ದುಃಖಿತ ಕಿತ್ತಳೆ ಹಣ್ಣುಗಳ ನಾಡು

ಕಥೆ

ಜಾಫಾದಿಂದ ಅಕಾದ ಕಡೆಗೆ ಹೊರಟಾಗ ನನಗೇನೂ ಬೇಸರವಾಗಿರಲಿಲ್ಲ. ರಜಾ ದಿನಗಳಲ್ಲಿ ಒಂದು ನಗರದಿಂದ ಇನ್ನೊಂದು ನಗರಕ್ಕೆ ಹೋಗುತ್ತೇವಲ್ಲ; ಹಾಗೆಯೇ ಇದು ಕೂಡ ಎಂದು ಅನಿಸಿತ್ತು. ಆ ದಿನಗಳಲ್ಲಿ ಅಹಿತಕರ ಘಟನೆಗಳೇನೂ ಜರುಗಿರಲಿಲ್ಲ. ನಿಜ ಹೇಳಬೇಕೆಂದರೆ, ಇನ್ನು ಶಾಲೆಗೆ ಹೋಗಬೇಕಿಲ್ಲ ಎಂದೇ ನಾನು ಸಂತೋಷಪಟ್ಟಿದ್ದೆ. ಆದರೆ, ಈ ಎಲ್ಲಾ ಸಂತೋಷಕ್ಕೆ ಒಂದು ಕೆಟ್ಟ ಕೊನೆ ಎದುರಾಯಿತು. ಅಕಾ ಆಕ್ರಮಣಕ್ಕೊಳಗಾಗುತ್ತಿದ್ದಂತೆ ನಮ್ಮ ಬದುಕಿನ ದೆಸೆ ಬದಲಾಯಿತು. ಆ ರಾತ್ರಿ ನನಗೆ ಮತ್ತು ನಿನಗೆ ಬಹಳ ಕಠಿಣವಾಗಿತ್ತು. ಸ್ತ್ರೀಯರು ದೀರ್ಘ ಹೊತ್ತಿನವರೆಗೆ ಪ್ರಾರ್ಥಿಸುತ್ತಿದ್ದರು. ಪುರುಷರು ಸುದೀರ್ಘವಾದ ನಿಟ್ಟುಸಿರಿನೊಂದಿಗೆ ಆಳವಾದ ಮೌನಕ್ಕೆ ಜಾರಿದ್ದರು. ನನಗೆ, ನಿನಗೆ ಹಾಗೂ ನಮ್ಮ ವಯೋಮಾನದ ಮಕ್ಕಳಿಗೆ ಏನು ನಡೆಯುತ್ತಿದೆ ಎಂದೇ ಅರ್ಥವಾಗುತ್ತಿರಲಿಲ್ಲ. ಆ ರಾತ್ರಿ ನಾವು ನಮ್ಮದೇ ಆದ ಕಥೆಗಳನ್ನು ಹೆಣೆಯಲು ಆರಂಭಿಸಿದೆವು.


ನಮ್ಮನ್ನು ಬೆದರಿಸಿ, ಶಪಿಸಿ ಇಸ್ರೇಲ್ ಸೈನಿಕರು ಹೊರಟು ಹೋದರು. ಅವರ ಹಿಂದೆಯೇ ಒಂದು ದೊಡ್ಡ ವ್ಯಾನ್ ಬಂದು ನಿಂತಿತು. ಹಾಸಿಗೆ, ಕಂಬಳಿ, ತಲೆದಿಂಬುಗಳನ್ನು ಆ ವ್ಯಾನ್‌ಗೆ ತುಂಬಿಸಿದರು. ನಾನು ಹಳೆಯ ಆ ಮನೆಯ ಗೋಡೆಗೆ ಒರಗಿ ನಿಂತಿದ್ದೆ. ನಿನ್ನ ತಾಯಿಯನ್ನು ಆ ವ್ಯಾನ್‌ಗೆ ಹತ್ತಿಸುವುದನ್ನು ಕಂಡೆ. ಅವರ ಹಿಂದೆಯೇ ನಿನ್ನ ಚಿಕ್ಕಮ್ಮ, ಅವರ ನಂತರ ಮಕ್ಕಳು ಹೀಗೆ ಒಬ್ಬೊಬ್ಬರೇ ವ್ಯಾನ್ ಹತ್ತಿದರು. ನಿನ್ನ ತಂದೆ ನಿನ್ನನ್ನು ವ್ಯಾನ್‌ನಲ್ಲಿದ್ದ ಫರ್ನಿಚರ್‌ಗಳ ಮೇಲೆ ಎಸೆದರು. ನನ್ನನ್ನು ಎರಡು ಕೈಗಳಿಂದ ತಲೆಗೂ ಮೇಲೆ ಎತ್ತಿ ದೈತ್ಯಾಕಾರದ ಕಬ್ಬಿಣದ ಪೆಟ್ಟೆಗೆಯ ಮೇಲೆ ಎಸೆದರು. ವ್ಯಾನಿನೊಳಗೆ ನನ್ನ ಸಹೋದರ ರಿಯಾದ್ ನಿಶ್ಶಬ್ಧನಾಗಿ ಕುಳಿತಿದ್ದ. ನಾನು ಇನ್ನೇನು ಸರಿಯಾಗಿ ಕುಳಿತುಕೊಳ್ಳಬೇಕೆನ್ನುವಷ್ಟರಲ್ಲಿ ವ್ಯಾನ್ ಮುಂದಕ್ಕೆ ಚಲಿಸಿತು.

