ಡಾ. ರೆಸೆಪ್ ಸೆನ್ತುರ್ಕ್ ಸಮಾಜಶಾಸ್ತ್ರ ಮತ್ತು ಪಾರಂಪರಿಕ ಇಸ್ಲಾಮಿಕ್ ಜ್ಞಾನಶಿಸ್ತುಗಳಲ್ಲಿ ಪರಿಣತರು. ಇವರು ಸ್ಥಾಪಿಸಿ, ಸದ್ಯ ನಿರ್ದೇಶಕರಾಗಿ ಕಾರ್ಯಾಚರಿಸುತ್ತಿರುವ ಇಸ್ತಾಂಬುಲ್ ಫೌಂಡೇಶನ್ ಫಾರ್ ಎಜುಕೇಶನ್ ಆಂಡ್ ರಿಸರ್ಚ್ (ISAR) ಸಂಸ್ಥೆಯು ಸಾಂಪ್ರದಾಯಿಕ ಓಟೋಮನ್ ಮದ್ರಸಾ ಪದ್ಧತಿಯನ್ನು ಆಧುನಿಕ ಸಮಾಜಶಾಸ್ತ್ರ ಮತ್ತು ಇನ್ನಿತರ ಜ್ಞಾನಶಿಸ್ತುಗಳೊಂದಿಗೆ ಸಂಯೋಜಿಸಿ ಸೂಫಿಸಂನ ಚೌಕಟ್ಟಿನೊಳಗೆ ಪ್ರಸ್ತುತಪಡಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ. ಹಂಝ ಕರಮಾಲಿಯವರೊಂದಿಗೆ ಕಲಾಮ್, ಆಧುನಿಕತೆ, ಪರಂಪರೆ ಮತ್ತು ಸೂಫಿಸಂ ಎಂಬಿತ್ಯಾದಿ ವಿಷಯಗಳ ಕುರಿತು ನಡೆಸಿರುವ ಚರ್ಚೆಯ ಪ್ರಸಕ್ತ ಭಾಗಗಳನ್ನು ಇಲ್ಲಿ ನೀಡಲಾಗಿದೆ.
ಹಂಝ: ರಜಬ್ ಸೆನ್ತುರ್ಕ್, ಇಸ್ಲಾಮಿನ ಸಾಂಪ್ರದಾಯಿಕ ಜ್ಞಾನಶಿಸ್ತು ಮತ್ತು ಆಧುನಿಕ ಜ್ಞಾನಶಿಸ್ತುಗಳ ಕುರಿತು ತಮಗಿರುವ ಪರಿಣತಿಯ ಆಧಾರದಲ್ಲಿ ಇವೆರಡರ ಬಗ್ಗೆ ನಿಮ್ಮ ಅನಿಸಿಕೆಯೇನು? ಮತ್ತು ಇವೆರಡರ ನಡುವೆಯಿರುವ ಅಂತರಗಳೇನು?
ಡಾ. ಸೆನ್ತುರ್ಕ್: ಇಸ್ಲಾಮಿಕ್ ನಾಗರಿಕತೆಯಲ್ಲಿ ಬೆಳೆದ, ಹೊರ ಜಗತ್ತಿನೊಂದಿಗೆ ಅಷ್ಟೇನು ಸಂಪರ್ಕವಿಲ್ಲದ ವಿದ್ವಾಂಸರನ್ನು ಕಳೆದೆರೆಡು ಶತಮಾನಗಳಿಂದ ಕಾಡುತ್ತಿರುವ ಪ್ರಶ್ನೆಯನ್ನಾಗಿದೆ ನೀವು ಕೇಳಿರುವುದು. ಪ್ರಾರಂಭದಿಂದಲೇ ಇಸ್ಲಾಮಿಕ್ ನಾಗರಿಕತೆಯು ಹೊರ ಜಗತ್ತಿಗೆ ತೆರೆದುಕೊಂಡಿತ್ತು. ಗ್ರೀಕ್, ಭಾರತ, ಇರಾನ್ ಮತ್ತು ಈಜಿಪ್ಟ್ ಮುಂತಾದ ನಾಗರಿಕತೆಗಳಿಂದ ಜ್ಞಾನಾರ್ಜನೆಗೈಯ್ಯಲು ಪೂರ್ವಜರಾದ ವಿದ್ವಾಂಸರು ಬಹಳ ಉತ್ಸುಕರಾಗಿದ್ದರು. ಆ ನಿಟ್ಟಿನಲ್ಲಿ ಇವೆಲ್ಲಾ ನಾಗರಿಕತೆಗಳ ಮುಖ್ಯ ಗ್ರಂಥಗಳನ್ನು ಅರಬಿ ಭಾಷೆಗೆ ತರ್ಜುಮೆ ಮಾಡಲಾಗಿತ್ತು. ಮತ್ತು ಅವುಗಳಿಂದ ದೊಡ್ಡಮಟ್ಟದ ಪ್ರಯೋಜನವನ್ನೂ ಪಡೆಯಲಾಗಿತ್ತು. ಹೀಗಿದ್ದಾಗಲೂ ಇಸ್ಲಾಮಿಕ್ ಲೋಕಗ್ರಹಿಕೆಯನ್ನು (Worldview) ಜತನದಿಂದ ಕಾಪಿಟ್ಟುಕೊಳ್ಳುವುದರಲ್ಲಿ ಅವರು ಜಾಗರೂಕರಾಗಿದ್ದರು. ಈ ಇಸ್ಲಾಮಿಕ್ ಲೋಕಗ್ರಹಿಕೆಯು ಇಸ್ಲಾಮಿನ ಮೂಲತತ್ವಜ್ಞಾನ (Ontology), ಜ್ಞಾನ ಮೀಮಾಂಸೆ (Epistemology) ಮತ್ತು ವಿಧಾನಶಾಸ್ತ್ರಗಳ (Methodology) ಸಂಕಲನವಾಗಿದೆ. ಇಸ್ಲಾಮಿಕ್ ಆಂಟಾಲಜಿಯು ಮುಲ್ಕ್, ಮಲಕೂತ್ ಹಾಗೂ ಲಾಹೂತ್ ಎಂಬ ವಿವಿಧ ಪದರುಗಳನ್ನೊಳಗೊಂಡಿದೆ. ಇವುಗಳ ಪೈಕಿ ಮುಲ್ಕ್ ಮತ್ತು ಮಲಕೂತನ್ನು ಉಪವಿಭಾಗಗಳಾಗಿ ವಿಂಗಡಿಸಬಹುದಾಗಿದೆ.
ಹಂಝ: ಮುಲ್ಕ್ ಮತ್ತು ಮಲಕೂತನ್ನು ವಿವರಿಸಬಹುದೇ?
ಡಾ. ಸೆನ್ತುರ್ಕ್: ಮುಲ್ಕನ್ನು ಭೌತಿಕ ಜಗತ್ತು ಅಥವಾ ವಸ್ತು ಪ್ರಪಂಚವೆಂದೂ, ಮಲಕೂತನ್ನು ‘ಆಲಮುಲ್ ಗೈಬ್’ ಅಥವಾ ಅಭೌತಿಕ ಜಗತ್ತೆಂದೂ ವಿಶ್ಲೇಷಿಸಬಹುದು. ಅಭೌತಿಕ ಪ್ರಪಂಚದಲ್ಲಿರುವ ಲಾಹೂತನ್ನು ದೈವಿಕ ಜಗತ್ತೆನ್ನಲಾಗುತ್ತದೆ. ಅಲ್ಲಾಹನನ್ನು ಅತ್ಯುನ್ನತನಾಗಿ ಪರಿಗಣಿಸಲಾಗುವ ಅಥವಾ ಅವನ ಇರುವಿಕೆಗೆ ಮಾತ್ರ ಸೀಮಿತವಾದುದಾಗಿದೆ ಲಾಹೂತ್. ಸೂಫಿಗಳ ‘ಅಲ್ಲಾಹನಲ್ಲದ ಬೇರಾವುದಕ್ಕೂ ಅಸ್ತಿತ್ವವಿಲ್ಲ’ (ಲಾ ಮೌಜೂದ ಇಲ್ಲಲ್ಲಾಹ್) ಎಂಬ ಮಾತಿನ ತಿರುಳು ಕೂಡಾ ಇದೇ ಆಗಿದೆ. ಲಾಹೂತಲ್ಲದ ಇತರ ಪ್ರಪಂಚಗಳ ನಿರಾಕರಣೆ ಸಲ್ಲದು. ಮುಲ್ಕ್ ಹಾಗೂ ಮಲಕೂತ್ಗಳ ಸೃಷ್ಟಿಕರ್ತನು ಅಲ್ಲಾಹನೇ ಆಗಿರುವನು. ಆದ್ದರಿಂದಲೇ ಇವೆರಡರ ಅಸ್ತಿತ್ವವನ್ನು ಅಲ್ಲಗಳೆಯುವುದು ಮಹಾಪಾಪವಾಗುತ್ತದೆ. ಇತರ ನಾಗರಿಕತೆಗಳೊಂದಿಗೆ ಕೊಡುಕೊಳ್ಳುವಿಕೆ ಚಾಲ್ತಿಯಲ್ಲಿರುವಾಗಲೂ ಮುಸ್ಲಿಮ್ ವಿದ್ವಾಂಸರು ಈ ಬಹುಮುಖ ಆಂಟಾಲಜಿಯನ್ನು ಕೈಬಿಡಲಿಲ್ಲ. ಇವ್ಯಾವುದೂ ಕೂಡಾ ಗ್ರೀಕರಿಂದ ಎರವಲು ಪಡೆದವುಗಳೂ ಅಲ್ಲ. ಇಸ್ಲಾಮಿಕ್ ಮತ್ತು ಆಧುನಿಕ ಜ್ಞಾನಶಿಸ್ತುಗಳೆಡೆಯಲ್ಲಿನ ತೌಲನಿಕ ಅಧ್ಯಯನಕ್ಕಿಳಿಯುವಾಗಲೂ ಇವುಗಳ ಕುರಿತು ನಾವು ಎಚ್ಬರ ವಹಿಸಬೇಕಿದೆ. ಈ ಅಧ್ಯಯನಗಳು ಆಂಟಾಲಜಿಯಿಂದ ಪ್ರಾರಂಭಿಸಬೇಕಿದೆ. ಇಸ್ಲಾಮಿಕ್ ಜ್ಞಾನಶಿಸ್ತು ಮತ್ತು ಆಧುನಿಕ ಜ್ಞಾನಶಿಸ್ತುಗಳ ಅಸ್ತಿತ್ವದ (Existence) ಕುರಿತಾದ ಭಿನ್ನ ಗ್ರಹಿಕೆಗಳ ಕುರಿತಾದ ತಿಳಿವಳಿಕೆ ಬಹಳ ಅನಿವಾರ್ಯ. ಆಧುನಿಕ ಜ್ಞಾನಶಿಸ್ತುಗಳು ಭೌತವಾದ (Materialistic) ಮತ್ತು ಸಂಕುಚಿತತೆಯ (Reductionistic) ಪ್ರತೀಕಗಳಾಗಿವೆ. ಇದು ಪ್ರಪಂಚದಲ್ಲಿರುವ ಸರ್ವವನ್ನೂ ಸಂಕುಚಿತವಾಗಿರುವ ಪರಿಕಲ್ಪನೆಗೆ ಸೀಮಿತಗೊಳಿಸಲು ಶ್ರಮಿಸುತ್ತದೆ. ಸಮಾಜಶಾಸ್ತ್ರವು ಆದರ್ಶವಾದವನ್ನು (Idealistic) ಪ್ರತಿನಿಧಿಸುತ್ತದೆ. ಅರಿಸ್ಟಾಟಲ್ ಮತ್ತು ಪ್ಲೆಟೋರಿಂದ ಶುರುವಾದ ಭೌತವಾದ ಮತ್ತು ಆದರ್ಶವಾದಗಳ ನಡುವಿನ ಸಂವಾದಗಳು ಇಂದಿಗೂ ಚಾಲ್ತಿಯಲ್ಲಿವೆ. ಆದರೆ, ಇಸ್ಲಾಮಿಕ್ ಜ್ಞಾನಶಿಸ್ತುಗಳು ಏಕರೂಪವಾಗಿರದೆ ವಿಶಾಲವಾಗಿವೆ. ಭೌತೀಯತೆಯು ಅವುಗಳ ಪೈಕಿ ಒಂದಂಶವೆನ್ನಬಹುದು. ಯಾವುದನ್ನೂ ಸಂಪೂರ್ಣವಾಗಿ ಕಡೆಗಣಿಸದ, ಪರಮವೆಂದೂ ಪರಿಗಣಿಸದ ಸಾಮರಸ್ಯದ ಹೊಂದಾಣಿಕೆ ಇಸ್ಲಾಮಿಕ್ ಜ್ಞಾನಶಿಸ್ತುಗಳಲ್ಲಿದೆ.
ಇವೆಲ್ಲಕ್ಕೂ ಮಿಗಿಲಾಗಿ, ದೇವರ ಅಸ್ತಿತ್ವವನ್ನು ಅಂಗೀಕರಿಸಲಾಗುತ್ತದೆ. ಬಹುಮುಖ ಆಂಟಾಲಜಿಯಂತೆಯೇ ಬಹುಮುಖ ಜ್ಞಾನಮೀಮಾಂಸೆ (Epistemology) ಕೂಡಾ ಇಸ್ಲಾಮಿನಲ್ಲಿದೆ. ಭಿನ್ನ ಅಸ್ತಿತ್ವಗಳ ಕಲಿಕೆಗೆ ಭಿನ್ನ ಜ್ಞಾನಮಾರ್ಗಗಳನ್ನು ಅನುಸರಿಸಬೇಕು ತಾನೇ. ಭಿನ್ನ ಅಸ್ತಿತ್ವಗಳನ್ನು ಪಡೆದಿರುವ ಕಲ್ಲು ಮತ್ತು ದೇವದೂತರನ್ನು ಒಂದೇ ಜ್ಞಾನಮಾರ್ಗಗಳ ಮೂಲಕ ಅರಿತುಕೊಳ್ಳುವುದು ಅಸಾಧ್ಯ. ಇವುಗಳನ್ನು ಮರಾತಿಬುಲ್ ಉಲೂಮ್ ಎನ್ನಲಾಗುತ್ತದೆ. ತರ್ಕಬದ್ಧ ಜ್ಞಾನ, ಇಂದ್ರಿಯ ಜ್ಞಾನ, ದೇವಾತೀರ್ಣವಾದ ಜ್ಞಾನಗಳು ಇವೆಲ್ಲವೂ ಇಸ್ಲಾಮಿನಲ್ಲಿ ಅಂಗೀಕೃತವಾಗಿವೆ. ಅಂತೆಯೇ ಅನುಭವಗಳಿಂದ ಲಭ್ಯವಾಗುವ ಕಶ್ಫ್ (unveiling), ಇಲ್ಹಾಮ್ (inspiration), ರುಅಯ (dream vision) ಮತ್ತು ಹದಸ್( Intuition) ಗಳನ್ನೂ ಜ್ಞಾನಮಾರ್ಗಗಳಾಗಿ ಪರಿಗಣಿಸಲಾಗುತ್ತದೆ. ಇವೆಲ್ಲವನ್ನೂ ಕ್ರಮಾನುಗತವಾಗಿ ವಿಗಂಡಿಸಲಾಗಿದೆ ಮತ್ತು ಇವ್ಯಾವುವೂ ಕೂಡಾ ಬುದ್ಧಿಮತ್ತೆಗೆ ಅಸಂಬದ್ಧವಾಗಿರದೆ ತಾರ್ಕಿಕವಾಗಿವೆ. ವ್ಯಕ್ತಿನಿಷ್ಠ ಜ್ಞಾನಮಾರ್ಗಗಳಾದ ಕಶ್ಫ್, ಇಲ್ಹಾಮ್ ಹಾಗೂ ವಸ್ತುನಿಷ್ಠ ಜ್ಞಾನಮಾರ್ಗಗಳ ನಡುವೆ ಕಲಹಗಳಿಲ್ಲದೆ ಹೊಂದಾಣಿಕೆಯಿದೆ.
ಈ ಬಹುಮುಖೀ ವೈವಿಧ್ಯಮಯ ಜ್ಞಾನಮಾರ್ಗಗಳು ಪರಸ್ಪರ ಹೊಂದಾಣಿಕೆಯಿಂದ ಕಾರ್ಯಾಚರಿಸುತ್ತಿವೆ. ವೈವಿಧ್ಯಮಯವಾದ ಜ್ಞಾನಮಾರ್ಗಗಳಿಗನುಸಾರವಾಗಿ ವಿಧಾನಶಾಸ್ತ್ರಗಳಲ್ಲಿಯೂ( methodology) ವಿವಿಧತೆಯಿದೆ. ತರ್ಕಬದ್ಧ ಜ್ಞಾನ, ಅನುಭವ ಜ್ಞಾನ ಮತ್ತು ದೈವಿಕ ಜ್ಞಾನ ಇವೆಲ್ಲಕ್ಕೂ ವಿಭಿನ್ನವಾದ ವಿಧಾನಶಾಸ್ತ್ರಗಳಿವೆ. ಇವುಗಳನ್ನು ಮರಾತಿಬುಲ್ ಉಸೂಲ್ ಎನ್ನಲಾಗುತ್ತದೆ. ಇದಕ್ಕೆ ಭಿನ್ನವಾಗಿ ಪಾಶ್ಚಿಮಾತ್ಯ ಜ್ಞಾನಶಿಸ್ತುಗಳಲ್ಲಿ ಏಕರೂಪಿ ವಿಧಾನ ಶಾಸ್ತ್ರವನ್ನು ರೂಢಿಸಿಕೊಳ್ಳಲಾಗಿದೆ. ಈ ಮೂಲಕ ವಿಭಿನ್ನವಾದ ಜ್ಞಾನಶಿಸ್ತುಗಳ, ವೃತ್ತಿರಿಕ್ತವಾದ ಸಮಸ್ಯೆಗಳಿಗೆ ಒಂದೇ ವಿಧಾನಶಾಸ್ತ್ರದ ಮೂಲಕ ಪರಿಹಾರ ಕಂಡುಕೊಳ್ಳಲು ಹೆಣಗಾಡಲಾಗುತ್ತಿದೆ. ಅನುಭವವಾದಿಗಳು ಕೇವಲ ಅನುಭವ ಜ್ಞಾನವನ್ನೂ, ವಿಚಾರವಾದಿಗಳು ಕೇವಲ ವೈಚಾರಿಕತೆಯನ್ನೂ, ಧರ್ಮಾನುಯಾಯಿಗಳು ಧರ್ಮ ಗ್ರಂಥಗಳನ್ನೂ ಅವಲಂಬಿಸುವ, ಉಳಿದೆಲ್ಲವನ್ನೂ ಕಡೆಗಣಿಸುವ ವಿದ್ಯಮಾನ ಪಾಶ್ಚಾತ್ಯರೆಡೆಯಲ್ಲಿದೆ. ಬೌದ್ಧ ಮತ್ತು ಹಿಂದೂಗಳಂತಹ ಅನುಭಾವಿಕ ಪಂಥಗಳೂ (Mysticism) ಕೂಡಾ ಇದರಿಂದ ಹೊರತಾಗಿಲ್ಲ. ಆದರೆ ಇಸ್ಲಾಮಿಕ್ ಜ್ಞಾನಶಿಸ್ತುಗಳಲ್ಲಿ ಜ್ಞಾನಮೀಮಾಂಸೆ ಮತ್ತು ವಿಧಾನಶಾಸ್ತ್ರಗಳಲ್ಲಿರುವ ವೈವಿಧ್ಯತೆಯನ್ನು ಕಡೆಗಣಿಸಲಾಗಿಲ್ಲ.
ಅದೇ ರೀತಿ ವ್ಯಾಖ್ಯಾನ ಶಾಸ್ತ್ರದಲ್ಲಿರುವ ವ್ಯಾಖ್ಯಾನಗಳ ಅಥವಾ ಅರ್ಥಗಳ ವೈವಿಧ್ಯತೆಯನ್ನು ಪರಿಗಣನೆಗೆ ತೆಗೆದುಕೊಳ್ಳಲಾಗಿದೆ. ಇದನ್ನು ಮರಾತಿಬುಲ್ ಮಆನೀ (Levels of Meanings) ಎಂದು ಕರೆಯಲಾಗುತ್ತದೆ. ಪದಗಳಿಗೆ ಶಬ್ದಾರ್ಥ, ಭಾವಾರ್ಥಗಳಿರುವಂತೆಯೇ ಲಕ್ಷ್ಯಾರ್ಥವೂ ಇದೆ.

ಹಂಝ : ಶಬ್ದಾರ್ಥ ಮತ್ತು ಭಾವಾರ್ಥಗಳೇ?
ಡಾ. ಸೆನ್ತುರ್ಕ್: ಹೌದು, ಇವೆರಡಕ್ಕೂ ಹೊರತಾಗಿ ಲಕ್ಷ್ಯಾರ್ಥವನ್ನೂ ಇಸ್ಲಾಮಿಕ್ ವ್ಯಾಖ್ಯಾನ ಶಾಸ್ತ್ರವು ಪ್ರತಿಪಾದಿಸುತ್ತದೆ. ಇವುಗಳನ್ನು ಉದಾಹರಣೆ ಸಹಿತ ವಿವರಿಸಲು ಬಯಸುತ್ತೇನೆ. ಒಬ್ಬ ಬಾಗಿಲು ತಟ್ಟಿದಾಗ ಒಳಗಿರುವಾತ “ಇಲ್ಲಿ ಯಾರೂ ಇಲ್ಲ” ಎಂದು ಉತ್ತರಿಸಿದರೆ, ಅದರ ಶಬ್ದಾರ್ಥ “ಒಳಗಡೆ
ಯಾರೂ ಇಲ್ಲ” ಎಂದಾಗಿದ್ದರೆ, “ನೀನು ಒಳಗೆ ಬರಬೇಡ” ಎಂಬುವುದು ಲಕ್ಷ್ಯಾರ್ಥ. ಇದನ್ನು ಮಅನಲ್ ಮಅನಾ ಎನ್ನಬಹುದು. ಸಂದರ್ಭಕ್ಕನುಸಾರ ಇದನ್ನು ಮನದಟ್ಟುಮಾಡಿಕೊಳ್ಳಬೇಕಿದೆ.
ಹಂಝ: ಲಕ್ಷ್ಯಾರ್ಥವನ್ನು ಪರಮಾರ್ಥವೆನ್ನಬಹುದೇ ?
