ಜೋಸೆಫ್ ಕೊನ್ರಾಡ್‌ರವರ ‘ಲಾರ್ಡ್ ಜಿಮ್’ ಕಾದಂಬರಿಯು, ಎನ್. ಎಸ್ ಪಡ್ನಾ ಎಂಬ ಕಾಲ್ಪನಿಕ ಹಡಗು ನಿರ್ಜನ ದ್ವೀಪವೊಂದರಲ್ಲಿ ಯಾತ್ರಿಕರನ್ನು ತೊರೆದು ಹೋಗುವುದರ ಕುರಿತೂ, ಪವಿತ್ರ ಮಕ್ಕಾ ತಲುಪಬೇಕೆಂಬ ಅವರ ಅತೀವ ಹಂಬಲದ ಸುತ್ತಲೂ ಬಹಳ ಮನೋಜ್ಞವಾಗಿ ಕಥೆ ಹೆಣೆದಿದೆ. ಇತರ ಪವಿತ್ರ ಯಾತ್ರಾರ್ಥಿಗಳ ಜೊತೆ ಸೇರಬೇಕೆಂಬ ಅವರ ಬಯಕೆ, ವಿಶಾಲ ಸಮುದ್ರವನ್ನು ದಾಟುವಲ್ಲಿನ ಅವರ ಅನುಭವಗಳು ಮತ್ತು ಅಪರಿಚಿತರೊಂದಿಗಿನ ಅವರ ಮುಖಾಮುಖಿಗಳು ಕಾದಂಬರಿಯೊಳಗೆ ನುಸುಳಿ ಬರುತ್ತದೆ.
ದಕ್ಷಿಣೇಷ್ಯಾದಲ್ಲಿ ಆಧುನಿಕ ಆಡಂಬರ ಸೌಲಭ್ಯಗಳಿರುವ ಹಡಗು ಸಂಚಾರ ಆರಂಭವಾಗುವುಕ್ಕಿಂತಲೂ ಮೊದಲೇ ಅಲ್ಲಿನ ಮುಸಲ್ಮಾನರು ಹಜ್ಜ್ ಯಾತ್ರೆ ಕೈಗೊಳ್ಳುತ್ತಿದ್ದರು. ಜಗತ್ತಿನಾದ್ಯಂತವಿರುವ ಮುಸಲ್ಮಾನರ ವಾರ್ಷಿಕ ಒಕ್ಕೂಟ ಹಾಗೂ ಶಾರೀರಿಕವಾಗಿ ಮತ್ತು ಆರ್ಥಿಕವಾಗಿ ದೃಢತೆಯಿರುವ ವಿಶ್ವಾಸಿಗಳ ಧಾರ್ಮಿಕ ಬಾಧ್ಯತೆಯಾಗಿದೆ ಹಜ್ಜ್. ದಕ್ಷಿಣೇಷ್ಯಾದ ಧಾರ್ಮಿಕ ಯಾತ್ರೆಯ ವಿಕಾಸ ಇಲ್ಲಿನ ಜನರಿಗೆ ‘ಸೃಷ್ಟಿಕರ್ತನ ಅತಿಥಿಗಳಾಗಿ’ ಮಕ್ಕಾದೆಡೆಗೆ ಹಜ್ಜ್ ಯಾತ್ರೆ ಹೋಗಲು ತುಂಬಾ ಹುರುಪು ನೀಡಿತು. ಆಧುನಿಕ ವಿಮಾನಗಳ ಆಗಮನಕ್ಕಿಂತಲೂ ಮೊದಲು ತಮ್ಮ ಗಮ್ಯದೆಡೆಗೆ ತಲುಪಲು ವಿಭಿನ್ನ ಪ್ರಯಾಣ ಮಾಧ್ಯಮಗಳನ್ನು ಅವರು ಉಪಯೋಗಿಸಲಾರಂಭಿಸಿದರು. ನಿರ್ಜನ ಗುಡ್ಡಗಾಡುಗಳ ಮೂಲಕ ಹೆಜ್ಜೆ ಮೂಡಿದಲ್ಲೆಲ್ಲಾ ದಾರಿ ಸವೆಸಿ ಹೊರಡುವುದರಿಂದ ಹಿಡಿದು, ಹಡಗು, ತೀರ್ಥಯಾತ್ರೆಗಿರುವ ವಿಶೇಷ ಹಾಯಿ ಹಡಗುಗಳನ್ನೆಲ್ಲಾ ಉಪಯೋಗಿಸಿ ಅವರು ಯಾತ್ರೆ ಮುಂದುವರೆಸಿದರು.
