ಇಸ್ಲಾಮಿಕ್ ಸುವರ್ಣಯುಗವು ಇಬ್ನುಸೀನಾರಿಂದ (ಅವಿಸೆನ್ನ) ಅಲ್-ಫರಾಬಿಯವರೆಗಿನ ಹಲವು ಜಗತ್ಪ್ರಸಿದ್ಧ ಚಿಂತಕರಿಗೆ ಜನ್ಮವಿತ್ತಿದೆ. ಆಫ್ರಿಕಾ, ಏಷ್ಯಾ, ಯುರೋಪ್ ಮತ್ತು ಉತ್ತರ ಅಮೆರಿಕದ ವಿಶ್ವವಿದ್ಯಾಲಯಗಳು ಅರಬ್ ಮತ್ತು ಪರ್ಷಿಯನ್ ತತ್ವಜ್ಞಾನಿಗಳ ಶೈಕ್ಷಣಿಕ ಆವಿಷ್ಕಾರಗಳನ್ನು ಕಲಿಸುತ್ತಿರುವುದರಿಂದ ಪಾಶ್ಚಾತ್ಯ ಮತ್ತು ಮುಸ್ಲಿಂ ದೇಶಗಳಲ್ಲಿ ಅವರ ಚಿಂತನೆಗಳು ಇಂದಿಗೂ ಜೀವಂತವಾಗಿವೆ. ಆದಾಗ್ಯೂ, ಈ ಮಧ್ಯಕಾಲೀನ ನವೋದಯ ಪುರುಷರ ಪೈಕಿ ಮಧ್ಯಪ್ರಾಚ್ಯ ಮತ್ತು ಪಶ್ಚಿಮಗಳ ನಡುವಿನ ಬಲವಾದ ಸೇತುವೆಯಾಗಿ ವರ್ತಿಸುವಲ್ಲಿ ಸ್ಪೈನ್ ನ ಬಹುಮುಖ ಪ್ರತಿಭೆ ಅವೆರೋಸ್ -ಯಾನೆ ಇಬ್ನ್ ರುಶ್ದ್ ರಂತೆ ಪಾತ್ರ ವಹಿಸಿದ ಮಂದಿ ಗ್ಲೋಬಲ್ ಸೌತ್‌ನಲ್ಲಿ ಬಹಳ ಅಪರೂಪವಾಗಿ ಮಾತ್ರ ಕಂಡು ಬರುತ್ತಾರೆ. ವಾಸ್ತವದಲ್ಲಿ, ಅಂತಹ ಅಂತರ್ ಸಾಂಸ್ಕೃತಿಕ ಕೊಡುಕೊಳೆಗಳನ್ನು ಜಗತ್ತು ಇಂದು ಪೂರ್ವಾಧಿಕವಾಗಿ ಬಯಸುತ್ತಿದೆ.
ಮುಸ್ಲಿಂ ಪ್ರಾಬಲ್ಯದ ಐಬೇರಿಯನ್ ಪರ್ಯಾಯ ದ್ವೀಪದ ಕಾರ್ಡೋಬಾದಲ್ಲಿ ಕ್ರಿ.ಶ 1126 ರಲ್ಲಿ ಜನಿಸಿದ ಅವೆರೋಸ್(ಇಬ್ನು ರುಶ್ದ್) ಅಲ್- ಅಂದಲುಸ್ (ಸ್ಪೇನ್)ನ ಹೆಸರಾಂತ ನ್ಯಾಯಶಾಸ್ತ್ರಜ್ಞ, ದಾರ್ಶನಿಕ ಮತ್ತು ವೈದ್ಯರಾಗಿದ್ದರು. ಮುಸ್ಲಿಮರ ಆಳ್ವಿಕೆಯಲ್ಲಿದ್ದ ಈ ಜಾಗವನ್ನು ಮುಂದೆ ಕ್ರೈಸ್ತರು ವಶಪಡಿಸಿಕೊಂಡರು. ಮಧ್ಯಯುಗದ ಈ ಪ್ರತಿಭೆ ತನ್ನ ಜೀವನದ ಬಹುಭಾಗವನ್ನು ಅರಿಸ್ಟಾಟಲ್‌ನಂತಹ ಪ್ರಾಚೀನ ಗ್ರೀಕ್ ತತ್ವಜ್ಞಾನಿಗಳ ಬರಹಗಳನ್ನು ಅಧ್ಯಯನ ಮಾಡುವುದರಲ್ಲಿ ತೊಡಗಿಸಿಕೊಂಡರು. ಆ ಸಮಯದ ಮುಸ್ಲಿಂ ಚಿಂತಕರೆಡೆಯಲ್ಲಿ ಅರಿಸ್ಟಾಟಲನ ವಿಚಾರಗಳು ವಿವಾದಾತ್ಮಕವೆಂದು ಪರಿಗಣಿಸಲ್ಪಟ್ಟಿದ್ದರೂ ಅಷ್ಟೇ ಜನಪ್ರಿಯತೆಯನ್ನು ಪಡೆದಿತ್ತು.