ಡಾ. ಸೆನ್ತುರ್ಕ್: ಹೌದು, ಪವಿತ್ರ ಖರ್ಆನ್ ಅರ್ಥವ್ಯಾಪ್ತಿಯು ಬಹಳ ವಿಶಾಲವಾದುದು. ಅಥವಾ ಮರಾತಿಬುಲ್ ಮಆನಿಯನ್ನು ಒಳಗೊಂಡಿದೆ ಎಂದರ್ಥ. ಖುರ್ಆನನ್ನು ತಫ್ಸೀರು ಬಿದ್ದಿರಾಯ (ಖುರ್ಆನ್ ವ್ಯಾಖ್ಯಾನಿಸಬಹುದಾದ ವ್ಯಕ್ತಿ ನೀಡುವ ಸಮರ್ಪಕವಾದ ವ್ಯಾಖ್ಯಾನ), ತಫ್ಸೀರು ಬಿರ್ರಿವಾಯ (ಖುರ್ಆನ್ ಮತ್ತು ಹದೀಸ್ ಅಥವಾ ಶಬ್ದ ಪ್ರಮಾಣ ಆಧಾರವಾಗಿಟ್ಟುಕೊಂಡು ನೀಡುವ ವ್ಯಾಖ್ಯಾನ) ಮತ್ತು ತಫ್ಸೀರು ಬಿಲ್ ಇಶಾರ (ಸೂಚನೆ ಮೂಲಕ ನೀಡುವ ವ್ಯಾಖ್ಯಾನ) ಎಂಬಿತ್ಯಾದಿ ವಿವಿಧ ಆಯಾಮಗಳಿಂದ ವ್ಯಾಖ್ಯಾನಿಸಲಾಗುತ್ತದೆ. ಖುರ್ಆನ್ ಕೇವಲ ಒಂದೇ ಅರ್ಥವನ್ನು ಹೊಂದಿದೆಯೆಂದು ಹೇಳಲಾಗದು. ವ್ಯಾಖ್ಯಾನಗಳಲ್ಲಿರುವ ವೈವಿಧ್ಯತೆಯು ಯಾವುದೇ ರೀತಿಯ ವಿರೋಧಾಭಾಸಗಳಿಗೂ ಕಾರಣವಾಗಿಲ್ಲ ಎಂಬುವುದು ಗಮನಾರ್ಹ. ಇದರಂತೆಯೇ ಪದಗಳಿಗೆ ಮಅನಾ ಹಕೀಕಿಯ್ಯ್ (ಪದದ ನಿಜಾರ್ಥ), ಮಅನಾ ಮಜಾಝಿಯ್ಯ್ (ಉಪಮೆಯ ಅರ್ಥ) ಮತ್ತು ಮಅನಾ ಉರ್ ಫಿಯ್ಯ್ (ಸಾಮಾನ್ಯ ಅರ್ಥ) ಎಂಬ ಅರ್ಥಗಳಿವೆ. ಕೊನೆಗೆ ಇವೆಲ್ಲವೂ ಮರಾತಿಬುಲ್ ಹಕೀಕಿಯ್ಯನ್ನು (ಆತ್ಯಂತಿಕ ಸತ್ಯ) ಸೇರುತ್ತವೆ. ಅಸ್ತಿತ್ವದ ವಿವಿಧ ಹಂತಗಳಿಗನುಗುಣವಾಗಿ ಸತ್ಯವೂ ಭಿನ್ನವಾಗಿರುತ್ತದೆ. ಭೌತ ಮತ್ತು ಅಭೌತ ಪ್ರಪಂಚಗಳ ವಾಸ್ತವಿಕತೆ ಒಂದೇ ಆಗಿರಲಾರದು. ಇಲ್ಲಿರುವಂತೆ ಸ್ವರ್ಗದಲ್ಲೂ ಗುರುತ್ವಾಕರ್ಷಣಾ ಬಲವಿದೆ ಎಂದು ಹೇಳಲುಬರದು. ಒಂದು ಪ್ರಪಂಚದ ವ್ಯವಸ್ಥೆಗಳೆಲ್ಲವೂ ಇನ್ನೊಂದು ಪ್ರಪಂಚಕ್ಕೆ ಅನ್ವಯವಾಗಲಾರದು. ಇರುವಿಕೆಯ ವಿವಿಧತೆಯನ್ನು ಅರಿತ ಬಳಿಕವೇ ಸೃಜನಾತ್ಮಕ
ಅಧ್ಯಯನ ಸಾಧ್ಯ. ಇಸ್ಲಾಮಿಕ್ ಜ್ಞಾನಶಿಸ್ತು ಅಳವಡಿಸಿಕೊಂಡಿರುವ ಮೂಲಭೂತ ತತ್ವಗಳ ತಿಳಿವಳಿಕೆ ಬಹಳ ಅಗತ್ಯ.
ಸಂಕುಚಿತತೆಯನ್ನು (Reductionism) ಅನುಮೋದಿಸದ ವೈವಿಧ್ಯವನ್ನು ಒಳಗೊಳ್ಳುವ ಈ ಬಹುಮುಖ ವಿಜ್ಞಾನವನ್ನು ‘open science’ (ಮುಕ್ತ ವಿಜ್ಞಾನ) ಎಂದು ನಾನು ಕರೆಯುವೆನು. ಬಹುಮುಖ ಜ್ಞಾನ ಮೀಮಾಂಸೆಯನ್ನು open epistemology ಎಂದೂ ಆಂಟಾಲಜಿಯನ್ನು open ontoIogy ಎಂದೂ ಹೇಳಲಿಚ್ಚಿಸುವೆನು. ಎಲ್ಲಾ ಪರಿಯ ಜ್ಞಾನಮೀಮಾಂಸೆ ವಿಧಾನಶಾಸ್ತ್ರ, ಅಸ್ತಿತ್ವಗಳನ್ನು ಇಸ್ಲಾಮಿನ ಜಾನಶಿಸ್ತುಗಳು ಒಳಗೊಂಡಿವೆ. ಕೇವಲ ಅನುಭವ ಜ್ಞಾನದ ಬೆಂಬಲಿಗರಿಗೂ, ಕೇವಲ ತರ್ಕಬದ್ಧ ಜ್ಞಾನದ ವಕ್ತಾರರಿಗೂ ಅನುಕರಿಸಬಹುದಾದ ಮುಕ್ತ ಅನುಸಂಧಾನವಾಗಿದೆ ಇಸ್ಲಾಮಿನದ್ದು. ತದ್ವಿರುದ್ಧವಾಗಿ, ಏಕರೂಪ ಆಂಟಾಲಜಿಯ ಪ್ರತಿಪಾದಕರು ಉಳಿದೆಲ್ಲವನ್ನೂ ನಿರಾಕರಿಸುವರು ಮತ್ತು ಪ್ರತಿಸ್ಪರ್ಧಿಗಳೆಂದು ಬಗೆದು ಅವುಗಳನ್ನು ಅಳಿಸಿಹಾಕಲು ಶ್ರಮಿಸುವರು. ರಶ್ಯದಲ್ಲಿ ನಡೆದ ಹತ್ಯಾಕಾಂಡಗಳಿಗೆ ಕಾರಣವೇನಾಗಿತ್ತು? ವಿಭಿನ್ನ ಆಶಯಗಳನ್ನು ಶತ್ರುಗಳಾಗಿ ಕಂಡ ಏಕರೂಪಿ ಸಿದ್ಧಾಂತಗಳು ನಿರಂಕುಶವಾದತ್ತ (Utilitarianism) ಹೊರಳಿದವು ಮತ್ತು ಈ ಹತ್ಯೆಗಳ ಚುಕ್ಕಾಣಿ ಹಿಡಿದವು. ಚೀನಾದಲ್ಲೂ 40 ಲಕ್ಷ ಜನರ ಹತ್ಯೆಗೆ ಕಾರಣ ಇಂತಹ ಅಸ್ತಿತ್ವ, ಸತ್ಯಗಳ ಕುರಿತಾದ ಜನರ ಭಿನ್ನ ಗ್ರಹಿಕೆಯ ಕುರಿತುಂಟಾದ ಅಸಹನೆಗಳೇ ಆಗಿದ್ದವು.
ಆಧುನಿಕ ಧನಾತ್ಮಕ (Positivist) ವಿಜ್ಞಾನವು ಸಾಮಾಜಿಕ, ರಾಜಕೀಯ ಮತ್ತು ಮೂಲಭೂತ ತತ್ವಗಳಲ್ಲಿ ಇಸ್ಲಾಮಿಕ್ ಜ್ಞಾನಶಿಸ್ತುಗಳಿಂದ ಬಹಳ ಭಿನ್ನವಾಗಿದೆ. ಇಸ್ಲಾಮಿಕ್ ಜ್ಞಾನಶಿಸ್ತಿಗಿರುವ ಈ ಅಂತರವು ಬೌದ್ಧಿಕ, ಶೈಕ್ಷಣಿಕ ಮತ್ತು ಸೈದ್ಧಾಂತಿಕ ಭಿನ್ನತೆಗಳು ಸಾಮಾಜಿಕ ಮತ್ತು ರಾಜಕೀಯ ಸಂಘರ್ಷಗಳಾಗಿ ಮಾರ್ಪಾಡಾಗುವುದನ್ನು ತಡೆಗಟ್ಟುವಲ್ಲಿ ಯಶಸ್ವಿಯಾಗಿದೆ. ಈ ಸಾಮರಸ್ಯದ ಕಾರಣದಿಂದಾಗಿ ಮುಸ್ಲಿಮರೆಡೆಯಲ್ಲಿ ಕರ್ಮಶಾಸ್ತ್ರ, ಮತಧರ್ಮಶಾಸ್ತ್ರ (Theology) ಹಾಗೂ ಸೂಫಿಸಂಗಳಲ್ಲಿ ವಿವಿಧತೆಯನ್ನು ದರ್ಶಿಸುತ್ತೇವೆ.
ಹಂಝ: ಕರ್ಮಶಾಸ್ತ್ರ(ಫಿಖ್ಹ್ ) ಮತ್ತು ಸಮಾಜ ಶಾಸ್ತ್ರ ಇವೆರಡಕ್ಕೂ ಪರಸ್ಪರ ಸಂಬಂಧವಿದೆ ಎಂದು ತಾವು ಹೇಳಿರುವಿರಿ, ಇದನ್ನು ವಿವರಿಸಬಹುದೇ?
ಡಾ. ಸೆಂತುರ್ಕ್: ಇಸ್ಲಾಮಿಕ್ ನಾಗರಿಕತೆಯಲ್ಲಿ ಮಾನವ ಕರ್ಮಗಳ ಕುರಿತಾದ ಅಧ್ಯಯನದ ಜವಾಬ್ದಾರಿ ಫಿಖ್ಹ್ ಹೊತ್ತುಕೊಂಡಂತೆ, ಪಾಶ್ಚಿಮಾತ್ಯ ನಾಗರಿಕತೆಯಲ್ಲಿ ಈ ಅಧ್ಯಯನದ ಉಸ್ತುವಾರಿಯಾಗಿ ಸಮಾಜಶಾಸ್ತ್ರವಿದೆ. ‘ಮಾನವ ಕರ್ಮ’ ಎಂಬ ವಿಷಯವಸ್ತುವಿನ ಕುರಿತು ಅಧ್ಯಯನಕ್ಕಾಗಿ ಎರಡು ನಾಗರಿಕತೆಗಳು ಅವಲಂಬಿಸಿರುವ ಎರಡು ಜ್ಞಾನಶಿಸ್ತುಗಳಾಗಿವೆ ಫಿಖ್ಹ್ ಮತ್ತು ಸಮಾಜಶಾಸ್ತ್ರ. ಆದರೆ, ಮೊದಲು ಹೇಳಿದಂತೆಯೇ, ಇವೆರಡೂ ಜ್ಞಾನಶಿಸ್ತುಗಳು ಈ ಅಧ್ಯಯನಕ್ಕಾಗಿ ಕಂಡುಕೊಂಡ ಮಾರ್ಗಗಳು ಭಿನ್ನ. ಇಸ್ಲಾಮಿಕ್ ನಾಗರಿಕತೆಯಲ್ಲಿ ಮಾನವ ಕರ್ಮದ ಅಧ್ಯಯನ ಫಿಖ್ಹ್ ಮುಖಾಂತರ ಶತಮಾನಗಳಿಂದ ಚಾಲ್ತಿಯಲ್ಲಿದೆ. ಮುಸ್ಲಿಮರ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಸಮಸ್ಯೆಗಳಿಗೆ ಪರಿಹಾರ ನೀಡುವಲ್ಲಿ ಫಿಖ್ಹ್ ಬಹಳ ಯಶಸ್ವಿಯಾಗಿದೆ. ಮುಸ್ಲಿಮ್ ಬದುಕಿನ ದೈನಂದಿನ ಚಟುವಟಿಕೆಗಳ ಒರೆಗಲ್ಲು ಫಿಖ್ಹ್ ಆದರೆ, ಪಾಶ್ಚಿಮಾತ್ಯ ನಾಗರಿಕತೆಯಲ್ಲಿ ಸಮಾಜಶಾಸ್ತ್ರವಾಗಿದೆ. ಇಲ್ಲಿ ಸಾಮಾನ್ಯವಾಗಿ ಕೇಳಲಾಗುವ ಪ್ರಶ್ನೆಯೊಂದಿದೆ. ಸಮಾಜಶಾಸ್ತ್ರ objective ಆಗಿದೆ ಮತ್ತು what is it? (ಇದು ಏನು?) ಎಂಬಂತಹ objective ಪಶ್ನೆಗಳಿಗೆ ಪ್ರತಿಕ್ರಿಯಿಸುತ್ತದೆ. ಆದರೆ, ಫಿಖ್ಹಿನ ಅನುಸಂಧಾನವು what should it be? (ಇದು ಏನಾಗಿರಬೇಕು?) ಎಂಬ Normative ಸ್ವರೂಪದ ಪ್ರಶ್ನೆಗಳಾಗಿರುತ್ತವೆ. ಇದು ಸತ್ಯಕ್ಕೆ ನಿಲುಕದ ಕೇವಲ ಕ್ಲೀಷೆ ಮಾತ್ರ. ಪಾಶ್ಚಿಮಾತ್ಯ ಅಥವಾ ಮುಸ್ಲಿಮರ ಪೈಕಿ ಇರುವ ಯಾವುದೇ ಸಮಾಜಶಾಸ್ತ್ರಜ್ಞನೂ ಕೂಡಾ ‘ಇದು ಏನು?’ ಎಂಬ objective ಪ್ರಶ್ನೆಗಳಿಗೆ ಉತ್ತರ ಹುಡುಕುವವರಲ್ಲ. ಒಟೋಮನ್ನರಿಗೆ ಸಮಾಜಶಾಸ್ತ್ರದ ಪರಿಚಯ ಮಾಡಿಕೊಟ್ಟ ಯೂನಿಯನ್ ಆ್ಯಂಡ್ ಪ್ರೋಗ್ರೆಸ್ ಪಾರ್ಟಿಯ ಬೆಂಬಲಿಗ ಝಿಯಾ ಗೋಕಾಲ್ಪ್ (1876-1924), ಎಮಿಲ್ ದರ್ಕೈಮ್, ಪ್ರಸಿದ್ಧ ಸಮಾಜಶಾಸ್ತ್ರಜ್ಞ ಕಾರ್ಲ್ ಮಾರ್ಕ್ಸ್, ಆಂಟನಿ ಗಿಡ್ಡೆನ್ಸ್, ಮಿಶೆಲ್ ಫುಕೋ ಮತ್ತು ಜುರ್ಗೆನ್ ಹೆಬರ್ಮಾಸ್ ಇವರೆಲ್ಲರನ್ನು ಗಮನಿಸಿದರೆ ಮೇಲಿನ ಪ್ರಶ್ನೆಯು ನಿರರ್ಥಕವೆಂದು ಮನದಟ್ಟಾಗಬಹುದು. ಇವರೆಲ್ಲರೂ ‘ಇದು ಏನು?’ ಮತ್ತು ‘ಇದು ಏನಾಗಿರಬೇಕು?’ ಎಂಬೀ ಎರಡು ಪ್ರಶ್ನೆಗಳಿಗೂ ಉತ್ತರವನ್ನು ಹುಡುಕಿದವರೇ. ಆದರೆ ಸಮಾಜಶಾಸ್ತ್ರದ ಪರಿಚಯ ಎಂಬ ನಿಟ್ಟಿನಲ್ಲಿ ಪುಸ್ತಕಗಳಲ್ಲಿ ನೀಡಲಾಗುವ, ಸಮಾಜಶಾಸ್ತ್ರವು ಕೇವಲ ‘ಇದು ಏನು?’ ಎಂಬ ಪ್ರಶ್ನೆಗಳಿಗೆ ಉತ್ತರವನ್ನು ನೀಡುವ ಶಾಸ್ತ್ರ ಎಂಬ ಹೇಳಿಕೆಯು ಸರಿಯಲ್ಲ. ಇದು ಏನಾಗಬೇಕು? ಎಂಬ ಪ್ರಶ್ನೆಗೆ ಉತ್ತರಿಸಬೇಕಾದರೆ ‘ಇದು ಏನು?’ ಎಂಬ ಪ್ರಶ್ನೆಗೆ ಉತ್ತರ ಅರಿಯಬೇಕಾದ ಅನಿವಾರ್ಯತೆಯನ್ನು ತಾರ್ಕಿಕವಾಗಿ ನಮಗೆ ತಿಳಿಯಬಹುದು. ಆದ್ದರಿಂದಲೇ, ವೈದ್ಯಕೀಯ ಅಥವಾ ಆರ್ಥಿಕ ವಿಷಯಗಳ ಕುರಿತು ಪ್ರಶ್ನೆಯೊಂದನ್ನು ಮುಫ್ತಿಯೊಂದಿಗೆ ಕೇಳಿದರೆ, ಮೊದಲನೆಯದಾಗಿ ಆ ವಸ್ತು ಏನು ಎಂಬ ಖಚಿತತೆಯನ್ನು ಹೊಂದಿರಬೇಕಾದ ಅನಿವಾರ್ಯತೆ ಬಂದೊದಗುತ್ತದೆ. ಆ ಬಳಿಕ ಮಾತ್ರ ಮುಫ್ತಿಗೆ ಫತ್ವಾ ನೀಡಲು ಸಾಧ್ಯ. Normative ಪ್ರಶ್ನೆಗಳನ್ನು ಉತ್ತರಿಸಲು Objective ಪ್ರಶ್ನೆಗಳು ಮತ್ತು ಅವುಗಳ ಉತ್ತರಗಳು ಅನಿವಾರ್ಯವೆಂದರ್ಥ. ಒಟ್ಟಿನಲ್ಲಿ, ಸಮಾಜದ ಕುರಿತಿರುವ ಅಧ್ಯಯನಗಳಿಗೆ Objective ಪ್ರಶ್ನೆಗಳ ಉತ್ತರಗಳಂತೆಯೇ Normative ಪ್ರಶ್ನೆಗಳ ಉತ್ತರಗಳೂ ಬಹಳ ಮುಖ್ಯ. ಶತಮಾನಗಳಿಂದಲೂ ಮುಸ್ಲಿಮರು ತಮ್ಮ ಆರ್ಥಿಕ ಮತ್ತು ರಾಜಕೀಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು ಫಿಕ್ಹ್ ಮತ್ತು ಫುಖಹಾಗಳ (ಕರ್ಮಶಾಸ್ತ್ರ ವಿದ್ವಾಂಸರು) ಮೂಲಕವಾಗಿತ್ತು. ಕೆಲವರು ಮಾವರ್ದೀ ಹಾಗೂ ಇಬ್ನು ತೈಮಿಯ್ಯರ ‘ಸಿಯಾಸ ಶರಇಯ್ಯ’ ಎಂಬ ಗ್ರಂಥಗಳನ್ನು ಅವಲಂಬಿಸುವವರಾಗಿದ್ದರು. ಆರ್ಥಿಕತೆ, ಅಂತಾರಾಷ್ಟ್ರೀಯ ಸಂಬಂಧ ಹಾಗೂ ಇನ್ನಿತರ ವಿಷಯಗಳನ್ನು ಚರ್ಚಿಸುವ ಹಲವಾರು ಗ್ರಂಥಗಳು ಮುಸ್ಲಿಮ್ ವಿದ್ವಾಂಸರಿಂದ ವಿರಚಿತಗೊಂಡವು. ಮುಹಮ್ಮದ್ ಬಿನ್ ಹಸನ್ ಅಶೈಬಾನಿ ಕಿತಾಬುಸ್ಸಿಯರ್ ಅಸ್ವಗೀರ್ ಮತ್ತು ಕಿತಾಬುಸ್ಸಿಯರ್ ಅಲ್ ಕಬೀರ್ ಎಂಬೀ ಗ್ರಂಥಗಳನ್ನು ರಚಿಸಿದರು. ಸಿಯರ್ ಎಂದರೆ ಅಂತಾರಾಷ್ಟ್ರೀಯ ಸಂಬಂಧಗಳು ಎಂದರ್ಥ. ಆರ್ಥಿಕತೆ ಮತ್ತು ತೆರಿಗೆಯ ನಿಯಮಗಳ ಕುರಿತು ಇಮಾಮ್ ಯೂಸುಫ್ ಅವರು ಕಿತಾಬುತ್ತಖ್ರೀಜ್ ಎಂಬ ಗ್ರಂಥ ರಚಿಸಿದರು. ಮುಸ್ಲಿಮರು ತಮ್ಮ ಆರ್ಥಿಕ, ರಾಜಕೀಯ ಮತ್ತು ಇನ್ನಿತರ ಸಾಮಾಜಿಕ ಸಮಸ್ಯೆಗಳಿಗೆ ಫಿಖ್ಹ್ ಮುಖಾಂತರ ಪರಿಹಾರ ಕಂಡುಕೊಳ್ಳುತ್ತಿದ್ದರೆಂಬುವುದು ಇದರಿಂದ ಸ್ಪಷ್ಟವಾಗುತ್ತದೆ. ಇಸ್ಲಾಮಿಕ್ ನಾಗರಿಕತೆಗಳಲ್ಲಿ ತನ್ನದೇ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದ ಫಿಕ್ಹಿನ ಜಾಗವನ್ನು ಆಧುನಿಕ ಸಮಾಜಶಾಸ್ತ್ರ ತುಂಬಬೇಕಿತ್ತೇ ವಿನಾ ಅಲ್ಲಿ ತೆರವಾದ ಜಾಗವಿರಲಿಲ್ಲ. ಆದ್ದರಿಂದಲೇ ಇಸ್ಲಾಮಿಕ್ ನಾಗರಿಕತೆಗಳಲ್ಲಿ ಸಮಾಜಶಾಸ್ತ್ರವನ್ನು ಪರಿಚಯಮಾಡಿಕೊಟ್ಟಾಗ ಫಿಖ್ಹ್ ಮತ್ತು ಸಮಾಜಶಾಸ್ತ್ರಗಳ ನಡುವೆ ಸಂಘರ್ಷವುಂಟಾಯಿತು. ತರುವಾಯ ಪರಂಪರಾಗತ ಫಿಖ್ಹಿನ ಜಾಗವನ್ನು ಸಮಾಜಶಾಸ್ತ್ರವು ಆಕ್ರಮಿಸಿಕೊಂಡಿತು ಮತ್ತು ಮುಸ್ಲಿಮ್ ಜೀವನದ ಬೇರ್ಪಡಿಸಲಾಗದ ಮುಖ್ಯ ಅಂಶವಾಗಿ ಮಾರ್ಪಟ್ಟಿತು. ಒಟೋಮನ್ ಸಾಮ್ರಾಜ್ಯದ ಕೊನೆಘಳಿಗೆಯಲ್ಲಿ ಪರಂಪರಾಗತ ಇಸ್ಲಾಮಿಕ್ ಫಿಖ್ಹ್ ಮತ್ತು ಸಮಾಜಶಾಸ್ತ್ರದ ವಕ್ತಾರರ ನಡುವೆ ಸಂವಾದಗಳು ಉಂಟಾದವು. ಅವರ ಪೈಕಿ ಕೆಲವರಂತೂ ಪಾಶ್ಚಿಮಾತ್ಯ ಸಮಾಜಶಾಸ್ತ್ರವನ್ನು ಸ್ವೀಕರಿಸಲು ತುದಿಗಾಲಲ್ಲಿ ನಿಂತಿದ್ದರು. (ಪಾಶ್ಚಿಮಾತ್ಯ (western) ಎಂಬುವುದು ಅಷ್ಟೇನು ಕರಾರುವಾಕ್ಕಾದ ಬಳಕೆಯಲ್ಲ ಎಂಬುವುದು ನನ್ನ ಅನಿಸಿಕೆ. ಕಾರಣ ಅಲ್ಲಿ ವಿಭಿನ್ನ ರೀತಿಯ ಸಮಾಜಶಾಸ್ತ್ರ ಕವಲುಗಳನ್ನು ನಾವು ಕಾಣುತ್ತೇವೆ. ಎಮಿಲ್ ದುರ್ಕಿಮ್, ಕಾರ್ಲ್ ಮಾರ್ಕ್ಸ್, ಮ್ಯಾಕ್ಸ್ ವೆಬರ್ ಇವರೆಲ್ಲರೂ ಪರಸ್ಪರ ಭಿನ್ನ ಪರಿಕಲ್ಪನೆಗಳನ್ನು ಹೊಂದಿದ್ದಾರೆ. ಇವರೆಲ್ಲರನ್ನೂ ಒಂದೇ ತಕ್ಕಡಿಯಲ್ಲಿ ತೂಗುವುದು ಸರಿಯಲ್ಲ.) ಇನ್ನೂ ಕೆಲವರು ಧನಾತ್ಮಕ ಸಮಾಜಶಾಸ್ತ್ರವನ್ನು ಆಮದು ಮಾಡಿಕೊಳ್ಳುವ ಹಾಗೂ ಫಿಕ್ಹ್ ಮತ್ತು ಸಮಾಜಶಾಸ್ತ್ರವನ್ನು ಸಂಯೋಜಿಸಬೇಕೆಂಬ ಬೇಡಿಕೆಯಿಟ್ಟರು.ಇವರ ಪೈಕಿ ಮುಂಚೂಣಿಯಲ್ಲಿದ್ದ ಝಿಯಾ ಗೋಕಾಲ್ಪ್ ನೂತನ ಸಮಾಜಶಾಸ್ತ್ರೀಯ ಫಿಖ್ಹಿನ ಸ್ಥಾಪನೆಗೆ ಕರೆಕೊಟ್ಟರು. ಈ ಸಂಕಲ್ಪವನ್ನು ವಿರೋಧಿಸುತ್ತಾ ಸೇಠ್ ಹಲೀಮ್ ಪಾಷಾರಂತಹ (1865-1921) ವಿದ್ವಾಂಸರು ರಂಗಕ್ಕಿಳಿದರು. ಸಮಾಜಶಾಸ್ತ್ರದ ದೌತ್ಯವನ್ನು ಯಾವುದೇ ತೊಡಕಿಲ್ಲದೆ, ಬಹಳ ಸಲೀಸಾಗಿ ಫಿಖ್ಹ್ ನಿಭಾಯಿಸುತ್ತಿದೆ. ಆದ್ದರಿಂದ ಇನ್ನಿತರ ಯಾವುದೇ ಪರಿಷ್ಕರಣೆಯು ಅನಗತ್ಯ ಎಂದು ಅವರು ಪುನರುಚ್ಚರಿಸಿದರು. ಫಿಖ್ಹ್ ನಿಶ್ಚಲವೆಂದು ಇಂದಿಗೂ ವಾದಿಸುವ ಕೆಲವರಿದ್ದಾರೆ. ಮುಫ್ತಿಯೊಂದಿಗೆ ಫತ್ವಾ ಕೇಳಿ, ಅದನ್ನು ಉತ್ತರಿಸುವುದು ಫಿಖ್ಹಿನಿಂದ ಅಸಾಧ್ಯವೆಂದು ಹೇಳಿ ಉತ್ತರಿಸಲು ಹಿಂದೇಟು ಹಾಕುವ ಮುಫ್ತಿಯನ್ನು ನನಗೆ ತೋರಿಸಬಹುದೇ? ಎಂದು ಅವರೊಂದಿಗೆ ಕೇಳಲಿಚ್ಚಿಸುವೆನು. ಫಿಖ್ಹ್ ಇಂದಿಗೂ ಬಹಳ ಕ್ರಿಯಾತ್ಮಕವಾಗಿ ಕಾರ್ಯಾಚರಿಸುತ್ತಿದೆ. ಫಿಖ್ಹ್ ದುರ್ಬಲವೆಂಬ ವಾದ ವಸ್ತುನಿಷ್ಠವಲ್ಲ. ಕೆಲವೊಂದು ಸಮಸ್ಯೆಗಳಿಗೆ ಫಿಖ್ಹ್ ಉತ್ತರಿಸದೇ ಇರಬಹುದು. ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಲು ಯಾವ ಜ್ಞಾನಶಿಸ್ತಿನಿಂದ ತಾನೇ ಸಾಧ್ಯ? ವೈದ್ಯಕೀಯ ಕ್ಷೇತ್ರ ಸಾಮಾನ್ಯ ರೋಗವಾದ ಜ್ವರಕ್ಕೆ ಮದ್ದನ್ನು ಕಂಡುಹಿಡಿಯುವಲ್ಲಿ ಇಂದಿಗೂ ಸಫಲವಾಗಿಲ್ಲ. ಕ್ಯಾನ್ಸರ್ ಮತ್ತು ಏಡ್ಸ್ ಗಳಿಗೂ ಔಷಧಿಯಿಲ್ಲ. ಆದ್ದರಿಂದಲೇ ವೈದ್ಯಕೀಯ ಕ್ಷೇತ್ರವು ನಿಶ್ಚಲವೆಂದೂ ಅದನ್ನು ಉಪೇಕ್ಷಿಸಬೇಕೆಂದು ಬಯಸುವುದು ನ್ಯಾಯವೇ?