ಅಕಾದ ದೃಶ್ಯಗಳು ಕಣ್ಮರೆಯಾದವು. ವ್ಯಾನ್ ರಅಸ್ ಅಲ್ ನಖುರ(ಲೆಬನಾನ್)ದ ಕಡೆಗೆ ದೌಡಾಯಿಸಿತು. ಆಕಾಶದಲ್ಲಿ ಕರಿಮೋಡಗಳು ಠಳಾಯಿಸಿದ್ದವು. ನನಗೆ ಜ್ವರದ ಅನುಭವವಾಗುತ್ತಿತ್ತು. ರಿಯಾದ್ ಕಾಲುಗಳನ್ನು ಮಡಚಿ, ಪೆಟ್ಟಿಗೆಯ ಮೇಲೆ ಶಾಂತವಾಗಿ ಕುಳಿತಿದ್ದ. ನಡು ನಡುವೆ ಆಕಾಶ ನೋಡುವ ಪ್ರಯತ್ನ ಮಾಡುತ್ತಿದ್ದ. ನಾನು ಮೌನವಾಗಿ ಕುಳಿತು ದಾರಿಯುದ್ದಕ್ಕೂ ನಮ್ಮನ್ನು ಎದುರುಗೊಳ್ಳುತ್ತಿದ್ದ ಕಿತ್ತಳೆ ಹಣ್ಣಿನ ತೋಟಗಳನ್ನು ನೋಡುತ್ತಿದ್ದೆ. ಎಲ್ಲರೂ ಭಯ, ನಿರೀಕ್ಷೆಗಳ ಸರಪಳಿಯಲ್ಲಿ ಬಂಧಿಯಾಗಿ ಒದ್ದಾಡುತ್ತಿದ್ದರು. ಕೆಸರುಗದ್ದೆಯಂತಿದ್ದ ರಸ್ತೆಯ ಮೇಲೆ ವ್ಯಾನ್ ಜಾರುತ್ತಾ ಓಡುತ್ತಿತ್ತು. ಗಳಿಗೆಗೊಮ್ಮೆ ಗುಂಡುಗಳ ಮೊರೆತ ಕಿವಿಗಪ್ಪಳಿಸುತ್ತಿತ್ತು; ನಮ್ಮನ್ನು ಬೀಳ್ಕೊಡುವಂತೆ! ರಅಸ್ ಅಲ್ ನಖೂರ ಕಣ್ಣಿಗೆ ಬಿದ್ದೊಡನೇ ಚಾಲಕ ವ್ಯಾನ್‌ ನಿಲ್ಲಿಸಿದ. ಸ್ತ್ರೀಯರು ತಮ್ಮ ಕೈಯಲ್ಲಿದ್ದ ವಸ್ತುಗಳೊಂದಿಗೆ ಕೆಳಗಿಳಿದರು. ಸ್ವಲ್ಪ ದೂರದಲ್ಲಿ ರೈತನೊಬ್ಬ ಬುಟ್ಟಿ ತುಂಬಾ ಕಿತ್ತಳೆ ಹಣ್ಣುಗಳನ್ನು ಹೇರಿಕೊಂಡು ಮಾರುತ್ತಿದ್ದ. ಅವನನ್ನು ಮುತ್ತಿಕೊಂಡ ಮಹಿಳಾಮಣಿಗಳು ತಮಗೆ ಬೇಕಾದಷ್ಟು ಹಣ್ಣುಗಳನ್ನು ಖರೀದಿಸಿದರು. ಆ ರೈತನು ಸ್ತ್ರೀ ಯರೊಂದಿಗೆ ಉದಾರವಾಗಿ ರ‍್ತಿಸುತ್ತಿದ್ದನು. ಆ ಕ್ಷಣದಲ್ಲಿ ಕಿತ್ತಳೆ ಹಣ್ಣುಗಳು ಎಷ್ಟು ಅಮೂಲ್ಯವೆಂದು ನನಗೆ ರ‍್ಥವಾಯಿತು. ದೊಡ್ಡದಾದ ಸುಂದರವಾದ ಆ ಕಿತ್ತಳೆ ಹಣ್ಣುಗಳು ನಮ್ಮ ಹೃದಯದೊಂದಿಗೆ ಸಂವಾದಿಸುತ್ತಿರುವಂತೆ ಭಾಸವಾಯಿತು. ಸ್ತ್ರೀಯರು ಕಿತ್ತಳೆ ಹಣ್ಣುಗಳೊಂದಿಗೆ ವ್ಯಾನ್‌ಗೆ ಮರಳಿದರು. ನಿನ್ನ ತಂದೆ ಚಾಲಕನ ಪಕ್ಕದಲ್ಲಿ ಕುಳಿತು, ಕೈಚಾಚಿದರು. ಯಾರೋ ಅವರಿಗೆ ಕಿತ್ತಳೆ ಹಣ್ಣು ಕೊಟ್ಟರು. ಸ್ವಲ್ಪ ಹೊತ್ತು ಅವರು ಅ ಹಣ್ಣನ್ನೇ ನೋಡಿದರು. ನಂತರ ಪುಟ್ಟ ಮಗುವಿನಂತೆ ಅಳತೊಡಗಿದರು. ವ್ಯಾನ್ ಅನ್ನು ರಅಸ್ ಅಲ್ ನಖೂರದಲ್ಲಿ ಇತರ ವಾಹನಗಳ ನಡುವೆ ನಿಲ್ಲಿಸಿದ್ದರು. ಪುರುಷರು ತಮ್ಮ ಬಳಿಯಿದ್ದ ಬಂದೂಕುಗಳನ್ನು ಪೊಲೀಸರಿಗೆ ನೀಡಿದರು. ಪೊಲೀಸರು ಬಂದೂಕುಗಳನ್ನು ಪಡೆದುಕೊಳ್ಳಲೆಂದೇ ಅಲ್ಲಿ ನಿಂತಿದ್ದರು. ನಮ್ಮ ಸರದಿ ಸಮೀಪಿಸುತ್ತಿದ್ದಂತೆ ಪೊಲೀಸರ ಮುಂದಿದ್ದ ಮೇಜು ಗನ್ನು, ಆಟೋಮ್ಯಾಟಿಕ್ ಗನ್ನುಗಳಿಂದ ತುಂಬಿ ಹೋಗಿತ್ತು. ಆ ಹೊತ್ತು ಲೆಬನಾನ್‌ಗೆ ಹೋಗಲು ಕಾದು ನಿಂತಿದ್ದ ವಾಹನಗಳು ಸಾಲಾಗಿ ನಿಂತಿರುವುದನ್ನು ನಾನು ಕಂಡೆ. ಕಿತ್ತಳೆ ಹಣ್ಣುಗಳ ಊರನ್ನು ತೊರೆದು ನಾವು ಇನ್ನೊಂದು ಊರಿಗೆ ಹೊರಟಿದ್ದೆವು.

