ರಮ್ಜಾನ್ ತಿಂಗಳ ಭರ್ತಿ ಮೂವತ್ತು ದಿನಗಳ ನಂತರ ಈದ್ ಬಂದಿತ್ತು. ಈದ್ ನ ಮುಂಜಾನೆ ಅದೆಷ್ಟು ಶುಭ್ರ ಮತ್ತು ಸುಂದರವಾಗಿತ್ತು! ಮರಗಳೆಲ್ಲಾ ಹಚ್ಚ ಹಸಿರು, ಹೊಲಗದ್ದೆಗಳಿಗೂ ಹಬ್ಬದ ಕಳೆ, ಆಕಾಶಕ್ಕೂ ಗುಲಾಬಿ ಸೊಬಗು ಬಂದಿತ್ತು. ಓಹ್ ಸೂರ್ಯನನ್ನು ನೋಡಿ! ಹಿಂದೆಂದಿಗಿಂತಲೂ ಶುಭ್ರ ಮತ್ತು ಪ್ರಕಾಶಮಾನವಾಗಿ ಹೊಳೆಯುತ್ತಾ ಲೋಕಕ್ಕೆ ಈದ್ ನ ಶುಭಾಷಯ ಹೇಳಲು ಬರುತ್ತಿದ್ದ. ಗ್ರಾಮದ ತುಂಬೆಲ್ಲಾ ಹಬ್ಬದ ವಾತಾವರಣ ಕಳೆಗಟ್ಟಿತ್ತು. ಎಲ್ಲರೂ ಮುಂಜಾನೆಯೇ ಈದ್ಗಾ ಮಸೀದಿಯ ಕಡೆಗೆ ಹೊರಟಿದ್ದರು. ಒಬ್ಬನ ಅಂಗಿಯ ಬಟನ್ ಕಿತ್ತು ಬಂದಿದ್ದನ್ನು ಕಂಡು ಸೂಜಿ ಮತ್ತು ನೂಲು ತರಲೆಂದು ನೆರೆಮನೆಗೆ ಓಡುತ್ತಿದ್ದ. ಇನ್ನೊಬ್ಬನ ಬೂಟಿನ ಚರ್ಮ ಗಟ್ಟಿಯಾಗಿದ್ದಕ್ಕೆ ಎಣ್ಣೆ ತಿಕ್ಕಿ ಹದಮಾಡಲು ಎಣ್ಣೆಯನ್ನೋ , ಗ್ರೀಸನ್ನೋ ತರಲು ಪಕ್ಕದ ಕಿರಾಣಿ ಅಂಗಡಿಗೆ ಧಾವಿಸುತ್ತಿದ್ದ. ಕೆಲವರು ಎಮ್ಮೆಗಳಿಗೆ ಮೇವು ಹಾಕುತ್ತಿದ್ದರು, ಹೇಗಿದ್ದರೂ ಈದ್ಗಾ ದಿಂದ ಮರಳುವಾಗ ಮಧ್ಯಾಹ್ನವೇ ಕಳೆಯುತ್ತಿತ್ತು. ಅದು ಗ್ರಾಮದಿಂದ ಸುಮಾರು ಮೂರು ಮೈಲಿ ದೂರದಲ್ಲಿತ್ತು. ಅಲ್ಲಿ ನೂರಾರು ಜನರು ಶುಭಾಷಯ ಹೇಳಲೋ, ಹರಟೆ ಹೊಡೆಯಲೋ ಸಿಗುತ್ತಿದ್ದರು. ಎಷ್ಟೆಂದರೂ ಮಧ್ಯಾಹ್ನದವರೆಗೆ ಅದು ಮುಗಿಯುತ್ತಲೇ ಇರುತ್ತಿರಲಿಲ್ಲ.
ಹುಡುಗರಂತೂ ಎಲ್ಲರಿಗಿಂತಲೂ ಹೆಚ್ಚೇ ಉತ್ಸುಕರಾಗಿದ್ದರು. ಅವರಲ್ಲಿ ಕೆಲವರು ಕೇವಲ ಒಂದೇ ಒಂದು ಉಪವಾಸ ಹಿಡಿದಿದ್ದವರಾಗಿದ್ದರು. ಅದು ಕೂಡಾ ಮಧ್ಯಾಹ್ನದವರೆಗೆ ಮಾತ್ರವಾಗಿತ್ತು. ಇನ್ನು ಕೆಲವರು ಅಷ್ಟೂ ಮಾಡಿರಲಿಲ್ಲ. ಆದರೂ ಇಂದು ಈದ್ಗಾಕ್ಕೆ ಹೊರಡುವ ಅವರ ಉತ್ಸಾಹವನ್ನು ಯಾರೂ ತಡೆಯುವಂತಿರಲಿಲ್ಲ. ಉಪವಾಸ ಹಿಡಿಯುವುದು ಯುವಕರಿಗೆ ಮತ್ತು ಹಿರಿಯರಿಗೆ ಬಿಟ್ಟ ವಿಷಯವಾಗಿತ್ತು. ಹುಡುಗರಿಗೆ ಅದು ಈದ್ ನ ದಿನ ಅಷ್ಟೆ. ಅವರು ಯಾವಾಗಲೂ ಮಾತನಾಡುತಿದ್ದುದೂ ಆ ದಿನದ ಬಗ್ಗೆಯೇ. ಬಹಳ ದಿನಗಳ ನಂತರ ಆ ದಿನವು ಬಂದೇ ಬಿಟ್ಟಿತ್ತು. ಆದರೆ ಈಗ ಇನ್ನೂ ನಿಧಾನಿಸುತ್ತಿರುವ ಈ ದೊಡ್ಡವರನ್ನು ನೋಡಿದಾಗ ಹುಡುಗರಿಗೆ ತಾಳ್ಮೆ ತಪ್ಪುತ್ತಿತ್ತು. ಆ ದಿನ ಮಾಡಬೇಕಾದ ಕೆಲಸ ಕಾರ್ಯಗಳ ಬಗ್ಗೆ ಹುಡುಗರಿಗೆ ಸ್ವಲ್ಪವೂ ಕಾಳಜಿ ಇರಲಿಲ್ಲ. ಅಂದಿನ ಸೀರ್ ಕುರ್ಮಾ ಮಾಡಲು ಬೇಕಾದಷ್ಟು ಹಾಲು ಮತ್ತು ಸಕ್ಕರೆ ಇದೆಯೇ ಎಂಬುದರ ಬಗ್ಗೆಯೂ ಅವರು ತಲೆಕೆಡಿಸಿಕೊಂಡಿರಲಿಲ್ಲ. ಅವರ ತಲೆಯಲ್ಲಿದ್ದುದು ಸೀರ್ ಕುರ್ಮಾವನ್ನು ಸವಿಯುವುದು ಮಾತ್ರ. ಅಬ್ಬಾಜಾನ್ ದಮ್ಮು ಕಟ್ಟಿಕೊಂಡು ಚೌದರಿ ಕರೀಮ್ ಆಲಿಯ ಮನೆಗೆ ಏಕೆ ಓಡುತ್ತಿದ್ದರು ಎಂದೂ ಅವರಿಗೆ ತಿಳಿಯುತ್ತಿರಲಿಲ್ಲ. ಆ ಚೌದರಿ ಮನಸ್ಸು ಮಾಡಿದರೆ ಈದ್ ಹಬ್ಬದ ದಿನವನ್ನು ಶೋಕದ ದಿನವನ್ನಾಗಿ ತಿರುಗಿಸಬಲ್ಲವನೆಂದೂ ಅವರಿಗೆ ತಿಳಿಯುತ್ತಿರಲಿಲ್ಲ. ಅವರ ಜೇಬುಗಳು ನಾಣ್ಯಗಳನ್ನು ತುಂಬಿಕೊಂಡು ಕುಬೇರನ ಡೊಳ್ಳು ಹೊಟ್ಟೆಯಂತೆ ಕಾಣುತ್ತಿದ್ದವು. ಅವರು ಆಗಾಗ ಆ ನಾಣ್ಯಗಳನ್ನು ಎಣಿಸುತ್ತಲೇ ಇರುತ್ತಿದ್ದರು. ಜೇಬಿಗೇರಿಸುವುದಕ್ಕಿಂತ ಮುಂಚೆ ಇನ್ನೊಮ್ಮೆ ಮರು ಎಣಿಸಿಕೊಳ್ಳುತ್ತಿದ್ದರು. “ಒಂದು , ಎರಡು, …ಹತ್ತು, ಹನ್ನೆರಡು” ಹೀಗೆ ಮಹಮ್ಮೂದು ಎಣಿಸಿಕೊಳ್ಳುತ್ತಿದ್ದ. ಅವನ ಬಳಿ ಒಟ್ಟು ಹನ್ನೆರಡು ಪೈಸೆಗಳಿದ್ದವು. ಮೊಹಸಿನ್ ನ ಬಳಿ “ಒಂದು , ಎರಡು, ಮೂರು, ಎಂಟು, ಒಂಬತ್ತು, ಹದಿನೈದು..” ಪೈಸೆಗಳಿದ್ದವು. ಹೀಗೆ ಈ ಲೆಕ್ಕವಿಲ್ಲದ ಪೈಸೆಗಳಿಂದ ಅವರಿಗೆ ಲೆಕ್ಕವಿಲ್ಲದಷ್ಟು ಸಾಮಾನುಗಳನ್ನು ಕೊಂಡುಕೊಳ್ಳುವುದಿತ್ತು : ಆಟಿಕೆಗಳು, ಸಿಹಿ ತಿನಿಸುಗಳು, ಪೇಪರಿನ ಪೀಪಿ, ರಬ್ಬರ್ ಚೆಂಡು – ಇನ್ನೂ ಏನೇನೊ ಸಾಮಾನುಗಳು.
ಆ ಹುಡುಗರಲ್ಲಿ ಅತೀ ಹೆಚ್ಚು ಸಂತೋಷ ಪಟ್ಟವ ಎಂದರೆ ಹಮೀದ್. ಅವನಿಗೆ ಇನ್ನೂ ನಾಲ್ಕು ವರ್ಷ ಪ್ರಾಯ. ಸಾಧಾರಣವಾಗಿ ಉಡುಗೆ ಧರಿಸಿದ ಪೀಚಲು ದೇಹದ ಹುಡುಗ. ಅವನ ತಂದೆ ಕಳೆದ ವರ್ಷ ಕಾಲರಾ ರೋಗದಿಂದ ತೀರಿಕೊಂಡಿದ್ದರು. ಆನಂತರ ಅವನ ತಾಯಿಯೂ ಹಾಸಿಗೆ ಹಿಡಿದಿದ್ದಳು. ಅವಳಿಗೆ ಏನಾಯಿತೆಂದು ಯಾರಾದರೂ ತಿಳಿಯುವುದಕ್ಕೆ ಮೊದಲೇ ಅವಳು ಕೂಡಾ ತೀರಿಕೊಂಡಿದ್ದಳು. ಈಗ ಹಮೀದ್ ಮಲಗುವುದು ಅವನ ಅಜ್ಜಿ ಅಮಿನಾಳ ಮಡಿಲಿನಲ್ಲಿ. ಅದು ಹಮೀದ್ ನಿಗೆ ಅತ್ಯಂತ ಖುಷಿ ಕೊಡುವ ವಿಷಯ. ಅಜ್ಜಿ ಯಾವಾಗಲೂ ಹೇಳುತ್ತಿದ್ದಳು. ತಂದೆ ತುಂಬಾ ಹಣ ಸಂಪಾದಿಸಲು ಹೋಗಿದ್ದಾನೆ. ಒಂದು ದಿನ ಗೋಣಿ ಚೀಲದ ತುಂಬಾ ಬೆಳ್ಳಿ ನಾಣ್ಯಗಳನ್ನು ತುಂಬಿಕೊಂಡು ಮನೆಗೆ ವಾಪಾಸಾಗುತ್ತಾನೆ ಎಂದು. ಹಾಗೆಯೇ ಅವನ ತಾಯಿ ಕೂಡಾ ಅವನಿಗೆ ಬೇಕಾದಷ್ಟು ಉಡುಗೊರೆಗಳನ್ನು ಬೇಡಿ ತರಲು ಅಲ್ಲಾಹನ ಬಳಿಗೆ ಹೋಗಿದ್ದಾಳೆ ಎನ್ನುತ್ತಿದ್ದಳು. ಇದು ಹಮೀದ್ ನಿಗೆ ತುಂಬಾ ಖುಷಿ ಕೊಡುತಿತ್ತು. ಇಂತಹ ಆಸೆಯೊಂದಿಗೆ ಬದುಕುವುದು ದೊಡ್ಡ ವಿಷಯ. ಅದೂ ಆ ಮಗುವಿಗೆ, ಮಗುವಿನ ಕಲ್ಪನೆಯೇ ಅಂತಹುದು. ಅದು ಒಂದು ಸಣ್ಣ ಸಾಸಿವೆಯನ್ನೂ ಪರ್ವತದಷ್ಟು ದೊಡ್ಡದು ಮಾಡಬಹುದು. ಹಮೀದ್ ನ ಕಾಲುಗಳಲ್ಲಿ ಬೂಟುಗಳಿರಲಿಲ್ಲ: ತಲೆಯ ಮೇಲಿನ ಟೊಪ್ಪಿಗೆ ಹುಡಿಹುಡಿಯಾಗಿ ಕೊಳಕಾಗಿತ್ತು. ಅದರ ಸುತ್ತಲಿದ್ದ ಬಂಗಾರದ ಬಣ್ಣದ ನೂಲಿನ ಎಳೆಗಳು ಕಪ್ಪು ಬಣ್ಣಕ್ಕೆ ತಿರುಗಿದ್ದವು. ಆದರೂ ಹಮೀದ್ ಹೆಚ್ಚು ಕಡಿಮೆ ಸಂತೋಷವಾಗಿಯೇ ಇದ್ದ. ಆದರೂ ಅವನ ತಂದೆ ಗೋಣಿಚೀಲದ ತುಂಬಾ ಬೆಳ್ಳಿ ಮತ್ತು ತಾಯಿ ಅಲ್ಲಾಹನ ಬಳಿಯಿಂದ ಉಡುಗೊರೆಗಳನ್ನು ತಂದಾಗ ತನ್ನ ಮನಸ್ಸಿನಲ್ಲಿರುವ ಎಲ್ಲಾ ಆಸೆಗಳನ್ನು ಈಡೇರಿಸಬಹುದೆಂದು ಹಮೀದ್ ನಿಗೆ ಗೊತ್ತಿತ್ತು. ಆಗ ಅವನ ಬಳಿ ಮಹಮ್ಮೂದ್, ಮೊಹಸಿನ್, ನೂರಿ ಮತ್ತು ಸಮ್ಮಿ ಗಿಂತಲೂ ಹೆಚ್ಚು ಪೈಸೆ ಇರುತಿತ್ತು.
