1930ನೇ ದಶಕದ ವಿಶಾಲವಾದ ತೈಲ ನಿಕ್ಷೇಪಗಳ ಆವಿಷ್ಕಾರಕ್ಕಿಂತಲೂ ಪೂರ್ವ ಕಾಲದಲ್ಲಿ ಪರ್ಶಿಯನ್ ಕೊಲ್ಲಿಯಲ್ಲಿನ ಜನಜೀವನ ವಿಧಾನ ಇಂದಿನ ಸ್ಥಿತಿಗತಿಗಳಿಗಿಂತ ಬಹಳ ಭಿನ್ನಾವಸ್ಥೆಯಲ್ಲಿತ್ತು. ಆಧುನಿಕ ಬಹ್ರೇನ್, ಕತಾರ್, ಕುವೈತ್ ಮತ್ತು ಸಮೀಪ ಪ್ರದೇಶದಲ್ಲಿನ ಪುರುಷರು ಆ ಕಾಲದಲ್ಲಿ ಹೆಚ್ಚಾಗಿ ಮೀನುಗಾರಿಕೆ, ಹಡಗು ನಿರ್ಮಾಣ, ನೌಕಾ ಕೆಲಸ, ಸಾಗರದಾಳದಿಂದ ಮುತ್ತುಗಳ ಸಂಗ್ರಹ ಇತ್ಯಾದಿ ಸಮುದ್ರಕ್ಕೆ ಸಂಬಂಧಿಸಿದ ಉದ್ಯೋಗಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಮುತ್ತು ಸಂಗ್ರಹಣಾ ಉದ್ಯಮ ಇತರ ಉದ್ಯೋಗಗಳಿಗಿಂತ ವಿಭಿನ್ನವಾಗಿದ್ದರೂ ವಿದೇಶಿ ವಹಿವಾಟುಗಳಲ್ಲಿ ಇತರ ಉದ್ಯಮಗಳಿಗಿಂತ ಹೆಚ್ಚು ಲಾಭದಾಯಕವಾಗಿತ್ತು. ವಿಶೇಷವಾಗಿ ಇತರ ದೇಶಗಳಿಗೆ ಮುತ್ತುಗಳನ್ನು ಮಾರಾಟ ಮಾಡುವ ಅಂದಿನ ನೌಕಾ ನಾಯಕರುಗಳ ಮತ್ತು ವ್ಯಾಪಾರಿಗಳ ಪ್ರಮುಖ ವ್ಯಾಪಾರವಾಗಿತ್ತು. ಆದರೆ, ಪೂರ್ವ ಆಫ್ರಿಕಾದ ಅನೇಕ ಗುಲಾಮರನ್ನು ಒಳಗೊಂಡ ಸಾಮಾನ್ಯ ಮುಳುಗು ತಜ್ಞರ ಪಾಲಿಗೆ ಈ ಉದ್ಯೋಗ ಆಶಾದಾಯಕವಾಗಿದ್ದರೂ,, ತುಂಬಾ ಕಷ್ಟಕರ ಮತ್ತು ಅಪಾಯಕಾರಿಯಾತ್ತು. ನಾಲ್ಕೈದು ತಿಂಗಳುಗಳ ಕಾಲ ಮುಂದುವರೆಯುತ್ತಿತ್ತು ಮತ್ತು ಶೋಧನೆಯ ಸಂಧರ್ಭ ಸಾಕಷ್ಟು ಮುಳುಗು ತಜ್ಞರು ಅಪೌಷ್ಟಿಕತೆ, ರಕ್ತ ಹೀನತೆ, ಶೀತ, ಕೋಮಾ ಇತ್ಯಾದಿ ಸಂಕಷ್ಟಗಳನ್ನು ಎದುರಿಸಬೇಕಾಗುತ್ತಿತ್ತು. ಕೆಲವರು ಟೈಲ್, ಶಾರ್ಕ್ ಇತ್ಯಾದಿ ಮತ್ಸ್ಯದಾಕ್ರಮಣದಿಂದ ಸಾವಿಗೀಡಾಗುವ ಸಂದರ್ಭವೂ ಬರುತ್ತಿತ್ತು.. ‘ಕತಾರಿ’ಗಳ ಮೊದಲ ನಾಯಕರಾದ ‘ಮಹಮ್ಮದ್ ಬಿನ್ ಅಸ್ಸಾನಿ’ ಯವರ ಪ್ರಸಿದ್ಧ ಮಾತುಗಳು ಈ ರೀತಿಯಾಗಿದೆ.