ನಾನು ಜೋರಾಗಿ ಅತ್ತು ಗದ್ದಲ ಎಬ್ಬಿಸಿದೆ. ನಿನ್ನ ತಾಯಿ ಮೌನವಾಗಿ ಕುಳಿತು ಕಿತ್ತಳೆ ಹಣ್ಣುಗಳನ್ನು ನೋಡುತ್ತಿದ್ದರು. ನಿನ್ನ ತಂದೆಯ ಕಣ್ಣುಗಳಲ್ಲಿ ಇಸ್ರೇಲಿಗರಿಗಾಗಿ ತ್ಯಜಿಸಿ ಬಂದ ಕಿತ್ತಳೆ ಹಣ್ಣಿನ ತೋಟ ಪ್ರಕಾಶವಾಗಿ ಜ್ವಲಿಸುತ್ತಿತ್ತು. ತನ್ನ ಪ್ರತೀ ಮರಗಳೆಡೆಗಿನ ಬದ್ಧತೆ ಮತ್ತು ಪ್ರೀತಿ ಆ ಮುಖದ ಹೊಳಪಿನಲ್ಲಿ ಕಾಣಬಹುದಿತ್ತು. ತಪಾಸಣೆ ನಡೆಯುತ್ತಿದ್ದ ಸ್ಥಳದಲ್ಲಿ ಮುಖ್ಯ ಪೊಲೀಸ್ ಅಧಿಕಾರಿಯವರನ್ನು ಎದುರಿಸುವಾಗಲೂ ನಿನ್ನ ತಂದೆಗೆ ತನ್ನ ಕಣ್ಣಿಂದ ಹರಿಯುತ್ತಿದ್ದ ನೀರನ್ನು ತಡೆಯಲಾಗಲಿಲ್ಲ. ನಾವು ಝೈದಾ ತಲುಪಿದಾಗ ಮಧ್ಯಾಹ್ನವಾಗಿತ್ತು. ಅಲ್ಲಿಂದ ಮುಂದಕ್ಕೆ ನಾವು ನಿರಾಶ್ರಿತರಾಗಿ ಬದಲಾದೆವು. ಹಲವು ವ್ಯಕ್ತಿಗಳ ಹಾಗೂ ವಸ್ತುಗಳ ಭಾರ ಹೊತ್ತು ಪಳಗಿದ್ದ ಆ ರಸ್ತೆ ನಮ್ಮನ್ನೂ ಹೊತ್ತುಕೊಂಡಿತ್ತು. ನಿಜ ಹೇಳಬೇಕೆಂದರೆ, ಆ ಕ್ಷಣದಲ್ಲಿ ನಿನ್ನ ತಂದೆ ವಯಸ್ಸಾದವರಂತೆ ಕಾಣುತ್ತಿದ್ದರು. ಬಹುಶಃ ಅದು ಬಹಳ ದಿನಗಳಿಂದ ನಿದ್ರೆ ಮಾಡದ ಪರಿಣಾಮವಾಗಿರಬಹುದು. ವ್ಯಾನ್ ನಿಂದ ಇಳಿಸಿ ರಸ್ತೆಯ ಮೇಲಿಟ್ಟ ವಸ್ತುಗಳ ನಡುವೆ ಅವರು ಕ್ರುದ್ಧರಾಗಿ ನಿಂತಿದ್ದರು. ನಾನೇನಾದರು ಹೇಳಿದರೆ ನಿನ್ನ ತಂದೆ,ನಿನ್ನ ಅಪ್ಪ’ ಎಂದು ಬೊಬ್ಬೆ ಹೊಡೆಯುತ್ತಿದ್ದರೆಂದು ನನಗೆ ಖಚಿತವಾಗಿ ತಿಳಿದಿತ್ತು. ಅವರ ಮುಖದಲ್ಲಿ ಆ ಶಾಪವಾಕ್ಕುಗಳು ಸ್ಪಷ್ಟವಾಗಿ ಗೋಚರಿಸುತ್ತಿದ್ದವು. ನಿರಾಶ್ರಿತರಾದ ನಾವು ರಸ್ತೆಯ ಮೇಲೆ ಸಾಮಾನುಗಳನ್ನು ಹೊತ್ತುಕೊಂಡು ಕುಳಿತಿದ್ದೆವು. ನಿರಾಶ್ರಿತರ ಸಮಸ್ಯೆಗಳನ್ನು ಪರಿಹರಿಸಲು ಯಾರೂ ಬರುವುದಿಲ್ಲ. ತಲೆಯ ಮೇಲಿನ ಸೂರನ್ನೊಳಗೊಂಡಂತೆ ಅವರು ತಮ್ಮ ಎಲ್ಲಾ ಸಮಸ್ಯೆಗಳನ್ನು ತಾವೇ ಪರಿಹರಿಸಿಕೊಳ್ಳಬೇಕಷ್ಟೇ. ನೋವು ತಾಳಲಾಗದೆ ನನ್ನ ತಲೆ ಸಿಡಿಯತೊಡಗಿತು.
