ಅಮೀರ್ ಖುಸ್ರೋ ಕಾವ್ಯಲೋಕ

ಭಾರತದ ಕೀರ್ತಿಯನ್ನು ದೇಶ- ವಿದೇಶಗಳಲ್ಲಿ ಪಸರಿಸಿದ ಅನೇಕ ಮಹಾನುಭಾವರಿದ್ದಾರೆ. ಅಂತಹ ಮಹಾನ್ ಚೇತನರಲ್ಲಿ ದಾರ್ಶನಿಕ, ಇತಿಹಾಸಕಾರ, ಗಣಿತಜ್ಞ, ಸಂತ, ರಾಜಕೀಯ ತಜ್ಞ, ಕವಿ ಮುಂತಾದ ಹಲವು ಪ್ರತಿಭಾ ಸಂಪನ್ನ ಮಹಾಪುರುಷ ಅಮೀರ್ ಖುಸ್ರೋ (1235-1325) ಕೂಡ ಒಬ್ಬರು. ಮಧ್ಯಕಾಲೀನ ಭಾರತದ ಇತಿಹಾಸದಲ್ಲಿ ಸಾಹಿತ್ಯ, ಇತಿಹಾಸ, ರಾಜಕೀಯ, ಧರ್ಮ, ಅಧ್ಯಾತ್ಮ, ಭಾಷಿಕತೆ ಮುಂತಾದವುಗಳ ಸಂದರ್ಭದಲ್ಲಿ ಅಮೀರ್ ಖುಸ್ರೋರವರ ಉಲ್ಲೇಖವನ್ನು ಗೌರವಪೂರ್ವಕವಾಗಿ ಮಾಡಲಾಗುತ್ತದೆ. ತಮ್ಮ ಚಟುವಟಿಕೆ ಹಾಗೂ ವೈವಿಧ್ಯಮಯ ಅಭಿರುಚಿಗಳಿಂದಾಗಿ ಅಮೀರ್ ಖುಸ್ರೋ ಒಂದು ಅಪರೂಪದ ಬಹುಮುಖ ಪ್ರತಿಭೆ. ಮಾನವೀಯತೆ ಹಾಗೂ ಸಮನ್ವತೆಯ ಧ್ಯೇಯೋದ್ದೇಶ ಸಾಧನೆಗಾಗಿ ತಮ್ಮ ಜೀವನವನ್ನೆ ಮುಡುಪಾಗಿಟ್ಟರು.

ಅಮೀರ್ ಖುಸ್ರೋ ಖಡೀಬೋಲಿ ಅಥವಾ ಹಿಂದುವಿ (ಹಿಂದಿ)ಯ ಪ್ರಥಮ ಕವಿ, ಉದಾರವಾದಿ ಸೂಫಿ ಚಿಂತನೆಯ ಪ್ರವರ್ತಕ, ಹಿಂದೂ-ಮುಸ್ಲಿಮ್ ಭಾವೈಕ್ಯತೆಯ ಹರಿಕಾರ, ಸಾಂಸ್ಕೃತಿಕ ಸಮನ್ವಯದ ಸೇತು ಚೇತನ, ಭಾರತೀಯ ಸಂಗೀತದ ಅನನ್ಯ ಪ್ರಯೋಗಶೀಲ, ‘ಜನನಿ- ಜನ್ಮಭೂಮಿ’ ಪರಿಕಲ್ಪನೆಯನ್ನು ಹೊಂದಿರುವ ಅದಮ್ಯ ರಾಷ್ಟ್ರಪ್ರೇಮಿ. ಭಾರತೀಯ ಇತಿಹಾಸದ 750 ವರ್ಷಗಳಲ್ಲಿ ಇಂತಹ ಇನ್ನೊಬ್ಬ ವ್ಯಕ್ತಿಯನ್ನು ಕಾಣಲಾರೆವು. ಅಮೀರ್ ಖುಸ್ರೋ ಅನೇಕ ಭಾಷೆಗಳಲ್ಲಿ ಪಂಡಿತರಾಗಿದ್ದರು ಹಾಗೂ ಬಹು ಭಾಷೆಗಳಲ್ಲಿ ಕಾವ್ಯ ರಚನೆ ಮಾಡಿರುವರು. ಆದಾಗ್ಯೂ ದೇಶ, ಭಾಷೆ, ಈ ನೆಲದ ಜನಸಾಮಾನ್ಯರ ಆಡುಮಾತು ಹಿಂದಿ (ಹಿಂದುವಿ) ಭಾಷೆಯ ಬಗ್ಗೆ ಅವರಿಗೆ ವಿಶೇಷ ಪ್ರೇಮವಿತ್ತು. ಹೀಗಾಗಿ ಫಾರ್ಸಿ ಶೈಲಿಯಲ್ಲಿ ಹಿಂದಿ ಭಾಷೆಯ ಪ್ರಯೋಗ ಮಾಡಿದ್ದು ಅತೀ ವಿಶಿಷ್ಟವಾಗಿದೆ. ಇದು ಸಮಕಾಲೀನ ಸಂದರ್ಭದಲ್ಲೂ ಭಾಷಿಕ ಸಮನ್ವಯತೆ ಸಾಧಿಸಲು ಮಹತ್ವಪೂರ್ಣ ಹೆಜ್ಜೆಯಾಗಿದೆ. ಅರಬ್ಬಿ- ಫಾರ್ಸಿಯ ಪ್ರಾಬಲ್ಯದ ಕಾಲಹಂತದಲ್ಲಿ ಹಿಂದುಸ್ತಾನದ ಭಾಷೆ ಖಡಿಬೋಲಿಯನ್ನು ಸಾಹಿತ್ಯಿಕವಾಗಿ ಸಮೃದ್ಧಗೊಳಿಸಿದ್ದು ಉಲ್ಲೇಖನೀಯವಾಗಿದೆ. ಹಿಂದಿ ಭಾಷೆಯ ಸಾಹಿತ್ಯಿಕ ಪ್ರಯೋಗಶೀಲತೆಯಿಂದಾಗಿ ಹಿಂದಿ ಭಾಷಿಕರಿಗೆ ಅಮೀರ ಖುಸ್ರೋ ಅಭಿಮಾನದ ಪುರುಷರಾಗಿದ್ದಾರೆ.

ಅಮೀರ್ ಖುಸ್ರೊ ಅವರ ಕಾವ್ಯದ ಇನ್ನೊಂದು ವಿಶಿಷ್ಟತೆ ಅವರ ಅಗಾಧ ರಾಷ್ಟ್ರಪ್ರೇಮ, ಅವರ ಸಾಹಿತ್ಯಿಕ ರಚನೆಗಳಲ್ಲಿ ದೇಶಪ್ರೇಮ, ದೇಶಭಕ್ತಿ, ಭಾರತ ಮಹಿಮೆ ಓತಪ್ರೋತವಾಗಿದೆ. ತಮ್ಮ ಕವಿತೆಗಳಲ್ಲಿ ಭಾರತದ ವೈವಿಧ್ಯತೆಯ ಮನಮೋಹಕ ವರ್ಣನೆ ಮಾಡಿದ್ದಾರೆ. ಭಾರತದ ಜ್ಞಾನ, ಭಾಷೆ, ಸಾಂಸ್ಕೃತಿಕ ಹಾಗೂ ಧಾರ್ಮಿಕ ಹಿರಿಮೆಯನ್ನು ತಮ್ಮ ಕಾವ್ಯದೆಲ್ಲಡೆ ಹೃದಯಸ್ಪರ್ಶಿಯಾಗಿ ವರ್ಣಿಸಿದ್ದಾರೆ. ಹೀಗಾಗಿ ಅಮೀರ್ ಖುಸ್ರೋ ಅಪರೂಪದ ದೇಶಾಭಿಮಾನಿ ಕವಿ.

ಹದಿಮೂರನೆ ಶತಮಾನದಲ್ಲಿ, ಚೆಂಗೇಸ್ ಖಾನ್‌ನ ಆಳ್ವಿಕೆಯ ಅವಧಿಯಲ್ಲಿ, ಮೊಘಲರ ದಬ್ಬಾಳಿಕೆಯಿಂದ ಬೇಸತ್ತು, ತುರ್ಕಿಯ ಲಾಚಿನ್ ಪಂಗಡದ ಸರದಾರ ಅಮೀರ್ ಸೈಫುದ್ದೀನ್ ಮೊಹಮ್ಮದ್ ಭಾರತಕ್ಕೆ ಬಂದು, ಉತ್ತರ ಪ್ರದೇಶದ ಈಟಾ ಜಿಲ್ಲೆಯ ಪಟಿಯಾಲಿ ಎಂಬ ಸ್ಥಳದಲ್ಲಿ ನೆಲೆಸಿದರು. ಸೌಭಾಗ್ಯದಿಂದ ಸುಲ್ತಾನ್ ಶಮ್ಸುದ್ದೀನ್ ಅಲ್ತಮಷ್‌ನ ದರ್ಬಾರಿನ ಸಂಪರ್ಕವಾಗಿ ಸೈನಿಕ ಅರ್ಹತೆಯಿಂದಾಗಿ ಸರದಾರರಾಗಿ ನಿಯುಕ್ತಿಗೊಂಡರು. ಇವರು ಅಮೀರ್ ಖುಸ್ರೋವಿನ ತಂದೆ. ಇಮಾದುಲ್ ಮುಲ್ಕನ ಪುತ್ರಿಯ ಜೊತೆ ಇವರ ವಿವಾಹವಾಯಿತು. ಇವರಿಗೆ ಇಜಾದುದ್ದೀನ್ ಅಲಿಶಾಹ, ಅಬುಲ್ ಹಸನ್ (ಅಮೀರ್ ಖುಸ್ರೊ) ಮತ್ತು ಹಿಸಾಮುದ್ದೀನ್ ಕುತ್‌ಲಗ್ ಎಂಬ ಮೂವರು ಪುತ್ರರು ಜನ್ಮ ತಾಳಿದರು. ಈ ಮೂವರು ಸಹೋದರರಲ್ಲಿ ಅಮೀರ್ ಖುಸ್ರೊ ಅತೀವ ಬುದ್ಧಿಶಾಲಿಯಾಗಿದ್ದರು. ಇವರ ಜನ್ಮವು ಕ್ರಿ.ಶ.1253(ಹಿ.653)ರಲ್ಲಿ ಆಯಿತೆಂದು ತಿಳಿದುಬರುತ್ತದೆ.

