ಕೇಂಬ್ರಿಡ್ಜ್ ಮಸೀದಿಯ ಉದ್ಯಾನವನದ ಆನುಭಾವಿಕ ಒಳನೋಟಗಳು

ಹಸಿರು ಬಣ್ಣ ಇಸ್ಲಾಮಿನೊಂದಿಗೆ ತಳುಕುಹಾಕಿಕೊಂಡದ್ದು ಒಂದು ಕಾಕತಾಳೀಯ ವಿದ್ಯಮಾನವೇನಲ್ಲ.ಪವಿತ್ರ ಖುರ್ಆನಿನಲ್ಲಿ ಸ್ವರ್ಗೀಯ ಉದ್ಯಾನಗಳನ್ನು ಪರಿಚಯಿಸುವಾಗ ಹಸಿರು ಬಣ್ಣವು ಹಲವೆಡೆ ಉಲ್ಲೇಖಿಸಲ್ಪಟ್ಟಿದೆ. ಹಸಿರೆನ್ನುವುದು ಸಸ್ಯ ವರ್ಗಗಳ ಸಾಮಾನ್ಯ ವರ್ಣವೆಂಬುವುದಕ್ಕಿಂತ ಮಿಗಿಲಾಗಿ ಅದು ಬೆಳವಣಿಗೆ, ಭರವಸೆ, ಫಲವತ್ತತೆ ಎಂಬಿತ್ಯಾದಿಗಳನ್ನು ಸೂಚಿಸುತ್ತದೆ.ಉಳಿದ ಯಾವ ಬಣ್ಣಕ್ಕಿಂತಲೂ ಮನೆ,ಮನ ತಂಪಾಗಿಸಲು ಹಸಿರು ಬಣ್ಣಕ್ಕೆ ಸುಲಭ ಸಾಧ್ಯ.ಪ್ರವಾದಿ ಮುಹಮ್ಮದರ ಕಾಲದಲ್ಲಿ,ಅಂದರೆ ಆರನೇ ಶತಮಾನದಲ್ಲಿ ಇಂತಹ ಉದ್ಯಾನವನದ ಪರಿಕಲ್ಪನೆಗಳು ಅರೇಬಿಯಾದಲ್ಲಿರಲಿಲ್ಲ.ಕೇವಲ ಖರ್ಜೂರ ಮರಗಳು ಹಾಗೂ ತೊರೆಗಳಾಗಿತ್ತು ಅಂದಿನ ಉದ್ಯಾನಗಳ ಪ್ರಮುಖ ವಿನ್ಯಾಸಗಳು.ಇಸ್ಲಾಮಿಕ್ ನಾಗರಿಕತೆಯು ಅರೇಬಿಯಾವನ್ನು ದಾಟಿ ಇತರ ರಾಷ್ಟ್ರಗಳತ್ತ ವ್ಯಾಪಿಸುವವರೆಗೂ ಇದಕ್ಕೆ ಪ್ರಾಧಾನ್ಯವಿರಲಿಲ್ಲವೆಂದೇ ಹೇಳಬಹುದು.ಮುಖ್ಯವಾಗಿ, ಇಸ್ಲಾಮಿಕ್ ನಾಗರಿಕತೆಯು ಪರ್ಷಿಯಾ ತಲುಪುವುದರೊಂದಿಗೆ ಇಸ್ಲಾಮಿಕ್ ವಿನ್ಯಾಸದ ಉದ್ಯಾನವನ(Islamic garden) ರೂಪುಗೊಂಡಿತು. ಬಳಿಕ ಪರ್ಷಿಯನ್ ಪರಂಪರೆಯಲ್ಲಿ ಬರುವ ರಾಜಕುಟುಂಬದ ಬೇಟೆ ವಿನೋದಗಳಿಗಾಗಿ ನಿರ್ಮಿಸಲಾಗುತ್ತಿದ್ದ ಕ್ರೀಡಾ-ಉದ್ಯಾನವನಗಳನ್ನು (ಇದನ್ನು ಪರ್ಶಿಯನ್ ಭಾಷೆಯಲ್ಲಿ ‘ಪೈರೀದೇಸ’ ಎನ್ನುತ್ತಾರೆ. ಇಂಗ್ಲೀಷಿನ paradise ಎಂಬ ಪದದ ಮೂಲವೂ ಪ್ರಸ್ತುತ ಪರ್ಶಿಯನ್ ಪದವೇ ಆಗಿದೆ)‌ ಇಸ್ಲಾಂ ತನ್ನದಾಗಿಸಿಕೊಳ್ಳುತ್ತದೆ ಮತ್ತು ಅವುಗಳಿಗೆಲ್ಲಾ ಹೊಸತೊಂದು ಆಧ್ಯಾತ್ಮಿಕ ಆಯಾಮವನ್ನು ನೀಡುತ್ತದೆ. ಪರ್ಶಿಯಾದ ಸಸಾನಿಡ್(sassanid) ಸಾಮ್ರಾಜ್ಯವನ್ನು ಮತ್ತು ಅಕ್ಕೀಮೆನಿಡ್(achaemenid) ನಾಗರಿಕತೆಯನ್ನು ಸೋಲಿಸಿದ ಬಳಿಕ ಅತಿನೂತನವಾದ ನೀರಾವರಿ ವ್ಯವಸ್ಥೆಗಳು ಸ್ಥಾಪಿತವಾದ ಬೆನ್ನಿಗೆ ಇಸ್ಲಾಮಿಕ್ ಉದ್ಯಾನವನವು ಹೆಚ್ಚಿನ ಪ್ರಚಾರವನ್ನು ಪಡೆಯತೊಡಗಿತು.
