈ ನಿಟ್ಟಿನಲ್ಲಿ, ಇಸ್ಲಾಮೀ ಕಲೆಯ ಸೌಂದರ್ಯ ಮಾನವಿಕ ಹಾಗೂ ದೈವಿಕ ಪ್ರೇಮವನ್ನು ಬರಸೆಳೆಯುತ್ತದೆ. ಇಸ್ತಂಬೂಲ್‌ ಅಥವಾ ಇಸ್ಫಹಾನಿನ ಮಸೀದಿಯಲ್ಲಿ ನಮಾಜು ಮಾಡುವಾಗ ಅಥವಾ ಸುಮ್ಮನೆ ಸುತ್ತಮುತ್ತ ತಿರುಗಾಡುವಾಗ ಪ್ರೇಮದ ಅನುಭವ ಪಡೆಯುವುದಂತೂ ಖಂಡಿತ. ಸ್ನೇಹ ಮತ್ತು ಸೌಂದರ್ಯದ ಪ್ರಸ್ತುತ ಕೋಮಲ ಸಾನ್ನಿಧ್ಯವು ಸಕೀನತ್‌ ಗೆ –ಪವಿತ್ರ ದೈವಿಕ ಸಾನ್ನಿಧ್ಯದಿಂದ ಉಂಟಾಗುವ ಆಳವಾದ ಶಾಂತಸ್ಥಿತಿ – ಕಾರಣವಾಗುತ್ತದೆ. ಎಲ್ಲಾ ಪುರಾತನ ಮಸೀದಿಗಳ ವಾಸ್ತುಶಿಲ್ಪ ಇದೇ ಗುಣವನ್ನು ಹೊಂದಿದೆ. ಅವುಗಳ ಸಂರಚನೆಯ ಸಾಮರಸ್ಯ ಆ ಸ್ಥಳದ ಬರಕತ್‌ (ಪವಿತ್ರ ಸಾನ್ನಿಧ್ಯ) ನ ಮೂರ್ತ ಅನುಭವವನ್ನು ಒದಗಿಸುತ್ತದೆ, ಆ ಮೂಲಕ ನಮ್ಮ ಆತ್ಮದ ಸಮತೋಲನವನ್ನು ಕಾಪಿಟ್ಟುಕೊಳ್ಳಲು ಸಾಧ್ಯವಾಗುತ್ತದೆ.

ಇನ್ನು ಸಾಹಿತ್ಯ ಕಲಾಕೃತಿಗಳನ್ನು ತಗೆದು ನೋಡೋಣ. ಪ್ರೀತಿಯೊಂದಿಗಿನ ಇಸ್ಲಾಮೀ ನಾಗರಿಕತೆಯ ಸಂಬಂಧ ಎಷ್ಟೊಂದು ಗಾಢವಾಗಿದೆಯೆಂದರೆ, ತತ್ವಜ್ಞಾನ, ಕಾನೂನು, ನ್ಯಾಯಶಾಸ್ತ್ರ, ದೇವಶಾಸ್ತ್ರ ಮತ್ತು ಗಣಿತಶಾಸ್ತ್ರ ಮುಂತಾದ ಸಕಲ ಜ್ಞಾನಶಾಖೆಗಳಲ್ಲಿ ಮುಸ್ಲಿಮರು ರಚಿಸಿದ ಬೃಹದ್ಗ್ರಂಥಗಳು ಪ್ರೇಮದ ಸಾಲುಗಳಿಂದ ತುಂಬಿ ತುಳುಕಿದೆ. ಇತ್ತೀಚಿನ ವರೆಗೂ, ಎಲ್ಲಾ ಸಾಂಪ್ರದಾಯಿಕ ಇಸ್ಲಾಮಿಕ್‌ ಸಾಹಿತ್ಯ ಕಲಾಕೃತಿಗಳನ್ನೂ ಹಾಗೂ ನೈಜತೆಯ ಗ್ರಹಿಕೆಯನ್ನೂ ಪ್ರೀತಿಯ ಸಂಸ್ಕ್ರತಿ ಅಗಾಧವಾಗಿ ಆವರಿಸಿಕೊಂಡಿದೆ. ಇಬ್ನುಸೀನರಂಥ ತತ್ವಜ್ಞಾನಿ ವಿಜ್ಞಾನಿಗಳಿಗೆ ಪ್ರೀತಿ ಪ್ರೇಮವೆಂಬುದು ಕಲ್ಲಿನಿಂದ ಹಿಡಿದು ಮಲಕ್ ಗಳವರೆಗಿನ ಸಕಲ ಸೃಷ್ಟಿಗಳನ್ನು ಕ್ರಿಯಾಶೀಲಗೊಳಿಸುವ ಚೈತನ್ಯವಾಗಿದೆ.

