ಕ್ರೀಡಾ ಲೋಕದಲ್ಲಿ ಕ್ರಾಂತಿಕಾರಕ ಬದಲಾವಣೆಗಳನ್ನು ತಂದ ಪ್ರತಿಭೆಯಾಗಿದ್ದರು ಮುಹಮ್ಮದ್ ಅಲಿ ಯವರು. ಅಂದಿನ ಅಜೇಯ ಬಾಕ್ಸರ್ ಆಗಿದ್ದ ಸೋನಿ ಲಿಸ್ಟನ್ ನನ್ನು 1964 ರಲ್ಲಿ ಸೋಲಿಸಿ ರಿಂಗ್ ನೊಳಗೆ ಭರ್ಜರಿ ಎಂಟ್ರಿ ಕೊಟ್ಟರು. ಆ ಮೂಲಕ ಹಾಲಿ ಹೆವಿವೇಟ್ ಚಾಂಪಿಯನ್ ನನ್ನು ಸೋಲಿಸಿದ ಅತಿ ಕಿರಿಯ ಬಾಕ್ಸರ್ ಎಂಬ ಗರಿಮೆಗೆ ಪಾತ್ರರಾದರು. ಜೋ ಲೂಯಿಸ್ ಮತ್ತು ಸುಗರ್ ರೇ ರಾಬಿನ್ಸನ್ ಅವರ ಸಾಲಿನಲ್ಲಿ ‘ಯಶಸ್ವಿ ಬಾಕ್ಸರ್’ ಎಂದು ಕ್ರೀಡಾ ಕ್ಷೇತ್ರವು ಅವರನ್ನು ಗುರುತಿಸಿತು. ಮೂರು ಬಾರಿ ವಿಶ್ವ ಹೆವಿವೇಟ್ ಚಾಂಪಿಯನ್‌ಶಿಪ್ ಪಡೆಯುವ ಮೂಲಕ ಅವರು ತಮ್ಮ ಕ್ರೀಡಾ ಸಾಮರ್ಥ್ಯವನ್ನು ಒರೆಗೆ ಹಚ್ಚಿದ್ದರು.
ಆಗಿನ ಕಾಲದ ಅವರ ಬಾಕ್ಸಿಂಗ್ ಶೈಲಿಯು ತೀರ ಅಸಾಂಪ್ರದಾಯಿಕ (Unorthodox) ಹಾಗೂ ಒಂದು ರೀತಿಯಲ್ಲಿ ಅಪ್ಪಟ ಬಾಕ್ಸರ್ ಗಳ ಅವಹೇಳನದಂತಿತ್ತು. ಆದಾಗ್ಯೂ ಅವರ ವೇಗ ಮತ್ತು ಶಕ್ತಿಯುತ ಪಂಚ್ ಗಳು ಪ್ರೇಕ್ಷಕರನ್ನು ತುದಿಗಾಲಲ್ಲಿ ನಿಲ್ಲುವಂತೆ ಮಾಡಿದ್ದವು. ಆದ್ದರಿಂದಲೇ ಕ್ರೀಡಾ ವಿಶ್ಲೇಷಕರು ಅಲಿಯವರನ್ನು ‘ಸಾರ್ವಕಾಲಿಕ ಬಾಕ್ಸರ್’ ಎಂದು ಬಣ್ಣಿಸಿದ್ದರು. ರಿಂಗ್ ಒಳಗೆ ಅವರು ತೋರಿದ ಪ್ರದರ್ಶನದ ಕಾರಣದಿಂದಾಗಿ ‘ಸ್ಪೋರ್ಟ್ಸ್ ಇಲಸ್ಟ್ರೇಟೆಡ್’ (Sports Illustrated) ಎಂಬ ಮ್ಯಾಗಝೀನ್ ‘ಶತಮಾನದ ಕ್ರೀಡಾಪಟು’ ಎಂದು ವಿಶ್ಲೇಷಿಸಿತ್ತು. ಆಫ್ ಫೀಲ್ಡ್ ನಲ್ಲಿ ಅವರ ಆಕರ್ಷಕ ವ್ಯಕ್ತಿತ್ವವು ಅವರನ್ನು ಇನ್ನೂ ಎತ್ತರಕ್ಕೆ ಕೊಂಡೊಯ್ಯಿತು ಎಂದೇ ಹೇಳಬಹುದು.
