ಇಥಿಯೋಪಿಯನ್ ಪರ್ವತಶ್ರೇಣಿಗಳೇ ಕಾಫಿಯ ತಾಯ್ನಾಡು. ಕ್ರಿ.ಶ 525 ರಲ್ಲಿ ಯೆಮೆನ್ ಅನ್ನು ವಶಪಡಿಸಿಕೊಂಡ ಸೆಮಿಟಿಕ್- ಭಾಷಿಕರಾದ ಆಕ್ಸಿಮೈಟ್‌ಗಳೇ ಕಾಫಿಯನ್ನು ಅರೇಬಿಯನ್ ಪರ್ಯಾಯ ದ್ವೀಪಕ್ಕೆ ಪರಿಚಯಿಸಿದವರು. ಇಥಿಯೋಪಿಯಾಗೆ ಸಮಾನವಾದ ಭೌಗೋಳಿಕತೆ ಮತ್ತು ಹವಾಮಾನವು ಈ ಪ್ರದೇಶದಲ್ಲಿ ಕಾಫಿ ಉತ್ಪಾದನೆ ಮತ್ತು ಬಳಕೆಯನ್ನು ಸ್ಥಳೀಯ ಸಂಸ್ಕೃತಿಯ ಭಾಗವನ್ನಾಗಿ ಮಾಡಿತು. ಆಕ್ಸಿಮೈಟ್‌ಗಳ ಆಳ್ವಿಕೆಯು ಅತ್ಯಲ್ಪವಾಗಿದ್ದರೂ, ಕಾಫಿ ಸಾಂಸ್ಕೃತಿಕ ಸಂಕೇತವಾಗಿ ಉಳಿದಿದ್ದು ಅದು ಸಮಾಜದ ಮೇಲೆ ಬಹುದೊಡ್ಡ ಪ್ರಭಾವವನ್ನು ಬೀರಿತು. ನಂತರದ ಸಸ್ಸಾನೀಯನ್ ಮತ್ತು ಮುಸ್ಲಿಂ ಕಾಲದಲ್ಲೂ ಈ ಸಂಸ್ಕೃತಿಯು ಉಳಿದುಕೊಂಡಿತು. ಆಧುನಿಕ ಕಾಲದಲ್ಲಿ ಯೆಮೆನ್ ಕಾಫಿಯ ತವರುಮನೆಯಾಗಿ ಮುಂದುವರೆದಿದೆ.
ಕಾಫಿಯ ಮೂಲದ ಬಗ್ಗೆ ಅನೇಕ ಐತಿಹ್ಯಗಳಿವೆ. ಇಥಿಯೋಪಿಯಾದ ಕುರುಬನಾದ ಕಲ್ದಿಯ ಕಥೆಯು ಅವುಗಳಲ್ಲಿ ಮುಖ್ಯವಾಗಿದೆ. ಕಥಾವಸ್ತುವು ಸುಮಾರು ಕ್ರಿ.ಶ 800 ರ ಸುತ್ತ ಸುತ್ತುತ್ತದೆ. ಆಕ್ಸಿಮೈಟ್ಸ್ ಯೆಮೆನ್ ಅನ್ನು ವಶಪಡಿಸಿಕೊಳ್ಳುವುದಕ್ಕಿಂತ 300 ವರ್ಷಗಳಿಗೂ ಮೊದಲು; ತನ್ನ ಕುರಿಗಳಲ್ಲಿ ಕಂಡುಬರುವ ಕಾಫಿ ಬಣ್ಣವು ಒಂದು ನಿರ್ದಿಷ್ಟ ಬಗೆಯ ಬೀಜಗಳಿಂದ ಆಗಿರುವಂತದ್ದು ಎಂದು ಕಂಡುಹಿಡಿದ ಆತ ಸ್ವತಃ ಅದರ ರುಚಿಯನ್ನು ಅನುಭವಿಸಿ ಅದನ್ನು ತನ್ನ ಊರವರಿಗೆ ಪರಿಚಯಿಸಿದನು. ಮತ್ತೊಂದು ದಂತಕಥೆಯ ಪ್ರಕಾರ, ರಾಜನ ಮಗಳನ್ನು ನಿಂದಿಸಿದ್ದಕ್ಕಾಗಿ ಯೆಮೆನ್‌ನಿಂದ ಗಡಿಪಾರು ಮಾಡಲ್ಪಟ್ಟ ಪಾದ್ರಿಯೊಬ್ಬನು ಕಾಫಿಯನ್ನು ಮೊದಲ ಬಾರಿಗೆ ಬಳಸಿದನು. ಮರುಭೂಮಿಯಲ್ಲಿ ಸುದೀರ್ಘ ಕಾಲದ ಅಲೆದಾಟದ ನಂತರ ಮನೆಗೆ ಹಿಂದಿರುಗಿದ ಅವನು ಕಾಫಿಯನ್ನು ಒಂದು ಪವಾಡವೆಂಬಂತೆ ಪ್ರಸ್ತುತಪಡಿಸುತ್ತಾನೆ. ಮುಂದೆ ಆತನು ಮೆಕ್ಕಾಗಿರುವ ತನ್ನ ತೀರ್ಥಯಾತ್ರೆಯಲ್ಲಿ ಮರಣ ಹೊಂದಿದನು ಎಂದು ಹೇಳಲಾಗುತ್ತದೆ. ಯೆಮೆನ್ ಆಧಾರಿತ ಮತ್ತೊಂದು ಪುರಾಣವಿದೆ. ತನ್ನ ಶತ್ರುಗಳಿಂದ ಗಡೀಪಾರು ಮಾಡಲ್ಪಟ್ಟ ದಾರ್ವಿಶ್ ಹಡ್ಜಿ ಉಮರ್ ಎಂಬವರು, ಮರುಭೂಮಿಯಲ್ಲಿ ತನ್ನ ಪ್ರಾಣವನ್ನು ಉಳಿಸಿಕೊಳ್ಳಲು ಪರಿಚಯವಿಲ್ಲದ ಸಸ್ಯವೊಂದರ ಕಾಯಿಯನ್ನು ತಿನ್ನುತ್ತಿದ್ದರು. ನಂತರದ ದಿನಗಳಲ್ಲಿ, ಆರೋಗ್ಯಕರ ಪಾನೀಯವನ್ನು ಅದರಲ್ಲಿ ನೀರನ್ನು ಸೇರಿಸುವ ಮೂಲಕ ತಯಾರಿಸಬಹುದು ಎಂದು ಕಂಡುಹಿಡಿದರು. ಹಿಂದಿರುಗಿದ ನಂತರ ಅವರು ಹೊಸ ಪಾನೀಯವನ್ನು ತಮ್ಮ ಅನುಯಾಯಿಗಳಿಗೆ ಪರಿಚಯಿಸಿದರು.
ಕಾಫಿಗೆ ಧಾರ್ಮಿಕವಾದ ಚರಿತ್ರೆ ಹಿನ್ನೆಲೆಯೂ ಇದೆ. ಜಿಬ್ರೀಲ್ (ಅ) ದೈವಿಕ ಸಂದೇಶದೊಂದಿಗೆ ಪೈಗಂಬರ್ (ಸ್ವಲ್ಲಲ್ಲಾಹು ಅಲೈಹಿವಸಲ್ಲಮ್) ರಿಗೆ ಕಾಫಿಯನ್ನು ನೀಡಿದರು ಎಂದು ನಂಬಲಾಗಿದೆ. ಮತ್ತೊಂದು ವಾದದ ಪ್ರಕಾರ, ವಿಶೇಷ ಸಂದರ್ಭಗಳಲ್ಲಿ ಪೈಗಂಬರರಿಗೆ (ಸ್ವಲ್ಲಲ್ಲಾಹು ಅಲೈಹಿವಸಲ್ಲಮ್) ರ ಆರೋಗ್ಯ ರಕ್ಷಣೆಗಾಗಿ ನೀಡಲಾಯಿತು. ಪ್ರವಾದಿ ಈಸಾ (ಅ) ಅನ್ನು ಕುರಿತು ಉಲ್ಲೇಖಿಸಲಾಗುವ ಹೊಸ ಒಡಂಬಡಿಕೆಯಲ್ಲಿ ಅಥವಾ ಹಳೆಯ ಒಡಂಬಡಿಕೆಯಲ್ಲಿ ಕಾಫಿಯ ಪರಾಮರ್ಶೆ ಇಲ್ಲ. ಹದಿನೇಳನೇ ಶತಮಾನದ ಪ್ರಸಿದ್ಧ ಸಾಮಾಜಿಕ ವಿಮರ್ಶಕ ಮತ್ತು ಬುದ್ಧಿಜೀವಿ ಖತೀಬ್ ಅಸ್ಸಾಲ್ಬಿ ಕಾಫಿ ಬಳಕೆಯ ಇತಿಹಾಸವನ್ನು ವಿವರಿಸುತ್ತಾರೆ. ಕ್ರಿ.