ನನಗೆ ಉದ್ಯಾನವನಗಳ ಬಗ್ಗೆ ಹೆಚ್ಚಿನ ಆಸಕ್ತಿ ಮೂಡಿದ್ದು ಲಂಡನಿನ ರಾಯಲ್ ಕಾಲೇಜ್ ಆಫ್ ಆರ್ಟ್ಸ್ ನಲ್ಲಿ(RCA)‌ ವಿದ್ಯಾರ್ಥಿಯಾಗಿದ್ದಾಗ. ಕೇಂಬ್ರಿಡ್ಜ್ ಮಸೀದಿಯ ಜ್ಯಾಮಿತಿಯ ವಿನ್ಯಾಸದಲ್ಲಿರುವ(Geometric design)ಅಲಂಕಾರಗಳ ಕಾರ್ಯಯೋಜನೆ ಸಿದ್ಧಡಿಸಿದ ಕೀಥ್ ಕ್ರಿಚ್ಲೋ(keith critchlow)ರ ಗರಡಿಯಲ್ಲಾಗಿತ್ತು ನನ್ನ ಅಧ್ಯಯನ ಪ್ರಾರಂಭಗೊಂಡದ್ದು.ಇಸ್ಲಾಮಿಕ್ ಅಲಂಕಾರ ರೀತಿಗಳ ಮೂಲ ಭಾಷೆಗಳಲ್ಲೊಂದಾಗಿ ಪ್ರಸಿದ್ಧಿ ಪಡೆದ ಜ್ಯಾಮಿತೀಯ ಅಲಂಕಾರ ರೀತಿಯ ಕುರಿತು ಅವರಲ್ಲಿ ಪ್ರಾವೀಣ್ಯತೆ ಇದ್ದಿತು. RCA ಯಲ್ಲಿ ಇಸ್ಲಾಮಿಕ್ ಕಲೆಯ ಅರ್ಥಗಳನ್ನೂ ಅದರ ಆಳವಾದ ಸೌಂದರ್ಯವನ್ನೂ ನನಗೆ ಕಲಿಸಿಕೊಟ್ಟರು.ಇಂತಹ ಇಸ್ಲಾಂ ಕೇಂದ್ರೀಕೃತ ಅಧ್ಯಯನಗಳ ಮೂಲಕ ನಾನೊಬ್ಬ ಮುಸ್ಲಿಮನಾದೆ.ಅದರೊಂದಿಗೆ ಬಾಲ್ಯದಲ್ಲಿ ನನಗಿದ್ದ ಉದ್ಯಾನವನಗಳೊಂದಿಗಿನ ಆಸಕ್ತಿಯನ್ನೂ,ಇಸ್ಲಾಮಿಕ್ ನಾಗರಿಕತೆ ಮತ್ತು ಅಧ್ಯಾತ್ಮಿಕತೆಯೊಂದಿಗಿರುವ ಹೊಸ ಉತ್ಸಾಹವನ್ನೂ ಒಂದೆಡೆ ಕೇಂದ್ರೀಕೃತಗೊಳಿಸಲು ಸಾಧ್ಯವಾಯಿತು ಎನ್ನಬೇಕು.‌ಬಳಿಕ 2011ರಲ್ಲಿ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಇಸ್ಲಾಮಿಕ್ ವಿಭಾಗ ಉಪನ್ಯಾಸಕರಾದ ಡಾ.ಅಬ್ದುಲ್ ಹಕೀಂ ಮುರಾದ್ ಕೇಂಬ್ರಿಡ್ಜ್ ಮಸೀದಿಗೊಂದು ಉದ್ಯಾನವನವೆಂಬ ಚಿಂತನೆಯೊಂದಿಗೆ ನನ್ನನ್ನು ಭೇಟಿಮಾಡಿ ಆರ್ಥಿಕ ಸಹಾಯದ ಭರವಸೆಯನ್ನೂ ನೀಡಿದರು. ಇದರೆಡೆಯಲ್ಲೇ, ನನ್ನ ‘the art of islamic garden’ ಎಂಬ ಪುಸ್ತಕವೂ ಬಿಡುಗಡೆಗೊಂಡಿತು.ಆ ಮೂಲಕ ಯೂರೋಪ್ ಮತ್ತು ವಿವಿಧ ಗಲ್ಫ್ ರಾಷ್ಟ್ರಗಳಲ್ಲಿ ಇಸ್ಲಾಮಿಕ್ ಅಲಂಕಾರ ರೀತಿಯಲ್ಲಿರುವ ಹಲವಾರು ಉದ್ಯಾನವನಗಳ ವಿನ್ಯಾಸ ಮಾಡಲು ನನಗೆ ಸಾಧ್ಯವಾಯಿತು.
