ಆಧುನಿಕ ಕಾಲದ ವೈದ್ಯಕೀಯ ಪದ್ಧತಿ, ರೀತಿ ರಿವಾಜುಗಳು ಪ್ರಾಚೀನ ಗ್ರೀಕ್, ಬ್ಯಾಬಿಲೋನಿಯ, ರೋಮನ್ ಹಾಗೂ ಸಿಂಧೂ ನಾಗರಿಕತೆಗಳಿಂದ ಪ್ರೇರಣೆಗೊಂಡು ರೂಪು ಪಡೆದಿದೆ. ಸಾಮಾಜಿಕ, ದೈಹಿಕ ಹಾಗೂ ಮಾನಸಿಕ ಆರೋಗ್ಯ ಅಗತ್ಯತೆಗಳನ್ನು ಪೂರೈಸುವುದು ವೈದ್ಯಕೀಯ ಕೇಂದ್ರಗಳ ಕರ್ತವ್ಯವಾಗಿದೆ. ಮಧ್ಯಕಾಲೀನ ಇಸ್ಲಾಮಿಕ್ ಸಮಾಜದಲ್ಲಿ ವಿಕಸನಗೊಂಡ ಇಂತಹ ಕೇಂದ್ರಗಳು ಇಂದು ಆಧುನಿಕ ವೈದ್ಯಶಾಸ್ತ್ರದ ಸಂಪೂರ್ಣ ಬೆಳವಣಿಗೆಗಳ ಅಡಿಗಲ್ಲಾಗಿ ನಿಂತಿದೆ.
ಪೂರ್ವ ಕಾಲದ ಆಡಳಿತಾಧಿಕಾರಿಗಳು, ವಿದ್ವಾಂಸರು ಹಾಗೂ ವೈದ್ಯರು ಅವರ ಪರಂಪರೆಯಲ್ಲಿ ಜನಜನಿತವಾದ ಪುರಾತನ ಸಂಶೋಧನೆಗಳು ಹಾಗೂ ಮಾಹಿತಿಗಳನ್ನು ಅನ್ವೇಷಿಸಿ ಒಟ್ಟುಗೂಡಿಸಿದರು. ಇದು ನಂತರದ ಕಾಲದಲ್ಲಿ ಕ್ರಾಂತಿಕಾರಿ ಆವಿಷ್ಕಾರಗಳಿಗೆ ಮುಖ್ಯ ಆಧಾರವಾಯಿತು. ಅವರ ಆಸ್ಪತ್ರೆಗಳು ಆಧುನಿಕ ಮಲ್ಟಿ ಸರ್ವಿಸ್ ಹೆಲ್ತ್ ಕೇರ್, ಮೆಡಿಕಲ್ ಎಜ್ಯುಕೇಶನ್ ಟೆಸ್ಟ್ ಡಬ್ಬಿಂಗ್ ಚಿಕಿತ್ಸೆ, ಆರೈಕೆ, ಮಾನಸಿಕ ಆರೋಗ್ಯ, ಮನೆ ಭಾಗ್ಯ (ವೃದ್ಧ ಹಾಗೂ ಕುಟುಂಬ ಕಳೆದುಕೊಂಡವರಿಗೆ) ಸೇರಿದಂತೆ ವಿವಿಧ ಸೇವೆಗಳಿಗೆ ಪ್ರಮುಖ ಆಶಾ ಕೇಂದ್ರವಾಯಿತು.
ರೋಗಿಗಳ ಅಭಯ ತಾಣ:
ವೈದ್ಯಕೀಯ ಕಲೆಗಳ ಬೆಳವಣಿಗೆ ಮಾಡುವಲ್ಲಿ ಮಧ್ಯಕಾಲೀನ ಇಸ್ಲಾಮಿಕ್ ನಾಗರಿಕತೆಯ ಚಿಂತನೆ ಹಾಗೂ ಪ್ರಯೋಗದ ಉದಾಹರಣೆ ಬೀಮರಿಸ್ತಾನ್. ಆ ದಿನಗಳಲ್ಲೇ ಆಸ್ಪತ್ರೆಯ ಸಮೀಪದಲ್ಲಿ ವೈದ್ಯಕೀಯ ಕಾಲೇಜುಗಳು, ಲೈಬ್ರೆರಿಗಳು ಅಸ್ತಿತ್ವದಲ್ಲಿದ್ದವು. ಇದು ವಿದ್ಯಾರ್ಥಿಗಳಿಗೆ ಕಲಿಕೆಯ ಜೊತೆಗೆ ರೋಗಿಗಳೊಂದಿಗೆ ನೇರ ಮಾತುಕತೆ, ಆರೈಕೆಗೆ ಹೇತುವಾಯಿತು. ಆಸ್ಪತ್ರೆಯಲ್ಲಿ ಹಿರಿಯ ವೈದ್ಯರ ಸಲಹೆ ಸೂಚನೆಯ ಜೊತೆಗೆ ಡಿಪ್ಲೊಮಾ ಆಧಾರಿತವಾಗಿ ಪರೀಕ್ಷೆಗಳು ನಡೆದು ಮೌಲ್ಯಮಾಪನಗಳನ್ನು ನೀಡುವ ಇಂತಹ ಆಸ್ಪತ್ರೆಗಳು ವೈದ್ಯಕೀಯ ಜ್ಞಾನದ ಪ್ರಸರಣಕ್ಕಾಗಿ ದುಡಿದವು.
ಆರಂಭಿಕ ಆಸ್ಪತ್ರೆಗಳು:
ಪ್ರಾಚೀನ ಕಾಲದಿಂದಲೂ ಆಸ್ಪತ್ರೆಗಳು ಅಸ್ತಿತ್ವದಲ್ಲಿದ್ದರೂ ಅವುಗಳಲ್ಲಿ ಹೆಚ್ಚಿನವು ಪ್ರಾಥಮಿಕ ಸೌಕರ್ಯ ಹಾಗೂ ಸೌಲಭ್ಯ ರಚನೆಯನ್ನು ಹೊಂದಿರಲಿಲ್ಲ ಎಂಬುದು ಸತ್ಯ. ಆ ಬಳಿಕ ಹೆಲೆನಿಸ್ಟಿಕ್ ಅವಧಿಯಲ್ಲಿ ರೋಗಿಗಳಿಗೆ ವಿಶೇಷ ವಿಶ್ರಾಂತಿ ಕೊಠಡಿಗಳಂಥ ಅಭಿವೃದ್ಧಿ ಕಾರ್ಯಗಳಿಗೆ ಮುಹೂರ್ತ ಲಭಿಸಿತು. ‘ರೋಗವೆಂಬುದು ಪ್ರಕೃತಿಗೆ ಅತೀತವಾದುದು ಮತ್ತು ಮಾನವ ಹಸ್ತಕ್ಷೇಪದಿಂದ ನಿಯಂತ್ರಿಸಲಾಗುವುದಿಲ್ಲ’ ಎಂಬ ಮಧ್ಯಕಾಲೀನ ಯುರೋಪಿನ ಆರಂಭಿಕ ತಾತ್ವಿಕ ನಂಬಿಕೆಯ ಪರಿಣಾಮವಾಗಿ ಚಿಕಿತ್ಸೆ ನೀಡುವ ಆಸ್ಪತ್ರೆಗಳಿಗಿಂತ ಆತ್ಮಕ್ಕೆ ಮೋಕ್ಷ ನೀಡುವ ಮಠಗಳು ಹೆಚ್ಚಾಗಿ ಕಾಣುತ್ತಿತ್ತು. ಆ ವೇಳೆಗೆ ಮುಸ್ಲಿಂ ವೈದ್ಯರ ರೀತಿಯು ಸಂಪೂರ್ಣ ವಿಭಿನ್ನವಾಗಿತ್ತು. “ಎಲ್ಲಾ ರೋಗಗಳನ್ನು ಸೂಕ್ತ ಔಷಧಿಯೊಂದಿಗೆ ಸೃಷ್ಟಿಸಲಾಗಿದೆ” ಎಂಬ ಇಮಾಂ ಬುಖಾರಿ ವರದಿ ಮಾಡಿದ ಹದೀಸ್ ಹಾಗೂ “ಅಲ್ಲಾಹನು ರೋಗ ಮತ್ತು ಔಷಧಿಯನ್ನು ಬಹಿರಂಗಪಡಿಸಿದನು ಮತ್ತು ಅವನು ಪ್ರತಿಯೊಂದು ರೋಗಕ್ಕೂ ನಿರ್ದಿಷ್ಟವಾದ ಚಿಕಿತ್ಸಾ ವಿಧಾನವನ್ನೂ ಸೂಚಿಸಿದ್ದಾನೆ. ಆದ್ದರಿಂದ ತಾವು ಚಿಕಿತ್ಸೆ ಮಾಡಿ” ಎಂಬ ಅಬೂ ದರ್ದ್ ವರದಿ ಮಾಡಿದ ಹದೀಸಿನ ಆಧಾರದಲ್ಲಿ ತರ್ಕಬದ್ಧ ಮತ್ತು ಪ್ರಾಯೋಗಿಕ (empirical) ವಿಧಾನಗಳ ಮೂಲಕ ಆರೋಗ್ಯದ ವಿಧಿ ವಿಧಾನಗಳನ್ನು ರೂಪಿಸಿದರು.
