ಜಲಾಲುದ್ದೀನ್ ರೂಮಿಯವರು ರಚಿಸಿದ ಜನಪ್ರಿಯ ದ್ವಿಪದಿ ಕಾವ್ಯವಾಗಿದೆ ‘ಮಸ್ನವಿ’ ಎಂಬುವುದು. ಮಸ್ನವಿಯನ್ನು ಆಧಾರವಾಗಿಟ್ಟುಕೊಂಡು ಹಲವಾರು ವ್ಯಾಖ್ಯಾನಗಳು ಬರೆಯಲ್ಪಟ್ಟಿದ್ದರೂ ಅವುಗಳಲ್ಲಿ ಹೆಚ್ಚಿನವು ಖುರ್ಆನ್ ಮತ್ತು ಮಸ್ನವಿಗಳೆಡೆಯಲ್ಲಿನ ಅವಿನಾಭಾವ ಸಂಬಂಧದ ಕುರಿತಾಗಿದೆಯೆಂಬುವುದು ಗಮನಾರ್ಹ ಸಂಗತಿಗಳಲ್ಲೊಂದು. ಮಸ್ನವಿಯ ಸಾಲುಗಳನ್ನು ಒರೆಗಲ್ಲಿಗೆ ಹಚ್ಚಿ ನೋಡುವುದಾದರೆ; ಅವುಗಳಲ್ಲಿ ಮಿಕ್ಕವೂ ಖುರ್ಆನಿನ ಒಳಾರ್ಥಗಳ ಬಗೆಗಿನದ್ದಾದರೆ ಮತ್ತು ಕೆಲವು ಖುರ್ಆನಿನಲ್ಲಿ ಬಳಸಲಾಗಿರುವ ನಿರ್ದಿಷ್ಟ ಸಂಕೇತಗಳ ವಿವರಣೆಗಳಾಗಿದೆ. ‘ಪರ್ಷಿಯನ್ ಖುರ್ಆನ್’ ಎಂದು ಅಬ್ದುರ್ರಹ್ಮಾನ್ ಜಾಮಿ ಮಸ್ನವಿಯನ್ನು ವಿಶ್ಲೇಷಿಸುವಾಗಲೂ ಖುರ್ಆನ್ ಮತ್ತು ಮಸ್ನವಿಗಳೆಡೆಗಿನ ನಂಟನ್ನು ಸೂಕ್ಷ್ಮವಾಗಿ ಅವಲೋಕಿಸಿ ಎಳೆಎಳೆಯಾಗಿ ಬಿಚ್ಚಿಡುವುದು ಅಧ್ಯಯನದ ದೃಷ್ಟಿಯಿಂದ ಅಗತ್ಯವೆನಿಸುತ್ತದೆ. “ನಾನೊಬ್ಬ ಪ್ರವಾದಿಯಲ್ಲದಿದ್ದರೂ ನನ್ನ ಬಳಿಯೊಂದು ದೈವಿಕ ಗ್ರಂಥವಿದೆ” ಎಂದು ಮೌಲಾನಾ ರೂಮಿ ಹೇಳಿರುವುದು ಈ ಮಸ್ನವಿಯನ್ನು ಕುರಿತಾಗಿತ್ತು. ಖುರ್ಆನಿನ ೫೨೮ ಸೂಕ್ತಗಳನ್ನು ಮಾತ್ರವೇ ಯಥಾವತ್ತಾಗಿ ಮಸ್ನವೀ ಕಾವ್ಯದಲ್ಲಿ ಬಳಸಲಾಗಿದ್ದರೂ ‘ಹಾದಿ ಹೆಯರಿ’ಯ ಅಧ್ಯಯನಗಳ ಪ್ರಕಾರ ಮಸ್ನವಿಯ ಸಾಲುಗಳಲ್ಲಿ ಸಿಂಹಪಾಲು ಖುರ್ಆನಿನ ಚಿಂತನೆಗಳು ಹರಡಿಕೊಂಡಿರುವುದು ಕಾಣಬಹುದಾಗಿದೆ. ಕೆಲವೊಂದು ನೇರ ತರ್ಜುಮೆಗಳಿದ್ದರೆ ಮತ್ತೆ ಕೆಲವು ಸೂಕ್ತಗಳ ಹೂರಣಗಳನ್ನು ಕಾವ್ಯಕ್ಕಿಳಿಸಲಾಗಿದೆ. ಒಟ್ಟಿನಲ್ಲಿ ಮಸ್ನವಿಯ ಸಾಲುಗಳನ್ನು