ಕೇಂಬ್ರಿಜ್‌ ಮಸೀದಿ ಪರಿಸರ ಸ್ನೇಹಿ ಮಾರ್ಗಸೂಚಿಗಳನ್ನು ಅಕ್ಷರಶಃ ಪಾಲಿಸಿ ನಿರ್ಮಿಸಲಾದ ಯೂರೋಪಿನ ಪ್ರಪ್ರಥಮ ಕಟ್ಟಡವೆನಿಸುತ್ತದೆ. ಉದ್ಯಾನವನದ ಚೈತನ್ಯ ವಿನಿಯೋಗದಿಂದ ಹಿಡಿದು ರಚನಾತ್ಮಕ ತಂತ್ರಗಳವರೆಗೂ ಪ್ರತಿಯೊಂದು ವಿಷಯಗಳನ್ನು ಕೂಡಾ ಸುಸ್ಥಿರತೆಯನ್ನು ಗಮನದಲ್ಲಿಟ್ಟುಕೊಂಡು ರೂಪಿಸಲಾಗಿತ್ತು.ಇಸ್ಲಾಮಿಕ್ ಮಾದರಿಯಲ್ಲಿರುವ ಉದ್ಯಾನವನಗಳೆಲ್ಲವೂ ಶಾಂತ ವಾತಾವರಣವನ್ನು ಸೃಷ್ಟಿಸುವುದರಿಂದ ಕೇಂಬ್ರಿಡ್ಜ್ ನಂತಹ ನಗರ ವಲಯಗಳಿಗೆ ಇಂತಹ ಉದ್ಯಾನವನಗಳು ಸೂಕ್ತವೆನಿಸುತ್ತದೆ. ರಸ್ತೆ ಮತ್ತು ಮಸೀದಿಯ ಒಳಾಂಗಣದ ಮಧ್ಯೆಯಿರುವ ಸೀಮಿತ ಸ್ಥಳವನ್ನು ವಿನ್ಯಾಸಗೊಳಿಸಲು ನನ್ನಲ್ಲಿ ಕೇಳಿಕೊಂಡಿದ್ದರು. ಒಳಗಿನ ಪ್ರಧಾನ ಉದ್ಯಾನವನ ಇಸ್ಲಾಮಿಕ್ ಮಾದರಿಯಲ್ಲಿ ನಿರ್ಮಿಸಲಾಗಿದ್ದು, 30m × 30m ವಿಸ್ತೀರ್ಣ ಹೊಂದಿದೆ.

ಖುರ್ಆನಿನಲ್ಲಿ ಬಣ್ಣಿಸಲಾದ ಫಿರ್ದೌಸಿನ ಉದ್ಯಾನವನಗಳ ಕನಿಷ್ಠ ಅನುಭೂತಿಯನ್ನಾದರೂ ಈ ಉದ್ಯಾನದ ಸಂದರ್ಶಕರಲ್ಲುಂಟುಮಾಡಬೇಕೆಂಬ ಗುರಿ ನನ್ನದಾಗಿತ್ತು. ಲಂಡನ್ ನಗರದ ಸದ್ದು-ಗದ್ದಲಗಳಿಂದೆಲ್ಲಾ ಮುಕ್ತಿ ನೀಡಿ ನೋಡುಗರಿಗೆ ನವ ಹುರುಪನ್ನು ಹುಟ್ಟಿಸುವ ಮಟ್ಟಿಗೆ ಉದ್ಯಾನವನದ ಪ್ರಭಾವವು ಪಸರಿಸಬೇಕೆಂದು ನಾನು ಬಯಸಿದ್ದೆ. ಒಂದೇ ವೇಳೆ ಇಂಗ್ಲಿಷ್‌ ಜನತೆಗೆ ಇಸ್ಲಾಮಿಕ್ ವಿನ್ಯಾಸವನ್ನೂ ಪರಿಚಯಿಸುವ ಮತ್ತು ಇಂಗ್ಲೆಂಡಿನ ನಾಗರಿಕರಿಗೆ ಮುದ ನೀಡುವ ಏನಾದರೂ ನಿರ್ಮಿಸಬೇಕೆಂಬ ಇರಾದೆ ಕೂಡಾ ನಾನು ಭಾಗವಾಗಿರುವ Urquhart and hunt landscape studio ದ ನಿಷ್ಣಾತ ಸದಸ್ಯರಿಗಿತ್ತು. ಏತನ್ಮಧ್ಯೆ, ಇಲ್ಲಿನ ಪಾಶ್ಚಾತ್ಯ ಸಂದರ್ಭದೊಂದಿಗೆ ಪೌರಾತ್ಯ ತೋಟಗಾರಿಕಾ ವಿನ್ಯಾಸವನ್ನು ಸಂಯೋಜಿಸಲು ಸಾಧ್ಯವೆಂದು ಕ್ಯಾಂಬ್ರಿಜ್‌ ನಲ್ಲಿನ ಇತರ ಜನರಿಗೆ ತಿಳಿಸಲು ಈ ಮೂಲಕ ನಮಗೆ ಸಾಧ್ಯವಾಯಿತು