ಶ 1640-50 ರ ನಡುವೆ ಬರೆದ ತನ್ನ ಪುಸ್ತಕ ميزان الحق في اختيار(ಮೀಝಾನುಲ್ ಹಕ್) ನಲ್ಲಿ ಅವರು ಹೀಗೆ ಬರೆಯುತ್ತಾರೆ: ‘ಯೆಮೆನ್ ನ ಪರ್ವತದ ತಪ್ಪಲುಗಳಲ್ಲಿ ತಮ್ಮ ಶಿಷ್ಯರೊಂದಿಗೆ ವಾಸಿಸುತ್ತಿದ್ದ ಸೂಫೀ ಸಂತರು ಕಾಫಿಯ ಬೀಜಗಳನ್ನು ಹುಡಿಮಾಡಿ ಉಪಯೋಗಿಸುತ್ತಿದ್ದರು. ಅವರು ಅದನ್ನು ‘ಖಲ್ಬ್ ವಬುಂ’ ಎಂದು ಕರೆದರು. ಕೆಲವರು ಇದನ್ನು ಪಾನೀಯವಾಗಿಯೂ ಬಳಸುತ್ತಿದ್ದರು. ಶೀತಲವಾಗಿರುವ ಒಣ ಆಹಾರವಿದು. ಪರಿತ್ಯಕ್ತ ಜೀವನಕ್ಕೆ ಮತ್ತು ಲೈಂಗಿಕ ನಿಯಂತ್ರಣಕ್ಕೆ ಕಾಫಿ ಅವಶ್ಯಕ. ಆಧ್ಯಾತ್ಮಿಕ ಅನುಭಾವಿಗಳ ಮೂಲಕ ಸಾಮಾನ್ಯ ಜನರಿಗೂ ಹರಡಿತು. ಈ ಸಂಸ್ಕೃತಿಯು 950/1540 ರಲ್ಲಿ ಏಷ್ಯಾ ಮೈನರ್ ತಲುಪಿದಾಗ, ಅಲ್ಲಿನ ಜನರು ಇದನ್ನು ಒಂದು ಕೆಟ್ಟ ಸಂಸ್ಕೃತಿಯಂತೆ ಕಂಡು ವಿರೋಧಿಸಿದರು”.
ಹತ್ತೊಂಬತ್ತನೇ ಶತಮಾನದ ಭಾರತದ ಹಲವಾರು ಕಾಫಿ ತೋಟಗಳ ಮಾಲೀಕರಾಗಿದ್ದ ಎಡ್ವಿನ್ ಅರ್ನಾಲ್ಡ್ ಲೂಕರ್ ಅವರ ಪ್ರಕಾರ, ಕಾಫಿ ಇಥಿಯೋಪಿಯಾದಲ್ಲಿ ಹುಟ್ಟಿಕೊಂಡಿತು. ಕ್ರಿ.ಶ 875 ರ ಹೊತ್ತಿಗೆ ಇದು ಪರ್ಷಿಯಾದ ಕೆಲವು ಭಾಗಗಳನ್ನು ತಲುಪಿ ಹದಿನಾಲ್ಕನೆಯ ಶತಮಾನದಲ್ಲಿ ಅರೇಬಿಯಾಕ್ಕೆ ಹರಡಿತು. ಪುರಾಣಗಳು ಮತ್ತು ಮೌಖಿಕ ಸಂಪ್ರದಾಯಗಳು ಇತಿಹಾಸದ ವಸ್ತುನಿಷ್ಠತೆಯೊಂದಿಗೆ ಸರಿಸಮನಾಗಿ ನಿಲ್ಲದಿದ್ದರೂ, ಆದರೆ ಅವೆಲ್ಲವೂ ವಸ್ತುಸ್ಥಿತಿಯ ಸೃಜನಶೀಲ ಸಾಧ್ಯತೆಗಳಾಗಿವೆ. ಪುರಾತತ್ತ್ವಜ್ಞರು ಕಾಫಿಯ ಪ್ರಾಚೀನತೆಗೆ ಪುರಾವೆಗಳನ್ನು ಪತ್ತೆ ಮಾಡಿದ್ದಾರೆ. ಖಾದ್ಯ ಸಸ್ಯದ ಆವಿಷ್ಕಾರದಿಂದ ಹಿಡಿದು ಮಾನವ ಸಂಸ್ಕೃತಿಯಲ್ಲಿ ಅದರ ಸಂಯೋಜನೆಯವರೆಗಿನ ವಿಷಯಗಳನ್ನು ದಂತಕಥೆಗಳ ಮೂಲಕ ಅನಾವರಣಗೊಳಿಸಲಾಗುತ್ತಿದೆ. ತಮ್ಮ ಜಾನುವಾರುಗಳಲ್ಲಿನ ಅಸಹಜತೆಗಳ ಕಾರಣವನ್ನು ಹುಡುಕಿ ಹೊರಟವರು ಮೊದಲು ಗಮನಿಸಿದ ವಿಷಯವೆಂದರೆ ಕಾಫಿ. ಪ್ರಾಣಿಗಳು