ಭಾರತದಲ್ಲಿನ ಇಸ್ಲಾಂ ಧರ್ಮವನ್ನು 16ನೇ ಶತಮಾನದ ಪರ್ಷಿಯನ್ ಮೊಘಲ್ ಸಾಮ್ರಾಜ್ಯದ ಉಪ-ಉತ್ಪನ್ನವೆಂದು ಅನೇಕರು ಪರಿಗಣಿಸಿದ್ದಾರೆ. ಆದರೆ ಆಗ್ರಾದಲ್ಲಿನ ತಾಜ್ ಮಹಲ್ ಮತ್ತು ದೆಹಲಿ ಜುಮಾ ಮಸೀದಿಯ ಹಿಂದಿನ ಗತಕಾಲ ಇತಿಹಾಸವನ್ನು ಪರಿಶೋಧಿಸಿದರೆ ಇಸ್ಲಾಂ ಧರ್ಮವು ಭಾರತದ ಇತರ ಎಲ್ಲ ಭಾಗಗಳಲ್ಲೂ ಬೇರುಗಳನ್ನು ಹೊಂದಿತ್ತು ಎಂಬುದು ಸಾಬೀತಾಗುತ್ತದೆ.
ಭಾರತದಲ್ಲಿ ಇಸ್ಲಾಂ ಧರ್ಮ ಹರಡುವಿಕೆಯ ಹಿಂದೆ ಮೊಘಲರು ಇದ್ದಾರೆ ಎಂಬ ವಾದವು ತೀವ್ರ ಬಲಪಂಥೀಯ ಸೃಷ್ಠಿಯಾಗಿದೆ. ಇದು ದಕ್ಷಿಣ ಏಷ್ಯಾದಲ್ಲಿ ಇಸ್ಲಾಂ ಧರ್ಮವು ಒಂದು ಹೊಸ ವಿದ್ಯಮಾನವಾಗಿದೆ ಮತ್ತು ದೇಶದ ಉತ್ತರದಿಂದ ಪೂರ್ವಕ್ಕೆ ಹರಡಿದೆ ಎಂಬ ವ್ಯಾಪಕ ತಪ್ಪು ಕಲ್ಪನೆಗಳಿಗೆ ಕಾರಣವಾಗಿದೆ.
7ನೇ ಶತಮಾನದಲ್ಲಿ ಹಿಂದೂ ಮಹಾಸಾಗರ ಮಾರ್ಗ ಮೂಲಕ ವ್ಯಾಪಾರ ವಹಿವಾಟಿನಿಂದಾಗಿ ಇಸ್ಲಾಂ, ಗುಜರಾತ್-ಕೊಂಕಣ ಕರಾವಳಿ ಮತ್ತು ಮಲಬಾರ್ ಕರಾವಳಿಯನ್ನು ತಲುಪಿತೆಂಬ ಪುರಾವೆಗಳು ಲಭ್ಯವಿದೆ. ದೇಶದ ದಕ್ಷಿಣ ಭಾಗದಲ್ಲಿರುವ ಕೇರಳದ ಚೇರಮಾನ್ ಜುಮಾ ಮಸೀದಿ ವಿಶ್ವದ ಅತ್ಯಂತ ಹಳೆಯ ಮಸೀದಿಗಳಲ್ಲಿ ಒಂದಾಗಿದೆ. ಈ ಮಸೀದಿಯು ಕ್ರಿ.ಶ 629 ರಲ್ಲಿ ನಿರ್ಮಿಸಲ್ಪಟ್ಟಿತು. ಇದಾದ
ಕೆಲವು ವರ್ಷಗಳ ನಂತರ ತಮಿಳುನಾಡಿನಲ್ಲಿ ಮತ್ತೊಂದು ಮಸೀದಿಯನ್ನು ನಿರ್ಮಿಸಲಾಯಿತು ಎಂದು ಇಬ್ನು ಬತೂತಾ ಹೇಳುತ್ತಾರೆ. ಇದು ಪಾಲಿಯಾ ಜುಮಾ ಮಸೀದಿಯಾಗಿದೆ.
ಇಬ್ನು ಬತೂತಾ ಮುಸ್ಲಿಂ ಆಗಿದ್ದು, ಅವರು ಭಾರತದಾದ್ಯಂತ ಪ್ರವಾಸ ಮಾಡಿ ದೆಹಲಿ ಸುಲ್ತಾನರಲ್ಲಿ ಖಾಝಿಯಾಗಿ (ನ್ಯಾಯಾಧೀಶರಾಗಿ) ಸೇವೆ ಸಲ್ಲಿಸಿದವರಾಗಿದ್ದಾರೆ.