ಆತ್ಮದ ಅಮರತ್ವದ ಬಗ್ಗೆ ಅನುಮಾನ ವ್ಯಕ್ತಪಡಿಸುವ, ತತ್ವಶಾಸ್ತ್ರವನ್ನು ಇಸ್ಲಾಮೇತರ ಸತ್ಯವೆಂದೂ ಜ್ಞಾನದ ಪರಮೋನ್ನತಿಯೆಂದೂ ಚಿತ್ರಿಸುವ ಅವರ ನಿಲುವುಗಳು ಬಹಳ ವಿವಾದಗಳನ್ನು ಎಳೆದು ತಂದಿತ್ತು. ಅದೇವೇಳೆ, ಇಬ್ನುರುಶ್ದರ ಈ ವಿಚಾರಗಳು ಕ್ರಿಶ್ಚಿಯನ್ ಮತ್ತು ಯಹೂದಿ ಚಿಂತಕರ ಕುತೂಹಲ ಕೆರಳಿಸಿತ್ತು. ತಮ್ಮ ಧರ್ಮಗಳು ತತ್ತ್ವಶಾಸ್ತ್ರದೊಂದಿಗೆ ತೋರಿಸುತ್ತಾ ಬಂದಿದ್ದ ಅನುಸಂಧಾನದ ರೀತಿಗಳನ್ನು ಬದಲಾಯಿಸಲು ಅವರಿಗೆ ಇದು ಪ್ರೇರಣೆ ನೀಡಿತು. ಆದರೆ ಇಬ್ನುರುಶ್ದರು ಹೊಂದಿದ್ದಾರೆನ್ನಲಾಗುವ ಸೂಕ್ಷ್ಮವಾದ ವಿಶ್ವಾಸ ವೈರುಧ್ಯಗಳ ಕಾರಣದಿಂದ ಅವರಿಗೆ ಮುಸ್ಲಿಂ ಸಾಂಪ್ರದಾಯಿಕ ವಿದ್ವಾಂಸರ ನಡುವೆ ತಕ್ಕ ಮನ್ನಣೆ ಸಿಗಲಿಲ್ಲ.
ಅರಿಸ್ಟಾಟಲ್ ಮತ್ತು ಅವನ ಪೂರ್ವಿಕರು ತಲುಪಿದ ತೀರ್ಮಾನಗಳನ್ನು ಆಧಾರವಾಗಿಟ್ಟುಕೊಂಡು ಹಡೆದ ಜಾತ್ಯತೀತ ವೈಚಾರಿಕತೆಯೊಂದಿಗೆ ಇಸ್ಲಾಂ ಧರ್ಮದ ನಂಬಿಕೆ ಆಧಾರಿತ ವಿಷಯಗಳನ್ನು ಇಬ್ನುರುಶ್ದ್ ಸಮನ್ವಯಗೊಳಿಸಲು ಪ್ರಯತ್ನಿಸಿದರು. ಇದು ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ಇದರಿಂದ ಅವರಿಗೆ ಸ್ನೇಹಿತರು ಮತ್ತು ವಿರೋಧಿಗಳು ಧಾರಾಳವಾಗಿ ಹುಟ್ಟಿಕೊಂಡರು. ಒಂದೆಡೆ, ಪ್ರಾಚೀನ ಗ್ರೀಕರ ಬರಹಗಳ ಬಗ್ಗೆ ಇಬ್ನುರುಶ್ದ್ ರ ಒಳನೋಟಗಳು ಅಲ್ ಮುಹಾದ್ ಆಳ್ವಿಕೆಯ ಸಂಶೋಧನಾ ಕೌತುಕದ ನಾಯಕ ಅಬು ಯಾಕೂಬ್ ಯೂಸುಫ್ ರನ್ನು ಆಕರ್ಷಿಸಿದವು. ಹಾಗೆ ಅವರು ದರ್ಬಾರಿನ ವೈದ್ಯರಾಗಿ ನೇಮಕಗೊಂಡರು. ಮತ್ತೊಂದೆಡೆ, ಈ ಪ್ರದೇಶದ ಸಂಪ್ರದಾಯವಾದಿಗಳು ಇಬ್ನುರುಶ್ದ್ ರ ಪಾಶ್ಚಾತ್ಯ-ಬಣ್ಣದ ವಿರೋಧಾಭಾಸದ ಆಶಯಗಳನ್ನು ವಿರೋಧಿಸಿದರು.
