ಭಾಗ-3
ನಾನು ಅಲ್ಲಿಂದ ಎದ್ದು, ಮುಂದೆ ಸಾಗಿದೆ. ಸಯ್ಯದ್ ರಜಿ಼ಯ ನಿವಾಸದ ಮುಖ್ಯದ್ವಾರದ ಬಳಿ ದೊಡ್ಡ ಹಳದಿ ನಾಯಿಯೊಂದು ನಿಂತಿರುವುದನ್ನು ಅಲ್ಲಿಂದ ಸಾಗುವಾಗ ಕಂಡೆ. ಈ ಹಳದಿ ನಾಯಿಯು ಶೇಖ್ ಹಮ್ಜಾನ ಭವನದ ಎದುರು ಸಹ ನಿಂತಿದ್ದು ನೋಡಿದ್ದೆ. ಅಬು ಜಾಫರ್ ಶಿರಾಜಿಯ ಮನೆಯ ಮುಂದೆ ಮಲಗಿಕೊಂಡಿದ್ದು ಕಂಡೆ ಹಾಗೂ ಅಬು ಮುಸ್ಲಿಂ ಬಾಗ್ದಾದಿಯ ಮಹಲಿನಲ್ಲಿ ಬಾಲ ಮುದುರಿಕೊಂಡು ನಿಂತದ್ದು ಕಂಡೆ. ಆಗ ನಾನುಡಿದೆ., ಹೇ ಶೇಖರೇ, ನಿಮ್ಮ ಅನುಯಾಯಿಗಳು ಹಳದಿ ನಾಯಿಯ ಆಶ್ರಯದಲ್ಲಿದ್ದಾರೆ. ನಾನು ಈ ರಾತ್ರಿ ಮತ್ತೆ ಅಬು ಮುಸ್ಲಿಂ ಬಾಗ್ದಾದಿಯ ಮನೆಗೆ ಹೋದೆ. ಆಗ ನಾನು ಸ್ವಯಂ ನನ್ನನ್ನೇ ಪ್ರಶ್ನಿಸಿದೆ- ‘ಹೇ! ಖಾಸಿಂ ನೀನು ಇಲ್ಲಿ ಏಕೆ ಬಂದಿದೆಯಾ? ಅಬು ಖಾಸಿಂನು ನುಡಿದನು’ ‘ನಾನು ಅಬು ಮುಸ್ಲಿಂ ಬಾಗ್ದಾದಿಗೆ ಶೇಖರ ಪಂಥದ ಆಹ್ವಾನ ನೀಡಲು ಬಂದಿದ್ದೇನೆ.
ಈ ರಾತ್ರಿಯೂ ನಾನು ಹಬೀಬ್ ಬಿನ್ ಯಾಹ್ಯಾ ತಿರ್ಮಿಜಿ಼ಯನ್ನು ಅಬು ಮುಸ್ಲಿಂ ಬಾಗ್ದಾದಿಯ ಭೋಜನಹಾಸಿನ ಮೇಲೆ ಕುಳಿತಿರುವುದನ್ನು ಕಂಡೆ. ಅಬು ಮುಸ್ಲಿಂ ಬಾಗ್ದಾದಿಯು ನನಗೆ ಊಟಕ್ಕೆ ಆಹ್ವಾನಿಸಿದನು. ಆದರೆ ನಾನು ತಂಪಾದ ನೀರಿನಿಂದಲೇ ನನ್ನನ್ನು ಸಂತೃಪ್ತಪಡಿಸಿಕೊAಡೆ. ಹಾಗೂ ನುಡಿದೆ ‘ಹೇ ಅಬು ಮುಸ್ಲಿಂ ಜಗತ್ತು ದಿನವಾಗಿದೆ. ಹಾಗೂ ನಾವು ಅದರಲ್ಲಿ ಉಪವಾಸ ವ್ರತ ಆಚರಿಸುವರಾಗಿದ್ದೇವೆ’. ಇದನ್ನು ಕೇಳಿ ಅಬು ಮುಸ್ಲಿಂ ಬಾಗ್ದಾದಿ ಅತ್ತನು ಹಾಗೂ ಭೋಜನ ಮಾಡಿದನು. ಜತೆಗಿದ್ದ ಹಬೀಬ್ ಬಿನ್ ಯಾಹ್ಯಾ ತಿರ್ಮಿಜಿ಼ಯು ಸಹ ಅತ್ತನು ಹಾಗೂ ಹಬೀಬ್ ಬಿನ್ ಯಾಹ್ಯಾ ಸಹ ಹೊಟ್ಟೆ ತುಂಬಾ ತಿಂದನು.
ತದನAತರ ಮತ್ತೆ ಆ ನರ್ತಕಿ ಬಂದಳು, ನಾನು ಹೊರಡಲನುವಾದೆ. ಆ ನರ್ತಕಿಯ ಹೆಜ್ಜೆಯ ಸಪ್ಪಳ ಹಾಗೂ ಗೆಜ್ಜೆಯ ಧ್ವನಿಯ ನನ್ನನ್ನು ಹಿಂಬಾಲಿಸಿತು. ನಾನು ಕಿವಿಯಲ್ಲಿ ಬೆರಳನ್ನು ಇಟ್ಟುಕೊಂಡು ಮುಂದೆ ಸಾಗಿದೆ.
