ಕೆಲವು ವರ್ಷಗಳ ಹಿಂದೆ; ನಟಿ ಗ್ಲೇನತ್ ಪಾಲ್ಟ್ರೋ ಗೆ ವಿಚ್ಛೇದನ ನೀಡಿದ ಬಳಿಕ ಕೋಲ್ಡ್ ಪ್ಲೇ ಗಾಯಕ ಕ್ರಿಸ್ ಮಾರ್ಟಿನ್ ಖಿನ್ನತೆಗೆ ಒಳಗಾಗಿದ್ದರು. ಕ್ರಿಸ್ ಮಾರ್ಟಿನ್ ಗೆ ಒಬ್ಬ ಗೆಳೆಯನಿದ್ದ. ಆತ ಮಾರ್ಟಿನ್ ನನ್ನು ಖಿನ್ನತೆಯಿಂದ ಹೊರತರಲು ಒಂದು ಪುಸ್ತಕ ತಂದು ಕೊಡುತ್ತಾನೆ. ಅದು ಹದಿಮೂರನೇ ಶತಮಾನದ ಪರ್ಷಿಯನ್ ಸೂಫಿ ಕವಿ ಜಲಾಲುದ್ದೀನ್ ರೂಮಿಯ ಕಾವ್ಯ ಸಂಕಲನ. ಕೋಲ್ಮನ್ ಬಾರ್ಕ್ಸ್ ಅದನ್ನು ಅಮೆರಿಕನ್ ಇಂಗ್ಲೀಷ್ ಗೆ ರೂಪಾಂತರಿಸಿದ್ದ. ರೂಮಿಯ ಈ ಕವಿತೆಗಳು ತನ್ನ ಬದುಕನ್ನೇ ಬದಲಾಯಿಸಿದವು ಎಂದು ಒಂದು ಸಂದರ್ಶನದಲ್ಲಿ ಮಾರ್ಟಿನ್ ಹೇಳುತ್ತಾನೆ. ಕೋಲ್ಡ್ ಪ್ಲೇಯ ಹೊಸ ಆಲ್ಬಂ ಟ್ರಾಕ್ ನಲ್ಲಿ ರೂಮಿಯ ಕವಿತೆಗಳಲ್ಲಿ ಒಂದು ಕವಿತೆಯನ್ನು ಮಾರ್ಟಿನ್ ಹಾಡುತ್ತಾನೆ;
‘ಮನುಷ್ಯ ಜೀವನ
ಅತಿಥಿ ಭವನ
ಪ್ರತೀ ಪ್ರಭಾತಕೂ
ಬರುವನು ಒಬ್ಬ
ಹೊಸ ಅತಿಥಿ
ಸಂತೋಷ, ದುಃಖ
ನೀಚತನ
ಕೆಲವೊಮ್ಮೆ ವಿವೇಕ
ಅಲ್ಲಿಯ
ಅನಿರೀಕ್ಷಿತ ಅತಿಥಿ’
ಮಡೋನ್ನ, ಟಿಲ್ಡಾ ಸ್ವಿಂಟನ್ ಮೊದಲಾದ ಸೆಲೆಬ್ರಿಟಿಗಳ ಆಧ್ಯಾತ್ಮಿಕ ಪಯಣಕ್ಕೆ ರೂಮಿ ಸಹಾಯ ಮಾಡಿದ್ದಾರೆ. ಇವರಲ್ಲಿ ಹೆಚ್ಚಿನವರು ತಮ್ಮ ಕಲಾ ಸಾಧನೆಗೆ ರೂಮಿಯ ಕವಿತೆಗಳನ್ನು ಬಳಸಿಕೊಂಡಿದ್ದಾರೆ.
ರೂಮಿಯ ಕವಿತೆಗಳಲ್ಲಿ ಕೆಲವು ಸಾಲುಗಳು ಜನರನ್ನು ಮೋಟಿವೇಟ್ ಮಾಡುತ್ತಾ ಸೋಷಿಯಲ್ ಮೀಡಿಯಾದಲ್ಲೂ ಹರಿದಾಡುತ್ತಿದೆ. ಮುಖ್ಯವಾಗಿ ಇವು;
‘ಪ್ರತೀ ಹೊಡೆತಕ್ಕೂ
ತಾಳ್ಮೆಗೆಟ್ಟರೆ
ಹೊಳಪು ಮೂಡುವುದೆಂದು?’
‘ಉಳಿ ಬಳಸಿ
ಪ್ರತೀ ಕ್ಷಣವೂ
ನನ್ನ ವಿಧಿಯ ನಾನೇ ರೂಪಿಸಿದೆ
ನಾನೇ
ನನ್ನ ಆತ್ಮದ ಅಕ್ಕಸಾಲಿಗ’
ಬಾರ್ಕ್ಸ್ ನ ಅನುವಾದದಲ್ಲಿ ಇಂಗ್ಲೀಷ್ ಜಗತ್ತನ್ನು ಪ್ರವೇಶಿಸಿದ ರೂಮಿಯ ಈ ಸಾಲುಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಇದರಲ್ಲಿನ ಒಂದು ಸಾಲನ್ನು ಅಮೆರಿಕದ ಪುಸ್ತಕದ ಅಂಗಡಿಯ ಕಪಾಟಿನಲ್ಲಿ ಕೆತ್ತಲಾಗಿದೆ. ಅಲ್ಲಿನ ವಿವಾಹ ಸಮಾರಂಭಗಳಲ್ಲೂ ರೂಮಿಯ ಈ ಹಾಡುಗಳನ್ನು ಹಾಡಲಾಗುತ್ತದೆ. ಅಮೆರಿಕದಲ್ಲಿ ಅತೀ ಹೆಚ್ಚು ಮಾರಾಟವಾಗುತ್ತಿರುವ ಕವಿ ರೂಮಿಯಂತೆ! ಅನುಭಾವಿ, ಸಂತ, ಸೂಫಿ, ಜ್ಞಾನಿ ಎಂಬೀ ವಿಶೇಷಣಗಳು ರೂಮಿಗಿವೆ.
ರೂಮಿಯ ಧರ್ಮಗ್ರಂಥ:
ಆಶ್ಚರ್ಯದ ಸಂಗತಿ ಎಂದರೆ, ಜೀವನುದ್ದಕ್ಕೂ ಕುರ್ ಆನ್ ಹಾಗೂ ಇಸ್ಲಾಮಿನ ಪ್ರತಿಪಾದಕರಾಗಿದ್ದರೂ ಪಾಶ್ಚಾತ್ಯರು ರೂಮಿಯನ್ನು ಮುಸ್ಲಿಮ್ ಎಂದು ಗುರುತಿಸುವುದು ಬಹಳ ಕಡಿಮೆ. ರೂಮಿ ತನ್ನ ಜೀವನದ ಕೊನೆಯ ಕಾಲಘಟ್ಟದಲ್ಲಿ ರಚಿಸಿದ ಮಸ್ನವಿಯ ಕವನಗಳನ್ನೇ ಮಾರ್ಟಿನ್ ತನ್ನ ಆಲ್ಬಂಗೆ ಬಳಸಿಕೊಂಡಿದ್ದಾರೆ. ಮಸ್ನವಿ ಆರು ಭಾಗಗಳನ್ನೊಳಗೊಂಡ, ಐವತ್ತು ಸಾವಿರಕ್ಕೂ ಮಿಕ್ಕ ದ್ವಿಪದಿಗಳಿರುವ ಕವನಗಳ ಸಂಗ್ರಹ. ಇದು ಪರ್ಷಿಯನ್ ಭಾಷೆಯಲ್ಲಿ ರಚನೆಗೊಂಡಿದೆಯಾದರೂ ಇದರಲ್ಲಿ ಪ್ರಮುಖ ಮುಸ್ಲಿಮ್ ಗ್ರಂಥಗಳ ಅರಬಿ ಉಲ್ಲೇಖಗಳು ಧಾರಾಳ ಇವೆ. ಜೊತೆಗೆ ಕುರ್ ಆನ್ ನ ನೀತಿಕಥೆಗಳೂ ಸಹ ಸಾಕಷ್ಟಿವೆ. ಎಷ್ಟರಮಟ್ಟಿಗೆ ಎಂದರೆ, ಇದನ್ನು ಕೆಲವರು ಅತಿರೇಕಕ್ಕೆ ಹೋಗಿ ‘ಪರ್ಷಿಯನ್ ಕುರ್ ಆನ್’ ಎಂದೂ ಕರೆಯುತ್ತಾರೆ.
