ಎಕ್ಸಿಟ್ ವೆಸ್ಟ್: ಕೊನೆಯಿಲ್ಲದ ಸ್ವರ್ಗ ರಾಜ್ಯಗಳು

ನಿರಾಶ್ರಿತರ ಹಾಗೂ ಪೌರತ್ವ ಕಾಯ್ದೆಯ ಕುರಿತು ಚರ್ಚೆಗಳು ನಡೆಯುತ್ತಿರುವ ಈ ಸನ್ನಿವೇಶದಲ್ಲಿ ನಿರಾಶ್ರಿತರ ಹೊಸ ಮಾರ್ಗಗಳನ್ನು ಅನ್ವೇಷಿಸುತ್ತಿರುವ ರಿಯಲಿಸಂ ಮತ್ತು ಮ್ಯಾಜಿಕಲ್ ರಿಯಲಿಸಂನ ಸಮ್ಮಿಶ್ರಣದಿಂದ ಒಂದುಗೂಡಿರುವ ಮೊಹ್ಸಿನ್ ಹಾಮಿದ್ ರವರ ಕಾದಂಬರಿ “ಎಕ್ಸಿಟ್ ವೆಸ್ಟ್” ಪ್ರಸ್ತುತವೆನಿಸುತ್ತದೆ.

ಸಮಕಾಲೀನ ರಾಜಕೀಯ ಮತ್ತು ಸಾಮಾಜಿಕ ವಾತಾವರಣದಲ್ಲಿ ನಿರಾಶ್ರಿತರು ಅನುಭವಿಸುತ್ತಿರುವ ತೊಂದರೆಗಳನ್ನು ಜೀವನದ ಅನುಭವಗಳನ್ನಾಗಿ ಸಂಯೋಜಿಸುವ ಮೂಲಕ ಹಾಮಿದ್ ರವರು ತಮ್ಮ ಕಥೆಯನ್ನು ಅಭಿವೃದ್ಧಿಪಡಿಸಿದ್ದಾರೆ. ರಾಜಕೀಯ ಪಕ್ಷಗಳು ಹಾಗೂ ಸಾಮ್ರಾಜ್ಯಶಾಹಿ ಯೋಜನೆಗಳು ಹುಟ್ಟುಹಾಕುವ ನಿರಾಶ್ರಿತರ ಸಮಸ್ಯೆಗಳನ್ನು ಮುಂದಿಟ್ಟು, ಭವಿಷ್ಯದ ಕುರಿತ ಭಾವನಾತ್ಮಕವಾದ ಚಿಂತನೆಗಳನ್ನು ಪಾಕ್-ಆಂಗ್ಲೋ ಯುವ ಬರಹಗಾರ ತನ್ನ ಕಾದಂಬರಿಯ ಮೂಲಕ ಮುಂದಿಡುತ್ತಿದ್ದಾರೆ.

ಅರುಂಧತಿ ರಾಯ್ ರವರ “ಮಿನಿಸ್ಟ್ರಿ ಆಫ್ ಅಟ್ಮೋಸ್ಟ್ ಹಾಪ್ಪಿನೆಸ್” ಎಂಬ ಕೃತಿಯನ್ನು ಹಿಂದಿಕ್ಕಿ 2017ರ ಮ್ಯಾನ್ ಬೂಕರ್ ಪ್ರಶಸ್ತಿಯ ಅಂತಿಮ ಪಟ್ಟಿಯಲ್ಲಿ ಸ್ಥಾನ ದಕ್ಕಿಸಿಕೊಂಡ “ಎಕ್ಸಿಟ್ ವೆಸ್ಟ್”, ಹಾಮೀದ್ ರವರ 4 ನೇ ಕೃತಿಯಾಗಿದೆ. ‘ರಿಲಕ್ಟಂಟ್ ಫಂಡಮೆಂಟಲಿಸ್ಟ್’, ‘ಮೋತ್ ಸ್ಮೊಕ್’ ಮುಂತಾದ ಕೃತಿಗಳು ಹಾಮಿದ್ ರವರ ಗಮನಾರ್ಹ ಕೊಡುಗೆಗಳಾಗಿವೆ. ಹರಿದು ಚಿಂದಿಯಾದ ಜೀವನಗಳನ್ನು ಒಗ್ಗೂಡಿಸುವ ಮನುಷ್ಯ ಪ್ರಯತ್ನಗಳಾಗಿವೆ ನಿರಾಶ್ರಿತರ ಪಲಾಯನವೆಂದು ಹೇಳುವಾಗ, ಜೀವನದ ಅನುಭವಗಳಾಚೆಗಿನ ಸಹಾನುಭೂತಿಯನ್ನು ಕಾದಂಬರಿ ಚಿತ್ರಿಸುತ್ತಿದೆ.

