ಮಾಪ್ಪಿಳ ಸಾಹಿತ್ಯದ ಮಹತ್ವ, ಇತಿಹಾಸ ಹಾಗೂ ವರ್ತಮಾನದ ಸವಾಲುಗಳು

ಹಳೆಯ ಮಲಬಾರ್ ನ ಭಾಗವಾಗಿದ್ದ ಮಂಗಳೂರು, ಉಡುಪಿ, ಕೊಡಗು ಮತ್ತು ಆಸುಪಾಸಿನಲ್ಲಿ ಹಾಸುಹೊಕ್ಕಾಗಿರುವ ಮಾಪ್ಪಿಳ ಸಂಸ್ಕೃತಿಯ ಬಗ್ಗೆ ಬೆಳಕು ಚೆಲ್ಲುವ ಸಂದರ್ಶನವಿದು. ಕರಾವಳಿ ಪ್ರದೇಶಗಳಲ್ಲಿ ಕಂಡುಬರುವ ಮಾಲೆ, ಮೌಲಿದ್, ಬ್ಯಾರಿ ಜನಪದ ಹಾಡುಗಳು, ಜನಪದ ಸಂಸ್ಕೃತಿಗಳ ಮೂಲಬೇರು ಕೇರಳದ ಮಲಬಾರಿನಲ್ಲಿದೆ. ಮಾಪ್ಪಿಳ ಸಂಸ್ಕೃತಿಯು ಹೆಚ್ಚುಕಡಿಮೆ ಹಾಗೆಯೇ ಈ ಪ್ರದೇಶಗಳಲ್ಲಿ ಈಗಲೂ ಚಾಲ್ತಿಯಲ್ಲಿದೆ ಎಂಬುದು ಗಮನಾರ್ಹ. ಆ ದಿಕ್ಕಿನಲ್ಲಿ ಹೆಚ್ಚಿನ ಸಂಶೋಧನಾ ಕಾರ್ಯಗಳು ನಡೆಯಬೇಕಿದೆ.

(ತನ್ನ ಸಂಶೋಧನೆಯಿಂದ ಹಾಗೂ ಲೇಖನಗಳಿಂದ ಮಲಯಾಳಂ ಸಾಂಸ್ಕೃತಿಕ ಸಾಹಿತ್ಯಲೋಕದಲ್ಲಿ ಸಾಕಷ್ಟು ಚಿರಪರಿಚಿತರಾಗಿರುವ ಅಬೂಬಕ್ಕರ್ ಮಾಸ್ಟರ್ ಮೂಲತಃ ಮಲಯಾಳಂ ಶಿಕ್ಷಕರು. ಸಾಂಸ್ಕೃತಿಕ ಚಟುವಟಿಕೆಗಳು ಹಾಗೂ ಸಾಂಸ್ಕೃತಿಕ ರಾಜಕಾರಣದ ನಡುವಿನ ಕೊಂಡಿಯಾಗುವಂತೆ ಮಾಪ್ಪಿಳ ಸಾಂಸ್ಕೃತಿಕ, ಸಂಪ್ರದಾಯಗಳಲ್ಲಿ ಆಳವಾದ ಸಂಶೋಧನೆ ನಡೆಸಿರುವ ಇವರು ಮಲಯಾಳಂ ಭಾಷೆ ಮತ್ತು ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದು ಕ್ಯಾಲಿಕಟ್ ವಿಶ್ವವಿದ್ಯಾಲಯದಿಂದ ಬಿ.ಎಡ್ ಮುಗಿಸಿ, ಪಟಿಯಾಲಾದ Northern Regional Language Centre ನಿಂದ ದ್ವಿತೀಯ ಭಾಷಾ ಬೋಧನೆಯಲ್ಲಿ ಒಂದು ವರ್ಷದ ತರಬೇತಿ ಪಡೆದಿದ್ದಾರೆ. ಸದ್ಯ ಕೇರಳದ ಹೈಯರ್ ಸೆಕೆಂಡರಿ ಶಾಲೆಯೊಂದರಲ್ಲಿ ಮಲಯಾಳಂ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಅಬೂಬಕ್ಕರ್ ಮಾಸ್ಟರ್ ಹುಟ್ಟಿದ್ದು ಕೋಝಿಕೋಡ್ ಜಿಲ್ಲೆಯ ಕಿಝಕೋತ್ ಗ್ರಾಮದ ಕತ್ತರಮಲ್ ಎಂಬಲ್ಲಿ.

ಅಬೂಬಕ್ಕರ್ ಮಾಸ್ಟರ್

ಈಗಾಗಲೇ, ಕೇರಳದ ಭವಿಷ್ಯದ ಸಾಂಸ್ಕೃತಿಕ ಸಂರಚನೆಯಲ್ಲಿ ನಿರ್ಣಾಯಕವಾಗುವಂತಿರುವ ವಿಷಯಗಳನ್ನು ವಿಮರ್ಶೆಗೊಳಪಡಿಸುವ ಪುಸ್ತಕಗಳ ಸರಣಿಯನ್ನು ತನ್ನ ʼಫ್ಯೂಚರ್ ಫಾರ್ಮ್ ಬುಕ್ಸ್ʼನ ಪ್ರಕಾಶನದಿಂದ ಪ್ರಕಟಿಸಿದ್ದಾರೆ. ಇಶಲ್ ಧಾರ, ಟಿ ಉಬೈದ್(Biography), ವೈದ್ಯರುಡೆ ಕಾವ್ಯ ಲೋಗಂ, ಉಮರ್ ಕಾಝಿ(Biography) ಮುಂತಾದ ಪುಸ್ತಕಗಳನ್ನು ರಚಿಸಿರುವ ಮಾಸ್ಟರ್‌, ಮಾಪ್ಪಿಳ ಸಾಂಸ್ಕೃತಿಕ ಲೋಕಕ್ಕೆ ಸಂಬಂಧಿಸಿದ ಪ್ರಬಂಧಗಳನ್ನೂ, ವಿಚಾರಗೋಷ್ಠಿಗಳನ್ನೂ ನಡೆಸುತ್ತಿದ್ದಾರೆ. ಅಲ್ಲದೆ ಅವರ ಮುಸ್ಲಿಂ ಸಾರ್ವಜನಿಕ ವಲಯ ಎದುರಿಸುತ್ತಿರುವ ಸಾಂಸ್ಕೃತಿಕ ಸವಾಲುಗಳನ್ನು ಗಮನದಲ್ಲಿಟ್ಟುಕೊಂಡು ಬರೆದ ಅಧ್ಯಯನಾತ್ಮಕ ಲೇಖನಗಳು ಹಲವು ಮಲಯಾಳಂ ನಿಯತಕಾಲಿಕೆಗಳಲ್ಲಿ ಪ್ರಕಟವಾಗಿವೆ ಹಾಗೂ ಸಾಕಷ್ಟು ಚರ್ಚೆಗೊಳಗಾಗಿವೆ.
ಮಾಪಿಳ ಸಾಂಸ್ಕೃತಿಕ ಚಟುವಟಿಕೆಗಳು ಸೂಫಿಸಮ್ಮಿನೊಂದಿಗೆ ಹೇಗೆ ಬೆಸೆದುಕೊಂಡಿದೆ ಎಂಬುವುದರ ಬಗ್ಗೆ ಆಳವಾದ ಒಳನೋಟಗಳನ್ನು ನೀಡುವ ಅಬೂಬಕ್ಕರ್ ಮಾಸ್ಟರ್ ಅವರು ಸೂಫಿಸಂ ಹಾಗೂ ಮಾಪ್ಪಿಳ ಸಾಂಸ್ಕೃತಿಕ ಚಟುವಟಿಕೆಗಳ ನಡುವಿನ ಸಂಬಂಧವನ್ನು ಸರಳವಾಗಿ ವಿಶ್ಲೇಷಿಸುತ್ತಾರೆ. ಅವರೊಂದಿಗೆ ನಡೆದ ಸಂವಾದದ ಆಯ್ದ ಭಾಗವನ್ನು ಕೆಳಗೆ ನೀಡಲಾಗಿದೆ.)

ಪ್ರಶ್ನೆ: ಅಲೌಕಿಕ ಅಥವಾ ಅತೀಂದ್ರಿಯ ಪ್ರೇಮದ ಕವಿತೆಗಳನ್ನು ಸೂಫಿಗಳು ಬರೆದಿದ್ದಾರೆ. ಇದೇ ಪ್ರಭಾವ ಮಾಪ್ಪಿಳ ಸಾಹಿತ್ಯದ ಮೇಲೂ ಬಿದ್ದಿದೆ, ಮಲಬಾರ್ ಸಂಪ್ರದಾಯಗಳಲ್ಲಿ ಇದು ಸ್ಪಷ್ಟವಾಗಿದೆ. ಇದನ್ನು ನೀವು ಹೇಗೆ ವಿವರಿಸುತ್ತೀರಿ?

ಸೆರೆಮನೆಯಲ್ಲಿ ಬಂಧಿಯಾಗಿ ತನ್ನ ಪ್ರಿಯತಮೆಯ ವಿರಹದಲ್ಲಿರುವ ಓರ್ವ ಅದಮ್ಯ ಪ್ರೇಮಿಯ ಭಾವತೀವ್ರತೆಯಂತೆಯೇ ದೇವನನ್ನು ಹುಡುಕುವ ಸೂಫಿಗಳ ಭಾವತೀವ್ರತೆಯು ಇರಬಲ್ಲದು. ಆ ಸೂಫಿಗಳಿಗೆ ಇಡೀ ವಿಶ್ವವು, ಅದೃಶ್ಯನಾಗಿರುವ ಅವರ ಪ್ರೇಮಿಯ(ದೇವನ) ಚಿಹ್ನೆಗಳ ಬೃಹತ್ ವಸ್ತುಸಂಗ್ರಹಾಲಯದಂತೆ ಕಾಣಿಸುತ್ತದೆ. ಹಾಗೂ ಆ ಪ್ರತೀ ಚಿಹ್ನೆಗಳೂ ಅವರ ಪ್ರಿಯತಮೆಯ ಕುರಿತು ಪ್ರೇಮಿಗೆ(ಸೂಫಿಗೆ) ಸೂಚನೆಗಳನ್ನು ನೀಡುತ್ತಲೇ ಇರುತ್ತದೆ. ಇದು ಅವರ ಹೃದಯದಲ್ಲಿ ಪ್ರೇಮದ ಕಿಡಿಯನ್ನು ಹೊತ್ತಿಸುತ್ತದೆ. ಕವಿತೆ ಅಥವಾ ಕಾವ್ಯದ ಸಾಂಕೇತಿಕ ಭಾಷೆಯ ಹೊರತಾಗಿ ಬೇರೆ ಯಾವ ಭಾಷೆಯಿಂದಲೂ ಅವರ ಎದೆಯಲ್ಲಿರುವ ಬೆಂಕಿಯನ್ನು ವ್ಯಕ್ತಪಡಿಸಲು ಅವರಿಗೆ ಸಾಧ್ಯವಾಗುವುದಿಲ್ಲ. ಆಗ ಅವರು ಕವಿತೆಯ ಮೊರೆಯೇ ಹೋಗಬೇಕಾಗುತ್ತದೆ. ಒಂದರ್ಥದಲ್ಲಿ ಕಾವ್ಯವೇ ಸೂಫಿಗಳ ಭಾಷೆ ಎನ್ನಬಹುದು. ಅವರು ಕಾವ್ಯದ ಸಹಾಯವಿಲ್ಲದೆ ಸಂವಹಿಸಲು ಸಾಧ್ಯವಾಗದ ಲೋಕದಲ್ಲಿ ವಿಹರಿಸುತ್ತಿರುತ್ತಾರೆ. ಹಾಗಾಗಿಯೇ ಮುಸ್ಲಿಂ ಜಗತ್ತಿನಲ್ಲಿ ಸೂಫಿಗಳದ್ದು ಕಾವ್ಯದ ಹಾದಿ.

ಮಾಪ್ಪಿಳ ಸಾಹಿತ್ಯದ ಸೃಜನಶೀಲತೆಯ ಮಾರ್ಗವೂ ಇದುವೇ. ಸೂಫೀ ಕ್ರಿಯಾಶೀಲತೆಯ ಒಟ್ಟು ಪರಿಣಾಮವೇ ‘ಅರಬ್ಬಿ ಮಲಯಾಳಂ’1. ಸ್ಥಳೀಯ ಜನರೊಂದಿಗೆ ಅವರದೇ ಭಾಷೆಯಲ್ಲಿ ಸಂವಹನ ನಡೆಸಲು ಸೂಫಿಗಳಿಗಿದ್ದ ಉತ್ಸಾಹ ಅವರನ್ನು ಮಲಯಾಳಂ ಭಾಷೆಯಲ್ಲಿ ಸಂವಹಿಸಲು ಅರೇಬಿಕ್ ಲಿಪಿಯನ್ನು ಹುಟ್ಟುಹಾಕುವಂತೆ ಮಾಡಿತು. ಮಲಯಾಳಂ ಉಚ್ಛಾರಣೆಗೆ ಸರಳವಾಗುವಂತೆ ಅರಬಿ ಲಿಪಿಗಳನ್ನು ಮಾರ್ಪಡಿಸಿಕೊಂಡರು. ಸೂಫಿಸಂ ಸ್ಥಳೀಯ ಭಾಷೆಗೆ ಸೃಜನಶೀಲ ಆಯಾಮವನ್ನು ನೀಡಿದೆ. ಹಾಗೆ ಹುಟ್ಟಿಕೊಂಡಿದ್ದರಲ್ಲಿ ಅರಬ್ಬಿ ಮಲಯಾಳಂ ಒಂದು. ಅರಬ್ಬಿ ಮಲಯಾಳಂನ ಇತಿಹಾಸದಲ್ಲಿ ಅತ್ಯಂತ ಹಳೆಯ ಕಾವ್ಯಗ್ರಂಥ ʼಮುಹಿಯುದ್ದೀನ್ ಮಾಲಾʼ. ಇದು ಐತಿಹಾಸಿಕವಾಗಿ ಬಹುಮುಖ್ಯ ಕೃತಿ. ತದನಂತರ ಬಂದ ಕುಞಾಯಿನ್ ಮುಸ್ಲಿಯಾರ್ ಅವರ ಕೃತಿಗಳು ಕೂಡಾ ಸೂಫೀ ಪರಂಪರೆಯದ್ದು. ‘ಮುಹಿಯುದ್ದೀನ್ ಶೇಖ್’ 2. ಹಾಗೂ ಪ್ರವಾದಿಯವರನ್ನು ರೂಪಕವಾಗಿಸಿರುವುದೇ ನೂಲ್ ಮಾಲ, ನೂಲ್ ಮದ್ಹ್, ಕಪ್ಪ ಪಾಟ್ಟು ಮುಂತಾದ ಕುಞಾಯಿನ್ ಮುಸ್ಲಿಯಾರ್ ಕವಿತೆಗಳ ಒಟ್ಟು ಮೂಲಾಧಾರ. ಇದೆಲ್ಲವೂ ‘ತಸವ್ವುಫ್’* 3. ನ ಸಾಂಕೇತಿಕ ನಿರೂಪಣೆ. ಅಲ್ಲದೆ ಈ ಕಾವ್ಯಗಳೆಲ್ಲವೂ ಸೂಫಿಸಂ ಹಾದಿಯಲ್ಲಿಯೇ ಸಂಚರಿಸುತ್ತದೆ. ಹಾಗಾಗಿ ಸೃಜನಶೀಲ ಮಾಪ್ಪಿಳ ಸಾಹಿತ್ಯದಲ್ಲಿ ಸೂಫಿ ಪ್ರಭಾವ ಹೇರಳವಾಗಿ ಕಾಣಬಹುದು.