ಪರ್ಷಿಯಾದ ಇಬ್ನು ಸೀನಾ, ಮಧ್ಯ ಏಷ್ಯಾದ ಅಲ್-ಫರಾಬಿ, ಅದೇ ರೀತಿ ಇಬ್ನು ರುಶ್ದ್ ಗೂ ಹಿಂದಿನ ಹಲವು ದಾರ್ಶನಿಕರ ಚಿಂತನೆಗಳಿಗೆ ಕೂಡಾ ಇದೇ ರೀತಿಯ ಸವಾಲುಗಳನ್ನು ಎದುರಾಯಿತು. ಪರ್ಷಿಯನ್ ಧರ್ಮಶಾಸ್ತ್ರಜ್ಞ ಅಲ್-ಗಝಾಲಿ ಮತ್ತು ಇತರ ಸಮಕಾಲೀನರು ಅವಿಸೆನ್ನಾ, ಅಲ್-ಫರಾಬಿ ಮತ್ತವರ ಸಂಗಡಿಗರ ಬುದ್ಧಿಮತ್ತೆಯನ್ನು ಶ್ಲಾಘಿಸಿದ್ದರು. ಆದರೆ ಪ್ಲೇಟೋನಂತಹ ಮುಸ್ಲಿಮೇತರ ತತ್ವಜ್ಞಾನಿಗಳ ಮೇಲೆ ಅವರು ತೋರಿಸುತ್ತಿದ್ದ ಬೇಷರತ್ ಆಶ್ರಯ ಧಾರ್ಮಿಕವಾಗಿ ಸರಿಯಲ್ಲ ಎಂದು ಟೀಕಿಸಿದರು. ಈ ಖಂಡನೆಯು ಮುಂದಿನ ಶತಮಾನಗಳಲ್ಲಿ ಮಧ್ಯಪ್ರಾಚ್ಯದಲ್ಲಿ ಅವಿಸೆನ್ನಾ ಮತ್ತು ಅಲ್-ಫರಾಬಿಯ ಪ್ರತಿಷ್ಠೆಯನ್ನು ಕಳಂಕಿತಗೊಳಿಸಿತು.
ಅವಿಸೆನ್ನಾ ಮತ್ತು ಅಲ್ ಫಾರಾಬಿ ತತ್ವಗಳಲ್ಲಿನ ಪ್ರತಿಯೊಂದು ಅಂಶಗಳ ಜನ್ಮ ಜಾಲಾಡುತ್ತ ಅಲ್ ಗಝಾಲಿ ಕ್ರಿ.ಶ 1111 ರಲ್ಲಿ ಅತ್ಯಂತ ಕಟುವಾದ ಟೀಕೆಗಳನ್ನು “ತಹಾ ಫುತುಲ್ ಫಲಾಸಿಫ” ಎಂಬ ಗ್ರಂಥದ ಮೂಲಕ ಮಂಡಿಸಿದರು. ಇದರ ಪರಿಣಾಮವಾಗಿ ಅವಿಸೆನ್ನಾ ಫಾರಾಬಿ ರಚನೆಗಳ ವರ್ಚಸ್ಸಿಗೆ ಉಂಟಾದ ಹಿನ್ನಡೆ ಸುಮಾರು ಒಂದು ಸಹಸ್ರಮಾನದಿಂದೀಚೆಗೂ ಮುಂದುವರಿಯುತ್ತಿದೆ. ಕ್ರಿ.ಶ 1989 ರಲ್ಲಿ ಇರಾನಿನ ಸರ್ವೋಚ್ಚ ನಾಯಕ ಅಯತೊಲ್ಲಾ ಖೊಮೇನಿಯು ಸೋವಿಯತ್ ಒಕ್ಕೂಟಕ್ಕೆ ಬರೆದ ಪತ್ರದಲ್ಲಿ ಅವಿಸೆನ್ನಾರನ್ನು ಉಲ್ಲೇಖಿಸಿದ್ದಕ್ಕಾಗಿ ಇರಾನಿನ ವಿದ್ವಾಂಸರು ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು.
