ಹಳರಮೀಸ್ : ಮಲಬಾರಿನ ಚಾರಿತ್ರಿಕ ಹಿನ್ನೆಲೆ

ಮಲಬಾರ್ ಪ್ರದೇಶಕ್ಕೆ ಹಳರಮೀ ಸಯ್ಯಿದರುಗಳ ವಲಸೆಯು ಹಿಂದೂ ಮಹಾಸಾಗರದ ಇನ್ನಿತರ ಕರಾವಳಿ ಪ್ರದೇಶಗಳಲ್ಲಿ ಘಟಿಸಿದ ಹಾಗೆ ಮಲಬಾರ್ ಮುಸ್ಲಿಮರ ಜೀವನ ಮತ್ತು ಸಂಸ್ಕೃತಿಯಲ್ಲಿ ಮಹತ್ತರವಾದ ಬದಲಾವಣೆಗಳನ್ನುಂಟು ಮಾಡಿತು. ಪ್ರಮುಖವಾಗಿ ಅವರ ವಲಸೆಯು ಕೇರಳದ ಉತ್ತರದಿಂದ ಹಿಡಿದು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಒಳಗೊಂಡ ಮಲಬಾರ್ ಪ್ರದೇಶಕ್ಕಾಗಿತ್ತು. ಅಲ್ಲಿನ ಆಡಳಿತಗಾರರು ಮಧ್ಯಪ್ರಾಚ್ಯದಿಂದ ವಲಸೆ ಬಂದವರೊಂದಿಗೆ ಬಹಳ ಸೌಹಾರ್ದಯುತವಾಗಿ ವರ್ತಿಸುತ್ತಿದ್ದರು. ಸಾಮೂದಿರಿ (ಕಲ್ಲಿಕೋಟೆಯ ದೊರೆಗಳು) ಮತ್ತು ವೆಲ್ಲತಿರಿ ರಾಜ ಮನೆತನ (ವಳ್ಳುವನಾಡಿನ ಆಡಳಿತಗಾರರು) ಮತ್ತು ಉತ್ತರ ಮಲಬಾರಿನ ಕೋಲತಿರಿ ವಂಶಸ್ಥರು ಸ್ವತಃ ತಮ್ಮ ದೇಶಗಳಲ್ಲಿ ವಿದೇಶಿ ವ್ಯಾಪಾರವನ್ನು ಅಭಿವೃದ್ಧಿಪಡಿಸುವ ಸಲುವಾಗಿ ವಿಶೇಷವಾಗಿ ಅರಬ್ ದೇಶಗಳಿಂದ ಬಂದವರಿಗೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಒದಗಿಸಿದರು. ಸಮಾನತೆ ಮತ್ತು ನ್ಯಾಯ ಇವೆರಡೂ ಸಾಮೂದಿರಿ ದೊರೆಗಳ ಆಳ್ವಿಕೆಯ ಮುಖ ಮುದ್ರೆಯಾಗಿತ್ತು.

ಅವರು ತಮ್ಮ ಪ್ರಜೆಗಳಿಗೆ ನೀಡುತ್ತಿದ್ದ ವ್ಯಕ್ತಿ ಮತ್ತು ಆಸ್ತಿಯ ಸಂಪೂರ್ಣ ಭದ್ರತಾ ವ್ಯವಸ್ಥೆಯು ಅರಬ್ಬರ ಪ್ರಾಬಲ್ಯ ಹೊಂದಿರುವ ಅನೇಕ ವ್ಯಾಪಾರೀ ಸಮುದಾಯಗಳು ಕ್ಯಾಲಿಕಟ್‌ಗೆ ಆಕರ್ಷಿತರಾಗಲು ಕಾರಣವಾಯಿತು. ಪೋರ್ಚುಗೀಸ್ ಬರಹಗಾರ ಬಾರ್ಬೊಸಾ ಹೇಳಿದಂತೆ, “ರಾಜನು ಪ್ರತಿಯೊಬ್ಬರಿಗೂ (ಮೂರಿಶ್ ವ್ಯಾಪಾರಿಗೆ) ಒಬ್ಬ ನಾಯರನ್ನು ಕಾವಲು ಹಾಗೂ ಸೇವೆ ಮಾಡಲು, ಒಬ್ಬ ಚೆಟ್ಟಿ ಬರಹಗಾರನನ್ನು ಲೆಕ್ಕಪರಿಶೋಧನೆ ಹಾಗೂ ಆಸ್ತಿಯನ್ನು ನೋಡಿಕೊಳ್ಳಲು ಮತ್ತು ವ್ಯಾಪಾರಕ್ಕಾಗಿ ದಲ್ಲಾಳಿಯನ್ನು ನೇಮಿಸಿ ಕೊಟ್ಟನು.” ಇದು ಸಾಮೂದಿರಿ ದೊರೆಗಳ ನಡುವೆ ಸ್ನೇಹವನ್ನು ಬೆಳೆಸಿತು. ಎಷ್ಟರಮಟ್ಟಿಗೆ ಅರಬ್ಬರೊಂದಿಗಿನ ಸ್ನೇಹ ಗಾಢವಾಯಿತು ಎಂದರೆ ಒಂಬತ್ತನೇ ಶತಮಾನದಲ್ಲಿ ಸಾಮೂದಿರಿ ವಂಶಸ್ಥರು ಇಸ್ಲಾಂ ಧರ್ಮವನ್ನು ಸ್ವೀಕರಿಸಿದರು ಮತ್ತು ಕಅಬಾಕ್ಕೆ ಖಿಲ್’ಅವನ್ನು ನೀಡಿದರು ಎಂದು ಹೇಳಲಾಗುತ್ತದೆ.

ಸೂಫಿಸಂ ಜಾಗತಿಕವಾಗಿ ವ್ಯಾಪಿಸತೊಡಗಿದಾಗ ಅನೇಕ ಹಳರಮೀ ಸೂಫಿಗಳು ಮತ್ತು ಅರಬ್ ವ್ಯಾಪಾರಸ್ಥರು ಇಲ್ಲಿಗೆ ವಲಸೆ ಬಂದು ತಮ್ಮ ಧರ್ಮಶಾಲೆಗಳನ್ನು ನಿರ್ಮಿಸಿದರು. “ಸೂಫಿಗಳು ಹಾಗೂ ಅರಬ್ ಮುಸ್ಲಿಮರು ವಾಸಿಸಲು ಕಲ್ಲಿಕೋಟೆಯಲ್ಲಿ ವಿಶೇಷ ಭವನಗಳನ್ನು ನಿರ್ಮಿಸಲಾಯಿತು” ಎಂದು ಇಬ್ನ್ ಬತೂತ ಉಲ್ಲೇಖಿಸುತ್ತಾರೆ. ಪರ್ಷಿಯಾದ ಶೀರಾಝಿನ ಶೈಖ್ ಒಬ್ಬರು ಅಬೂ ಇಸ್ಹಾಕ್ ಗಝರೂನಿ ಎಂಬ ಹೆಸರಿನಲ್ಲಿ ಸೂಫಿ ಭವನವನ್ನು ನಿರ್ಮಿಸಿ ಶೈಖ್ ಶಿಹಾಬುದ್ದೀನ್ ಗಝರೂನಿಯನ್ನು ಮುಖ್ಯಸ್ಥರಾಗಿ ನೇಮಿಸಿದರು ಹಾಗೂ ‘ಗಝರೂನಿಯ್ಯಾ’ ಎಂಬ ಸೂಫಿ ಪಂಗಡವನ್ನು ಅವರ ಹೆಸರಿನಲ್ಲಿ ಪ್ರಾರಂಭಿಸಿದರು. ಭಾರತ ಮತ್ತು ಚೀನಾಕ್ಕೆ ಸಮುದ್ರಯಾನದಲ್ಲಿನ ಅಪಾಯಗಳ ವಿರುದ್ಧ ರಕ್ಷಣೆ ಅವರ ಪ್ರಮುಖ ಕೊಡುಗೆಗಳು ಎಂದು ನಂಬಲಾಗಿದೆ. ಚೀನಾದ ಝೈತುನ್‌ನಲ್ಲಿ ಅವರ ಹೆಸರಿನಲ್ಲಿ ಒಂದು ಧಾರ್ಮಿಕ ಕ್ಷೇತ್ರ ನಿರ್ಮಿಸಲಾಗಿದೆ.

ಬಾ ಅಲವಿಗಳು ಭಾರತಕ್ಕೆ :