ಪ್ರಶ್ನೆ: ಅರಬ್ಬಿ ಮಲಯಾಳಂ ಭಾಷೆಯಲ್ಲಿ ಕಂಡುಬಂದ ಅತ್ಯಂತ ಹಳೆಯ ಕಾವ್ಯ ʼಮುಹಿಯುದ್ದೀನ್ ಮಾಲಾʼ ಮಲಬಾರ್ ಮುಸ್ಲಿಮರ ಮೇಲೆ ಬೀರಿದ ಪ್ರಭಾವವನ್ನು ವಿವರಿಸಬಹುದೇ?

ಲಭ್ಯವಿರುವ ಮಾಹಿತಿ ಪ್ರಕಾರ ಮುಹಿಯುದ್ದೀನ್ ಮಾಲಾವನ್ನು ಕ್ರಿ.ಶ 1607 ರಲ್ಲಿ ರಚಿಸಲಾಗಿದೆ. ಇದು ಮಾಪ್ಪಿಳ ಸೃಜನಶೀಲತೆಯ ಬಹುಮುಖ್ಯ ಅಂಗ. ಅರಬ್ಬಿ ಮಲಯಾಳಮನ್ನು ಅಭಿವ್ಯಕ್ತಿ ಸಾಧನವಾಗಿ ಸ್ಥಾಪಿಸಿದ ಈ ಕೃತಿ ಇಪ್ಪತ್ತನೆಯ ಶತಮಾನದ ಅಂತ್ಯದವರೆಗೂ ಮಾಪ್ಪಿಳ ಸಾಹಿತ್ಯದ ಆಶಯನ್ನು ಆಳವಾಗಿ ಪ್ರಭಾವಿಸಿತ್ತು. ಈ ಕಾವ್ಯ ಸೂಫೀ ಸಂತರ ಮೇಲಿನ ಗೌರವಾದರವನ್ನು ಮುಸ್ಲಿಮರ ಮನೋಭಾವದಲ್ಲಿ ಅಚ್ಚೊತ್ತಿಸಿತು. ಅಷ್ಟೇ ಅಲ್ಲದೇ ಸಂಸ್ಕೃತ ಸಾಂಸ್ಕೃತಿಕ ಹರಿವಿನಲ್ಲಿ ಕಡೆಗಣಿಸಲ್ಪಟ್ಟ, ಅವಗಣಿಸಲ್ಪಟ್ಟ ಹಿಂದುಳಿದ ವರ್ಗದವರಿಗೆ ಜ್ಞಾನ ನೀಡಿದ ಕಾವ್ಯ ಇದು. ‘ಜ್ಞಾನ ಮತ್ತು ಸ್ಥಾನಮಾನವಿಲ್ಲದವರಿಗೆ ಜ್ಞಾನ ಮತ್ತು ಸ್ಥಾನಮಾನವನ್ನು ನೀಡುವʼ ರಾಜಕೀಯ ನೆಲೆಯಲ್ಲಿ (ಇಸ್ಲಾಮಿನ ಜೊತೆಗೆ) ನಿಲ್ಲುವಂತೆ ಪ್ರೇರೇಪಿಸಿತು. ಹಾಗೂ ಜೀವನದ ಪ್ರಾಪಂಚಿಕತೆಯನ್ನು ಆಧ್ಯಾತ್ಮಿಕವಾಗಿ ನೋಡಲು ಕಲಿಸಿತು. ಈ ಕಾವ್ಯ ಮಾಪ್ಪಿಳಗಳ ಜೀವನದ ಲಯ ಮತ್ತು ತಾಳವಾಗಿ ಲೀನವಾಗಿಬಿಟ್ಟಿತು. ತಮ್ಮ ನೋವುಗಳಿಗೆ ಶಮನದಂತೆ ಬೆನ್ನಿಗೆ ನಿಂತಿತು. ಹಾಗೂ ಬೇರೆಬೇರೆ ಕಾರಣಗಳಿಂದ ಮಾಪ್ಪಿಳ ಬದುಕಿನ ಅವಿಭಾಜ್ಯ ಅಂಗವಾಗಿ ಈ ಕೃತಿ ಆವರಿಸಿಕೊಂಡಿತು.

ಪ್ರಶ್ನೆ: ಸೂಫಿ ಮಹಾತ್ಮರು ಮತ್ತು ವೀರರ ಸ್ಮರಣೆಯನ್ನು ಅಮರಗೊಳಿಸುವಲ್ಲಿ ಮಾಲಾ ಮೌಲಿದುಗಳು ವಹಿಸಿದ ಪಾತ್ರವೇನು?

ಅರಬ್ಬಿ ಮಲಯಾಳಂ ಸಾಹಿತ್ಯವನ್ನು ಸೂಫಿಸಂನ ವಿಕಾಸದ ಜೊತೆಯಲ್ಲಿಯೇ ಇಟ್ಟು ಓದಬೇಕು. ‘ತ್ವರೀಕತ್’*4 ಗಳು ರೂಪುಗೊಂಡು ಬಲಗೊಂಡಿದ್ದರೂ, ಆ ದಿಕ್ಕಿನಲ್ಲಿ (ತ್ವರೀಕತ್ ಹಾದಿಯಲ್ಲಿ) ತಾಂತ್ರಿಕವಾಗಿ ಚಲಿಸದೆ ಜೀವಂತ ಅಥವಾ ಮರಣಹೊಂದಿದ ಸಂತರಿಂದ ಆಶೀರ್ವಾದ ಪಡೆಯುವುದು ಜನಪ್ರಿಯಗೊಂಡ ಅಥವಾ ಆಶೀರ್ವಾದ ಪಡೆಯುವುದನ್ನು ಬಯಸುವ ಜನರ ಸಂಖ್ಯೆಯು ವಿಸ್ತರಿಸುತ್ತಿದ್ದ ಸಮಯದಲ್ಲಿ ದಕ್ಷಿಣ ಏಷ್ಯಾ ದೇಶಗಳಲ್ಲಿ ಸಂತರ ಪವಾಡಗಳನ್ನು ಸ್ತುತಿಸುವ ಕೃತಿಗಳು ಬರೆಯಲ್ಪಟ್ಟವು. ಆ ಕಾಲವನ್ನು ಮನಸ್ಸಿನಲ್ಲಿಟ್ಟುಕೊಂಡು ಈ ಮಾಲಾಗಳನ್ನು ಗಮನಿಸಬೇಕು. ಮುಹಿಯುದ್ದೀನ್ ಮಾಲಾ, ರಿಫಾಯಿ ಮಾಲಾ ಮತ್ತು ನಫೀಸತು ಮಾಲಾದಲ್ಲಿ ಸಂತರ ಕರಾಮತ್ತು(ಪವಾಡ)ಗಳು ಯಥೇಚ್ಚವಾಗಿ ಉಲ್ಲೇಖಗೊಂಡವು. ಸಂತರ ಹೆಸರಿನಲ್ಲಿ ಜನಪ್ರಿಯವಾಗಿರುವ ಪವಾಡಗಳನ್ನು ಎತ್ತಿ ತೋರಿಸಿ ಈ ಕಾವ್ಯಗಳನ್ನು ರಚಿಸಲಾಯಿತು. ಸಾಧಾರಣವಾಗಿ ಇದು ಉತ್ಪ್ರೇಕ್ಷಿತ ಪವಾಡಗಳ ಕಥೆಯಂತೆ ಭಾಸವಾಗುತ್ತದೆ. ಅದಾಗ್ಯೂ ಈ ಕಾವ್ಯಗಳಲ್ಲಿ ವಸ್ತುನಿಷ್ಟತೆಗಿಂತ ಇದರೊಳಗೆ ಅಂತರ್ಗತವಾಗಿರುವ ಭಕ್ತಿಯೇ ಇದರ ವಿಶಿಷ್ಟ ಲಕ್ಷಣ ಅಥವಾ ಇದರ ಕಾವ್ಯಾತ್ಮ.