ತಿನ್ನುವ ಕಾಫಿ ಗಿಡದ ಕಾಯಿಯು ಯಾವುದೇ ಹಾನಿಕಾರಕ ಪರಿಣಾಮಗಳನ್ನು ಹೊಂದಿಲ್ಲ ಎಂದರಿತ ಅವರು ಅದನ್ನು ಸ್ವತಃ ರುಚಿಸಿ ನೋಡಿದರು. ಕ್ರಮೇಣ ಹೆಚ್ಚಿನ ಬಳಕೆಯ ಉದ್ದೇಶದಿಂದ ಸಂಸ್ಕರಿಸದ ಕಾಫೀ ಬೀಜವನ್ನು ಬೇಯಿಸಿ ನೀರು ಸೇರಿಸಿ ಪಾನೀಯವಾಗಿಯೂ ಉಪಯೋಗಿಸಲಾಯಿತು.
ಕಲಾದಿಯ ಕಥೆಯ ಪ್ರಕಾರ, ಕಾಫಿಯು ಇಥಿಯೋಪಿಯಾ ಮೂಲದ್ದೆಂದೂ 6 ನೇ ಶತಮಾನದ ಆಕ್ರಮಣಕಾರಿ ಪಡೆಗಳು ಯೆಮೆನ್ ಜನರಿಗೆ ಪರಿಚಯಿಸಿದ್ದೂ ಆಗಿದೆ. ಆದರೆ ಇಮಾಮ್ ಗಝಾಲಿ(ರ) ರ ಪ್ರಕಾರ, ಮಧ್ಯಂತರ ಅವಧಿಯಲ್ಲಿ ಯೆಮೆನ್ ನ ಜನರಿಗೆ ಅಂಟಿಕೊಂಡ ಅಭ್ಯಾಸವಾಗಿತ್ತು. ಸಾಕ್ಷ್ಯಗಳ ಅಸಮರ್ಪಕತೆಯು ಇತಿಹಾಸವನ್ನು ಹೆಚ್ಚು ವೈವಿಧ್ಯಮಯವಾಗಿಸುತ್ತದೆ. ಇಥಿಯೋಪಿಯನ್ ವಸಾಹತುಶಾಹಿ ಇತಿಹಾಸವು ಯೆಮೆನ್‌ಗಳಿಗೆ ಕಿಂಚಿತ್ತೂ ಸ್ವೀಕಾರಾರ್ಹವಲ್ಲ. ಆದ್ದರಿಂದಲೇ ಅವರ ಮೌಖಿಕ ಸಂಪ್ರದಾಯಗಳು ದೇಸಿ ಸೊಗಡಿನ ಕಾಫಿಯನ್ನು ಪರಿಚಯಿಸುತ್ತವೆ. ಹದಿನಾರನೇ ಶತಮಾನದವರೆಗೂ ಇದ್ದ ಕಾಫಿ ರಫ್ತಿನ ಏಕಸ್ವಾಮ್ಯವನ್ನು ಮೌಲ್ಯೀಕರಿಸುವುದಕ್ಕೂ ಇದು ಸೂಕ್ತವಾಗಿದೆ. ಸಮಾಜದಲ್ಲಿನ ಆಹಾರದ ಇತಿಹಾಸವನ್ನು ಗುರುತಿಸಲು ಆತ್ಮಚರಿತ್ರೆಯ ನಿರೂಪಣೆಗಳು ಬಹಳ ಸಹಾಯಕವಾಗಿವೆ. ಆಹಾರಪದ್ಧತಿಯ ಮೂಲ ಮತ್ತು ಅಸ್ತಿತ್ವವು ತಲೆಮಾರುಗಳ ಮೂಲಕ ಸ್ವಾರಸ್ಯಕರ ಕಥೆಗಳಾಗಿ ರವಾನೆಯಾಗಿರುತ್ತದೆ. ಮೇಲಿನ ಕಥೆಗಳಲ್ಲಿ ಕುರುಬ ಮತ್ತು ಸೂಫಿಗಳು ಕಾಫಿಯ ಸಾಮಾಜಿಕ ಮಟ್ಟವನ್ನು ಪ್ರತಿನಿಧಿಸುತ್ತಾರೆ. ಮೌಖಿಕ ಸಂಪ್ರದಾಯ ಮತ್ತು ಪುರಾಣಗಳಲ್ಲಿ ಎಲ್ಲವೂ ಅದರ ಸಾಂಸ್ಕೃತಿಕ ಅಸ್ತಿತ್ವವೇ ಮುಖ್ಯವಾಗುತ್ತದೆ. ಆ ನಿಟ್ಟಿನಲ್ಲಿ, ಕಾಫಿಯ ಇತಿಹಾಸವು ಪ್ರಸ್ತುತವಾಗಿದೆ.
