ಹಜ್ರತ್ ಖಾಝಿ ಮಹಮೂದ್ ಬಹರಿ ಅವರು ಆದಿಲ್ ಶಾಹಿ ಕಾಲದ ಖ್ಯಾತ ಸೂಫಿ ತತ್ವ ಚಿಂತಕರಾಗಿದ್ದು, ತಮ್ಮ ಕವಿತೆ, ಕೃತಿಗಳಿಂದ ಖ್ಯಾತಿ ಪಡೆದವರು. 17 ನೇ ಶತಮಾನದ ಕರ್ನಾಟಕದ ರಾಜಕೀಯ ಅಸ್ಥಿರತೆಯ ಕಾಲದಲ್ಲೇ ಬಹರಿ ತಮ್ಮ ಆಧ್ಯಾತ್ಮಿಕತೆಯ ಪ್ರವರ್ಧಮಾನಕ್ಕೆ ತಲುಪಿದರು. ಸುಲ್ತಾನ್ ಸಿಕಂದರ್ ಕಾಲದಲ್ಲಿ ಆದಿಲ್ ಷಾಹಿ ಸಾಮ್ರಾಜ್ಯದ ರಾಜಧಾನಿ ಬಿಜಾಪುರದಲ್ಲಿ ನೆಲೆಸಿದ್ದ ಬಹರಿ ಅವರು, 1686 ರಲ್ಲಿ ಔರಂಗಝೇಬ್ ಕೈಯಲ್ಲಿ ಆದಿಲ್ ಶಾಹಿ ವಂಶ ಪತನವಾದ ಬಳಿಕ ಹೈದರಾಬಾದ್ ಗೆ ವಲಸೆ ಹೋದರು. ರಾಜಕೀಯ ಅಸ್ಥಿರತೆ, ವಲಸೆ, ಆಂತರಿಕ ಸಂಘರ್ಷಗಳ್ಯಾವುದೂ ಬಹರಿ ಅವರ ಆಧ್ಯಾತ್ಮಿಕ ಯಾತ್ರೆಗೆ ತಡೆಯಾಗುವುದಿಲ್ಲ, ಇದೇ ಅವಧೀಯಲ್ಲಿ ಅವರು ಮನ್ ಲಗಾನ್ ಅಥವಾ ಉರುಸ್ ಎ ಇರ್ಫಾನ್ ಕೃತಿಯನ್ನು ರಚಿಸುತ್ತಾರೆ.
ಉರಸೇ-ಇರ್ಫಾನ್(ಪರ್ಶಿಯನ್) ಅಥವಾ ಮನ್ಲಗನ್ ಅಂದರೆ ದಖ್ಖನಿ ಉರ್ದುವಿನಲ್ಲಿ “ಸ್ವರ್ಗದ ಮಿಲನ”ಎಂದು ಅರ್ಥ. ಉರಸೇ-ಇರ್ಫಾನ್ ಹೆಸರಿನ ಈ ಸುಂದರ ಅರ್ಥಗರ್ಭಿತ, ಅತ್ಯಮೂಲ್ಯ ಗ್ರಂಥವನ್ನು ಹಜ್ರತ್ ಖಾಝಿ ಮಹಮೂದ್ ಬಹರಿ(ರ.ಅ) ಅವರು 17 ನೆಯ ಶತಮಾನದಲ್ಲಿ ರಚಿಸಿದರು. ‘ಮನ್ ಲಗನ್ʼ ಕೃತಿಯು ಮೊದಲಿಗೆ ದಖ್ಖನಿ ಉರ್ದುವಿನಲ್ಲಿ ರಚಿಸಿಸಲಾಗಿತ್ತು. ನಂತರ, ಅವರ ಆಪ್ತ ಒಡನಾಡಿಗಳ ಸಲಹೆಯ ಮೇರೆಗೆ ಸ್ವತಃ ಅವರೇ ಪರ್ಶಿಯನ್ ಭಾಷೆಗೆ ಅನುವಾದಿಸಿದ್ದಾರೆ.