ಅವರು ಕೊಡುತ್ತಿದ್ದ ಮುಷ್ಟಿ ಪ್ರಹಾರಗಳಿಗಿಂತ ಹೆಚ್ಚಿನ ವೇಗವು ಅವರ ನಾಲಿಗೆ ಮತ್ತು ಮನಸ್ಸಿಗಿತ್ತು. ಅಮೆರಿಕದ ಮುಖ್ಯವಾಹಿನಿಗೆ ಕಹಿಯಾಗಿದ್ದ ಕೆಲವು ಸತ್ಯಗಳು ಓರ್ವ ಕರಿಯ ಯುವಕನ ಬಾಯಿಯಿಂದ ಹೊರಬೀಳುವುದನ್ನು ಇಡೀ ವಿಶ್ವವೇ ಬೆರಗುಗಣ್ಣಿನಿಂದ ವೀಕ್ಷಿಸಿತು. ಆಫ್ರೋ- ಅಮೆರಿಕನ್ನರ ಅಭಿಮಾನದ ಸಂಕೇತವಾಗಿ ಅಲಿಯವರು ಬದಲಾದರು. ಮಾತ್ರವಲ್ಲದೆ, ಅವರು ಜನರ ನಡುವೆ ‘ಪೀಪಲ್ಸ್ ಚಾಂಪಿಯನ್’ ಎಂದು ಪ್ರಸಿದ್ಧರಾದರು. ಏಕಕಾಲದಲ್ಲಿ ಇಸ್ಲಾಮಿನ ಆದರ್ಶ ಮತ್ತು ಕಪ್ಪು ವರ್ಣದ ಶಕ್ತಿಯನ್ನು ಅಮೆರಿಕ ಹಾಗೂ ಇಡೀ ವಿಶ್ವಕ್ಕೆ ತಿಳಿಸಿದ ದಂತಕಥೆಯಾಗಿದ್ದರು ಅವರು.
1964 ರ ಫೆಬ್ರವರಿ 25 ರಂದು ಲಿಸ್ಟನ್ ನನ್ನು ಸೋಲಿಸಿದ ನಂತರ ಕಾಷಿಯಸ್ ಕ್ಲೇ ಎಂಬ ತನ್ನ ಹೆಸರನ್ನು ‘ಮುಹಮ್ಮದ್ ಅಲಿ’ ಎಂದು ಬದಲಾಯಿಸಿದ್ದಾಗಿ ಘೋಷಿಸಿದರು. ಆದರೆ ಬಹುತೇಕ ಕ್ರೀಡಾ ವರದಿಗಾರರು, ಅವರ ಪ್ರತಿಸ್ಪರ್ಧಿಗಳು ಅವರನ್ನು ಹೊಸ ಹೆಸರಿನಿಂದ ಕರೆಯಲು ಇಷ್ಟಪಡಲಿಲ್ಲ. ಅವರು ಕಾಷಿಯಸ್ ಕ್ಲೇ ಎಂದೇ ಕರೆಯುತ್ತಿದ್ದರು. “ನಾನು ಎಲ್ಲಿಗೆ ಹೋಗುತ್ತಿದ್ದೇನೆ ಎಂಬ ಅರಿವು ನನಗಿದೆ. ಸತ್ಯ ಏನೆಂದು ನನಗೆ ತಿಳಿದಿದೆ. ನಿಮ್ಮ ಹಾದಿ ನನಗೆ ಬೇಕಾಗಿಲ್ಲ. ನನಗಿಷ್ಟ ಬಂದ ಹಾಗೆ ಬದುಕುವ ಸ್ವಾತಂತ್ರ್ಯ ನನಗಿದೆ”- ಇದು ಅವರು ಮೊದಲ ಚಾಂಪಿಯನ್‌ಶಿಪ್ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದ ಮಾತುಗಳು.
