ಜಲಾಲ್ ಬರ್ಜಾಸ್/ಶಾಮಿಲ್ ಪುಳ್ಳಿಪ್ಪಾರ
ಜಲಾಲ್ ಬರ್ಜಾಸ್ ಸಮಕಾಲೀನ ಅರಬ್ ಸಾಹಿತ್ಯದ ಪ್ರಮುಖ ಲೇಖಕರಲ್ಲಿ ಒಬ್ಬರು. 2021ರಲ್ಲಿ ತಮ್ಮ ‘ದಫಾತಿರ್ ಅಲ್ ವರ್ರಾಕ್’ (The Bookseller’s Notebooks) ಕೃತಿಗೆ ಅರಬ್ ಸಾಹಿತ್ಯದ ಅತ್ಯುನ್ನತ ಗೌರವವಾದ ಅಂತರರಾಷ್ಟ್ರೀಯ ಅರೇಬಿಕ್ ಬುಕರ್ ಪ್ರಶಸ್ತಿ ಲಭಿಸಿತು.
ಜೋರ್ಡಾನ್ನ ಮಾದಬಾ ಪ್ರಾಂತ್ಯದ ಹನೀನಾ ಎಂಬ ಗ್ರಾಮದಲ್ಲಿ ಹುಟ್ಟಿರುವ ಬರ್ಜಾಸ್, ವಾಯುಪಡೆಯ ಏರೋನಾಟಿಕಲ್ ಎಂಜಿನಿಯರ್ ಆಗಿ ಕೆಲಸ ಮಾಡಿದ್ದರು. ಜೋರ್ಡಾನ್ನ ಮರುಭೂಮಿಗಳ ಏಕಾಂತ ಜೀವನದಲ್ಲಿದ್ದಾಗಲೇ ಅವರು ಓದು ಮತ್ತು ಬರವಣಿಗೆಯ ಗಂಭೀರ ಜಗತ್ತಿಗೆ ಕಾಲಿಟ್ಟರು.
ಅವರ ‘ನಶೀಜ್ ಅದ್ದುದ್ ಕ್ ‘ (The Duduk’s Whimper) ಎಂಬ ಕಾದಂಬರಿಯನ್ನು ಫ್ರಾನ್ಸ್ ಮತ್ತು ಮೊರೊಕ್ಕೊ ದೇಶಗಳ ಕೆಲವು ವಿಶ್ವವಿದ್ಯಾಲಯಗಳ ಪಠ್ಯಕ್ರಮದಲ್ಲಿ ಸೇರಿಸಲಾಗಿದೆ. ಸಾಂಪ್ರದಾಯಿಕ ಹಾಗೂ ಫ್ಯಾಸಿಸ್ಟ್ ಪ್ರವೃತ್ತಿಗಳನ್ನು ಪ್ರಶ್ನಿಸುವ ಅವರ ಕೃತಿಗಳು ಇಂದು ಅನೇಕ ಅಂತರರಾಷ್ಟ್ರೀಯ ವಿಶ್ವವಿದ್ಯಾಲಯಗಳಲ್ಲಿ ಸಂಶೋಧನಾ ವಿಷಯಗಳಾಗಿವೆ.
ಪ್ರಶ್ನೆ: ‘ದಫಾತಿರ್ ಅಲ್-ವರ್ರಾಕ್’ ಕಾದಂಬರಿಯಲ್ಲಿ ತೀವ್ರ ಸಂಕಷ್ಟದಲ್ಲಿರುವ ಒಬ್ಬ ಪುಸ್ತಕ ವ್ಯಾಪಾರಿ, ವಿಶ್ವಸಾಹಿತ್ಯದ ಖಳನಾಯಕರ ಮುಖವಾಡಗಳನ್ನು ಧರಿಸಿ ಸಮಾಜದ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಲು ಹೊರಡುತ್ತಾನೆ. ಈ ಕಥೆಯ ಹಿಂದಿರುವ ಸಾಮಾಜಿಕ ಹಿನ್ನೆಲೆ ಏನು?
ಜಲಾಲ್ ಬರ್ಜಾಸ್: ‘ದಫಾತಿರ್ ಅಲ್-ವರ್ರಾಕ್’ ಬರೆಯಲು ನನ್ನನ್ನು ಪ್ರೇರೇಪಿಸಿದ್ದು ಮಾನವೀಯ, ರಾಜಕೀಯ ಮತ್ತು ನೈತಿಕ ಕಾರಣಗಳು ಎಂದು ನಾನು ನಂಬುತ್ತೇನೆ.
ಜೀವನದ ಮುಖ್ಯವಾಹಿನಿಯಿಂದ ನಿಧಾನವಾಗಿ ಅಂಚಿಗೆ ತಳ್ಳಲ್ಪಡುತ್ತಿರುವ ಮನುಷ್ಯನ ಕುರಿತ ಚಿಂತೆ ನನ್ನನ್ನು ಸದಾ ಕಾಡುತ್ತಿತ್ತು. ಅವರು ಅಂಚಿಗೆ ಸರಿಯುವುದು ಅವರಲ್ಲಿ ಅರ್ಹತೆ ಅಥವಾ ಮೌಲ್ಯ ಇಲ್ಲದ ಕಾರಣದಿಂದಲ್ಲ. ಬದಲಾಗಿ, ಕ್ರೂರ ಜಾಗತೀಕರಣ ಮತ್ತು ಮಾರುಕಟ್ಟೆ ವ್ಯವಸ್ಥೆಗಳು ಮನುಷ್ಯನ ಮೌಲ್ಯವನ್ನು ಲಾಭ ಮತ್ತು ಉಪಭೋಗದ ಮಾನದಂಡಗಳಿಂದ ಮರುನಿರ್ವಚಿಸುತ್ತಿರುವುದರಿಂದ.