ತನ್ನ ಗುಡಿಸಲಿನ ಒಳಗೆ ಅಮೀನಾ ತನ್ನ ದುರಾದೃಷ್ಟವನ್ನು ನೆನೆದು ದುಃಖದ ಕಣ್ಣೀರು ಸುರಿಸುತ್ತಿದ್ದಳು. ಅಂದು ಈದ್ ಆದರೆ ಅವಳ ಬಳಿ ಒಂದು ಹಿಡಿಯಷ್ಟು ಧಾನ್ಯವೂ ಇರಲಿಲ್ಲ. ಒಂದು ವೇಳೆ ಅವಳ ಮಗ ಅಬೀದ್ ಇರುತ್ತಿದ್ದರೆ ಆ ಈದ್ ಹಬ್ಬದ ರೀತಿಯೇ ಬೇರೆ ಇರುತ್ತಿತ್ತು!
ಹಮೀದ್ ತನ್ನ ಅಜ್ಜಿಯ ಬಳಿ ಹೇಳುತ್ತಿದ್ದ. “ಅಜ್ಜಿ ನನಗೆ ಬೈಬೇಡಾ, ಎಲ್ಲರಿಗಿಂತ ಮೊದಲು ನಾನೇ ವಾಪಾಸು ಬರುತ್ತೇನೆ”.
ಅಮೀನಾ ದುಃಖಿತಳಾಗಿದ್ದಳು. ಇತರ ಹುಡುಗರು ತಮ್ಮ ತಮ್ಮ ತಂದೆಯಂದಿರ ಜೊತೆಯಲ್ಲಿ ಹೋಗುತ್ತಿದ್ದರು. ಆದರೆ ಹಮೀದ್ ನಿಗೆ ಅವಳೇ ಏಕೈಕ ‘ತಂದೆ’ಯಾಗಿದ್ದಳು. ಅವನನ್ನೊಬ್ಬನನ್ನೇ ಆ ಜಾತ್ರೆಗೆ ಅವಳು ಕಳುಹಿಸಿಕೊಡುವುದಾದರೂ ಹೇಗೆ? ಅವನು ಎಲ್ಲಿಯಾದರೂ ಆ ಜನಜಂಗುಳಿಯ ನಡುವೆ ಕಳೆದು ಹೋದರೆ? ಇಲ್ಲ. ತನ್ನ ಆ ಪುಟ್ಟ ಹೃದಯವನ್ನು ಕಳೆದುಕೊಳ್ಳಲು ಅವಳು ಸಿದ್ಧರಿರಲಿಲ್ಲ. ಅವನು ಆ ಮೂರು ಮೈಲಿ ಹೇಗೆ ನಡೆದಾನು? ಅವನ ಪುಟ್ಟ ಕಾಲುಗಳಿಗೆ ಒಂದು ಜೋಡಿ ಬೂಟುಗಳೂ ಇರಲಿಲ್ಲ. ಪುಟ್ಟ ಪಾದಗಳಲ್ಲಿ ಬೊಕ್ಕೆಗಳು ಬರುವಂತಿತ್ತು. ಒಂದು ವೇಳೆ ಅವಳು ಕೂಡಾ ಹೋಗುವಂತಿದ್ದರೆ , ಅವನನ್ನು ಎತ್ತಿಕೊಂಡು ಅಲ್ಲಿ ಇಲ್ಲಿ ಹೋಗಬಹುದಿತ್ತು. ಆದರೆ ಇಲ್ಲಿ ಶಾವಿಗೆ ಸೀರ್ ಕುರ್ಮಾ ಮಾಡುವವರು ಯಾರು? ಕೈಯಲ್ಲಿ ಹಣವಿದ್ದಿದ್ದರೆ ವಾಪಾಸು ಬರುತ್ತಾ ಎಲ್ಲಾ ಸಾಮಾನುಗಳನ್ನು ಕೊಂಡು ತಂದು ಸೀರ್ ಕುರ್ಮಾ ಮಾಡಬಹುದಿತ್ತು. ಆದರೆ ಈ ಹಳ್ಳಿಯಲ್ಲಿ ಒಂದೊಂದು ಮನೆಯಿಂದ ಒಂದೊಂದು ಸಾಮಾನುಗಳನ್ನು ಬೇಡಿ ತರುವಷ್ಟರಲ್ಲಿ ಸಾಕಷ್ಟು ಸಮಯ ಹಿಡಿಯುತ್ತಿತ್ತು. ಬೇರೆಯವರಲ್ಲಿ ಬೇಡಿ ತರುವುದೊಂದೇ ಅವಳಿಗಿದ್ದ ದಾರಿ.
ಗ್ರಾಮದ ಜನರೆಲ್ಲಾ ಒಂದು ಗುಂಪಿನಲ್ಲಿ ಹೊರಟಿದ್ದರು. ಹುಡುಗರ ಗುಂಪಿನಲ್ಲಿ ಹಮೀದ್ ಇದ್ದನು. ಅವರು ಎಲ್ಲಾ ಹಿರಿಯರನ್ನು ದಾಟಿ ಮುಂದಕ್ಕೆ ಓಡಿ, ಒಂದು ಮರದ ಅಡಿಯಲ್ಲಿ ಅವರಿಗೋಸ್ಕರ ಕಾಯತೊಡಗಿದರು. ಈ ದೊಡ್ಡವರು ಯಾಕೆ ಹೀಗೆ ಕಾಲು ಎಳೆದುಕೊಂಡು ನಡಿತಾರಪ್ಪ? ಹಮೀದ್ ನಂತೂ ತನ್ನ ಕಾಲುಗಳಿಗೆ ರೆಕ್ಕೆಗಳಿವೆಯೋ ಎನ್ನುವಂತಿದ್ದ. ಅವನಿಗೆ ಆಯಾಸವಾಗುವುದೆಂದು ಅಲ್ಲಿರುವವರಿಗೆ ತಿಳಿಯುವುದಾದರೂ ಹೇಗೆ?
ಅವರು ಆ ಪಟ್ಟಣದ ಹೊರವಲಯವನ್ನು ತಲುಪಿದರು. ಅಲ್ಲಿನ ರಸ್ತೆಯ ಇಕ್ಕೆಲಗಳಲ್ಲಿಯೂ ಎತ್ತರವಾದ ಮತ್ತು ದಪ್ಪವಾದ ಆವರಣಗಳಿರುವ ಶ್ರೀಮಂತರ ದೊಡ್ಡ ದೊಡ್ಡ ಮನೆಗಳಿದ್ದವು. ತೋಟಗಳಲ್ಲಿ ಮಾವಿನ ಮತ್ತು ಲೀಚಿ ಹಣ್ಣಿನ ಮರಗಳು ಹಣ್ಣುಗಳಿಂದ ತುಂಬಿ ತೊನೆಯುತ್ತಿದ್ದವು. ಒಬ್ಬ ಹುಡುಗ ಕಲ್ಲೊಂದನ್ನು ಮಾವಿನ ಮರದತ್ತ ಬೀಸಿ ಎಸೆದಿದ್ದ. ತೋಟದ ಮಾಲಿ ಕಿರಿಚುತ್ತಾ ಓಡಿಕೊಂಡು ಬಂದ. ಆದರೆ ಅಷ್ಟರಲ್ಲೇ ಹುಡುಗರು ದೊಡ್ಡದಾಗಿ ಅರಚುತ್ತಾ ಬಿದ್ದು ಬಿದ್ದು ನಗುತ್ತಾ ಅವನಿಂದ ಫರ್ಲಾಂಗುಗಟ್ಟಲೆ ದೂರ ಓಡಿ ಬಂದಿದ್ದರು. ಆ ಮಾಲಿಯನ್ನು ಎಂತಹಾ ಪೆಕರನನ್ನಾಗಿಸಿದ್ದರು!
ಮುಂದೆ ದೊಡ್ಡ ದೊಡ್ಡ ಕಟ್ಟಡಗಳು ಕಾಣುತ್ತಿದ್ದವು. ನ್ಯಾಯಾಲಯಗಳು, ಕಾಲೇಜುಗಳು, ಕ್ಲಬ್ ಗಳು, ಆ ದೊಡ್ಡದಾದ ಕಾಲೇಜಿನಲ್ಲಿ ಅದೆಷ್ಟು ಹುಡುಗರಿರಬಹುದು, ಅಯ್ಯೋ ಅವರು ಹುಡುಗ್ರೇ ಅಲ್ಲ ರಿ! ಎಲ್ಲ ವಯಸ್ಕರೇ ಇದ್ದರು. ಎಲ್ಲರೂ ಹುರಿ ಮೀಸೆ ಕುಣಿಸುತ್ತಿದ್ದರು. ಇಷ್ಟು ವಯಸ್ಕರು ಯಾಕೆ ಕಾಲೇಜಿಗೆ ಹೋಗ್ತಾರಪ್ಪ. ಇನ್ನೆಷ್ಟು ದಿನ ಇವರು ಕಲೀತಾ ಇರಬಹುದು? ಇಷ್ಟೆಲ್ಲಾ ಕಲಿತು ಇವರೆಲ್ಲಾ ಅದೇನು ಮಾಡಬಹುದು? ಹಮೀದ್ ನ ತರಗತಿಯಲ್ಲಿ ಎರಡೋ ಮೂರೋ ಜನ ದೊಡ್ಡ ಹುಡುಗರಿದ್ದರು. ಅಬ್ಬಾ! ಭಯಂಕರ ದಡಿಯರಾಗಿದ್ದರು ಅವರು. ಅವರಿಗೆ ದಿನಾಲು ಏಟು ಸಿಗ್ತಾ ಇತ್ತು. ಅವರು ಮನೆಕೆಲಸ ಕೊಟ್ರೆ ಮಾಡ್ತಾನೇ ಇರಲಿಲ್ಲ.
ಈ ಕಾಲೇಜಿನ ಹುಡುಗರೂ ಅಂತಹವರೇ ಇರಬೇಕು. ಇಲ್ಲದಿದ್ದರೆ ಈ ಪ್ರಾಯದಲ್ಲಿ ಕೂಡಾ ಕಲಿಯಲಿಕ್ಕೆ ಏನು ರೋಗ ಇವರಿಗೆ.
ಅಲ್ಲೊಂದು ಮನೆಯಂತಹ ಕಟ್ಟಡವಿತ್ತು. ಅದರ ಒಳಗೆ ಜಾದೂ ಮಾಡುತ್ತಿದ್ದರು. ಅವರು ಮನುಷ್ಯನ ತಲೆ ಬುರುಡೆಯನ್ನು ಬೇಕಾದ ಕಡೆ ಹೋಗುವಂತೆ ಮಾಡಿ ತಮಗೆ ಬೇಕಾದ ಕೆಲಸವನ್ನು ಮಾಡಿಸಿಕೊಳ್ಳುತ್ತಿದ್ದರು ಎಂಬ ಸುದ್ದಿ ಕೂಡಾ ಇತ್ತು. ಅವರು ಹೊರಗಿನವರನ್ನು ಒಳಗಡೆ ಹೋಗಲು ಬಿಡುತ್ತಿರಲಿಲ್ಲ ಎಂಬುದರಲ್ಲಿ ಆಶ್ಚರ್ಯವೇ ಇರಲಿಲ್ಲ! ಮತ್ತು ಬಿಳಿಯರು ಅಲ್ಲಿ ಆಟವಾಡುತ್ತಿದ್ದರು. ಕೆಲವು ದಡಿಯರು, ದೊಡ್ಡ ದೊಡ್ಡ ಗಡ್ಡ ಮೀಸೆ ಇರುವವರು ಕೂಡಾ ಆಟವಾಡುತ್ತಿದ್ದರು! ಅವರು ಮಾತ್ರವಲ್ಲ, ಅವರ ಮೇಮ್ ಸಾಹೀಬ್ ಗಳು ಕೂಡಾ ಆಟವಾಡುತ್ತಿದ್ದರು! ಸತ್ಯ ಹೇಳಬೇಕೆಂದರೆ ಅವರು ಬ್ಯಾಟಿನಲ್ಲಿ ಹಾರಿಸಿ ಹೊಡೆಯುತ್ತಿದ್ದ ರಾಕ್ಕೆಟ್ ಎಂಬ ತೆಳ್ಳನೆ ವಸ್ತುವನ್ನು ನನ್ನ ಅಜ್ಜಿ ಕೈಯಲ್ಲಿ ಕೊಟ್ಟರೆ ಅವಳಿಗೆ ಅದನ್ನು ಸರಿಯಾಗಿ ಹಿಡಿಯಲೂ ಬರಲಿಕ್ಕಿಲ್ಲ. ಇನ್ನು ಇವರು ಹಾರಿ ಹೊಡೆಯುವ ಹಾಗೆನಾದ್ರೂ ಮಾಡಿದ್ರೆ ಅಜ್ಜಿ ಬಿದ್ದು ಬಿಡೋದು ಖಂಡಿತ.
ಮಹಮ್ಮೂದು ಹೇಳುತ್ತಿದ್ದ, “ನನ್ನ ಅಮ್ಮನಿಗಾದ್ರೆ, ಅಲ್ಲಾಹಾನಾಣೆ , ಕೈ ನಡುಗುತ್ತಾ ಇತ್ತು”.
ಮೊಹಸಿನ್ ಹೇಳುತ್ತಿದ್ದ, “ನನ್ನ ಅಮ್ಮನ ಕೈ ರಾಶಿ ರಾಶಿ ಧಾನ್ಯಗಳನ್ನು ಬೀಸುತ್ತಿದ್ದ ಕೈ, ಅದು ಈ ದರಿದ್ರ ರಾಕ್ಕೆಟ್ಟನ್ನು ಹಿಡಿಯುವಾಗ ನಡುಗಲಿಕ್ಕೆ ಸಾಧ್ಯವೇ ಇಲ್ಲ. ಅವಳು ದಿನಾಲು ನೂರಾರು ಕೊಡ ನೀರನ್ನು ಬಾವಿಯಿಂದ ಸೇದುತ್ತಾಳೆ. ನಮ್ಮ ಎಮ್ಮೆ ಐದು ಕೊಡದಷ್ಟು ನೀರು ಕುಡಿಯುತ್ತೆ. ಇನ್ನು ಈ ಮೇಮ್ ಸಾಹಿಬಗಳ ಬಳಿ ಒಂದು ಕೊಡ ನೀರು ಸೇದಲಿಕ್ಕೆ ಹೇಳಿದ್ರೆ ಅವರ ಮುಖ ನೀಲಿಗಟ್ಟಿ ಬಿಡೋದು ಖಂಡಿತ!”.