ಈ ಲೇಖನವು ಭಾರತದ ಇಸ್ಲಾಮಿಕ್ ಚರಿತ್ರೆಗಳಲ್ಲಿ ಪರಾಮರ್ಶಿಸದೆ ಹೋದ ಗುಜರಾತಿನ ಕೆಲವು ಭಾಗಗಳನ್ನು ತೆರೆದಿಡುತ್ತದೆ. ಗುಜರಾತ್ ಎಂಬುದು ಭಾರತದ ಪಶ್ಚಿಮ ಭಾಗದಲ್ಲಿರುವ ಅರೇಬಿಯನ್ ಸಮುದ್ರದ ಗಡಿಯಲ್ಲಿರುವ ಒಂದು ರಾಜ್ಯವಾಗಿದೆ. ಶತಮಾನಗಳ ವಲಸೆ ಪ್ರಕ್ರಿಯೆಯು ಈ ಪ್ರದೇಶವನ್ನು ವಿವಿಧ ಸಂಸ್ಕೃತಿಗಳ ಸಂಗಮ ಭೂಮಿಯನ್ನಾಗಿ ಮಾಡಿದೆ. ಅಲ್ಲಿನ ವಾಸ್ತುಶಿಲ್ಪದಲ್ಲಿ ಜನಾಂಗೀಯ ಮತ್ತು ಭಾಷಾ ವ್ಯತ್ಯಾಸಗಳು ಸ್ಪಷ್ಟವಾಗಿ ಕಂಡುಬರುತ್ತವೆ. ಇದರ ಭಾಷಾ ಸಂಸ್ಕೃತಿ ಪರ್ಷಿಯನ್, ಅರೇಬಿಕ್, ಸ್ವಾಹಿಲಿ ಮತ್ತು ಸಂಸ್ಕೃತದೊಂದಿಗೆ ಹೆಣೆದುಕೊಂಡಿದೆ.
ಹಿಂದೆ, ಗುಜರಾತಿಗಳಿಗೆ ಹಿಂದೂ ಮಹಾಸಾಗರ ಮಾರ್ಗವಾಗಿ ನಡೆಯುವ ವ್ಯಾಪಾರ ವಹಿವಾಟಿನ ಮೇಲೆ ದೊಡ್ಡ ಪ್ರಾಬಲ್ಯವಿತ್ತು. ಈಸ್ಟ್ ಇಂಡಿಯಾ ಕಂಪನಿಯ ಉದಯದ ಮೊದಲು, ಗುಜರಾತಿಗಳು ಹಿಂದೂ ಮಹಾಸಾಗರದಾದ್ಯಂತ ವ್ಯಾಪಾರದಲ್ಲಿ ಪ್ರಮುಖ ಕೊಂಡಿಗಳಾಗಿದ್ದರು. ಅವರು ಅಲ್ಲಿ ತಮ್ಮದೇ ಆದ ಸ್ಥಾನವನ್ನು ಗಿಟ್ಟಿಸಿಕೊಂಡಿದ್ದರು.
ಗುಜರಾತ್‌ನ ವ್ಯಾಪಾರ ಸಂಸ್ಕೃತಿಯ ಬಗ್ಗೆ ಹೆಚ್ಚು ವಿಸ್ತಾರವಾದ ಲಿಖಿತ ದಾಖಲೆಯ ಕೊರತೆಗೆ ಕಾರಣ ಅವರ ವ್ಯಾಪಾರ ರಹಸ್ಯಗಳನ್ನು ಇತರ ಸ್ಥಳೀಯರು ಅರ್ಥಮಾಡಿಕೊಳ್ಳದಂತೆ ತಡೆಯುವ ಗುರಿಯಾಗಿರಬಹುದು ಎಂದು ಇತಿಹಾಸಕಾರರು ಊಹಿಸಿದ್ದಾರೆ.
