ಇಬ್ನು ಸೀನಾ (ಅವಿಸೆನ್ನಾ)
ಭಾಗ – 1
ಅವಿಸೆನ್ನಾರ ಪೂರ್ವಿಕರು
ಸಾಂಪ್ರದಾಯಿಕ ಇಸ್ಲಾಮಿಕ್ ವಲಯಗಳಲ್ಲಿ ಕಾಣಿಸಿಕೊಂಡ ಮೊದಲ ದಾರ್ಶನಿಕ ಪರ್ಷಿಯಾದ ‘ಇರಾನ್ಶಹ್ರಿ’ ಎಂದು ಹೇಳಲಾಗುತ್ತದೆ. ಅವರು ತತ್ವಶಾಸ್ತ್ರವನ್ನು ಪೂರ್ವಕ್ಕೆ ತರಲು ಪ್ರಯತ್ನಿಸಿದರು; ಪೂರ್ವವನ್ನು ಅಲ್-ಫಾರಾಬಿಯಿಂದ ಸುಹ್ರವರ್ದಿಯವರೆಗಿನ ಆನಂತರದ ಅನೇಕ ತತ್ವಜ್ಞಾನಿಗಳು ತತ್ವಚಿಂತನೆಯ ಉಗಮಸ್ಥಾನವೆಂದು ಪರಿಗಣಿಸಿದ್ದಾರೆ. ದುರದೃಷ್ಟವಶಾತ್ ಅವರನ್ನು ‘ಮುಸ್ಲಿಂ ತತ್ವಶಾಸ್ತ್ರದ ಸ್ಥಾಪಕ’ ಎಂದು ಸಾಬೀತುಪಡಿಸಲು ಅರ್ಹವಾದ ಯಾವುದೇ ಗ್ರಂಥರಚನೆಗಳೂ ಸಿಗದಿರುವುದರಿಂದ ಇಂದು ಅವರ ಹೆಸರು ಮಾತ್ರ ಉಳಿದಿದೆ. ಬದಲಾಗಿ, ‘ಮಶ್ಶಾಯಿ ತತ್ವಶಾಸ್ತ್ರ’ ಎಂಬ ಹೆಸರಿನ ಒಂದು ಪರಿವ್ರಾಜಕ ತತ್ವಚಿಂತನೆಯು (Peripatetic) ಪಾಶ್ಚಾತ್ಯ ದೇಶಗಳಲ್ಲಿ ಇಸ್ಲಾಮಿಕ್ ತತ್ವಶಾಸ್ತ್ರ ಎಂಬ ಹೆಸರಿನಿಂದ ಪ್ರಸಿದ್ಧವಾಗಿದೆ. ಇಸ್ಲಾಮಿಕ್ ಜಗತ್ತಿನಲ್ಲಿ ಅದು ಅಳಿದುಳಿದ ಕೆಲವೇ ಕೆಲವು ಸೈದ್ಧಾಂತಿಕ ವಿಭಾಗಗಳಲ್ಲಿ ಒಂದಷ್ಟೇ. ಅರಬ್ಬರ ತತ್ವಜ್ಞಾನಿ ಎಂದು ಖ್ಯಾತರಾದ ‘ಅಬೂ ಯೂಸುಫ್ ಯಾಖೂಬ್ ಅಲ್ ಕಿಂದಿ’ ಯನ್ನು ಆ ಪಂಥದ ಸ್ಥಾಪಕರು ಎಂದು ಕರೆಯಲಾಗುತ್ತದೆ.
ಅಲ್-ಕಿಂದಿಯನ್ನು ಅಂತಹ ತತ್ವಜ್ಞಾನಿ ವಿಭಾಗಗಳ ಸ್ಥಾಪಕ ಎಂದು ಪರಿಗಣಿಸುವುದರಲ್ಲಿ ಹುರುಳಿದೆ. ಯಾಕೆಂದರೆ, ಅದರಲ್ಲಿ ಅಲೆಕ್ಸಾಂಡ್ರಿಯನ್ ವ್ಯಾಖ್ಯಾನಕಾರರಿಂದ ವಿಶ್ಲೇಷಿಸಲ್ಪಟ್ಟ -ವಿಶೇಷತಃ ಅಲೆಕ್ಸಾಂಡರ್ ಆಫ್ರೋಡಿಸಿಯಾಸ್ ಹಾಗೂ ಥೆಮಿಸ್ಟಿಯಾಸ್ ಅವರಿಂದ- ಅರಿಸ್ಟಾಟಲಿಯನ್ ಸಿದ್ಧಾಂತವು ನಿಯೋಪ್ಲಾಟೋನಿಸಂನೊಂದಿಗೆ ಸಂಯೋಜಿಸಲ್ಪಟ್ಟು ಮುಂದೆ ಅದು ಅರಿಸ್ಟಾಟಲ್ನ ತತ್ವಗಳ ಅನುವಾದಗಳ ಮೂಲಕ, ‘ಥಿಯಾಲಜಿ ಆಫ್ ಅರಿಸ್ಟಾಟಲ್’ ಹೆಸರಿನಲ್ಲಿ ‘ಸ್ಯೂಡೋ ಅರಿಸ್ಟಾಟಲಿಯನ್’ ತತ್ವಗಳನ್ನು ಹೊಂದಿರುವ ‘ಲಿಬರ್ ಡಿ ಕೋಸಿಸ್’ ನ ಮೂಲಕ, ಪ್ರೊಕ್ಲಸ್ನ ‘ಎಲಿಮೆಂಟ್ಸ್ ಆಫ್ ಥಿಯಾಲಜಿ’ ಯ ಸಾರಾಂಶದ ರೂಪದಲ್ಲಿ ಮುಸ್ಲಿಮರ ಬಳಿಗೆ ತಲುಪುತ್ತದೆ. ಈ ವಿಭಾಗಗಳಲ್ಲಿ ವಿಜ್ಞಾನವನ್ನು ತತ್ವಶಾಸ್ತ್ರದೊಂದಿಗೆ ಸಂಯೋಜಿಸಲಾಗಿದೆ ಮತ್ತು ಇನ್ನೊಂದು ಅರ್ಥದಲ್ಲಿ ತತ್ವಶಾಸ್ತ್ರವು ವಿಜ್ಞಾನಗಳ ವರ್ಗೀಕರಣದೊಂದಿಗೆ ಪ್ರಾರಂಭವಾದಂತೆಯೇ ವಾಸ್ತವವಾಗಿ ಅದರ ಒಂದು ಶಾಖೆ ಎಂದು ಪರಿಗಣಿಸಲಾಗಿದೆ. ಅಲ್-ಕಿಂದಿಯಂತೆಯೇ ಈ ಪಂಥದ ಮಹಾನ್ ವ್ಯಕ್ತಿಗಳು ತತ್ವಜ್ಞಾನಿಗಳಾಗಿರುವ ಜೊತೆಜೊತೆಗೆ ವಿಜ್ಞಾನಿಗಳೂ ಆಗಿದ್ದರು. ಆದಾಗ್ಯೂ ಕೆಲವೊಮ್ಮೆ ಅಬು ಸುಲೈಮಾನ್ ಅಲ್-ಸಿಜಿಸ್ತಾನಿಯವರಂತೆ, ತತ್ವಶಾಸ್ತ್ರವು ವಿಜ್ಞಾನದ ಮೇಲೆ ಪ್ರಾಬಲ್ಯ ಹೊಂದಿದವರು ಆ ಪೈಕಿಯಲ್ಲಿದ್ದರು. ಅಥವಾ ಅಲ್-ಬೆರೂನಿಯವರಂತೆ, ತತ್ವಶಾಸ್ತ್ರಕ್ಕಿಂತ ವಿಜ್ಞಾನದಲ್ಲಿ ಮೇಲುಗೈ ಸಾಧಿಸಿದವರೂ ಇದ್ದರು.