ಮೂರನೇ ದಿನ ಮತ್ತೇ ನಗರದ ಪ್ರದಿಕ್ಷಣೆ ಮಾಡಿದೆ. ಎರಡು ದಿನಗಳಿಂದ ನಾನು ಯಾವ್ಯಾವ ದೃಶ್ಯಗಳನ್ನು ಕಂಡಿದ್ದೆ, ಅದರಲ್ಲಿ ಯಾವುದೇ ಬದಲಾವಣೆಯನ್ನು ಗ್ರಹಿಸಲಿಲ್ಲ. ರಾತ್ರಿ ಮತ್ತೆ ನಾನು ಅಬು ಮುಸ್ಲಿಂ ಬಾಗ್ದಾದಿಯ ಬಾಗಿಲ ಮುಂದೆ ಹಾಜರಾದೆ. ನಾನು ಅಬು ಮುಸ್ಲಿಂ ಬಾಗ್ದಾದಿಗೆ ಶೇಖರ ಬೋಧನೆಗಳು ಮನವರಿಕೆ ಮಾಡಿಸಲು ಬಂದಿದ್ದೇನೆ ಎಂದು ನನಗೆ ಸ್ಪಷ್ಟವಾಗಿ ನೆನಪಿತ್ತು. ಹೀಗಾಗಿ ನಾನು ನನ್ನನ್ನು ಏನನ್ನೂ ಪ್ರಶ್ನಿಸಿಕೊಳ್ಳಲಿಲ್ಲ. ನೇರವಾಗಿ ಒಳಗೆ ಪ್ರವೇಶಿಸಿದೆ. ಇಂದು ಸಹ ಹಬೀಬ್ ಬಿನ್ ಯಾಹ್ಯಾ ಭೋಜನದ ಹಾಸಿನ ಮೇಲೆ ಹಾಜರಿದ್ದನು. ಅಬು ಮುಸ್ಲಿಂ ಬಾಗ್ದಾದಿಯು ‘ಹೇ ಗೆಳೆಯನೇ, ಭೋಜನವನ್ನು ಸ್ವೀಕರಿಸು’ ಎಂದು ನುಡಿದನು. ಸತತವಾಗಿ ನಾನು ಮೂರು ದಿನಗಳಿಂದ ಊಟ ಮಾಡಿರಲಿಲ್ಲ. ಊಟದ ಹಾಸಿನ ಮೇಲೆ ವಿವಿಧ ಖಾದ್ಯಗಳ ಜತೆಗೆ ಮುಜಾಫರ್ (ಅಕ್ಕಿಯ ಸಿಹಿ ತಿಂಡಿ) ಸಹ ಇತ್ತು. ಒಂದು ಕಾಲಕ್ಕೆ ಅದು ನನ್ನ ಪ್ರಿಯ ಸಿಹಿ ತಿಂಡಿಯಾಗಿತ್ತು. ನಾನು ಒಂದು ತುತ್ತು ಮುಜಾಫರ್ ಕೈಯಲ್ಲಿ ತೆಗೆದುಕೊಂಡು, ಕೈಯನ್ನು ಹಿಂತೆಗೆದುಕೊAಡೆ, ಮತ್ತೆ ತಣ್ಣೀರನ್ನು ಕುಡಿದು ನುಡಿದೆ- ಜಗತ್ತು ಹಗಲಾಗಿದೆ. ಹಾಗೂ ಅದರಲ್ಲಿ ಉಪವಾಸ ವ್ರತ ಆಚರಿಸುವವರಾಗಿದ್ದೇವೆ.
ನನ್ನ ಈ ಮಾತನ್ನು ಕೇಳಿ, ಅಬು ಮುಸ್ಲಿಂ ಬಾಗ್ದಾದಿ ಇಂದು ಅಳುವುದರ ಬದಲು ನೆಮ್ಮದಿಯ ನಿಟ್ಟುಸಿರು ಬಿಟ್ಟನು. ಆ ನರ್ತಕಿ ಮತ್ತೆ ಬಂದಳು ನಾನು ಅವಳೆಡೆ ದೃಷ್ಟಿ ಬೀರಿದೆ. ಚಹರೆ ಕೆಂಪಗಿದ್ದು, ಕೆಂಡದAಥ ಕಣ್ಣುಗಳು ಪಿಂಗಾಣಿ ಪಾತ್ರೆಗಳಂತಿದ್ದು, ಸ್ತನಗಳು ದೃಢವಾಗಿದ್ದು, ತೊಡೆಗಳು ತುಂಬಿಕೊAಡಿದ್ದವು. ಹೊಟ್ಟೆಯು ಶ್ರೀಗಂಧದ ಫಲಕದಂತಿದ್ದು, ನಾಭಿಯು ದುಂಡನೆ ಚಿಕ್ಕ ಮಧು ಪಾತ್ರೆಯಂತಿತ್ತು. ಉಟ್ಟ ಉಡುಪು ಅದೆಷ್ಟು ತೆಳುವಾಗಿತ್ತೆಂದರೆ ಶ್ರೀಗಂಧದ ಫಲಕ, ಹಾಗೂ ದುಂಡನೆ ಚಿಕ್ಕ ಮಧುಪಾತ್ರೆ, ಸೊಂಟ, ಪ್ರಕಾಶಿಸುವ ಮೊಳಕಾಲಿನ ಮೀನಖಂಡ ಎಲ್ಲವೂ ಪಾರದರ್ಶಕವಾಗಿ ಕಾಣುತ್ತಿತ್ತು. ಆಗ ನನಗೆ ಘಮಘಮಿಸುವ ಮುಜಾಫರಿನ ಮತ್ತೊಂದು ತುತ್ತನ್ನು ತೆಗೆದುಕೊಂಡAತೆ ಭಾಸವಾಯಿತು. ನನ್ನ ಬೆರಳುಗಳಲ್ಲಿ ಎಂಥದೋ ಸಂಚಲನ ಉಂಟಾದAತೆ ತೋರಿತು ಹಾಗೂ ಕೈಗಳು ನನ್ನ ನಿಯಂತ್ರಣವನ್ನು ಮೀರುತ್ತಿರುವಂತೆ ಅನಿಸಿತು. ಆಗ ನನಗೆ ಕೈಗಳ ಕುರಿತು ನನ್ನ ಶೇಖರ ಆದೇಶದ ನೆನಪಾಯಿತು. ನಾನು ಗಾಬರಿಗೊಂಡು ಎದ್ದು ನಿಂತೆ, ಅಬು ಮುಸ್ಲಿಂ ಬಾಗ್ದಾದಿಯು ಇಂದು ಊಟ ಮಾಡಿ ಹೋಗು ಎಂದು ಒತ್ತಾಯ ಮಾಡಲಿಲ್ಲ. ಆದರೆ ಆ ರಂಡಿಯ ಕಾಲಿನ ಸಪ್ಪಳ ಹಾಗೂ ಹೆಜ್ಜೆಯ ನಿನಾದವು ಮಧುರ ಅಮಲಾಗಿ ನನ್ನನ್ನು ಬಹುದೂರದವರೆಗೆ ಹಿಂಬಾಲಿಸಿತು.