“ಇಹ್ಸಾನ್‌” ಮತ್ತು ಅದರೊಂದಿಗೆ ನಿಕಟ ಸಂಬಂಧ ಹೊಂದಿದ ಇಖ್ಲಾಸ್‌ ಎಂಬೀ ವಿದ್ಯಮಾನಗಳ ಪೋಷಣೆಗೆ ಅತ್ಯಂತ ಅನಿವಾರ್ಯವಾದ ಸಂಗತಿಯಾಗಿದೆ ಪ್ರೇಮವೆಂಬುದು. ಹದೀಸ್‌ ಕಲಿಸುವುದು ಹೀಗೆ: “ ಅಲ್ಲಾಹು ಮತ್ತು ಆತನ ರಸೂಲರು ನಿಮಗೆ ಎಲ್ಲಕ್ಕಿಂತ ಹೆಚ್ಚಾಗಿ ಪ್ರಿಯವಾಗುವ ತನಕ ನಿಮ್ಮಲ್ಲಿ ಯಾರೂ ಪರಿಪೂರ್ಣ ವಿಶ್ವಾಸಿಯಾಗಲಾರರು”. ಪ್ರಸ್ತುತ ನಿಷ್ಕಾಮ ಪ್ರೀತಿ ಇಲ್ಲದಿದ್ದಲ್ಲಿ, ನಮ್ಮ ಕರ್ಮ ಮತ್ತು ಆರಾಧನೆಗಳು ಒಂದೋ ರಿಯಾ (ಡಾಂಭಿಕತೆ) – ಇದನ್ನು ಪ್ರವಾದಿ (ಸ) ಸಣ್ಣ ಅಥವಾ ಗುಪ್ತ ಶಿರ್ಕ್‌ ಎಂದು ಕರೆದಿದ್ದಾರೆ – ಅಥವಾ ಸ್ವಾರ್ಥ ಪ್ರೇರಿತ ಪ್ರತಿಫಲಾಂಕ್ಷೆ ಅಥವಾ ಶಿಕ್ಷೆಯಿಂದ ಪಾರಾಗುವ ಬಯಕೆ ಮುಂತಾದ ನೇತ್ಯಾತ್ಮಕ ಗುಣಗಳಿಂದ ಪ್ರೇರಿತವಾಗಿರುತ್ತದೆ. ಅಲ್ಲಾಹನಿಗಾಗಿಯೇ ಆತನನ್ನು ಪ್ರೀತಿಸುವ ಹಾಗೂ ಆತನಿಗಾಗಿ ಇತರರನ್ನು ಪ್ರೀತಿಸುವ ಮನೋಭಾವ ಇಲ್ಲಿರುವುದಿಲ್ಲ. ಏನೇ ಆದರೂ, ಇದು ನಮ್ಮನ್ನು ನಮ್ಮ ದೇಹೇಚ್ಛೆಗಳಲ್ಲಿ ಹಾಗೂ ಪರಮ ಸ್ವಾರ್ಥಭಾವದಲ್ಲಿ ಬಂಧಿಸುತ್ತದೆ: “ ತನ್ನ ದೇಹೇಚ್ಛೆಯನ್ನೇ ದೇವರನ್ನಾಗಿ ಮಾಡಿದವನನ್ನು ತಾವು ಕಂಡಿಲ್ಲವೇ? ದೇವರು ಅವನನ್ನು ದಾರಿತಪ್ಪಿಸಿದ್ದಾನೆ” (45:23), “ ಆದರೆ, ವಿಶ್ವಾಸಿಗಳು ಅಲ್ಲಾಹನನ್ನು ಗಾಢವಾಗಿ ಪ್ರೀತಿಸುತ್ತಾರೆ”. ಕವಿ ಹಾಫಿಝ್‌ ರವರ ಸಾಲೊಂದು ಹೀಗಿದೆ: “ ಪ್ರೇಮಿಗಳ ಹೊರತಾಗಿ, ನಾನು ಕಾಣುವುದು ಬರೀ ಸ್ವಾರ್ಥಿಗಳಾದ ಡಾಂಭಿಕರನ್ನು ಮಾತ್ರ”. ಪ್ರವಾದಿ (ಸ) ರ ಅನುಕರಣೆಯ ಪ್ರೇರಕ ಸಂಗತಿಯಾಗಿ ಹಾಗೂ ಅದರಿಂದ ದೊರಕುವ ಫಲಿತಾಂಶವಾಗಿ ಖುರಾನ್‌ ಅಲ್ಲಾಹನ ಪ್ರೇಮವನ್ನಾಗಿದೆ ಮುಂದಿಟ್ಟಿರುವುದು: “ ಹೇಳಿರಿ; ದೇವರನ್ನು ನೀವು ಪ್ರೀತಿಸುತ್ತಿದ್ದರೆ, ನನ್ನ ಅನುಸರಣೆ ಮಾಡಿರಿ, ಫಲವಾಗಿ ಅಲ್ಲಾಹನು ನಿಮ್ಮನ್ನು ಪ್ರೀತಿಸುವನು” (3:31).

ಯಾವುದೇ ಕರ್ಮಕ್ಕೆ ಅತ್ಯಂತ ಪ್ರಾಮಾಣಿಕವಾದ ಪ್ರೇರಕವೆಂದರೆ ಅದು ಪ್ರೀತಿ. ಪಥಭ್ರಷ್ಠರಾಗದಂತೆ ಒಂದೇ ದಿಕ್ಕಿಗೆ ನಮ್ಮನ್ನು ನಡೆಸುವ ಶಕ್ತಿಯಿದೆ ಅದಕ್ಕೆ. ಸೌಂದರ್ಯದೊಂದಿಗಿನ ನಂಟಸ್ತಿಕೆಯಿಲ್ಲದೆ ಪ್ರೀತಿಗೆ ಅಸ್ತಿತ್ವವೇ ಇಲ್ಲ. ಮಸೀದಿಗಳು ಮತ್ತು ಕಲಿಕಾ ಕೇಂದ್ರಗಳು ಸೌಂದರ್ಯಪೂರ್ಣವಾಗಿ ಚೇತೋಹಾರಿಯಾಗುವಾಗ, ನಾವು ಅತ್ತ ಸೆಳೆಯುತ್ತೇವೆ. ಮಾತು ಅಂದ ಚಂದವಾಗುವಾಗ, ಅದಕ್ಕೆ ತಲೆದೂಗುತ್ತೇವೆ. ಸೌಂದರ್ಯ ಪ್ರೀತಿಯನ್ನು ಪ್ರಚೋದಿಸುತ್ತದೆ ಹಾಗೂ ಪ್ರೀತಿ ಆತ್ಮವನ್ನು ಪ್ರೇರೇಪಿಸುತ್ತದೆ. ಇಸ್ಲಾಮೀ ಕಲಾಕೃತಿಗಳು ಇಂದ್ರಿಯಾನುಭಕ್ಕೆ ಇಳಿಸಲು ಪ್ರಯತ್ನಿಸುವ ಅತೀಂದ್ರಿಯ ದೈವಿಕ ಸೌಂದರ್ಯದಲ್ಲಿ ಇದೇ ತತ್ವ ಅಡಗಿದೆ. ದೌರ್ಭಾಗ್ಯವಶಾತ್‌, ಶಾಪಿಂಗ್‌ ಮಾಲ್‌ ಹಾಗೂ ಗಗನಚುಂಬಿ ಕಟ್ಟಡಗಳಂಥ ʼದುನ್ಯಾದ ಆಡಂಬರಗಳʼ (ಝೀನತುಲ್‌ ಹಯಾತಿದ್ದುನ್ಯಾ, ಖುರಾನ್‌ 48:46) ಥಳುಕು ಬಳುಕಿನ ಪೋಳ್ಳು ಸೌಂದರ್ಯದ ಹಿಂದೆಯೂ ಮೇಲೆ ವಿವರಿಸಿದ ಆಕರ್ಷಣೆಯ ತತ್ವ ಕಾರ್ಯಾಚರಿಸುತ್ತಿದೆ. ನಿಜದಲ್ಲಿ ದುನ್ಯಾದ ಚೆಲುವು ನೈಜ ಸೌಂದರ್ಯದ ಒಂದು ನೆರಳು ಮಾತ್ರ. ಚಿತ್ತಚಾಂಚಲ್ಯ ಸೃಷ್ಟಿಸುವ ಹಾಗೂ ಸಮ್ಮೋಹನಗೊಳಿಸುವ ದುನ್ಯಾದ ಸೌಂದರ್ಯ ಹಾಗೂ ಆತ್ಮವನ್ನು ಅನಂತ ಸ್ವಾತಂತ್ರ್ಯದೆಡೆಗೆ ಕೊಂಡೊಯ್ಯುವ ಇಸ್ಲಾಮೀ ಕಲೆಗಳ ನಡುವಿನ ವ್ಯತ್ಯಾಸದ ಪ್ರಶ್ನೆ ಇಲ್ಲಿ ಎದ್ದೇಳುತ್ತದೆ. ಇವೆರಡರ ನಡುವೆ ವ್ಯತ್ಯಾಸ ಕಾಣುವುದಾದರೂ ಹೇಗೆ, ಹಾಗೆ ವಿವೇಚಿಸುವುದರ ಅಗತ್ಯ ಏನು?

ಇತರ ಕಲಾರೂಪಗಳಿಂದ ಇಸ್ಲಾಮೀ ಕಲೆಯನ್ನು ಬೇರ್ಪಡಿಸಲು ಮೊಟ್ಟಮೊದಲು ಇಸ್ಲಾಮೀ ಕಲೆಯ ಅರ್ಥವ್ಯಾಪ್ತಿ ಹಾಗೂ ಗುಣಲಕ್ಷಣಗಳನ್ನು ಗುರುತಿಸಬೇಕಾಗಿದೆ. ಪಶ್ಚಿಮ ಆಫ್ರಿಕಾ ಮತ್ತು ಮಧ್ಯ ಏಶಿಯಾ ಮುಂತಾದ ವಿಭಿನ್ನ ಸಾಂಸ್ಕ್ರತಿಕ ಪ್ರದೇಶಗಳಲ್ಲಿ ರೂಪುಗೊಂಡ ಇಸ್ಲಾಮೀ ಕಲಾಕೃತಿಗಳೆನ್ನೆಲ್ಲ ಒಗ್ಗೂಡಿಸುವ ಸಾಮಾನ್ಯ ಲಕ್ಷಣವನ್ನು ಗುರುತಿಸುವಲ್ಲಿ ಪಾಶ್ಚಾತ್ಯ ಕಲಾ ಚಿಂತಕರು ಹಿಂಜರಿದಿರುವುದಂತೂ ನಿಜ. ಆದರೆ, ಸಯ್ಯಿದ್‌ ಹುಸೈನ್‌ ನಸ್ರ್‌ ಹಾಗೂ ಟೈಟಸ್‌ ಬರ್ಕಾಡ್‌ ರಂಥ ವಿದ್ವಾಂಸರು ವಿವಿಧ ಪ್ರಾದೇಶಿಕ ಸಂದರ್ಭಗಳಿಗೆ ಅನುಸಾರ ವಿಭಿನ್ನವಾಗಿ ಅಭಿವ್ಯಕ್ತಗೊಂಡ ಕಲೆಗಳಿಗೆ ಸಾರ್ವತ್ರಿಕವಾದ ಇಸ್ಲಾಮಿಕ್‌ ಅನುಸಂಧಾನ ವಿಧಾನವನ್ನು ರೂಪಿಸಿದ್ದಾರೆ. ಪ್ರಸ್ತುತ ಕೈಂಕರ್ಯದ ಮೂಲಕ ಮುಸ್ಲಿಮರ ಧಾರ್ಮಿಕ ಕಲೆಗಳು ಹಾಗೂ ಮುಸ್ಲಿಮರಿಂದ ರಚಿತವಾದ ಕಲೆಗಳ ನಡುವೆ ಸ್ಪಷ್ಟ ವ್ಯತ್ಯಾಸವನ್ನು ಕಂಡುಕೊಂಡಿದ್ದಾರೆ. ಪರಂಪರಾಗತ ಇಸ್ಲಾಮೀ ಕಲೆಗಳ ಸ್ವರೂಪ ಮತ್ತು ಒಳಹೂರಣಗಳು ನೇರವಾಗಿ ಖುರ್‌ ಆನಿನ ದಿವ್ಯ ಭೋದನೆಯಿಂದ ಉಧ್ಭವಿಸಿದೆ ಹಾಗೂ ಅವು ಮುಹಮ್ಮದೀ ಅನುಗ್ರಹವನ್ನು (ಬರಕಃ ಮುಹಮ್ಮದಿಯ್ಯ) ಪಸರಿಸುತ್ತದೆ. ಧರ್ಮದ ನವ ವಿಶ್ವದಷ್ಠಿಕೋನವನ್ನು ಚಿತ್ರಿಸುವ ಕಲೆಗಳಿಗೆ ಜನ್ಮ ನೀಡುವ ಸಲುವಾಗಿ ಇಸ್ಲಾಮೀ ಕಲೆಗಳು ರೋಮನ್‌, ಬೈಝಂಟಿಯನ್‌, ಸಾಸಾನಿದ್‌, ಪಶ್ಚಿಮ ಆಫ್ರಿಕ, ಮಧ್ಯ ಏಶಿಯಾ ಮತ್ತು ಚೀನಾ ಮುಂತಾದ ಅನೇಕ ಪ್ರದೇಶಗಳ ಕಲಾಕಾರರ ತಂತ್ರ ಮತ್ತು ವಿಧಾನಗಳನ್ನು ಸಮಂಜಸವಾಗಿ ಸಂಯೋಜಿಸಿಕೊಂಡಿವೆ. ಇಸ್ಲಾಮೀ ಕಲೆಗಳ ನೈಜ ಸಂಪನ್ಮೂಲ ಇಸ್ಲಾಮೀ ದಿವ್ಯ ಬೋಧನೆಯೇ ಆಗಿದೆ ಹೊರತು ಪೂರ್ವ ಮಾದರಿಗಳೋ , ಐತಿಹಾಸಿಕ ಪ್ರಭಾವಗಳೋ ಅಲ್ಲ.ಇದೇ ಕಾರಣದಿಂದಾಗಿ, ಅವು ಕಾಲ ದೇಶಗಳಿಗತೀತವಾಗಿ ಸಮಾನ ಸ್ವರೂಪವನ್ನು ಹೊಂದಿದೆ.

ಮುಸ್ಲಿಮರು ನಿರ್ಮಿಸಿದ ಅಥವಾ ಮುಸ್ಲಿಂ ಸಮಾಜದಲ್ಲಿ ನಿರ್ಮಿತವಾದ ಎಲ್ಲಾ ಕಲಾಕೃತಿಗಳು ಇಸ್ಲಾಮೀ ಕಲೆಗಳಾಗಬೇಕೆಂದಿಲ್ಲ. ಇರಾಖಿ ಸಂಜಾತ ಬ್ರಿಟಿಷ್‌ ವಾಸ್ತುಶಿಲ್ಪಿ ಝಹಾ ಹದೀದ್‌ ಅನೇಕ ಕಟ್ಟಡಗಳನ್ನು ವಿನ್ಯಾಸಗೊಳಿಸಿದ್ದಾರೆ, ಆದರೆ ಅವುಗಳ ಪೈಕಿ ಯಾವೊಂದೂ ಕೂಡ ಇಸ್ಲಾಮಿ ವಾಸ್ತುಶಿಲ್ಪದ ವ್ಯಾಪ್ತಿಯಲ್ಲಿ ಬರದು. ಇದಕ್ಕೆ ತದ್ವಿರುದ್ದವಾಗಿ, ಲಂಡನಿನಲ್ಲಿರುವ ಪ್ರಿನ್ಸ್‌ ಸ್ಕೂಲ್‌ ಆಫ್‌ ಟ್ರಡಿಶನಲ್‌ ಆರ್ಟ್ಸ್‌ ನ ಎಲ್ಲಾ ಧರ್ಮೀಯರು ಕ್ಯಾಲಿಗ್ರಫಿಯಂಥ ವಿವಿಧ ಇಸ್ಲಾಮೀ ಪರಂಪರಾಗತ ಕಲಾಕೃತಿಗಳನ್ನು ಸೃಷ್ಟಿಸುತ್ತಾರೆ. ಒಟ್ಟಾರೆ, ಇಲ್ಲಿ ವ್ಯಕ್ತಿ ಮುಖ್ಯವಲ್ಲ ಹೊರತು ದಿವ್ಯ ಬೋಧನೆಯಿಂದ ರೂಪಿತವಾದ ಕಲೆಯ ಸ್ವರೂಪವನ್ನು ನೋಡಿಯಾಗಿದೆ ಅದರ ಇಸ್ಲಾಮಿತನವನ್ನು ನಿರ್ಧರಿಸುವುದು.