ಸಮಾಜಶಾಸ್ತ್ರ ಮತ್ತು ಫಿಖ್ಹ್ ಪರ್ಯಾಯಗಳಾಗಿ ಕಾರ್ಯಾಚರಿಸುತ್ತಿದೆ. ಆದ್ದರಿಂದಲೇ ಆಧುನೀಕರಣದ ಬಳಿಕ ಮುಸ್ಲಿಮ್ ಬೌದ್ಧಿಕ ವಲಯದಲ್ಲಿ ಹಲವಾರು ಸಮಸ್ಯೆಗಳು ತಲೆದೋರಿದವು. ಇವೆರಡು ಜ್ಞಾನಶಿಸ್ತುಗಳನ್ನು ಸಂಯೋಜಿಸುವುದು ಅಸಾಧ್ಯ. ಉದಾಹರಣೆಗೆ, ಆರ್ಥಿಕತೆಯ ಕುರಿತು ಫಿಖ್ಹ್ ಮತ್ತು ಸಮಾಜಶಾಸ್ತ್ರ ಭಿನ್ನ ನಿಲುವು ಹೊಂದಿದೆ. ಬಡ್ಡಿಯನ್ನು ಫಿಖ್ಹ್ ಕಾನೂನುಬಾಹಿರವೆಂದರೆ, ಸಮಾಜಶಾಸ್ತ್ರವು ಅದನ್ನು ಆರ್ಥಿಕತೆಯ ಮುಖ್ಯ ಅಂಶವಾಗಿ ಪರಿಗಣಿಸುತ್ತದೆ. ಆರ್ಥಿಕತೆಯಲ್ಲಿರುವಂತೆಯೇ ರಾಜಕೀಯ ಮತ್ತು ಇನ್ನಿತರ ಸಾಮಾಜಿಕ ವಿಷಯಗಳಲ್ಲೂ ಇವುಗಳ ನಡುವೆ ಭಿನ್ನತೆಯಿದೆ.
ಅತ್ಯಂತಿಕವಾಗಿ, ಇಸ್ಲಾಮಿಕ್ ನಾಗರಿಕತೆಯ ಜೀರ್ಣೋದ್ಧಾರ ಸಾಧ್ಯವಾಗಬೇಕಾದರೆ ಫಿಖ್ಹನ್ನು ಮರಳಿ ಮುನ್ನೆಲೆಗೆ ತರಬೇಕಾದ ಜರೂರತ್ತಿದೆ. ಕ್ಯಾಂಬ್ರಿಡ್ಜ್ ವಿಶ್ವವಿದ್ಯಾಲಯದ ಸಮಾಜಶಾಸ್ತ್ರ ವಿಭಾಗಗಳಲ್ಲಿ ಆರ್ಥಿಕತೆಯ ವಿಷಯದಲ್ಲಿ ಕಿತಾಬುಲ್ ಬೈಅನ್ನು ಅಧ್ಯಾಪನೆ ನಡೆಸುವ, ಮನೋವಿಜ್ಞಾನ ವಿಷಯದಲ್ಲಿ ತಸವ್ವುಫ್ ಗ್ರಂಥಗಳನ್ನು ಕಲಿಸುವ ಪದ್ಧತಿ ಜಾರಿಗೊಳಿಸಿದರೆ ಪಾಶ್ಚಿಮಾತ್ಯ ಸಂಸ್ಕೃತಿಯು ಉಳಿಯಬಹುದೇ? ಖಂಡಿತವಾಗಿಯೂ ಇಲ್ಲ. ಅದು ಇಸ್ಲಾಮಿಕ್ ನಾಗರಿಕತೆಯಾಗಿ ಪರಿವರ್ತನೆಯಾಗಬಹುದು. ಇಸ್ಲಾಮಿಕ್ ನಾಗರಿಕತೆಗಳಿದ್ದ ದೇಶಗಳಲ್ಲಿ ಈ ಪರಿಸ್ಥಿತಿ ನಮಗೆ ಕಾಣಬಹುದು. ಅಲ್ಲಿ ಫಿಖ್ಹಿನ ಬದಲಾಗಿ ಸಮಾಜಶಾಸ್ತ್ರದ ಅಧ್ಯಯನಗಳು ಸುಸೂತ್ರವಾಗಿ ನಡೆಯುತ್ತಿವೆ. ಇವೆಲ್ಲವೂ ಸಹಜವೆಂಬಂತೆ ನಾವೂ ಕೂಡಾ ಈ ಪದ್ಧತಿಗೆ ಒಗ್ಗಿಕೊಂಡಿದ್ದೇವೆ. ತದ್ವಿರುದ್ಧವಾಗಿ, ಆಕ್ಸ್ಫರ್ಡ್ ಮತ್ತು ಕ್ಯಾಂಬ್ರಿಡ್ಜ್ ವಿಶ್ವವಿದ್ಯಾನಿಲಯಗಳಲ್ಲಿ ಇಸ್ಲಾಮಿಕ್ ಜ್ಞಾನಶಿಸ್ತುಗಳ ಅಧ್ಯಯನವು ಘೋರ ಅಪರಾಧವೆಂಬಂತೆ ಬಿಂಬಿಸಲಾಗುತ್ತಿದೆ. ಸಮಾಜಶಾಸ್ತ್ರ ಮತ್ತು ಫಿಖ್ಹ್ ಇವೆರಡರ ವಿಷಯವಸ್ತು ಮಾನವ ಕ್ರಿಯೆಗಳಾಗಿವೆ. ಆದರೆ ಇವೆರಡು ಜ್ಞಾನಶಿಸ್ತುಗಳು ಅನುಸರಿಸುವ ವಿಧಾನಶಾಸ್ತ್ರಗಳು ಭಿನ್ನವಾಗಿವೆ.
ಹಂಝ : ತಾವು ಧಾರ್ಮಿಕ ಸಮಾಜಶಾಸ್ತ್ರದ ಬಗ್ಗೆ ಬರೆದಿದ್ದೀರಿ. ಈ ವಿಷಯದ ಕುರಿತು ಮಾತನಾಡಬೇಕಾದರೆ, ‘ಮನುಷ್ಯರೆಡೆಯಲ್ಲಿ ಧರ್ಮದ ಹುಟ್ಟು’, ಅಥವಾ ಮಾನವನು ಧರ್ಮಗಳನ್ನು ‘ಕಂಡು ಹಿಡಿದ ಬಗೆ’ ಇವುಗಳ ಕುರಿತು ಚರ್ಚೆಗಳಾಗಬೇಕೆಂದು ನನಗನಿಸುತ್ತದೆ. ಧರ್ಮದ ಕುರಿತು ಇಸ್ಲಾಮಿನ ದೃಷ್ಟಿಕೋನವೇನು ಮತ್ತು ಅದರ ಪ್ರಸ್ತುತತೆಯ ಬಗ್ಗೆ ವಿವರಿಸಬಹುದೇ ?
ಡಾ. ಸೆನ್ತುರ್ಕ್: 19ನೇ ಶತಮಾನ ಮತ್ತು 20ನೇ ಶತಮಾನದ ಉತ್ತರಾರ್ಧದಲ್ಲಿ ಅಭಿಜಾತ ಧಾರ್ಮಿಕ ಸಮಾಜಶಾಸ್ತ್ರಜ್ಞರೆಡೆಯಲ್ಲಿ (Classical Sociology of Religion) ಈ ವಿಷಯಗಳ ಬಗ್ಗೆ ಚರ್ಚೆಗಳು ನಡೆದವು. ಅವರು ಧರ್ಮವನ್ನು ವಿವರಿಸಲು ಪ್ರಯತ್ನಿಸಿದ್ದರು. ಎರಡನೇ ಮಹಾಯುದ್ಧದ ಬಳಿಕ, ಧರ್ಮವೆನ್ನುವುದು ಬೃಹತ್ ಪ್ರಶ್ನೆಯೆಂದು ಮನಗಂಡು, ವೈಜ್ಞಾನಿಕ ವಿಧಾನಗಳ ಮೂಲಕ ಧರ್ಮಕ್ಕೆ ಉತ್ತರವನ್ನು ಕಂಡುಕೊಳ್ಳುವುದು ಅಸಾಧ್ಯವೆಂದು ಅರಿತರು. ಧರ್ಮಗಳ ಮೂಲದ ಕುರಿತಾದ ಕರಾರುವಾಕ್ಕಾದ ಉತ್ತರ ಕಂಡುಕೊಳ್ಳುವುದು ಸಾಧ್ಯವಿಲ್ಲವೆಂದರಿತ ಬಳಿಕ ಮಾನವನ ಆರ್ಥಿಕ, ರಾಜಕೀಯ ಮತ್ತು ಇನ್ನಿತರ ಚಟುವಟಿಕೆಗಳಲ್ಲಿ ಧರ್ಮದ ಪ್ರಭಾವ ಕುರಿತಾಗಿ ಅಧ್ಯಯನಕ್ಕೆ ಮುಂದಾದರು. ಮಾನವನ ಆಚಾರ ವಿಚಾರಗಳಲ್ಲಿ ಅವನ ಧರ್ಮ ಅಥವಾ ನಂಬಿಕೆಗಳ ಪರಿಣಾಮ ಎಷ್ಟರಮಟ್ಟಿಗಿದೆ ಎಂಬ ಅಧ್ಯಯನವನ್ನು ಆರಂಭಿಸಲಾಯಿತು.
ಆದರೆ, ಪ್ರತ್ಯಕ್ಷ ಪ್ರಮಾಣವಾದ ಸಮಾಜಶಾಸ್ತ್ರದ (Positivist Sociology) ಪ್ರತಿಪಾದಕರಾಗಿರುವ ಧಾರ್ಮಿಕ ಸಮಾಜಶಾಸ್ತ್ರಜ್ಞರು ಧಾರ್ಮಿಕ ಚಟುವಟಿಕೆಗಳನ್ನು ಸಾಮಾಜಿಕ ಚಟುವಟಿಕೆಯ ಒಂದು ಪ್ರವರ್ಗವಾಗಿ ಇಂದಿಗೂ ಒಪ್ಪುತ್ತಿಲ್ಲ. ಬದಲಾಗಿ ಅವುಗಳನ್ನು ಆರ್ಥಿಕ, ರಾಜಕೀಯ ಮತ್ತು ಇನ್ನಿತರ ಸಾಮಾಜಿಕ ಚಟುವಟಿಕೆಗಳ ನಿರ್ದಿಷ್ಟವಾದ ಚೌಕಟ್ಟಿಗೊಳಪಡಿಸಲು ಯತ್ನಿಸುತ್ತಿದ್ದಾರೆ. ಉದಾಹರಣೆಗೆ: ಪ್ರಾರ್ಥನೆ ಏನು ಎಂಬುವುದನ್ನು ‘ಆರ್ಥಿಕ ಅಗತ್ಯಗಳಿಗಾಗಿ ವ್ಯಕ್ತಿಯೊಬ್ಬನು ಪ್ರಾರ್ಥಿಸುವನು’, ಅಥವಾ ‘ರಾಜಕೀಯ ತಾತ್ಪರ್ಯಗಳಿಗಾಗಿ ಪ್ರಾರ್ಥಿಸುತ್ತಾನೆ’ ಎಂಬಿತ್ಯಾದಿ ಹೇಳಿಕೆಗಳನ್ನು ನೀಡುತ್ತಾರೆ. ಮುಸ್ಲಿಮ್ ಮಹಿಳೆಯರು ಹಿಜಾಬ್ ಧರಿಸುವುದು ರಾಜಕೀಯ ಕ್ರಿಯೆಯೇ ಹೊರತು ಧಾರ್ಮಿಕ ಕ್ರಿಯೆಯಲ್ಲ ಎಂದಾಗಿದೆ ಇವರ ನಿಲುವು. ಪ್ರತ್ಯಕ್ಷ ಪ್ರಮಾಣವಾದ ಸಮಾಜಶಾಸ್ತ್ರದ ಪ್ರತಿಪಾದಕರಾಗಿರುವ ಸಮಾಜಶಾಸ್ತ್ರಜ್ಞರಿಗೆ ಧರ್ಮಗಳ ನಂಬಿಕೆಯಿಲ್ಲದ ಕಾರಣ ‘ಧಾರ್ಮಿಕ ಕ್ರಿಯೆ ಅಥವಾ ಚಟುವಟಿಕೆ’ ಎಂಬ ಪರಿಕಲ್ಪನೆಯನ್ನು ಸಂಪೂರ್ಣವಾಗಿ ನಿರಾಕರಿಸುತ್ತಾರೆ. ಫ್ರಾಯ್ಡ್ ಹಾಗೂ ಕೆಲ ಮನಶಾಸ್ತ್ರಜ್ಞರು ಮಾನವ ಕ್ರಿಯೆಗಳನ್ನು ಆರ್ಥಿಕ, ರಾಜಕೀಯ ಮತ್ತು ಮನಶಾಸ್ತ್ರಕ್ಕೆ ಸಂಬಂಧಿಸಿದ ಕ್ರಿಯೆಗಳು ಮಾತ್ರವೆಂದು ಬಗೆಯುತ್ತಾರೆ. ಧಾರ್ಮಿಕ ಕ್ರಿಯೆಗಳನ್ನು ಮನಶಾಸ್ತ್ರಕ್ಕೊಳಪಟ್ಟ ಕ್ರಿಯೆಗಳೆಂದು ಬಿಂಬಿಸುವ ಪ್ರಯತ್ನಗಳು ನಡೆಸಲಾಗುತ್ತಿದೆ. ಈ ಮೂಲಕ ಪ್ರತ್ಯಕ್ಷ ಪ್ರಮಾಣವಾದಿ ಸಮಾಜಶಾಸ್ತ್ರಜ್ಞರು ಧರ್ಮ ಹಾಗೂ ಧರ್ಮದೊಂದಿಗೆ ಬೆಸೆದುಕೊಂಡಿರುವ ಕ್ರಿಯೆಗಳನ್ನು ಒಪ್ಪಿಕೊಳ್ಳಲು ಹಿಂದೇಟು ಹಾಕುತ್ತಿರುವುದು ಸ್ಪಷ್ಟವಾಗುತ್ತಿದೆ. ಇದಕ್ಕೆ ಹೊರತಾಗಿ ಕೆಲ ಸಾಮಾಜಿಕ ಚಿಂತಕರು ‘ಸಮಾಜ ಮತ್ತು ವಿಜ್ಞಾನ ಬೆಳೆದಂತೆಲ್ಲಾ ಧರ್ಮವು ಅಳಿದು ಹೋಗುವುದು’ ಎಂಬ ಪರಿಣಾಮ ಪದ್ಧತಿಯ ಬಗ್ಗೆ ನಿರೀಕ್ಷೆಯಲ್ಲಿರುವರು. ಆದರೆ, ಜಾಗತಿಕ ಮಟ್ಟದಲ್ಲಿ ಇಂದು ಕಾಣುತ್ತಿರುವ ಬೆಳವಣಿಗೆಗಳು ಅವರ ಭರವಸೆಗಳನ್ನು ಮಣ್ಣುಮುಕ್ಕಿಸಿವೆ. ಧರ್ಮವು ಹಿಂದೆಂದಿಗಿಂತಲೂ ಬಹಳ ವೇಗವಾಗಿ ಬೆಳೆಯುತ್ತಿದೆ. ಪಶ್ಚಿಮದ ಪೈಕಿ ಅತ್ಯಂತ ಪ್ರಗತಿಪರ ರಾಷ್ಟ್ರವೆಂದು ಪರಿಗಣಿಸಲಾಗುವ ಅಮೇರಿಕೆಯಲ್ಲಿ ಸುಮಾರು 90 ಅಥವಾ 95 ಶೇಕಡಾ ಜನರು ದೇವರನ್ನು ನಂಬುತ್ತಿದ್ದಾರೆ. ವೈಜ್ಞಾನಿಕ ಮತ್ತು ತಾಂತ್ರಿಕ ಪ್ರಗತಿಯು ಧಾರ್ಮಿಕ ನಂಬಿಕೆಗಳಿಗೆ ಅಡ್ಡಿಯಾಗಲಾರದು ಎಂಬುವುದು ಬಹಳ ದಿಟ್ಟವಾಗಿದೆ. ವಿಜ್ಞಾನದ ಬೆಳವಣಿಗೆಯಿಂದ ಧರ್ಮವು ಇಲ್ಲವಾಗಬಹುದೆಂಬ ತಮ್ಮ ನಂಬಿಕೆಯನ್ನು ಧಾರ್ಮಿಕ ಸಮಾಜಶಾಸ್ತ್ರಜ್ಞರು ಕೈಬಿಟ್ಟಿದ್ದಾರೆ.
ಧರ್ಮ ಹಾಗೂ ವಿಜ್ಞಾನವು ವಿರುದ್ಧ ದ್ವಂದ್ವಗಳಲ್ಲ. ಬದಲಾಗಿ ತನ್ನ ಮಿತಿಯೊಳಗಿದ್ದು ಕಾರ್ಯಾಚರಿಸುವ ಒಂದೇ ನಾಣ್ಯದ ಎರಡು ಮುಖಗಳೆನ್ನಬಹುದು. ವಿಜ್ಞಾನವು ಧರ್ಮದ ಅಥವಾ ಧರ್ಮವು ವಿಜ್ಞಾನದ ಅಸ್ತಿತ್ವಕ್ಕೆ ಸವಾಲಾಗದು. ವಿಜ್ಞಾನದ ವಸ್ತು ವಿಷಯ (Subject Matter) ಇಂದ್ರಿಯ ಗೋಚರವಾದ ಭೌತಿಕ ಪ್ರಪಂಚವಾದರೆ, ಧರ್ಮವು ಬೃಹತ್ತಾದ ಅಭೌತಿಕ ಪ್ರಶ್ನೆಗಳಿಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸುತ್ತದೆ. ‘ಬದುಕಿನ ಅರ್ಥವೇನು?’ ಎಂಬ ಪ್ರಶ್ನೆಗೆ ವೈಜ್ಞಾನಿಕ ವಿಧಾನಗಳ ಮೂಲಕ ಉತ್ತರಿಸುವುದು ಅಸಾಧ್ಯ. ಧರ್ಮಗಳು ಇವುಗಳಿಗೆ ಉತ್ತರವನ್ನು ಕಂಡುಕೊಳ್ಳುತ್ತದೆ. ವಿಜ್ಞಾನದ ಅನುಸಂಧಾನ ಪ್ರಾಯೋಗಿಕ ಮತ್ತು ಭೌತಿಕ ಪ್ರಪಂಚದ ವಸ್ತುಗಳಾಗಿವೆ. ಆದರೆ ಇವೆರಡೂ ಕೂಡಾ ಪರಸ್ಪರ ಪೂರಕಗಳಾಗಿ ಕಾರ್ಯಾಚರಿಸುತ್ತವೆ ಎಂಬುವುದನ್ನು ಸಮಾಜಶಾಸ್ತ್ರಜ್ಞರು ಮನಗಂಡರು.
ಹಂಝ : ಧರ್ಮಗಳ ಬಗ್ಗೆ ಇಸ್ಲಾಮಿನ ಸಂಕಲ್ಪವೇನು ಎಂದು ವಿವರಿಸಬಹುದೇ?
ಡಾ. ಸೆನ್ತುರ್ಕ್: ನಾನು ಆಗಲೇ ಹೇಳಿದಂತೆ, ಫಿಖ್ಹ್ ಇಸ್ಲಾಮಿನ ಧಾರ್ಮಿಕ ಸಮಾಜಶಾಸ್ತ್ರ ಮತ್ತು ಸಮಾಜವಿಜ್ಞಾನ. ಮಾನವ ಕ್ರಿಯೆಗಳನ್ನು ಫಿಖ್ಹಿನ ದೃಷ್ಟಿಕೋನದಲ್ಲಿಟ್ಟು ಅಧ್ಯಯನಕ್ಕೊಳಪಡಿಸಲಾಗುತ್ತದೆ. ಫಿಖ್ಹ್ ಎಂದರೆ ಇಸ್ಲಾಮಿನ ಕಾನೂನು ನಿಯಮಗಳಲ್ಲ. ಬದಲಾಗಿ, ಕಾನೂನು ನಿಯಮಗಳು ರೂಪುಗೊಳ್ಳುವುದೇ ಫಿಖ್ಹ್ ಮೂಲಕ. ಇವೆರಡೂ ಕೂಡಾ ಕಾನೂನು ಮತ್ತು ನ್ಯಾಯಶಾಸ್ತ್ರದಂತೆ. ಫಿಖ್ಹಿನ ಗ್ರಂಥಗಳಲ್ಲಿರುವುದು ಕಾನೂನುಗಳೇ ಹೊರತು ಶಾಸ್ತ್ರವಲ್ಲ. ನ್ಯಾಯಶಾಸ್ತ್ರವನ್ನು ಬಳಸಿ ಕಾನೂನುಗಳನ್ನು ರಚಿಸಿದಂತೆಯೇ ಅವುಗಳಿಗೆ ತಾತ್ವಿಕ ಅಡಿಪಾಯವನ್ನೊದಗಿಸುವುದು ಕೂಡಾ ನ್ಯಾಯಶಾಸ್ತ್ರವೇ ಆಗಿದೆ. ನಾಲ್ಕು ಮದ್ಹಬುಗಳ ಮುಜ್ತಹಿದುಗಳಾಗಿರುವ ಅಬೂಹನೀಫಾ, ಮಾಲಿಕ್, ಶಾಫಿಈ ಮತ್ತು ಅಹ್ಮದ್ ಬಿನ್ ಹಂಬಲ್ ಇಮಾಮರುಗಳು ತಿಳಿದಿರುವ ಅದೇ ಫಿಖ್ಹನ್ನಾಗಿದೆ ನಾನು ಇಲ್ಲಿ ಪ್ರತಿಪಾದಿಸುತ್ತಿರುವ ಫಿಖ್ಹ್. ತತ್ವಜ್ಞಾನ ಮತ್ತು ಕಲಾಮ್ ಸಂಯೋಜಿತ ಫಿಖ್ಹುಲ್ ಅಕ್ಬರ್ ಎಂಬ ಜ್ಞಾನಶಾಸ್ತ್ರವೂ ಚಾಲ್ತಿಯಲ್ಲಿದೆ. ಫಿಖ್ಹಿಗೆ ಅಗತ್ಯವಿರುವ ಸೈದ್ಧಾಂತಿಕ ಮತ್ತು ತಾತ್ವಿಕ ಅಡಿಪಾಯವನ್ನೊದಗಿಸುವುದು ಇದೇ ಫಿಖ್ಹುಲ್ ಅಕ್ಬರ್. ಅಸ್ತಿತ್ವ, ಜ್ಞಾನಶಾಸ್ತ್ರ ಹಾಗೂ ಇನ್ನಿತರ ಬೃಹತ್ ಪ್ರಶ್ನೆಗಳೊಂದಿಗೆ ಫಿಖ್ಹುಲ್ ಅಕ್ಬರ್ ಅನುಸಂಧಾನ ಮಾಡಿಕೊಳ್ಳುತ್ತದೆ. ಉಸೂಲುಲ್ ಫಿಖ್ಹ್ ಮತ್ತು ಫುರೂಉಲ್ ಫಿಖ್ಹ್ ವ್ಯಾವಹಾರಿಕ ಸಮಸ್ಯೆಗಳಿಗೆ ಸ್ಪಂದಿಸುತ್ತವೆ. ಮಾನವ ಕ್ರಿಯೆಗಳ ಆಧ್ಯಾತ್ಮಿಕ ಅಂಶವನ್ನು ಕಂಡುಕೊಳ್ಳುವ ಕಾರ್ಯಾಚರಣೆಯನ್ನು ಫಿಖ್ಹುಲ್ ವಿಜ್ದಾನಿ ಅಥವಾ ತಸವ್ವುಫ್ ಕೈಗೆತ್ತಿಕೊಳ್ಳುತ್ತದೆ. ಇವೆಲ್ಲವೂ ಒಟ್ಟುಗೂಡಿರುವ ಸಂಕಲನವೇ ಆಗಿದೆ ನಾನು ಹೇಳುವ ಫಿಖ್ಹ್. ಒಟ್ಟಿನಲ್ಲಿ ಫಿಖ್ಹನ್ನು ಇಸ್ಲಾಮಿಕ್ ಜ್ಞಾನ ಅಥವಾ ಇಲ್ಮಿನ ಸಂವಾದಿಯೆನ್ನಬಹುದು. ಫಿಖ್ಹಿನ ನೆರವಿಗೆ ಸಹಾಯಕ ಶಿಸ್ತುಗಳೂ (Auxiliary Disciplines) ಪ್ರಚಲಿತದಲ್ಲಿವೆ.
ಹಂಝ : ಈ ಎಲ್ಲಾ ಕಾರಣಗಳಿಗಾಗಿ ಫಿಖ್ಹುಲ್ ಅಕ್ಬರನ್ನು ಒಟೋಮನ್ ಮದ್ರಸಗಳಲ್ಲಿ ಬಹುಮುಖ್ಯ ವಿಜ್ಞಾನವಾಗಿ ಪರಿಗಣಿಸಲಾಗುತ್ತಿತ್ತೇ?
ಡಾ. ಸೆನ್ತುರ್ಕ್: ಕೇವಲ ಒಟೋಮನ್ ಮದ್ರಸಾಗಳಲ್ಲಲ್ಲ, ಇಸ್ಲಾಮಿಕ್ ನಾಗರಿಕತೆಯಲ್ಲಿಯೇ ಫಿಖ್ಹುಲ್ ಅಕ್ಬರ್ ಉನ್ನತ ಶ್ರೇಣಿಯ ವಿಜ್ಞಾನವಾಗಿತ್ತು. ಹದೀಸ್, ತಫ್ಸೀರ್, ಉಲೂಮುಲ್ ಆಲ (Auxiliary disciplines)(ಸ್ವರ್ಫ್, ಮಆನಿ, ಬಲಾಗ ಮತ್ತು ಮಂತಿಕ್) ಇತ್ಯಾದಿ ಎಲ್ಲಾ ವಿಜ್ಞಾನಗಳೂ ಕೂಡಾ ಫಿಖ್ಹಿಗೆ ಪೂರಕವಾಗಿ ಕಾರ್ಯಾಚರಿಸುತ್ತವೆ. ಇವೆಲ್ಲಾ ಜ್ಞಾನ ಶಿಸ್ತುಗಳನ್ನು ಬಳಸಿ ಮಾನವ ಕರ್ಮಗಳನ್ನು ನಿಯಮಗಳ ಚೌಕಟ್ಟಿಗೆ ತರುವ ಕಾರ್ಯವನ್ನು ಫಿಖ್ಹ್ ನಿರ್ವಹಿಸುತ್ತದೆ. ಫಿಖ್ಹ್ ಅಭಿವೃದ್ಧಿ ಹೊಂದಿದ ಮತ್ತು ಅತ್ಯಾಧುನಿಕವೂ ಆಗಿರುವ ವಿಜ್ಞಾನ ಶಾಖೆ. ಬಹುಮೌಲ್ಯದ ತರ್ಕವನ್ನು ಅವಲಂಬಿಸುವ ಫಿಖ್ಹ್, ನೈತಿಕ ಮತ್ತು ನಿಯಮಗಳಲ್ಲಿ ಸರಿ ಅಥವಾ ತಪ್ಪು ಎಂಬ ದ್ವಂದ್ವ ತರ್ಕವನ್ನು ನೆಚ್ಚಿಕೊಂಡಿರುವ ಪಶ್ಚಿಮದಂತಲ್ಲ. ಫಿಖ್ಹಿನಲ್ಲಿ ಹಲಾಲ್, ಹರಾಮ್ ಎಂಬಿವುಗಳಿಗೆ ಹೊರತಾಗಿ ಇವುಗಳೆಡೆಯಲ್ಲಿ ವಾಜಿಬ್, ಸುನ್ನತ್ ಮುಅಕ್ಕದ, ಸುನ್ನತ್ ಗೈರ್ ಮುಅಕ್ಕದ, ಮುಸ್ತಹಬ್, ಮಂದೂಬ್ ಮತ್ತು ಮಕ್ರೂಹ್ ತಹ್ರೀಮ್, ಮಕ್ರೂಹ್ ತನ್ಝೀಹ್ ಹಾಗೂ ಹರಾಮ್ ಇತ್ಯಾದಿ ವಿವಿಧ ಪರಿಕಲ್ಪನೆಗಳಿವೆ. ಕರ್ಮವೊಂದಕ್ಕೆ ನಾನಾ ತರಹದ ನಿಯಮ ಮೌಲ್ಯಗಳನ್ನು ಅವಲಂಬಿಸುವ ಪ್ರಕ್ರಿಯೆ ಇಲ್ಲಿ ಕಾಣಬಹುದು. ಉದಾಹರಣೆಗಾಗಿ ಮಾನವ ಕರ್ಮವೊಂದನ್ನು ಪರಿಶೀಲಿಸಿದರೆ, ಪಶ್ಚಿಮದ ನೀತಿಶಾಸ್ತ್ರಜ್ಞನೊಬ್ಬ ಆ ನಿರ್ದಿಷ್ಟ ಕರ್ಮವನ್ನು ಸರಿ ಅಥವಾ ತಪ್ಪು ಎಂದು ವಿಧಿಸುವನು. ಆದರೆ ಫಖೀಹ್ ಆ ಕರ್ಮಕ್ಕೆ ಹೊರಡಿಸುವ ವಿಧಿಗಳೆಷ್ಟು? ಹನಫಿಯಾಗಿದ್ದಲ್ಲಿ ಒಂಬತ್ತು ಮತ್ತು ಶಾಫಿಯಾಗಿದ್ದಲ್ಲಿ ಐದು. ಫಿಖ್ಹ್ ಬಹುಮೌಲ್ಯಗಳನ್ನು ಅವಲಂಬಿಸುತ್ತದೆ ಮತ್ತು ಇದು ಅತ್ಯಾಧುನಿಕ ವ್ಯವಸ್ಥೆಯೂ ಹೌದು. ಸಮಾಜ ಮತ್ತು ಧರ್ಮಗಳ ಕುರಿತು ಅಧ್ಯಯನಕ್ಕಿಳಿಯುವಾಗ ದರ್ಕೀಮ್, ಮಾರ್ಕ್ಸ್, ವೆಬರ್ ಮತ್ತು ಇನ್ನಿತರರಿಗೆ ಬದಲಾಗಿ ಫಿಖ್ಹನ್ನು ನೆಚ್ಚಿಕೊಳ್ಳಬೇಕು ಎಂದು ನನ್ನ ಅಭಿಪ್ರಾಯ.
ಫಿಖ್ಹ್ ಮತ್ತು ಸಮಾಜಶಾಸ್ತ್ರ, ಅನುಭವಾತ್ಮಕವಾಗಿ ಸಾಬೀತಾಗಿರುವ ವಿದ್ಯಮಾನಗಳನ್ನು ಒಪ್ಪಿಕೊಳ್ಳುವ ಮತ್ತು ಬಳಸುವ ಮೂಲಕ ಸಾಮ್ಯತೆಯನ್ನು ಹೊಂದಿವೆ. ಆದರೆ ಈ ವಿದ್ಯಮಾನಗಳಿಗೆ ಪಶ್ಚಿಮದ ಸಮಾಜಶಾಸ್ತ್ರಜ್ಞರು ನೀಡುವ ವ್ಯಾಖ್ಯಾನಗಳನ್ನು ಸ್ವೀಕರಿಸುವುದು ಸಲ್ಲದು. ಫಿಖ್ಹಿಗೆ ಸ್ವಂತ ವ್ಯಾಖ್ಯಾನಶಾಸ್ತ್ರ ಚಾಲ್ತಿಯಲ್ಲಿರುವುದೇ ಇದಕ್ಕೆ ಕಾರಣ.
ಮಾಹಿತಿ, ಲೋಕಗ್ರಹಿಕೆ ಮತ್ತು ಮೌಲ್ಯಗಳ ವಿವರಣೆಗಳಲ್ಲಿ ವ್ಯಾಖ್ಯಾನಿಸುವ ವ್ಯಕ್ತಿಯ ಹಿನ್ನೆಲೆ ಬಹುಮುಖ್ಯವೆನಿಸುತ್ತದೆ. ಸಮಾಜಶಾಸ್ತ್ರಜ್ಞನು ಭೌತಿಕವಾದಿಯಾಗಿದ್ದಲ್ಲಿ, ಇವೆಲ್ಲವನ್ನೂ ಅವನಿಚ್ಚಿಸುವ ಭೌತಿಕವಾದದ ಒರೆಗೆ ಹಚ್ಚಿ ವ್ಯಾಖ್ಯಾನಿಸಲು ಬಯಸುವನು. ಅಂತೆಯೇ, ಬಂಡವಾಳಶಾಹಿ ಅವನಿಚ್ಚಿಸಿದಂತೆಯೂ, ಸಮಾಜವಾದಿ ಸಮಾಜವಾದದ ಆಶಯಗಳಿಗನುಗುಣವಾಗಿಯೂ ವ್ಯಾಖ್ಯಾನಿಸುವನು. ಇಸ್ಲಾಮಿಗೆ ಲೋಕಗ್ರಹಿಕೆಯಲ್ಲಿ ಸ್ವಂತಿಕೆಯಿದೆ. ಈ ದೆಸೆಯಲ್ಲಿ ಇವೆಲ್ಲಾ ವಿದ್ಯಮಾನಗಳನ್ನು ವ್ಯಾಖ್ಯಾನಿಸಬೇಕಿದೆ. ಹಾಗೆಂದು ಪಶ್ಚಿಮದ ಸಮಾಜ ಶಾಸ್ತ್ರವನ್ನು ಇಸ್ಲಾಮ್ ಸಂಪೂರ್ಣವಾಗಿ ಕಡೆಗಣಿಸುತ್ತದೆ ಎಂದು ಅರ್ಥೈಸಬೇಕಿಲ್ಲ. ಎಂಪಿರಿಕಲಾಗಿ ಸಾಬೀತಾಗಿರುವ ಸಂಗತಿಗಳನ್ನು ಇಸ್ಲಾಮ್ ಪಶ್ಚಿಮದಿಂದ ಸ್ವೀಕರಿಸುತ್ತದೆ ಮತ್ತು ತನ್ನ ಸ್ವಂತದ ವಿವರಣೆಗಳನ್ನು ನೀಡುತ್ತದೆ.
ಹಂಝ: ಒಟೋಮನ್ ಸಾಮಾಜಿಕ ಸಂಸ್ಕೃತಿಯು ಮುಕ್ತವೂ, ಬಹುತ್ವವುಳ್ಳದ್ದೂ ಆಗಿತ್ತು. ಕ್ರಮೇಣ ಆ ಜಾಗವನ್ನು ತನ್ನದಾಗಿಸಿಕೊಂಡ ಸಂಸ್ಕೃತಿಗಳು ಮುಕ್ತವಾಗಿರದೆ, ಪ್ರತ್ಯೇಕತಾವಾದವನ್ನು ಒಳಗೊಂಡಿದೆ. ಒಟೋಮನ್ ಸಂಸ್ಕೃತಿಯ ಈ ಒಳಗೊಳ್ಳುವಿಕೆಯು ಧರ್ಮದ ಹಿನ್ನೆಲೆಯುಳ್ಳದ್ದು ಎಂದು ತಾವು ಅಭಿಪ್ರಾಯಪಟ್ಟಿರುವಿರಿ. ಈ ವಾದವನ್ನೊಮ್ಮೆ ವಿವರಿಸಬಹುದೇ?
ಡಾ. ಸೆನ್ತುರ್ಕ್: ಇಸ್ಲಾಮಿಕ್ ನಾಗರಿಕತೆಯನ್ನು ಮುಕ್ತ ನಾಗರಿಕತೆಯೆನ್ನಲು ಹಲವು ಕಾರಣಗಳಿವೆ. ಪ್ರಥಮವಾಗಿ ‘ಮುಕ್ತ ನಾಗರಿಕತೆ’ಯನ್ನು ನಾನು ವಿವರಿಸುವೆ. ನಾಗರಿಕತೆಗಳ ಮೇಲ್ನೋಟ ಮತ್ತು ಇತರ ನಾಗರಿಕತೆಗಳೊಂದಿಗಿನ ಅವುಗಳ ಸಂಬಂಧದ ಆಧಾರದಲ್ಲಿ ನಾಗರಿಕತೆಗಳನ್ನು ನಾನು ವರ್ಗೀಕರಿಸುವೆನು. ‘ಅನ್ಯ ನಾಗರಿಕತೆ’ಯನ್ನು ಆದರದಿಂದ ಪರಿಗಣಿಸುವ ನಾಗರಿಕತೆಯನ್ನು ನಾನು ಮುಕ್ತ ನಾಗರಿಕತೆಯೆಂದು ಕರೆಯುವೆನು. ನಾಗರಿಕತೆಯೊಂದು, ಸರ್ವಾಧಿಕಾರಿ ಧೋರಣೆಯೊಂದಿಗೆ ಉಳಿದೆಲ್ಲಾ ನಾಗರಿಕತೆಗಳನ್ನು ನಿರಾಕರಿಸುವ ಮತ್ತು ತೊಡೆದು ಹಾಕುವ ಶ್ರಮವನ್ನು ಕೈಗೊಂಡಲ್ಲಿ ಆ ನಾಗರಿಕತೆಯನ್ನು ಸಂಕುಚಿತ ನಾಗರಿಕತೆಯಾಗಿ ನಾನು ಪರಿಭಾವಿಸುತ್ತೇನೆ. ಈ ದೆಸೆಯಲ್ಲಿ ಇಸ್ಲಾಮಿಕ್ ನಾಗರಿಕತೆಯನ್ನು ಪ್ರಾರಂಭದಿಂದಲೇ ಮುಕ್ತ ನಾಗರಿಕತೆಯೆನ್ನಬಹುದು. ಪೈಗಂಬರರು ಪ್ರಥಮವಾಗಿ ಈ ಮುಕ್ತ ನಾಗರಿಕತೆಗೆ ಮದೀನಾದಲ್ಲಿ ರೂಪುಕೊಟ್ಟರು. ನಂತರ ಆಡಳಿತ ನಡೆಸಿದ ರಾಜರುಗಳು ಮತ್ತು ಮುಸ್ಲಿಮರೆಲ್ಲರೂ ಈ ಮಾದರಿಯನ್ನು ಸ್ವೀಕರಿಸಿದರು. ಮದೀನಾದಲ್ಲಿ ಇಸ್ಲಾಮಿಕ್ ನಾಗರಿಕತೆಗೆ ಪೈಗಂಬರರು ರೂಪು ಕೊಟ್ಟಾಗ ಯಹೂದಿಗಳು ಮತ್ತು ಕ್ರೈಸ್ತರಿಗೆ ಮಾನ್ಯತೆಯನ್ನು ನೀಡಿ, ಇಸ್ಲಾಮಿಕ್ ರಾಷ್ಟ್ರದೊಳಗೆ ಸೇರಿಸಿಕೊಂಡರು. ಧರ್ಮಗಳು ಪರಸ್ಪರ ಅನ್ಯ ಧರ್ಮಗಳ ಉಚ್ಚಾಟನೆಗೆ ಶತಪ್ರಯತ್ನ ನಡೆಸುತ್ತಿದ್ದ ಕಾಲದಲ್ಲಾಗಿತ್ತು ಪೈಗಂಬರರ ಈ ನಡೆ ಎಂಬುವುದು ಬಹಳ ಗಮನಾರ್ಹ. ಪೈಗಂಬರರು ಪ್ರಾರಂಭದಲ್ಲಿಯೇ ಮುಕ್ತ ನಾಗರಿಕತೆಯೊಂದರ ಸ್ಥಾಪನೆಗೆ ಶ್ರಮಿಸಿದರು. ಇತರ ನಾಗರಿಕತೆಗಳಿಂದ ಕೊಡುಕೊಳ್ಳುವಿಕೆಗೂ ಇಸ್ಲಾಮಿಕ್ ನಾಗರಿಕತೆಯಲ್ಲಿ ಪ್ರಯತ್ನಗಳು ಉಂಟಾಗಿವೆ. ಇರಾನ್, ಗ್ರೀಕ್ ಮತ್ತು ಹಿಂದೂ ನಾಗರಿಕತೆಗಳಿಂದ ಅರಬಿ ಭಾಷೆಗೆ ಗ್ರಂಥಗಳ ತರ್ಜುಮೆಯು ಇದಕ್ಕೊಂದು ನಿದರ್ಶನ. ಅಂದಿನ ಬಹುತೇಕ ನಾಗರಿಕತೆಗಳಿಂದಲೂ ಇಸ್ಲಾಮ್ ಪ್ರಯೋಜನ ಪಡೆಯಲು ಪ್ರಯತ್ನಪಟ್ಟಿದೆ. ಒಟ್ಟಿನಲ್ಲಿ ಇಸ್ಲಾಮಿಕ್ ನಾಗರಿಕತೆಯು ಮುಕ್ತವಾಗಿದ್ದು, ಫಿಖ್ಹ್ ಇದಕ್ಕಿರುವ ಅಡಿಪಾಯ ಒದಗಿಸುತ್ತದೆ.
ಈ ತೆರೆದುಕೊಳ್ಳುವಿಕೆಗೆ ಖುರ್ ಆನ್ ಮತ್ತು ಹದೀಸ್ ಮೂಲವಾಗಿದ್ದು, ಇಸ್ಲಾಮ್ ಧರ್ಮವು, ಧರ್ಮದ ಅನುಯಾಯಿಗಳಿಗಲ್ಲದೆ ನಿರಾಕರಿಸುವವರಿಗೂ ಅವರ ಹಕ್ಕನ್ನು ನೀಡುತ್ತಿರುವುದು ವಿರೋಧಾಭಾಸವೇ ಸರಿ. ತನ್ನನ್ನು ಅಲ್ಲಾಹನ ದೂತನೆಂದು, ಪ್ರವಾದಿಯೆಂದು ಒಪ್ಪದವರಿಗೂ ಅವರು ಬಯಸುವ ಧರ್ಮದ ಪ್ರಕಾರ ಬದುಕಲು ಪೈಗಂಬರರು ಅವಕಾಶ ಕಲ್ಪಿಸಿ ಕೊಟ್ಟರು. ತಾನು ಪ್ರಸ್ತುತಪಡಿಸಿದ ಸಂದೇಶಗಳನ್ನು ನಿರಾಕರಿಸಲು ಜನರಿಗೆ ಅವಕಾಶ ಕಲ್ಪಿಸುವುದಾದರೂ ಏಕೆ ಮತ್ತು ಹೇಗೆ? ಎಂಬ ಬಹುಮುಖ್ಯ ಪ್ರಶ್ನೆಯೊಂದು ಇಲ್ಲಿ ಉದ್ಭವಿಸುತ್ತದೆ. ಇದಕ್ಕೆ ಫುಖಹಾಗಳು ನೀಡಿರುವ ಪ್ರತಿಕ್ರಿಯೆ ಇಂತಿದೆ: ‘ಅಲ್ಲಾಹನು ಮಾನವ ಕುಲವನ್ನು ಸೃಷ್ಟಿಸಿರುವುದಾದರೂ ಯಾತಕ್ಕಾಗಿ? ಮಾನವರನ್ನು ಪರೀಕ್ಷೆಗೊಳಪಡಿಸಲು. ಈ ದೆಸೆಯಲ್ಲಿ ಇಸ್ಲಾಮಿಕ್ ರಾಷ್ಟ್ರ, ನಿಯಮಗಳು ಇವೆಲ್ಲವೂ ಮಾನವ ಕುಲದ ನ್ಯಾಯಯುತ ಪರೀಕ್ಷೆಗೆ ಎಡೆಮಾಡಿಕೊಡಬೇಕಿದೆ. ಯಾರನ್ನೂ ಕೂಡಾ ಒತ್ತಾಯಪೂರ್ವಕವಾಗಿ ಇಸ್ಲಾಮಿಗೆ ಮತಾಂತರಗೊಳಿಸುವುದು ಸಲ್ಲದು. ಯಾವುದೇ ಬಲವಂತಿಕೆಯಿಲ್ಲದೆ ಆಯ್ಕೆಗಳನ್ನು ಮಾಡುವ ಮೂಲಕ ಮಾತ್ರ ನ್ಯಾಯಯುತವಾದ ಪರೀಕ್ಷೆ ಸಾಧ್ಯ. ಮಾನವನಿಗೆ ಒಳಿತು ಮತ್ತು ಕೆಡುಕನ್ನು ಆಯ್ಕೆ ಮಾಡುವ ಮುಕ್ತ ಅವಕಾಶವನ್ನು ನೀಡಬೇಕು. ಆದರೆ, ಕೆಡುಕನ್ನು ಆಯ್ದುಕೊಳ್ಳುವವನು ಅದರಿಂದುಂಟಾಗುವ ಅಡ್ಡ ಪರಿಣಾಮವನ್ನು ಅನುಭವಿಸಲೇಬೇಕಾಗುತ್ತದೆ. ಪೈಗಂಬರರು, ಮದೀನಾದಲ್ಲಿ ಒಳಿತು ಮತ್ತು ಕೆಡುಕು ಇವೆರಡನ್ನೂ ಆಯ್ಕೆ ಮಾಡುವ ಸ್ವಾತಂತ್ರ್ಯವನ್ನು ನೀಡಿದ್ದರು.