ಆ ರಾತ್ರಿ ಭಯಾನಕವಾಗಿತ್ತು. ಕಣ್ಣ ಮುಂದೆಯೇ ಇರುಳು ರಾತ್ರಿಯ ಛದ್ಮವೇಷ ತೊಟ್ಟು ಕುಣಿಯತೊಡಗಿತು. ನನ್ನ ಎದೆ ಬಡಿತವೋ ದ್ವಿಗುಣಗೊಳ್ಳುತ್ತಲೇ ಹೋಯಿತು. ರಾತ್ರಿಯಿಡೀ ರಸ್ತೆಯಲ್ಲೇ ಬಿದ್ದುಕೊಂಡಿರಬೇಕೆಂದು ನನಗಾಗಲೇ ಖಚಿತವಾಗಿತ್ತು. ನನ್ನೊಳಗೆ ದುಃಸ್ವಪ್ನಗಳು ತುಂಬಿಕೊಳ್ಳತೊಡಗಿದವು. ನನಗೆ ಸಮಾಧಾನ ಹೇಳುವವರು ಅಲ್ಲಿ ಯಾರೂ ಇರಲಿಲ್ಲ. ನಿನ್ನ ತಂದೆಯ ಉಕ್ಕಿನ ಮೌನ ನನ್ನನ್ನು ಭೀತಿಯ ಕೂಪಕ್ಕೆ ತಳ್ಳಿತು. ನಿನ್ನ ತಾಯಿಯ ಕೈಯಲ್ಲಿದ್ದ ಕಿತ್ತಳೆ ಹಣ್ಣು ನನ್ನ ಎದೆಯ ಬೆಂಕಿಗೆ ತುಪ್ಪ ಸುರಿಯಿತು. ಎಲ್ಲರೂ ನಿಶ್ಶಬ್ಧದ ಜೇಡರ ಬಲೆಯಲ್ಲಿ ಸಿಲುಕಿದ್ದರು. ನಿರೀಕ್ಷೆಯ ಕಣ್ಣುಗಳು ರಸ್ತೆಯನ್ನು ನೋಡುತ್ತಿದ್ದವು; ಯಾರಾದರು ಬರಬಹುದು, ತಮ್ಮ ಸಮಸ್ಯೆಯನ್ನು ಪರಿಹರಿಸಬಹುದು, ಸೂರು ಕೊಟ್ಟು ರಕ್ಷಿಸಬಹುದು ಎಂದು ಯೋಚಿಸುತ್ತಿದ್ದವು.
ಅಷ್ಟರಲ್ಲಿ ನಮ್ಮ ವಿಧಿಯೊಂದಿಗೆ ಒಬ್ಬರು ಅಲ್ಲಿಗೆ ಬಂದರು. ನಿನ್ನ ಚಿಕ್ಕಪ್ಪ. ಅವರು ಎರಡು ದಿನಗಳ ಮೊದಲೇ ಇಲ್ಲಿಗೆ ಬಂದಿದ್ದರು. ನಮ್ಮ ಹಣೆಬರಹ ಅವರ ಕೈಯಲ್ಲಿತ್ತು.


ನಿನ್ನ ಚಿಕ್ಕಪ್ಪ ಅಷ್ಟೇನೂ ದಯಾಳುವಾಗಿರಲಿಲ್ಲ. ರಸ್ತೆಯಲ್ಲಿ ಕಂಡಾಗಲೇ ಅವರ ದುಷ್ಟತನ ಅರಿವಿಗೆ ಬಂದಿತ್ತು. ಅವರು ಒಬ್ಬ ಯಹೂದಿಯ ಮನೆಗೆ ಹೋಗಿ, ಅಟ್ಟಹಾಸಗೈದರು; ತೊಲಗಿ ಇಲ್ಲಿಂದ, ನಿಮ್ಮ ವಸ್ತುಗಳನ್ನು ತೆಗೆದುಕೊಂಡ ಫೆಲೆಸ್ತೀನ್‌ಗೆ ಹೋಗಿ’. ಆದರೆ, ಅವರು ಫೆಲೆಸ್ತೀನ್‌ಗೆ ಹೋಗುವುದಿಲ್ಲವೆಂದು ಆತನಿಗೂ ತಿಳಿದಿತ್ತು. ನಿನ್ನ ಚಿಕ್ಕಪ್ಪನಿಗೆ ಅವರ ಮುಂದೆ ತನ್ನ ಸಿಟ್ಟು ಹಾಗೂ ಕ್ರೋಧವನ್ನು ತೋರಿಸುವ ಇರಾದೆಯಿತ್ತೆಂದು ತೋರುತ್ತದೆ. ಆ ಕುಟುಂಬ ತಮ್ಮ ಒಂದು ಕೋಣೆಯನ್ನು ನಮಗಾಗಿ ಬಿಟ್ಟು ಕೊಡಲು ಸಿದ್ಧವಾಯಿತು. ಬಳಿಕ ನಿನ್ನ ಚಿಕ್ಕಪ್ಪ ನಮ್ಮನ್ನು ಅಲ್ಲಿಗೆ ಕರೆದೊಯ್ದರು. ಅಲ್ಲಿ ನಿನ್ನ ಚಿಕ್ಕಪ್ಪನ ಕುಟುಂಬವೂ ಇತ್ತು. ನಾವು ಆ ಕೋಣೆಯ ನೆಲದ ಮೇಲೆ ಮಲಗಿದೆವು. ಸೈದಾದಿಂದ ನಾವು ಕೂಡಲೇ ಹೊರಡಬೇಕಾಯಿತು. ಕಾರಣ, ನಿನ್ನ ಚಿಕ್ಕಪ್ಪನ ಕೋಣೆಯಲ್ಲಿ ನಮ್ಮಲ್ಲಿ ರ‍್ಧದಷ್ಟು ಮಂದಿಗೆ ಕೂಡ ಇರಲು ಜಾಗವಿರಲಿಲ್ಲ. ಹೇಗೋ ಕಷ್ಟಪಟ್ಟು ನಾವಲ್ಲಿ ಮೂರು ದಿವಸವಿದ್ದೆವು. ನಿನ್ನ ತಾಯಿ ನಿನ್ನ ತಂದೆಯೊಂದಿಗೆ ಏನಾದರು ಕೆಲಸ ಹುಡುಕುವಂತೆ ಹೇಳಿದರು. ಇಲ್ಲದಿದ್ದರೆ ಕಿತ್ತಳೆ ಹಣ್ಣುಗಳನ್ನು ವಾಪಾಸು ಕೊಡುವಂತೆ ಹೇಳಿದರು. ಅದನ್ನು ಕೇಳಿ ನಿನ್ನ ತಂದೆಯ ಸ್ಥಿಮಿತ ತಪ್ಪಿತು. ಸಿಟ್ಟಿನಿಂದ ಅವರ ಧ್ವನಿ ನಡುಗುತ್ತಿತ್ತು. ಅಲ್ಲಿಗೆ ಒಂದು ಕೌಟುಂಬಿಕ ಸಮಸ್ಯೆಗೆ ನಾವು ಸಾಕ್ಷಿಯಾಗಬೇಕಾಯಿತು. ಕಿತ್ತಳೆಯ ನಾಡಿನಲ್ಲಿ ಹುತಾತ್ಮರ ಸಮಾಧಿಗಳ ನಡುವೆ ಪ್ರೀತಿ ವಿಶ್ವಾಸದಿಂದ ಕಳೆದಿದ್ದ ಕುಟುಂಬವೊಂದರಲ್ಲಿ ಸಮಸ್ಯೆಯ ಬೀಜ ಮೊಳಕೆಯೊಡೆಯಿತು. ನಿನ್ನ ತಂದೆ ಹಣ ಹೇಗೆ ಶೇಖರಿಸಿದರೋ ನನಗೆ ತಿಳಿದಿಲ್ಲ. ಆದರೆ, ನಿನ್ನ ತಾಯಿಯ ಆಭರಣಗಳನ್ನು ಮಾರಾಟ ಮಾಡಿರುವುದು ತಿಳಿದಿತ್ತು. ನಿನ್ನ ತಾಯಿ ಹೆಮ್ಮೆಯಿಂದ ತಲೆಯೆತ್ತಿ ತಿರುಗಲು ಅವರ ಆಭರಣಗಳನ್ನು ತೆಗೆದುಕೊಟ್ಟಿದ್ದರು. ಆದರೆ, ಆ ಆಭರಣದಿಂದ ಅಷ್ಟೊಂದು ಹಣ ಸಿಗಲು ಸಾಧ್ಯವಿಲ್ಲ. ಸಾಲವೇನಾದರು ಮಾಡಿರಬಹುದೇ? ನಮಗೆ ತಿಳಿಯದಂತೆ ಆಸ್ತಿ ಮಾರಿಬಿಟ್ಟರೆ? ಎಲ್ಲವೂ ನಿಗೂಢವಾಗಿತ್ತು. ಸೈದಾದ ಹೊರವಲಯದಲ್ಲಿ ಬಂಡೆಗಲ್ಲೊಂದರ ಮೇಲೆ ಕುಳಿತು ನಿನ್ನ ತಂದೆ ಮೊದಲ ಬಾರಿಗೆ ನಗುವುದನ್ನು ನಾನು ಕಂಡೆ. ಅವರು ಮೇ ೧೫ಕ್ಕೆ ಸೇನೆ ವಿಜಯೋತ್ಸವದೊಂದಿಗೆ ಹಿಂದಿರುಗುವುದನ್ನು ಕಾಯುತ್ತಿದ್ದರು. ಕಠೋರವಾದ ಕೆಲವು ದಿವಸಗಳ ನಂತರ ಮೇ ೧೫ ಬಂತು. ರಾತ್ರಿ ೧೨ಗಂಟೆಯ ಸುಮಾರಿಗೆ ಗಾಢ ನಿದ್ರೆಯಲ್ಲಿದ್ದ ನನ್ನನ್ನು ನಿನ್ನ ತಂದೆ ಒದ್ದು ಎಬ್ಬಿಸಿದರು. “ಏಳು, ಕಣ್ಣು ತೆರೆ. ಅರಬ್ ಸೈನ್ಯ ಫೆಲೆಸ್ತೀನ್‌ಗೆ ನುಗ್ಗುವುದನ್ನು ನೋಡು’ ಎಂದು ಅವರು ನನ್ನೊಂದಿಗೆ ಹೇಳಿದರು. ಅವರ ಧ್ವನಿ ಇತರರಲ್ಲಿ ನಿರೀಕ್ಷೆಯ ಹೊಂಗಿರಣಗಳನ್ನು ಮೂಡಿಸುವಂತಿತ್ತು. ಆ ಕಾಳ ರಾತ್ರಿಯಲ್ಲಿ ನಾವು ಹೊರಗಿಳಿದು ಕತ್ತಲ ಕೂಪದಲ್ಲಿ ಕಣ್ಮರೆಯಾಗಿದ್ದ ರ‍್ವತಗಳ ನಡುವೆ ಓಡತೊಡಗಿದೆವು. ರಸ್ತೆಗೆ ತಲುಪುವರೆಗೂ ಓಡಿದೆವು. ನಾವಿದ್ದ ಹಳ್ಳಿಯಿಂದ ರಸ್ತೆ ಬಹಳ ದೂರದಲ್ಲಿತ್ತು. ಮಕ್ಕಳು, ಯುವಕರು, ವಯಸ್ಕರು