ಸಯಿದ್ ಮತ್ತು ನಾದಿಯಳ ನಡುವಿನ ಪ್ರೀತಿಯಿಂದ ಆರಂಭವಾಗುವ ಕಾದಂಬರಿ ಪ್ರೀತಿದಾಯಕ ಜೀವನದ ಕಥೆಯ ಮೂಲಕ ಮುಂದುವರಿದು, ಆಂತರಿಕ ಯುದ್ಧದ ನಿರೂಪಣೆ ತೀವ್ರಗೊಳ್ಳುತ್ತಿದ್ದಂತೆ ಆಕ್ರೋಶಭರಿತವಾಗುತ್ತದೆ. ಓದುಗನ ಮುಂದಿನ ಹೆಜ್ಜೆ ರಿಯಲಿಸಂನ ಪ್ರಪಂಚದ ಕಡೆಗಾಗಿದೆ. ಅವರು ತಾವಿಚ್ಚಿಸುವ ರಾಷ್ಟ್ರಗಳನ್ನು ಕಣ್ಮುಚ್ಚಿ ತೆರೆಯುವಷ್ಟರಲ್ಲಿ ತಲುಪಲು ಸಾಧ್ಯವಾದ ಬಾಗಿಲುಗಳ ಮುಖಾಂತರ ಗ್ರೀಕ್ ಮತ್ತು ಯುರೋಪ್ ನಗರಗಳನ್ನು ದಾಟುತ್ತಾರೆ. ವಿದ್ಯುತ್ ಸಂಪರ್ಕವಿಲ್ಲದ ಲಂಡನ್ ನಗರದ ವಿವರಣೆಯನ್ನು ಕಾಂದಂಬರಿಯ ಒಂದು ಭಾಗದಲ್ಲಿ ಕಾಣಬಹುದು. ಸಮಕಾಲೀನ ರಾಜಕೀಯ ಸನ್ನಿವೇಶಗಳಲ್ಲಿ ಪ್ರಪಂಚದಾದ್ಯಂತ ಹೆಚ್ಚುತ್ತಿರುವ ನಿರಾಶ್ರಿತರ ಲೋಕವನ್ನು ಮಂಡಿಸುತ್ತಿರುವ ಕಾದಂಬರಿಯು, ನಿರಾಶ್ರಿತರ ಜೀವನದ ದೈನಂದಿನ ಅನುಭವಗಳನ್ನು ಸೂಕ್ಷ್ಮವಾಗಿ ಅಭ್ಯಸಿಸಿದ ಕಾಲ್ಪನಿಕ ಕಥೆಗಳನ್ನು ಸೇರಿಸಿ ಓದುಗರಿಗೆ ಹೊಸ ಅರ್ಥಗಳನ್ನು ಕಂಡುಹಿಡಿಯಲು ಪ್ರೇರೇಪಿಸುತ್ತದೆ.