ಪೈಗಂಬರರ ಕಾಲದ ಬಳಿಕವೂ, ಅಲ್ಲಾಹನ ಅತ್ಯುನ್ನತ ಧ್ಯೇಯ, ಮಾನವನನ್ನು ಪರೀಕ್ಷೆಗೊಡ್ಡುವುದು ಎಂಬ ಸಂಕಲ್ಪವನ್ನು ಜೀವಂತವಾಗಿರಿಸುವ ಪ್ರಯತ್ನಗಳು ಮುಂದುವರಿದವು. ಮಾನವ ಬದುಕಿನಲ್ಲಿ ಆಯ್ಕೆಗಿರುವ ಅವಕಾಶಗಳು ಇಲ್ಲವಾದಲ್ಲಿ, ಕೆಡುಕನ್ನು ಆಯ್ದವರಿಗೆ ನರಕ ಮತ್ತು ಒಳಿತನ್ನು ಆಯ್ಕೆ ಮಾಡಿರುವವರಿಗೆ ಸ್ವರ್ಗವನ್ನು ಪ್ರತಿಫಲವಾಗಿ ನೀಡಲು ಅವಕಾಶಗಳಿರುವುದಿಲ್ಲ. ಸಾಮಾಜಿಕ ಮತ್ತು ರಾಜಕೀಯ ವ್ಯವಸ್ಥೆಗಳಲ್ಲೂ ಆಯ್ಕೆಗಳು ಇಲ್ಲದಿದ್ದಲ್ಲಿ ಸ್ವರ್ಗ ಮತ್ತು ನರಕಗಳಿಗೆ ಅರ್ಥವಿಲ್ಲದಂತಾಗುತ್ತದೆ. ಇಸ್ಲಾಮಿಕ್ ನಾಗರಿಕತೆಯ ಈ ತೆರೆದುಕೊಳ್ಳುವಿಕೆ ಫಿಖ್ಹಿನಿಂದ ರೂಪು ಪಡೆದಿರುವುದು ಇಲ್ಲಿ ಮನದಟ್ಟಾಗುತ್ತದೆ. ಆದ್ದರಿಂದಲೇ ಇಸ್ಲಾಮಿಕ್ ನಾಗರಿಕತೆಯನ್ನು ‘ಫಿಖ್ಹ್ ನಾಗರಿಕತೆ’ ಎಂದೂ ನಾನು ಹೇಳಲು ಬಯಸುವೆನು. ಫಿಖ್ಹ್ ಇಸ್ಲಾಮಿಕ್ ನಾಗರಿಕತೆಯ ವಿಶೇಷತೆ ಕೂಡಾ. ಫಿಖ್ಹ್ ಮತ್ತು ಇಸ್ನಾದ್ ಇಸ್ಲಾಮಿಕ್ ನಾಗರಿಕತೆಯನ್ನು ಇತರ ನಾಗರಿಕತೆಗಳಿಂದ ಭಿನ್ನವಾಗಿಸುತ್ತದೆ.
ಹಂಝ: ‘ಅಸಹಿಷ್ಣುತೆಯು ನೈಸರ್ಗಿಕ ಮೂಲಭೂತವಾದದ (Natural Essentialism) ಫಲಿತಾಂಶವಾಗಿದ್ದು, ಅಶ್ ಅರೀ ಮತ್ತು ಮಾತುರಿದೀ ಚಿಂತನಾಪದ್ಧತಿಗಳು (schools) Contingency of universeನ ಮೇಲೆ ಒತ್ತು ಕೊಟ್ಟಿರುವ ಪರಿಣಾಮವಾಗಿ ಅಸಹಿಷ್ಣುತೆಯನ್ನು ತಡೆಗಟ್ಟುವುದು ಸಾಧ್ಯವಾಯಿತು.’ ಎಂದಲ್ಲವೇ ನಿಮ್ಮ ಮಾತಿನ ಸಾರಾಂಶ?
ಡಾ. ಸೆನ್ತುರ್ಕ್: ಹೌದು, ಮೂಲಭೂತವಾದವು (Essentialism) ಕೇವಲ ಏಕ ಮಾತ್ರ ಸತ್ಯವಿರುವುದಾಗಿಯೂ, ಆ ಸತ್ಯ ಭೌತ ದ್ರವ್ಯದ ಸತ್ವವೆಂದು (Essence of matter) ಪರಿಭಾವಿಸುತ್ತದೆ. ಆ ಸತ್ವವನ್ನು ಕಂಡುಹಿಡಿದರೆ ಎಲ್ಲರೂ ಅದನ್ನೇ ಒಪ್ಪಿಕೊಳ್ಳಬೇಕೆಂದು ಒತ್ತಾಯಿಸುತ್ತದೆ. ಇದು ಕ್ರಮೇಣ ಸರ್ವಾಧಿಕಾರದತ್ತ ಮುಖ ಮಾಡುತ್ತದೆ. ಸಾಪೇಕ್ಷತಾವಾದವನ್ನು ಒಪ್ಪಿಕೊಂಡರೆ, ಒಂದೇ ಸಮಸ್ಯೆಗೆ ವಿವಿಧ ತೆರನಾದ ಮಾರ್ಗಗಳನ್ನು ಸ್ವೀಕರಿಸಲಾಗುತ್ತದೆ. ಈ ದೃಷ್ಟಿಕೋನವು, ಭಿನ್ನ ಸಂಕಲ್ಪಗಳನ್ನು ಮತ್ತು ಭಿನ್ನ ಸಾಮುದಾಯಿಕ ಸಂವಾದಗಳನ್ನು ಅಳವಡಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ. ಮುಅ್ತಝಿಲತ್ತಿನ ಮೂಲಭೂತವಾದಿ ಪರಿಕಲ್ಪನೆಯು ಸರ್ವಾಧಿಕಾರದತ್ತ ಹೊರಳಿರುವುದು ಇದಕ್ಕೆ ಉತ್ತಮ ಉದಾಹರಣೆ.

ಹಂಝ : ಸೋಷಿಯಲ್ ನೆಟ್ವರ್ಕ್ ಎಂದರೇನು? ಅದು ಏಕೆ ಬಹಳ ಮುಖ್ಯ? ‘Narrative Social Structure.’ ಎಂಬ ತಮ್ಮ ಗ್ರಂಥದಲ್ಲಿ ತಾವು ಏನನ್ನು ಹೇಳಲು ಬಯಸಿದ್ದೀರಿ ?
ಡಾ. ಸೆನ್ತುರ್ಕ್: ತಲೆಮಾರುಗಳಿಂದ, ಗುರುಗಳು ಮತ್ತು ಶಿಷ್ಯಂದಿರು ಇಸ್ಲಾಮಿಕ್ ಜ್ಞಾನ ಹಸ್ತಾಂತರಕ್ಕಾಗಿ ಹೆಣೆದಿರುವ ಜಾಲವು (Network) ಮುರಿಯದೆ, ಇಂದಿಗೂ ಮುಂದುವರಿಯುತ್ತಲಿದೆ ಎಂದು ನಾನು ವಾದಿಸಿರುವೆನು. ಇದು ವಿಶ್ವಾಸಾರ್ಹವೂ ಕೂಡಾ. ಈ ಜಾಲದ ವಿಶ್ವಾಸರ್ಹತೆಯು ಸಂಖ್ಯಾಶಾಸ್ತ್ರೀಯ ವಿಶ್ಲೇಷಣೆ (Statistical analysis) ಮತ್ತು ಸಾಮಾಜಿಕ ನೆಟವರ್ಕ್ ವಿಶ್ಲೇಷಣೆಯ ಮೂಲಕ ದೃಢಪಟ್ಟಿದೆ. ಪ್ರತಿಯೊಂದು ತಲೆಮಾರಿನಲ್ಲೂ ಸಂಬಂಧ ವಿತರಣೆಯಲ್ಲಿ ಕೆಲವೊಂದು ಮಾದರಿಗಳು (Patterns) ಇರುವುದಾಗಿ ನಾನು ಗುರುತಿಸಿದೆನು. ಈ ನೆಟ್ವರ್ಕಿನ ಭಾಗವಾಗಿರುವ ವ್ಯಕ್ತಿಗಳಿಗೆ ಈ ಮಾದರಿಯ ಕುರಿತು ತಿಳಿದಿಲ್ಲ. ನನ್ನ ಈ ಅಧ್ಯಯನದ ಮೂಲಕ ಮೊದಲ ಬಾರಿಗೆ ಈ ಮಾದರಿಗಳನ್ನು ಬೆಳಕಿಗೆ ತರಲಾಯಿತು. ಮೂಲಭೂತವಾಗಿ, ತಲೆಮಾರುಗಳೆಡೆಯಲ್ಲಿನ ಸಂಬಂಧ ವಿತರಣೆ ಪ್ರಕ್ರಿಯೆಯನ್ನು ಅಲೆಗಳಂತೆ ತೋರಿಸುವ ತರಂಗ ನಕ್ಷೆಯನ್ನೂ ನಮಗೆ ಕಾಣಬಹುದು. ಆರಂಭಿಕ ತಲೆಮಾರುಗಳ ಸಂಬಂಧದಲ್ಲಿ ಅಲೆಗಳಂತೆ ನಕ್ಷೆಯು ಸಹಜ ಸ್ಥಿತಿಯಲ್ಲಿದ್ದರೆ, ಆ ತಲೆಮಾರುಗಳ ಒಳ ಸಂಬಂಧಗಳು ಕುಂಠಿತಗೊಳ್ಳುತ್ತಿರುತ್ತದೆ. ಮುಂದಿನ ತಲೆಮಾರುಗಳಿಗೆ ಈ ಸಂಬಂಧವು ಹಸ್ತಾಂತರಿಸುವಾಗ ಮತ್ತೆ ವೃದ್ಧಿಯುಂಟಾಗುತ್ತದೆ. ಅಲೆಗಳಂತೆ ಈ ಪ್ರಕ್ರಿಯೆಯು ಮುಂದುವರಿಯುತ್ತದೆ. ಈ ಮಾದರಿಯು ಎಲ್ಲಾ ತಲೆಮಾರುಗಳಲ್ಲೂ ಪುನರಾವರ್ತನೆಯಾಗುವುದು.
ಸುಮಾರು 1376 ಹದೀಸ್ ವಿದ್ವಾಂಸರಾದ ಹಾಫಿಳುಗಳು ಮತ್ತು 14,000 ಫಿಖ್ಹ್ ವಿದ್ವಾಂಸರ ನೆಟ್ವರ್ಕನ್ನು ನಾನು ಅಧ್ಯಯನಕ್ಕೊಳಪಡಿಸಿರುವೆನು. ದಹಬಿಯ ‘ತ್ವಬಖಾತುಲ್ ಹುಫ್ಫಾಲ್’ ಮತ್ತು ಇಮಾಮ್ ಸುಯೂಥಿ ಅವರ ಗ್ರಂಥಗಳ ಆಧಾರದಲ್ಲಿ ಈ ಬೃಹತ್ ಮಾಹಿತಿಯನ್ನು ನಾನು ಕಲೆಹಾಕಿರುವೆನು. ಮಾನವ ಇತಿಹಾಸದಲ್ಲಿಯೇ ಅತಿ ದೊಡ್ಡ ಸಾಮಾಜಿಕ ಜಾಲವೆಂಬ ಮನ್ನಣೆ ಈ ಜಾಲಕ್ಕಿದೆ. ಇನ್ಯಾವುದೇ ನಾಗರಿಕತೆಗಳಲ್ಲಿಯೂ ಈ ರೀತಿಯ ದಾಖಲಾಗಿರುವ ಸಾಮಾಜಿಕ ನೆಟ್ ವರ್ಕ್ ನಮಗೆ ಲಭ್ಯವಿಲ್ಲ. ಈ ಕಾರಣಕ್ಕಾಗಿ ಇಸ್ಲಾಮಿಕ್ ನಾಗರಿಕತೆಯನ್ನು ಇಸ್ನಾದಿನ ನಾಗರಿಕತೆ ಎಂದು ಹೇಳಲು ನಾನು ಬಯಸುವೆನು. ಇಸ್ನಾದ್ ವ್ಯವಸ್ಥೆಗೆ ರೂಪು ಕೊಟ್ಟ ಮುಸ್ಲಿಮರು, ಇದರ ಮೂಲಕವೇ ಖುರ್ ಆನ್, ಹದೀಸ್, ಕರ್ಮ ಮತ್ತು ವ್ಯಾಖ್ಯಾನಗಳ ವರ್ಗಾವಣೆಯ ವಿಶ್ವಾಸರ್ಹತೆಯನ್ನು ಕಾಪಿಟ್ಟುಕೊಳ್ಳಲಾಯಿತು. ಅಲ್ಲಾಹನು ಹೇಳುತ್ತಾನೆ : ‘ನಾವು ಖುರ್ ಅನನ್ನು ಅವತೀರ್ಣಗೊಳಿಸಿರುವೆವು. ಅದನ್ನು ಸಂರಕ್ಷಿಸುವ ಜವಾಬ್ದಾರಿಯನ್ನೂ ನಾವು ನಿರ್ವಹಿಸುವೆವು’ (15:09). ಖುರ್ ಆನಿನ ಸಂರಕ್ಷಣೆಯೆಂದರೆ ಕೇವಲ ಪಾರಾಯಣ ಮತ್ತು ಪದಗಳ ಸಂರಕ್ಷಣೆಯಲ್ಲ. ಹದೀಸುಗಳು ಖುರ್ಆನಿನ ವಿವರಣೆಗಳಾಗಿವೆ. ಆದ್ದರಿಂದಲೇ ಹದೀಸುಗಳ ಸಂರಕ್ಷಣೆಯೂ ಅನಿವಾರ್ಯ ಕೂಡಾ. ಹದೀಸ್ ಅಥವಾ ವಿವರಣೆಯಿಲ್ಲದೆ ಖುರ್ಆನನ್ನು ಯಥಾವತ್ತಾಗಿ ಮನದಟ್ಟುಮಾಡಿಕೊಳ್ಳುವುದು ಅಸಾಧ್ಯ ಸಂಗತಿ. ಗ್ರಂಥವೊಂದು ಲಭ್ಯವಿದ್ದು, ಅದರ ನೈಜ ಅರ್ಥ- ವ್ಯಾಖ್ಯಾನಗಳು ಗ್ರಹಿಸಲಸಾಧ್ಯವಾದರೆ, ಆ ಗ್ರಂಥ ಇದ್ದೂ ಇಲ್ಲದಂತೆ. ಅತ್ಯುನ್ನತನಾದ ಅಲ್ಲಾಹನು ಸುನ್ನತ್ ಅಥವಾ ಹದೀಸುಗಳನ್ನೂ ಸಂರಕ್ಷಿಸಿರುವನು. ಅಲ್ಲಾಹನು ತನ್ನ ವಾಗ್ದಾನವನ್ನು ಇಸ್ನಾದ್ ವ್ಯವಸ್ಥೆಯ ಮೂಲಕ ನೆರವೇರಿಸಿದನು. ಈ ವ್ಯವಸ್ಥೆಯು ಇನ್ನೂ ಮುಂದುವರಿಯಲಿದೆ. ಇದನ್ನು ಕಾಪಾಡುವ ಮತ್ತು ಪುನರುಜ್ಜೀವನಗೊಳಿಸಬೇಕಾದ ಕರ್ತವ್ಯ ನಮ್ಮ ಮೇಲಿದೆ.
ಹಂಝ: ನೀವು Istanbul Foundation for Research & Education (ISAR) ಸಂಸ್ಥೆಯ ನಿರ್ದೇಶಕರಾಗಿ ಕಾರ್ಯಾಚರಿಸುತ್ತಿರುವಿರಿ. ಸಂಸ್ಥೆಯ ಮೂಲಕ ಟರ್ಕಿಯ ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಸಾಂಪ್ರದಾಯಿಕ ಓಟೋಮನ್ ಮದ್ರಸಾ ಶಿಕ್ಷಣವನ್ನು ಕಲಿಯಲು ಸ್ಕಾಲರ್ಶಿಪ್ ನೀಡುತ್ತಿರುವಿರಿ. ಯೂನಿವರ್ಸಿಟಿ ವಿದ್ಯಾರ್ಥಿಗಳಿಗೆ ಈ ಶಿಕ್ಷಣವು ದೊರಕಬೇಕಾದ ಅಗತ್ಯವೇನು? ನಿಮ್ಮ ಅನುಭವಗಳ ಮೂಲಕ ಹಂಚಿಕೊಳ್ಳಬಹುದೇ?
ಸೆನ್ತುರ್ಕ್: ಪ್ರಥಮವಾಗಿ, ನಾವಿಲ್ಲಿ ನೀಡುತ್ತಿರುವುದು ಸ್ಕಾಲರ್ಶಿಪ್ಪನ್ನಲ್ಲ, ಇಲ್ಮನ್ನು. ಪ್ರಾರಂಭ ಹಂತದಲ್ಲಿ ನೀಡಲಾಗುತ್ತಿದ್ದ ಸ್ಕಾಲರ್ಶಿಪ್ಪನ್ನು ಈಗ ಸ್ಥಗಿತಗೊಳಿಸಲಾಗಿದೆ. ವಿದ್ಯಾರ್ಥಿಗಳಿಂದ ಹಣವನ್ನು ಕೇಳಲಾಗುವುದಿಲ್ಲ. ಆರ್ಥಿಕವಾಗಿ ಹಿಂದುಳಿದವರಿಗೆ ಹೊರತಾಗಿ ಯಾರಿಗೂ ಹಣವನ್ನು ನೀಡುವುದೂ ಇಲ್ಲ. ಈ ಮೂಲಕ ವಿದ್ಯಾರ್ಥಿಗಳು ಮತ್ತು ಸಂಸ್ಥೆಯ ನಡುವಿನ ಬಾಂಧವ್ಯವು ಪ್ರಾಮಾಣಿಕವಾಗಿರಲು ಶ್ರಮಿಸಲಾಗುತ್ತದೆ.
ಉಲಮಾಗಳನ್ನು ಸೃಷ್ಟಿಸಬೇಕೆನ್ನುವುದೇ ISARನ ಗುರಿ. ಅದಕ್ಕಾಗಿ ಎರಡು ವಿಭಾಗಗಳಿವೆ. ಮುಸ್ಲಿಮ್ ವಿದ್ವಾಂಸರು ಮತ್ತು ಇಸ್ಲಾಮ್ ವಿದ್ವಾಂಸರು. ಇಸ್ಲಾಮಿನ ವಿದ್ವಾಂಸರು ಇಸ್ಲಾಮಿಕ್ ವಿಷಯಗಳಲ್ಲಿ ಪ್ರತ್ಯೇಕ ಪದವಿ ಪಡೆದರೆ, ತಾನಿರುವ ಯಾವುದೇ ಕ್ಷೇತ್ರಕ್ಕೂ ತಾನು ಕಲಿತ ಇಸ್ಲಾಮಿಕ್ ಶಿಕ್ಷಣವನ್ನು ಅನ್ವಯಗೊಳಿಸುವವನಾಗಿರುವನು ಮುಸ್ಲಿಮ್ ವಿದ್ವಾಂಸ. ಇಸ್ಲಾಮಿಕ್ ಶಿಕ್ಷಣವು ಮೂಲೆಗುಂಪಾಗಿರುವ ಮತ್ತು ಶೈಕ್ಷಣೀಕರಣಗೊಳಿಸಲಾಗುವ (Academicization) ಇಂದು ಮುಸ್ಲಿಮ್ ವಿದ್ವಾಂಸರು ಬಹಳ ಅಗತ್ಯ. ಇಸ್ಲಾಮಿನ ವಿದ್ಯಾಭ್ಯಾಸವು ಶೈಕ್ಷಣೀಕರಣಗೊಳಿಸುವುದರಿಂದ ಹಲವಾರು ದುಷ್ಪರಿಣಾಮಗಳಿವೆ. ಈ ವ್ಯವಸ್ಥೆಯ ಮೂಲಕ ಮುಸ್ಲಿಮ್ ವಿದ್ವಾಂಸರನ್ನು ರೂಪುಗೊಳಿಸುವುದು ಅಸಾಧ್ಯ. ಇಸ್ಲಾಮಿಕ್ ವಿದ್ಯಾಭ್ಯಾಸದ ವಿಶಿಷ್ಟತೆಯಾಗಿರುವ ಇಸ್ನಾದ್ ಇಲ್ಲವೆನ್ನುವುದೇ ಮುಖ್ಯ ಕಾರಣ. ಇದಲ್ಲದೆ ಈ ವ್ಯವಸ್ಥೆಯ ಮೂಲಕ ಗರಿಷ್ಠ ಸಂಖ್ಯೆಯಲ್ಲಿ ವಿದ್ಯಾರ್ಥಿಗಳ ಸೃಷ್ಟಿ ಸಾಧ್ಯವಾಗುತ್ತದೆಯೇ ಹೊರತು ವಿದ್ಯಾರ್ಥಿಗಳ ತಖ್ವಾ (ದೈವ ಭಕ್ತಿ), ಅಖ್ಲಾಕ್ (ಸ್ವಭಾವ ಗುಣ) ಮತ್ತು ಅಮಲ್(ಆಧ್ಯಾತ್ಮಿಕ ಕರ್ಮಗಳು)ಗಳ ಮೇಲೆ ಗಮನಹರಿಸಲಾಗುವುದಿಲ್ಲ. ಯಾರಿಗೂ ಕೂಡಾ ಕಲಿತು ಪದವಿ ಪಡೆಯಬಹುದೇ ಹೊರತು, ಅವರ ಗುಣಮಟ್ಟದ ಕುರಿತು ಮುತುವರ್ಜಿ ವಹಿಸಲಾಗುವುದಿಲ್ಲ. ಆದ್ದರಿಂದಲೇ ಜನರು ಅವರ ವಿದ್ಯೆ, ಗುಣನಡತೆಗ ಬಗೆಗೆ ಅಷ್ಟೇನು ಸಂತುಷ್ಟರಲ್ಲ. ಯೂನಿವರ್ಸಿಟಿಗಳು ಅಕಾಡಮಿಶಿಯನ್ನುಗಳನ್ನು ಸೃಷ್ಟಿಸಬಹುದು. ಆದರೆ ನಮಗೆ ಬೇಕಿರುವುದು ಉಲಮಾಗಳು. ಅಕಾಡಮಿಷಿಯನ್ ಮತ್ತು ಉಲಮಾಗಳು ಸಮಾಜದಲ್ಲಿ ನಿರ್ವಹಿಸಬೇಕಾದ ಕರ್ತವ್ಯಗಳು ಭಿನ್ನ. ISARನ ಗುರಿ ಉಲಮಾಗಳ ಸೃಷ್ಟಿ. ಈ ದೆಸೆಯಲ್ಲಿ ಆಧುನಿಕ ಅರಬಿಕ್, ಕ್ಲಾಸಿಕಲ್ ಅರಬಿಕ್, ಪರ್ಷಿಯನ್ ಎಂಬಿತ್ಯಾದಿ ಭಾಷೆಗಳ ಕಲಿಕೆಯ ಜೊತೆ ಜೊತೆಗೆ ಸಾಂಪ್ರದಾಯಿಕ ಮದ್ರಸಾ ಪಠ್ಯಕ್ರಮಗಳ ಕಲಿಕೆಗೂ ಆದ್ಯತೆ ನೀಡಲಾಗುತ್ತದೆ. ಈ ಮೂಲಕ ಅರಬಿ ಭಾಷೆ ಹಾಗೂ ಪರಂಪರಾಗತ ಇಸ್ಲಾಮಿಕ್ ಜ್ಞಾನ ಶಿಸ್ತುಗಳಲ್ಲಿ ಪರಿಣತಿ ಪಡೆಯಲು ಸಾಧ್ಯ. ಅಂತೆಯೇ ಸಮಾಜ ವಿಜ್ಞಾನಗಳ ಅಧ್ಯಯನಕ್ಕೂ ಒತ್ತು ಕೊಡಲಾಗುತ್ತದೆ. ಮಾನವಿಕ ವಿಜ್ಞಾನ (Humanities) ಮತ್ತು ಸಮಾಜ ವಿಜ್ಞಾನಗಳ (Social Sciences) ಅಧ್ಯಯನಕ್ಕೆ ವಿಶ್ವವಿದ್ಯಾಲಯಗಳಿಗಿಂತ ಭಿನ್ನ ಮಾರ್ಗವನ್ನು ISARನಲ್ಲಿ ಅಳವಡಿಸಲಾಗಿದೆ. ಮಾನವಿಕ ಮತ್ತು ಸಮಾಜ ವಿಜ್ಞಾನಗಳ ವಿಚಾರಗಳನ್ನು ಇಸ್ಲಾಮಿನ ಜ್ಞಾನ ಶಿಸ್ತುಗಳ ನಿಕಷಕ್ಕೊಡ್ಡಿ, ವಿಮರ್ಶಾತ್ಮಕ ದೃಷ್ಟಿಕೋನದೊಂದಿಗೆ ಅಧ್ಯಯನ ನಡೆಸುವ ಮಾದರಿಯನ್ನು ಇಲ್ಲಿ ಸ್ವೀಕರಿಸಲಾಗುತ್ತಿದೆ. ಅಂತೆಯೇ ವಿದ್ಯಾರ್ಥಿಗಳ ತಖ್ವಾ, ಅಖ್ಲಾಕ್ ಮತ್ತು ಅದಬ್ ಮತ್ತು ಕಲಿಯುವ ವಿಚಾರಗಳನ್ನು ಬದುಕಿನಲ್ಲಿ ಅಳವಡಿಸುವ ನಿಟ್ಟಿನಲ್ಲಿಯೂ ಗಮನಹರಿಸಿ, ಫುತುವ್ವಾದ ಚೈತನ್ಯ ತುಂಬಿರುವ ಜವಾಬ್ದಾರಿಯುತ ನಾಗರಿಕನನ್ನು ಸೃಷ್ಟಿಸಲು ಶ್ರಮಿಸಲಾಗುತ್ತದೆ.