ಅಷ್ಟರಲ್ಲಿ ಮಹಮ್ಮೂದ್ ಹೇಳಿದ, “ಆದ್ರೆ ನಿಮ್ಮಮ್ಮನಿಗೆ ಓಡಿ ಹೋಗಿ ಹಾರಲಿಕ್ಕೆ ಆಗ್ಲಿಕ್ಕಿಲ್ಲ ಅಲ್ವಾ?”.
“ಅದು ಸರಿ” ಮೊಹಸಿನ್ ಹೇಳಿದ, ” ಅವಳಿಗೆ ಹಾರಲಿಕ್ಕೆ ಮತ್ತು ಓಡ್ಲಿಕ್ಕೆ ಆಗ್ಲಿಕ್ಕಿಲ್ಲ, ಆದ್ರೆ ಒಂದು ಸಲ ನಮ್ಮ ದನ ಹಗ್ಗ ಬಿಡಿಸಿಕೊಂಡು ಚೌದರಿಯ ಹೊಲದಲ್ಲಿ ಮೇಯ್ತಾ ಇತ್ತು. ಆಗ ನನ್ನಮ್ಮ ಎಷ್ಟು ಜೋರಾಗಿ ಓಡಿದ್ದಳೆಂದರೆ, ದೇವರಾಣೆ ನನಗೆ ಅವಳ ಹಿಂದೆ ಓಡ್ಲಿಕ್ಕೆ ಆಗಿರ್ಲಿಲ್ಲ.”
ಹೀಗೆ ನಾವು ಸಿಹಿತಿನಿಸು ಮಾರುತ್ತಿದ್ದ ಸ್ಟಾಲುಗಳತ್ತ ಬಂದೆವು. ಅಬ್ಬಾ! ಎಷ್ಟು ಸುಂದರವಾಗಿ ಜೋಡಿಸಿಟ್ಟಿದ್ದರು ಎಲ್ಲವನ್ನು. ಇಷ್ಟೊಂದು ಸಿಹಿತಿಂಡಿಗಳನ್ನು ತಿನ್ನುವವರಾದರೂ ಯಾರು? ಎಲ್ಲಾ ಸ್ಟಾಲುಗಳಲ್ಲಿ ಬೆಟ್ಟದಂತೆ ರಾಶಿರಾಶಿ ಸಿಹಿತಿನಿಸುಗಳಿದ್ದವು.
ಕೆಲವರು ಮಾತನಾಡಿಕೊಳ್ಳುತ್ತಿದ್ದರು. ರಾತ್ರಿ ಹನ್ನೊಂದು ಗಂಟೆಯಾದ ನಂತರ ಜಿನ್ನ್ ಗಳು ಬಂದು ಎಲ್ಲವನ್ನೂ ಕೊಂಡುಕೊಳ್ಳುತ್ತಿದ್ದರಂತೆ.
ಮೊಹಸಿನ್ ಹೇಳುತ್ತಿದ್ದ, “ನನ್ನ ಅಬ್ಬ ಹೇಳುತ್ತಿದ್ದರು, ರಾತ್ರಿ ಎಲ್ಲಾ ಸ್ಟಾಲುಗಳಿಗೆ ಕೂಡಾ ಒಬ್ಬೊಬ್ಬ ಜಿನ್ನ್ ಬಂದು ಎಲ್ಲಾ ಮಿಠಾಯಿಗಳನ್ನು ತೂಕ ಮಾಡಿ ಕೊಂಡುಕೊಳ್ಳುತ್ತಾನಂತೆ, ಅದು ಕೂಡಾ ನಿಜವಾದ ರೂಪಾಯಿಗಳನ್ನು ಕೊಟ್ಟು!, ನಮ್ಮ ಬಳಿ ಇರ್ತಾವಲ್ಲ ಅಂತಹುದೇ ರೂಪಾಯಿಗಳು.”
ಆದರೂ ಹಮೀದ್ ನಿಗೆ ಸಮಾಧಾನವಾಗಲಿಲ್ಲ. “ಜಿನ್ನ್ ಗಳಿಗೆ ರೂಪಾಯಿಗಳು ಎಲ್ಲಿಂದ ಬರಬೇಕು?”
“ಜಿನ್ನ್ ಗಳಿಗೆ ಯಾವತ್ತೂ ಹಣ ಕಡಿಮೆಯಾಗುವುದೇ ಇಲ್ಲ”, ಮೊಹಸಿನ್ ಹೇಳಿದ, “ಅವರು ಯಾವ ಖಜಾನೆಯ ನಿಧಿಯನ್ನೂ ಹೊಕ್ಕಾರು, ನಿಂಗೊತ್ತಿಲ್ವಾ, ಅವರಿಗೆ ಯಾವ ಕಬ್ಬಿಣದ ಕಂಬಿಗಳೂ ಎದುರಿಲ್ಲ, ಎಷ್ಟು ವಜ್ರಗಳು ಮತ್ತು ಹವಳಗಳನ್ನು ಕೂಡಾ ಅವರು ತೆಗೆದುಕೊಂಡು ಬಂದುಬಿಡ್ತಾರೆ. ಅವರಿಗೆ ಯಾರಾದರೂ ಇಷ್ಟವಾದರೆ ಅವರಿಗೆ ಬುಟ್ಟಿ ತುಂಬಾ ವಜ್ರಗಳನ್ನು ಕೊಟ್ಟು ಬಿಡುತ್ತಾರೆ. ಈ ಕ್ಷಣ ಇಲ್ಲಿದ್ದರೆ ಇನ್ನು ಐದು ನಿಮಿಷದಲ್ಲಿ ಕಲ್ಕತ್ತದಲ್ಲಿ ಇರ್ಲಿಕ್ಕೂ ಸಾಧ್ಯವುಂಟು ಅವರಿಗೆ.”
ಹಮೀದ್ ಇನ್ನೊಮ್ಮೆ ಕೇಳಿದ, “ಜಿನ್ನ್ ಗಳು ದೊಡ್ಡದಾಗಿರುತ್ತಾರಾ?”
“ಒಬ್ಬೊಬ್ಬರೂ ಆಕಾಶದಷ್ಟು ಎತ್ತರ ಇರ್ತಾರೆ”, ಮೊಹಸಿನ್ ಇನ್ನೂ ಬಿಡಿಸಿ ಹೇಳಿದ, “ಅವರ ಕಾಲುಗಳು ಭೂಮಿ ಮೇಲಿದ್ರೆ ತಲೆ ಆಕಾಶದಲ್ಲಿರುತ್ತೆ, ಆದ್ರೆ ಅವರು ಬಯಸಿದ್ರೆ ಪುಟ್ಟ ತಗಡಿನ ಡಬ್ಬದೊಳಕ್ಕೂ ಹೋಗಿ ಬಿಡುತ್ತಾರೆ.”
“ಜನ ಈ ಜಿನ್ನ್ ಗಳನ್ನು ಹೇಗೆ ಖುಷಿ ಪಡಿಸ್ತಾರೆ?” ಹಮೀದ್ ಕೇಳಿದ, “ಈ ಗುಟ್ಟನ್ನು ನನಗೆ ಯಾರಾದರೂ ಕಲಿಸಿದ್ದಿದ್ರೆ ನಾನು ಒಂದಾದರೂ ಜಿನ್ನ್ ನ್ನು ನನ್ನ ಬಳಿ ಸಂತೋಷವಾಗಿ ಇರೋವಂತೆ ಮಾಡ್ತಾ ಇದ್ದೆ”.
“ಅದು ನನಗೆ ತಿಳೀದು” ಮೊಹಸಿನ್ ಉತ್ತರಿಸಿದ, “ಆದ್ರೆ ಚೌದರಿ ಸಾಹೇಬನ ಬಳಿ ತುಂಬಾ ಜಿನ್ನ್ ಗಳು ನಿಯಂತ್ರಣದಲ್ಲಿದ್ದಾರೆ. ಏನಾದರೂ ಕದ್ದು ಹೋದ್ರೆ ಅವರು ಕಳ್ಳ ಯಾರೆಂದು ಹುಡುಕಿ, ಅವನ ಹೆಸರು ಕೂಡಾ ಹೇಳ್ತಾರಂತೆ ಗೊತ್ತಾ? ಈ ಲೋಕದಲ್ಲಿ ಏನಾಗುತ್ತೆ ಅದನ್ನೆಲ್ಲಾ ಜಿನ್ನ್ ಅವನ ಬಳಿ ಹೇಳುತ್ತಂತೆ ಗೊತ್ತಾ?”.
ಆ ಚೌದರಿ ಬಳಿ ಯಾಕೆ ಅಷ್ಟು ಸಂಪತ್ತಿದೆ ಮತ್ತು ಯಾಕೆ ಜನ ಅವನಿಗೆ ಅಷ್ಟು ಗೌರವ ಕೊಡುತ್ತಾರೆಂದು ಹಮೀದ್ ನಿಗೆ ತಿಳಿಯಿತು.
ಅಲ್ಲಿ ಜನದಟ್ಟಣಿ ಏರತೊಡಗಿತು. ಪಟ್ಟಣದ ಎಲ್ಲಾ ಕಡೆಗಳಿಂದಲೂ ಜನ ಈದ್ಗಾಹ್ ದತ್ತ ಬರತೊಡಗಿದರು – ಒಬ್ಬರಿಗಿಂತ ಒಬ್ಬರು ಒಳ್ಳೊಳ್ಳೆಯ ಧಿರಿಸುಗಳನ್ನು ಧರಿಸಿದ್ದರು. ಕೆಲವರು ಟಾಂಗಾದಲ್ಲಿದ್ದರೆ, ಕೆಲವರು ಬಂಡಿಯಲ್ಲಿ ಇನ್ನು ಕೆಲವರು ಮೋಟಾರು ಕಾರುಗಳಲ್ಲಿ. ಸುಗಂಧದ್ರವ್ಯಗಳನ್ನು ಹಚ್ಚಿಕೊಂಡು ಉತ್ಸಾಹದಿಂದ ಬೀಗುತ್ತಿದ್ದರು.
ನಮ್ಮ ಹಳ್ಳಿ ಗಮಾರರ ಸಣ್ಣ ಗುಂಪು ಆ ಪಟ್ಟಣದವರ ವೈಯ್ಯಾರದ ಬಗ್ಗೆ ತಲೆಕೆಡಿಸಿ ಕೊಳ್ಳಲಿಲ್ಲ. ಅವರು ತಮ್ಮಲ್ಲಿರುವುದರಷ್ಟಕ್ಕೇ ಸಮಾಧಾನಪಟ್ಟುಕೊಳ್ಳುತ್ತಿದ್ದರು.
ಹಳ್ಳಿಯ ಹುಡುಗರಿಗೆ ಪಟ್ಟಣದ ಪ್ರತಿಯೊಂದೂ ಸೋಜಿಗವೇ. ಯಾವುದು ಅವರ ಕಣ್ಣಿಗೆ ಬೀಳುತ್ತಿತ್ತೋ ಅಲ್ಲಿಗೆ ಓಡಿ ಹೋಗಿ ಅಚ್ಚರಿಯಿಂದ ಇಣುಕುತ್ತಿದ್ದರು. ಕಾರುಗಳು ಹುಡುಗರನ್ನು ರಸ್ತೆಯ ಬದಿಗೆ ಹೋಗುವಂತೆ ಜೋರಾಗಿ ಶಬ್ದ ಮಾಡುತ್ತಿದ್ದವು. ಆದರೆ ಹುಡುಗರಿಗೆ ಅದರ ಪರಿವೆಯೇ ಇರಲಿಲ್ಲ. ಒಮ್ಮೆಯಂತೂ ಕಾರೊಂದು ಹಮೀದ್ ನ ಮೇಲೆಯೇ ಹೋಗುವುದರಲ್ಲಿತ್ತು.
ತುಂಬಾ ಸಮಯದ ನಂತರ ಅವರಿಗೆ ಈದ್ಗಾಹ್ ಕಾಣಿಸಿತು. ಅದರ ಮೇಲೆ ದೊಡ್ಡದಾದ ಹುಣೆಸೆ ಮರಗಳಿದ್ದವು. ಅವುಗಳ ವಿಶಾಲವಾದ ನೆರಳು ಸಿಮೆಂಟಿನ ಕಟ್ಟೆಯ ಮೇಲೆ ಹಾಸಿದ್ದ ಜಮಖಾನೆಗಳ ಮೇಲೆ ಹರಡಿಕೊಂಡಿತ್ತು. ಅಲ್ಲಿ ನಮಾಜು ಮಾಡಲು ಬಂದವರು ಸಾಲುಗಟ್ಟಿ ನಿಂತಿರುವುದು
ಕಾಣುತ್ತಿತ್ತು. ಜನರು ಮಸೀದಿಯ ಒಳಗೆ ತುಂಬಿಕೊಂಡು ಹೊರಗಿನವರೆಗೆ ಹಬ್ಬಿರುವುದು ಕಾಣುತ್ತಿತ್ತು. ಹೊಸದಾಗಿ ಬಂದವರು ದೊಡ್ಡವರ ಹಿಂದೆ ಸಾಲುಗಟ್ಟಿ ನಿಂತಿದ್ದರು. ಇಲ್ಲಿ ಯಾವುದೇ ದೊಡ್ಡಸ್ತಿಕೆ , ಮೇಲುಕೀಳು ನಡೆಯುತ್ತಿರಲಿಲ್ಲ. ಯಾಕೆಂದರೆ ಇಸ್ಲಾಮಿನಲ್ಲಿ ಎಲ್ಲರೂ ಸಮಾನರೆಂದು ಹೇಳುತ್ತಿದ್ದರು. ನಮ್ಮ ಹಳ್ಳಿಯ ತಂಡ ಕೂಡಾ ಕೈ ಕಾಲುಗಳನ್ನು ತೊಳೆದುಕೊಂಡು ಹಿಂದೆ ಅವರದೇ ಆದ ಒಂದು ಸಾಲಿನಲ್ಲಿ ನಿಂತುಕೊಂಡರು.