“ಮೇಲ್ದರ್ಜೆಯಿಂದ ಕೆಳದರ್ಜೆಯವರೆಗಿನ ನಾವೆಲ್ಲರೂ ‘ಮುತ್ತು’ ಎಂಬ ಯಜಮಾನನ ಅಡಿಯಾಳುಗಳಾಗಿದ್ದೇವೆ”.
ಅಂತಹ ವಿಶಿಷ್ಟ ಉದ್ಯೋಗದ ಸುತ್ತ ಅಸಂಖ್ಯಾತ ಜಾನಪದ ಗಾಯನ ಶೈಲಿಗಳು ರೂಪು ಪಡೆಯಿತು. ಸಾಮಾನ್ಯವಾಗಿ ಆ ವಿಧಾನಗಳನ್ನು ‘ಫಿಜಿರೀ’ ( الفجري ) ಎಂದು ಕರೆಯಲಾಗುತ್ತದೆಯಾದರೂ, ‘ಸಾಗರ ಕಲೆ’ (فن البحري) ಯೆಂಬ ವಿಶಾಲ ಕ್ಯಾಟಗರಿಯ ಒಂದು ಭಾಗವಾಗಿ ಅವು ಪರಿಗಣಿಸಲ್ಪಡುತ್ತಿದೆ.
ಮುತ್ತು ಸಂಗ್ರಹಣಾ ಉದ್ಯಮದಂತೆಯೇ, ಅದರೊಂದಿಗೆ ಸಂಬಂಧಿಸಿದ ಸಂಗೀತ ಸಂಪ್ರದಾಯ ಫಿಜಿರಿಯೂ ಸಾಮಾನ್ಯ ಜನರೆಡೆಯಲ್ಲಿ ಅಸಾಧ್ಯವೂ, ಅಪಾಯಕಾರಿಯೂ ಆದ ಕಲೆಯಾಗಿಯೇ ಉಳಿಯಿತು. ಫಿಜಿರೀ ಸಂಗೀತ ಕಲೆಯ ಪ್ರಾರಂಭ ಅಮಾನುಷಿಕವಾದದ್ದೆಂಬ ವಿಶ್ವಾಸ, ಪ್ರಸ್ತುತ ಮನೋಭಾವವನ್ನು ಅವರಲ್ಲಿ ದೃಢಪಡಿಸಿತು. ಒಂದು ದಂತಕಥೆಯನುಸಾರ ಒಂದು ಸುದೀರ್ಘ ಪ್ರಯಾಣದ ಮಧ್ಯೆ ‘ದಿಲ್ಮೂನ್ ‘ (DILMUN) ಪ್ರದೇಶದ ಮೂರು ಅಲೆಮಾರಿಗಳು ನಿಗೂಢವಾದ ಒಂದು ಚರ್ಚ್ ಬಳಿಗೆ ತಲುಪಿದರು. ಅಲ್ಲಿ ಅವರು ಪ್ರಾಚೀನ ಜೀವಿಗಳಾದ ‘ಜಿನ್ನ್ ‘ ವರ್ಗದವರನ್ನು ಭೇಟಿಯಾಗುವರು. ಮಾನವ ರೂಪ ಮತ್ತು ಕತ್ತೆ ರೂಪ ಸಮ್ಮಿಶ್ರಣಗೊಂಡ ಪತ್ತೆ ಹಚ್ಚಲಸಾಧ್ಯ ವಿಶಿಷ್ಟ ಆಕೃತಿಯೊಂದಿಗೆ ಪ್ರತ್ಯಕ್ಷಗೊಂಡ ಅವರು ಯಾತ್ರಿಕರಿಗೆ ತಾವೆಂದೂ ಕೇಳಿತಿಳಿದಿರದ ಅಪರಿಚಿತ ಕಾವ್ಯಗಳನ್ನು ಕಲಿಸಿದರು. ಆದರೆ ತಮ್ಮ ಅಂತಿಮ ಕ್ಷಣದವರೆಗೂ ತಾವು