ಇಂದಿನ ಅರಬ್ ನಗರಗಳು ಒಂದು ತೀವ್ರ ವೈರುಧ್ಯವನ್ನು ಎದುರಿಸುತ್ತಿವೆ ಎಂದು ನನಗೆ ಅನಿಸುತ್ತದೆ. ಒಂದೆಡೆ ವೇಗವಾಗಿ ಬೆಳೆಯುತ್ತಿರುವ ಆಧುನಿಕತೆ; ಮತ್ತೊಂದೆಡೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಮನುಷ್ಯನ ಅಸಹಾಯಕತೆ.
ಆದ್ದರಿಂದ, ಅಧಿಕಾರ, ಮಾರುಕಟ್ಟೆ ವ್ಯವಸ್ಥೆ ಮತ್ತು ಈ ಮಾನಸಿಕ ಅಸಹಾಯಕತೆಯ ನಡುವಿನ ಸಂಬಂಧವನ್ನು ಪರಿಶೀಲಿಸುವ ಪ್ರಯತ್ನವೇ ಈ ಕಾದಂಬರಿ.
ಅದರ ಜೊತೆಗೆ, ನನ್ನನ್ನು ಯಾವಾಗಲೂ ಆತಂಕಕ್ಕೀಡುವ ಮಾಡುವ ಒಂದು ಪ್ರಶ್ನೆಯನ್ನು ನಾನು ಓದುಗರ ಮುಂದೆ ಇಡಲು ಬಯಸಿದೆ:
ಒಬ್ಬ ಮನುಷ್ಯ ತನ್ನ ಗೌರವವನ್ನೂ, ಸಮಾಜದಲ್ಲಿನ ಮಾನ್ಯತೆಯನ್ನೂ ಕಳೆದುಕೊಂಡಾಗ, ಅವನ ಕೋಪ ಯಾವ ಯಾವ ರೂಪಗಳಲ್ಲಿ ಹೊರಹೊಮ್ಮಬಹುದು?

ಪ್ರಶ್ನೆ: 2023ರಲ್ಲಿ ಪ್ರಕಟವಾದ ನಿಮ್ಮ ‘ನಶೀಜ್ ಅದ್ದುದ್ ಕ್’ (The Duduk’s Whimper) ಕಾದಂಬರಿ ಅಮ್ಮಾನ್, ಮೊಸುಲ್ ಮತ್ತು ಅರ್ಮೇನಿಯಾ ದೇಶಗಳ ಮೂಲಕ ಸಾಗುವ ಒಂದು ಪ್ರಯಾಣವನ್ನು ಚಿತ್ರಿಸುತ್ತದೆ. ಆದರೆ ಈ ಕೃತಿಯಲ್ಲಿ ಅತ್ಯಂತ ವಿಭಿನ್ನವಾಗಿ ಕಾಣುವುದು, ‘ದುದುಕ್’ ಎಂಬ ಸಂಗೀತ ವಾದ್ಯವನ್ನು ಮಾನವನ ದುಃಖದ ಸಂಕೇತವಾಗಿ ಬಳಸಿರುವುದು. ಸಾಮಾನ್ಯವಾಗಿ ಹಿನ್ನೆಲೆ ಸಂಗೀತವಾಗಿ ಉಳಿಯುವ ಒಂದು ವಾದ್ಯವನ್ನು ಕಥೆಯ ಪ್ರಮುಖ ಪಾತ್ರವನ್ನಾಗಿ ರೂಪಿಸುವುದರ ಹಿಂದಿನ ಪ್ರೇರಣೆ ಏನು?
ಜಲಾಲ್ ಬರ್ಜಾಸ್: ಈ ಕಾದಂಬರಿಯಲ್ಲಿ ಸಂಗೀತವೆಂದರೆ ಕಥೆಗೆ ಅಲಂಕಾರ ನೀಡುವ ಅಂಶ ಮಾತ್ರವಲ್ಲ. ದುಃಖ, ವಿರಹ, ಏಕಾಂತ ಇವುಗಳನ್ನು ಕೇವಲ ಪದಗಳಿಂದ ಸಂಪೂರ್ಣವಾಗಿ ಹೇಳಲು ಸಾಧ್ಯವಿಲ್ಲ. ಅಂತಹ ಕ್ಷಣಗಳಲ್ಲಿ ಪದಗಳಿಗಿಂತ ಸಂಗೀತವೇ ಹೆಚ್ಚು ಸ್ಪಷ್ಟವಾಗಿ ಮಾತನಾಡುತ್ತದೆ.
ದುದುಕ್ ಎಂಬ ಸಂಗೀತ ವಾದ್ಯದ ಸ್ವರಕ್ಕೆ ಒಂದು ವಿಶಿಷ್ಟ ಗುಣವಿದೆ. ಅದನ್ನು ಕೇಳಿದಾಗ ಮನಸ್ಸಿಗೆ ನೋವಾಗುತ್ತದೆ. ಆದರೆ ಅದೇ ಸಮಯದಲ್ಲಿ ಆ ಸ್ವರದಲ್ಲಿ ಎಂದಿಗೂ ಸೋಲೊಪ್ಪದ ಒಂದು ಅಂತರಂಗದ ಶಕ್ತಿಯೂ ಇರುತ್ತದೆ. ಆ ನೋವೂ, ಆ ಹೋರಾಟದ ಮನೋಭಾವವೂ ನನ್ನನ್ನು ಸೆಳೆದವು.