ಮುಟ್ಟಿದಂತೆಲ್ಲಾ ಖುರ್ಆನಿನ ಚಿಂತನೆಗಳ ಹುಡಿ ಮೆತ್ತಿಕೊಂಡುಬಿಡುತ್ತದೆ ಎನ್ನುವುದು ಸಾರ. ಇದೇ ಕಾರಣಕ್ಕಾಗಿ ರೂಮಿ ಸಾಹಿತ್ಯದಲ್ಲಿ ಖುರ್ಆನಿನ ಪ್ರಭಾವ ಮತ್ತು ಅವಲಂಬನೆಯ ಬಗ್ಗೆ ದೊಡ್ಡ ಮಟ್ಟದ ಚರ್ಚೆಗಳು ನಡೆಯುತ್ತಿರುವುದು. ಮೌಲಾನಾರ ಕಾವ್ಯಾತ್ಮಕ ಭಾಷೆಯನ್ನು ಹೊರತುಪಡಿಸಿ ಮಸ್ನವಿಯನ್ನು ವಿಶ್ಲೇಷಣೆ ಮಾಡುವುದಾದರೆ ಅದೊಂದು ಶುದ್ಧ ಖುರ್ಆನ್ ಆಗಿ ಉಳಿದುಬಿಡುತ್ತದೆ ಎನ್ನಲಾಗಿದೆ. ಆಧ್ಯಾತ್ಮಿಕ ಭೋದನೆಗಳನ್ನು ಮುಂದಿಟ್ಟು ನೋಡುವುದಾದರೆ ಮಸ್ನವೀ ಕಾವ್ಯಗಳಿಗೆ ಖುರ್ಆನಿನೊಂದಿಗಿನ ಸಾಮ್ಯತೆಯನ್ನು ಸುಲಭದಲ್ಲಿ ಗ್ರಹಿಸಬಹುದಾಗಿದೆ.
ಖುರ್ಆನಿನ ಪದಗಳು, ಉಪಮೆಗಳು, ಭೋದನಾ ಶೈಲಿಗಳು ಬದುಕಿನ ಭಾಗವಾಗಿಯೇ ಹೋಗಿದ್ದ ರೂಮಿಯವರಿಗೆ ತಮ್ಮ ಅರಿವಿಗೂ ಬಾರದಂತೆ ಖುರ್ಆನಿನ ಶಬ್ದಗಳು ತಮ್ಮ ಕಾವ್ಯಗಳಲ್ಲಿ ನುಸುಳಿ ಬರುತ್ತಿದ್ದವು. ಇದೇ ಕಾರಣಕ್ಕೆ ಖುರ್ಆನಿನ ಸಂವೇದನೆಯನ್ನು ಒಳಗೊಂಡಿರುವ ಅವರ ಚಿಂತನೆಗಳನ್ನು ಢಾಳಾಗಿ ದರ್ಶಿಸಬಹುದಾಗಿದೆ.
‘ದೀವಾನೆ ತಬ್ರೀಝಿ’ನಲ್ಲಿ ರೂಮಿ ಹೇಳುವುದನ್ನು ಗಮನಿಸಿ;
“ಸದಾ ನನ್ನ ಕೈಯ್ಯಲ್ಲೊಂದು ಖುರ್ಆನ್ ಇರುತ್ತಿತ್ತು. ಆದರೆ, ಈಗ ನನ್ನ ಕೈಯಲ್ಲಿರುವುದು ಪ್ರಣಯದ ಮದುಬಟ್ಟಲು. ನನ್ನ ತುಟಿಗಳು ಸದಾ ದಿವ್ಯ ಪ್ರಕೀರ್ತನೆಯನ್ನು ಪಠಿಸುತ್ತಿತ್ತು. ಆದರೆ, ಈಗೀಗ ಕವಿತೆಗಳು ಮತ್ತು ಹಾಡುಗಳಲ್ಲಿಯೇ ಅದು ಅಂತರ್ಲೀನವಾಗಿದೆ”(ದೀವಾನ್)
ಮತ್ತೊಂದೆಡೆಯಲ್ಲಿ ರೂಮಿಯವರು ಖುರ್ಆನ್ ಹಾಗೂ ಮುಸಲ್ಲಾ(ನಮಾಜಿನ ಹಾಸು) ವನ್ನು ಪ್ರಣಯದೊಂದಿಗೆ ಹೋಲಿಕೆಮಾಡಿದ್ದಾರೆ.
