ಕಾಶ್ಮೀರ: ಪುರಾತನ ನಗರದ ಸೂಫಿ ಸನ್ನಿಧಿಯಲ್ಲಿ

ಕಾಶ್ಮೀರದ ಸುಗಂಧ ಹಾಗೂ ಸೌಂದರ್ಯವನ್ನು ಅರಸುತ್ತಾ ಅಲ್ಲಿನ ಮಂಜು ಮುಸುಕಿದ ಹಾದಿಗಳಲ್ಲಿ ಜನರ ನಡುವೆ ವಿಹರಿಸಿದ ಅನುಭವ ಕಥೆಯಿದು.

ಕಾಶ್ಮೀರದಲ್ಲಿನ ನನ್ನ ಸಂಚಾರವು ಲೋಕಲ್ ಗಾಡಿಗಳಲ್ಲಿ ಸಾಗಿತ್ತು. ಎಲ್ಲಿಗೆ ಹೋದರೂ ಅಲ್ಲಿನ ಪ್ರಾದೇಶಿಕ ಸಂಚಾರ ಮಾರ್ಗವನ್ನು ಅರಿತುಕೊಳ್ಳುವುದು ನನ್ನ ಒಂದು ವಾಡಿಕೆ. ಇದರಿಂದ ಎರಡು ಲಾಭಗಳಿವೆ. ಯಾತ್ರಾ ವೆಚ್ಚವನ್ನು ಕಡಿತಗೊಳಿಸಬಹುದು ಎನ್ನುವುದು ಒಂದು ಉಪಕಾರವಾದರೆ, ಆ ಊರಿನ ಸಾಮಾನ್ಯ ಜನರ ಮಾತು, ಸಂಸ್ಕೃತಿ, ಒಡನಾಟ, ರೀತಿ-ರಿವಾಜುಗಳ ಕುರಿತಾಗಿ ಅರಿತುಕೊಳ್ಳಬಹುದೆನ್ನುವುದು ಎರಡನೆಯದ್ದು. ಸಾಮಾನ್ಯವಾಗಿ ಸಂಚಾರಕ್ಕೆ ದೀರ್ಘ ದಿನಗಳ ಬಿಡುವು ಬೇಕು. ಮೂರು ನಾಲ್ಕು ದಿನದ ಪ್ರಯಾಣದ ಯೋಜನೆಯೊಂದಿಗೆ ಹೊರಟರೆ ಇವೆಲ್ಲಾ ನಡೆಯದು. ಟ್ಯಾಕ್ಸಿ ಕಾರ್ ಹಿಡಿದು ಕೃತಕ ಸಿಂಗಾರಗಳಿಂದ ಅಲಂಕೃತವಾಗಿರುವ ನಗರಗಳಿಗೆ ಹತ್ತಿ ಇಳಿದರೆ ತೃಪ್ತಿಯಾಯಿತೆಂದು ಹೇಳಬಹುದು. ಆದರೆ ಯಾವಾಗಲೂ ನನ್ನ ಯಾತ್ರೆಗಳಲ್ಲಿ ಆದ್ಯತೆಯಿರುವುದು ಹೆಚ್ಚು ಐಷಾರಾಮಿಯಲ್ಲದ ನಗರಗಳಿಗೆ ಮತ್ತು ಹಳ್ಳಿಗಳಿಗೆ. 

2022ರ ಮೇ ಎರಡನೇ ವಾರ ಮುಂಜಾನೆ ಶ್ರೀನಗರದ ಲೋಕಲ್ ಟ್ಯಾಕ್ಸಿ ಸ್ಟಾಂಡಿಗೆ ತಲುಪಿದೆ. ತಣ್ಣಗೆ ಮಳೆ ಮತ್ತು ಮಂಜು ಒಟ್ಟಾಗಿ ಸುರಿಯುತ್ತಿತ್ತು. ಕಾಶ್ಮೀರದ ಹಚ್ಚಹಸಿರಿನ ಸೊಬಗು ಸ್ಪಷ್ಟವಾಗಿ ಗೋಚರಿಸುವುದು ಪ್ರಕಾಶಮಯ ಹಗಲಿನಲ್ಲೇ. ಮನದಲ್ಲಿ ಒಂದು ರೀತಿಯ ಮೋಡ ಆವರಿಸಿದ ಅನುಭವ! ಸಂಚಾರಿ ಉತ್ಸಾಹಿ ಆಗಿರಬೇಕು ತಾನೇ? ಮಳೆಯನ್ನು ಅನುಭವಿಸುವುದರ ಕಡೆಗೆ ಮನಸ್ಸನ್ನು ಒಗ್ಗಿಸಿಕೊಂಡೆ. ಅತ್ಯಧಿಕ ಚಳಿಯಿರುವ ಪ್ರಭಾತದಲ್ಲಿ ಮಂಜುಗಡ್ಡೆಯಿಂದ ಉದುರುವ ನೀರಿನ ಹನಿಗಳು ಸ್ಪರ್ಶಿಸುವಾಗ ಸಿಗುವ ಅನುಭೂತಿ ಆಗ ಅರಿವಿಗೆ ಬಂತು.