ಈ ತತ್ವಜ್ಞಾನಿ-ವಿಜ್ಞಾನಿಗಳ ಪಂಥದ ಸ್ಥಾಪಕರಾದ ಅಲ್-ಕಿಂದಿ, ಹಿ.185/801 ರ ಸುಮಾರಿಗೆ ಬಸ್ರಾ ಪಟ್ಟಣದ ಕಿಂದಾ ಬುಡಕಟ್ಟಿನ ಶ್ರೀಮಂತ ಅರಬ್ ಕುಟುಂಬವೊಂದರಲ್ಲಿ ಜನಿಸಿದರು. ಅವರ ತಂದೆ ಕೂಫಾದ ಗವರ್ನರ್ ಆಗಿದ್ದರು. ಮೊದಲು ಬಸರಾದಲ್ಲಿ ಹಾಗೂ ನಂತರ ಅಬ್ಬಾಸಿದ್ ಖಲೀಫರ ಅಡಿಯಲ್ಲಿ ಬೃಹತ್ ವಿಜ್ಞಾನ ಕೇಂದ್ರವಾಗಿ ಹೊರಹೊಮ್ಮಿದ ಬಾಗ್ದಾದ್ನಲ್ಲಿ ಅವರು ಅತ್ಯುತ್ತಮ ಶಿಕ್ಷಣವನ್ನು ಪಡೆದರು. ಶೀಘ್ರದಲ್ಲೇ ತತ್ವಶಾಸ್ತ್ರ ಮತ್ತು ವಿಜ್ಞಾನಗಳನ್ನು ಕರಗತ ಮಾಡಿಕೊಂಡ ಅವರು ನಂತರ ಅರೇಬಿಕ್ ಭಾಷೆಯಲ್ಲಿ ಅವುಗಳೆಲ್ಲ ಸುಲಭವಾಗಿ ಲಭ್ಯವಾಗುವಂತೆ ಮಾಡಿದರು ಮತ್ತು ಅವುಗಳನ್ನು ಇಸ್ಲಾಮಿಕ್ ದೃಷ್ಟಿಕೋನಕ್ಕೆ ತಕ್ಕಂತೆ ಪೋಣಿಸಲು ಪ್ರಯತ್ನಿಸಿದರು. ಕಲಿಕೆಯ ವಿವಿಧ ಕ್ಷೇತ್ರಗಳಲ್ಲಿನ ಅವರ ಸಾಮರ್ಥ್ಯವು ಅವರನ್ನು ಖಲೀಫರಾದ ಅಲ್-ಮಾಮೂನ್ ಮತ್ತು ಅಲ್-ಮುಅ್ತಸಿಮ್ ಅವರ ಆಸ್ಥಾನದಲ್ಲಿ ಮೆಚ್ಚುಗೆ ಪಡೆಯುವಂತೆ ಮಾಡಿತು. ಖಲೀಫಾರ ಮಗನ ಅಧ್ಯಾಪಕರಾಗಿ ಕಾರ್ಯನಿರ್ವಹಿಸಿದ ಅವರು ತನ್ನ ಕಾಲದ ತತ್ವಜ್ಞಾನಿಗಳಿಗೆ ಮತ್ತು ಸಂತರಿಗೆ ಕೈಗೆಟುಕದ ನಿಧಿಯಂತಿದ್ದ ನ್ಯಾಯಾಲಯದ ಉನ್ನತ ಸ್ಥಾನವನ್ನೂ ಅಲಂಕರಿಸಿದ್ದರು. ಆದರೆ ಅಲ್-ಕಿಂದಿಯ ಈ ಉನ್ನತ ಸ್ಥಾನಮಾನ ಮತ್ತು ನ್ಯಾಯಾಲಯದ ಸಾಮೀಪ್ಯವು ಹೆಚ್ಚು ದಿನ ಉಳಿಯಲಿಲ್ಲ. ಬದುಕಿನ ಅಂತ್ಯದ ವೇಳೆಗೆ, ಖಲೀಫಾ ಅಲ್ ಮುತವಕ್ಕಿಲ್ ಆಳ್ವಿಕೆಯಲ್ಲಿ, ಅವರು ತೀವ್ರ ಅವಮಾನಕ್ಕೆ ಗುರಿಯಾಗಿ ಹಿ. 252/866 ರ ಸುಮಾರಿಗೆ ನಿಗೂಢವಾಗಿ ಸಾವನ್ನಪ್ಪಿದರು.