ಅಮ್ಮಾನ್ನಿಂದ ಅರ್ಮೇನಿಯಾವರೆಗೆ ಹರಡಿರುವ ಅನೇಕ ಜನರ ನೆನಪುಗಳು ಮತ್ತು ನೋವುಗಳನ್ನು ಪರಸ್ಪರ ಜೋಡಿಸುವ ಒಂದು ಸೇತುವೆಯಾಗಿ ನಾನು ಈ ಸಂಗೀತವನ್ನು ಬಳಸಿದೆ.
ಮನುಷ್ಯನಿಗೆ ಮಾತನಾಡಲು ಸಾಧ್ಯವಾಗದ ಕ್ಷಣದಲ್ಲಿ ಅವನ ಅಂತರಂಗದ ಆರ್ತನಾದವಾಗಿ ಬದಲಾಗುವ ಪಾತ್ರವೇ ಈ ಕಾದಂಬರಿಯಲ್ಲಿನ ದುದುಕ್.
ಪ್ರಶ್ನೆ: 2015ರಲ್ಲಿ ಪ್ರಕಟವಾದ ನಿಮ್ಮ ‘ಅಫಾಈ ಅನ್ನಾರ್’ (ಬೆಂಕಿಯ ಹಾವುಗಳು) ಕಾದಂಬರಿ ಗ್ರಾಮೀಣ ಬದುಕಿನ ಶೋಷಣೆಯ ಕುರಿತಾಗಿದೆ. ಇದರಲ್ಲಿ ಬರುವ ‘ಹಾವುಗಳು’ ಕೇವಲ ಪ್ರಾಣಿಗಳಲ್ಲ; ಅವು ಮನುಷ್ಯನೊಳಗಿನ ಭಯ ಮತ್ತು ಅಧಿಕಾರ ವ್ಯವಸ್ಥೆಗಳ ಸಂಕೇತಗಳಂತೆ ಕಾಣುತ್ತವೆ. ಫ್ಯಾಸಿಸಂ ಮತ್ತು ಮೂಢನಂಬಿಕೆಗಳನ್ನು ಸೂಚಿಸಲು ಈ ಸಂಕೇತವನ್ನು ಬಳಸಿದ ಬಗ್ಗೆ ಹೇಳುವಿರಾ?
ಜಲಾಲ್ ಬರ್ಜಾಸ್: ಮಾನವ ಕಲ್ಪನೆಯಲ್ಲಿ ಅತ್ಯಂತ ಆಳವಾಗಿ ಬೇರುಬಿಟ್ಟಿರುವ ಸಂಕೇತಗಳಲ್ಲಿ ಹಾವು ಒಂದಾಗಿದೆ. ಭಯ, ಪ್ರಲೋಭನೆ, ಜ್ಞಾನ, ಮರಣ ಇವೆಲ್ಲವೂ ಹಾವಿನೊಂದಿಗೆ ಜೋಡಿಸಿಕೊಂಡಿವೆ. ಬಹುತೇಕ ಎಲ್ಲಾ ಸಂಸ್ಕೃತಿಗಳ ಕಥೆಗಳಲ್ಲಿ ಹಾವು ಯಾವುದೋ ಒಂದು ರೂಪದಲ್ಲಿ ಕಾಣಿಸಿಕೊಳ್ಳುತ್ತದೆ.
ಈ ಸಂಕೇತ ನನ್ನನ್ನು ಸೆಳೆದ ಪ್ರಮುಖ ಕಾರಣವೆಂದರೆ, ಹಾವನ್ನು ನೋಡುವುದಕ್ಕೂ ಮುಂಚೆಯೇ ಅದರ ಭಯ ನಮ್ಮೊಳಗೆ ಹುಟ್ಟಿರುತ್ತದೆ. ಅದು ಅಲ್ಲಿ ಇರಬಹುದೆಂಬ ಕೇವಲ ಸಾಧ್ಯತೆಯೇ ಸಾಕು; ನಮ್ಮ ಮನಸ್ಸಿನಲ್ಲಿ ಆತಂಕವನ್ನು ಹುಟ್ಟಿಸುತ್ತದೆ.
ಇದು ಸಮಾಜದ ದಮನ ವ್ಯವಸ್ಥೆಗಳು ಕಾರ್ಯನಿರ್ವಹಿಸುವ ರೀತಿಯಂತೆಯೇ ಇದೆ. ಬಹುತೇಕ ಸರ್ವಾಧಿಕಾರಿ ವ್ಯವಸ್ಥೆಗಳು ಯಾವಾಗಲೂ ನೇರ ಹಿಂಸೆಯನ್ನು ಬಳಸಬೇಕಾಗುವುದಿಲ್ಲ. ‘ನಿನಗೆ ಶಿಕ್ಷೆಯಾಗಬಹುದು’ ಎಂಬ ಭಯವನ್ನು ಜನರ ಮನಸ್ಸಿನಲ್ಲಿ ಬಿತ್ತಿದರೆ ಸಾಕು. ನಂತರ ಜನರು ತಾವೇ ತಮ್ಮನ್ನು ನಿಯಂತ್ರಿಸಿಕೊಳ್ಳಲು, ತಮ್ಮ ಮಾತುಗಳನ್ನೇ ತಾವೇ ಸೆನ್ಸರ್ ಮಾಡಿಕೊಳ್ಳಲು ಆರಂಭಿಸುತ್ತಾರೆ.
