ಇಸ್ಲಾಮಿಕ್ ಥಿಯಾಲಜಿಯಲ್ಲಿ ಮುಖ್ಯವಾಗಿ ಮೂರು ವಿಂಗಡನೆಗಳು ಕಂಡುಬರುತ್ತದೆ. ಒಂದು: ಇಲಾಹಿಯ್ಯಾತ್. ಇದು ದೇವರ ಮೇಲಿನ ನಂಬಿಕೆಯ ಕುರಿತ ಚರ್ಚೆಯನ್ನು ಮಾಡುವಂತದ್ದು. ಎರಡು: ನುಬುವ್ವತ್; ಪ್ರವಾದಿತ್ವ ಸಂಬಂಧಿತ ವಿವರಣೆಗಳು. ಮೂರು; ಸಮ್‌ಇಯ್ಯಾತ್, ದೇವಸಂದೇಶ ಮೂಲಕ ಮಾತ್ರ ತಿಳಿಯಬಹುದಾದ ವಿಚಾರಗಳ ಮೇಲಿನ ನಂಬಿಕೆಗಳು. ಮೂರನೆ ಕ್ಯಾಟಗರಿಯ ವಿಶೇಷತೆಯೇನೆಂದರೆ, ಅದು ಮುಸ್ಲಿಮರು ಖುರಾನ್ ಅಥವಾ ಹದೀಸಿನಲ್ಲಿ ಬಂದಿರುವ ಏಕೈಕ ಕಾರಣದಿಂದ ನಂಬಬೇಕಾದ ವಿಚಾರಗಳ ಕುರಿತು ಮಾತನಾಡುತ್ತದೆ. ನರಕ, ಸ್ವರ್ಗ, ಜಿನ್ನ್ ಇವೆಲ್ಲ ಪ್ರಸ್ತುತ ಕ್ಯಾಟಗರಿಯ ಉದಾಹರಣೆಗಳು. ಚರಿತ್ರೆ ಅಥವಾ ಪ್ರತ್ಯಕ್ಷ ಪ್ರಮಾಣದ ಮೂಲಕ ಸಾಬೀತುಪಡಿಸಲಾಗದ ಐತಿಹಾಸಿಕ ವಿವರಣೆಗಳು ಕೂಡ ಇದರಲ್ಲೇ ಒಳಪಡುವಂಥದ್ದು. ಇವುಗಳನ್ನು “ಗೈಬ್” ಅಥವ ಅತೀಂದ್ರಿಯ ವಿಚಾರಗಳೆಂದು ಹೆಸರಿಸಲಾಗಿದೆ. ಕಾರಣ ಪ್ರತ್ಯಕ್ಷ ಅನುಭವಗಳಿಂದಲೋ ಯಾ ವೈಚಾರಿಕತೆಯಿಂದಲೋ ಅವುಗಳನ್ನು ಸಾಬೀತುಪಡಿಸಲಾಗದು. ಆದ್ದರಿಂದ ಅವುಗಳ ಕುರಿತಾಗಿ ಸಿಕ್ಕಿದಂತಹ ವಿವರಣೆಗಳನ್ನು ಮನುಷ್ಯ ಜ್ಞಾನಕ್ಕೆ ಅತೀತವೆಂದೇ ಪರಿಗಣಿಸಬೇಕಾಗುತ್ತದೆ.