ವಸಾಹತು ಕಾಲದ ಕೊನೆಯ ಘಟ್ಟದಲ್ಲಿ ಹಜ್ಜ್ ಯಾತ್ರೆಯ ಸ್ವತಂತ್ರ ಸಂಚಾರಕ್ಕೆ ನಿಯಂತ್ರಣ ತರುವ ನಿಟ್ಟಿನಲ್ಲಿ ಪಾಸ್ಪೋರ್ಟ್, ಕಡ್ಡಾಯ ಆರೋಗ್ಯ ತಪಾಸಣಾ ಚೀಟಿಗಳನ್ನು ಸರಕಾರದ ನಿಯಮಾವಳಿಗಳ ಪಟ್ಟಿಯಲ್ಲಿ ಬ್ರಿಟಿಷ್ ಆಡಳಿತ ವ್ಯವಸ್ಥೆ ಜಾರಿಗೊಳಿಸಿತು. ಸ್ವಾತಂತ್ರ್ಯೋತ್ತರ ದಕ್ಷಿಣೇಷ್ಯಾದ ರಾಷ್ಟ್ರಗಳಲ್ಲಿ ಇಂತಹಾ ಹಲವು ನಿಯಮಾವಳಿಗಳು ತಮ್ಮ ಹೊಸ ಆಡಳಿತ ನೀತಿಯ ಮೂಲಕ ಮುಂದುವರಿಯಿತು. ಹಜ್ಜ್ ನಿಯಮಗಳಲ್ಲಿನ ಈ ರೀತಿಯ ಪರಿವರ್ತನೆಗಳು ಒಂದು ಹಂತದವರೆಗೆ ಹಿಂದೂ ಮಹಾ ಸಾಗರದಲ್ಲಿನ ಸುರಕ್ಷಿತ ಯಾತ್ರೆಗೆ ಸಹಾಯಕವಾಯಿತು. ಹತ್ತೊಂಬತ್ತನೆಯ ಶತಮಾನದ ಕೊನೆ ಮತ್ತು ಇಪ್ಪತ್ತನೆಯ ಶತಮಾನದ ಆರಂಭದಲ್ಲಿ ಸಮುದ್ರವ್ಯಾಪಾರ ಲಾಬದಾಯಕವಾಗಿ ಮಾರ್ಪಟ್ಟದ್ದು ಹಜ್ಜ್ ಯಾತ್ರೆಗಳು ಸುಲಲಿತಗೊಳ್ಳಲು ಕಾರಣವಾಯಿತು. ಅದೇ ವೇಳೆ, ಅಂತಹ ವ್ಯಾಪಾರ – ವಹಿವಾಟುಗಳು ಹಡಗು ಏಜಂಟರಿಗೆ ಅವಕಾಶವನ್ನೂ ನೀಡಿತು. ಯಾತ್ರಿಕರನ್ನು ಅತ್ಯಧಿಕ ಸಂಖ್ಯೆಯಲ್ಲಿ ಆಕರ್ಷಿಸಿ ಲಾಭ ಗಿಟ್ಟಿಸಲು ಅಲ್ಲಿನ ಪ್ರಾದೇಶಿಕ ಪತ್ರಿಕೆಗಳಲ್ಲಿ ಅವರು ಜಾಹೀರಾತು ನೀಡಲಾರಂಭಿಸಿದರು.
ಒಂದು ಕಡೆ ಹಜ್ಜ್ ಯಾತ್ರೆ ಮತ್ತು ಸಮುದ್ರ ವ್ಯಾಪಾರಗಳು ಹೇರಳವಾದಾಗ ಅದೇ ಯಾತ್ರಿಕರು ಹಿಜಾಝಿನ ಏಜಂಟರುಗಳೊಂದಿಗೆ ಸಂಬಂಧ ಬೆಳೆಸಲು ಆರಂಭಿಸಿದರು. ಪವಿತ್ರ ಸ್ಥಳಗಳಲ್ಲಿ ಕೆಲಸ ಗಿಟ್ಟಿಸಿಕೊಳ್ಳುವ ಸಲುವಾಗಿ ನೌಕರಿ ಅರಸಿ ಹೊರಡುವ ಪಯಣಗಳ ಸಾಧ್ಯತೆಗಳನ್ನು ಹಜ್ಜ್ ಯಾತ್ರೆಗಳು ಹೆಚ್ಚಿಸಿದವು. ಈ ನಿಟ್ಟಿನಲ್ಲಿ ಮಧ್ಯಯುಗದ ಸಮುದ್ರ ಯಾತ್ರೆಗಳಿಗೆ ಅತೀ ಹೆಚ್ಚಿನ ಪ್ರೇರಣೆ ಧಾರ್ಮಿಕ ಗುರಿಗಳಾಗಿದ್ದವು ಎಂದು ಮೈಕಲ್ ಪಿಯೋಝಿಸ್ ಆಭಿಪ್ರಾಯಪಡುತ್ತಾರೆ.
