ಎರಡೂ ಮಹಾಯುದ್ಧಗಳ ನಂತರ ಪ್ರಕ್ಷುಬ್ಧಗೊಂಡ ಯುರೋಪಿನ ಸಮಾಜದಲ್ಲಿ ಮನುಷ್ಯನ ವಿಕ್ಷಿಪ್ತ ಮನಸ್ಥಿತಿಯನ್ನು ದಾಖಲಿಸುವುದರಲ್ಲಿ ಜರ್ಮನಿಯ ಫ್ರಾಂಜ್ ಕಾಫ್ಕಾ, ಫ್ರಾನ್ಸಿನ ಜಿನ್ ಪಾಲ್ ಸಾರ್ತ್ರೆ ಮತ್ತು ಆಲ್ಬರ್ಟ್ ಕಾಮು ಹೆಸರಾದವರು. ಸಾರ್ತ್ರೆ ತಾರ್ಕಿಕ ಅಸ್ತಿತ್ವವಾದಿ. ಒಬ್ಬ ಚಿಂತಕ. ಕಾಫ್ಕಾ ಹಾಗೂ ಕಾಮು ಅಸಾಧಾರಣ ಮಾನವಿಕ ಪ್ರಜ್ಞೆಯುಳ್ಳ ಸೃಜನಶೀಲ ಕಲೆಗಾರರು. ಆಲ್ಬರ್ಟ್ ಕಾಮು ಬರೆದ ‘ದಿ ಔಟ್ ಸೈಡರ್’ ಜಗತ್ತಿನ ಅತ್ಯುತ್ತಮ ಕಾದಂಬರಿಗಳಲ್ಲಿ ಪ್ರಮುಖವಾದದ್ದು. ಈ ಕಾದಂಬರಿ 1942ರಲ್ಲಿ ಮೊದಲು L’ETRANGER ಎಂಬ ಶೀರ್ಷಿಕೆಯಿಂದ ಫ್ರೆಂಚ್ ಭಾಷೆಯಲ್ಲಿ ಪ್ರಕಟವಾಯಿತು. 1946ರಲ್ಲಿ ಅಮೆರಿಕದ ಹ್ಯಾಮಿಶ್ ಹ್ಯಾಮಿಲ್ಟನ್ ಅವರು ‘ದಿ ಸ್ಟ್ರೇಂಜರ್’ ಪದದ ಅರ್ಥಕ್ಕೆ ಸಂವಾದಿಯಾಗಿ ‘ದಿ ಔಟ್ಸೈಡರ್’ ಎನ್ನುವ ಟೈಟಲ್ನಿಂದ ಮೊದಲು ಇಂಗ್ಲೀಷಿಗೆ ಅನುವಾದಿಸಿದರು. ನಂತರ ಈ ಕೃತಿ ಜಗತ್ಪ್ರಸಿದ್ಧಿಯನ್ನು ಪಡೆಯಿತು. ಪಾಶ್ಚಾತ್ಯರಲ್ಲಿ ಅಸಂಗತ (ಅಬ್ಸರ್ಡ್) ದೃಷ್ಟಿಕೋನದಿಂದ ಬಂದ ಈ ಬಗೆಯ ಸಾಹಿತ್ಯ ಒಂದು ದೊಡ್ಡ ವೈಚಾರಿಕ ಕ್ರಾಂತಿಯನ್ನೇ ಉಂಟುಮಾಡಿತು. ಕಾಮು ‘ಮಿಥ್ ಆಫ್ ಸಿಸಿಯಫಸ್’(1942), ‘ದಿ ರೆಬೆಲ್’ (1957) ಕೃತಿಗಳ ಮೂಲಕ ಪಾಶ್ಚಾತ್ಯ ಚಿಂತನೆಯಲ್ಲಿ ಸಮರ್ಥವಾದ ಬರಹಗಾರನಾದಂತೆಯೇ ‘ದಿ ಔಟ್ಸೈಡರ್’ (1942), ‘ದಿ ಪ್ಲೇಗ್’ (1947) , ‘ದಿ ಪಾಲ್’ (1956) ಕಾದಂಬರಿಗಳು ಮತ್ತು ‘ಕ್ಯಾಲಿಗುಲ’ (1942), ‘ಕ್ರಾಸ್ ಪರ್ಪಸ್’ (1944) ಎಂಬ ನಾಟಕಗಳು, ಸಣ್ಣಕತೆಯ ಸಂಗ್ರಹವಾದ ‘ಎಕ್ಸೈಲ್ ಅಂಡ್ ದಿ ಕಿಂಗ್ಡಮ್’ (1957) ಕೃತಿಗಳ ಮೂಲಕ ತನ್ನ ಅಗಾಧವಾದ ಸೃಜನಶೀಲ ಸ್ವಭಾವವನ್ನು ದಾಖಲಿಸಿದ. ಈ ಕೃತಿಗಳು ತನ್ನ ಪ್ರಸ್ತುತತೆಯನ್ನು ಇವತ್ತಿನವರೆಗೂ ಕಿಂಚಿತ್ತೂ ಕಳೆದುಕೊಳ್ಳದೆ ಇರುವುದು ಮನುಷ್ಯ ಸ್ವಭಾವದ ಸೂಕ್ಷ್ಮ ಮತ್ತು ತೀವ್ರವಾದ ಕ್ಷಣಗಳನ್ನು ಅಪೂರ್ವ ಒಳನೋಟಗಳಲ್ಲಿ ತೆರೆದಿಡುತ್ತವೆ ಎಂಬ ಕಾರಣದಿಂದ. ಡಿ.ಎ. ಶಂಕರ್ ಅವರು 1971ರಲ್ಲಿ ಇಂಗ್ಲೀಷಿನ ‘ದಿ ಔಟ್ಸೈಡರ್’ ಕಾದಂಬರಿಯನ್ನು ಕನ್ನಡಕ್ಕೆ ‘ಅನ್ಯ’ ಎಂಬ ಹೆಸರಿನಿಂದ ಅನುವಾದ ಮಾಡುತ್ತಾರೆ. ಯಶವಂತ ಚಿತ್ತಾಲರ ಶಿಕಾರಿಯನ್ನು ಕಾಫ್ಕನ ‘ದಿ ಟ್ರಯಲ್’ ಕಾದಂಬರಿಯ ಚೌಕಟ್ಟಿನಲ್ಲಿಟ್ಟು ಚರ್ಚಿಸಿದಂತೆ ಕನ್ನಡದ ಸಾಹಿತ್ಯ ಪರಂಪರೆಯಲ್ಲಿಯೇ ಅನೇಕ ಪಠ್ಯಗಳನ್ನು ಕಾಮು, ಕಾಫ್ಕ, ಸಾರ್ತ್ರೆ ಮತ್ತು ರಷ್ಯಾದ ದಾಸ್ತೋವೆಸ್ಕಿ ಬರಹಗಳ ಪ್ರಭಾವಗಳಿಂದ ನೋಡುವ ಪ್ರಯತ್ನಗಳನ್ನು ಮಾಡಲಾಗಿದೆ. ಈ ಬರಹಗಾರರು ‘ಕನ್ನಡ ಸಾಹಿತ್ಯದ ಮೇಲೆ ದಾಳಿ ಮಾಡಲು ಬಂದ ದಾಳಿಕೋರರು’ ಎಂದು ಇವರನ್ನು ತಿರಸ್ಕರಿಸುವ ವರ್ಗವೊಂದಿದೆ. ಆದರೆ ಇವರ ಲೋಕಗ್ರಹಿಕೆಯಿಂದ ಪ್ರೇರಣೆಗೊಂಡು ಕನ್ನಡಕ್ಕೆ ಅಗಾಧವಾದದ್ದನ್ನು ನೀಡಿದವರಿದ್ದಾರೆ. ಕಾಮುವಿನ ‘ಕ್ಯಾಲಿಗುಲ’ದ ಐಡಿಯಾ ‘ತುಘಲಕ್’ನಲ್ಲಿ, ‘ದಿ ಪ್ಲೇಗ್’ ಹಾಗೂ ‘ದಿ ಔಟ್ಸೈಡರ್’ ಕೃತಿಗಳ ಐಡಿಯಾ ‘ಸಂಸ್ಕಾರ’ದಲ್ಲಿ, ಸಾರ್ತ್ರೆಯ ಅಸ್ತಿತ್ವವಾದದ ಐಡಿಯಾ ಹಾಗೂ ಕಾಮುವಿನ ‘ದಿ ಫಾಲ್’ ಕಾದಂಬರಿಯ ತಾಂತ್ರಿಕ ಐಡಿಯಾ ‘ಸ್ವರೂಪ’ದಲ್ಲಿ, ದಾಸ್ತೋವೆಸ್ಕಿಯ ‘ದಿ ಚರ್ಚ್’ ಎಂಬ ರಶಿಯನ್ ಕಾದಂಬರಿಯ ಐಡಿಯಾ ‘ಭಾರತೀಪುರ’ದಲ್ಲಿ, ಲಂಕೇಶರ ನಾಟಕಗಳಲ್ಲಿ ಪಾಶ್ಚಾತ್ಯ ಸಾಹಿತ್ಯದಲ್ಲಿನ ‘ಅಂಗರ್ ಥಿಯೇಟರ್’ ಹಾಗೂ ‘ಅಬ್ಬರ್ಡ್ ಥಿಯೇಟರ್’ಗಳಲ್ಲಿನ ಐಡಿಯಾಗಳಿರುವುದನ್ನು ಗುರುತಿಸುತ್ತೇವೆ. ಕಾಲಕಾಲಕ್ಕೆ ಈ ಬಗೆಯ ಬರಹಗಳು ಕನ್ನಡದಲ್ಲಿ ಅನುವಾದಗೊಂಡಿವೆ. ಕಾಮುನ ‘ದಿ ಔಟ್ಸೈಡರ್’ ಕಾದಂಬರಿ ‘ಅನ್ಯ’ ಮತ್ತು ‘ಕ್ಯಾಲಿಗುಲ ಅಂಡ್ ಕ್ರಾಸ್ ಪರ್ಪಸ್’ ನಾಟಗಳನ್ನು ‘ಕಾಲಿಗುಲ ಮತ್ತು ತಪ್ಪಿದ ಎಳೆ’, ಎಂದು ಡಿ.ಎ. ಶಂಕರ್, ‘ದಿ ಪ್ಲೇಗ್’ ಕಾದಂಬರಿಯನ್ನು ಎಚ್.ಎಸ್. ರಾಘವೇಂದ್ರರಾವ್ ಅನುವಾದ ಮಾಡಿದ್ದಾರೆ. ಡಾ. ಪ್ರಭಾ ಖೇತಾನ್ ಅವರ ಹಿಂದಿ ಮೂಲದ ‘ಆಲ್ಬರ್ಟ್ ಕಾಮೂ’ ಪುಸ್ತಕವನ್ನು ಪ್ರಭಾಕರ ಮಳಿಯೆ ಕನ್ನಡಕ್ಕೆ ತಂದಿದ್ದಾರೆ. ಕೆ. ಸತ್ಯನಾರಾಯಣಸ್ವಾಮಿ ಮತ್ತು ಗೋವರ್ಧನ ನವಿಲೇಹಾಳ್ ಸಂಪಾದಿಸಿದ ‘ಆಲ್ಬರ್ಟ್ ಕಾಮೂ ನೂರರ ನೆನಪು’, ಕೇಶವ ಮಳಗಿ ಅವರ ‘ಆಲ್ಬರ್ಟ್ ಕಾಮು ತರುಣ ವಾಚಿಕೆ’ ಪುಸ್ತಕವನ್ನೊಳಗೊಂಡು ಕಾಮು ಬರಹಗಳು ಕನ್ನಡದಲ್ಲಿ ಲಭ್ಯವಿವೆ. ಡಿ.ಎ. ಶಂಕರ್ ಅವರು ‘ದಿ ಔಟ್ಸೈಡರ್’ ಕಾದಂಬರಿಯನ್ನು ಅನುವಾದ ಮಾಡುವ ಮುಂಚೆಯೇ ಕನ್ನಡ ಓದುಗರು ಇದನ್ನಾಗಲೇ ಓದಿದ್ದರು. ನನಗೆ ಕನ್ನಡ ವಿಶ್ವವಿದ್ಯಾಲಯದ ಭಾಷಾಂತರ ಅಧ್ಯಯನ ವಿಭಾಗದ ‘ವ್ಯಾಖ್ಯಾನ’ ಕಾರ್ಯಕ್ರಮಕ್ಕೆ ಮಾತಾಡಬೇಕಾದ ಕಾರಣಕ್ಕಾಗಿ ಈ ಕಾದಂಬರಿ ಓದುವ ಅವಕಾಶ ಮತ್ತು ಹೊಣೆಗಾರಿಕೆ ಒದಗಿತು.