ಮೇರಿಲ್ಯಾಂಡ್ ಯುನಿವರ್ಸಿಟಿಯ ಪರ್ಷಿಯನ್ ಸ್ಟಡೀಸ್ ನ ಪ್ರೊಫೆಸರ್ ಫೇಠ್ ಮೆಹ್ ಕೇಶವಾರ್ಝ್ ಒಮ್ಮೆ ನನ್ನೊಂದಿಗೆ ಹೇಳಿದರು; ‘ತನ್ನ ಕವಿತೆಗಳಲ್ಲಿ ರೂಮಿ ಅಷ್ಟೊಂದು ಸುಂದರವಾಗಿ ಕುರ್ ಆನ್ ಸೂಕ್ತಗಳನ್ನು ಬಳಸಿಕೊಳ್ಳುವುದನ್ನು ನೋಡಿದರೆ ಅವರಿಗೆ ಕುರ್ ಆನ್ ಕಂಠಪಾಠವಾಗಿರಬೇಕು ಅನಿಸುತ್ತದೆ’.
ಇಸ್ಲಾಮ್ ಮತ್ತು ಕುರ್ ಆನ್ ಮಸ್ನವಿಯ ಬೇರುಗಳ ಬೇರು ಎಂದು ಸ್ವತಃ ರೂಮಿಯೇ ಹೇಳಿಕೊಂಡಿದ್ದಾರೆ. ಆದರೆ, ಅಮೆರಿಕದಲ್ಲಿ ಮಾರಾಟವಾಗುತ್ತಿರುವ ಬಹುತೇಕ ಅನುವಾದ ಕೃತಿಗಳಲ್ಲಿ ರೂಮಿಗೂ ಇಸ್ಲಾಮ್ ಗೂ ನಡುವೆ ಸಂಬಂಧವೇ ಕಾಣುವುದಿಲ್ಲ. ‘ರೂಮಿಯ ಮೇಲಿನ ಪಾಶ್ಚಾತ್ಯರ ಪ್ರೀತಿ ಅನನ್ಯವಾದುದೇನೋ ನಿಜ. ಆದರೆ, ಧರ್ಮ ಮತ್ತು ಸಂಸ್ಕೃತಿಯನ್ನು ಬೇರ್ಪಡಿಸಿ ರೂಮಿಯನ್ನು ಅವರು ಪ್ರಸ್ತುತಪಡಿಸುತ್ತಿರುವುದೇ ನೀವು ತೆರಬೇಕಾದ ಬೆಲೆ’ ಎಂದು ರುಟ್ಗರ್ಸ್ ನಲ್ಲಿ ಪರಂಪರಾಗತ ಸೂಫಿಸಂ ಬಗ್ಗೆ ಅಧ್ಯಯನ ಮಾಡುತ್ತಿರುವ ಜಾವಿದ್ ಮೊಜದ್ದಿದ್ ಒಮ್ಮೆ ನನ್ನೊಂದಿಗೆ ಆತಂಕ ವ್ಯಕ್ತಪಡಿಸಿದ್ದರು
ಹದಿಮೂರನೇ ಶತಮಾನದ ಆರಂಭದಲ್ಲಿ ಇಂದಿನ ಅಫ್ಘಾನಿಸ್ತಾನದಲ್ಲಿ ರೂಮಿ ಜನಿಸುತ್ತಾರೆ. ಇಂದಿನ ತುರ್ಕಿಯಲ್ಲಿರುವ ಖೋನ್ ಯಗೆ ಅವರು ಮುಂದೆ ಕುಟುಂಬದೊಂದಿಗೆ ಸ್ಥಳಾಂತರಗೊಳ್ಳುತ್ತಾರೆ. ಅವರ ತಂದೆ ಒಬ್ಬ ವಿದ್ವಾಂಸರೂ, ಪ್ರವಚನಗಾರರೂ ಆಗಿದ್ದರು. ಸೂಫಿಸಂ ಅನ್ನು ರೂಮಿಗೆ ಪರಿಚಯಿಸಿದ್ದೇ ಅವರ ತಂದೆ. ನಂತರ ರೂಮಿ ಸಿರಿಯಕ್ಕೆ ಹೋಗಿ ಧರ್ಮಶಾಸ್ತ್ರ ಕಲಿಯುತ್ತಾರೆ. ಅಲ್ಲೇ ಅವರು ಪರಂಪರಾಗತ ನೀತಿಸಂಹಿತೆಯನ್ನು ಕೂಡ ವ್ಯಾಸಂಗ ಮಾಡುತ್ತಾರೆ. ಮುಂದೆ ಖೋನ್‌ಯ ದಲ್ಲೇ ಧರ್ಮಗುರುವಾಗಿ ನೇಮಕಗೊಳ್ಳುತ್ತಾರೆ. ತಮ್ಮ ಆತ್ಮೀಯ ಗುರು ‘ಶಂಸ್ ಎ ತಬ್ರೀಝ್’ ರನ್ನು ಅವರು ಭೇಟಿಯಾಗುವುದು ಇಲ್ಲಿರುವಾಗಲೇ. ಅವರಿಬ್ಬರ ನಡುವಿನ ಆತ್ಮಬಂಧ ಬಹುಚರ್ಚಿತ ವಿಷಯ.
ರೂಮೀಸ್ ಸಿಕ್ರೇಟ್:
ರೂಮಿಯ ಧರ್ಮಾಚರಣೆ ಹಾಗೂ ಕವಿತೆಗಳ ಮೇಲೆ ಶಂಸ್ ಅಲ್ ತಬ್ರೀಝ್ ಬೀರಿರುವ ಪ್ರಭಾವ ತರ್ಕಾತೀತವಾದುದು. ಏಕದೇವ ವಿಶ್ವಾಸ, ಕುರ್ ಆನ್ ಮೊದಲಾದ ವಿಷಯಗಳ ಬಗ್ಗೆ ಇಬ್ಬರ ನಡುವೆ ಚರ್ಚೆಗಳು ನಡೆದಿದೆ ಎಂದು ಬ್ರಾಡ್ ಗ್ರೂಚ್ ರೂಮಿಯ ಜೀವನ ಚರಿತ್ರೆಯಾದ ‘ರೂಮೀಸ್ ಸೀಕ್ರೆಟ್’ ಎಂಬ ಕೃತಿಯಲ್ಲಿ ಹೇಳಿದ್ದಾರೆ. ಸೂಫಿಸಂನಿಂದ ಲಭಿಸಿದ ಆತ್ಮಜ್ಞಾನದ ಲಹರಿಯಲ್ಲಿ ಉಂಟಾದ ದೈವಿಕ ಪ್ರೇಮವನ್ನು ಇಸ್ಲಾಮಿನ ನೀತಿ ಸಂಹಿತೆಗಳೊಂದಿಗೆ ಹಾಗೂ ಶಂಸ್ ನಿಂದ ಲಭಿಸಿದ ಚಿಂತನೆಗಳೊಂದಿಗೆ ಬೆರೆಸಿ, ರೂಮಿ ಕಾವ್ಯ ಕಟ್ಟುತ್ತಾರೆ.