ವಾಣಿಜ್ಯ ನಿಮಿತ್ತದ ಯಾತ್ರೆಗಳ ಜೊತೆಗೆ ಜಗತ್ತಿನ ವಿವಿಧ ಕಡೆಗಳಲ್ಲಿ ಹಂಚಿ ಹೋಗಿರುವ ಮುಸ್ಲಿಮರನ್ನು ಏಕದೇವೋಪಾಸನೆಯ ಸಂಕಲ್ಪದಡಿಯಲ್ಲಿ ಒಂದುಗೂಡಿಸಿ ಒಗ್ಗಟ್ಟನ್ನು ಬಲಪಡಿಸುವಲ್ಲಿಯೂ ಮಧ್ಯಕಾಲೀನ ಭಾರತ ಮತ್ತು ಮಕ್ಕಾದ ನಡುವಿನ ಮಹಾಸಾಗರದಲ್ಲಿನ ನೌಕಾಯಾನಗಳಿಗೆ ಮಹತ್ತರ ಪಾತ್ರ ಇದೆ. ಆದರೆ ಬೆರ್ಬೆರಾ ಮೆಟ್ಕಾಫ’ ವ್ಯಕ್ತಪಡಿಸಿರುವಂತೆ, ಐಕ್ಯಭಾವವನ್ನು ಪ್ರತಿಬಿಂಬಿಸುವ ಇಂತಹಾ ಯಾತ್ರೆಗಳು ವಸಾಹತುಶಾಹಿಗೆ ತೊಂದರೆಯುಂಟು ಮಾಡುವುದೆಂದು ಬಿಂಬಿಸಿದ ಅಧಿಕಾರಿಗಳು ಜಿಹಾದ್, ಧರ್ಮಾಂಧತೆ ಮುಂತಾದ ಸುಳ್ಳಾರೋಪಗಳನ್ನು ಹೊರಿಸುವ ಮೂಲಕ ಹಜ್ಜ್ ಯಾತ್ರೆಗಳನ್ನು ನಿಯಂತ್ರಿಸಲು ಮುಂದಾದರು. ಅವರು ರೂಪಿಸಿದ ಹೊಸ ನಿಯಮಗಳು ಅವರ ಸಿದ್ಧಾಂತದ ಪ್ರಚಾರಕ್ಕೆ ಹೆಚ್ಚಿನ ವೇಗ ನೀಡಿತು.
ವಾಪಾಸ್ ಟಿಕೆಟಿನ ಕಡ್ಡಾಯಗೊಳಿಸುವಿಕೆ ಸೇರಿದಂತೆ ಸಮುದ್ರಯಾನ ಕ್ಷೇತ್ರದಲ್ಲಿ ವಸಾಹತುಶಾಹಿ ಆಡಳಿತ ವ್ಯವಸ್ಥೆ ಅಂದು ಚಾಲ್ತಿಗೆ ತಂದಿದ್ದ ಕಾನೂನುಗಳನ್ನಾಗಿತ್ತು ಸ್ವಾತಂತ್ರ್ಯೋತ್ತರ ಭಾರತದ ಸರಕಾರಗಳು ಮುಂದುವರೆಸಿದ್ದು. ಹಜ್ಜ್ ಪೂರ್ತಿಗೊಳಿಸಿದ ಯಾತ್ರಿಕರನ್ನು, ವಿಶೇಷವಾಗಿ ಬಡವರನ್ನು ವಾಪಾಸ್ ಕಳುಹಿಸಬೇಕಾದ ಅನಿವಾರ್ಯತೆಯ ಕುರಿತು ಆ ಕಾಲದ ಅಧಿಕಾರಿಗಳೆಡೆಯಲ್ಲಿ ಚರ್ಚೆ ನಡೆದಿತ್ತು. ವಸಾಹತು ಕಾಲದಲ್ಲಿ ‘ಹೌಸ್ ಆಫ್ ಇಂಡಿಯನ್ ಲೆಜಿಶ್ಲೇಷನ್’ನಲ್ಲೂ ನಂತರ ಭಾರತದ ‘ಬ್ಯೂರೋಕ್ರಾಟಿಕ್ ಅಫಯೆರ್ಸ್’ನಲ್ಲೂ ಇಂತಹ ಚರ್ಚೆಗಳು ಜರುಗುತ್ತಿತ್ತು. ಇಂತಹ ನಿಯಂತ್ರಣಗಳಿಂದ ತಮ್ಮ ಆಧ್ಯಾತ್ಮಿಕತೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ತಿಳಿದ ಪ್ರಯಾಣಿಕರು ಇದರ ವಿರುದ್ಧ ತೀವ್ರ ಪ್ರತಿರೋಧಗಳನ್ನು ಒಡ್ಡಿದ್ದರು. ಇವುಗಳ ವಾಪಸಾತಿಗಾಗಿ ಪತ್ರಗಳನ್ನು ಬರೆದರು. ಅದೇ ವೇಳೆ, ಮಕ್ಕಾದಲ್ಲಿ ತೊಂದರೆಗೆ ಸಿಲುಕಿರುವ ಯಾತ್ರಿಕರಿಗೆ ನೆರವಾಗಲು, ಅವರಿಗೆ ಉಚಿತ ಹಡಗು ಸೇವೆಗಳನ್ನು ಒದಗಿಸಿ ತಮ್ಮ ತಾಯ್ನಾಡಿಗೆ ವಾಪಸ್ ತಲುಪಿಸಲು ‘ಕೌನ್ಸಿಲರ್ ಏಜೆನ್ಸಿ’ಗಳು ಮತ್ತು ದತ್ತಿ ಆಧಾರಿತ ಧಾರ್ಮಿಕ ಸಂಸ್ಥೆಗಳು ಶ್ರಮಿಸುತ್ತಿದ್ದವು.