ಉದ್ಯಾನವನದ ಮೂಲಧಾತುಗಳು:
ಇಸ್ಲಾಮಿಕ್ ತೋಟಗಾರಿಕಾ ವಿಧಾನದ ಮೂಲಧಾತುಗಳು ಸಾರ್ವತ್ರಿಕ ಸ್ವಭಾವ ಇರುವಂತದ್ದು. ಈಜಿಪ್ಟಿನ ಕೈರೋದಲ್ಲಿ ಪ್ರಯೋಗಿಸಿದ ವಿಧಾನವನ್ನೆ ಇಂಗ್ಲೆಂಡಿನ ಕೇಂಬ್ರಿಡ್ಜ್‌ನಲ್ಲೂ ಮುಖ್ಯವಾಗಿ ಬಳಸಿದ್ದೆವು. ಇಸ್ಲಾಮಿಕ್ ಉದ್ಯಾನವನಗಳ ಅಂಶಗಳಲ್ಲೊಂದಾದ ಫೋರ್ ಫೋಲ್ಡ್ ಮಾದರಿ(four fold design)ಅಥವಾ ಚಹರ್ ಬಾಗ್ ಮಾದರಿ(ಪರ್ಷಿಯನ್ ಭಾಷೆಯಲ್ಲಿ ನಾಲ್ಕು ಉದ್ಯಾನಗಳು ಎಂದರ್ಥ) ಕ್ಯೇಂಬ್ರಿಡ್ಜ್‌ನಲ್ಲಿ ಮಾತ್ರವಲ್ಲ ವಿಶ್ವದ ವಿವಿಧೆಡೆಗಳಲ್ಲಿ ಹಲವು ರೀತಿಯಲ್ಲಿ ಬಳಸಿದ್ದನ್ನು ಕಾಣಬಹುದು.
ಕೇಂಬ್ರಿಜ್‌ ವಿಶ್ವವಿದ್ಯಾಲಯದ ಕಟ್ಟಡಗಳ ಅಂಗಣಗಳೂ ಪ್ರಸ್ತುತ ಚಹರ್ ಬಾಗ್ ಮಾದರಿಯಲ್ಲೇ ಇದೆ. ಮಧ್ಯಕಾಲೀನ ಯೂರೋಪಿನ ಕ್ರೈಸ್ತ ವಾಸ್ತುಶಿಲ್ಪಗಳಲ್ಲೂ ಈ ಮಾದರಿ ವ್ಯಾಪಕವಾಗಿ ಕಾಣಬಹುದು. ಸಂಪೂರ್ಣವಾಗಿಯೂ ಯೂರೋಪಿಯನ್ ಎಂದು ನಂಬಲಾದ ಕ್ಯೇಂಬ್ರಿಡ್ಜ್‌ನ ಪರಂಪರಾಗತ ವಾಸ್ತುಶಿಲ್ಪದಲ್ಲಿ ಇಸ್ಲಾಮಿಕ್ ವಾಸ್ತುಶಿಲ್ಪದ ಪ್ರಭಾವ ಕಿರಿದಲ್ಲವೆಂಬುವುದು ಸಾರಾಂಶ. ಇಸ್ಲಾಮಿಕ್ ಉದ್ಯಾನವನದ ಮತ್ತೊಂದು ಪ್ರಮುಖ ಘಟಕವಾಗಿದೆ ಆವರಣ(enclosure).ಇದು ಹೊರಗಿನ ವಿಪರೀತ ಬಿಸಿಲು ಹಾಗೂ ಧೂಳುಗಾಳಿಗಳನ್ನೆಲ್ಲಾ ತಡೆದು ಒಳಾಂಗಣವನ್ನು ಸಂರಕ್ಷಿಸಿ ಬೆಳವಣಿಗೆಗೆ ಅನುಕೂಲವಾದ ಸುರಕ್ಷಿತ ವಲಯ(sanctuary)ವನ್ನುಒದಗಿಸುವುದರಿಂದ enclosure ಎಂಬುವುದು ಆಶಯ ಪ್ರಧಾನ ಎನಿಸಿದೆ. ಕೇಂಬ್ರಿಡ್ಜ್ ನ ವಿಷಯಕ್ಕೆ ಬಂದರೆ ಹೊರಭಾಗವು ಜನನಿಬಿಡತೆ, ಮಾಲಿನ್ಯಗಳಿಂದ ತುಂಬಿದ್ದರೂ ಈ ಆವರಣ(enclosure) ಮೂಲಕ ಒಳಗೆ ಹಚ್ಚ ಹಸಿರಾದ ಉದ್ಯಾನವನವೊಂದರ ಬೆಳವಣಿಗೆ ಸಾಧ್ಯವಾಗುತ್ತದೆ. ಅದರಿಂದಲೇ ಇದನ್ನೊಂದು ಆಂತರಿಕ ಉದ್ಯಾನವೆನ್ನಬಹುದು.