ಯಮನಿನ ಹಡಗು ನಿರ್ಮಾಣಕಾರರಾದ ಝೊರಾಷ್ಟ್ರಿಯನ್ ಪಾರ್ಸಿಗಳು ಹಾಗು ಇಸ್ಮಾಯಿಲಿ ಶಿಯಾಗಳು ಗುಜರಾತ್‌ನ ನಿಯಮಿತ ಉದ್ಯೋಗಿಗಳಾಗಿದ್ದರು. ಇದರ ಪರಿಣಾಮವನ್ನು ಗುಜರಾತ್ ಸಂಸ್ಕೃತಿಯಲ್ಲಿ ಸ್ಪಷ್ಟವಾಗಿ ಕಾಣಲೂಬಹುದು.
ಅರೇಬಿಕ್ ಭೂವಿಜ್ಞಾನಿ ಇಬ್ನು ಹೌಕಲ್ ಅವರ ಪ್ರಕಾರ, ಹಿಂದೂ ರಾಜರಾದ ಕಂಪೈ, ಕಚ್, ಸೈಮೂರ್ ಮತ್ತು ಪಠಾಣ್ ಅವರ ಅಡಳಿತದಡಿಯಲ್ಲಿ ಗುಜರಾತ್‌ನ ನಾಲ್ಕು ಪ್ರಮುಖ ನಗರಗಳಲ್ಲಿ ಮಸೀದಿಗಳಿದ್ದವು.
ವಿಭಜನೆ – ವಿಭಜನಾನಂತರದ ಅವಧಿಯಲ್ಲಿ ಕೋಮು ಉದ್ವಿಗ್ನತೆ ಮತ್ತು ಹಿಂಸಾಚಾರ ಇಲ್ಲಿ ಭುಗಿಲೆದ್ದಿತು. 1950 ರಿಂದ ಹಿಂದೂ-ಮುಸ್ಲಿಂ ಕೋಮು ಗಲಭೆಯಲ್ಲಿ ಹತ್ತಾರು ಸಾವಿರ ಜನರು ಸಾವನ್ನಪ್ಪಿದ್ದಾರೆ.
1992ರ ಬಾಂಬೆ ಗಲಭೆ ಮತ್ತು 2002ರ ಗುಜರಾತ್ ಗಲಭೆಗಳ ಭೀಕರ ಚಿತ್ರಗಳು ಇಂದಿಗೂ ಭಾರತೀಯ ಮುಸ್ಲಿಂ ಸಮುದಾಯದ ಮನಸ್ಸಿನಲ್ಲಿ ಅಚ್ಚೊತ್ತಿ ನಿಂತಿದೆ. ಒಂದೇ ದೇಶದಲ್ಲಿ ವಾಸಿಸುವ ವಿವಿಧ ಜನಾಂಗಗಳೇ ಈ ಅನಾನುಕೂಲತೆಗಳಿಗೆ ಮತ್ತು ವಿಪತ್ತುಗಳಿಗೆಲ್ಲಾ ಹೇತುವಾಗಿದೆ.
ಧಾರ್ಮಿಕ ವಿಷಯಗಳನ್ನು ಎತ್ತಿ ತೋರಿಸುವ ಮೂಲಕ ಜನರಲ್ಲಿ ಕೋಮು ಧ್ರುವೀಕರಣವನ್ನು ಉಂಟುಮಾಡುವಲ್ಲಿ ವಸಾಹತುಶಾಹಿಗೆ ಮಾತ್ರವಲ್ಲ ಪಾತ್ರವಿರುವುದು ಎಂದು ಗುಜರಾತ್ ಇತಿಹಾಸವು ಸಾಬೀತುಪಡಿಸುತ್ತದೆ . ವಸಾಹತುಶಾಹಿ ಪೂರ್ವದಲ್ಲಿ ಘರ್ಷಣೆಗಳು ಇರಲಿಲ್ಲ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ.
ಇತಿಹಾಸಕಾರರು ಧಾರ್ಮಿಕ ಆಯಾಮಗಳನ್ನು ಇತಿಹಾಸದ ಅನೇಕ ಭಾಗಗಳಲ್ಲಿ ಅಸ್ಪಷ್ಟವೆಂದು ವ್ಯಾಖ್ಯಾನಿಸುತ್ತಾರೆ. ಆದಾಗ್ಯೂ, ಹಿಂದುತ್ವ ಸಾರ್ವಜನಿಕ ಪ್ರಜ್ಞೆಯ ಜಾಗೃತಿ ಮತ್ತು ಕೇಸರೀಕರಣದಲ್ಲಿ ವಸಾಹತುಶಾಹಿ ಸಂಪ್ರದಾಯವು ಪ್ರಮುಖ ಪಾತ್ರ ವಹಿಸಿದೆ ಎಂಬುದು ನಿಜ.