ಮೊಬೈಲ್ ಆರೈಕೆ:
ಪೈಗಂಬರ್ ಸ್ವಲ್ಲಲ್ಲಾಹು ಅಲೈಹಿವಸಲ್ಲಮರ ಕಾಲದಲ್ಲಿ ರುಫೈದತುಲ್ ಅಸ್ಲಮಿಯ್ಯ್ ಅವರು ಮೊದಲ ಆರೈಕಾ ಕೇಂದ್ರವನ್ನು ನಿರ್ಮಿಸಿದರು. ಇದು ಖಂದಕ್ ಕದನದಲ್ಲಿ (ಕಂದಕ ತೋಡುವ ಯುದ್ಧ) ಗಾಯಗೊಂಡವರಿಗೆ ಶುಶ್ರೂಷೆ ಮಾಡಲು ಟೆಂಟ್ ಸ್ಥಾಪಿಸುವ ಮೂಲಕ ಪ್ರಾರಂಭವಾಯಿತು. ಅಂದಿನ ಆರೋಗ್ಯಾಧಿಕಾರಿಗಳ ಚಟುವಟಿಕೆಗಳು ಇಂದು ಆಹಾರ, ಪಾನೀಯ, ಬಟ್ಟೆ, ವೈದ್ಯರು ಹಾಗೂ ಫಾರ್ಮಸಿಸ್ಟ್ಗಳನ್ನು ಒಳಗೊಂಡ ಮೊಬೈಲ್ ಡಿಸ್ಪೆನ್ಸರಿಗಳಾಗಿ ಅಭಿವೃದ್ಧಿಪಡಿಸಲಾಯಿತು. ಜನನಿಬಿಡ ನಗರಗಳಿಂದ ದೂರದಲ್ಲಿ ವಾಸಿಸುವ ಮತ್ತು ವೈದ್ಯಕೀಯ ಆರೈಕೆಯ ಅಗತ್ಯವಿರುವ ಜನರ ಅಗತ್ಯಗಳನ್ನು ಪೂರೈಸುವುದು ಇದರ ಪ್ರಮುಖ ಗುರಿಯಾಗಿತ್ತು. ಆಡಳಿತಾಧಿಕಾರಿಗಳು ಸಹ ಮೊಬೈಲ್ ಆರೈಕೆಯನ್ನು ಸದುಪಯೋಗ ಪಡೆದುಕೊಳ್ಳುತ್ತಿದ್ದರು. ಹನ್ನೆರಡನೆಯ ಶತಮಾನದ ಆರಂಭದಲ್ಲಿ ರಾಜ ಸಲ್ಜೂಕ್ ಸುಲ್ತಾನ್ ಮುಹಮ್ಮದ್ ಸಲ್ಜೂಕಿಯ ಆಳ್ವಿಕೆಯಲ್ಲಿ ನಲವತ್ತು ಒಂಟೆಗಳನ್ನು ಬಳಸಿ ನಡೆಸಿದ ಮೊಬೈಲ್ ಆಸ್ಪತ್ರೆಯ ವಿಸ್ತರಣೆಯು ಅತ್ಯಂತ ಸುಪ್ರಸಿದ್ಧವಾಗಿದೆ.
ಶಾಶ್ವತ ಘಟಕಗಳು:
ಡಮಾಸ್ಕಸ್ ನಲ್ಲಿ ಎಂಟನೇ ಶತಮಾನದ ಆರಂಭದಲ್ಲಿ ಉಮವೀ ಖಲೀಫ್ ವಲೀದ್ ಇಬ್ನ್ ಅಬ್ದುಲ್ ಮಲಿಕ್ ನೇತೃತ್ವದಲ್ಲಿ ಕುಷ್ಠರೋಗಿಗಳಿಗಾಗಿ ಪ್ರಥಮ ಆಸ್ಪತ್ರೆಯನ್ನು ನಿರ್ಮಿಸಲಾಯಿತು. ಇದನ್ನು ನಿಯಂತ್ರಿಸುವ ವೈದ್ಯರಿಗೆ ಸಾಕಷ್ಟು ಆಸ್ತಿ ಮತ್ತು ವೇತನವನ್ನೂ ನೀಡಲಾಯಿತು. ಇನ್ನು ಕುಷ್ಠರೋಗವು ಸಾಂಕ್ರಾಮಿಕ ರೋಗ ಎಂದು ವಿಶ್ವವ್ಯಾಪಿ ಆಗಿರುವುದರಿಂದ ರೋಗಿಗಳನ್ನು ಯಾರೊಂದಿಗೂ ಸಂಪರ್ಕ ಬೆಳೆಸದಂತೆ ದೂರವಿಡಲಾಗುತ್ತದೆ. ರೋಗಪೀಡಿತರಾದ್ದರಿಂದ ಅವರ ಕುಟುಂಬದ ವೆಚ್ಚವನ್ನು ಸ್ವತಃ ಸರ್ಕಾರವೇ ಭರಿಸುತ್ತದೆ ಕೂಡಾ. ಸರಿಸುಮಾರು ಒಂದು ಶತಮಾನದ ನಂತರ ಕ್ರಿ.ಶ 805 ರಲ್ಲಿ ಖಲೀಫಾ ಹಾರೂನ್ ರಶೀದ್ ಅವರ ಮಂತ್ರಿ ಬಾಗ್ದಾದ್ ನಲ್ಲಿ ನಿರ್ಮಿಸಿದ್ದ ಆಸ್ಪತ್ರೆಯು ಮೊದಲ ಸಾರ್ವಜನಿಕ ಆಸ್ಪತ್ರೆಯಾಗಿ ಇತಿಹಾಸದಲ್ಲಿ ಸುಪ್ರಸಿದ್ಧ. ಪರ್ಷಿಯನ್ ಮೆಡಿಕಲ್ ಅಕಾಡೆಮಿಯ ಮಾಜಿ ಮುಖ್ಯಸ್ಥರಾದ ಜುಂಡಿಶಾಪುರದ ಬಕ್ತಿಷು ಅವರ ಕುಟುಂಬಕ್ಕೆ ಸೇರಿದ ನ್ಯಾಯಾಲಯದ ವೈದ್ಯರು ಇದರ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಆಧಾರ ಸಹಿತ ಮಾತು. ನಂತರದ ದಶಕಗಳಲ್ಲಿ ಪ್ರಪಂಚದಾದ್ಯಂತ 34 ಆಸ್ಪತ್ರೆಗಳನ್ನು ನಿರ್ಮಿಸಲಾಯಿತು. ಪ್ರತಿ ವರ್ಷ ಈ ಸಂಖ್ಯೆ ಹೆಚ್ಚುತ್ತಲೇ ಇತ್ತು. ಬಳಿಕ ಒಂಭತ್ತನೇ ಶತಮಾನದಲ್ಲಿ ಖೈರುವಾನ್ (ಇಂದಿನ ಟುನೀಶಿಯಾ), ಮಕ್ಕಾ ಮತ್ತು ಮದೀನಾದಲ್ಲಿ ಆಸ್ಪತ್ರೆಗಳನ್ನು ನಿರ್ಮಿಸಲಾಯಿತು. ಅದೇ ಸಮಯದಲ್ಲಿ ಪರ್ಷಿಯಾದಲ್ಲಿ ಅನೇಕ ವೈದ್ಯಕೀಯ ಕೇಂದ್ರಗಳು ಸಕ್ರಿಯವಾಗಿ ಕಾರ್ಯಾಚರಣೆಯಲ್ಲಿ ತೊಡಗಿದ್ದವು. ಬಾಗ್ದಾದ್ನಲ್ಲಿ ಪಠಣ ಪೂರ್ತಿಗೊಳಿಸಿದ ಮುಹಮ್ಮದ್ ಇಬ್ನ್ ಝಕರಿಯಾ ಅಲ್-ರಾಝಿ ರಾಯ್ ನಗರದಲ್ಲಿ ಆಸ್ಪತ್ರೆಯೊಂದರ ಮೇಲ್ವಿಚಾರಕರಾಗಿ ಕಾರ್ಯಪ್ರವೃತ್ತರಾಗಿದ್ದರು.
ಹತ್ತನೇ ಶತಮಾನದಲ್ಲಿ ಬಾಗ್ದಾದ್ನಲ್ಲಿ ಇನ್ನೂ ಐದು ಆಸ್ಪತ್ರೆಗಳನ್ನು ನಿರ್ಮಿಸಲಾಯಿತು. ಅದರಲ್ಲಿ ಮೊದಲನೇ ಆಸ್ಪತ್ರೆಯನ್ನು ಒಂಭತ್ತನೇ ಶತಮಾನದ ಅಂತ್ಯದ ವೇಳೆಗೆ ನಿರ್ಮಿಸಲಾಯಿತು. ಅಲ್-ಮುಆದ್ ಅದರ ನಿರ್ಮಾಣದ ಮೇಲ್ವಿಚಾರಣೆ ವಹಿಸಲು ರಾಝಿಯೊಂದಿಗೆ ಕೇಳಿದರು. ಪ್ರಾರಂಭ ಘಟ್ಟದಲ್ಲಿ ಆಸ್ಪತ್ರೆ ಸ್ಥಾಪಿಸಲು ನಗರದ ಸುರಕ್ಷಿತ ಮತ್ತು ಆಕರ್ಷಕ ಸ್ಥಳಗಳನ್ನು ಕಂಡುಕೊಳ್ಳಬೇಕಿತ್ತು. ಆದ್ದರಿಂದ ಅವರು ಹೆಚ್ಚು ವಿನಾಶಕಾರಿಯಲ್ಲದ ಸ್ಥಳದಲ್ಲಿ ಆಸ್ಪತ್ರೆಯನ್ನು ನಿರ್ಮಿಸಿದರು. ಅದರ ಪ್ರಾರಂಭ ಘಟ್ಟದಲ್ಲೇ ಸುಮಾರು ಇಪ್ಪತ್ತೈದು ವೈದ್ಯರು, ನೇತ್ರಶಾಸ್ತ್ರಜ್ಞರು ಹಾಗೂ ಶಸ್ತ್ರಕ್ರಿಯೆ ನಡೆಸುವವರು ಇದ್ದರು. ಕ್ರಿ.ಶ 1258 ರಲ್ಲಿ ಬಾಗ್ದಾದನ್ನು ಮಂಗೋಲಿಯನ್ನರು ವಶಪಡಿಸಿಕೊಳ್ಳುವವರೆಗೂ ಪ್ರತಿ ವೈದ್ಯಕೀಯ ಕ್ಷೇತ್ರದಲ್ಲಿ ವೈದ್ಯರ ಸಂಖ್ಯೆಯು ಹೆಚ್ಚುತ್ತಲೇ ಇದ್ದವು ಎನ್ನುವುದು ಇತಿಹಾಸ.
ಹತ್ತನೇ ಶತಮಾನದ ಪ್ರಾರಂಭದಲ್ಲಿ ಮಂತ್ರಿ ಅಲಿ ಇಬ್ನ್ ಈಸಾ ಇಬ್ನ್ ಜರ್ರಾಹ್ ಇಬ್ನ್ ಸಾಬಿತ್ ಒಮ್ಮೆ ಬಾಗ್ದಾದಿನ ಮುಖ್ಯ ವೈದ್ಯಕೀಯ ಅಧಿಕಾರಿಗೆ ಬರೆದ ಪತ್ರ ಈ ರೀತಿಯಿದೆ:
“ಕೈದಿಗಳ ಬಗ್ಗೆ ನನಗೆ ತುಂಬಾ ಕಾಳಜಿ ಮೂಡಿದೆ. ಅವರಲ್ಲಿ ಹಲವರು ಅಸ್ವಸ್ಥರಾಗಿದ್ದು, ಅವರಿಗಾಗಿ ವಿಶೇಷ ವೈದ್ಯರನ್ನು ನೇಮಿಸಬೇಕು ಎಂಬುದು ನನ್ನ ಮನವಿ. ಅವರನ್ನು ಪ್ರತಿದಿನ ಪರೀಕ್ಷಿಸಬೇಕು ಮತ್ತು ಅಗತ್ಯವಿರುವಂತೆ ಔಷಧಗಳು ಮತ್ತು ಕಷಾಯಗಳನ್ನು ನೀಡಬೇಕು. ಅಂತಹ ವೈದ್ಯರು ಎಲ್ಲಾ ಜೈಲುಗಳಿಗೆ ಭೇಟಿ ನೀಡಿ ಅಸ್ವಸ್ಥ ಕೈದಿಗಳಿಗೆ ಚಿಕಿತ್ಸೆ ನೀಡುವುದು ಅನಿವಾರ್ಯ”.