ಬಾ-ಅಲವಿ ಹಳರಮೌತಿನ ಸಯ್ಯದ್ ವಂಶಸ್ಥರ ಪೈಕಿ ಪ್ರಮುಖ ಕುಟುಂಬ. ಸಾಮೂದಿರಿಗಳು ಮುಸ್ಲಿಮರೊಂದಿಗೆ ಬೆಳೆಸಿದ ಸಂಬಂಧದ ಫಲವಾಗಿ ಹಳರಮೌತಿನ ಶ್ರೇಷ್ಠ ಪ್ರವಾದೀ ವಂಶಸ್ಥರಾದ ಬಾ-ಅಲವಿ ಕುಟುಂಬದ ಶೈಖ್ ಸಯ್ಯದ್ ಜಿಫ್ರಿಯವರು 1746 ರಲ್ಲಿ ಕ್ಯಾಲಿಕಟ್‌ಗೆ ಬಂದು ನೆಲೆಸಿದರು. ಅವರನ್ನು ಮುಹ್ಯದ್ದೀನ್ ಬಿ, ಕ್ಯಾಲಿಕಟ್‌ನ ಖಾಝಿ ಅಬ್ದುಸ್ಸಲಾಂ ಮತ್ತು ಸಾಮೂದಿರಿ ದೊರೆ ಮಾನವವಿಕ್ರಮನ್ ಮುಂತಾದವರು ಸ್ವಾಗತಿಸಿದರು. ರಾಜನು ಕ್ಯಾಲಿಕಟ್‌ನಲ್ಲಿ ನೆಲೆಸಲು ಶೈಖ್‌ಗೆ ವಿನಂತಿಸಿದನು ಮತ್ತು ಅವರಿಗೆ ಕಲ್ಲೈನದಿಯ ದಡದಲ್ಲಿ ತೆಂಗಿನ ತೋಪು ಹಾಗೂ ಕುಟ್ಟಿಚಿರಾದ ಬಳಿ ಜಮೀನು ಮತ್ತು ಮನೆಯನ್ನು ನೀಡಿದನು. ಜೊತೆಗೆ ರಾಜ್ಯದ ಎಲ್ಲಾ ರೀತಿಯ ತೆರಿಗೆಗಳಿಂದ ವಿನಾಯಿತಿಯನ್ನು ನೀಡಿ ವಿಶೇಷ ಸ್ಥಾನಮಾನ ಘೋಷಿಸಿ ಗೌರವಿಸಿದನು. ಶೈಖ್ ಜಿಫ್ರಿ ತಮ್ಮ ಸಹೋದರ ಹಸನ್ ಜಿಫ್ರಿರವರ ಜೊತೆ 1754 ರಲ್ಲಿ ಕ್ಯಾಲಿಕಟ್ ತಲುಪಿದರು. ನಂತರ ಅವರು ತಿರೂರಙಾಡಿ ಬಳಿ ನೆಲೆಸಿದರು. ಜಿಫ್ರಿ ಮತ್ತು ಇತರ ಬಾ-ಅಲವಿ ಸಯ್ಯಿದ್ ಕುಟುಂಬಗಳಿಂದ ಹೆಚ್ಚಿನ ಸದಸ್ಯರು ಮಲಬಾರಿಗೆ ವಲಸೆ ಬಂದು ವಿವಿಧ ಭಾಗಗಳಲ್ಲಿ ನೆಲೆಸಿದರು. ಕೊಯಿಲಾಂಡಿ ಹಳರಮೌತ್ ಸಯ್ಯಿದ್ ಕುಟುಂಬಗಳ ಕೇಂದ್ರವಾಯಿತು. ಕೊಯಿಲಾಂಡಿ, ಪಂತಲಾಯನಿ, ಕಡಲುಂಡಿ, ಪೊನ್ನಾನಿ, ಮಲಪ್ಪುರಂ, ಪರಪ್ಪನಂಗಾಡಿ, ತಿರೂರಂಗಾಡಿ, ಚಾಲಿಯಮ್, ಕುಟ್ಟಾಯಿ, ಚಾವಕ್ಕಾಡ್, ಕಣ್ಣೂರು, ವಲಪಟ್ಟಣಂ, ಕಪ್ಪಾಡ್ ಮತ್ತು ಕೊಚ್ಚಿ ಬಾ-ಅಲವಿ ಸಯ್ಯಿದರ ಪ್ರಮುಖ ಕೇಂದ್ರಗಳಾದವು. ಈ ಎಲ್ಲಾ ಸ್ಥಳಗಳಲ್ಲಿ ಅವರು ಸೂಫೀ ಕೇಂದ್ರಗಳನ್ನು ಪ್ರಾರಂಭಿಸಿದರು ಮತ್ತು ಸಾಮಾನ್ಯ ಜನರಿಗೆ ಆಧ್ಯಾತ್ಮಿಕ ನೆರಳನ್ನು ನೀಡುವ ಮೂಲಕ ಸೇವೆ ಸಲ್ಲಿಸಿದರು.

ಮಲಬಾರಿನಲ್ಲಿ ಅವರು ದೈಹಿಕ ಮತ್ತು ಮಾನಸಿಕ ಕಾಯಿಲೆಗಳನ್ನು ಗುಣಪಡಿಸಲು ಆಧ್ಯಾತ್ಮಿಕತೆಯ ಒಂದು ಶಾಖೆಯಾದ ಇಲ್ಮ್ ಅಲ್-ರೂಹಾನಿ ಮತ್ತು ಆಧ್ಯಾತ್ಮಿಕ ಚಿಕಿತ್ಸೆಯನ್ನು (ಅಲ್ ರುಕ್’ಯಾ ಅಥವಾ ಸಿಮಿಯಾ) ಪ್ರಯೋಗ ಮಾಡುತ್ತಾರೆ. ಇದು ಅವರ ಕುಟುಂಬದ ಸದಸ್ಯರ ಮಧ್ಯೆ ಹಸ್ತಾಂತರಗೊಳ್ಳುವ ಒಂದು ರೀತಿಯ ರಹಸ್ಯ ಜ್ಞಾನವಾಗಿತ್ತು. ಆಧ್ಯಾತ್ಮಿಕ ಚಿಕಿತ್ಸೆಯನ್ನು ಅಭ್ಯಾಸ ಮಾಡಲು ಒಬ್ಬರು ಹಿರಿಯರು ಅಥವಾ ಮಾರ್ಗದರ್ಶಿ (ಮುರ್ಷಿದ್) ಯಿಂದ ಸಮ್ಮತಿಯನ್ನು (ಇಜಾಝ) ಪಡೆಯಬೇಕು. ಸಾಧಕರು ಧರ್ಮದ ನಿಯಮಗಳಿಗೆ ಬದ್ಧರಾಗಿರಬೇಕು ಮತ್ತು ದುಶ್ಚಟಗಳಿಂದ ದೂರವಿರಬೇಕು. ಸಾಮಾನ್ಯ ಜನರು ಮಾನಸಿಕ ಒತ್ತಡ ಮತ್ತು ಚಿಂತೆಗಳು ಅಥವಾ ದೈಹಿಕ ಸಮಸ್ಯೆಗಳಿಂದ ತಮ್ಮನ್ನು ಮುಕ್ತಿಗೊಳಿಸಲು ಈ ಸೂಫಿಗಳನ್ನು ಭೇಟಿ ಮಾಡುತ್ತಿದ್ದರು. ಕೆಲವು ಖುರ್ ಆನ್ ಸೂಕ್ತಗಳನ್ನು ಅಥವಾ ದೈವ ನಾಮಗಳನ್ನು(ಅಸ್ಮಾ) ಪಠಿಸಿದ ನಂತರ ಸೂಫಿಗಳು ಅವರಿಗೆ ಕೆಲವು ಎಲೆಗಳ ಮೇಲೆ ದೈವಸ್ಮರಣೆಯ ಜಪಗಳನ್ನು ಪಠಿಸಿ ಕಳುಹಿಸುತ್ತಿದ್ದರು. ಈ ಮಾರ್ಗವನ್ನು ಹೆಚ್ಚಾಗಿ ಬಾ-ಅಲವಿಗಳು ಅನುಸರಿಸುತ್ತಿದ್ದರು. ಶ್ಲೋಕಗಳನ್ನು ಪಠಿಸಿದ ನಂತರ ರೋಗಿಗಳಿಗೆ ಕುಡಿಯಲು ನೀರನ್ನು ಸಹ ಒದಗಿಸಲಾಗುತ್ತಿತ್ತು. ಕೆಲವೊಮ್ಮೆ ಖುರ್ಆನ್ ಸೂಕ್ತಗಳನ್ನು ತಟ್ಟೆಗಳ ಮೇಲೆ ಅಥವಾ ಎಲೆಗಳ ಮೇಲೆ, ವಿಶೇಷವಾಗಿ ಹಲಸಿನ ಹಣ್ಣಿನ ಮರದ ಎಲೆಯ ಮೇಲೆ ಕಪ್ಪು ಶಾಯಿಯಿಂದ ಬರೆದು ರೋಗಿಗಳಿಗೆ ನೀರಿನಲ್ಲಿ ಅದ್ದಿ ಕುಡಿಯಲು ಹೇಳುತ್ತಿದ್ದರು. ಕೆಲವು ಸೂಫಿಗಳು ದುಶ್ಚಟಗಳನ್ನು ಹೋಗಲಾಡಿಸಲು ರೋಗಿಗಳ ತಲೆಯ ಮೇಲೆ ಖುರ್ಆನ್ ಸೂಕ್ತಗಳನ್ನು ಪಠಿಸುತ್ತಿದ್ದರು. ಕುರ್ಆನಿ‌ನ ಕೆಲವು ಅಧ್ಯಾಯಗಳನ್ನು ಪಠಿಸುವಂತೆ ರೋಗಿಗಳಿಗೆ ಸೂಚಿಸುತ್ತಿದ್ದರು . ಹೆಚ್ಚಾಗಿ ಸೂರ ಯಾಸಿನ್ ಮತ್ತು ಆಯತುಲ್ ಕುರ್ಸಿಯ್ ಎಂಬ ಕುರ್‌ಆನ್ ಸೂಕ್ತವನ್ನು ರೋಗಿಗಳಿಗೆ ಓದಲು ನೀಡುತ್ತಿದ್ದರು.