ಹಂಝ: ಅಬುಸ್ಸುಊದ್ ಎಫೆಂದಿ ಬದುಕಿದ್ದು, ಇಸ್ಲಾಮಿಕ್ ಜ್ಞಾನಶಿಸ್ತುಗಳ ಅಧ್ಯಯನಕ್ಕಾಗಿ ಅತ್ಯಾಧುನಿಕ ಸಂಸ್ಥೆಯನ್ನು ನಿರ್ಮಿಸುವ ಹೊಣೆ ನೀಡಿದರೆ, ಅವರು ಯಾವ ರೀತಿಯ ಸಂಸ್ಥೆಯನ್ನು ನಿರ್ಮಿಸುತ್ತಿದ್ದರು? ನಿಮ್ಮ ಅನಿಸಿಕೆಯೇನು?
ಡಾ. ಸೆನ್ತುರ್ಕ್: ಬಹುಶ, ISARನಂತಹ ಸಂಸ್ಥೆಯೊಂದಕ್ಕೆ ಚಾಲನೆ ಕೊಡುತ್ತಿದ್ದರೇನೋ ಎಂಬುವುದು ನನ್ನ ಅನಿಸಿಕೆ. ಇಸ್ಲಾಮಿಕ್ ವಿದ್ವತ್ತಿನ ಭಾಷೆಯಾಗಿರುವ ಅರಬಿಕ್ ಮತ್ತು ಆಧುನಿಕ ಜಗತ್ತಿನಲ್ಲಿ ಸಾರ್ವತ್ರಿಕ ಭಾಷೆಯಾಗಿರುವ ಆಂಗ್ಲ ಭಾಷೆಯ ಕಲಿಕೆಗೂ ಆದ್ಯತೆ ನೀಡುತ್ತಿದ್ದರು. ಇಸ್ಲಾಮಿಕ್ ಜ್ಞಾನವನ್ನು ಪಡೆಯಲು ಪರ್ಷಿಯನ್ ಬಾಷೆ ಕೂಡಾ ಬಹಳ ಅನಿವಾರ್ಯ. ಫಿಖ್ಹ್ ಕಲಿಕೆಗೆ ಒತ್ತು ನೀಡುತ್ತಾ, ಸಾಮಾಜಿಕ ಸಮಸ್ಯೆಗಳನ್ನು ಸಮಾಜಶಾಸ್ತ್ರಗಳ ಒರೆಗೆ ಹಚ್ಚದೆ, ಫಿಖ್ಹಿನ ದೃಷ್ಟಿಕೋನದೊಂದಿಗೆ ಅಧ್ಯಯನ ನಡೆಸುವ ಮಾದರಿಗೆ ಹೆಚ್ಚು ಪ್ರಾಶಸ್ತ್ಯವನ್ನು ನೀಡುತ್ತಿದ್ದರು. ಇಲ್ಮ್, ತಖ್ವಾ ಮತ್ತು ಕಲಿತದ್ದನ್ನು ಕಾರ್ಯರೂಪಕ್ಕೆ ತರುವ ಕಡೆಗೂ ಹೆಚ್ಚು ಗಮನ ಕೊಡುತ್ತಿದ್ದರೇನೋ. ಅವರ ಕಾರ್ಯವೈಖರಿ ಯಾವ ರೀತಿಯಲ್ಲಾಗಿರಬಹುದೆಂದು ನಿಖರವಾಗಿ ಹೇಳುವುದು ಅಸಾಧ್ಯವಾದರೂ, ಇವೆಲ್ಲವನ್ನೂ ಕೂಡಾ ಅವರು ಗಣನೆಗೆ ತೆಗೆದುಕೊಳ್ಳುವರು ಎಂದು ನನ್ನ ಊಹೆ. ಮದ್ರಸಾ ವ್ಯವಸ್ಥೆಯ ವ್ಯಕ್ತಿಗತ ತರಬೇತಿಗೂ ಹೆಚ್ಚು ಪ್ರಾಮುಖ್ಯತೆಯನ್ನು ನೀಡುತ್ತಿದ್ದರು. ಹಿಂದಿನ ಕಾಲದ ಮದ್ರಸಾಗಳಲ್ಲಿ ಚಾಲ್ತಿಯಲ್ಲಿದ್ದ ವ್ಯಕ್ತಿಗತ ತರಬೇತಿ ಮಾದರಿಗಳನ್ನು ಜಾರಿಗೆ ತರಬೇಕಾದ ಅನಿವಾರ್ಯ ಸನ್ನಿವೇಶ ಇಂದು ನಮ್ಮ ಮುಂದಿದೆ. ಅಬುಸ್ಸುಊದ್ ಎಫೆಂದಿ ಈ ವ್ಯವಸ್ಥೆಯನ್ನು ಜಾರಿಗೆ ತರಲು ಮತ್ತು ಇಜಾಝತ್ ಮತ್ತು ಇಸ್ನಾದನ್ನು ಮುನ್ನೆಲೆಗೆ ತರಲು ಸಕ್ರಿಯವಾಗಿ ಕಾರ್ಯಾಚರಿಸುತ್ತಿದ್ದರು. ಇವೆಲ್ಲವೂ ಅಬುಸ್ಸುಊದ್ ಎಫೆಂದಿಯ ಕುರಿತು ನನ್ನ ಅನಿಸಿಕೆಗಳು.
ಹಂಝ: ಸಾಂಪ್ರದಾಯಿಕ ಸಂವಾದ ಜ್ಞಾನದ (Science of dialectics, ಇಲ್ಮುಲ್ ಬಹಸ್ ವಲ್ ಮುನಾಳರ) ಪುನರುಜ್ಜೀವನದ ಪ್ರಾಧಾನ್ಯತೆಯ ಬಗ್ಗೆ ನೀವು ಪ್ರತಿಪಾದಿಸಿರುವಿರಿ. ಅದರ ಪ್ರಾಮುಖ್ಯತೆಯ ಬಗ್ಗೆ ಹೇಳಬಹುದೇ?
ಡಾ. ಸೆನ್ತುರ್ಕ್: ಬಹ್ಸ್ ಮತ್ತು ಮುನಾಳರ (ವಾದ ಮತ್ತು ಪ್ರತಿವಾದ) ಬದುಕಿನಲ್ಲಿ ಸರ್ವ ಸಾಮಾನ್ಯ ಸಂಗತಿಯಾಗಿದೆ. ಓಟೋಮನ್ ಮದ್ರಸಾ ಶಿಕ್ಷಣ ವ್ಯವಸ್ಥೆಯಲ್ಲಿ ಬಹಳ ಅತ್ಯವಶ್ಯವಾದ ಜ್ಞಾನಶಿಸ್ತಾಗಿತ್ತು ಸಂವಾದಶಾಸ್ತ್ರ. ಇದು ವಿದ್ಯಾರ್ಥಿಗಳಿಗೆ ತಮ್ಮ ವಾದವನ್ನು ಮಂಡಿಸುವುದು, ಸಮರ್ಥಿಸುವುದು, ಎದುರಾಳಿಯ ವಾದಗಳನ್ನು ಖಂಡಿಸುವುದು ಮತ್ತು ನಮ್ಮ ವಾದಗಳನ್ನು ಮುಂದಕ್ಕೆ ಬೆಳೆಸುವುದು ಹೇಗೆ ಎಂಬಿತ್ಯಾದಿ ವಿಷಯಗಳಿಗೆ ಸಹಕಾರಿಯಾಗುತ್ತದೆ. ವಿದ್ಯಾರ್ಥಿಗಳಿಗೆ, ಮತ್ತೊಬ್ಬರ ವಾದಗಳೊಂದಿಗೆ ಭಿನ್ನಾಭಿಪ್ರಾಯ ಹೊಂದುವುದು ಮತ್ತು ಪ್ರಶ್ನಿಸುವುದರ ಬಗೆಗಿರುವ ಮರ್ಯಾದೆಗಳ ಕುರಿತು ತಿಳಿವಳಿಕೆಯಿದ್ದಲ್ಲಿ ಸಮಾಜದಲ್ಲಿ ಕಲಹಗಳು ಉಂಟಾಗಲಾರದು. ಅವು ಸಂವಾದಾತ್ಮಕ ಚರ್ಚೆಗಳಾಗಿ ಮುಂದುವರಿಯುತ್ತವೆ. ಇನ್ನಿತರರೊಂದಿಗೆ ಗೌರವಪೂರ್ವಕವಾಗಿ ಅಭಿಪ್ರಾಯ ಭಿನ್ನತೆಯನ್ನು ಹೊಂದುವುದರ ಕುರಿತು ತಿಳಿವಳಿಕೆಯಿಲ್ಲದಿದ್ದಲ್ಲಿ, ಆದರ ಪಾಲಿಸದಿದ್ದಲ್ಲಿ, ಆ ಚರ್ಚೆಗಳು ವಾಗ್ವಾದಗಳಾಗಿ ಕೊನೆಗೆ ಸಂಘರ್ಷಕ್ಕೆ ಎಡೆಮಾಡಿಕೊಡುತ್ತದೆ. ಇದು ವಿದ್ವಾಂಸರಲ್ಲದೆ ಎಲ್ಲಾ ಜನಸಾಮಾನ್ಯರ ನಿತ್ಯದ ಬದುಕಿನಲ್ಲೂ ಅತ್ಯಗತ್ಯವಿರುವ ಜಾನಶಿಸ್ತು. ನಾವೆಲ್ಲರೂ ದಿನನಿತ್ಯದ ಬದುಕಿನಲ್ಲಿ ಇತರರೊಂದಿಗೆ ಅಭಿಪ್ರಾಯ ಭಿನ್ನತೆಗಳನ್ನು ಹೊಂದಿರುತ್ತೇವೆ. ಆದ್ದರಿಂದಲೇ ನಮ್ಮೆಡೆಯಲ್ಲಿ ಭಿನ್ನಾಭಿಪ್ರಾಯಗಳು ಇರುವುದರ ಜೊತೆಗೆ ನಾವು ನಡೆದುಕೊಳ್ಳಬೇಕಾದ ರೀತಿ ರಿವಾಜುಗಳ ಕುರಿತು ಅರಿತಿರುವುದು ಉತ್ತಮ. ಎಲ್ಲಾ ಪ್ರೌಢ ಶಿಕ್ಷಣ ಶಾಲೆಗಳಲ್ಲೂ, ವಿಶ್ವವಿದ್ಯಾಲಯಗಳಲ್ಲೂ ಈ ಜ್ಞಾನಶಿಸ್ತನ್ನು ಪಠ್ಯ ಕ್ರಮದ ಭಾಗವಾಗಿ ಜಾರಿಗೆ ತರಬೇಕಿದೆ ಎಂದು ನನ್ನ ಅನಿಸಿಕೆ. ಸಮಾಜದ ವಿವಿಧ ಸ್ತರಗಳಲ್ಲಿ ಕಾರ್ಯಾಚರಿಸುವವರೂ ಕೂಡಾ ಇದರ ಕುರಿತು ಪರಿಜ್ಞಾನ ಉಳ್ಳವರಾಗಬೇಕು. ನಾವೆಲ್ಲರೂ ಕೂಡಾ ಪರಸ್ಪರ ಸಂವಾದಗಳಲ್ಲಿ ತೊಡಗಿಕೊಳ್ಳುತ್ತೇವೆ, ಚರ್ಚಿಸುತ್ತೇವೆ. ಚರ್ಚೆಗಳಲ್ಲಿ, ಸಂವಾದಗಳಲ್ಲಿ ನಾವು ಪಾಲಿಸಬೇಕಿರುವ ಮರ್ಯಾದೆಗಳು ಏನೆಲ್ಲಾ ಎಂಬ ಅರಿವಿಲ್ಲದಿದ್ದಲ್ಲಿ ಸಮಾಜದಲ್ಲಿ ಹಲವಾರು ಸಮಸ್ಯೆಗಳು ತಲೆದೋರುತ್ತವೆ. ಉದಾಹರಣೆಗೆ, ಒಬ್ಬಾತ ವಾದವೊಂದನ್ನು ಮಂಡಿಸಿದಾಗ, ನಿಮಗೆ ಭಿನ್ನಾಭಿಪ್ರಾಯವಿದ್ದಲ್ಲಿ ಅದಕ್ಕಿರುವ ಕಾರಣವನ್ನು ವ್ಯಕ್ತಪಡಿಸಬೇಕು ಎಂಬುವುದು ‘ಬಹ್ಸ್ ಮುನಾಳರ’ ಜ್ಞಾನಶಿಸ್ತಿನ ಮೂಲಭೂತ ತತ್ವಗಳಲ್ಲೊಂದು. ನೀವು ‘ಕಾಂಬ್ರಿಡ್ಜ್ ವಿಶ್ವವಿದ್ಯಾಲಯ ಅತ್ಯುತ್ತಮ ವಿಶ್ವವಿದ್ಯಾಲಯ’ ಎಂದು ವಾದ ಮಂಡಿಸಿರುವಿರಿ ಎಂದಿಟ್ಟುಕೊಳ್ಳೋಣ. ಆ ಅಭಿಪ್ರಾಯದ ಕುರಿತು ನನಗೆ ಒಪ್ಪಿಗೆ ಇಲ್ಲದಿದ್ದಲ್ಲಿ, ಆದರದಿಂದ ‘ಯಾಕೆ?’ ಎಂದು ಕೇಳುವ ಮೂಲಕ ನಿಮ್ಮ ವಾದದ ಸಮರ್ಥನೆಗಿರುವ ಅವಕಾಶವನ್ನು ನೀಡಬೇಕಿದೆ. ಇದಕ್ಕೆ ಪ್ರತಿಯಾಗಿ, ನಿಮ್ಮ ಅಭಿಪ್ರಾಯ ಸಮರ್ಥನೆಗಿರುವ ಅವಕಾಶವನ್ನು ನೀಡದೆ, ‘ನಿಮ್ಮ ಅಭಿಪ್ರಾಯ ಸರಿಯಿಲ್ಲ. ಜಗತ್ತಿನಲ್ಲಿ ಅತ್ಯುತ್ತಮ ವಿಶ್ವ ವಿದ್ಯಾಲಯ ಆಕ್ಸ್ಫರ್ಡ್’ ಎಂದು ನಾನು ತಿರುಗೇಟು ನೀಡಿದರೆ ಅದನ್ನು ಗಸ್ಬ್ ಅಥವಾ ಅಕ್ರಮವೆಂದು ಪರಿಗಣಿಸಲಾಗುತ್ತದೆ. ಪ್ರತಿವಾದವನ್ನು ಮಂಡಿಸುವ ಮೂಲಕ ನಿಮ್ಮ ವಾದ ಸಮರ್ಥನೆಗಿರುವ ಅವಕಾಶವನ್ನು ನಾನು ಕಸಿದುಕೊಂಡಿರುವೆನು. ಇದು ನಾನು ನಿಮ್ಮನ್ನು ಮೌನಿಯಾಗಿಸುವುದಕ್ಕೆ ಸಮ. ಕೇವಲ ಈ ಒಂದು ತತ್ವದ ಮೂಲಕ ಬದುಕಿನಲ್ಲುಂಟಾಗುವ ಹಲವು ಸಂಘರ್ಷಗಳನ್ನು ತಡೆಗಟ್ಟಬಹುದು. ನಿಮ್ಮ ಹೆಂಡತಿ, ಮಕ್ಕಳು, ಹೆತ್ತವರು, ಇನ್ನಿತರ ಯಾರೇ ಆಗಲೀ ಅಭಿಪ್ರಾಯ ವ್ಯಕ್ತಪಡಿಸಿದರೆ, ಆ ಕೂಡಲೇ ವಿರೋಧ ವ್ಯಕ್ತಡಿಪಡಿಸುವುದರ ಬದಲಾಗಿ, ಅವರ ಅಭಿಪ್ರಾಯವನ್ನು ಸಂಪೂರ್ಣವಾಗಿ ವಿವರಿಸಲು, ಸಮರ್ಥನೆ ಮಾಡಿಕೊಳ್ಳಲು ಅವಕಾಶವನ್ನು ನೀಡಬೇಕು. ಆ ಬಳಿಕ ಮಾತ್ರವೇ ನೀವು ವಿರೋಧ ವ್ಯಕ್ತಪಡಿಸಲು ಮುಂದಾಗಬೇಕು.
ಇಮಾಂ ಗಝಾಲಿ ಹೇಳುತ್ತಾರೆ: ‘ವ್ಯಕ್ತಿಯೊಬ್ಬನು ನಿಮ್ಮೊಂದಿಗೆ ಪ್ರಶ್ನೆಯೊಂದನ್ನು ಕೇಳಿದರೆ, ಪ್ರಥಮವಾಗಿ, ಆತನು ಆ ಪ್ರಶ್ನೆಯಲ್ಲಿ ಪ್ರಾಮಾಣಿಕನೇ ಎಂದು ಅರಿತುಕೊಳ್ಳಬೇಕು. ಪ್ರಾಮಾಣಿಕನಲ್ಲ ಎಂದಾದಲ್ಲಿ ಅವನ ಮನವೊಲಿಸುವ ಹಾರಿಕೆಯ ಉತ್ತರವನ್ನು ನೀಡಿ ಅಲ್ಲಿಂದ ಕಳಚಿಕೊಳ್ಳಬೇಕು. ಕಾರಣ ಅವನೊಂದಿಗೆ ಅನಗತ್ಯ ಸಂವಾದದಲ್ಲಿ ತೊಡಗಿಕೊಳ್ಳಬೇಕಿಲ್ಲ. ಆ ಪ್ರಶ್ನೆಯನ್ನು ಕೇಳುವ ಮೂಲಕ ಆ ವಿಷಯದ ಕುರಿತಿರುವ ವಾಸ್ತವಿಕತೆಯನ್ನು ಮನದಟ್ಟುಮಾಡಿಕೊಳ್ಳುವ ಇರಾದೆ ಅವನಿಗಿಲ್ಲ. ಕೇವಲ ವಾಗ್ವಾದಕ್ಕಾಗಿ ಮಾತ್ರ ಅವನು ಕೇಳಿರುವ ಪ್ರಶ್ನೆಯದು. ಪ್ರಶ್ನೆ ಕೇಳಿದಾತ ಪ್ರಾಮಾಣಿಕನಾಗಿದ್ದಲ್ಲಿ, ಪ್ರಶ್ನೆಯ ಸೂಕ್ತ ಉತ್ತರವನ್ನು ಮನವರಿಕೆ ಮಾಡಿಕೊಳ್ಳುವಷ್ಟು ಬುದ್ಧಿವಂತಿಕೆ ಅವನಿಗಿದೆಯೇ ಎಂದು ಅರಿತುಕೊಳ್ಳಬೇಕು. ಕೆಲವೊಮ್ಮೆ ಪ್ರಶ್ನೆ ಕೇಳಿದಾತನಿಗೆ ಅದರ ಸೂಕ್ತ ಉತ್ತರವನ್ನು ಮನದಟ್ಟುಮಾಡಿಕೊಳ್ಳುವಷ್ಟು ಬುದ್ಧಿವಂತಿಕೆ ಅಥವಾ ತಿಳಿವಳಿಕೆ ಇರಲಿಕ್ಕಿಲ್ಲ. ಹಾಗಿದ್ದಲ್ಲಿ, ವ್ಯಕ್ತಿಗಳ ಬುದ್ಧಿಗೆ ನಿಲುಕುವ, ಜನರಿಗೆ ಮನದಟ್ಟುಮಾಡಿಕೊಳ್ಳಲು ಸಾಧ್ಯವಿರುವುದನ್ನು ಮಾತ್ರವೇ ಹೇಳಬೇಕು. ಇಲ್ಲಿ ವಾದ- ಪ್ರತಿವಾದಗಳನ್ನು ನಡೆಸುವಾಗ ನಾವು ಪಾಲಿಸಬೇಕಿರುವ ಕೆಲವೊಂದು ಮರ್ಯಾದೆಗಳ ಕುರಿತು ಬೆಳಕು ಚೆಲ್ಲಿರುವೆನು.
ಹಂಝ: ಇಂದು ಇಲ್ಮುಲ್ ಕಲಾಮಿಗಿರುವ ಪ್ರಾಮುಖ್ಯತೆ ಕುರಿತು ಹೇಳಬಹುದೇ?