ನಾಗರಿಕ ಸಮಾಜದ ನಿಯಮಗಳು ‘ಅಪರಾಧ ಮತ್ತು ಶಿಕ್ಷೆ’ಯ ಅನುಕ್ರಮಣಿಕೆಯಲ್ಲಿ ರೂಪಗೊಂಡಿವೆ. ಯಾರು ಅಪರಾಧ ಮಾಡುತ್ತಾರೋ ಅದಕ್ಕೆ ತಕ್ಕ ಶಿಕ್ಷೆಯಿರುತ್ತದೆ. ಆದರೆ ಈ ನಿಯಮವೇ ತಲೆಕೆಳಗಾದರೆ ಹೇಗೆ? ಶಿಕ್ಷೆ ವಿಧಿಸುವುದಕ್ಕೆ ಕಾರಣವಾದ ಅಪರಾಧ ಯಾವುದು ಎಂಬುದೇ ಸ್ಪಷ್ಟಗೊಳ್ಳದಿದ್ದಾಗ, ಅಪರಾಧವನ್ನು ಮುಖ್ಯ ಮಾಡದೆ ಸಮಾಜದ ರೂಢಿಗತ ನಂಬಿಕೆಗಳನ್ನೇ ಸಾಕ್ಷಿಯಾಗಿ ವ್ಯಕ್ತಿಯ ಚಾರಿತ್ರ್ಯದಿಂದ ಶಿಕ್ಷೆಯನ್ನು ನಿರ್ಧರಿಸುವ ಅಪಾಯಗಳನ್ನು ಈ ಲೋಕ ತೆರೆದಿಡುತ್ತದೆ. ಅಪರಾಧ ಮತ್ತು ಶಿಕ್ಷೆ ಏನು ಎಂದು ಅದನ್ನು ಕೊಡುವವರಿಗಾದರೂ ಗೊತ್ತಿರಬೇಕು. ಶಿಕ್ಷೆಗೆ ಒಳಪಡುವವನಿಗಾದರೂ ಗೊತ್ತಿರಬೇಕು. ಇಬ್ಬರಿಗೂ ಗೊತ್ತಿಲ್ಲದಿರುವ ಸ್ಥಿತಿಯಲ್ಲಿ ಶಿಕ್ಷೆಯನ್ನು ಮಾತ್ರ ಅನುಭವಿಸಲೇಬೇಕಾದ ಹೊಣೆಗಾರಿಕೆ ಬರುತ್ತದೆ. ಇಂತಹ ತಲೆಕೆಳಗಾದ ಲೋಕವನ್ನು, ತಲೆಕೆಳಗಾದ ಲೋಕಗ್ರಹಿಕೆಯನ್ನು ಕಾಮು ‘ದಿ ಔಟ್ಸೈಡರ್’ನಲ್ಲಿ ತೆರೆದಿಡುತ್ತಾನೆ. ‘ಅಪರಾಧ ಮತ್ತು ಶಿಕ್ಷೆ’ಗಳ ನಡುವಿನ ಈ ಜಗತ್ತು ಕನ್ನಡಕ್ಕೆ ಹೊಸಬಗೆಯ ಆಲೋಚನಾ ಕ್ರಮಗಳನ್ನು ಈ ಮೂಲಕ ನೀಡಿದೆ. ‘ಅನ್ಯ’ ಕಾದಂಬರಿ ನಮಗೆ ಮುಖ್ಯವಾಗುವುದು ಎರಡು ಕಾರಣಗಳಿಗಾಗಿ. ಯುರೋಪಿನ ದೇಶಗಳ ಸಂಪ್ರದಾಯಸ್ಥ ಪರಂಪರೆಗಳ ವಿರುದ್ಧದ ಬಂಡಾಯದ ದನಿ ಎಂಬ ಕಾರಣಕ್ಕೆ, ಇನ್ನೊಂದು ಆಧುನಿಕ ಜಗತ್ತಿನ ವಿಷಕ್ಕೆ ಮದ್ದು ಎಂಬ ಕಾರಣಕ್ಕೆ. ಈ ಕಾದಂಬರಿ ಪರಂಪರೆ ಮತ್ತು ಆಧುನಿಕತೆಗಳ ವಿಕಾರಗಳನ್ನು ನಮ್ಮೆದುರು ತೆರೆದಿಡುತ್ತದೆ. ಇದರ ಕಥಾನಾಯಕ ಮಾರ್ಸೊ ಸಾಲ್ಟ್. ಈ ಕಥೆ ಆಫ್ರಿಕಾ ಖಂಡದ ಉತ್ತರ ಭಾಗ ಮತ್ತು ಮೆಡಿಟೆರೇನಿಯನ್ ಸಮುದ್ರದ ದಕ್ಷಿಣಕ್ಕೆ ಇರುವ 1830ರಿಂದ 1962ರವರೆಗೆ ಫ್ರಾನ್ಸಿನ ವಸಾಹತು ಆಗಿದ್ದ ಆಲ್ಜೀರಿಯಾದ ರಾಜ್ಯಧಾನಿ ಅಲ್ಜೀರ್ಸ್ ನಲ್ಲಿ ನಡೆಯುತ್ತದೆ. ಮಾರ್ಸೊ ತನ್ನ ಬದುಕಿನ ಅನಿರೀಕ್ಷಿತ ಗಳಿಗೆಯಲ್ಲಿ ಅರಬ್ ಒಬ್ಬನನ್ನು ಕೊಂದು ಕೊಲೆ ಕೇಸ್ನಲ್ಲಿ ಆಪಾದಿತನಾಗುತ್ತಾನೆ. ಈ ಕಾದಂಬರಿ ಎರಡು ಭಾಗದಲ್ಲಿದೆ. ಮೊದಲ ಭಾಗ ಮಾರ್ಸೋ ತನ್ನಿಚ್ಛೆಯಂತೆ ಬದುಕಲು ಪ್ರಯತ್ನಿಸುವುದನ್ನು ಮತ್ತು ಎರಡನೇ ಭಾಗ ತನ್ನ ಇಚ್ಛೆಯಂತೆ ಬದುಕಲು ಹೋಗಿ ಕಾನೂನಿನ ವಿಚಿತ್ರ ಸನ್ನಿವೇಶಗಳಲ್ಲಿ ಸಿಲುಕಿ ಸಂಕಟ ಪಡುವುದನ್ನು ಚಿತ್ರಿಸುತ್ತದೆ. ತನ್ನ ತಾಯಿ ವೃದ್ಧರ ವಿಶ್ರಾಂತಿಧಾಮದಲ್ಲಿ ತೀರಿಹೋದ ಸಂದೇಶವನ್ನು ಪಡೆದು ಅವಳ ಅಂತ್ಯಸಂಸ್ಕಾರಕ್ಕೆ ಹೋಗುವ ಪ್ರಸಂಗದಿಂದ ಈ ಕಾದಂಬರಿ ಪ್ರಾರಂಭವಾಗುತ್ತದೆ. ಅಲ್ಜೀರ್ಸ್ ನಿಂದ ಸುಮಾರು 50 ಮೈಲು ದೂರದ ಮಾರೆಂಗೊದ ವಿಶ್ರಾಂತಿಧಾಮಕ್ಕೆ ಬಂದಾಗ ವಾರ್ಡನ್ ಮಾರ್ಸೋನನ್ನು ಬರಮಾಡಿಕೊಂಡು ಯಾವುದೇ ವೃದ್ಧರು ತೀರಿಕೊಂಡಾಗ ಮಾಡಬಹುದಾದ ಫಾರ್ಮಾಲಿಟಿಸ್ಗಳನ್ನು ಮನವರಿಕೆ ಮಾಡಿಕೊಡುತ್ತಾನೆ. ತನ್ನ ತಾಯಿಯನ್ನು ನೋಡಲು ಹೋದಾಗ ಗುಂಪಾಗಿ ನಿಂತ ವೃದ್ಧರು ಮಾತಾಡಿಕೊಳ್ಳುವುದು, ಇವರು ಬಂದ ತಕ್ಷಣ ಮೌನವಾಗಿ ಇವರ ಬೆನ್ನು ಕಾಣುತ್ತಿದ್ದಂತೆ ಮತ್ತೇ ಮಾತಾಡಿಕೊಳ್ಳುವುದು, ಮಾರ್ಸೋಗೆ ಆ ಕ್ಷಣ ಪಂಜರದಲ್ಲಿನ ಗಿಳಿಗಳ ಧ್ವನಿಯನ್ನು ನೆನಪಿಸುತ್ತದೆ. ನಿರ್ಲಿಪ್ತನಾಗಿ ನಿರ್ಭಾವುಕನಾಗಿ ತನ್ನ ತಾಯಿಯ ಸಾವನ್ನು ಎದುರಾಗುವ ಅವನನ್ನು ಕಂಡ ವಾರ್ಡನ್ಗೆ ಅಚ್ಚರಿಯಾಗುತ್ತದೆ. ಅಂತ್ಯಸಂಸ್ಕಾರ ನಡೆಯುವ ಹಿಂದಿನ ರಾತ್ರಿ ಮಾರ್ಸೋ ಸಹಜವಾಗಿ ಕಾಫಿ ಕುಡಿದು ಸಿಗರೇಟ್ ಸೇದಿ ತನ್ನ ಇಚ್ಛೆಯಂತೆ ವರ್ತಿಸಿದ್ದನ್ನು ಕಂಡವರಿಗೆ ಅವನೊಬ್ಬ ತಾಯಿಯ ಬಗ್ಗೆ ಕಾಳಜಿ ಇಲ್ಲದ ಪಶುವಿನಂತೆ ಕಾಣುತ್ತಾನೆ.