ಹೀಗೆ ಇಲ್ಲಿ ಮುಸ್ಲಿಂ ಅಲ್ಪಸಂಖ್ಯಾತರು ಹಿಂಸೆ ಮತ್ತು ಕ್ರೌರ್ಯಕ್ಕೆ ಬಲಿಯಾಗಲು ಪ್ರಾರಂಭಿಸುತ್ತಾರೆ. ‘ಅಪರಿಚಿತರು’ ಮತ್ತು ‘ವಲಸಿಗರು’ ಮುಂತಾದ ವಿಳಾಸಗಳನ್ನು ನೀಡುವ ಮೂಲಕ ಹಿಂದೂ ರಾಷ್ಟ್ರದ ಕಲ್ಪನೆಯನ್ನು ಬಲಪಡಿಸಲಾಯಿತು.
ಈ ಸಿದ್ಧಾಂತವು ಶತಮಾನಗಳಷ್ಟು ಹಳೆಯದಾದ ಮುಸ್ಲಿಂ ಅಸ್ತಿತ್ವ ಮತ್ತು ಗುರುತುಗಳನ್ನು ನಿರಾಕರಿಸಲು ಪ್ರಯತ್ನಿಸುತ್ತಿದ್ದರೂ, ಈ ಅಸ್ತಿತ್ವ ಮತ್ತು ಕೊಡುಗೆಯನ್ನು ಸ್ಥಾಪಿಸುವುದು ಕಷ್ಟವೇನಲ್ಲ.
ಅನೇಕ ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ಅವಶೇಷಗಳಿನ್ನೂ ಜೀವಂತವಾಗಿವೆ. (ನಾವು ತಿನ್ನುವ ಬಿರಿಯಾನಿ ಕೇವಲ ಒಂದು ಉದಾಹರಣೆಯಾಗಿದೆ. ಇದನ್ನು ಇರಾನ್‌ನಿಂದ ವಲಸೆ ಬಂದವರಾಗಿದ್ದಾರೆ ತಂದವರು). ವಾಸ್ತುಶಿಲ್ಪವನ್ನು ಮಾತ್ರ ಪರಿಗಣಿಸುವುದಾದರೆ, ಇತ್ತೀಚಿನ ದಿನಗಳಲ್ಲಿ ಬಲಪಂಥೀಯರು ತಮ್ಮದೆಂದು ಹಕ್ಕು ಮಂಡಿಸುವ ಅನೇಕ ಐತಿಹಾಸಿಕ ಸ್ಮಾರಕಗಳು ಇದಕ್ಕೆ ಉದಾಹರಣೆಯಾಗಿದೆ. ಮೊಘಲ್ ಆಡಳಿತ ಮತ್ತು ಅದಕ್ಕೂ ಮೊದಲು ಗುಜರಾತ್‌ನಲ್ಲಿ ಇಸ್ಲಾಂ ಧರ್ಮ ಅಸ್ತಿತ್ವದಲ್ಲಿತ್ತು ಎಂದು ದೃಢೀಕರಿಸುವ ಕೆಲವು ಐತಿಹಾಸಿಕ ಸ್ಮಾರಕಗಳ ಕುರಿತು ತಿಳಿಯೋಣ.
ಚಾಂಪನೀರ್-ಪಾವಗಡ್ ಪುರಾತತ್ವ ಉದ್ಯಾನವನ
ಚಾಂಪನೀರ್ ಪಾವಗಡ್ ಪುರಾತತ್ವ ಉದ್ಯಾನವನವು ಗುಜರಾತ್‌ನ ಬರೋಡಾದಿಂದ 47 ಕಿ.ಮೀ ದೂರದಲ್ಲಿದೆ. ಈ ಉದ್ಯಾನವನವು ಯುನೆಸ್ಕೋ ವಿಶ್ವ ಪರಂಪರೆಯ ತಾಣವಾಗಿದೆ ಮತ್ತು ಇದನ್ನು 8ನೇ ಶತಮಾನದಲ್ಲಿ ನಿರ್ಮಿಸಲಾಗಿದೆ. ಈ ಐತಿಹಾಸಿಕ ನಗರದ ಹೃದಯ ಭಾಗದಲ್ಲಿ ಚಾಂಪನೀರನ್ನು
ಸುಲ್ತಾನ್ ಮುಹಮ್ಮದ್ ಬಾಗೋಡ ಎಂಬುವನು 16ನೇ ಶತಮಾನದಲ್ಲಿ ನಿರ್ಮಿಸಿದ್ದಾಗಿದೆ . ಇದರ ಸುತ್ತಮುತ್ತಲಿನ ಬೆಟ್ಟಗಳ ಮೇಲೆ ನಿರ್ಮಿಸಲಾದ ಕೋಟೆಯಾಗಿದೆ ಪಾವಗಡ್.