ಮಧ್ಯಯುಗದಲ್ಲಿ ಅವರೋಸ್ ತನ್ನದೇ ಆದ ಖಂಡನೆಯೊಂದಿಗೆ ಅಲ್-ಗಝಾಲಿಯ ಸವಾಲುಗಳು ಫಲ್ ಸಫದ ವಿರುದ್ಧ ಉಂಟುಮಾಡಿದ್ದ ಪರಿಣಾಮಗಳನ್ನು ತಗ್ಗಿಸಲು ಪ್ರಯತ್ನಿಸಿದರು: ಕ್ರಿ.ಶ 1180 ರಲ್ಲಿ ವಿರಚಿತವಾದ “ದಿ ಇನ್‌ಕೋಹೆರೆನ್ಸ್ ಆಫ್ ದಿ ಇನ್‌ಕೋಹೆರೆನ್ಸ್,/ತಹಾಫತುಲ್ ತಹಾಫುತ್” ಪಠ್ಯವು ಇಸ್ಲಾಂ ಧರ್ಮವು ತತ್ತ್ವಶಾಸ್ತ್ರವನ್ನು ಪ್ರಮಾಣೀಕರಿಸುತ್ತದೆ ಎಂದು ವಾದಿಸುತ್ತದೆ. ಆದಾಗ್ಯೂ, “ದಿ ಇನ್‌ಕೋಹೆರೆನ್ಸ್ ಆಫ್ ದಿ ಇನ್‌ಕೋಹೆರೆನ್ಸ್”, “ದ ಇನ್‌ಕೋಹೆರೆನ್ಸ್ ಆಫ್ ದಿ ಫಿಲಾಸಫರ್ಸ್” ನಂತೆ ಶಾಶ್ವತ ಪ್ರಭಾವ ಬೀರುವಲ್ಲಿ ವಿಫಲವಾಗಿದೆ. ಕ್ರಿ.ಶ 1195 ರಲ್ಲಿ, ಅಬೂ ಯಾಕೂಬ್ ಯೂಸುಫರ ಉತ್ತರಾಧಿಕಾರಿಯಾಗಿ ಆಡಳಿತದ ಚುಕ್ಕಾಣಿ ಹಿಡಿದ ರಾಜನು ಅಸಹಿಷ್ಣುವಾಗಿದ್ದನು. ಆತ ಖಗೋಳ ವಿಜ್ಞಾನ, ಗಣಿತ ಮತ್ತು ವೈದ್ಯಕೀಯ ಸಂಬಂಧಿತ ಗ್ರಂಥಗಳನ್ನು ಹೊರತುಪಡಿಸಿ ಉಳಿದ ಇಬ್ನು ರುಶ್ದ್ ರ ತಾತ್ವಿಕ ಗ್ರಂಥಗಳನ್ನು ಸುಡಲು ಆಜ್ಞೆ ಹೊರಡಿಸಿದನು. ಮೂರು ವರ್ಷಗಳ ಬಳಿಕ ಮರಾಕೆಶ್ ಎಂಬಲ್ಲಿ ಅವರು ನಿಧನರಾದರು.
ಜೀವಿತಾವಧಿಯಲ್ಲಿ ತುಂಬಾ ದುಃಖವನ್ನು ಕೊಟ್ಟ ಇಬ್ನ ರುಶ್ದ್‌ರ ತಾತ್ವಿಕ ಗ್ರಂಥಗಳು ಅವರ ಮರಣಾನಂತರ ಉತ್ತಮ ಪರಿಣಾಮವನ್ನು ಕೊಡಲಾರಂಭಿಸಿದವು. ಪಾಶ್ಚಾತ್ಯ ದಾರ್ಶನಿಕರು ಇಬ್ನುರುಶ್ದ್ ರನ್ನು ಇಷ್ಟಪಡಲು ಅದೇ ಗ್ರಂಥಗಳು ಕಾರಣವಾದವು. ಅರೇಬಿಕ್‌ನಿಂದ ಲ್ಯಾಟಿನ್ ಭಾಷೆಗೆ ಅನುವಾದಿಸಲ್ಪಟ್ಟ ಅವರ ಬರಹಗಳು ಮಧ್ಯಯುಗದಲ್ಲಿ ಕ್ರೈಸ್ತಪ್ರಪಂಚದ ಬಹುಭಾಗವನ್ನು ಪ್ರಭಾವಿಸಿದವು.