ಆದರೆ, ಮಾರ್ಸೋಗೆ ವಾಸ್ತವವನ್ನು ಮುಕ್ತವಾಗಿ ನೋಡುವ ಮನಸ್ಥಿತಿ ಇದೆ. ಅಂತ್ಯಸಂಸ್ಕಾರದ ನಂತರ ತನ್ನ ಮೇಲಧಿಕಾರಿಯಿಂದ ಎರಡು ದಿನ ರಜೆ ಪಡೆಯುತ್ತಾನೆ. ತನ್ನ ಗೆಳತಿ ಮಾರಿ ಕಾರ್ಡೊನಾಳೊಂದಿಗೆ ಈಜುಕೊಳದಲ್ಲಿ ಈಜಾಡಿದ ಮೇಲೆ ಆ ಸಂಜೆ ಸಿನಿಮಾಕ್ಕೆ ಅವಳನ್ನು ಕರೆಯುತ್ತಾನೆ. ಅವಳು ಫರ್ನಾಂಡೆಲ್ಲನ ಹಾಸ್ಯ ಚಿತ್ರಕ್ಕೆ ಆದರೆ ಮಾತ್ರ ಬರುತ್ತೇನೆ ಎನ್ನುತ್ತಾಳೆ. ನಂತರ ಅವನನ್ನು ದುಃಖದಲ್ಲಿ ಇದ್ದೀಯ ಎಂದು ಕೇಳಿದ್ದು, ಅಮ್ಮ ತೀರಿ ಹೋದಳು ಎಂದು ಅವನು ಉತ್ತರಿಸಿದ್ದು, ಅದಕ್ಕೆ ಅವಳು ಅವನನ್ನು ಕಂಡು ಹೇಸಿದ್ದು, ಇಬ್ಬರು ಸಿನಿಮಾ ನೋಡುವಾಗ ರೋಮಾಂಚಿತರಾಗಿದ್ದು ಈ ಎಲ್ಲ ವಿವರಗಳನ್ನು ಕಾದಂಬರಿ ಯಾವುದೇ ಸ್ಮೃತಿಭಾರವಿಲ್ಲದೆ ತೆರೆದಿಡುತ್ತದೆ. ಅವನ ಬಾಡಿಗೆ ಮನೆ, ಸುತ್ತಲಿನ ಜನ, ಹೆಂಡತಿಯನ್ನು ಕಳೆದುಕೊಂಡಾಗ ನಾಯಿಯೊಂದನ್ನು ಸಾಕಿ ಯಾವಾಗಲೂ ಅದರೊಂದಿಗೆ ವಾಕಿಂಗ್ ಮಾಡುತ್ತಿದ್ದ ವೃದ್ಧ ಸಾಲಮಾನೊ ಮತ್ತು ಅವನ ವಿಚಿತ್ರ ವರ್ತನೆಗಳು, ನಾಯಿ ಸತ್ತಾಗ ಅವನು ಸಂಕಟದಿಂದ ಅಳುವ ರೀತಿ, ವ್ಯಭಿಚಾರಿಗಳನ್ನು ಸಪ್ಲೈ ಮಾಡುವ ಸ್ನೇಹಿತ ರೆಮೋನ್ ಮತ್ತು ಅವನ ಗೆಳತಿ, ಅವರ ಜಗಳ, ಮಾರ್ಸೋ ಕೊನೆಗೆ ಅವಳಿಗೆ ಬೈಯಲು ಬರೆಸಿದ ಪತ್ರ, ಅದಕ್ಕಾಗಿ ಅವಳ ಅಣ್ಣ ಮತ್ತು ಅವರ ಸ್ನೇಹಿತರು ಆಗಾಗ ಮಾರ್ಸೋ ಮತ್ತು ರೆಮೋನ್ ಇಬ್ಬರನ್ನೂ ಹಿಂಬಾಲಿಸಿದ್ದು, ಅವರ ಜೊತೆ ಮಾರಾಮಾರಿ ನಡೆದದ್ದು, ಇವೆಲ್ಲಾ ಸಂಗತಿಗಳಲ್ಲಿ ಒಂದು ಪಾತ್ರದಂತೆ ಇದ್ದ ಪ್ರಕಾಶಮಾನವಾದ ಬಿಸಿಲು ಇತ್ಯಾದಿ ವಿವರಗಳಿಂದ ಕಾದಂಬರಿ ಸಾಗುತ್ತದೆ. ಒಂದು ಜಗಳದಲ್ಲಿ ರೇಮೊನ್ಗೆ ಚಾಕುವಿನಿಂದ ಚುಚ್ಚಿದ ಅವನ ಗೆಳತಿಯ ಅರಬ್ ಅಣ್ಣ ಮತ್ತು ಅವನ ಸ್ನೇಹಿತರು ಸಮುದ್ರದ ಬಳಿ ವಾಕಿಂಗ್ ಬಂದ ರೆಮೋನ್ ಮಾರ್ಸೋ ಮತ್ತು ಇನ್ನೊಬ್ಬ ಸ್ನೇಹಿತ ಮೇಸ್ಞೋರನ್ನು ಎದುರಾಗುತ್ತಾರೆ. ಆಗ ರೇಮೊನ್ ಕೈಲಿದ್ದ ರಿವಾಲ್ವರ್ ಮಾರ್ಸೋ ಕೈಗೆ ಶಿಫ್ಟ್ ಆಗುತ್ತದೆ. ಇದನ್ನು ಕಂಡು ಅರಬ್ಬರು ಓಡಿ ಹೋಗುತ್ತಾರೆ. ನಂತರ ಅಲ್ಲಿಂದ ವಾಪಾಸಾಗಿ ಮಾರ್ಸೋ ಅಲ್ಲಿನ ಬಿಸಿಲು ತಾಳದೆ ನಿಂತರೂ ನಡೆದರೂ ಒಂದೇ ಎಂದು ಭಾವಿಸಿ ಗಾಯಗೊಂಡ ರೇಮೊನ್ ಮತ್ತು ಸ್ನೇಹಿತನನ್ನು ಬಿಟ್ಟು ಒಬ್ಬನೇ ಬಿಸಿಲಲ್ಲಿ ಮರಳ ತೀರದೆಡೆಗೆ ನಡೆಯುತ್ತಾನೆ. ಆಗ ರೇಮೊನ್ನ ಅರಬ್ಬ ಅಲ್ಲೇ ಮಲಗಿದ್ದು ಇವನತ್ತ ನೋಡಿ, ಎದ್ದುನಿಂತು ಕೈ ಜೇಬಿಗಿಳಿಸುತ್ತಾನೆ. ಆಗ ಮಾರ್ಸೊ ತೀವ್ರವಾದ ಬಿಸಿಲಿನಲ್ಲಿ ಸಮುದ್ರದಿಂದ ಬೀಸುತ್ತಿದ್ದ ಬಿಸಿಗಾಳಿಯಲ್ಲಿ ಬೆಂಕಿಯುಗುಳುತ್ತಿದ್ದ ಸೂರ್ಯ ಮತ್ತು ಮರಳಿನ ನಡುವೆ ತನ್ನ ಹಣೆಯಮೇಲಿನ ಬೆವರಹನಿಗಳ ಹಿಂಸೆಯಲ್ಲಿ ಅರಬ್ನ ಕಡೆ ರಿವಾಲ್ವರ್ ಹಿಡಿದು ಕುದುರೆ ಒತ್ತುತ್ತಾನೆ. ಕ್ಷಣ ಹೊತ್ತು ನಿಂತು ಸತ್ತು ಬಿದ್ದವನ ಕಡೆ ನೋಡುತ್ತ ಮತ್ತೇ ನಾಲ್ಕು ಗುಂಡು ಹಾರಿಸುವಲ್ಲಿಗೆ ಕಾದಂಬರಿಯ ಮೊದಲ ಭಾಗ ಮುಗಿಯುತ್ತದೆ.
ಎರಡನೆಯ ಭಾಗ ಮಾರ್ಸೊ ಬಂದೀಖಾನೆಯಲ್ಲಿ ವಿಚಾರಣೆಗೆ ಒಳಗಾಗುವ ಪ್ರಸಂಗದಿಂದ ಪ್ರಾರಂಭವಾಗುತ್ತದೆ. ವಕೀಲರು ಕೇಳುವ ಪ್ರಶ್ನೆಗಳು ನೇರವಾಗಿ ಕೊಲೆಗೆ ಸಂಬಂಧಿಸಿರದೆ ಮಾರ್ಸೋನ ಖಾಸಗಿ ಜೀವನದ ಬಗ್ಗೆ, ಅವನ ಚಾರಿತ್ರ್ಯದ ಬಗ್ಗೆ, ಅವನ ದಿನಚರಿ ಮತ್ತು ಆಸಕ್ತಿಗಳ ಬಗ್ಗೆ, ತನ್ನ ತಾಯಿ ತೀರಿ ಹೋದಾಗಿನ ಅವನ ವರ್ತನೆಗಳ ಬಗ್ಗೆ, ಗುಂಡು ಯಾಕೆ ಹೊಡೆದೆ ಎನ್ನುವುದಕ್ಕಿಂತ ಹೇಗೆ ಹೊಡೆದೆ ಎಲ್ಲಿ ಹೊಡೆದೆ ಎಷ್ಟು ಸಮಯದಲ್ಲಿ ಹೊಡೆದೆ ಎನ್ನುವುದರಿಂದ ತುಂಬಿಹೋಗಿರುತ್ತವೆ. ಸರ್ಕಾರಿ ವಕೀಲರು ಬಂದು ಕೇಳುವ ಪ್ರಶ್ನೆಗಳು ಸಹ ಮಾರ್ಸೋ ಎಂತಹ ವ್ಯಕ್ತಿ ಎನ್ನುವುದನ್ನೇ ದಾಖಲಿಸಲು ಪ್ರಯತ್ನಿಸುತ್ತವೆ. ವಿಚಾರಣಾ ನ್ಯಾಯಾಧೀಶರು ಪ್ರಶ್ನಿಸುತ್ತಾ ಹತ್ತು ಮಾತಾಡಿದರೆ ಒಂದು ಮಾತಾಡುವ ಕೇವಲ ಸ್ವಹಿತಾಸಕ್ತಿಯ ಮನುಷ್ಯನೆಂದು, ನಿನ್ನ ಕೃತ್ಯ ನನ್ನನ್ನು ಅನೇಕ ರೀತಿಯಲ್ಲಿ ಅಚ್ಚರಗೊಳಿಸಿದೆ, ಕೊಲೆಯ ಕೃತ್ಯದ ಬಗ್ಗೆ ವರದಿ ಕೇಳಿದ ನಂತರವೂ ಅದನ್ನು ಮುಖ್ಯವಾಗಿ ಗಮನಿಸದೆ ದೇವರ ದಯೆ ಇದ್ದರೆ ನಿನಗೆ ಸಹಾಯ ಮಾಡುವೆ ಎಂದು, ತಾಯಿ ತೀರಿಕೊಂಡಾಗ ಮಾರ್ಸೊ ವರ್ತನೆಗಳ ಬಗ್ಗೆ, ಐದು ಗುಂಡು ಯಾಕೆ ಹೊಡೆದೆ, ಎರಡನೇ ಗುಂಡು ಹೊಡೆಯಲು ಯಾಕೆ ತಡೆದೆ ಎಂಬ ಮತ್ತೆ ಮತ್ತೆ ಅದೇ ಪ್ರಶ್ನೆಗಳ ದಾಳಿಯಲ್ಲಿ ಮಾರ್ಸೊ ಸುಮ್ಮನಿದ್ದದ್ದನ್ನು ಕಂಡು ಬೆಳ್ಳಿ ಶಿಲುಬೆಯ ಹಿಡಿದು ಭಾವೋದ್ವೇಗದಲ್ಲಿ ದೇವರಿಂದ ಕ್ಷಮಾಭಿಕ್ಷೆ ನಿನಗಿದೆ ಎನ್ನುತ್ತಾರೆ. ದೇವರನ್ನು ನಂಬಿಸಲು ಹೆಣಗಾಡಿ ನನ್ನ ಅನುಭವದಲ್ಲಿ ಇದುವರೆಗೆ ನಿನ್ನಂಥ ಕಠಿಣ ಹೃದಯವನ್ನು ನೋಡಿರಲಿಲ್ಲ. ‘ನನ್ನೆದುರಿಗೆ ಇದುವರೆಗೆ ಬಂದ ಎಲ್ಲ ಅಪರಾಧಿಗಳು ಪ್ರಭು ನಮಗಾಗಿ ಭರಿಸಿದ ಸಂಕಟದ ಈ ಶಿಲುಬೆಯನ್ನು ನೋಡಿ ಕಣ್ಣೀರಿಡುತ್ತಿದ್ದರು’ ಎಂದು ಹೇಳಿ ಎದ್ದು ನಿಂತು ಇದರ ಬಗ್ಗೆ ನಿನಗೆ ಪಶ್ಚಾತ್ತಾಪವಿದೆಯೇ ಎಂದಾಗ ಪಶ್ಚಾತ್ತಾಪವೇನಿಲ್ಲ ಆದರೆ ಒಂದು ರೀತಿಯ ಚಿಂತೆ ಅಷ್ಟೇ ಎಂದದ್ದು ಕೇಳಿ ವಿಚಾರಣಾ ನ್ಯಾಯಾಧೀಶ ನಿರ್ಗಮಿಸಿದ. ನಂತರ ಅನೇಕ ಸಾರಿ ನ್ಯಾಯಾಧೀಶನ ಮುಂದೆ ಹಾಜರಾದಾಗ ಮಾರ್ಸೋ ವ್ಯಕ್ತಿತ್ವದ ಬಗ್ಗೆ ನಡೆದ ವಿಚಾರಣೆಯೇ ಅವನ ಕೊಲೆಯ ವಿಚಾರಣೆ ಎಂಬಂತೆ ಸಾಗಿ ಬಂದಿತು. ಬಂದೀಖಾನೆಯಲ್ಲಿ ಹೊಂದಿಕೊಳ್ಳಲು ಮಾಡುವ ಪ್ರಯತ್ನ, ನಿರೀಕ್ಷಣಾ ಕೊಠಡಿ, ವಿಚಾರಣಾ ಕಟಕಟೆ, ನ್ಯಾಯಾಧೀಶರು ಕೇಳುವ ಪ್ರಶ್ನೆಗಳು, ವಕೀಲರು ನಡೆಸುವ ವಾದಗಳು, ವಿಶ್ರಾಂತಿಧಾಮದ ವಾರ್ಡನ್ನೊಳಗೊಂಡ ಸಾಕ್ಷಿದಾರರು, ಪ್ಯಾರಿಸ್ ಪತ್ರಿಕೆಯ ವರದಿಗಾರರು, ಮಾರ್ಸೋ ಫ್ರಾನ್ಸಿನವನು ಎಂಬ ಕಾರಣಕ್ಕೆ ಅಲ್ಲಿನ ನ್ಯಾಯ ತೀರ್ಮಾನಗಳು, ಶಿಕ್ಷೆಯನ್ನು ತಪ್ಪಿಸಲಾಗದೆ ಕಡಿಮೆ ಮಾಡಿಸಲು ಪ್ರಯತ್ನಿಸಿದ ಮಾರ್ಸೋ ಪರ ವಕೀಲ, ನ್ಯಾಯಾಲಯದಲ್ಲಿ ಇತರೆ ವಕೀಲರು ವರ್ತಿಸುವ ರೀತಿ, ಅಲ್ಲಿನ ಕೈದಿಗಳು, ಮಾರ್ಸೋ ಹೇಳಬೇಕೆಂದುಕೊಳ್ಳುವುದು, ಹೇಳದೇ ಹೋದದ್ದು, ಇವುಗಳ ನಡುವೆ ಹಿಂಸಿಸುವ ಬಿಸಿಲು, ವಿಚಿತ್ರವಾದ ಶೆಕೆ ಹೀಗೆ ವಿಭಿನ್ನ ವಿವರಗಳಲ್ಲಿ ಕಾದಂಬರಿ ಮಾರ್ಸೊನ ಒಟ್ಟು ವ್ಯಕ್ತಿ ಚಿತ್ರಣ ಮತ್ತು ಕಾನೂನು ವ್ಯವಸ್ಥೆಯ ವಸ್ತುಸ್ಥಿತಿಯನ್ನು ಬಿಚ್ಚಿಡುತ್ತ ಸಾಗುತ್ತದೆ.