ಗುಜರಾತ್ ಸುಲ್ತಾನರು ತಮ್ಮ ರಾಜಧಾನಿಯನ್ನು ಅಹಮದಾಬಾದ್‌ಗೆ ಸ್ಥಳಾಂತರಿಸುವ ಮೊದಲು, ಚಾಂಪನಿರಾಗಿತ್ತು ಸರ್ಕಾರದ ಕೇಂದ್ರ ಸ್ಥಾನ. ಸಂಕೀರ್ಣವಾಗಿ ವಿನ್ಯಾಸಗೊಳಿಸಲಾದ ಅರಮನೆಗಳು, ಮಸೀದಿ ಮಂದಿರಗಳಾಗಿದ್ದವು ಈ ಸ್ಥಳವನ್ನು ಪ್ರಸಿದ್ಧಿಗೂಳಿಸಿದ್ದು.
ಯಾವುದೇ ಬದಲಾವಣೆಯಿಲ್ಲದೆ ಇಂದಿಗೂ ನೆಲೆನಿಂತಿರುವ ಇಸ್ಲಾಮಿಕ್ ನಗರವೆಂದರೆ ಅದು ಚಾಂಪನೀರ್ ಪಾವಗಡಾಗಿದೆ. ಮೊಘಲರ ಆಗಮನಕ್ಕಿಂತ ಮುಂಚೆಯೇ ನಿರ್ಮಿಸಲಾದ ಈ ನಗರದ ನಿರ್ಮಾಣದ ಹಿಂದೆ ಹಿಂದೂ-ಮುಸ್ಲಿಂ ವಾಸ್ತುಶಿಲ್ಪಿ ಗಳ ಸಂಯೋಜನೆಯನ್ನು ಕಾಣಬಹುದು.
ಐತಿಹಾಸಿಕ ಕಟ್ಟಡದ ಗುಮ್ಮಟಗಳು ಮತ್ತು ಕಮಾನುಗಳಲ್ಲಿ ಈ ಸಂಯೋಜನೆಯು ಬಹಳ ಸ್ಪಷ್ಟವಾಗಿದೆ. ಸಾಮ್ರಾಜ್ಯಗಳ ಆಕ್ರಮಣಕ್ಕೆ ಮುಂಚಿತವಾಗಿ ಭಾರತೀಯ ಪರಿಸ್ಥಿತಿಗಳ ಸಣ್ಣ ಚಿತ್ರಣವನ್ನು ಇಲ್ಲಿ ಚಿತ್ರಿಸಲಾಗಿದೆ.
ಪ್ರತಿ ಸಂಸ್ಕೃತಿಯು ತನ್ನದೇ ಆದ ಭೂಪ್ರದೇಶದಲ್ಲಿ ಒಳಗೂಂಡಿರುವ ಎಲ್ಲಾ ಪ್ರಮುಖ ಧಾರ್ಮಿಕ ಆಯಾಮಗಳ ಪ್ರಕಾರ ವ್ಯಾಖ್ಯಾನಿಸುವ ಸಮಯ. ಚಾಂಪನೀರ್ ಪಾವಗಡ್ ಇಂದಿಗೂ ಒಂದು ತೀರ್ಥಯಾತ್ರಾ ಸ್ಥಳವಾಗಿದೆ.
ಹಿಂದೂಗಳು, ಮುಸ್ಲಿಮರು ಹಾಗು ಇತರ ಧರ್ಮದವರೂ ಇಲ್ಲಿಗೆ ಬರುತ್ತಾರೆ.
ಹಾಸಿರ ಸಮಾಧಿ
ಹಾಸಿರ ಸಮಾಧಿಯು ಕಾರ್ಯನಿರತ ಪ್ರಾಚೀನ ನಗರವಾದ ವಡೋದರಾದಿಂದ ಸ್ವಲ್ಪ ದೂರದಲ್ಲಿದೆ.