ಪ್ರಮುಖವಾಗಿ ಕ್ವಾಲಿಸ್, ಇನೋವಾ ಗಾಡಿಗಳಲ್ಲಿ ದೂರದ ದಿಕ್ಕುಗಳಿಗಿರುವ ಸಂಚಾರವನ್ನು ಮಾಡಲಾಗುತ್ತದೆ. 15 ಕಿಲೋಮೀಟರ್ ಕಡಿಮೆ ದೂರವಿರುವ ಸ್ಥಳಗಳಿಗೆ ಮಿನಿ ಬಸ್ಸುಗಳು ಲಭ್ಯವಿರುತ್ತವೆ. ಶ್ರೀನಗರದಿಂದ ಬಾರಮುಲ್ಲವರೆಗಿನ ರಸ್ತೆಗೆ ಅಭಿಮುಖವಾಗಿರುವ ದಾರಿಗಳಲ್ಲಿ ಬಸ್ಸುಗಳು ಲಭ್ಯವಿರುತ್ತವೆ. ಮಿನಿ ಬಸ್ಸುಗಳು ಮೆಲ್ಲನೆ ಆಗಾಗ ನಿಲ್ಲಿಸುತ್ತಾ ಸಂಚರಿಸುತ್ತಿರುತ್ತವೆ. ಅದರ ಒಳಗೆ ಹತ್ತಿದಾಗ ಕಿಟಕಿ ಬದಿಯ ಜಾಗ ಸಿಗದಿದ್ದರೆ ಉಸಿರಾಟಕ್ಕೆ ತೊಂದರೆಯಾಗುವ ಅನುಭವವಾಗುತ್ತದೆ. ಕಾಶ್ಮೀರದಲ್ಲಿ ನಾನು ಬಸ್ ಪ್ರಯಾಣವನ್ನು ಗರಿಷ್ಠ ಮಟ್ಟದಲ್ಲಿ ಕಡಿಮೆ ಮಾಡುತ್ತೇನೆ. ಶೇರ್ ಟ್ಯಾಕ್ಸಿಗಳಲ್ಲಿ ಬಾಡಿಗೆ ಸ್ವಲ್ಪ ಹೆಚ್ಚಿದ್ದರೂ ವೇಗವಾಗಿ ತಲುಪಬಹುದು. ನಾವು ಹತ್ತಿದ ನಗರದಿಂದ ಟ್ಯಾಕ್ಸಿ ಒಮ್ಮೆ ಹೊರಟರೆ ಮತ್ತೆ ಜನರನ್ನು ಹತ್ತಿಸಲು ಮತ್ತು ಇಳಿಸಲಿಕ್ಕಲ್ಲದೆ ಬೇರೆಲ್ಲಿಯೂ ನಿಲ್ಲಿಸುವುದಿಲ್ಲ.

ಶಿರಾರ್ ಶರೀಫಿನ ಕಡೆಗಾಗಿತ್ತು ನಮ್ಮ ಪ್ರಯಾಣ. ಬಾದ್ಗಾಂ ಜಿಲ್ಲೆಯಲ್ಲಿರುವ ಆ ಸಣ್ಣ ಜಾಗ ಕಾಶ್ಮೀರದ ಅತ್ಯಂತ ಪ್ರಮುಖ ಸೂಫಿ ಪ್ರದೇಶಗಳಲ್ಲೊಂದು. ಶ್ರೀನಗರದಿಂದ ಅಲ್ಲಿಗೆ ಸಾರಿಗೆ ಸೇವೆ ಇಲ್ಲ ಎಂದು ಒಬ್ಬ ಡ್ರೈವರ್ ಹೇಳಿದ್ದ. ಇಕ್ಬಾಲ್ ಪಾರ್ಕಿನಲ್ಲಿ ಶೇರ್ ಟ್ಯಾಕ್ಸಿ ಲಭ್ಯವಿದೆ ಎಂದು ಗೊತ್ತಿದ್ದರಿಂದ ಮಿನಿ ಬಸ್ಸಿನಲ್ಲಿ ಹೊರಟೆ. ಇಕ್ಬಾಲ್ ಪಾರ್ಕ್ ಶ್ರೀನಗರ ಪಟ್ಟಣದ ಮಧ್ಯೆಯಿರುವ ಉದ್ಯಾನವನಗಳಲ್ಲೊಂದು. ಕಾಶ್ಮೀರದ ಹಿರಿ-ಕಿರಿ ನಗರಗಳಲ್ಲೆಲ್ಲಾ ಸುಂದರವಾಗಿ ಜೋಡಿಸಲ್ಪಟ್ಟ ಸಣ್ಣ ಸಣ್ಣ ಪಾರ್ಕುಗಳನ್ನು ಕಾಣಬಹುದು. ಪ್ರಮುಖವಾಗಿ ಇವೆಲ್ಲವೂ ಅಲ್ಲಿನ ಜನರಿಗಾಗಿ ನಿರ್ಮಿಸಲ್ಪಟ್ಟಿದ್ದವು. ತಮ್ಮ ಕುಟುಂಬಗಳೊಂದಿಗೆ ಕುಶಲೋಪರಿ ನಡೆಸುತ್ತಾ ಕಾಶ್ಮೀರಿಗಳು ಮಳೆ ಇಲ್ಲದ ದಿನಗಳಲ್ಲಿ ಇಲ್ಲಿ ಒಂದುಗೂಡುತ್ತಾರೆ. ಅತಿ ಶೀತಾವಸ್ಥೆ ಬದಲಾಗಿದ್ದರೂ ಸಾಮಾನ್ಯ ಶೈತ್ಯವನ್ನು ಮೇ ತಿಂಗಳಲ್ಲಿ ಕಾಣಬಹುದು. ಬೆಚ್ಚಗಿನ ಸೂರ್ಯ ಶಾಖದೊಂದಿಗೆ ಹಚ್ಚ ಹಸಿರು ಹುಲ್ಲುಗಾವಲಿನಲ್ಲಿ ಮಲಗುವುದು ತುಂಬಾ ಹಾಯೆನಿಸುತ್ತದೆ. ಅಲ್ಲಿಗೆ ತಲುಪುವಾಗ ಮಳೆ ನಿಂತಿತ್ತು. ಒಂದು ಮರದ ಕೆಳಗೆ ಕುಳಿತೆ. ಆ ಸುಂದರ ದೃಶ್ಯ ಹಬ್ಬದಲ್ಲಿ ಮುಳುಗಿದೆ. ಅಲ್ಲಾಮಾ ಇಕ್ಬಾಲರ ಹೆಸರಿನ ಪಾರ್ಕ್ ಕಾಶ್ಮೀರವನ್ನು ತುಂಬಾ ಪ್ರೀತಿಸುವ ಅವರ ಮಹಾನ್ ಕಾವ್ಯಗಳನ್ನು ನೆನಪಿಸಿತು.