ಒಮ್ಮೆ ಕೇಶವಾರ್ಝ್ ನನ್ನೊಂದಿಗೆ ಹೇಳಿದರು; ‘ರೂಮಿಯ ಮೇಲಿನ ಈ ಅಸಾಧಾರಣ ಪ್ರಭಾವವು ಅವರನ್ನು ಸಮಕಾಲೀನ ಕವಿಗಳಿಂದ ಅನನ್ಯಗೊಳಿಸಿತು. ಸುನ್ನಿಗಳಾದ ಸಲ್ಜೂಕ್ ಗಳು, ಕ್ರೈಸ್ತರು, ಮುಸ್ಲಿಮ್ ವಿದ್ವಾಂಸರು ಹಾಗೂ ಸೂಫಿಗಳನ್ನೊಳಗೊಂಡ ಕಾಸ್ಮೋಪಾಲಿಟನ್ ಖೋನ್‌ಯಾ ದಲ್ಲಿ ತನ್ನನ್ನು ಅನುಸರಿಸುವ ದೊಡ್ಡದೊಂದು ಸಮೂಹವನ್ನು ಸೃಷ್ಟಿಸಲು ರೂಮಿಗೆ ಸಾಧ್ಯವಾಯಿತು. ರೂಮಿಯ ಮೇಲೆ ಪ್ರಭಾವ ಬೀರಿರುವ ರಾಜಕೀಯ ಸಂದರ್ಭಗಳು ಹಾಗೂ ಧಾರ್ಮಿಕ ಪಠ್ಯಗಳನ್ನು ಗ್ರೂಚ್ ತನ್ನ ‘ರೂಮಿಯ ರಹಸ್ಯ’ ಎಂಬ ಕೃತಿಯಲ್ಲಿ ದಾಖಲಿಸಿದ್ದಾರೆ.
ರೂಮಿ ಧಾರ್ಮಿಕ ಹಿನ್ನೆಲೆಯ ಕುಟುಂಬದಿಂದ ಬಂದವರು. ತಮ್ಮ ಜೀವನದುದ್ದಕ್ಕೂ ದೈನಂದಿನ ಪ್ರಾರ್ಥನೆ, ಉಪವಾಸಗಳನ್ನು ಎಂದೂ ಕೈಬಿಟ್ಟವರಲ್ಲ ಎಂದು ಗ್ರೂಚ್ ಬರೆದಿದ್ದಾರೆ. ಆದರೆ, ಗ್ರೂಚ್ ನ ಪುಸ್ತಕದಲ್ಲಿ ಕೆಲವು ಗೊಂದಲಗಳೂ ಇವೆ. ರೂಮಿಯ ಮುಸ್ಲಿಮ್ ಐಡೆಂಟಿಟಿಯನ್ನು ಮಂಕಾಗಿಸುವ ಪ್ರಯತ್ನವನ್ನು ಗ್ರೂಚ್ ಮಾಡುತ್ತಾರೆ. ಈ ರೀತಿಯ ಪ್ರಯತ್ನಗಳ ಮೂಲಕ ರೂಮಿಯ ಇಸ್ಲಾಮಿಕ್ ಚಿಂತನೆಗಳನ್ನು ನಿರಾಕರಿಸಲಾಗುತ್ತಿದೆ. ಯಹೂದಿಗಳು ಹಾಗೂ ಕ್ರೈಸ್ತರನ್ನು ಕುರ್ ಆನ್ ‘ಗ್ರಂಥದ ಜನರು(ಅಹ್ಲ್ ಕಿತಾಬ್)’ ಎಂದು ಕರೆಯುತ್ತದೆ. ಈ ಮೂಲಕ ಕುರ್ ಆನ್ ವಿಶ್ವೈಕ್ಯತೆಗೆ ನಾಂದಿ ಹಾಡುತ್ತದೆ ಎಂದು ಮುಜದ್ದಿದ್ ಹೇಳುತ್ತಾರೆ. ಎಲ್ಲರೂ ಮೆಚ್ಚುವ ರೂಮಿಯ ವಿಶ್ವೈಕ್ಯತೆಯ ಮೂಲ ಇದೇ ಆಗಿದೆ.
ಮರುಭೂಮಿಯ ಧರ್ಮ ಮತ್ತು ರೂಮಿ:
ಕೋಲ್ಡ್ ಪ್ಲೇಯಲ್ಲಿ ಬರುವುದಕ್ಕೂ ಮೊದಲೇ ಪಾಶ್ಚಾತ್ಯರು ರೂಮಿಯ ಕವಿತೆಗಳಿಂದ ‘ಇಸ್ಲಾಮ’ನ್ನು ಅಳಿಸಿ ಹಾಕುವ ಪ್ರಯತ್ನ ಮಾಡಿದ್ದಾರೆ. ವಿಕ್ಟೋರಿಯನ್ ಕಾಲಘಟ್ಟದಿಂದಲೇ ಪಾಶ್ಚಾತ್ಯರು ರೂಮಿಯ ಕವಿತೆಗಳಿಂದ ಇಸ್ಲಾಮಿನ ಬೇರುಗಳನ್ನು ಬೇರ್ಪಡಿಸಲು ಆರಂಭಿಸಿದರೆಂದು ಡ್ಯೂಕ್ ಯುನಿವರ್ಸಿಟಿಯ ಇಸ್ಲಾಮಿಕ್ ಸ್ಟಡೀಸ್ ಆ್ಯಂಡ್ ಮಿಡ್ಲ್ ಈಸ್ಟರ್ನ್ ಪ್ರೋಪೆಸರ್ ಹಾಮಿದ್ ಸಫಿ ಹೇಳುತ್ತಾರೆ.
ಪಾಶ್ಚಾತ್ಯ ಅನುವಾದಕರಿಗೆ ಹಾಗೂ ಅಲ್ಲಿಯ ಧರ್ಮ ವಿದ್ವಾಂಸರಿಗೆ ಅಸಾಧಾರಣ ಧಾರ್ಮಿಕತೆ ಹಾಗೂ ನೀತಿ ಸಂಹಿತೆಯನ್ನೊಳಗೊಂಡ ‘ಮರುಭೂಮಿಯ ಧರ್ಮ’ ದೊಂದಿಗೆ ಹೊಂದಿಕೊಳ್ಳಲು ಸಾಧ್ಯವಾಗಲಿಲ್ಲ. ಪರಿಣಾಮ ರೂಮಿ, ಹಾಫಿಝ್ ಮೊದಲಾದ ಕವಿಗಳ ಕೃತಿಗಳಲ್ಲಿನ ‘ಧಾರ್ಮಿಕತೆಯ’ ಜೊತೆಗೂ ಅವರಿಗೆ ಹೊಂದಾಣಿಕೆ ಸಾಧ್ಯವಾಗಲಿಲ್ಲ. ಸಫಿ ಹೇಳುತ್ತಾರೆ; ‘ಇಸ್ಲಾಮಿನ ಕಾರಣದಿಂದಲ್ಲ; ಅದರೊಂದಿಗಿನ ಶತ್ರುತ್ವದಿಂದ ಇವರು ಆಧ್ಯಾತ್ಮಿಕತೆಗೆ ಬಂದರು’.