1932 ರಲ್ಲಿ ಯುನಿವರ್ಸಿಟಿ ಆಫ್ ಲಂಡನ್ ನಲ್ಲಿ ಖಾಝಿ ಮಹಮೂದ್ ಬಹರಿ ಯವರ ಜೀವನ ಮತ್ತು ಕೃತಿಗಳ ಕುರಿತು 17 ನೇ ಶತಮಾನದ ಸೂಫಿ ಕವಿ ಎಂಬ ಶೀರ್ಷಿಕೆಯಡಿ ಪಿ.ಎಚ್. ಡಿ ಸಂಶೋಧಕರಾದ
ಉತ್ತರ ಪ್ರದೇಶ ಮೂಲದ ಮುಹಮ್ಮದ್ ಹಫೀಜ್ ಸೈಯಿದ್ ರವರು ಥೀಸಿಸ್ ಮಂಡಿಸಿದ್ದರು.
1957 ರಲ್ಲಿ ಮುಜ್ ಖಾದರಿ ಅಲ್ ಮುಲ್ತಾನಿ ರವರು ಈ ಕೃತಿಯನ್ನು “ಮಿಫ್ತಾ ಅಲ್ ಜನ್ನಾಃ”(ಸ್ವರ್ಗದ ಬೀಗದ ಕೈ) ಎಂಬ ಶಿರ್ಷಿಕೆಯಲ್ಲಿ ಉರ್ದುವಿಗೆ ಅನುವಾದಿಸಿ ಪ್ರಕಟಿಸಿದರು. ನಂತರದ 1989 ರಲ್ಲಿ ಮಹಮ್ಮದ್ ಆರಿಫುದ್ದೀನ್ ಶಾ ಫಾರೂಕಿ ಖಾದರಿ ಮುಲ್ತಾನಿ ಅವರು ಅನುವಾದಿಸಿದರು. ಇಂತಹ ಅಮೂಲ್ಯ ಕೃತಿಯನ್ನು ಫ.ಗು.ಹಳಕಟ್ಟಿ ಸಂಶೋಧನಾ ಕೇಂದ್ರ ಹೊರ ತಂದಿರುವ “ಆದಿಲ್ ಶಾಹಿ ಸಾಹಿತ್ಯ ಸಂಪುಟ” ಸಂಪುಟಗಳಿಗಾಗಿ ಲೇಖಕ ಬೋಡೆ ರಿಯಾಝ್ ಅಹಮದ್ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ.
ಮೂಲ ಕೃತಿಯ ತಾತ್ಪರ್ಯ ಹಾಗೂ ಅದರ ಗಾಂಭೀರ್ಯವನ್ನು ಸ್ಪಷ್ಟವಾಗಿ ಅರ್ಥೈಸಿಕೊಂಡು ಈ ಕೃತಿಯನ್ನು ಒಪ್ಪವಾಗಿ ಅನುವಾದಿಸಲಾಗಿದೆ. ಈ ಕೃತಿಯ ಅನುವಾದವು ಸೂಫಿ ತತ್ವದ ಅಡಿಪಾಯಕ್ಕೆ ಕನ್ನಡ ಸಾಹಿತ್ಯದಲ್ಲಿ ಒಂದು ವಿನೂತನ ಮಾರ್ಗನ್ನು ಹಾಕಿಕೂಟ್ಟಿದೆ. ಇದುವರೆಗೂ ಕನ್ನಡ ಭಾಷೆಯಲ್ಲಿ ರಚನೆಗೊಂಡಿರುವ ಮತ್ತು ಅನುವಾದಗೊಂಡಿರುವ ಅನೇಕ ಕೃತಿಗಳಲ್ಲಿ ಅನುವಾದಕನ ವಿಚಾರೋಕ್ತಿಗಳು ಹಾಸು ಹೊಕ್ಕಗಿರುವುದನ್ನು ಕಾಣಬಹುದು.