ಸಂಧಿಸಿದ ಆ ವಿಚಿತ್ರ ಅನುಭವವನ್ನು ಇತರರೊಂದಿಗೆ ಹಂಚಲು ಯಾತ್ರಿಕರು ನಿರಾಕರಿಸಿದರು. ನಂತರ ಆ ಯಾತ್ರಿಕರಲ್ಲೊಬ್ಬ ಮರಣ ಶೈಯೆಯಲ್ಲಿರುವ ಅಂತಿಮ ಕ್ಷಣದಲ್ಲಿ ತನ್ನ ಬಂಧುಗಳೊಂದಿಗೆ ಆ ರಹಸ್ಯ ಬೇಧಿಸಿ ಫಿಜಿರಿಯ ಜ್ಞಾನವನ್ನು ಅವರಿಗೆ ತಲುಪಿಸುವಲ್ಲಿ ಸಫಲನೂ ಆದನು. ಈ ರೀತಿಯಾಗಿ ಫಿಜಿರೀ ಗಾಯನ ಶೈಲಿ ಅರಬ್ ಸಂಗೀತ ಜಗತ್ತಿಗೆ ಮತ್ತೊಂದು ಮೈಲುಗಲ್ಲಾಗಿ ಸೇರ್ಪಡೆಯಾಯಿತು. ಪ್ರಯಾಣದ ಮಧ್ಯೆಯಿರುವ ಸಾಪ್ತಾಹಿಕ ಸಭೆಗಳಲ್ಲಾಗಿತ್ತು ಹಡಗಿನ ಸಿಬ್ಬಂದಿಗಳು ಹೆಚ್ಚು ಫಿಜಿರೀ ಸಂಗೀತಗಳನ್ನು ಪ್ರದರ್ಶಿಸುತ್ತಿದ್ದುದು. ಕೆಲ ಸಂದರ್ಭಗಳಲ್ಲಿ ‘ದಾರ್ ‘(Dar) ಎಂಬ ವಿಶೇಷ ಕಟ್ಟಡದಲ್ಲೂ ಫಿಜಿರಿಗಾಗಿ ಅವರ ಸಮ್ಮಿಲನ ನಡೆಯುತ್ತಿತ್ತು. ಕೆಲವೊಮ್ಮೆ ನೌಕಾ ನಾಯಕನ ಮನೆಯಲ್ಲಿಯೂ ಪ್ರಯಾಣಿಕರು ಸಂಗೀತಕ್ಕಾಗಿ ಒಟ್ಟುಗೂಡುತ್ತಿದ್ದರು. ಸುಮಾರು ನಲ್ವತ್ತಕ್ಕಿಂತಲೂ ಮಿಕ್ಕ ಪುರುಷರು ಒಂದು ಫಿಜಿರೀ ಸಂಗಮದಲ್ಲಿ ಭಾಗವಹಿಸಲು ಅವಕಾಶವಿತ್ತು. ಸಂಗೀತ ಸಭೆಯ ವಿರಾಮದ ವೇಳೆ ಪಾನೀಯ ಕುಡಿದು, ಸುವಿಶಾಲ ಸಾಗರದಲ್ಲಿನ ನೌಕಾಯಾನದ ವಿಶಿಷ್ಟ ಅನುಭವಗಳನ್ನು ಮೆಲುಕು ಹಾಕುತ್ತಾ ಮುಂಜಾವಿನವರೆಗೂ (فجر) ನೃತ್ಯದೊಳು ತಲ್ಲೀನರಾಗಿ, ತಮ್ಮನ್ನು ತಾವೇ ಕಳೆದುಕೊಳ್ಳುವರು. ಆ ಸುಪ್ರಭಾತ ಪ್ರಾರ್ಥನೆ (فجر) ಯಿಂದಲೇ ಫಿಜಿರೀ ಕಲಾ ಸಂಗೀತಕ್ಕೆ ಆ ಹೆಸರು ಬಂದಿದೆಯೆಂಬ ಐತಿಹ್ಯವೂ ಇದೆ.