ಆಂತರಿಕ ಉದ್ಯಾನವೆಂಬ ಈ ಪರಿಕಲ್ಪನೆ ಖಂಡಿತವಾಗಿಯೂ ಗಮನಾರ್ಹ. ಸೂಫಿ ಕಾವ್ಯಲೋಕದ ಅಗ್ರಗಣ್ಯ ಜಲಾಲುದ್ದೀನ್ ರೂಮಿ(ರ)ರು ಹೇಳಿದಂತೆ “ನಿಜವಾದ ಉದ್ಯಾನವನದ ಪರಿಣಾಮಗಳೆಲ್ಲವೂ ಮಾನವ ಹೃದಯಗಳಲ್ಲೇ ಅಡಗಿರುವುದು,ಹೊರಗಲ್ಲ”.ಕೊನೆಯಿಲ್ಲದ ನಮ್ಮ ಸೋಮಾರಿ ಚಿಂತನೆಗಳಿಂದ ಸಂತಸಗೊಳಿಸಲು ಆತ್ಮವೆಂಬ ಹೂದೋಟವನ್ನು ಪರಿಪಾಲಿಸಬೇಕಿದೆ. ಇಸ್ಲಾಮಿನಲ್ಲಿ ಇದಕ್ಕಿರುವ ದಾರಿಗಳು ಪ್ರಾರ್ಥನೆ, ಧ್ಯಾನ, ದೈವಿಕ ಚಿಂತನೆ ಎಂಬಿತ್ಯಾದಿಗಳು. ಸೂರಃ ಅರ್ರಹ್ಮಾನಿನಲ್ಲಿ ನಾಲ್ಕು ಸ್ವರ್ಗೀಯ ಆನಂದಗಳ ಕುರಿತು ಪರಾಮರ್ಶೆಯಿದೆ; ಪರಂಪರಾಗತ ಚಹರ್ ಬಾಗ್ ಮಾದರಿಯ ಉತ್ಪತ್ತಿ ಮತ್ತು ಸ್ಪೂರ್ತಿ ಇದರಿಂದಲೇ. ಸ್ಪೇನ್ ನ ಅಲ್ ಹಂರಾದ Geralife gardens,ಭಾರತದ ಮುಘಲ್ ಸ್ಮಾರಕಸೌಧಗಳು, ಇರಾನಿನ ಫಿನ್ ಗಾರ್ಡನ್, ಚಹಲ್ ಸುತುನ್ ಎಂಬಿವುಗಳು ಚಹರ್ ಬಾಗ್ ಮಾದರಿಗೆ ಅತ್ಯುತ್ತಮ ಉದಾಹರಣೆಗಳಾಗಿವೆ.

ಇಸ್ಲಾಮಿಕ್ ತೋಟಗಾರಿಕಾ ವಿಧಾನದ ಇತರ ಪ್ರಮುಖ ಘಟಕಗಳಾಗಿವೆ ನೀರು ಮತ್ತು ನೆರಳು.ನೀರು ಹಾಗೂ ಹರಿಯುವ ನದಿಗಳನ್ನು ಪರಾಮರ್ಶಿಸಿದ ಹಲವಾರು ಖುರ್ಆನ್ ಸೂಕ್ತಗಳಿವೆ.ನೀರಿನ ಪ್ರಾಮುಖ್ಯತೆ ಆಧ್ಯಾತ್ಮಿಕವಾಗಿಯೂ ಭೌತಿಕವಾಗಿಯೂ(physical)ಗ್ರಹಿಸಬಹುದು.ಕಾರಣ, ಶಾಶ್ವತವಾಗಿ ಹರಿಯುವ ನದಿಗಳು ಭೂಮಿಯ ಸಕಲ ಜೀವಜಾಲಗಳ ಉತ್ಪತ್ತಿಯನ್ನು ಪ್ರತಿನಿಧೀಕರಿಸುತ್ತದೆ. ಕೆಲವು ಸಮಯಗಳಲ್ಲಿ ಅವು ಶಾಂತವೂ ಕೆಲ ವೇಳೆಗಳಲ್ಲಿ ಪ್ರಕ್ಷುಬ್ಧವೂ ಆಗಿರುತ್ತದೆ. ಆದುದರಿಂದ ಅದನ್ನು ಮಾನವರ ಆತ್ಮದೊಂದಿಗೆ ಹೋಲಿಸಬಹುದು. ದೇವರ ಇಷ್ಟದಾಸರಿಗೆ ಲಭಿಸುವ ದೈವಿಕ ಜ್ಞಾನದೊಂದಿಗೆ ಶುದ್ಧ ನೀರನ್ನು ಹೋಲಿಸುವ ಪರಿಪಾಠ ಖುರ್ಆನಿನಲ್ಲಿ ಕಾಣಬಹುದು‌.