ಮಾರ್ಸೊ ನ್ಯಾಯಾಲಯದಲ್ಲಿ ತನ್ನ ಕೃತ್ಯದ ಕುರಿತು ಹೇಳುತ್ತಿದ್ದುದೆಲ್ಲಾ ವಸ್ತುನಿಷ್ಠವಾಗಿದ್ದರೂ ಮತ್ತು ಸ್ಪಷ್ಟವಾಗಿದ್ದರೂ ನ್ಯಾಯ ತೀರ್ಮಾನ ಮಾಡಬೇಕಾದರೆ ಅದು ಸಮಂಜಸವಾಗಿ ನ್ಯಾಯಾಧೀಶರಿಗೆ ಕಾಣಲಿಲ್ಲ. ಅಷ್ಟಕ್ಕೂ ಅಲ್ಲಿನವರೇ ರೂಪಿಸಿಕೊಂಡ ಅವನ ಬಗೆಗಿನ ಕಲ್ಪನೆಗಳು, ಅವನ ನಿರ್ಭಾವುಕತೆ, ತನ್ನ ಕೃತ್ಯದ ಕುರಿತು ಅನ್ಯಮನಸ್ಕನಾಗಿ ಯೋಚಿಸುತ್ತಾನೆ ಅತ್ಯಂತ ಕಠಿಣ ಹೃದಯಿ ಎಂಬ ನಂಬಿಕೆಗಳು, ಮಾರ್ಸೋನ ನಿಜ ವರ್ತನೆಗಳಲ್ಲದಿದ್ದರೂ ಅವನು ಹಾಗೆಯೇ ನಿರೂಪಣೆಗೊಳ್ಳುತ್ತಿದ್ದ. ಸರ್ಕಾರಿ ವಕೀಲ ಇರುವ ವಿವರಗಳನ್ನೇ ಇಟ್ಟುಕೊಂಡು ಅದಕ್ಕೆ ಹೊಸ ರೀತಿಯ ಕಥೆಯನ್ನೇ ಕಟ್ಟಿ ಮಾರ್ಸೋನನ್ನು ಕೊಲೆಪಾತಕ ಎಂದು ಸಾಬೀತುಪಡಿಸುವ ಜಾಣತನವನ್ನು ಎಲ್ಲರೂ ಮೆಚ್ಚುವಂತೆ ವಾದಿಸಿದ. ವಕೀಲ ವಿಚಿತ್ರ ಧಾಟಿಯಲ್ಲಿ ಸಾಮಾನ್ಯ ಮನುಷ್ಯನಲ್ಲಿರುವ ಯಾವ ನೈತಿಕ ಗುಣಗಳೂ ಇಲ್ಲದ, ಅದನ್ನು ಪಡೆದುಕೊಳ್ಳುವ ಯೋಗ್ಯತೆ ಇಲ್ಲದವನಲ್ಲಿ ಆ ಗುಣಗಳಿಲ್ಲ ಎಂದು ದೂಷಿಸುವುದು ನ್ಯಾಯವಲ್ಲ ಆದರೆ ಕ್ರಿಮಿನಲ್ ಕೃತ್ಯ ಎಸಗಿದ ಈತ ವಿದ್ಯಾವಂತ. ಈತನಲ್ಲಿ ಒಳ್ಳೆಯ ಗುಣವೊಂದೂ ಇಲ್ಲ. ಈತ ಸಮಾಜಕಂಟಕ ಎಂದು ದೊಡ್ಡ ದೊಡ್ಡ ಮಾತುಗಳನ್ನಾಡಿ, ಅಭಿನಯಿಸಿ, ಕೆಲವು ದೀರ್ಘ ತೀವ್ರಟೀಕೆಗಳನ್ನು ಮಾಡಿ ಮಾರ್ಸೋನ ಕೃತ್ಯ ಪೂರ್ವಯೋಚಿತ ಎಂದು ಸಾಧಿಸುತ್ತ, ಈತ ಕೊಲೆಗಡುಕ, ಮಾನವತ್ವದ ಕಿರುಗಿರಣವೂ ಇಲ್ಲದ ಈ ಪಾತಕಿ ಕಂಡು ನನಗಾದ ಸಹಜ, ಧರ್ಮಶೀಲ ಕೋಪವೇ ಶಿಕ್ಷೆಯಾಗುವಂತೆ ಮಾಡುವುದು ನನ್ನ ಅಂತರ್ವಾಣಿಯ ಪವಿತ್ರ ಕರ್ತವ್ಯ ಎನಿಸುತ್ತದೆ ಎಂದು ವಾದಿಸುತ್ತಾನೆ. ಮಾರ್ಸೊ ಪರ ವಕೀಲ “ಜೂರಿಗಳೆ, ಈತ ಸಾಚಾ. ಕಷ್ಟಪಟ್ಟು ದುಡಿಯುವವನು. ಎಳೆಯ ವಯಸ್ಸಿನವನು. ನೀವು ಇಂಥವನನ್ನು ಸಾವಿನ ದವಡೆಗೆ ಖಂಡಿತ ನೂಕಲಾರಿರಿ. ಜೀವಮಾನ ಇಡೀ ಅವನು ಪಡುವ ಪಶ್ಚಾತಾಪವೇ ಅವನಿಗೆ ಸಾಕಷ್ಟು ಶಿಕ್ಷೆಯಲ್ಲವೇ?” (ಪು.೧೦೬) ಎಂದು ಶಿಕ್ಷೆಯನ್ನು ಕಡಿಮೆಮಾಡಲು ಏನೇ ವಾದಿಸಿದರೂ ಕೊನೆಗೆ ಮುಖ್ಯ ನ್ಯಾಯಾಧೀಶ ‘ಫ್ರೆಂಚ್ ಜನತೆಯ ಹೆಸರಿನಲ್ಲಿ’ ಯಾವುದೋ ‘ಬಹಿರಂಗ ಸ್ಥಳದಲ್ಲಿ’ ಮಾರ್ಸೊನ ವಧೆಗೆ ಅನುಜ್ಞೆ ಮಾಡಿದ.
ನಿರ್ದಯನೆಂದು ಸಾಬೀತು ಮಾಡಿದ ನಂತರ ಶಿಕ್ಷೆಗೆ ಗುರಿಯಾದ ಮಾರ್ಸೊನನ್ನು ಮೂರನೇ ಬಾರಿ ಭೇಟಿಯಾಗಲು ಬಂದ ಜೈಲಿನ ಪಾದ್ರಿಯನ್ನು ನೋಡಲು ನಿರಾಕರಿಸಿ ಗಿಲೋಟಿನ್ ನಿಂದ ತಪ್ಪಿಸಿಕೊಳ್ಳುವುದು ಹೇಗೆ? ಯಾವುದು ಅನಿವಾರ್ಯವೋ ಅದರಲ್ಲೂ ಬಿರುಕು ಹುಡುಕಿ, ನಿವಾರಣೆ ಸಾಧ್ಯವೋ? ಎನ್ನುವ ಪ್ರಶ್ನೆಗಳಲ್ಲಿ ಮಾರ್ಸೊ ಮುಳುಗುತ್ತಾನೆ. ಬಹಿರಂಗ ವಧೆಗಳಲ್ಲಿ ಗಿಲೋಟಿನ್ನಿಂದ ತಪ್ಪಿಸಿಕೊಂಡ ಪ್ರಕರಣಗಳನ್ನು ನೆನೆಯುತ್ತಾನೆ. ಇಷ್ಟು ದಿನ ಅದರ ಕಡೆ ಗಮನ ಕೊಡದಿದ್ದಕ್ಕೆ ತನ್ನನ್ನೇ ತಾನು ಹಳಿದುಕೊಳ್ಳುತ್ತಾನೆ. ಕಾದಂಬರಿಯ ಕೊನೆಯ ಭಾಗದಲ್ಲಿ ಅಂತರ್ಮುಖಿಯಾಗಿ ಬಹಳ ತೀವ್ರವಾಗಿ ತನ್ನ ಕೃತ್ಯವನ್ನು, ಬಹಿರಂಗ ವಧೆಗಳ ಬಗ್ಗೆ ಮನುಷ್ಯನ ಹುಚ್ಚು ಪ್ರಯತ್ನಗಳನ್ನು, ಕಾನೂನು ವ್ಯವಸ್ಥೆ, ವೃತ್ತ ಪತ್ರಿಕೆಗಳು, ಬರೆದ ಪುಸ್ತಕಗಳು ದಾಖಲಿಸದೆ ಇರುವ ಮನುಷ್ಯನ ನಂಬಿಕೆಗಳ ಸಾಧ್ಯತೆಗಳನ್ನು ಮಾರ್ಸೊ ಯೋಚಿಸುತ್ತಾನೆ. “ಎಷ್ಟು ಪ್ರಯತ್ನಿಸಿದರೂ ಈ ಕ್ರೂರ ನಂಬಿಕೆಯನ್ನು ಸಹಿಸಿಕೊಳ್ಳಲಾಗಲಿಲ್ಲ. ನಿಜವಾಗಿಯೂ ಸ್ವಲ್ಪ ಯೋಚಿಸಿದರೆ ಯಾವುದೋ ಆಧಾರದ ಮೇಲೆ ಕೊಟ್ಟಿದ್ದ ತೀರ್ಮಾನ, ಅದನ್ನು ಕೊಟ್ಟ ಶುರುವಾದ, ಬದಲಿಸಲಾಗದ ಘಟನಾವಳಿಗಳ ನಡುವೆ ತುಂಬ ಅಂತರವಿತ್ತು. ಐದು ಗಂಟೆಗೆ ಬದಲು ತೀರ್ಪನ್ನು ಎಂಟು ಗಂಟೆಗೆ ಓದಿದ್ದು, ಅದು ಬೇರೆಯೇ ಆಗಬಹುದಾದ ಸಾಧ್ಯತೆಯಿದ್ದುದು ಒಳಚಡ್ಡಿ ಬದಲಾಯಿಸುವವರು ಅದನ್ನು ನಿರ್ಣಯಿಸದ್ದು, ತೀರ್ಪನ್ನು ತೀರಾ ಅಸ್ಪಷ್ಟವಾದ ‘ಫ್ರೆಂಚ್’ ಜನತೆಯ ಹೆಸರಲ್ಲಿ ನಡೆಸಿದ್ದು, ಅದೇಕೆ, ಚೀನಾ, ಜರ್ಮನ್ ದೇಶದ ಜನರ ಹೆಸರಲ್ಲಿ ಆಗಕೂಡದು – ಇದೆಲ್ಲ ನ್ಯಾಯಾಲಯದ ತೀರ್ಪಿನ ಗುರುತ್ವವನ್ನು ತುಂಬ ಕಳೆಯಿತು. ಆದರೆ ತೀರ್ಪು ಕೊಟ್ಟ ಗಳಿಗೆಯಿಂದ ಅದರ ಪ್ರಭಾವ ನಾನು ಬೆನ್ನು ಒರಗಿಸಿ ಮಲಗಿರುವ ಈ ಕೋಣೆಯ ಗೋಡೆಯಷ್ಟೇ ಬಲವತ್ತಾಗಿದೆ, ಸ್ಫುಟವಾಗಿದೆ ಅನ್ನುವುದು ನನಗೆ ಖಾತ್ರಿಯಾಯಿತು. ಇಂಥ ಯೋಚನೆಗಳು ನನ್ನ ತಲೆಯಲ್ಲಿ ಹಾದು ಹೋದಾಗ, ನಮ್ಮಮ್ಮ ಅಪ್ಪನ ಬಗ್ಗೆ ಹೇಳಿದ ಕಥೆಯ ನೆನಪಾಯಿತು. ನಾನು ಅವನನ್ನು ನೋಡಿಯೇ ಇಲ್ಲ. ಅಮ್ಮ ಹೇಳಿರುವುದನ್ನು ಬಿಟ್ಟರೆ ನನಗೆ ಅವನ ಬಗ್ಗೆ ಯಾವ ತಿಳಿವೂ ಇಲ್ಲ. ಒಂದು ಸಾರಿ ಅವನು ಬಹಿರಂಗವಧೆಯನ್ನು ನೋಡಹೋಗಿದ್ದನಂತೆ. ಅದನ್ನು ನೆನೆಸಿಕೊಂಡರೆ ಅವನಿಗೆ ಹೊಟ್ಟೆ ತೊಳಸಿಬರುವಹಾಗಾಗುತ್ತಿತ್ತು. ಆದರೂ ಅದನ್ನು ನೋಡಿದ. ಮನೆಗೆ ಬಂದಾಗ, ವಾಂತಿಯಾಗಿ, ಕಕ್ಕಿಕೊಂಡದ್ದೇ ಕಕ್ಕಿಕೊಂಡದ್ದು. ಆಗ ನಮ್ಮಪ್ಪನ ನಡತೆ ನನಗೆ ತುಂಬಾ ಅಸಹ್ಯವಾಗಿ ಕಂಡಿತು. ಆದರೆ ಈಗ ನನಗೆ ಅರ್ಥವಾಗುತ್ತೆ. ಅವನು ತೀರ ಸಹಜವಾಗಿ ನಡೆದುಕೊಂಡಿದ್ದ. ಫಾಸೀ ಶಿಕ್ಷೆಗಿಂತ ಮಹತ್ವವಾದದ್ದು ಬೇರೇನು ಇಲ್ಲ, ಅಂತ ನನಗೇಕೆ ಹೊಳೆಯಲಿಲ್ಲವೋ? ಒಂದು ನಿಲುವಿಂದ ಅದೊಂದೇ ಮನುಷ್ಯನ ಆಸಕ್ತಿಯನ್ನು ಸೆರೆಹಿಡಿಯುವಂಥದು. ನಾನೇನಾದರೂ ಸೆರೆಯಿಂದ ತಪ್ಪಿಸಿಕೊಂಡರೆ ಪ್ರತಿಯೊಂದು ವಧೆಯನ್ನೂ ನೋಡುತ್ತೇನೆ ಅಂತ ನಿರ್ಧರಿಸಿದೆ. ಈ ಸಾಧ್ಯತೆಯನ್ನು ಕುರಿತು ಯೋಚಿಸಿದ್ದು ನನ್ನ ಜಾಣತನವನ್ನೇನೂ ತೋರಿಸುವುದಿಲ್ಲ. ಈ ಕ್ಷಣಕ್ಕೆ ಮಾತ್ರ ನಾನು ಸ್ವತಂತ್ರ ಅಂತ ಮನಸ್ಸಿನಲ್ಲಿ ಚಿತ್ರಿಸಿಕೊಂಡೆ. ಎರಡು ಪೊಲೀಸರ ದಳಗಳ ಬೆನ್ನಲ್ಲಿ, ಅಂದರೆ, ಹೊರಗಡೆಯವನಾಗಿ, ನೋಟ ನೋಡ ಬಂದಿರುವ ಬರಿಯ ಪ್ರೇಕ್ಷಕನಾಗಿ ನಿಂತು ಮನೆಗೆ ಹೋಗಿ ಕಕ್ಕಿಕೊಳ್ಳುವ ಯೋಚನೆ ನನ್ನನ್ನು ಹುಚ್ಚು, ವಿಸಂಗತ ಉತ್ಸಾಹದಿಂದ ತುಂಬಿತು. ಕಲ್ಪನೆಯನ್ನು ಹಾಗೆ ಹರಿಯಗೊಟ್ಟುದು ಶುದ್ಧ ಮುಠ್ಠಾಳತನ. ಒಂದು ಕ್ಷಣ ಕಳೆದ ಮೇಲೆ ಭಯಂಕರ ನಡುಕ ಹತ್ತಿ, ಕಂಬಳಿಯಲ್ಲಿ ಮೈ ಸುತ್ತಿಕೊಳ್ಳಬೇಕಾಯಿತು. ನನ್ನ ಹಲ್ಲುಗಳು ಕಟಕಟಿಸುತ್ತಿದ್ದವು. ಏನು ಮಾಡಿದರು ಅದನ್ನು ತಡೆಯಲಾಗಲಿಲ್ಲ. ಆದರೆ ಮನುಷ್ಯ ಯಾವಾಗಲೂ ವಿವೇಕಿಯಾಗಿರುವುದು ಸಾಧ್ಯವೇ? ಇನ್ನೊಂದು ಹುಚ್ಚು ಕಲ್ಪನೆಯಲ್ಲಿ ನಾನು ಹೊಸ ಶಾಸನಗಳನ್ನು ಮಾಡಿ, ಶಿಕ್ಷೆಯನ್ನು ಬದಲಾಯಿಸುತ್ತಿದ್ದೆ. ನನ್ನ ಬುದ್ಧಿಗೆ ಅನಿಸಿದ್ದು: ಅಪರಾಧಿಗೆ ಒಂದು ಅವಕಾಶ ಕೊಡಬೇಕು. ಸಾವಿರದಲ್ಲಿ ಒಂದು. ಸಾವಿರದಲ್ಲಿ ಒಂಬೈನೂರ ತೊಂಬೋತ್ತೊಂಬತ್ತು ಬಾರಿ ರೋಗಿಯನ್ನು (ಅವನನ್ನು ನಾನು ‘ರೋಗಿ’ ಅಂತ ಈಗ ಭಾವಿಸಿದೆ) ಕೊಲ್ಲುವ ಯಾವುದಾದರೂ ಔಷದ ಇರಬೇಕು. ಅಥವಾ ಅಂಥ ಔಷಧಗಳ ಮಿಶ್ರಣ. ಇದು ಅವನಿಗೆ ತಿಳಿದಿರಲೇಬೇಕು ಅಂತ ಹೇಳುವ ಅಗತ್ಯವಿದೆಯೇ? ಶಾಂತವಾಗಿ, ಗಾಢವಾಗಿ ಯೋಚನೆ ಮಾಡಿದ ಮೇಲೆ ಅಪರಾಧಿ ತಪ್ಪಿಸಿಕೊಳ್ಳುವ ಅವಕಾಶ ಚೂರೂ ಇಲ್ಲದೆ ಇರುವುದೇ ಗಿಲೋಟಿನ್ನ ಕುಂದು ಅನ್ನುವ ನಿರ್ಣಯಕ್ಕೆ ಬಂದೆ. ರೋಗಿ ಸಾಯಬೇಕೆಂಬ ಆಜ್ಞೆ ತಡೆಯಿಲ್ಲದೆ ನಡೆದುಹೋಗುತ್ತೆ. ಅದು ಮೊದಲಿಗೇ ಬಂದ ನಿರ್ಧಾರ. ಅಕಸ್ಮಾತ್ತಾಗಿ ಯಂತ್ರ ತನ್ನ ಕೆಲಸ ಮಾಡದಿದ್ದರೆ, ಅದನ್ನು ಮತ್ತೆ ಕೆಲಸಕ್ಕೆ ಹಚ್ಚುತ್ತಿದ್ದರು. ಇದರಿಂದ ಆದದ್ದೇನು? ದಂಡನೆಗೆ ಗುರಿಯಾದವ ಉಪಕರಣ ಕೆಲಸ ಮಾಡುವ ಸ್ಥಿತಿಯಲ್ಲಿ ಇರಲಿ ಅನ್ನುವ ಭರವಸೆ ಇಡಬೇಕಾಯಿತು? ನ್ಯಾಯಾಂಗದಲ್ಲಿ ಇದೊಂದು ದೋಷ ಅಂತ ಯೋಚಿಸಿದೆ. ಮೇಲ್ನೋಟಕ್ಕೆ ನನ್ನ ವಾದ ಸರಿಯಾಗಿ ಇತ್ತು. ಇನ್ನೊಂದು ದೃಷ್ಟಿಯಿಂದ ನೋಡಿದರೆ ಈ ಪದ್ಧತಿ ತುಂಬಾ ದಕ್ಷವಾಗಿ ನಡೆಯುತ್ತದೆ ಅನ್ನಿಸಿತು. ಒಟ್ಟಿನಲ್ಲಿ ಇಷ್ಟು: ಶಿಕ್ಷೆಗೊಳಗಾದವನು ಮಾನಸಿಕವಾಗಿ ಅದರ ಜೊತೆ ಸಹಕರಿಸಬೇಕು, ಏನೂ ಅಡೆತಡೆಯಿಲ್ಲದೆ ಕೆಲಸ ನಡೆಯಲಿ ಅಂತ ಕೋರಬೇಕು, ಅವನ ಒಳ್ಳೆಯದಕ್ಕೆ.”(ಪು.110,111) ಹೀಗೆಲ್ಲಾ ಯೋಚಿಸುತ್ತಾ ಮಾರ್ಸೋ ಮರಣದಂಡನೆಗೆ ಒಳಗಾದ ಅಪರಾಧಿಯನ್ನು ರೋಗಿ ಎನ್ನುತ್ತ ತನ್ನ ಯೋಚನೆಯ ನಂತರದ ಕ್ಷಣದಲ್ಲಿಯೇ ಮತ್ತೊಂದು ಯೋಚನೆಗೆ, ಮನಸ್ಥಿತಿಗೆ ತಲುಪುತ್ತಿದ್ದ. ಕೆಲವೊಮ್ಮೆ ತಾನು ನಂಬಿಕೊಂಡದನ್ನೇ ನಿರಾಕರಿಸಿ ಮತ್ತೊಂದನ್ನು ಸರಿಯೆಂದು ಭಾವಿಸುತ್ತಿದ್ದ. 1789ರ ರಕ್ತಕ್ರಾಂತಿಯ ಭಾಗವಾದ ಗಿಲೋಟಿನ್ ಬಗೆಗೆ ತೀವ್ರವಾಗಿ ಯೋಚಿಸಿದ. ಪ್ರತಿ ಗಳಿಗೆಯಲ್ಲಿಯೂ ಅವನು ಯೋಚಿಸುತ್ತಿದ್ದುದೇ ಅವನ ಜೀವಂತಿಕೆಯಾಗಿತ್ತು. ನಿಜ ಅರ್ಥದಲ್ಲಿ ಅವನ ಸ್ವಾತಂತ್ರ್ಯವಾಗಿತ್ತು.