“ನನ್ನ ದೇಹವು ಕಾಶ್ಮೀರದ ಮಣ್ಣಲ್ಲಿ ಉದಿಸಿತು
ಹೃದಯವು ಹಿಜಾಝಿನಲ್ಲಿದೆ
ನನ್ನ ಕವಿತೆಗಳನು ಶಿರಾಝಿಗೆ ಅರ್ಪಿಸಿರುವೆ”

ಚಹಾ ಸವಿದೆ. ದೇಹದ ಶೀತ ತಕ್ಕ ಮಟ್ಟಿಗೆ ಸಡಿಲವಾಯಿತು. ಪಾರ್ಕಿನ ಹೊರಗಿನ ಒಂದು ದಿಕ್ಕಿನಲ್ಲಿ ಎರಡು-ಮೂರು ಟ್ಯಾಕ್ಸಿ ಗಾಡಿಗಳು ನಿಂತಿತ್ತು. ಶಿರಾರ್ ಷರೀಫಿಗೆ ಎಂದಾಗ ಎದುರಿನ ಸೀಟಿನಲ್ಲಿ ಕುಳಿತುಕೊಳ್ಳುವಂತೆ ಡ್ರೈವರ್ ಕೇಳಿಕೊಂಡ. ಇಲ್ಲಿ ಕೂತುಕೊಂಡು ದೃಶ್ಯ ವೈಭವಗಳನ್ನು ಆಸ್ವಾದಿಸಬಹುದು. ಹೊರ ರಾಜ್ಯದವರೆಂದರಿತರೆ ಕಾಶ್ಮೀರಿಗಳು ಅತ್ಯಂತ ಪ್ರೀತಿಪೂರ್ವಕವಾಗಿ ಒಡನಾಡುತ್ತಾರೆ. ಅವರಷ್ಟು ಅತಿಥಿ ಸತ್ಕಾರ ಗುಣ ಇರುವವರು ಬಹುಶಃ ಭೂಮಿಯಲ್ಲಿ ಬಹಳ ಕಡಿಮೆ ಇರಬೇಕು. ಹೊಸ ಮುಖಗಳನ್ನು ಕಂಡರೆ ಕುಶಲೋಪರಿ ನಡೆಸುತ್ತಾರೆ. ತಮ್ಮ ಮನೆಗೆ ಆಮಂತ್ರಿಸುತ್ತಾರೆ. ಅಗತ್ಯ ಸಹಾಯಗಳನ್ನು ಒದಗಿಸುತ್ತಾರೆ. ಆ ಆತಿಥ್ಯಗಳು ತೋರ್ಪಡಿಕೆಯ ಅಂಶವಿರುವುದಿಲ್ಲ. ಅವರ ಸಂಸ್ಕೃತಿಯೇ ಹಾಗೆ. ಲವಲೇಶವೂ ಕೃತಕತೆ ಇಲ್ಲದೆ ಜನರನ್ನು ಪ್ರೀತಿಯಿಂದ ಬರಮಾಡಿಕೊಳ್ಳುವ ಗುಣ ಅವರಿಗೆ ರಕ್ತದಲ್ಲಿ ಬಂದಿದೆ.