ವರ್ತಮಾನ ಜಗತ್ತಿನ ಸ್ಥಿತಿಗತಿಗಳನ್ನು ಕೂಲಂಕಷವಾಗಿ ಪರಿಶೋಧಿಸುವ ಹಾಮಿದ್ ರವರ ಈ ಕಾದಂಬರಿಯು, ಓದುಗರ ಹೃದಯವನ್ನು ತನ್ನಡೆಗೆ ಸೆಳೆದು ಪ್ರಪಂಚದ ನಿರಾಶ್ರಿತರಿಗೆ ಹೇಳುವುದು ಈ ರೀತಿಯಾಗಿದೆ; “ಪ್ರಪಂಚ ನಾಶವಾಗುತ್ತಿದೆ ಎಂದು ನಾವು ಅಂದುಕೊಳ್ಳುತ್ತೇವೆ. ಆದರೆ ಅದು ಬರಿಯ ಕಲ್ಪನೆ. ಬದಲಾವಣೆಗಳು ಸೂಚಿಸುವುದು ಅಂತ್ಯವನ್ನಲ್ಲ. ಸ್ವತಃ ಹೊಸ ಮಾರ್ಗಗಳನ್ನು ನಿರ್ಮಿಸುವ ಹಾಗೂ ಭರವಸೆಯ ಭವಿಷ್ಯವನ್ನು ನಿರ್ಮಿಸುವ ಅವಶ್ಯಕತೆಯನ್ನಾಗಿದೆ ಅವುಗಳು ಒತ್ತಿ ಹೇಳುತ್ತಿರುವುದು.” ಈ ಕಾದಂಬರಿಯಲ್ಲಿ ಹಾಮಿದ್ ರವರು ತನ್ನ ಮೊದಲ ಕಾದಂಬರಿಗಳ ವ್ಯಕ್ತಿನಿಷ್ಠ ಶೈಲಿಗೆ ಹಾಗೂ ಓದುಗನ ನೇರ ನಿರೂಪಣಾ ಶೈಲಿಗೆ ವಿರುದ್ದವಾಗಿ ಹೊಸ ಕಥಾ ನಿರೂಪಣಾ ಶೈಲಿಯನ್ನು ಸ್ವೀಕರಿಸಿದ್ದಾರೆ. ಯಾವುದಾದರೊಂದು ರೀತಿಯಲ್ಲಿ ನಾವೆಲ್ಲರೂ ವಿದೇಶಿಯರೆಂದು ನಿರಂತರವಾಗಿ ಮನವರಿಕೆ ಮಾಡಿಕೊಡುವ ಕಾದಂಬರಿಯು, ಸಾಮಾಜಿಕ ದುರಂತಗಳು ಹೇಗೆ ವೈಯುಕ್ತಿಕ ಜೀವನಕ್ಕೆ ಋಣಾತ್ಮಕವಾಗಿ ಪರಿಣಾಮ ಬೀರುತ್ತವೆ ಎಂಬುದನ್ನು ಸೂಚಿಸುತ್ತದೆ. ನಿರಾಶ್ರಿತರ ಜೀವನವು ಸಾವಿನ ಸಂದರ್ಭದಲ್ಲಿಯೂ ಕೂಡ ಹೊಸ ಜಗತ್ತನ್ನು ಸೃಷ್ಟಿಸಬಲ್ಲ ಶಕ್ತಿಯನ್ನು ಹೊಂದಿದೆ ಎನ್ನುವ ಕೃತಿಯು, ಹೆಲಿಕಾಪ್ಟರ್ ಹಾಗೂ ಡ್ರೋನ್ ಗಳಿಗಿಂತ ಎತ್ತರದಲ್ಲಿ ಹಾರಾಡುವ ಆತ್ಮವಿಶ್ವಾಸದ ರೆಕ್ಕೆಗಳ ಶಬ್ದಗಳು ಓದುಗನ ಮನದಾಳಕ್ಕೆ ಪ್ರತಿಬಿಂಬಿಸುತ್ತಿದೆ. ದೇಶ – ರಾಷ್ಟ್ರಗಳ ಗಡಿರೇಖೆಗಳಾಚೆಗಿರುವ ನಿರಾಶ್ರಿತರ ಪಲಾಯನವನ್ನು ಮ್ಯಾಜಿಕಲ್ ರಿಯಲಿಸಂನ ಮೂಲಕ ಮುಂದಿಡುತ್ತಿರುವ ಲೇಖಕರು, ಸ್ವತಃ ಜಾಗತಿಕ ಪ್ರಜೆಯೆಂದು ಹಾಗೂ ಜಾಗತಿಕ ಪೌರತ್ವವನ್ನು ಇಷ್ಟಪಡುವವರೆಂದು ಸಾಬೀತುಪಡಿಸುತ್ತಿದ್ದಾರೆ. ಮುಹ್ಸಿನ್ ಹಾಮಿದ್ ರವರ ಜೀವನಕ್ಕೆ ಬಹಳ ಹೊಂದಿಕೊಂಡಿರುವ ಒಂದು ಕಾದಂಬರಿಯಾಗಿದೆ “ಎಕ್ಸಿಟ್ ವೆಸ್ಟ್”.