ಕೆಂಪು ಸಮುದ್ರದ ದ್ವೀಪಗಳ ಕ್ವಾರಂಟೈನ್ ಕೇಂದ್ರಗಳಲ್ಲಿನ ವೈದ್ಯಕೀಯ ತಪಾಸಣೆಗಳು, ವ್ಯಾಕ್ಸಿನೇಷನ್ ಮುಂತಾದ ಆಡಳಿತಾತ್ಮಕ ನಿಯಮಗಳು ಸಮುದ್ರ ಮುಖಾಂತರ ಹಜ್ಜ್ ಬಗೆಗಿನ ಐತಿಹಾಸಿಕ ಬರಹಗಳಲ್ಲಿ ಹೆಚ್ಚು ಮಹತ್ವ ಪಡೆದಿತ್ತು. ಹಜ್ಜ್ ಸಂಬಂಧಿತ ಇಂತಹ ಅಭಿವ್ಯಕ್ತಿಗಳ ಬಗೆಗಿನ ಹೊಸ ಸಂಶೋಧನೆಗಳು ಇತ್ತೀಚಿನ ದಿನಗಳಲ್ಲಿ ಹೊರಬರುತ್ತಿದೆ. ಆದರೆ, ಕ್ಲಿಷ್ಟಕರ ಸನ್ನಿವೇಶಗಳನ್ನು ಯಾತ್ರಿಕರು ಎದುರಿಸುತ್ತಿದ್ದದ್ದು ಹೇಗೆ? ಆಧುನಿಕ ಐಷಾರಾಮಿ ಹಡಗುಗಳಿಲ್ಲದ ಆ ಕಾಲದಲ್ಲಿ ಅವರ ಸಮುದ್ರಯಾನ ಯಾವ ತೆರನಾಗಿತ್ತು? ಮುಂತಾದ ಪ್ರಶ್ನೆಗಳಿಗೆ ಉತ್ತರ ನೀಡುವ ಅಧ್ಯಯನಗಳು ಹಿಂದೂ ಮಹಾ ಸಾಗರ ಅಧ್ಯಯನ ಕ್ಷೇತ್ರದಲ್ಲಿ ಬಂದಿರುವುದು ಬಹಳ ಅಪರೂಪ.
ಸಾಗರ ಮಾಧ್ಯಮದ ಹಜ್ಜ್ ಯಾತ್ರೆಗಳು ಇಪ್ಪತ್ತನೆಯ ಶತಮಾನದ ಕೊನೆಯವರೆಗೆ ಮುಂದುವರೆದಿತ್ತು. ಮುಂಬಯಿ ಬಂದರಿನ ಮುಖಾಂತರ ಚಾಲ್ತಿಯಲ್ಲಿದ್ದ ಜಲಮಾರ್ಗದ ಹಜ್ಜ್ ಯಾತ್ರೆಗಳನ್ನು ಭಾರತ ಸರಕಾರ ಸ್ಥಗಿತಗೊಳಿಸಿದ್ದು 1995 ರಲ್ಲಾಗಿತ್ತು. ಹಜ್ಜ್ ಸಂಬಂಧಿತ ಸಮುದ್ರಯಾನದ ಹಲವಾರು ಬರಹಗಳು ರೂಪು ಪಡೆದಿದ್ದು ಆವರೆಗಿನ ಯಾತ್ರೆಗಳಿಂದ. ದಕ್ಷಿಣೇಷ್ಯಾ ಸಂಬಂಧಿತ ಸಮುದ್ರಯಾನದ ಬಹುತೇಕ ಕಥೆಗಳು ಹಾಯಿ ದೋಣಿಯ ಸಹಾಯದಿಂದ ‘ಹಿಜಾಝಿ’ಗೆ ಹೊರಟ ಯಾತ್ರೆಗಳದ್ದೇ ಆಗಿದ್ದವು. ‘ರಾಷ್ಟ್ರ’ ಎಂಬ ಪರಿಕಲ್ಪನೆಗೂ ಮೀರಿ ಇತಿಹಾಸವನ್ನು ಒಂದು ದೀರ್ಘಾವಧಿಯ ( Longue dureé) ಹಿನ್ನೆಲೆಯಲ್ಲಿ ಅರ್ಥೈಸಲು ಮಾಡಲು ಸಹಾಯ ಮಾಡುವ ಅಧ್ಯಯನವಾಗಿದೆ ‘ಸಮುದ್ರ’ ಎಂಬ ‘ಸೆಬಾಸ್ಟಿಯನ್ ಪ್ರಾಂಗೆ’ಯ ಸಂಶೋಧನೆ. ಸಮುದ್ರಯಾನಗಳ ಕುರಿತಾಗಿ ಅಭ್ಯಸಿಸಲು ರಾಷ್ಟ್ರಕ್ಕಿಂತಲೂ ಧರ್ಮ ಎಂಬ ಪರಿಕಲ್ಪನೆಯೇ ಹೆಚ್ಚು ಸೂಕ್ತವಾದುದು ಎಂದು ಸುಗತ್ ಬೋಸ್ ಅಭಿಪ್ರಾಯಪಡುತ್ತಾರೆ. ಇಂತಹ ವಾದಗಳನ್ನು ಮುಂದಿಟ್ಟು ಹಜ್ಜ್ ಯಾವ ರೀತಿ ಸಮುದ್ರಯಾನ ಸಂಶೋಧನೆಗೆ ನಿಮಿತ್ತವಾಯಿತು ಎಂಬುದರ ಮೇಲೆ ಈ ಅಧ್ಯಯನ ಬೆಳಕು ಚೆಲ್ಲುತ್ತದೆ.
ಹಜ್ಜಾನುಭವಗಳು : ಜಾಗತಿಕ ಮುಸ್ಲಿಂ ಪವಿತ್ರಯಾತ್ರೆಗಳು ಮತ್ತು ರಾಜಕೀಯ ವಿದ್ಯಮಾನಗಳು.
ಭಾರತ ಉಪಖಂಡ ಸೇರಿದಂತೆ ಜಗತ್ತಿನಾದ್ಯಂತವಿರುವ ಮುಸಲ್ಮಾನರು ಅವರ ಯಾತ್ರಾ ವೇಳೆಯಲ್ಲಿ ಸಾಮಾನ್ಯವಾಗಿ ಉಂಟಾಗಬಹುದಾದ ತೊಂದರೆಗಳನ್ನು ತಡೆಯುವ ಸಲುವಾಗಿ ಆಯ್ಕೆ ಮಾಡಿದ ಯಾತ್ರಾಮಾಧ್ಯಮವಾಗಿತ್ತು ಸಮುದ್ರಯಾನ. ಅದರ ಹೊರತಾಗಿಯೂ ಕಡಲುಯಾನ ಕಂಪೆನಿಗಳಿಗೆ ನಿವಾರಿಸಲು ಸಾಧ್ಯವಿಲ್ಲದ ಇಂತಹ ಹಲವಾರು ತೊಂದರೆಗಳನ್ನು ಯಾತ್ರಾರ್ಥಿಗಳು ಅನಿವಾರ್ಯವಾಗಿ ಅನುಭವಿಸಬೇಕಿತ್ತು. ಇದು ಒಂದು ಹಂತದಲ್ಲಿ ಯಾತ್ರಿಕರು ಆಡಳಿತ ವ್ಯವಸ್ಥೆಯನ್ನು ಸಂಶಯಾಸ್ಪದವಾಗಿ ಕಾಣುವ ಹಂತಕ್ಕೂ ತಲುಪಿತ್ತು. ಅಂತಹ ಸಂದರ್ಭಗಳಲ್ಲಿ ಐಕ್ಯತೆ ಮತ್ತು ಸಾಮಾಜಿಕ – ಸಾಂಸ್ಕೃತಿಕ ಸಂಯೋಜನೆಯ ಸಾಧ್ಯತೆಗಳ ಬಾಗಿಲು ತೆರೆಯುವ ಒಂದು ಕೇಂದ್ರವಾಗಿ ‘ಸೀ ಸ್ಕೇಪ್’ (ಸಾಗರ ಕ್ಷೇತ್ರ)ಗಳು ಕಾರ್ಯಾಚರಿಸಿದವು. ಅಂತಹ ಕೇಂದ್ರಗಳು ಹಜ್ಜ್ ಯಾತ್ರಾ ಸಂಘಗಳಿಗೆ ವಿದೇಶಿ ಯಾತ್ರಿಕರೊಂದಿಗಿನ ವಿಚಾರ ವಿನಿಮಯಕ್ಕೆ ಮತ್ತು ಹೊಸ ಸಿದ್ಧಾಂತಗಳನ್ನು ಅಭಿವೃದ್ಧಿ ಪಡಿಸುವ ಪ್ರಾಯೋಗಿಕ ಮಾಧ್ಯಮದ ಉನ್ನತೀಕರಣಕ್ಕೆ ಅನುವು ಮಾಡಿಕೊಟ್ಟವು.
ಸಮುದ್ರಯಾನದ ಅನುಭವಗಳನ್ನು ಅಧ್ಯಯನ ಮಾಡುವಾಗ ಈ ವಿದ್ಯಮಾನಕ್ಕೆ ಸಂಬಂಧಿಸಿದ ರಾಜಕೀಯ ಮತ್ತು ಸಾಮಾಜಿಕ ನಿರೂಪಣೆಗಳನ್ನು ನಾವು ಒಟ್ಟಾಗಿ ಇಟ್ಟುಕೊಂಡು ಮನನ ಮಾಡಬೇಕಿದೆ. ಐತಿಹಾಸಿಕ ಉಲ್ಲೇಖಗಳ ಮೇಲೆ ನೋಟ ಹರಿಸಿದರೆ ಸಮುದ್ರ ಒಂದು ರಾಜಕೀಯ ಕೊಡುಕೊಳ್ಳುವಿಕೆಯ ಕೇಂದ್ರವಾಗಿಯೂ, ಅದೇ ಸಂದರ್ಭ ಒಬ್ಬ ವಿಶ್ವಾಸಿಯು ಆತ್ಮೀಯ ಗಮ್ಯದೆಡೆಗೆ ತಲುಪಲಿರುವ ಮಾಧ್ಯಮವಾಗಿಯೂ ಉಲ್ಲೇಖಗೊಂಡಿದೆ.
ಮಕ್ಕಾದೊಂದಿಗಿನ ಅಧ್ಯಾತ್ಮಿಕ ಸಂಬಂಧದ ಜೊತೆಗೆ, ಅದಕ್ಕೆ ಸಂಬಂಧಪಟ್ಟ ವಿವಿಧ ಸನ್ನಿವೇಶಗಳ ರಾಜಕೀಯ ಉದ್ದೇಶಗಳನ್ನೂ ಪರಿಗಣಿಸಬೇಕಾಗುತ್ತದೆ. ಪ್ರಕ್ಷುಬ್ಧ ರಾಜಕೀಯ ವಾತಾವರಣದಲ್ಲಿ ವಸಾಹತುಶಾಹಿ ಅಧಿಕಾರಿಗಳು ಹಜ್ಜ್ ಯಾತ್ರಿಕರೆಡೆಯಲ್ಲಿ ಪ್ಯಾನ್- ಇಸ್ಲಾಮಿಕ್ ಮತ್ತು ರಾಷ್ಟ್ರೀಯತಾ ವಿರೋಧಿ ಭಾವನೆಗಳ ಇರುವಿಕೆಯ ಅಂಶವನ್ನು ಪತ್ತೆಹಚ್ಚಲು ಮತ್ತು ಅವುಗಳ ಹರಡುವಿಕೆಯನ್ನು ತಡೆಯಲು ಶ್ರಮಿಸುತ್ತಿದ್ದರು. ಮುಸ್ಲಿಂ ಸಾಗರೋತ್ತರ ಯಾತ್ರೆಗಳು ವಸಾಹತುಶಾಹಿ ಮತ್ತು ಸಾಮ್ರಾಜ್ಯಶಾಹಿ ವಿರೋಧಿ ಚಟುವಟಿಕೆಗಳ ಸ್ವೀಕೃತಿಯನ್ನು ಹೆಚ್ಚಿಸಿತು. ವಿಶೇಷವಾಗಿ ಹಿಜಾಝ್ ಪ್ರದೇಶಗಳಲ್ಲಿ ಬ್ರಿಟಿಷ್ ಸಾಮ್ರಾಜ್ಯದ ವಿರುದ್ಧ ಕಾರ್ಯನಿರ್ವಹಿಸುತ್ತಿದ್ದ ಒಟ್ಟೋಮನ್ನರ ಪ್ರಯತ್ನವೂ ಗಾಢ ಪರಿಣಾಮ ಬೀರಿತು. ಹಜ್ಜ್ ನಲ್ಲಿನ ಮಕ್ಕಾದ ವಾರ್ಷಿಕ ಮಹಾ ಸಂಗಮ ಜಾಗತಿಕ ಸಂಘಟನೆಗಳನ್ನು ಬೆಳೆಸಲು ಉತ್ತಮ ಅವಕಾಶಗಳಾಯಿತು. ವಸಾಹತುಶಾಹಿ ಶಕ್ತಿಯ ವಿರುದ್ಧದ ಈ ಭಾವನಾತ್ಮಕ ಹೋರಾಟವು ನೌಕಾಯಾನದ ಮೂಲಕ ಪ್ರಾರಂಭವಾಗುತ್ತದೆ. ಮಲಬಾರ್ ಮೂಲದ ಒಬ್ಬ ಹಜ್ಜ್ ಯಾತ್ರಿಕ ತನ್ನ ಪ್ರವಾಸ ಕಥನದಲ್ಲಿ ” ಹಜ್ಜ್ ಯಾತ್ರಿಕರನ್ನು ಸಾಗಿಸುವ ಹಡಗು ಮುಸ್ಲಿಂ ಜಗತ್ತಿನ ಲಘು ಚಿತ್ರಣವಾಗಿ ತೋಚುತ್ತದೆ ” ಎಂದು ಬರೆಯುತ್ತಾನೆ.