ಈ ಸಮಯದಲ್ಲಿ ಒಬ್ಬ ಪಾದ್ರಿ ಮಾರ್ಸೋನನ್ನು ಇಟ್ಟಿರುವ ಚಿಕ್ಕ ಕೊಠಡಿಗೆ ಸದ್ದಿಲ್ಲದೇ ಬರುತ್ತಾನೆ. ಜೀವನದ ಕೊನೆಯ ಗಳಿಗೆಯಲ್ಲಿ ಪ್ರಾರ್ಥನಾಪತ್ರವನ್ನೂ ತಿರಸ್ಕರಿಸಿ ತನ್ನದೇ ಯೋಚನೆಗಳ ಸುಖದಲ್ಲಿ ಇರುವವನ್ನು ಎದುರಾದಾಗಲೂ ಪಾದ್ರಿ ಈ ಖಂಡಿತವಾದಿಗೆ ದೇವರು ನಿನಗೆ ಸಹಾಯ ಮಾಡುತ್ತಾನೆ ಮರ್ತ್ಯನ್ಯಾಯಕ್ಕೆ ಬೆಲೆಯಿಲ್ಲ, ದೇವಾನ್ಯಾಯ ಗಣನೀಯವಾದದ್ದು ಎನ್ನುತ್ತಾನೆ. ಈ ಗೋಡೆಯಲ್ಲಿ ದೇವಪುತ್ರನ ಮುಖ ಕಾಣಬಹುದು ಎಂದು ದೇವರ ಬಗ್ಗೆ ಉದ್ದುದ್ದ ಕೊರೆಯುತ್ತಾನೆ. ಮಾರ್ಸೋನ ತೀರ್ಮಾನ ಒಂದೇ- ತನಗೆ ಉಳಿದಿರುವ ಸಮಯ ತೀರಾ ಕಡಿಮೆ, ಅದನ್ನು ದೇವರ ಮೇಲೆ ದಂಡಮಾಡಲು ಅವನಿಗಿಷ್ಟವಿಲ್ಲ. ಪಾದ್ರಿಯನ್ನು ಉದ್ದೇಶಿಸುತ್ತಾ ಮಾರ್ಸೋನ ಕೊನೆಯ ಸ್ವಗತ ಹೀಗಿದೆ: “ಇತರರ ಸಾವು, ಅಮ್ಮನ ಪ್ರೀತಿ, ಅವನ ದೇವರು, ಇದರಿಂದ ನನಗಾಗುತ್ತಿದ್ದದ್ದೇನು? ಅಥವಾ ಒಬ್ಬ ತನ್ನ ಬಾಳನ್ನು ಬದುಕುವ ರೀತಿಯನ್ನು ಆಯ್ದುಕೊಂಡರೆ, ತನ್ನ ಗತಿಯನ್ನು ತಾನು ನಿರ್ಧರಿಸಿಕೊಳ್ಳಹೋದರೆ, ಅದರಿಂದಾದುದೇನು? ಒಂದೇ ‘ಗತಿ’ ನನ್ನೊಬ್ಬನನ್ನೇ ಅಲ್ಲ ನನ್ನ ಅಣ್ಣ ತಮ್ಮಂದಿರೆಂದುಕೊಳ್ಳುವ ಇತರ ಲಕ್ಷಾಂತರ ಜನಗಳನ್ನು ಅದೇ ಆವರಿಸಿಕೊಳ್ಳುತ್ತಿದ್ದಾಗ? ಖಂಡಿತವಾಗಿ, ನಿಶ್ಚಯವಾಗಿ ಇದವನಿಗೆ ಗೊತ್ತಿರಬೇಕು? ಬದುಕಿರುವ ಪ್ರತಿ ಜೀವವೂ ಭಾಗ್ಯವಂತ ಜೀವ. ಇರುವುದು ಒಂದೇ ವರ್ಗ- ಭಾಗ್ಯವಂತ ವರ್ಗ. ಎಲ್ಲರೂ ಒಂದು ದಿನ ಸಾವಿನ ಶಿಕ್ಷೆಗೆ ಗುರಿಯಾಗಲೇಬೇಕು: ಇತರರ ಸರದಿಯಂತೆ ಅವನದೂ ಬರುತ್ತದೆ. ಕೊಲೆ ಆಪಾದನೆ ಹೊರಿಸಿ, ಅಮ್ಮ ಸತ್ತಾಗ ಅಳಲಿಲ್ಲ ಅಂದು ಗಿಲೋಟಿನ್ಗೆ ತಲೆ ಒಡ್ಡಿಸಿದರೆ, ಆದ ವ್ಯತ್ಯಾಸವೇನು? ಎಲ್ಲ ಮುಗಿಯುವುದು ಹೀಗೇ. ಸಾಲಮಾನೊ ಹೆಂಡತಿಯೂ ಹೀಗೇ. ಅವನ ನಾಯಿಯೂ ಹೀಗೇ. ಆ ಕೀಲು ಗೊಂಬೆ, ಮೇಸ್ಞೋನನು ಮದುವೆಯಾಗಿದ್ದ, ಪ್ಯಾರಿಸ್ಸಿನವರಂತೆ ಮಾತಾಡುತ್ತಿದ್ದ ಹುಡುಗಿ ನನ್ನನ್ನು ಮದುವೆಯಾಗಬಯಸಿದ್ದ ಮಾರಿಯಷ್ಟೇ ‘ತಪ್ಪಿತಸ್ಥರು’ ಸೆಲೆಸ್ತ್ ರೇಮೊನ್ಗಿಂತ ತುಂಬ ಒಳ್ಳೆಯ ಮನುಷ್ಯ. ಆದರೆ ರೇಮೊನ್ ನನಗೆ ಅವನಷ್ಟೇ ಬೇಕಾಗಿದ್ದರೆ ತಾನೆ ಏನು? ಈ ಗಳಿಗೆಯಲ್ಲಿ ಮಾರೀ ತನ್ನ ಹೊಸ ಪ್ರಣಯಿಯನ್ನು ಮುತ್ತಿಡುತ್ತಿದ್ದರೆ ತಪ್ಪೇನು?”(ಪು.121) ಎನ್ನುತ್ತ ಉಸಿರೆಳೆಯುತ್ತಾ ಪಾದ್ರಿಯನ್ನು ಗಟ್ಟಿಯಾಗಿ ಹಿಡಿದಿದ್ದನ್ನು ವಾರ್ಡನ್ ಬಿಡಿಸಿದರು. ಮಾರ್ಸೋ ಮತ್ತೇ ಸ್ವಗತಕ್ಕಿಳಿದು ಮಾತಾಡುತ್ತಾ ಕೊನೆಗೆ – “ಸಾವು ಅಷ್ಟು ಸನಿಹದಲ್ಲಿದ್ದಾಗ, ಅಮ್ಮನಿಗೆ ಸ್ವಾತಂತ್ರ್ಯದ ಹೊಸಲಲ್ಲಿ ನಿಂತು, ಜೀವನವನ್ನು ಮತ್ತೆ ಆರಂಭಿಸಲಿರುವವನ ಹಾಗೆ ಅನ್ನಿಸಿರಬೇಕು. ಈ ಪ್ರಪಂಚದಲ್ಲಿ ಅವಳಿಗಾಗಿ ಅಳುವ ಹಕ್ಕು ಯಾರೊಬ್ಬರಿಗೂ ಇರಲಿಲ್ಲ. ನಾನು ಬಾಳನ್ನು ಮತ್ತೆ ಬದುಕುವ ಹವಣಿಕೆಯಲ್ಲಿದ್ದೆ. ಕೋಪದ ಹೊಳೆ ನನ್ನನ್ನು ತೊಳೆದು, ಸ್ವಚ್ಛ ಮಾಡಿ, ಆಸೆ-ಭರವಸೆಗಳನ್ನೆಲ್ಲ ಪೂರ್ಣ ಹೊರಹಾಕಿತ್ತು. ಕಪ್ಪು ಆಗಸದಲ್ಲಿ ತುಂಬಿ ಮಿನುಗುತ್ತಿದ್ದ ತಾರೆಗಳತ್ತ ನೋಡುತ್ತ ಮೊದಲ ಬಾರಿಗೆ, ಮೊತ್ತ ಮೊದಲ ಬಾರಿಗೆ ಪ್ರಕೃತಿಯ ಪ್ರಸನ್ನ ಔದಾಸೀನ್ಯಕ್ಕೆ ಹೃದಯವನ್ನು ಬಿಚ್ಚಿ ಒಡ್ಡಿದೆ. ಅದು ನನ್ನ ಹಾಗೆ, ನಿಜವಾಗಿ ನನ್ನ ಸೋದರನಂತೆ ಇದ್ದದ್ದು ನೋಡಿ ನಾನು ಸುಖಿಯಾಗಿದ್ದೆ, ಈಗಲೂ ಸುಖಿಯಾಗಿದ್ದೇನೆ ಅನ್ನುವ ಅರಿವು ಹೊಳೆಯಿತು. ಇದೆಲ್ಲದರ ಮುಗಿತಾಯಕ್ಕೆ, ನನ್ನ ಒಂಟಿತನ ಕಮ್ಮಿಯಾಗಿಸುವುದಕ್ಕೆ ನನ್ನ ಒಂದು ಬಯಕೆ ಉಳಿದಿತ್ತು. ನನ್ನ ಬಹಿರಂಗ ವಧೆಯ ದಿನ ಭಾರಿ ಪ್ರೇಕ್ಷಕರ ಗುಂಪು ಘೇರಾಯಿಸಿ, ಅಸಹ್ಯ, ಅವಾಚ್ಯ ಘೋಷಣೆ, ಹಿಡಿಶಾಪಗಳಿಂದ ನನ್ನನ್ನು ಸ್ವಾಗತಿಸಬೇಕು.”(ಪು.122) ಎಂಬ ವಾಕ್ಯದೊಂದಿಗೆ ಕಾದಂಬರಿ ಕೊನೆಯಾಗುತ್ತದೆ.