ಪರ್ಷಿಯನ್ ವೈದ್ಯ ಅಬೂಬಕರ್ ಮುಹಮ್ಮದ್ ಬಿನ್ ಝಕಾರಿಯಾ ರಾಝಿ ಅವರು ತಮ್ಮ ಆರೋಗ್ಯದ ಕುರಿತಾದ ಸಂಶೋಧನಾ ಸಂಗ್ರಹದಲ್ಲಿ (ಕಿತಾಬ್ ಅಲ್ ಹಾವೀ ಫೀ ತ್ವಿಬ್ಬ್ ) ಕಾಫಿಯನ್ನು ಉಲ್ಲೇಖಿಸಿದ್ದಾರೆ. 22 ಸಂಪುಟಗಳಲ್ಲಿ, ಪುಸ್ತಕವು ಹಿಪೊಕ್ರೆಟಿಸ್ ಮತ್ತು ಇತರ ಗ್ರೀಕ್ ವೈದ್ಯರ ಚಿಕಿತ್ಸಾ ವಿಧಾನ ಮತ್ತು ರಾಝೀ ಸ್ವಯಂ ಅಭಿವೃದ್ಧಿಗೊಳಿಸಿದ ಚಿಕಿತ್ಸೆಗಳನ್ನೂ ವಿವರಿಸುತ್ತದೆ. ಕಾಫಿ ಗ್ರೀಕ್ ಔಷಧದ ಭಾಗವಲ್ಲದಿದ್ದೂ ಕೂಡ, ಅದರ ನಾಲ್ಕು ಚಿಕಿತ್ಸಾ ಉಪಯೋಗಗಳನ್ನು ಅವರು ವಿವರಿಸುತ್ತಾರೆ. ಅವರು ಬರೆಯುತ್ತಾರೆ: “ಇದು ಉಷ್ಣ ದೇಹದವರಿಗೆ ಉತ್ತಮ ಆಹಾರವಾಗಿದೆ. ಆದಾಗ್ಯೂ, ಇದು ಲೈಂಗಿಕ ಬಯಕೆಯನ್ನು ಗಣನೀಯವಾಗಿ ಹತೋಟಿಯಲ್ಲಿಡುತ್ತದೆ.” ರಾಝಿ ಆರೋಗ್ಯವಂತ ಜನರ ಪಾನೀಯವೆಂದು ಕಾಫಿಯನ್ನು ಪರಿಚಯಿಸುತ್ತಾರೆ. ದೇಹವು ನಾಲ್ಕು ಅಂಶಗಳ ಸಂಯೋಜನೆಯೆಂದೂ ಅವುಗಳ ಅಸಮತೋಲನವೇ ಅನಾರೋಗ್ಯದ ಕಾರಣವೆಂಬ ಹಿಪೊಕ್ರೆಟಿಸ್ ನ ಚಿಕಿತ್ಸಾ ವಿಧಾನವನ್ನೇ ರಾಝೀ ಕೂಡ ಬಳಸುತ್ತಾರೆ. ಉತ್ತೇಜಕ ಪಾನೀಯವಾಗಿದ್ದೂ ಕೂಡ ಲೈಂಗಿಕತೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂಬ ಅಂಶವು ಕುತೂಹಲಕಾರಿಯಾಗಿದೆ.