ಕುರ್‌ಆನಿನಿಂದ ಆಯ್ದ ಪ್ರಾರ್ಥನೆಗಳು ಮತ್ತು ಸೂಕ್ತಗಳನ್ನು ವಿವಿಧ ಅಗತ್ಯಗಳನ್ನು ಪೂರೈಸಲು ಬೇಕಾಗಿ ಪುನರಾವರ್ತಿಸಿ ಓದಲು ಸೂಚಿಸುತ್ತಿದ್ದರು. ಕೆಲವೊಮ್ಮೆ ಸೂಕ್ತಗಳು ಅಥವಾ ಮಂತ್ರಗಳನ್ನು ಜಿಂಕ್ ಪ್ಲೇಟ್‌ ಕಾಗದದ ಮೇಲೆ ಬರೆದು, ಅದನ್ನು ಅಲ್ಯೂಮಿನಿಯಂ ಅಥವಾ ತಾಮ್ರದ ತಾಯತಗಳನ್ನಾಗಿ ಮಾಡಿ ರೋಗಿಗಳ ಕುತ್ತಿಗೆಗೆ ಅಥವಾ ಸೊಂಟದ ಮೇಲೆ ಕಟ್ಟಲು ಹೇಳುತ್ತಿದ್ದರು. ವಿವಿಧ ರೀತಿಯ ಚೌಕಾಕಾರಗಳನ್ನು ಕಾಗದಗಳಲ್ಲಿ ಅಥವಾ ಲೋಹದ ಫಲಕಗಳಲ್ಲಿ ಚಿತ್ರಿಸಿ, ಕೆಲವು ಅರೇಬಿಕ್ ವರ್ಣಮಾಲೆಗಳನ್ನು ಅದರ ಮಧ್ಯ ಭಾಗ ಅಥವಾ ಬದಿಯಲ್ಲಿ ಬರೆದು ದೆವ್ವವನ್ನು ಓಡಿಸಲು ಅಥವಾ ಬಯಕೆಗಳನ್ನು ಈಡೇರಿಸಲು ನಿರ್ದಿಷ್ಟ ಸ್ಥಳಗಳಲ್ಲಿ ಇರಿಸುತ್ತಿದ್ದರು. ಅರೇಬಿಕ್ ಅಕ್ಷರಗಳ ಆಧಾರದ ಮೇಲೆ ಸಂಖ್ಯಾ ಪದ್ಧತಿಯ ಲೆಕ್ಕಾಚಾರವನ್ನು (ಅಬ್’ಜದ್) ಅನುಸರಿಸಲಾಗುತ್ತಿತ್ತು. ‘ಪಾಲ್ ಕಣಕ್ಕ್’ ಅಥವಾ ‘ಕುರ್ರತ್ ಅಲ್-ಅನ್ಬಿಯಾ’ ಅಥವಾ ‘ಮಶಿನೋಟಂ’ ಎಂಬ ವಿಭಿನ್ನ ಲೆಕ್ಕಾಚಾರಗಳನ್ನು ವಿವಿಧ ಉದ್ದೇಶಗಳಿಗಾಗಿ ಬಳಸಲಾಗುತ್ತಿತ್ತು. ಬಾ-ಅಲವಿಗಳು ತಮ್ಮ ದೈವಿಕ ಶಕ್ತಿಯು ಪ್ರವಾದಿ ಮುಹಮ್ಮದರ ಕೊಡುಗೆಯಾಗಿದೆ, ಆ ಮೂಲಕ ತಮ್ಮ ಶೈಖರ ಮೂಲಕ ಶಿಷ್ಯಂದಿರಿಗೆ ವರ್ಗಾವಣೆಯಾಗುತ್ತಾ ಈ ಪ್ರಕ್ರಿಯೆ ಅಂತ್ಯದಿನದವರೆಗೆ ಮುಂದುವರಿಯುತ್ತದೆ ಎಂದು ಬಲವಾಗಿ ನಂಬುತ್ತಾರೆ. ಅವರು ಶೈಖ್ ಮುಹ್ಯದ್ದೀನ್, ಶೈಖ್ ರಿಫಾಯೀ, ನಫೀಸತ್ ಅಲ್ ಮಿಸ್ರೀ ಮತ್ತು ಅಬುಲ್ ಹಸನ್ ಅಲ್ ಶಾದುಲಿಯಂತಹ ಪ್ರಸಿದ್ಧ ಸೂಫಿಗಳ ಹೆಸರಿನಲ್ಲಿ ತಮ್ಮ ಸೂಫೀ ಸಿದ್ಧಾಂತಗಳನ್ನು ಸುತ್ತಮುತ್ತಲ ಉದ್ದಗಲಕ್ಕೂ ಹರಡಲು ಬೇಕಾಗಿ ಧರ್ಮಶಾಲೆಗಳನ್ನು (ರಿಬಾತ್ ಅಥವಾ ತಕಿಯಾ) ಪ್ರಾರಂಭಿಸಿದರು. ದುಷ್ಟತನಗಳಿಂದ ಮುಕ್ತಿಗಾಗಿ ಹಾಗೂ ಜೀವನದಲ್ಲಿ ಸಮೃದ್ಧಿಗಾಗಿ ‘ಮೌಲಿದ್’ ಎಂಬ ಕಾವ್ಯಾತ್ಮಕ ಸಂಕಲನವನ್ನು ಅಥವಾ ‘ಮಾಲಾ’ ಎಂದು ಕರೆಯಲ್ಪಡುವ ಸ್ಥಳೀಯ ಉಪಭಾಷೆಯಲ್ಲಿ ಬರೆದ ಸೂಫಿಗಳ ಹೊಗಳಿಕೆಗಳನ್ನು ಪ್ರತೀ ಮನೆಗಳಲ್ಲಿ ಪಠಿಸಲು ಅವರು ಮುಸಲ್ಮಾನರಿಗೆ ಸೂಚಿಸುತ್ತಿದ್ದರು. ಮಗ್ರಿಬ್ ಪ್ರಾರ್ಥನೆಯ ನಂತರ ಅಥವಾ ರಾತ್ರಿಯ ಇಶಾ ಪ್ರಾರ್ಥನೆಯ ನಂತರ ವಿಶೇಷವಾಗಿ ಪಠಿಸಲು ಅಲವಿ ಸೂಫಿಗಳು ಹದ್ದಾದ್ ರಾತೀಬ್ ಎಂಬ ದೈವಸ್ಮರಣೆಯ ಮಾಲಿಕೆಯನ್ನು ಪರಿಚಯಿಸಿದರು. ಈ ಆಚರಣೆಗಳು ಇಂದಿಗೂ ಮಲಬಾರಿನಲ್ಲಿ ಚಾಲ್ತಿಯಲ್ಲಿದೆ.

ಮಂಬುರಂ ಮಖಾಂ

ದರ್ಗಾ ಝಿಯಾರತ್ (ಸಂದರ್ಶನ) ಬಾ-ಅಲವಿ ಸಯ್ಯಿದರುಗಳ ಆಧ್ಯಾತ್ಮಿಕ ಆಚರಣೆಗಳಲ್ಲಿ ಆಳವಾಗಿ ಬೇರೂರಿದೆ. ಅವರು ತಮ್ಮ ಸೂಫಿ ಗುರುಗಳು ಮತ್ತು ಉಲಮಾಗಳ ಮೇಲೆ ಗೋರಿಗಳನ್ನು ನಿರ್ಮಿಸಿದರು ಮತ್ತು ಅವರನ್ನು ಸಂದರ್ಶಿಸಿ ಆಶೀರ್ವಾದ ಪಡೆಯುತ್ತಿದ್ದರು. ಮುಸ್ಲಿಮರು ಸಾಮಾನ್ಯವಾಗಿ ದರ್ಗಾಗಳಿಗೆ ಭೇಟಿ ನೀಡುತ್ತಾರೆ ಮತ್ತು ಅವರಲ್ಲಿ ತಮ್ಮ ಅಗತ್ಯಗಳನ್ನು ಪೂರೈಸಲು ಬೇಕಾಗಿ ಗೋರಿಗಳಿಗೆ ಹರಕೆಗಳನ್ನು ಅರ್ಪಣೆ ಮಾಡುತ್ತಾರೆ. ದರ್ಗಾಗಳಿಗೆ ಭೇಟಿ ನೀಡುವ ಪ್ರತಿಜ್ಞೆ ಅಥವಾ ಬಯಕೆಗಳನ್ನು ಈಡೇರಿಸಲು ಅವರಿಗೆ ಕಾಣಿಕೆಗಳನ್ನು ನೀಡುವುದು ಮಾಪಿಳ್ಳ ಮುಸ್ಲಿಮರಲ್ಲಿನ ಸಾಮಾನ್ಯ ಸಂಪ್ರದಾಯವಾಗಿದೆ. ಸೂಫಿಗಳು ಸಾಮಾನ್ಯ ಜನರ ಸಾಮಾಜಿಕ ಮತ್ತು ಸಾಂಸ್ಕೃತಿಕ ಜೀವನದಲ್ಲಿ ಪ್ರಮುಖ ಪಾತ್ರವನ್ನು ವಹಿಸಿದರು. ಸೂಫಿ ಮಝಾರಗಳು ಭರವಸೆ ಮತ್ತು ಆಶ್ರಯ ಕೇಂದ್ರವಾಯಿತು. ಧಾರಾಳ ಮಳೆಗಾಗಿ, ಮಿಡತೆ ನಿವಾರಣೆಗಾಗಿ, ಉತ್ತಮ ಫಸಲು ಪಡೆಯಲು, ವ್ಯಾಪಾರದಲ್ಲಿ ಲಾಭ ಪಡೆಯಲು ಜನರು ಸೂಫಿ ಸಂತರ ಹೆಸರಿನಲ್ಲಿ ಕಾಣಿಕೆಗಳನ್ನು ನೀಡಿ ಅವರ ದರ್ಗಾದಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದರು. ಅಲ್ಲಾಹನ ಸಂತರು ಜೀವಂತವಾಗಿರುವಾಗ ಮತ್ತು ಮರಣ ಹೊಂದಿದ ನಂತರವೂ ಜನರ ದುಃಖಗಳಿಗೆ ಮಿಡಿಯುವರು ಎಂಬುದು ಬಲವಾದ ನಂಬಿಕೆ. ಆದ್ದರಿಂದ ಮಝಾರಗಳಿಗೆ ಭೇಟಿ ನೀಡುವುದರಿಂದ ಜನರಿಗೆ ಪ್ರಯೋಜನವಾಗುತ್ತಿತ್ತು. ಮಲಬಾರಿ‌ನಲ್ಲಿ ಬಾ-ಅಲವಿ ಸಯ್ಯಿದರುಗಳ ಪೈಕಿ ಹಲವರ ಗೋರಿಗಳನ್ನು ನಿರ್ಮಿಸಲಾಗಿದೆ. ಕಲ್ಲಿಕೋಟೆಯಲ್ಲಿರುವ ಶೈಖ್ ಜಿಫ್ರಿ ಮತ್ತು ಮಂಬುರಮಿನಲ್ಲಿರುವ ಸಯ್ಯಿದ್ ಅಲವಿಯವರ ಗೋರಿಗಳು ಹೆಸರುವಾಸಿಯಾಗಿದೆ. ಗೋರಿಗಳನ್ನು ದೀಪಗಳು ಮತ್ತು ಹಸಿರು ರೇಷ್ಮೆ ಬಟ್ಟೆಗಳಿಂದ ಅಲಂಕರಿಸಲಾಗುತ್ತಿತ್ತು. ಕೆಲವೊಮ್ಮೆ ಎಣ್ಣೆಯನ್ನು ಕಂಚಿನ ದೀಪದಲ್ಲಿ ಪವಿತ್ರವೆಂದು ಇರಿಸಿ ಹಗಲು ರಾತ್ರಿ ದೀಪವನ್ನು ಬೆಳಗಿಸಲಾಗುತ್ತದೆ. ಜನರು ದೀಪದಿಂದ ಎಣ್ಣೆಯನ್ನು ತೆಗೆದುಕೊಂಡು ಅದನ್ನು ಗೌರವಾರ್ಥವಾಗಿ ತಮ್ಮ ತಲೆ ಮತ್ತು ಶರೀರಕ್ಕೆ ಹಚ್ಚುತ್ತಾರೆ. ಮಂಬುರಮ್ ಮಝಾರದಲ್ಲಿ ದರ್ಗಾ ಪಾಲಕರು ತಮ್ಮೊಂದಿಗೆ ಒಂದು ತುಂಡು ಹಸಿರು ಬಟ್ಟೆಯನ್ನು ಸಂದರ್ಶಕರ ತಲೆಯ ಮೇಲೆ ಬೀಸಲು ಇಟ್ಟುಕೊಳ್ಳುತ್ತಾರೆ. ಅವರ ಮಾನಸಿಕ ಮತ್ತು ದೈಹಿಕ ಸಮಸ್ಯೆಗಳನ್ನು ಗುಣಪಡಿಸುವ ಸಂಕೇತವಾಗಿ ಅದನ್ನು ಬೀಸಲಾಗುತ್ತದೆ.