ಖುಸ್ರೋರವರು ತಮ್ಮ ನಾಲ್ಕನೆಯ ವಯಸ್ಸಿನಲ್ಲಿ ತಂದೆಯ ಜೊತೆ ದೆಹಲಿಗೆ ಬಂದು, ಖಾಜಿ ಅಸದುದ್ದೀನ್ ಮಹ್ಮದ್‌ರ ಶಿಷ್ಯತ್ವದಲ್ಲಿ ಶಿಕ್ಷಣ ಆರಂಭಿಸಿದರು. ತದನಂತರ ಅವರ ತಂದೆಯವರು ಉತ್ತಮ ವಿದ್ಯಾರ್ಜನೆಗಾಗಿ ಪ್ರಸಿದ್ಧ ಸೂಫಿ ಸಂತರಾದ ಹಜ್ರತ್ ಖ್ವಾಜಾ ನಿಜಾಮುದ್ದೀನ್‌ರವರ ಚರಣಾರವಿಂದದಲ್ಲಿ ಅರ್ಪಿಸಿ, ಅವರ ಶಿಷ್ಯ(ಮುರೀದ್)ನನ್ನಾಗಿ ಮಾಡಿದರು. ಏತನ್ಮದ್ಧೆ ಖುಸ್ರೋ ಅವರು ಎಂಟು ವರ್ಷದವರಿದ್ದಾಗ ಒಂದು ಯುದ್ಧದಲ್ಲಿ 85 ವರ್ಷದ ಅವರ ತಂದೆ ಸೈಫುದ್ದೀನ್ ಮಹಮ್ಮದರ ನಿಧನವಾಯಿತು. ವಿವಶಳಾದ ಅವರ ತಾಯಿಯು ತನ್ನ ತಂದೆ ಇಮಾದುಲ್ ಮುಲ್ಕ್ ಮನೆಗೆ ತೆರಳಬೇಕಾಯಿತು. 113 ವಯಸ್ಸಿನ ವಯೋವೃದ್ಧ ಇಮಾದುಲ್ ಮುಲ್ಕ್ ಒಬ್ಬ ಪ್ರತಿಷ್ಠಿತ ವ್ಯಕ್ತಿಯಾಗಿದ್ದರು. ಇವರು ಖುಸ್ರೋವಿಗೆ ಹಲವು ವಿದ್ಯೆಗಳ ಅಧ್ಯಯನಕ್ಕೆ ವ್ಯವಸ್ಥೆ ಮಾಡಿದರು. ಇವರ ಮನೆಯಭಾಷೆ ಹಿಂದಿ(ಹಿಂದುವಿ) ಆಗಿತ್ತು. ಹಿಂದಿಯ ಜೊತೆಗೆ ಸಂಸ್ಕೃತ, ಅರಬ್ಬಿ, ಫಾರ್ಸಿ, ತುರ್ಕಿ ಹಾಗೂ ಭಾರತೀಯ ಇನ್ನಿತರ ಪ್ರಾಂತೀಯ ಭಾಷೆಗಳ ಜ್ಞಾನವಿತ್ತು. ಅಮೀರ್ ಖುಸ್ರೋರವರು ತಮ್ಮ ಕೃತಿ ‘ತೊಹಫತುಲ್- ಸಗ್ರ್’ ನಲ್ಲಿ ದೇವರ ಕೃಪೆಯಿಂದ ಹನ್ನೆರಡನೆ ವಯಸ್ಸಿನಲ್ಲಿ ತಾವು ಕವಿತೆ ಮತ್ತು ರುಬಾಯಿ ರಚನೆ ಮಾಡುತ್ತಿದ್ದರೆಂದು ಹಾಗೂ ಇದನ್ನು ಕಂಡು ಅನೇಕ ವಿದ್ವಾನ್ ಗುರುಗಳು ಆಶ್ಚರ್ಯ ಪಡುತ್ತಿದ್ದಾರೆಂದು ಉಲ್ಲೇಖಿಸಿದ್ದಾರೆ. ಖುಸ್ರೋ 17 ವರ್ಷದ ಚಿಕ್ಕ ವಯಸ್ಸಿನಲ್ಲಿ ಒಬ್ಬ ಕವಿಯಾಗಿ, ಕವಿಗೋಷ್ಠಿಗಳ ಕಣ್ಮಣಿಯಾಗಿದ್ದರು. ಮಧುರ ಕಂಠದಲ್ಲಿ ಅವರ ಶೃಂಗಾರ ಕವಿತೆಗಳು ಕವಿಗೋಷ್ಠಿಯಲ್ಲಿ ಬಿರುಗಾಳಿಯನ್ನೆ ಎಬ್ಬಿಸುತ್ತಿದ್ದವು. ಶ್ರೋತೃಗಳು ಅವರ ಕವಿತಾ ಪ್ರಸ್ತುತಿಯಿಂದ ಮಂತ್ರಮುಗ್ಧರಾಗುತ್ತಿದ್ದರು. ಅವರು ಯಾರನ್ನು ನಿರ್ದಿಷ್ಟವಾಗಿ ಕಾವ್ಯ ಗುರುವಾಗಿ ಹೊಂದದೇ ಇದ್ದರೂ, ಶಮ್ಸುದ್ದೀನ್ ಖ್ವಾರಿಜಿಯವರನ್ನು ಕಾವ್ಯಗುರು ಎಂದು ಸ್ವೀಕರಿಸಿದ್ದರು. ಹೀಗಾಗಿ ತಮ್ಮ ಪ್ರಸಿದ್ಧ ಕೃತಿ ‘ಪಂಜ್ ಗಂಜ್’ನ್ನು ಖ್ವಾರಿಜಿಯವರಿಗೆ ಪರಿಷ್ಕರಣೆಗೆ ಅರ್ಪಿಸಿದ್ದರು. ನಿರ್ದಿಷ್ಟ ಕಾವ್ಯಗುರುವನ್ನು ಹೊಂದದೇ ಇದ್ದರೂ, ಖುಸ್ರೋರವರು ಗಜಲ್ ಕ್ಷೇತ್ರದಲ್ಲಿ ಸಾದಿಯವರಿಂದ, ಮಸ್ನವಿ ಕ್ಷೇತ್ರದಲ್ಲಿ ನಿಜಾಮಿಯವರಿಂದ, ಸೂಫಿ ಕಾವ್ಯಕ್ಷೇತ್ರದಲ್ಲಿ ಕಾಖಾನಿ ಹಾಗೂ ಸನಾಯಿ ಮತ್ತು ಖಸೀದಾ ಕ್ಷೇತ್ರದಲ್ಲಿ ಕಮಾಲ್ ಇಸ್ಮಾಯಿಲ್‌ರಿಂದ ಅತ್ಯಂತ ಪ್ರಭಾವಿತರಾಗಿದ್ದರು. ಖುಸ್ರೋರವರು ಏಕಕಾಲಕ್ಕೆ ಕವಿ, ಗದ್ಯಲೇಖಕ, ಕಲಾಕಾರ, ಸಂಗೀತಜ್ಞ, ಸಾಹಸಿ ಸೈನಿಕ ಹಾಗೂ ಸಂತ ಹೀಗೆ ಹಲವು ವೈಶಿಷ್ಟ್ಯಗಳ ಸಂಗಮವಾಗಿದ್ದರು. ಇಂತಹ ವಿಭಿನ್ನ ಸಾಹಿತ್ಯ ಸಿದ್ಧಿಗಳ ಕವಿ- ಲೇಖಕ ಭಾರತ ಮತ್ತು ಇರಾನ್‌ನಲ್ಲಿ ಬೇರೆ ಯಾರೂ ಆಗಿರುವುದಿಲ್ಲ.

ಜಾಮಿಯವರ ಪ್ರಕಾರ ಖುಸ್ರೋ ಅವರಿಂದ ರಚಿತವಾದ ಗ್ರಂಥಗಳ ಸಂಖ್ಯೆ ತೊಂಬತ್ತೆರಡು. ಆದರೆ ತೊಂಬತ್ತೊಂಬತ್ತು ಕಾವ್ಯಕೃತಿಗಳೇ ಲಭ್ಯವಿವೆ. ಇವರ ಕಾವ್ಯಗಳು ಶೃಂಗಾರ, ಶಾಂತ, ವೀರ ಮತ್ತು ಭಕ್ತಿ ರಸಗಳ ಸುಂದರ ಸಮ್ಮಿಲನವಾಗಿವೆ.