ಇನ್ನೊಬ್ಬ ಪರ್ಷಿಯನ್ ವಿದ್ವಾಂಸ ಇಬ್ನ್ ಸೀನಾ ಅವರ ಬರಹಗಳಲ್ಲಿಯೂ ಕಾಫಿಯನ್ನು ಉಲ್ಲೇಖಗಳನ್ನು ಕಾಣಬಹುದು. ಅವರ ಕಿತಾಬ್ ಅಲ್-ಶಿಫಾ ಮತ್ತು ಅಲ್-ಖಾನುನ್ ಫಿ ತ್ವಿಬ್ ವೈದ್ಯಕೀಯಶಾಸ್ತ್ರದಲ್ಲಿ ಮೈಲಿಗಲ್ಲುಗಳು. ಕಿತಾಬು ಶಿಫಾ ಕಾಫಿಯನ್ನು ವಾಂತಿಗೆ ಪರಿಹಾರವಾಗಿ ಪರಿಚಯಿಸುತ್ತದೆ. ಮಧ್ಯಕಾಲೀನ ಇಟಾಲಿಯನ್ ಚಿಂತಕ ಪ್ರೊಸ್ಪ್ರೊ ಅಲ್ಪಿನಿ, ಇಬ್ನ್ ಸಿನಾ ಅವರನ್ನು ಉಲ್ಲೇಖಿಸಿದ್ದಾರೆ. ಮಧ್ಯಕಾಲೀನ ಟರ್ಕಿಶ್ ವಿದ್ವಾಂಸ ಕಾತೀಬು ಸೆಲ್ಬಿ ಬರೆಯುತ್ತಾರೆ: “ಖಿನ್ನತೆಯಿಂದ ಬಳಲುವವರಿಗೆ ಕಾಫಿ ಬಹಳ ಪರಿಣಾಮಕಾರಿ. ಆದರೆ ಅದರ ಅತಿಯಾದ ಬಳಕೆಯು ನಿದ್ರಾಹೀನತೆ ಮತ್ತು ತೀವ್ರ ಖಿನ್ನತೆಗೆ ಕಾರಣವಾಗಬಹುದು. ಇದನ್ನು ಸಿಹಿಯೊಂದಿಗೆ ಬಳಸುವುದು ಸೂಕ್ತ. ಸಣ್ಣಪುಟ್ಟ ಪರಿತ್ಯಾಗಿಗಳಿಗೆ ಡಿಕಾಕ್ಷನ್ ಕಾಫಿ ಅತ್ಯುತ್ತಮ ಪಾನೀಯವಾಗಿದೆ ”.
ಇಪ್ಪತ್ತನೇ ಶತಮಾನದ ಮೊದಲ ದಶಕಗಳಲ್ಲಿ ಕಾಫಿಯನ್ನು ಚಿಕಿತ್ಸೆಗಾಗಿ ಪರಿಗಣಿಸಲಾಗಿತ್ತು. ವಿಲಿಯಂ ಯುಕ್ ಅವರ ‘ಟೀ ಎಂಡ್ ಕಾಫಿ ಟ್ರೇಡ್ ಜರ್ನಲ್’ ಇಂತಹ ಸಮಸ್ಯೆಗಳನ್ನು ಬಗೆಹರಿಸಿತ್ತು. ಪ್ರಸ್ತುತ ಜರ್ನಲ್ ನಲ್ಲಿ ಅದನ್ನಿನವರಾದ ಶೇಖ್ ಕಮಾಲುದ್ದೀನ್ ರ ಚರಿತ್ರೆಯನ್ನು ಉಲ್ಲೇಖಿಸಲಾಗಿದೆ. ಅಲ್ ದಬಾನಿ ಎಂದೂ ಕರೆಯಲ್ಪಡುವ ಅದಾನ್ ನ ಮುಫ್ತಿಯಾಗಿದ್ದ ಮುಹಮ್ಮದ್ ಕಮಾಲುದ್ದೀನ್ ಅಬ್ಸೀನಿಯಾಗೆ ಹೋಗುತ್ತಿದ್ದ ಪ್ರಯಾಣ ಮಧ್ಯೆ ದಣಿದು ಬಸವಳಿದ ಒಬ್ಬ ವ್ಯಕ್ತಿಯು ಒಂದು ಕಪ್ ಕಾಫಿ ಕುಡಿದು ಆರೋಗ್ಯವನ್ನು ಮರಳಿ ಪಡೆಯುವುದನ್ನು ನೋಡುತ್ತಾರೆ. ಮನೆಗೆ ಮರಳಿದ ಮೇಲೆ ತನ್ನ ಅನಾರೋಗ್ಯದ ಸಂದರ್ಭದಲ್ಲಿ, ಅವರು ಇದೇ ಪಾನೀಯವನ್ನು ಕುಡಿದು ರೋಗಮುಕ್ತಿ ಪಡೆಯುತ್ತಾರೆ. ನಂತರ, ಕಮಾಲುದ್ದೀನ್ ಈ ಪಾನೀಯವನ್ನು ತನ್ನ ಶಿಷ್ಯರಿಗೆ ಪರಿಚಯಿಸಿದರು. ರಾತ್ರಿಯಿಡೀ ಆರಾಧನೆಯಲ್ಲಿ ಮುಳುಗಿರುವ ದರವೇಶಿಗಳಿಗೆ ಇದು ತುಂಬಾ ಉಪಯುಕ್ತವಾಗಿತ್ತು.