ಆಹಾ! ಎಂತಹಾ ಹೃದಯ ತಣಿಸುವಂತಹ ದೃಶ್ಯವಾಗಿತ್ತು ಅದು! ಎಲ್ಲರ ಎಂತಹ ಶಿಸ್ತಿನ ಚಲನೆ! ಸಾವಿರಾರು ತಲೆಗಳು ಒಮ್ಮೆಲೆ ಪ್ರಾರ್ಥನೆಗಾಗಿ ಬಾಗುತ್ತಿದ್ದವು. ಆಮೇಲೆ ಒಮ್ಮೆಲೆ ಎಲ್ಲರೂ ಎದ್ದು ನಿಲ್ಲುತ್ತಿದ್ದರು, ಬಾಗಿ ನಂತರ ತಮ್ಮ ಮೊಣಕಾಲುಗಳಲ್ಲಿ ಕುಳಿತುಕೊಳ್ಳುತ್ತಿದ್ದರು! ಹಲವು ಸಲ ಅವರು ಅದನ್ನೇ ಪುನರಾವರ್ತನೆ ಮಾಡಿದರು. ಸಾವಿರಾರು ವಿದ್ಯುತ್ತಿನ ದೀಪಗಳನ್ನು ಒಮ್ಮೆಲೆ ಉರಿಸಿ ಆರಿಸಿದಂತೆ ಕಾಣುತ್ತಿತ್ತು. ಅಬ್ಬಾ! ಎಂತಹ ಅದ್ಭುತ ದೃಶ್ಯವಾಗಿತ್ತು ಅದು!
ಪ್ರಾರ್ಥನೆ ಮುಗಿಯಿತು. ಗಂಡಸರು ಒಬ್ಬರನ್ನೊಬ್ಬರು ಅಪ್ಪಿಕೊಂಡು ಶುಭಾಷಯ ಹೇಳಿಕೊಂಡರು. ನಂತರ ಒಮ್ಮೆಲೆ ಸೈನಿಕರು ಮುತ್ತಿಗೆ ಹಾಕುವಂತೆ ಸಿಹಿ ತಿನಿಸು ಮತ್ತು ಆಟಿಕೆಗಳ ಅಂಗಡಿಗಳತ್ತ ನುಗ್ಗಿದರು. ಈ ವಿಷಯದಲ್ಲಿ ಹಳ್ಳಿಯ ಜನ, ಹುಡುಗರಿಗಿಂತ ಕಡಿಮೆ ಉತ್ಸುಕರಾಗಿಯೇನೂ ಇರಲಿಲ್ಲ. ನೋಡು, ಇಲ್ಲೊಂದು ಉಯ್ಯಾಲೆ ಇದೆ! ಒಂದು ಪೈಸೆಗೆ ಒಮ್ಮೆಲೆ ಸ್ವರ್ಗಕ್ಕೆ ಹಾರಿ ಜಾರುತ್ತಾ ಭೂಮಿಗೆ ಇಳಿದು ಬಿಡಬಹುದು! ಮತ್ತು ಅಲ್ಲೊಂದು ದೊಡ್ಡ ಚಕ್ರವಿತ್ತು. ಅದರ ಮೇಲೆ ಮರದ ಆನೆಗಳು , ಕುದುರೆ, ಒಂಟೆ ಇತ್ಯಾದಿಗಳನ್ನು ಸಿಕ್ಕಿಸಿದ್ದರು. ಒಂದು ಪೈಸೆ ಕೊಟ್ಟರೆ ಇಪ್ಪತ್ತೈದು ಸುತ್ತು ಸುತ್ತುವ ಮಜಾ! ಮೊಹಸಿನ್, ಮಹಮ್ಮೂದು, ನೂರಿ ಮತ್ತು ಇತರ ಕೆಲವು ಹುಡುಗರು ಕುದುರೆ ಮತ್ತು ಒಂಟೆಗಳನ್ನೇರಿದರು.
ಹಮೀದ್ ದೂರದಲ್ಲಿ ನಿಂತು ಅವರನ್ನು ನೋಡುತ್ತಿದ್ದ. ಅವನಲ್ಲಿದ್ದುದು ಕೇವಲ ಮೂರು ಪೈಸೆ. ಆ ಕರ್ಮದ ಸುತ್ತುಗಳಿಗೆ ಅವನಲ್ಲಿರುವ ಪೈಸೆಗಳಿಂದ ಮುಕ್ಕಾಲನ್ನು ಕೂಡಾ ಖರ್ಚು ಮಾಡಲು ಸಾಧ್ಯವಿರಲಿಲ್ಲ.
ಅವರು ಸುತ್ತುವ ಆಟವನ್ನು ಮುಗಿಸಿದರು, ಈಗ ಆಟಿಕೆಗಳ ಸರದಿ. ಅಲ್ಲಿ ಒಂದು ಬದಿಯ ಸಾಲಿನ ತುಂಬಾ ಬಗೆಬಗೆಯ ಆಟಿಕೆಗಳ ಸ್ಟಾಲುಗಳಿದ್ದವು. ಅಲ್ಲಿ ಸೈನಿಕರು, ಹಾಲು ಮಾರುವವಳು, ರಾಜ ಮತ್ತು ಮಂತ್ರಿಗಳು, ನೀರು ಸಾಗಿಸುವವನು, ಬಟ್ಟೆ ಒಗೆಯುವವಳು, ಮತ್ತು ಸಾಧು ಸಂತರು ಹೀಗೆ ವಿವಿಧ ಗೊಂಬೆಗಳಿದ್ದವು. ಅಬ್ಬಾ ಎಂತಹ ದೃಶ್ಯ! ಎಲ್ಲವೂ ಜೀವಂತವಾಗಿರುವಂತೆ ಇದ್ದವು! ಕೇವಲ ಅವುಗಳಿಗೆ ಬೇಕಾಗಿದ್ದು ಮಾತನಾಡಲು ನಾಲಗೆಗಳು ಮಾತ್ರ. ಮಹಮ್ಮೂದು ಕೆಂಪು ಪೇಟ ಮತ್ತು ಹೆಗಲಿಗೆ ಕೋವಿಯೇರಿಸಿರುವ ಪೋಲಿಸನ ಗೊಂಬೆಯೊಂದನ್ನು ಖರೀದಿಸಿದ. ಅವನು ಪೆರೇಡಿನಲ್ಲಿ ಸಾಗುತ್ತಿರುವಂತೆ ಕಾಣುತಿತ್ತು. ಮೊಹಸಿನ್ ನೀರು ಸಾಗಿಸುವ ಗೊಂಬೆಯೊಂದನ್ನು ತೆಗೆದುಕೊಂಡ. ಅದರ ಬೆನ್ನು ನೀರಿನ ಬಾರಕ್ಕೆ ಬಾಗಿ ಹೋಗಿತ್ತು. ನೀರಿನ ಪಾತ್ರೆಯ ಹಿಡಿಯನ್ನು ಹಿಡಿದಿರುವ ಆತನ ಮುಖದಲ್ಲಿ ಸಂತೃಪ್ತಿಯಿತ್ತು. ಆತ ಯಾವುದೋ ಹಾಡು ಹಾಡುತ್ತಿರುವಂತೆ ಕಾಣುತಿತ್ತು. ನೀರು ಪಾತ್ರೆಯಿಂದ ಎಲ್ಲಿ ಚೆಲ್ಲುವುದೋ ಎಂಬಂತಿತ್ತು. ನೂರಿ ವಕೀಲನ ಗೊಂಬೆಯೊಂದಕ್ಕೆ ಮನಸೋತ. ಆತನ ಮುಖದಲ್ಲಿ ಎಂತಹ ಕಳೆ! ಎಲ್ಲವನ್ನು ಕಲಿತವನ ಹಾಗೆ! ಬಿಳಿ ಷರಾಯಿಯ ಮೇಲೆ ಉದ್ದನೆಯ ಕಪ್ಪು ಗವನು, ಬಂಗಾರದ ಬಣ್ಣದ ಕೈಗಡಿಯಾರದ ಚೈನು ಹೊರಗಿಣುಕುತಿತ್ತು. ದಪ್ಪನೆಯ ಕಾನೂನಿನ ಪುಸ್ತಕವೊಂದು ಕೈಯಲ್ಲಿತ್ತು. ಈಗಷ್ಟೇ ವಾದವೊಂದನ್ನು ಮುಗಿಸಿ ಕೋರ್ಟಿನಿಂದ ಹೊರಗೆ ಬರುತ್ತಿರುವಂತೆ ಕಾಣುತಿತ್ತು.
ಈ ಒಂದೊಂದು ಆಟಿಕೆಗಳಿಗೆ ಎರಡು ಪೈಸೆಯಷ್ಟಾಗುತಿತ್ತು. ಹಮೀದ ನಲ್ಲಿದ್ದುದೇ ಮೂರು ಪೈಸೆಗಳು. ಅಷ್ಟು ಬೆಲೆಬಾಳುವ ಆಟಿಕೆಗಳನ್ನು ಆತ ಕೊಂಡುಕೊಳ್ಳುವುದಾದರೂ ಹೇಗೇ? ಅದು ಕೂಡಾ ಒಂದು ವೇಳೆ ಕೆಳಗೆ ಬಿದ್ದು ಬಿಟ್ಟರೆ ಹುಡಿ ಹುಡಿಯಾಗುತ್ತಿದ್ದವು. ಒಂದು ಹನಿ ನೀರು ಬಿದ್ದರೂ ಅವುಗಳ ಬಣ್ಣ ಮಾಯವಾಗುತಿತ್ತು. ಇಂತಹ ಆಟಿಕೆಗಳನ್ನು ಕೊಂಡು ಅವನು ಏನು ಮಾಡಿಯಾನು? ಅವನಿಗೆ ಅವುಗಳು ಯಾವ ಉಪಯೋಗಕ್ಕೂ ಬಾರವು ಎನಿಸುತಿತ್ತು.
“ನನ್ನ ಈ ನೀರು ಹೊಯ್ಯುವ ಗೊಂಬೆ ದಿನಾಲು ಬೆಳಿಗ್ಗೆ ಮತ್ತು ಸಂಜೆ ನೀರು ಚಿಮುಕಿಸುವನು” ಎಂದು ಮೊಹಸಿನ್ ಹೇಳಿದ.
“ನನ್ನ ಈ ಪೋಲೀಸು ನನ್ನ ಮನೆಯನ್ನು ಕಾಯುತ್ತಾನೆ. ಯಾವನಾದರೂ ಕಳ್ಳ ಹತ್ತಿರ ಬಂದ್ರೆ, ಕೋವಿ ತಕ್ಕೊಂಡು ಉಡಾಯಿಸಿ ಬಿಡ್ತಾನೆ” ಎಂದು ಮೆಹಮ್ಮೂದು ಹೇಳಿದ.
“ನನ್ನ ವಕೀಲ ನನ್ನ ಕೇಸುಗಳನ್ನು ನಡೆಸುತ್ತಾನೆ” ಎಂದು ನೂರಿ ಹೇಳಿದ.
“ನನ್ನ ಬಟ್ಟೆ ಒಗೆಯುವ ಗೊಂಬೆ ಪ್ರತಿದಿನ ನನ್ನ ಬಟ್ಟೆ ಒಗೆಯುವಳು” ಎಂದು ಸಮ್ಮಿ ಹೇಳುತ್ತಿದ್ದ.
ಹಮೀದ್ ಆ ಬಿದ್ದು ಬಿಟ್ಟರೆ ಚೂರು ಚೂರಾಗಲಿರುವ ಮಣ್ಣಿನ ಗೊಂಬೆಗಳನ್ನು ತಮಾಷೆ ಮಾಡಿದ. ಆದರೂ ಅವನ ಕಣ್ಣುಗಳು ಅವನ್ನು ಆಸೆಯಿಂದ ನೋಡುತ್ತಿದ್ದುವು. ಒಂದೆರಡು ಕ್ಷಣ ಅವುಗಳನ್ನು ಕೈಯಲ್ಲಿ ಹಿಡಿದುಕೊಳ್ಳೋಣ ಎಂದು ಬಯಸುತ್ತಿದ್ದ. ಅವನಿಗರಿವಿಲ್ಲದಂತೆ ಅವನ ಕೈಗಳು ಅದರಷ್ಟಕ್ಕೆ ಗೊಂಬೆಗಳತ್ತ ಚಾಚಿಕೊಂಡವು. ಆದರೆ ಆ ಪುಟ್ಟ ಹುಡುಗರು ಅಷ್ಟು ಸುಲಭದಲ್ಲಿ ಗೊಂಬೆಗಳನ್ನು ಕೊಡುವವರಾಗಿರಲಿಲ್ಲ. ಅದು ಕೂಡಾ ಆ ಹೊಸ ಗೊಂಬೆಗಳನ್ನು. ಪಾಪ ಹಮೀದ್ ನಿಗೆ ಗೊಂಬೆಗಳು ಮುಟ್ಟಲೂ ಸಿಗಲಿಲ್ಲ.
ಆಟಿಕೆಗಳ ನಂತರ ಈಗ ಸಿಹಿತಿನಿಸುಗಳ ಸರದಿ. ಕೆಲವರು ಎಳ್ಳು ಕ್ಯಾಂಡಿಯನ್ನು ಕೊಂಡುಕೊಂಡರೆ ಇನ್ನು ಕೆಲವರು ಗುಲಾಬ್ ಜಾಮೂನುಗಳನ್ನು, ಹಲ್ವಾಗಳನ್ನು ಕೊಂಡುಕೊಂಡರು. ಬಾಯಿಗೆ ಹಾಕಿಕೊಂಡು ಚಪ್ಪರಿಸುತ್ತಿದ್ದರು. ಸುಮ್ಮನೆ ಉಳಿದವನು ಹಮೀದ್ ಮಾತ್ರ. ಆ ದುರಾದೃಷ್ಟದ ಹುಡುಗನ ಬಳಿ ಇದ್ದುದು ಮೂರು ಪೈಸೆಗಳು ಮಾತ್ರ. ಅವನಿಗೇನಾದರೂ ಕೊಂಡುಕೊಳ್ಳಲು ಏನು? ಸುಮ್ಮನೆ ಆಸೆಯ ಕಣ್ಣುಗಳಿಂದ ಇತರರು ತಿನ್ನುತ್ತಿರುವುದನ್ನು ನೋಡುತ್ತಿರುವನಲ್ಲ?