ವಾಹನ ಹೊರಡಲಾರಂಭಿಸಿತು. ಜೊತೆಗಿರುವವರೆಲ್ಲರೂ ಕಾಶ್ಮೀರಿಗಳು. ಕಾಶ್ಮೀರಿ ಭಾಷೆಯಲ್ಲಿ ಅವರು ಲೋಕಾಭಿರಾಮವಾಗಿ ಮಾತನಾಡುತ್ತಿದ್ದಾರೆ. ಅನೇಕರಿಗೆ ಉರ್ದು ತಿಳಿದಿದೆಯಾದರೂ ಸ್ವಂತದವರೊಂದಿಗೆ ಸಂಭಾಷಣೆಯಲ್ಲಿ ಅವರು ಕಾಶ್ಮೀರಿಯನ್ನೇ ಬಳಸುತ್ತಾರೆ. ಕಾಶ್ಮೀರಿ ಭಾಷೆ ಕಲಿಯಬೇಕೆಂಬ ಆಸೆ ಆಗ ತಾನೇ ನನ್ನೊಳಗೆ ತೀವ್ರವಾಗತೊಡಗಿತು. ಕಾವ್ಯಾತ್ಮಕ ಭಾಷೆಯದು. ಹಲವು ಗ್ರಾಮಗಳಲ್ಲಿ ಕಾಶ್ಮೀರಿ ಭಾಷೆಯಲ್ಲಿ ಬರೆಯಲಾದ ಭಕ್ತಿ ಗೀತೆಗಳನ್ನು ಮಸೀದಿಗಳಲ್ಲಿ ಕೇಳಿಸಿಕೊಳ್ಳುತ್ತಿದ್ದೆ. ಒಂದೇ ಒಂದು ಪದವು ತಿಳಿದಿಲ್ಲವಾದರೂ ಅವುಗಳನ್ನು ಕಿವಿಗೆ ಇಳಿಸಿಕೊಳ್ಳುವಾಗ, ಅದರ ಸಂಗೀತ ನಿರ್ಭರತೆಯನ್ನು ಅನುಭವಿಸುವಾಗ ನಮ್ಮ ಸಹಜ ಭಾವಗಳು ಕೆಲವು ಸಮಯಕ್ಕೆ ನಿಶ್ಚಲವಾಗುತ್ತವೆ.

ಐದು ಮಿಲಿಯನ್ ಜನರು ಆಡುವ ಕಾಶ್ಮೀರಿ ಭಾಷೆ 2008ರಿಂದ ಕಾಶ್ಮೀರಿ ಶಾಲೆಗಳಲ್ಲಿ ಕಡ್ಡಾಯ ವಿಷಯವಾಗಿ ಪ್ರಾಬಲ್ಯಕ್ಕೆ ಬಂದಿದೆ. ವಿದೇಶಿ ಭಾಷೆಯ ನುಸುಳುಕೋರತನದ ಮಧ್ಯೆ ಹೊಸ ತಲೆಮಾರು ತಮ್ಮ ಸ್ವಭಾಷೆಯ ಬಗ್ಗೆ ಅಜ್ಞರಾಗಬಾರದೆಂಬ ಪ್ರಜ್ಞೆ ಇಲ್ಲಿನ ಜನರಿಗೆ ಮತ್ತು ಆಳುವ ವರ್ಗಕ್ಕಿದೆ. ಇಂಡೋ ಆರ್ಯನ್, ಸಂಸ್ಕೃತ ಭಾಷೆಗಳು ಕಾಶ್ಮೀರಿ ಭಾಷೆಯ ಮೂಲ ಎಂದು ಅಂದಾಜಿಸಲಾಗಿದೆ. ನಂತರ ಪರ್ಷಿಯನ್ ಭಾಷೆಯ ಭಾರೀ ಪ್ರಭಾವ ಅದರ ಮೇಲೆ ಬಿತ್ತು. ಜತೆಗೆ ಭಾರತೀಯ ಭಾಷೆಗಳಲ್ಲಿನ ವಿಶಿಷ್ಟ ಸ್ವರ ಸಮೂಹ ಕಾಶ್ಮೀರಿ ಭಾಷೆಗಳಿಗೂ ಬಂತು. ಕ್ರಮೇಣ ವಿವಿಧ ರಾಗಗಳಲ್ಲಿ ಆಡಲು ಮತ್ತು ಬರೆಯಲು ಸಾಧ್ಯವಿರುವ ಭಾಷೆಯಾಗಿ ಬದಲಾಯಿತು.