ಆದಂ (ಅ) ಮತ್ತು ಹವ್ವಾ (ರ) ರವರ ಸೃಷ್ಟಿಯ ಕುರಿತ ವಿವರಣೆ ಇಸ್ಲಾಮಿಕ್ ಥಿಯಾಲಜಿಯಲ್ಲಿ ಸಮ್‌ಇಯ್ಯಾತ್ (ದೇವವಾಣಿ ಮೂಲಕ ಮಾತ್ರ ಸಿಗುವ ಅತೀಂದ್ರಿಯ ಮಾಹಿತಿಗಳು) ಎಂಬ ಕ್ಯಾಟಗರಿಯಲ್ಲಿ ಬರುವಂಥದ್ದು. ಇಸ್ಲಾಮೀ ಮೂಲಗ್ರಂಥಗಳಿಂದ ಮಾತ್ರ ದೊರಕಲು ಸಾಧ್ಯವಿರುವ ಇಂತಹ ಮಾಹಿತಿಗಳ ಕುರಿತಾಗಿ ವಿದ್ವಾಂಸರ ನಿಲುವೇನೆಂದರೆ, ಗ್ರಂಥ ಎಷ್ಟರ ಮಟ್ಟಿಗೆ ತಿಳಿಸಿಕೊಟ್ಟಿದೆಯೋ ಅವನ್ನು ಮಾತ್ರ ದೃಢಪಡಿಸಿಕೊಳ್ಳುವುದು ಹಾಗೂ ಅದಕ್ಕೆ ಹೊರತಾದ ಕಾರ್ಯಗಳಲ್ಲಿ ಏನೂ ಮಾತನಾಡದೇ ಇರುವುದು (ಅಂದರೆ ಸ್ವೀಕೃತಿಯೂ ನಿರಾಕರಣೆಯೂ ಸಲ್ಲದು). ಇಲ್ಲಿ ಗಮನಿಸಬೇಕಾದ ಅಂಶ, ಗ್ರಂಥ ಹೇಳಿದಕ್ಕಿಂತ ಆಚೆ ಯಾವ ತರದ ಸಂಶೋಧನೆ ಮಾಡಬಾರದು ಎಂದಿಲ್ಲ. ಹೊರತು ಧಾರ್ಮಿಕ ನಂಬಿಕೆ ಎಂಬ ನೆಲೆಗಟ್ಟಲ್ಲಿ ಅದಕ್ಕಿಂತ ಆಚೆ ಏನೂ ಹೇಳದಿರುವುದೇ ಸರಿ. ಇಂಥ ನಿಲುವನ್ನು ತವಖ್ಖುಫ್ ಅಥವಾ ತಟಸ್ಥ ನಿಲುವು ಎಂದು ಕರೆಯಲಾಗಿದೆ.

ಖುರಾನ್ ಮತ್ತು ಹದೀಸ್ ಮೌನ ತಾಳಿದ ವಿಚಾರಗಳಲ್ಲಿ ಒಬ್ಬ ಥಿಯಾಲಜಿಯನ್ ಅಲಿಪ್ತ ಧೋರಣೆ (non commitment) ತಾಳಬೇಕಾಗುವುದು.
ಆದಂ ಮತ್ತು ಹವ್ವಾ ಎಂಬೆರೆಡು ವ್ಯಕ್ತಿಗಳ ಕುರಿತು ಪುರಾತತ್ವ ಮತ್ತು ಪಳೆಯುಳಿಕೆ ಆಧಾರಿತ ಯಾವುದೇ ದಾಖಲೆ ಸಿಗದು. ಇವರ ಕುರಿತ ಮಾಹಿತಿ ನೀಡುವ ಏಕೈಕ ಮೂಲ ಧರ್ಮಗ್ರಂಥ. ಮುಖ್ಯವಾಗಿ ಮೂರು ಅಂಶಗಳೆಡೆಗೆ ಖುರಾನ್ ಬೊಟ್ಟುಮಾಡುತ್ತದೆ.
- ಆದಂ (ಅ) ಮತ್ತು ಹವ್ವಾ (ರ) ರನ್ನು ದೇವರೇ ನೇರವಾಗಿ ಸೃಷ್ಟಿ ಮಾಡಿದನು.
- ಅವರನ್ನು ನೇರವಾಗಿ ಮಣ್ಣಿನಿಂದ ಸೃಷ್ಟಿಸಲಾಯಿತು.