ಈ ಕಾವ್ಯಗಳು ಓದುಗರಲ್ಲಿ ಭಕ್ತಿಯನ್ನು ಹುಟ್ಟಿಸುತ್ತದೆ. ಸೂಫಿಗಳ ಮೇಲಿದ್ದ ಪ್ರೀತ್ಯಾದರಗಳಿಂದಾಗಿ, ಈ ಕೃತಿಯನ್ನು ಓದುವುದು, ರಾಗವಾಗಿ ಹಾಡುವುದು ಪವಿತ್ರ ಕಾರ್ಯದಂತೆ ಜನಜನಿತವಾಯಿತು. ಅಲ್ಲದೆ ಈ ಕಾವ್ಯಗಳು ಯಾವುದೇ ಅಡೆತಡೆಯಿಲ್ಲದ ಸುಂದರವಾದ ಸಾಲುಗಳಿಂದ ಅನಕ್ಷರಸ್ಥರಿಗೂ ಅರ್ಥವಾಗುವಷ್ಟು ಸರಳವಾಗಿತ್ತು. ಕಾವ್ಯದ ಹಾಡುಗಳು ಜನಪ್ರಿಯಗೊಳ್ಳಲು ಇದೂ ಕೂಡ ಒಂದು ಕಾರಣ. ಕಾವ್ಯದ ಪಾತ್ರಗಳು ಮತ್ತು ಚಿತ್ರಣಗಳು ಹಾಗೂ ಬಳಸಲ್ಪಟ್ಟ ರೂಪಕಗಳು ಸಾಮಾನ್ಯ ಜನರ ಅರಿವಿನ ಮಿತಿಯಲ್ಲಿಯೇ ನಿಲುಕಬಲ್ಲಂತಹವು. ಈ ಕಾವ್ಯಗಳ ಓದು ಪವಿತ್ರ ಕಾರ್ಯವೆಂಬ ನಂಬಿಕೆಯಿದ್ದುದರಿಂದ ಈ ಕಾವ್ಯಗಳ ಓದು ನಿರಂತರವಾಗಿ ಪುನರಾವರ್ತನೆಯಾಗುತ್ತಿತ್ತು. ಜನರು ನಿರಂತರ ಓದುವಿಕೆ, ಕೇಳುವಿಕೆಯಿಂದಲೇ ಕಂಠಪಾಠ ಮಾಡಿಕೊಂಡರು. ಕಾವ್ಯಗಳಲ್ಲಿ ಬರುವ ಪಾತ್ರಗಳು, ವ್ಯಕ್ತಿತ್ವಗಳು ತಮ್ಮ ಕುಟುಂಬ ಸದಸ್ಯರಿಗಿಂತ ಹೆಚ್ಚು ಆಪ್ತವಾಗಿಬಿಟ್ಟವು. ಕಾವ್ಯದ ನಾಯಕರು ಅನಿರೀಕ್ಷಿತ ಬೀಳುವಿಕೆಯಲ್ಲಿ, ಬಿಕ್ಕಟ್ಟುಗಳಲ್ಲಿ, ಅಪ್ರಜ್ಞಾಪೂರ್ವಕವಾಗಿ ರಕ್ಷಣೆಗೆ ಕರೆಯುವ ಹೆಸರುಗಳಾದವು. ಉದಾಹರಣೆಗೆ ಬೀಳುವ ಮಗು ʼಅಮ್ಮಾʼ ಎಂದು ಕೂಗುವಂತೆ ʼಯಾ ಮುಹಿಯುದ್ದೀನ್ʼ ಎಂದು ಕರೆಯುವುದು ಜನಸಾಮಾನ್ಯರ ನಡುವೆ ಸಾಧಾರಣವಾಗಿಬಿಟ್ಟಿತು. ಮಾಲಾಗಳು ಸಂತರಿಗೆ ನೀಡಿರುವ ಜನಪ್ರಿಯತೆಯು ಅಂತಹದ್ದು.

ಪ್ರಶ್ನೆ: ಜನಪದದ ಕುತೂಹಲವನ್ನು ಮೀರಿ, ಮಾಪ್ಪಿಳ ಕಲಾ ಅಭಿವ್ಯಕ್ತಿಗಳು ಸಾರ್ವಜನಿಕ ಸಾಹಿತ್ಯ ಇತಿಹಾಸದಲ್ಲಿ ಇನ್ನೂ ಸಾಕಷ್ಟು ಸ್ವೀಕಾರವನ್ನು ಗಳಿಸಲಿಲ್ಲ ಯಾಕೆ?

ಇತ್ತೀಚಿನವರೆಗೂ ಅರಬ್ಬಿ ಮಲಯಾಳಂ ಮತ್ತು ಅದರ ಸಾಹಿತ್ಯದ ಬಗ್ಗೆ ತೀರಾ ಸಂಕುಚಿತ ದೃಷ್ಟಿಕೋನವಿತ್ತು. ‘ಅಬೂ ಸಾಹಿಬ್’*5 ಕೂಡಾ, ಮಾಪ್ಪಿಳ ಸಂಸ್ಕೃತಿಯೆಂದರೆ ಚಾವಕ್ಕಾಡ್ ಹಾಗೂ ಮಂಗಳೂರು ನಡುವಿನ ಪ್ರದೇಶದಲ್ಲಿ ಅಸ್ತಿತ್ವದಲ್ಲಿರುವ ಸಾಂಸ್ಕೃತಿಕ ಚಟುವಟಿಕೆಯೆಂದಷ್ಟೇ ಭಾವಿಸಿದ್ದರು. ಅದರಾಚೆಗಿನ ಜಗತ್ತಿನೊಂದಿಗೆ ಇದಕ್ಕೆ ಯಾವುದೇ ಮಹತ್ವದ ಸ್ಥಾನವಿಲ್ಲವೆಂದು ನಿಲುವು ತಾಳಿದ್ದರು. ಅಲ್ಲದೆ ಅರಬ್ಬಿ ಮಲಯಾಳಂ ಕೇವಲ ಒಂದು ಲಿಪಿ ಎಂದಷ್ಟೇ ಭಾವಿಸಿದ್ದರು. ಅದನ್ನು ಮೀರಿ, ಅರೇಬಿಕ್ ಮಲಯಾಳಂನ ಸಾಂಸ್ಕೃತಿಕ ಪ್ರಾಮುಖ್ಯತೆಯ ಕುರಿತಂತೆ ಸಮರ್ಪಕವಾಗಿ ಸಂಶೋಧನೆಗಳು ನಡೆದಿರಲಿಲ್ಲ. ಮಾಪ್ಪಿಳ ಕೃತಿಗಳು ಪ್ರತಿಪಾದಿಸುವ ಆಶಯವನ್ನು ಗಹನವಾಗಿ ಗಮನಿಸುವ ಯಾವುದೇ ಪ್ರಯತ್ನ ನಡೆದಿರಲಿಲ್ಲ. ಮಲಯಾಳಂ ಅನ್ನು ತಪ್ಪಾಗಿ ಉಚ್ಚರಿಸಿ ಅಪಭ್ರಂಶಗೊಳಿಸಲಾಗುತ್ತಿದೆ ಎಂದಷ್ಟೇ ಸಾಮಾನ್ಯ ಅಭಿಪ್ರಾಯವಾಗಿತ್ತು. ಹಾಗಾಗಿ ಅರಬ್ಬಿ ಸಾಹಿತ್ಯ ಲೋಕದೊಳಗೆ ಆಳವಾಗಿ ಧುಮುಕಲು ಸಾಕಷ್ಟು ಆಸಕ್ತಿ ತೋರಿರಲಿಲ್ಲ. ಎಲ್ಲರಿಗೂ ಅರಬ್ಬಿ ಮಲಯಾಳಂನ ಸಾಂಸ್ಕೃತಿಕ ಸ್ಥಾನವನ್ನು ತಳ್ಳಿಹಾಕುವುದರಲ್ಲೇ ಅತೀ ಉತ್ಸಾಹ ಇದ್ದಂತಿತ್ತು.