ಶ್ರೀನಗರ ಪಟ್ಟಣದ ಗಡಿ ದಾಟಿದಂತೆ ಪ್ರಕೃತಿಯ ಚಿತ್ರಣ ಬದಲಾಗತೊಡಗಿತು. ಕಾಶ್ಮೀರದ ಎಲ್ಲಾ ಭಾಗಗಳಲ್ಲೂ ಪ್ರಯಾಣಿಸಿರುವ ನನಗೆ ಅಲ್ಲಿನ ಪ್ರಕೃತಿಯ ವೈವಿಧ್ಯತೆ ನನ್ನನ್ನು ಚಕಿತಗೊಳಿಸಿದೆ. ಪ್ರದೇಶಗಳು ಬದಲಾದಂತೆ ಮರಗಳಾಗಲಿ, ಭೂಮಿಯ ಮೇಲ್ಮೈಯಾಗಲಿ ಎಲ್ಲವೂ ಭಿನ್ನ ಭಿನ್ನವಾಗಿವೆ. ಭೂವೈವಿಧ್ಯದ ಬೆರಗು ತುಂಬಿರುವ ದಾರಿಗಳಲ್ಲಿ ಗಾಡಿ ವೇಗವಾಗಿ ಸಂಚರಿಸುತ್ತಿತ್ತು. ಶ್ರೀನಗರದಲ್ಲಿರುವ ಸೈನಿಕ ಉಪಸ್ಥಿತಿ ಮುಂದಿನ ಯಾತ್ರೆಯಲ್ಲಿ ಗೋಚರಿಸಲಿಲ್ಲ. ಕೆಲವು ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ಮಿಲಿಟರಿ ಕ್ಯಾಂಪ್‌ಗಳಿವೆ. ‘ಚದುರ’ ಎಂಬ ಸಣ್ಣ ಪಟ್ಟಣಕ್ಕೆ ತಲುಪಿದೆನು. ಗುಂಡಿನ ದಾಳಿಯ ವಾರ್ತೆಗಳು ಇಲ್ಲಿಂದ ಸಾಮಾನ್ಯವಾಗಿ ಕೇಳಿ ಬರುತ್ತಿರುತ್ತವೆ. ಆದರೆ, ಅಂದು ಜನರೆಲ್ಲರೂ ತುಂಬು ಉತ್ಸಾಹದಿಂದ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ವ್ಯಾಪಾರ ಕೇಂದ್ರಗಳಲ್ಲಿ ನಿಬಿಡತೆ ಹೆಚ್ಚಾಗುತ್ತಿದೆ. ಶಾಲೆಗಳಿಗೆ ಹೋಗುವ ಮಕ್ಕಳು ಗುಂಪಾಗಿ ಏರು ಧ್ವನಿಯಲ್ಲಿ ಮಾತನಾಡುತ್ತಿದ್ದಾರೆ. 

ಅಲ್ಲಿಂದ ಶಿರಾರ್ ಶರೀಫಿನವರೆಗಿನ ದಾರಿ  ಏರಿಳಿತಗಳಿಂದ ಕೂಡಿದೆ. ಸಮತಲದಿಂದ ಭೂಮಿಯ ಮೇಲ್ಮೈ ಪರ್ವತಕ್ಕೆ ಹೋಗುತ್ತಿದ್ದಂತೆ ಚೆಂದದ ದೃಶ್ಯಗಳನ್ನು ಕಾಣಲು ಸಾಧ್ಯವಾಯಿತು. ಮಧ್ಯೆ ಡಿಗ್ರಿ ಕಾಲೇಜೊಂದಿದೆ. ಗಾಡಿಯಲ್ಲಿನ ಸ್ಥಳಾವಕಾಶಕ್ಕೆ ತಕ್ಕಂತೆ ಎರಡು ಮೂರು ವಿದ್ಯಾರ್ಥಿಗಳು ಅಲ್ಲಿಂದ ಹತ್ತಿದರು. ಒಬ್ಬ ವಿದ್ಯಾರ್ಥಿ ನನ್ನ ಹತ್ತಿರ ಕುಳಿತ. ನಾನು ಇಂಗ್ಲೀಷಿನಲ್ಲಿ ಮಾತನಾಡಲಾರಂಭಿಸಿದಾಗ ತುಂಬಾ ಪ್ರಸನ್ನನಾಗಿ ಅವನು ಸಂಭಾಷಣೆಯಲ್ಲಿ ಜೊತೆ ಸೇರಿದ. ಹೆಸರು ಜಮಾಲ್. ಬಿಕಾಂ ಕಲಿಯುತ್ತಿದ್ದಾನೆ. ಆ ಪ್ರದೇಶದ ಮಕ್ಕಳೆಲ್ಲರೂ ಉನ್ನತ ಶಿಕ್ಷಣಕ್ಕೆ ಆಶ್ರಯಿಸಿರುವ ಮುಖ್ಯ ಸಂಸ್ಥೆಯದು. ಅವನು ಕೇರಳದ ಕುರಿತು ಕೇಳಿದ. ಮಲಯಾಳಿಯೋರ್ವನನ್ನು ಮೊತ್ತ ಮೊದಲ ಬಾರಿಗೆ ಅವನು ಭೇಟಿಯಾಗಿದ್ದ. ಕೇರಳದ ದೃಶ್ಯ ಸೌಂದರ್ಯವನ್ನು ಇನ್ಸ್ಟಾಗ್ರಾಮಿನಲ್ಲಿ ನೋಡಿದ್ದೆ ಎಂದು ಅವನು ಹೇಳಿದ. ಗಾಡಿ ಶಿರಾರ್ ಶರೀಫಿಗೆ ತಲುಪಿತು. 80 ರೂಪಾಯಿ ಚಾರ್ಜ್ ಆಗಿತ್ತು.