ಕಾದಂಬರಿಯ ಮೊದಲ ಭಾಗದಲ್ಲಿ ಮಾರ್ಸೋ ಈ ಮನುಷ್ಯನ ವರ್ತನೆಗಳ ಬಗ್ಗೆ ಆಲೋಚಿಸುತ್ತಾ ‘ದೀರ್ಘಾವಧಿಯಲ್ಲಿ ಮನುಷ್ಯ ಎಲ್ಲದರೊಂದಿಗೆ ಹೊಂದಿಕೊಳ್ಳುತ್ತಾನೆ’ ಎನ್ನುತ್ತಾನೆ. ಹಾಗೆ ರೂಢಿಗೊಂಡ ವರ್ತನಾ ಪ್ರಪಂಚದಿಂದ ಭಿನ್ನವಾಗುತ್ತಾ ಬದುಕಿನ ನಿಜ ಅರ್ಥಗಳನ್ನು ಶೋಧಿಸುತ್ತಾನೆ. ಅವನು ಕೊಲೆ ಪ್ರಕರಣದಲ್ಲಿ ಆಪಾದಿತನಾಗಿ ಶಿಕ್ಷೆಗೆ ಒಳಗಾದಾಗ ಕಾದಂಬರಿಯ ಕೊನೆಯ ಭಾಗದಲ್ಲಿ ‘ಕಾಲಕ್ರಮೇಣ ಮನುಷ್ಯ ಎಲ್ಲವನ್ನೂ ಒಪ್ಪಿಕೊಳ್ಳುತ್ತಾನೆ’ ಎನ್ನುವ ಮೂಲಕ ತನ್ನ ಇರುವಿಕೆಯೇ ತನ್ನ ಸಂತೋಷವೆಂಬುದನ್ನು ಕಾಣಿಸುತ್ತಾನೆ. ಪ್ರಪಂಚದ ಅತ್ಯುತ್ತಮ ಕಾದಂಬರಿಗಳ ಪಟ್ಟಿಯಲ್ಲಿ ಒಂದಾದ ‘ದಿ ಔಟ್ಸೈಡರ್’ ಬರೆದ ಆಲ್ಬರ್ಟ್ ಕಾಮು ಮನುಷ್ಯನಲ್ಲಿ ಭ್ರಮಾತ್ಮಕ ಮನಸ್ಸು, ಪ್ರಾಮಾಣಿಕ ಮನಸ್ಸು ಮತ್ತು ಪ್ರತಿಭಟನೆಯ ಮನಸ್ಸನ್ನು ಗುರುತಿಸುತ್ತಾನೆ. ಕಾಮು ತನ್ನ ಗುರು ಜೀನ್ ಗ್ರೆನಿಯರ್ 1935ಲ್ಲಿ ಬರೆದ ಪ್ರಬಂಧ ಸಂಕಲನದಲ್ಲಿನ “ಈ ದೃಶ್ಯ ಪ್ರಪಂಚ ಎಷ್ಟು ಅದ್ಭುತ, ಯೌವ್ವನದ ಸುಖ ಎಂಥ ತೀವ್ರ ಬಗೆಯದು, ನಿಜ; ಆದರೆ ಈ ಜಗತ್ತಿನಲ್ಲಿ ದಾರ್ಷ್ಟ್ಯ ಅನ್ಯಾಯಗಳು ತುಂಬಿವೆ; ಮನುಷ್ಯನ ಒಳಿತಿನ ಬಗ್ಗೆ ಪ್ರಕೃತಿ ಭಾವ-ಹೀನವಾಗಿ, ಘೋರ ನಿರ್ಲಕ್ಷವನ್ನು ಮೆರೆದು ನಿರ್ಘೃಣವಾಗಿದೆ” ಎಂಬ ವಿಚಾರ ಸರಣಿಯಿಂದ ಪ್ರಭಾವಿತನಾಗಿ ತನ್ನ ಬರವಣಿಗೆಯಲ್ಲಿ ಅಸಂಗತವಾದವನ್ನು ದಟ್ಟವಾಗಿ ಪ್ರತಿಪಾದಿಸುತ್ತಾನೆ. ಈತ ಬದುಕಿದ್ದ ಕಾಲದಲ್ಲಿ ಯುರೋಪಿನಲ್ಲಿ ಕ್ರಾಂತಿಗಳು ಸಂಭವಿಸಿದ್ದನ್ನು ಹತ್ತಿರದಿಂದ ಕಂಡು “ಕ್ರಾಂತಿಗಳು ಸರ್ವಾಧಿಕಾರಿಯನ್ನು ಪಟ್ಟಕ್ಕೆ ತರುತ್ತವೆ. ಇಲ್ಲಿ ವ್ಯಕ್ತಿ ಗುಲಾಮನಾಗುತ್ತಾನೆ” ಎನ್ನುವ ಕಾಮು ವ್ಯಕ್ತಿವಾದಿಯಾಗಿದ್ದ. ಕ್ರಾಂತಿಯ ನಂತರದ ಆಧುನಿಕ ಜಗತ್ತಿನ ಅವನತಿಯ ಬಗ್ಗೆ, ಭವಿಷ್ಯದ ಬಗ್ಗೆ ಸ್ಪಷ್ಟ ಗ್ರಹಿಕೆಯಿದ್ದ ಕಾಮು ನಂತರ ‘ನಾನು ಆಧುನಿಕನಲ್ಲ’ ಎಂದು ಘೋಷಿಸುತ್ತಾನೆ. ‘ದಿ ಔಟ್ಸೈಡರ್’ ಕಾಮುವಿನ ಮೊದಲ ಕಾದಂಬರಿಯಾದ್ದರಿಂದ ಸಹಜವಾಗಿ ಇದು ಅವನ ವಿಚಾರದ ಪೂರ್ವಘಟ್ಟವನ್ನು ದಾಖಲಿಸುತ್ತದೆ.
ಈ ಕಾದಂಬರಿಯ ನಾಯಕ ಮಾತಿನ ಮಿತಿ ಬಲ್ಲವನು. ಹಾಗೆಯೇ ಬುದ್ಧಿಯ ಶಕ್ತಿಯನ್ನು ಬಲ್ಲವನು. ಅವನು ‘ಇದಂಮಿತ್ತಂ’ ಎಂದು, ‘ಹೌದು-ಅಲ್ಲ’ ಎಂದು ಉತ್ತರ ಕೊಡುವ ದೃಷ್ಟಿವಾದಿ ಅಲ್ಲ. ಸತ್ಯ, ವಾಸ್ತವಗಳಿಂದ ಭೀಕರ ಗೊಂದಲಕ್ಕೆ ಒಳಗಾಗದೆ ತನ್ನ ಹಳೆಯ ಪ್ರತಿಮೆಗಳನ್ನು ಕಳಚಿಕೊಳ್ಳಲು ಪ್ರಯತ್ನಿಸುತ್ತಾನೆ. ಹೊಸ ಕಾಲದ ಆಧುನಿಕ ಜಗತ್ತಿನಲ್ಲಿ ಕೂಡ ಎಲ್ಲವೂ ಚದುರಿ ಛಿದ್ರವಾಗಿ ಹೋಗಿರುವುದನ್ನು ಮತ್ತು ಅದರಿಂದ ತನ್ನ ಮನಸ್ಸು ಅಪಾರವಾದ ದಿಗ್ಭ್ರಮೆಗೆ ಒಳಗಾಗಿ ತನ್ನ ಸಾವಿನ ಕೊನೆಯ ಕ್ಷಣಗಳನ್ನು ಬದುಕುವುದರ ಕಡೆಗೆ ಹೆಚ್ಚು ಆಸಕ್ತನಾಗುತ್ತಾನೆ. ತನ್ನ ಅಸ್ತಿತ್ವದ ಸ್ವಾತಂತ್ರ್ಯವನ್ನು ಬಯಸುತ್ತಾನೆ. ‘ಆಲ್ಬರ್ಟ್ ಕಾಮು ಮತ್ತು ಅಸಂಗತವಾದ’ ಲೇಖನದಲ್ಲಿ ಟಿ. ಪಿ. ಅಶೋಕ ಅವರು “ಅಸಂಗತತೆಯು ಭವಿಷ್ಯ ಇಲ್ಲ ಎನ್ನುತ್ತದೆ. ಆದರೆ, ಇದು ನನ್ನ ಆಂತರಿಕ ಸ್ವಾತಂತ್ರ್ಯಕ್ಕೆ ಕಾರಣವಾಗುತ್ತದೆ. ಎಂದು ಕಾಮು ಹೇಳುತ್ತಾನೆ. ಎಲ್ಲವೂ ಸಾವಿನಲ್ಲಿ ಕೊನೆಗೊಳ್ಳುವುದರಿಂದ, ಯಾರೂ ಶಾಶ್ವತರಲ್ಲದ್ದರಿಂದ ಮೇಲಿನ ಶಕ್ತಿಯೊಂದು ನಮ್ಮ ಸ್ವಾತಂತ್ರ್ಯ ನಿರ್ಧರಿಸುತ್ತದೆ ಎಂಬುದನ್ನು ಒಪ್ಪಿಕೊಳ್ಳದಿದ್ದಾಗ ಮನುಷ್ಯ ಸ್ವತಂತ್ರನಾಗುತ್ತಾನೆ. ಅಸಂಗತ ಸ್ಥಿತಿ ಮುಟ್ಟಿದ ಮನುಷ್ಯನಿಗೆ ಮಾತ್ರ ಇಂಥ ವಿಮೋಚನೆ ಸಾಧ್ಯ. ಏಕೆಂದರೆ, ತನ್ನ ಕ್ರಿಯೆಗೆ ಬಾಹ್ಯ ಶಕ್ತಿಯೊಂದು ಕಾರಣವಾಗಿದೆ. ತನ್ನ ಕ್ರಿಯೆಗಳಿಗೆ ವ್ಯಕ್ತಿ ತಾನೇ ಜವಾಬ್ದಾರನಾಗಬೇಕಾಗುತ್ತದೆ. ದೈನಂದಿನ ನಿದ್ರೆಯಿಂದ ಎಚ್ಚೆತ್ತು ಪ್ರಜ್ಞಾವಂತನಾಗುತ್ತಿರುವ ಈ ಸ್ಥಿತಿ ಇಂಥ ಸ್ವಾತಂತ್ರ್ಯದ ಪ್ರಥಮ ಹೆಜ್ಜೆಯಾಗುತ್ತದೆ….. ಪ್ರಶ್ನೆ: ಇಂಥ ವಿಶ್ವದಲ್ಲಿ ಬದುಕಿನ ಅರ್ಥವೇನು? ಈ ಕ್ಷಣದಲ್ಲಿ ಏನೂ ಇಲ್ಲ. ಭವಿಷ್ಯದ ಬಗ್ಗೆ ಅಲಕ್ಷ್ಯ; ಕೊಟ್ಟಿರುವುದನ್ನೆಲ್ಲ ಉಪಯೋಗಿಸಿಕೊಳ್ಳವುದು. ಬದುಕಿನ ಅರ್ಥದಲ್ಲಿ ನಂಬಿಕೆ ಇಟ್ಟರೆ ಮೌಲ್ಯಗಳ, ಆಯ್ಕೆಯ, ತುಲನೆಗಳ ಅಳತೆಪಟ್ಟಿ ಬೇಕೇಬೇಕು. ಆಸಂಗತೆಯನ್ನು ಒಪ್ಪಿಕೊಂಡಾಗ ಈ ಸಮಸ್ಯೆ ಉದ್ಭವಿಸದು. ಮೊರೆಯಿಲ್ಲದ ಬದುಕು ಸಾಧ್ಯವೇ ಎಂಬುದನ್ನು ಅರಿಯಲು ನಾನು ತುಂಬ ಉತ್ಸುಕನಾಗಿರುವೆನೆಂದು ಕಾಮು ತಿಳಿಸುತ್ತಾನೆ” (ಪು. 14, ಸಾಧನೆ, ಸಂಪುಟ 8, ಸಂಚಿಕೆ 3, 1979) 19ನೇ ಶತಮಾನದ ಮಾನವತಾವಾದದಲ್ಲಿ, ಧಾರ್ಮಿಕ ಮೌಲ್ಯಗಳಲ್ಲಿ ನಂಬಿಕೆ ಕಳೆದುಕೊಂಡ ಪಾಶ್ಚಾತ್ಯ ಸಾಹಿತಿಗಳು ಅಸ್ತಿತ್ವವಾದವನ್ನು ತಮ್ಮ ಕೃತಿಗಳಲ್ಲಿ ಬದುಕಿನ ಕ್ರಮವಾಗಿ ದಾಖಲಿಸಿದರು. ಅಸ್ತಿತ್ವವಾದಿಗಳಲ್ಲಿ ಜಾಸ್ಟರ್ಸ್ ಮತ್ತು ಗ್ಯಾಬ್ರಿಯಲ್ ಮಾರ್ಸಲ್ ಅವರನ್ನೊಳಗೊಂಡ ಕ್ರಿಶ್ಚಿಯನ್ನರ ಗುಂಪು ಮತ್ತು ಸಾರ್ತ್ರ ಮತ್ತು ಹೈಡೆಗರ್ ಅವರ ನಿರೀಶ್ವರ ಗುಂಪು ಎಂಬ ಎರಡು ಪಂಗಡಗಳಿದ್ದರೂ ಎರಡಕ್ಕೂ ಒಂದು ಸಾಮಾನ್ಯವಾದ ನಂಬಿಕೆಯಿದೆ: ‘ಸ್ಥಿತಿ’ ಮೊದಲು ‘ತತ್ವ’ ಆಮೇಲೆ; ನೀನು ಮೊದಲು ‘ಇರುತ್ತಿ’ ಆಮೇಲೆ ‘ಆಗುತ್ತಿ’. ಈ ಕಾದಂಬರಿಯ ನಾಯಕ ದೇವರು ಇಲ್ಲ ಆದ್ದರಿಂದ ಮನುಷ್ಯ ತನ್ನನ್ನು ತಾನು ಕಂಡುಕೊಳ್ಳುವ ಸ್ಥಿತಿಗೆ ಪೂರ್ವಭಾವಿಯಾದ ಯಾವುದೇ ಬಗೆಯ ತತ್ವವನ್ನು ಅನುಸರಿಸಬೇಕಾಗಿಲ್ಲ ಎಂದು ಬದುಕುತ್ತಾನೆ. ಮನುಷ್ಯ ಹುಟ್ಟಿದ ನಂತರ ಏನನ್ನೂ ಪಡೆದು ಬಂದಿರುವುದಿಲ್ಲ; ಜೀವನದಲ್ಲಿ ಎದುರಾಗುವ ಕ್ಷಣಗಳಲ್ಲಿ ಬಂದದ್ದನ್ನು ಕಂಡುಕೊಂಡು ಆಗಬೇಕೆಂದಿರುವುದನ್ನು ಮಾಡಿಕೊಳ್ಳಬೇಕು; ಮಾನವ ಜೀವನದಲ್ಲಿ ತನ್ನ ಮನುಷ್ಯತ್ವವನ್ನು ತಾನೇ ಸೃಷ್ಟಿಸಿಕೊಳ್ಳಬೇಕು. ಅಂದರೆ ತನ್ನ ಗುಣ ಸ್ವಭಾವಕ್ಕೆ ಸಂಪೂರ್ಣ ತಾನೇ ಹೊಣೆಯಾಗಬೇಕು. ತನ್ನ ಕ್ಷಣಗಳಿಗೆ ತಾನೇ ಜವಾಬ್ದಾರನಾಗಬೇಕು. ಮನುಷ್ಯ ತನ್ನ ಇರುವಿಕೆಯನ್ನು ಗ್ರಹಿಸಿದ ಮೇಲೆ ತಾನು ಏನಾಗಬೇಕೆಂಬುದನ್ನು ನಿಶ್ಚಯಿಸುವ ಹೊಣೆ, ಸ್ವಾತಂತ್ರ್ಯ ಅವನ ಮೇಲೆ ಇರುತ್ತದೆ. ಅವನ ಗುಣದೋಷಗಳು ಮತ್ತು ಮನುಷ್ಯನನ್ನು ಮನುಷ್ಯನನ್ನಾಗಿ ಮಾಡುವ ಮೌಲ್ಯಗಳು ಸಾರ್ವತ್ರಿಕ ಪೂರ್ವ ಸಿದ್ಧ ಎಂದು ಭಾವಿಸಿ ಮನುಷ್ಯನೆಂದರೆ ಹೀಗೆ ಎಂಬ ಖಚಿತವಾದ ತೀರ್ಮಾನಗಳನ್ನು ನಿರಾಕರಿಸಿ ಪೂರ್ವಸಿದ್ಧ ಸತ್ಯಗಳ ಸತ್ವಗಳ ಉದ್ದೇಶಪೂರ್ವಕವಾದ ನಿಶ್ಚಯಗಳಿಂದ ಬಿಡುಗಡೆಗೊಳ್ಳುವ ಪ್ರಯತ್ನಗಳನ್ನು ಈ ಕಾದಂಬರಿಯ ನಾಯಕ ಮಾರ್ಸೋ ಮಾಡುತ್ತಾನೆ.