ಇದಲ್ಲದೆ, ‘ಅಹಾಸಿಜ್’ (Ahasij) ಅಥವಾ ‘ನಿಹ್ಮಾ’ (Nihma) ಎಂಬಿತ್ಯಾದಿ ಹಡಗಿನ ವಿವಿಧ ಉದ್ಯೋಗಗಳಿಗೆ ಸಂಬಂಧಿಸಿದ ಕೆಲವೊಂದು ಹಾಡುಗಳು ಫಿಜಿರಿಯ ಆಂತರ್ಯದಲ್ಲಿ ಜೀವ ತಳೆದು ಅದರದ್ದೇ ಆದ ರೂಪುರೇಷೆಗಳನ್ನು ಹೆಣೆದುಕೊಂಡಿದೆ. ಉದಾಹರಣೆಗೆ, ‘ಮೈದಾಫ್’ (Mydaf) ಹಡಗಿನ ರೋಯಿಂಗ್ ಸಮಯದಲ್ಲಿ ಹಾಡುವ ಸಂಗೀತವಾಗಿ ಪ್ರಚಲಿತದಲ್ಲಿತ್ತು. ಚುಟುಕು ಯಾತ್ರೆಗಳಲ್ಲಿ ಹಾಡುವ ಸಂಗೀತಗಳಿಗೆ ‘ಬಾಸ್ಸ’ (Basseh) ಎಂದೂ, ದೀರ್ಘ ಪ್ರಯಾಣದಲ್ಲಿನ ಹಾಡುಗಳಿಗೆ ‘ಖೈಲಾಮಿ ‘(Qaylami) ಎಂದೂ ಕರೆಯುತ್ತಿದ್ದರು. ಅದೇರೀತಿ, ‘ಖ್ರಾಬ್ ‘(Khrab) ಎಂಬ ನಾಮಧೇಯದಲ್ಲಿ ಹಡಗಿನ ಆಂಕರ್ ಕಳಚಲು ಹಗ್ಗವನ್ನು ಎಳೆಯುವಾಗ ಹಾಡುವ ಪದ್ಧತಿಯೂ ಅವರೆಡೆಯಲ್ಲಿದ್ದವು. ಆ ಕಾರಣದಿಂದಲೇ ಉದ್ಯೋಗ ವಿಧಾನಗಳ ಪ್ರಭಾವವನ್ನು ಆ ಹಾಡುಗಳ ಸಂಯೋಜನೆ ಮತ್ತು ಗಾಯನದಲ್ಲಿ ಕಾಣಲು ಸಾಧ್ಯವಾಗುವುದು.
ಜಗತ್ತಿನ ವಿವಿಧ ಪ್ರದೇಶಗಳಲ್ಲಿ ಉದ್ಯಮ ಸಂಗೀತಗಳಲ್ಲಿ ಕಂಡುಬರುವ “ಕರೆ ಮತ್ತು ಉತ್ತರ “(Call and response) ಎಂಬ ಸಾಮಾನ್ಯ ರಚನೆಯ ಸರಣಿ ಇಲ್ಲಿಯೂ ಮುಂದುವರೆದು ಫಿಜಿರೀ ಸಂಗೀತದ ಪರಿಪೂರ್ಣತೆಯೆಡೆಗಿನ ಕಾಲುದಾರಿಯಾಗಿ ಪರಿಣಮಿಸುತ್ತದೆ. ‘ನಹ್ಹಾಂ ‘(Soloist) ಎಂಬ ಒಬ್ಬಂಟಿ ಹಾಡುಗಾರನನ್ನು ಫಿಜಿರೀಯ ನಾಯಕತ್ವ ನಿರ್ವಹಿಸುವುದಕ್ಕಾಗಿ ನಿಯೋಜಿಸಲಾಗುತ್ತದೆ. ಪ್ರಯಾಣದ ವೇಳೆ ನಾವಿಕರ ಉತ್ಸಾಹವನ್ನು ಉತ್ಕಟಿಸಿ ಹಾಡುವುದನ್ನು ಹೊರತುಪಡಿಸಿ ಬೇರೆ ಕೆಲಸವಿಲ್ಲದ ವ್ಯಕ್ತಿಯಾಗಿರುತ್ತಾನೆ ಆತ. ಉತ್ತಮ ಧ್ವನಿ ಮಾಧುರ್ಯದೊಂದಿಗೆ ಉನ್ನತ ಸಂಗೀತ ಸ್ವರದೊಳು ನಹ್ಹಾಂ ಕಾವ್ಯಾತ್ಮಕ ಪದ್ಯಗಳನ್ನು ಹಾಡಲು ಪ್ರಾರಂಭಿಸುವನು. ತತ್ಸಮಯ, ನಾವಿಕರ ಒಂದು ತಂಡ ಆತನ ಗಾಯನ ಶೈಲಿಗೆ ಅನುಗುಣವಾಗಿ ಆವೇಶಭರಿತರಾಗಿ ಮತ್ತು ಉತ್ಸಾಹಪೂರ್ಣರಾಗಿ ಕೂಗು ಹಾಕುತ್ತಾ, ತಮ್ಮ ಶಬ್ಧೋಪಯೋಗದ ಮೂಲಕ ಮೆಲೋಡಿಕ್ ವಿಧಾನಗಳನ್ನು ರೂಪಿಸಲು ಪ್ರಯತ್ನಿಸುವರು. ಅವರ ಸುಮಧುರ ಶಬ್ಧಗಳು ನಹ್ಹಾಮಿನ ಸಂಗೀತ ಶ್ರಾವ್ಯಕ್ಕಿಂತ ಸ್ವಲ್ಪ ಆಕ್ಟೇವ್ಸ್ (ಸಂಗೀತದಲ್ಲಿನ ಒಂದು ಧ್ವನಿ ವಿಧಾನ) ಕಡಿಮೆಯಿರುತ್ತದೆ. ಅರಬ್ ಸಂಗೀತ ಕಲೆಯ ಮತ್ಯಾವ ರೂಪದಲ್ಲಿಯೂ ಕಾಣಸಿಗದ ಆ ಅಸಾಮಾನ್ಯ ವಿಧಾನ ಸಾಗರದಾಳಕ್ಕೆ ಚಲಿಸುವಾಗ ಮುಳುಗು ತಜ್ಞರನುಭವಿಸುವ ಸಮುದ್ರ ರೋಧನವನ್ನು ಅನುಕರಿಸುವಂತಿರುತ್ತದೆ.
ಮುಳುಗು ತಜ್ಞರ ಕಠಿಣ ಜೀವನ, ಸಮುದ್ರಯಾನ ಮತ್ತು ಸಾಗರ ತಳದಲ್ಲಿ ದಾರಿ ನೋಡುತ್ತಿರುವ ಅಪಾಯಗಳು, ಕುಟುಂಬಗಳೊಂದಿಗಿನ ಪುನರ್ಮಿಲನಾ ಸಂಭ್ರಮ ಎಂಬಿತ್ಯಾದಿ ವಸ್ತುಗಳನ್ನಿಟ್ಟುಕೊಂಡು ಫಿಜಿರೀ ಸಾಲುಗಳ ಧಾಟಿ ಮುಂದುವರೆಯುತ್ತದೆ. ಬರವಣಿಗೆಯ ಸಾಲುಗಳು ಸಾಮಾನ್ಯವಾಗಿ ಅವುಗಳನ್ನು ರಹಸ್ಯ ನಿರ್ಣಯಗಳಾಗಿಯೇ ಕಟ್ಟಿಕೊಡುವಲ್ಲಿ ತಮ್ಮ ಪಾತ್ರ ಭದ್ರಪಡಿಸಿಕೊಂಡಿದೆ. ಗಾಯಗಳು, ತೀರ್ಪು, ಸಮುದ್ರದ ಅತಿಯಾದ ಶಕ್ತಿ ಎಂಬಿತ್ಯಾದಿ ಉಲ್ಲೇಖಗಳಲ್ಲಿರುವ ಭೌತಿಕ ಸಂಕಷ್ಟಗಳು ಮಾನವನ ಸಹಜ ಸಂಕಲ್ಪಕ್ಕಿಂತಲೂ ವ್ಯತಿರಿಕ್ತವಾಗಿದೆ.
‘ಮುರ್ಶಿದ್ ಬಿನ್ ಸಅದ್ ಅಲ್- ಬಿತಾಲಿ’ ಯ ಫಿಜಿರೀ ಕಾವ್ಯಕ್ಕೆ ಸಂಶೋಧಕ ‘ನಾಸರ್ ಅಲ್- ತಾಯ್’ ನೀಡುವ ಭಾವಾನುವಾದ ಈ ರೀತಿಯಾಗಿದೆ,
“ಕಿರುನಗುವಿನೊಳೂ ಸಾವಿನೊಂದಿಗೂ ಅದರ ಸರ್ವ ಅಂಶಗಳೊಂದಿಗೂ ಹೋರಾಡುತಿಹರು ಅವರು..”