ಅಲ್ಲಿ ಇಳಿದಾಗ, ನನ್ನ ಆಲೋಚನೆಗಳು ನಾನು ಮೊದಲು ತೆರಳಲು ಯೋಚಿಸಿದ್ದ ಸೂಫಿವರ್ಯರ ಕಡೆಗೆ ಹೊರಳಿತು. ಶಿರಾರ್ ಶರೀಫ್ ಕಾಶ್ಮೀರಿ ಭಾಷೆಯ ಮಹಾಕವಿಯೂ ಸೂಫಿವರ್ಯರೂ ಆಗಿರುವ ಶೈಖ್ ನೂರುದ್ದೀನ್ ನೂರಾನಿಯ ಅಂತ್ಯ ವಿಶ್ರಾಂತಿ ಕೇಂದ್ರ. ಆಲಂದಾರೇ ಕಾಶ್ಮೀರ್ (ಕಾಶ್ಮೀರಿನ ಪತಾಕೆ ವಾಹಕರು), ಶೈಖುಲ್ ಆಲಂ (ಲೋಕ ಗುರು) ಮುಂತಾದ ಬಿರುದುಗಳಿಂದ ಮಹಾನುಭಾವರು ಪ್ರಸಿದ್ಧರಾಗಿದ್ದಾರೆ. ಪ್ರತಿಭಾನ್ವಿತ ಸೂಫಿ ತಾತ್ವಿಕ ಕವಿ ಎಂಬ ನೆಲೆಯಲ್ಲಿ ವಿಖ್ಯಾತರು ಕೂಡಾ. ಶೈಖ್ ನೂರುದ್ದೀನ್ ದರ್ಗಾಕ್ಕೆ ಪಟ್ಟಣದಿಂದ ಕೇವಲ 200 ಮೀಟರ್ ದೂರವಿದೆ. ಅಲ್ಲಿಂದ ದರ್ಗಾ ಶರೀಫ್ ಮತ್ತು ಹತ್ತಿರದಲ್ಲಿರುವ ಭವ್ಯ ಮಸೀದಿಯ ದೃಶ್ಯ ಕಾಣಬಹುದು. ಅದನ್ನು ನೋಡಿದಾಗಲೇ ತಕ್ಷಣ ಅಲ್ಲಿಗೆ ತಲುಪಿ ಬಿಡಬೇಕೆಂದು ಮೋಡಿ ಮಾಡುವ ವಿನ್ಯಾಸದ ಬೃಹತ್ ಸೌಧಗಳು. ಶಿರಾರ್ ಶರೀಫ್ ಪುರಾತನ ನಗರಗಳೊಂದಿಗೆ ಎಲ್ಲಾ ರೀತಿಗಳಲ್ಲೂ ಹೋಲುತ್ತದೆ. ಮರದ ದಿಮ್ಮಿಗಳನ್ನು ಹೇರಳವಾಗಿ ಬಳಸಿ ಶತಮಾನಗಳ ಹಿಂದೆ ನಿರ್ಮಿಸಲಾದ ಸಣ್ಣ ಕಟ್ಟಡಗಳು. ಅದರೊಳಗಿನ ಸಣ್ಣ ವಿಸ್ತಾರದ ಕೋಣೆಗಳಲ್ಲಿ ವಿವಿಧ ರೀತಿಯ ವ್ಯಾಪಾರಗಳನ್ನು ಕಾಣಬಹುದಿತ್ತು.

ಇಳಿ ವಯಸ್ಸಿನ ವ್ಯಾಪಾರಿಗಳ ಅಭಿವ್ಯಕ್ತಿಗಳಲ್ಲಿ ಹಳೆತನ ತುಂಬಿ ತುಳುಕುತ್ತಿದೆ. ಒಂದಿನಿತೂ ಕೃತಕತೆ ಇಲ್ಲದ ಒಡನಾಟ. ಆಧುನಿಕತೆಯ ಗದ್ದಲಗಳಿಲ್ಲದ ಹ್ಯಾಟ್ರಿಕ್ ನಗರಕ್ಕೆ ಸ್ವಪ್ನದಲ್ಲಿ ತಲುಪಿದಂತೆ ತೋಚಿತು. ನನಗೆ ಈ ಅನುಭವ ಬಹಳ ಖುಷಿ ಕೊಟ್ಟಿತ್ತು.

ಬೆಳಿಗ್ಗೆ ಚಹಾ ಕುಡಿದು ಹೊರಟಿದ್ದರಿಂದ ಹಸಿವು ತೀವ್ರವಾಗಿತ್ತು. ಆದರೂ ಮೊದಲು ದರ್ಗಾಕ್ಕೆ ತೆರಳುವಂತೆ ಒಳ ಮನಸ್ಸು ಒತ್ತಾಯಿಸುತ್ತಿತ್ತು. ನಡೆಯಲಾರಂಭಿಸಿದ್ದೇ ತಡ ಭಾರೀ ಗಾಳಿ ಬೀಸತೊಡಗಿತು. ನಡೆದರೆ ಹಿಂದೆ ತಳ್ಳುತ್ತಿರುವಂತೆ ಭಾಸವಾಗುವ ಧೂಳುಗಾಳಿ. ಮಳೆನಾಡಿನ ಗ್ರಾಮಗಳಲ್ಲಿ ಬದುಕಿದ್ದರಿಂದ ಹಲವು ರೀತಿಯ ಗಾಳಿಗಳು ಪರಿಚಯವಿತ್ತಾದರೂ ಈ ಧೂಳುಗಾಳಿಯ ಅನುಭವ ಇದೇ ಮೊದಲು. ದಾರಿಹೋಕರು ಕ್ಷಣ ಮಾತ್ರದಲ್ಲಿ ರಸ್ತೆಯ ಇಕ್ಕೆಲಗಳಲ್ಲಿ ಕಾರ್ಯಾಚರಿಸುತ್ತಿರುವ ಅಂಗಡಿಗಳಿಗೆ ಪ್ರವೇಶಿಸಿಸುತ್ತಿದ್ದಾರೆ. ವಾಹನಗಳು ನಿಧಾನವಾಗಿ ದಾರಿ ಬದಿಗೆ ಸರಿಯುತ್ತಿವೆ. ನಾನು ಮೊದಲು ನೋಡಿದ್ದ ಕಟ್ಟಡದ ಮೊದಲನೇ ಮಹಡಿಗೆ ಹತ್ತಿ ನಿಂತೆ. ಆ ಗಾಳಿಮಳೆ ಸುಮಾರು ನಾಲ್ಕು ನಿಮಿಷಗಳ ಕಾಲ ಮುಂದುವರಿಯಿತು. ಮೆಲ್ಲನೆ ಪ್ರಕೃತಿ ಶಾಂತವಾಯಿತು. ಮಳೆ ನಿಂತಿತು. ನಾನು ದರ್ಗಾದ ಕಡೆಗೆ ನಡೆದೆ. 