ಅಮೀರ್ ಖುಸ್ರೋ 1275ರಿಂದ 1325 ರವರೆಗೆ ರಾಜಕೀಯ, ಆಸ್ಥಾನಿಕ ಮತ್ತು ಸೈನಿಕ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದರು. ರಾಜಕೀಯ ವಿದ್ಯಮಾನಗಳ ಅನುಭವ ಖುಸ್ರೋ ಅವರಿಗೆ ಇದ್ದಷ್ಟು ಬೇರೆ ಯಾವ ಕವಿ- ಲೇಖಕನಿಗೂ ಇರಲಿಲ್ಲ. ಗುಲಾಮಿ ರಾಜವಂಶದ ಪತನದಿಂದ ಆರಂಭಿಸಿ, ತುಘಲಕ್ ವಂಶದ ಉಚ್ಛ್ರಾಯವನ್ನು ಕಣ್ಣಾರೆ ಕಂಡವರಾಗಿದ್ದರು. ದಿಲ್ಲಿಯ ಸಿಂಹಾಸನದಲ್ಲಿ ಹನ್ನೊಂದು ಸುಲ್ತಾನರು ಸಿಂಹಾಸನರೋಹಣಕ್ಕೆ ಸಾಕ್ಷಿಯಾಗಿದ್ದರು ಹಾಗೂ ಸ್ವಯಂ ಏಳು ಸುಲ್ತಾನರ ಆಸ್ಥಾನದಲ್ಲಿ ಸೇವಾ ನಿರತರಾಗಿದ್ದರು. ಭಾರತ ಇತಿಹಾಸದ ತುಂಬಾ ವಿಷಮ ಪರಿಸ್ಥಿತಿಯನ್ನು ಕಣ್ಣಾರೆ ಕಂಡವರಾಗಿದ್ದರು. ಆದರೂ ಅದ್ಯಾವುದು ತಿಲಮಾತ್ರವೂ ಖುಸ್ರೋ ಅವರನ್ನು ಪ್ರಭಾವಿಸಲಿಲ್ಲ. ಅವರು ರಾಜನೀತಿಯ ಕಟೆಕಟೆಯಲ್ಲಿದ್ದರೂ ಅದರಿಂದ ಅವರು ಅತೀವ ದೂರವಿದ್ದರು. ಇದರರ್ಥ ಖುಸ್ರೋ ರಾಜನೀತಿ ಅನಭಿಜ್ಞರಾಗಿದ್ದರು ಎಂಬರ್ಥವಲ್ಲ. ಅವರು ರಾಜನೀತಿಯನ್ನು ಸೂಕ್ಷ್ಮವಾಗಿ ಅವಲೋಕಿಸಿದ್ದರು. ಇದನ್ನು ಅವರ ಐತಿಹಾಸಿಕ ಗ್ರಂಥಗಳಿಂದ ತಿಳಿಯಬಹುದು. ಈ ಕಾಲದಲ್ಲಿ ತಮ್ಮ ವೀರತ್ವ, ಬುದ್ಧಿವಂತಿಕೆ, ಸೂಕ್ಷ್ಮ ಬುದ್ಧಿಮತ್ತೆ, ಪ್ರಾಮಾಣಿಕತೆ, ಪ್ರಸನ್ನ ಚಿತ್ತ ಹಾಗೂ ಸಾಹಿತ್ಯಿಕ ವಿಶೇಷತೆಗಳಿಂದಾಗಿ ಒಬ್ಬ ನುರಿತ ಹಾಗೂ ದಕ್ಷ ಆಸ್ಥಾನಕಾರನಾಗಿ ಹೊರಹೊಮ್ಮಿದರು.

ಅಮೀರ್ ಖುಸ್ರೊ ಮೊತ್ತಮೊದಲಿಗೆ ಸುಲ್ತಾನ್ ಬಲ್ಪನ್‌ನ ಸಹೋದರನ ಪುತ್ರ ಮಲಿಕ್ ಅಲಾವುದ್ದೀನ್ ಕಶಲಿಖಾನ್ ಉರ್ಫ್ರ ಛಜ್ಜುವಿನ ದರ್ಬಾರಿನಲ್ಲಿ ಸೇವಾನಿರತರಾದರು. ಖುಸ್ರೋ ಅವನ ಗುಣಗಾನದಲ್ಲಿ ಖಸೀದಾಗಳನ್ನು ಬರೆದರು. ಆದರೆ ಒಂದು ರಾತ್ರಿ ಬಲ್ಬನ್‌ನ ಪುತ್ರ ಬೋಗ್ರಾಖಾನ್ ಮಲಿಕ್ ಛಜ್ಜು ಮಹಫಿಲ್‌ನಲ್ಲಿ ಭಾಗವಹಿಸಿದನು. ಈ ಗೋಷ್ಠಿಯಲ್ಲಿ ಖುಸ್ರೋ ತನ್ನ ಮನೋರಮೆಯ ಕಾವ್ಯವನ್ನು ಮಧುರ ಕಂಠದಲ್ಲಿ ವಾಚನ ಮಾಡಿದ್ದರು. ಬೋಗ್ರಾಖಾನ್ ಖುಸ್ರೋವಿನ ಕಾವ್ಯದಿಂದ ಅತೀವ ಪ್ರಸನ್ನನಾಗಿ ಒಂದು ತುಂಬಿದ ಹರಿವಾಣ ಬೆಳ್ಳಿಯ ನಾಣ್ಯಗಳನ್ನು ಕಾಣಿಕೆಯಾಗಿ ನೀಡಿದ್ದನು. ಈ ವರ್ತನೆ ಕಶಲಿಖಾನ್‌ನಿಗೆ ಅಪಥ್ಯವಾಯಿತು. ಖುಸ್ರೋ ಸಾಧ್ಯವಿರುವ ಎಲ್ಲಾ ರೀತಿಯಿಂದ ಕಶಲಿಯ ಮನವೊಲಿಸಲು ಪ್ರಯತ್ನಿಸಿದರು. ಆದರೆ ಅದು ನಿರರ್ಥಕವಾದಾಗ ಖುಸ್ರೋ ಅವರು ಅಲ್ಲಿಂದ ಪಲಾಯನ ಮಾಡಿ, ಬೊಗರಾಖಾನ್‌ನ ದರ್ಬಾರನ್ನು ಸೇರಿದರು. ಕೆಲವು ದಿನಗಳ ಬಳಿಕ ಬಲ್ಬನ್, ಬೋಗರಾಖಾನನ್ನು ತನ್ನ ಜೊತೆಗೆ ಲಖ್ನೋಟಿಗೆ ತೆರಳಲು ಆದೇಶಿಸಿದನು. ಬೋಗರಾ ಖಾನ್ ಖುಸ್ರೋರನ್ನು ಸಹ ಜೊತೆಯಲ್ಲಿ ಬರಲು ಸೂಚಿಸಿದನು. ಲಖ್ನೋಟಿಯ ವಿಜಯ ಪ್ರಾಪ್ತಿಯ ಬಳಿಕ ಬಲ್ಬನ್, ಬೋಗರಾ ಖಾನನನ್ನು ಲಖ್ನೋಟಿ ಮತ್ತು ಬಂಗಾಳದ ಅಧಿಕಾರಿಯಾಗಿ ನೇಮಿಸಿದನು. ಬೋಗರಾಖಾನ್‌ನು ಖುಸ್ರೋವನ್ನು ಲಖ್ನೋಟಿಯಲ್ಲಿ ತನ್ನ ಜೊತೆಯಲ್ಲಿಯೇ ಇರಿಸಿಕೊಳ್ಳಲು ಬಯಸಿದ್ದನು. ಆದರೆ ಬೊಗರಾಖಾನ್ ಮತ್ತು ಕಶರಿಖಾನ್‌ರವರ ಪರಸ್ಪರ ವೈಮನಸಿನಿಂದಾಗಿ ಖುಸ್ರೋ ಅಲ್ಲಿರಲು ಬಯಸದೇ ಸೈನ್ಯದ ಜೊತೆ ದೆಹಲಿಗೆ ಹಿಂತಿರುಗಿದನು.

ದೆಹಲಿಯಲ್ಲಿ ವಿಜಯದ ಸಂಭ್ರಮವನ್ನು ಭರ್ಜರಿಯಾಗಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಬಲ್ಬನ್‌ನ ಇನ್ನೋರ್ವ ಸಹೋದರನ ಪುತ್ರ ಮುಲ್ತಾನಿನ ಆಡಳಿತಗಾರನಾಗಿದ್ದ ಸುಲ್ತಾನ್ ಮಹ್ಮದ್ ಮುಲ್ತಾನಿನಿಂದ ದೆಹಲಿಗೆ ಆಗಮಿಸಿದ್ದನು. ಅಲ್ಲಿ ಖುಸ್ರೋವಿನ ಕಾವ್ಯವಾಚನವನ್ನು ಕೇಳಿ ಅತೀವ ಪ್ರಭಾವಿತನಾಗಿ, ಖುಸ್ರೋವನ್ನು ತನ್ನ ಜೊತೆ ಮುಲ್ತಾನಿಗೆ ಕರೆದುಕೊಂಡು ಹೋಗಿ, ತನ್ನ ಆಸ್ಥಾನಿಕನಾಗಿ ಸೇರಿಸಿಕೊಂಡನು. ಆಗ ಖುಸ್ರೋ ಅವರ ವಯಸ್ಸು ಕೇವಲ ಇಪ್ಪತ್ತೆಂಟು ವರ್ಷ ಆಗಿತ್ತು.