“ಪ್ರಣಯವು ನನ್ನನ್ನು ಜ್ಞಾನಮೋಹದಿಂದ ಮತ್ತು ತೀರ್ಥಯಾತ್ರೆಗಳಿಂದ ವಿಮುಖನಾಗಿಸಿತು. ಅಂತಿಮವಾಗಿ ಉನ್ಮತ್ತನೂ ಪರವಶನೂ ಆಗಿ ಬದಲಾದೆನು. ಭಕ್ತಿಮಾರ್ಗವನ್ನು ಹರಸುತ್ತಾ ಮುಸಲ್ಲಾದ ಮೋಹಕ್ಕೆ ಬಲಿಯಾದೆನು. ವಿರಕ್ತನಾಗಿ ದೈವೀಸ್ಮರಣೆಯ ದಾರಿಯಲ್ಲಿ ಸಂಚರಿಸಿದೆನು. ಮುಸಲ್ಲಾದ ಬಳಿಗೆ ಬಂದ ಪ್ರೇಮವು ನನ್ನಲ್ಲಿ ಹೇಳಿತು. ‘ಇಹದ ಅಡೆತಡೆಗಳನ್ನು ಒಡೆದು ಹಾಕು, ಮುಸಲ್ಲಾದಲ್ಲಿ ಬಂಧಿಯಾಗಿ ಅದು ಯಾಕಾಗಿ ಬಾಳುವೆಯೋ ಹೇಳು!”(ದೀವಾನ್)
ಇಲಾಹೀ ಪ್ರೇಮದ ಸಲುವಾಗಿ ಧರ್ಮದ ಮೂಲ ಆರಾಧನೆ, ಪದ್ಧತಿಗಳನ್ನು ತಿರಸ್ಕರಿಸಲು ರೂಮಿ ತನ್ನ ಬರಹಗಳ ಮೂಲಕ ಓದುಗರನ್ನು ಮನವೊಲಿಸುತ್ತಾರೆ ಎಂದು ಕೆಲವರು ಆರೋಪಿಸುತ್ತಾರೆ.
ಆದಾಗ್ಯೂ, ಮಸ್ನವಿಯೆಂಬ ಸುಂದರ ಕಾವ್ಯ ಕುಸುರಿಯ ದಾರ ಮತ್ತು ಬಟ್ಟೆಯು ಸ್ವತಃ ಖುರ್ಆನ್ ಆಗಿದೆಯೆಂದು ತಿಳಿದಾಗ ಈ ಆರೋಪಗಳು ನೈಪಥ್ಯಕ್ಕೆ ಸರಿದು ನಿಲ್ಲುತ್ತದೆ.
ಪ್ರಣಯವು ರೂಮಿಯನ್ನು ಆವಾಹಿಸುವವರೆಗೂ ಅಥವಾ ಮಸ್ನವಿ ರೂಪುಗೊಳ್ಳುವವರೆಗೂ ಖುರ್ಆನಿನ ಬಾಹ್ಯಾರ್ಥಗಳನ್ನು ಮಾತ್ರವೇ ರೂಮಿ ಗ್ರಹಿಸಿದ್ದರು. ಆ ಕಾರಣದಿಂದಲೇ ಅವರ ಮಸ್ನವಿಯ ಸಾಲುಗಳಲ್ಲಿ ಮಾತ್ರವೇ ಖುರ್ಆನಿನ ಒಳಾರ್ಥಗಳೆಡೆಗೆ ಬೆಳಕು ಚೆಲ್ಲುವ ಪ್ರಯತ್ನಗಳು ಯಥೇಚ್ಛವಾಗಿ ನಡೆದಿರುವುದು.
ಮಸ್ನವಿಯಲ್ಲಿನ ಖುರ್ಆನಿನ ಬಾಹ್ಯ ಮತ್ತು ಆಂತರಿಕ ಅರ್ಥಗಳ ನಡುವಿನ ಸಂಬಂಧವನ್ನು ರೂಮಿ ಈ ಕೆಳಗಿನಂತೆ ವಿವರಿಸುತ್ತಾರೆ;
“ಖುರ್ಆನಿನ ಪದಗಳ ಅರ್ಥಗಳು ಕೇವಲ ಬಾಹ್ಯಾರ್ಥ ಮಾತ್ರವಾಗಿದೆ, ಅದು ಮೊದಲ ಅರ್ಥವೂ ಹೌದು. ಎರಡನೆಯದು, ಅಂತರ್ಲೀನವಾದ ಮತ್ತೊಂದು ಅರ್ಥ. ಮೂರನೆಯದು ಆಳಕ್ಕೆ ಹೋದಂತೆ ಮಾತ್ರ ತೆರೆದುಕೊಳ್ಳುವ ಮಗದೊಂದು ಅರ್ಥ. ಸಾಮಾನ್ಯ ಮನುಷ್ಯನ ಬುದ್ದಿಗೆ ದಕ್ಕದ, ತರ್ಕಕ್ಕೆ ನಿಲುಕದ, ನಿಗೂಢವಾದ ನಾಲ್ಕನೆಯ ಅರ್ಥವೂ ಖುರ್ಆನಿಗಿದೆ. ಒಂದು ತೆಂಗಿನಕಾಯಿಯ ತಿರುಳನ್ನು ಸವಿಯಲೋಸುಗ ಎಷ್ಟು ಪದರಗಳನ್ನು ಸಿಗಿಯಬೇಕಾಗುತ್ತದೆಯೋ ಅದೇ ರೀತಿಯಾಗಿದೆ ಖುರ್ಆನಿನ ಅಂತರಾರ್ಥವನ್ನು ಅರಿಯುವುದು. ಅದು ಏಕಾಗ್ರತೆಯನ್ನು ಬೇಡುವ ಕಾರ್ಯವಾಗಿದೆ.”