ಕಾಶ್ಮೀರದ ದರ್ಗಾಗಳ ವಾಸ್ತು ಕಲೆ ವಿಭಿನ್ನ ಮತ್ತು ಆಕರ್ಷಣೀಯ. ಮೇಲ್ಛಾವಣಿಯ ಮಧ್ಯಭಾಗದಲ್ಲಿ ಎತ್ತರದಲ್ಲಿ ನಿರ್ಮಿಸಲ್ಪಟ್ಟ ಮಿನಾರದಂತೆ ಹೋಲುವ ಸ್ತೂಪಗಳು. ಅದು ಹಂತ ಹಂತಗಳಲ್ಲಾಗಿ ನಿರ್ಮಾಣಗೊಂಡಿವೆ. ತುತ್ತ ತುದಿಯಲ್ಲಿ ಕಡಿಮೆ ಭಾರ ಮತ್ತು ಕೆಳಗೆ ಬಂದಂತೆ ತೂಕ ಹೆಚ್ಚಾಗುತ್ತಾ ಹೋಗುವ ಹಾಗೆ ಭಾಸವಾಗುವ ನಿರ್ಮಾಣ ಕೌಶಲ್ಯ. ಮೇಲ್ಛಾವಣಿ ಮತ್ತು ಮೂರೋ ನಾಲ್ಕೋ ಅಂತಸ್ತುಗಳು. ಕೆಳಗಿನ ಭಾಗಕ್ಕೆ ಓರೆಯಾಗಿ ಕಾಣುವಂತೆ ಮೇಲ್ಛಾವಣಿ ನಿರ್ಮಿಸಿರುವುದು ಹಿಮ ಬೀಳುವಾಗ ಬೇಗನೆ ಭೂಮಿ ಸೇರಲು ಸಹಾಯ ಮಾಡುತ್ತದೆ. ಇಲ್ಲದಿದ್ದರೆ ಅದರ ಮೇಲೆ ಹಿಮ ಬಿದ್ದು ಬಿದ್ದು ಭಾರವೆನಿಸುತ್ತದೆ. ಕಾಶ್ಮೀರದ ಪ್ರಸಿದ್ಧ ದರ್ಗಾ ಎನಿಸಿರುವ ಶಿರಾರ್ ಶರೀಫಿನ ನಿರ್ಮಾಣವೂ ಇದಕ್ಕಿಂತ ಭಿನ್ನವಾಗಿರಲಿಲ್ಲ.

ನಾಲ್ಕು ದಿಕ್ಕುಗಳಿಂದಲೂ ಒಂದೇ ತರಹ ಇರುವ ಹಾಗೆ ವೃತ್ತಾಕೃತಿಯಲ್ಲಿ ದರ್ಗಾದ ನಿರ್ಮಾಣ ಮೂಡಿ ಬಂದಿದೆ. ಯಾತ್ರಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅಂಗಸ್ನಾನ ಮಾಡಿ ಅದರೊಳಗೆ ಪ್ರವೇಶಿಸಿದೆ. ಕಾಶ್ಮೀರ ಯಾತ್ರೆಯ ಉದ್ದೇಶಗಳಲ್ಲೊಂದು ನೆರವೇರಿತು. ಸೃಷ್ಟಿಕರ್ತನಿಗೆ ಸ್ತುತಿ ಸ್ತೋತ್ರಗಳು. ಕಾಶ್ಮೀರಿಗಳ ಭಕ್ತಿಯು ಅತಿ ತೀವ್ರವಾಗಿತ್ತು. ಮಸೀದಿಯಲ್ಲಿ ಇಲಾಹನೊಂದಿಗೆ ಆರಾಧನೆಯಲ್ಲಿ ಏರ್ಪಡುವಾಗ ಬೇರೆಲ್ಲವನ್ನು ಮರೆತು ಧ್ಯಾನ ನಿರತರಾಗುವ ಕಾಶ್ಮೀರಿಗಳನ್ನು ಕಾಣಬಹುದು. ಮನಸ್ಸಿಗೆ ಸಕೀನತ್ (ಶಾಂತಿ) ಹುಡುಕಿ ಬಂದಿರುವ ಇವರು ಕೂತಲ್ಲೇ ಎಲ್ಲವನ್ನೂ ಮರೆತು ಇಲಾಹನೆಡೆಗೆ ಕೈಯೆತ್ತುತ್ತಾರೆ. ಈ ದೃಶ್ಯಗಳು ನಮ್ಮನ್ನು ಆಧ್ಯಾತ್ಮಿಕತೆಯ ಪ್ರಶಾಂತತೆಗೆ ತಲುಪಿಸುತ್ತದೆ. ಅವರಲ್ಲೊಬ್ಬರಾಗಿ ಪ್ರಾರ್ಥಿಸುವಾಗ ಹೃದಯದಾಳದಲ್ಲಿ ಭಕ್ತಿ ತುಂಬಿ ಬರುತ್ತದೆ.