ಮುಂದಿನ ದಿನಗಳಲ್ಲಿ ಕೇವಲ ಓರ್ವ ಬಾಕ್ಸರ್ ಎಂಬುದರ ಹೊರತಾಗಿ, ಜನರ ನಡುವೆ ಬೆರೆತು ಜನನಾಯಕರಾಗಿ ರೂಪಾಂತರಗೊಂಡರು. ಅನ್ಯಾಯ, ಜನಾಂಗೀಯ ಅಸಮಾನತೆ ವಿರುದ್ಧ ಕಟುವಾಗಿ ಪ್ರತಿಕ್ರಿಯಿಸಿದರು. ತರುವಾಯ, ತಮ್ಮ ಜೀವನದ ಬಹುಭಾಗವನ್ನು ಜನಸೇವೆಗಾಗಿ ಮುಡಿಪಾಗಿಟ್ಟರು. ಅಲಿಯವರು ನೇಷನ್ ಆಫ್ ಇಸ್ಲಾಂನ್ನು ತ್ಯಜಿಸಿ ಮುಖ್ಯವಾಹಿನಿ ಇಸ್ಲಾಂ ಸೇರಿಕೊಂಡರು. 9/11 ರ ದಾಳಿ ನಡೆದಾಗ ಭಯೋತ್ಪಾದನಾ ಕೃತ್ಯಗಳನ್ನು ತೀವ್ರವಾಗಿ ಖಂಡಿಸುವ ಮೂಲಕ ತಮ್ಮ ವಿರೋಧವನ್ನು ವ್ಯಕ್ತಪಡಿಸಿದ್ದರು. “ಇದರಿಂದ ನಾನು ತೀವ್ರವಾಗಿ ನೊಂದಿದ್ದೇನೆ. ಇಸ್ಲಾಂ ಅಂದರೆ ಶಾಂತಿಯೇ ಹೊರತು ಹಿಂಸೆಯಲ್ಲ. ಕೆಲವರ ದುಷ್ಕೃತ್ಯಗಳು ಇಡೀ ಒಂದು ಧರ್ಮವನ್ನು ಕೆಟ್ಟದಾಗಿ ಚಿತ್ರಿಸಲು ಕಾರಣವಾಗುತ್ತವೆ” ಎಂದು ಅವರು ಹೇಳಿದ್ದರು.
1966ರ ಮಾರ್ಚ್‌ನಲ್ಲಿ ಸೇನೆಗೆ ಸೇರಲು ಅರ್ಹತೆ ಗಿಟ್ಟಿಸಿದ ಬಳಿಕ, ಅಮೆರಿಕದ ಸಶಸ್ತ್ರ ಸೈನ್ಯದಲ್ಲಿ ಕಡ್ಡಾಯ ಸೇವೆ ಸಲ್ಲಿಸಲು ನಿರಾಕರಿಸಿದ್ದರಿಂದ ಪುನಃ ಮಾಧ್ಯಮಗಳ ಗಮನದ ಕೇಂದ್ರಬಿಂದುವಾದರು. ಸೇವೆ ಸಲ್ಲಿಸದಿರುವ ಸ್ವಾತಂತ್ರ್ಯ ನನಗೆ ಬೇಕೆಂದು ಸರಕಾರವನ್ನು ವಿನಂತಿಸಿದರು. ವಿಯಟ್ನಾಂ ಯುದ್ಧವನ್ನು ಅಂದಿನ ಬಹುತೇಕ ಅಮೆರಿಕನ್ನರು ಬೆಂಬಲಿಸಿದರು. ಯುದ್ಧದ ವಿರುದ್ಧ ದನಿಯೆತ್ತುವ ಅಲಿಯವರ ತೀರ್ಮಾನವು ವಿವಾದದ ಕಿಡಿ ಹೊತ್ತಿಸಿತು. ಅವರನ್ನು ಹೇಡಿ, ದೇಶದ್ರೋಹಿಯೆಂದು ಚಿತ್ರಿಸಲು ರಾಜಕಾರಣಿಗಳು, ಇಸ್ಲಾಮೋಫೋಬಿಕ್ ಮಾಧ್ಯಮಗಳು ದಿನವಿಡೀ ದುಡಿದವು. ಆದರೆ ಅಲಿಯವರ ಪ್ರತಿಕ್ರಿಯೆ ಹೀಗಿತ್ತು; “ಆ ಅಮಾಯಕರ ವಿರುದ್ಧ ಬಂದೂಕು ಹಿಡಿಯಲು ನನಗೆ ಸಾಧ್ಯವಿಲ್ಲ, ಅದರ ಬದಲಾಗಿ ನನ್ನನ್ನು ಜೈಲಿಗಟ್ಟಿರಿ”.
ತಮ್ಮ ಧೃಡಚಿತ್ತದ ಸಹಾಯದಿಂದ ಅಲಿಯವರು ಮುಂದೆ ಸಾಗಿದರು. ಆದರೆ ತಮ್ಮ ಕೆಲವು ತೀರ್ಮಾನಗಳು ಮುಂದೆ ಅವರು ಬೆಲೆ ತೆರುವಂತೆ ಮಾಡಿದವು. 1967 ರ ಮಾರ್ಚ್‌ನಲ್ಲಿ ಹೆವಿವೇಟ್ ನಿಂದ ಹೊರದಬ್ಬಲ್ಪಟ್ಟರು. ಜೂನ್ ತಿಂಗಳಲ್ಲಿ ಸೇವೆಗೆ ನಿಯೋಜಿಸಿದ ಡ್ರಾಫ್ಟ್ ನ್ನು ತಿರಸ್ಕರಿಸಿದ್ದಕ್ಕಾಗಿ 5 ವರ್ಷಗಳ ಸೆರೆಮನೆ ವಾಸ ಅನುಭವಿಸುವಂತಾಯಿತು. ಬಾಕ್ಸಿಂಗ್ ನಿಂದ ನಿಷೇಧಕ್ಕೊಳಗಾಗಿ ಪಾಸ್ ಪೋರ್ಟ್ ಜಪ್ತಿ ಮಾಡಲ್ಪಟ್ಟಿತು. ದೇಶದ ಯಾವುದೇ ಸಂಸ್ಥಾನದಲ್ಲೂ ಬಾಕ್ಸಿಂಗ್ ನಲ್ಲಿ ಭಾಗವಹಿಸಲು ಲೈಸೆನ್ಸ್ ನೀಡಲಿಲ್ಲ. ವೃತ್ತಿ ಜೀವನದ ಪ್ರಮುಖ ಐದು ವರ್ಷಗಳಲ್ಲಿ ವೃತ್ತಿಯಿಂದ ದೂರಸರಿದ ಕಾರಣ ಸಾಲದ ಸುಳಿಗೆ ಸಿಲುಕಿದರು. ನಂತರ ಬದುಕಿನ ಕೊನೆಯ ಮೂರು ದಶಕಗಳಲ್ಲಿ ಪಾರ್ಕಿನ್ಸನ್ ಕಾಯಿಲೆಯಿಂದಾಗಿ ಹಾಸಿಗೆ ಹಿಡಿದರು.