“ಓ ದೇವರೇ! ಈ ದಿವ್ಯ ಜ್ಞಾನದ ಉದ್ಯಾನವನ್ನು ಶಿಶಿರದಿಂದ ದೂರವಿಡು, ದಿವ್ಯ ಧ್ಯಾನಿಗಳ ಚಿಲಿಪಿಲಿಯಿಂದ ಹಗಲು ರಾತ್ರಿ ನಾದಮಯಗೊಳಿಸು. ಅಹಂನಿಂದ ವಿಮೋಚನೆಗೊಳಿಸು, ಪರಂ ಜ್ಯೋತಿಯ ಪವಿತ್ರ ಸ್ಥಾನದ ಪ್ರತಿರೂಪವಾದ ಲೌಕಿಕ ಹಾಗೂ ಅಲೌಕಿಕ ಜ್ಞಾನದ ಅನಂತ ಸೆಲೆಯಾದ ಪ್ರವಾದಿ ಮಹಮ್ಮದರ(ಸ್ವ.ಅ) ದರ್ಶನ ಭಾಗ್ಯವ ದಯಪಾಲಿಸು. ನಿನ್ನ ಅಪ್ರತಿಮ ಸೌಂದರ್ಯದ ಅಭಿವೃದ್ಧಿಯನ್ನು ದರ್ಪನವಾಗಿಸಿ ಅದನ್ನು ವೀಕ್ಷಿಸುವ ಸೌಭಾಗ್ಯವ ಪಾಲಿಸು. ಯಾಕೆಂದರೆ ಇದೇ ಪ್ರಕಾಶವೇ ಪವಿತ್ರ ದೈವೀ ಅಸ್ತಿತ್ವದ ಪ್ರತಿಬಿಂಬ. ಇಡೀ ಪ್ರಪಂಚವೇ ನಿರಾಕಾರ ಸ್ವರೂಪವಾಗಿದೆ. ಮಾನವರು ಅಲ್ಲಾಹನ ಪ್ರೇಮಿಗಳು, ಭೂವಾಸಿಗಳಾಗಿಯೂ ಭೂಮಿಯಲ್ಲಿಯೇ ಶ್ರೇಷ್ಠರು, ಹೇ ಮನವೇ, ನೀ ಕಾಯಾ-ಮನಸಾ ಅಲ್ಲಾಹನ ಸೇವೆಯಲ್ಲಿ ನಿರತನಾಗು. ಮಹಮ್ಮದ್ ಸ.ಅ ರ ಜ್ಞಾನಜ್ಯೋತಿಯ ಪ್ರಭೆಯು ಎಲ್ಲರಿಗೂ ಸಮಾನವಾಗಿದೆ” ಎಂದು ಕೃತಿಯಲ್ಲಿ ಬಹರಿ ಅವರು ಸೂಫಿಸಂ ನ ತಿರುಳನ್ನು ಉಣಬಡಿಸುತ್ತಾರೆ.
ಸೂಫಿಸಮ್ಮಿನ ತತ್ವ ಆಚರಣೆಗಳಾದ ತ್ವರೀಕತ್, ಹಾಗೂ ಹಕೀಕತ್(ಬ್ರಹ್ಮಕಾಂಡ) ಗಳು ಶರೀಯತ್ ನ ಆತ್ಮಶುದ್ಧಿ ಕಾಂಡದ ಅಧೀನವಾಗಿವೆ ಎಂದು ಹೇಳುತ್ತಾ “ಶರಿಯತ್ ನ್ನು ನೀ ಜೀವದ ಶ್ರಮವೆಂದು ತಿಳಿ” “ಶರಿಯತ್ ನಿಜ ಜೀವನದಲ್ಲಿ ದಿವ್ಯ ಧ್ಯಾನದ ತಿರುಳು” “ಶರಿಯತ್ ನ ಸಂಕೇತವು ಪ್ರಕಾಶಮಾನವಾದಾಗ ತೊಲಗಿತು ನಾಸ್ತಿಕತೆಯ ಕತ್ತಲು” “ಬಹರಿ ನಿನಗಿರಲಿ ಶರಿಯತ್ ನಿಜಪ್ರಜ್ಞೆ, ಮನದೊಳಗೆ ನೆಲೆಸಲಿ ಏಕತ್ವದ ಚೈತನ್ಯ” ಎಂದು ಮೂಲ ಕರ್ತೃ ಶರೀಯತ್ ನ ಬಗ್ಗೆ ಹೇಳುತ್ತಾರೆ.