ಶೀಘ್ರದಲ್ಲೇ ಬಾಗ್ದಾದ್ನಲ್ಲಿ ಅಪರಾಧಿಗಳಿಗಾಗಿ ವಿಶೇಷ ಆಸ್ಪತ್ರೆಯನ್ನು ಸ್ಥಾಪಿಸಲಾಯಿತು. ಮೊದಲ ಈಜಿಪ್ಟ್ ಆಸ್ಪತ್ರೆಯನ್ನು ಕ್ರಿ.ಶ 872 ರಲ್ಲಿ ಹಳೆಯ ಕೈರೋದ ಭಾಗವಾದ ಫುಸ್ತಾತ್ನ (fustat) ನೈಋತ್ಯ ಭಾಗದಲ್ಲಿ ಅಬ್ಬಾಸೀ ಗವರ್ನರ್ ಅಹ್ಮದ್ ಇಬ್ನ್ ತುಲೂನ್ ನಿರ್ಮಿಸಿದರು. ಇದು ಸಾಮಾನ್ಯ ಕಾಯಿಲೆಗಳ ಜೊತೆಗೆ ಮಾನಸಿಕ ಕಾಯಿಲೆಗಳಿಗೂ ಚಿಕಿತ್ಸೆ ನೀಡಿದ ಮೊದಲ ಆಸ್ಪತ್ರೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಹನ್ನೆರಡನೇ ಶತಮಾನದಲ್ಲಿ ಕೈರೋದಲ್ಲಿ ಸ್ವಲಾಹುದ್ದೀನ್ ನಿರ್ಮಿಸಿದ ಆಸ್ಪತ್ರೆ ತರುವಾಯ ಕ್ರಿ.ಶ 1284 ರಲ್ಲಿ ಮನ್ಸೂರರು ಆಧುನಿಕ ಸೌಲಭ್ಯಗಳೊಂದಿಗೆ ಪುನರ್ನಿರ್ಮಿಸಿದರು. ಆಸ್ಪತ್ರೆಯು ಹದಿನೈದನೇ ಶತಮಾನದವರೆಗೂ ಪ್ರಾಥಮಿಕ ಆರೋಗ್ಯ ಕೇಂದ್ರವಾಗಿತ್ತು. ಆದರೆ ಈಗ ಅದನ್ನು ‘ಕಾಲವೂನ್’ ಆಸ್ಪತ್ರೆ ಎಂಬ ಹೆಸರಿನಲ್ಲಿ ಕರೆಯಲಾಗುತ್ತಿದ್ದು ಪ್ರಸ್ತುತ ಕಣ್ಣು ಪರೀಕ್ಷೆ ಕೇಂದ್ರವಾಗಿ ಪ್ರಸಿದ್ಧ. ಹನ್ನೆರಡನೆಯ ಶತಮಾನದ ಮಧ್ಯಭಾಗದಲ್ಲಿ ಡಮಸ್ಕಸ್ನಲ್ಲಿ ನಿರ್ಮಿಸಲಾದ ‘ನೂರಿ ಆಸ್ಪತ್ರೆ’ಯು ಅದರ ಪ್ರಾರಂಭದಿಂದ ಹದಿನೈದನೇ ಶತಮಾನದಲ್ಲಿ ಇತರ ಐದು ಆಸ್ಪತ್ರೆಗಳು ಅಸ್ತಿತ್ವಕ್ಕೆ ಬರುವವರೆಗೂ ಮುಖ್ಯ ಆಸ್ಪತ್ರೆಯಾಗಿ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿತ್ತು. ಐಬೇರಿಯನ್ ಪ್ರದೇಶದ ಕೊರ್ಡೊವಾದಲ್ಲಿ ಐವತ್ತು ಪ್ರಮುಖ ಆಸ್ಪತ್ರೆಗಳು ಇದ್ದವು. ಅವುಗಳಲ್ಲಿ ಕೆಲವು ಸೈನಿಕರಿಗೆ ಸೀಮಿತವಾಗಿತ್ತು. ಜೊತೆಗೆ ಇಂತಹ ಸೇವೆಗಳು ಖಲೀಫರು, ಮಿಲಿಟರಿ ಮುಖ್ಯಸ್ಥರು ಮತ್ತು ಗಣ್ಯರಿಗೆ ಲಭ್ಯವಾಗುವಂತೆ ಮಾಡಲಾಯಿತು.
ಇಂದಿನ ಕಾಲದಲ್ಲಿ ನೋಡುವಂತೆ ನೇತ್ರ ಶಸ್ತ್ರಕ್ರಿಯೆ (Orthopaedics), ಸಾಮಾನ್ಯ ರೋಗಗಳು (Systematic diseases), ಮಾನಸಿಕ ಅಸ್ವಸ್ಥತೆಯ ವಿಭಾಗಗಳಾಗಿ ವಿಂಗಡಿಸಿ ಇಸ್ಲಾಮಿಕ್ ಆಸ್ಪತ್ರೆಗಳು ಕಾರ್ಯಾಚರಿಸುತ್ತಿದ್ದವು. ಸಾಮಾನ್ಯ ರೋಗಗಳ ಇಲಾಖೆಯು (Systemic diseases) ಇಂದು ಆಂತರಿಕ ಔಷಧ ಇಲಾಖೆಯನ್ನು ಹೋಲುತ್ತದೆ. ಇದನ್ನು ಸಾಮಾನ್ಯವಾಗಿ ಜ್ವರ, ಜೀರ್ಣಕಾರಿ ಸಮಸ್ಯೆಗಳು ಮತ್ತು ಸೋಂಕುಗಳಿಗೆ ಸಂಬಂಧಿಸಿದ ವರ್ಗಗಳಾಗಿ ವಿಂಗಡಿಸಲಾಗಿದೆ. ದೊಡ್ಡ ಆಸ್ಪತ್ರೆಗಳು ಹೆಚ್ಚಿನ ವಿಭಾಗಗಳಲ್ಲಿ ಹೆಚ್ಚು ವೈವಿಧ್ಯಮಯ ಉಪವಿಭಾಗಗಳನ್ನು ಹೊಂದಿದ್ದವು. ಪ್ರತಿ ಇಲಾಖೆಯು ಸೂಪರ್ವೈಸಿಂಗ್ ಸ್ಪೆಷಲಿಸ್ಟರ ಜೊತೆಗೆ ಒಬ್ಬ ಅಧಿಕಾರಿ ಮತ್ತು ಅಧ್ಯಕ್ಷನನ್ನು ಹೊಂದಿರುತ್ತದೆ. ಆಸ್ಪತ್ರೆಗಳಲ್ಲಿ ಶುಚಿತ್ವವನ್ನು ಪರಿಶೀಲಿಸಲು ಮತ್ತು ಖಚಿತಪಡಿಸಿಕೊಳ್ಳಲು ಸ್ಯಾನಿಟರಿ ಇನ್ಪೆಕ್ಟರನ್ನು ಸಹ ನೇಮಿಸಲಾಗಿದೆ. ಇದಲ್ಲದೆ ಆಸ್ಪತ್ರೆಯ ಆರ್ಥಿಕ ಮತ್ತು ಹಣಕಾಸೇತರ ವಿಭಾಗಗಳ ಅಭಿವೃದ್ಧಿ ಕಾರ್ಯಗಳನ್ನು ಪರಿಶೀಲನೆ ನಡೆಸಲು ಮೇಲ್ವಿಚಾರಣಾ ಸಮಿತಿಗಳು, ಅಕೌಂಟೆಂಟ್ಗಳು, ಅಡ್ಮಿನಿಸ್ಟ್ರೇಷನ್ ಸಿಬ್ಬಂದಿಗಳು ಜೊತೆಗೆ ಒಟ್ಟು ಸಂಸ್ಥೆಯನ್ನು ಮೇಲ್ವಿಚಾರಣೆ ಮಾಡುವ ಸೌರ್ (sa’ur) ಎಂದು ಹೆಸರಿರುವ ಸೂಪರ್ವೈಸಿಂಗ್ ಸಮಿತಿಯನ್ನು ನಿಯೋಜಿಸಲಾಗುತ್ತದೆ. ವೈದ್ಯರು ತಮ್ಮ ತಮ್ಮ ವಿಭಾಗಗಳಲ್ಲಿ ರೋಗಿಗಳಿಗೆ ನಿಗದಿತ ಸಮಯದಲ್ಲಿ ಚಿಕಿತ್ಸೆ ನೀಡುವರು. ಎಲ್ಲಾ ಆಸ್ಪತ್ರೆಗಳಿಗೆ ವಿಶೇಷವಾಗಿ ಮಾನ್ಯತೆ ಪಡೆದ ವೈದ್ಯರು (sydalani) ಮತ್ತು ನರ್ಸ್ಗಳ ಸೇವೆಗಳು ಲಭ್ಯವಾಗುವಂತೆ ಮಾಡಲಾಗಿದೆ. ವೈದ್ಯಕೀಯ ಸಿಬ್ಬಂದಿಗೆ ನಿಗದಿತ ಸಂಬಳದ ಜೊತೆಗೆ, ಪ್ರೋತ್ಸಾಹಕ್ಕಾಗಿ ಟಿಪ್ಸನ್ನೂ ನೀಡಲಾಗುತ್ತಿತ್ತು.