ಅಲ್ಲಿಂದಲೇ ನನ್ನ ಕಾದಂಬರಿಯ ಹಾವುಗಳು, ವ್ಯಕ್ತಿಯ ಮತ್ತು ಸಮಾಜದ ಮನಸ್ಸಿನೊಳಗೆ ನುಗ್ಗಿ ಭಯವನ್ನು ಉತ್ಪಾದಿಸುವ ಎಲ್ಲ ವ್ಯವಸ್ಥೆಗಳ ಸಂಕೇತವಾಗಿ ರೂಪುಗೊಂಡವು.
ಅವುಗಳಲ್ಲಿ ವಿಭಿನ್ನತೆಯ ಭಯ, ಪ್ರಶ್ನಿಸುವ ಭಯ, ಸ್ವತಂತ್ರ ಚಿಂತನೆಯ ಭಯ, ಸಂಪ್ರದಾಯವನ್ನು ಮುರಿಯುವ ಭಯ ಇವೆಲ್ಲವೂ ಸೇರಿವೆ.
ಸಾಮಾಜಿಕ ಫ್ಯಾಸಿಸಂ ರಾಜಕೀಯ ಅಧಿಕಾರದಿಂದ ಮಾತ್ರ ಹುಟ್ಟುವುದಿಲ್ಲ. ಅಜ್ಞಾನ ಮತ್ತು ಮೂಢನಂಬಿಕೆಗಳು ಒಂದಾಗಿ ಸಮಾಜದೊಳಗೇ ದಮನವನ್ನು ಮರುಸೃಷ್ಟಿಸಿದಾಗಲೂ ಅದು ಹುಟ್ಟುತ್ತದೆ.
ಪ್ರಶ್ನೆ: ನಿಮ್ಮ 2017ರ ‘ಸಯ್ಯಿದಾತ್ ಅಲ್-ಹವಾಸ್ ಅಲ್-ಖಮ್ಸ್’ ಕಾದಂಬರಿಯಲ್ಲಿ ದೃಷ್ಟಿ, ಶ್ರವಣ ಸೇರಿದಂತೆ ಐದು ಇಂದ್ರಿಯಗಳನ್ನು ಐದು ಮಹಿಳೆಯರ ರೂಪದಲ್ಲಿ ಚಿತ್ರಿಸಿದ್ದೀರಿ. ಸಮಕಾಲೀನ ಅರಬ್ ಲೋಕದಲ್ಲಿ ಮಹಿಳೆಯರು ನಡೆಸುತ್ತಿರುವ ಹೋರಾಟವನ್ನು ಈ ಕಾದಂಬರಿ ಹೇಗೆ ಪ್ರತಿಬಿಂಬಿಸುತ್ತದೆ?
ಜಲಾಲ್ ಬರ್ಜಾಸ್: ಈ ಕಾದಂಬರಿಯಲ್ಲಿ ಮಹಿಳೆ ಕೇವಲ ಒಂದು ವಿಷಯವಲ್ಲ; ಲೋಕವನ್ನು ಪ್ರಶ್ನಿಸುವ ನನ್ನ ಸಹಯಾತ್ರಿಯಾಗಿದ್ದಾಳೆ. ಇಂದಿನ ಅರಬ್ ಲೋಕದ ಮಹಿಳೆ ಅತ್ಯಂತ ತೀವ್ರವಾದ ಬದಲಾವಣೆಗಳ ಮೂಲಕ ಸಾಗುತ್ತಿದ್ದಾಳೆ. ಅದು ಕೇವಲ ಹೊರಗಿನ ಹೋರಾಟವಲ್ಲ. ಶತಮಾನಗಳಿಂದ ಅವಳ ಮೇಲೆ ಹೇರಲ್ಪಟ್ಟಿರುವ ಭಯ ಮತ್ತು ಸಂಪ್ರದಾಯಗಳ ವಿರುದ್ಧ ನಡೆಯುವ ಆಂತರಿಕ ಹೋರಾಟವೂ ಆಗಿದೆ.
ಮನುಷ್ಯನು ತನ್ನ ಇಂದ್ರಿಯಗಳ ಮೂಲಕವೇ ಜಗತ್ತನ್ನು ಅರಿಯುತ್ತಾನೆ. ಸಮಕಾಲೀನ ಅರಬ್ ಲೋಕದ ಬಿಕ್ಕಟ್ಟನ್ನು ಕೇವಲ ರಾಜಕೀಯದ ಭಾಷೆಯಲ್ಲಿ ಹೇಳುವುದಕ್ಕಿಂತ, ಇಂದ್ರಿಯಗಳ ಅನುಭವಗಳ ಮೂಲಕ ಹೇಳಲು ನಾನು ಪ್ರಯತ್ನಿಸಿದೆ.