ಎಲ್ಲರೂ ಮರ‍್ಖರಂತೆ ರಸ್ತೆಗೆ ಓಡಿದೆವು. ವ್ಯಾನ್ ರಅï‌ಸ್ ಅಲ್ ನಖುರದ ಕಡೆಗೆ ಬಂತು. ದೂರದಿಂದ ಕಾರು, ಶಸ್ತ್ರಸಜ್ಜಿತ ವಾಹನಗಳು ಬರುತ್ತಿರುವುದು ಕಾಣುತ್ತಿತ್ತು. ಪ್ರಮುಖ ರಸ್ತೆಗೆ ಮುಟ್ಟುವಷ್ಟರಲ್ಲಿ ನಾವು ಚಳಿಯಿಂದ ನಡುಗುತ್ತಿದ್ದೆವು. ಹಲ್ಲುಗಳು ಕಟಕಟ ಕಡಿಯತೊಡಗಿತ್ತು. ಆದರೆ, ನಿನ್ನ ತಂದೆಯ ಸಂಭ್ರಮದ ಕೂಗು ನಮಗೆ ಎಲ್ಲವನ್ನೂ ಮರೆಯುವಂತೆ ಮಾಡಿದ್ದವು. ಅವರು ಸೈನಿಕರ ಕಾರುಗಳ ಕಡೆಗೆ ಪುಟ್ಟ ಮಗುವಿನಂತೆ ಓಡಿ; ಗಗ್ಗರ ಧ್ವನಿಯಲ್ಲಿ ಕೂಗಿ ಕರೆಯುತ್ತಿದ್ದರು. ನಾವು ಅವರನ್ನೇ ಅನುಸರಿಸಿದೆವು. ಮೆಚ್ಚುಗೆಗೆ ರ‍್ಹರಾಗಿದ್ದ ಕೆಲವು ಸೈನಿಕರು ನಮ್ಮನ್ನೇ ನೋಡುತ್ತಿದ್ದರು. ನಾವು ಏದುಸಿರು ಬಿಡುತ್ತಾ ಓಡುತ್ತಿದ್ದೆವು. ಆದರೆ, ನಿನ್ನ ತಂದೆ ತನಗೆ ೫೦ ರ‍್ಷ ಪ್ರಾಯವೆಂಬುದನ್ನು ಮರೆತು ಸೈನಿಕರ ಕಡೆಗೆ ಸಿಗರೇಟು ಎಸೆಯುತ್ತಾ ಓಡುತ್ತಿದ್ದರು. ಕುರಿಮರಿಗಳಂತೆ ನಾವು ನಿನ್ನ ತಂದೆಯನ್ನು ಹಿಂಬಾಲಿಸಿದೆವು. ಕಾರುಗಳ, ಶಸ್ತ್ರಸಜ್ಜಿತ ವಾಹನಗಳ ವಿಜಯ ಯಾತ್ರೆ ಬಹಳ ಬೇಗನೇ ಕೊನೆಗೊಂಡಿತು. ನಾವು ದಣಿದು ಮನೆಗೆ ಮರಳಿದೆವು. ನಿನ್ನ ತಂದೆ ಮೌನವಾಗಿದ್ದರು. ನಿಗೂಢ ಮೌನ. ಕಾರೊಂದರ ಹೆಡ್‌ಲೈಟ್ ಅವರ ಮುಖಕ್ಕೆ ಬಿದ್ದಾಗ ಅವರ ಕಣ್ಣುಗಳಿಂದ ಕಣ್ಣೀರು ಹರಿಯುತ್ತಿರುವುದು ಕಾಣಿಸಿತು. ಆ ದಿನಗಳ ಬಳಿಕ ಬದುಕು ಹೇಗೋ ಸಾಗಿತು. ಘೋಷಣೆಗಳಿಂದ ನಾವು ಮರ‍್ಖರಾಗಿದ್ದೆವು. ಕ್ರೂರ ಸತ್ಯಗಳ ಮುಂದೆ ನಾವು ಸ್ತಬ್ಧರಾಗಿದ್ದೆವು. ಮುಖಗಳಿಗೆ ಕಾವಳ ಕವಿಯಿತು. ಮತ್ತೆಂದೂ ನಿನ್ನ ತಂದೆ ಫೆಲೆಸ್ತೀನ್ ಕುರಿತು ಮಾತನಾಡಲಿಲ್ಲ. ಕಿತ್ತಳೆ ಹಣ್ಣಿನ ತೋಟಗಳ ನಡುವೆ ಸಂತೋಷದಿಂದ ಕಳೆದ ದಿನಗಳನ್ನು ಅವರು ಮತ್ತೆ ನೆನಪಿಸಲೇ ಇಲ್ಲ. ತಮ್ಮ ಮನೆಯ ಬಗ್ಗೆಯೂ ಅವರು ಮಾತನಾಡಲಿಲ್ಲ. ನಾವು ಆ ದುರಂತದ ಕನ್ನಡಿಯಾಗಿ ಬದಲಾಗಿದ್ದೆವು. ಮುಂಜಾನೆ ನಮ್ಮನೆಲ್ಲಾ ಎಬ್ಬಿಸಿ ಅವರು ಕೂಗಿದರು;ಬೆಟ್ಟದ ಮೇಲೆ ಹೋಗಿರಿ, ಮಧ್ಯಾಹ್ನದ ಮೊದಲು ಯಾರೂ ಮರಳಬಾರದು’ ಬೆಳಿಗ್ಗಿನ ಉಪಹಾರ ಕೇಳದಿರಲು ಅವರು ಈ ಉಪಾಯ ಹೂಡಿದ್ದರು.