ನ್ಯಾಯಶಾಸ್ತ್ರಜ್ಞ, ತತ್ವಜ್ಞಾನಿ ಮತ್ತು ದೇವತಾಶಾಸ್ತ್ರಜ್ಞ, ಪಾಶ್ಚಿಮಾತ್ಯ ಚಿಂತನೆ ಮತ್ತು ಕ್ಯಾಥೊಲಿಕ್ ಚರ್ಚನ್ನು ರೂಪಿಸಿದ ಥಾಮಸ್ ಅಕ್ವಿನಾಸ್ ನಂತಹ ವ್ಯಕಿಗಳು ಇಬ್ನ್ ರುಶ್ದರ ಅಭಿಮಾನಿಗಳಾಗಿ ಮಾರ್ಪಟ್ಟರು. ಇಬ್ನುರುಶ್ದರ ಮುಸ್ಲಿಮೇತರ ವಿದ್ಯಾರ್ಥಿಗಳಲ್ಲಿ ಮತ್ತೊಬ್ಬನಾದ ಸ್ಪೇನ್ ನ ಮೈಮೋನೈಡ್ಸ್, ಅವೆರ್ರೋಸ್/ಇಬ್ನುರುಶ್ದ್ ಚಿಂತನೆಗಳನ್ನು ಯಹೂದಿ ತತ್ವಶಾಸ್ತ್ರಕ್ಕೆ ಸಂಯೋಜಿಸಿದ. ಇಂದು, ಬೌಲ್ಡರ್‌ನ ಕೊಲೊರಾಡೋ ವಿಶ್ವವಿದ್ಯಾಲಯದ ತತ್ತ್ವಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾಗಿರುವ ರಾಬರ್ಟ್ ಪಾಸ್ನೌ ಇಬ್ನುರುಶ್ದ್ ರನ್ನು “ನಮಗೆ ಆಧುನಿಕ ತತ್ವಶಾಸ್ತ್ರವನ್ನು ನೀಡಿದ ಇಸ್ಲಾಮಿಕ್ ವಿದ್ವಾಂಸ” ಎಂದು ಬಣ್ಣಿಸುತ್ತಾರೆ.
ಧಾರ್ಮಿಕ ಕಾನೂನಿನ ವಿದ್ವಾಂಸರೆಂಬ ನೆಲೆಯಲ್ಲಿ ಹೊರಹೊಮ್ಮಿದ ಅವೆರೋಸ್ ಸಾಧನೆಗಳು ಪಶ್ಚಿಮದಲ್ಲಿ ಗಮನ ಸೆಳೆದದ್ದು ಕಡಿಮೆ. ಕೊರ್ಡೋಬಾದಲ್ಲಿ ಮುಖ್ಯ ನ್ಯಾಯಾಧೀಶರಾಗಿ ಸೇವೆ ಸಲ್ಲಿಸುತ್ತಿರುವಾಗ, ಇಬ್ನುರುಶ್ದ್ ಸುನ್ನಿ ಇಸ್ಲಾಂ ನಲ್ಲಿರುವ ನಾಲ್ಕು ಸ್ಕೂಲ್ ಆಫ್ ಥಾಟ್ಸ್/ ಮದ್ಸ್ ಹಬ್ ಗಳನ್ನು ವಿವರಿಸುತ್ತಾ “The Distinguished Jurist’s Primer” (ಬಿದಾಯತುಲ್ ಮುಜ್ ತಹಿದ್) ಅನ್ನು ಬರೆಯುತ್ತಾರೆ. ಯುದ್ಧ, ಪಿತ್ರಾರ್ಜಿತ ಹಕ್ಕು, ವಿವಾಹ ಮತ್ತು ವಿಚ್ಛೇದನದಂತಹ ವಿಷಯಗಳಲ್ಲಿನ ಇಸ್ಲಾಂ ಧರ್ಮದ ವಿಭಿನ್ನ ಮಾರ್ಗಸೂಚಿಗಳನ್ನು ನ್ಯಾಯಾಧೀಶರು ಹೇಗೆ ಪ್ರಯೋಗಶೀಲಗೊಳಿಸಬಹುದು ಎಂಬುವುದರ ಕುರಿತು ಅವರು ಇದರಲ್ಲಿ ಪ್ರತಿಪಾದಿಸಿದ್ದಾರೆ. ಮುಸ್ಲಿಂ ಪ್ರಪಂಚ ಸದ್ರಿ ಗ್ರಂಥವನ್ನು ಅತ್ಯಂತ ಅಧಿಕೃತ ಕಾನೂನು ದಾಖಲೆಗಳಲ್ಲಿ ಒಂದಾಗಿ ಅಂಗೀಕರಿಸಿದೆ.