ಸೂಫಿಸಂಗೆ ಶರೀಯತ್ ಸಂಬಂಧವಿಲ್ಲ, ಅದು ಇಸ್ಲಾಮಿನ ಭಾಗವಲ್ಲ ಎಂಬ ಪ್ರತಿಪಾದನೆಯನ್ನು ಈ ಕೃತಿಯಲ್ಲಿ ಆಧಾರಸಹಿತವಾಗಿ ಅಪ್ರಸ್ತುತಗೊಳಿಸಲಾಗಿದ್ದು, ಪ್ರವಾದಿ ಮಹಮ್ಮದ್ ಸ.ಅ ಜೀವನ, ಉಪದೇಶಗಳ ಆಧಾರ ಮೇಲೆಯೇ ಸೂಫಿಸಂನ ವಿವಿಧ ಹಂತಗಳನ್ನು ಈ ಕೃತಿಯಲ್ಲಿ ಚರ್ಚಿಸಲಾಗಿದೆ. ಪ್ರವಾದಿ ಮಹಮ್ಮದರನ್ನು ಕೇಂದ್ರೀಕರಿಸಿಯೇ ಇಲಾಹಿ ಪ್ರೇಮದ ಬೆಳಕನ್ನು ಸೂಫಿಗಳು ಕಂಡುಕೊಳ್ಳುವುದನ್ನು ಕೃತಿಯು ಪ್ರತಿಪಾದಿಸುತ್ತದೆ.
ತರೀಖತ್ ನ ಕುರಿತು ನಾಲ್ಕು ಹಂತಗಳು (ಮಜಲು) ಮೂರ್ತರೂಪ ಪಡೆದುಕೊಂಡ ಸಮಯದಲ್ಲಿ ಪ್ರತಿ ಮಜಲಿನಲ್ಲೂ ಶರೀಯತ್ತಿನ ಅನುಪಾಲನೆಗೆ ಅತೀವ ಮಹತ್ವ ನೀಡಲಾಗಿದೆ. ‘ಮಅರಿಫತ್’ ನ ಪ್ರಾಪ್ತಿಗಾಗಿ ಲೌಕಿಕ ಸಂಬಧಗಳ ತ್ಯಾಗ ಹಾಗೂ ಜೀವನ ನಿರ್ವವಹಣೆಯ ಕಾಯಕ-ಸಂಘರ್ಷದಿಂದ ಮುಕ್ತರಾಗುವುದು ಅವಶ್ಯಕತೆ ಇಲ್ಲ ಎಂದು ವಿವರಿಸಿದ್ದಾರೆ.
ಬಹರಿಯವರು ಸಮಕಾಲೀನ ಸೂಫಿ ಸಂತರ ಕುರಿತು ಚರ್ಚಿಸಿದ್ದಾರೆ, ಅದರಲ್ಲಿ ಪ್ರಮುಖವಾಗಿ ಖ್ವಾಜಾ ಅಮೀನುದ್ದೀನ್-ಅಲಿ ಅಲಾರ ಕುರಿತು, ‘ಅನಲ್ ಹಕ್’ ಸಿದ್ದಾಂತದ ಕುರಿತು ವಿವರಣೆಯನ್ನು ನೀಡಿದ್ದಾರೆ. ಸ್ವತಹ ಕೃತೃವೇ ಹೇಳಿಕೊಂಡಂತೆ ಅವರ ತಂದೆಯವರಾದ ಖ್ವಾಜಿ ದರಿಯರವರು ಹಜರತ್ ಶಾ ಬುರಾನುದ್ದೀನ್ ಜಾನಂ ರಿಂದ ದೀಕ್ಷೆ(ಖಲೀಫಾ) ಪಡೆದಿದ್ದರು. ಬಹರಿಯವರು ತಮ್ಮ ತಂದೆಯಿಂದ ಚಿಸ್ತಿಯ ಪರಂಪರೆ ದೀಕ್ಷೆ ಹಾಗೂ ಶಹಾ ಮಹಮ್ಮದ್ ಬಾಖರ್ ಅವರಿಂದ ಖಾದ್ರಿಯಾ ಪಂಥದ ಖಲೀಫಾ ಪದವಿಯನ್ನು ಪಡೆದಿದ್ದರು. ಅವರು ಹೆಚ್ಚಿನ ವಿದ್ಯಾಭ್ಯಾಸವನ್ನು ಪಡೆಯದಿದ್ದರೂ ಶಾ ಮಿರಂಜಿ ಷಂಶಿ -ಉಲ್ಲ್-ಉಶಾಕ್, ಹಜರತ್ ಶಾ ಬುರಾನುದ್ದೀನ್ ಜಾನಂರವರ ಕೃತಿಗಳನ್ನು ಆಳವಾಗಿ ಅಧ್ಯಯನ ಮಾಡಿದ್ದು, ಅವುಗಳನ್ನು ತಮ್ಮ ಕೃತಿಯಲ್ಲಿ ಬಳಸಿಕೊಂಡಿದ್ದನ್ನು ಮುಕ್ತವಾಗಿ ವಿವರಿಸಿದ್ದಾರೆ. ಅಂದಿನ ಕಾಲದಲ್ಲಿ ನಡೆಯುತ್ತಿದ್ದ ‘ಮೆಹಫಿಲ್ ಎ ಸಮಾ’ಗಳಲ್ಲಿ ಭಾಗವಹಿಸಿ ಆಧ್ಯಾತ್ಮಿಕ ಚರ್ಚೆಯಲ್ಲಿ ಪಾಲ್ಗೊಳ್ಳುತ್ತಿದ್ದರು, ಮತ್ತು ಅವರ ಸಮಕಾಲಿನ ಸೂಫಿ ಸಂತರು ಸಂಪರ್ಕದಲ್ಲಿದ್ದ ವಿಷಯವನ್ನು ಹೇಳಿದ್ದಾರೆ.
160 ಅಧ್ಯಾಯಗಳಲ್ಲಿ ಪ್ರತಿಯೊಂದು ಅಧ್ಯಾಯವು ಆಧ್ಯಾತ್ಮಿಕತೆಯ ತಿರುಳಿನೊಂದಿಗೆ ಲೌಕಿಕದ ವಾಸ್ತುವಿಕತೆಯನ್ನು ಹೇಳುವ ಅಪೂರ್ವ ಕೃತಿಯಾಗಿದೆ.
“ಈ ಜಗದ ತಪ್ಪು-ಒಪ್ಪಿನ ಮೂಟೆ ನಾನು,
ಹೊರಡುವೆ,
ಒಂದೆರಡು ದಿನದ ಅತಿಥಿ ನಾನು”ಎಂದು ಹೇಳಿ ಮನುಷ್ಯನ ಅಂಹಕಾರವನ್ನೇ “ನಾನು” ಎಂದು ಸ್ಪಷ್ಟಪಡಿಸಿದ್ದಾರೆ.
ವಾಸ್ತವದ ಅರಿವು ಮೂಡಿಸಿ, ನಿರ್ಮಲ ಸಾಗರದಲ್ಲಿ ಮುಳುಗಿರುವ ಸಮಸ್ತ ಬ್ರಹ್ಮಾಂಡವು, ‘ಆದಂ’ (ಅಲೈಹಿ ಸಲಾಂ) ರವರ ಸಾರಾಂಶವೇ ಜ್ಞಾನವಾಗಿದೆ. ಪ್ರತಿ ಅಧ್ಯಾಯದಲ್ಲಿನ ವಿಷಯವು ಸೂಫಿಗಳ ಸಮೂಹದಲ್ಲಿ ‘ಮನ್ ಲಗನ್’ ಕುರಿತು ಬಿರುಸಿನ ಚರ್ಚೆ ಹಾಗೂ ವಾದ- ವಿವಾದಗಳೂ ನಡೆದುದ್ದನ್ನು ದಖ್ಖನಿನ ಇತಿಹಾಸದಲ್ಲಿ ಕಾಣಬಹುದು.
ಲೇಖಕ- ಅಮೀನಸಾಬ ಘಟ್ನೂರ
ಸಂಶೋಧನಾ ವಿದ್ಯಾರ್ಥಿ
ಕರ್ನಾಟಕ ವಿವಿ ಧಾರವಾಡ