ಆದರೆ ಅಲಿಯವರ ಇಸ್ಲಾಮಿಕ್ ವೀಕ್ಷಣೆಗಳು 60ರ ದಶಕದ ಯುದ್ಧ ವಿರೋಧಿ ಸಂಘಟನೆಗಳಿಗೆ ಶಕ್ತಿ ನೀಡಿದವು. 1967ರ ಎಪ್ರಿಲ್ ನಲ್ಲಿ ನಡೆದ ವಿಯಟ್ನಾಂ ಯುದ್ಧದ ವಿರುದ್ಧ ಮಾರ್ಟಿನ್ ಲೂಥರ್ ಕಿಂಗ್ ರಂಗಕ್ಕಿಳಿಯಲು ಅಲಿಯವರ ನಿಲುವು ಪ್ರೋತ್ಸಾಹ ನೀಡಿತು. ಬಾಕ್ಸಿಂಗ್ ನಿಂದ ನಿರ್ಬಂಧ ಹೇರಲ್ಪಟ್ಟ ಆ ದಿನಗಳಲ್ಲಿ ಕ್ಯಾಂಪಸ್ ಗಳಿಗೆ ತೆರಳಿ ವಿದ್ಯಾರ್ಥಿಗಳಿಗೆ ಸ್ಪೂರ್ತಿ ತುಂಬುತ್ತಿದ್ದರು. ಅವರೋರ್ವ ಪ್ರಚಂಡ ವಾಗ್ಮಿಯಾಗಿದ್ದರು.
ತಮ್ಮ ನಂಬಿಕೆ- ಆದರ್ಶದ ವಿಷಯದಲ್ಲಿ ಅವರಿಗೆ ಬದ್ಧತೆ ಇತ್ತು. “ಬಾಕ್ಸಿಂಗ್ ರಿಂಗಿನೊಳಗಿನ ನನ್ನ ಕಾದಾಟದಿಂದ ಕೇವಲ ನನಗೆ ಮಾತ್ರ ಜನಪ್ರಿಯತೆ ಸಿಕ್ಕಿತು. ನಾನು ಬಾಕ್ಸಿಂಗ್ ನ್ನು ಯಾವತ್ತೂ ಎಂಜಾಯ್ ಮಾಡುವುದಿಲ್ಲ. ಜನರನ್ನು ನೋಯಿಸುವುದು, ವೇಗವಾದ ಪಂಚ್ ಗಳ ಮೂಲಕ ಹೊಡೆದುರುಳಿಸುವುದನ್ನು ನಾನು ಸಂಭ್ರಮಿಸುವುದಿಲ್ಲ. ಆದರೆ ಈ ಜಗತ್ತು ಅಧಿಕಾರ, ಸಂಪತ್ತು, ಪ್ರಶಸ್ತಿಗಳನ್ನು ಮಾತ್ರವೇ ಗುರುತಿಸುತ್ತದೆ. ಆದರೆ, ಇಸ್ಲಾಮಿನ ಸುಂದರ ಆಶಯಗಳು, ಮುಸ್ಲಿಮರ ಐಕ್ಯತೆ, ಏಕತೆಯು ನನ್ನ ಮೇಲೆ ಪ್ರಭಾವ ಬೀರಿದವು. ಅವರು ಮಕ್ಕಳನ್ನು ಬೆಳೆಸುವ ರೀತಿ, ಇಸ್ಲಾಮಿಕ್ ಆಚಾರ-ಅನುಷ್ಠಾನಗಳ ಸೌಂದರ್ಯ, ಅವರ ಭಕ್ಷ್ಯ ರೀತಿ, ವಸ್ತ್ರಧಾರಣೆ ಸೊಗಸಾಗಿವೆ. ಇದನ್ನು ಎಲ್ಲರಿಗೂ ತಲುಪಿಸಲು ನಾನು ಉತ್ಸುಕನಾಗಿದ್ದೇನೆ. ಜನರು ಸತ್ಯವನ್ನು ಅರಿತರೆ, ಅದನ್ನು ಅಂಗೀಕರಿಸಿ, ಇಸ್ಲಾಮಿಗೆ ಆಕರ್ಷಿತರಾಗುತ್ತಾರೆ. ವರ್ಣ ಕಪ್ಪಾಗಲಿ, ಬಿಳುಪಾಗಿರಲಿ, ಕೆಂಪೇ ಆಗಿರಲಿ, ಕ್ರೈಸ್ತ, ಹಿಂದೂ, ಬೌದ್ಧ, ನಾಸ್ತಿಕ ಯಾರೇ ಆಗಲಿ ಖುರಾನ್ ಆಲಿಸಿದರೆ, ಪ್ರವಾದಿಯವರ ಬಗ್ಗೆ ತಿಳಿದರೆ, ಖಂಡಿತವಾಗಿಯೂ ಅದು ಆತನ ಮೇಲೆ ಪ್ರಭಾವ ಬೀರುತ್ತದೆ” ಎಂದು ಅವರೊಮ್ಮೆ ಹೇಳಿದ್ದರು.
ತಮ್ಮ ಪೂರ್ವಜರು ಅಮೆರಿಕಾಗೆ ಬಯಸಿ ಬಂದವರಲ್ಲ. ಗುಲಾಮಗಿರಿಗಾಗಿ ಹಡಗುಗಳ ಮೂಲಕ ದೂರದಿಂದ ಅವರನ್ನು ಅಮೆರಿಕದಲ್ಲಿ ತಂದು ಇಳಿಸಲಾಯಿತು ಎಂಬುದು ಅವರಿಗೆ ಗೊತ್ತಿದ್ದರೂ, ಅಮೆರಿಕವನ್ನು ಅವರು ಅತಿಯಾಗಿ ಪ್ರೀತಿಸಿದರು. ವರ್ಣಬೇಧ ವ್ಯವಸ್ಥೆಯ ಕೇಂದ್ರಗಳಾಗಿದ್ದ ಶಾಲೆಗಳಿಗೆ ಕರಿಯರು ಕಡ್ಡಾಯವಾಗಿ ಹೋಗಬೇಕಾಗಿದ್ದರೂ ಕೂಡಾ ಅವರು ತಾವಿರುವ ಮಣ್ಣನ್ನು ಗೌರವಿಸಿದರು. ಸರಕಾರವೇ ನಿರ್ಲಕ್ಷಿಸಿದರೂ ಅವರು ನಾಡನ್ನು ಅಭಿಮಾನದಿಂದ ಕಂಡರು. ಡ್ರಾಫ್ಟ್ ನ್ನು ನಿರ್ಲಕ್ಷಿಸಿದ ಕಾರಣ ಬಾಕ್ಸಿಂಗ್ ನಿಂದ ನಿಷೇಧಿಸ್ಪಟ್ಟಿದ್ದರೂ ದೇಶದ ಮೇಲಿನ ಪ್ರೀತಿ ಕಿಂಚಿತ್ತೂ ಕಡಿಮೆಯಾಗಿರಲಿಲ್ಲ. ತನ್ನನ್ನು ಹೋರಾಟಗಾರನಾಗಿ ಬೆಳೆಸಿದ ಮಣ್ಣು ಎಂಬ ಕಾರಣಕ್ಕಾಗಿ ಅಮೆರಿಕಾವನ್ನು ಅವರು ಪ್ರೀತಿಸಿದರು.