ಲಾಹೋರಿನಲ್ಲಿ ಜನಿಸಿ ಲಂಡನ್ ಹಾಗೂ ನ್ಯುಯಾರ್ಕ್ ನಗರಗಳಲ್ಲಿ ನೆಲೆಸಿದ ಹಾಮಿದ್ ರವರ ಜೀವನ ಮತ್ತು ನೆನಪುಗಳಾಗಿವೆ ಪ್ರಸ್ತುತ ಕಾದಂಬರಿಯಲ್ಲಿ ಒಳಗೊಂಡಿರುವುದು ಎಂದು ನಮಗೆ ಮನದಟ್ಟಾಗುತ್ತದೆ. ಸ್ವದೇಶವನ್ನು ಬಿಟ್ಟು ಹೊಸ ಜನರೆಡೆಯಲ್ಲಿ ಬೆರೆಯುವಾಗ ಎದುರಾಗುವ ಅಶಾಂತಿ, ನಿದ್ರಾಹೀನತೆ ಮತ್ತು ಬಾಲ್ಯದ ನೆನಪುಗಳನ್ನು ಸಯೀದ್ ನ ಮುಖಾಂತರ ಹಾಗೂ ಅಲ್ಲಿಯ ಜೀವನದ ಹೊಸ ಸನ್ನಿವೇಶಗಳು ನೀಡುವ ಸಹಾನುಭೂತಿಯ ಆಶ್ವಾಸನೆಗಳನ್ನು ನಾದಿಯಾಳ ಮುಖಾಂತರವೂ ತಿಳಿಸುವ ಲೇಖಕರು, ದೇಶ – ರಾಷ್ಟ್ರಗಳಿಂದ ಪಲಾಯನಗೈದವರ ಎರಡು ವಿಭಿನ್ನ ದೃಷ್ಟಿಕೋನಗಳನ್ನು ಓದುಗರಿಗೆ ದಾಟಿಸುತ್ತಾರೆ. ಮನೆ ಎಂಬ ಪರಿಕಲ್ಪನೆಯನ್ನು ಮತ್ತು ಮನೆಯ ಬಗ್ಗೆ ನಿರಾಶ್ರಿತರಿಗಿರುವ ಭಾವನಾತ್ಮಕವಾದ ಅನುಭವವನ್ನು ವಿವರಿಸುತ್ತಿರುವ ಕಾದಂಬರಿಯು, ಸಾಮಾನ್ಯ ನಿರಾಶ್ರಿತ ಕಾದಂಬರಿಗಳ ವಸ್ತುಗಳಿಗಿಂತ ವಿಭಿನ್ನವಾಗಿದೆ. ಸಾಮಾನ್ಯವಾಗಿ ನಿರಾಶ್ರಿತರ ಕುರಿತ ಕಾದಂಬರಿಗಳು ಮನೆ ಎಂಬ ಪರಿಕಲ್ಪನೆಯನ್ನು ಕಾಲ್ಪನಿಕವಾದ ಮೇಲೋ – ನಿರೂಪಣಾ ಶೈಲಿಯನ್ನು ಅಳವಡಿಸಿಕೊಂಡಿದೆ. ಆದರೆ ಮುಹ್ಸಿನ್ ಹಾಮಿದ್ ರವರ “ಎಕ್ಸಿಟ್ ವೆಸ್ಟ್” ಕಾದಂಬರಿಯು ಮನೆ ಎಂಬ ಪರಿಕಲ್ಪನೆಯನ್ನು ಹಾಗೂ ಅದಕ್ಕಿರುವ ನಿರಾಶ್ರಿತರ ಭಾವನಾತ್ಮಕ ಸಂಬಂಧಗಳನ್ನು ವಿವರಿಸುವ ಜೊತೆಜೊತೆಗೆ ನಿರಾಶ್ರಿತರಿಗೆ ಸಿಗುವ ಹೊಸ ಜೀವನದ ಸನ್ನಿವೇಶಗಳನ್ನು ಹಾಗೂ ಅನುಭವಗಳನ್ನೂ ವಿವರಿಸುತ್ತಿದೆ.