ಸುಲ್ತಾನ್ ಮೊಹಮ್ಮದ್ ಅತ್ಯಂತ ದಕ್ಷ ಆಡಳಿತಗಾರ, ಕಾವ್ಯ- ಪ್ರೇಮಿ ಹಾಗೂ ಉದಾರ ಸ್ವಭಾವದ ವ್ಯಕ್ತಿಯಾಗಿ ಅವನು ಸುಮಾರು ಇಪ್ಪತ್ತು ಸಾವಿರ ದ್ವಿಪದಿಗಳ ಕಾವ್ಯ- ಸಂಗ್ರಹವನ್ನು ಸಹ ರಚಿಸಿದ್ದನು. ಖುಸ್ರೋ ಅವನ ಆಸ್ಥಾನದಲ್ಲಿ ಐದು ವರ್ಷ ಅತ್ಯಂತ ಸಂತಸದಿಂದ ಮತ್ತು ನೆಮ್ಮದಿಯಿಂದ ಕಳೆದರು. ಆದರೆ ಕ್ರಿ.ಶ. 1284ರಲ್ಲಿ ಮೊಘಲರು ಪಂಜಾಬಿನ ಮೇಲೆ ಆಕ್ರಮಣ ಮಾಡಿದರು. ಆದರೆ ರಾಜಕುಮಾರನು ದಿಯಾಲ್‌ಪುರದ ಈ ಯುದ್ಧದಲ್ಲಿ ಮಡಿದನು. ಖುಸ್ರೋ ಸಹ ಯುದ್ಧಭೂಮಿಯಲ್ಲಿ ರಾಜಕುಮಾರನ ಜೊತೆಗಿದ್ದನು. ಮೊಘಲರು ಖುಸ್ರೋನನ್ನು ಬಂಧಿಯಾಗಿಸಿ ಬಲಖ್ ಮತ್ತು ಹೇರಾತ್‌ಗೆ ಕರೆದೊಯ್ದರು. ಅಸಂಖ್ಯಾತ ಸಂಕಷ್ಟಗಳ ಬಳಿಕ ಎರಡು ವರ್ಷದ ತರುವಾಯ ಖುಸ್ರೋಗೆ ಇಲ್ಲಿಂದ ಬಿಡುಗಡೆ ದೊರೆಯಿತು. ಆಗ ತನ್ನ ಜನ್ಮಭೂಮಿ ಪಟಿಯಾಲಿಗೆ ಹಿಂತಿರುಗಿದರು. ಖುಸ್ರೋ ಸುಲ್ತಾನ್ ಮೊಹಮ್ಮದನ ಸ್ಮೃತಿಯಲ್ಲಿ ಕೆಲವು ಶೋಕಗೀತೆಗಳನ್ನು (ಮರ್ಸಿಯಾ) ಬರೆದರು. ಆ ಕವನಗಳನ್ನು ಗಿಯಾಸುದ್ದೀನ್ ಬಲ್ಬನ್‌ನ ಆಸ್ಥಾನದಲ್ಲಿ ಓದಿದರು. ಬಲ್ಬನ್ ಮೇಲೆ ಈ ಶೋಕಗೀತೆಗಳ ಪ್ರಭಾವ ಎಷ್ಟಾಯಿತೆಂದರೆ ಅವನು ಸತತವಾಗಿ ರೋಧಿಸಿ, ಜ್ವರದಿಂದ ಬಳಲಿ, ಕೇವಲ ಮೂರೇ ದಿನಗಳಲ್ಲಿ ಸಾವನಪ್ಪಿದನು ಎಂದು ಹೇಳಲಾಗುತ್ತದೆ.

ತದನಂತರ ಅಮೀರ್ ಖುಸ್ರೋ ಅಮೀರ್ ಅಲಿ ಮೀರ್ ಜಾಮ್‌ದಾರ ಅವರ ಜೊತೆಯಾದರು. ಹಾಗೂ ಅವರಿಗಾಗಿ ‘ಅಸ್ಪ್ನಾಮಾ’ ಕೃತಿಯನ್ನು ರಚಿಸಿದರು. ಅಮೀರ್ ಅಲಿ ಜಾಮ್‌ದಾರ್ ಅವಧ್‌ನ ಸುಬೇದಾರ್ ಆಗಿ ನಿಯುಕ್ತಿಗೊಂಡಾಗ, ಅಮೀರ್ ಖುಸ್ರೋ ಸಹ ಅವರ ಜೊತೆ ಅಲ್ಲಿಗೆ ಹೋದರು. ಎರಡು ವರ್ಷದ ಬಳಿಕ ಕ್ರಿ.ಶ. 1288ರಲ್ಲಿ ದೆಹಲಿಗೆ ವಾಪಸಾದರು. ಆಗ ಕೇಕುಬಾದ್ ಖುಸ್ರೋ ಅವರನ್ನು ತನ್ನ ದರ್ಬಾರಿಗೆ ಆಮಂತ್ರಿಸಿದರು. ಕೇಕುಬಾದ್‌ನ ಅಂತ್ಯದವರೆಗೆ ಅವರು ಅವನ ಶಾಹಿದರ್‌ಬಾರ್‌ನಲ್ಲಿಯೇ ಉಳಿದರು. ಇಲ್ಲಿ ಖುಸ್ರೋ ಅವರು ಕ್ರಿ.ಶ. 1289ರಲ್ಲಿ ‘ಕಿರಾಯೆಸ್ಸಾದೇನ್’ ಎಂಬ ಕೃತಿಯನ್ನು ಕೇವಲ ಆರು ತಿಂಗಳಲ್ಲಿ ರಚಿಸಿದರು. ಇದರಲ್ಲಿ ಖುಸ್ರೋ ಅವರು ಕೇಕುಬಾದ್ ತನ್ನ ತಂದೆ ಬೊಗರಾ ಖಾನ್‌ನನ್ನು ಭೇಟಿಯಾದ ವಿವರಗಳ ಉಲ್ಲೇಖವಿದೆ. ಕೇಕುಬಾದ್‌ನ ದರ್ಬಾರಿನಲ್ಲಿ ಖುಸ್ರೋ ಅವರಿಗೆ ‘ಮುಲ್ಕ್-ಉಶ್-ಶೋರಾ’ (ರಾಷ್ಟ್ರಕವಿ) ಎಂದು ಬಿರುದು ನೀಡಲಾಯಿತು.

ಕ್ರಿ.ಶ. 1290ರಲ್ಲಿ ಕೇಕುಬಾದ್ ಯುದ್ಧದಲ್ಲಿ ಮಡಿದನು. ಇದರಿಂದಾಗಿ ಗುಲಾಮ್ ವಂಶದ ಅಂತ್ಯವಾಯಿತು. ಬಳಿಕ 70 ವರ್ಷದ ವಯೋವೃದ್ಧ ಜಲಾಲುದ್ದೀನ್ ಖಿಲ್ಜಿ ದೆಹಲಿಯ ಸಿಂಹಾಸನರೂಢನಾದನು. ಇವನು ಸತ್ಯಪ್ರೇಮಿ ಹಾಗೂ ದರ್ವೇಶಿ ಸ್ವಭಾವದ ವ್ಯಕ್ತಿಯಾಗಿದ್ದನು. ಇವನು ಅಮೀರ್ ಖುಸ್ರೋವಿನ ಪ್ರತಿಷ್ಠೆಯನ್ನು ಇನ್ನಷ್ಟು ಹೆಚ್ಚಿಸಿದನು. ಖುಸ್ರೋವನ್ನು ಆಸ್ಥಾನ ಕವಿಯ ಉಪಾಧಿ ನೀಡಿ ಅವನಿಗೆ ವೇತನವನ್ನು ನಿಗದಿಪಡಿಸಿದನು. ಖುಸ್ರೋ, ಸುಲ್ತಾನ್ ಜಲಾಲುದ್ದೀನನ ವಿಜಯಗಳ ಉಲ್ಲೇಖವನ್ನು ‘ಮಿಫ್ತಾಹುಲ್ ಫುತೂಹ್’ ಎಂಬ ಮಸ್ನವಿಯಲ್ಲಿ ಮಾಡಿರುವನು. ಇದು ಅತ್ಯಂತ ಜನಪ್ರಿಯವಾಯಿತು.

ಕ್ರಿ.ಶ. 1296ರಲ್ಲಿ ಅಲ್ಲಾವುದ್ದೀನ್ ಖಿಲ್ಜಿ ತನ್ನ ವೃದ್ಧ ಚಿಕ್ಕಪ್ಪ ಹಾಗೂ ಮಾವ ಜಲಾಲುದ್ದೀನ್ ಖಿಲ್ಜಿಯ ಹತ್ಯೆಗೈದು, ದೆಹಲಿಯ ಸಿಂಹಾಸನವನ್ನು ಆಕ್ರಮಿಸಿದನು. ಇವನು ಅಮೀರ್ ಖುಸ್ರೋ ಬಗ್ಗೆ ಉದಾರ ಮನೋಭಾವ ಹೊಂದಿದ್ದನು. ಹೀಗಾಗಿ ಖುಸ್ರೋವಿಗೆ ‘ಖುಸ್ರೋ-ಏ-ಶೊವೂರಾ’ ಎಂಬ ಬಿರುದು ನೀಡಿ, ಒಂದು ಸಾವಿರ ವೇತನವನ್ನು ನಿಗದಿಪಡಿಸಿದನು. ಅಮೀರ್ ಖುಸ್ರೊ ಅಲ್ಲಾವುದ್ದೀನ್ ಕುರಿತು ಅನೇಕ ಕೃತಿಗಳನ್ನು ರಚಿಸಿದನು. ಇವು ಇತಿಹಾಸಕ್ಕೆ ಸಂಬಂಧ ಪಟ್ಟಿವೆ. ಇವುಗಳಲ್ಲಿ ‘ತಾರೀಖ್-ಏ-ಅಲಾಯಿ’ ಅತ್ಯಂತ ಪ್ರಸಿದ್ಧವಾಯಿತು.

ಕ್ರಿ.ಶ. 1317ರಲ್ಲಿ ಕುತುಬುದ್ದೀನ್ ಮುಬಾರಕ್ ಶಾಹ ದೆಹಲಿಯ ಸುಲ್ತಾನನಾದನು. ಕುತುಬುದ್ದೀನ್ ಮುಬಾರಕ್ ಶಾಹ, ಖುಸ್ರೋ ರಚಿಸಿದ ಖಸೀದಾಗಳನ್ನು ಕೇಳಿ ಅದೆಷ್ಟು ಪ್ರಸನ್ನನಾದನೆಂದರೆ, ಆನೆಯ ತೂಕ ಚಿನ್ನ ಮತ್ತು ರತ್ನಗಳನ್ನು ನೀಡಿದನೆಂದು ಹೇಳಲಾಗುತ್ತದೆ. ಕ್ರಿ.ಶ. 1320ರಲ್ಲಿ ಖುತುಬುದ್ದೀನ್ ಮುಬಾರಕ್ ಶಾಹನ ಮಂತ್ರಿ ಖುಸ್ರೊ ಖಾನ್‌ನು ಅವನನ್ನು ಹತ್ಯೆ ಮಾಡಿದನು. ಇದರಿಂದಾಗಿ ಖಿಲ್ಜಿ ವಂಶದ ಆಳ್ವಿಕೆ ಸಮಾಪ್ತವಾಯಿತು. ನಂತರ ಪಂಜಾಬ್‌ನಿಂದ ಬಂದ ‘ಘಾಜಿಖಾನ್ ಗಿಯಾಸುದ್ದೀನ್ ತುಘಲಕ್ ಎಂಬ ನಾಮದೊಂದಿಗೆ ದೆಹಲಿಯ ಸಿಂಹಾಸನವೇರಿದನು. ಖುಸ್ರೋರವರು ಇವನ ಬಗ್ಗೆ ‘ತುಘಲಕ್ ನಾಮಾ’ ಎಂಬ ಕೃತಿ ರಚನೆ ಮಾಡಿರುತ್ತಾರೆ. ಇದೆ ಖುಸ್ರೊರವರ ಕೊನೆಯ ಕೃತಿಯಾಗಿದೆ.