ಕಾಫಿ ಮತ್ತು ಸೂಫಿಗಳು
14 ಮತ್ತು 15 ನೇ ಶತಮಾನಗಳಲ್ಲಿ ಧಾರ್ಮಿಕ ಜಗತ್ತಿನಲ್ಲಿ ಕಾಫಿ ವ್ಯಾಪಕವಾಗಿ ಹರಡಿತು. ಇಸ್ಲಾಮಿಕ್ ಸೂಫಿ ಸಂಪ್ರದಾಯದ ಮೂಲಕ ಈ ಪ್ರಸರಣವು ನಡೆದಿತ್ತು. ಸೂಫಿಸಂ ಎಂಬುದು ದೇವರ ಸನ್ನಿಧಿ ಬಯಸಿ ಮಾಡುವ ನಿರಂತರ ಸಾಧನೆಯಾಗಿದೆ. ಇಸ್ಲಾಂನಲ್ಲಿ ಅಸಂಖ್ಯಾತ ಭಿನ್ನಾಭಿಪ್ರಾಯಗಳು ಮತ್ತು ವಿಭಜನೆಗಳನ್ನು ಮೀರಿದ ಕೆಲವು ಸಾಮಾನ್ಯ ನೆಲೆಯಲ್ಲಿ ಸೂಫಿಸಂ ಅಸ್ತಿತ್ವದಲ್ಲಿದೆ. ನಿರಂತರ ಆರಾಧನೆ/ಬಿನ್ನಹಗಳ ಮೂಲಕ ಸೂಫಿಗಳು ಯಾವಾಗಲೂ ದೈವಿಕ ಪ್ರೀತಿಯಲ್ಲಿರುತ್ತಾರೆ. ಸೂಫಿ ನೃತ್ಯವು ಅವರ ದೈವೀಪ್ರೇಮದ ಭಾಗವಾಗಿದೆ. 13 ನೇ ಶತಮಾನದಲ್ಲಿ ಜಲಾಲುದ್ದೀನ್ ರೂಮಿ ಇದನ್ನು ಪ್ರಾರಂಭಿಸಿದರು ಎಂದು ನಂಬಲಾಗಿದೆ. 14 ನೇ ಶತಮಾನದವರಾದ ಅಲಿ ಇಬ್ನ್ ಉಮರ್ ಅಲ್-ಶಾದುಲಿ (ರ) ಎಂದೂ ಅಭಿಪ್ರಾಯವಿದೆ. ಶಾದುಲಿ (ರ) ಕಾಫಿ ಮತ್ತು ಖತ್ತ್ (ಅರೇಬಿಯಾದಲ್ಲಿ ಕಾಫಿಗೆ ಸಮಾನವಾಗಿ ಬಳಸುವ ಒಂದು ರೀತಿಯ ಸೊಪ್ಪು) ನ್ನು ತನ್ನ ಸೂಫೀ ಸಭೆಗಳಲ್ಲಿ ಬಳಸಿದರು. ರಾತ್ರಿಯಿಡೀ ನಡೆಯುವ ಸೂಫೀ ಆರಾಧನೆಯ ಮೇಲೆ ಕಾಫಿಯ ಪ್ರಭಾವವನ್ನು ಖತೀಬು ಸಲ್ಬಿ ವಿವರಿಸುತ್ತಾರೆ. 15 ಮತ್ತು 16 ನೇ ಶತಮಾನಗಳ ಹೊತ್ತಿಗೆ, ಕಾಫಿ ನೀಡುವ ಚೈತನ್ಯ ಮತ್ತು ಹುರುಪು ಪ್ರಸಿದ್ಧವಾಯಿತು. ಸೂಫಿಗಳ ನಡುವೆ ಕಾಫಿಗಿದ್ದ ಜನಪ್ರಿಯತೆಯು ಜನಸಾಮಾನ್ಯರ ಮೇಲೆ ಪ್ರಭಾವ ಬೀರಿತು. ಇತರ ಸೆಮಿಟಿಕ್ ಧರ್ಮಗಳಾದ ಯಹೂದಿ-ಕ್ರಿಶ್ಚಿಯನ್ ಧರ್ಮಗಳಲ್ಲಿನ ರಾತ್ರಿಯ ಆರಾಧನೆಗಳ ವೇ