ಅಲ್-ಕಿಂದಿಯ ಹೆಸರು ಇಸ್ಲಾಮಿನ ಚರಿತ್ರೆಯಲ್ಲಿ ಅತ್ಯಂತ ಪ್ರಸಿದ್ಧವಾಗಿದ್ದರೂ, ಮೂವತ್ತು ವರ್ಷಗಳ ಹಿಂದೆ ಇಸ್ತಾಂಬುಲ್ನಲ್ಲಿ ಅವರ ಹೆಚ್ಚಿನ ಸಂಖ್ಯೆಯ ಕೃತಿಗಳನ್ನು ಶೋಧಿಸುವವರೆಗೆ ಅರೇಬಿಕ್ನಲ್ಲಿ ಅವರ ಕೆಲವು ಗ್ರಂಥಗಳಷ್ಟೇ ಬೆಳಕಿಗೆ ಬಂದಿದ್ದವು. ಆ ನಂತರ ವಿದ್ವಾಂಸರು ಅವರ ಆಲೋಚನೆಗಳನ್ನು ಅವರ ಸ್ವಂತ ಮಾತುಗಳಿಂದ ನೇರವಾಗಿ ಅಧ್ಯಯನ ಮಾಡಲು ಅನುವು ಮಾಡಿಕೊಟ್ಟರು. ಉಳಿದಿರುವ ಅವರ ನಲವತ್ತು ಅಥವಾ ಐವತ್ತು ಗ್ರಂಥಗಳು ಅವರ ಅಗಾಧವಾದ ಸಾಹಿತ್ಯ ರಾಶಿಯ ಒಂದು ಸಣ್ಣ ಅಂಶವಷ್ಟೇ. ಕೇವಲ ಅವರ ಕೃತಿಗಳ ಶೀರ್ಷಿಕೆಗಳನ್ನು ಗಮನಿಸಿದರೆ ಅವರು ಅದೆಷ್ಟೋ ಅಮೂಲ್ಯ ಗ್ರಂಥಗಳನ್ನು ಬರೆದಿರಬೇಕೆಂದು ತೋರುತ್ತದೆ. ಇಬ್ನ್ ಅಲ್-ನದೀಮ್ ಅವರ ‘ಫಿಹ್ರಿಸ್ತ್’ ನಲ್ಲಿ ಅಲ್-ಕಿಂದಿಯವರ ಸುಮಾರು ಇನ್ನೂರ ನಲವತ್ತರಷ್ಟು ಕೃತಿಗಳನ್ನು ಉಲ್ಲೇಖಿಸಲಾಗಿದೆ. ಈಗ ಉಳಿದುಕೊಂಡಿರುವ ಕೃತಿಗಳಲ್ಲಿ ಮೆಟಾಫಿಸಿಕ್ಸ್ (ತತ್ವ ಮೀಮಾಂಸೆ), ತತ್ವಶಾಸ್ತ್ರಕ್ಕೆ ಸಂಬಂಧಿಸಿದ ವಿವಿಧ ಕೃತಿಗಳು, ವಿಜ್ಞಾನಗಳ ವರ್ಗೀಕರಣ, ಅರಿಸ್ಟಾಟಲ್ನ ಕೃತಿಗಳ ಕುರಿತ ವಿಶ್ಲೇಷಣೆಗಳೆಲ್ಲ ಸೇರಿವೆ. ಬುದ್ಧಿಶಕ್ತಿಯ ಕುರಿತಾದ ಅವರ ಒಂದು ಪ್ರಸಿದ್ಧ ಗ್ರಂಥವು ಪಾಶ್ಚಿಮಾತ್ಯ ದೇಶಗಳಲ್ಲಿ ‘ಡಿ ಇಂಟೆಲೆಕ್ಟು’ ಎಂಬ ಹೆಸರಿನಿಂದ ಪ್ರಸಿದ್ಧವಾಗಿದೆ. ಅವಿಸೆನ್ನಾರಂತಹ ನಂತರದ ತತ್ವಜ್ಞಾನಿಗಳ ಮೇಲೆ ಆಳವಾದ ಪ್ರಭಾವವನ್ನು ಬೀರಿದ ಕೃತಿಯದು. ಅಳಿದುಳಿದ ಅವರ ಕೆಲವು ರಚನೆಗಳಲ್ಲಿ ಅಬ್ಬಾಸಿದ್ ಸಾಮ್ರಾಜ್ಯದ ಅವಧಿಯ ಕುರಿತು ಅವರು ಪ್ರವಚಿಸಿದ ಭವಿಷ್ಯವಾಣಿ, ನೈಸರ್ಗಿಕ ಹಾಗೂ ಗಣಿತ ವಿಜ್ಞಾನಗಳ ಮೇಲೆ ಮಾಡಿರುವ ವಿವಿಧ ಸಂಶೋಧನೆಗಳೂ ಸೇರಿವೆ.
ಅಲ್-ಕಿಂದಿಯ ಖ್ಯಾತಿಯು ಪಾಶ್ಚಿಮಾತ್ಯ ದೇಶಗಳಲ್ಲಿ ಅವರ ಕೆಲವು ತಾತ್ವಿಕ ಮತ್ತು ವೈಜ್ಞಾನಿಕ ಪ್ರಬಂಧಗಳ ಅನುವಾದದ (ಲ್ಯಾಟಿನ್) ಮೂಲಕ ಹರಡಿತು. ಪಶ್ಚಿಮದಲ್ಲಿ ಪ್ರಸಿದ್ಧರಾದ ಮುಸ್ಲಿಂ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದ ಅವರು ವಿಶೇಷತಃ ಜ್ಯೋತಿಷ್ಯ ಶಾಸ್ತ್ರದಲ್ಲಿ ನಿರ್ವಿವಾದವಾಗಿ ಅತ್ಯಂತ ಹೆಚ್ಚು ಗೌರವಿಸಲ್ಪಟ್ಟವರು. ಜ್ಯೋತಿಷ್ಯದ ಒಂಬತ್ತು ನ್ಯಾಯಾಧೀಶರಲ್ಲಿ ಒಬ್ಬರೆಂದು ಅವರನ್ನು ಅನೇಕರು ಪರಿಗಣಿಸಿದ್ದಾರೆ. ಮಧ್ಯಕಾಲೀನ ಅವಧಿಯಲ್ಲಿ ಅವರ ಖ್ಯಾತಿಯು ಎಷ್ಟು ವ್ಯಾಪಕವಾಗಿತ್ತೆಂದರೆ ಅದು ಒಂದು ಮಹಾ ನವೋತ್ಥಾನದತ್ತ (Renaissance) ಕೊಂಡೊಯ್ದಿತು. ಕಾರ್ಡನಸ್ನಂತಹ ಪ್ರಸಿದ್ಧ ಬರಹಗಾರರು ಅಲ್-ಕಿಂದಿಯನ್ನು ಮಾನವ ಇತಿಹಾಸದ ಹನ್ನೆರಡು ಅತ್ಯಂತ ಪ್ರಭಾವಶಾಲಿ ಮತ್ತು ಪ್ರಮುಖ ಬೌದ್ಧಿಕ ವ್ಯಕ್ತಿಗಳಲ್ಲಿ ಒಬ್ಬರಾಗಿ ಕಂಡುಕೊಂಡಿದ್ದಾರೆ.