ಮನೆ ತಲುಪಿ ಒಳಾಂಗಣ ಪ್ರವೇಶಿಸಿದಾಗ ನಾನು ನೋಡುವುದೇನೆಂದರೆ ನನ್ನ ಚಾಪೆಯ ಮೇಲೆ ಹಳದಿ ನಾಯಿ ಮಲಗಿಕೊಂಡಿತ್ತು. ಅದನ್ನು ಕಂಡು ನಾನು ಕಕ್ಕಾಬಿಕ್ಕಿಯಾದೆ ಹಾಗೂ ಸಣ್ಣಗೆ ಬೆವರತೊಡಗಿದೆ. ನಾನು ಅದನ್ನು ಹೊಡೆದೋಡಿಸಲು ಪ್ರಯತ್ನಿಸಿದೆ ಆದರೆ ನಾಯಿಯು ಓಡಿ ಹೋಗುವ ಬದಲು ನನ್ನ ನಿಲುವಂಗಿಯಲ್ಲಿ ಹೊಕ್ಕು ಮಾಯವಾಯಿತು. ಆಗ ನನಗೆ ಆ ಶಂಕೆಗಳು ಹಾಗೂ ಭ್ರಮೆಗಳು ಸುತ್ತುವರಿದವು. ನನ್ನ ಕಣ್ಣುಗಳಿಂದ ನಿದ್ರೆ ಮಾಯವಾಯಿತು. ಹಾಗೂ ಮನಶ್ಯಾಂತಿ ಕದಡಿ ಹೋಯಿತು. ನಾನು ಅರ್ತನಾಗಿ ಪ್ರಾರ್ಥಿಸಿದೆ. ‘ಹೇ ನನ್ನ ಆರಾಧ್ಯನೇ, ನನ್ನ ಮೇಲೆ ಕೃಪೆ ತೋರು. ನನ್ನ ಹೃಯದವು ಪ್ರಲೋಭನೆಗಳಲ್ಲಿ ಸಿಲುಕಿಕೊಂಡಿದೆ. ನನ್ನಲ್ಲಿ ಹಳದಿ ನಾಯಿಯು ಆವರಿಸಿದೆ ನನ್ನ ಮನಸ್ಸಿಗೆ ನೆಮ್ಮದಿ ಬರಲಿಲ್ಲ. ತತ್ಕ್ಷಣವೇ ನನಗೆ ಅಬು ಅಲಿ ರೂದ್ಬಾರಿಯವರು ನೆನಪಿಗೆ ಬಂದರು ಯಾಕೆಂದರೆ ಅವರು ತಮ್ಮ ಜೀವನದಲ್ಲಿ ಕೊಂಚ ಕಾಲ ಆಶಂಕೆ ಹಾಗೂ ಭ್ರಮೆಗಳ ರೋಗದಿಂದ ಬಳಲುತ್ತಿದ್ದರು. ಒಂದು ದಿನ ಅವರು ಸೂರ್ಯೋದಯದ ಮುಂಚೆ ನದಿಯ ದಂಡೆಗೆ ಹೋಗಿ ಸೂರ್ಯೋದಯದವರೆಗೂ ಅಲ್ಲೇ ಕಳೆದರು. ಈ ಅವಧಿಯಲ್ಲಿ ಅವರ ಹೃದಯವು ಪ್ರಕ್ಷÄಬ್ಧವಾಗಿತ್ತು. ಅವರು ವಿನಯಪೂರ್ವಕ ವಿನಂತಿಸಿಕೊAಡರು- ‘ಹೇ ಸ್ನೇಹಿತನೇ, ದೇವರೇ, ನನಗೆ ನೆಮ್ಮದಿ ನೀಡು, ಆಗ ನದಿಯಿಂದ ಅಶರೀರವಾಣಿಯಾಯಿತು. ‘ನೆಮ್ಮದಿಯು ಜ್ಞಾನದಲ್ಲಿದೆ’ ಆಗ ನಾನು ನನ್ನನ್ನೇ ಉದ್ದೇಶಿಸಿ ನುಡಿದೆ- ಹೇ ಅಬು ಖಾಸಿಂ ಖಿಜ್ರಿ, ನೀನು ಇಲ್ಲಿಂದ ನಡೆ. ಈಗ ನಿನ್ನ ಒಳಗೊ,ಹೊರಗೂ ಹಳದಿ ನಾಯಿಗಳು ಹುಟ್ಟಿಕೊಂಡಿವೆ ಹಾಗೂ ನಿನ್ನ ನೆಮ್ಮದಿ ಭಗ್ನವಾಗಿದೆ.