ಡಾ. ಸೆನ್ತುರ್ಕ್ : ಹಿಂದೆಂದಿಗಿಂತಲೂ ಅತಿ ವೇಗವಾಗಿ ನಾಸ್ತಿಕತೆಯು ವ್ಯಾಪಾಕವಾಗುತ್ತಿರುವ ಪ್ರಸಕ್ತ ಸನ್ನಿವೇಶದಲ್ಲಿ ಇಲ್ಮುಲ್ ಕಲಾಮ್ ಬಹಳ ಮುಖ್ಯವೆನಿಸುತ್ತದೆ. ಇದು ಮಾನವ ಇತಿಹಾಸದ ವಿದ್ಯಮಾನಗಳಲ್ಲೊಂದು. ಧನಾತ್ಮಕತೆ (Positivism), ಆಧುನಿಕತಾವಾದ (Modernism) ಮತ್ತು ಆಧುನಿಕೋತ್ತರವಾದಗಳಂತೆ (Post Modernism) ಭೌತವಾದವು ಇಂದು ಆಧುನಿಕ ಶೈಕ್ಷಣಿಕ ವ್ಯವಸ್ಥೆಯ ಅಧಿಕೃತ ಸಂಕಲ್ಪವಾಗಿ ಪರಿಣಮಿಸಿದೆ. ಆಧುನಿಕ ಶಿಕ್ಷಣ ವ್ಯವಸ್ಥೆಯು ಧರ್ಮಕ್ಕೆ ವಿರುದ್ಧವಾಗಿದ್ದು, ಸೆಕ್ಯೂಲರ್ ಯೂನಿವರ್ಸಿಟಿಗಳಿಂದ ಧರ್ಮವನ್ನು ದೂರವಿಡಲಾಗಿದೆ. ದೇವತಾಶಾಸ್ತ್ರ (Theology) ಮತ್ತು ‘ದೇವರು’ಗಳಿಂದ ಅಂತರ ಕಾಯ್ದುಕೊಳ್ಳಲಾಗಿದೆ. ಆಧುನಿಕತಾವಾದ ಮತ್ತು ಆಧುನಿಕೋತ್ತರವಾದದಂತಹ ಸಿದ್ಧಾಂತಗಳಿಗೆ ಮುಖಾಮುಖಿಯಾಗಿ, ಇಸ್ಲಾಮಿನ ನಂಬಿಕೆ ಅಥವಾ ಅಕೀದಾವನ್ನು ಸಂರಕ್ಷಿಸಬೇಕಾದ ಅನಿವಾರ್ಯತೆ ಇಂದಿದೆ. ಕೆಲವರು, ಆ ಪೈಕಿ ಮುಸ್ಲಿಮರೂ ಇದ್ದಾರೆ, ಆಧುನಿಕತಾವಾದಕ್ಕೆ ಪ್ರತಿರೋಧವೊಡ್ಡುತ್ತದೆ ಎಂಬ ಕಾರಣಕ್ಕಾಗಿ ಆಧುನಿಕೋತ್ತರವಾದದತ್ತ ಒಲವನ್ನು ತೋರುತ್ತಿರುವರು. ಆದರೆ, ನಮ್ಮನ್ನು ಸಂಪೂರ್ಣ ಸಾಪೇಕ್ಷತಾವಾದಕ್ಕೆ (Relativism) ತಳ್ಳುವ ಆಧುನಿಕೋತ್ತರವಾದ ಕೂಡಾ ಅಪಾಯಕಾರಿ ಎಂಬುವುದು ಶೀಘ್ರದಲ್ಲೇ ಮನದಟ್ಟಾಗಲಿದೆ. ಇವೆಲ್ಲಾ ಸಿದ್ಧಾಂತಗಳಿಗೆ ಆಧುನಿಕತಾವಾದವಾಗಲೀ, ಆಧುನಿಕೋತ್ತರವಾದವಾಗಿರಲಿ ಪ್ರತಿರೋಧವೊಡ್ದುವ ಬಗೆ ಹೇಗೆ?. ಇವ್ಯಾವುವೂ ಧಾರ್ಮಿಕ ಪರಿಕಲ್ಪನೆಗಳಲ್ಲ. ಆದರೆ ಜನರ ಪೈಕಿ ಇವುಗಳನ್ನು ಧರ್ಮಗಳಂತೆ ಪರಿಗಣಿಸಲಾಗುತ್ತಿದೆ ಮತ್ತು ಇವುಇಸ್ಲಾಮಿನ ಸಂಕಲ್ಪಗಳಿಗಿಂತ ಭಿನ್ನವಾಗಿದೆ ಕೂಡಾ.
ಇಂದು ಸಮಾಜದಲ್ಲಿ ಹೊಸ ಪಲ್ಲಟವೊಂದು ಸಂಭವಿಸಿದೆ. ತತ್ವಜಿಜ್ಞಾಸೆಯ (Metaphysical) ಪ್ರಶ್ನೆಗಳ ಬದಲಿಗೆ ಕೆಲವೊಂದು ಸಾಮಾಜಿಕ ಪ್ರಶ್ನೆಗಳು ನಾಸ್ತಿಕತೆಯ ಬೆಳವಣಿಗೆಗೆ ಹೇತುವಾಗುತ್ತಿದೆ. ‘ಇಸ್ಲಾಮಿನಲ್ಲಿ ಮಾನವ ಹಕ್ಕುಗಳಿಲ್ಲ’ ಎಂಬುದನ್ನು ಒಬ್ಬ ವ್ಯಕ್ತಿ ನಂಬಿದರೆ ಆತನ ಅಕೀದಾ ಸಮಸ್ಯಾತ್ಮಕ ಎಂದರ್ಥ. ಮಹಿಳೆಯರ ಹಕ್ಕುಗಳ ವಿಚಾರದಲ್ಲೂ ಇದು ಅನ್ವಯಿಸುತ್ತದೆ. ವ್ಯಕ್ತಿಯೊಬ್ಬ ಖುರ್ಆನ್, ಹದೀಸ್ ಮತ್ತು ಇಸ್ಲಾಮಿಕ್ ಶರೀಆದಲ್ಲಿ ಮಹಿಳೆಯರಿಗೆ ಸಮಾನ ಹಕ್ಕುಗಳಿಲ್ಲ ಎಂಬ ನಂಬಿಕೆ ಕೂಡಾ ಸಮಸ್ಯಾತ್ಮಕವಾದುದೇ. ನಾನು ಹೇಳಿರುವುದು ನಿಮಗೆ ಅರ್ಥವಾಯಿತೆಂದು ಭಾವಿಸುತ್ತೇನೆ. ಅರ್ಥಶಾಸ್ತ್ರವೂ ಈ ಸಮಸ್ಯೆಯಿಂದ ಹೊರತಾಗಿಲ್ಲ. ಬಡ್ಡಿಯಿಲ್ಲದೆ ಆರ್ಥಿಕ ಬೆಳವಣಿಗೆ ಅಸಾಧ್ಯವೆಂದು ಬಗೆಯುವುದು ಕೂಡಾ ನಂಬಿಕೆಯಲ್ಲಿರುವ ಕೊರತೆಯೇ ಆಗಿದೆ. ತತ್ವಜಿಜ್ಞಾಸೆಯ ಸಮಸ್ಯೆಗಳ ಬದಲಿಗೆ ಸಾಮಾಜಿಕ ಸಮಸ್ಯೆಗಳನ್ನು ಮುಂದಿಟ್ಟು ಇಸ್ಲಾಮಿನ ಅಕೀದಾದ ಮೇಲೆ ಆಕ್ರಮಿಸಲಾಗುತ್ತಿದೆ. ಆದ್ದರಿಂದಲೇ ಇಂದು ಇಸ್ಲಾಮಿಕ್ ಅಕೀದಾದ ವಿರುದ್ಧದ ಷಡ್ಯಂತ್ರಗಳನ್ನು ತಡೆಗಟ್ಟಲು ಇಲ್ಮುಲ್ ಕಲಾಮಿನ ಹೊಸ ತಂತ್ರಗಳನ್ನು ನಾವು ಕಂಡುಕೊಳ್ಳಬೇಕಿದೆ.
ಹಂಝ: ನೀವು ಇಮಾಮ್ ರಬ್ಬಾನಿ ಅಹ್ಮದ್ ಸರ್ಹಿಂದಿಯವರ ಸೂಫೀ ಸಂಪ್ರದಾಯದಂತೆ ತರಬೇತಿ ಪಡೆದಿರುವಿರಿ. ಇಮಾಮ್ ರಬ್ಬಾನಿಯವರು ಬಹುತೇಕ ಮಕ್ತೂಬಾತುಗಳಲ್ಲಿ ಕಲಾಮ್ ವಿಷಯಗಳ ಕುರಿತು ಬರೆದಿರುವುದು ನನ್ನನ್ನು ಅಚ್ಚರಿಗೊಳಪಡಿಸಿತು. ಇಮಾಮ್ ರಬ್ಬಾನಿಯಂತಹ ಸೂಫಿಗಳು ಕಲಾಮ್ ಸಂಬಂಧಿತ ಪ್ರಶ್ನೆಗಳ ಕುರಿತು ಬರೆಯುವುದರ ಆವಶ್ಯಕತೆಯೇನು ?
ಡಾ. ಸೆನ್ತುರ್ಕ್: ಇಮಾಮ್ ರಬ್ಬಾನಿ ಮುತಶರ್ರಿ (ಶರೀಅತ್ ಪಾಲನೆ ಮಾಡುವ ಸೂಫಿ) ಆಗಿದ್ದರು ಎನ್ನುವುದೇ ಇದಕ್ಕೆ ಪ್ರಧಾನ ಕಾರಣ. ಸೂಫಿ ಸರಣಿಯೊಂದರಲ್ಲಿ ಪ್ರವೇಶಿಸುವುದಕ್ಕಿಂತ ಮೊದಲು ಅಕೀದಾ (ನಂಬಿಕೆ) ದೃಢವಾಗಿರಬೇಕು ಎಂದಾಗಿದೆ ಇಮಾಮ್ ರಬ್ಬಾನಿಯವರ ನಿಲುವು. ಪ್ರಥಮವಾಗಿ ನಂಬಿಕೆ ದೃಢಪಟ್ಟು, ಫಿಖ್ಹ್ ಸಹಿತವಿರುವ ನಮ್ಮ ಕರ್ಮಗಳು ಅಚ್ಚುಕಟ್ಟಾಗಿರಬೇಕು. ಅಕೀದಾ ಇಲ್ಮುಲ್ ಕಲಾಮ್ ಮತ್ತು ಕರ್ಮಗಳು ಫಿಖ್ಹ್ ಆಧಾರವಾಗಿಟ್ಟುಕೊಂಡು ಸರಿಪಡಿಸಬೇಕಿದೆ. ಉಳಿದೆಲ್ಲಾ ಜ್ಞಾನಶಿಸ್ತುಗಳ ಕಲಿಕೆಗೂ ಮುಂಚಿತವಾಗಿ ಇವೆರಡು ಜ್ಞಾನಶಿಸ್ತುಗಳ ಅಧ್ಯಯನ ಬಹುಮುಖ್ಯವೆನ್ನುತ್ತಾರೆ ಅಹ್ಮದ್ ಸರ್ ಹಿಂದಿ. ಇಲ್ಮ್ (Sacred Learning), ಅಮಲ್ (ಕರ್ಮಗಳು) ಮತ್ತು ಇಖ್ಲಾಸ್ (sincerity) ಇವೆಲ್ಲವೂ ಒಟ್ಟುಗೂಡಿರುವುದಾಗಿದೆ ಶರೀಅತ್ ಎಂದೂ ಇಮಾಮ್ ರಬ್ಬಾನಿ ಬೋಧಿಸಿರುವರು. ಇಲ್ಮ್ ಇಲ್ಲವಾದರೆ, ಕರ್ಮವು ಇಲ್ಲವಾಗುತ್ತದೆ. ಕರ್ಮವಿಲ್ಲದಿದಲ್ಲಿ ಸಹಜವಾಗಿಯೇ ಇಖ್ಲಾಸ್ ಕೂಡಾ ಅನ್ಯವಾಗುವುದು. ಸರ್ ಹಿಂದಿ ಹೇಳುತ್ತಾರೆ: ‘ಶರೀಅತ್ತಿನ ಇಖ್ಲಾಸ್ ವರ್ಧನೆಗೆ ತ್ವರೀಖತ್ ಮತ್ತು ಹಕೀಕತ್ ಇವೆರಡೂ ಕೂಡಾ ಆಸರೆಯಾಗುತ್ತದೆ’ ಇಖ್ಲಾಸ್ ಇಸ್ಲಾಮಿಕ್ ಶರಿಯಾದ ಪ್ರಧಾನ ಘಟಕಗಳಲ್ಲೊಂದು. ಮುಸ್ಲಿಮರಿಗೆ ಇಖ್ಲಾಸ್ ವೃದ್ಧಿಸಲು ನೆರವಾಗುವ ಮೂಲಕ ಹಕೀಕತ್ ಹಾಗೂ ತ್ವರೀಖತ್ ಶರೀಅತ್ತಿಗೆ ಸಹಾಯವನ್ನು ಮಾಡುತ್ತವೆ. ಇಲ್ಮ್, ಅಮಲ್ ಮತ್ತು ಇಖ್ಲಾಸ್ ಈ ಮೂರು ಕಾರ್ಯಗಳು ನಮಗೆ ಅನಿವಾರ್ಯ. ಇಖ್ಲಾಸುಂಟಾಗಲು ತ್ವರೀಖತ್ ಮತ್ತು ಹಕೀಕತ್ ಬೇಕಿದೆ. ಇಖ್ಲಾಸ್ ಮೂಲಕ ಗುಪ್ತವಾದ ಶಿರ್ಕನ್ನು (polytheism) ತೊಡೆದುಹಾಕುವುದು ಸಾಧ್ಯವಾಗುತ್ತದೆ. ವಿಗ್ರಹಗಳು, ಕಲ್ಲು ಮತ್ತು ಮಾನವರು ಇತ್ಯಾದಿಗಳನ್ನು ಆರಾಧಿಸುವುದು ಪ್ರತ್ಯಕ್ಷ ಅಥವಾ ಗೋಚರವಾಗಿರುವ ಶಿರ್ಕ್ ಎನ್ನಬಹುದು. ತನ್ನ ಸ್ವಶರೀರದ ಇಚ್ಛೆ, ವಾಂಛೆಗಳಿಗನುಸಾರವಾಗಿ ನಡೆದುಕೊಳ್ಳುವುದೇ ಗೌಪ್ಯ ಶಿರ್ಕ್. ‘ತಮ್ಮ ವಾಂಛೆ ಮತ್ತು ತಿಕ್ಕಲುತನವನ್ನು ಆರಾಧಿಸುವವರನ್ನು ನೀವು ಕಂಡಿಲ್ಲವೇ?’ (ಖುರ್ಆನ್ 25:43) ಎಂಬ ಖುರ್ಆನ್ ಸೂಕ್ತವು ಸೂಚನೆಯನ್ನು ನೀಡಿದೆ. ನೀವು ಪ್ರತ್ಯಕ್ಷವಾಗಿ ಅಲ್ಲಾಹನನ್ನು ಆರಾಧಿಸುವವರಾಗಿದ್ದರೂ, ಗುಪ್ತವಾಗಿ ನೀವು ನಿಮ್ಮ ವಾಂಛೆಗಳ ಗುಲಾಮರಾಗಿರುವಿರಿ. ಇಂದು ಬಹುತೇಕ ಮುಸ್ಲಿಮರು ಪ್ರತ್ಯಕ್ಷ ಶಿರ್ಕಿನ ಕುರಿತು ಜಾಗರೂಕರಾಗಿದ್ದು, ಗುಪ್ತ ಶಿರ್ಕಿನ ಬಗ್ಗೆ ಅಸಡ್ಡೆ ಹೊಂದಿದ್ದಾರೆ. ತಸವ್ವುಫ್ ವಾಂಛೆಗಳಿಂದ ಮುಕ್ತಿಪಡೆಯಲು ನಮಗೆ ನೆರವಾಗುತ್ತದೆ. ಸಿರಿವಂತಿಕೆ, ಆಸೆ-ಆಮಿಷಗಳೆಲ್ಲವೂ ಗುಪ್ತ ಶಿರ್ಕಿನ ವ್ಯಾಪ್ತಿಗೊಳಪಡುತ್ತದೆ. ನಮ್ಮೆಲ್ಲರ ಹೃದಯಗಳನ್ನು ಇವೆಲ್ಲಾ ಕಳಂಕಿತ ವಸ್ತುಗಳಿಂದ ಮುಕ್ತವಾಗಿಟ್ಟುಕೊಳ್ಳಬೇಕು. ಈ ಪ್ರಕ್ರಿಯೆಯನ್ನು ತಸ್ಫಿಯ್ಯ ಅಥವಾ ತಝ್ಕಿಯ್ಯ ಎನ್ನಲಾಗುತ್ತದೆ. ಆ ಬಳಿಕ ದೃಢ ನಂಬಿಕೆ ಮತ್ತು ಸನ್ನಡತೆಗಳನ್ನು ಹೃದಯದಲ್ಲಿ ಪ್ರತಿಷ್ಠಾಪಿಸುವ ತಹ್ಲಿಯತ್ ಎಂಬ ಪ್ರಕ್ರಿಯೆಯು ನಮ್ಮಲ್ಲಿರಬೇಕು. ಇವೆಲ್ಲಕ್ಕೂ ಒತ್ತು ನೀಡಿರುವ ಇಮಾಮ್ ರಬ್ಬಾನಿ, ಪೈಗಂಬರರ ಚರ್ಯೆಯಿಂದ ನಾವು ಒಂದಿಂಚು ಕೂಡಾ ವ್ಯತಿಚಲಿಸಬಾರದೆಂದು ನಮ್ಮನ್ನು ಉಪದೇಶಿಸಿರುವರು.
ಹಂಝ: ‘ಸೂಫಿಸಮ್ಮನ್ನು ಕಡೆಗಣಿಸಿ ಕಲಾಮ್ ಮಾತ್ರ ಅವಲಂಬಿಸುವುದು ಧಾರ್ಮಿಕವಾಗಿ ಅಪಾಯಕಾರಿ’ ಎಂದು ಕೆಲ ವಿದ್ವಾಂಸರು ತಾಕೀತು ನೀಡಿರುವರು. ಆ ಅಭಿಪ್ರಾಯಕ್ಕೆ ನಿಮ್ಮ ಸಹಮತವಿದೆಯೇ? ಇದ್ದರೆ ಕಾರಣವೇನು? ಸೂಫಿಸಮ್ ಕಲಾಮನ್ನು ಪೋಷಿಸುವ ಅಥವಾ ಇವೆರಡೂ ವಿಜ್ಞಾನಗಳು ಪರಸ್ಪರ ಪೂರಕವಾಗಿ ಕಾರ್ಯಾಚರಿಸುವ ಬಗೆ ಹೇಗೆ?
ಡಾ. ಸೆನ್ತುರ್ಕ್: ಪೈಗಂಬರರ ಚರ್ಯೆಗಳನ್ನು ಚಾಚು ತಪ್ಪದೆ ಪಾಲಿಸಲು ಮುಸ್ಲಿಮರಿಗೆ ಕಲಿಸುವುದಾಗಿದೆ ಫಿಖ್ಹ್, ಕಲಾಮ್, ತಸವ್ವುಫ್ ಹೀಗೆ ಇಸ್ಲಾಮಿನಲ್ಲಿರುವ ಎಲ್ಲಾ ಜ್ಞಾನ ಶಿಸ್ತುಗಳ ಧ್ಯೇಯ. ಇವೆಲ್ಲಾ ಜ್ಞಾನಶಿಸ್ತುಗಳು ಖುರ್ಆನ್ ಮತ್ತು ಸುನ್ನತ್ ಎಂಬೀ ಮೂಲಗಳಿಂದ ರೂಪುಗೊಂಡಿವೆ. ಖುರ್ಆನ್ ಮತ್ತು ಸುನ್ನತ್ತಾಗಿದೆ ಫಿಖ್ಹ್, ಕಲಾಮ್ ಮತ್ತು ತಸವ್ವುಫ್ ಇವೆಲ್ಲವುಗಳ ಅಡಿಗಲ್ಲು. ಇಸ್ಲಾಮನ್ನು ಪೈಗಂಬರರು ಬದುಕಿ ತೋರಿಸಿಕೊಟ್ಟಂತೆ ನಾವು ಬದುಕಲು ಈ ಜ್ಞಾನಶಿಸ್ತುಗಳು ನಮಗೆ ನೆರವಾಗುತ್ತದೆ. ಈ ಮೂರು ಜ್ಞಾನ ಶಿಸ್ತುಗಳು ಇಸ್ಲಾಮಿನ ವಿವಿಧ ಆಯಾಮಗಳನ್ನು ಅಧ್ಯಯನಕ್ಕೊಳಪಡಿಸುತ್ತವೆ. ಕಲಾಮ್ ಅಕೀದಾವನ್ನು, ಫಿಖ್ಹ್ ಬಾಹ್ಯಕರ್ಮಗಳನ್ನು, ತಸವ್ವುಫ್ ಆಂತರಿಕ ವಿಚಾರಗಳನ್ನು ಸಂಬಂಧಿಸಿವೆ. ಆದ್ದರಿಂದಲೇ ತಸವ್ವುಫನ್ನು ಫಿಖ್ಹುಲ್ ಬಾತಿನ್ ಎಂದೂ ಫಿಖ್ಹುಲ್ ವಿಜ್ದಾನಿ ಎಂದೂ ಹೇಳಲಾಗುತ್ತದೆ. ಇವೆಲ್ಲದರ ಸಂಪೂರ್ಣತೆಯಾಗಿದೆ ಇಸ್ಲಾಮ್. ಕೇವಲ ಬಾಹ್ಯಕರ್ಮಗಳ, ಅನುಷ್ಠಾನಗಳ ಮೂಲಕ ಒಳ್ಳೆಯ ಮುಸ್ಲಿಮನಾಗಲಾಗದು. ಬಾಹ್ಯ ಮತ್ತು ಆಂತರಿಕ ವಿಚಾರಗಳಲ್ಲೂ ನಾವು ಶ್ರದ್ಧಾವಂತರಾಗಬೇಕಿದೆ. ಉಲಮಾಗಳು ಬಹಳ ಅಚ್ಚುಕಟ್ಟಾಗಿ ವ್ಯವಸ್ಥಿತಗೊಳಿಸಿರುವ ಕಲಾಮ್, ಫಿಖ್ಹ್ ಮತ್ತು ತಸವ್ವುಫ್ ಎಂಬೀ ಜ್ಞಾನಶಿಸ್ತುಗಳನ್ನು ನಾವು ಸಂಯೋಜಿಸಬೇಕಿದೆ. ಇಸ್ಲಾಮ್ ಸ್ವತಃ ಇವುಗಳನ್ನು ಬಾಹ್ಯವೆಂದೋ, ಆಂತರಿಕವೆಂದೋ ಅಥವಾ ಫಿಖ್ಹ್, ಕಲಾಮ್ ಮತ್ತು ತಸವ್ವುಫ್ ಎಂದು ಬೇರೆಬೇರೆಯಾಗಿ ವಿಂಗಡಿಸಿಲ್ಲ. ಇವೆಲ್ಲವೂ ಒಂದೇ ಆಗಿದ್ದು, ಪರಸ್ಪರ ಪೂರಕವಾಗಿದೆ. ತಸ್ಫಿಯತ್ ಅಥವಾ ತಝ್ಕಿಯ್ಯತ್ತುನ್ನಫ್ಸ್ ಇಲ್ಲದೆ ಇಸ್ಲಾಮನ್ನು ಕಲ್ಪಿಸಿಕೊಳ್ಳಲಾಗದು. ತಝ್ಕಿಯ್ಯತ್ತುನ್ನಫ್ಸ್ ವ್ಯಕ್ತಿಗತ ಕಡ್ಡಾಯವಾಗಿರುವ (ಫರ್ಲ್ ಐನ್) ಕಾರ್ಯಗಳಲ್ಲೊಂದು. ಆಗಲೇ ಹೇಳಿದಂತೆ, ಗೌಪ್ಯ ಶಿರ್ಕಿನಿಂದಲೂ ಕೆಡುಕುಗಳಿಂದಲೂ ತನ್ನ ಹೃದಯವನ್ನು ನಿರ್ಮಲವಾಗಿಡಬೇಕಾದ ಜವಾಬ್ದಾರಿಯು ಪ್ರತಿಯೊಬ್ಬ ಮುಸ್ಲಿಮನ ಮೇಲೂ ಇದೆ. ತಸವ್ವುಫಿಲ್ಲದ ಇಸ್ಲಾಮ್ ಸ್ವೀಕೃತವಲ್ಲ. ಕಲಾಮ್ ನಂಬಿಕೆಗೆ ಸಂಬಂಧಿಸಿರುವ ವಿಷಯಗಳನ್ನು ಚರ್ಚಿಸುತ್ತದೆ. ಆದ್ದರಿಂದಲೇ ಬಹುಮುಖ್ಯವಾದ ಕಲಾಮನ್ನು ಕಡೆಗಣಿಸುವುದು ದೂರದ ಮಾತಾಗುತ್ತದೆ. ‘ನಾನು ತಸವ್ವುಫನ್ನು ಚರ್ಚಿಸುವೆನು. ಆದರೆ ಕಲಾಮಿನ ಅಗತ್ಯವಿಲ್ಲ’ ಎಂಬ ಹೇಳಿಕೆ ಅಸಮಂಜಸವೇ ಸರಿ. ಅಂತೆಯೇ ಫಿಖ್ಹಿಲ್ಲದೆ ಇಸ್ಲಾಮನ್ನು ಊಹಿಸುವುದು ಕೂಡಾ ಅಸಾಧ್ಯ. ಒಟ್ಟಿನಲ್ಲಿ ಇವೆಲ್ಲವೂ ಒಟ್ಟುಗೂಡಿರುವುದೇ ಇಸ್ಲಾಮ್. ಇವೆಲ್ಲವನ್ನೂ ಕಲಿತು ಕಾರ್ಯರೂಪಕ್ಕೆ ತರಬೇಕಿದೆ.