15 ನೇ ಶತಮಾನದ ವೇಳೆಗೆ ಕಾಫಿಯು ಇತರ ಮುಸ್ಲಿಂ ದೇಶಗಳಲ್ಲೂ ಜನಜನಿತವಾಯಿತು. ಮುಖ್ಯವಾಗಿ ಮೂರು ವಿಭಾಗದವರು ಈ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡರು.
ಒಂದು, ತೀರ್ಥಯಾತ್ರಿಗಳ ಗುಂಪು. ಮೆಕ್ಕಾ ಮತ್ತು ಇತರ ಪವಿತ್ರ ಸ್ಥಳಗಳಿಗಿರುವ ಮುಸ್ಲಿಮರ ಪ್ರಯಾಣವು ಸಾಂಸ್ಕೃತಿಕ ವಿನಿಮಯಕ್ಕೆ ತಕ್ಕ ಸಂದರ್ಭವಾಗಿತ್ತು. ಪರ್ಷಿಯಾ, ಈಜಿಪ್ಟ್, ಉತ್ತರ ಆಫ್ರಿಕಾ ಮತ್ತು ಟರ್ಕಿಯಂತಹ ಸ್ಥಳಗಳಲ್ಲಿ ಇಂತಹ ಪ್ರಭಾವವು ಪ್ರಬಲವಾಗಿತ್ತು. ಎರಡನೆಯದು, ಅರಬ್ ವ್ಯಾಪಾರಿಗಳು. ಕಾಫಿಯನ್ನು ದೈನಂದಿನ ಅವಶ್ಯಕತೆಯನ್ನಾಗಿ ಮಾಡುವಲ್ಲಿ ಅವರು ಯಶಸ್ವಿಯಾದರು. ಕಾಫಿಯ ಪರಿಚಯವಿಲ್ಲದ ಕಡೆಗಳಲ್ಲೂ ಅದನ್ನು ಅತ್ಯಗತ್ಯ ವಸ್ತುವನ್ನಾಗಿ ಮಾಡುವಂತಹ ವಹಿವಾಟುಗಳನ್ನು ಅವರು ಮಾಡುತ್ತಿದ್ದರು. ಮೂರನೆಯ ವಿಭಾಗ, ಸೂಫಿಗಳು ಮತ್ತು ಧಾರ್ಮಿಕ ನೇತಾರರು. ಮುಸ್ಲಿಮರ ಆರಾಧನಾ ಜೀವನದ ಭಾಗವಾಗಿ ಕಾಫಿಯನ್ನು ಚಿತ್ರಿಸಲು ಈ ವ್ಯಕ್ತಿಗಳ ಪ್ರಭಾವವು ಕಾರಣವಾಯಿತು.
ಮೂಲ: ಜಾನಟ್ ಪ್ರೇಗೂಲ್ಯ
ಕನ್ನಡಕ್ಕೆ: ಜುಬೇರ್ ಅಹಮ್ಮದ್ ಕೊಂಡಂಗೇರಿ
👍👍👍
ماشاء الله
Great information
ಮಾಷಾ ಅಲ್ಲಾಹ್
ಬಹಳ ಆಸಕ್ತಿದಾಯಕ ವಿಷಯ. ಇನ್ನೂ ಕೂಡಾ ಇಂತಹಾ ಲೇಖನ ಗಳು ಮೂಡಿ ಬರಲಿ ಎಂದು ಆಶಿಸುತ್ತೇವೆ.