ನಾನು ನನ್ನ ಕೋಣೆಯ ಕಡೆ ಕೊನೆಯ ಸಲ ದೃಷ್ಟಿ ಹಾಯಿಸಿದೆ. ದೀರ್ಘ ಶ್ರಮದಿಂದ ಸಂಗ್ರಹಿಸಿದ್ದ ತತ್ವಜ್ಞಾನ ಹಾಗೂ ಇಸ್ಲಾಂ ನ್ಯಾಯಶಾಸ್ತçದ ಗ್ರಂಥಗಳನ್ನು ಅಲ್ಲಿಯೇ ಬಿಟ್ಟು ಶೇಖ್ರ ಪ್ರವಚನಗಳ ಸಂಗ್ರಹದ ಜೊತೆ ನಗರದಿಂದ ಹೊರಬಂದೆ. ನಾನು ನಗರವನ್ನು ತೊರೆದು ಹೊರಬರುತ್ತಿದ್ದಂತೆ ಭೂಮಿಯು ನನ್ನ ಕಾಲುಗಳನ್ನು ಹಿಡಿದುಕೊಂಡಿತು ಹಾಗೂ ನನಗೆ ನನ್ನ ಶೇಖರ ಪ್ರವಚನ ಗೋಷ್ಠಿಗಳ ಸುಗಂಧವು ನೆನಪಾಗತೊಡಗಿತು. ಹಾಗೂ ಯಾವ ಭೂಮಿಯನ್ನು ನಾನು ಶುದ್ಧ ಹಾಗೂ ಪವಿತ್ರವೆಂದು ಭಾವಿಸುತ್ತಿದ್ದೆ., ಅದು ನನ್ನ ಪಾದಗಳನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದವು. ಯಾವ ರಸ್ತೆಗಳು ನನ್ನ ಶೇಖರ ಪಾದಗಳನ್ನು ಚುಂಬಿಸುತ್ತಿದ್ದವೋ ನನ್ನನ್ನು ಕೂಗಿ ಕೂಗಿ ಕರೆಯುತ್ತಿದ್ದವು. ಅವಗಳ ಕೂಗನ್ನು ಕೇಳಿ ನಾನು ಅಳಹತ್ತಿದೆ ಹಾಗೂ ಬಡಬಡಿಸಹತ್ತಿದೆ. ಹೇ ಶೇಖರೇ, ನಿಮ್ಮ ನಗರವು ಈಗ ಸೂರುಗಳಲ್ಲಿ ಅಡಗಿಹೋಗಿದೆ. ಹಾಗೂ ಆಕಾಶವು ಅತಿ ದೂರವಾಗಿದೆ. ಅನುಯಾಯಿಗಳು ನಿಮ್ಮ ಸಿದ್ಧಾಂತಗಳಿಗೆ ತಿಲಾಂಜಲಿ ನೀಡಿದ್ದಾರೆ. ಅವರುಗಳು ಸಹಭಾಗಿ ರಹಿತವಾದ ಆಕಾಶಕ್ಕೆ ಸಮಾನಾಂತರವಾಗಿ ತಮ್ಮ ತಮ್ಮ ಸೂರುಗಳನ್ನು ನಿರ್ಮಿಸಿಕೊಂಡಿದ್ದಾರೆ. ಮಣ್ಣು-ಮಣ್ಣಿನ ಮಧ್ಯೆ ಅಂತರ ಉಂಟಾಗಿದೆ. ಹಳದಿ ನಾಯಿಯು ಗೌರವಾದರ ಪಡೆಯುತ್ತಿದೆ. ಹಾಗೂ ಶ್ರೇಷ್ಠಾತಿಶ್ರೇಷ್ಠ ಜೀವಿ ಎನಿಸಿದ ಮನುಷ್ಯನು ಮಣ್ಣಿನ ಸಮಾನವಾಗಿದ್ದಾನೆ. ನಿಮ್ಮ ನಗರವು ನನಗಾಗಿ ಕಿರಿದಾಗಿದೆ. ನಾನು ನಿಮ್ಮ ನಗರವನ್ನು ತ್ಯಜಿಸುತ್ತಿದ್ದೇನೆ. ಈ ರೀತಿ ನುಡಿದು ದೃಢ ನಿರ್ಧಾರ ಮಾಡಿ, ಮುಂದೆ ಸಾಗಿದೆ.
ನಾನು ನಡೆಯುತ್ತಾ ನಡೆಯುತ್ತಾ ಅತಿ ದೂರ ಸಾಗಿ ಬಂದೆ ನನ್ನ ಶ್ವಾಸ ಉಬ್ಬತೊಡಗಿತು. ಹಾಗೂ ನನ್ನ ಪಾದಲ್ಲಿ ಬೊಬ್ಬೆಗಳಾದವು. ಮತ್ತೆ ಹಠಾತ್ತನೆ ನನ್ನ ಗಂಟಲಿನಿAದ ಯಾವುದೇ ವಸ್ತು ರಭಸದಿಂದ ಹೊರಬಂದಿತು. ಹಾಗೂ ನನ್ನ ಪಾದಗಳ ಮೇಲೆ ಬಿದ್ದಿತು. ನಾನು ನನ್ನ ಪಾದಗಳತ್ತ ದೃಷ್ಟಿ ಹಾಯಿಸಿದೆ. ನರಿಮರಿಯೊಂದು ನನ್ನ ಪಾದಗಳಲ್ಲಿ ಹೊರಳಾಡುತ್ತಿದ್ದು, ಕಂಡು ನಾನು ಚಕಿತನಾದೆ. ಆಗ ನಾನು ನನ್ನ ಪಾದಗಳಿಂದ ಅದನ್ನು ತುಳಿದು ಹಾಕಲು ಬಯಸಿದೆ ಆದರೆ ನರಿಮರಿಯು ಉಬ್ಬಿ ದೊಡ್ಡದಾಯಿತು. ಆಗ ನಾನು ಮತ್ತೆ ಅದನ್ನು ಪಾದಗಳಿಂದ ತುಳಿದೆ. ಅದು ಇನ್ನು ದೊಡ್ಡದಾಯಿತು. ದೊಡ್ಡದಾಗುತ್ತಾ ಅದು ಹಳದಿ ನಾಯಿಯಾಗಿ ಪರಿವರ್ತಿತವಾಯಿತು. ನಾನು ನನ್ನ ಸಮಸ್ತ ಬಲವನ್ನು ಪ್ರಯೋಗಿಸಿ ಅದಕ್ಕೆ ಒದ್ದೆ ಹಾಗೂ ಪಾದಗಳಿಂದ ಶಕ್ತಿ ಪ್ರಯೋಗಿಸಿ ಅದನ್ನು ತುಳಿಯುತ್ತಾ ಮುಂದೆ ಸಾಗಿದೆ. ಆಗ ನಾನುಡಿದೆ- ದೇವರಾಣೆ! ನಾನು ನನ್ನ ಪಾದಗಳಿಂದ ನಾಯಿಯನ್ನು ತುಳಿದೆ ಹಾಗೂ ಸಾಗುತ್ತಾ ಇದ್ದೆ. ನನ್ನ ಪಾದದ ಬೊಬ್ಬೆಗಳು ಕುರುಗಳಾಗದವು. ನನ್ನ ಪಾದದ ಬೆರಳುಗಳು ಬೇರ್ಪಡಹತ್ತಿದವು ಹಾಗೂ ನನ್ನ ಪಾದಗಳು ರಕ್ತಸಿಕ್ತವಾದವು. ಆದರೆ ಮತ್ತೆ ಹೀಗಾಯಿತು. ಯಾವ ಹಳದಿ ನಾಯಿಯನ್ನು ನಾನು ತುಳಿಯುತ್ತಾ ಬಂದಿದ್ದನೋ, ಅದು ನನ್ನ ದಾರಿಯನ್ನು ಅಡ್ಡಗಟ್ಟಿ ನಿಂತಿತು. ನಾನು ಅದರ ಜೊತೆ ಹೋರಾಡಿದೆ ಹಾಗೂ ಅದನ್ನು ದಾರಿಯಿಂದ ಸರಿಸಲು ಬಹಳ ಪ್ರಯತ್ನಿಸಿದೆ. ಆದರೆ ಅದು ಸುತಾರಾಂ ಸರಿಯಲು ಸಿದ್ಧನಿರಲಿಲ್ಲ. ಕೊನೆಗೆ ನಾನು ದಣಿದು ಹೋದೆ, ದಣಿದು ಕುಬ್ಜನಾದೆ. ಆದರೆ ಆ ಹಳದಿ ನಾಯಿ ಉಬ್ಬಿ ದೊಡ್ಡದಾಯಿತು.