‘ಓ ಮಾತೃ ಹೀನರಾದ ಮುಳುಗು ತಜ್ಞರಿಗೆ ಸಾಕ್ಷಿಯಾಗಿ ಈ ದೀರ್ಘ ರಾತ್ರಿಗಳೊಲು ನಾ ಹೇಗೆ ಬಳಲುತಿಹೆನು ಒಂದು ತಿಂಗಳು ಕಳೆದು ಕಣ್ಮರೆಯಾಗುತ್ತಿದ್ದಂತೆಲ್ಲ ಇನ್ನೊಂದು ತಿಂಗಳು ಅನುಸರಿಸುತಿಹುದು ಕಣ್ಣುಗಳೊಲು ಮಂಜು ಹತ್ತುವವರೆಗೂ…’
ಮೆಲೊಡಿಕಲ್ ರಚಿಸುವ ಸಂಗೀತೋಪಕರಣಗಳಿಲ್ಲದೆ ಫಿಜಿರೀ ಸಂಗೀತ ಕಲೆಯು ಪ್ರದರ್ಶಿಸಲ್ಪಡುವುದು ಚಪ್ಪಾಳೆ ಸ್ವರದ ತಾಳಕ್ಕೆ ಅನುಗುಣವಾಗಿಯಾಗಿದೆ. ಆದರೆ, ಅನೇಕ ತಾಳವಾದ್ಯಗಳನ್ನು ದಾರ್ ಸಂಗೀತ ಕಚೇರಿಗಳಲ್ಲಿ ಬಳಸಲಾಗುತ್ತದೆ. ತಬಲ,ಮಿರ್ವಾಸ್ ಎಂಬೀ ಎರಡು ರೀತಿಯ ಡಬಲ್ ಹೆಡ್ ಸಿಲಿಂಡರ್ ಡ್ರಮ್ಮುಗಳು, ‘ತಾರ್ ‘ ಎಂಬ ಒನ್ ಸೈಡ್ ಡ್ರಮ್ಮು ಸೆಟ್ಟು. ‘ತೂಸ್ ‘ ಎಂಬ ಒಂದು ಸಣ್ಣ ಪಾತ್ರೆ. ನೀರಿಗಾಗಿ ಉಪಯೋಗಿಸುವ ‘ಜಹ್ಲಾ ‘ ಎಂಬ ಮಣ್ಣಿನ ಮಡಕೆಗಳು ಇತ್ಯಾದಿ ಅವುಗಳಲ್ಲಿ ಪ್ರಮುಖವಾದವುಗಳು. ಇತರ ಅರೇಬಿಕ್ ನೃತ್ಯ ಕಲೆಗಳಲ್ಲಿ ಕಾಣಸಿಗದ ನಿಧಾನಗತಿಯ ದೇಹಚಲನೆಯಿಂದ ಫಿಜಿರೀ ಸಂಗೀತ ಕಲೆಯು ಅನುಕರಿಸಲ್ಪಟ್ಟಿದೆ. ನರ್ತಕರು ತನ್ಮಧ್ಯೆ ತೋಳನ್ನು ಮೇಲಕ್ಕೆತ್ತಿ – ಕೆಳಗಿಳಿಸಿ, ಪರಸ್ಪರ ಸ್ಪರ್ಶಿಸುವುದೂ – ಸವರುವುದೂ ಮಾಡುವರು. ಸಂಗೀತದೊಳಗಿನ ಈ ಕ್ರಿಯೆಯು ಆರೋಗ್ಯ ಸ್ವಾಸ್ಥ್ಯದೆಡೆಗಿನ ಹೆಜ್ಜೆಯನ್ನಾಗಿದೆ ಸಂಕೇತಿಸುವುದು. ಈ ನಿಧಾನಗತಿಯ ಗೋಡೆಗಳ ಮಧ್ಯೆಯಿರುವ ಮುಳುಗು ತಜ್ಞರ ನೀರಿನೆಡೆಗಿನ ಜಿಗಿತಗಳನ್ನು ಸೂಚಿಸುವ ತ್ವರಿತ ಹೊರಚಿಮ್ಮುವಿಕೆಯು, ಕಾಲಕಾಲಕ್ಕೆ ಫಿಜಿರೀ ಕಲೆಯ ಹರಿವಿಗೆ ಅಡಚಣೆಯಾದಂತಿರುತ್ತದೆ.