ಅಮೀರ್ ಖುಸ್ರೊರವರಿಗೆ ಗಿಯಾಸುದ್ದೀನ್ ಅಹ್ಮದ್‌ ವನುದ್ದೀನ್ ಅಹ್ಮದ್, ಯಮೀನುದ್ದೀನ್ ಮುಬಾರಕ್ ಮತ್ತು ಒಬ್ಬ ಪುತ್ರಿ ಇದ್ದರು. ಅಮೀರ್ ಖುಸ್ರೋ ಭಾಷೆ ಮತ್ತು ಸಂಸ್ಕೃತಿಯ ಅಪರೂಪದ ಸಮನ್ವಯ ಮಾಡಿದ್ದರು. ಯಾಕೆಂದರೆ ಆ ಸಮಯದಲ್ಲಿ ಭಾರತಕ್ಕೆ ಆಗಮಿಸಿದ ಮುಸಲ್ಮಾನರು ತಮ್ಮದೇ ಭಾಷೆ ಮತ್ತು ಸಂಸ್ಕೃತಿಯನ್ನು ಹೊಂದಿದ್ದರು. ಭಾರತವು ಆ ಕಾಲಕ್ಕೆ ವೈವಿಧ್ಯತೆಯಲ್ಲೂ ತನ್ನದೆ ಭಾಷೆ ಮತ್ತು ಸಂಸ್ಕೃತಿಯನ್ನು ಹೊಂದಿತ್ತು. ಹೀಗಾಗಿ ಹಿಂದೂ ಮತ್ತು ಮುಸ್ಲಿಮರು ಭಿನ್ನವಾಗಿ ಕಂಡುಬರುತ್ತಿದ್ದರು. ಈ ವಿಭಿನ್ನತೆಯನ್ನು ತೊಡೆದುಹಾಕಿ, ಭಾಷಾ ಸಾಮರಸ್ಯವನ್ನು ನೆಲೆಗೊಳಿಸಲು ಖುಸ್ರೋರವರು ‘ಖಾಲಿಕ್ ಬಾರಿ’ ಎಂಬ ಕೃತಿ ರಚನೆ ಮಾಡಿದರು.

ಈ ಕೃತಿಯಲ್ಲಿ ಖುಸ್ರೊರವರು ಅರಬ್ಬಿ, ಫಾರಸಿ ಹಾಗೂ ಹಿಂದಿ ಶಬ್ದಗಳ ಪರ್ಯಾಯವನ್ನು ಶೋಧಿಸಿದರು. ಹಾಗೆಯೇ ಆಗ ಪ್ರಚಲಿತವಿದ್ದ ಹಿಂದುವಿ ಭಾಷೆಯಲ್ಲಿ ಕಾವ್ಯರಚನೆ ಆರಂಭಿಸಿದರು. ಏಕತೆ ಮತ್ತು ಸಮನ್ವಯತೆಯ ಸಾಧನೆಗೆ ಭಾಷೆ ಅತಿ ಮಹತ್ವದ ಸಾಧನವೆಂದು ಖುಸ್ರೋರವರು ನಂಬಿದ್ದರು. ಸಾಂಸ್ಕೃತಿಕ ಸಮನ್ವಯಕ್ಕಾಗಿ ಸಂಗೀತದ ಪಾತ್ರದ ಬಗ್ಗೆ ಅವರಿಗೆ ಸ್ಪಷ್ಟವಾದ ಕಲ್ಪನೆಯಿತ್ತು. ಮುಸ್ಲಿಮರು ಭಾರತಕ್ಕೆ ಬರುವ ಮೊದಲೆ ಅರಬ್ಬಿ ಮತ್ತು ಫಾರಸಿ ರಾಗಗಳ ಮಿಶ್ರಣ ಆಗಿತ್ತು. ಆದರೆ ಭಾರತಕ್ಕೆ ಮುಸ್ಲಿಮರು ಬಂದ ನಂತರ ಅದಕ್ಕೆ ಇನ್ನೂ ಹೆಚ್ಚಿನ ಉತ್ತೇಜನ ದೊರೆತು, ಸಂಗೀತ ಹೊರತಾಗಿಯೂ, ವಾಸ್ತುಕಲೆ ಮತ್ತು ಲಲಿತಕಲೆಗಳಲ್ಲಿ ಸಂಕರ ಸಂಸ್ಕೃತಿ ಆರಂಭವಾಯಿತು. ಎರಡು ಸಂಸ್ಕೃತಿಗಳ ಮಿಲನದಿಂದಾಗಿ ಜ್ಞಾನ, ಭಾಷೆ, ಸಂಗೀತ ಮತ್ತೆ ಕಲೆಗಳಲ್ಲಿ ಹೊಸತನದ ಸಾಧ್ಯತೆಗಳು ಹುಟ್ಟಿ ಅವುಗಳನ್ನು ಜನಸಾಮಾನ್ಯರ ಮಟ್ಟದಲ್ಲಿ ಪ್ರಯೋಗಿಸುವುದು ಅವಶ್ಯಕವೆಂದು ಖುಸ್ರೋರವರು ಮನಗಂಡಿದ್ದರು. ಹಿಂದೂ- ಮುಸ್ಲಿಮ್ ಹೃದಯಗಳನ್ನು ಬೆಸೆಯಲು ಸೂಫಿ ಸಾಧಕರ ಪಾತ್ರವೂ ಮಹತ್ವದ್ದೆಂದು ಅವರು ನಂಬಿದ್ದರು.

ಅಮೀರ್ ಖುಸ್ರೋ ಸುಲ್ತಾನರ ಆಸ್ಥಾನಗಳ ನಿಕಟ ಸಂಕರ್ಪವಿದ್ದರೂ, ಅವರು ತಮ್ಮ ಅಧಿಕ ಸಮಯವನ್ನು ಸೂಫಿ ಖಾನ್ ಖಾ (ಸೂಫಿ ಮಠ)ಗಳಲ್ಲಿ ವ್ಯಯಿಸುತ್ತಿದ್ದರು. ಹಜ್ರತ್ ನಿಜಾಮುದ್ದೀನ್ ಔಲಿಯಾರವರು ಅಮೀರ್ ಖುಸ್ರೋರವರ ಆಧ್ಯಾತ್ಮಿಕ ಗುರುವಾಗಿದ್ದರು. ಗುರು ಮತ್ತು ಶಿಷ್ಯರ ಮಧ್ಯೆ ಅಗಾಧ ಪ್ರೇಮವಿತ್ತು. ಇಬ್ಬರೂ ಒಬ್ಬರೊಬ್ಬರನ್ನು ಅಗಲಿ ಇರಲು ಬಯಸುತ್ತಿರಲಿಲ್ಲ. ಹಜ್ರತ್ ನಿಜಾಮುದ್ದೀನ್ ಔಲಿಯಾರವರು ಖುಸ್ರೋ ಬಗ್ಗೆ ಹೇಳುವುದೇನೆಂದರೆ: “ಅಕಾಸ್ಮಾತ್ ಒಂದೇ ಗೋರಿಯಲ್ಲಿ ಇಬ್ಬರು ವ್ಯಕ್ತಿಗಳನ್ನು ಧಫನ್ ಮಾಡುವ ಧಾರ್ಮಿಕ ಅನುಮತಿ ಇರುತ್ತಿದ್ದರೆ ಅಮೀರ್ ಖುಸ್ರೋ ಅವರನ್ನು ನನ್ನ ಗೋರಿಯಲ್ಲಿಯೇ ದಫನ್ ಮಾಡಲು ಹೇಳುತ್ತಿದ್ದೆ.” ಅವರು ಖುಸ್ರೋನನ್ನು ಅದೆಷ್ಟು ಪ್ರೇಮಿಸುತ್ತಿದ್ದರೆಂದರೆ “ಹೇ ತುರ್ಕ್, ನಾನು ಎಲ್ಲರಿಂದ ಬೇಜಾರಾಗಿದ್ದೇನೆ; ನನ್ನಿಂದಲೂ ಸಹ ಆದರೆ ನಿನ್ನಿಂದ ಎಂದೂ ಬೇಜಾರಾಗುವುದಿಲ್ಲ” ಖುಸ್ರೋವಿನ ನಡೆ ಹಾಗು ವ್ಯವಹಾರದಿಂದ ಅದೆಷ್ಟು ಸಂತುಷ್ಟರಾಗಿರುತ್ತಿದ್ದರೆಂದರೆ ಅವರನ್ನು ‘ತುರ್ಕೆ ಅಲ್ಲಾಹ್’ ಎಂದು ಕರೆಯುತ್ತಿದ್ದರು.

ಅಮೀರ್ ಖುಸ್ರೋರವರು ಸಂಸ್ಥಾನದ ನಿಕಟ ಸಂಬಂಧ ಹೊಂದಿದ್ದರು. ಅವರು ಬಡ ಜನರನ್ನು ಯಾವಾಗಲೂ ಭೇಟಿಯಾಗುತ್ತಿದ್ದರು. ತಮಗೆ ಸುಲ್ತಾನರು ಮತ್ತು ಸರದಾರರಿಂದ ದೊರೆತ ಸಂಪತ್ತನ್ನು ಬಡಬಗ್ಗರಲ್ಲಿ ಹಂಚುತ್ತಿದ್ದರು. ಧಾರ್ಮಿಕ ವ್ಯಕ್ತಿಯಾದರೂ ಧಾರ್ಮಿಕ ಕಠೋರತೆ ಇರಲಿಲ್ಲ. ನಿಜಾಮುದ್ದೀನ್ ಔಲಿಯಾರವರ ತತ್ವವಾಗಿದ್ದ ಪರಮಾತ್ಮನನ್ನು ತಲುಪಲು ಅನೇಕ ಮಾರ್ಗಗಳಿವೆ ಎಂಬ ಸಿದ್ಧಾಂತ ಅವರಿಗೆ ಅತೀವ ಪ್ರಿಯವಾಗಿತ್ತು.

ಅಮೀರ್ ಖುಸ್ರೋರವರ ಸದ್‌ವ್ಯವಹಾರ ಹಾಗೂ ವಿದ್ವತ್‌ನಿಂದಾಗಿ ಹಜ್ರತ್ ನಿಜಾಮುದ್ದೀನ್ ಔಲಿಯಾ ಅವರು ಪ್ರಸನ್ನರಾಗಿ, ಅತೀವ ಹೆಮ್ಮೆ ಪಡುತ್ತಿದ್ದರು. ಹಜ್ರತ್ ನಿಜಾಮುದ್ದೀನ್ ಔಲಿಯಾರವರು ಸುಲ್ತಾನ್ ಮತ್ತು ಸರದಾರರಿಂದ ಸದಾ ದೂರ ಇರಲು ಪ್ರಯತ್ನಿಸುತ್ತಿದ್ದರು. ಇದನ್ನು ಸುಲ್ತಾನ್ ಜಲಾಲುದ್ದೀನ್ ಖಿಲ್ಜಿ ಸಹ ಅರಿತಿದ್ದನು. ಆದರೂ ಸುಲ್ತಾನ್ ಜಲಾಲುದ್ದೀನ್ ಹಜ್ರತ್‌ರನ್ನು ಭೇಟಿಯಾಗಲು ಹಾತೊರೆಯುತ್ತಿದ್ದನು. ಸುಲ್ತಾನನು ಖುಸ್ರೋ ಅವರಿಗೆ ‘ನಾವು ಅನುಮತಿಯಿಲ್ಲದೆ ಹೋಗಿ ಅವರನ್ನು ಭೇಟಿಯಾಗೋಣ. ಈ ವಿಷಯವನ್ನು ನೀನು ಅವರಿಗೆ ತಿಳಿಸಬೇಡ’ ಎಂದು ಒಂದು ಸಲ ಆಜ್ಞಾಪಿಸಿದನು. ಖುಸ್ರೋ ಇದರಿಂದ ಸಂದಿಗ್ಧತೆಯಲ್ಲಿ ಬಿದ್ದರು. ಆದರೆ ಅಂತಿಮವಾಗಿ ಈ ಸಮಸ್ತ ವಿಷಯವನ್ನು ತಮ್ಮ ಗುರುವಿಗೆ ತಿಳಿಸಿದರು. ಇದು ಸುಲ್ತಾನನಿಗೆ ಅರಿವಾಗಿ, ಸುಲ್ತಾನನು ಖುಸ್ರೋ ಅವರ ಬಗ್ಗೆ ಅತೀವ ಅಸಂತುಷ್ಟನಾಗಿ ‘ನೀವು ನನ್ನನ್ನು ಶೇಖ ಭೇಟಿಯಿಂದ ವಂಚಿಸಿದ್ದೀರಿ’ ಎಂದು ದೂರಿದನು. ಅದಕ್ಕೆ ಖುಸ್ರೋ ಅವರು “ಸುಲ್ತಾನನು ಕ್ರೋಧಿತನಾಗಿರುವುದರಿಂದ ನನ್ನ ಶಿರಚ್ಛೇದನವಾಗಬಹುದು. ಆದರೆ ಶೇಖರು ಅಸಂತುಷ್ಟರಾದರೆ, ನನ್ನ ಧರ್ಮ ವಿಶ್ವಾಸವೇ ಹೋಗುವ ಭಯವಿದೆ” ಎಂದು ತಕ್ಷಣವೇ ಉತ್ತರಿಸಿದರು. ಇದರಿಂದ ಅವರು ಖಾನ್‌ಬಾಹ್‌ಗೆ ನೀಡುತ್ತಿದ್ದ ಮಹತ್ವದ ಅರಿವಾಗುತ್ತದೆ.

ಹಜ್ರತ್ ನಿಜಾಮುದ್ದೀನ್ ಔಲಿಯಾರವರು ನಿಧನಹೊಂದಿದಾಗ, ಅಮೀರ್ ಖುಸ್ರೊರವರು ಸುಲ್ತಾನ್ ಗಿಯಾಸುದ್ದೀನ್ ತುಘಲಕ್ ಜೊತೆ ಬಂಗಾಳಕ್ಕೆ ಹೋಗಿದ್ದರು. ತಮ್ಮ ಪೀರರ ನಿಧನ ಸುದ್ದಿ ತಿಳಿದು ಅವರು ಹುಚ್ಚನಂತಾದರು ಎಂದು ಹೇಳಲಾಗುತ್ತದೆ. ಸತತ ರೋದನ ಆಕ್ರಂದನ ಮಾಡುತ್ತಾ ಅವರು ದೆಹಲಿ ತಲುಪಿದರು ಹಾಗೂ ಈ ಕೆಳಗಿನ ದೋಹಾ ವಾಚಿಸುತ್ತಾ ಪೀರರ ಗೋರಿಯ ಮೇಲೆ ಎರಗಿದರು.

“ಗೋರಿ ಸೋಯಿ ಸೇಜ್ ಪರ್, ಮುಖ್ ಪರ್ ಡಾರೆ ಕೇಸ್
ಚಲ್ ಖುಸ್ರೊ ಘರ್ ಅಪನೆ, ರೈನ್ ಭಯಿ ಚಹುದೇಸ್”
(ಚೆಲುವೆಯು ತನ್ನ ಕೇಶವನು ಮುಖದ ಮೇಲೆ ಹರಡಿ ಮಲಗಿಹಳು
ಕತ್ತಲು ಆವರಿಸಿದೆ, ಖುಸ್ರೋ ನೀ ನಡೆ ನಿನ್ನ ಮನೆಗೆ)

ತದನಂತರ ತಾವು ಗಳಸಿದ ಸಂಪತ್ತನ್ನು ಬಡ- ಬಗ್ಗರಿಗೆ ಹಂಚಿ, ತಮ್ಮ ಗುರುವಿನ ಗೋರಿಯ ಬಳಿ ಕಪ್ಪು ಬಟ್ಟೆ ಉಟ್ಟು ಕುಳಿತುಕೊಂಡರು. ರೋದಿಸುತ್ತಾ, ಸೂರ್ಯನು ಭೂಮಿ ಅಡಿಯಲ್ಲಿ ಮರೆಯಾದನೆಂದು ನುಡಿಯುತ್ತಿದ್ದರು. ಗುರುವಿನ ನಿಧನದ ಬಳಿಕ ಆರು ತಿಂಗಳಲ್ಲಿ 18 ಶವ್ವಾಲ್ 725 ಹಿಜ್ರಾ (ಅಕ್ಟೋಬರ್ 1325 ) ನಿಧನ ಹೊಂದಿದರು. ಅವರನ್ನು ಹಜ್ರತ್ ನಿಜಾಮುದ್ದೀನ್ ಗೋರಿಯ ಪಕ್ಕದಲ್ಲೆ ದಫನ್ ಮಾಡಲಾಯಿತು. ಅವರ ನಿಧನಹೊಂದಿದ ದಿನದಂದು ಪ್ರತಿ ವರ್ಷ ಉರುಸ್ ಆಚರಿಸಲಾಗುತ್ತದೆ. ಹಿಂದೂ- ಮುಸ್ಲಿಮರು ಅತೀವ ಭಾವಭಕ್ತಿಯಿಂದ ಅವರ ಉರುಸ್‌ನಲ್ಲಿ ಪಾಲ್ಗೊಂಡು ಶ್ರದ್ಧಾ ಗೌರವಗಳನ್ನು ಅರ್ಪಿಸುತ್ತಾರೆ.

ಅಮೀರ್ ಖುಸ್ರೊ ಅವರ ಕೃತಿಗಳ ಪರಿಚಯ:

ಅಮೀರ್ ಖುಸ್ರೊ ಅವರ ತಮ್ಮ 72 ವರ್ಷದ ಜೀವಿತಾವಧಿಯಲ್ಲಿ ಸುಮಾರು 99 ಕೃತಿಗಳನ್ನು ರಚಿಸಿದ್ದಾರೆ. ಆದರೆ ಈಗ ಕೇವಲ 22 ಕೃತಿಗಳು ಲಭ್ಯವಿವೆ. ಇವುಗಳಲ್ಲಿ ಐದು ಕಾವ್ಯ ಸಂಗ್ರಹ, ಒಂಬತ್ತು ಮಸ್ನವಿಗಳು ಹಾಗೂ ಅನೇಕ ಗಜಲ್ ಸಂಗ್ರಹಗಳಾಗಿವೆ. ಇವುಗಳಲ್ಲಿ ಮೂರು ಗದ್ಯ ಕೃತಿಗಳಾಗಿವೆ. ಅವೆಂದರೆ ‘ಏಜಾಜ್-ಎ-ಮಸ್ನವಿ’, ‘ಖಜಾಯನುಲ್ ಫುತೂಹ್’ ಮತ್ತು ‘ಅಪಜಲ್- ಉಲ್- ಫವಾಯದ್’. ಹಿಂದಿಯಲ್ಲಿ ಮೂರು ಕೃತಿಗಳಿವೆ. ‘ಖಾಲಿಕ್ ಬಾರಿ’, ‘ಹಲಾತೆ-ಕನ್ಹೆಯಾ’ ಮತ್ತು ‘ನಜರಾಯೇ ಹಿಂದ್’ ಆದರೆ ಈಗ ‘ಖಾಲಿಕ್ ಬಾರಿ’ ಮಾತ್ರ ಲಭ್ಯವಿದೆ. ಇದರ ಹೊರತಾಗಿ ಹಿಂದಿ ಭಾಷೆಯಲ್ಲಿ ಅನೇಕ ದೋಹೆ, ಪಹೇರಿ (ಒಡಪುಗಳು) ಹಾಗೂ ಮುಕರಿಯಾ (ನಾಲ್ಕು ಸಾಲಿನ ಛಂದ) ಗಳನ್ನು ಖುಸ್ರೋ ರಚಿಸಿದ್ದಾರೆ.