ಯುದ್ಧ ಮತ್ತು ರಾಜಕೀಯ ನಮ್ಮ ಇಂದ್ರಿಯಗಳನ್ನು ಹೇಗೆ ವಿರೂಪಗೊಳಿಸುತ್ತವೆ ಎಂಬುದನ್ನು ತೋರಿಸಲು ನಾನು ಈ ಫ್ಯಾಂಟಸಿ ಶೈಲಿಯನ್ನು ಆರಿಸಿಕೊಂಡೆ. ಈ ಕಾದಂಬರಿಯಲ್ಲಿ ಐದು ಇಂದ್ರಿಯಗಳು ಐದು ಮಹಿಳೆಯರಾಗಿ ಕಾಣಿಸಿಕೊಳ್ಳುವುದಕ್ಕೂ ಒಂದು ಕಾರಣವಿದೆ.
ಒಂದು ದೇಶದ ಪತನ ಆರಂಭವಾಗುವುದು ಅದರ ಇಂದ್ರಿಯಗಳ ಪತನದಿಂದಲೇ. ಜಗತ್ತನ್ನು ಸರಿಯಾಗಿ ನೋಡಲು, ಕೇಳಲು ಮತ್ತು ಅರ್ಥಮಾಡಿಕೊಳ್ಳಲು ಇರುವ ನಮ್ಮ ಸಾಮರ್ಥ್ಯವನ್ನು ಕಳೆದುಕೊಂಡಾಗ, ವಾಸ್ತವವೇ ಕಣ್ಮರೆಯಾಗುತ್ತದೆ. ಆ ಸ್ಥಿತಿಯನ್ನು ಫ್ಯಾಂಟಸಿಯ ಮೂಲಕ ಎದುರಿಸಲು ನಾನು ಪ್ರಯತ್ನಿಸಿದ್ದೇನೆ.

ಪ್ರಶ್ನೆ: ನಿಮ್ಮ ಕಾದಂಬರಿಗಳ ಪಾತ್ರಗಳು ಹೆಚ್ಚಾಗಿ ತೀವ್ರ ಮಾನಸಿಕ ಒತ್ತಡ ಮತ್ತು ಒಳಗಿನ ವಿಭಜನೆಗಳನ್ನು ಅನುಭವಿಸುತ್ತವೆ.
ಜಲಾಲ್ ಬರ್ಜಾಸ್: ಒಳಗಿನ ಜಗತ್ತು ಮತ್ತು ಹೊರಗಿನ ವಾಸ್ತವದ ನಡುವೆ ತೀವ್ರ ಸಂಘರ್ಷ ಉಂಟಾದಾಗ, ಆ ಅನುಭವವನ್ನು ವ್ಯಕ್ತಪಡಿಸಲು ಅತ್ಯಂತ ಪ್ರಾಮಾಣಿಕವಾದ ಭಾಷೆ ಮನೋವೈಜ್ಞಾನಿಕ ವಿಶ್ಲೇಷಣೆಯ ಭಾಷೆ.
ಮನುಷ್ಯನು ವೈರುಧ್ಯಗಳ ಅಂಚಿನಲ್ಲಿ ನಿಂತಾಗ, ಒಂದೇ ಸಮಯದಲ್ಲಿ ಅನೇಕ ಧ್ವನಿಗಳ ನಡುವೆ ಬದುಕಬೇಕಾದ ಪರಿಸ್ಥಿತಿ ಉಂಟಾಗುತ್ತದೆ.
ನನ್ನ ಕಾದಂಬರಿಗಳಲ್ಲಿ ನಾನು ಅನ್ವೇಷಿಸುವುದು ಇದನ್ನೇ. ಒಬ್ಬ ಮನುಷ್ಯನೊಳಗೆ ಒಂದೇ ಸಮಯದಲ್ಲಿ ಸಹಬಾಳ್ವೆ ನಡೆಸುವ ಪರಸ್ಪರ ವಿರೋಧಿ ಧ್ವನಿಗಳ ಪ್ರತೀಕಾತ್ಮಕ ಸ್ಥಿತಿ.
ಪ್ರಶ್ನೆ: ಮಧ್ಯಪ್ರಾಚ್ಯವು ರಾಜಕೀಯ ಅಸ್ಥಿರತೆ ಮತ್ತು ಯುದ್ಧಗಳಿಂದ ಬಳಲುತ್ತಿದೆ. ಈ ಅಶಾಂತ ಪರಿಸ್ಥಿತಿ ಅರಬ್ ಸಾಹಿತ್ಯವನ್ನು ಹೇಗೆ ಪ್ರಭಾವಿಸುತ್ತದೆ?
ಜಲಾಲ್ ಬರ್ಜಾಸ್: ಇಂದು ಮಧ್ಯಪ್ರಾಚ್ಯದ ಯುದ್ಧಗಳು ಮತ್ತು ನಿರಾಶ್ರಿತರ ಪ್ರವಾಹ ಸಾಹಿತ್ಯದ ಕಚ್ಚಾ ವಸ್ತುಗಳಾಗಿವೆ.
ಸಾಹಿತ್ಯಕ್ಕೆ ಯುದ್ಧವನ್ನು ನಿಲ್ಲಿಸಲು ಸಾಧ್ಯವಿಲ್ಲ. ನಿರಾಶ್ರಿತರನ್ನು ಅವರ ಮನೆಗಳಿಗೆ ಹಿಂದಿರುಗಿಸಲು ಸಾಧ್ಯವಿಲ್ಲ. ಆದರೆ ಅದಕ್ಕಿಂತ ದೊಡ್ಡ ಕೆಲಸವನ್ನು ಅದು ಮಾಡಬಲ್ಲದು. ಮನುಷ್ಯರ ನೋವು ಮತ್ತು ನೆನಪುಗಳು ಮರೆವಿನ ಕತ್ತಲೆಯಲ್ಲಿ ಕಣ್ಮರೆಯಾಗದಂತೆ ಅವುಗಳನ್ನು ಉಳಿಸಬಲ್ಲದು.