ಇಸ್ಲಾಮಿಕ್ ಆಸ್ಪತ್ರೆಗಳಿಗೆ ಧನಸಹಾಯವನ್ನು ವಕ್ಫ್ ಎಂದು ಕರೆಯಲ್ಪಡುವ ಪವಿತ್ರ ನಿಧಿಯಿಂದ ಒದಗಿಸಲಾಗುತ್ತದೆ. ಶ್ರೀಮಂತರು ಮತ್ತು ಆಡಳಿತಗಾರರು ತಮ್ಮ ಆಸ್ತಿಯನ್ನು ಆಸ್ಪತ್ರೆಗಳಿಗೆ ದಾನ ಮಾಡುತ್ತಾರೆ. ಪರಿಣಾಮವಾಗಿ, ಆಸ್ಪತ್ರೆಗಳು ಕಟ್ಟಡ ಸಾಮಗ್ರಿಗಳಿಂದ ಬರುವ ಆದಾಯದಿಂದ ಸ್ಥಿರ ಆದಾಯವನ್ನು ಉತ್ಪಾದಿಸುತ್ತವೆ. ಅದೇ ರೀತಿ ಅಂಗಡಿಗಳು, ಗಿರಣಿಗಳು ಮತ್ತು ಲಾಡ್ಜ್ಗಳಿಂದಲೂ ಆದಾಯ ಬರುತ್ತದೆ. ರಾಜ್ಯ ಬಜೆಟ್ನ ಒಂದು ಭಾಗವನ್ನು ಆಸ್ಪತ್ರೆಗಳ ನಿರ್ವಹಣೆಗೆ ಮೀಸಲಿಡಲಾಗುತ್ತಿತ್ತು. ಕೆಲವು ವೈದ್ಯರು ಕಾಲಕಾಲಕ್ಕೆ ವೈಯಕ್ತಿಕವಾಗಿ ಶುಲ್ಕವನ್ನು ವಿಧಿಸುತ್ತಿದ್ದರೂ, ಎಲ್ಲಾ ಆಸ್ಪತ್ರೆ ಸೇವೆಗಳು ರೋಗಿಗಳಿಗೆ ಸಂಪೂರ್ಣ ಉಚಿತವಾಗಿತ್ತು.
ಆರೈಕೆಯ ವಿಧಾನಗಳು:
ಆಸ್ಪತ್ರೆಗಳು ದಿನದ ಇಪ್ಪತ್ತನಾಲ್ಕು ಗಂಟೆಯೂ ತೆರೆದಿರುತ್ತಿದ್ದವು. ಪುರುಷರು, ಪುರುಷ ವೈದ್ಯರನ್ನು ಮಾತ್ರ ಸಂಪರ್ಕಿಸಿದರೆ, ಮಹಿಳೆಯರು ಮಹಿಳಾ ವೈದ್ಯರನ್ನು ಸಂಪರ್ಕಿಸುತ್ತಿದ್ದರು. ಪ್ರೈವೇಟ್ ಆಸ್ಪತ್ರೆಗಳ ವೈದ್ಯರು ಸೀರಿಯಸ್ ಕೇಸ್ ಹೊರತುಪಡಿಸಿ ಇತರೆ ರೋಗಿಗಳಿಗೆ ಚಿಕಿತ್ಸೆ ನೀಡಲು ಮನೆಯಲ್ಲಿ ಬಳಸಬಹುದಾದ ಔಷಧಿಗಳನ್ನು ರೋಗಿಗಳಿಗೆ ಸೂಚಿಸಿಸುವರು. ಸೋಂಕು ತಡೆಗಟ್ಟಲು ವಿಶೇಷ ಕ್ರಮಗಳನ್ನು ಕೈಗೊಂಡು, ಆಸ್ಪತ್ರೆಗೆ ದಾಖಲಾದ ರೋಗಿಗಳಿಗೆ ಕೇಂದ್ರ ವಿತರಣಾ ಇಲಾಖೆಯಿಂದ ಆಸ್ಪತ್ರೆಯ ಬಟ್ಟೆಗಳನ್ನು ನೀಡಿ, ಅವರ ಬಟ್ಟೆಗಳನ್ನು ಆಸ್ಪತ್ರೆಯ ಮಳಿಗೆಯಲ್ಲಿ ಸಂಗ್ರಹಿಸಲಾಗುತ್ತಿದ್ದವು. ಆಸ್ಪತ್ರೆಯಲ್ಲಿ ವಾರ್ಡ್ಗೆ ಕರೆದೊಯ್ಯುವಾಗ ರೋಗಿಗಳಿಗೆ ಶುದ್ಧವಾದ ಶೀಟ್ ಮತ್ತು ಹಾಸಿಗೆಗಳನ್ನು ವಿಶೇಷವಾಗಿ ಸ್ಟಫ್ ತುಂಬಿದ ಮೆತ್ತಗೆಯ ಹಾಸಿಗೆಗಳನ್ನು ಒದಗಿಸಲಾಗುತ್ತಿತ್ತು. ಆಸ್ಪತ್ರೆಯ ಕೊಠಡಿಗಳು ಮತ್ತು ವಾರ್ಡ್ಗಳಿಗೆ ಸೂರ್ಯನ ಬೆಳಕು, ಶುದ್ಧ ಗಾಳಿ ಹಾಗೂ ನೀರನ್ನು ತಲುಪಿಸುವ ವಿಧಾನವೂ ಇತ್ತು.
ಇನ್ಸ್ಪೆಕ್ಟರ್ ಬಂದು ಆಸ್ಪತ್ರೆಯ ವಾರ್ಡ್, ಕೊಠಡಿಗಳ ಸ್ವಚ್ಛತೆಯನ್ನು ಪ್ರತಿನಿತ್ಯ ಪರಿಶೀಲನೆ ನಡೆಸುತ್ತಿದ್ದರು. ರೋಗಿಗಳಿಗೆ ಸಾಧ್ಯವಾದಷ್ಟು ಉತ್ತಮ ಆರೈಕೆಯನ್ನು ಖಚಿತಪಡಿಸಿಕೊಳ್ಳಲು ಸ್ಥಳೀಯ ಅಧಿಕಾರಿಗಳು ಖುದ್ದಾಗಿ ಬಂದು ಭೇಟಿ ನೀಡುತ್ತಿದ್ದರು. ವೈದ್ಯರ ಆದೇಶಗಳನ್ನು ಕಟ್ಟುನಿಟ್ಟಾಗಿ ತಕ್ಷಣವೇ ಜಾರಿಗೊಳಿಸಬೇಕಿತ್ತು. ರೋಗಿಗಳನ್ನು ಅವರ ಸ್ಥಿತಿ ಮತ್ತು ಕಾಯಿಲೆಗೆ ಅನುಗುಣವಾಗಿ ಆಹಾರ ಕ್ರಮ ಬದಲಾಗುತ್ತಿದ್ದವು. ಆಹಾರ ಪಟ್ಟಿಯಲ್ಲಿ ಕೋಳಿ, ಗೋಮಾಂಸ, ಮೇಕೆ, ತಾಜಾ ಹಣ್ಣುಗಳು ಮತ್ತು ತರಕಾರಿಗಳು ಸೇರಿದಂತೆ ವಿವಿಧ ಭಕ್ಷ್ಯಗಳು ಸೇರಿದ್ದವು.
ರೋಗಿಯು ಸಾಮಾನ್ಯ ಪ್ರಮಾಣದ ಒಂದು ರೊಟ್ಟಿ ಮತ್ತು ಇಡೀ ಕೋಳಿಯ ಹುರಿದ ಮಾಂಸವನ್ನು ತಿನ್ನಲು ಸಾಧ್ಯವಾಗುವುದೇ ಚೇತರಿಕೆಯ ಮುಖ್ಯ ಮಾನದಂಡವಾಗಿತ್ತು. ಅದನ್ನು ಸುಲಭವಾಗಿ ಸೇವಿಸಲು ಸಾಧ್ಯವಾದರೆ ಚೇತರಿಸಿಕೊಂಡಿದ್ದಾನೆ ಎಂದು ಅರಿತು ವೈದ್ಯರು ಡಿಸ್ಚಾರ್ಜ್ ಮಾಡುತ್ತಿದ್ದರು. ಚೇತರಿಸಿಕೊಂಡರೂ ದೈಹಿಕ ಆರೋಗ್ಯದ ಸಮಸ್ಯೆಯಿಂದ ಡಿಸ್ಚಾರ್ಜ್ ಮಾಡಲಾಗದ ಸ್ಥಿತಿ ಎದುರಾದರೆ ಅಂತಹಾ ರೋಗಿಯನ್ನು ಆರಾಮದಾಯಕ ವಾರ್ಡ್ಗೆ ವರ್ಗಾವಣೆ ಮಾಡಲಾಗುತ್ತಿದ್ದವು. ಅಗತ್ಯವಿರುವ ರೋಗಿಗಳಿಗೆ ಅವರ ಜೀವನೋಪಾಯವನ್ನು ಪುನಃಸ್ಥಾಪಿಸಲು ಹೊಸ ಬಟ್ಟೆ ಮತ್ತು ವ್ಯಾಪಾರ ವಹಿವಾಟಿಗೆ ಪ್ರೋತ್ಸಾಹ ಹಣವನ್ನೂ ನೀಡಲಾಗುತ್ತಿತ್ತು.