ತೋಹಫ ತುಸ್ಸಿಗ್ರ್:
ಇದು ಹಿ.ಶ. 671ರಲ್ಲಿ ಸಂಕಲಿಸಿದ, ಅಮೀರ್ ಖುಸ್ರೋರವರ ಪ್ರಥಮ ದಿವಾನ್ ಅಂದರೆ ಕವನ ಸಂಕಲನ. ಖುಸ್ರೊ ಅವರು 13 ರಿಂದ 19 ವರ್ಷದ ವಯಸ್ಸಿನಲ್ಲಿ ಬರೆದ ಕವಿತೆಗಳಾಗಿವೆ. ಈ ಕೃತಿಯಲ್ಲಿ ಪ್ರತಿಯೊಂದು ಖಸೀದಾದ ಆರಂಭದಲ್ಲಿ ಒಂದು ಶೇರ್‌ನಲ್ಲಿ ಈ ಖಸೀದಾದ ಸಾರವನ್ನು ತಿಳಿಸಲಾಗಿದೆ. ಈ ಶೇರ್‌ಗಳನ್ನು ಒಟ್ಟಾಗಿ ಸೇರಿಸುವುದರಿಂದಲೂ ಒಂದು ಖಸೀದಾ ಆಗುತ್ತದೆ. ಇಲ್ಲಿಯ ಪ್ರಶಂಸಾ ಕಾವ್ಯಗಳು ಅಧಿಕವಾಗಿ ಸುಲ್ತಾನ್ ಗಿಯಾಸುದ್ದೀನ್ ಬಲ್ಬನ್ ಮತ್ತು ಅವನ ಹಿರಿಯ ಪುತ್ರ ಸುಲ್ತಾನ್ ನಾಸೀರುದ್ದೀನನ ಪ್ರಶಂಸೆಯಲ್ಲಿ ಬರೆಯಲಾಗಿದೆ. ತಮ್ಮ ಅಜ್ಜ ಇಮಾದುರ್ ಮುಲ್ಕ್‌ರವರ ಕುರಿತ ಮರ್ಸಿಯಾ (ಶೋಕಗೀತೆ) ಇದರಲ್ಲಿದೆ. ಈ ಗ್ರಂಥದಲ್ಲಿ ತಮ್ಮ ಉಪನಾಮವನ್ನು ‘ಸುಲ್ತಾನಿ’ ಎಂದು ಉಲ್ಲೇಖಿಸಿದ್ದಾರೆ.

ಮಸ್ತಲ್ ಹಯಾತ್:
ಇದು ಖುಸ್ರೊ ಅವರ ಎರಡನೆಯ ದೀವಾನ್ (ಕಾವ್ಯ ಸಂಗ್ರಹ) ಆಗಿದೆ. ಕ್ರಿ.ಶ. 684ರಲ್ಲಿ ರಚಿತವಾಯಿತು. ತಮ್ಮ 24 ರಿಂದ 32ನೆಯ ವಯಸ್ಸಿನಲ್ಲಿ ಬರೆದ ಕವಿತೆಗಳ ಸಂಗ್ರಹ ಇದು. ಇದರಲ್ಲಿ ಬಹುತೇಕ ಸುಲ್ತಾನ ಮೊಹಮ್ಮದ್ ಶಹೀದ್‌ರವರ ಖಸೀದಾಗಳು ಹಾಗೂ ಅವರದೇ ಮರ್ಸಿಯಾ(ಶೋಕ ಗೀತೆ) ಸಮ್ಮಿಳಿತವಾಗಿದೆ.

ಗರ್‌ತುಲ್-ಕಲಾಮ್:
ಇದು ಹಿ.ಶ. 693ರಲ್ಲಿ ರಚಿತವಾದ ಮೂರನೆಯ ದೀವಾನ್ ಆಗಿದೆ. ಇದರಲ್ಲಿ ಖುಸ್ರೋರವರು 34 ರಿಂದ ನಲವತ್ತು ವರ್ಷ ವಯಸ್ಸಿನಲ್ಲಿ ಬರೆದ ಕವನಗಳಿವೆ. ಇದರಲ್ಲಿ ಖುಸ್ರೋರವರ ಪ್ರಸಿದ್ಧ ಖಸೀದಾಗಳಾದ ‘ಜನ್ನತುಲ್ ನಜಾತ್’, ‘ಮುರಾತುಸ್ಕಾ’ ಹಾಗೂ ‘ದರಿಯಾ ಅಬ್ರಾರ್’ ಸೇರಿವೆ. ಇದು ಎಲ್ಲಾ ದೀವಾನ್‌ಗಳಲ್ಲಿ ಬೃಹತ್ ದೀವಾನ್ ಆಗಿವೆ.

ಬಕೀಯಾನ್ ಕಿಯಾ:
ಇದು ಕ್ರಿ.ಶ. 716ರಲ್ಲಿ ಬರೆದ ನಾಲ್ಕನೆಯ ದೀವಾನ್ ಆಗಿದೆ. ಇದರಲ್ಲಿ ಅಲ್ಲಾವುದ್ದೀನ್ ಖಿಲ್ಜಿಯ ಮರ್ಸಿಯಾ ಕೂಡ ಸೇರಿದೆ.

ನಿಹಾಯತುಲ್- ಕಮಾಲ್:
ಇದು ಖುಸ್ರೋ ಅವರ ಐದನೆಯ ದೀವಾನ್ ಆಗಿದೆ. ಇವರಲ್ಲಿ ಸುಲ್ತಾನ್ ಗಿಯಾಸುದ್ದೀನ್‌ನ ನಿಧನ ಹಾಗೂ ಸುಲ್ತಾನ ಮೊಹಮ್ಮದ್ ತುಘಲಕ್‌ನ ಸಿಂಹಾಸನರೋಹಣದ ಉಲ್ಲೇಖವಿದೆ. ಕುತುಬುದ್ದಿನ್ ಮುಬಾರಕ್ ಖಿಲ್ಜಿಯ ಮರ್ಸಿಯಾ(ಶೋಕ ಗೀತೆ) ಹಾಗೂ ಅವರ ಉತ್ತರಾಧಿಕಾರಿಯ ಪ್ರಶಂಸೆ ಇದೆ. ಇನ್ನು ಕೆಲವು ಖಸೀದಾಗಳು ಹಾಗೂ ತನವುಫ್‌ಗೆ ಸಂಬಂಧಿಸಿದ ಗಜಲ್‌ಗಳಿವೆ. ಇದನ್ನು ಅತೀ ಶ್ರೇಷ್ಠ ಕೃತಿ ಎಂದು ಪರಿಗಣಿಸಲಾಗುತ್ತವೆ.

ಕಿರಾನುಸ್ಸಾದೈನ್:
ಇದು ಅಮೀರ್ ಖುಸ್ರೊರವರ ಐತಿಹಾಸಿಕ ಮಸ್ನವಿ (ನೀಳ್ಗವನ) ಆಗಿದ್ದು ಹಿ.ಶ. 688ರಲ್ಲಿ ಅವಿರತ ಶ್ರಮಪಟ್ಟು ಕೇವಲ ಮೂರು ತಿಂಗಳಲ್ಲಿ ಪೂರ್ಣಗೊಳಿಸಿದರು. ಇದರ ವಿಷಯ ಶೇಕುಬಾದ್ ಮತ್ತು ಬುಗರಾಖಾನ್‌ರವರ ಪತ್ರ ವ್ಯವಹಾರ ಮತ್ತು ಒಪ್ಪಂದ ಆಗಿದ್ದು ಐತಿಹಾಸಿಕವಾಗಿ ಮಹತ್ವದ ಕೃತಿಯಾಗಿದೆ.

ಮಫ್ತಾಹುಲ್ ಫುತೂಹ್:
ಇದು ಐತಿಹಾಸಿಕ ಮಸ್ನವಿ ಆಗಿದ್ದು, ಇದರಲ್ಲಿ ಸುಲ್ತಾನ್ ಜಲಾಲುದ್ದೀನ್ ಖಿಲ್ಜಿಯ ದಿಗ್ವಿಜಯ ಹಾಗೂ ಸಫಲತೆಗಳ ವಿವರಗಳಿವೆ. ತೀರಾ ಸರಳ ಭಾಷೆಯಲ್ಲಿರುವ ಈ ಕೃತಿಯನ್ನು 690ರಲ್ಲಿ ಬರೆದು ಪೂರ್ಣಗೊಳಿಸಿದರು.