ಜಪಾನಿನ ಮುತ್ತು ಸಂಸ್ಕರಣಾ ತಂತ್ರಜ್ಞಾನದ ಅಭಿವೃದ್ಧಿ ಮತ್ತು ಕೊಲ್ಲಿ ರಾಷ್ಟ್ರಗಳ ತೈಲ ಆವಿಷ್ಕಾರದ ಸಂಶೋಧನೆಯೋತ್ತರ ಸಂದರ್ಭ, ಮುತ್ತು ಸಂಗ್ರಹಣಾ ಸಂಸ್ಕೃತಿ ನಿಧಾನವಾಗಿ ಮಾಯವಾಗಲಾರಂಭಿಸಿತು. 1960 ರಲ್ಲಿ ಬ್ರಿಟೀಷ್ ಎಥ್ನೋಮ್ಯೂಸಿಕಾಲಜಿಸ್ಟ್ ‘ಡೇವಿಡ್ ಫಾನಶಾವೇ ‘(David Fanshawe) ಮುಳುಗು ತಜ್ಞರ ಸಂಗೀತ ಶ್ರಾವ್ಯ ಆಲಿಸಲು ಮತ್ತು ಅವುಗಳನ್ನು ರೆಕಾರ್ಡ್ ಮಾಡುವ ಮೂಲಕ ಮುಂಬರುವ ತಲೆಮಾರುಗಳೆಡೆಯಲ್ಲಿಯೂ ಅದರ ಜೀವಂತಿಕೆಯನ್ನು ಉದ್ದೇಶಿಸಿ ಬಹ್ರೇನಿಗೆ ತಲುಪಿದಾಗ ಅಂತಹ ಮೀನುಗಾರಿಕೆಯಲ್ಲಿ ತೊಡಗಿಸಿಕೊಂಡ ಕೇವಲ ನಾಲ್ಕು ಹಡಗುಗಳು ಮಾತ್ರವೇ ಉಳಿದು ಫಿಜಿರೀ ಸಂಗೀತ ಪರಂಪರೆಯೇ ಅಳಿವಿನಂಚಿನಲ್ಲಿತ್ತು. ದುರಾದೃಷ್ಟವಶಾತ್ ಅವುಗಳೂ ಮೀನುಗಾರಿಕೆಗೆ ತೆರಳಿಯಾಗಿತ್ತು. ಆದ್ದರಿಂದ, ಆಂಕರ್ ಮೇಲೆತ್ತುವಾಗ ಪ್ರದರ್ಶಿಸುವ ಹಾಡುಗಳನ್ನು ದಾಖಲಿಸಲು ಅವರಿಗೆ ವಿಶೇಷ ತಂತ್ರಗಳನ್ನು ಅಳವಡಿಸಬೇಕಾದ ಅನಿವಾರ್ಯತೆ ಎದುರಾಯಿತು. ದಡದಲ್ಲಿ ಹಡಗಿನ ಹಗ್ಗದ ಬದಲು ಬಸ್ ಟೈರಿನ ಸುತ್ತ ಸುತ್ತಿರುವ ಒಂದು ಹಳೆಯ ಹಗ್ಗವನ್ನು ಎಳೆದುಕೊಂಡು ನಾವಿಕರು ‘ಖ್ರಾಬ್ ‘ ಸಂಗೀತವನ್ನು ಪ್ರದರ್ಶಿಸಲು ಶ್ರಮಿಸಿದರು.