ಹೀಗೆ ಸ್ವಂತ ಸಮುದಾಯದ ಸಾಹಿತಿ, ಇತಿಹಾಸಕಾರರಿಂದ ಅವಗಣನೆಗೆ ಒಳಗಾದ ಮಾಪ್ಪಿಳ ಸಾಂಸ್ಕೃತಿಕ ಲೋಕವು ಸಾಧಾರಣ ಜನಪದ ಎಂದು ವರ್ಗೀಕರಣಗೊಂಡು ಅವಗಣನೆಯಾದದ್ದರಲ್ಲಿ ಅಂತಹ ಆಶ್ಚರ್ಯವೇನಿಲ್ಲ. ಅದೂ ಅಲ್ಲದೆ, ಅರಬ್ಬಿ ಮಲಯಾಳಂನ ಉಚ್ಚಾರಣೆ ಹಾಗೂ ವ್ಯಾಕರಣ ವಿಭಾಗದಲ್ಲಿ ತೋರಿದ ಉದಾಸೀನತೆಯು ಮೇಲ್ನೋಟದಲ್ಲಿಯೇ ಇದನ್ನು ಇನ್ನೊಂದು ʼಜನಪದʼ ಎಂದಷ್ಟೇ ಬಿಂಬಿಸಲು ಕಾರಣವಾಯಿತು. ಆಧುನಿಕೋತ್ತರ ಯುಗದಲ್ಲಿ, ಹೊಸ ತಲೆಮಾರಿನ ಜನಾಂಗ ತಮ್ಮ ಮೂಲಗಳನ್ನು ಕುತೂಹಲದಿಂದ ಹುಡುಕುತ್ತಾ, ಅರೇಬಿಕ್ ಮಲಯಾಳಂನ ಆಳವನ್ನು ನಿಧಾನವಾಗಿ ಪರಿಶೀಲಿಸಲು ಪ್ರಾರಂಭಿಸಿದ್ದಾರೆ. ಅವರು ಟಿ. ಉಬೈದ್, ಅಬು ಮತ್ತು ಪುನ್ನಯೂರ್ಕುಲಂ ಮುಂತಾದವರನ್ನು ಓದಲು ಪ್ರಾರಂಭಿಸಿದ್ದಾರೆ. ಸ್ವಂತವಾಗಿ ಪರಿಶೋಧಿಸಿ, ಅಧ್ಯಯನ ಮಾಡುತ್ತಿದ್ದಾರೆ. ಆಧುನಿಕೋತ್ತರ ಬೌದ್ಧಿಕ ವಾತಾವರಣವು ಮಾಪ್ಪಿಳಾಗಳಲ್ಲದ ವಿದ್ವಾಂಸರನ್ನು ಕೂಡಾ ಅರಬ್ಬಿ ಮಲಯಾಳಂ ಸಾಹಿತ್ಯದೆಡೆಗೆ ಆಕರ್ಷಿಸುವಂತೆ ಮಾಡಿದೆ. ಸಂಶೋಧನೆಗಳು ಸಂಪೂರ್ಣ ದೃಷ್ಟಿಕೋನಗಳಿಗೆ ಬಂದು ತಲುಪದಿದ್ದರೂ ಕೂಡಾ ಆ ದಿಕ್ಕಿನಲ್ಲಿ ಸಂಶೋಧನೆಗಳು ಚಲಿಸುತ್ತಿರುವುದನ್ನು ನೋಡಿ ಸಂತೋಷವಾಗುತ್ತಿದೆ.

ಪ್ರಶ್ನೆ: ಅರಬ್ಬಿ ಮಲಯಾಳಂ ಭಾಷೆಯಲ್ಲಿ ಅಲೌಕಿಕ ಕವನಗಳು ಎಂದು ಪರಿಗಣಿಸಬಹುದಾದ ಕೃತಿಗಳ ಸಾಮಾನ್ಯ ವಿಶ್ಲೇಷಣೆಯನ್ನು ನೀಡಬಹುದೇ?

ಮೊದಲೇ ಹೇಳಿದಂತೆ, ಪವಿತ್ರಾತ್ಮಗಳ(ಸೂಫಿಗಳ) ಮಹಿಮೆಯಿಂದ ಆಶೀರ್ವಾದ ಪಡೆಯುವುದು ಜನಪ್ರಿಯಗೊಳ್ಳುತ್ತಿರುವ ಸಮಯದಲ್ಲಿ ಅರಬ್ಬಿ ಮಲಯಾಳಂ ರೂಪುಗೊಂಡಿತು. ಆ ಸಮಯದಲ್ಲಿ ಸಮಾಜವು ಸಾಮಾನ್ಯವಾಗಿ ಸೂಫಿಸಂನ ಗಾಢ ಪ್ರಭಾವದಲ್ಲಿತ್ತು. ಆದರೆ ತಸವ್ವುಫ್ ಅನ್ನು ಸ್ವಂತವಾಗಿ ಅಳವಡಿಸಿಕೊಂಡವರು ತೀರಾ ಅಪರೂಪವಾಗಿದ್ದರು. ಹಾಗಾಗಿ, ಅತೀಂದ್ರಿಯ ಅನುಭವಗಳನ್ನು ವ್ಯಕ್ತಪಡಿಸುವ ಕೃತಿಗಳು ಅರಬ್ಬಿ ಮಲಯಾಳಂನಲ್ಲಿ ಕಡಿಮೆ. ಆದರೆ ಇಚ್ಚಮಸ್ತಾನ್ ಮತ್ತು ಕಡಾಯಿಕ್ಕಲ್ ಮೊಯಿದೀನ್ ಕುಟ್ಟಿ ಮುಸ್ಲಿಯಾರ್ ಕೃತಿಗಳು ಅಂತಹವುಗಳಲ್ಲಿ ಸೇರುತ್ತವೆ. ಸಾಮಾನ್ಯವಾಗಿ ಅವುಗಳು ತೀರಾ ಕ್ಲಿಷ್ಟಕರ ರೂಪದಲ್ಲಿವೆ. ನಿಗೂಢವಾದ ಸೂಫಿ ಪರಿಕಲ್ಪನೆಗಳು ಹಾಗೂ ತಂತ್ರಗಾರಿಕೆಯ ರೂಪಕಗಳು ಅವುಗಳನ್ನು ಇನ್ನಷ್ಟು ಕ್ಲಿಷ್ಟಕರವೆನಿಸುವಂತೆ ಮಾಡಿದೆ. ಆದಾಗ್ಯೂ, ಅರಬ್ಬಿ ಮಲಯಾಳಂ ಭಾಷೆಯ ಹೆಚ್ಚಿನ ಕೃತಿಗಳು ಸೂಫಿಸಮ್ಮಿನ ಮೇಲೆ ಬಗ್ಗೆ ಬೆಳಕು ಚೆಲ್ಲುತ್ತವೆ. ಸೂಫಿಸಮ್ಮಿನ ಪ್ರಭಾವಳಿಯ ಸುತ್ತಲೇ ರಚಿತವಾಗಿವೆ. ಜೀವನದ ವಿಧಾನ, ವಿಶ್ವ ದೃಷ್ಟಿಕೋನ ಮತ್ತು ಇತಿಹಾಸದ ದೃಷ್ಟಿಕೋನದಲ್ಲಿ ಅದನ್ನು ಧಾರಾಳವಾಗಿ ಕಾಣಬಹುದು.