ಖುರ್ಆನ್ ಹೇಳಿದ ಸ್ವರ್ಗೋದ್ಯಾನಗಳಲ್ಲಿ ಪ್ರತಿಯೊಂದರಲ್ಲೂ ಮಧ್ಯಭಾಗದಲ್ಲಿ ಜಲಮೂಲಗಳಿಂದ ನಾಲ್ಕು ನದಿಗಳು ಹರಿಯುತ್ತದೆ.ಆದರೆ ಭೌಮೋದ್ಯಾನವನಗಳ ನೀರಿನ ಅಲಭ್ಯತೆ ಮತ್ತು ಪರಿಪಾಲನಾ ವೆಚ್ಚ ಪರಿಗಣಿಸಿ ನದಿಗಳಿಗೆ ಬದಲಾಗಿ ಇಲ್ಲಿರುವುದು ನಾಲ್ಕು ಕಾಲುದಾರಿಗಳು.ನೀರು,ನೆರಳು ಎಂಬೀ ಅಂಶಗಳು ಕೇಂಬ್ರಿಡ್ಜ್‌ನ ಶೀತಲ ವಾತಾವರಣಕ್ಕೆ ಅನಿವಾರ್ಯವಲ್ಲದಿದ್ದರೂ ಒಟ್ಟಿನಲ್ಲಿ ಉದ್ಯಾನವನದ ದೃಶ್ಯವನ್ನು ರಮಣೀಯವಾಗಿಸುವುದರಲ್ಲಿ ಗಮನಾರ್ಹ ಪಾತ್ರವಹಿಸುತ್ತದೆ.

ಉದ್ಯಾನವನದ ರಾಜ ಪ್ರೌಢಿಮೆ:
ಜ್ಯಾಮಿತೀಯ ವಿನ್ಯಾಸಗಳೆಲ್ಲವೂ ಒಂದು ವೃತ್ತಾಕಾರದ ಮಧ್ಯಬಿಂದುವಿನ ಮೂಲಕ ಪ್ರಾರಂಭವಾಗುವುದರಿಂದ ಉದ್ಯಾನವನದ ಮಧ್ಯಭಾಗದಲ್ಲಿ ಒಂದು ಕಾರಂಜಿಯನ್ನು ನಿರ್ಮಿಸಬೇಕಿತ್ತು.ಮಾತ್ರವಲ್ಲದೆ ಇದು ಇಸ್ಲಾಮಿಕ್ ಉದ್ಯಾನವನದ ಪ್ರಧಾನ ಆಕರ್ಷಣೆಯೂ ಹೌದು.ಅದರ ಸಮೀಪದಲ್ಲಿ ನಾವು ಸಣ್ಣ ಚಹರ್ ಬಾಗ್ ಸಿದ್ಧಪಡಿಸಿದ್ದೆವು.ಕೆನೆ ಬಣ್ಣದಲ್ಲಿರುವ ಒಂದು ತರಹದ ಶಿಲೆಯ(York stone)ಮೂಲಕ ಕಾಲುದಾರಿಗಳನ್ನು ನಿರ್ಮಿಸಲಾಗಿತ್ತು.ಹೂದೋಟವನ್ನು ವಿಭಿನ್ನ ಗಿಡಗಳಿಂದ ಅಲಂಕರಿಸಿದ್ದೆವು.ಗುಲಾಬಿ,ಜೆರೇನಿಯಂ,ಐರಿಸ್ ಮುಂತಾದವುಗಳು ಮತ್ತು ಕೆಲವು ಹೂಬಿಡುವ ಪೊದೆಗಳು(flowering shrubs), ನಾಸಿಡಸ್ ಹಾಗೂ ಟುಲಿಪ್ ವರ್ಗಕ್ಕೆ ಸೇರಿದ ಗಿಡಗಳನ್ನಾಗಿತ್ತು ಉದ್ಯಾನವನದಲ್ಲಿ ಮುಖ್ಯವಾಗಿ ನೆಟ್ಟು ಬೆಳೆಸಿದ್ದು. ಪರಿಮಳ ಬೀರುವ ವಾತಾವರಣವೆಂಬುವುದೇ ಇಸ್ಲಾಮಿಕ್ ಗಾರ್ಡನಿಂಗ್ ನ ಪ್ರಧಾನ ಸವಿಶೇಷತೆ. ಕಾರಣ, ಅವುಗಳು ಹೊಸತೆರೆನಾದ ಆನಂದ ನೀಡುವುದಲ್ಲದೆ ನಮ್ಮೊಳಗೆ ಗಾಢವಾಗಿರುವ ಹಲವು ಚಿಂತನೆಗಳನ್ನು ಹೊರತರುವ ಬೃಹತ್ ಶಕ್ತಿಯನ್ನೂ ಹೊಂದಿರುತ್ತದೆ.