ಇಷ್ಟೊಂದು ಗಹನಾರ್ಥವಿರುವ ಖುರ್ಆನಿನ ಚಿಂತನೆಯನ್ನು ಕೇವಲ ಮೇಲ್ಮೈಮೂಲಕ ಮಾತ್ರವೇ ಗ್ರಹಿಸುತ್ತೇವೆನ್ನುವುದು ಹಲವೊಮ್ಮೆ ಪರಿಪೂರ್ಣತೆಗೆ ತೊಡಕಾಗಿ ನಿಲ್ಲುತ್ತದೆ. ಜೇಡಿಮಣ್ಣಿನಿಂದ ಸೃಷ್ಟಿಸಲ್ಪಟ್ಟ ಹಝ್ರತ್ ಆದಂ(ಅ.ಸ)ರ ಶ್ರೇಷ್ಠತೆಯನ್ನು ಗುರುತಿಸಲಾಗದೆ ಅಹಂ ತೋರಿ ಶಪಿಸಲ್ಪಟ್ಟ ಇಬ್ಲೀಸನೊಂದಿಗೆ, ಅವನ ಹೊರನೋಟದೊಂದಿಗೆ ರೂಮಿ ಖುರ್ಆನನ್ನು ತರ್ಜುಮೆ, ಶಬ್ದಾರ್ಥದೊಂದಿಗೆ ಅರ್ಥೈಸುವವರಿಗೆ ಹೋಲಿಕೆಮಾಡುತ್ತಾರೆ. ಅಂದರೆ ಒಳನೋಟವಿಲ್ಲದೆ ಯಾವುದನ್ನೂ ಸರಳವಾಗಿ ಮನನ ಮಾಡಿಕೊಳ್ಳಲಾಗುವುದಿಲ್ಲ ಅದು ಅಸಾಧ್ಯವಾಗಿಯೂ ಇರುತ್ತದೆ.
ರೂಮಿ ಕಾವ್ಯದ ಒಂದು ಸಾಲು ಹೀಗಿದೆ;
“ಓ ಮನುಷ್ಯನೇ, ಖುರ್ಆನಿನ ಬಾಹ್ಯ ಅರ್ಥವನ್ನು ಮಾತ್ರ ನೋಡಬೇಡ. ಪ್ರವಾದಿ ಆದಂ (ಅ.ಸ) ರನ್ನು ಸೃಷ್ಟಿಸಿದ ಜೇಡಿಮಣ್ಣನ್ನು ಮಾತ್ರ ನೋಡಿದ ನತದೃಷ್ಟ ಇಬ್ಲೀಸನ ಹಾಗೆ. ಅದು ನಿನ್ನನ್ನು ಪಶ್ಚಾತಾಪಿಯೂ ಪರಾಜಿತನೂ ಆಗಿಸುತ್ತದೆ. “ಖುರ್ಆನಿನ ಪ್ರತ್ಯಕ್ಷಾರ್ಥ ಓರ್ವ ಮನುಷ್ಯನ ಗೋಚರ ವ್ಯಕ್ತಿತ್ವದಂತೆ. ಅವನೊಂದಿಗೆ ಪಳಗಿದರೆ ತೆರೆದುಕೊಳ್ಳುವ ನೈಜವಾದ ಸ್ವಭಾವ ಬೇರೆಯೇ ಆಗಿರುತ್ತದೆ. ಅಂತೆಯೇ ಖುರ್ಆನಿನ ಅಕ್ಷರಗಳ ಆಳದಲ್ಲಿರುವ ವಿಶಾಲಾರ್ಥವೂ ಒಂದೇ ನೋಟಕ್ಕೆ ನಿಲುಕಲಾರದು.”