ಹದಿಮೂರನೇ ಶತಮಾನದಲ್ಲಿ ಡಮಸ್ಕಸ್ನಲ್ಲಿ ಜೀವಿಸಿದ ವೈದ್ಯ, ಯಾತ್ರಿಕ ಹಾಗೂ ಅಧ್ಯಾಪಕ ಅಬ್ದುಲ್ ಲತೀಫ್ ಅಲ್-ಬಗ್ದಾದಿ ಒಬ್ಬ ಬುದ್ಧಿವಂತ ಪರ್ಷಿಯನ್ ಯುವಕನ ಆಸಕ್ತಿದಾಯಕ ಕಥೆಯನ್ನು ಹೇಳುತ್ತಾರೆ: ‘ನೂರೀ ಆಸ್ಪತ್ರೆಯ ಅತ್ಯುತ್ತಮ ಆಹಾರ ಸೇವಿಸಿದ ಯುವಕ ರೋಗ ವಾಸಿಯಾದರೂ ಆಸ್ಪತ್ರೆಯಿಂದ ಹೊರ ಹೋಗಲು ತಯಾರಾಗುತ್ತಿರಲಿಲ್ಲ. ಯುವಕ ಏನು ಮಾಡುತ್ತಿದ್ದಾನೆಂದು ಡಾಕ್ಟರ್ ಚೆನ್ನಾಗಿ ಅರ್ಥಮಾಡಿಕೊಂಡರು. ಆಸ್ಪತ್ರೆಯಲ್ಲೇ ತಂಗಲು ಅವಕಾಶವನ್ನೂ ನೀಡಿದರು. ಜೊತೆಗೆ ಮೂರು ದಿನಗಳ ಅತ್ಯುತ್ತಮ ಆಹಾರವೂ ನೀಡಲಾಯಿತು. ನಾಲ್ಕನೇ ದಿನ ಡಾಕ್ಟರ್ ರೋಗಿಯ ಬಳಿಗೆ ಹೋಗಿ ಮುಗುಳ್ನಗುತ್ತಾ ಹೇಳಿದರು, “ಸಾಂಪ್ರದಾಯಿಕ ಅರಬ್ ಆತಿಥ್ಯವು ಮೂರು ದಿನಗಳವರೆಗೆ ಇರುತ್ತದೆ; ದಯವಿಟ್ಟು ಇನ್ನು ಮನೆಗೆ ಹೋಗಿ..!”
ಆರೈಕೆಯ ಗುಣಮಟ್ಟವು, ಪರಿಶೀಲನೆ ಮತ್ತು ಮೌಲ್ಯಮಾಪನಕ್ಕೆ ಒಳಪಟ್ಟಿರುತ್ತದೆ. ಇಬ್ನ್ ಅಲ್-ಉಕ್ವಾ ತನ್ನ ‘ಮಆಲಿಮುಲ್ ಖುರ್ಬಾ ಫೀ ತ್ವಲಬಿಲ್ ಹಿಸ್ಬಾ’ ಎಂಬ ಗ್ರಂಥದಲ್ಲಿ ಇದನ್ನು ವಿವರಿಸಿದ್ದಾರೆ..
“ರೋಗಿ ಗುಣಮುಖರಾದರೆ ವೈದ್ಯರು ಹಣ ನೀಡುತ್ತಾರೆ. ರೋಗಿಯು ಅಸುನೀಗಿದರೆ ಪೋಷಕರು ಚೀಫ್ ಡಾಕ್ಟರ್ ಬಳಿ ಹೋಗಿ ವೈದ್ಯರು ಬರೆದ ಟಿಪ್ಪಣಿಗಳನ್ನು ಪ್ರಸ್ತುತಪಡಿಸುತ್ತಾರೆ. ‘ವೈದ್ಯರು ತಮ್ಮ ಕೆಲಸವನ್ನು ಸರಿಯಾಗಿ ನಿರ್ವಹಿಸಿದ್ದಾರೆ’ ಎಂದು ಚೀಫ್ ಡಾಕ್ಟರ್ ದೃಢೀಕರಿಸಿದರೆ ಅದನ್ನು ಸಹಜ ಸಾವು ಎಂದು ಪರಿಗಣಿಸಲಾಗುತ್ತದೆ. ಇದಕ್ಕೆ ವಿರುದ್ಧವಾಗಿದ್ದರೆ, ಚೀಫ್ ಡಾಕ್ಟರ್ ಹೆತ್ತವರಿಗೆ ಹೇಳುವರು: ‘ವೈದ್ಯರಿಂದ ನಿಮ್ಮ ಸಂಬಂಧಿಕರ ಜೀವ ಪರಿಹಾರವನ್ನು ಪಡೆಯಿರಿ. ಅವರ ಚಿಕಿತ್ಸೆಯಲ್ಲಿ ಕೊರತೆ ಸಂಭವಿಸಿದೆ’ ಇಂತಹಾ ಗೌರವಾನ್ವಿತ ಶೈಲಿಯಲ್ಲಿ ಅನುಭವಿ ಮತ್ತು ಸುಶಿಕ್ಷಿತ ಜನರಿಂದ ಔಷಧವನ್ನು ನಿರ್ವಹಿಸಲಾಗುತ್ತದೆ ಎಂದು ಅವರು ಖಚಿತಪಡಿಸಿಕೊಳ್ಳಬಹುದು.”
ಶಾಶ್ವತ ಆಸ್ಪತ್ರೆಗಳ ಜೊತೆಗೆ ಪ್ರಮುಖ ನಗರಗಳಲ್ಲಿ ಪ್ರಥಮ ಚಿಕಿತ್ಸೆ ಮತ್ತು ತೀವ್ರ ನಿಗಾ ಘಟಕಗಳಿದ್ದವು. ಇವುಗಳನ್ನು ದೊಡ್ಡ ಮಸೀದಿಗಳೊಂದಿಗೆ ಜನನಿಬಿಡ ಸಾರ್ವಜನಿಕ ಸ್ಥಳಗಳಲ್ಲಿ ನಿರ್ಮಿಸಲಾಗಿತ್ತು. ತಕ್ಯುದ್ದೀನ್ ಮಖ್ರಿಸಿ (Maqrisi) ಕೈರೋದಲ್ಲಿನ ಒಂದು ಮಸೀದಿಯ ಬಗ್ಗೆ ವಿವರಿಸುತ್ತಾರೆ: “ಇಬ್ನ್ ತುಲೂನ್ ಈಜಿಪ್ಟ್ನಲ್ಲಿ ಜಗತ್ಪ್ರಸಿದ್ಧ ಮಸೀದಿಯನ್ನು ನಿರ್ಮಿಸಿದಾಗ ಅವರು ಮರಣದಂಡನೆಗಾಗಿ ಒಂದು ಸ್ಥಳವನ್ನೂ ಹಾಗೂ ಅದರ ಪಕ್ಕದಲ್ಲಿ ಔಷಧಾಲಯಕ್ಕೆ ಮತ್ತೊಂದು ಸ್ಥಳವನ್ನು ಸಿದ್ಧಪಡಿಸಿದರು. ದವಾಖಾನೆಯಲ್ಲಿ ಔಷಧಿಗಳು ಮತ್ತು ಪರಿಚಾರಕರು ಇರುತ್ತಾರೆ. ಜುಮುಆಗೆ ಬರುವವರಿಗೆ ಯಾವುದೇ ಅವಘಡ ಸಂಭವಿಸಿದರೆ ಚಿಕಿತ್ಸೆ ನೀಡಲು ಶುಕ್ರವಾರ ಡ್ಯೂಟಿಗೆ ಒಬ್ಬ ಡಾಕ್ಟರನ್ನು ನೇಮಿಸುತ್ತಿದ್ದರು..”