ಧಾರ್ಮಿಕ ಕಲೆಗಳು ಧರ್ಮ ಪ್ರಧಾನವಾದ ಅಥವ ಧಾರ್ಮಿಕ ಉದ್ದೇಶಗಳಿಗೆ ಉಪಯೋಗಿಸಲಾಗದ ಸಂಗತಿಗಳನ್ನು ಒಳಗೊಂಡಿರುತ್ತದೆ. ಎಲ್ಲಾ ಧಾರ್ಮಿಕ ಕಲೆಗಳು ಇಸ್ಲಾಮೀ ಕಲೆಗಳು ಎನ್ನಲಾಗದು. ಸಿರಿಯಾದ ಮರಗಳಿಂದ ಉಂಟುಮಾಡಿದ ಮೇಜುಗಳು ಕೆಲವೊಮ್ಮೆ ಮದ್ಯಪಾನ ಕೇಂದ್ರಗಳಲ್ಲಿ ಬಳಸಬಹುದು, ಆದರೆ ಇಸ್ಲಾಮೀ ತತ್ವಚಿಂತನೆ ಹಾಗೂ ವಿಶ್ವದೃಷ್ಟಿಕೋನವನ್ನು ಬಿಂಬಿಸುವ ರೇಖಾತ್ಮಕ ವಿನ್ಯಾಸಗಳು ಅವುಗಳಲ್ಲಿ ಚಿತ್ರಿತವಾಗಿರುತ್ತದೆ. ವಿಶ್ವದಾದ್ಯಂತ ಉತ್ಪಾದಿಸಲ್ಪಡುವ ಮಕ್ಕಾ ಮದೀನಾದ ಚಿತ್ರಪಟಗಳು ಹಾಗೂ ವಿವಿಧ ವಿನ್ಯಾಸದ ನಮಾಜಿನ ಹಾಸುಗಳು ಧಾರ್ಮಿಕ ಕಲೆಗಳಾಗಿರಬಹುದು, ಆದರೆ ಇಸ್ಲಾಮೀ ಕಲೆಗಳ ವ್ಯಾಪ್ತಿಯೊಳಗೆ ಅವುಗಳನ್ನು ಒಳಪಡಿಸಲಾಗದು. ಇಸ್ಲಾಮಿ ಕಲೆಗಳು ವಸ್ತುಗಳ ಬಾಹ್ಯ ರೂಪಗಳ ಅನುಕರಣೆ ಮಾಡುವುದಿಲ್ಲ, ಹೊರತು ಅವುಗಳ ಆಂತರಿಕ ಮೂಲಸ್ವರೂಪದ ನೈಜ ಚಹರೆಗಳನ್ನು ಹೊರಗೆಡವುತ್ತದೆ. ಈ ಕಾರಣದಿಂದಾಗಿಯೇ, ಕಾಲ/ದೇಶ ಹಾಗೂ ಭಾಷೆ ಎಂಬಿತ್ಯಾದಿ ವಿದ್ಯಮಾನಗಳ ಮೂಲ ಆಧಾರಗಳಾದ ಸಂಖ್ಯೆ (ರೇಖಾಗಣಿತ) ಮತ್ತು ಅಕ್ಷರಗಳಿಗೆ (ಕ್ಯಾಲಿಗ್ರಫಿ) ಹೆಚ್ಚು ಒತ್ತು ನೀಡಲಾಗುತ್ತದೆ.