- ಇಂದು ಜಗತ್ತಿನಲ್ಲಿ ಬದುಕುತ್ತಿರುವ ಮಾನವರೆಲ್ಲ ಉಭಯ ವ್ಯಕ್ತಿಗಳ ಸಂತತಿಗಳು.
ಪ್ರಸ್ತುತ ಅಂಶಗಳು ಪೂರ್ಣವಾಗಿ ಅಭೌತಿಕ (metaphysical) ಲಕ್ಷಣ ಹೊಂದಿರುವುದರಿಂದ ವಿಜ್ಞಾನಕ್ಕೆ ಈ ಕುರಿತಾಗಿ ಏನೂ ಹೇಳಲಿಕ್ಕಾಗದು (ಅಂದರೆ ಸರಿ ಎನ್ನಲೂ ತಪ್ಪು ಎನ್ನಲೂ ಆಗದು). ಕಾರಣ, ವಿಜ್ಞಾನದ ಅಧ್ಯಯನ ವ್ಯಾಪ್ತಿ ಭೌತಿಕ (ಪಂಚೇಂದ್ರಿಯಗಳಿಗೆ ನಿಲುಕುವ) ವಿಚಾರಗಳಲ್ಲಿ ಸೀಮಿತವಾಗಿದೆ.
ವಿಜ್ಞಾನ ಮಾತನಾಡುವುದು ಮನುಷ್ಯನ ಜೈವಿಕ ಮೂಲದ (biological origin) ಬಗ್ಗೆ. ಈ ನಿಟ್ಟಿನಲ್ಲಿ ಥಿಯಾಲಜಿ ಏನೂ ಹೇಳುವುದಿಲ್ಲ. ಅಂದರೆ ಆದಂ ರವರ ಪೂರ್ವದಲ್ಲಿ ಅಥವಾ ಅವರ ಕಾಲದಲ್ಲಿ ಭೂಮಿಯಲ್ಲಿ ಯಾವುದಾದರೂ ಜೀವಿಗಳಿತ್ತೇ ಎಂಬ ವಿಚಾರದಲ್ಲಿ ಥಿಯಾಲಜಿ ಮೌನ ತಾಳಿದೆ (ಇದೆ ಎನ್ನುವುದಿಲ್ಲ ಇಲ್ಲ ಎನ್ನುವುದೂ ಇಲ್ಲ). ಆದ್ದರಿಂದ ಮುಸ್ಲಿಮರಿಗೆ ಪ್ರಸ್ತುತ ವಿಚಾರದಲ್ಲಿ ಯಾವುದೇ ತರದ ಧಾರ್ಮಿಕ ನಂಬಿಕೆ ತಾಳಬೇಕಿಲ್ಲ. ತಟಸ್ಥ ಭಾವನೆ ಹೊಂದಿದರೆ ಸಾಕು. ಈ ನಿಟ್ಟಿನಲ್ಲಿ, ಜೀವವಿಜ್ಞಾನಿಗಳು ಕೆಲವು ಶರೀರಶಾಸ್ತ್ರೀಯ ಮತ್ತು ಪಳೆಯುಳಿಕೆಶಾಸ್ತ್ರ ಸಂಜ್ಞೆಗಳ ಆಧಾರದಲ್ಲಿ ಬಣ್ಣಿಸುವ ಹೋಮೋಸೇಪಿಯನ್ಸ್‌ಗಳು ಆದಮ್ (ಅ) ರ ಕಾಲದಲ್ಲೋ ಅಥವಾ ಅವರ ಮುಂಚೆಯೋ ಇದ್ದರೋ ಇಲ್ಲವೋ ಎಂಬ ವಿಚಾರದಲ್ಲಿ ಮುಸ್ಲಿಮರಿಗೆ ಯಾವುದರ ಪರವಾಗಿಯೂ ನಿಲ್ಲಲಾಗದು. (ವಿ.ಸೂ: ಪ್ರಸ್ತುತ ಅಲಿಪ್ತ ಧೋರಣೆ ಧಾರ್ಮಿಕ ನೆಲೆಗಟ್ಟಿನಲ್ಲಾಗಿದೆ. ವೈಜ್ಞಾನಿಕ ನಲೆಗಟ್ಟಿನಲ್ಲಿ ಒಬ್ಬ ಮುಸ್ಲಿಮನಿಗೆ ಒಪ್ಪಬಹುದು, ಒಪ್ಪದೇ ಇರಬಹುದು).