‌ಪಲಾಯನವನ್ನು ಹಾಮಿದ್ ರವರು ಬರೀ ಕಹಿ ಅನುಭವಗಳಾಗಿ ಕಾಣದೆ ಹೊಸ ಅನುಭವಗಳಾಗಿ ಹಾಗೂ ಅನುಭೂತಿ ನೀಡುವ ವಿಷಯವಾಗಿ ಕಂಡಿದ್ದಾರೆ. ಕಹಿ ಮಿಶ್ರಿತ ನೆನಪುಗಳನ್ನು ಒಂದುಗೂಡಿಸಿ ಸುಂದರವಾದ ಹೊಸ ರೂಪವನ್ನು ನಿರ್ಮಿಸಲು ಲೇಖಕರು ಶ್ರಮಿಸುತ್ತಿರುವುದು ಸ್ಪಷ್ಟವಾಗುತ್ತದೆ. ವಾಸ್ತವದಲ್ಲಿಯೇ ನಿಂತು ತನ್ನ ಭಾವನೆಗಳಿಗೆ ತಲುಪುವ ಹಾಮಿದ್, ಸಮಕಾಲೀನ ವಿಶ್ವದ ಕುರಿತು ದೃಢವಾದ ತೀರ್ಮಾನದಲ್ಲೇ ಮುಂಬರುವ ಲೋಕದ ನಿರಾಶಾದಾಯಕತೆಯನ್ನು ಹೃದಯಸ್ಪರ್ಶಿಯಾದ ಭಾಷೆಯಲ್ಲಿ ಮಾತಾಡಿರುವುದು ವಿಶೇಷ. ನಿರಾಶ್ರಿತರ ಜೀವನದ ದುರಂತಗಳು ಹಾಗೂ ಆಂತರಿಕ ಕಲಹಗಳಿಗೆ ಪರಿಹಾರ ಮಾರ್ಗವೇ ರಾಷ್ಟ್ರೀಯ ಪೌರತ್ವವೆಂದು ಹೇಳದಿದ್ದರೂ ಹೇಳುವಂತಿರುವ ಕಾದಂಬರಿ, ರಾಜಕೀಯ ಕಚ್ಚಾಟಗಳ ಲೋಕದಲ್ಲಿ ಆಳವಾದ ಓದನ್ನು ಬೇಡುತ್ತಿದೆ.

✍ ಮೂಲ: ಹಾಶಿರ್ ಮಡಪ್ಪಳ್ಳಿ
ಕನ್ನಡಕ್ಕೆ: ಜುನೈದ್ ಮಾಹಿನ್

Leave a Reply

*