ಇದು ಸಣ್ಣ ಪ್ರತಿರೋಧವಲ್ಲ. ಅಕ್ಷರಗಳಿಗೆ ಮನುಷ್ಯನ ಗಾಯಗಳನ್ನು ವಿಸ್ಮೃತಿಯ ವಿನಾಶದಿಂದ ರಕ್ಷಿಸುವ ಸಾಮರ್ಥ್ಯವಿದೆ. ಇದೇ ಸಾಹಿತ್ಯದ ಅತ್ಯಂತ ದೊಡ್ಡ ಶಕ್ತಿ.
ಪ್ರಶ್ನೆ: ನಿಮ್ಮ 2019ರ ಪ್ರವಾಸಕಥನ ‘ಸಲ್ಸಲತುನ್ ಮಿನ್ ತರಾಇಖಿಲ್ ಹುಬ್ಬ್’ (ಪ್ರೇಮದ ಮಾರ್ಗಗಳು) ಕೇವಲ ಸ್ಥಳಗಳ ವರ್ಣನೆಯಲ್ಲ. ವಿವಿಧ ಸಂಸ್ಕೃತಿಗಳ ಜನರ ಬದುಕಿನ ಬಗ್ಗೆ ಆಳವಾದ ಅವಲೋಕನವಿದೆ. ಈ ಕೃತಿಯ ಕುರಿತು ಹೇಳುವಿರಾ?
ಜಲಾಲ್ ಬರ್ಜಾಸ್: ನನ್ನ ಪ್ರಯಾಣಗಳಲ್ಲಿ ನಾನು ಅರಿತ ಒಂದು ಸತ್ಯವೆಂದರೆ, ಭೌಗೋಳಿಕ ಗಡಿಗಳು ಬೇರೆಬೇರೆ ಆಗಿರಬಹುದು; ಆದರೆ ಮನುಷ್ಯ ಪ್ರೀತಿಸುವ ವಿಧಾನ ಎಲ್ಲೆಡೆ ಒಂದೇ ಆಗಿರುತ್ತದೆ. ಅದಕ್ಕಾಗಿಯೇ ಆ ಕೃತಿಗೆ ‘ಪ್ರೇಮದ ಮಾರ್ಗಗಳು’ ಎಂಬ ಹೆಸರಿಟ್ಟೆ. ನಾನು ಕಾದಂಬರಿಕಾರನ ದೃಷ್ಟಿಯಿಂದ ಪ್ರಯಾಣಿಸಿದ್ದರಿಂದ, ಅಲ್ಲಿ ಕೇವಲ ದೃಶ್ಯವರ್ಣನೆಗಳಿಲ್ಲ. ಪ್ರತಿಯೊಂದು ಸ್ಥಳದ ಹಿಂದೆ ಅಡಗಿರುವ ಕಥೆಗಳು, ಜನರ ಜೀವನಸಂಘರ್ಷಗಳು ಮತ್ತು ಅವರ ಸಂಸ್ಕೃತಿಯನ್ನು ದಾಖಲಿಸಲು ನಾನು ಪ್ರಯತ್ನಿಸಿದ್ದೇನೆ.
ಪ್ರಶ್ನೆ: ಇತ್ತೀಚಿನ ವರ್ಷಗಳಲ್ಲಿ ಅರಬ್ ಸಾಹಿತ್ಯ ಅನೇಕ ಜಾಗತಿಕ ಭಾಷೆಗಳಿಗೆ ಅನುವಾದವಾಗುತ್ತಿದೆ. ಆದರೂ ಅರಬ್ ಲೇಖಕರಿಗೆ ಜಾಗತಿಕ ಮಟ್ಟದಲ್ಲಿ ಸಲ್ಲಬೇಕಾದ ಮಾನ್ಯತೆ ದೊರೆಯುತ್ತಿದೆ ಎಂದು ನೀವು ಭಾವಿಸುತ್ತೀರಾ?
ಜಲಾಲ್ ಬರ್ಜಾಸ್: ಅನುವಾದಗಳು ಹೆಚ್ಚುತ್ತಿರುವುದು ನಿಜ. ಸಊದ್ ಅಲ್-ಸನೂಸಿ, ಜೋಖಾ ಅಲ್-ಹಾರ್ತಿ, ಅಹ್ಮದ್ ಸಾದಾವಿ ಮೊದಲಾದವರ ಕೃತಿಗಳು ಭಾರತೀಯ ಭಾಷೆಗಳಿಗೆ ಅನುವಾದವಾಗಿವೆ. ಹಾಗೆಯೇ ವೈಕಂ ಮುಹಮ್ಮದ್ ಬಶೀರ್ ಮತ್ತು ತಕಝಿ ಶಿವಶಂಕರ ಪಿಳ್ಳೈ ಅವರ ಕೃತಿಗಳು ಅರೇಬಿಕ್ಗೆ ಅನುವಾದವಾಗಿರುವುದನ್ನೂ ನಾನು ಕಂಡಿದ್ದೇನೆ. ಇದು ಮಹತ್ವದ ಸಾಂಸ್ಕೃತಿಕ ವಿನಿಮಯ. ಆದರೆ ಇದು ಇನ್ನೂ ಸಮಾನತೆಯ ಸಾಂಸ್ಕೃತಿಕ ಸಂವಾದವಾಗಿ ರೂಪುಗೊಂಡಿಲ್ಲ.