ಖುರ್ಆನಿನ ಮುತ್ತುಗಳನ್ನು ಚಿಪ್ಪಿಯೊಳಗಿಂದ ಆರಿಸಿಕೊಳ್ಳುವವನಿಗೆ ಅದರೊಂದಿಗೆ ನಿಕಟವಾದ ಸಂಬಂಧ ಮತ್ತು ಅಷ್ಟೇ ತಾಳ್ಮೆಯೂ ಅಗತ್ಯವಿದೆ. ಅದರ ರೂಪ ಮತ್ತು ಅರ್ಥವನ್ನು ಎದೆಗಿಳಿಸಿಕೊಳ್ಳುವುದು ಈ ರೀತಿಯ ಆಪ್ತತೆಯಿಂದ ಮಾತ್ರವೇ ಸಾಧ್ಯವಾಗುತ್ತದೆ ಎಂದು ರೂಮಿ ಹೇಳುತ್ತಾರೆ.
ಮೌಲಾನರ ಮಾತುಗಳನ್ನು ಅರ್ಥೈಸಿಕೊಂಡು ಅವರ ಕಾವ್ಯಗಳಲ್ಲಿನ ರೂಪಕಗಳು, ಉದ್ದೇಶಗಳನ್ನು ತಿಳಿದುಕೊಂಡರೆ ಮಾತ್ರ ಮಸ್ನವಿಯ ಸಾಲುಗಳಲ್ಲಿ ಅಡಕವಾಗಿರುವ ಅಲೌಕಿಕ ಪ್ರಣಯದ ಬಾಗಿಲುಗಳು ತೆರೆದುಕೊಳ್ಳುತ್ತದೆ. ಪ್ರಾಪಂಚಿಕ ಪ್ರಣಯಕ್ಕೂ ಇಲಾಹೀ ಪ್ರೇಮಕ್ಕೂ ನಡುವೆಯಿರುವ ಸೂಕ್ಷ್ಮವಾದ ಅಂತರವು ಗೋಚರವಾಗುತ್ತದೆ. ಒಂದೆಡೆ ರೂಮಿ ಹೀಗೆ ಹೇಳುತ್ತಾರೆ; “ಖುರ್ಆನ್ ಪಾರಾಯಣದಿಂದ ಅವುಗಳ ಅಕ್ಷರಗಳು ಮಾತ್ರ ಕೇಳಿಸುವುದಾದರೆ ನೀನೊಬ್ಬ ಕಿವುಡನಾಗಿರುವೆ, ಗೌಪ್ಯವಾಗಿರುವ ಆಶಯಗಳು ಕಿವಿಯಿಂದ ಕೇಳುವಂತವುಗಳಲ್ಲ. ಅದೊಂದು ನಿರ್ಮಲ ಮನಸ್ಸಿಗೆ ಎಡೆಬಿಡದೆ ಬಡಿಯುವ ಪ್ರೇಮದ ಅಲೆಗಳಾಗಿವೆ.”
ಖುರ್ಆನನ್ನು ಕಂಠಪಾಠ ಮಾಡಿದ ಮಾತ್ರಕ್ಕೆ ಅದು ನಮ್ಮದಾಗಲಾರದು. ಆ ರೀತಿ ಮಾಡುವವನು, ಮೇಲೆ ಪ್ರಸ್ತಾಪಿಸಿದ ಕಿವುಡನ ಹಾಗೆಯೇ ಆಗಿರುತ್ತಾನೆ ಎಂದು ರೂಮಿ ತನ್ನ ಓದುಗರಿಗೆ ಎಚ್ಚರಿಕೆಯನ್ನು ನೀಡುತ್ತಾರೆ. ಆದ್ದರಿಂದಲೇ ತಮ್ಮ ಬುದ್ಧಿಗೆ ನಿಲುಕುವ ವ್ಯಾಖ್ಯಾನವನ್ನು ನೀಡುವವನು ದ್ರೋಹಿಯೂ ಅವನು ಎಸಗುವುದು ದೊಡ್ಡ ಅನ್ಯಾಯವೂ ಆಗಿದೆಯೆಂದು ರೂಮಿ ಅಭಿಪ್ರಾಯಿಸುತ್ತಾರೆ. ತಮ್ಮದೇ ಅಭಿಪ್ರಾಯವನ್ನು ಖುರ್ಆನಿನ ಮೇಲೆ ಎತ್ತಿಕಟ್ಟುವವರ ಬಗ್ಗೆ ಅಸಮಾಧಾನವನ್ನು ತೀಕ್ಷ್ಣ ಸ್ವರದಲ್ಲಿ ಮೌಲಾನಾ ವ್ಯಕ್ತಪಡಿಸುವುದನ್ನು ಕಾಣಬಹುದು.