ಮೊಹಸಿನ್ ಹೇಳಿದ, “ಹಮೀದ್, ತಗೋ ಎಳ್ಳು ಕ್ಯಾಂಡಿ. ಹೇಗೆ ಘಮ ಘಮಾ ಅಂತಿದೆ ನೋಡು”?
ಹಮೀದ್ ನಿಗೆ ಇದು ಏನೋ ಕೆಟ್ಟ ತಮಾಷೆಯಾಗಿರಬೇಕು ಅನಿಸಿತು. ಮೊಹಸಿನ್ ನಿಗೆ ಅಷ್ಟು ಉದಾರ ಹೃದಯವಿರಲಿಲ್ಲ. ಆದರೆ ಇದು ಗೊತ್ತಿದ್ದರೂ ಹಮೀದ್ ಮೊಹಸಿನ್ ಬಳಿ ಹೋದನು. ಮೊಹಸಿನ್ ಕ್ಯಾಂಡಿಯ ಒಂದು ತುಂಡು ಕಿತ್ತು ಹಮೀದ್ ನತ್ತ ಹಿಡಿದನು. ಹಮೀದ್ ಕ್ಯಾಂಡಿಯತ್ತ ಕೈ ಚಾಚಿದ. ಮೊಹಸಿನ್ ಸರಕ್ಕನೆ ಕ್ಯಾಂಡಿಯನ್ನು ಬಾಯಿಗಿಟ್ಟುಕೊಂಡ. ಮಹಮ್ಮೂದು, ನೂರಿ ಮತ್ತು ಸಮ್ಮಿ ಜೋರಾಗಿ ಚಪ್ಪಾಳೆ ತಟ್ಟಿಕೊಂಡು ಬಿದ್ದು ಬಿದ್ದು ನಕ್ಕರು. ಹಮೀದ್ ಸೋತವನಂತೆ ತಲೆತಗ್ಗಿಸಿದ.
“ಈ ಸಲ ಖಂಡಿತಾ ಕೊಡುತ್ತೇನೆ. ಅಲ್ಲಾಹನಾಣೆ, ಬಾ ಕೈಚಾಚಿ ಪಡೆದು ಕೊ”, ಮೊಹಸಿನ್ ಅಣಕಿಸಿದ.
“ನಿನ್ನ ತಿಂಡಿಗಳನ್ನು ನೀನೇ ಇಟ್ಟುಕೋ, ನನ್ನ ಬಳಿಯೇನು ಹಣ ಇಲ್ವಾ”? ಹಮೀದ್ ಉತ್ತರಿಸಿದ.
“ಆದರೆ ನಿನ್ನ ಬಳಿ ಇರೋದು ಬರೀ ಮೂರು ಪೈಸೆ” ಸಮ್ಮಿ ಕೇಳಿದ , “ಮೂರು ಪೈಸೆಗೆ ಏನು ಸಿಗುತ್ತೆ ನಿಂಗೆ”.
ಮಹಮ್ಮೂದು ಹೇಳಿದ, “ಆ ಮೊಹಸಿನ್ ದುಷ್ಟ, ಹಮೀದ್ ನೀನು ಬಾ ಇಲ್ಲಿ ನಾನು ಗುಲಾಬ್ ಜಾಮೂನು ಕೊಡುತ್ತೇನೆ”.
“ಅಷ್ಟೋಂದು ಜೀವ ಬಿಡೋದಿಕ್ಕೆ ಏನಿದೆ ಆ ತಿಂಡಿಗಳಲ್ಲಿ, ಪುಸ್ತಕದಲ್ಲಿ ಆ ಸಿಹಿ ತಿನಿಸುಗಳು ತುಂಬಾ ಕೆಟ್ಟದ್ದು ಅಂತ ಬರೆದಿದೆ ಗೊತ್ತಾ”. ಹಮೀದ್ ಕೂಡಾ ಅಣಕಿಸಿದ.
“ಆದ್ರೆ ಮನಸ್ಸು ಹೇಳ್ತಾ ಇರಬೇಕು ಆಹಾ ಸಿಕ್ಕಿದ್ರೆ ನಾನು ಕೂಡಾ ಎಲ್ಲಾ ತಿನ್ನ್ತಾ ಇದ್ದೆ ಅಂತ ಅಲ್ವಾ”?, ಮೊಹಸಿನ್ ಚುಚ್ಚುತ್ತಿದ್ದ, “ನಿನ್ನ ಆ ಪೈಸೆಗಳನ್ನು ಯಾಕೆ ಜೇಬಿಂದ ಹೊರ ತೆಗೆಯುತ್ತಿಲ್ಲ ನೀನು”.
“ಇವನು ಎಂತಾ ಶಾಣ ಅಂತ ನಂಗೊತ್ತಿಲ್ವ?” ಮಹಮ್ಮೂದು ಹೇಳುತ್ತಿದ್ದ, “ನಮ್ಮ ಕೈಲಿರೊ ಎಲ್ಲಾ ಪೈಸೆಗಳು ಖಾಲಿ ಆದ ನಂತ್ರ ಇವ್ನು ಸಿಹಿ ತಿಂಡಿ ಕೊಂಡ್ಕೊಂಡು ನಮ್ಮನ್ನು ಗೇಲಿ ಮಾಡ್ಬೆಕೆಂದ್ಕೊಂಡಿದ್ದಾನೆ”.
ಸಿಹಿತಿನಿಸುಗಳ ಅಂಗಡಿಗಳ ನಂತರ ಮುಂದೆ ಕೆಲವು ಹಾರ್ಡ್ ವೇರ್ ಅಂಗಡಿಗಳು ಮತ್ತು ಕೆಲವು ಗಿಲೀಟು ಮತ್ತು ನಿಜವಾದ ಆಭರಣಗಳ ಅಂಗಡಿಗಳಿದ್ದವು. ಹುಡುಗರನ್ನು ಆಕರ್ಷಿಸುವಂತಹುದೇನೂ ಅಲ್ಲಿರಲಿಲ್ಲ. ಆದಕಾರಣ ಹುಡುಗರು ಮುಂದೆ ಸಾಗಿದರು. ಆದರೆ ಹಮೀದ್ ಮಾತ್ರ ಅಲ್ಲೇ ನಿಂತುಕೊಂಡ. ಅಲ್ಲಿ ರಾಶಿ ಹಾಕಿರುವ ಕಬ್ಬಿಣದ ಇಕ್ಕುಳಗಳನ್ನು ನೋಡಿಕೊಂಡು. ಕೂಡಲೇ ಹಮೀದ್ ನಿಗೆ ಆತನ ಅಜ್ಜಿಯ ಬಳಿ ಇಂತಹ ಜೋಡಿ ಇಕ್ಕುಳಗಳು ಇಲ್ಲ ಎಂದೆಣಿಸಿತು. ಪ್ರತೀ ಸಲ ಆಕೆ ಚಪಾತಿಗಳನ್ನು ಕಾಯಿಸುವಾಗಲೂ ಕಬ್ಬಿಣದ ಕಾವಲಿ ಆಕೆಯ ಕೈಗಳನ್ನು ಸುಡುತ್ತಿತ್ತು. ಆಕೆಗೊಂದು ಜೋಡಿ ಇಕ್ಕುಳಗಳನ್ನು ಕೊಂಡುಕೊಂಡರೆ ಆಕೆಗೆ ಸಂತೋಷವಾಗಬಹುದು ಎಂದು ಹಮೀದ್ ಯೋಚಿಸಿದ. ಆಕೆಯ ಕೈಗಳು ಕೂಡಾ ಪ್ರತೀದಿನ ಸುಡುವುದು ತಪ್ಪುತಿತ್ತು, ಅಲ್ಲದೆ ಇದೊಂದು ಮನೆಯಲ್ಲಿರಬೇಕಾದ ಉಪಯುಕ್ತ ವಸ್ತು ಎಂದು ಅನಿಸುತಿತ್ತು. ಆ ಆಟಿಕೆಗಳಿಂದ ಏನು ಉಪಯೋಗ, ಸುಮ್ಮನೆ ಹಣ ನಷ್ಟ ಅಷ್ಟೆ, ಸ್ವಲ್ಪ ಸಮಯ ಅವುಗಳ ಬಳಿ ಆಟವಾಡಬಹುದು ಆಮೇಲೆ ಎಲ್ಲವೂ ಮರೆತು ಹೋಗುತ್ತದೆ.
ಹಮೀದ್ ನ ಎಲ್ಲಾ ಮಿತ್ರರು ಮುಂದೆ ಹೋಗಿದ್ದರು. ಮುಂದೆ ಇದ್ದ ಸ್ಟಾಲೊಂದರಲ್ಲಿ ನಿಂತು ಶರಬತ್ತು ಕುಡಿಯುತ್ತಿದ್ದರು. ಅಬ್ಬಾ ! ಎಂತಹ ಸ್ವಾರ್ಥಿಗಳು?, ಎಷ್ಟೊಂದು ತಿಂಡಿಗಳನ್ನು ಕೊಂಡ್ಕೊಂಡಿದ್ದರು, ಆದರೂ ಹಮೀದ್ ನಿಗೆ ಒಂದು ಚೂರೂ ನೀಡಿರಲಿಲ್ಲ. ಆದರೂ ಅವರೊಡನೆ ಆಟವಾಡಲು ಆತ ಬೇಕಿತ್ತು. ಅವರು ಹೇಳಿದ ಚಪ್ರಾಸಿ ಕೆಲಸ ಆತ ಮಾಡಬೇಕಿತ್ತು. ಇನ್ನೊಂದ್ಸಲ ಕೆಲಸ ಮಾಡ್ಕೊಡು ಅಂತ ಬರ್ಲಿ ಅವರು , “ಹೋಗು ನಿನ್ನ ಲಾಲಿಪಾಪ್ ಚೀಪ್ಕೊಂಡು, ಅದು ನಿನ್ನ ಬಾಯಿ ಸುಟ್ಟು ಹಾಕುತ್ತೆ, ಬಾಯೊಳಗೆ ಎಲ್ಲಾ ಕಜ್ಜಿ ಆಗಿ ನಾಲಗೆ ಯಾವಾಗ್ಲೂ ಲಾಲಿ ಪಾಪ್, ಲಾಲಿ ಪಾಪ್ ಅಂತ ಕೇಳುತ್ತೆ, ಇನ್ನು ತಿಂಡಿ ಕೊಂಡ್ಕೊಬೇಕಾದ್ರೆ ನೀವು ಕಳ್ಳತನ ಮಾಡ್ಬೇಕು, ಚೌಕಾಸಿ ಮಾಡಿ ಪೆಟ್ಟು ತಿನ್ಬೇಕು,” ಪುಸ್ತಕದಲ್ಲಿ ಇಂತಹುದನ್ನೆಲ್ಲಾ ಬರೆದಿದೆ. ಆದ್ರೆ ನನ್ನ ಇಕ್ಕುಳಗಳಿಗೆ ಏನೂ ಆಗಲ್ಲ. ಅಜ್ಜಿ ನನ್ನ್ ಕೈಲಿ ಈ ಇಕ್ಕುಳ ನೀಡಿದ್ ಕೂಡ್ಲೇ ನನ್ ಕೈಯಿಂದ ಅದನ್ನು ಪಡೆದುಕೊಂಡು, “ನನ್ನ ಮಗು ನನಗೆ ಜೋಡಿ ಇಕ್ಕುಳಗಳನ್ನು ಕೊಂಡ್ಕೊಂಡಿದ್ದಾನೆ” ಅಂತ ಹೇಳ್ಕೊಂಡು ಆಶೀರ್ವಾದಗಳ ಸುರಿಮಳೆಯನ್ನೇ ಸುರಿಸುತ್ತಾಳೆ. ಮತ್ತೆ ಅವಳು ಈ ಇಕ್ಕುಳಗಳನ್ನು ನೆರೆಹೊರೆಯ ಹೆಂಗಸರಿಗೆ ತೋರಿಸುತ್ತಾಳೆ. ಹಮೀದ್ ತನ್ನ ಅಜ್ಜಿಗೆ ಇಕ್ಕುಳಗಳನ್ನು ತಂದಿದ್ದಾನೆ, ಆತ ಎಷ್ಟು ಒಳ್ಳೆ ಹುಡುಗ ಅಂತ ಇಡೀ ಹಳ್ಳಿ ಹೇಳುತ್ತೆ. ಆದ್ರೆ ಕೇವಲ ತಮಗೆ ಅಂತ ಆಟಿಕೆಗಳನ್ನು ಕೊಂಡ್ಕೊಂಡ ಆ ಹುಡುಗರನ್ನು ಯಾರೂ ಹೊಗಳೊದಿಲ್ಲ.