ನೂಹ್ ಸಿಪಹರ್:
ಇದು ಕೇವಲ ಐತಿಹಾಸಿಕವಾಗಿ ಅಲ್ಲದೆ ಸಾಂಸ್ಕೃತಿಕವಾಗಿ ಹಾಗೂ ಸಾಮೂಹಿಕವಾಗಿ ಮಹತ್ವದ ಮಸ್ನವಿಯಾಗಿದ್ದು ಹಿ.ಶ.718ರಲ್ಲಿ ರಚಿತವಾಯಿತು. ಇದರಲ್ಲಿ ಒಂಬತ್ತು ಅಧ್ಯಾಯಗಳಿದ್ದು ಪ್ರತಿಯೊಂದು ಅಧ್ಯಾಯ ಒಂದು ವಿಭಿನ್ನ ಛಂಧಸ್ಸನ್ನು ಹೊಂದಿದೆ. ಇದಕ್ಕಾಗಿ ಇದರ ಶೀರ್ಷಿಕೆ ‘ನೂಹ್ ಸಿಪಹರ್’ ಎಂದರೆ ಒಂಬತ್ತು ಆಕಾಶಗಳು ಎಂದು ಇಡಲಾಗಿದೆ. ಇದರ ಒಂದು ಅಧ್ಯಾಯದಲ್ಲಿ ‘ಭಾರತ ವರ್ಷ’ದ ಮಹೋನ್ನತೆಯನ್ನು ಬಣ್ಣಿಸಲಾಗಿದೆ. ಈ ಅಧ್ಯಾಯದಲ್ಲಿ ಭಾರತವನ್ನು ಬ್ರಹ್ಮಾಂಡದ ಸ್ವರ್ಗ ಎಂದು ವರ್ಣಿಸಲಾಗಿದೆ.

ತುಘಲಕ್ ನಾಮಾ:
ಇದು ಸುಲ್ತಾನ್ ಗಿಯಾಸುದ್ದೀನ್ ತುಘಲಕ್‌ನ ಜೀವನ ಮತ್ತು ವಿಜಯಗಾಥೆಗಳನ್ನು ಒಳಗೊಂಡಿದೆ. ಇದು ಖೂಸ್ರೋ ಅವರ ಕೊನೆಯ ಮಸನವಿ ಆಗಿದ್ದು, ಇದರಲ್ಲಿ ಕೆಲವು ಅಪರೂಪದ ಚಾರಿತ್ರಿಕ ಘಟನೆಗಳ ಉಲ್ಲೇಖವಿದೆ.

ಖಮ್ಸ್-ಎ-ಖುಸ್ರೋ:
ಈ ಕೃತಿಯು ಈ ಕೆಳಗಿನ ಐದು ಮಸ್ನವಿಗಳ ಸಂಕಲನವಾಗಿದೆ. ಅವೆಂದರೆ,
1. ಮತ್‌ಉಲ್ ಅನ್ವಾರ್ 2. ಶೀರೀನ್ ಖುಸ್ರೋ 3. ಮಜ್ನೂ ವೊ ಲೈಲಾ 4. ಆಯಿನಾ- ಎ- ಸಿಕಂದರಿ 5. ಹಶ್ತ್ ಬಹಿತ್
ಈ ಮಸ್ನವಿಗಳನ್ನು ಕ್ರಮವಾಗಿ ನಿಜಾಮಿ ಅವರ ಮಖಬನಲ್ ಅನ್ವಾರ್, ಖುಸ್ರೊವೋ ಶಿಲೀಲ, ಲೈಲಾ ಮಜ್ನೂ, ಸಿಕಂದರ್ ನಾಮಾ ಮತ್ತು ಹಸ್ತ್ ಪೈಕರ ಇವುಗಳ ಪ್ರತ್ಯುತ್ತರ ಕೃತಿಗಳಾಗಿವೆ. ಇವು ಉತ್ಕೃಷ್ಟ ಮಸ್ನವಿಗಳಾಗಿವೆ.

ಏಜಾಜ್-ಎ-ಖುಸ್ರೋವಿ:
ಇದು ಗದ್ಯಕೃತಿಯಾಗಿದ್ದು ಹಿ.ಶ್.719ರಲ್ಲಿ ರಚಿತವಾಗಿದೆ. ಸಾವಿರಾರು ಅಲಂಕಾರಗಳನ್ನು ಹೊಂದಿರುವ ಈ ಕೃತಿ ಐದು ಚಿಕ್ಕ ಕೃತಿಗಳ ಸಂಕಲನವಾಗಿದೆ. ಸುಲ್ತಾನ್ ಅಲ್ಲಾವುದ್ದೀನ್ ಖಿಲ್ಜಿಯ ವಿಜಯಗಳ ವಿಸ್ತೃತ ವಿವರಗಳನ್ನು ಒಳಗೊಂಡಿರುವ ಈ ಕೃತಿ ಐತಿಹಾಸಿಕವಾಗಿ ಮಹತ್ವದ್ದಾಗಿವೆ.

ಅಫಜಲ್- ಉಲ್- ಫವಾಯದ್:
ಈ ಕೃತಿಯಲ್ಲಿ ಅಮೀರ್ ಖುಸ್ರೋರವರ ಮುರ್ಷಿದ್ ಹಜರತ್ ನಿಜಾಮುದ್ದೀನ್ ಔಲಿಯಾರವರ ಪ್ರವಚನಗಳನ್ನು ಸಂಪಾದಿಸಲಾಗಿದೆ. ಇದರ ಒಂದು ಭಾಗವನ್ನು ಖುಸ್ರೋರವರು ತಮ್ಮ ಗುರು ನಿಜಾಮುದ್ದೀನ್ ಔಲಿಯಾರವರ ಸನ್ನಿಧಿಯಲ್ಲಿ ಹಿ.ಶ.719ರಲ್ಲಿ ಪ್ರಸ್ತುತ ಪಡಿಸಿದಾಗ, ಔಲಿಯಾರವರು ಇದರ ಬಗ್ಗೆ ಅತೀವ ಮೆಚ್ಚುಗೆ ಪಡಿಸಿದರು. ಇವುಗಳಲ್ಲಿ ಆಧ್ಯಾತ್ಮಿಕ ಸಂಗತಿ, ಸಮಸ್ಯೆಗಳ ಕುರಿತು ಚರ್ಚೆ ಸಂವಾದವಿದೆ. ಇದು ಸೂಫಿ ದಾರ್ಶನಿಕತೆಯ ಮಹತ್ವದ ಕೃತಿಯಾಗಿದೆ.

ಖಜಾಯಿನತುಲ್ ಫುತೂಹ್:
ಈ ಕೃತಿಯು ಹಿ.ಶ.711ರಲ್ಲಿ ರಚಿತವಾಗಿದ್ದು, ಇದರ ಇನ್ನೊಂದು ಶೀರ್ಷಿಕೆ ‘ತಾರೀಖೆ- ಅಲಾಯಿ’ಯೂ ಆಗಿದೆ. ಈ ಕೃತಿಯು ಅಲ್ಲಾವುದ್ದೀನ್ ಖಿಲ್ಜಿಯ ಕಾಲದ ಸಮಗ್ರ ಘಟನೆಗಳ ದಾಖಲೆಯಾಗಿದ್ದು, ಅತೀವ ಪ್ರಮಾಣಿಕೃತ ಕೃತಿ ಎಂದು ಭಾವಿಸಲಾಗಿದೆ.

ಖಾಲಿಕ್‌ಬಾರಿ:
ಈ ಕೃತಿಯು ಒಂದು ಶಬ್ದಕೋಶದಂತಿದೆ. ಇದರಲ್ಲಿ ಅರಬಿ, ಫಾರತಿ, ತುರ್ಕಿ ಮತ್ತು ಹಿಂದಿ ಭಾಷೆಗಳ ಶಬ್ದಗಳ ವಿವರಣೆ ಇದೆ. ಇದು ಒಂದು ಬೃಹತ್ ಗ್ರಂಥವಾಗಿತ್ತು. ಆದರೆ ಈಗ ಕೇವಲ 215 ದ್ವಿಪದಿಗಳು ಮಾತ್ರ ಲಭ್ಯವಿವೆ. ಇದು ಮಕ್ಕಳ ಮನೋವೈಜ್ಞಾನಿಕತೆಯನ್ನು ಆಧಾರವಾಗಿಟ್ಟು ಬರೆಯಲಾಗಿದೆ. ಇದು ಹಾಸ್ಯಮಯ ಪದ್ಯರೂಪದಲ್ಲಿದ್ದು ಮಕ್ಕಳು ಸರಳವಾಗಿ ನೆನಪಿನಲ್ಲಿ ಇಟ್ಟುಕೊಳ್ಳಬಹುದಾಗಿದೆ. ಬಾಷಿಕ ದೃಷ್ಟಿಕೋನದಿಂದ ಮಹತ್ವದ ಕೃತಿ ಅಮೀರ್ ಖುಸ್ರೋ ಅವರು ಫಾರ್ಸಿ ಭಾಷೆಗಿಂತ ಅಧಿಕವಾಗಿ ಹಿಂದಿ ಭಾಷೆಯಲ್ಲಿ ಕಾವ್ಯ ರಚನೆ ಮಾಡಿರುತ್ತಾರೆ ಎಂದು ಹೇಳಲಾಗುತ್ತಿದೆ. ಆದರೆ ಅವೆಲ್ಲವೂ ಲುಪ್ತವಾಗಿವೆ. ಈಗ ಕೇವಲ ಒಡಪುಗಳು, ದೋಹೆಗಳು ಮುಕರಿಯಾಂ ಹಾಗೂ ಕೆಲವೊಂದು ಗೀತೆಗಳು ಮಾತ್ರ ಹಿಂದಿಯಲ್ಲಿ ಲಭ್ಯವಿವೆ. ಇವು ಲಿಖಿತ ರೂಪಕ್ಕಿಂತ ಜನಸಾಮಾನ್ಯರ ಬಳಕೆಯಲ್ಲಿ ಇದ್ದು, ಕೆಲವೊಂದು ಕಾಲಾಂತರದಲ್ಲಿ ಬದಲಾವಣೆ ಹೊಂದಿದೆ.

~ ಬೋಡೆ ರಿಯಾಜ್ ಅಹ್ಮದ್


Leave a Reply

*