ಪ್ರಶ್ನೆ: ಮಹಾನ್ ಕವಿ ಮೊಯಿನ್ ಕುಟ್ಟಿ ವೈದ್ಯರ ಕವಿತೆಗಳಲ್ಲಿರುವ ಅಲೌಕಿಕತೆಯನ್ನು ವಿವರಿಸುತ್ತೀರ?

ಮೊಯಿನ್ ಕುಟ್ಟಿಯವರ ಪ್ರಸಿದ್ಧ ಪ್ರೇಮಕಾವ್ಯ ‘ಹುಸ್ನುಲ್ ಜಮಾಲ್-ಬದ್ರುಲ್ ಮುನೀರ್’ ನಲ್ಲಿ ಅದಮ್ಯ ಪ್ರೇಮಿಗಳಾದ ಹುಸ್ನುಲ್ ಜಮಾಲ್ ಹಾಗೂ ಬದ್ರುಲ್ ಮುನೀರ್ ಹಲವು ಎಡರುತೊಡರುಗಳನ್ನು ಎದುರಿಸುತ್ತಾರೆ. ಕೊನೆಗೂ ಅದನ್ನೆಲ್ಲಾ ನಿವಾರಿಸಿ ಸತಿ-ಪತಿಯರಾಗುತ್ತಾರೆ. ಆದರೆ ಕಾವ್ಯ ಅಲ್ಲಿಗೆ ಮುಕ್ತಾಯಗೊಳ್ಳುವುದಿಲ್ಲ. ನವದಂಪತಿಗಳ ಮಧುಚಂದ್ರವನ್ನು ವಿವರಿಸಿಯೇ ಕಾವ್ಯದಲ್ಲಿರುವ ಕಥೆ ಕೊನೆಗೊಳ್ಳುತ್ತದೆ. ವಿವಾಹಿತ ಹುಸ್ನುಲ್ ಜಮಾಲ್ ಮತ್ತು ಬದ್ರುಲ್ ಮುನೀರ್ ಹಾರುವ ರಥದಲ್ಲಿ ಮಧುಚಂದ್ರದ ಸವಾರಿ ಮಾಡುತ್ತಾರೆ. ಅವರ ಮಧುಚಂದ್ರದ ಪ್ರವಾಸದ ಗುರಿ ಇನ್ನಷ್ಟು ಕುತೂಹಲಕಾರಿಯಾಗಿದೆ. ಬದ್ರುಲ್ ಮುನೀರ್ ತನ್ನ ಪ್ರೀತಿಯನ್ನು ಪಡೆಯಲು ಜೀವನ್ಮರಣ ಹೋರಾಟ ನಡೆಸುತ್ತಿದ್ದ ಸಂದರ್ಭದಲ್ಲಿಯೇ ಮುನೀರ್ ನನ್ನು ಮೂವರು ಸುಂದರಿಯರು ಏಕಮುಖವಾಗಿ ಪ್ರೀತಿಸುತ್ತಿದ್ದರು. ಆ ಮೂವರು ಸುಂದರಿಯರನ್ನು ಮದುವೆಯಾಗುವ ಪ್ರಸಂಗವೇ ಆ ಪ್ರಯಾಣ. ಅಲ್ಲಿಯವರೆಗೂ ಸಾಧಾರಣ ಹೆಣ್ಣು-ಗಂಡುವಿನ ನಡುವಿನ ಪ್ರೇಮಕಾವ್ಯದಂತೆ ಕಾಣುವ ಈ ಕೃತಿ ಇಲ್ಲಿ ಲೌಕಿಕ ಪ್ರೇಮದ ಘನತೆಯನ್ನು ಮೀರಿ ಬೇರೆಯದ್ದೇ ಆಯಾಮವನ್ನು ತಲುಪುತ್ತದೆ. ಕಾವ್ಯದಲ್ಲಿ ಬರುವ ಈ ಮೂವರು ಪ್ರೇಯಸಿಯರು ʼಪರಮಾತ್ಮನನ್ನು ಪ್ರೀತಿಸುವ ಮಾನವ ಆತ್ಮಗಳನ್ನು ಪ್ರತಿನಿಧಿಸುತ್ತಾರೆʼ. ಇದು ಸೂಫೀ ಕವಿತೆಗಳ ರೂಪಕಗಳನ್ನು ಅರಿತವರಷ್ಟೇ ಅರ್ಥ ಮಾಡಿಕೊಳ್ಳಬಲ್ಲರು.

ಅದು ಮೊಯಿನ್ ಕುಟ್ಟಿ ವೈದ್ಯರ ಬರವಣಿಗೆಯ ಶೈಲಿ. ಹಾಗೂ ಸೂಫೀ ರೂಪಕಗಳನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗದವರು ಇಲ್ಲಿ ಕಾವ್ಯದ ಆತ್ಮವನ್ನು ಮುಟ್ಟಿಕೊಳ್ಳಲು ವಿಫಲರಾಗುತ್ತಾರೆ. ಅವರ ‘ಪಡಪ್ಪಾಟ್’ ಗಳನ್ನು (ಯುದ್ಧಗಾನ) ಗಮನಿಸುವುದಾದರೆ, ಅದು ಆಕ್ರಮಣದ ವಿರುದ್ಧ ಪ್ರತಿರೋಧಕ್ಕಾಗಿ ಶಸ್ತ್ರಾಸ್ತ್ರಗಳನ್ನು ಹಿಡಿದ ವೀರರ ಬಗೆಗಿನ ಚರಿತ್ರೆಯನ್ನು ತೆರೆದುಕೊಡುತ್ತದೆ. ಆ ವೀರರು, ಹುತಾತ್ಮತೆಗೆ ಅಭಿಮುಖವಾಗುವಾಗಿನ ಅವರ ಧೃಢಸಂಕಲ್ಪ, ಅದಮ್ಯ ವಿಶ್ವಾಸವನ್ನು ಇಡೀ ಕಾವ್ಯದಲ್ಲಿ ಚರ್ಚಿಸಲಾಗಿದೆ. ವರ್ತಮಾನದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಜೀವನ್ಮರಣ ಹೋರಾಟ ನಡೆಸಿದ ಐತಿಹಾಸಿಕ ವ್ಯಕ್ತಿತ್ವಗಳ ಕುರಿತಂತೆ ಪಾತ್ರಗಳನ್ನು ಪುನರಾವಿಷ್ಕರಿಸುವುದನ್ನು ಈ ಕಾವ್ಯಗಳಲ್ಲಿ ಕಾಣಬಹುದು.

ಪ್ರಶ್ನೆ: ವೈದ್ಯರ ಕಾವ್ಯದಲ್ಲಿ ಬರುವ ಪ್ರವಾದಿಯ ಚಿತ್ರಣವನ್ನು ವಿವರಿಸಬಹುದೇ?