ಇಸ್ಲಾಮೀ ಕಲಾಕೃತಿಗಳು, ಗಣಿತ, ರೇಖಾಹಣಿತ, ಸಂಗೀತ ಮತ್ತು ವಿಶ್ವವಿಜ್ಞಾನ ಮುಂತಾದ ಪರಸ್ಪರ ತಳುಕು ಹಾಕಿಕೊಂಡಿರುವ ಪವಿತ್ರ ಜ್ಙಾನಶಿಸ್ತುಗಳ ಮೇಲೆ ಆಧಾರಿತಗೊಂಡಿದೆ. “ ವಿಜ್ಞಾನವಿಲ್ಲದ ಕಲೆ ಬರೀ ಶೂನ್ಯ” ಎಂಬ ಕ್ರೈಸ್ತೀಯ ತತ್ವದೊಂದಿಗೆ ಇದು ಸಾಮ್ಯತೆ ಹೊಂದಿದೆ. ಈ ಎಲ್ಲಾ ವಿಜ್ಞಾನಗಳು ಸೃಷ್ಠಿ ಜಗತ್ತಿನ ಬಹುತ್ವವನ್ನು ಸೃಷ್ಠಿಕರ್ತನ ಏಕತ್ವದೊಂದಿಗೆ ಸಂಪರ್ಕ ಏರ್ಪಡಿಸಲು ಸಹಾಯಕವಾಗುತ್ತದೆ. ಅರಿಸ್ಟೋಟಲ್‌ ಪ್ರಕಾರ ಒಟ್ಟಾರೆ ವಿಜ್ಞಾನ ಮೂರು ಭಾಗಗಳಾಗಿ ವಿಂಗಡಿತವಾಗಿದೆ:ಭೌತಶಾಸ್ತ್ರ, ಗಣಿತಶಾಸ್ತ್ರ ಮತ್ತು ಅತಿಭೌತಶಾಸ್ತ್ರ (ಇಲಾಹಿಯ್ಯಾತ್).‌ ಭೌತಜಗತ್ತಿನ ವಿದ್ಯಮಾನಗಳ ಕುರಿತು ಭೌತಶಾಸ್ತ್ರ ತಿಳುವಳಿಕೆ ನೀಡುತ್ತದೆ ಹಾಗೂ ದೇವರನ್ನೊಳಗೊಂಡ ಅತೀಂದ್ರಿಯ ಸಂಗತಿಗಳನ್ನು ಅರಿಯಲು ಇಲಾಹಿಯ್ಯಾತ್‌ ಉಪಯುಕ್ತವಾಗುವುದು. ಆದರೆ, ಗಣಿತಶಾಸ್ತ್ರ (ಮತ್ತು ಅನುಬಂಧಿತವಾದ ರೇಖಾಗಣಿತ ಮತ್ತು ಸಂಗೀತ ಎಂಬೀ ಶಾಸ್ತ್ರಗಳು, ಇವೆರಡೂ ಕಾಲದೇಶಗಳಲ್ಲಿರುವ ಸಂಖ್ಯೆಗಳೊಂದಿಗೆ ಸಂಬಂಧ ಹೊಂದಿದೆ, ಮೊದನೆಯದ್ದು ದೃಶ್ಯ ಜಗತ್ತಿನಲ್ಲಿ ಹಾಗೂ ಎರಡನೆಯದ್ದು ಶಬ್ದ ಜಗತ್ತಿನಲ್ಲಿ) ಇವೆರಡರ ನಡುವಿನ ಮಾಧ್ಯಮಿಕ ಜಗತ್ತಿನಲ್ಲಿ (ಭಾವನಾತ್ಮಕ ಜಗತ್ತು, ದೈವಿಕ ಮತ್ತು ಭೌಮಿಕದ ನಡುವಿನ ಬರ್ಝಖ್‌ ಎಂದೂ ಕರೆಯಬಹುದು) ಇಂದ್ರಿಯ ಮತ್ತು ಅತೀಂದ್ರಿಯಗಳ ನಡುವೆ ಸಂಪರ್ಕವೇರ್ಪಡಿಸುವ ಕೊಂಡಿಯಾಗಿ ಕಾರ್ಯಾಚರಿಸುತ್ತದೆ. ಮಾಧ್ಯಮಿಕ ಲೋಕದ ಈ ವಿಜ್ಞಾನಗಳು, ಇಸ್ಲಾಮೀ ಕಲಾಕೃತಿಗಳಿಗೆ ಐಂದ್ರಿಕ ಲೋಕದಿಂದ ಅತೀಂದ್ರಿಯ ಲೋಕದೆಡೆಗಿನ ಏಣಿಯಾಗಿ ಕಾರ್ಯ ನಿರ್ವಹಿಸಲು ಅನುವು ಮಾಡಿಕೊಡುತ್ತದೆ.