ಇಬ್ನುರುಶ್ದರ ಬಗೆಗಿನ ಮಧ್ಯಪ್ರಾಚ್ಯ ಮತ್ತು ಪಾಶ್ಚಿಮಾತ್ಯ ಗ್ರಹಿಕೆಗಳ ಅಂತರವನ್ನು ಎರಡೂ ಕಡೆಯ ವಿದ್ವಾಂಸರು ಎತ್ತಿ ತೋರಿಸುವ ಪುಸ್ತಕಗಳೇ ವಿವರಿಸಿ ಕೊಡುತ್ತವೆ. ಯುರೋಪ್ ಮತ್ತು ಉತ್ತರ ಅಮೆರಿಕದ ಶಿಕ್ಷಣ ತಜ್ಞರು “ದಿ ಇನ್‌ಕೋಹೆರೆನ್ಸ್ ಆಫ್ ದಿ ಇನ್‌ಕೋಹೆರೆನ್ಸ್,”(ತಹಾಫತುಲ್ ತಹಾಫುತ್), “ದಿ ಡೆಸಿಸಿವ್ ಟ್ರೀಟೈಸ್”(ಫಸ್ಲುಲ್ ಮಖಾನ್) ನಂತಹ ತತ್ವಚಿಂತನೆಗಳನ್ನು ಉಣಬಡಿಸುವ ಕೃತಿಗಳನ್ನು ಕೇಂದ್ರೀಕರಿಸಿ ವಿಶ್ಲೇಷಿಸುತ್ತಾರೆ. ಆದರೆ “ದಿ ಡಿಸ್ಟಿಂಗ್ವಿಶ್ಡ್ ಜ್ಯೂರಿಸ್ಟ್ಸ್ ಪ್ರೈಮರ್” (ಬಿದಾಯತುಲ್ ಮುಜ್ ತಹಿದ್) ನ ಆಶ್ರಯಯೋಗ್ಯ ಇಂಗ್ಲಿಷ್ ಅನುವಾದ ಮೂಡಿಬಂದದ್ದು ಪಾಕಿಸ್ತಾನಿ ಪ್ರಾಧ್ಯಾಪಕರಿಂದ. ಪಶ್ಚಿಮವು ಅವೆರೋಸ್ ರನ್ನು ಅರಿಸ್ಟಾಟಲಿಯನ್ ತತ್ವಜ್ಞಾನಿ ಎಂದು ಅರ್ಥೈಸಿದರೆ ಮುಸ್ಲಿಂ ಜಗತ್ತು ಅವರನ್ನು ಧಾರ್ಮಿಕ ಕಾನೂನಿನ ಪರಿಣಿತರಾಗಿ ನೋಡುತ್ತದೆ.
“ತಹಾಫತುಲ್ ಫಲಾಸಫ” ಮುಸ್ಲಿಮರೆಡೆಯಲ್ಲಿ ಇಬ್ನುರುಶ್ದರ ತಾತ್ವಿಕ ತೀರ್ಮಾನಗಳ ಬಗೆಗಿನ ಉಪೇಕ್ಷೆ ಉಂಟುಮಾಡಿದೆ ಮತ್ತು ಬೆರಳೆಣಿಕೆಯಷ್ಟು ಪಾಶ್ಚಿಮಾತ್ಯ ಮುಸ್ಲಿಮೇತರ ತತ್ತಜ್ಞಾನಿಗಳು ಮಾತ್ರ ಅವರ ನ್ಯಾಯಶಾಸ್ತ್ರದ ಬರಹಗಳಲ್ಲಿ ಆಸಕ್ತಿ ವಹಿಸಿದ್ದಾರೆ. ಅದೇನೇ ಇದ್ದರೂ ಪೂರ್ವ ಮತ್ತು ಪಶ್ಚಿಮಗಳ ನಡುವಿನ ವಿಭಜನೆಯನ್ನು ನಿವಾರಿಸಬೇಕೆನ್ನುವ ತನ್ನ ಜೀವನದಗುರಿಯನ್ನು ಸಾಧಿಸಲು ಇಬ್ನುರುಶ್ದರ ಕೃತಿಗಳಿಗೆ ಸಾಧ್ಯವಾಗಿದೆ ಎನ್ನುವುದು