ಅನೇಕ ಬಾರಿ ಪಾಶ್ಚಾತ್ಯ ಪ್ರಕಾಶನ ಮಾರುಕಟ್ಟೆಗೆ ಅರಬ್ ಜಗತ್ತಿನ ಬಗ್ಗೆ ಕೆಲವು ಪೂರ್ವಗ್ರಹಗಳಿರುತ್ತವೆ. ರಾಜಕೀಯ ಸಂಘರ್ಷಗಳು ಅಥವಾ ವಿಚಿತ್ರ ಸ್ಥಳೀಯ ಅಂಶಗಳಿರುವ ಕೃತಿಗಳ ಕಡೆಗೇ ಅವರು ಹೆಚ್ಚು ಗಮನ ಹರಿಸುತ್ತಾರೆ. ಆದರೆ ಅರಬ್ ಸಾಹಿತ್ಯ ಅದಕ್ಕಿಂತ ಬಹಳ ವಿಶಾಲವಾದುದು.




ಅದು ಆಧುನಿಕತೆಯನ್ನೂ ಪ್ರಾಚೀನ ಆಧ್ಯಾತ್ಮಿಕ, ತಾತ್ವಿಕ ಸ್ಮೃತಿಗಳನ್ನೂ ಒಂದೇ ಸಮಯದಲ್ಲಿ ಹೊತ್ತು ಸಾಗುವ ಮಾಂತ್ರಿಕ ಸಾಹಿತ್ಯಭೂಮಿ. ಅರಬ್ ಸಾಹಿತ್ಯವು ಅತ್ಯಂತ ಆಳವಾದ ತಾತ್ವಿಕ ಮತ್ತು ಸಾರ್ವತ್ರಿಕ ಮಾನವೀಯ ಪ್ರಶ್ನೆಗಳನ್ನು ಚರ್ಚಿಸುವ ಸಾಹಿತ್ಯ. ಆದ್ದರಿಂದ, ಅರಬ್ ಲೇಖಕರನ್ನು ಕೇವಲ ಒಂದು ಪ್ರದೇಶದ ಲೇಖಕರೆಂದು ಅಲ್ಲ; ಜಾಗತಿಕ ಮಾನವನ ಸಂಕಟಗಳನ್ನು ಬರೆಯುವ ವಿಶ್ವಲೇಖಕರಾಗಿ ನೋಡಬೇಕಾದ ಕಾಲ ಬರಬೇಕು.
ಪ್ರಶ್ನೆ: ಭಾರತೀಯ ಸಾಹಿತ್ಯವನ್ನು ನೀವು ಹೇಗೆ ನೋಡುತ್ತೀರಿ? ನಿಮ್ಮನ್ನು ಪ್ರಭಾವಿಸಿದ ಭಾರತೀಯ ಕೃತಿಗಳು ಯಾವುವು?
ಜಲಾಲ್ ಬರ್ಜಾಸ್: ಭಾರತೀಯ ಸಾಹಿತ್ಯ ಅಪಾರ ಶ್ರೀಮಂತಿಕೆಯೂ ಅದ್ಭುತ ವೈವಿಧ್ಯವೆಯಿಂದ ಕೂಡಿದ. ಅರುಂಧತಿ ರಾಯ್ ಅವರ The God of Small Things ನನ್ನನ್ನು ಅತ್ಯಂತ ಆಳವಾಗಿ ಸ್ಪರ್ಶಿಸಿದ ಕೃತಿಗಳಲ್ಲಿ ಒಂದು.
ಅದೇ ರೀತಿ ವಿಕ್ರಂ ಸೇಟ್ ಅವರ ಸಾಮಾಜಿಕ ಕಾದಂಬರಿಗಳು ಹಾಗೂ ಅಮಿತಾವ್ ಘೋಷ್ ಅವರ ಇತಿಹಾಸ ಮತ್ತು ಮಾನವಶಾಸ್ತ್ರವನ್ನು ಒಳಗೊಂಡ ಬರವಣಿಗೆಗಳು, ಇತಿಹಾಸವು ವ್ಯಕ್ತಿಗಳ ಬದುಕನ್ನು ಹೇಗೆ ಬದಲಾಯಿಸುತ್ತದೆ ಎಂಬುದನ್ನು ಅದ್ಭುತವಾಗಿ ತೋರಿಸುತ್ತವೆ.
ಬಹುಸಂಸ್ಕೃತಿಗಳು ಮತ್ತು ವೈರುಧ್ಯಗಳಿಂದ ಕೂಡಿದ ಒಂದು ಮಹತ್ತರ ಸಮಾಜದ ಆತ್ಮವನ್ನು ಸಾಹಿತ್ಯವಾಗಿ ಪರಿವರ್ತಿಸುವ ಭಾರತೀಯ ಲೇಖಕರ ಸಾಮರ್ಥ್ಯವು ವಿಶ್ವಸಾಹಿತ್ಯಕ್ಕೂ ಒಂದು ಪಾಠವಾಗಿದೆ.