ಇಂತಹ ಸಂದರ್ಭದಲ್ಲಿ ಕಾನೂನಾತ್ಮಕ ತಾರತಮ್ಯದಿಂದ ಮುಸ್ಲಿಮರು ಏಕಾಂಗಿಯಾದರು. 1760ರ ಕಾನೂನಿನ ಅನುಸಾರ ಯುಎಸ್ ಗೆ ಬರುತ್ತಿದ್ದ ಮುಸ್ಲಿಮರ ಸಂಖ್ಯೆ ಕಡಿಮೆಯಾಯಿತು.
ಇದಾಗಿ ಒಂದು ಶತಮಾನದ ಬಳಿಕ ಅಮೆರಿಕದ ಸುಪ್ರೀಂ ಕೋರ್ಟ್ ಹೇಳಿತು; ಮುಸ್ಲಿಮರು ಎದುರಾಳಿಗಳೊಂದಿಗೆ ವಿಶೇಷವಾಗಿ ಕ್ರೈಸ್ತರೊಂದಿಗೆ ವಿಪರೀತ ಧ್ವೇಷ ಸಾಧಿಸುತ್ತಾರೆ’.
ಇಹಲೋಕದ ಮೋಹ ತ್ಯಜಿಸಿ, ದೇವನನ್ನು ತಿಳಿಯಲು ಹಾಗೂ ಅವನೊಂದಿಗೆ ಸೇರಲು ಪ್ರಯತ್ನಿಸುವ, ಇತರರನ್ನು ಗಮನಿಸದೆ ಆಧ್ಯಾತ್ಮಿಕ ಚಿಂತನೆಗಳಿಗೆ ಸ್ವಯಂ ಅರ್ಪಿಸಿಕೊಳ್ಳುವರೊಂದಿಗೆ ಮಸ್ನವಿ ಮಾತನಾಡುತ್ತದೆ ಎಂದು ಜೇಮ್ಸ್ ರೆಡ್ ಹೇಸ್ ತನ್ನ ಮಸ್ನವಿಯ ಅನುವಾದದ ಮುನ್ನುಡಿಯಲ್ಲಿ ಬರದಿದ್ದಾರೆ. ಆದರೆ, ಇಂದಿಗೂ ಪಶ್ಚಿಮ ದೇಶಗಳಿಗೆ ಮಾತ್ರ ರೂಮಿ ಬೇರೆ, ಇಸ್ಲಾಮ್ ಬೇರೆ.
ಇಪ್ಪತ್ತನೇ ಶತಮಾನದಲ್ಲಿ ಆರ್.ಎ.ನಿಕಲ್ ಸನ್, ಎ.ಜೆ.ಆರ್ಬರಿ ಹಾಗೂ ಆ್ಯನ್ ಮೇರಿ ಶಿಮ್ಮಲ್ ಮೊದಲಾದ ರೂಮಿಯ ಅನುವಾದಕರು ಇಂಗ್ಲೀಷ್ ಭಾಷೆಯಲ್ಲಿ ರೂಮಿಯ ಅಸ್ತಿತ್ವವನ್ನು ಗಟ್ಟಿಗೊಳಿಸಿದರು. ಆದರೆ, ಒಬ್ಬ ಬಾರ್ಕ್ಸ್ ಮಾತ್ರ ರೂಮಿಗೆ ಅಪಾರ ಸಂಖ್ಯೆಯ ಓದುಗರನ್ನು ದೊರಕಿಸಿಕೊಟ್ಟ. ಬಾರ್ಕ್ಸ್ ಅನುವಾದಕನೋ, ವ್ಯಾಖ್ಯಾನಕಾರನೋ ಅಲ್ಲ. ಕೊನೆಯ ಪಕ್ಷ ಆತನಿಗೆ ಪರ್ಷಿಯನ್ ಭಾಷೆ ಕೂಡ ತಿಳಿದಿರಲಿಲ್ಲ. ಆದರೆ, ಅವನು 19ನೇ ಶತಮಾನದ ಅನುವಾದವನ್ನು ಅಮೆರಿಕನ್ ಇಂಗ್ಲಿಷ್ ಆವೃತ್ತಿಗೆ ರೂಪಾಂತರಿಸಿದನಷ್ಟೇ.
ರೂಮಿಯ ಇಂಗ್ಲಿಷ್ ಅನುವಾದಗಳು:
ಬಾರ್ಕ್ಸ್ 1937ರ ಇಸವಿಯಲ್ಲಿ ಜನಿಸುತ್ತಾನೆ. ಅವನು ಬೆಳೆದದ್ದು ಟೆನೆಸ್ಸಿಯ ಚತ್ತನೂಗಾದಲ್ಲಿ. ಇಂಗ್ಲೀಷ್ ಸಾಹಿತ್ಯದಲ್ಲಿ ಪಿಎಚ್ ಡಿ ಮಾಡಿರುವ ಅವನ ಮೊದಲ ಕೃತಿ ‘ ದಿ ಜ್ಯೂಸ್’ 1971ರಲ್ಲಿ ಪ್ರಕಟವಾಗುತ್ತದೆ. ಅದೇ ದಶಕದಲ್ಲಿ ಅವನಿಗೆ ಕವಿ ರಾಬರ್ಟ್ ಬ್ಲೇ ಯ ಮೂಲಕ ರೂಮಿಯ ಪರಿಚಯವಾಗುತ್ತದೆ. ‘ಇದನ್ನು ಅಮೆರಿಕನ್ ಇಂಗ್ಲೀಷ್ ಗೆ ರೂಪಾಂತರಿಸು’ ಎಂದು ಹೇಳಿ ಆರ್ಬರಿ ಅನುವಾದಿಸಿದ ರೂಮಿಯ ಕಾವ್ಯಗಳ ಒಂದು ಪ್ರತಿಯನ್ನು ರಾಬರ್ಟ್ ಬ್ಲೇ ಅವನಿಗೆ ಕೊಡುತ್ತಾನೆ. ಬಾರ್ಕ್ಸ್ ಇಸ್ಲಾಮಿಕ್ ಸಾಹಿತ್ಯವನ್ನು ಒಮ್ಮೆಯೂ ಅಧ್ಯಯನ ಮಾಡಿದವನಲ್ಲ. ಇತ್ತೀಚೆಗೆ ತನ್ನ ಮನೆಯಿರುವ ಜಾರ್ಜಿಯಾದಿಂದ ನನಗೆ ಕರೆ ಮಾಡಿ ಬಾರ್ಕ್ಸ್ ತನಗೊಂದು ಕನಸು ಬಿದ್ದಿರುವುದಾಗಿ ಹೇಳಿದ. ಕನಸಿನಲ್ಲಿ ಆತ ಒಂದು ನದಿಯ ಸಮೀಪದ ಕಡಿದಾದ ಬಂಡೆಯ ಮೇಲೆ ಮಲಗಿರುತ್ತಾನೆ. ಈ ವೇಳೆ ಬೆಳಕಿನ ವರ್ತುಲದಲ್ಲಿ ಆಗಂತುಕನೊಬ್ಬ ಪ್ರತ್ಯಕ್ಷನಾಗಿ ‘ನಾನು ನಿನ್ನನ್ನು ಪ್ರೀತಿಸುತ್ತೇನೆ’ ಎನ್ನುತ್ತಾನೆ. ಆ ವ್ಯಕ್ತಿಯನ್ನು ಬಾರ್ಕ್ಸ್ ಹಿಂದೆಂದೂ ಕಂಡಿರುವುದಿಲ್ಲ. ಆದರೆ, ಮುಂದಿನ ವರ್ಷ ಆತನನ್ನು ಫಿಲಾಡೆಲ್ಪಿಯಾದ ಸಮೀಪದ ಸೂಫಿ ಸಭೆಯಲ್ಲಿ ಭೇಟಿಯಾಗುತ್ತಾನೆ. ಆತ ಸಭೆಯ ನಾಯಕ. ಬ್ಲೇ ತನಗೆ ಕೊಟ್ಟ ವಿಕ್ಟೋರಿಯನ್ ಅನುವಾದವನ್ನು ಅಧ್ಯಯನ ಮಾಡಲು ಹಾಗೂ ರೂಪಾಂತರಿಸಲು ಬಾರ್ಕ್ಸ್ ಆರಂಭಿಸುತ್ತಾನೆ. ಆ ನಂತರ ಆತ ಹನ್ನೆರಡಕ್ಕೂ ಹೆಚ್ಚು ರೂಮಿ ಪುಸ್ತಕಗಳನ್ನು ಪ್ರಕಟಿಸುತ್ತಾನೆ.