ಮಾತ್ರ ಸತ್ಯ. ಇಬ್ನುರುಶ್ದರಂತೆಯೇ, ಅಲ್-ಫರಾಬಿ ಮತ್ತು ಇಬ್ನುಸೀನಾ ಭೌತಶಾಸ್ತ್ರದಿಂದ ಸಂಗೀತದ ವರೆಗಿನ ವಿವಿಧ ಕ್ಷೇತ್ರಗಳಲ್ಲಿ ತಜ್ಞತೆ ಪಡೆದಿದ್ದಾರೆ. ಆದಾಗ್ಯೂ, ಇಮಾಂ ಗಝಾಲಿಯವರು ವೈರುಧ್ಯಾತ್ಮಕವೆಂದು ಬಗೆದ ಪಾಶ್ಚಿಮಾತ್ಯ ತತ್ತ್ವಶಾಸ್ತ್ರ ಮತ್ತು ಧಾರ್ಮಿಕ ಕಾನೂನು ವಿಷಯಗಳಲ್ಲಿ ಇಬ್ನು ರುಶ್ದ್ ರವರಿಗಿದ್ದ ವಿಶೇಷ ಪರಿಣತಿ ಅವರನ್ನು ಇತರರಿಗಿಂತ ವಿಭಿನ್ನಗೊಳಿಸುತ್ತದೆ. ಮಧ್ಯಪ್ರಾಚ್ಯ ಮತ್ತು ಪಶ್ಚಿಮದ ವಿದ್ವಾಂಸರು ವಿಭಿನ್ನ ಕಾರಣಗಳಿಗಾಗಿ ಇಬ್ನುರುಶ್ದರನ್ನು ಕೊಂಡಾಡುತ್ತಾರೆ. ಆದರೆ ಇಬ್ನುರುಶ್ದರ ಬುದ್ಧಿವಂತಿಕೆ ಮತ್ತು ಸಾಧನೆಗಳ ಬಗ್ಗೆ ಯಾರಿಗೂ ಎರಡು ಮಾತಿಲ್ಲ. ಎರಡು ನಾಗರಿಕತೆಗಳ ಎಡೆಯಲ್ಲಿ ಬೆಸುಗೆ ಸಾಧಿಸಲು ಅವರು ನಡೆಸಿದ ಪ್ರಯತ್ನವನ್ನು ಮಧ್ಯಪೌರಾತ್ಯ-ಪಾಶ್ಚಿಮಾತ್ಯ ಕಡೆಯವರೆಲ್ಲಾ ಶ್ಲಾಘಿಸಲೇಬೇಕು.
ಮುಂದಿನ ದಿನಗಳಲ್ಲಿ ಮೊರಾಕೊ ಮತ್ತು ಸ್ಪೇನ್ ಆಗಿ ವಿಕಾಸಗೊಂಡ ಹಳೆಯ ಮಗಾರಿಬಿನ ಭೂಮಿಯಲ್ಲಿ ವಾಸಿಸುತ್ತಿದ್ದ ಇಬ್ನುರುಶ್ದ್ ರ ಒಂದು ಕಾಲು ಪಶ್ಚಿಮದಲ್ಲಿ ಮತ್ತು ಮತ್ತೊಂದು ಕಾಲು ಮುಸ್ಲಿಂ ಜಗತ್ತಿನಲ್ಲಿ ಇಟ್ಟಂತಿತ್ತು. ಪಾಶ್ಚಿಮಾತ್ಯ ಮತ್ತು ಮಧ್ಯಪ್ರಾಚ್ಯ ದೇಶಗಳ ನಡುವೆ ಸಂಘರ್ಷಗಳು ಮತ್ತು ಮಾನವೀಯತೆಯ ಹಿಂಜರಿತ ಬೆಳೆಯುತ್ತಿರುವ ಸಮಕಾಲೀನ ಸಂದರ್ಭದಲ್ಲಿ ಅವೆರೋಸ್ ಶತಮಾನಗಳ ಹಿಂದೆ ನೇಯ್ದ ಬೌದ್ಧಿಕ ಕೊಡುಕೊಳೆಯ ಮಾದರಿಗಳಿಗೆ ಪೂರ್ವಾಧಿಕ ಪ್ರಾಮುಖ್ಯತೆಯಿದೆ.