ಇಸ್ಲಾಂ ಧರ್ಮದ ಐದನೇ ಕರ್ಮ ಸ್ತಂಭವಾದ ಹಜ್ಜ್ ನೆರವೇರಿಸಲು ಒಟ್ಟುಗೂಡಿದ ವಿಶ್ವಾಸಿಗಳಿಗೆ ತಮ್ಮ ಧಾರ್ಮಿಕ ಕರ್ತವ್ಯದಲ್ಲಿ ಜೊತೆಯಾದ ವೈವಿಧ್ಯಮಯ ಮೂಲದ ಜಾಗತಿಕ ಜನರ ಭೇಟಿ ಹೊಸ ಅನುಭವಗಳು ಮತ್ತು ವಿಭಿನ್ನ ಆಲೋಚನೆಗಳಿಗೆ ದಾರಿ ಮಾಡಿ ಕೊಟ್ಟಿತು ” ಎಂದು ಕ್ರಿಸ್ ಅಲೆಕ್ಸಾಂಡರ್ ಅಭಿಪ್ರಾಯ ಪಡುತ್ತಾರೆ. ಯೂರೋಪಿನ ವಸಾಹತು ಆಳ್ವಿಕೆಯಿಂದ ಮುಕ್ತಿ ಹೊಂದಿದವರು ಮತ್ತು ವಸಾಹತು ಶಕ್ತಿಗಳ ವಿರುದ್ಧ ರಾಷ್ಟ್ರೀಯ ಹೋರಾಟಗಳಲ್ಲಿ ಸಕ್ರಿಯರಾಗಿರುವವರು ಸೇರಿದಂತೆ ವಿವಿಧ ಭೌಗೋಳಿಕ, ಜನಾಂಗೀಯ ಮತ್ತು ಆರ್ಥಿಕ ಹಿನ್ನೆಲೆಯಿರುವ ಸಾವಿರಾರು ಯಾತ್ರಿಕರು ಮಧ್ಯ ಏಷ್ಯಾದಲ್ಲಿ ಒಂದುಗೂಡುತ್ತಿದ್ದರು. ಅಲ್ಲಿನ ಈ ಮುಖಾಮುಖಿಗಳು ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯದೆಡೆಗೆ ಮುನ್ನುಗ್ಗುವ ಆವೇಶವನ್ನು ತೀವ್ರಗೊಳಿಸುತ್ತಿದ್ದವು. ಅಲ್ಲದೆ, ಹಡಗುಗಳಲ್ಲಿರುತ್ತಿದ್ದ ಎಲ್ಲಾ ಪ್ರಯಾಣಿಕರು ಒಂದೇ ನಂಬಿಕೆಯ ಮೇಲೆ ಭದ್ರವಾಗಿದ್ದ ಕಾರಣ ಒಂದೇ ಕುಟುಂಬ ಮತ್ತು ಒಂದೇ ಮನೆ ಎಂಬಂತಹ ವಾತಾವರಣ ನಿರ್ಮಾಣ ಆಗುತ್ತಿತ್ತು. ಹಜ್ಜ್ ಪಯಣ ಸಂಬಂಧಿತ ಕಥೆಗಳಲ್ಲಿ ಹಡಗುಗಳು ಒಗ್ಗಟ್ಟು ಮತ್ತು ಏಕತೆಯ ಪ್ರತೀಕವಾಗುವುದರೊಂದಿಗೆ, ಭಾರತೀಯ ಬಂದರುಗಳು ರಾಜಕೀಯ, ಸಾಮಾಜಿಕ ಮತ್ತು ಧಾರ್ಮಿಕ ಸಂಬಂಧಗಳ ಹೆಬ್ಬಾಗಿಲಾಗಿಯೂ ಬಿಂಬಿಸಲ್ಪಟ್ಟಿತು. ಹಿಂದೂ ಮಹಾ ಸಾಗರದ ಪಯಣಗಳ ಕುರಿತಾಗಿ ವಿಶ್ಲೇಷಿಸುವಾಗ ಸುಗತ ಬೋಸ್ ಮುಂದಿಡುವ ಒಳನೋಟಗಳಿಗೆ ತುಂಬಾ ಮಹತ್ವ ಇದೆ. ” ಹಜ್ಜ್ ಯಾತ್ರೆ ಕೈಗೊಂಡ ವಸಾಹತುಶಾಹಿಯ ಮುಸ್ಲಿಂ ಪ್ರಜೆಗಳನ್ನು ಸಂಪೂರ್ಣವಾಗಿ ರಾಷ್ಟ್ರದ ಚೌಕಟ್ಟಿನ ಅಡಿಯಲ್ಲಿ ನಿಲ್ಲಿಸಿ ವಿಶ್ಲೇಷಿಸಲಾಗದು. ರಾಷ್ಟ್ರದ ಗಡಿರೇಖೆಗಳನ್ನೂ ಮೀರುವ ವಸಾಹತುಶಾಹಿ ವಿರೋಧಿ ಪ್ರವಾಹ ಎಂಬ ನೆಲೆಯಲ್ಲಿ ಹಜ್ಜ್ ಯಾತ್ರೆ ಹಿಂದೂ ಮಹಾ ಸಾಗರದ ಬಹಳ ನಿರ್ಣಾಯಕವಾದ ಚಟುವಟಿಕೆಯಾಗಿ ದಾಖಲಾಗಿದೆ.” ಇನ್ನೂ ನಿಖರವಾಗಿ ಹೇಳುವುದಾದರೆ ಬಂದರು ನಗರಗಳಿಂದ ಹಿಡಿದು ಹಾಯಿ ದೋಣಿಯವರೆಗಿನ ಇಂತಹಾ ಸ್ಥಳಗಳು ಸಾಮುದಾಯಿಕ ಒಗ್ಗಟ್ಟಿನ ಕೇಂದ್ರಗಳಾಗಿ ಚಟುವಟಿಕಾ ನಿರತವಾಗಿತ್ತು.
ವಸಾಹತು ಕಾಲದ ಈ ಎಲ್ಲಾ ಚಟುವಟಿಕೆಗಳ ಒಟ್ಟು ಧ್ವನಿ ಹಜ್ಜ್ ಕೇವಲ ಧಾರ್ಮಿಕ ಆಚರಣೆಯಾಗಿ ಮಾತ್ರವಲ್ಲದೆ, ವಿಭಿನ್ನ ರಾಜಕೀಯ ಮತ್ತು ಸಾಮಾಜಿಕ ಪರಿಕಲ್ಪನೆಗಳ ಬೆಳವಣಿಗೆಯಲ್ಲಿ ತನ್ನದೇ ಆದ ಪಾತ್ರ ವಹಿಸುತ್ತಾ ಬಂದಿದೆ ಎನ್ನುವುದು. ಹಜ್ಜ್ ವೇಳೆಯಲ್ಲಿನ ವಿಶಿಷ್ಟ ರಾಜಕೀಯ ಮತ್ತು ಸಾಮಾಜಿಕ ಹಿನ್ನೆಲೆಯಿರುವ ಜನರೊಂದಿಗಿನ ಭೇಟಿ ಜಾಗತಿಕ ವಿದ್ಯಮಾನಗಳ ಕೊಡುಕೊಳ್ಳುವಿಕೆಗಳು ಅಕ್ಷರ ರೂಪದಲ್ಲಿ ಯಾತ್ರಿಕನ ಅನುಭವಕಥನಗಳಲ್ಲಿ ಸ್ಥಳ ಹಿಡಿಯಲು ಕಾರಣವಾಯಿತು. ಅಂತಹಾ ಹಜ್ಜ್ ಯಾತ್ರಾ ವಿವರಣೆಗಳ ಗಾಢ ಓದು, ಹಜ್ಜ್ ಸಂಬಂಧಿತ ರಾಜಕೀಯ ಮತ್ತು ಸಾಮಾಜಿಕ ವಿನಿಮಯದ ಒಳನೋಟಗಳ ಅಧ್ಯಯನಗಳಿಗೆ ಪೂರಕ ಪೀಠಿಕೆಯಾಗಿ ಸಹಾಯ ಮಾಡುತ್ತದೆ.
ಮೂಲ: ಮಹಮ್ಮದ್ ರಿಯಾಸ್
ಅನು: ಅಬ್ದುಸ್ಸಲಾಂ ಮಿತ್ತರಾಜೆ
Cover Image : Between 1900 – 1920. To Sinai via the Red Sea, Tor, and Wady Hebran. Mecca pilgrims on deck a ship. Photo: US Library of Congress / G. Eric and Edith Matson Photograph Collection.
Muhammed Riyaz has completed his PhD thesis at the Department of English, Indian Institute of Technology, Delhi. His thesis is titled “Sailing to the Hijaz: Narrativization of Hajj in the Literary Indian Ocean.”