ಅಲ್-ಕಿಂದಿಯಲ್ಲಿ ನಂತರದ ತತ್ವಜ್ಞಾನಿ-ವಿಜ್ಞಾನಿಗಳೊಂದಿಗೆ ಸಂಬಂಧಿಸಿದ ಹೆಚ್ಚಿನ ಲಕ್ಷಣಗಳು ಆಗಲೇ ಸ್ಪಷ್ಟವಾಗಿದ್ದವು. ತರ್ಕಶಾಸ್ತ್ರ, ನೈಸರ್ಗಿಕ ವಿಜ್ಞಾನ, ವೈದ್ಯಕೀಯ ವಿಜ್ಞಾನ ಮತ್ತು ಸಂಗೀತ, ಹಾಗೆಯೇ ದೇವತಾಶಾಸ್ತ್ರ ಮತ್ತು ಆಧ್ಯಾತ್ಮಿಕ ಶಾಸ್ತ್ರಗಳಲ್ಲಿ ಸಾರ್ವತ್ರಿಕ ಆಸಕ್ತಿಯ ವ್ಯಕ್ತಿಯಾಗಿದ್ದ ಅಲ್-ಕಿಂದಿ ಧರ್ಮನಿಷ್ಠ ಮುಸಲ್ಮಾನರಾಗಿಯೂ ಜೀವಿಸಿ ತೋರಿಸಿದರು. ಅದೇ ಸಮಯದಲ್ಲಿ ಅವರು ಎಲ್ಲ ಮೂಲಗಳಲ್ಲಿ ಸತ್ಯವನ್ನು ಶೋಧಿಸುತ್ತಲೂ ಇದ್ದರು. ಮೆಟಾಫಿಸಿಕ್ಸ್ ಕುರಿತಾದ ಅವರ ಪ್ರಬಂಧಗಳಲ್ಲಿ ಅವರೇ ಹೇಳುವಂತೆ, “ಸತ್ಯವನ್ನು ಒಪ್ಪಿಕೊಳ್ಳಲು ಮತ್ತು ಯಾವುದೇ ಮೂಲದಿಂದ ಬಂದಿದ್ದರೂ ಅದನ್ನು ಸಮಾನಮನಸ್ಕತೆಯಿಂದ ಸ್ವೀಕರಿಸಲು ಸಂಕೋಚಪಡಬಾರದು. ಒಂದು ವೇಳೆ ಅದು ಹಿಂದಿನ ತಲೆಮಾರುಗಳಿಂದ ಬಂದಿರಬಹುದು, ಅಥವಾ ವಿದೇಶೀಯರಿಂದ ನಮ್ಮ ಬಳಿಗೆ ಬಂದಿರಬಹುದು. ಸತ್ಯಶೋಧಕನಿಗೆ ಸತ್ಯಕ್ಕಿಂತ ಮೌಲ್ಯಯುತವಾದುದು ಯಾವುದೂ ಇಲ್ಲ; ಅವನ ಮಟ್ಟಿಗೆ ಅದೆಂದಿಗೂ ಅಗ್ಗವಾಗದು. ಅವನನ್ನು ಅದು ಅವಮಾನಕ್ಕೀಡಾಗಿಸದು, ಬದಲಾಗಿ ಅವನಿಗೆ ಅದು ಅಪಾರ ಗೌರವವನ್ನು ತಂದುಕೊಡುತ್ತದೆ.”
ಆದರೆ ಅಲ್-ಕಿಂದಿಯಲ್ಲಿ ಕೆಲವು ವಿಶಿಷ್ಟ ಲಕ್ಷಣಗಳೂ ಇದ್ದವು. ತತ್ವಶಾಸ್ತ್ರದಲ್ಲಿ ಅವರು ಅಲ್-ಫಾರಾಬಿ ಅಳವಡಿಸಿಕೊಂಡ ಅಲೆಕ್ಸಾಂಡ್ರಿಯನ್ ವಿಚಾರಧಾರೆಗಿಂತ ವಿಭಿನ್ನವಾಗಿ ನಿಯೋಪ್ಲಾಟೋನಿಸಂನ ಅಥೇನಿಯನ್ ಧಾರೆಗೆ ಹತ್ತಿರವಾಗಿದ್ದರು. ಅಥೇನಿಯನ್ ನಿಯೋಪ್ಲಾಟೋನಿಸ್ಟಾಗಿರುವ ಪ್ರೋಕ್ಲಸ್ ಬಳಸಿದಂತಹ ಕಾಲ್ಪನಿಕ ಮತ್ತು ವಿಘಟನಾತ್ಮಕ ತರ್ಕಕ್ರಮಗಳಿಗೆ ಅವರು ಆದ್ಯತೆ ನೀಡಿದರು. ಅಲ್ ಕಿಂದಿಯ ಈ ನಿಲುವನ್ನು ಅರಿಸ್ಟಾಟಲ್ ಸಿದ್ಧಾಂತಗಳಿಗೆ ಹೆಚ್ಚು ನಿಕಟವಾಗಿದ್ದ ಅಲ್-ಫರಾಬಿಯವರು ಟೀಕಿಸಿದರು. ಮಾತ್ರವಲ್ಲದೆ ಈ ರೀತಿಯ ಕ್ರಮವನ್ನು ಅವರು ದುರ್ಬಲವೆಂದು ಅಭಿಪ್ರಾಯಪಡುತ್ತಾರೆ. ಅಲ್-ಕಿಂದಿಯು ಅತೀಂದ್ರಿಯ ವಿಜ್ಞಾನದಲ್ಲಿ ವಿಶೇಷ ಆಸಕ್ತಿಯನ್ನು ಪ್ರದರ್ಶಿಸಿದರು. ಅವರ ನಂತರದ ಬಹುತೇಕ ತತ್ವಜ್ಞಾನಿ-ವಿಜ್ಞಾನಿಗಳಲ್ಲಿ ಆ ರೀತಿಯ ಆಸಕ್ತಿ ಕಂಡುಬರುವುದಿಲ್ಲ.