ಬಾರ್ಕ್ಸ್ ತೆಗೆದುಕೊಂಡ ಸ್ವಾತಂತ್ರ್ಯ:
ನಮ್ಮ ಮಾತುಕತೆಯ ನಡುವೆ ಬಾರ್ಕ್ಸ್, “ರೂಮಿಯ ಕಾವ್ಯವೆಂದರೆ ಅದು ‘ಹೃದಯ ಭಂಡಾರದ ರಹಸ್ಯ ಕೀಲಿ ಕೈ. ಅದು ಅವರ್ಣನೀಯ” ಎಂದು ಹೇಳುತ್ತಾನೆ. ಈ ಅವರ್ಣನೀಯ ಸಂಗತಿಗಳನ್ನು ಹೇಳಲು ಬಾರ್ಕ್ಸ್ ರೂಮಿಯ ಕಾವ್ಯಗಳನ್ನು ರೂಪಾಂತರಿಸುವಾಗ ವಿಪರೀತ ಸ್ವಾತಂತ್ರ್ಯ ಪಡೆದುಕೊಳ್ಳುತ್ತಾನೆ. ಉದಾಹರಣೆಗೆ, ಇಸ್ಲಾಮಿನ ಉಲ್ಲೇಖಗಳನ್ನು ಅವನು ಸಂಪೂರ್ಣವಾಗಿ ಕೈಬಿಡುತ್ತಾನೆ. ಇಲ್ಲಿ ರೂಮಿಯ ‘ಲೈಕ್ ದಿಸ್’ ಎಂಬ ಪ್ರಸಿದ್ಧ ಕವಿತೆಯನ್ನು ಪರಾಮರ್ಶಿಸಬಹುದು. ಈ ಕವಿತೆಯ ಒಂದು ಸಾಲನ್ನು ಆರ್ಬರಿ ಮೂಲಕ್ಕೆ ನಿಷ್ಠನಾಗಿ ‘ಹೂರಿಗಳ ಬಗ್ಗೆ ನಿನ್ನಲ್ಲಿ ಯಾರಾದರು ಕೇಳುವುದಾದರೆ, ಮುಖಕ್ಕೆ ಮುಖ ಕೊಟ್ಟು ಹೇಳು, ಇದರಂತೆ’ ಎಂದು ಅನುವಾದಿಸುತ್ತಾನೆ. ಹೂರಿಗಳೆಂದರೆ, ಇಸ್ಲಾಮ್ ವಾಗ್ದಾನ ಮಾಡಿದ ಸ್ವರ್ಗದ ಕನ್ಯೆಯರು. ಬಾರ್ಕ್ಸ್ ತನ್ನ ರೂಪಾಂತರದಲ್ಲಿ ಈ ಪದವನ್ನು ಕೈಬಿಡುತ್ತಾನೆ, ಮಾತ್ರವಲ್ಲದೆ ಅದರ ಅಕ್ಷರಶಃ ಅನುವಾದವನ್ನು ಸಹ ಮಾಡುವುದಿಲ್ಲ. ಅವನು ರೂಪಾಂತರಿಸಿದ ಸಾಲು ಹೀಗಿದೆ. ‘ನಿನ್ನೊಂದಿಗೆ ಯಾರಾದರು ನಿನ್ನ ಲೈಂಗಿಕ ಇಚ್ಛೆಗಳ ಪರಿಪೂರ್ಣ ತೃಪ್ತಿ ಹೇಗಿರುತ್ತದೆ ಎಂದು ಕೇಳಿದರೆ ಮುಖ ಎತ್ತಿ ಹೇಳು, ಇದರಂತೆ’ ಇಲ್ಲಿರುವ ಧಾರ್ಮಿಕ ಉಲ್ಲೇಖ ನಾಪತ್ತೆಯಾಗಿದೆ. ಆದರೆ, ಇದೇ ಕವನದಲ್ಲಿರುವ ಜೀಸಸ್ ಮತ್ತು ಜೋಸೆಫ್ ಗೆ ಸಂಬಂಧಿಸಿದ ಉಲ್ಲೇಖಗಳು ಹಾಗೆಯೇ ಉಳಿದಿವೆ. ನಾನು ಇದರ ಬಗ್ಗೆ ಕೇಳಿದಾಗ ಆತ ‘ನಾನು ಇಸ್ಲಾಮಿಕ್ ಉಲ್ಲೇಖಗಳನ್ನು ತೆಗೆದು ಹಾಕಿದ್ದು ಉದ್ದೇಶಪೂರ್ವಕವಾಗಿಯೇ ಎಂಬುದು ನೆನಪಿಲ್ಲ’ ಎಂದ. ‘ನಾನು ಪ್ರೆಸ್ಬಿಟೇರಿಯನ್. ನನಗೆ ಬೈಬಲ್ ಚೆನ್ನಾಗಿಯೇ ನೆನಪಿರುತ್ತವೆ. ನನಗೆ ಕುರಾನ್ ಗಿಂತಲೂ ಹೊಸ ಒಡಂಬಡಿಕೆಯೇ ಹೆಚ್ಚು ತಿಳಿದಿದೆ. ಕುರಾನ್ ಓದುವುದು ಬಹಳ ಕಷ್ಟ’ ಎಂದ.