ಗಝಾನ್ ಕನಾಫಾನಿ


ದಿನದಿಂದ ದಿನಕ್ಕೆ ನಿನ್ನ ತಂದೆ ಕ್ರುದ್ಧರಾಗುತ್ತಾ ಹೋದರು. ಕ್ಷುಲ್ಲಕ ಸಂಗತಿಗಳಿಗೆ ಅಳತೆಮೀರಿ ಸಿಟ್ಟಿಗೇಳತೊಡಗಿದರು. ನನಗೀಗಲೂ ನೆನಪಿದೆ; ಮಕ್ಕಳಲ್ಲೊಬ್ಬರು ಏನೋ ಕೇಳಿದಾಗ ಆಘಾತಕ್ಕೊಳಗಾದವರಂತೆ, ಜಿಗಿದು ಎದ್ದರು. ನಂತರ ನಮ್ಮನ್ನು ದುರುಗುಟ್ಟಿ ನೋಡತೊಡಗಿದರು. ತಕ್ಷಣ ಅವರ ಮನಸಿಗೆ ಏನೋ ಹೊಳೆಯಿತು. ಮನಸಿನ ಗೊಂದಲಕ್ಕೆ ಪರಿಹಾರ ಲಭಿಸಿದಂತಿತ್ತು ಅವರ ಮುಖಭಾವ. ಸಮಸ್ಯೆಗಳು ಕೊನೆಗೊಂಡಂತೆ, ಅಂತಿಮ ತರ‍್ಪು ಪಡೆದಂತೆ, ಆಕಾಶ ಕರ‍್ಮೋಡಗಳಿಂದ ರಕ್ಷಣೆ ಹೊಂದಿ ತಿಳಿಯಾದಂತೆ ಅಸಂಬದ್ಧ ಮಾತುಗಳನ್ನಾಡತೊಡಗಿದರು. ನಂತರ ಏನನ್ನೋ ಹುಡುಕಲಾರಂಭಿಸಿದರು. ತಕ್ಷಣವೇ ನಾವು ಅಕಾದಿಂದ ತಂದಿದ್ದ ಪೆಟ್ಟಿಗೆಯೊಂದರ ಮೇಲೆ ಹಾರಿ ಕುಳಿತರು. ಅಪಸ್ಮಾರ ಬಾಧಿಸಿದವರಂತೆ ರ‍್ತಿಸಿ ಪೆಟ್ಟಿಗೆಯೊಳಗಿದ್ದ ವಸ್ತುಗಳನ್ನು ತೆಗೆದು ಹೊರಗೆಸೆಯತೊಡಗಿದರು. ನಿನ್ನ ತಂದೆ ಮುಂದೇನು ಮಾಡಲಿರುವರೆಂದು ನಿನ್ನ ತಾಯಿಗೆ ಮೊದಲೇ ತಿಳಿದಿತ್ತೋ ಏನೋ ಅವರು ಮಕ್ಕಳೊಂದಿಗೆ ಬೆಟ್ಟದ ಕಡೆಗೆ ಓಡಿ ಹೋಗುವಂತೆ ಹೇಳಿದರು. ಆದರೆ, ನಾವು ಮನೆಯ ಹೊರಗೆ ಕಿಟಕಿಯ ಬಳಿ ನಿಂತೆವು. ಕಿವಿಯನ್ನು ಗೋಡೆಗೆ ಆನಿಸಿ ಇಟ್ಟೆವು. ನಿನ್ನ ತಂದೆ ಪಿಶಾಚಿ ಬಾಧೆಗೆ ಒಳಗಾದವರಂತೆ; `ನಾನವರನ್ನು ಕೊಂದು ಹಾಕುತ್ತೇನೆ. ನನ್ನನ್ನೂ ಸಾಯಿಸುತ್ತೇನೆ. ಅವರನ್ನು ನನಗೆ ಕೊಲ್ಲಬೇಕು. ನಾನವರನ್ನು ಕೊಂದು ಹಾಕುತ್ತೇನೆ…’ ಎಂದು ಕಿರುಚುತ್ತಿದ್ದರು. ಬಾಗಿಲ ಸಂಧುಗಳಿಂದ ನಾವು ನೋಡುತ್ತಿದ್ದೆವು. ನಿನ್ನ ತಂದೆ ಗೋಡೆಗೆ ತಲೆ ಚಚ್ಚತೊಡಗಿದರು. ದರ‍್ಘ ಶ್ವಾಸವನ್ನು ಒಳಗೆಳೆಯುತ್ತಿದ್ದರು. ಕಟ ಕಟ ಹಲ್ಲು ಕಡಿಯುತ್ತಿದ್ದರು. ನಿನ್ನ ತಾಯಿ ಅಲ್ಪ ದೂರದಲ್ಲಿ ಭಯ ವಿಹ್ವಲರಾಗಿ ನಿಂತು ನೋಡುತ್ತಿದ್ದರು. ಏನು ನಡೆಯುತ್ತಿದೆ ಎಂದು ಮೊದಲು ನನಗೆ ರ‍್ಥವಾಗಲಿಲ್ಲ. ಅವರ ಪಕ್ಕದಲ್ಲಿ ಕಪ್ಪು ಪಿಸ್ತೂಲ್ ಬಿದ್ದಿರುವುದು ಕಂಡು ನನ್ನ ಮೆದುಳಿಗೆ ಭೀತಿಯ ಸಂದೇಶ ರವಾನೆಯಾಯಿತು. ನಾನು ಬೆಟ್ಟದ ಕಡೆಗೆ ಓಡಿದೆ. ಮನೆಯಿಂದ ರಕ್ಷಣೆ ಹೊಂದಲು ನಾನು ಬೆಟ್ಟದ ಕಡೆಗೆ ಓಡಿದ್ದೆ. ಮನೆಯಿಂದ ಎಷ್ಟು ದೂರ ಹೋಗುತ್ತೇನೋ ಬಾಲ್ಯದಿಂದ ಅಷ್ಟು ದೂರ ಹೋಗುವುದಾಗಿ ನನಗೆ ಅನಿಸುತ್ತಿತ್ತು. ಜೀವನ ಇನ್ನು ಮುಂದೆ ಈ ಹಿಂದಿನಂತಿರುವುದಿಲ್ಲ ಎಂದು ನನಗೆ ಖಚಿತವಾಗಿತ್ತು. ಮಾತ್ರವಲ್ಲದೆ, ಹಿಂದಿನಷ್ಟು ಸರಳವಾಗಿರುವುದಿಲ್ಲ, ಜೀವನ ಈಗಾಗಲೇ ನಿರೀಕ್ಷೆಯಿಂದ ಕಾಯುವ ಒಂದಾಗಿ ಉಳಿದಿಲ್ಲ. ತಲೆಗೆ ಬಂದೂಕು ಗುರಿಯಿಟ್ಟ ಸ್ಥಿತಿಗೆ ಬದುಕು ತಲುಪಿತ್ತು. ತಂದೆಯೊಬ್ಬನಿಗೆ ಮಕ್ಕಳಿಗೆ ಕೊಡಲೇನೂ ಇಲ್ಲದ ಅವಸ್ಥೆ. ಅಂದರೆ, ಇನ್ನು ಮುಂದೆ ನಮ್ಮ ಹಾದಿಯನ್ನು ನಾವೇ ಹುಡುಕಿಕೊಳ್ಳಬೇಕು. ನಮ್ಮ ರ‍್ತನೆ ಹೇಗಿರಬೇಕೆಂದು ಇನ್ನು ಯಾರೂ ಹೇಳಿಕೊಡುವುದಿಲ್ಲ. ಅಪ್ಪ, ಸಮಸ್ಯೆಗಳ ಬಗ್ಗೆ ಮಾತನಾಡುವಾಗ ಮೌನವಾಗಿ ಕುಳಿತುಕೊಳ್ಳಬೇಕು. ಎಷ್ಟೇ ಹಸಿವಾದರೂ ಆಹಾರ ಕೇಳಬಾರದು.ಬೆಟ್ಟದ ಕಡೆಗೆ ಓಡಿ, ಮಧ್ಯಾಹ್ನವಾಗದೆ ಹಿಂದಿರಗಬೇಡಿ’ ಎಂದರೆ ಅನುಸರಿಸಲೇಬೇಕು.
ಸಂಜೆ ಮನೆಯೊಳಗೆ ಇರುಳು ಆವರಿಸಿಕೊಳ್ಳುವಾಗ ನಿನ್ನ ತಂದೆ ಜ್ವರದಿಂದ ನಡುಗುತ್ತಾ ಮಲಗಿದ್ದರು. ನಿನ್ನ ಅಮ್ಮ ಕಣ್ಣೀರು ಹಾಕುತ್ತಾ ಅವರ ಪಕ್ಕದಲ್ಲಿ ಕುಳಿತಿದ್ದರು. ನಮ್ಮ ಕಣ್ಣುಗಳು ರಾತ್ರಿ ಬೆಕ್ಕಿನ ಕಣ್ಣುಗಳು ಹೊಳೆಯುವಂತೆ ಹೊಳೆಯುತ್ತಿತ್ತು. ನಮ್ಮ ತುಟಿಗಳು ಮೊಹರು ಬಿದ್ದು ಮುಚ್ಚಿದಂತಿತ್ತು. ಹಳೆಯ ಗಾಯಗಳ ಮೇಲಿನ ಹೊಲಿಗೆಯಂತೆ ಕಾಣಿಸುತ್ತಿತ್ತು.
ನಾವಿಲ್ಲಿ ತಟಸ್ಥರಾಗಿ ಬಾಲ್ಯದಿಂದ ಸಂಪರ‍್ಣವಾಗಿ ಕಳಚಿಕೊಂಡು, ಕಿತ್ತಳೆ ಹಣ್ಣುಗಳ ನೆಲದಿಂದ ದೂರವಾದೆವು. ಅಪರಿಚಿತರು ನೀರು ಹಾಕಿದರೆ ಕಿತ್ತಳೆ ಹಣ್ಣಿನ ಗಿಡಗಳು ಸಾಯುತ್ತವೆ ಎಂದು ವೃದ್ಧ ರೈತನೊಬ್ಬ ಹೇಳುತ್ತಿದ್ದ.
ನಿನ್ನ ತಂದೆ ಈಗಲೂ ರೋಗಗ್ರಸ್ತರಾಗಿ ಮಲಗಿದ್ದಾರೆ. ನಿನ್ನ ತಾಯಿಯ ಕಣ್ಣೀರು ಅಂದಿನಿಂದ ಬತ್ತಿಲ್ಲ. ನಾನು ಕೆಲವೊಮ್ಮೆ ಬಹಿಷ್ಕೃತನಂತೆ ಆ ಕೋಣೆಗೆ ಹೋಗುವುದಿತ್ತು. ಆಗ ನಿನ್ನ ತಂದೆಯ ಮುಖ ಸಿಟ್ಟಿನಿಂದ ವಿರ‍್ಣಗೊಳ್ಳುತ್ತಿತ್ತು. ಈಗಲೂ ಆ ಕಪ್ಪು ಪಿಸ್ತೂಲ್ ಮೇಜಿನ ಕೆಳಗಿನ ಡ್ರಾವರ್‌ನಲ್ಲಿದೆ. ಅದರ ಪಕ್ಕದಲ್ಲಿ ಒಂದು ಕಿತ್ತಳೆ ಹಣ್ಣು; ಸುಕ್ಕುಗಟ್ಟಿದ, ಒಣಗಿ ಸುರುಟಿದ ಕಿತ್ತಳೆ ಹಣ್ಣು.

ಅರಬಿಕ್ ಮೂಲ: ಗಝಾನ್ ಕನಾಫಾನಿ
ಕನ್ನಡಕ್ಕೆ: ಸ್ವಾಲಿಹ್ ತೋಡಾರ್

1 Comment

Leave a Reply

*