ಅಲ್ ಕಿಂದಿಯ ಧಾರ್ಮಿಕ ನಿಲುವಿನ ಬಗ್ಗೆ ಕೇಳಿದರೆ ಅವರು ಮುಅ್ತಝಿಲೀ ವಿಭಾಗದತ್ತ ಒಲವನ್ನು ಹೊಂದಿದ್ದರೆನ್ನಬಹುದು. ಅದಕ್ಕೆ ಅವರು ತಾತ್ವಿಕ ತಳಹದಿಯನ್ನು ಒದಗಿಸಲು ಮತ್ತು ತತ್ವಶಾಸ್ತ್ರ ಹಾಗೂ ಧರ್ಮ ಅಥವಾ ನಂಬಿಕೆ ಹಾಗೂ ಕಾರಣಗಳ ನಡುವಿನ ಸಂಬಂಧವನ್ನು ನಿರೂಪಿಸಲು ಪ್ರಯತ್ನಿಸಿದರು. ಅದು ಅಲ್-ಫಾರಾಬಿ ಮತ್ತು ಅವಿಸೆನ್ನಾರ ಚಿಂತನೆಗಳಲ್ಲಿ ಕಂಡುಬರುವುದಿಲ್ಲ.
ಅಲ್-ಕಿಂದಿಯ ಪ್ರಕಾರ ಎರಡು ವಿಧದ ಜ್ಞಾನಗಳಿವೆ. ಒಂದು ದೈವಿಕ ಜ್ಞಾನ (ಇಲ್ಮುಲ್ ಇಲಾಹಿ), ಇದು ದೇವರಿಂದ ಪ್ರವಾದಿಗಳಿಗೆ ಸಿಗುವಂಥದ್ದು. ಎರಡನೆಯದು ಮಾನವ ಜ್ಞಾನ (ಇಲ್ಮುಲ್ ಇನ್ಸಾನಿ), ಇವುಗಳ ಅತ್ಯುನ್ನತ ರೂಪ ತತ್ವಶಾಸ್ತ್ರವಾಗಿದೆ. ಮೊದಲನೆಯದು ಎರಡನೆಯದಕ್ಕಿಂತ ಶ್ರೇಷ್ಟವಾಗಿದೆ. ಏಕೆಂದರೆ ಅದು ಮಾನವ ಜ್ಞಾನವು ತನ್ನ ಸ್ವಇಚ್ಛೆಯಿಂದ ಎಂದಿಗೂ ತಲುಪಲು ಸಾಧ್ಯವಾಗದ ಸತ್ಯಗಳನ್ನು ಒಳಗೊಂಡಿದೆ. ಆದ್ದರಿಂದ, ‘ಎಕ್ಸ್-ನಿಹಿಲೋ ಸಿದ್ಧಾಂತ’ ದಂತಹ ದೈವಿಕ ಸತ್ಯಗಳನ್ನು ಅಥವಾ ದೇಹಗಳ ಪುನರ್ಜನ್ಮದ ವಿಷಯಗಳನ್ನು ತತ್ತ್ವಶಾಸ್ತ್ರದಿಂದ ನಿಖರವಾಗಿ ವಿಶ್ಲೇಷಿಸಲಾಗದಿದ್ದರೂ ಅಥವಾ ಅವುಗಳು ಅದಕ್ಕೆ ವಿರುದ್ಧವಾಗಿದ್ದರೂ ಕೂಡ ಒಪ್ಪಿಕೊಳ್ಳಬೇಕಾಗುತ್ತದೆ. ತತ್ವಶಾಸ್ತ್ರ ಮತ್ತು ವಿಜ್ಞಾನಗಳು ಹೀಗೆ ದೈವಿಕ ಸಂದೇಶಗಳಿಗೆ ಅಧೀನವಾಗಿವೆ ಮತ್ತು ಅಲ್-ಕಿಂದಿಯು ಬುದ್ಧಿಜೀವಿಗಳ ಪೀಳಿಗೆಯ ಮತ್ತು ಸ್ವರ್ಗಗಳ ಕುರಿತ ನಿಯೋಪ್ಲಾಟೋನಿಕ್ ಪರಿಕಲ್ಪನೆಯನ್ನು ಅಳವಡಿಸಿಕೊಳ್ಳುವಲ್ಲಿ ಯಾವುದೇ ಅಸಾಂಗತ್ಯವನ್ನು ಕಾಣುವುದಿಲ್ಲ. ಆದರೆ ಅದೇವೇಳೆ, ಎಕ್ಸ್-ನಿಹಿಲೋ ಸಿದ್ಧಾಂತಗಳು ಮತ್ತು ಅಸ್ತಿತ್ವದ ವಿಷಯಗಳು ದೇವನ ನಿಯಮದ ಮೇಲೆ ಅವಲಂಬಿತವಾಗಿವೆ ಎಂದು ಅವರು ಪ್ರತಿಪಾದಿಸುತ್ತಾರೆ.