ಲಾವಣ್ಯವನ್ನು ಸತ್ಯದಿಂದ ಸೂಸುವ ಕಾಂತಿಯೆಂದು ಪ್ಲಾಟೋ ವಿವರಿಸುತ್ತಾನೆ; ಆದ್ದರಿಂದಲೇ, ಸೌಂದರ್ಯ ಮತ್ತು ಕುರೂಪತೆಯ ನಡುವೆ ವಿವೇಚಿಸಲು ಅಸಮರ್ಥರಾದರೆ, ಸತ್ಯ ಮತ್ತು ಮಿಥ್ಯವನ್ನೂ ಬೇರ್ಪಡಿಸಲು ಅಶಕ್ತರಾಗುತ್ತೇವೆ. ಪೂರ್ಣ ಸಾಮರಸ್ಯ ಹೊಂದಿದ ನೈಜ ಚೆಲುವು ಕಾಲಾತೀತವಾಗಿದೆ ಮತ್ತು ಅದೃಶ್ಯ ಲೋಕದ ಅಂದವನ್ನು ಪ್ರತಿಬಿಂಬಿಸುತ್ತದೆ. ಆ ಮೂಲಕ ಪ್ರಶಾಂತ ಚಿತ್ತತೆ ಮತ್ತು ದೇವಸ್ಮರಣೆಯನ್ನು ಉದ್ದೀಪಿಸುತ್ತದೆ. ಮಿಥ್ಯಾ ಸೌಂದರ್ಯ ಕುರೂಪತೆಯಂತೆಯೇ ಬಹಳ ಕ್ಷಣಿಕವೂ, ಅಸ್ತವ್ಯಸ್ತವೂ ಆಗಿರುವುದರಿಂದ ಕೆಳ ಜಗತ್ತಿನ ಗೊಂದಲಕಾರಿ ಬಹುತ್ವವನ್ನೂ ಅಸ್ತವ್ಯಸ್ತತೆಯನ್ನೂ ಹಾಗೂ ಮನುಷ್ಯ ಮನಸ್ಸಿನ ಕ್ಷುದ್ರ ಮುಖಗಳನ್ನು ಪ್ರತಿಬಿಂಬಿಸುತ್ತದೆ. ಪರಿಣಾಮವಾಗಿ, ಅಸಮತೋಲನತೆ, ಅಸ್ಪಷ್ಟತೆ ಮತ್ತು ನಿರ್ಲಕ್ಷ್ಯತೆ (ಗಫ್ಲತ್) ಗೆ ಕಾರಣವಾಗುತ್ತದೆ. ಅವು ಸೃಷ್ಟಿ ಪ್ರಪಂಚದ ಮಾಯಾ ಮುಖವನ್ನು ತೋರಿಸಿ ದೈವಿಕ ಆಯಾಮಗಳನ್ನು ಬಚ್ಚಿಡುತ್ತದೆ. ಆದರೆ, ನೈಜ ಸೌಂದರ್ಯ ವಸ್ತುಗಳ ಸ್ಪಷ್ಟ ಮತ್ತು ಪಾರದರ್ಶಕ ಆಯಮಗಳನ್ನು ಹೊರಗೆಡವುತ್ತದೆ. ಆ ಮೂಲಕ ದೇವರ ಸುಸ್ಪಷ್ಟ ನಿದರ್ಶನಗಳಾಗಿ ಕಾರ್ಯಾಚರಿಸುವುದು.

ಒಲುಡಾಮಿನಿ ಒಗುನ್ನೈಕೆ

ಕನ್ನಡಕ್ಕೆ: ಎಂ.ಎಂ ಮಸ್ರೂರ್‌ ಸುರೈಜಿ

1 Comment

Leave a Reply

*