ಹಂಝ: ಓಟೋಮನ್ ಕಲಾಮ್ ಪರಂಪರೆಯು ಕಡೆಗಣಿಸಲ್ಪಟ್ಟಿದೆ. ಪ್ರತ್ಯೇಕವಾಗಿ ಓಟೋಮನ್ ಸಾಮ್ರಾಜ್ಯದ ಕೊನೆಘಳಿಗೆಯಲ್ಲಿದ್ದ ಓಟೋಮನ್ ವಿದ್ವತ್ತಿನ ಕೊಡುಗೆಗಳು. ಅಂದಿನ ಓಟೋಮನ್ ಮುತಕಲ್ಲಿಮುಗಳು (ಇಲ್ಮುಲ್ ಕಲಾಮಿನ ವಿದ್ವಾಂಸರು) ಆಧುನಿಕ ಚಿಂತನೆಗಳಿಗೆ ವಿಮರ್ಶಾತ್ಮಕವಾಗಿ ಮುಖಾಮುಖಿಯಾದರು. ಅಂದಿನ ಪ್ರಧಾನ ವಿದ್ವಾಂಸರು ಯಾರೆಲ್ಲಾ? ಅವರ ಕೊಡುಗೆಗಳೇನು? ಅವರ ಪುಸ್ತಕಗಳು ಯಾಕೆ ಮುಖ್ಯ?
ಡಾ. ಸೆನ್ತುರ್ಕ್: ಹೌದು, ಓಟೋಮನ್ ಕಲಾಮೆಂದಲ್ಲ, ಓಟೋಮನ್ ಕಾಲದ ವಿದ್ವತ್ತನ್ನೇ ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಓಟೋಮನ್ ನಾಗರಿಕತೆಯ ಅವಸ್ಥೆಯೂ ತಥೈವ. ಯುರೋಪಿನ ನವೋದಯಕ್ಕೆ (Renaissance) ಸಮಾನಾಗಿ, ಇಸ್ಲಾಮಿಕ್ ನಾಗರಿಕತೆಯಲ್ಲಿ ಓಟೋಮನ್ ಕಾಲವನ್ನು ಹೋಲಿಕೆ ಮಾಡಬಹುದು ಎಂದಾಗಿದೆ ನನ್ನ ಬಲವಾದ ನಂಬಿಕೆ. ಈ ಅವಧಿಯಲ್ಲಿ ಇಸ್ಲಾಮಿಕ್ ನಾಗರಿಕತೆಯು ಶಿಲ್ಪಕಲೆ, ಸಂಗೀತ, ತತ್ವಜ್ಞಾನ, ರಾಜ್ಯ ಕೌಶಲ್ಯ ಆದಿಯಾಗಿ ಸರ್ವ ಕ್ಷೇತ್ರಗಳಲ್ಲೂ ಉತ್ತುಂಗತೆಯನ್ನು ತಲುಪಿತ್ತು. ಕ್ಲಾಸಿಕಲ್ ಓಟೋಮನ್ ಕಾಲವು ಬಹಳ ಮುಖ್ಯವಾಗಿದೆಯಾದರೂ, ಪ್ರಸಕ್ತ ಸನ್ನಿವೇಶದಲ್ಲಿ ಓಟೋಮನ್ ಕಾಲದ ಕೊನೆಘಳಿಗೆಗಳು ಇನ್ನೂ ಹೆಚ್ಚು ಸಂಗತವೆನಿಸುತ್ತದೆ. ಕಾರಣ, ಪಾಶ್ಚಿಮಾತ್ಯರ ಬೆಳವಣಿಗೆಯಿಂದ ಉಂಟಾಗಿರುವ ಸವಾಲುಗಳಿಗೆ ಪ್ರಥಮವಾಗಿ ಮುಖಾಮುಖಿಯಾದವರು ಈ ಕಾಲದ ಓಟೋಮನ್ ಉಲಮಾಗಳಾಗಿದ್ದರು. ಇದು ತಂಝೀಮಾತಿನ ಬಳಿಕ ಅಥವಾ 19ನೇ ಶತಮಾನದ ದ್ವಿತೀಯಾರ್ಧದಲ್ಲಾಗಿತ್ತು. ಮದ್ರಸಾ ವ್ಯವಸ್ಥೆಯಲ್ಲಿ ಹಲವಾರು ಸುಧಾರಣೆಗಳನ್ನು ಜಾರಿಗೊಳಿಸಲಾಯಿತು. ಪಠ್ಯಕ್ರಮದಲ್ಲಿ ಪಶ್ಚಿಮದ ಭಾಷೆಗಳ ಅಳವಡಿಕೆ, ಮೊದಲ ಬಾರಿಗೆ ಸಮಾಜಶಾಸ್ತ್ರದ ಅಧ್ಯಯನಕ್ಕೆ ಅವಕಾಶ ಹೀಗೆ ಹತ್ತು ಹಲವಾರು ಸುಧಾರಣೆಗಳಿಗೆ ಈ ಕಾಲವು ಸಾಕ್ಷಿಯಾಯಿತು. ಅಂದಿನ ಸಮಸ್ಯೆಗಳಿಗೆ ಪ್ರತಿರೋಧವೊಡ್ಡಲು ಸುಲ್ತಾನ್ ಅಬ್ದುಲ್ ಹಮೀದ್ ಅವರ ಉಸ್ತುವಾರಿಯಲ್ಲಿ ಮದ್ರಸಾ ದಾರುಲ್ ಖಿಲಾಫಗೆ ಚಾಲನೆ ನೀಡಲಾಯಿತು. ಆಧುನಿಕ ವಿಜ್ಞಾನ ಮತ್ತು ಪಾಶ್ಚಿಮಾತ್ಯ ನಾಗರಿಕತೆಯು ಒಡ್ಡಿರುವ ಸವಾಲುಗಳನ್ನು ಸಮರ್ಥವಾಗಿ ನಿಭಾಯಿಸಲು ನುರಿತರಾಗಿರುವ ಬಿರುದುಧಾರಿಗಳನ್ನು ಸೃಷ್ಟಿಸುವುದಾಗಿತ್ತು ಈ ನೂತನ ಮದ್ರಸಾ ವ್ಯವಸ್ಥೆಯ ಧ್ಯೇಯ. ಇದಕ್ಕೆ ಹೊರತಾಗಿ ಇನ್ನೂ ಹಲವು ಕಾರಣಗಳಿಗಾಗಿ ಈ ಕಾಲವು ನಮಗೆ ಬಹಳ ಮುಖ್ಯವೆನಿಸುತ್ತದೆ. ‘ದಿಮ್ಮಿ’ ವ್ಯವಸ್ಥೆಯನ್ನು ಕೊನೆಗೊಳಿಸಲಾಯಿತು. ಗುಲಾಮಗಿರಿ ಮತ್ತು ಜಿಝಿಯಾ ವ್ಯವಸ್ಥೆಯನ್ನು ಸ್ಥಗಿತಗೊಳಿಸಲಾಯಿತು. ಚುನಾವಣೆಯಲ್ಲಿ ಒಂದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ರಾಜಕೀಯ ಪಕ್ಷಗಳು ಭಾಗಿಯಾಗುವ ಸಾಂವಿಧಾನಿಕ ವ್ಯವಸ್ಥೆಯನ್ನು ಸ್ವೀಕರಿಸಲಾಯಿತು. ಈ ವ್ಯವಸ್ಥೆಯನುಸಾರ ಐದು ಚುನಾವಣೆಗಳೂ ನಡೆದವು. ಮುಸ್ಲಿಮ್ ಜಗತ್ತಿಗೆ ಪ್ರಜಾಪ್ರಭುತ್ವ ವ್ಯವಸ್ಥೆಯು ಪರಿಚಿತವಾಗಿರುವುದು ಓಟೋಮನ್ ಸಾಮ್ರಾಜ್ಯದ ಪತನದ ಬಳಿಕ ಮಾತ್ರವಾಗಿತ್ತು ಎಂಬ ಗ್ರಹಿಕೆ ಜನರೆಡೆಯಲ್ಲಿ ವ್ಯಾಪಕವಾಗಿದೆ. ಆದರೆ ಖಿಲಾಫತಿನ ಕಾಲದಲ್ಲೇ ಪ್ರಜಾಪ್ರಭುತ್ವ ಜಾರಿಯಲ್ಲಿತ್ತು ಎಂಬುವುದಾಗಿದೆ ವಾಸ್ತವ. ಖಲೀಫಾರ ಮೇಲ್ನೋಟದಲ್ಲಿ, ಶೈಖುಲ್ ಇಸ್ಲಾಮ್ ಮತ್ತು ಅಂದಿನ ಉಲಮಾಗಳ ಒಪ್ಪಿಗೆಯಂತೆ ಶರೀಯಾ ಪ್ರಜಾಪ್ರಭುತ್ವವನ್ನು ಜಾರಿಗೊಳಿಸಲಾಯಿತು. ಆಗಲೇ ಹೇಳಿದಂತೆ, ಈ ವ್ಯವಸ್ಥೆಯಂತೆ ಐದು ಚುನಾವಣೆಗಳೂ ನಡೆದವು. ಇಲ್ಮುಲ್ ಕಲಾಮ್ ಪ್ರಕಾರ ಇದು ಸರಿಯೂ ಹೌದು.
ಓಟೋಮನ್ ಕಾಲದ ವಿದ್ವಾಂಸರು ಪಶ್ಚಿಮದ ಸವಾಲುಗಳಿಗೆ ಮುಖಾಮುಖಿಯಾದರು ಮತ್ತು ಯುರೋಪಿನ ಬೆಳವಣಿಗೆಗಳ ಕುರಿತು ಸದಾ ನಿಗಾ ವಹಿಸುತ್ತಿದ್ದರು. ಉದಾಹರಣೆಗೆ, ಖ್ಯಾತ ಫ್ರೆಂಚ್ ತತ್ವಜ್ಞಾನಿ ಎರ್ನೆಸ್ಟ್ ರೆನನ್ ಪಾರೀಸಿನ ವಿಶ್ವ ವಿದ್ಯಾಲಯವೊಂದರಲ್ಲಿ ಪ್ರಬಂಧವೊಂದನ್ನು ಮಂಡಿಸಿದರು. ಇದಕ್ಕೆ ಪ್ರತಿಯಾಗಿ, ಹಲವು ಉಲಮಾಗಳು ಪ್ರತಿಕ್ರಿಯೆ, ಖಂಡನೆ ಮತ್ತು ವಿಮರ್ಶೆಗಳನ್ನು ಬರೆದರು. ಯುರೋಪಿನ ಬೆಳವಣಿಗೆಗಳ ಕುರಿತು ಸದಾ ಜಾಗರೂಕರಾಗಿದ್ದ ಉಲಮಾಗಳು ಸಕ್ರಿಯವಾದ ಸಂವಾದಗಳಲ್ಲಿ ತೊಡಗಿಕೊಳ್ಳುತ್ತಿದ್ದರು. ಆದರೆ, ನಾವಿಂದು ಬಹಳಷ್ಟು ಹಿಂದುಳಿದಿದ್ದೇವೆ. ರೆನನಿಗೆ ಖಂಡನೆಯನ್ನು ಬರೆದ ಉಲಮಾಗಳ ಪೈಕಿ ಪ್ರಧಾನಿಯಾಗಿದ್ದರು ನಾಮಿಕ್ ಕಮಾಲ್ (1840-1888). ನಾಮಿಕ್ ಕಮಾಲ್ ಯುವ ಓಟೋಮನ್ನರಾಗಿದ್ದರು. ರೆನನಿಗೆ ಖಂಡನೆಯನ್ನು ಬರೆಯುವಾಗ ಕಮಾಲರು ಕಾರಾಗೃಹದಲ್ಲಿದ್ದರು. ಸೆರೆಮನೆವಾಸದಲ್ಲಿದ್ದೂ ಪಾರೀಸಿನ ಬೆಳವಣಿಗೆಗಳನ್ನರಿತು ಖಂಡನೆಯನ್ನು ಬರೆದಿರುವುದು ಅಚ್ಚರಿಯೇ ಸರಿ. ನಾಮಿಕ್ ಕಮಾಲರಂತಹ ಉಲಮಾಗಳು ಇಂದಿನ ಕಾಲಕ್ಕೆ ಉತ್ತಮ ಮಾದರಿಯಾಗಬಲ್ಲರು. ಇಂದು ನಾವು ಕ್ಲಾಸಿಕಲ್ ಓಟೋಮನ್ ಕಾಲದ ಉಲಮಾಗಳಿಗಿಂತ ಹೆಚ್ಚಾಗಿ ತಂಝೀಮಾತಿನ ಕಾಲದ ಉಲಮಾಗಳಿಂದ ಕಲಿಯುವುದಿದೆ. ಕಾರಣ ಅಬುಸ್ಸುಊದ್ ಎಫೆಂದಿಯವರ ಕಾಲದಲ್ಲಿ ಪಶ್ಚಿಮವು ಅಷ್ಟೇನು ಪ್ರಬಲವಾಗಿರಲಿಲ್ಲ. ಆದರೆ ಮಜೆಲ್ಲಾ ಬರೆದ ಚೆವ್ದೆತ್ ಪಾಶಾರ ಕಾಲದ ಪರಿಸ್ಥಿತಿ ಭಿನ್ನವಾಗಿತ್ತು. ಆದ್ದರಿಂದಲೇ ಇಸ್ಲಾಮಿಕ್ ನಿಯಮ ಅಧ್ಯಯನ ಮಾಡುವ ವಿದ್ಯಾರ್ಥಿಯು, ಅಬುಸ್ಸುಊದ್ ಎಫೆಂದಿಗಿಂತ ಹೆಚ್ಚಾಗಿ ಚೆವ್ದೆತ್ ಪಾಶಾರನ್ನು ಅವಲಂಬಿಸಬೇಕಾಗುತ್ತದೆ. ಫ್ರೆಂಚ್ ಭಾಷೆಯನ್ನು ಕಲಿತ ಚೆವ್ದೆತ್ ಪಾಶಾ, ಪಶ್ಚಿಮದ ನಿಯಮಗಳನ್ನು ಅಧ್ಯಯನ ಮಾಡಿದ ಬಳಿಕ ಪಾಶ್ಚಿಮಾತ್ಯ ಮತ್ತು ಆಧುನಿಕತೆಯ ಸವಾಲುಗಳಿಗೆ ಸೆಡ್ಡು ಹೊಡೆಯಬಲ್ಲ ರೀತಿಯಲ್ಲಿ ಇಸ್ಲಾಮಿಕ್ ನಿಯಮಗಳನ್ನು ಪ್ರಸ್ತುತಪಡಿಸಿದರು. ಓಟೋಮನ್ ರಾಜಕಾರಣಿಗಳು ಫ್ರೆಂಚ್ ಸಿವಿಲ್ ಕೋರ್ಟುಗಳ ನಿಯಮಗಳನ್ನು ಎರವಲು ಪಡೆಯುವುದನ್ನು ತಡೆದರು. ಇಂದಿನ ವಿದ್ಯಾರ್ಥಿಗಳಿಗೆ ಈ ಅವಧಿಯ ಉಲಮಾಗಳು ಉತ್ತಮ ಮಾದರಿ ಎಂಬುವುದು ಇವೆಲ್ಲಾ ಬೆಳವಣಿಗೆಗಳಿಂದ ನಮಗೆ ಮನದಟ್ಟಾಗುತ್ತದೆ. ಅವರೆಲ್ಲರೂ ಪಶ್ಚಿಮದ ಭಾಷೆಗಳನ್ನು ಕಲಿತರು. ಯುವ ಓಟೋಮನ್ನರನ್ನು ಪಾರೀಸಿಗೆ ಕಳುಹಿಸಲಾಯಿತು. ಫ್ರೆಂಚ್ ಭಾಷೆಯಲ್ಲಿ ನಿಯತ ಕಾಲಿಕೆಗಳನ್ನು ಪ್ರಕಟಿಸಿದರು. ಇದರ ಪರಿಣಾಮವಾಗಿ ಲಂಡನಿಗೆ ಗಡೀಪಾರು ಮಾಡಲಾಯಿತು. ಅಲ್ಲಿ ಆಂಗ್ಲ ಭಾಷೆಯಲ್ಲೂ ಮ್ಯಾಗಝಿನ್ ಬರೆದರು. ಅಲ್ಲಿಂದ ಗಡೀಪಾರಾಗಿ ಈಜಿಪ್ಟಿಗೆ ಬಂದಾಗಲೂ ಸುಮ್ಮನಾಗದೆ ಅರಬಿ ಭಾಷೆಯಲ್ಲೂ ಬರೆದರು. ಪಶ್ಚಿಮದ ಬೆಳವಣಿಗೆಗಳ ಕುರಿತು ಸದಾ ಅರಿತುಕೊಳ್ಳುತ್ತಿದ್ದ ಇವರು, ಇಸ್ಲಾಮಿನ ಬೌದ್ಧಿಕ ಪರಂಪರೆಯ ಕುರಿತು ತಿಳುವಳಿಕೆಯುಳ್ಳವರಾಗಿದ್ದರು. ಇದಲ್ಲದೆ ಫ್ರೆಂಚ್, ಅರಬಿಕ್, ಪರ್ಷಿಯನ್, ಜರ್ಮನ್, ಇಂಗ್ಲೀಶ್ ಮತ್ತಿತರ ಬಾಷೆಗಳನ್ನು ಬಲ್ಲವರಾಗಿದ್ದರು. ಇಸ್ಲಾಮಿಕ್ ಸಂಪ್ರದಾಯಗಳಿಂದ ಕಳಚಿಕೊಳ್ಳದೆ, ಸಂಬಂಧವನ್ನು ಗಟ್ಟಿಗೊಳಿಸುತ್ತಾ, ಪಶ್ಚಿಮದ ಬೌದ್ಧಿಕ ವಲಯಕ್ಕೆ ತಮ್ಮನ್ನು ತೆರೆದುಕೊಂಡರು. ಇದು ಅವರ ಬೌದ್ಧಿಕ ತಾತ್ಪರ್ಯಗಳ ವಿಕಾಸಕ್ಕೆ ಕಾರಣವಾಯಿತು. ಇಸ್ಲಾಮಿನಿಂದ ಕಳಚಿಕೊಂಡು, ಪಾಶ್ಚಿಮಾತ್ಯ ಸಂಸ್ಕೃತಿಯನ್ನು ಅಪ್ಪಿಕೊಳ್ಳುವ ಬದಲಾಗಿ, ತಮ್ಮ ಬೌದ್ಧಿಕ ವಲಯವನ್ನು ಇನ್ನಷ್ಟು ವಿಶಾಲಗೊಳಿಸುವ ಶ್ರಮದಲ್ಲಿ ಅವರು ತೊಡಗಿದರು. ಇಂದಿನ ವಿದ್ವಾಂಸರಿಗೂ ಇದು ಅನ್ವಯಿಸುತ್ತದೆ. ಪಶ್ಚಿಮದ ವಿದ್ವಾಂಸರಿಗಿಂತ ಎರಡು ಪಟ್ಟು ಹೆಚ್ಚು ಮುಸ್ಲಿಮ್ ವಿದ್ವಾಂಸರು ಕ್ರಿಯಾಶೀಲರಾಗಿ ಕಾರ್ಯಾಚರಿಸಬೇಕಿದೆ. ಮುಸ್ಲಿಮ್ ವಿದ್ವಾಂಸರು ಇಸ್ಲಾಮಿನ ಮತ್ತು ಪಶ್ಚಿಮದ ಬೌದ್ಧಿಕ ವಲಯಗಳ ಕುರಿತು ತಿಳಿವಳಿಕೆಯುಳ್ಳವರಾಗಬೇಕಿದೆ. ಕ್ಯಾಂಬ್ರಿಡ್ಜ್ ಅಥವಾ ಆಕ್ಸ್ಫರ್ಡಿನಲ್ಲಿರುವ ಮುಸ್ಲಿಮ್ ವಿದ್ವಾಂಸ ಪಶ್ಚಿಮದ ಬೌದ್ಧಿಕತೆಯ ಕುರಿತು ಮಾತ್ರ ಅಧ್ಯಯನ ನಡೆಸಿದರೆ, ಅದು ವ್ಯರ್ಥ. ನಾವು, ಮುಸ್ಲಿಮ್ ವಿದ್ವಾಂಸರು ಎಂಬ ನಿಟ್ಟಿನಲ್ಲಿ ಪಶ್ಚಿಮದ ಅಕಾಡಮಿಕ್ ವಿಷಯಗಳ ಜೊತೆ ಜೊತೆಗೆ ಇಸ್ಲಾಮಿನ ಸಾಂಪ್ರದಾಯಿಕ ಜ್ಞಾನಶಿಸ್ತುಗಳ ಕುರಿತು ಅರಿಯಬೇಕು. ಮುಹಮ್ಮದ್ ಝಾಹಿದ್ ಅಲ್ ಕೌಸರಿ (1879 – 1951), ಮುಸ್ತಫಾ ಸ್ವಬ್ರೀ (1869-1954) ಈ ನಿಟ್ಟಿನಲ್ಲಿ ಆಧುನಿಕ ಮುಸ್ಲಿಮ್ ವಿದ್ವಾಂಸರಿಗೆ ಉತ್ತಮ ಮಾದರಿಯಾಗಬಹುದು.
ಕನ್ನಡಕ್ಕೆ: ಆಶಿಕ್ ಅಲಿ ಕೈಕಂಬ

Dr. Recep Şentürk is the Dean of the College of Islamic Studies at HBKU. He was the former Founding President of Ibn Haldun University in Istanbul (2017–2021). Dr. Şentürk holds a PhD from Columbia University’s Department of Sociology, and specializes in Civilization Studies, Sociology, and Islamic Studies with a focus on social networks, human rights, and modernization in the Muslim world. He served as a researcher at the Center for Islamic Studies (İSAM) in Istanbul, and as Founding Director of the Alliance of Civilizations Institute. He is Head of the International Ibn Khaldun Society, and has a seat on the editorial boards of multiple academic journals. Among his books are, in English: Narrative Social Structure: Hadith Transmission Network 610-1505; and in Turkish: Open Civilization: Towards a Multi- Civilizational Society and World; Ibn Khaldun: Contemporary Readings; Malcolm X: Struggle for Human Rights; and Social Memory: Hadith Transmission Network 610-1505. Dr. Şentürk’s work has been translated to Arabic, Japanese, and Spanish.

Hamza Karamali earned his BASc and MASc in Computer Engineering from the University of Toronto before pursuing full-time Islamic studies with traditional scholars in Kuwait, the UAE, and Jordan. He later earned Bachelor’s and Master’s degrees in Islamic Law and Legal Theory from Jamia Nizamiyya in India. His work focuses on developing rational, evidence-based responses to atheism rooted in the classical Islamic tradition. He has taught Islamic sciences at SunniPath, Qibla, and Qasid Institute, and worked at Kalam Research & Media on projects integrating modern philosophy and science with traditional theology. He draws upon the scholarly legacies of institutions such as al-Azhar, Qarawiyyin, Zaytuna, and Deoband, and is currently developing The Thinking Muslim’s Guide to Atheist Arguments, a free YouTube series.