ಮಂಬುರಮ್ ಮಝಾರದಲ್ಲಿ ಸಾಪ್ತಾಹಿಕ ಪ್ರಾರ್ಥನಾ ಸಭೆಗಳು (ಸ್ವಲಾತ್) ನಡೆಯುತ್ತಿತ್ತು. ಪ್ರತೀ ಗುರುವಾರ ಸಂಜೆ ಪ್ರಾರ್ಥನೆಯ ನಂತರ ಭಕ್ತರು ಅಲ್ಲಿ ಸೇರಿ ಖುರ್ಆನಿನ ಅಧ್ಯಾಯಗಳು, ಮೂರು ಬಾರಿ ಸೂರಾ ಯಾಸೀನ್ ಮತ್ತು ತಹ್ಲೀಲ್ (ಕಲಿಮಾ) ಪಠಿಸುತ್ತಾರೆ. ಕೊನೆಗೆ ನಾಯಕತ್ವ ನೀಡಿದವರು ಸಯ್ಯಿದ್ ಅಲವಿ ತಂಙಳರ ಮಧ್ಯಸ್ಥಿಕೆಯಲ್ಲಿ ಕೈ ಎತ್ತಿ ದೇವರಲ್ಲಿ ಪ್ರಾರ್ಥನೆಯನ್ನು ಮಾಡುತ್ತಾರೆ. ಅರೇಬಿಕ್ ತಿಂಗಳ ಮೊಹರ್ರಮಿನ ಮೊದಲ ಏಳು ದಿನಗಳಲ್ಲಿ ನಡೆಯುವ ವಾರ್ಷಿಕ ಸಮಾರಂಭದಲ್ಲಿ ಜನರು ದರ್ಗಾಕ್ಕೆ ಬಂದು ಸೇರುತ್ತಾರೆ. ಮೊದಲ ದಿನ ಧ್ವಜಾರೋಹಣ ಮಾಡಲಾಗುತ್ತದೆ ಮತ್ತು ಪ್ರತೀ ದಿನ ಪ್ರವಾದಿ ಮುಹಮ್ಮದ್ ಸ್ವಲ್ಲಲ್ಲಾಹು ಅಲೈಹಿವಸಲ್ಲಮ್ ಮತ್ತು ಸಯ್ಯಿದ್ ಅಲವಿ ಅವರ ಹೆಸರಿನಲ್ಲಿ ಮೌಲಿದ್ ಪಠಿಸಲಾಗುತ್ತದೆ. ವಾರ್ಷಿಕ ಸಮಾರಂಭದಲ್ಲಿ ಮಲಬಾರಿನ ಎಲ್ಲಾ ಭಾಗಗಳ ಜನರು ಭಾಗವಹಿಸುತ್ತಾರೆ. ಕೊನೆಗೆ ನೆರೆದವರಿಗೆ ಆಹಾರವನ್ನು ವಿತರಿಸಲಾಗುತ್ತದೆ. ಮಝಾರಕ್ಕೆ ಭೇಟಿ ನೀಡುವ ಜನರು ಗೋರಿಯ ಬಳಿ ತಮ್ಮ ಪ್ರಾರ್ಥನೆಗಳನ್ನು ಮಾಡುತ್ತಾರೆ ಮತ್ತು ಗೌರವದ ಸಂಕೇತವಾಗಿ ಅವರು ಗೋರಿಗಳ ಮೇಲಿನ ಹಸಿರು ಚಾದರವನ್ನು ಚುಂಬಿಸುತ್ತಾರೆ. ಆ ಪ್ರದೇಶದ ಮುಸ್ಲಿಮೇತರರು ಸಹ ದರ್ಗಾಕ್ಕೆ ಭೇಟಿ ನೀಡುತ್ತಾರೆ ಮತ್ತು ತಮ್ಮ ಅಗತ್ಯಗಳನ್ನು ಪೂರೈಸಲು ಕಾಣಿಕೆಗಳನ್ನು ನೀಡುತ್ತಾರೆ.

ಕಲ್ಲಿಕೋಟೆಯ ಜಿಫ್ರಿ ಮನೆಯಲ್ಲಿ ವಾರ್ಷಿಕ ಸಮಾರಂಭವು ‘ದುಲ್ ಕಅದ್’ ತಿಂಗಳ ಎಂಟರಿಂದ ಹತ್ತರವರೆಗೆ ನಡೆಯುತ್ತದೆ. ಈ ದಿನಗಳಲ್ಲಿ ಖುರ್‌ಆನ್ ಸಂಪೂರ್ಣವಾಗಿ (ಖತ್ಮುಲ್ ಖುರ್‌ಆನ್) ಪಠಿಸಲಾಗುತ್ತದೆ. ಜಅಫರ್ ಬಿನ್-ಹಸನ್ ಅಲ್-ಬರ್ಝಾಂಜಿ ಬರೆದ ಮೌಲಿದ್ ಸಹ ಪಠಿಸಲಾಗುತ್ತದೆ. ಕೊನೆಯಲ್ಲಿ ಎಲ್ಲರಿಗೂ ಆಹಾರವನ್ನು ವಿತರಿಸಲಾಗುತ್ತದೆ. ಹೆಚ್ಚಾಗಿ ಜಿಫ್ರಿ ದರ್ಗಾಗಳಲ್ಲಿ ವಾರ್ಷಿಕ ಆಚರಣೆಗಳನ್ನು ಬಾ-ಅಲವಿ ಸಯ್ಯಿದರ ಕುಟುಂಬಸ್ಥರು ನಡೆಸುತ್ತಾರೆ. ಬಾ-ಅಲವಿಗಳಿಂದ ಉಲಮಾಗಳು ಮತ್ತು ಹೆಚ್ಚಿನ ಸಂಖ್ಯೆಯ ಸಾಮಾನ್ಯ ಜನರು ಶಿಷ್ಯತ್ವವನ್ನು ಸ್ವೀಕರಿಸಿದ್ದರು.

ಸೂಫಿಗಳು ಮತ್ತು ಅವರ ಮಝಾರಗಳು (ಸಮಾಧಿಗಳು) ಮಲಬಾರಿನಲ್ಲಿ ಸಾಮಾಜಿಕ ಸುಧಾರಣೆಗಳು ಮತ್ತು ಧಾರ್ಮಿಕ ಸೌಹಾರ್ದತೆಯಲ್ಲಿ ಬಹಳ ಮಹತ್ವದ ಪಾತ್ರವನ್ನು ವಹಿಸಿದೆ. ಜನರಲ್ಲಿ, ವಿಶೇಷವಾಗಿ ಕೆಳವರ್ಗದವರಲ್ಲಿ ಇಸ್ಲಾಮಿಕ್ ಆದರ್ಶಗಳ ಪ್ರಚಾರದ ಮೂಲಕ ಅವರು ಜಾತಿ ವ್ಯವಸ್ಥೆಯ ವಿರುದ್ಧ ಹೋರಾಡಿದರು. ಹದಿನಾರನೇ ಶತಮಾನದ ಪೋರ್ಚುಗೀಸ್ ಬರಹಗಾರ ಗಾಸ್ಪರ್ ಕೊರಿಯಾ ವರದಿ ಮಾಡುತ್ತಾರೆ, “ಮೂರ್ಸ್ (ಕೆಳವರ್ಗದವರು) ಅವರು ಇಷ್ಟಪಟ್ಟಲ್ಲಿಗೆ ಹೋಗಬಹುದು ಮತ್ತು ಅವರು ಇಷ್ಟಪಟ್ಟಂತೆ ತಿನ್ನಬಹುದು. ಅವರು ಮೂರ್ಸ್ ಗಳಿಗೆ ಬಟ್ಟೆ ಮತ್ತು ನಿಲುವಂಗಿಯನ್ನು ನೀಡಿದರು. ಇಸ್ಲಾಮಿಗೆ ಮತಾಂತರಗೊಳ್ಳುವ ಮೂಲಕ ಸಮಾಜದಲ್ಲಿ ಉನ್ನತ ಸ್ಥಾನಮಾನ ದೊರಕುತ್ತದೆ ಮತ್ತು ಕೀಳರಿಮೆ ಹಾಗೂ ತಾರತಮ್ಯಗಳನ್ನು ಅದು ಹೋಗಲಾಡಿಸುತ್ತದೆ ಎಂದು ಕೆಳಜಾತಿಗಳು ಅರಿತುಕೊಂಡಾಗ, ಅವರು ಇಸ್ಲಾಂ ಧರ್ಮವನ್ನು ಸ್ವೀಕರಿಸಲಾರಂಭಿಸಿದರು.” ‘ಸಿ.ಎ ಇನ್ನೆಸ್’ ಹೇಳುತ್ತಾರೆ : “ಚೇರುಮಾನ್‌ಗಳು, ಜೀತದಾಳು ವರ್ಗ ಹಾಗೂ ತಿಯ್ಯಾನ್ ವರ್ಗದವರ ಮತಾಂತರಗೊಳ್ಳುವ ಸಂಖ್ಯೆಯು ಕಾಲಕಾಲಕ್ಕೆ ಅಧಿಕಗೊಂಡಾಗ ಇತರೆ ಜಾತಿಯ ಮುಂದೆ ಇಸ್ಲಾಮಿನ ಗೌರವ ಹೆಚ್ಚಿತು.”

1748 ರಲ್ಲಿ ಹಳರಮೌತಿನ ಶೈಖ್ ಜಿಫ್ರಿ ಕಲ್ಲಿಕೋಟೆಗೆ ಆಗಮಿಸುವುದರೊಂದಿಗೆ ಮಲಬಾರಿನಲ್ಲಿ ಬಾ-ಅಲವಿಗಳು ತಮ್ಮ ಪ್ರಾಬಲ್ಯವನ್ನು ಹೊಂದಿದರು. ಈ ಪ್ರದೇಶದಲ್ಲಿ ಬಾ-ಅಲವಿ ತ್ವರೀಖವನ್ನು (ಪಂಗಡ) ಪರಿಚಯಿಸಿದವರು ಶೈಖ್ ಜಿಫ್ರಿ. ಅದೇ ಸಮಯದಲ್ಲಿ ಸಯ್ಯಿದ್ ಅಬ್ದುಲ್ ರೆಹಮಾನ್ ಹೈದ್ರೂಸ್ 1751 ರಲ್ಲಿ ಮಲಬಾರಿಗೆ ವಲಸೆ ಬಂದು ಪೊನ್ನಾನಿಯಲ್ಲಿ ನೆಲೆಸಿದರು. ಅವರು ಬಾ-ಅಲವಿ ತ್ವರೀಕವನ್ನು ಪಸರಿಸಲು ಅಲ್ಪ ವ್ಯತಿರಿಕ್ತ ಶೈಲಿಯನ್ನು ಅಳವಡಿಸಿದರು. ಅವರ ಮಾರ್ಗವು ಖಾದಿರಿ ತ್ವರೀಕಾದ ಕುಬ್ರವಿಯ್ಯ ಶೈಲಿಗೆ ಹೆಚ್ಚು ಹತ್ತಿರವಾಗಿತ್ತು. ಜಿಫ್ರಿ ಮತ್ತು ಹೈದ್ರೂಸ್ ಎರಡೂ ವಂಶಸ್ಥರು ಸಾಮಾನ್ಯ ಜನರ ಮೇಲೆ, ವಿಶೇಷವಾಗಿ ಕರಾವಳಿಯ ಮೀನುಗಾರರ ಮೇಲೆ ಹೆಚ್ಚಿನ ಆಧ್ಯಾತ್ಮಿಕ ಪ್ರಭಾವ ಬೀರಿದರು. ಮೇಲ್ಜಾತಿಗಳಿಂದ ನಿರ್ಲಕ್ಷಿಸಲ್ಪಟ್ಟ ಈ ಜನರು ಸೈಯ್ಯದ್‌ಗಳನ್ನು ಸಂರಕ್ಷಕರಾಗಿ ಕಂಡುಕೊಂಡರು ಮತ್ತು ಇದು ಹೆಚ್ಚಿನ ಸಂಖ್ಯೆಯ ಮೀನುಗಾರ ಸಮುದಾಯ ಇಸ್ಲಾಮಿಗೆ ಪರಿವರ್ತನೆ ಹೊಂದಲು ಕಾರಣವಾಯಿತು. ಅಬ್ದುರಹ್ಮಾನ್ ಹೈದ್ರೂಸ್ ಅವರ ಉತ್ತರಾಧಿಕಾರಿಗಳಾಗಿ ವಲಿಯ ತಂಙಳ್ ಆಧ್ಯಾತ್ಮಿಕ ನಾಯಕರಾಗಿ ಮುಂದುವರೆದರು.

ಮಂಬುರಂ ಸಯ್ಯಿದ್ ಅಲವೀ:

ಶೈಖ್ ಜಿಫ್ರಿ ಅವರ ಸೋದರಳಿಯ ಸಯ್ಯಿದ್ ಅಲವಿ (1844) ಅವರು ತಮ್ಮ ಕೇಂದ್ರವನ್ನು ತಿರೂರಂಗಾಡಿ ಬಳಿಯ ಮಂಬುರಮಿನಲ್ಲಿ ಸ್ಥಾಪಿಸಿದರು. ಸಯ್ಯಿದ್ ಅಲವಿಯವರ ಜನಪ್ರಿಯತೆಯು ಎಷ್ಟರಮಟ್ಟಿಗೆ ಹೆಚ್ಚಾಯಿತು ಎಂದರೆ ಅವರನ್ನು ಅವರ ಸಮಕಾಲೀನರು ಕುತುಬುಝಮಾನ್ (ಯುಗಪುರುಷ) ಎಂದು ಗೌರವಿಸಿದರು. ಆ ಕಾಲದ ಪ್ರಸಿದ್ಧ ಉಲಮಾಗಳು ಮತ್ತು ಸೂಫಿಗಳು ಅವರ ಆಧ್ಯಾತ್ಮಿಕ ಶಿಷ್ಯರಾದರು. ಸಂಕಷ್ಟದ ಸಮಯದಲ್ಲಿ ಮಾಪಿಳ್ಳರಿಗೆ ನಾಯಕತ್ವವನ್ನು ನೀಡಿದರು. ಮರಣಾನಂತರ ಅವರ ಮಗ ಸಯ್ಯಿದ್ ಪಝಲ್ (1901) ಅವರ ತಂದೆಯ ಆಧ್ಯಾತ್ಮಿಕ ಸೇವೆಯನ್ನು ಮುಂದುವರೆಸಿದರು ಮತ್ತು ಸುಧಾರಣೆಯ ಯುಗವನ್ನು ಪ್ರಾರಂಭಿಸಿದರು. ಬಾ-ಅಲವಿಗಳೊಂದಿಗೆ ಪೊನ್ನಾನಿಯ ಮಖ್ದೂಂಗಳು ಮತ್ತು ಮಲಬಾರಿನ ಹೆಸರಾಂತ ಉಲಮಾಗಳಾದ ವೆಳಿಯಂಕೋಡ್‌ ಉಮರ್ ಖಾಝಿ ಮತ್ತು ಪರಪ್ಪನಂಗಾಡಿಯ ಔಕೋಯ ಮುಸ್ಲಿಯಾರ್, ಸಯ್ಯಿದ್ ಅಲವಿ ಮತ್ತು ಅವರ ಪುತ್ರನ ಸುಧಾರಣಾ ಪ್ರಯತ್ನಕ್ಕೆ ಸಕ್ರಿಯವಾಗಿ ಸಹಾಯ ಮಾಡಿದರು. ದಕ್ಷಿಣ ಮಲಬಾರ್‌ನಲ್ಲಿ ಹಲವಾರು ಮಸೀದಿಗಳನ್ನು ಅವರ ಆಜ್ಞೆಯ ಮೇರೆಗೆ ನಿರ್ಮಿಸಲಾಯಿತು.

ಹತ್ತೊಂಬತ್ತನೇ ಶತಮಾನದಲ್ಲಿ ಬಾ-ಅಲವಿ ಪಥಕ್ಕೆ ಸಂಬಂಧಪಟ್ಟ ಧಾರ್ಮಿಕ ಆಚರಣೆಗಳು ಮತ್ತು ಭಕ್ತಿಗೀತೆಗಳು ಮಾಪಿಳ್ಳರಲ್ಲಿ ಸಾಮಾನ್ಯವಾದವು. ಅಬ್ದುಲ್ಲಾ ಅಲವಿ ಅಲ್-ಹದ್ದಾದ್ ವಿರಚಿತ ಹದ್ದಾದ್ ರಾತೀಬು ಮತ್ತು ಕುತುಬಿಯ್ಯತ್ ಅವುಗಳ ಪೈಕಿ ಪ್ರಮುಖವಾದುದು. ಬಾ-ಅಲವಿಗಳ ಸಂಪ್ರದಾಯವಾಗಿರುವುದರಿಂದ ಹದ್ದಾದ್ ರಾತೀಬ್ ಮಾಪಿಳ್ಳ ಮುಸ್ಲಿಮರಲ್ಲಿ ವ್ಯಾಪಕವಾಗಿ ರೂಢಿಯಾಯಿತು. ಮಾಲಾ ಮತ್ತು ಮೌಲಿದ್ ಪಠಣಗಳಂತಹ ಆಚರಣೆಗಳು ಸಮುದಾಯಕ್ಕೆ ಏಕತೆಯ ಭಾವನೆಯನ್ನು ಒದಗಿಸಿದವು. ‘ನೇರ್ಚ’ ಮುಂತಾದ ಮಾಪಿಳ್ಳ ಸಮಾರಂಭಗಳು ಸಹ ಸಮುದಾಯಕ್ಕೆ ಒಗ್ಗಟ್ಟನ್ನು ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿತು. ನೇರ್ಚಾಗಳನ್ನು ಸಾಮಾನ್ಯವಾಗಿ ಸೂಫಿಗಳು ಮತ್ತು ಔಲಿಯಾ ಹುತಾತ್ಮರನ್ನು (ಶುಹದಾಗಳ) ಸ್ಮರಿಸಲು ನಡೆಸಲಾಗುತ್ತಿತ್ತು. ಸ್ಮರಣಾರ್ಥವು ಸ್ಥಳೀಯ ಹುತಾತ್ಮರನ್ನು ಮಾತ್ರವಲ್ಲದೆ ಬದ್ರ್ ಮತ್ತು ಕರ್ಬಲಾದಲ್ಲಿ ನಡೆದಂತಹ ಇಸ್ಲಾಮಿಕ್ ಯುದ್ಧಗಳಲ್ಲಿ ಹುತಾತ್ಮರಾದವರನ್ನು ಸಹ ಒಳಗೊಂಡಿತ್ತು.