ಹಿರಿಯರ ಆಶಿರ್ವಾದಗಳನ್ನು ಅಲ್ಲಾಹನ ಆಸ್ಥಾನದಲ್ಲಿ ಮೊದಲು ಕೇಳಲಾಗುತ್ತಂತೆ, ಮತ್ತು ಆ ಕೂಡಲೇ ಫಲವೂ ಸಿಗುತ್ತಂತೆ. ಈಗ ನನ್ ಕೈಲಿ ಹಣ ಇಲ್ಲ ಅಂತ ಮೊಹಸಿನ್ ಮತ್ತು ಮಹಮ್ಮೂದು ನನ್ನನ್ನು ಗೇಲಿ ಮಾಡ್ತಾ ಇದ್ದಾರೆ. ಅವರಿಗೆ ಪಾಠ ಕಲಿಸ್ಬೇಕು. ಅವರು ಎಷ್ಟು ತಿಂಡಿ ಬೇಕಾದ್ರೆ ತಿನ್ಲಿ, ಎಷ್ಟು ಆಟಿಕೆ ಬೇಕಾದ್ರೂ ತೆಗೆದುಕೊಳ್ಳಲಿ. ನಾನು ಮಾತ್ರ ಅವರ ಆಟಿಕೆಗಳ ಜೊತೆಗೆ ಆಟ ಆಡ್ಲಿಕ್ಕಿಲ್ಲ. ಇವರ ಹುಚ್ಚಾಟ ಇನ್ನು ಸಹಿಸೋದೇ ಇಲ್ಲ. ಒಮ್ಮೆ ನನ್ನ ತಂದೆ ವಾಪಾಸು ಬರ್ಲಿ ಹಾಗೆಯೇ ತಾಯಿ ಕೂಡಾ. ಆನಂತರ ಅವರ ಬಳಿ ಕೇಳ್ಬೇಕು, ನಿಮಗೆ ಆಟಿಕೆಗಳು ಬೇಕೇ, ಎಷ್ಟು ಬೇಕು, ಆಗ ಎಲ್ಲರಿಗೂ ಬುಟ್ಟಿ ತುಂಬಾ ಆಟಿಕೆಗಳನ್ನು ಕೊಟ್ಟು ಬಿಡಬೇಕು. ಸ್ನೇಹಿತರನ್ನು ಹೇಗೆ ನಡೆಸಿಕೊಳ್ಳಬೇಕು ಎಂದು ಅವರಿಗೆ ಕಲಿಸಬೇಕು. ನಾನು ಒಂದು ಪೈಸೆ ಲಾಲಿಪಾಪ್ ಕೊಂಡ್ಕೊಂಡು ನೆಕ್ಕುತ್ತಾ ಇತರರನ್ನು ಗೇಲಿ ಮಾಡೋ ಜನ ಅಲ್ಲ ಅಂತ ಗೊತ್ತಾಗ್ಬೇಕು. ಗೊತ್ತು ಈ ಹಮೀದ್ ಇಕ್ಕುಳಗಳನ್ನು ಕೊಂಡ್ಕೊಂಡಿದ್ದಾನೆ ಅಂತ ಅವರೆಲ್ಲರೂ ನಗುತ್ತಾರೆ. ಶೈತಾನನ ಹತ್ತಿರ ಹೋಗಲಿ ನನಗೇನು”.
“ಈ ಇಕ್ಕುಳಗಳಿಗೆ ಎಷ್ಟು” ಹಮೀದ್ ಅಂಗಡಿಯಾತನ ಬಳಿ ಕೇಳಿದ.
ಅಂಗಡಿಯವನು ಅವನ್ನೊಮ್ಮೆ ನೋಡಿದ, ಜೊತೆಯಲ್ಲಿ ದೊಡ್ಡವರು ಯಾರೂ ಇರದುದನ್ನು ಕಂಡು ಹೇಳಿದ , “ಇದು ನಿನಗಾಗಿ ಅಲ್ಲ”.
“ಇದು ಮಾರಾಟಕ್ಕಿಟ್ಟಿರೋದಲ್ವಾ?”
“ಯಾಕಲ್ಲ?, ಇಲ್ಲದಿದ್ದರೆ ಇವನ್ನೆಲ್ಲಾ ಇಲ್ಲಿವರೆಗೆ ಯಾಕೆ ಹೊತ್ತು ತರುತ್ತಿದ್ದೆ?”
“ಹಾಗಾದ್ರೆ ಇದಕ್ಕೆ ಎಷ್ಟು ಬೆಲೆ ಅಂತ ಯಾಕೆ ಹೇಳ್ತಾ ಇಲ್ಲ ನೀನು?”
“ಇದಕ್ಕೆ ಆರು ಪೈಸೆಯಾಗುತ್ತೆ”
ಹಮೀದ್ ನ ಹೃದಯ ಕುಸಿಯಿತು, “ನನಗೆ ನಿಜವಾದ ಬೆಲೆ ಹೇಳು”.
“ಸರಿ ಇದಕ್ಕೆ ಕಡೆಯ ಬೆಲೆ ಐದು ಪೈಸೆಯಾಗುತ್ತೆ, ತಗೊ ಅಥವಾ ಬಿಡು”,
ಹಮೀದ್ ಮನಸ್ಸು ಗಟ್ಟಿ ಮಾಡಿಕೊಂಡು ಹೇಳಿದ, “ನನಗೆ ಮೂರು ಪೈಸೆಗೆ ಇದನ್ನ ಕೊಡ್ತಿಯಾ”, ಅಷ್ಟು ಕೇಳಿದ ಹಮೀದ್ ಈ ಅಂಗಡಿಯವ ಬೈಯ್ಯದಿರಲಿ ಎಂದುಕೊಂಡು ಮುಂದೆ ಸಾಗಿಬಿಟ್ಟ. ಆದರೆ ಅಂಗಡಿಯವ ಬೈಯಲಿಲ್ಲ ಬದಲಿಗೆ ಆತನೇ ಹಮೀದ್ ನನ್ನು ವಾಪಾಸು ಕರೆದು ಆ ಇಕ್ಕುಳಗಳನ್ನು ಅವನಿಗೆ ಕೊಟ್ಟನು. ಹಮೀದ್ ಇಕ್ಕುಳಗಳನ್ನು ಕೋವಿಯಂತೆ ಹೆಮ್ಮೆಯಿಂದ ಹೆಗಲ ಮೇಲೆ ಇರಿಸಿಕೊಂಡ, ನಂತರ ತನ್ನ ಗೆಳೆಯರಿಗೆ ತೋರಿಸೋಣ ಎಂದು ಮುಂದೆ ಹೊರಟನು. ಅವರು ಏನು ಹೇಳುತ್ತಾರೋ ನೋಡೋಣ.
“ಏಯ್ ನಿಂಗೇನು ಹುಚ್ಚಾ? ಆ ಇಕ್ಕುಳಗಳನಿಟ್ಟ್ಕೊಂಡು ಅದೇನು ಮಾಡ್ತಿಯಾ ನೀನು? ಮೊಹಸಿನ್ ನಗುತ್ತಾ ಹೇಳಿದ.
ಹಮೀದ್ ತನ್ನ ಇಕ್ಕುಳಗಳನ್ನು ನೆಲಕ್ಕೆಸೆದು ಹೇಳಿದ, “ಬೇಕಾದ್ರೆ ನಿನ್ನ ಆ ನೀರು ಸಾಗಿಸೋ ಗೊಂಬೆನ ಒಮ್ಮೆ ನೆಲಕ್ಕೆ ಎಸಿ ನೋಡೋಣ, ಅವನ ಮೈ ಮೂಳೆಗಳೆಲ್ಲಾ ಮುರಿದು ಬಿಡ್ತಾವೆ”.
“ಈ ಇಕ್ಕುಳಗಳು ಕೂಡಾ ಆಟಿಕೆಗಳಾ?” ಮಹಮ್ಮೂದು ಕೇಳಿದ.
“ಯಾಕಲ್ಲ”, ಹಮೀದ್ ಉತ್ತರಿಸಿದ, “ಹಿಂಗೆ ಹೆಗಲ ಮೇಲಿಟ್ಕೊಂಡ್ರೆ ಕೋವಿ ತರಾ ಇರುತ್ತೆ ಇದು. ಹಿಂಗೆ ಇಟ್ಕೊಂಡ್ರೆ ಹಾಡು ಹಾಡೋರ ಕೈಯಲ್ಲಿ ಇರುತ್ತಲ್ವ ಹಂಗೆ ಶಬ್ದಾನು ಮಾಡುತ್ತೆ. ಒಂದೇ ಪೆಟ್ಟಿಗೆ ನಿಮ್ಮ ಗೊಂಬೆಗಳನ್ನೆಲ್ಲಾ ಹುಡಿ ಹಾಕ್ಬಿಡುತ್ತೆ. ಆದ್ರೆ ನಿಮ್ ಗೊಂಬೆಗಳಿಗೆ ನನ್ನ ಇಕ್ಕುಳದ ಒಂದು ರೋಮಾನೂ ಅಲ್ಲಾಡ್ಸಕ್ಕಾಗಲ್ಲ ಗೊತ್ತಾ? ನನ್ನ ಇಕ್ಕುಳಗಳೆಂದರೆ ಹುಲಿ ಇದ್ದಂಗೆ”
ಪುಟ್ಟ ಡೊಳ್ಳೊಂದನ್ನು ಕೊಂಡುಕೊಂಡಿದ್ದ ಸಮ್ಮಿ ಹೇಳಿದ, “ಈ ಡೊಳ್ಳಿನ ಬದಲಿಗೆ ನನಗದನ್ನು ಕೊಡ್ತಿಯಾ, ಇದಕ್ಕೆ ಎಂಟು ಪೈಸೆ ಕೊಟ್ಟಿದ್ದೀನಿ”.
ಹಮೀದ್ ಅದರತ್ತ ನೋಡದೇ ಇರುವಂತೆ ನಟಿಸಿದ, “ನನ್ನ ಇಕ್ಕುಳಗಳು ಬಯಸಿದ್ರೆ ನಿನ್ನ ಡೊಳ್ಳನ್ನು ಹರಿದು ಹಾಕುತ್ತವೆ. ಅದಕ್ಕಿರೋದು ಬರೀ ಚರ್ಮದ ಹೊದಿಕೆ, ಬಾರಿಸಿದ್ರೆ ‘ಡುಬ್,ಡುಬ್’ ಅಂತಾ ಬಡ್ಕೋತ್ತಾವೆ, ಒಂದು ಹನಿ ನೀರು ಸಾಕು ಅದರ ಬಾಯಿ ಮುಚ್ಸೋಕೆ, ನನ್ನ ಇಕ್ಕುಳಗಳನ್ನ ನೋಡು ಯಾವ ನೀರಿಗೂ ಬಿರುಗಾಳಿಗೂ ಒಂದಿಂಚೂ ಬಗ್ಗೋದಿಲ್ಲ”.
ಎಲ್ಲರೆದುರಲ್ಲೂ ಇಕ್ಕುಳಗಳೇ ಗೆದ್ದವು. ಈಗ ಯಾರ ಬಳಿಯಲ್ಲೂ ಹಣ ಉಳಿದಿರಲಿಲ್ಲ. ಜಾತ್ರೆಯ ಸ್ಥಳವೂ ದೂರವಾಗಿತ್ತು. ಸಮಯ ಸುಮಾರು ಒಂಬತ್ತು ಗಂಟೆಯಾಗಿತ್ತು. ಸೂರ್ಯ ಪ್ರತಿ ನಿಮಿಷಕ್ಕೂ ಹೆಚ್ಚು ಹೆಚ್ಚು ಸುಡುತ್ತಿದ್ದ. ಎಲ್ಲರೂ ಮನೆ ತಲುಪುವ ತವಕದಲ್ಲಿದ್ದರು. ಈಗ ಅವರು ಅವರ ತಂದೆಯವರಲ್ಲಿ ಮಾತನಾಡಿದರೂ ಇಕ್ಕುಳಗಳು ಸಿಗುವ ಸಾಧ್ಯತೆಗಳು ಕಡಿಮೆ. ಈ ಹಮೀದ್ ದುಷ್ಟ, ಇಕ್ಕುಳಗಳನ್ನು ಕೊಳ್ಳಲೆಂದೇ ತನ್ನ ಪೈಸೆಗಳನ್ನು ಉಳಿಸಿಕೊಂಡಿರಬೇಕು.
ಹುಡುಗರು ಈಗ ಎರಡು ಗುಂಪುಗಳಾಗಿದ್ದರು. ಮೊಹಸಿನ್ , ಮಹಮ್ಮೂದು , ನೂರಿ ಮತ್ತು ಸಮ್ಮಿ ಒಂದು ಗುಂಪಾಗಿದ್ದರೆ, ಹಮೀದ್ ಒಬ್ಬನೇ ಇನ್ನೊಂದು ಗುಂಪಿನಲ್ಲಿದ್ದ.
ಬಿಸಿ ಬಿಸಿ ಚರ್ಚೆಗಳು ಆರಂಭವಾದವು. ಸಮ್ಮಿ ಪಕ್ಷಾಂತರ ಮಾಡಿಕೊಂಡ. ಆದರೆ ಮಹಮ್ಮೂದು, ಮೊಹಸಿನ್ ಮತ್ತು ನೂರಿ, ಹಮೀದ್ ನಿಗಿಂತ ಒಂದೆರಡು ವರುಷಗಳಷ್ಟು ದೊಡ್ಡವರಾದರೂ ಹಮೀದ್ ನನ್ನು ಎದುರಿಸಲಾರದೆ ಹೋದರು. ಒಂದು ಕಡೆ ನೈತಿಕತೆಯಿದ್ದರೆ ಇನ್ನೊಂದು ಕಡೆ ಮಣ್ಣಿನ ಆಟಿಕೆಗಳಿದ್ದವು. ಹಮೀದ್ ನ ಕೈಯಲ್ಲಿ ಸೋಲಿಸಲಾಗದ, ಅಪಾಯಕಾರಿಯಾದ ಕಬ್ಬಿಣದ ಇಕ್ಕುಳ ಈಗ ಉಕ್ಕಿನಂತಾಗಿತ್ತು. ಒಂದು ವೇಳೆ ಹುಲಿಯೊಂದು ಅಚಾನಕ್ಕಾಗಿ ಹಾರಿಬಿಟ್ಟರೆ ಆ ನೀರು ಸಾಗಿಸುವವನ ಸತ್ತೇ ಹೋದಾನು, ಪೋಲಿಸ್ ಪೇದೆ ಮಣ್ಣಿನ ಕೋವಿ ಬಿಸಾಕಿ ಪೇರಿ ಕಿತ್ತಾನು, ವಕೀಲನಂತೂ ತನ್ನ ಕರಿಗವನಿನೊಳಗೆ ಮುಖ ಅವಿತಿಟ್ಟು ಅಜ್ಜಿ ಸತ್ತೋರ ತರಾ ಅತ್ತು ಬಿಟ್ಟಾನು. ಆದರೆ ಈ ಇಕ್ಕುಳಗಳು ಭಾರತದ ಚಾಂಪಿಯನನಂತೆ ಆ ಹುಲಿಯ ಮೇಲೆ ಹಾರಿ ಗೋಣು ಮುರಿದು ಕಣ್ಣುಗಳಿಗೆ ಚುಚ್ಚಿ ಬಿಟ್ಟಾವು.
ಮೊಹಸಿನ್ ತನ್ನ ಎಲ್ಲಾ ಉಪಾಯಗಳನ್ನು ಒಗ್ಗೂಡಿಸಿ ಹೇಳಿದ, “ಆದ್ರೆ ಅವು ನೀರು ಹೊತ್ಕೊಂಡು ಬರೋದಿಕ್ಕೆ ಸಾಧ್ಯವೇ ಇಲ್ಲ ಅಲ್ವಾ?”