ಹೆಲೆನಿಸ್ಟಿಕ್ ಮೂಲದ ವಿಷಯಗಳು ಮತ್ತು ಕಲ್ಪನೆಗಳನ್ನು ಇಸ್ಲಾಮಿಕ್ ಹಿನ್ನೆಲೆಯಲ್ಲಿ ಆಲೋಚಿಸುವ ಮತ್ತು ಹೊಸ ಭಾಷೆಯಲ್ಲಿ ಧ್ಯಾನಿಸುವ ಶೈಲಿಯು ಅಲ್-ಕಿಂದಿಯೊಂದಿಗೆ ಪ್ರಾರಂಭವಾಗುತ್ತದೆ. ಪ್ಲೇಟೋ ಮತ್ತು ಅರಿಸ್ಟಾಟಲ್, ನಿಯೋಪ್ಲಾಟೋನಿಸ್ಟ್ಗಳು ಮತ್ತು ಸ್ಟೊಯಿಕ್ಗಳು, ಹರ್ಮೆಟಿಸ್ಟ್ಗಳು ಮತ್ತು ಪೈಥಾಗೊರಿಯನ್ನರು, ಪ್ರಾಚೀನ ವೈದ್ಯರುಗಳು ಮತ್ತು ಗಣಿತಶಾಸ್ತ್ರಜ್ಞರು; ಅಲ್-ಕಿಂದಿಯೊಂದಿಗೆ ಅಸ್ತಿತ್ವಕ್ಕೆ ಬರುವ ಈ ಹೊಸ ಶಾಖೆಯ ರಚನೆಯಲ್ಲಿ ಕೆಲವು ಅಂಶಗಳನ್ನು ಕೊಡುಗೆ ನೀಡಿದ್ದಾರೆ. ಈ ಶಾಖೆಯು, ತಾನು ವ್ಯವಹರಿಸುವ ವಿಭಾಗಗಳ ಆಂತರಿಕವಾದ ಸ್ಥಿರತೆ ಮತ್ತು ತಾರ್ಕಿಕ ಬೇಡಿಕೆಗಳಿಗೆ ನಿಷ್ಠವಾಗಿರುವಂತೆಯೇ, ಹೊಸ ಇಸ್ಲಾಮಿಕ್ ಸಮುದಾಯದ ಕೆಲವು ನಿರ್ದಿಷ್ಟ ಘಟಕಗಳ ಬೌದ್ಧಿಕ ಮತ್ತು ಮಾನಸಿಕ ಅಗತ್ಯಗಳೊಂದಿಗೆ ಆಳವಾದ ಸಂಪರ್ಕವನ್ನು ಹೊಂದಿರುವ ಅಂಶಗಳನ್ನೂ ಕೂಡ ಸಮೀಕರಿಸುತ್ತದೆ. ಆ ಮೂಲಕ ಅದು ಒಂದು ಬೌದ್ಧಿಕ ದೃಷ್ಟಿಕೋನವನ್ನು ಸೃಷ್ಟಿಸುತ್ತದೆ. ಅದು ಕೇವಲ ಅರಿತುಕೊಂಡಿರಬೇಕಾದ ಸಾಧ್ಯತೆಗಳಿಗೆ ಮಾತ್ರವಲ್ಲದೆ ಪೂರೈಸಿರಬೇಕಾದ ಅಗತ್ಯಗಳಿಗೂ ಅನುರೂಪವಾಗಿದೆ. ಅಂದರೆ ಜಾಗತಿಕವಾಗಿ ಇಸ್ಲಾಮಿನ ಒಟ್ಟು ದೃಷ್ಟಿಕೋನದೊಳಗೆ ರಚನೆಯಾಗಿರಬೇಕಾದ ಒಂದು ದೃಷ್ಟಿಕೋನ ಅದು.
ಅಲ್-ಕಿಂದಿಯ ನಂತರ, ವಿಜ್ಞಾನ ಮತ್ತು ಕಲೆಗಳ ಬಹುತೇಕ ಪ್ರತಿಯೊಂದು ಶಾಖೆಗಳಲ್ಲಿ, ಅಂತೆಯೇ ತತ್ವಶಾಸ್ತ್ರ ಮತ್ತು ದೇವತಾಶಾಸ್ತ್ರದಲ್ಲಿ ಸಾಮಾನ್ಯ ಆಸಕ್ತಿಯನ್ನು ಹೊಂದಿರುವ ಅನೇಕ ವ್ಯಕ್ತಿಗಳು ಕಾಣಿಸಿಕೊಳ್ಳುತ್ತಾರೆ. ಅವರು ನವೋದಯ ಕಾಲದ ವಿಜ್ಞಾನಿ ಮತ್ತು ತತ್ವಜ್ಞಾನಿಗಳ ಸಾಮಾನ್ಯ ಆಸಕ್ತಿಗಳನ್ನು ಕಲೆ ಮತ್ತು ವಿಜ್ಞಾನಗಳಲ್ಲಿ, ಅದರಲ್ಲೂ ವಿಶೇಷತಃ ಧಾರ್ಮಿಕವಾಗಿ ಮಧ್ಯಕಾಲೀನ ದೇವತಾಶಾಸ್ತ್ರಜ್ಞ ಮತ್ತು ತತ್ವಜ್ಞಾನಿಗಳ ಆಸಕ್ತಿಯೊಂದಿಗೆ ಜೋಡಿಸುತ್ತಾರೆ. ಅವರು ತತ್ವಶಾಸ್ತ್ರ ಮತ್ತು ವಿಜ್ಞಾನಗಳನ್ನು ಅದರ ಔನ್ನತ್ಯದತ್ತ ಬೆಳೆಸುತ್ತಿರುವಾಗಲೇ, ಇಸ್ಲಾಮಿನಲ್ಲಿ ತಮ್ಮ ಕಾರ್ಯಕಾರಣ ಅಗತ್ಯಗಳನ್ನು ಪೂರೈಸಿಕೊಳ್ಳುವವರಾಗಿದ್ದರು. ಪಾಶ್ಚಿಮಾತ್ಯ ಜಗತ್ತಿನಲ್ಲಿ ಮಧ್ಯಯುಗದ ನಂತರ ಸಂಭವಿಸಿದಂತಹ ಧರ್ಮ ಮತ್ತು ವಿಜ್ಞಾನದ ನಡುವಿನ ಆ ಘರ್ಷಣೆಯು ಅವರಲ್ಲಿ ನಡೆಯಲಿಲ್ಲ. ಅಲ್-ಕಿಂದಿಯು ಇಸ್ಲಾಮಿಕ್ ಜಗತ್ತಿನ ಈ ಹೊಸದಾದ ತತ್ವಜ್ಞಾನಿ-ವಿಜ್ಞಾನಿಗಳ ವಿಭಾಗದ ಮೊದಲ ಉದಾಹರಣೆಯಾಗಿದ್ದಾರೆ. ಅವರು ತನ್ನ ದೃಷ್ಟಿಕೋನವನ್ನು ವಿಶ್ವದಾದ್ಯಂತ ಪಸರಿಸಿದ ತನ್ನ ನಂತರದ ಚಿಂತಕರಿಗೆ ಮಾದರಿಯಾಗಿ ಅನೇಕ ರೀತಿಯಲ್ಲಿ ಕಾರ್ಯನಿರ್ವಹಿಸಿದರು.