ಪ್ರತ್ಯಕ್ಷಾರ್ಥವನ್ನು ಮಾತ್ರ ಗ್ರಹಿಸಿದ ಖುರ್ಆನ್ ವ್ಯಾಖ್ಯಾನಗಾರರು ಅಂತರ್ಲೀನವಾದ ಅರ್ಥವ್ಯಾಪ್ತಿಯನ್ನು ತಲುಪಲಾರರು. ಅಂಥವರು ವಿಶಾಲವಾಗಿ ಹರಿಯುವ ಖುರ್ಆನಿನ ವೀಕ್ಷಣೆಗಳಿಗೆ ಕಟ್ಟೆಯನ್ನು ಕಟ್ಟುವ ಕೆಲಸವನ್ನಾಗಿದೆ ಮಾಡುವುದು. ಈ ರೀತಿಯ ವ್ಯಾಖ್ಯಾನಕಾರರು ಸ್ವತಃ ಸಂಕುಚಿತ ಮನೋಭಾವದವರೂ ಓದುಗರ ವಿಶಾಲ ಚಿಂತನಾ ಹರವನ್ನು ಕುಂಠಿತಗೊಳಿಸುವವರೂ ಆಗಿರುತ್ತಾರೆ. ಖುರ್ಆನ್ ಜೀವನ ಸಂಹಿತೆಯಾಗಿದ್ದು, ಈ ವ್ಯಾಖ್ಯಾನಗಳು ಮನುಷ್ಯ ಬದುಕನ್ನು ದಾರಿತಪ್ಪಿಸುವ ಸಾಧ್ಯತೆಯನ್ನು ರೂಮಿ ಎದುರು ನೋಡುತ್ತಾರೆ. ಇಂಥಹ ವ್ಯಾಖ್ಯಾನಗಳು ಪ್ರತ್ಯಕ್ಷದಲ್ಲಿ ಬದುಕಿಗೆ ಬೆಳಕಾಗಿರುವ ಖುರ್ಆನನ್ನು ಅನುಸರಿಸುವ ಬದಲು ಅದರ ಮೂಲವನ್ನು ಅಥವಾ ಆ ಬೆಳಕಿನ ದೀಪವನ್ನು ಹುಡುಕುವುದರಲ್ಲಿ ಸಮಯ ವ್ಯರ್ಥಗೊಳಿಸುವವರೊಂದಿಗೆ ರೂಮಿ ತುಲನೆ ಮಾಡುತ್ತಾರೆ.
ಖುರ್ಆನಿನ ಬಾಹ್ಯ ಅರ್ಥಗಳ ಮೂಲಕ ಜ್ಞಾನವನ್ನು ಬಯಸುವವರು ಪ್ರವಾದಿ ಮೂಸಾ(ಅ.ಸ)ರ ಬಡಿಗೆಯನ್ನು ಕದಿಯಲು ಪ್ರಯತ್ನಿಸಿದ ಮಾಂತ್ರಿಕರಂತೆ.
ರೂಮಿ ಆ ಬಗ್ಗೆ ಈ ರೀತಿ ಬರೆಯುತ್ತಾರೆ: ‘ಮಾಂತ್ರಿಕರು ಬಡಿಗೆಯನ್ನು ಕದಿಯಲು ಪ್ರಯತ್ನಿಸಿದಾಗ, ಅದು ಗಿಡುಗವಾಗಿ ಬದಲಾಯಿತು. ಆದ್ದರಿಂದ ಅವರು ಮೂಸಾ (ಅ.ಸ) ನಿಜವಾದ ಪ್ರವಾದಿ ಎಂದು ನಂಬಿದರು ಮತ್ತು ಅವರೊಂದಿಗೆ ಕ್ಷಮೆಯಾಚಿಸಿದರು.’
ಖುರ್ಆನನ್ನು ಪ್ರವಾದಿ ಮೂಸಾ (ಅ.ಸ)ರ ಬೆತ್ತದೊಂದಿಗೆ ರೂಮಿ ಹೋಲಿಸುವುದಕ್ಕೆ ಕೆಲವೊಂದು ಕಾರಣಗಳಿವೆ.