ವೈದ್ಯಕೀಯ ಶಾಲೆಗಳು ಮತ್ತು ಗ್ರಂಥಾಲಯ:
ವೈದ್ಯಕೀಯ ವಿದ್ಯಾರ್ಥಿಗಳಿಗೆ ತರಬೇತಿ ನೀಡುವುದು ಆಸ್ಪತ್ರೆಗಳ ಮುಖ್ಯ ಕಾರ್ಯಗಳಲ್ಲಿ ಒಂದು. ಪ್ರತಿಯೊಂದು ಆಸ್ಪತ್ರೆಯು ತನ್ನದೇ ಆದ ಲೆಕ್ಚರಿಂಗ್ ಥಿಯೇಟರ್ ಹೊಂದಿದ್ದವು. ಅಲ್ಲಿ ಹಿರಿಯ ವೈದ್ಯರು ಮತ್ತು ವೈದ್ಯಕೀಯ ಅಧಿಕಾರಿಗಳು ಸೆಮಿನಾರ್ಗಳ ಮುಖಾಂತರ ವೈದ್ಯಕೀಯ ಸಮಸ್ಯೆಗಳನ್ನು ಮೌಲ್ಯಮಾಪನ ಮಾಡಲು ಮತ್ತು ಚರ್ಚಿಸಲು ಒಟ್ಟಿಗೆ ಕುಳಿತುಕೊಳ್ಳುತ್ತಾರೆ. ತರಬೇತಿ ಮುಂದುವರೆದಂತೆ ಆಧುನಿಕ ರೆಸಿಡೆನ್ಸಿ ಕಾರ್ಯಕ್ರಮದ ಭಾಗವಾಗಿ ಹಿರಿಯ ವೈದ್ಯರು ವೈದ್ಯಕೀಯ ವಿದ್ಯಾರ್ಥಿಗಳನ್ನು ವಾರ್ಡ್ಗಳಿಗೆ ಕರೆದೊಯ್ಯಲಾಗುತ್ತದೆ ಮತ್ತು ರೋಗಿಗಳ ಆರೈಕೆ, ಶುಶ್ರೂಷೆಯಲ್ಲಿ ಸಮಯ ಕಳೆಯಲು ಅವಕಾಶ ನೀಡಲಾಗುತ್ತದೆ.
ಸಾಹಿತಿ ಇಬ್ನ್ ಅಬೀ ಉಸೈಬಿಯಾ ಅವರ ಬರವಣಿಗೆಗಳು- ವೈದ್ಯರ ತರಗತಿ, ವಿದ್ಯಾರ್ಥಿಗಳ ಕಲಿಕೆ, ಆರಂಭಿಕ ಕಾಲದ ತರಬೇತಿಯ ಹಂತಗಳ ವಿವರಗಳನ್ನು ನಮಗೆ ನೀಡುತ್ತವೆ. ಚರ್ಮದ ಕಾಯಿಲೆ, ಗೆಡ್ಡೆ, ಜ್ವರ ಹಾಗೂ ಸಾಮಾನ್ಯ ರೋಗಿಗಳಿಗೆ ನೀಡುವ ಪಾಕವಿಧಾನಗಳು ಮತ್ತು ಇತರ ಸಲಹೆಗಳನ್ನು ಅವರ ಬರವಣಿಗೆಗಳಲ್ಲಿ ಕಾಣಬಹುದು. ರೋಗಿಯ ಚಟುವಟಿಕೆ, ಮಲ ಮೂತ್ರ ವಿಸರ್ಜನೆ, ಊತ ಮತ್ತು ನೋವಿನ ಸ್ಥಳವನ್ನು ಪರೀಕ್ಷಿಸಲು ವಿದ್ಯಾರ್ಥಿಗಳೊಂದಿಗೆ ಕೇಳುವ ದಾಖಲೆಗಳೂ ಇವೆ. ತರಬೇತಿಯ ಅಂತಿಮ ಹಂತವು ‘ಮೆಡಿಕಲ್ ಪ್ರಾಕ್ಟೀಸ್ ಲೈಸೆನ್ಸ್’ ಗೆ ಇರುವ ಪರೀಕ್ಷೆಯಾಗಿದೆ. ಅರ್ಜಿದಾರರು ಸರ್ಕಾರದಿಂದ ನೇಮಿಸಲ್ಪಟ್ಟ ಮುಖ್ಯ ವೈದ್ಯಕೀಯ ಅಧಿಕಾರಿಯ ಮುಂದೆ ಹಾಜರಾಗಬೇಕು. ಪ್ರಮಾಣಪತ್ರ ಪಡೆಯಲು ಬಯಸುವ ವಿಷಯದ ಬಗ್ಗೆ ಪ್ರಬಂಧ ಬರೆಯುವುದು ಮೊದಲ ಟಾಸ್ಕ್. ಈ ಪ್ರಬಂಧವು ಮೂಲ ಅಧ್ಯಯನದ ಭಾಗವಾಗಿರಬಹುದು ಅಥವಾ ಹಿಪ್ಪೊಕ್ರೇಟ್ಸ್, ಗ್ಯಾಲೆನ್ ಮತ್ತು ಇಬ್ನ್ ಸಿನಾ ಅವರ ಪಠ್ಯ ವಿಶ್ಲೇಷಣೆಯಿಂದಲೂ ಆಗಬಹುದು. ವೈದ್ಯಕೀಯ ಅಧಿಕಾರಿಗಳು ಪೂರ್ವಿಕರ ಕೃತಿಗಳನ್ನು ಅಧ್ಯಯನ ಮಾಡಲು ಮಾತ್ರವಲ್ಲದೆ ಸಂಭವಿಸಿದ ದೋಷಗಳನ್ನು ಪರಿಶೀಲಿಸಲು ಪ್ರೋತ್ಸಾಹಿಸುವರು. ಪ್ರಬಂಧವನ್ನು ಪೂರ್ಣಗೊಳಿಸಿದ ನಂತರ ಮುಖ್ಯ ವೈದ್ಯಕೀಯ ಅಧಿಕಾರಿಯು ಅರ್ಜಿದಾರರನ್ನು ಸುದೀರ್ಘವಾಗಿ ಸಂದರ್ಶನ ಮಾಡಿ ಭವಿಷ್ಯದ ಸಮಸ್ಯೆಗಳಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳುತ್ತಾರೆ. ತೃಪ್ತಿಕರ ಉತ್ತರ ನೀಡಿದವರಿಗೆ ಲೈಸೆನ್ಸ್ ನೀಡಲಾಗುತ್ತಿತ್ತು.
ಆಸ್ಪತ್ರೆಯ ಮತ್ತೊಂದು ಪ್ರಮುಖ ಆಕರ್ಷಣೆಯೆಂದರೆ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಬಹಳ ಮುಖ್ಯವಾದ ವಿಶಾಲ ವ್ಯಾಪ್ತಿಯಲ್ಲಿರುವ ವೈದ್ಯಕೀಯ ಗ್ರಂಥಾಲಯ. ಹದಿನಾಲ್ಕನೇ ಶತಮಾನದಲ್ಲೇ ಈಜಿಪ್ಟಿನ ಇಬ್ನ್ ತುಲೂನ್ ಆಸ್ಪತ್ರೆಯು ವೈದ್ಯಕೀಯ ವಿಜ್ಞಾನದ ವಿವಿಧ ಶಾಖೆಗಳ ಒಂದು ಲಕ್ಷ ಗ್ರಂಥಗಳನ್ನು ಒಳಗೊಂಡ ಬೃಹತ್ ಗ್ರಂಥಾಲಯವನ್ನು ಹೊಂದಿತ್ತು. ಇದು ಯುರೋಪಿನ ಅತಿದೊಡ್ಡ ಗ್ರಂಥಾಲಯವಾದ ಪ್ಯಾರಿಸ್ ವಿಶ್ವವಿದ್ಯಾಲಯವು ಕೇವಲ ನಾಲ್ಕು ನೂರು ಸಂಪುಟಗಳನ್ನು ಹೊಂದಿದ್ದ ಸಮಯದಲ್ಲಾಗಿತ್ತು. ಇಸ್ಲಾಮಿಕ್ ಔಷಧ ಮತ್ತು ಪ್ರೋಟೋಟೈಪ್ಪ್ ಆಶ್ರಯದಲ್ಲಿ ‘ಆಧುನಿಕ ಆಸ್ಪತ್ರೆಗಳು’ ಮಧ್ಯಕಾಲೀನ ಇಸ್ಲಾಮಿನ ವೈಜ್ಞಾನಿಕ ಮತ್ತು ಬೌದ್ಧಿಕ ಪ್ರಯೋಜನಗಳ ಲಾಭ ಪಡೆಯುತ್ತಿದೆ ಎಂಬುದರಲ್ಲಿ ಸಂದೇಹವಿಲ್ಲ.