ಅಲ್-ಕಿಂದಿಯ ತಕ್ಷಣದ ವಿದ್ಯಾರ್ಥಿಗಳಲ್ಲಿ ಅತ್ಯಂತ ಪ್ರಸಿದ್ಧರಾದವರು ಅಹ್ಮದ್ ಇಬ್ನ್ ತಯ್ಯಿಬ್ ಅಲ್-ಸರಖ್ಸಿ, ಖಲೀಫಾ ಅಲ್ ಮೂತದಿದ್ನ ಶಿಯಾ ಬೋಧಕರಾಗಿದ್ದವರು. ಮುಂದೆ ಅವರು ಖಲೀಫಾರ ರಹಸ್ಯಗಳನ್ನು ಬಹಿರಂಗಪಡಿಸಿದರೆಂಬ ಕಾರಣದಿಂದ ಅವಕೃಪೆಗೊಳಗಾಗಿ ನಂತರದ ಅನೇಕ ಅಧಿಕಾರಿಗಳ ಹಾಗೆ ಪ್ರವಾದಿತ್ವವನ್ನು ನಿಷೇಧಿಸಿ ಕುಖ್ಯಾತರಾದವರು.
ಅಲ್-ಕಿಂದಿಯ ವಿದ್ಯಾರ್ಥಿಗಳ ಪೈಕಿ ಅಬೂ ಮಾಶರ್ ಅಲ್ ಬಲ್ಖಿ – ಮಧ್ಯಕಾಲೀನ ಯೂರೋಪಿನಲ್ಲಿ ಅಲ್ಬಮಾಸರ್ ಎಂದು ಕರೆಯಲ್ಪಡುವ ಪ್ರಸಿದ್ಧ ಜ್ಯೋತಿಷ್ಶಾಸ್ತ್ರಜ್ಞ – ಅವರನ್ನು ಮತ್ತು ‘ಸುವರುಲ್ ಅಕಾಲೀಮ್’ (ದಿ ಫಿಗರ್ ಆಫ್ ದಿ ಕ್ಲೈಮ್ಸ್ – ಹವಾಗುಣಗಳ ನಕಾಶೆ), ‘ಅಲ್ ಮಸಾಲಿಕ್ ವಲ್-ಮಮಾಲಿಕ್’ (ಮಾರ್ಗಗಳು ಮತ್ತು ಸಾಮ್ರಾಜ್ಯಗಳು) ಎಂಬ ಗ್ರಂಥಗಳ ಕರ್ತೃ ಅಬೂ ಝೈದ್ ಅಲ್-ಬಲ್ಖಿ ಅವರನ್ನೂ ಉಲ್ಲೇಖಿಸಬಹುದು. ಅವುಗಳು ಭೂಗೋಳಶಾಸ್ತ್ರದ ಅತ್ಯಂತ ಪ್ರಮುಖ ಆರಂಭಿಕ ಕೃತಿಗಳು. ಅವರ ನಂತರ ಬಂದ ವಿಜ್ಞಾನಿಗಳಾದ ಅಲ್ ಇಸ್ತಖ್ರಿ ಮತ್ತು ಇಬ್ನ್ ಹವ್ಕಲ್ ರ ಪ್ರಸಿದ್ಧ ಗ್ರಂಥಗಳಿಗೆ ಪ್ರಸ್ತುತ ಕೃತಿಗಳು ಮೂಲವಾಗಿವೆ. ಅಲ್-ಕಿಂದಿಯನ್ನು ತತ್ವಜ್ಞಾನಿ-ವಿಜ್ಞಾನಿಯಾಗಿ ತನ್ನ ನಿಜವಾದ ಉತ್ತರಾಧಿಕಾರಿಯಾಗಿರುವ ಅಬೂ ನಸ್ರ್ ಅಲ್-ಫಾರಾಬಿಯಿಂದ ಬೇರ್ಪಡಿಸುವ ತಾತ್ಕಾಲಿಕ ಕೊಲ್ಲಿಯನ್ನು ಸಂಪರ್ಕಿಸುವ ಮೂಲಕ ಇವರೆಲ್ಲರೂ – ನಿರ್ದಿಷ್ಟವಾಗಿ ವಿಜ್ಞಾನದ ವಿಭಾಗಗಳಲ್ಲಿ – ಅಲ್ ಕಿಂದಿಯ ಪ್ರಭಾವವನ್ನು ಪ್ರಚಾರ ಮಾಡಿದರು.
ಲ್ಯಾಟಿನ್ ನಲ್ಲಿ ‘ಅಲ್ಫರಾಬಿಯಸ್’, ನಂತರದ ಮುಸ್ಲಿಂ ವಿದ್ವಾಂಸರ ನಡುವೆ ‘ಎರಡನೇ ಶಿಕ್ಷಕ’ (ಅಲ್-ಮುಅಲ್ಲಿಮುಸ್ಸಾನಿ) ಎಂದು ಪ್ರಸಿದ್ಧರಾದ ಅಬೂ ನಸ್ರ್ ಅಲ್ ಫಾರಾಬಿ, ಹಿಜರಿ 257/870 ರ ಸುಮಾರಿಗೆ ಖುರಾಸಾನ್ ಪ್ರಾಂತ್ಯದ ಫಾರಾಬ್ನ ವಾಸಿಜ್ನಲ್ಲಿ ಜನಿಸಿದರು. ಯೌವನದಲ್ಲಿ ಮತ್ತಾ ಇಬ್ನ್ ಯೂನಸ್ ರ ಬಳಿ ತರ್ಕಶಾಸ್ತ್ರ ಮತ್ತು ತತ್ವಶಾಸ್ತ್ರವನ್ನು ಅಧ್ಯಯನ ಮಾಡಲು ಬಾಗ್ದಾದ್ಗೆ ಪ್ರಯಾಣಿಸಿದ ಅಲ್ ಫಾರಾಬಿ, ಮುಂದೆ ಹರ್ರಾನ್ ನಲ್ಲಿ ಯುಹನ್ನಾ ಇಬ್ನ್ ಹೈಲಾನ್ ರ ವಿದ್ಯಾರ್ಥಿಯಾದರು. ಪ್ರಾರಂಭದಿಂದಲೂ ತೀಕ್ಷ್ಣವಾದ ಬುದ್ಧಿವಂತಿಕೆಯನ್ನು ಹೊಂದಿದ್ದ ಅಲ್ ಫಾರಾಬಿಯು ತಾನು