ಖುರ್ಆನ್ ಅಲ್ಪಸ್ವಲ್ಪ ಗ್ರಹಿಸಲು ಸಾಧ್ಯವಾದವರು ತಾವು ಅರ್ಥಮಾಡಿಕೊಂಡದ್ದು ಅಂತಿಮವೆಂದೂ ಖುರ್ಆನಿನ ನಿಜವಾದ ಸ್ವರೂಪ ಇದಾಗಿದೆಯೆಂದೂ ಭಾವಿಸಬಾರದು. ಅಂಥವರು ಮೂಸಾ(ಅ.ಸ) ರ ಬಡಿಗೆಯನ್ನು ಒಮ್ಮೆ ಅದೊಂದು ಬೆತ್ತವೆಂದೂ, ಮತ್ತೊಮ್ಮೆ ಹಾವೆಂದೂ, ಮಗದೊಮ್ಮೆ ಮತ್ತೊಂದೆಂದೂ ಅರ್ಥಮಾಡಿಕೊಂಡವರಂತೆಯೇ ಆಗುತ್ತದೆ. ವಾಸ್ತವದಲ್ಲಿ ಆ ಬಡಿಗೆಯು ಎಲ್ಲಾ ರೂಪವನ್ನು ತಾಳಲು ಸಾಮರ್ಥ್ಯವಿರುವ ಬಡಿಗೆಯೆಂಬುವುದನ್ನು ಅರ್ಥೈಸುವಲ್ಲಿ ಆ ಸಮೂಹ ವಿಫಲಗೊಂಡಿತು. ಖುರ್ಆನನ್ನು ಮನನ ಮಾಡಿಕೊಳ್ಳುವಾಗಲೂ ಈ ರೀತಿಯಲ್ಲಿ ನಾವು ಎಡವಬಾರದೆಂದು ಮೌಲಾನಾ ನೆನಪಿಸುತ್ತಾರೆ. ಖುರ್ಆನಿನ ನಿಜವಾದ ಅರ್ಥವನ್ನು ಅರಿಯುವುದಕ್ಕೆ ರೂಮಿಯು ತನ್ನ ‘ಫೀಹಿ ಮಾ ಫೀಹಿ’ ಗ್ರಂಥದಲ್ಲಿ ಒಂದಿಷ್ಟು ಉದಾಹರಣೆಯನ್ನು ನೀಡುತ್ತಾರೆ. ಅದು ಈ ಕೆಳಗಿನಂತಿವೆ;
- ಹಿಜಾಬನ್ನು ಧರಿಸಿದ ಮದುಮಗಳೊಂದಿಗೆ ರೂಮಿ ಖುರ್ಆನನ್ನು ತುಲನೆ ಮಾಡುತ್ತಾರೆ.”ನೀವು ಅವಳ ಹಿಜಾಬನ್ನು ಸರಿಸಿದ ಮಾತ್ರಕ್ಕೆ ನೈಜವಾದ ಚೆಲುವು ಅನಾವರಣಗೊಳ್ಳಬೇಕಿಲ್ಲ. ಅಂತೆಯೇ ಒಂದೇ ನೋಟಕ್ಕೆ ಖುರ್ಆನ್ ಅರ್ಥವಾಗಲಾರದು. ಅದರಲ್ಲಿನ ಆಧ್ಯಾತ್ಮಿಕತೆ ವೇದ್ಯಾವಾಗದೇ ಇರಲೂಬಹುದು. ಅದರರ್ಥ ಖುರ್ಆನನ್ನು ನಾವು ಓದುವಲ್ಲಿ, ಅರ್ಥೈಸುವಲ್ಲಿ ಎಡವಿದ್ದೇವೆಂದಾಗಿದೆ. ಕೆಲವೊಮ್ಮೆ ನಾವು ಎಸಗಿದ ಪಾಪಗಳ ಕಾರಣಕ್ಕೆ ಖುರ್ಆನ್ ನಮ್ಮನ್ನು ಅಲಕ್ಷಿಸಲೂಬಹುದು. ಖುರ್ಆನ್ ನನ್ನಲ್ಲಿ ವಿಶೇಷವಾದ ಚೆಲುವೇನೂ ಇಲ್ಲವೆಂದು, ನನ್ನಲ್ಲಿ ಯಾವುದೇ ಆಕರ್ಷಣೆ ಇಲ್ಲವೆಂದು ಹೇಳಲೂಬಹುದು. ಕಾರಣ ಖುರ್ಆನ್ ಆಪ್ತವಾಗುವುದು ಅದರೊಂದಿಗೆ ಆಪ್ತವಾಗುವ, ತನ್ನನ್ನು ಧ್ಯಾನಿಸುವ ಓದುಗರಿಗೆ ಮಾತ್ರವಾಗಿದೆ.(ಫೀಹಿ ಮಾ ಫೀಹಿ)