ವೈದ್ಯರ ಕಾವ್ಯಗಳಲ್ಲಿ ʼಆರಾಮುತೋಲಿ ಓದಿ ಸತ್ಯಂʼ*8 ಒಂದು ಪ್ರಸಿದ್ಧ ಕಾವ್ಯ. ಪ್ರವಾದಿಯ ನೂರನ್ನು(ಬೆಳಕು) ಆತ್ಮಗಳ ಮೂಲವಾಗಿ ಕಾಣುವುದೇ ಹಳೆಯ ಮಾಪ್ಪಿಳ ಕಾವ್ಯದ ಸಾಮಾನ್ಯ ನಿಲುವು. ವೈದ್ಯರ ಕಾವ್ಯಗಳಲ್ಲಿಯೂ ಇದನ್ನು ಕಾಣಬಹುದು. ಸಾಮಾನ್ಯ ವ್ಯಕ್ತಿಯ ಜೀವನದ ಮೇಲೆ ಆಧ್ಯಾತ್ಮಿಕ ಬೆಳಕಿನ ದಾರಿದೀಪವೇ ಪ್ರವಾದಿಚರ್ಯೆ. ಸೂಫೀ ಕವಿಗಳು ಯಾವುದೇ ಸಮಸ್ಯೆಗಳಿಗೆ ಪ್ರವಾದಿಯವರ ಜೀವನದಲ್ಲಿ ಪರಿಹಾರವನ್ನು ಹುಡುಕುತ್ತಾರೆ. ಅದು ಆಧ್ಯಾತ್ಮಿಕ, ರಾಜಕೀಯ ಅಥವಾ ಬರವಣಿಗೆಯದ್ದೇ ಬಿಕ್ಕಟ್ಟಾಗಿರಬಹುದು. ಪರಿಹಾರವನ್ನು ಪ್ರವಾದಿ ಜೀವನದಿಂದಲೇ ಹುಡುಕುತ್ತಾರೆ. ಪ್ರವಾದಿಯವರ ಜೀವನವನ್ನು ಹಾಡುವ ವೈದ್ಯರ ತೀವ್ರ ಬಯಕೆಯೇ ‘ಹಿಜ್ರಾʼ ಕೃತಿಯನ್ನು ಸಂಯೋಜಿಸಲು ಕಾರಣವಾಯಿತು. ಅವರ ಬದರ್, ಉಹ್ದ್ ಮತ್ತು ಮಲಪ್ಪುರಂ ಪಡಪ್ಪಾಟುಗಳಲ್ಲಿ ಪ್ರವಾದಿ ಅತೀಂದ್ರಿಯ, ಅಲೌಕಿಕ ಶಕ್ತಿಗಳಿಂದ ರೂಪುಗೊಂಡಿದ್ದಾರೆ.


ಪ್ರವಾದಿಯವರ ಮೇಲೆ ಉಕ್ಕಿ ಹರಿಯುವ ಪ್ರೀತಿಯೇ ಅವರ ಕಾವ್ಯದ ವಿಶಿಷ್ಟ ಲಕ್ಷಣ. ಬದರ್ ಯುದ್ಧ ಕಾವ್ಯದಲ್ಲಿ ʼಉರತ್ತ್ ಯಾ ಮೌಲಲ್ ಉರೂಬಾʼ ಮತ್ತು ʼನೈನಾರ್ ನಬೀತ್ ವಹಾʼ ಹಾಡುಗಳನ್ನೇ ಗಮನಿಸಿ. ಈ ಘಟನೆಯು ಯುದ್ಧಕ್ಕೆ ಸನ್ನಧ್ಧರಾಗಿ ನಿಂತ ಸಾಲಿನಲ್ಲಿರುವ ಸವಾದ್ ರ ಪ್ರವಾದಿ ಪ್ರೇಮದ ಉತ್ಕಟ ಪ್ರಕಟನೆಯನ್ನು ಇಲ್ಲಿ ಕಾಣಬಹುದು. ಯುದ್ಧಕಾವ್ಯದಲ್ಲಿ ಬರುವ ಈ ಭಾಗಗಳಿಗೆ ಯುದ್ಧಕ್ಕೆ ಸಂಬಂಧಿಸಿದಂತೆ ಯಾವುದೇ ಸಂಬಂಧವೂ ಇಲ್ಲ. ಅಗತ್ಯವಿದ್ದರೆ ಅದನ್ನು ಕೈ ಬಿಡಬಹುದಿತ್ತು. ಆದರೆ ಅದನ್ನು ಕೈ ಬಿಟ್ಟಿಲ್ಲ, ಬದಲಾಗಿ ಇಡೀ ಕಾವ್ಯದಲ್ಲಿ ಇದು ಬಹಳ ಮುಖ್ಯವಾದ ಉಪ-ಸಂಚಿಕೆಯಾಗಿ ಮೂಡಿ ಬಂತು. ಕವಿತೆಯಲ್ಲಿ ಪ್ರೇಮದ ಪ್ರಕಟನೆ ಎಷ್ಟು ಪ್ರಾಮಾಣಿಕವಾಗಿದೆಯೆಂದರೆ, ಆ ಭಾಗವನ್ನು ಹಾಡುವಾಗ ವೈದ್ಯರು ಸವಾದ್ ರ ಸ್ಥಾನದಲ್ಲಿಯೇ ನಿಂತು ಕವಿತೆ ಬರೆದಿದ್ದಾರೆ ಎಂದು ತೋರುತ್ತದೆ. ಇದು ವೈದ್ಯರ ಕಾವ್ಯದ ಗುಣ. ಇದು ವೈದ್ಯರ ಕವಿತೆಯಲ್ಲಿ ಅಭಿವ್ಯಕ್ತಿಗೊಂಡ ಪ್ರವಾದಿ ಪ್ರೇಮ.

ಟಿಪ್ಪಣಿಗಳು:

  1. ಅರಬ್ಬೀ ಮಲಯಾಳಂ: ಮಲಯಾಳಂ ಭಾಷೆಯ ಈಗಿನ ಲಿಪಿ ತಯಾರಾಗುವ ಎಷ್ಟೋ ವರ್ಷಗಳ ಹಿಂದೆ ಮುಸ್ಲಿಂ ವಿದ್ವಾಂಸರು ಅರೇಬಿಕ್ ಲಿಪಿಯಲ್ಲಿ ಬರೆದು ಅಭಿವೃದ್ಧಿಪಡಿಸಿದ ಒಂದು ಬರೆವಣಿಗೆಯ ಪ್ರಕಾರ. ಮಲಯಾಳಂ ಭಾಷೆಗೆ ಸಹಜವಾಗುವಂತೆ ಕೆಲವು ಹೊಸ ಅಕ್ಷರಗಳನ್ನು ಅರಬ್ಬಿ ಮಲಯಾಳಂ ಲಿಪಿಗೆ ಸೇರಿಸಲಾಗಿದೆ. ಮಲಬಾರ್ ಪ್ರಾಂತ್ಯದ ವ್ಯಾಪ್ತಿಗೆ ಸೇರಿದ್ದ ಕರ್ನಾಟಕದ ಕೊಡಗು, ಅವಿಭಜಿತ ದಕ್ಷಿಣ ಕನ್ನಡ ಹಾಗೂ ಆಸುಪಾಸಿನ ಮುಸ್ಲಿಮರಿಗೆ ಒಂದು ಕಾಲದಲ್ಲಿ ಅರಬ್ಬಿ ಮಲಯಾಳಂ ಅಧಿಕೃತ ಲಿಪಿಯಾಗಿತ್ತು. ಭಾಷವಾರು ವಿಂಗಡನೆ ಹಾಗೂ ಪ್ರಾಂತ್ಯಗಳಿಂದ ರಾಜಕೀಯ ಸ್ಥಿತ್ಯಂತರ ಪಡೆದ ಬಳಿಕ ಅರಬ್ಬಿ ಮಲಯಾಳಂ ಪ್ರಭಾವ ಈ ಭಾಗದಲ್ಲಿ ಗಣನೀಯವಾಗಿ ಕಡಿಮೆಯಾಗಿದೆ.
  2. ಮುಹಿಯುದ್ದೀನ್ ಶೇಖ್: ಶೈಖ್ ಮುಹ್ಯುದ್ದೀನ್ ಅಬ್ದುಲ್ ಖಾದಿರ್ ಅಲ್ ಜೀಲಾನೀ ಪೂರ್ಣ ಹೆಸರು. ಹನ್ನೊಂದನೇ ಶತಮಾನದಲ್ಲಿ ಬಾಗ್ದಾದಿನಲ್ಲಿ ಬದುಕಿದ್ದ ಪ್ರಸಿದ್ಧ ವಿದ್ವಾಂಸ. ಸೂಫೀ ಪರಪಂಪರೆಗಳಲ್ಲಿ ಪ್ರಮುಖವಾಗಿರುವ ಖಾದಿರೀ ಪಂಗಡವು ಇವರ ಶಿಷ್ಯ ಶೃಂಖಲೆಯನ್ನು ಅವಲಂಬಿಸಿದೆ. ಪೂರ್ವ ದೇಶಗಳಲ್ಲಿ, ವಿಶೇಷವಾಗಿ ಭಾರತ, ಪಾಕಿಸ್ತಾನ, ಬಾಂಗ್ಲಾದೇಶ ದಂತಹ ರಾಷ್ಟ್ರಗಳಲ್ಲಿ ಇವರ ಖ್ಯಾತಿ ಅನನ್ಯವಾದುದು. ‘ಮುಹಿಯುದ್ದೀನ್ ಮಾಲಾ’ ಇದೇ ಸಂತರನ್ನು ಕುರಿತಂತೆ ಕಟ್ಟಿರುವ ಕಾವ್ಯ. ಇದರಲ್ಲಿ ಅವರ ಜೀವನ, ಪವಾಡಗಳನ್ನು ಸ್ತುತಿಸಲಾಗಿದೆ.
  3. ತಸವ್ವುಫ್: ಸೂಫಿಸಂ ನ ಅರೇಬಿಕ್ ಪದ.
  4. ತ್ವರೀಕತ್: ಸೂಫಿ ಮಾರ್ಗ. ವಿಶ್ವದಾದ್ಯಂತ ಹಲವು ಸೂಫೀ ಮಾರ್ಗಗಳಿವೆ. ಅವುಗಳಲ್ಲಿ ಪ್ರಮುಖವಾದವುಗಳು ಖಾದಿರೀ, ಚಿಶ್ತಿ, ನಕ್ಷಬಂದಿ, ಸುಹ್ರವರ್ದಿ.
  5. ಅಬೂ ಸಾಹಿಬ್: ಮಾಪ್ಪಿಳ ಸಮುದಾಯದಿಂದ ಬಂದಂತಹ ಸೂಫಿ ಬರಹಗಾರ ಹಾಗೂ ಇತಿಹಾಸಕಾರ. ಕೇರಳದ ತಲಶ್ಶೇರಿಯವರಾದ ಇವರು ಶೈಖ್ ಅಬ್ದುಲ್ ಖಾದಿರ್ ಜೀಲಾನಿಯವರ ‘ಫುತೂಹುಲ್ ಗೈಬ್’ ಗ್ರಂಥದ ಅನುವಾದ, ದಾರ್ಶನಿಕ ಕವಿ ‘ಇಚ್ಚ ಮಸ್ತಾನ್’ ರ ವಚನಗಳ ಸಂಪಾದನೆ; ಇನ್ನೂ ಅನೇಕ ಮಹತ್ವದ ಕೆಲಸವನ್ನು ಮಾಡಿದ್ದಾರೆ. ಸುಮಾರು ಅರವತ್ತರ ದಶಕದಲ್ಲಿ ನಿಧನರಾದ ಇವರು ಸೂಫೀ ಅನುಭಾವ ಸಾಹಿತ್ಯ ಮತ್ತು ಇತಿಹಾಸದ ಕುರಿತು ಅಪಾರವಾದ ಆಸಕ್ತಿಯಿಂದ ಅಧ್ಯಯನ ಮಾಡಿ ಸಾಧನೆ ಮೆರೆದಿದ್ದಾರೆ.
  6. ಬದ್‌ರುಲ್ ಮುನೀರ್ ಹುಸ್ನುಲ್ ಜಮಾಲ್: ಮಾಪ್ಪಿಳ ಮಹಾಕವಿ ಮೊಯಿನ್ ಕುಟ್ಟಿ ವೈದ್ಯರ್ ವಿರಚಿತ ಪ್ರೇಮಕಾವ್ಯ. ಇದನ್ನು ಪ್ರೊ. ಬಿ ಎಂ ಇಚ್ಲಂಗೋಡು ಅವರು ಕನ್ನಡಕ್ಕೆ ಬಹಳ ಅಂದವಾಗಿ ಅನುವಾದಿಸಿದ್ದಾರೆ.
  7. ಪಡಪ್ಪಾಟ್- ಯುದ್ಧಗಾನ. ಬ್ರಿಟೀಷರ ವಿರುದ್ಧ ಹೋರಾಡಲು ಬದ್ರ್ ಪಾಟು, ಉಹ್ದು ಪಾಟು ಮುಂತಾದ ಪಡಪ್ಪಾಟುಗಳು ಕ್ರಾಂತಿಗೀತೆಗಳಾಗಿದ್ದವು. ಬಳಿಕ ಬ್ರಿಟೀಷರು ಈ ಕಾವ್ಯಗಳನ್ನು ನಿಷೇಧಿಸಿದರು. ಅರಬ್ಬಿ ಮಲಯಾಳಂ ಸಾಹಿತ್ಯದಲ್ಲಿ ಬಂದ ಹಲವಾರು ಕೃತಿಗಳ ನಾಶಕ್ಕೆ ಇದು ಕೂಡಾ ಹೇತುವಾಯಿತು. ತಮ್ಮ ವಿರುದ್ಧ ಬಳಸಲ್ಪಡುವ ಸಾಹಿತ್ಯ ಕೃತಿಗಳನ್ನು ಬ್ರಿಟೀಷರು ಆ ವೇಳೆಯಲ್ಲಿ ನಾಶಪಡಿಸಿದ್ದರು. ಹಾಗಾಗಿ ಹಲವಾರು ಸಾಹಿತ್ಯ ಕೃತಿಗಳು ಶಾಶ್ವತವಾಗಿ ಇಲ್ಲವಾಯಿತು ಎಂದು ಅಧ್ಯಯನಕಾರರು ಖೇದ ವ್ಯಕ್ತಪಡಿಸುತ್ತಾರೆ.
  8. ಆರಮುತ್ತೊಳಿ ಓದಿ ಸತ್ತಿಯಂ- ಮಹಾಕವಿ ಮೊಯಿನ್ ಕುಟ್ಟಿ ವೈದ್ಯರು ಬರೆದ ಪ್ರಸಿದ್ಧವಾದ ಒಂದು ಮಾಪ್ಪಿಳ ಹಾಡಾಗಿದೆ. ಇಲ್ಲಿ ‘ಪೈಗಂಬರರ ಪ್ರೇಮ’ ವಸ್ತುವಾಗಿದೆ.

ಕೆ. ಅಬೂಬಕ್ಕರ್ ಮಾಸ್ಟರ್ ಅವರ ಸಂದರ್ಶನ ನಡೆಸಿರುವುದು ‘ಅಗಮೀಯಂ’ ವೆಬ್ ಮ್ಯಾಗಜೀನ್
ಕನ್ನಡಕ್ಕೆ: ಫೈಝ್ ವಿಟ್ಲ

4 Comments

Leave a Reply

*