ಗುಜರಾತ್‌ನ ಐತಿಹಾಸಿಕ ಸ್ಮಾರಕಗಳನ್ನು ಹೇಗೆ ನಿರ್ಲಕ್ಷಿಸಲಾಯಿತು ಎಂಬುದನ್ನು ಈ ಸಮಾಧಿಯು ಹೇಳುತ್ತದೆ. 1586ರಲ್ಲಿ ಇದನ್ನು ನಿರ್ಮಿಸಲಾಯಿತು.
ಈ ಸ್ಮಾರಕದಲ್ಲಿ ಕುತುಬುದ್ದೀನ್ ಮುಹಮ್ಮದ್ ಖಾನ್ ರವರ ಸಮಾಧಿ ಇದೆ.ಇವರು ಜಹಾಂಗೀರ್‌ನ ಗುರು ಮತ್ತು ಅಕ್ಬರ್‌ನ ಹಿಂಬಾಲಕರಾಗಿದ್ದರು.
ಇತಿಹಾಸದಲ್ಲಿ ಹೆಸರು ಪಡೆದ ಮೊಘಲ್ ಚಕ್ರವರ್ತಿಯ ಏಕೈಕ ಗುರು ಎಂಬ ಪರಿಗಣನೆ ಮಾತ್ರ ಈ ಐತಿಹಾಸಿಕ ಭವನಕ್ಕಿದೆ. ಈ ಸಮಾಧಿ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳು ಒದಗಿಸುವ ಮನಸ್ಸಿನ ಶಾಂತಿಯ ಹಿಂದೆ ಅವನು ತನ್ನ ಜೀವಿತಾವಧಿಯಲ್ಲಿ ನಡೆಸಿದ ಜ್ಞಾನ ಮತ್ತು ಸದ್ಗುಣಗಳ ಪ್ರಸರಣವಾಗಿರಬೇಕು.
ಇಂದು, ಈ ಸ್ಮಾರಕವನ್ನು ನಿರ್ವಹಿಸುತ್ತಿರುವವರು ಬರೋಡಾದ ಇಸ್ಮಾಯಿಲಿ ಶಿಯಾಗಳಾಗಿದ್ದಾರೆ. ಈ ಸ್ಥಳದ ಸೌಂದರ್ಯದಿಂದ ಆಕರ್ಷಿತರಾಗಿ ತಲುಪುವ ಪ್ರವಾಸಿಗರಿಗೆ ಇಲ್ಲಿ ಒಬ್ಬ ಅಥವಾ ಇಬ್ಬರು ಮಾರ್ಗದರ್ಶಿಗಳಿದ್ದಾರೆ. ವಿಪರ್ಯಾಸವೆಂದರೆ, ಮೊಘಲ್ ಸಾಮ್ರಾಜ್ಯವನ್ನು ಅಧ್ಯಯನ ಮಾಡುವವರಿಗೂ ಈ ಐತಿಹಾಸಿಕ ಅವಶೇಷದ ಬಗ್ಗೆ ಹೆಚ್ಚಿನ ತಿಳುವಳಿಕೆ ಇಲ್ಲ.
ಲಕ್ಷ್ಮಿ ವಿಲ್ಲಾಸ್ ಅರಮನೆ
ಲಕ್ಷ್ಮಿ ವಿಲ್ಲಾ ಬರೋಡಾದ ಗೈಕ್ವಾಡ್ ಪಂಥದ ಹಿಂದಿನ ಅರಮನೆಯಾಗಿದೆ. ಈ ರಾಜ ಭೂಮಿಯನ್ನು 18ನೇ ಶತಮಾನದಿಂದ 1945ರ ವರೆಗೆ ಹಿಂದೂ ಗೈಕ್ವಾಡ್ ಪಂಥವು ಆಳಿತು.
ಗೈಕ್ವಾಡ್ ರಾಜ ಸಯೋಜಿ ರಾವ್ ನೇತೃತ್ವದಲ್ಲಿ ಈ ಭೂಮಿ ಯು ಭಾರತದಲ್ಲಿ ವೇಗವಾಗಿ ಅಭಿವೃದ್ದಿಗೊಳ್ಳುತ್ತಿರುವ ಭೂಮಿಗಳಲ್ಲಿ ಒಂದಾಗಿತ್ತು. 1890 ರಲ್ಲಿ ನಿರ್ಮಿಸಲಾದ ಲಕ್ಷ್ಮಿ ವಿಲ್ಲಾ ಇಂಡೋ-ಸೊರಾಷ್ಟ್ರಿಯನ್ ವಾಸ್ತುಶಿಲ್ಪದ ಅತ್ಯುತ್ತಮ ವರ್ಣಚಿತ್ರಗಳಲ್ಲಿ ಒಂದಾಗಿದೆ.