ಇಲ್ಲಿ ಮಾನವನ ಕುರಿತ ಡೆಫಿನಿಷನ್ ಬಹಳ ಮುಖ್ಯವೆನಿಸತ್ತದೆ. ಇಸ್ಲಾಂ ಮನುಷ್ಯನನ್ನು ಕೇವಲ ಒಂದು ಭೌತಿಕ ವಸ್ತುವೆಂದು ಪರಿಗಣಿಸುವುದಿಲ್ಲ. ಅದು ಮನುಷ್ಯ (ಇನ್ಸಾನ್) ಎಂಬ ಪರಿಕಲ್ಪನೆಗೆ ಕೆಲವು ಐತಿಹಾಸಿಕ, ಧಾರ್ಮಿಕ, ತಾತ್ವಿಕ ಮತ್ತು ಆಭೌತಿಕ ಆಯಾಮಗಳನ್ನು ಒದಗಿಸುತ್ತದೆ. ಆದರೆ ಜೀವವಿಜ್ಞಾನಿಗಳು ಹೋಮೋ ಸೇಪಿಯನ್ಸ್ ಎಂಬ ವರ್ಗಕ್ಕೆ ಮೇಲೆ ಹೇಳಿದ ಧಾರ್ಮಿಕ ಅಂಶಗಳನ್ನು ಆರೋಪಿಸುವುದಿಲ್ಲ. ಹೊರತು, ಕೆಲವು ಜೈವಿಕ ಗುಣಗಳನ್ನು ಮಾತ್ರ ಪರಿಗಣಿಸುತ್ತಾರೆ. ಆದ್ದರಿಂದ ಧರ್ಮ ಮುಂದಿಡುವ ಮನುಷ್ಯನೇ ಬೇರೆ, ವಿಜ್ಞಾನ ಹೇಳುವ ಮನುಷ್ಯನೇ ಬೇರೆ. ಒಟ್ಟಾರೆ, ಪ್ರಾಣಿ ಪ್ರಪಂಚದಲ್ಲಿ ಕೆಲವು ವಿಶೇಷ ಜೈವಿಕ ವೈಶಿಷ್ಟ್ಯತೆಗಳನ್ನು ಹೊಂದಿದ ಜೀವಿವರ್ಗದ ಆರಂಭ ಮತ್ತು ವಿಕಾಸದ ಕುರಿತ ವಿಚಾರಗಳು ಜೀವವಿಜ್ಞಾನದ ವಿಷಯವಾಗುತ್ತದೆ, ಆ ಕುರಿತಾಗಿ ಧರ್ಮ ಏನೂ ಹೇಳುವುದಿಲ್ಲ. ಹಾಗೆಯೇ ಆದಂ (ಅ) ರವರ ಸೃಷ್ಟಿ ಮತ್ತು ಈಗಿನ ಮನುಷ್ಯರೆಲ್ಲ ಅವರ ಸಂತತಿಗಳೆಂಬುವುದು ನಂಬಿಕೆಯ ವಿಚಾರ. ಆ ಕುರಿತಾಗಿ ವಿಜ್ಞಾನಕ್ಕೂ ಏನೂ ಹೇಳಲಾಗದು.

ಜೀವ ವಿಜ್ಞಾನಿಗಳು ಮನುಷ್ಯನ ಭೌತಿಕ ಗುಣಗಳ ಮೇಲೆ ಗಮನವಿರಿಸುತ್ತಾರೆ. ಇತರ ಹೋಮಿನಿಡ್ ಸಸ್ತನಿ ವರ್ಗದಿಂದ ಮನುಷ್ಯರು ವಿಕಾಸ ಹೊಂದಿದ್ದಾರೆ ಎಂದು ಜೀವವಿಜ್ಞಾನಿಗಳು ವಾದ ಮಂಡಿಸುವಾಗ, ಅವರು ಹೋಮೋ ಎಂಬ ವರ್ಗವನ್ನು ಇತರ ವರ್ಗಗಳಿಂದ ಭಿನ್ನಗೊಳಿಸುವ ವಿಶೇಷ ಶಾರೀರಿಕ ಮತ್ತು ಜೆನೆಟಿಕ್ ರಚನೆ ಹೊಂದಿದ ಜೀವಿಗಳೆಡೆಗೇ ಬೊಟ್ಟು ಮಾಡುತ್ತಾರೆಯೇ ಹೊರತು ತಾತ್ವಿಕ, ಅಭೌತಿಕ, ಆಧ್ಯಾತ್ಮಿಕ ಮತ್ತು ಧಾರ್ಮಿಕ ನೆಲೆಗಟ್ಟಿನಲ್ಲಿರುವ ಮನುಷ್ಯರ ಕುರಿತು ಹೇಳುತ್ತಿಲ್ಲ. ಹೋಮೋಸೇಪಿಯನ್ಸ್ ಕುರಿತು ಅವರು ಹೇಳುವಾಗ ಇದೇ ವಿಚಾರ ಅನ್ವಯವಾಗುತ್ತದೆ.
ಇಸ್ಲಾಮಿಕ್ ದೇವತಾಶಾಸ್ತ್ರಜ್ಞರು ಇಂದು ಬದುಕುತ್ತಿರುವ ಹೋಮೋಸೇಪಿಯನ್ಸಿನ ಪ್ರತಿಯೊಬ್ಬರೂ ಆದಮ(ಅ)ರ ಮಕ್ಕಳೆಂದು ಹೇಳುತಿದ್ದರೂ, ಹೋಮೋಸೆಪಿಯನ್ಸಿನ ಜೈವಿಕ ಲಕ್ಷಣಗಳೊಂದಿಗೆ ಸಾಮ್ಯತೆ ಹೊಂದಿದ ಜೀವಿಗಳು ಆದಮ (ಅ) ರಿಗಿಂತ ಮುಂಚೆ ಇದ್ದರೇ ಎನ್ನುವ ವಿಚಾರದಲ್ಲಿ ಯಾವ ನಿಲುವನ್ನೂ ವ್ಯಕ್ತಪಡಿಸುವುದಿಲ್ಲ. ಪರಿಣಾಮವಾಗಿ, ಏಕಜೀವಕೋಶದಿಂದ ಆರಂಭಗೊಂಡು ವಿಕಾಸದ ವಿವಿಧ ಹಂತಗಳನ್ನು ದಾಟಿ ಕಡೆಗೆ ಹೋಮೋಸೇಪಿಯನ್ಸ್ ಎಂಬ ವರ್ಗವುಂಟಾಯಿತು ಎಂಬ ವಿಕಾಸವಾದೀ ತತ್ವವನ್ನು ದೇವತಾಶಾಸ್ತ್ರಜ್ಞರಿಗೆ ಅಲ್ಲಗಳೆಯಲಾಗದು. ಅವರಿಗೆ ತಟಸ್ಥ ನಿಲುವನ್ನು ಹೊಂದಲು ಮಾತ್ರ ಸಾಧ್ಯ. ಥಿಯಾಲಜಿ ನೆಲೆಗಟ್ಟಿನಲ್ಲಿ ಅವರಿಗೆ, ವಿಕಾಸ ತತ್ವವನ್ನು ಸರಿ ಎನ್ನಲೂ ಆಗದು, ಸುಳ್ಳು ಎನ್ನಲೂ ಆಗದು. ವಿಜ್ಞಾನದ ಆಧಾರದಲ್ಲಿ ಅದನ್ನು ಒಪ್ಪುವುದು ಬಿಡುವುದು ಅವರಿಗೆ ಬಿಟ್ಟದ್ದು. ಕಾರಣ ಅದು ವ್ಯೆಯಕ್ತಿಕ ಮತ್ತು ನಂಬಿಕೆಗೆ ಹೊರತಾದ ವಿಚಾರ.