‘ರೂಮಿಯ ಪದಗಳಲ್ಲ’
ಅಮೆರಿಕನ್ ಆವೃತ್ತಿಗೆ ರೂಪಾಂತರಿಸುವ ಮೂಲಕ ರೂಮಿಯನ್ನು ಅಮೆರಿಕದ ಮಿಲಿಯನ್ ಗಟ್ಟಲೆ ಓದುಗರಿಗೆ ಪರಿಚಯಿಸಿದ ಶ್ರೇಯಸ್ಸು ಬಾರ್ಕ್ಸ್ ಗೆ ಸಲ್ಲಬೇಕು ಎಂದು ಒಮಿದ್ ಸಫಿ ಹೇಳುತ್ತಾರೆ. ಬಾರ್ಕ್ಸ್ ತನ್ನ ಬದುಕಿನ ಗಣನೀಯ ಪ್ರಮಾಣದ ಸಮಯ ಹಾಗೂ ಒಲವನ್ನು ರೂಮಿಯ ಕಾವ್ಯಗಳನ್ನು ಅಮೇರಿಕನ್ ಆವೃತ್ತಿಗೆ ರೂಪಾಂತರಿಸುವ ಕಾಯಕಕ್ಕಾಗಿ ಅರ್ಪಿಸಿದ್ದಾರೆ. ಮೂಲಕ್ಕೆ ಸಂಬಂಧವೇ ಇಲ್ಲದ ಇನ್ನೂ ಕೆಲವು ರೂಮಿಯ ಆವೃತ್ತಿಗಳಿವೆ. ಹೊಸ ತಲೆಮಾರಿನ ದೀಪಕ್ ಚೋಪ್ರ ಹಾಗೂ ಡ್ಯಾನಿಯಲ್ ಲ್ಯಾಟಿನ್ ಸ್ಕಿ ಅವರ ಕೃತಿಗಳು ಈ ಬಗೆಯದ್ದು. ಈ ಕೃತಿಗಳು ರೂಮಿ ಹೆಸರಲ್ಲಿ ಪ್ರಚಾರ ಪಡೆಯುತ್ತಿವೆ. ಆದರೆ, ಇವುಗಳಲ್ಲಿ ರೂಮಿಯ ಬರವಣಿಗೆಗಳು ಇಲ್ಲವೇ ಇಲ್ಲ ಎಂಬಷ್ಟು ಅಪರೂಪ. ಅಧ್ಯಾತ್ಮಕ್ಕೆ ಸಂಬಂಧಿಸಿದ ಕೆಲವು ಪುಸ್ತಕಗಳನ್ನು ಬರೆದಿರುವ ಹಾಗೂ ಪರ್ಯಾಯ ಔಷಧಗಳ ಬಗ್ಗೆ ಆಸಕ್ತಿಯನ್ನು ಹೊಂದಿರುವ ದೀಪಕ್ ಚೋಪ್ರ ತನ್ನ ಕವನಗಳು ‘ರೂಮಿಯ ಪದಗಳಲ್ಲ’ ಎಂದು ಒಪ್ಪಿಕೊಳ್ಳುತ್ತಾರೆ. ಬದಲಾಗಿ, ಅದು ಪರ್ಷಿಯನ್ ಮೂಲದ ಕವಿತೆಗಳನ್ನು ಓದುವಾಗ ಉದಯಿಸಿದ ಭಾವಗಳು. ಹೊಸ ಸೃಷ್ಟಿಗಳಾಗಿದ್ದರೂ, ಮೂಲದ ಸಾರವನ್ನು ಉಳಿಸಿಕೊಂಡಿದೆ.
ಕುರ್ ಆನ್ ಮತ್ತು ರೂಮಿ:
‘ಇದೊಂದು ರೀತಿಯ ಆಧ್ಯಾತ್ಮಿಕ ವಸಾಹತುಶಾಹಿಯಾಗಿದೆ’ ಎಂದು ಈ ಹೊಸ ತಲೆಮಾರಿನ ಅನುವಾದಗಳ ಮೇಲೆ ಚರ್ಚೆ ಮಾಡುತ್ತಾ ಸಫಿ ಹೇಳುತ್ತಾರೆ. ‘ಈ ವಸಾಹತುಶಾಹಿಯು ಬೋಸ್ನಿಯ ಮತ್ತು ಇಸ್ತಂಬೂಲ್ ನಿಂದ ಕೊನ್ಯಾದವರೆಗಿನ ಹಾಗೂ ಇರಾನ್ ನಿಂದ ಮಧ್ಯ ಹಾಗೂ ದಕ್ಷಿಣ ಏಷ್ಯಾದವರೆಗಿನ ಮುಸ್ಲಿಮರು ಜೀವಿಸುತ್ತಿರುವ ಹಾಗೂ ಉಸಿರಾಡುತ್ತಿರುವ ಆಧ್ಯಾತ್ಮಿಕ ಭೂಭಾಗವನ್ನು ಅಳಿಸಿ ಹಾಕುತ್ತಿದೆ ಅಥವಾ ಕಬಳಿಸುತ್ತಿದೆ’ ಎಂದು ಅವರು ಹೇಳುತ್ತಾರೆ. ಧಾರ್ಮಿಕ ಪಠ್ಯದಿಂದ ಆಧ್ಯಾತ್ಮವನ್ನು ಹೊರ ತೆಗೆಯುವುದರಿಂದ ಕೆಟ್ಟ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಈಗಾಗಲೇ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನ ರಾಷ್ಟ್ರೀಯ ಸಲಹೆಗಾರರಾದ ಜನರಲ್ ಮೈಕಲ್ ಫ್ಲಿನ್ ರಂತಹವರು ಇಸ್ಲಾಮ್ ಅನ್ನು ‘ಕ್ಯಾನ್ಸರ್’ ಎಂದು ಕರೆಯುವ ಮನಸ್ಥಿತಿಗೆ ತಲುಪಿದ್ದಾರೆ. ಇವತ್ತಿಗೂ ಅಮೆರಿಕದ ನೀತಿ ನಿರೂಪಕರು ಪಾಶ್ಚಾತ್ಯೇತರರು ಹಾಗೂ ಬಿಳಿಯೇತರರು ವಿಶ್ವ ನಾಗರಿಕತೆಗೆ ಯಾವುದೇ ಕೊಡುಗೆ ನೀಡಿಲ್ಲ ಎನ್ನುವ ವಾದವನ್ನು ಎತ್ತಿ ಹಿಡಿಯುತ್ತಿದ್ದಾರೆ.