ಗಿಡಗಳ ಆಯ್ಕೆ ಉದ್ಯಾನವನದ ಹಚ್ಚ ಹಸಿರನ್ನು ಹೆಚ್ಚಿಸಿ ಸಂದರ್ಶಕರಿಗೆ ರಮಣೀಯ ದೃಶ್ಯವೊದಗಿಸಿ ಅನನ್ಯಾನುಭೂತಿ ನೀಡಲು ಸಹಾಯಕವಾಯಿತು. ಉದ್ಯಾನ ನಿರ್ಮಾಣಕ್ಕಾಗಿ ನಾವು ಆರಿಸಿದ ಗಿಡಗಳು ಹೇರಳವಾಗಿ ತುರ್ಕಿಯಲ್ಲಿ ಕಂಡುಬರುವುದೇ ಆಗಿತ್ತು. ತುರ್ಕಿ ಏಶ್ಯಾದ ದಕ್ಷಿಣ ಪಶ್ಚಿಮ ದಿಕ್ಕಿನಲ್ಲಿ ಯೂರೋಪಿಗೆ ತಾಗಿ ನಿಲ್ಲುವುದರಿಂದ ಬ್ರಿಟನಿನ ವಾತಾವರಣದಲ್ಲೂ ಅವುಗಳು ಚೆಂದ ಎಂದು ನಾವು ಬಗೆದೆವು.ಇವುಗಳೊಂದಿಗೆ ಕೆಲ ಹುಲ್ಲುಗಳನ್ನು ಮತ್ತು ಸಸ್ಯಗಳನ್ನು ಪ್ರಕೃತಿದತ್ತ ರೀತಿಯಲ್ಲಿ ನಾವು ಸಿದ್ಧಪಡಿಸಿದೆವು.ಇದರಿಂದ ಒಂದು ನಗರದಲ್ಲಿ ಪರಿಸರ ಸ್ನೇಹಿಯೂ ಸುಸ್ಥಿರವೂ ಆದ ಉದ್ಯಾನವನ ಹೇಗಿರಬೇಕೆಂಬುವುದಕ್ಕೆ ಆಧುನಿಕ ಮಾದರಿಯಾಗಿ ಕೇಂಬ್ರಿಡ್ಜ್ ಮಸೀದಿಯ ಉದ್ಯಾನವನವನ್ನು ಜನರ ಮುಂದಿಡಳು ನಮಗೆ ಸಾಧ್ಯವಾಯಿತು.
ಉದ್ಯಾನವನಕ್ಕೆ ಅಗತ್ಯವಾದ ಗಿಡಗಳನ್ನು ಹೊರಗಿನಿಂದ ಆಯ್ಕೆಗೊಳಿಸಿರುವ ಹಿಂದೆ ಇಸ್ಲಾಮಿಕ್ ಪ್ಲಾಂಟಿಂಗ್ ಮಾದರಿಯನ್ನು ಬ್ರಿಟಿಷ್ ರೀತಿಯೊಂದಿಗೆ ಸಂಯೋಜಿಸುವ,ಜೀವವೈವಿಧ್ಯತೆಗಳಿಗೆ ಪ್ರೋತ್ಸಾಹ ನೀಡುವ,ವಿದೇಶಿಗಳಾದ ಸಸ್ಯಗಳ ಬಳಕೆ ಎಂಬೀ ಗುರಿಗಳೂ ಇತ್ತು.ಫಲವೃಕ್ಷಗಳು ಸ್ವರ್ಗೀಯೋದ್ಯಾನವನಗಳ ಪ್ರಧಾನ ಘಟಕವಾಗಿರುವುದರಿಂದಲೇ ಗಹನವಾದ ವಿಶ್ಲೇಷಣೆಯ ಬಳಿಕ ನಾವು ಇದಕ್ಕಾಗಿ ಕಾಡು ಅಂಜೂರದ ವೃಕ್ಷಗಳನ್ನು(crab apple tree)ಆರಿಸಿದೆವು. ಬಳಿಕ ಅದನ್ನು ಪ್ರತಿ ಎಂಟು ಶೆಡ್ ಗಳಲ್ಲಿ ವಿನ್ಯಾಸಗೊಳಿಸಿದೆವು. ಇದಕ್ಕೆ ಗುಲಾಬಿ ಬಣ್ಣದ ಎಲೆಗಳು ಮತ್ತು ರಕ್ತ ವರ್ಣದ ಫಲಗಳು ಇರುತ್ತದೆ.ಉದ್ಯಾನವನ ನಿರ್ಮಾಣದ ಬಗ್ಗೆ ಊರ ನಿವಾಸಿಗಳಿಂದ ದೊರೆತ ಅಪಾರ ಮಟ್ಟದ ಸಕಾರಾತ್ಮಕ ಸ್ಪಂದನೆ ಕಂಡು ಪ್ರಮುಖ ಭೂದೃಶ್ಯ ವಿನ್ಯಾಸಕಾರ ಪೆಟ್ರ ಉಲ್ರಿಕ್ ಈ ಯೋಜನೆಯಲ್ಲಿ ನಮ್ಮೊಂದಿಗೆ ಕೈಜೋಡಿಸಿದ್ದರು.