ಆಫ್ರಿಕಾ, ಏಷ್ಯಾ, ಯುರೋಪ್ ಮತ್ತು ಉತ್ತರ ಅಮೆರಿಕಾದಾದ್ಯಂತ ಇರುವ ಬುದ್ಧಿಜೀವಿಗಳು ಮಾರ್ಗದರ್ಶನಕ್ಕಾಗಿ ಸುದೀರ್ಘ ಕಾಲ ಅವರೋಸ್‌ರನ್ನು ಅವಲಂಬಿಸಿದ್ದರು. ಇಂದು ಅವರ ಹೆಸರಿನಲ್ಲಿ ಕಾರ್ಡೋಬಾದಲ್ಲಿ ‘ನ್ಯೂ ಅವೆರೋಸ್ ಆಸ್ಪತ್ರೆ’ ಕಾರ್ಯಾಚರಿಸುತ್ತಿದೆ. ಜರ್ಮನಿಯ ಅರಬ್ ಬುದ್ಧಿಜೀವಿಗಳು ‘ಇಬ್ನ್ ರುಶ್ದ್ ಫಂಡ್ ಫಾರ್ ಫ್ರೀಡಮ್ ಆಫ್ ಥಾಟ್’ ಎಂಬ ಸಂಘಟನೆಯನ್ನು ಮುನ್ನಡೆಸುತ್ತಿದ್ದಾರೆ. ಪಶ್ಚಿಮವನ್ನು ಮಧ್ಯಪ್ರಾಚ್ಯದಿಂದ ಬೇರ್ಪಡಿಸುವ ಸಾಂಸ್ಕೃತಿಕ ಮತ್ತು ಭೌಗೋಳಿಕ ರಾಜಕೀಯ ವಿಭಜನೆಗಳನ್ನು ನಿವಾರಿಸಲು ಯಾವುದೇ ಐತಿಹಾಸಿಕ ವ್ಯಕ್ತಿಯಿಂದ ಸಾಧ್ಯವಾಗದು. ಆದರೆ ಅವರೋಸ್ ರವರ ಶ್ರೀಮಂತ ಪರಂಪರೆ, ಅವರ ಮುಸ್ಲಿಂ ಮತ್ತು ಮುಸ್ಲಿಮೇತರ ಉತ್ತರಾಧಿಕಾರಿಗಳಿಗೆ, ಸೌಹಾರ್ದವನ್ನು ಸಾಧಿಸುವ ಬಾಗಿಲನ್ನು ತೆರೆದಿಡಬಲ್ಲದು.
ಇಂಗ್ಲಿಷ್ ಮೂಲ: Austin Bodetti
ಕನ್ನಡಕ್ಕೆ: ಎ.ಕೆ.ಫೈಸಲ್ ಗಾಳಿಮುಖ
ABOUT THE AUTHOR
Austin Bodetti
ಆಸ್ಟಿನ್ ಬೋಡೆಟ್ಟಿ ವಿಶಾಲ ಮಧ್ಯಪ್ರಾಚ್ಯ ಪ್ರದೇಶದಲ್ಲಿ ಐದು ವರ್ಷಗಳ ಕಾಲ ಅಧ್ಯಯನಕ್ಕಾಗಿ ವಿನಿಯೋಗಿಸಿದ್ದಾರೆ. ವೃತ್ತಿಯಲ್ಲಿ ಪತ್ರಕರ್ತನಾಗಿರುವ ಇವರು ಅಲ್ ಖಾಯ್ದಾ, ತಾಲಿಬಾನ್ ನ ಶಸ್ತ್ರಧಾರಿಗಳ ಸಂದರ್ಶನ ನಡೆಸಿದ್ದಾರೆ. ಇರಾಕ್ ಮತ್ತು ದಕ್ಷಿಣ ಸುಡಾನಿನಲ್ಲಿ ವರದಿಗಾರಿಕೆ ನಡೆಸಿದ್ದು ದ ಡೈಲಿ ಬೀಸ್ಟ್, ಯುಎಸ್‌ಎ ಟುಡೇ, ವೈಸ್, ವೈರ್ಡ್ ನಂಥಾ ಪತ್ರಿಕೆಗಳಲ್ಲಿ ಬರೆದಿದ್ದಾರೆ. ಇತ್ತೀಚೆಗೆ, ಫುಲ್ ಬ್ರೈಟ್ ಸ್ಕಾಲರ್ ಆಗಿ ಮೊರೊಕ್ಕೊ ವಾಸ ಮಾಡಿದ್ದಾರೆ. ಅರೇಬಿಕ್ ಮತ್ತು ಪರ್ಶಿಯನ್ ಭಾಷೆಗಳಲ್ಲಿ ಜ್ಞಾನವನ್ನು ಹೊಂದಿದ್ದಾರೆ ಬೋಡೆಟ್ಟಿ.