ಹಮೀದ್ ತನ್ನ ಇಕ್ಕುಳಗಳನ್ನು ಕೈಯಲ್ಲೆತ್ತಿ ಹೇಳಿದ, “ಈ ಇಕ್ಕುಳ ಒಂದು ಆದೇಶ ಮಾಡಿದರೆ ಸಾಕು, ನಿನ್ನ ನೀರು ಸಾಗಿಸೋ ಗೊಂಬೆ ಓಡಿ ಹೋಗಿ ನೀರು ಹೊತ್ಕೊಂಡು ಬಂದು ಮನೆ ಬಾಗಿಲಿಗೆಲ್ಲಾ ನೀರು ಚಿಮುಕಿಸ್ತಾನೆ ಗೊತ್ತಾ.”
ಮೊಹಸಿನ್ ನ ಬಳಿ ಉತ್ತರವಿರಲಿಲ್ಲ. ಆಗ ಮಹಮ್ಮೂದು ಅವನ ರಕ್ಷಣೆಗೆ ಬಂದ, “ನಾವೇನಾದ್ರು ಸಿಕ್ಕಿ ಬಿದ್ರೆ, ನಮ್ಮನ್ನು ಕೋಳ ಹಾಕಿ ಕೋರ್ಟಿಗೆ ಕುಣಿಸ್ತಾರೆ, ಆಗ ನಾವೆಲ್ಲಾ ವಕೀಲನ ಕಾಲಿಗೆ ಬೀಳ್ಬೇಕಲ್ವಾ?”
ಈ ಬಲವಾದ ವಾದಕ್ಕೆ ಹಮೀದ್ ನ ಬಳಿ ಉತ್ತರವಿರಲಿಲ್ಲ. “ಆದ್ರೆ ನಮ್ಮನ್ನು ಯಾರು ಬಂಧಿಸೋರು?”
ನೂರಿ ಎದೆಯುಬ್ಬಿಸಿಕೊಂಡು ಹೇಳಿದ, “ಈ ಪೋಲಿಸು ಮತ್ತು ಅವನ ಕೋವಿ.”
ಹಮೀದ್ ಮಖದಲ್ಲಿ ವ್ಯಂಗ್ಯ ತುಂಬಿಕೊಂಡು ಹೇಳಿದ, “ಏನು ಈ ಪೋಲಿಸು ಭಾರತದ ಚಾಂಪಿಯನ್ ನನ್ನು ಬಂಧಿಸುವುದೇ !, ಸರಿ ಹಾಗಾದ್ರೆ ಒಂದು ಕುಸ್ತಿ ಪಂದ್ಯ ಇಡೋಣ, ಈ ಪೋಲಿಸು ಇಕ್ಕುಳಗಳನ್ನು ಹಿಡಿಯೋದಿರ್ಲಿ, ಕಣ್ಣುಗಳಿಂದ ನೋಡೋಕು ಹೆದರಿಬಿಟ್ಟಾನು.”
ಮೊಹಸಿನ್ ಇನ್ನೊಂದು ಉಪಾಯದ ಬಗ್ಗೆ ಯೋಚಿಸಿದ, “ನಿನ್ನ ಇಕ್ಕುಳಗಳ ಮೂತಿ ದಿನಾಲು ಸುಡುತ್ತೆ”, ಇದು ಹಮೀದ್ ನ ಬಾಯಿ ಮುಚ್ಚ್ಸುತ್ತೆ ಎಂದು ಕೊಂಡಿದ್ದ. ಆದರೆ ಹಮೀದ್ ಕೂಡಲೇ ತಯಾರಾಗಿದ್ದ, “ಏ ಈ ಇಕ್ಕುಳಗಳು ಬೆಂಕಿಗೆ ಹಾರೋ ಚಾಂಪಿಯನ್ ಕಣ್ರೋ, ನಿಮ್ಮ ಈ ದರಿದ್ರ ವಕೀಲ್ರು, ಪೋಲಿಸ್ರು, ನೀರು ಸಾಗಿಸೋರು ಎಲ್ಲಾ ಹೆಂಗಸ್ರ ತರಾ ಮನೆಯೊಳಗೆ ಓಡಿಬಿಡ್ತಾರೆ, ಕೇವಲ ಈ ಭಾರತದ ಚಾಂಪಿಯನ್ ಮಾತ್ರ ಬೆಂಕಿ ಒಳಗೆ ಹಾರೋ ಆಟ ಆಡ್ತಾನೆ ಗೊತ್ತಾ.”
ಮಹಮ್ಮೂದು ಇನ್ನೊಂದು ಪ್ರಯತ್ನ ಮಾಡಿದ, “ವಕೀಲನಿಗೆ ಕೂರೋಕೆ ಕುರ್ಚಿ, ಮತ್ತು ಎಲ್ಲಾ ವಸ್ತುಗಳನ್ನು ಇಡೋಕೆ ಮೇಜು ಎಲ್ಲಾ ಇರುತ್ತೆ, ನಿನ್ನ ಇಕ್ಕುಳಗಳು ಮಾತ್ರ ಅಡುಗೆ ಮನೇಲಿ ತೆಪ್ಪಗೆ ಬಿದ್ಕೊಂಡಿರುತ್ತೆ ಅಲ್ವಾ.”
ಹಮೀದ್ ನಿಗೆ ಇದಕ್ಕೆ ಸರಿಯಾದ ಉತ್ತರ ಹೊಳೆಯಲಿಲ್ಲ, ಕೊನೆಗೆ ಮನಸ್ಸಿಗೆ ತೋಚಿದ್ದು ಹೇಳಿ ಬಿಟ್ಟ, “ಇಕ್ಕುಳಗಳು ಅಡುಗೆ ಮನೇಲಿ ಕೂರೊಲ್ಲ, ನಿನ್ ವಕೀಲ ಕುರ್ಚಿ ಮೇಲೆ ಕೂತರೆ ಈ ಇಕ್ಕುಳ ಅವನನ್ನ ಜಾಡ್ಸಿ ನೆಲಕ್ಕೆ ದೂಡಿ ಹಾಕುತ್ತೆ ಗೊತ್ತಾ.”
ಇದರಲ್ಲಿ ತಲೆಬುಡ ಇಲ್ಲದಿದ್ದರೂ ಆ ಎದುರಾಳಿ ನಾಯಕರಂತೂ ಸಂಪೂರ್ಣವಾಗಿ ಅಪ್ಪಚ್ಚಿಯಾದರು. ಹಮೀದ್ ಪಂದ್ಯ ಗೆದ್ದು ಬಿಟ್ಟ, ಇಕ್ಕುಳಗಳು ಭಾರತದ ಚಾಂಪಿಯನ್ ಆಗಿದ್ದವು. ಮೊಹಸಿನ್, ಮಹಮ್ಮೂದು, ನೂರಿ, ಸಮ್ಮಿ ಯಾರಿಗೂ ಈ ಸತ್ಯವನ್ನು ಅಲ್ಲಗಳೆಯಲು ಸಾಧ್ಯವೇ ಇರಲಿಲ್ಲ.
ಗೆದ್ದವನಿಗೆ ನೀಡಲಾಗುವ ಗೌರವವನ್ನು ಹಮೀದ್ ನಿಗೆ ನೀಡಲಾಯಿತು. ಉಳಿದವರು ಒಬ್ಬೊಬ್ಬರೂ ಹನ್ನೆರಡರಿಂದ ಹದಿನಾರು ಪೈಸೆಗಳನ್ನು ಖರ್ಚು ಮಾಡಿದ್ದರೂ ಹೇಳಿಕೊಳ್ಳುವಂತದ್ದೇನನ್ನೂ ಖರೀದಿಸಿರಲಿಲ್ಲ. ಆದರೆ ಹಮೀದ್ ನ ಮೂರು ಪೈಸೆ ಬೆಲೆಬಾಳುವಂತಹುದು ಅಂದಿನ ದಿನವನ್ನು ಗೆದ್ದಿತ್ತು. ಆಟಿಕೆಗಳು ನಂಬಲರ್ಹವಲ್ಲವೆಂದು ಅವರ್ಯಾರಿಗೂ ಅಲ್ಲಗಳೆಯಲು ಸಾಧ್ಯವೇ ಇರಲಿಲ್ಲ, ಅವುಗಳು ಪುಡಿಯಾದಾವು. ಆದರೆ ಹಮೀದ್ ನ ಇಕ್ಕುಳಗಳು ವರ್ಷಗಳವರೆಗೆ ಬಾಳಿಕೆ ಬರುವಂತಹುದಾಗಿತ್ತು.
ಹುಡುಗರು ಶಾಂತಿ ಒಪ್ಪಂದಕ್ಕೆ ತಯಾರಾದರು. ಮೊಹಸಿನ್ ಹೇಳಿದ,” ನಿನ್ನ ಇಕ್ಕುಳಗಳನ್ನು ಸ್ವಲ್ಪ ಇಲ್ಲಿ ಕೊಡು, ಈ ನೀರು ಸಾಗಿಸೋ ಗೊಂಬೆ ತಗೋ”
ಹಾಗೆಯೇ ಮಹಮ್ಮೂದು ಮತ್ತು ನೂರಿ ಕೂಡಾ ತಮ್ಮ ತಮ್ಮ ಆಟಿಕೆಗಳನ್ನು ನೀಡಲು ಬಂದರು. ಹಮೀದ್ ನಿಗೆ ಈ ಒಪ್ಪಂದಗಳಿಗೆ ಒಪ್ಪಿಕೊಳ್ಳಲು ಯಾವ ಭಯವೂ ಇರಲಿಲ್ಲ. ಹಾಗೆಯೇ ಇಕ್ಕುಳಗಳು ಎಲ್ಲರ ಕೈಯಲ್ಲಿಯೂ ಹರಿದಾಡಿದವು. ಹಾಗೆಯೇ ಅವರ ಆಟಿಕೆಗಳು ಹಮೀದ್ ನ ಕೈಗಳಿಗೆ ಬಂದವು. ಅಬ್ಬಾ, ಎಷ್ಟೊಂದು ಸುಂದರವಾಗಿದ್ದವು ಆ ಆಟಿಕೆಗಳು!
ಹಮೀದ್ ಆ ಸೋತು ಹೋಗಿದ್ದ ವಿರೋಧಿಗಳ ಕಣ್ಣೀರೊರೆಸಲು ಪ್ರಯತ್ನಿಸಿದ. “ನಾನು ಸುಮ್ನೆ ತಮಾಷೆ ಮಾಡುತ್ತಿದ್ದೆ. ನಿಜವಾಗಿಯೂ, ಈ ಕಬ್ಬಿಣದ ಇಕ್ಕುಳಗಳೆಲ್ಲಿ, ನಿಮ್ಮ ಸುಂದರವಾದ ಆಟಿಕೆಗಳೆಲ್ಲಿ? ಆದರೆ ಅದು ಅವರಿಗೆ ಅನಿಸಲೇ ಇಲ್ಲ. ಇಕ್ಕುಳಗಳು ಗೆದ್ದಿದ್ದವು. ಮೊಹಸಿನ್ ಹೇಳಿದ, “ಈ ಆಟಿಕೆಗಳನ್ನು ಯಾರೂ ಹೊಗಳಲಾರರು. ನಮ್ಮನ್ನು ಯಾರೂ ಆಶಿರ್ವದಿಸಲಾರರು”.
“ನೀನು ಆಶಿರ್ವಾದದ ಬಗ್ಗೆ ಮಾತಾಡ್ತಿದ್ದೀಯಾ, ನಮ್ಗೆ ಬರೀ ಬೈಗುಳ ಸಿಗುತ್ತೆ ನೋಡು, ನನ್ನ ಅಮ್ಮನಂತೂ, ನಿಂಗೆ ಬರೀ ಮಣ್ಣಿನ ಆಟಿಕೆಗಳೇ ಸಿಗೋದು ಅಂತ ಬೈಯೋದು ಖಂಡಿತಾ”.
ತನ್ನ ಅಜ್ಜಿ ಈ ಇಕ್ಕುಳಗಳನ್ನು ನೋಡಿ ಸಂತೋಷ ಪಡುವಷ್ಟು ಯಾವ ತಾಯಿಯೂ ಆ ಆಟಿಕೆಗಳನ್ನು ನೋಡಿ ಸಂತೋಷ ಪಡಲಾರಳು ಎಂಬ ಸತ್ಯವನ್ನು ಹಮೀದ್ ಒಪ್ಪಲೇಬೇಕಾಯಿತು. ಅವನ ಬಳಿ ಇದ್ದುದೇ ಮೂರು ಪೈಸೆಗಳು. ಆದುದರಿಂದ ಆತ ಅದನ್ನು ಹೇಗೆ ಖರ್ಚು ಮಾಡಿದೆ ಎಂದು ದುಃಖ ಪಡುವುದರಲ್ಲಿ ಅರ್ಥವೇ ಇರಲಿಲ್ಲ. ಮತ್ತು ಈಗ ಅವನ ಇಕ್ಕುಳಗಳು ಭಾರತದ ಚಾಂಪಿಯನ್ನರಾಗಿದ್ದವು ಮತ್ತು ಎಲ್ಲಾ ಆಟಿಕೆಗಳ ರಾಜರಾಗಿದ್ದವು.
ಸುಮಾರು ಹನ್ನೊಂದು ಗಂಟೆಗೆ ಹಳ್ಳಿಯಲ್ಲಿ ಪುನಃ ಉತ್ಸಾಹ ಬುಗಿಲೆದ್ದಿತು. ಜಾತ್ರೆಗೆ ಹೋಗಿದ್ದ ಎಲ್ಲರೂ ತಮ್ಮ ತಮ್ಮ ಮನೆಗೆ ವಾಪಾಸ್ಸಾಗಿದ್ದರು. ಮೊಹಸಿನ್ ನ ಪುಟ್ಟ ತಂಗಿ ಅವನ ಕೈಯಿಂದ ನೀರು ಸಾಗಿಸೋ ಗೊಂಬೆಯನ್ನು ಕಿತ್ತುಕೊಂಡು ನಲಿದಾಡತೊಡಗಿದಳು. ಆ ಗೊಂಬೆ ಅವಳ ಕೈಯಿಂದ ಜಾರಿ ನೆಲಕ್ಕೆ ಬಿದ್ದು ಸ್ವರ್ಗವಾಸಿಯಾಯಿತು. ಇಬ್ಬರೂ ಜಗಳವಾಡ ತೊಡಗಿದರು ಮತ್ತು ಅಳತೊಡಗಿದರು. ಆ ಗಲಾಟೆಗೆ ಹೈರಾಣದ ಮೊಹಸಿನ್ ನ ತಾಯಿ ಇಬ್ಬರಿಗೂ ಎರಡೇಟು ಬಿಗಿದಳು.