ಆನಂದದಿ ಲೀನವಾಗುವ ಆತ್ಮಗಳು;
ಒಂದು ವರ್ಷದಲ್ಲೇ ನಾವು ಬಯಸಿದ ರೀತಿಯಲ್ಲಿ ಉದ್ಯಾನವನವು ಬೆಳೆಯಿತು. ಮಸೀದಿಯ ವಿನ್ಯಾಸದೊಂದಿಗೆ ಪೂರ್ಣವಾಗಿಯೂ ಹೊಂದಿಕೊಳ್ಳುವ ಚೈತನ್ಯ ಅದಕ್ಕಿತ್ತು. ಮಸೀದಿಯ ಮುಂದೆ ಗಿಡಮರಗಳಿಂದ ಸುತ್ತಲ್ಪಟ್ಟ ಜಲಧಾರೆಯ ಸಮೀಪ ಸೇರುವಾಗ ಅನನ್ಯವಾದ ನಿರಾಳತೆಯೊಂದು ಸಂದರ್ಶಕರಿಗೆ ಲಭಿಸುತ್ತದೆ. ಲಾಕ್ ಡೌನಿನ ಮುನ್ನ ದೂರ ದೇಶಗಳಿಂದ ಮಸ್ಲಿಮರೂ ಮುಸ್ಲಿಮೇತರರೂ ಧಾರಾಳವಾಗಿ ತಲುಪುತ್ತಿದ್ದರು. ಮಸೀದಿಗೆ ಪ್ರಾರ್ಥನೆಗಾಗಿ ಬರುವ ವಿಶ್ವಾಸಿಗಳ ಹಾಗೂ ಮಸೀದಿಯ ವಿನ್ಯಾಸವನ್ನು ಸವಿಯಲು ಬರುವವರ ನಯನಕ್ಕೆ ಮೊದಲು ಬೀಳುವುದು ನಮ್ಮ ಉದ್ಯಾನವನವಾಗಿದೆ. ಇಲ್ಲಿ ನಡೆದಾಡುವುದು,ಪರಿಸರದ ಸೌಂದರ್ಯ ಸವಿಯುವುದು ಹಾಗೂ ಪರಿಪಾಲಿಸುವುದು ಮನಸ್ಸಿಗೂ ಆತ್ಮಕ್ಕೂ ವಿಶೇಷ ಹುರುಪನ್ನು ನೀಡುತ್ತದೆ ಎಂಬುದರಲ್ಲಿ ಸಂದೇಹವಿಲ್ಲ. ಚಹರ್ ಬಾಗ್ ಮಾದರಿಯಲ್ಲಿರುವ ಇಸ್ಲಾಮಿಕ್ ಉದ್ಯಾನವನಗಳು ಅತ್ಯಂತ ಸುಂದರ ವಾತಾವರಣ ಹೊಂದಿರುವುದರಿಂದ ಅವುಗಳನ್ನು ಸ್ವರ್ಗೋದ್ಯಾನಗಳೊಂದಿಗೆ ಹೋಲಿಸಬಹುದೇನೋ ಅನಿಸುತ್ತದೆ.
ಈ ಕೋರೋನಾ ಕಾಲದಲ್ಲಿ ನಾವೆಲ್ಲರೂ ಮರಣವನ್ನು ಅತ್ಯಂತ ಗಂಭೀರವಾಗಿ ಕಾಣುವವರಾಗಿದ್ದೇವೆ.ಶಾಶ್ವತವಾದ ಸ್ವರ್ಗ ಸುಖದ ಪ್ರೇರಣೆ ಪಡೆದು ಭೌತಿಕ ಉದ್ಯಾನವನಗಳಲ್ಲಿ ಸಮಯ ಕಳೆಯುವಾಗ ಅವರ್ಣನೀಯ ಶಾಂತಿ ಮತ್ತು ಸಮಾಧಾನವು ನಮಗೆ ಸಿಗುತ್ತದೆ. ನೆನಪಿಡಿ,ಪವಿತ್ರವಾದ ಸ್ವರ್ಗದ ಉದ್ಯಾನವನಗಳಲ್ಲಿ ಸಮಾಧಾನ ಇದ್ದೇ ಇರುತ್ತದೆ.

ಮೂಲ ಲೇಖಕಿ: ಎಮ್ಮಾ ಕ್ಲಾರ್ಕ್‌
ಕನ್ನಡಕ್ಕೆ: ತ್ವಾಹಿರ್‌ ಸಿದ್ದೀಖ್

1 Comment

Leave a Reply

*