- “ಖುರ್ಆನಿನ ಒಳದನಿಗಳನ್ನು ನಿಮ್ಮ ಸೀಮಿತ ಬುದ್ಧಿಯಿಂದ ಗ್ರಹಿಸುವ ಬದಲು ಸ್ವತಃ ಖುರ್ಆನಿನೊಂದಿಗೆ ಕೇಳಿ ತಿಳಿದುಕೊಳ್ಳಿ. ಅದನ್ನು ಧ್ಯಾನಿಸಿ ಪಠಿಸಿ. ಹೃದಯಕ್ಕೆ ಹತ್ತಿರವಾಗುವಂತೆ ಬಿಗಿಯಾಗಿ ಹಿಡಿದುಕೊಳ್ಳಿ. ಅದನ್ನು ಸೇರುವ ದಾರಿಯಲ್ಲಿ ಚಲಿಸಿ, ಖುರ್ಆನಿನ ಸೇವಕರಾಗಿ. ಅದು ನಿಮಗೆ ಒಲಿದು ಬರದಿದ್ದರೆ ಮತ್ತೆ ಕೇಳಿ”(ಫೀಹಿ ಮಾ ಫೀಹಿ)
- “ಸೃಷ್ಟಿಕರ್ತ ಎಲ್ಲರೊಂದಿಗೂ ಮಾತನಾಡಬೇಕಿಲ್ಲ. ಭೌತಿಕ ಬದುಕಿನ ರಾಜರಿಗೂ ಸಹಾಯಕ್ಕೆಂದು ಮಂತ್ರಿ ಮಾಗದರು, ಸೇವಕರಿರುವಂತೆ ಅಲ್ಲಾಹನಿಗೂ ಭೂಮಿಯಲ್ಲಿ ದಾಸರಿದ್ದಾರೆ. ಆ ದಾಸರನ್ನು ಹುಡುಕುತ್ತಾ ಸಾಗಿ. ಅವರಲ್ಲಿ ನನ್ನನ್ನು ದರ್ಶಿಸಿ. ನಾನು ನಿಮ್ಮೆಡೆಗೆ ಕಳುಹಿಸಿದ ಪ್ರವಾದಿಗಳ ಹೆಜ್ಜೆಗಳನ್ನು ಅನುಸರಿಸಿ ಅವರೊಂದಿಗೆ ನನ್ನೆಡೆಗೆ ತಲುಪಿ”(ಫೀಹಿ ಮಾ ಫೀಹಿ)
(ಖುರ್ಆನಿನ ಭೋದನೆಗಳನ್ನು ತನ್ನ ಕಾವ್ಯದುದ್ದಕ್ಕೂ ವಿಶೇಷವಾಗಿ ಮಸ್ನವಿಯ ಸಾಲುಗಳಲ್ಲಿ ಪ್ರತಿಪಾದಿಸಿದವರು ಮೌಲಾನಾ ಜಲಾಲುದ್ದೀನ್ ರೂಮಿ. ‘ಪರ್ಷಿಯನ್ ಖುರ್ಆನ್’ ಎಂದು ಜನಪ್ರಿಯತೆ ಗಳಿಸಿದ ಮಸ್ನವಿಯ ಸಾರ-ಸತ್ವವನ್ನು ಸವಿಯುವಲ್ಲಿ, ಅದರ ಆಧ್ಯಾತ್ಮಿಕ ಚಿಂತನೆಗಳನ್ನು ಎದೆಗಿಳಿಸಿಕೊಳ್ಳುವಲ್ಲಿ ಓದುಗರು, ಅನುವಾದಕರು ಎಡವುತ್ತಿರುವುದು ಸದ್ಯದ ಪರಿಸ್ಥಿತಿಯಾದರೆ, ಅದನ್ನೆಲ್ಲಾ ಮೀರಿ ಮಸ್ನವಿ ಕನ್ನಡದ ಓದುಗರಿಗೂ ದಕ್ಕಲಿ ಎಂಬುವುದು ನಮ್ಮ ಅಭಿಲಾಷೆಯೂ, ಸದಾಶಯವೂ ಹೌದು.)
ಮೂಲ: ಜೋಸೆಫ್ ಲ್ಯಾಂಬೋಡ್
ಕನ್ನಡಕ್ಕೆ: ಎಂ.ಎ ಮುಜೀಬ್ ಅಹಮದ್