ಒಟ್ಟಾರೆಯಾಗಿ. ಆದಂ (ಅ) ರ ವಿಶೇಷ ಸೃಷ್ಟಿಯ ಕುರಿತ ವಿವರಣೆ ನಂಬಿಕೆಯ ವಿಚಾರವಾಗಿಯೇ ಉಳಿಯುತ್ತದೆಯೇ ವಿನಃ ಹೋಮೋಸೇಪಿಯನ್ಸ್ ಎಂಬ ವರ್ಗದ ಜೈವಿಕ ಮೂಲದ ಕುರಿತು ಮಾಹಿತಿ ನೀಡುವ ವಿವರಣೆಯಾಗುವುದಿಲ್ಲ. ಹಾಗೆಯೇ ಪ್ರಸ್ತುತ ಸೃಷ್ಟಿಯನ್ನು ಪ್ರಾಕೃತಿಕ ವಿದ್ಯಮಾನವಾಗಿ ಪರಿಗಣಿಸಲಾಗದು. ಬದಲಾಗಿ ಅದೊಂದು ಅಲೌಕಿಕ ವಿಷಯವಾಗಿದೆ. ಆದಮರನ್ನು ಮತ್ತು ಅವರ ಸಂತತಿಗಳನ್ನು ಗೌರವಿಸಲು ದೇವರು ಇಂತ ವಿಶಿಷ್ಟ ಸೃಷ್ಟಿ ಪ್ರಕ್ರಿಯೆಯನ್ನು (ಯಾವುದೇ ಕಾರಣಗಳಿಲ್ಲದೆ ನೇರವಾಗಿ ಸೃಷ್ಟಿಸಿದ್ದು) ನಡೆಸಿದನು ಎಂದು ಹೇಳಬಹುದೇ ಹೊರತು ಇತರ ಎಲ್ಲಾ ಪ್ರಾಣಿಗಳನ್ನೂ ಹಾಗೇ ನೇರವಾಗಿ ಸೃಷ್ಟಿ ಮಾಡಿದನು ಎನ್ನಲಾಗದು. ಆದ್ದರಿಂದ, ಮುಸ್ಲಿಮರಿಗೆ ತಮ್ಮ ನಂಬಿಕೆಗೆ ಪೂರ್ಣವಾಗಿ ಬದ್ಧವಾಗಲು ವಿಕಾಸವಾದವನ್ನು ವಿರೋಧ ಮಾಡಬೇಕಾಗಿಲ್ಲ. ಆದಂ (ಅ) ರನ್ನು ದೇವರು ವಿಶಿಷ್ಟ ರೀತಿಯಲ್ಲಿ ಸೃಷ್ಟಿಸಿದನು ಹಾಗೂ ಇಂದು ಬದುಕುತ್ತಿರುವ ಮನುಷ್ಯರೆಲ್ಲ ಅವರ ಸಂತತಿಗಳೆಂದು ನಂಬುವುದರ ಜತೆಗೇ ವಿಕಾಸವಾದ ತತ್ವಗಳನ್ನು ಒಪ್ಪಲು ಅವಕಾಶವಿದೆ.
ಮೂಲ: ಡೆವಿಡ್ ಸೋಲಮನ್ ಜಲಾಜಿಲ್
ಅನುವಾದ: ಎಂ.ಎಂ. ಮಸ್ರೂರ್