ಬದುಕೇ ಹೀಗೆ. ಯಾವಾಗಲೂ ಅನಿರೀಕ್ಷಿತ ಅಸಂಗತಗಳಲ್ಲಿ ಅಚ್ಚರಿ ಮತ್ತು ದಿಗ್ಭ್ರಮೆಗಳನ್ನು ಹುಟ್ಟಿಸುತ್ತದೆ. ಅನುಭವಗಳು ಎದುರಾದಂತೆ ಮುಂಚಿನ ನಂಬಿಕೆಗಳು ಹುಸಿಹೋಗುತ್ತವೆ. ಊಹಿಸಿದ್ದು ಯಾವುದೇ ಆಗಲಿ ಊಹಿಸಿದಂತೆ ಇರುವುದಿಲ್ಲ. ಇರುವಿಕೆಯಲ್ಲಿಯೇ ಜೀವನದ ಭೂತ-ಭವಿಷ್ಯಗಳು ನಿರ್ಧರಿತವಾಗುತ್ತವೆ. ಕುಗ್ಗುವ ಮೊದಲು ಹಿಗ್ಗಿದ, ಬೀಳುವ ಮೊದಲು ನಿಂತ, ಕುಂದುವ ಮೊದಲು ಬಲಪಡಿಸಿದ, ಹೋಗುವ ಮೊದಲು ಬಂದ ಅನುಭವಗಳಿಲ್ಲದೆ ಹೋದಾಗ ಅವುಗಳ ನಿಜ ಅರ್ಥಗಳೂ ಸಿಕ್ಕದೇ ಹೋಗಿಬಿಡುತ್ತವೆ. ಹಾಗೇ ನೋಡಿದರೆ ಕ್ಷಣ ಕ್ಷಣದ ಹುಟ್ಟು ಎನ್ನುವುದು ಸಹ ಕ್ಷಣ ಕ್ಷಣದ ಸಾವೂ ಆಗಿರುತ್ತದೆ. ಹೀಗೆ ಮನುಷ್ಯ ತನ್ನ ಇರುವಿಕೆಯಲ್ಲಿಯೇ ತಾನು ಆಗಬೇಕಾದದ್ದನ್ನು ರೂಪಿಸಿಕೊಳ್ಳುತ್ತಾನೆ. ಇರುವಿಕೆಯಲ್ಲಿ ಮನುಷ್ಯ ತನ್ನ ವರ್ತನೆಗಳಿಗೆ ತಾನೇ ಹೊಣೆಗಾರನಾಗುತ್ತಾನೆ. ತನ್ನ ಆಗುವಿಕೆಯಲ್ಲಿ ತಾನೇ ಸಂಪೂರ್ಣ ಜವಾಬ್ದಾರನಾಗುತ್ತಾನೆ. ಅಷ್ಟೇ ಅಲ್ಲ ಮನುಷ್ಯ ನಿರಂತರ ಆಗುವಿಕೆಯಲ್ಲಿ ಮಾತ್ರ ಜೀವಂತ. ಮನುಷ್ಯನಾಗುವ ಪ್ರಕ್ರಿಯೆಯನ್ನು ತನ್ನ ಇರುವಿಕೆಯಲ್ಲಿಯೇ ಕಾಣಬೇಕು. ಅದಕ್ಕೆ ತೊಡಕಾಗುವ ಸಂಗತಿಗಳನ್ನು ಮನುಷ್ಯ ಹೇಗೆ ನಿವಾರಿಸಿಕೊಳ್ಳುತ್ತಾನೆ ಎನ್ನುವುದನ್ನು ಅಸ್ತಿತ್ವವಾದಿಗಳು ತೀವ್ರವಾಗಿ ಹುಡುಕಾಡುತ್ತಾರೆ. ತಮ್ಮ ಅನುಭವಕ್ಕೆ ಅಸಂಗತ ಎನ್ನಿಸುವ ಸಂಗತಿಗಳನ್ನು ಶೋಧಿಸುತ್ತಾರೆ. ಹಾಗೆ ರೂಪಗೊಂಡ ಆಲ್ಬರ್ಟ್ ಕಾಮು ಬರೆದ ದಿ ಔಟ್ ಸೈಡರ್ ಕಾದಂಬರಿ ಅನುಭವ ಲೋಕದ ಭಿನ್ನ ಆಖ್ಯಾನಗಳ ವ್ಯಾಖ್ಯಾನವಾಗಿದೆ.
ಡಿ.ಎ. ಶಂಕರ್ ಅವರ ಅನುವಾದ ‘ಅನ್ಯ’ ಕಾದಂಬರಿ ಚಿಕ್ಕ ವ್ಯಾಖ್ಯಗಳಿಂದ ಅರ್ಥಪೂರ್ಣವಾಗಿದೆ. ಇಡೀ ಕಾದಂಬರಿ ಉತ್ತಮ ಪುರುಷದಲ್ಲಿ ನಿರೂಪಣೆಗೊಂಡು ಓದುಗನ ತೀವ್ರತೆಯನ್ನು ಹೆಚ್ಚಿಸಿದೆ. ಕಾಮುನ ‘ಕ್ಯಾಲಿಗುಲ ಅಂಡ್ ಕ್ರಾಸ್ ಪರ್ಪಸ್’ ನಾಟಗಳನ್ನು ಸಹ ‘ಕಾಲಿಗುಲ ಮತ್ತು ತಪ್ಪಿದ ಎಳೆ’, ಮುಲ್ಕರಾಜ್ ಆನಂದರ ಅನ್ಟಚಬಲ್ ‘ಅಸ್ಪೃಷ್ಯರು’, ಫ್ರೆಂಚ್ ಲೇಖಕ ವಾಲ್ಟೇರ್ನ ‘ಕ್ಯಾಂಡೀಡ್’,ಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಅಷ್ಟೇ ಅಲ್ಲದೆ ತೇಜಸ್ವಿಯವರ ‘ಕರ್ವಾಲೊ’, ‘ಕುಬಿ ಮತ್ತು ಇಯಾಲ’, ಅನಂತಮೂರ್ತಿಯವರ ‘ಆಕಾಶ ಮತ್ತು ಬೆಕ್ಕು’, ‘ಕ್ಲಿಪ್ ಜಾಯಿಂಟ್’, ಭೈರಪ್ಪ ಅವರ ‘ಸಾಕ್ಷಿ’, ಚದುರಂಗರ ‘ವೈಶಾಖ’, ಶಿವರಾಮ ಕಾರಂತರ ‘ಸರಸಮ್ಮನ ಸಮಾಧಿ’, ಕನಕದಾಸರ ‘ರಾಮಧಾನ್ಯ ಚರಿತೆ’, ‘ಕೀರ್ತನೆಗಳು’, ‘ನಳಚರಿತೆ’ಗಳನ್ನೊಳಗೊಂಡ ‘ಗೋಲ್ಡನ್ ಫ್ಲಾಶ್’, ಅಕ್ಕಮಹಾದೇವಿಯ ವಚನಗಳನ್ನು ಇಂಗ್ಲೀಷಿಗೆ ಅನುವಾದಿಸಿದ್ದಾರೆ. ಅವರ ಭಾಷಾಂತರ ಸಮರ್ಥವಾದದ್ದು ಎಂದು ಹೆಸರುವಾಸಿಯಾಗಿದೆ. ‘ಅನ್ಯ’ದ ಅನುವಾದದಲ್ಲಿ ಅವರ ಸೃಜನಶೀಲ ಪ್ರತಿಭೆ ಸ್ಪಷ್ಟವಾಗಿದ್ದರೂ ಕಾಲಕಾಲಕ್ಕೆ ಭಾಷಾಂತರಗಳು ತಮ್ಮ ಸಮಕಾಲೀನ ಅಗತ್ಯಗಳನ್ನು ಮೀರುತ್ತವೆ. ಅವರು ಅನುವಾದದಲ್ಲಿ ಬಳಸಿದ ‘ಅನುತಾಪ’, ‘ಬಾತ್ಮೀದಾರ’ದಂತಹ ಪ್ರಮಾಣೀಕೃತ ಪದಗಳು ವರ್ಜ್ಯವೆನಿಸುತ್ತವೆ. ಅದರ ಹೊರತಾಗಿಯೂ ಕನ್ನಡದಲ್ಲಿ ಮತ್ತೊಂದು ಅನುವಾದ ಇದುವರೆಗೂ ಹುಟ್ಟಿಕೊಳ್ಳದಷ್ಟು ಸಮರ್ಥವಾಗಿದೆ ಎಂಬುದು ಮಾತ್ರ ನಿರ್ವಿವಾದ.
~ ಮಂಜುನಾಥ ಬಾದಾಮಿ

ಮಂಜುನಾಥ ಬಾದಾಮಿ ಹಂಪಿಯ ಕನ್ನಡ ವಿಶ್ವವಿದ್ಯಾನಿಲಯದ ಸಂಶೋಧನಾ ವಿದ್ಯಾರ್ಥಿ. ‘ಕನ್ನಡ ಕಥಾಸಾಹಿತ್ಯ ಕುರಿತ ವಿಮರ್ಶೆಗಳ ತಾತ್ವಿಕ ಅಧ್ಯಯನ’ ವಿಷಯದಲ್ಲಿ ಇತ್ತೀಚೆಗೆ ಪಿಎಚ್. ಡಿ. ಪ್ರಬಂಧ ಸಲ್ಲಿಸಿದ್ದಾರೆ. ಸಾಹಿತ್ಯದ ಗಂಭೀರ ಓದು, ಕತೆ, ಕವನ ಮತ್ತು ವಿಮರ್ಶೆ ಬರವಣಿಗೆಯಲ್ಲಿ ಆಸಕ್ತರು. ಸುಗಮ ಸಂಗೀತ ಗಾಯನದ ಹವ್ಯಾಸಿ ಕಲಾವಿದ. ಚಾರಣ ಇವರ ಇಷ್ಟದ ಸಂಗತಿ.