ಆಗ ನಾನು ಮಹಾಮಹಿಮನಾದ ದೇವರ ಸನ್ನಿಧಿಯಲ್ಲಿ ಅರಿಕೆ ಮಾಡಿಕೊಂಡೆ. ‘ಹೇ, ನಮ್ಮನ್ನು ಸಲಹುವವನೇ! ಮನುಷ್ಯನು ಕುಬ್ಜನಾಗಿದ್ದಾನೆ. ಹಾಗೂ ಹಳದಿ ನಾಯಿ ಬೆಳೆದು ದೊಡ್ಡದಾಗಿದೆ. ನಾನು ಅದನ್ನು ನನ್ನ ಕಾಲುಗಳಿಂದ ತುಳಿಯ ಬಯಸಿದೆ. ಅದು ನನ್ನ ನಿಲುವಂಗಿಯನ್ನು ಸುತ್ತುವರಿದು ಅದೃಶ್ಯವಾಯಿತು. ಹಾಗೂ ತುಂಡಾದ ನನ್ನ ಕಾಲ್ಬೆರಳು ಹಾಗೂ ರಕ್ತಸಿಕ್ತವಾದ ಪಾದಗಳು, ಹಾಗೂ ಅವುಗಳಲ್ಲಿ ಆದ ಬೊಬ್ಬೆ, ಗಾಯಗಳತ್ತ ದೃಷ್ಟಿ ಹಾಯಿಸಿದೆ. ನಾನು ನನ್ನ ದುಸ್ಥಿತಿಗೆ ಅತ್ತೆ. ನಾನೆಂದುಕೊAಡೆ ನಾನು ಶೇಖರ ನಗರವನ್ನು ತೊರೆದು ಬರದೇ ಇದ್ದರೆ ಒಳ್ಳೆಯದಿತ್ತು. ಆಗ ನನ್ನ ಗಮನ ಮತ್ತೊಂದು ಕಡೆ ಹೋಯಿತು. ಸುಗಂಧಿತ ಮುಜಾಫರ್ ಸಿಹಿಯ ನೆನಪು ಸುಳಿದು ಹೋಯಿತು. ಶ್ರೀಗಂಧದ ಫಲಕ ಹಾಗೂ ದುಂಡಾದ ಪಿಂಗಾಣಿ ಮಧು ಬಟ್ಟಲಿನ ಕಲ್ಪನೆಯನ್ನು ಮಾಡಿಕೊಂಡೆ. ಶೇಖ್ರ ಸಮಾಧಿಯ ಧನರಾಶಿಯ ಅರ್ಪಣೆಯ ಕಲ್ಪನೆಯೂ ಬಂದಿತು. ನಾನುಡಿದೆ- ನಿಸ್ಸಂದೇಹವಾಗಿ ಅನುಯಾಯಿಗಳು ಶೇಖ್ರ ಬೋಧನೆಗಳ ವಿರೋಧಿಯಾಗಿದ್ದಾರೆ. ಹಾಗೂ ಹಬೀಬ್ ಬಿನ್ ಯಾಹ್ಯಾ ತಿರ್ಮಿಜಿ಼ಯು ನಯವಂಚನೆಯ ಮಾರ್ಗದಲ್ಲಿ ಸಾಗುತ್ತಿದ್ದಾನೆ. ನಿಸ್ಸಂದೇಹವಾಗಿ ಶೇಖ್ರ ಪ್ರವಚನಗಳು ನನ್ನ ವಶದಲ್ಲಿದೆ. ನನಗನಿಸಿತು ನಾನು ನಗರಕ್ಕೆ ಹಿಂತಿರುಗಿ ಶೇಖರ ಪ್ರವಚನಗಳ ಮೇಲೆ ಮತ್ತೊಮ್ಮೆ ದೃಷ್ಟಿ ಹಾಯಿಸುವುದು ಸೂಕ್ತವಲ್ಲವೆ? ಜನರು ಪ್ರಭಾವಿತರಾಗುವ ಹಾಗೂ ಅದನ್ನು ಮೆಚ್ಚುವ ರೀತಿಯಲ್ಲಿ ಅವುಗಳನ್ನು ಪರಿಷ್ಕರಿಸಿ, ಪ್ರಕಟಿಸುವ ಯೋಜನೆಯನ್ನು ಹಮ್ಮಿಕೊಳ್ಳಲೇ? ಯಾರಿಗೂ ಚ್ಯುತಿ ಬಾರದ ಹಾಗೆ ವೃತ್ತಾಂತವು ಸ್ನೇಹಿತರಿಗೆ ಮೆಚ್ಚಿಗೆಯಾಗುವ ರೀತಿಯಲ್ಲಿ ಅದ್ಭುತವಾಗಿ ಬರೆಯಲೇ? ಆದರೆ ಹಠಾತ್ತನೆ ನನಗೆ ಶೇಖ್ರ ಬೋಧನೆ ನೆನಪಾಯಿತು ಅದೇನೆಂದರೆ ಕೈಗಳು ಮನುಷ್ಯನ ಶತ್ರುಗಳಾಗಿವೆ, ಆಗ ನನಗೆ ನನ್ನ ಕೈಗಳು ನನ್ನಿಂದ ವಂಚನೆ ಮಾಡುತ್ತಿರುವಂತೆ ತೋರಿತು. ಅದೇ ರಾತ್ರಿ ನಾನು ಮಲಗುವ ನಿರ್ಧಾರ ಮಾಡಿದಾಗ, ಅದೇ ಹಳದಿ ನಾಯಿ ಮತ್ತೆ ಪ್ರತ್ಯಕ್ಷವಾಯಿತು ಹಾಗೂ ನನ್ನ ಚಾಪೆಯ ಮೇಲೆ ಮಲಗಿಕೊಂಡಿತ್ತು. ಆಗ ನಾನು ಹಳದಿ ನಾಯಿಗೆ ಹೊಡೆದೆ ಹಾಗೂ ನನ್ನ ಚಾಪೆಯನ್ನು ಎಳೆದುಕೊಳ್ಳಲು ಬಲಪ್ರಯೋಗ ಮಾಡಿದೆ. ನಾನು ಮತ್ತು ಹಳದಿ ನಾಯಿ ರಾತ್ರಿಯಿಡಿ ಕಾದಾಡುತ್ತಿದ್ದೆವು. ಕೆಲವೊಮ್ಮೆ ಅದು ಎದ್ದು ನಿಂತು ಬಿಡುತ್ತಿತ್ತು. ಆಗ ನಾನು ಕುಬ್ಜನಾಗುತ್ತಿದ್ದೆ ಹಾಗೂ ಅದು ದೊಡ್ಡದಾಗುತ್ತಿತ್ತು. ಈ ಸಂಘರ್ಷ ನಿರಂತರವಾಗಿ ನಡೆಯುತ್ತಾ ಬೆಳಗಾಯಿತು. ಈಗ ಅದರ ಶಕ್ತಿ ಕ್ಷೀಣವಾಗಹತ್ತಿತ್ತು. ಕೊನೆಗೆ ಅದು ನನ್ನ ನಿಲುವಂಗಿಯಲ್ಲಿ ಹೊಕ್ಕು ಮಾಯವಾಯಿತು.
ಅಂದಿನಿAದ ಇಂದಿನವರೆಗೆ ನನ್ನ ಹಾಗೂ ಹಳದಿ ನಾಯಿಯ ಕಾದಾಟ ನಡೆದೇ ಇವೆ. ಈ ದೀರ್ಘ ಸಂಘರ್ಷದಲ್ಲಿ ಹಲವು ಮಜಲುಗಳಿದ್ದು, ಇದಕ್ಕೆ ಸಂಬAಧಿಸಿದ ಅಸಂಖ್ಯಾತ ಚಿಕ್ಕಪುಟ್ಟ ಘಟನೆಗಳು ಜರುಗಿವೆ. ಆದರೆ ವಿಷಯವು ದೀರ್ಘವಾಗುತ್ತದೆಂದು ಅದನ್ನು ನಾನು ಅಲಕ್ಷಿಸುತ್ತಿದ್ದೇನೆ. ಕೆಲವೊಮ್ಮೆ ನಾನು ಬಿದ್ದು ಬಿಡುತ್ತಿದ್ದೆ. ಆಗ ಅದು ನನ್ನ ಕಾಲುಗಳಲ್ಲಿ ನುಗ್ಗಿ ನರಿಮರಿಯಂತಾಗುತ್ತಿತ್ತು. ಒಟ್ಟಾರೆ ಒಮ್ಮೆ ಹಳದಿ ನಾಯಿ ನನ್ನ ಮೇಲೆ ಹಾಗೂ ಮಗದೊಮ್ಮೆ ನಾನು ಹಳದಿ ನಾಯಿಯ ಮೇಲೆ ಮೇಲುಗೈ ಸಾಧಿಸುತ್ತಿದ್ದೆವು. ಘಮಘಮಿಸುವ ಮುಜಾಫರ್, ಶ್ರೀಗಂಧದ ಫಲಕ, ಹಾಗೂ ಪಿಂಗಾಣಿಯ ದುಂಡನೆಯ ಬಟ್ಟಲು ನನ್ನನ್ನು ಕಾಡತೊಡಗುತ್ತಿದ್ದವು. ಆಗ ಹಳದಿ ನಾಯಿ ನುಡಿಯುತ್ತದೆ- “ಎಲ್ಲರೂ ಹಳದಿ ನಾಯಿಗಳಾದಾಗ ಮನುಷ್ಯರಾಗಿ ಬದುಕುವುದು ನಾಯಿಗಿಂತ ಕೀಳು.” ಇದನ್ನು ಕೇಳಿ ನಾನು ಅರಿಕೆಮಾಡಿಕೊಳ್ಳುತ್ತೇನೆ. ‘ಹೇ ಪಾಲಿಸುವವನೇ! ಎಲ್ಲಿಯವರೆಗೆ ನಾನು ಮರಗಳ ನೆರಳಲ್ಲಿದ್ದು, ಜನಮಾನಸರಿಂದ ದೂರವಾಗಿ ತಿರುಗಲಿ. ಅಪಕ್ವವಾದ ಹಣ್ಣುಗಳನ್ನು ತಿನ್ನುತ್ತಾ, ದಪ್ಪ ಸೆಣಬಿನ ನಿಲುವಂಗಿ ಧರಿಸಿ ಜೀವನ ಸಾಗಿಸಲಿ ಆಗ ನನ್ನ ಪಾದಗಳು ನಗರದ ಕಡೆ ಸಾಗಲು ನಿರ್ಧರಿಸಿದವು. ನನಗೆ ಮತ್ತೆ ಶೇಖರ ಬೋಧನೆ ನೆನಪಿಗೆ ಬಂದಿತು. ಅದೇನೆಂದರೆ ಹಿಂದೆ ಇಡುವ ಹೆಜ್ಜೆಗಳು ಸಾಧಕನ ಶತ್ರುಗಳಾಗಿವೆ. ಆಗ ನಾನು ಮತ್ತೆ ನನ್ನ ಪಾದಗಳಿಗೆ ರಕ್ಷಿಸುತ್ತೇನೆ ಹಾಗು ದಾರಿಯಲ್ಲಿನ ಕಲ್ಲಿನ ಹರಳುಗಳನ್ನು ಆರಿಸಲು ಪ್ರಾರಂಭಿಸುತ್ತೇನೆ. ಹೇ! ಗೌರವಾನ್ವಿತ ದೇವನೇ! ನಾನು ನನ್ನ ಶತ್ರುಗಳಿಗೆ ಅದೆಷ್ಟು ಘೋರ ಶಿಕ್ಷೆ ನೀಡಿದ್ದೆನೆಂದರೆ ಅವು ರಕ್ತಸಿಕ್ತವಾಗಿವೆ. ಹಾಗೂ ನನ್ನ ಕೈಗಳಲ್ಲಿ ಕಲ್ಲಿನ ಹರಳುಗಳನ್ನು ಆರಿಸುತ್ತಾ ಆರಿಸುತ್ತಾ ಬೊಬ್ಬೆಗಳ ಬಂದಿವೆ. ನನ್ನ ಚರ್ಮವು ಬಿಸಿಲಿನ ತಾಪದಿಂದ ಕಪ್ಪುಗಟ್ಟಿದೆ. ಹಾಗೂ ನನ್ನ ಎಲುಬುಗಳು ಕರಗಲು ಪ್ರಾರಂಭಿಸಿವೆ. ಹೇ ಆದರಣೀಯ ದೇವನೆ! ನನ್ನ ನಿದ್ದೆಯು ಹಾರಿಹೋಗಿದೆ. ಹಾಗೂ ನನ್ನ ದಿನಗಳು ಕಷ್ಟಕರವಾಗಿವೆ. ಜಗತ್ತು ನನಗೆ ಉರಿಬಿಸಿಲಿನ ದಿನವಾಗಿದೆ. ಅದರಲ್ಲೂ ನಾನು ಉಪವಾಸ ವ್ರತ ಆಚರಿಸುವವನಾಗಿದ್ದೇನೆ. ಉಪವಾಸ ವ್ರತಧಾರಿಗೆ ಹಗಲು ದೀರ್ಘವಾಗಿರುತ್ತದೆ. ಈ ಉಪವಾಸ ವ್ರತದಿಂದ ನಾನು ಅಶಕ್ತನಾಗಿದ್ದೇನೆ. ಆದರೆ ಹಳದಿ ನಾಯಿ ದಷ್ಟಪುಷ್ಟವಾಗಿದೆ. ಹಾಗೂ ಪ್ರತಿರಾತ್ರಿ ನನ್ನ ಚಾಪೆಯ ಮೇಲೆ ಮಲಗಿಕೊಳ್ಳುತ್ತದೆ.
ಇದರಿಂದಾಗಿ ನನ್ನ ನೆಮ್ಮದಿ ನನ್ನನ್ನು ತ್ಯಜಿಸಿದೆ. ಹಾಗು ನನ್ನ ಚಾಪೆಯು ಅನ್ಯರ ಸ್ವಾಧೀನದಲ್ಲಿ ಹೋಗಿದೆ. ಹಳದಿ ನಾಯಿ ಉನ್ನತ ಹಾಗೂ ಮನುಷ್ಯ ತುಚ್ಛನಾಗಿದ್ದಾನೆ. ಇಂತಹ ಸಮಯದಲ್ಲಿ ನಾನು ಅಬು ಅಲಿ ರುದ್ಬಾರಿಯವರನ್ನು ಮತ್ತೆ ಸ್ಮರಿಸಿದೆ. ಹಾಗೂ ನದಿಯ ದಂಡೆಯಲ್ಲಿ ಮೊಣಕಾಲೂರಿ ಕುಳಿತುಕೊಂಡೆ. ನನ್ನ ಹೃದಯವು ಅಂತರಾಳದಿAದ ತುಂಬಿ ಬಂದಿತು. ನಾನು ‘ನೆಮ್ಮದಿ ನೀಡು, ನೆಮ್ಮದಿ ನೀಡು, ನೆಮ್ಮದಿ ನೀಡು’ ಎಂದು ಬಡಬಡಿಸಹತ್ತಿದೆ. ನಾನು ಇಡೀ ರಾತ್ರಿ ಬಡಬಡಿಸುತ್ತಾ ಇದ್ದೆ.ಹಾಗೂ ನದಿಯ ಕಡೆ ಕಣ್ಣು ಹಾಯಿಸಿದೆ. ರಾತ್ರಿಯೆಲ್ಲಾ ಧೂಳು ಮುಸುಕಿದ ರಭಸವಾದ ಗಾಳಿಯು ಹಳದಿಯಾದ ಎಲೆಗಳ ಮರಗಳ ಮಧ್ಯೆ ಬೀಸಿತು. ಹಾಗೂ ರಾತ್ರಿಯಿಡೀ ಎಲೆಗಳು ಉದುರಿದವು ನಾನು ನದಿಯಿಂದ ನನ್ನ ನೋಟವನ್ನು ಬದಲಿಸಿ, ಎಲೆಗಳಿಂದ ಆವೃತವಾದ ನನ್ನ ದೇಹವನ್ನು ನೋಡಿದೆ. ನನ್ನ ಸುತ್ತ ಮುತ್ತು ಉದುರಿದ ಹಳದಿ ಎಲೆಗಳ ರಾಶಿಯನ್ನು ಕಂಡೆ. ಆಗ ನಾನುಡಿದೆ- ಇದು ನನ್ನ ಬಯಕೆ ಹಾಗೂ ಆಕಾಂಕ್ಷೆಯಾಗಿದೆ. ದೇವರಾಣೆ ನಾನು ಪ್ರಲೋಭನೆಯಿಂದ ಮುಕ್ತನಾಗಿ ಪವಿತ್ರನಾಗಿದ್ದೇನೆ. ಹಾಗೂ ಎಲೆ ಉದುರಿದ ನಗ್ನ ವೃಕ್ಷನಂತಾಗಿದ್ದೇನೆ. ಬೆಳಗಾದಂತೆ ನನ್ನ ಬಾಯಿಯಲ್ಲಿ ಮಧುರ ರಸ ಹರಿದಂತೆ ಭಾಸವಾಯಿತು. ಆ ಶ್ರೀಗಂಧದ ಫಲಕವು ನಾನು ಸ್ಪರ್ಶಿಸಿದಂತಾಯಿತು. ಆ ದುಂಡನೆಯ ಸ್ವರ್ಣಲೇಪಿತ ಬಟ್ಟಲು ಹಾಗೂ ಬೆಳ್ಳಿಯಂತಹ ಮೀನಖಂಡವನ್ನು ಸ್ಪರ್ಶಿಸಿದಂತಾಯಿತು. ಬೆಳ್ಳಿ ಬಂಗಾರದ ರಾಶಿಯಲ್ಲಿ ಬೆರಳನ್ನು ಆಡಿಸಿದಂತಾಯಿತು. ಅವುಗಳ ಮಧ್ಯೆ ದರಹಮ್ ಹಾಗೂ ದೀನಾರಗಳು ಖನಖಣಿಸಿದಂತಾಯ್ತು. ನಾನು ಕಣ್ಣುಗಳನ್ನು ತೆರೆದೆ. ಆಗ ಭಯಾನಕವಾದಂತಹ ಈ ದೃಶ್ಯವನ್ನು ಕಂಡೆ. ಹಳದಿ ನಾಯಿಯು ತನ್ನೆರಡು ಹಿಂದಿನ ಕಾಲುಗಳನ್ನು ನಗರದಲ್ಲಿಯೂ ಹಾಗೂ ಮುಂದಿನ ಎರಡು ಕಾಲಗಳನ್ನು ನನ್ನ ಚಾಪೆಯ ಮೇಲೆ ಇಟ್ಟು ನಿಂತು ಕೊಂಡಿತ್ತು. ಹಾಗೂ ಅದರ ತೇವವಾದ ಮೂಗಿನ ಬಿಸಿ ಹೊಳ್ಳೆಗಳು ನನ್ನ ಎಡಗೈಯನ್ನು ಸ್ಪರ್ಶಿಸುವಂತೆ ಕಂಡೆ. ನಾನು ನನ್ನ ಕೈಯ ಅಬು ಸಯೀದ್ರ ತುಂಡಾದ ಕೈಗಳಂತೆ ಬೇರೆಯಾಗಿ ಬಿದ್ದಕೊಂಡAತೆ ಕಂಡೆ. ನಾನು ನನ್ನ ಕೈಯನ್ನು ಉದ್ದೇಶಿಸಿ ನುಡಿದೆ, ‘ಹೇ ನನ್ನ ಕೈ, ನನ್ನ ಸ್ನೇಹಿತ, ನೀನು ಶತ್ರುವಿನ ಜತೆ ಸೇರಿಕೊಂಡಿದ್ದಿಯಾ! ಕಣ್ಮುಚ್ಚಿ ಅರ್ತನಾಗಿ ಮತ್ತೊಮ್ಮೆ ಪ್ರಾರ್ಥಿಸಿದೆ. “ಹೇ ಮಹಾಮಹಿಮ ದೇವರೇ, ನನಗೆ ನೆಮ್ಮದಿ ನೀಡು, ನೆಮ್ಮದಿ ನೀಡು, ನೆಮ್ಮದಿ ನೀಡು.”
ಉರ್ದು ಮೂಲ: ಇಂತೆಜಾ಼ರ್ ಹುಸೇನ್
ಕನ್ನಡಕ್ಕೆ : ಬೋಡೆ ರಿಯಾಜ್ ಅಹ್ಮದ್
ಬೋಡೆ ರಿಯಾಝ್ ಅಹ್ಮದ್ ಮೂಲತಃ ಗುಲ್ಬರ್ಗದವರು. ವೃತ್ತಿಯಲ್ಲಿ ಸಾರಿಗೆ ಇಲಾಖೆಯಲ್ಲಿ ಕಚೇರಿ ಅಧೀಕ್ಷಕರಾಗಿರುವ ರಿಯಾಜ್ ಅಹ್ಮದ್ ಅವರು ಪ್ರವೃತ್ತಿಯಲ್ಲಿ ಸಾಹಿತ್ಯ-ಕಾವ್ಯ ಪ್ರೇಮಿ. ಇವರು ಬಿ.ಎಸ್ಸಿ ಪದವೀಧರರು. ಸೂಫೀ ಸಾಹಿತ್ಯಕ್ಕೆ ವಿಶೇಷವಾದ ಕೊಡುಗೆ ನೀಡಿರುವ ಪ್ರಮುಖ ಲೇಖಕರೂ ಹೌದು. ಲೇಖಕರ ತಂದೆಯವರು ಉರ್ದು ಕವಿಗಳಾಗಿದ್ದರು. ಗಿರಿನಾಡು ಸೂಫೀ ಪರಂಪರೆ, ಮನ್-ಲಗನ್, ಪ್ರೇಮ ಸೂಫಿ ಬಂದೇ ನವಾಝ್, ಇಂದ್ರಸಭಾ (ನಾಟಕ) ಪ್ರಕಟಿತ ನಾಲ್ಕು ಪ್ರಮುಖ ಕೃತಿಗಳು. ಅಲ್ಲದೇ ಇಂಗ್ಲೀಷ್, ಪರ್ಷಿಯನ್, ಉರ್ದು ಸಾಹಿತ್ಯದ ಮೇಲೆ ವಿಶೇಷವಾದ ಹಿಡಿತ ಇರುವ ಲೇಖಕರು ಆ ಭಾಷೆಗಳಿಂದ ಹಲವು ಕವಿತೆ, ಲೇಖನಗಳನ್ನು ಕನ್ನಡಕ್ಕೆ ತಂದಿದ್ದಾರೆ.