ಬಾರ್ಕ್ಸ್ ನ ಪ್ರಕಾರ ರೂಮಿಗೆ ಧಾರ್ಮಿಕತೆಯು ಅಷ್ಟೇನೂ ಪ್ರಮುಖವಾದ ವಿಷಯವಲ್ಲ. ‘ಜಗತ್ತಿಗೆ ಧಾರ್ಮಿಕತೆಯು ಅಂತಹ ಒಂದು ವಿವಾದಿತ ವಿಷಯವೇ’ ಎಂದು ಬಾರ್ಕ್ಸ್ ನನ್ನೊಂದಿಗೆ ಹೇಳುತ್ತಾನೆ. ‘ನಾನು ನನ್ನ ಸತ್ಯವನ್ನು ಪಡೆದೆ. ನೀನು ನಿನ್ನ ಸತ್ಯವನ್ನು ಪಡೆದೆ. ಇದು ಅಸಂಬದ್ಧ. ಈ ವಿಷಯದಲ್ಲಿ ನಾವೆಲ್ಲಾ ಒಂದೇ. ನಾನು ನನ್ನ ಹೃದಯವನ್ನು ತೆರೆಯಲು ಪ್ರಯತ್ನಿಸಿದೆ. ಇದಕ್ಕೆ ರೂಮಿಯ ಕಾವ್ಯ ನನಗೆ ನೆರವಾಯಿತು’ ಎಂದು ಅವನು ಹೇಳುತ್ತಾನೆ. ಈ ತತ್ವಶಾಸ್ತ್ರದ ಮೂಲಕವೇ ಒಬ್ಬನಿಗೆ ರೂಮಿಯ ಕಾವ್ಯ ವಿಧಾನವನ್ನು ಪತ್ತೆಹಚ್ಚಬಹುದು. ರೂಮಿ ಪರ್ಷಿಯನ್ ಆವೃತ್ತಿಗೆ ಹೊಂದಿಕೊಳ್ಳುವಂತೆ ಹಾಗೂ ಸಾಹಿತ್ಯಿಕ ಪ್ರಾಸ ಸಾಧ್ಯವಾಗುವಂತೆ ಕುರಾನ್ ನಿಂದ ಪಠ್ಯಗಳನ್ನು ಎತ್ತಿಕೊಳ್ಳುತ್ತಾರೆ. ರೂಮಿಯ ಪರ್ಷಿಯನ್ ಓದುಗರು ಈ ತಂತ್ರವನ್ನು ಗುರುತಿಸುತ್ತಾರೆ. ಆದರೆ, ಹೆಚ್ಚಿನ ಅಮೆರಿಕನ್ ಓದುಗರಿಗೆ ಇಸ್ಲಾಮಿನ ಈ ನೀಲನಕ್ಷೆಯ ಅರಿವಿಲ್ಲ. ‘ಕುರಾನ್ ಅನ್ನು ಹೊರಗಿಟ್ಟು ರೂಮಿಯನ್ನು ಓದುವುದು, ಬೈಬಲ್ ಬಿಟ್ಟು ಮಿಲ್ಟನ್ ಅನ್ನು ಓದುವುದು ಎರಡೂ ಒಂದೇ’ ಎಂದು ಸಫಿ ಹೋಲಿಸುತ್ತಾರೆ. ಒಂದು ವೇಳೆ ರೂಮಿ ಸಂಪ್ರದಾಯ ವಿರೋಧಿ ಎಂದುಕೊಂಡರೂ ಸಹ ಅವರನ್ನು ಮುಸ್ಲಿಮ್ ಚೌಕಟ್ಟಿನ ಹಿನ್ನೆಲೆಯಲ್ಲಿಯೇ ನೋಡಬೇಕಾಗಿದೆ. ಅಂತೆಯೇ ಶತಮಾನಗಳ ಹಿಂದೆಯೇ ಇಸ್ಲಾಮಿಕ್ ಸಂಸ್ಕೃತಿಯಲ್ಲಿ ಆ ರೀತಿಯ ಅಸಾಂಪ್ರದಾಯಿಕತೆಗೆ ಅವಕಾಶವಿತ್ತು ಎಂಬುದನ್ನೂ ಗುರುತಿಸಬೇಕಿದೆ. ರೂಮಿಯ ಕಾವ್ಯಗಳು ಕೇವಲ ‘ಧಾರ್ಮಿಕತೆ’ಯಲ್ಲ; ಅದು ಇಸ್ಲಾಮಿಕ್ ವಿದ್ವತ್ ವಲಯದೊಳಗಿನ ಐತಿಹಾಸಿಕ ಚೈತನ್ಯವನ್ನು ಪ್ರತಿನಿಧಿಸುತ್ತದೆ.
ರೂಮಿ ಕುರಾನ್, ಹದೀಸ್ ಮತ್ತು ಧಾರ್ಮಿಕತೆಯನ್ನು ಸಾಂಪ್ರದಾಯಿಕ ಓದಿಗೆ ಸವಾಲೆಸೆಯುವ ರೀತಿಯಲ್ಲಿ ಶೋಧನಾತ್ಮಕವಾಗಿ ಬಳಸಿದ್ದಾರೆ. ಬಾರ್ಕ್ಸ್ ನ ಒಂದು ರೂಪಾಂತರ ಹೀಗಿದೆ; ‘ಒಳಿತು ಕೆಡುಕುಗಳಾಚೆಗೂ ಒಂದು ಸ್ಥಳವಿದೆ; ಅಲ್ಲಿ ಭೇಟಿಯಾಗೋಣ’ (ಈ ಸರಿತಪ್ಪುಗಳಾಚೆಗೆ ಒಂದು ಬಯಲಿದೆ, ಅಲ್ಲಿ ಸಂಧಿಸೋಣ). ಮೂಲ ಕವಿತೆಯಲ್ಲಿ ಒಳಿತು-ಕೆಡುಗಳ ಪ್ರಸ್ತಾಪವೇ ಇಲ್ಲ. ಅಲ್ಲಿರುವುದು ಈಮಾನ್(ಸತ್ಯವಿಶ್ವಾಸ) ಮತ್ತು ಕುಫ್ರ್(ಸತ್ಯನಿಷೇಧ) ಎಂಬ ಪದಗಳು. ಸತ್ಯವಿಶ್ವಾಸದ ಮೂಲವಿರುವುದು ಧಾರ್ಮಿಕ ನೀತಿ ಸಂಹಿತೆಯಲ್ಲಲ್ಲ; ಬದಲಾಗಿ ಉದಾತ್ತವಾದ ದಯೆ ಮತ್ತು ಪ್ರೀತಿಯಲ್ಲಿ ಎಂದು ಮುಸ್ಲಿಮ್ ವಿದ್ವಾಂಸನೊಬ್ಬ ಹೇಳುವುದನ್ನು ಊಹಿಸಿನೋಡಿ. ಇಂದು ಯಾವುದನ್ನು ನಾವು ಹಾಗೂ ಬಹುತೇಕ ಮುಸ್ಲಿಮ್ ವಿದ್ವಾಂಸರು ಮೂಲಭೂತವಾದ ಎಂದು ಭಾವಿಸುತ್ತಾರೋ ಅದನ್ನು ಏಳುನೂರು ವರ್ಷಗಳ ಹಿಂದೆಯೇ ರೂಮಿ ಗುರುತಿಸಿದ್ದರು.
ಇಂತಹ ಓದುವಿಕೆಯೂ ಸಂಪೂರ್ಣವಾಗಿ ಅನನ್ಯವಾದುದೇನೂ ಅಲ್ಲ. ರೂಮಿಯ ರಚನೆಗಳು ಧಾರ್ಮಿಕ ಆಧ್ಯಾತ್ಮಿಕತೆ ಮತ್ತು ಸಾಂಸ್ಥಿಕ ನಂಬಿಕೆಗಳ ನಡುವಿನ ತಳ್ಳಾಟಗಳನ್ನು ವಿಶಾಲವಾಗಿ ಪ್ರತಿಬಿಂಬಿಸುತ್ತದೆ. ‘ಐತಿಹಾಸಿಕವಾಗಿ ಹೇಳುವುದಾದರೆ, ಕುರಾನ್ ಹೊರತುಪಡಿಸಿ ರೂಮಿ ಮತ್ತು ಹಾಫಿಝ್ ಕವಿತೆಗಳಂತೆ ಯಾವ ಪಠ್ಯಗಳೂ ಕೂಡ ಮುಸ್ಲಿಮ್ ಭಾವನಾಶಕ್ತಿಯನ್ನು ರೂಪಿಸಿಲ್ಲ’ ಎಂದು ಸಫಿ ಹೇಳುತ್ತಾರೆ. ಈ ಕಾರಣದಿಂದಲೇ ಲೇಖಕರು ಬರೆದುದನ್ನು ಕೈಯಿಂದಲೇ ನಕಲು ಮಾಡಿ ಪ್ರಕಟಿಸುತ್ತಿದ್ದ ಕಾಲದಲ್ಲಿ ಸೃಷ್ಟಿಯಾದ ಬೃಹತ್ ಗಾತ್ರದ ರೂಮಿಯ ರಚನೆಗಳು ಇನ್ನೂ ಜೀವಂತವಾಗಿ ಉಳಿದಿವೆ.
‘ಭಾಷೆ ಕೇವಲ ಸಂವಹನ ಮಾಧ್ಯಮ ಮಾತ್ರವಲ್ಲ, ಅದು ಸ್ಮೃತಿ, ಸಂಸ್ಕೃತಿ ಮತ್ತು ಪರಂಪರೆಯ ದಾಸ್ತಾನು ಕೂಡ ಹೌದು’ ಎಂದು ಬರಹಗಾರ ಹಾಗೂ ಅನುವಾದಕ ಸಿನಾನ್ ಅಂತೂನ್ ಹೇಳುತ್ತಾರೆ. ಎರಡು ಸಂಸ್ಕೃತಿಗಳ ನಡುವಿನ ವಾಹಕನೆಂಬ ನೆಲೆಯಲ್ಲಿ ಅನುವಾದಕನು ಸಹಜವಾಗಿಯೇ ರಾಜಕೀಯ ನಿಲುವು ತಾಳುತ್ತಾನೆ. ಹದಿಮೂರನೇ ಶತಮಾನದ ಪರ್ಷಿಯನ್ ಕವಿಯನ್ನು ಸಮಕಾಲೀನ ಅಮೆರಿಕನ್ ಓದುಗರು ಗ್ರಹಿಸುವಂತೆ ಮಾಡುವುದು ಹೇಗೆ ಎಂದು ಅವರು ಯೋಚಿಸುತ್ತಾರೆ. ಆದರೂ, ಮೂಲಪಠ್ಯಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳುವ ಹೊಣೆ ಅವರ ಮೇಲಿದೆ. ರೂಮಿಯ ವಿಷಯದಲ್ಲಿ ಈ ರೀತಿ ನಡೆದಿದ್ದರೆ, ಶರೀಅತ್ ಬೋಧಿಸುವ ಪ್ರೊಫೆಸರ್ ಒಬ್ಬರು ಜಗತ್ತಿನಲ್ಲೇ ಅತೀ ಹೆಚ್ಚು ಓದಲ್ಪಡುವ ಪ್ರೇಮ ಕಾವ್ಯವನ್ನೂ ಸಹ ಬರೆಯಬಲ್ಲರು ಎಂದು ಓದುಗರು ತಿಳಿಯಲು ಸಹಾಯವಾಗುತ್ತಿತ್ತು.
‘ಜಾವಿದ್ ಮೊಜದ್ದಿದ್’ ಎಂಬವರು ಮಸ್ನವಿಯ ಎಲ್ಲಾ ಆರು ಕೃತಿಗಳನ್ನು ಅನುವಾದ ಮಾಡುವ ದೀರ್ಘಕಾಲೀನ ಯೋಜನೆಯನ್ನು ಕೈಗೆತ್ತಿಕೊಂಡಿದ್ದಾರೆ. ಈಗಾಗಲೇ ಅವರು ಅದರ ಮೂರು ಭಾಗಗಳನ್ನು ಪ್ರಕಟಿಸಿದ್ದಾರೆ. ನಾಲ್ಕನೇ ಭಾಗ ಇನ್ನೇನು ಪ್ರಕಟವಾಗಲಿದೆ.
ಅವರು ತಮ್ಮ ಅನುವಾದದಲ್ಲಿ ರೂಮಿ ಬಳಸಿರುವ ಇಸ್ಲಾಮಿಕ್ ಮತ್ತು ಕುರಾನ್ ನ ಅರಬಿಕ್ ಪಠ್ಯಗಳನ್ನು ಅದರ ಮೂಲ ಸ್ವರೂಪದಲ್ಲೇ ತೆಗೆದುಕೊಂಡು, ಇಟಾಲಿಕ್ ಫಾಂಟಲ್ಲಿ ಸೂಚಿಸುತ್ತಾರೆ. ಅವರ ಕೃತಿಗಳು ಅಡಿಟಿಪ್ಪಣಿಗಳಿಂದ ತುಂಬಿವೆ. ಅವುಗಳನ್ನು ಓದಲು ಹೆಚ್ಚಿನ ಶ್ರಮ ಹಾಕಬೇಕಾಗುತ್ತದೆ. ಮತ್ತು ಪೂರ್ವಾಗ್ರಹ ಪೀಡಿತ ಮನಸಿನಿಂದ ಹೊರಬರಬೇಕಾಗುತ್ತದೆ. ಒಟ್ಟಿನಲ್ಲಿ ಈ ಅನುವಾದವು ವಿದೇಶೀಯರಿಗೆ ರೂಮಿಯನ್ನು ಅರ್ಥ ಮಾಡಿಸುವ ಪ್ರಯತ್ನವಷ್ಟೆ. ಕೇಶವಾರ್ಝ್ ಹೇಳಿರುವಂತೆ, “ಪ್ರತಿಯೊಂದು ವಿಷಯವೂ ತನ್ನದೇ ಆದ ಸಂರಚನೆ, ಸಂಸ್ಕೃತಿ ಹಾಗೂ ಇತಿಹಾಸವನ್ನು ಹೊಂದಿದೆ. ಒಬ್ಬ ಮುಸ್ಲಿಮ್ ಕೂಡ ಹೀಗಿರಬಲ್ಲ” ಎಂಬುದರ ಸೂಚನೆಯಾಗಲಿದೆ ಈ ಅನುವಾದ.
ಮೂಲ: ರೋಝಿನಾ ಅಲಿ
ಅನುವಾದ: ಸ್ವಾಲಿಹ್ ತೋಡಾರ್
ಕೃಪೆ: ನ್ಯೂಯೋರ್ಕರ್ ಮ್ಯಾಗಝಿನ್
❤️❤️❤️💐💐💐
Super, valuable information
ಉತ್ತಮ…
Super. ಇಂತಹ ಬರಹಗಳು ಹೆಚ್ಚಾಗಿ ಪ್ರಕಟಗೊಳ್ಳಲಿ
Super. ಇಂತಹ ಬರಹಗಳು ಹೆಚ್ಚಾಗಿ ಪ್ರಕಟಗೊಳ್ಳಲಿ
Super. ಇಂತಹ ಬರಹಗಳು ಹೆಚ್ಚಾಗಿ ಪ್ರಕಟಗೊಳ್ಳಲಿ
❤
ಇಂತಹ ಉಪಯುಕ್ತ ಬರಹಗಳು ಇನ್ನೂ ಬರಲಿ
Forgotten Mawlana Jalaluddin Rumi in the Asia but people of the west follows him.