ಸೂಫೀ ತತ್ತ್ವಗಳ ಆಕರ್ಷಣೆಯು ಮಲಬಾರಿನಲ್ಲಿ ಮತಾಂತರ ಹೆಚ್ಚಳಕ್ಕೆ ಕಾರಣವಾಯಿತು. ಆದರೆ ಏಕಾಏಕಿ ಮತಾಂತರಕ್ಕೆ ಯಾವುದೇ ರೀತಿಯ ಪ್ರೋತ್ಸಾಹ ನೀಡಲ್ಪಟ್ಟಿಲ್ಲ. ಅನೇಕ ಹಿಂದೂ ಹಿಡುವಳಿದಾರರು ಜಾತಿ ದೌರ್ಜನ್ಯದಿಂದ ಮುಕ್ತರಾಗಲು ಇಸ್ಲಾಮಿನಲ್ಲಿ ಆಶ್ರಯ ಪಡೆದರು. ಇಸ್ಲಾಮಿಗೆ ಮತಾಂತರಗೊಂಡ ನಂತರ ಅವರು ತಮ್ಮ ಬಂಡಾಯದಲ್ಲಿ ಮಾಪಿಳ್ಳರೊಂದಿಗೆ ಸೇರಿಕೊಂಡರು. ಹೊಸ ಮತಾಂತರಗಳು ಯಾವಾಗಲೂ ಮಾಪಿಳ್ಳ ರೈತರ ಬಂಡಾಯಗಳ ಬೆನ್ನೆಲುಬಾಗಿದ್ದವು. ತಂಙಳ್‌ಗಳ ವ್ಯಕ್ತಿತ್ವ ಮತ್ತು ಆಧ್ಯಾತ್ಮಿಕ ಜ್ಞಾನವು ಆಶೀರ್ವಾದಕ್ಕಾಗಿ ಅವರನ್ನು ಸಂಪರ್ಕಿಸಿದ ಅನೇಕ ಹಿಂದೂಗಳ ಹೃದಯವನ್ನು ಗೆದ್ದಿತು ಮತ್ತು ಅನೇಕರು ಇಸ್ಲಾಂ ಧರ್ಮವನ್ನು ಅವರ ಸನ್ನಿಧಿಗಳಲ್ಲಿ ಸ್ವೀಕರಿಸಿದರು. ಮತಾಂತರಗಳಿಂದಾಗಿ ಸಮುದಾಯದ ಬಲವು ಹೆಚ್ಚಾಗುವುದರೊಂದಿಗೆ ಇದು ಬಂಡಾಯಗಳಿಗೆ ಸಾಕಷ್ಟು ಮಾನವ ಶಕ್ತಿಯನ್ನು ಒದಗಿಸಿತು.

ಇಪ್ಪತ್ತು ವರ್ಷಗಳ ಹಿಂದೆ ಕ್ರಿಮಿನಲ್ ನ್ಯಾಯಾಲಯದ ನ್ಯಾಯಾಧೀಶರಾದ ಟಿ.ಹೆಚ್. ಬಾಬರ್ ಅವರು ಮತಾಂತರವನ್ನು ಸಂಪೂರ್ಣವಾಗಿ ಕಾನೂನುಬಾಹಿರಗೊಳಿಸುವುದು ಉತ್ತಮ ಎಂದು ಸೂಚಿಸಲು ಪ್ರೇರೇಪಿಸಿದ ಹಿಂದಿರುವ ಸಬಬುಗಳಲ್ಲಿ ಇದೂ ಒಂದಾಗಿದೆ. ಆದರೆ ಸರ್ಕಾರ ಅವರ ಸಲಹೆಯನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ವಿರೋಧಾಭಾಸವೆಂದರೆ, ಆರಂಭಿಕ ವರ್ಷಗಳಲ್ಲಿ ಹಿಂದೂಗಳ ಮತ್ತು ಕೆಳಜಾತಿಯ ಹಿಡುವಳಿದಾರರ ಮತಾಂತರಕ್ಕೆ ಯಾವುದೇ ಗಂಭೀರ ಆಕ್ಷೇಪಣೆ ವ್ಯಕ್ತಪಡಿಸಲಿಲ್ಲ. ಅನೇಕ ಉಲಮಾಗಳು ವಿದ್ವತ್ಪೂರ್ಣ ಕೃತಿಗಳನ್ನು ರಚಿಸಿದ್ದಾರೆ. ಅದು ಇಂದಿಗೂ ಧರ್ಮ ಮತ್ತು ತತ್ವಶಾಸ್ತ್ರದ ಕ್ಷೇತ್ರದಲ್ಲಿ ಮಾಪಿಳ್ಳ ಸಮುದಾಯಕ್ಕೆ ಮಾರ್ಗದರ್ಶನ ನೀಡುತ್ತದೆ. ಸಯ್ಯಿದ್ ಫಝಲ್ ಮತ್ತು ಅವರ ಸಮಕಾಲೀನರಾದ ಉಮರ್ ಖಾಝಿ, ಮರಕ್ಕರಕತ್ ಔಕೋಯ ಮುಸ್ಲಿಯಾರ್ ಮತ್ತು ಸಯ್ಯಿದ್ ಫಕ್ರುದ್ದೀನ್ ಅವರು ಈ ಅವಧಿಯ ಪ್ರಸಿದ್ಧ ಲೇಖಕರು. ಸಯ್ಯದ್ ಫಝಲ್ ಅವರು ಹತ್ತು ಪ್ರಮುಖ ಕೃತಿಗಳನ್ನು ರಚಿಸಿದ್ದಾರೆ.

ಮಲಬಾರಿನಲ್ಲಿ ಶೈಖ್ ಜಿಫ್ರಿ ಮತ್ತು ಅವರ ಅನುಯಾಯಿಗಳು ಕಲ್ಲಿಕೋಟೆಯ ಬಳಿಯ ಕೊಂಡೊಟ್ಟಿಯಲ್ಲಿ ನೆಲೆಸಿದ್ದ ಫಕೀರ್ ಎಂದು ಕರೆಯಲ್ಪಡುವ ಮುಹಮ್ಮದ್ ಷಾ ಬೋಧಿಸಿದ ಸೂಫಿ ಆಶಯವನ್ನು ಎದುರಿಸಬೇಕಾಯಿತು. ಮುಹಮ್ಮದ್ ಷಾ ಹಳರಮಿ ಆಗಿರಲಿಲ್ಲ ಮತ್ತು ಅವರ ಪೂರ್ವಜರು ಪರ್ಷಿಯಾಕ್ಕೆ ಸೇರಿದವರು. ಟಿಪ್ಪು ಸುಲ್ತಾನ್ ಮಲಬಾರನ್ನು ವಶಪಡಿಸಿಕೊಂಡಾಗ ಕೆಲವು ಮುಸ್ಲಿಂ ವಿದ್ವಾಂಸರು ಫಕೀರ್ ಮತ್ತು ಅವರ ಉತ್ತರಾಧಿಕಾರಿಯ ಧರ್ಮದ್ರೋಹಿ ನಂಬಿಕೆಗಳ ಬಗ್ಗೆ ದೂರು ನೀಡಿದರು. ಅಲ್ಲಿ ಸುಲ್ತಾನನು ಅವರನ್ನು ತನ್ನ ಸನ್ನಿಧಿಗೆ ಕರೆತಂದು ಫಕೀರನೊಂದಿಗೆ ಮುಸ್ಲಿಂ ವಿದ್ವಾಂಸರಿಂದ ತನಿಖೆ ನಡೆಸಿದರು. ಫಕೀರ್ ತನ್ನ ಮೇಲಿನ ಆರೋಪಗಳನ್ನು ನಿರಾಕರಿಸಿ ತಾನು ನೈಜ ನಂಬಿಕೆಯಲ್ಲಿ ಇದ್ದೇನೆ ಎಂದು ಪ್ರತಿಪಾದಿಸಿದನು ಮತ್ತು ತಾನು ಸೂಫಿಸಮಿನ ಖಾದಿರಿ ಕ್ರಮವನ್ನು ಅನುಸರಿಸಿದವನು ಎಂದು ಹೇಳಿ ಸುಲ್ತಾನನ ಮುಂದೆ ಒಂದು ಕವಿತೆಯನ್ನು ಓದಿದನು. ಅದು ಈ ಕೆಳಗಿನ ಸಾರವನ್ನು ಹೊಂದಿದೆ: “ಇಸ್ಲಾಂ ನನ್ನ ಧರ್ಮ, ಮುಹಮ್ಮದ್ ನನ್ನ ಪ್ರವಾದಿ, ಖುರ್‌ಆನ್ ನನ್ನ ಮಾರ್ಗದರ್ಶಕ ಮತ್ತು ಕರಮ್ ಅಲೀ ನನ್ನ ಶೈಖ್. ನಾನು ಶೈಖ್ ಮುಯಿನುದ್ದೀನ್ ಚಿಶ್ತಿ ಮತ್ತು ಅಬ್ದುಲ್ ಖಾದಿರ್ ಜೀಲಾನಿಯವರ ಆದರ್ಶಗಳನ್ನು ಮೈಗೂಡಿಸಿಕೊಂಡವನು.” ಟಿಪ್ಪು ಸುಲ್ತಾನ್ ಫೆರೋಕ್‌ನಲ್ಲಿ ತನ್ನ ಪ್ರಧಾನ ಕಛೇರಿಯನ್ನು ನಿರ್ಮಿಸುತ್ತಿದ್ದಾಗ ಅಲ್ಲಿ ಸೂಫಿಗಳು ಮತ್ತು ಉಲಮಾಗಳನ್ನು ಆಹ್ವಾನಿಸಿದ ಮತ್ತು ತನ್ನ ಹೊಸ ಯೋಜನೆಗಳ ಯಶಸ್ಸಿಗಾಗಿ ಪ್ರಾರ್ಥಿಸಲು ವಿನಂತಿಸಿದರು. ಅವರು ಮುಹಮ್ಮದ್ ಷಾನನ್ನು ಇನಾಂದಾರನನ್ನಾಗಿ ಮಾಡಿದರು ಮತ್ತು ಅವನಿಗೆ ತೆರಿಗೆ ಮುಕ್ತವಾಗಿ ಭೂಮಿಯನ್ನು ನೀಡಿದರು. ಫಕೀರನ ಬ್ರಿಟೀಷರೊಂದಿಗಿನ ನಂಟು ಮತ್ತು ಶಿಯಾ ಆಚರಣೆಗಳು ಬಹುಪಾಲು ಉಲಮಾಗಳಲ್ಲಿ ದ್ವೇಷವನ್ನು ಉಂಟುಮಾಡಿತು. ಆದ್ದರಿಂದ, ಅವರು ಫಕೀರ್ ಮತ್ತು ಅವನ ಶಿಷ್ಯಂದಿರನ್ನು ಧರ್ಮದ್ರೋಹಿಗಳೆಂದು ಪ್ರಚಾರ ಪಡಿಸಿದರು.