ಮುಸ್ಲಿಂ ಜಗತ್ತಿನಲ್ಲಿ ಒಳ್ಳೆಯ ಹೆಸರಿದ್ದ ವ್ಯಕ್ತಿಯಾಗಿದ್ದರು ಅಲಿಯವರು. ಮುಸ್ಲಿಂ ದೇಶಗಳಿಂದ ಹೋಗಿ ಅಮೆರಿಕದಲ್ಲಿ ನಿರಾಶ್ರಿತರಾಗಿದ್ದವರು, ವಿವಿಧ ದೇಶಗಳಿಂದ ವಲಸೆ ಹೋದ ಜನರೊಂದಿಗೆ ಬಾಂಧವ್ಯ ಹೊಂದಿದ್ದರು. ವರ್ಷಗಳ ಕಾಲ ಸರ್ಕಾರದೊಂದಿಗೆ ಹೋರಾಟ ನಡೆಸಿದ್ದರೂ, ವರ್ಣ-ಧರ್ಮದ ವಿಚಾರದಲ್ಲಿ ವೈಯಕ್ತಿಕವಾಗಿ ನೋವನ್ನನುಭವಿಸಿದರೂ ಕ್ರೀಡಾಭಿಮಾನಿಗಳ ಎದುರು ದೇಶಪ್ರೇಮವನ್ನು ಪ್ರಕಟಿಸಲು ಸನ್ನದ್ಧರಾಗಿದ್ದರು.
ಬಾಲ್ಯದಿಂದಲೇ ಅವರೊಬ್ಬ ‘ರೆಬೆಲ್’ ಆಗಿದ್ದರು. ಅಧಿಕಾರ ಪ್ರಜೆಗಳದ್ದಾಗಿರಬೇಕೆಂಬ ತತ್ವದಲ್ಲಿ ಬಲವಾದ ನಂಬಿಕೆ ಇಟ್ಟಿದ್ದರು. ವಿವಿಧ ಜನಾಂಗ, ಪ್ರದೇಶ, ನಂಬಿಕೆಯ ಜನರು ಸೇರಿದಾಗ ಮಾತ್ರ ಒಂದು ದೇಶವು ತನ್ನ ಮಹತ್ವ ಪಡೆದುಕೊಳ್ಳುತ್ತದೆ ಎಂದು ಅರಿತಿದ್ದರು. ಗುಲಾಮರು, ವಲಸಿಗರು, ಉಗ್ರವಾದಿಗಳು, ಸೈನಿಕರು ಮುಂತಾದವರೆಲ್ಲರೂ ಸೇರಿ ನಿರ್ಮಾಣವಾದ ರಾಷ್ಟ್ರವಾಗಿದೆ ಅಮೆರಿಕ ಸಂಯುಕ್ತ ಸಂಸ್ಥಾನ ಎಂಬ ದೃಢವಾದ ನಂಬಿಕೆಯನ್ನು ಹೊಂದಿದ್ದರು.
ಅವರ ವಿರುದ್ಧ ದಾಖಲಾಗಿದ್ದ ದೋಷಾರೋಪ ಪಟ್ಟಿಯನ್ನು 1971 ರಲ್ಲಿ ಸುಪ್ರೀಂ ಕೋರ್ಟ್ ಸರ್ವಾನುಮತದಿಂದ ಅಸಿಂಧುಗೊಳಿಸಿತು. ಅಂತಃಕರಣಕ್ಕನುಗುಣವಾಗಿ ಕಾರ್ಯ ನಿರ್ವಹಿಸುವ ಅವರ ಗುಣ ಓರ್ವ ರಾಜಕೀಯ ಪರಿಕಲ್ಪನೆ ಇರುವ ಕ್ರೀಡಾಪಟುಗಳಿಗೆ ಮಾದರಿ. ಸಾರ್ವಜನಿಕ ಅಭಿಪ್ರಾಯಗಳನ್ನು ದಾಟಿ, ಅಂತಃಕರಣಕ್ಕನುಗುಣವಾಗಿ ಕಾರ್ಯನಿರ್ವಹಿಸುವ ಪ್ರತಿಯೊಬ್ಬರಿಗೂ ಅಲಿಯವರು ಇಂದಿಗೂ ಆದರ್ಶಪ್ರಾಯರಾಗಿರುತ್ತಾರೆ.
ಮೂಲ- ಜೋನಾಥನ್ ಎಯ್ಗ್
ಕನ್ನಡಕ್ಕೆ: ಮುಹಮ್ಮದ್ ಶಮೀರ್