ಇಂಡೋ-ಇಸ್ಲಾಮಿಕ್ ಸಾಂಪ್ರದಾಯಿಕ ನಿರ್ಮಾಣ ವಿಧಾನಗಳನ್ನು ಪರಸ್ಪರ ಸಂಯೋಜಿಸುವ ಮೂಲಕ ವಸಾಹತುಶಾಹಿ ಶಿಲ್ಪಿಗಳು ಇಂತಹ ವಿಧಾನವನ್ನು ಅಭಿವೃದ್ಧಿಪಡಿಸಿದರು.
ಹೂವಿನಿಂದ ಅಲಂಕೃತವಾದ ಕಿಟಕಿ ಚೌಕಟ್ಟುಗಳು, ಸ್ವರ್ಣದ ಹಾಗೆ ಹೊಳೆಯುವ ಮೊಸಾಯಿಕ್ಸ್, ದೂಡ್ಡ ದರ್ಬಾರ್ ಮತ್ತು ಹಾತಿ ಹಾಲ್ (ಹಾತಿ-ಆನೆ) ಈ ಅರಮನೆಯ ಆಕರ್ಷಣೆಯಾಗಿದೆ. ವಿಲಿಯಂ ಗೋಲ್ಡ್ಮೋರ್ ವಿನ್ಯಾಸಗೊಳಿಸಿದ ಉದ್ಯಾನವು ಇದರ ಭಾಗವಾಗಿದೆ.
ಇವರು ಲಂಡನ್‌ನ ಕ್ಯೂ ಗಾರ್ಡನ್‌ನಲ್ಲಿ ಪರಿಣತರಾಗಿದ್ದರು. ಲಕ್ಷ್ಮಿ ಅರಮನೆಯು ಭಾರತದ ಗಣ್ಯರ ಸಂಕೇತವಾಗಿರುವಂತೆಯೇ, ಇದು ಮುಸ್ಲಿಂ ಮಾದರಿಗಳನ್ನು ಒಳಗೊಂಡಿರುವ ಮೂಲಕ ಇಸ್ಲಾಂ ಧರ್ಮವನ್ನೂ ಪ್ರತಿನಿಧಿಸುತ್ತದೆ.
ಮೇಲೆ ತಿಳಿಸಲಾದ ಮೂರೂ ಸ್ಥಳಗಳು ಗುಜರಾತ್‌ನಲ್ಲಿ ಇಸ್ಲಾಂ ಧರ್ಮವು ದೀರ್ಘಕಾಲದ ಉಪಸ್ಥಿತಿಯನ್ನು ಹೊಂದಿತ್ತು ಎಂಬುದನ್ನು ಹಲವು ವಿಧಗಳಲ್ಲಿ ತಿಳಿಸಿಕೊಡುತ್ತದೆ.
ನಿರ್ದಿಷ್ಟ ಇತಿಹಾಸಗಳನ್ನು ವಿರೂಪಗೊಳಿಸುವ ಮೂಲಕ ಅಲ್ಪಸಂಖ್ಯಾತರ ಹಕ್ಕುಗಳು ಮತ್ತು ಅಸ್ತಿತ್ವವನ್ನು ಪ್ರಶ್ನಿಸಲಾಗುತ್ತಿರುವ ಹೊಸ ತಲೆಮಾರಿಗೆ ಮೊಘಲರ ಬಗ್ಗೆ ಮತ್ತು ಅವರ ಕೊಡುಗೆಗಳ ಬಗ್ಗೆ ಇಂದು ಇರುವ ವಿಕೃತ ಮತ್ತು ಸೋಮಾರಿತನದ ಆರೋಪಗಳು ಕಟ್ಟುಕಥೆ ಎಂದು ಮನವರಿಕೆ ಮಾಡಬೇಕಾಗಿದೆ.
ಮೂಲ: ಶಾಷಾ ಪಟೇಲ್
ಕನ್ನಡಕ್ಕೆ: ಎ.ಕೆ ರುಕ್ಸಾನ ಗಾಳಿಮುಖ