ನಾನು ದರ್ಗಾದಲ್ಲಿ ತುಂಬಾ ಹೊತ್ತು ಕಳೆದೆ. ಖುರ್‌ಆನ್ ಪಾರಾಯಣ ಮಾಡಿದೆ. ಎರಡು ಅಂತಸ್ತುಗಳಿವೆ. ಮೇಲೆ ಹತ್ತಿದಾಗ ಅಲ್ಲಿ ಯಾರೂ ಇರಲಿಲ್ಲ. ಪುರಾತನ ಪಟ್ಟಣವನ್ನು ನೆನಪಿಸಿದೆ. ಅಲ್ಲಿನ ಅನುಗ್ರಹೀತ ಜನರ ಕುರಿತು ಆಲೋಚಿಸಿದೆ. ‘ಸೂಫಿ ನಗರಗಳು’ ಆಧುನಿಕ ಕಾಲದ ಆರಬ್ ಮುಸ್ಲಿಂ ಫಿಕ್ಷನ್‌ಗಳಲ್ಲಿ ಹಾಗೂ ಸೃಜನಶೀಲ ನಾನ್ ಫಿಕ್ಷನಿನಲ್ಲಿನ ಪ್ರಮುಖ ಪರಿಕಲ್ಪನೆಗಳಲ್ಲೊಂದು. ಪ್ರಕಾಶದಂತಿರುವ ಜನರು ಬದುಕುವ ತಾಣಗಳು. ಜ್ಞಾನಿಗಳ ಪರಂಪರೆಯನ್ನು ಹೊಂದಿರುವ ಸ್ಥಳಗಳು. ಪ್ರಕಾಶ ಹಬ್ಬುವ ಜೀವನದಲ್ಲಿ ದಿನ ನಿತ್ಯ ತೊಡಗಿಸಿಕೊಂಡವರು. ಸ್ವರ್ಗ ನಿರೀಕ್ಷೆಯೊಂದಿಗೆ ಕೂತಿರುವ ವೃದ್ಧರ ಹೂದೋಟಗಳು. ಗೋಚರ ಮತ್ತು ಅಗೋಚರ ಸೂಫಿಗಳು. ಅವು ಇಲಾಹಿ ಚಿಂತನೆಗೆ ಚೈತನ್ಯ ತುಂಬಿಸಲು ಹೇತುವಾಗುತ್ತವೆ. ಶಿರಾರ್ ಶರೀಫ್ ಆಶ್ಚರ್ಯಗೊಳಿಸುವ ನಗರ. ಅಲ್ಲಿಗೆ ತೆರಳಿದಾಗ ನಿಮ್ಮನ್ನು ನೀವು ಮರೆಯದಿದ್ದರೆ ಅದ್ಭುತ. 

ಅಲ್ಲಾಮ ಇಕ್ಬಾಲ್ ಹೇಳಿದ ಭೂಮಿಯ ಸ್ವರ್ಗಕ್ಕೆ ತೆರಳಲು ಬಯಸುವ ದಕ್ಷಿಣ ಭಾರತೀಯರೇ, ನೀವು ಶಿರಾರ್ ಶರೀಫಿಗೆ ತಲುಪಿಲ್ಲ. ಕನಿಷ್ಠ ಅದರ ಕುರಿತು ಕೇಳಿಯೂ ಇಲ್ಲ. ಹಿಮದ ಗುಡ್ಡಗಳಲ್ಲಿ ಕುಳಿತಿರುವ ಪಟಗಳು ಮಾತ್ರವೇ ನಿಮ್ಮ ಗುರಿ ಎನಿಸಿದೆ. ನಿಮ್ಮ ಪ್ರಯಾಣವು ಅರ್ಧದಷ್ಟೂ ಸಫಲವಾಗಿಲ್ಲ. ಶಿರಾರ್ ಶರೀಫ್ ದರ್ಶಿಸದವರು ಕಾಶ್ಮೀರೀ ಸಂಸ್ಕೃತಿಯ ಸೊಬಗನ್ನರಿತಿಲ್ಲ. ಅಲ್ಲಿನ ನಿಶಬ್ದದ ಗಂಭೀರತೆಯನ್ನರಿತಿಲ್ಲ.

ಲೇ: ಎಂ ಲುಖ್ಮಾನ್
ಕನ್ನಡಕ್ಕೆ: ಅಮ್ಮಾರ್‌ ನೀರಕಟ್ಟೆ

Leave a Reply

*