ನೂರಿಯ ವಕೀಲ ಅವನ ಅಂತಸ್ತಿಗೆ ತಕ್ಕುದಾದ ಅಂತ್ಯವನ್ನೇ ಕಂಡನು. ವಕೀಲ ನೆಲದಲ್ಲಿ ಕೂರಲು ಸಾಧ್ಯವೇ? ಅವನ ಅಂತಸ್ತಿಗೆ ಗಮನ ಕೊಡ ಬೇಕಲ್ಲವೇ? ಹಾಗೆಯೇ ಎರಡು ಮೊಳೆಗಳನ್ನು ಗೋಡೆಗೆ ಹೊಡೆಯಲಾಯಿತು. ಅದರ ಮೇಲೆ ಒಂದು ಹಲಗೆಯನ್ನಿಟ್ಟು, ಕಾಗದದ ಜಮಖಾನೆ ಹಾಸಿದ ನಂತರ ಆ ವಕೀಲ ಅದರ ಮೇಲೆ ರಾಜನಂತೆ ವಿರಾಜಮಾನನಾದ. ನೂರಿ ಪಕ್ಕದಲ್ಲಿ ನಿಂತುಕೊಂಡು ಬೀಸಣಿಕೆಯಲ್ಲಿ ಗಾಳಿ ಬೀಸ ತೊಡಗಿದ. ಕೋರ್ಟುಗಳಲ್ಲಿ ಬೀಸು ಬಟ್ಟೆಗಳೂ , ವಿದ್ಯುತ್ತಿನ ಪಂಖಗಳೂ ಇರುವುದೆಂದು ಅವನಿಗೆ ಗೊತ್ತಿತ್ತು. ಕಡೇ ಪಕ್ಷ ಆತ ಬೀಸಣಿಕೆಯಲ್ಲಾದರೂ ಗಾಳಿ ಬೀಸೋಣ ವೆಂದುಕೊಂಡ. ಇಲ್ಲದಿದ್ದರೆ ಬಿಸಿಯಾದ ವಾದ ವಿವಾದಗಳಿಂದ ವಕೀಲನ ಮಿದುಳಿನ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆಯಿತ್ತು.
ನೂರಿ ಬಿದಿರಿನ ಎಲೆಗಳಿಂದ ಮಾಡಿದ ಬೀಸಣಿಕೆಯಿಂದ ಗಾಳಿ ಬೀಸುತ್ತಿದ್ದ. ಗಾಳಿ ತಾಗಿತೋ ಅಥವಾ ಬೀಸಣಿಕೆಯೋ ಒಟ್ಟಾರೆ ಪೀಠಾಸೀನನಾಗಿದ್ದ ವಕೀಲ ನೆಲದ ಮೇಲೆ ಬಿದ್ದು ಬಿಟ್ಟಿದ್ದ. ಕರಿಗವನು ಮಣ್ಣಿನಲ್ಲಿ ಸೇರಿ ಹೋಗಿತ್ತು. ನೂರಿ ಎದೆ ಬಡಿದುಕೊಳ್ಳುತ್ತಿದ್ದ. ವಕೀಲನ ಗೊಂಬೆ ಈಗ ಮಣ್ಣಿನ ರಾಶಿಯಾಗಿತ್ತು.
ಮಹಮ್ಮೂದ್ ನ ಪೋಲಿಸಪ್ಪ ಇನ್ನೂ ಇದ್ದ. ಅವನನ್ನು ಕೂಡಲೇ ಹಳ್ಳಿಯನ್ನು ಕಾಯುವ ಕರ್ತವ್ಯದಲ್ಲಿ ನಿಯೋಜಿಸಲಾಯಿತು. ಆದರೆ ಸಾಮಾನ್ಯರಂತೆ ನಡೆದು ಹೋಗಲು ಅವನೇನು ಜೀವ ಇರುವ ಮನುಷ್ಯನೇ? ಆದಕಾರಣ ಅವನಿಗೆ ಪಲ್ಲಕ್ಕಿ ಒದಗಿಸಲಾಯಿತು. ಅದನ್ನು ಕೆಂಪು ಬಣ್ಣದ ಚಿಂದಿ ಬಟ್ಟೆಗಳಿಂದ ಮಾಡಲಾಗಿತ್ತು. ಅದರಲ್ಲಿ ಪೋಲಿಸಪ್ಪ ಒರಗಿಕೊಂಡ. ಮಹಮ್ಮೂದು ಆ ಪಲ್ಲಕ್ಕಿ ಬುಟ್ಟಿಯನ್ನು ಕೈಯಲ್ಲಿ ಹಿಡಿದುಕೊಂಡು ಹಳ್ಳಿ ಸುತ್ತಲು ತಯಾರಾದ. ಅವನ ಇಬ್ಬರು ಪುಟ್ಟ ತಮ್ಮಂದಿರು ಕೂಡಾ ಜೋರಾಗಿ ಗದ್ದಲ ಮಾಡುತ್ತಾ ಅವನನ್ನು ಹಿಂಬಾಲಿಸಿದರು. ಇನ್ನೂ ಕತ್ತಲಾಗಿರಲಿಲ್ಲ, ಆದರೂ “ಅಂಗಡಿಯವರೇ ಎಚ್ಚರ!, ಎಂದು ಕೂಗಿದರು ಅಷ್ಟೆ, ಮಹಮ್ಮೂದು ಕಾಲು ಎಡವಿ ಬುಟ್ಟಿಯನ್ನು ಬೀಳಿಸಿದ್ದ. ಹೊರಗೆ ದುಮುಕಿದ ಪೋಲಿಸಪ್ಪನ ಒಂದು ಕಾಲು ಮುರಿದಿತ್ತು.
ಮಹಮ್ಮೂದ್ ನಿಗೆ ಅಲ್ಪಸ್ವಲ್ಪ ವೈದ್ಯಕೀಯವೂ ತಿಳಿದಿತ್ತು. ಆತ ಪೋಲಿಸಪ್ಪನ ಕಾಲನ್ನು ಜೋಡಿಸಲು ಯತ್ನಿಸಿದ. ಅದಕ್ಕೆ ಆಲದ ಮರದ ಚಿಗುರುಗಳ ಹಾಲು ಬೇಕಾಗಿತ್ತು. ಅದನ್ನು ಕೂಡಾ ಒದಗಿಸಿ ಮುರಿದ ಕಾಲನ್ನು ಜೋಡಿಸಲಾಯಿತು.
ಆದರೆ ಪೋಲಿಸಪ್ಪನನ್ನು ನಿಲ್ಲಿಸಿದ ಕೂಡಲೇ ಕಾಲುಗಳು ಪುನಃ ಕಳಚಿದವು. ಒಂದು ಕಾಲಿನಿಂದಾಗಿ ನಿಲ್ಲಲೂ , ಕೂರಲೂ ಆಗದಂತಾಯಿತು. ಕೊನೆಗೆ ಮಹಮ್ಮೂದು ಓರ್ವ ಸರ್ಜನ್ ಆಗಿಯೇ ಬಿಟ್ಟ. ಇನ್ನೊಂದು ಕಾಲನ್ನು ಕೂಡಾ ತುಂಡು ಮಾಡಿ ತುಂಡಾಗಿದ್ದ ಕಾಲಿನ ಸೈಜಿಗೆ ಇಳಿಸಿದ. ಈಗ ಪೋಲಿಸಪ್ಪನಿಗೆ ಆರಾಮವಾಗಿ ಕುಳಿತುಕೊಳ್ಳಲು ಸಾಧ್ಯವಾಯಿತು.
ಆ ಪೋಲಿಸಪ್ಪನನ್ನು ಒಂದು ಸಾಧುವಿನಂತೆ ಒಂದು ಮೂಲೆಯಲ್ಲಿ ಕುಳ್ಳಿರಿಸಲಾಯಿತು. ಅವನು ಕುಳಿತುಕೊಂಡೇ ಆ ಹಳ್ಳಿಯನ್ನು ಕಾಯ ಬೇಕಾಯಿತು. ಕೆಲವೊಂದು ಸಲ ಅವನನ್ನೇ ದೇವರ ತರಹವೂ ಪೂಜಿಸಲಾಯಿತು. ಆಗ ಅವನ ತಲೆಗೆ ಕೆಂಪು ಮುಂಡಾಸು ಸುತ್ತಲಾಗುತಿತ್ತು. ಹೀಗೆ ಬೇಕಾದ ಹಾಗೆ ಅವನ ರೂಪ ಬದಲಾಯಿಸಬಹುದಿತ್ತು. ಕೆಲವೊಮ್ಮೆ ಬರೀ ಸಾಮಾನುಗಳನ್ನು ತೂಕ ಮಾಡಲು ತಕ್ಕಡಿಯ ಕಲ್ಲುಗಳಂತೆಯೂ ಉಪಯೋಗಿಸಲಾಯ್ತು.
ಇತ್ತ ಹಮೀದ್ ನ ಸ್ವರ ಕೇಳಿ ಅಜ್ಜಿ ಅಮೀನಾ ಗುಡಿಸಲಿನಿಂದ ಹೊರಗೆ ಓಡಿ ಬಂದಳು. ಅವನನ್ನು ಹಿಡಿದು ಮುತ್ತು ಕೊಟ್ಟಳು. ಒಮ್ಮೆಲೆ ಹಮೀದ್ ನ ಕೈಯಲ್ಲಿದ್ದ ಇಕ್ಕುಳ ಕಣ್ಣಿಗೆ ಬಿದ್ದಿತು. “ಇದೆಲ್ಲಿ ಸಿಕ್ಕಿತು ನಿನಗೆ ಮಗೂ .”
“ನಾನಿದನ್ನು ಕೊಂಡ್ಕೊಂಡೆ.”
“ಎಷ್ಟು ಕೊಟ್ಟೆ ಮಗೂ ಇದಕ್ಕೆ?”
“ಮೂರು ಪೈಸೆ.”
“ಅಯ್ಯಯ್ಯೋ”, ಅಮೀನಾ ಎದೆ ಬಡಿದುಕೊಂಡಳು, “ಮಧ್ಯಾಹ್ನವಾದರೂ ಈ ಮಗು ಏನೂ ತಿಂದಿಲ್ಲ ಕುಡಿದಿಲ್ಲ, ಈ ಕಬ್ಬಿಣದ ಇಕ್ಕುಳ ಹಿಡ್ಕೊಂಡು ಬಂದಿದಾನಲ್ಲಪ್ಪ, ಎಂತಹಾ ಪೆದ್ದು ಮಗೂ ಇವನೂ ..”
“ನೀನು ಯಾವಾಗ್ಲೂ ಕಾವಲಿ ಮೇಲೆ ಕೈ ಸುಟ್ಟ್ಕೋತೀಯಾ, ಅದಿಕ್ಕೆ ಈ ಇಕ್ಕುಳಗಳನ್ನು ಕೊಂಡ್ಕೊಂಡೆ”, ಹಮೀದ್ ಬೇಸರದ ಸ್ವರದಲ್ಲಿ ಹೇಳಿದ.
ಆ ಮುದುಕಿಯ ಕೋಪ ಸರ್ರನೆ ಪ್ರೀತಿಯಾಗಿ ಬದಲಾಯಿತು. ಶಬ್ದಗಳಲ್ಲಿ ಕೊಚ್ಚಿಹೋಗುವ ಅಂತಿಂಥಾ ಪ್ರೀತಿಯಲ್ಲ, ಮೌನವಾದ, ಗಟ್ಟಿಯಾದ, ಮೆದುವಾದ ಅಂತಃಕರಣವುಳ್ಳ ಮಮತೆ, ಎಂತಹಾ ನಿಸ್ವಾರ್ಥಿ ಮಗು! ಪರರ ಬಗೆಗೆ ಇಷ್ಟು ಕಾಳಜಿ! ಎಷ್ಟು ದೊಡ್ಡ ಮನಸ್ಸು ಈತನದು! ಇತರ ಮಕ್ಕಳು ಸಿಹಿತಿಂಡಿಗಳಿಗೆ ಮುಗಿಬಿದ್ದು ತಿನ್ನುವಾಗ ಈತ ಅದೆಷ್ಟು ನೊಂದಿರಬಹುದು! ಹೇಗೆ ತನ್ನ ಆಸೆಗಳನ್ನು ಹತ್ತಿಕ್ಕಿ ಕೊಂಡ! ಆ ಜಾತ್ರೆಯಲ್ಲಿಯೂ ತನ್ನ ಅಜ್ಜಿಯ ಬಗ್ಗೆ ಯೋಚಿಸಿದನಲ್ಲ!, ಅಮೀನಾಳ ಹೃದಯ ಮಾತುಗಳಿಂದ ತುಂಬಿಹೋಗಿತ್ತು.
ಹಮೀದ್ ದೊಡ್ಡ ವ್ಯಕ್ತಿಯಾಗಿದ್ದ, ಅಮೀನಾ ಅಜ್ಜಿ ಪುಟ್ಟ ಹುಡುಗಿಯಾಗಿದ್ದಳು. ಆಕೆ ಬಿಕ್ಕಿ ಬಿಕ್ಕಿ ಅತ್ತಳು. ಈ ಮಗುವನ್ನು ಹರಸು ತಂದೆ ಎಂದು ಅಲ್ಲಾಹನಲ್ಲಿ ಸೆರಗೊಡ್ಡಿ ಬೇಡಿದಳು. ದೊಡ್ಡ ದೊಡ್ಡ ಕಣ್ಣೀರ ಹನಿಗಳು ಆಕೆಯ ಕಣ್ಣುಗಳಿಂದ ಉರುಳುತ್ತಿದ್ದವು. ಅವಳೊಳಗೆ ಏನಾಗುತ್ತಿದೆಯೆಂದು ಪಾಪ ಹಮೀದ್ ನಿಗೆ ಹೇಗೆ ತಿಳಿಯಬೇಕು?.
ಉರ್ದು ಮೂಲ : ಮುನ್ಶಿ ಪ್ರೇಮ್ ಚಂದ್
ಕನ್ನಡಕ್ಕೆ : ಪುನೀತ್ ಅಪ್ಪು