ಅನುಬಂಧ
ಹತ್ತನೇ ಶತಮಾನದಲ್ಲಿ ಕೋರ್ಡೋವಾ ಆಸ್ಪತ್ರೆಯಿಂದ ಒಬ್ಬ ಫ್ರೆಂಚ್ ಯುವಕನ ಪತ್ರವನ್ನು ಕೆಳಗೆ ಅಂಟಿಸಲಾಗಿದೆ:
“ನಿಮ್ಮ ಹಿಂದಿನ ಪತ್ರದಲ್ಲಿ ನನ್ನ ಔಷಧಿಗಳಿಗೆ ಹಣವನ್ನು ಕಳುಹಿಸುತ್ತೇನೆ ಎಂದು ಸೂಚಿಸಿದ್ದೀರಿ. ಈ ಇಸ್ಲಾಮಿಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಉಚಿತವಾಗಿರುವುದರಿಂದ ನನಗೆ ಹಣದ ಅಗತ್ಯವಿಲ್ಲ. ಆಸ್ಪತ್ರೆಯಲ್ಲಿ ನಮಗೆ ಬೇಕಾದ ಎಲ್ಲವೂ ಲಭ್ಯವಿದೆ. ಆಸ್ಪತ್ರೆಯು ಈಗಾಗಲೇ ಚೇತರಿಸಿಕೊಂಡಿರುವ ಪ್ರತಿ ರೋಗಿಗೆ ಹೊಸ ಸ್ಯೂಟ್ ಹಾಗೂ ಐದು ದಿನಾರ್ಗಳನ್ನು ನೀಡಿದೆ..”
ಪ್ರಿಯ ತಂದೆ, ನೀವು ನನ್ನನ್ನು ನೋಡಲು ಬಯಸಿದರೆ, ನಾನು ಶಸ್ತ್ರಚಿಕಿತ್ಸೆ ಹಾಗೂ ಮೂಳೆಗಳ ಚಿಕಿತ್ಸಾ ವಿಭಾಗದ ಬಳಿ ಇರುತ್ತೇನೆ. ನೀವು ಮುಖ್ಯ ದ್ವಾರವನ್ನು ಪ್ರವೇಶಿಸಿದ ನಂತರ ದಕ್ಷಿಣದಲ್ಲಿ ಕಾಣುವ ವಿಶಾಲ ಸಭಾಂಗಣಕ್ಕೆ ಹೋಗಿ, ಅಲ್ಲಿ ನೀವು ಪ್ರಥಮ ಚಿಕಿತ್ಸಾ ವಿಭಾಗವನ್ನು ಕಾಣುವಿರಿ. ಪಕ್ಕದಲ್ಲೇ ನನ್ನ ಕೋಣೆ. ಅದರ ಸಮೀಪದಲ್ಲೇ ಗ್ರಂಥಾಲಯದ ಸಭಾಂಗಣವಿದೆ. ಅಲ್ಲಿ ಪ್ರಾಧ್ಯಾಪಕರ ಉಪನ್ಯಾಸಗಳನ್ನು ಕೇಳಲು ವೈದ್ಯರು ಬರುತ್ತಾರೆ. ಈ ವಿಶಾಲ ಸಭಾಂಗಣವನ್ನು ಓದಲು ಬಳಸಲಾಗುತ್ತದೆ. ಆಸ್ಪತ್ರೆಯ ಇನ್ನೊಂದು ಬದಿಯಲ್ಲಿ ಸ್ತ್ರೀರೋಗ ವಿಭಾಗವಿದೆ. ಅದಕ್ಕೆ ಪುರುಷ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಆಸ್ಪತ್ರೆಯ ನ್ಯಾಯಾಲಯದ ಬಲಭಾಗದಲ್ಲಿ ಚೇತರಿಸಿಕೊಂಡವರಿಗೆ ದೊಡ್ಡ ಸಭಾಂಗಣವಿದೆ. ಇದು ರೋಗಿಗಳಿಗೆ ದಣಿವು ನಿವಾರಿಸಲಿರುವ ಸ್ಥಳವಾಗಿದೆ.
ಪ್ರಿಯ ತಂದೆ, ಈ ಆಸ್ಪತ್ರೆಯಲ್ಲಿ ಪ್ರತಿಯೊಂದು ಸ್ಥಳವೂ ಅತ್ಯಂತ ಸ್ವಚ್ಛವಾಗಿದೆ. ಹಾಸಿಗೆಗಳು ಮತ್ತು ತಲೆದಿಂಬುಗಳನ್ನು ಬಿಳಿ ಡಮಸ್ಕಸ್ ಬಟ್ಟೆಯಿಂದ ಮುಚ್ಚಲಾಗುತ್ತದೆ. ಬೆಡ್ ಶೀಟ್ಗಳಿಗೆ ಸಂಬಂಧಿಸಿದಂತೆ, ಅವುಗಳನ್ನು ಮೃದುವಾದ ಪ್ಲಶ್ನಿಂದ ತಯಾರಿಸಲಾಗುತ್ತದೆ. ಈ ಆಸ್ಪತ್ರೆಯ ಎಲ್ಲಾ ಕೊಠಡಿಗಳಿಗೆ ಶುದ್ಧ ನೀರಿನ ವ್ಯವಸ್ಥೆ ಮಾಡಲಾಗಿದೆ. ವಿಶಾಲವಾದ ಜಲಧಾರೆಗೆ ಜೋಡಿಸಲಾದ ಕೊಳವೆಗಳ ಮೂಲಕ ನೀರನ್ನು ಕೊಠಡಿಗಳಿಗೆ ಒಯ್ಯಲಾಗುತ್ತದೆ. ಇದರ ಜೊತೆಗೆ ಪ್ರತಿ ಕೋಣೆಯಲ್ಲಿ ಹೀಟಿಂಗ್ ಮೆಷಿನ್ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ನಮ್ಮ ಆಹಾರ ಯಾವಾಗಲೂ ಕೋಳಿ ಮಾಂಸ ಮತ್ತು ತರಕಾರಿಗಳಾಗಿದೆ. ಗಮನಾರ್ಹ ಸಂಗತಿಯೆಂದರೆ ಕೆಲವು ರೋಗಿಗಳು ಈ ರುಚಿಕರವಾದ ಆಹಾರದ ಮೇಲಿನ ಪ್ರೀತಿ ಮತ್ತು ಬಯಕೆಯಿಂದಾಗಿ ಆಸ್ಪತ್ರೆಯಿಂದ ಹೊರ ಹೋಗಲು ಸಿದ್ಧರಾಗುತ್ತಿಲ್ಲ. ” (The Islamic Scientific Supremacy. Ameer Gafar Al-Arshdy. 1990, Beirut, Al-Resala Establishment)
ಕೃಪೆ: AramcoWorld
ಮೂಲ: ಡೇವಿಡ್ ಡಬ್ಲ್ಯೂ ಶ್ಯಾಂಝ್
ಕನ್ನಡಕ್ಕೆ: ಅಶ್ರಫ್ ನಾವೂರು