ಪ್ರಶ್ನೆ: ಅಂತರರಾಷ್ಟ್ರೀಯ ಅರೇಬಿಕ್ ಬುಕರ್ ಪ್ರಶಸ್ತಿಯ ಕಾರ್ಯಾಗಾರಗಳು, ದುಬೈಯ ಮೊಹಮ್ಮದ್ ಬಿನ್ ರಾಶಿದ್ ಕೇಂದ್ರ, ಸೌದಿ ಅರೇಬಿಯಾದ ಕಿಂಗ್ ಅಬ್ದುಲ್ ಅಜೀಜ್ ಸೆಂಟರ್ ಫಾರ್ ವರ್ಲ್ಡ್ ಕಲ್ಚರ್ (ಇಥ್ರಾ), ಜೋರ್ಡನ್ ನರೇಟಿವ್ ಲ್ಯಾಬೊರೇಟರಿ ಮತ್ತು ಜೋರ್ಡನ್ ಸಂಸ್ಕೃತಿ ಸಚಿವಾಲಯದ ಕಾರ್ಯಾಗಾರಗಳ ಮೂಲಕ ನೀವು ಹೊಸ ತಲೆಮಾರಿನ ಅನೇಕ ಲೇಖಕರೊಂದಿಗೆ ಕೆಲಸ ಮಾಡಿದ್ದೀರಿ. ಹೊಸ ಲೇಖಕರಿಗೆ ನಿಮ್ಮ ಸಲಹೆ ಏನು?
ಜಲಾಲ್ ಬರ್ಜಾಸ್: ಬೇಗ ಪ್ರಸಿದ್ಧರಾಗಬೇಕೆಂಬ ಆಸೆಗಾಗಿ ಅಥವಾ ಪ್ರಭಾವಲಯವನ್ನು ನಿರ್ಮಿಸಿಕೊಳ್ಳಬೇಕೆಂಬ ಉದ್ದೇಶಕ್ಕಾಗಿ ಬರೆಯಬೇಡಿ.
ಒಂದು ಕಾದಂಬರಿ ಕೇವಲ ಬೌದ್ಧಿಕ ಕಲ್ಪನೆಯಿಂದ ಹುಟ್ಟುವುದಿಲ್ಲ. ಅದು ಲೇಖಕನ ಬದುಕಿನ ಅನುಭವ ಮತ್ತು ಅವನ ಮಾನವೀಯ ಸ್ಪಂದನೆಯ ಜೀವಂತ ಸಂಬಂಧದಿಂದ ಹುಟ್ಟುತ್ತದೆ. ಕಥಾಹಂದರ, ತಂತ್ರ, ರಚನಾ ಕೌಶಲ ಇವೆಲ್ಲ ನಂತರದ ವಿಷಯಗಳು.
ಮೊದಲು ಲೇಖಕನಿಗೆ ನಿಜವಾಗಿಯೂ ಹೇಳಬೇಕಾದ ಯಾವುದೋ ಒಂದು ಸತ್ಯ ಇರಬೇಕು. ಅದನ್ನು ಯಾವುದೇ ಭಯವಿಲ್ಲದೆ ಎದುರಿಸಿ ಬರೆಯುವ ಧೈರ್ಯ ಇರಬೇಕು.
ತಾನು ಬರೆಯುವುದು ಕೇವಲ ಭಾಷೆಯ ಅಲಂಕಾರವಲ್ಲ; ಅದು ಅರಿವಿನ, ಪ್ರತಿರೋಧದ ಮತ್ತು ಮಾನವೀಯ ಸತ್ಯದ ಒಂದು ರೂಪ ಎಂಬ ಭಾವನೆ ಲೇಖಕನಲ್ಲಿ ಮೂಡಿದಾಗ ಮಾತ್ರ ಒಂದು ಕೃತಿಗೆ ಜೀವ ಬರುತ್ತದೆ. ಆಗ ಮಾತ್ರ ಆ ಕೃತಿ ಸಮಾಜದೊಂದಿಗೆ ಜೀವಂತ ಸಂವಾದ ನಡೆಸಬಲ್ಲದು.
ಕನ್ನಡ : ಸ್ವಾಲಿಹ್ ತೋಡಾರ್

ಸ್ವಾಲಿಹ್ ತೋಡಾರ್ ಅವರು ಕನ್ನಡದ ಲೇಖಕ, ಅನುವಾದಕ ಮತ್ತು ಕವಿ. ‘ಇಶಾರ’ ಪಾಕ್ಷಿಕ ಮತ್ತು ವಾರ್ತಾಭಾರತಿ ಪತ್ರಿಕೆಯಲ್ಲಿ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದಾರೆ. ಅರುವತ್ತಕ್ಕೂ ಮಿಕ್ಕ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಮಾರ್ಟಿನ್ ಲಿಂಗ್ಸ್ ಅವರ ವಿಶ್ವಪ್ರಸಿದ್ಧ ಕೃತಿ Muhammad: His Life Based on the Earliest Sources, ಡಾ. ಹುಸೈನ್ ರಂಡತ್ತಾನಿ ಅವರ ‘ಅರಿಯಪ್ಪೆಡಾತ ಇಂಡಿಯಾ’ ಮೊದಲಾದ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ‘ರೂಮಿ ಕತೆಗಳು’ ಅವರ ಇತ್ತೀಚೆಗೆ ಪ್ರಕಟವಾದ ಕೃತಿ. ಎಪಿ ಉಸ್ತಾದರ ಆತ್ಮಕಥೆಯನ್ನು ಕನ್ನಡಕ್ಕೆ ಅನುವಾದಿಸಿದ ಹೆಗ್ಗಳಿಕೆ ಇವರದು
🤍💟♥️