1970 ರ ದಶಕ, ಫಿಜಿರೀ ಸಂಗೀತ ಸಂಪ್ರದಾಯ ಮತ್ತೊಮ್ಮೆ ಗುರುತಿಸಲ್ಪಟ್ಟಿತು ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಕಾಪಾಡುವ ಪ್ರಜ್ಞಾಪೂರ್ವಕ ಜಾಗೃತ ಕ್ರಿಯೆಯ ಭಾಗವಾಗಿ ಸೇರ್ಪಡೆಯಾಯಿತು. ಮುತ್ತು ಸಂಗ್ರಹಣಾ ಸಂಸ್ಕೃತಿಯ ವಾಣಿಜ್ಯ ಮೌಲ್ಯವು ಕ್ರಮೇಣ ಕಣ್ಮರೆಯಾದ್ದರಿಂದ, ನೌಕಾ ಉದ್ಯೋಗ ಪ್ರಕ್ರಿಯೆಯಲ್ಲಿ ನೇರವಾಗಿ ತೊಡಗಿಸಿಕೊಳ್ಳುವ ಮೂಲಕ ಯಥೇಷ್ಚ ಹಾಡುಗಳನ್ನು ಪ್ರದರ್ಶಿಸುವುದು ಅಸಾಧ್ಯವಾಯಿತು. ಆದಾಗ್ಯೂ, ವಿಶೇಷ ದಾರ್ ಬಂಗಲೆಗಳಲ್ಲಿ ಫಿಜಿರೀ ಸಂಗೀತ ಕಲೆಗಳನ್ನು ಪ್ರದರ್ಶಿಸುವಲ್ಲಿಯೂ, ಮುಂದಿನ ಪೀಳಿಗೆಗೆ ಅದನ್ನು ತಲುಪಿಸುವಲ್ಲಿಯೂ ರಾಷ್ಟ್ರವು ಅವರಿಗೆ ಸಂಪೂರ್ಣ ಬೆಂಬಲ ನೀಡುವಲ್ಲಿ ಯಶಸ್ವಿಯಾಗಿದೆ ಎಂಬುದು ತೃಪ್ತಿಕರ. ಇಂದು ಶಾಪಿಂಗ್ ಮಾಲುಗಳು ಮತ್ತು ಸಂಗೀತ ಹಾಲುಗಳಂತಹ ಸಾರ್ವಜನಿಕ ಸ್ಥಳಗಳಲ್ಲಿ ಪರ್ಶಿಯನ್ ಕೊಲ್ಲಿಯ ಗತ ಕಾಲದ ವೈಭವದ ಪ್ರತೀಕವಾಗಿ ಫಿಜಿರೀಯ ಅಮೂರ್ತ ಆಯಾಮಗಳನ್ನು ಕಣ್ತುಂಬಿಕೊಳ್ಳಬಹುದು. ಆದರೆ, ಅದು ಫಿಜಿರೀಯ ಸಂಗೀತ ಸಂಸ್ಕೃತಿಯ ಕ್ಲಾಸಿಕಲ್ ಅಂಶಗಳೊಂದಿಗೆ ‘ಪಾಶ್ಚಾತ್ಯ ಸ್ವರಮೇಳ ಸಂಗೀತ ‘(Symphonic music) ದ ಸಂಯೋಜಿತ ಪ್ರದರ್ಶನವಾಗಿ ಮಾತ್ರ. ಸಮಕಾಲೀನ ಇಲೆಕ್ಟ್ರಾನಿಕ್ ಸಂಗೀತಗಾರರು ಮತ್ತು ಅರಬ್ ವಂಶಜರಾದ ಮಲ್ಟಿಮೀಡಿಯಾ ಕಲಾವಿದರು ಚರಿತ್ರೆಯ ಪುಟಗಳಲ್ಲಿ ನೇಪಥ್ಯಕ್ಕೆ ಸರಿದ ಫಿಜಿರೀ ಸಂಸ್ಕೃತಿಯನ್ನು ಪುನರ್ವ್ಯಾಖ್ಯಾನಿಸುವ ಪ್ರಯತ್ನದಲ್ಲಿದ್ದಾರೆ. ಆದಾಗ್ಯೂ, ಇಂತಹ ಪ್ರಯೋಗಗಳು ಇನ್ನೂ ಬಹಳಷ್ಟು ವಿರಳವಾಗಿಯೇ ಮುಂದುವರೆಯುತ್ತಿದೆ ಎಂಬುದು ಮಾತ್ರ ಖೇದಕರ.
ಮೂಲ: ಆಂಡ್ರೇಯ್ ಸಾಯಿಲರ್
ಅನುವಾದ: ಅಬ್ದುಸ್ಸಲಾಂ ಮಿತ್ತರಾಜೆ ಸಾಲೆತ್ತೂರು