ಹಲವಾರು ಮಾಪಿಳ್ಳಾಗಳು ಜಿಫ್ರಿಯವರ ಆದೇಶದ ಮೇರೆಗೆ ಅವರ ಸಂದೇಶವನ್ನು ಉತ್ತರದಿಂದ ದಕ್ಷಿಣ ಮಲಬಾರಿ‌ಗೆ ಹರಡಿದರು. ಅವರ ಮುರೀದರುಗಳಲ್ಲಿ ಪ್ರಖ್ಯಾತ ಉಲಮಾಗಳು ಮತ್ತು ಸಯ್ಯಿದ್‌ಗಳಿದ್ದರು. ಅವರು ಮಲಬಾರಿ‌ನ ಪೊನ್ನಾನಿಯ ಮುಸ್ಲಿಂ ವಿದ್ವಾಂಸರಾದ ಮಖ್ದೂಮ್‌ಗಳೊಂದಿಗೆ ನಿಕಟ ಸಂಬಂಧವನ್ನು ಹೊಂದಿದ್ದರು. ಜಿಫ್ರಿಗಳಂತೆ ಮಖ್ದೂಮ್‌ಗಳು ಸಹ ದಕ್ಷಿಣ ಅರೇಬಿಯಾದಿಂದ ವಲಸೆ ಬಂದವರು. ಇದಲ್ಲದೆ ‘ಅಬ್ದುರಹ್ಮಾನ್ ಹೈದ್ರೂಸ್’ ಅವರ ಶಿಷ್ಯ ಸಂಬಂಧಿ ಮತ್ತು ಹಳರಮೌತಿನ ಸ್ಥಳೀಯರು ಮಖ್ದೂಮ್‌ಗಳ ಕುಟುಂಬದಿಂದ ವಿವಾಹವಾಗುವ ಮೂಲಕ ಮಾಪಿಳ್ಳರ ಜೊತೆ ಹೆಚ್ಚಿನ ನಂಟು ಬೆಳೆಸಿದರು. ಪೊನ್ನಾನಿಯಲ್ಲಿ ಅಧ್ಯಯನ ಮಾಡಿದ ಮಖ್ದೂಮ್‌ಗಳು ಮತ್ತು ಉಲಮಾಗಳು ಸಯ್ಯಿದ್ ಜಿಫ್ರಿಯನ್ನು ತಮ್ಮ ಆಧ್ಯಾತ್ಮಿಕ ನಾಯಕನನ್ನಾಗಿ ಸ್ವೀಕರಿಸಿದರು. ಮಾಪಿಳ್ಳಗಳ ಧಾರ್ಮಿಕ ಚಟುವಟಿಕೆಗಳ ಕೇಂದ್ರವಾಗಿದ್ದ ಪೊನ್ನಾನಿಯ ಉಲಮಾಗಳ ಮೂಲಕ ಜಿಫ್ರಿಯವರ ಸಂದೇಶವು ಮಲಬಾರಿನ ಮೂಲೆ ಮೂಲೆಗಳನ್ನು ತಲುಪಿತು.

ಸಯ್ಯಿದ್ ಜಿಫ್ರಿಯವರ ಸೂಫೀ ಮಾರ್ಗವನ್ನು ಮಲಬಾರಿನಲ್ಲಿ ಅವರ ಸೋದರಳಿಯ ಸಯ್ಯಿದ್ ಅಲವಿ ಅವರು ಜನಪ್ರಿಯಗೊಳಿಸಿದರು. ಜಿಫ್ರಿ ಅವರು ಹಲವಾರು ವಿದ್ವತ್ಪೂರ್ಣ ಕೃತಿಗಳನ್ನು ರಚಿಸಿದ್ದಾರೆ. ಅವುಗಳಲ್ಲಿ ಕನ್ಝ್-ಅಲ್ ಬರಾಹಿನ್, ಕೌಕಬ್-ಅಲ್ ದುರ್ರಿಯಾ, ಅಲ್ ನತೀಜ ಮತ್ತು ಅಲ್ ಕುರ್ಬತ್ ವಲ್ ಅಸ್ರಾರ್ ಪ್ರಮುಖವಾಗಿವೆ. 1807 ರಲ್ಲಿ (ದುಲ್-ಕಅದ್ ಎಂಟು) ತಮ್ಮ ಎಂಬತ್ತಮೂರನೆಯ ವಯಸ್ಸಿನಲ್ಲಿ ಶೈಖ್ ಜಿಫ್ರಿ ನಿಧನ ಹೊಂದಿದರು. ನಂತರ ಅವರನ್ನು ಮಲಿಯಕ್ಕಲ್ ಮನೆಯ ಬಳಿ ಸಮಾಧಿ ಮಾಡಲಾಯಿತು. ಶೈಖ್ ಜಿಫ್ರಿಯವರು ಒಮ್ಮೆ ಕೊಂಡೊಟ್ಟಿಯಲ್ಲಿನ ಫಕೀರನನ್ನು ಭೇಟಿಯಾಗುತ್ತಾರೆ. ಸತತ ಅನ್ವೇಷಣೆಯ ಬಳಿಕ ಅವನೊಬ್ಬ ಶಿಯಾ ಪಂಗಡಕ್ಕೆ ಸೇರಿದವನು ಎಂದು ದೃಢಪಡಿಸಿಕೊಂಡರು. ಆದರೆ, ಅವನು ತನಗೆ ಶಿಯಾ ಪಂಗಡದೊಂದಿಗೆ ಯಾವದೇ ಸಂಬಂಧ ಇಲ್ಲವೆಂದು ಕಟುವಾಗಿ ನಿರಾಕರಿಸಿದನು. ಸ್ವತಃ ಶಾಫಿ ಸುನ್ನಿ ಎಂದು ಹೇಳಿಕೊಂಡನು. ತನ್ನ ಕನ್ಝ್-ಅಲ್ ಬರಾಹಿನ್ ನಲ್ಲಿ ಶೈಖ್ ಜಿಫ್ರಿ ‘ಮುಹಮ್ಮದ್ ಷಾ’ನನ್ನು ಹುಸಿ-ಸೂಫಿ ಎಂದು ಘೋಷಿಸುತ್ತಾರೆ. “ತಪ್ಪು ದಾರಿಯಲ್ಲಿ ಚಲಿಸುವ ಮತ್ತು ಇತರರನ್ನು ದಾರಿ ತಪ್ಪಿಸುವ, ನಮಾಝ್ ಮತ್ತು ಹಜ್ಜನ್ನು ನಿರುತ್ಸಾಹಗೊಳಿಸುವ, ಜನರು ದೈವಸ್ಮರಣೆ ಮಾಡುವುದನ್ನು ತಡೆಯುವ ಮತ್ತು ಪುರುಷರನ್ನು ಮುಕ್ತವಾಗಿ ಮಹಿಳೆಯರೊಂದಿಗೆ ಬೆರೆಯುವುದನ್ನು ಅನುಮತಿಸುವ” ಮುಂತಾದ ಅವನ ಅಧಾರ್ಮಿಕ ಮತ್ತು ಧರ್ಮದ್ರೋಹಿ ಚಟುವಟಿಕೆಗಳನ್ನು ಜಿಫ್ರಿ ಎತ್ತಿ ತೋರಿಸಿದರು.

ಔದಿಲಿಚ್ಚಿ ಮುಸ್ಲಿಯಾರ್ ಎಂದು ಪ್ರಸಿದ್ಧರಾದ ಖಾಜಿ ಅಬ್ದುಲ್ ಅಝೀಝ್ ಶೈಖ್ ಜಿಫ್ರಿಯನ್ನು ಟೀಕಿಸಿ ಫಕೀರನನ್ನು ಸಮರ್ತಿಸಿದರು. ಖ್ಯಾತ ಮುಸ್ಲಿಂ ನ್ಯಾಯಶಾಸ್ತ್ರಜ್ಞರಾದ ಇಮಾಮ್ ಶಾಫಿ ಅವರ ಹೇಳಿಕೆಯನ್ನು ಉಲ್ಲೇಖಿಸಿ, ಅಬ್ದುಲ್ ಅಝೀರವರು ಕರ್ಮಶಾಸ್ತ್ರದ ವ್ಯಾಪ್ತಿಯಿಂದ ಹೊರಗೆ ಚಲಿಸುವ ಸೂಫಿಗಳ ಕ್ರಮಗಳು ಮತ್ತು ವಿಧಾನಗಳೊಂದಿಗೆ ದೇವತಾಶಾಸ್ತ್ರಜ್ಞರಿಗೆ (theologian) ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ. ಆದರೆ ಶೈಖ್ ಜಿಫ್ರಿಯವರು ಅಬ್ದುಲ್ ಅಝೀಝ್ ರವರ ಹೇಳಿಕೆಗಳಲ್ಲಿನ ಪ್ರಮಾದಗಳು ಮತ್ತು ದೋಷಗಳನ್ನು ಹೊರತಂದು ಫಕೀರ್ ಅಳವಡಿಸಿಕೊಂಡ ವಿಧಾನಗಳು ಇಸ್ಲಾಮ್ ಮತ್ತು ಸೂಫಿಗಳು ಸೇರಿದಂತೆ ಎಲ್ಲಾ ಮುಸ್ಲಿಮರು ಹೊಂದಿರುವ ಶರೀಅತ್ತಿಗೆ ವಿರುದ್ಧವಾಗಿವೆ ಎಂದು ಪ್ರತಿಪಾದಿಸಿದರು. ಶೈಖ್ ಜಿಫ್ರಿಯವರು ಫಕೀರ್ ಮತ್ತು ಅವನ ಅನುಯಾಯಿಗಳ ಇಸ್ಲಾಮಿಕ್ ಆಚರಣೆಗಳನ್ನು ಈ ರೀತಿ ವರ್ಣಿಸುತ್ತಾರೆ:

“ಓಹ್, ಹಶಿಶ್ ಅನ್ನು ಧೂಮಪಾನ ಮಾಡುವ ಜನರು, ಯಾವಾಗಲೂ ದೇವರ ಮನೆಯನ್ನು ನಿರ್ಲಕ್ಷಿಸುತ್ತಾರೆ, ಪ್ರಾರ್ಥನೆ ಮತ್ತು ಉಪವಾಸವನ್ನು ತ್ಯಜಿಸಿ, ದೇವರು ಕಡ್ಡಾಯಗೊಳಿಸಿದ್ದನ್ನು ತಿರಸ್ಕರಿಸಿ, ಮಾತುಕತೆಗಳಲ್ಲಿ ಮತ್ತು ಕಾರ್ಯಗಳಲ್ಲಿ ಅವರು ಮಿತಿಗಳನ್ನು ಮೀರುತ್ತಾರೆ ಮತ್ತು ಜನರಲ್ಲಿ ತೊಂದರೆಗಳನ್ನು ಸೃಷ್ಟಿಸುತ್ತಾರೆ. ಕೊನೆಗೆ ಅವರು ಶೈತಾನನನ್ನು ಅಪ್ಪಿಕೊಳ್ಳುತ್ತಾರೆ. ಧರ್ಮದ್ರೋಹಿ ಫಕೀರ್ ಅನ್ನು ಅನುಸರಿಸದಿರಿ ಅವನು ಜನರನ್ನು ದಾರಿ ತಪ್ಪಿಸುತ್ತಿದ್ದಾನೆ. ಅವರು ತಮ್ಮ ತಪ್ಪುಗಳಿಗಾಗಿ ಪಶ್ಚಾತ್ತಾಪ ಪಡದಿದ್ದರೆ ದೊಡ್ಡ ವಿನಾಶವನ್ನು ಕಾಣುವರು” ಎಂದು ಎಚ್ಚರಿಸಿದರು.

ಶೈಖ್ ಜಿಫ್ರಿಯವರು ಖುರ್‌ಆನ್ ಮತ್ತು ಪ್ರವಾದಿ ಮುಹಮ್ಮದ್ (ಸ.ಅ) ರ ಸಂಪ್ರದಾಯವನ್ನು ನಿರ್ಲಕ್ಷಿಸಿದಕ್ಕಾಗಿ ಪ್ರಮುಖ ಖಾಜಿಯನ್ನು ಸಹ ಟೀಕಿಸುತ್ತಾರೆ. ಮುಹಮ್ಮದ್ ಷಾ ಮತ್ತು ಅವನ ಸೂಫಿ ಪದ್ಧತಿಗಳ ವಿರುದ್ಧ ತೀರ್ಪು ನೀಡಿದ ಉಲಮಾಗಳು ಇತರ ಆಚರಣೆಗಳೊಂದಿಗೆಅವನು ಶಿಯಾ ಪದ್ಧತಿಗಳನ್ನು ಅನುಸರಿಸಿದವನು ಎಂದು ಎತ್ತಿ ತೋರಿಸಿದರು.

ಮಂಬುರಮಿನ ಸಯ್ಯಿದ್ ಅಲವಿ ಯವರು ಷಾ ರನ್ನು ಬೋಹ್ರಾ ಪಂಗಡಕ್ಕೆ ಸೇರಿದ ಶಿಯಾ ಎಂದು ಚಿತ್ರಿಸಿದ್ದಾರೆ. ಅವರು ಹೇಳುತ್ತಾರೆ: “ಪಠಾಣರಲ್ಲಿ ಸುನ್ನಿಗಳಿಗೆ ಸೇರಿದ ನಾಲ್ಕು ಗುಂಪುಗಳಿವೆ; ಶೇಖ್‌ಗಳು, ಸಯ್ಯಿದರುಗಳು, ಮೊಘಲರು ಮತ್ತು ಪಠಾಣರು. ಕೊಂಡೊಟ್ಟಿ ಫಕೀರ್ ಈ ಯಾವುದೇ ಗುಂಪುಗಳಿಗೆ ಸೇರಿದವನಲ್ಲ, ಆದರೆ ಅವನು ರಾಫಿಳೀ ಎಂಬ ತೀವ್ರವಾದ ಧರ್ಮದ್ರೋಹಿ ಶಿಯಾ ಗುಂಪಿನ ಅಡಿಯಲ್ಲಿ ಬರುವ ಬೋಹ್ರಾ ಪಂಗಡಕ್ಕೆ ಸೇರಿದವನು” ಎಂದು ಫಕೀರನನ್ನು ರಾಫಿಳಿ ಮತ್ತು ಬೋಹ್ರಾ ಪಂಥದ ಶಿಯಾ ಎಂದು ಕರೆದರು. ಮಂಬುರಮಿನ ಸಯ್ಯಿದ್ ಅಲವಿ ಉಲ್ಲೇಖಿಸುತ್ತಾರೆ “ಪ್ರವಾದಿ ಮುಹಮ್ಮದ್ ಮತ್ತು ಅವರ ಮೂವರು ಖಲೀಫರಾದ – ಅಬೂಬಕ್ಕರ್, ಉಮರ್ ಮತ್ತು ಉಸ್ಮಾನ್ ಅವರ ಮಾದರಿಗಳನ್ನು ತಯಾರಿಸುವ ಪದ್ಧತಿಗಳು ಶಿಯಾಗಳೆಡೆಯಲ್ಲಿ ಹೇಗಿತ್ತೆಂದರೆ, ನಾಲ್ಕು ಕುಳಿಯನ್ನು ತಯಾರಿಸಲಾಗುತ್ತದೆ ಮತ್ತು ಅವುಗಳಲ್ಲಿ ಜೇನುತುಪ್ಪವನ್ನು ಸುರಿಸಲಾಗುತ್ತದೆ. ಇನ್ನಿತರ ಸ್ವಹಾಬಿಗಳು ಅಲೀಯಿಂದ ಪ್ರವಾದಿತ್ವವನ್ನು ಕಸಿದುಕೊಂಡರು ಎಂದು ಭಾವಿಸಿ ನಂತರ ಅವರು ಅದನ್ನು ಒಡೆದು ಪ್ರವಾದಿ ಮತ್ತು ಖಲೀಫರ ರಕ್ತವನ್ನು ಹೀರುವಂತೆ ಜೇನುತುಪ್ಪವನ್ನು ಹೀರುತ್ತಾರೆ.” ಪ್ರಮುಖ ರಾಫಿಳಿಗಳಾದ ಸಬ್ಬಾಹ್, ಇಬ್ನ್ ಸಮಾ, ಮುಗೀರಾ ಬಿ , ಸೈದ್ ಮತ್ತು ಅಬೀ ಖತ್ತಾಬ್ ಅಲ್ ಅಸದಿ ಶೈಖನ ಮುಂದೆ ಸಾಷ್ಟಾಂಗ ನಮಸ್ಕಾರವನ್ನು ಮಾಡಲು ಶಿಫಾರಸ್ಸು ಮಾಡಿದರು.

ಫಕೀರ್ ವಿರುದ್ಧ ಬಾ ಅಲವಿಗಳು , ಮಕ್ದೂಮ್ ಗಳು ಮತ್ತು ಮಲಬಾರಿ‌ನ ಉಲಮಾಗಳ ಜಂಟಿ ಟೀಕೆಗಳು ಅವನ ಚಟುವಟಿಕೆಗಳ ಮೇಲೆ ಪರಿಣಾಮ ಬೀರಿತು. ಆದರೂ, ಹೆಚ್ಚಿನ ಸಂದರ್ಭಗಳಲ್ಲಿ ಬ್ರಿಟಿಷ್ ಅಧಿಕಾರಿಗಳು ಅವನಿಗೆ ಸಹಾಯ ನೀಡಿದರು. ನಂತರ ಫಕೀರ‌ನ ಉತ್ತರಾಧಿಕಾರಿಗಳು ಮಕ್ದೂಮ್‌ಗಳ ಅಡಿಯಲ್ಲಿ ಉಲಮಾಗಳೊಂದಿಗೆ ರಾಜಿ ಮಾಡಿಕೊಂಡು ಸರ್ವ ಇಸ್ಲಾಮೇತರ ಆಚರಣೆಗಳ ಖಾನ್’ಕಾಹನ್ನು ತೆರವುಗೊಳಿಸಿದರು. ಆ ಮೂಲಕ ಮಲಬಾರಿನ ಧಾರ್ಮಿಕ ಕ್ಷೇತ್ರದಲ್ಲಿ ಹಳರಮಿಗಳ ಪ್ರಾಬಲ್ಯವು ಹೆಚ್ಚಾಯಿತು. ಮಲಬಾರಿನ ಧಾರ್ಮಿಕ ವಿಚಾರಗಳಲ್ಲಿ ಬಾ-ಅಲವಿ ಸಂಪ್ರದಾಯವನ್ನು ಇಂದಿಗೂ ಅನುಸರಿಸಲಾಗುತ್ತಿದೆ. ಹೆಚ್ಚಾಗಿ ಸಯ್ಯಿದ್ ಸಮುದಾಯವು ಧಾರ್ಮಿಕ-ರಾಜಕೀಯ ವ್ಯವಹಾರಗಳಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಿದೆ. ಮಧ್ಯ ಏಷ್ಯಾದ ಬುಖಾರ ಪ್ರದೇಶದಿಂದ ಬಂದ ಬುಖಾರಿ ಮನೆತನದವರು ಬಾ-ಅಲವಿಗಳ ಮಾರ್ಗವನ್ನು ಅನುಸರಿಸುತ್ತಾರೆ ಹಾಗೂ ಎಲ್ಲಾ ಪ್ರಮುಖ ಕ್ಷೇತ್ರಗಳಲ್ಲಿ ಈ ಸಯ್ಯಿದರು‌ಗಳ ಹಿಡಿತವು ಇನ್ನೂ ದೃಢವಾಗಿ ಉಳಿದಿದೆ.

ಇಂಗ್ಲಿಷ್‌ ಮೂಲ: ಡಾ. ಹುಸೈನ್ ರಂಡತ್ತಾನಿ
ಕನ್ನಡಕ್ಕೆ: ತಂಶೀರ್ ಉಳ್ಳಾಲ್

Leave a Reply

*