ಕಲಿಯುವ ಪ್ರತಿಯೊಂದು ವಿಷಯದಲ್ಲಿ ವಿಶೇಷ ಸಾಮರ್ಥ್ಯವನ್ನು ಕರಗತ ಮಾಡಿಕೊಳ್ಳುವ ಅನುಗ್ರಹೀತ ವ್ಯಕ್ತಿಯಾಗಿದ್ದರು. ದಾರ್ಶನಿಕ ಮತ್ತು ವಿಜ್ಞಾನಿಯಾಗಿ ಪ್ರಸಿದ್ಧಿಯನ್ನು ಪಡೆದು ಬಾಗ್ದಾದ್ಗೆ ಹಿಂದಿರುಗಿದ ನಂತರ ಅಲ್ಲಿ ಪ್ರಸಿದ್ಧ ಕ್ರಿಶ್ಚಿಯನ್ ತತ್ವಜ್ಞಾನಿ ಯಹ್ಯಾ ಇಬ್ನ್ ಅದಿಯ್ಯ್ ಸೇರಿದಂತೆ ಒಂದಷ್ಟು ಶಿಷ್ಯರ ಗುಂಪು ಅವರ ಸುತ್ತ ಒಟ್ಟುಗೂಡಿತು. ಅಲ್-ಫಾರಾಬಿ ಬಾಗ್ದಾದ್ನಲ್ಲಿ ಹೆಚ್ಚು ಕಾಲ ನಿಲ್ಲದೆ ಹಿ. 330/941 ರಲ್ಲಿ ಅಲೆಪ್ಪೊದಲ್ಲಿನ ಸೈಫ್ ಅಲ್-ದವ್ಲಾ ಅಲ್-ಹಮ್ದಾನಿ ಅವರ ಆಸ್ಥಾನಕ್ಕೆ ಭೇಟಿನೀಡಿ ಅಲ್ಲೇ ನೆಲೆಸಿ ಸುಮಾರು 339/950 ರಲ್ಲಿ ಅಲ್ಲೇ ವಿಧಿವಶರಾದರು.
ಅಲ್-ಫಾರಾಬಿಯನ್ನು ಅರಿಸ್ಟಾಟಲ್ನ ಶ್ರೇಷ್ಠ ವ್ಯಾಖ್ಯಾನಕಾರ ಮತ್ತು ಅನುಯಾಯಿ ಎಂದು ಪರಿಗಣಿಸಲಾಗಿದೆ. ಅರಿಸ್ಟಾಟಲ್ ನ ಕೆಟಗರೀಸ್ (ವರ್ಗಗಳು), ಹರ್ಮೆನ್ಯೂಟಿಕ್ಸ್, ಪ್ರಿಯರ್ ಎಂಡ್ ಪೋಸ್ಟೀರಿಯರ್ ಅನಾಲಿಟಿಕ್ಸ್ (ಪೂರ್ವಾಪರ ವಿಶ್ಲೇಷಣೆಗಳು), ಸೋಫಿಸ್ಟಿಕ್ಸ್, ರಿಟೋರಿಕ್ ಎಂಡ್ ಪೊಯೆಟಿಕ್ಸ್ (ವಾಕ್ಚಾತುರ್ಯ ಮತ್ತು ಕಾವ್ಯಶಾಸ್ತ್ರ), ಹಾಗೆಯೇ ತರ್ಕಶಾಸ್ತ್ರದಲ್ಲಿ ಪೋರ್ಫಿರಿಯ ಪ್ರವೇಶಿಕೆ ಮತ್ತು ಅರಿಸ್ಟಾಟಲ್ನ ನಿಕೋಮಿಷಿಯನ್ ನೀತಿಶಾಸ್ತ್ರ, ಭೌತಶಾಸ್ತ್ರ, ಡಿ ಕೆಲೊ ಮತ್ತು ಹವಾಮಾನಶಾಸ್ತ್ರದ ಮೇಲೆ ವ್ಯಾಖ್ಯಾನಗಳನ್ನು ಬರೆದಿದ್ದಾರೆ. ಮೆಟಾಫಿಸಿಕ್ಸ್ನ ಮೇಲೂ ವ್ಯಾಖ್ಯಾನವನ್ನು ರಚಿಸಿದರು. ಇದು ಸ್ವಯಂ ಅಲ್-ಫಾರಾಬಿಯವರ ಮೆಟಾಫಿಸಿಕಲ್ ಮತ್ತು ಆಂಟೋಲಾಜಿಕಲ್ ಬಗೆಗಿನ ಪ್ರಶ್ನೆಗಳ ನಿರೂಪಣೆಯ ಪ್ರಾಮುಖ್ಯತೆಯ ಜೊತೆಗೆ, ಅರಿಸ್ಟಾಟಲಿಯನ್ ಮೆಟಾಫಿಸಿಕ್ಸ್ನ ಕುರಿತಾದ ಅವಿಸೆನ್ನಾ ಅವರ ತಿಳುವಳಿಕೆಯನ್ನೂ ನೇರವಾಗಿ ಹೊಂದಿದೆ.
ತರ್ಕಶಾಸ್ತ್ರದಲ್ಲಿ, ವಿಶೇಷವಾಗಿ, ಅಲ್ ಫಾರಾಬಿಯ ಕೆಲಸಗಳು ನಿರ್ದಿಷ್ಟವಾಗಿ ಗಮನಾರ್ಹವಾದವುಗಳು. ಯಾಕೆಂದರೆ, ಅದರಲ್ಲಿ ಅರಿಸ್ಟಾಟಲ್ನ ತರ್ಕವನ್ನು ಅತ್ಯಂತ ಸೂಕ್ತವಾದ ಮತ್ತು ನಿಖರವಾದ ಅರೇಬಿಕ್ ಪರಿಭಾಷೆಯಲ್ಲಿ ವ್ಯಕ್ತಪಡಿಸಲಾಗಿದೆ. ಇದು ಮುಂದೆ ಇಸ್ಲಾಮಿಕ್ ಅಧ್ಯಯನದ ಎಲ್ಲಾ ಶಾಖೆಗಳ ಪರಂಪರೆಯಾಗಿ ಮಾರ್ಪಟ್ಟಿತು.
(ಮುಂದುವರೆಯುತ್ತದೆ)
ಮೂಲ: ಹುಸೈನ್ ನಸ್ರ್
ಅನುವಾದ: ಡಾ. ಸಿ ಯಂ ಹನೀಫ್ ಬೆಳ್ಳಾರೆ